Tuesday, July 28, 2009

ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಿನ ಗುಳ್ಳೆ ನಿಜವಲ್ಲಾ ಹರಿಯೇ....... ಈ ಹಾಡು ನನ್ನನ್ನು ಯಾವಾಗಲೂ ಕಾಡುತ್ತಲೇ ಇರುತ್ತದೆ. ನಾವು ಬಿಟ್ಟು ಬದುಕಲೇ ಆಗದು ಎಂದುಕೊಳ್ಳುವ ಸಂಬಂಧಗಳೆಲ್ಲಾ ಇಷ್ಟೇನೇ ಎಂದು.........

ಸಂಬಂಧಗಳು ನಮ್ಮನ್ನು ತಾಯ ಗರ್ಭದಿಂದಲೇ ಸುತ್ತಿಕೊಳ್ಳುತ್ತಾ ಹೋಗುತ್ತದೆ. ಮೊಟ್ಟ ಮೊದಲಿಗೆ ತಾಯಿಯ ಜೊತೆ, ಕರುಳು ಬಳ್ಳಿಯ ಮೂಲಕ, ಹುಟ್ಟಿದ ಕ್ಷಣದಿಂದ ತಂದೆಯ ಜೊತೆ ಮತ್ತು ಒಡಹುಟ್ಟಿದವರೊಡನೆ, ಅಜ್ಜ-ಅಜ್ಜಿಯರೊಡನೆ, ನೆರೆ-ಹೊರೆಯವರೊಡನೆ, ಶಾಲೆಯಲ್ಲಿ ಮತ್ತು ಹೊರಗೆ ಸ್ನೇಹಿತರೊಡನೆ, ಮದುವೆಯಾದ ಮೇಲೆ ಗಂಡ/ಹೆಂಡತಿಯೊಡನೆ, ಮಕ್ಕಳೊಡನೆ, ಹೀಗೇ ನಾವು ಬದುಕಿರುವವರೆಗೂ ಹೊಸ ಹೊಸ ಸಂಬಂಧಗಳು ನಮ್ಮನ್ನು ಆವರಿಸಿಕೊಳ್ಳುತ್ತಲೇ ಇರುತ್ತವೆ. ನಾವು ಬೇಡ ಬೇಡವೆಂದರೂ, ಈ ಒಂದು ಕೊಂಡಿ ನಮ್ಮ ಜೀವನದಲ್ಲಿ ಅತಿಯಾಗಿ ಅವಶ್ಯಕತೆ ಇರುವ ಮತ್ತು ಅನಿವಾರ್ಯವೂ ಆಗಿರುವ, ಮಧುರ ಬೆಸುಗೆ.

ಸಂಬಂಧಗಳಲ್ಲೆಲ್ಲಾ ಮೊದಲನೆಯದಾದ ತಾಯಿಯ ಜೊತೆಗಿನ ಬೆಸುಗೆ, ಅತ್ಯಂತ ಅಪೂರ್ವವಾದದ್ದು ಮತ್ತು ಅಮ್ಮ ಅದನ್ನು ತನ್ನ ಎಲ್ಲಾ ಮಕ್ಕಳಿಗೂ ನಿರ್ವಂಚನೆಯಿಂದ, ತುಂಬು ಮನದಿಂದ ಹಂಚುವಂತಹುದು. ಮಗು ತನ್ನ ಉದರದಲ್ಲಿ ಮೊಳಕೆಯೊಡೆದಾಗಿನಿಂದ ತಾಯಿ ತನ್ನ ಕೊನೆಯುಸಿರಿರುವವರೆಗೂ ತನ್ನ ಮಗುವನ್ನು ಒಂದೇ ರೀತಿಯಲ್ಲಿ, ಏನನ್ನೂ ಎದುರು ನೋಡದೆ, ನಿಶ್ಕಲ್ಮಷವಾಗಿ ಪ್ರೀತಿಸುತ್ತಾಳೆ. ಆದರೆ ಅದೇ ಮಗು ಬೆಳೆಯುತ್ತಾ ಹೋದಂತೆ, ತನ್ನ ಸಂಬಂಧಗಳನ್ನು ವಿಸ್ತರಿಸಿಕೊಳ್ಳುವ ಭರಾಟೆಯಲ್ಲಿ, ತಾಯಿಯನ್ನು ಮತ್ತು ಅವಳ ಪ್ರೀತಿಯನ್ನೂ ತನ್ನ ಹಕ್ಕೆಂದು ತಿಳಿದು, ಅದನ್ನು ಒಂದು ಕಡೆ ಮುಚ್ಚಿಟ್ಟು ಬಿಡುತ್ತೇನೋ ಎಂದು ನನಗನ್ನಿಸುತ್ತದೆ.........

ಒಡಹುಟ್ಟಿದವರ ಸಂಬಂಧ ನಾವೆಲ್ಲಾ ಚಿಕ್ಕವರಿದ್ದಾಗ ಮಾತ್ರ ನಿರ್ಮಲ ಪ್ರೇಮವಾಗಿರತ್ತೆ. ಬೆಳೆಯುತ್ತಾ ಹೋದಂತೆಲ್ಲಾ ಒಬ್ಬರ ಮೇಲೊಬ್ಬರಿಗೆ ಚಿಕ್ಕ ಚಿಕ್ಕ ವಿಷಯಗಳಿಗೆಲ್ಲಾ ಹೊಟ್ಟೆಕಿಚ್ಚು, ಅಸಹನೆ ಬೆಳೆಯುತ್ತಾ ಹೋಗುತ್ತದೆ. ಅದರಲ್ಲೂ ನನ್ನ ಅನುಭವ ನನಗೆ ಕಲಿಸಿದ ಪಾಠದಲ್ಲಿ, ಅದು ಒಂಥರಾ ವ್ಯಾವಹಾರಿಕವೇ ಆಗಿಬಿಟ್ಟಿದೆ. ಎಲ್ಲವೂ ಸಾಲ ಕೊಟ್ಟು ವಾಪಸ್ಸು ತೆಗೆದುಕೊಳ್ಳುವಂತಾಗಿದೆ. ನೀ ಫೋನಾಯಿಸಿದರೆ, ನಾನೂ ಫೋನಾಯಿಸುವೆ, ನೀ ನನಗೆ ಜನ್ಮದಿನದ ಶುಭಾಶಯ ಹೇಳಿದರೆ, ನಾನೂ ನಿನಗೆ ನಿನ್ನ ಜನ್ಮ ದಿನಕ್ಕೆ ಹೇಳುವೆ.......... ನೀ ಮಾತಾಡಿಸಿದರೆ ನಾನೂ ಮಾತಾಡುವೆ...... ಹೀಗೇ...... ನಮ್ಮ ಏಳಿಗೆ ಅಥವಾ ಅಂತಸ್ತು ನಮ್ಮ ನಡುವಿನ ಸಂಬಂಧಕ್ಕಾಗಲೀ, ಒಡನಾಟಕ್ಕಾಗಲೀ, ಸ್ನೇಹಕ್ಕಾಗಲೀ ಸಂಬಂಧ ಪಟ್ಟಿದ್ದಲ್ಲ ಎನ್ನುವುದು ಎಲ್ಲರ ಮನದಲ್ಲೂ ಇದ್ದರೆ ಮಾತ್ರವೇ, ಆ ಒಡಹುಟ್ಟಿದವರ ಸಂಬಂಧಕ್ಕೊಂದು ಅರ್ಥ, ಸಾರ್ಥಕ್ಯ ಬರುವುದು. ಐಶ್ವರ್ಯ ಇದ್ದಾಗ, ಒಬ್ಬರಿಗೊಬ್ಬರು, ಸಹಾಯ ಮಾಡಿದರೆ, ಅದನ್ನು ಬರಿಯ ಪವಿತ್ರ ಸ್ನೇಹದ ಕೋನದಿಂದ ನೋಡಬೇಕೇ ಹೊರತು, ಅದಕ್ಕೆ ಬೇರಾವುದೇ ಅರ್ಥ ಕಲ್ಪಿಸಬಾರದು. ಇಲ್ಲಿ ಮೇಲು-ಕೀಳೆಂಬ ವ್ಯತ್ಯಾಸ ಇರುವುದಿಲ್ಲ, ಹಾಗೊಂದು ವೇಳೆ ಅರ್ಥೈಸಿದಾಗಲೇ ಈ ಸಂಬಂಧ ಒಂದು ವ್ಯಾಪಾರ ಅನ್ನಿಸಲು ಶುರುವಾಗುವುದು. ಹೀಗೆ ಲೆಕ್ಕಾಚಾರ ಮಾಡಲು ಮೊದಲಾದಾಗಲೇ ನಮ್ಮ ಸಂಬಂಧಕ್ಕೆ ಅಡಿಪಾಯವೇ ಇಲ್ಲ, ಇದು ಕೃತಕ ಅನ್ನಿಸತೊಡಗುವುದು.

ಎಲ್ಲರನ್ನೂ ಅನುಸರಿಸಿಕೊಂಡು, ಎಲ್ಲವನ್ನೂ ಸಹಿಸಿಕೊಂಡು, ಶಾಂತವಾಗಿ (ಮನ ಅಗ್ನಿಕುಂಡವಾಗಿದ್ದರೂ ಸಹ) ನಗುಮೊಗದ ಮುಖವಾಡ ಹಾಕಿಕೊಂಡು, ಕರ್ತವ್ಯ ಎನ್ನುವಂತೆ ಪಾಲಿಸುವ, ಪೋಷಿಸುವ ಸಂಬಂಧಗಳು ನಮಗೆ ಅವಶ್ಯಕವೇ ? ಎಲ್ಲಾ ಸಂಬಂಧಗಳನ್ನೂ "ತೊರೆದು ಜೀವಿಸಬಹುದೇ......." ಎಂಬ ಸಂಶಯ ನನಗ್ಯಾವಾಗಲೂ ಬರುತ್ತಲೇ ಇರುತ್ತದೆ. ಆದರೆ ಅದಕ್ಕೆ ಉತ್ತರವೂ ನಮ್ಮ ಹತ್ತಿರವೇ ಇದೆ.... ನಾ ನಂಬಿದಂತೆ ಜೀವನ ಒಂದು ರೈಲುಗಾಡಿ. ಎಷ್ಟೋ ಪ್ರಯಾಣಿಕರು, ತಮ್ಮ ತಮ್ಮ ನಿಲ್ದಾಣಗಳು ಬಂದಾಗ, ಇಳಿದು ಹೋಗುತ್ತಲೇ ಇರುತ್ತಾರೆ ಮತ್ತು ಹೊಸಬರು ಹತ್ತುತ್ತಲೇ ಇರುತ್ತಾರೆ, ನಾವು ಮಾತ್ರ ನಿರಂತರವಾಗಿ ಪ್ರಯಾಣಿಸುತ್ತಲೇ ಇರುತ್ತೇವೆ........

Thursday, July 23, 2009

’ದುರ್ಗಾಸ್ತಮಾನ’ ಮತ್ತು ’ಗಂಡುಗಲಿ ಮದಕರಿ ನಾಯಕ’

ದುರ್ಗಾಸ್ತಮಾನದ ಮುನ್ನುಡಿಯಲ್ಲೇ ಲೇಖಕ ದಿವಂಗತ ಶ್ರೀ ತರಾಸು ಬರೆದಿರುವ "ಚಿತ್ರದುರ್ಗ ಎಂದರೆ ತಮ್ಮ ಕರುಳಿಗೆ ಕಟ್ಟಿಕೊಂಡು ಬೆಳೆದ ಜೀವಂತ ವಸ್ತು - ಮದಕರಿ ನಾಯಕ ಒಬ್ಬ ಅರಸನಲ್ಲ ಜೀವಂತ ಆಪ್ತನೆಂಟ. ಚಿತ್ರದುರ್ಗ - ಮದಕರಿನಾಯಕ ಬೇರೆ ಬೇರೆಯಲ್ಲ ಒಂದೇ ಎಂಬ ಅವಿನಾಭಾವ, ದುರ್ಗ ಎಂದರೆ ಮದಕರಿ, ಮದಕರಿ ಎಂದರೆ ದುರ್ಗ " ಎಂಬ ಮಾತುಗಳು ಅತ್ಯಂತ ಪ್ರಭಾವೀ ವಾಕ್ಯಗಳಾಗಿ, ನಾವು ಪುಸ್ತಕ ಓದಲು ತೊಡಗುವ ಮೊದಲೇ ನಮ್ಮ ಮನಸ್ಸನ್ನು ದುರ್ಗ-ಮದಕರಿ ಎಂಬ ಮೋಡಿಯಲ್ಲಿ ಸಿಲುಕಿಸುತ್ತದೆ.

ನಾಯಕವಂಶದಲ್ಲಿ ಹಲವಾರು ಮದಕರಿನಾಯಕರುಗಳಿದ್ದರೂ, ಜನತೆ ಈಗಲೂ ತುಂಬಾ ಅಭಿಮಾನದಿಂದ ದುರ್ಗ - ಮದಕರಿ ಎಂದರೆ ನೆನಪಿಸಿಕೊಳ್ಳುವುದು, ಈ ಕಥೆಯ ನಾಯಕ, ಕೊನೆಯ ಪಾಳೆಯಗಾರ / ಅರಸ ಚಿಕ್ಕ ಮದಕರಿನಾಯಕರನ್ನೇ !! ಈ ನಮ್ಮ ಅಭಿಮಾನಕ್ಕೆ ಕಾರಣನಾದ ಮದಕರಿನಾಯಕ ಅತಿ ಸಾಹಸಿ, ಅತಿಕ್ರೂರಿ, ಅತಿಮದಾಂಧ, ಅತಿಕಾಮಿ ಮತ್ತು ದೈವಕೃಪೆ, ಗುರುವಿನ ಅನುಗ್ರಹ ಎರಡನ್ನೂ ಕಳೆದುಕೊಂಡಿದ್ದ ನತದೃಷ್ಟ ಎಂದು ಚಿತ್ರದುರ್ಗ ಸಂಸ್ಥಾನದ ಚಪ್ಪೇ ಚಾವಡಿ ದಳವಾಯಿಗಳ ನೇರ ವಂಶಸ್ಥರಾದ, ಭದ್ರಾವತಿಯ ಉಕ್ಕಿನ ಕಾರ್ಖಾನೆಯ ನಿವೃತ್ತ ವರ್ಕ್ಸ್ ಮ್ಯಾನೇಜರ್ ಶ್ರೀ ಸಿ ಪರಶುರಾಮನಾಯಕ್ ರವರು ಹೇಳಿದ್ದನ್ನೂ, ಈ ಕೃತಿ "ದುರ್ಗಾಸ್ತಮಾನ" ಬರೆಯಲು ಸ್ಫೂರ್ತಿಯಾದದ್ದನ್ನೂ ಲೇಖಕರು ಸ್ಮರಿಸಿದ್ದಾರೆ.

ದುರ್ಗಾಸ್ತಮಾನವನ್ನು ಅನೇಕ ಸಂಶೋಧನೆಗಳು, ಮುದ್ರಣ ರೂಪದಲ್ಲಿ ಪ್ರಕಟವಾಗಿಲ್ಲದ ಶ್ರೀ ಚಿಕ್ಕೇರೂರು ಗೋವಿಂದಾಚಾರ್ಯರು ಬರೆದ ಹರಪನಹಳ್ಳಿ ಪಾಳೆಯಗಾರರ ಚರಿತ್ರೆಯ ಹಸ್ತಪ್ರತಿಯನ್ನು ಆಧರಿಸಿ ಬರೆಯಲಾಗಿದೆ. ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಪಟ್ಟ ಮತ್ತು ಲಭ್ಯವಿದ್ದ ಎಲ್ಲಾ ದಾಖಲೆಗಳನ್ನೂ ಚೆನ್ನಾಗಿ ಅಧ್ಯಯನ ಮಾಡಿದ ನಂತರವೇ ಶ್ರೀ ತರಾಸುರವರು ಕಾದಂಬರಿ ಬರೆದಿದ್ದಾರೆ.

ತರಾಸುರವರು, ಅತ್ಯಂತ ಕಾಳಜಿಯಿಂದ, ಎಲ್ಲಾ ಅಧ್ಯಯನಗಳನ್ನೂ ಮಾಡಿ, ಸಂಗ್ರಹಕ್ಕೆಲ್ಲಾ ಆಧಾರ ತೋರಿಸಿಯೇ ದುರ್ಗಾಸ್ತಮಾನದಲ್ಲಿ ದೊರೆ ಮದಕರಿ ನಾಯಕನನ್ನು ಮೆಚ್ಚಬೇಕಾದ ಶೂರ ಎಂದೇ ಚಿತ್ರಿಸಿದ್ದಾರೆ. ದುರಂತ ಕಾದಂಬರಿಗೆ ಅರ್ಹನಾದ ಧೀರೋದ್ಧಾತ ನಾಯಕ ಎನ್ನುವಂತೆಯೂ ಚಿತ್ರಿಸಿದ್ದಾರೆ. ತನ್ನ ದುರ್ಗದ ಜನರೇ ತನಗೆ ದ್ರೋಹ ಮಾಡಿ, ಹೈದರಾಲಿಯ ಸೇನೆ ಕೋಟೆ ಮುತ್ತಿದಾಗ, ವೀರಾವೇಶದಿಂದ ಕಾದಾಡುತ್ತಾ, ಕೊನೆಯ ಉಸಿರು, ಒಡಲು ಬಿಡುವ ಮುನ್ನ ಮದಕರಿ, ಹೈದರನ ಧ್ವಜ ಸ್ಥಂಭವನ್ನು ಹೊಡೆದುರಿಳಿಸಿದ್ದನ್ನು ಓದುವಾಗ, ರೋಮಾಂಚನದಿಂದ ಮೈ ನವಿರೇಳುತ್ತದೆ. ಹೈದರಾಲಿಯ ಕಡೆಯವರ ಹತ್ತಾರು ಗುಂಡುಗಳು ಮದಕರಿಯನ್ನು ಹೊಡೆದುರುಳಿಸಿದಾಗ, ದುರ್ಗದ ಗಂಡುಗಲಿ ವೀರ ಮದಕರಿನಾಯಕ ತನ್ನ ಪ್ರಾಣಪ್ರಿಯವಾದ ದುರ್ಗದ ಮಣ್ಣಿಗೆ ರಕ್ತ ತರ್ಪಣ ನೀಡುತ್ತಾ, ಕೋಟೆಯ ಮೇಲಿಂದ ಕೆಳಗುರುಳುತ್ತಾನೆ. ಮತ್ತೇಳುವುದಿಲ್ಲ - ಅಲ್ಲಿಗೆ ದುರ್ಗದ ಇತಿಹಾಸದಲ್ಲಿ ಪ್ರಜ್ವಲಿಸುವ ಸೂರ್ಯ ಅಸ್ತನಾಗಿದ್ದ, ದುರ್ಗಾಸ್ತಮಾನವಾಗಿ ಹೋಗುತ್ತದೆ, ಆ ಕ್ಷಣ.

ರಣಬಯಲಿನಲ್ಲಿ ಪರಶುರಾಮನಾಯಕನ ಧ್ವನಿ ಅಣ್ಣಾ....ಅಣ್ಣಾ............. ಮದಕೇರಣ್ಣಾ........ ಎಂದು ಕೂಗಿಕೊಂಡು ಪ್ರೇತದಂತೆ ಅಲೆಯುವಾಗ, ದುರ್ಗವೇ ಹಂಬಲಿಸಿ ತನ್ನ ದೊರೆಯನ್ನು ಕರೆಯುವಂತಿರುವಾಗ, ಎಲ್ಲವನ್ನೂ ನುಂಗಿ ದುರ್ಗವನ್ನು ಕತ್ತಲಾವರಿಸುತ್ತದೆ ಮತ್ತೆ ಹಗಲಾಗುವುದಿಲ್ಲ.

೬೯೬ ಪುಟಗಳ ಪುಸ್ತಕವನ್ನು ಓದಿ ಮುಗಿಸಿದಾಗ, ನಮ್ಮ ಮನ:ಪಟಲದಲ್ಲಿ ಓಡುತ್ತಿದ್ದ ದೃಶ್ಯಗಳು ಒಮ್ಮೆಲೇ ಕಡಿವಾಣ ಹಾಕಿ ನಿಲ್ಲಿಸಿದ ಕುದುರೆಯಂತಾಗುತ್ತದೆ. ಪರಶುರಾಮ ನಾಯಕರ ಧ್ವನಿ ಅನುಸರಿಸಿ, ನಮ್ಮ ಮನಸ್ಸೂ ಹಂಬಲಿಸಿ ಕೂಗುತ್ತಿರುತ್ತದೆ. ದುರ್ಗದ ವೈಭವ, ಮದಕರಿ ನಾಯಕನ ಧೀಮಂತ ವ್ಯಕ್ತಿತ್ವ ನಮ್ಮನ್ನು ಪೂರ್ತಿಯಾಗಿ ಆವರಿಸಿಕೊಂಡು ಬಿಡುತ್ತದೆ. ಅರಿವು ಬೇಕೆಂದರೂ ಮನವು ಗುಂಗಿನಿಂದ ಹೊರಬರಲು ನಿರಾಕರಿಸುತ್ತದೆ. ಆರಂಭದಿಂದ ಅಂತ್ಯದವರೆಗೂ ನಡೆದ ಐತಿಹಾಸಿಕ ಘಟನೆಗಳ ವಿವರಣೆ, ಅರಮನೆ - ಗುರುಮನೆಯ ಅವಿನಾಭಾವ ಸಂಬಂಧ, ಯುದ್ಧದ ಚಿತ್ರಣ, ಎಲ್ಲವೂ ಶ್ರೀ ತರಾಸುರವರ ಪದಗಳ ಪ್ರಯೋಗ ಮತ್ತು ಭಾಷೆಯ ಸೊಗಡಿನಲ್ಲಿ ನಮ್ಮನ್ನು ಬಂಧಿಸಿಬಿಡುತ್ತದೆ.

ದುರ್ಗಾಸ್ತಮಾನ ನನ್ನ ಅತ್ಯಂತ ಮೆಚ್ಚಿನ ಮೇರು ಕೃತಿ. ಮೇರು ಪರ್ವತದಷ್ಟೇ ಎತ್ತರವಾದದ್ದು ಮತ್ತು ತನಗೆ ತಾನೇ ಸಾಟಿಯಾದ ಉತ್ಕೃಷ್ಟ ಕಾದಂಬರಿ. ಎಷ್ಟು ಸಾರಿ ಓದಿದರೂ ಮತ್ತೆ ಮತ್ತೆ ಓದಬೇಕೆಂಬ ಹಂಬಲ ಹುಟ್ಟಿಸುವಂಥದ್ದು.

ಶ್ರೀ ಬಿ ಎಲ್ ವೇಣುರವರ ಗಂಡುಗಲಿ ಮದಕರಿ ನಾಯಕ ಐದನೇ ಮುದ್ರಣ ಕಂಡಿರುವ ಕೃತಿ. ನಾಲ್ಕನೇ ಮುದ್ರಣದ ಪ್ರತಿಗಳು ಮುಗಿದು ೬ ವರ್ಷಗಳ ನಂತರ ಮರು ಮುದ್ರಣ ಕಂಡ ಪುಸ್ತಕ. ಇವರೂ ಕೂಡ ಕೊನೆಯ ಅರಸ ಮದಕರಿ ನಾಯಕರ ಚಿತ್ರಣವನ್ನು ಮಹಾ ಪರಾಕ್ರಮಿ, ಚಿತ್ರದುರ್ಗದ ಸ್ವಾಭಿಮಾನದ ಸಂಕೇತ ಎಂದೇ ಚಿತ್ರಿಸಿದ್ದಾರೆ.

ಈ ಪುಸ್ತಕದಲ್ಲಿ ಲೇಖಕರು ಮದಕರಿ ನಾಯಕರ ವಿವಾಹ ತರೀಕೆರೆಯ ಲಕ್ಷ್ಮೀಸಿರಿವಂತಿಯೊಂದಿಗೆ ಆದ ಪ್ರಸ್ತಾಪ ಮಾಡುತ್ತಾರಾದರೂ, ಅರಸನ ಪ್ರೇಮಕ್ಕೂ ಹೃದಯಕ್ಕೂ ಒಡತಿಯಾಗಿ ಪದ್ಮವ್ವೆನಾಗತಿ ಚಿತ್ರಿತವಾಗುತ್ತಾಳೆ. ಆದರೆ ಇಲ್ಲಿ ಗುಡಿಕೋಟೆಯ ಪಾಳೆಯಗಾರ ಮುಮ್ಮಡಿ ಜಟಂಗಿನಾಯಕರ ಮಗಳು ಪದ್ಮವ್ವೆನಾಗತಿಯೊಂದಿಗಿನ ವಿವಾಹ ಮಾತ್ರ ಉಲ್ಲೇಖವಾಗುತ್ತದೆ. ತರಾಸುರವರ ದುರ್ಗಾಸ್ತಮಾನದಲ್ಲಿ ಪದ್ಮವ್ವೆಯ ಜೊತೆ, ಜರಿಮಲೆಯ ಇಮ್ಮಡಿ ಬೊಮ್ಮನಾಯಕರ ಮಗಳು ಬಂಗಾರವ್ವನೊಡನೆಯೂ, ಒಟ್ಟಿಗೇ ವಿವಾಹವಾದ ಪ್ರಸ್ತುತಿಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಿ ಕಳ್ಳಿ ನರಸಪ್ಪನವರನ್ನು ನಾಯಕರ ವಿರುದ್ಧ ದ್ರೋಹವೆಸಗಿದಂತೆಯೂ, ರಾಜದ್ರೋಹಿಯಾಗಿಯೂ, ಚಿತ್ರಿಸಲಾಗಿದೆ. ಕಳ್ಳಿ ನರಸಪ್ಪ ಹೈದರನ ಸೇನೆ ಸೇರಿ, ಚಿತ್ರದುರ್ಗದ ಕೋಟೆಯ ಬಲಹೀನ ಜಾಗಗಳ ವಿಷಯ, ಕಳ್ಳಗಿಂಡಿಯ ಸುದ್ದಿ ಎಲ್ಲವನ್ನೂ ಬಹಿರಂಗಗೊಳಿಸಿದ್ದರಿಂದ, ಹೈದರಾಲಿ ಮದಕರಿನಾಯಕರನ್ನು ಸೋಲಿಸಲು ಸಾಧ್ಯವಾಯಿತೆಂದು ಬರೆದಿದ್ದಾರೆ. ಆದರೆ ದುರ್ಗಾಸ್ತಮಾನದಲ್ಲಿ ಲೇಖಕರು ಇದು ತಪ್ಪು ಅಭಿಪ್ರಾಯ, ನರಸಪ್ಪನವರು ಅಂತಹವರಲ್ಲವೆಂದೂ, ದಾಖಲೆಗಳು ಹಾಗೆ ಹೇಳುವುದಿಲ್ಲವೆಂದೂ ಹೇಳಿದ್ದಾರೆ. ಯುದ್ಧಾನಂತರ ಅಂದರೆ ಚಿತ್ರದುರ್ಗದ ಅವಸಾನದ ನಂತರ ಹೈದರಲಿ "ಕಳ್ಳಿ ನರಸಪ್ಪಯ್ಯ ಎಂಬಾತನಿಗೆ ದುರ್ಗದಲ್ಲಿ ಒಂದು ಅಧಿಕಾರ ಕೊಟ್ಟ" ಎಂದು ಮಾತ್ರ ಉಲ್ಲೇಖವಿದೆಯೇ ಹೊರತು ಅವರನ್ನು ದ್ರೋಹಿ ಎಂದು ಎಲ್ಲೂ ಯಾವ ಕಡತದಲ್ಲೂ ಹೇಳಿಲ್ಲವೆಂದೂ ಹೇಳುತ್ತಾರೆ. ಮುಂದುವರೆದು ದುರ್ಗಾಸ್ತಮಾನದಲ್ಲಿ ತೀರ್ಥಯಾತ್ರೆಗೆ ತೆರಳಿದ್ದ ಕಳ್ಳಿ ನರಸಪ್ಪಯ್ಯ ಮತ್ತು ಅವರ ಸಂಸಾರ, ಹೈದರಾಲಿಯ ಕೈಗೆ ಸೆರೆ ಸಿಕ್ಕಾಗ, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಚಿತ್ರಿಸಿದ್ದಾರೆ. ಗಂಡುಗಲಿ ಮದಕರಿಯಲ್ಲಿ, ಕಳ್ಳಿ ನರಸಪ್ಪಯ್ಯನನ್ನು ಯುದ್ಧಾನಂತರ, ರಾಜದ್ರೋಹಿಯೆಂದು, ಹೈದರಾಲಿಯು ತೋಪಿನ ಬಾಯಿಗೆ ಕಟ್ಟಿ ಉಡಾಯಿಸಿಬಿಡುತ್ತಾನೆ.

ದುರ್ಗಾಸ್ತಮಾನದಲ್ಲಿ ನಾಗತಿಯರು ಮದಕರಿ ಕೊನೆಯ ದಿನದ ಯುದ್ಧಕ್ಕೆ ಹೊರಟ ತಕ್ಷಣ, ಹೊಂಡದಲ್ಲಿ ಆತ್ಮಾಹುತಿ ಮಾಡಿಕೊಳ್ಳುತ್ತಾರೆ ಆದರೆ ಗಂಡುಗಲಿ ಮದಕರಿ ನಾಯಕ ಪುಸ್ತಕದಲ್ಲಿ ಯುದ್ಧ ರಂಗದಲ್ಲಿ ಹೋರಾಡುತ್ತಾ ದೊಡ್ಡ ಮದಕರಿನಾಯಕರ ಪತ್ನಿ ರತ್ನಮ್ಮ ನಾಗತಿ ಹೈದರಾಲಿಯ ಸೈನಿಕರು ತನ್ನ ಮುಡಿ-ಸೆರಗು ಹಿಡಿದೆಳೆದು ಮಾಡಿದ ಅವಮಾನ ತಾಳಲಾಗದೆ, ಹೊಂಡಕ್ಕೆ ಹಾರುತ್ತಾಳೆ, ವೀರಾವೇಷದಿಂದ ಹೋರಾಡುವ ಪದ್ಮವ್ವ ನಾಗತಿಯೂ ದೇಹದಲ್ಲೆಲ್ಲಾ ಕತ್ತಿಗಳನ್ನು ಚುಚ್ಚಿಸಿಕೊಂಡು, ಹೈದರಾಲಿಯ ಸೈನಿಕರು ಬಟ್ಟೆಗಳನ್ನು ಹರಿದೆಳೆದಾಗ ದಿಗ್ಭ್ರಾಂತಳಾಗಿ ಹೊಂಡಕ್ಕೆ ಹಾರುತ್ತಾಳೆ. ಇಲ್ಲಿ ನಾಗತಿಯರ ಕೊನೆ ಏಕೋ ಮನಸ್ಸಿಗೆ ಹಿಡಿಸುವುದಿಲ್ಲ.

ಕೊನೆಯದಾಗಿ ಮದಕರಿ ನಾಯಕನ ಅಂತ್ಯ ಅತ್ಯಂತ ಸೂಕ್ಷ್ಮವಾದ, ನವಿರಾದ ಭಾವನೆಗಳಿಂದ ದುರ್ಗಾಸ್ತಮಾನದಲ್ಲಿ ಹೇಳಲ್ಪಟ್ಟಿದೆ. ಅವನ ಅದಮ್ಯ ದೇಶಪ್ರೇಮ, ಅವನನ್ನು ಕೊನೆಯ ಘಳಿಗೆಯವರೆಗೂ ವೀರಾವೇಶದಿಂದ ಹೋರಾಡಿಸಿ ಹೈದರಾಲಿಯ ಹಸಿರು ಧ್ವಜ ಹಾರಾಡುತ್ತಿದ್ದ ಧ್ವಜಕಂಬವನ್ನೇ ಕತ್ತರಿಸಿ ತುಂಡು ಮಾಡಿ, ದುರ್ಗದ ಮಣ್ಣಿಗೆ ಮುಟ್ಟಿಟ್ಟು, ಕೊನೆಯುಸಿರೆಳೆಯುಂತೆ ಮಾಡುತ್ತದೆ. ವೀರ ಮರಣ ಅಪ್ಪುತ್ತಾನೆ ನಮ್ಮೆಲ್ಲರ ಅಭಿಮಾನಿ ಅರಸ, ನಾಯಕ ಮದಕರಿ.

ಗಂಡುಗಲಿ ವೀರ ಮದಕರಿ ಪುಸ್ತಕದಲ್ಲಿ ಮದಕರಿಯನ್ನು ಅವನ ಸಾಕು ಮಗಳಾದ (ಕಳ್ಳಿ ನರಸಪ್ಪಯ್ಯನವರ ಮಗಳು) ಗಾಯತ್ರಿಯ ಮೂಲಕ ಸಂಚು ಮಾಡಿ ಸೆರೆ ಹಿಡಿಯುತ್ತಾರೆ, ಆದರೆ ಅಲ್ಲೂ ಗಂಡುಗಲಿ ತನ್ನ ಪರಾಕ್ರಮದಿಂದ, ತನ್ನ ತಲೆ ತಾನೇ ಕತ್ತರಿಸಿಕೊಂಡು ದುರ್ಗದ ಮಣ್ಣಿಗೆ ಎಸೆದು, ಕುಸಿದು ಬೀಳುತ್ತಾನೆ. ನಿನ್ನ ಕೈಗೆ ನನ್ನ ತಲೆ ಸಿಗದು ಎಂದು ಹೈದರಾಲಿಗೆ ಹೇಳಿದ್ದ ಮಾತು ಉಳಿಸಿಕೊಳ್ಳುವಂತೆ, ಬಿರುಗಾಳಿ ಎದ್ದು ನಾಯಕನ ತಲೆ ಹೊಂಡಕ್ಕೆ ಉರುಳಿ ಬೀಳುತ್ತದೆ.

ದುರ್ಗಾಸ್ತಮಾನ ಓದಿ ಮೂಕವಾದ ಮನ, ಗಂಡುಗಲಿ ಮದಕರಿ ನಾಯಕ ಪುಸ್ತಕವನ್ನು ಪೂರ್ತಿಯಾಗಿ ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ. ಬೇರಾವ ಪುಸ್ತಕಕ್ಕೂ ಹೋಲಿಸಲಾಗದ ದುರ್ಗಾಸ್ತಮಾನದ ಮುಂದೆ ಇದು ಸಪ್ಪೆ ಎನಿಸಿದರೂ, ಶ್ರೀ ವೇಣು ಅವರ ಬರವಣಿಗೆಯ ಶೈಲಿ ನಮ್ಮನ್ನು ಹಿಡಿದಿಡುತ್ತದೆ. ಅವರ ಇತರ ಪುಸ್ತಕಗಳಂತೇ ಇದೂ ಅವರದೇ ಆದ ಪ್ರಾಮುಖ್ಯತೆ ಪಡೆಯುತ್ತೆ. ಆದರೆ ಎರಡೂ ಓದಿದ ನಮ್ಮ ಮನಸು ಮಾತ್ರ ಗೊಂದಲಮಯವಾಗುತ್ತದೆ.......!!!!!

Tuesday, July 21, 2009

ಮಳೆರಾಯನ ಆರ್ಭಟದಲ್ಲಿ ಬಾಲ್ಯದ ನವಿನೆನಪುಗಳು........

ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆ ತುಂಗಾ, ಭದ್ರೆಯರ ಒಡಲು ತುಂಬಿ ಹರಿದು ಉಕ್ಕಿಸುತ್ತಿದೆ. ಎಲ್ಲಾ ಸುದ್ದಿ ಕಾಗದಗಳಲ್ಲೂ, ದೂರ ದರ್ಶನದ ವಾಹಿನಿಗಳಲ್ಲೂ ಅಣೆಕಟ್ಟು ಗರಿಷ್ಠ ಮಟ್ಟ ಮುಟ್ಟಿರುವ ಸಂಗತಿ ಓದಿ, ಓದಿ, ಭೋರ್ಗರೆಯುತ್ತಿರುವ ಜೋಗ ಜಲಪಾತದ ಚಿತ್ರಗಳನ್ನು ನೋಡಿ ಮನಸ್ಸು ಬಾಲ್ಯದ ದಿನಗಳತ್ತ, ಜಿಗಿದು ಓಡಿದೆ.......

ನಾವೆಲ್ಲಾ ಚಿಕ್ಕವರಿದ್ದಾಗ ಗಾಜನೂರಿನಲ್ಲಿ ತುಂಗಾ ನದಿಯ ಅಣೆಕಟ್ಟು ಇಷ್ಟು ದೊಡ್ಡದಾಗಿರಲಿಲ್ಲ. ಒಳ ಹರಿವು ಜಾಸ್ತಿಯಾದೊಡನೆ ನದಿಯಲ್ಲಿ ನೀರಿನ ಮಟ್ಟ ಏರುತ್ತಿತ್ತು. ತುಂಗಾ ನದಿಗೆ ರೈಲು ಮತ್ತು ಇತರ ವಾಹನಗಳ ಸಂಚಾರದ ಸೇತುವೆ ಎರಡೂ ಒಂದರ ಪಕ್ಕದಲ್ಲೇ ಒಂದು ಇವೆ. ರೈಲು ಸೇತುವೆಯ ಕೆಲವೇ ಅಡಿಗಳಷ್ಟು ಬಿಟ್ಟು ತುಂಬಿ ಹರಿಯುತ್ತಿದ್ದ ತುಂಗೆಯನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತಿದ್ದ ಕಾಲವದು......

ಈಗ ಸುಮಾರು ೩೦ -೩೫ ವರ್ಷಗಳಷ್ಟು ಹಿಂದೆ ಮಳೆ ಬೆಳೆ ಚೆನ್ನಾಗಿ ಆಗುತ್ತಿದ್ದ ಕಾಲ. ಚಿಕ್ಕ ಊರಾದ ಭದ್ರಾವತಿಯ ಹಳೇನಗರ ಹಳೆಯ ಕಾಲದ ಮನೆಗಳು, ಆಟದ ಬಯಲುಗಳು, ಸರ್ಕಾರಿ ಶಾಲೆಗಳಿಂದ ಕೂಡಿತ್ತು. ನಾವು ಬೆಳೆದ ಮನೆ, ನಮ್ಮ ತಂದೆಯವರ ಮನೆ, ಉದ್ದವಾಗಿ ರೈಲ್ವೆ ಭೋಗಿಗಳಂತೆ ಇತ್ತು. ಮೊದಲು ಮಧ್ಯದಲ್ಲಿ ಸ್ವಲ್ಪ ಜಾಗ ಬಿಟ್ಟು ಎರಡು ಭಾಗಗಳಾಗಿ ಕಟ್ಟಿದ್ದ ಮನೆ ಕೊನೆಗೆ ಗೋಡೆಗಳಿಂದ ಬೆಸೆಯಲ್ಪಟ್ಟು, ಒಂದೇ ಉದ್ದನೆಯ ತಾಳಗುಪ್ಪ ಎಕ್ಸ್ ಪ್ರೆಸ್ ಆಗಿತ್ತು. ಮಧ್ಯದಲ್ಲಿ ನಾವು ಮೂರು ಮೆಟ್ಟಿಲು ಇಳಿದು ಹಿಂದುಗಡೆಯ ಭಾಗದ ಮನೆಗೆ ಹೋಗಬೇಕಿತ್ತು. ನಮ್ಮ ಮನೆ ಮೂಲೆ ಮನೆಯಾಗಿತ್ತು, ಪಕ್ಕದಲ್ಲಿ ಖಾಲಿ ಜಾಗ ಮತ್ತು ರಸ್ತೆ ಇತ್ತು. ಚಿಕ್ಕ, ಆಳವಿಲ್ಲದ ಚರಂಡಿ ರಸ್ತೆ ಬದಿಗೆ...... ಮನೆ ಮುಂದುಗಡೆ ಎತ್ತರ ಮಾಡಿ, ಹಲವಾರು ಮೆಟ್ಟಿಲು ಹತ್ತಿ ಬೀದಿ ಬಾಗಿಲಿಗೆ ಬರುವಂತೆ ಇತ್ತು. ಆಗೆಲ್ಲಾ ಹೊಳೆಯಲ್ಲಿ ನೀರು ಹೆಚ್ಚಾದರೆ, ಹೆಚ್ಚು ಮನೆಗಳಿಲ್ಲದ ಕಾರಣ, ನಮ್ಮ ಮನೆಯವರೆಗೂ ಭದ್ರೆ ಹರಿದು ಬರುತ್ತಿದ್ದಳಂತೆ, (ಭದ್ರೆ ನಮ್ಮ ಮನೆಯ ಮುಂದೆಯೇ ಹರಿಯುತ್ತಾಳೆ), ಆದ್ದರಿಂದ ಮೆಟ್ಟಿಲುಗಳನ್ನಿಟ್ಟು ಮನೆ ಕಟ್ಟುತ್ತಿದ್ದರು. ದೊಡ್ಡದಾದ ಜಗುಲಿ, ಒಂದು ಮಳಿಗೆ, ಒಂದು ಕಡೆ ಪಕ್ಕಕ್ಕೆ ಮನೆಯ ಹೆಬ್ಬಾಗಿಲು ಇತ್ತು. ನಾವು ಮಕ್ಕಳು ಯಾವಾಗಲೂ ಜಗುಲಿಯ ಮೇಲೆಯೇ ಕುಳಿತು ಆಟ ಆಡುತ್ತಿರುತ್ತಿದ್ದೆವು.

ಮಳೆಗಾಲದಲ್ಲಿ ಮಳೆ ಹೆಚ್ಚಾಗಿ ನದಿಯಲ್ಲಿ ನೀರು ಬಿಟ್ಟರೆ, ಘಂಟೆ ಘಂಟೆಗೂ ಹೋಗಿ ನೋಡುವುದೇ ನಮಗೊಂದು ದೊಡ್ಡ ಸಂಭ್ರಮದ ಕೆಲಸವಾಗುತ್ತಿತ್ತು. ನದಿಯ ಮಧ್ಯೆ ಇರುವ ಮಂಟಪ ಎಷ್ಟು ಮುಳುಗಿದೆ ಎಂದು ನೋಡುವುದು ನಮಗೊಂಥರಾ ಮಜವಾಗಿತ್ತು. ಒಮ್ಮೆ ಹೀಗೆ ಕುಂಭದ್ರೋಣ ಮಳೆ ಸುರಿದಾಗ, ನಾನಿನ್ನೂ ತುಂಬಾ ಚಿಕ್ಕವಳು. ಅಕ್ಕಂದಿರ ಜೊತೆ ಯಾರದೋ ಮನೆಗೆ ಹೋಗಿ ಬಿಟ್ಟಿದ್ದೆ. ೨ - ೩ ತಾಸು ಬಿಡದೇ ಸುರಿದ ಮಳೆಗೆ ರಸ್ತೆಯೆಲ್ಲಾ ನೀರು ನಿಂತು, ದೂರದಿಂದ ನಮ್ಮ ಮನೆ ಸಮುದ್ರದ ಮಧ್ಯದಲ್ಲಿಯ ಪುಟ್ಟ ದ್ವೀಪದಂತೆ ಆಗಿಬಿಟ್ಟಿತ್ತು. ಅಮ್ಮ ಹೆದರಿ ಮನೆ ಪಕ್ಕದಲ್ಲಿ ಸೊಸೈಟಿಯಲ್ಲಿ ಕೆಲಸ ಮಾಡುವ ಬಸವರಾಜನನ್ನು, ನಮ್ಮನ್ನು ಕರೆತರಲು ಕಳುಹಿಸಿದ್ದರು. ಬಸವರಾಜು ನನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು, ಅಕ್ಕಂದಿರ ಕೈ ಹಿಡಿದು ಮನೆ ತಲುಪಿಸಿದ್ದ. ಬಸವರಾಜನ ಸೊಂಟದವರೆಗೂ ನೀರು ರಸ್ತೆಯಲ್ಲಿ ನಿಂತಿತ್ತು. ರೈಲ್ವೆ ಭೋಗಿಯಂಥ ನಮ್ಮ ಮನೆಯ ಎಲ್ಲಾ ಕಿಟಕಿಗಳೂ ರಸ್ತೆಗೆ ತೆರೆದುಕೊಂಡಿದ್ದವು. ಹಿಂದಿನ ಕಾಲದ ಮನೆಗಳಲ್ಲಿ ಕಿಟಕಿಗಳು ಅಗಲವಾಗಿ ಇರುತ್ತಿದ್ದವು. ಆ ದಿನ ಮನೆಗೆ ಬಂದು ಕಿಟಕಿ ಹತ್ತಿ ಕುಳಿತ ನಾನು ಕೆಲವು ಘಂಟೆಗಳ ನಂತರ ಅಮ್ಮನಿಂದ ಒದೆ ಬಿದ್ದ ನಂತರವೇ ಕೆಳಗಿಳಿದಿದ್ದೆ. ಹೋಯ್ , ಹುಯ್ ಎಂದು ಕೂಗುತ್ತಾ ಚಪ್ಪಲಿಗಳನ್ನು ಕಳಚಿ ಕೈಯಲ್ಲಿ ಹಿಡಿದು, ನೀರಿನಲ್ಲಿ ನಡೆದು ಹೋಗುತ್ತಿದ್ದ ಜನಗಳು, ಮಧ್ಯೆ ಮಧ್ಯೆ ಹೋಗುವ ಒಂದೊಂದು ವಾಹನಗಳು ಎಲ್ಲಾ ನನಗೆ ತುಂಬಾ ಮೋಜುಕೊಡುತ್ತಿದ್ದ ಸಂಗತಿಗಳು. ಪುಸ್ತಕದಿಂದ ಒಂದೊಂದೇ ಕಾಗದ ಹರಿದು ದೋಣಿ ಮಾಡಿ ತೇಲಿ ಬಿಡುತ್ತಿದ್ದ ಖುಷಿ..... ಆಹಾ ಎಂಥಹ ಸುಂದರ ದಿನಗಳವು.......

ದೊಡ್ಡವಳಾಗಿ, ಮದುವೆಯಾದ ನಂತರ ಕಲ್ಕತ್ತಾ ಸೇರಿದಾಗ, ಕೆಲಸ - ಮನೆ - ಮಗು - ಅಡಿಗೆ ಎಂಬ ಏಕತಾನತೆಗೆ ಬದುಕು ಹೊಂದಿಕೊಳ್ಳುತ್ತಿತ್ತು, ಆಗ ಬಂದುದೇ ಮತ್ತೆ ಮಳೆಗಾಲ. ನಾವು ಮಹಡಿಯ ಮೇಲಿನ ಮನೆಯಲ್ಲಿ ಇದ್ದೆವು. ನಮ್ಮ ಮನೆ ಕೆಳಗಡೆ ಬರಿಯ ಅಂಗಡಿ ಸಾಲುಗಳಿದ್ದವು. ಕಲ್ಕತ್ತಾದ ಮಳೆ ಪ್ರತೀ ವರ್ಷ ನನಗೆ ನಮ್ಮೂರಿನ ಸಿಹಿ ನೆನಪುಗಳನ್ನು ಹೊತ್ತು ತರುತ್ತಿತ್ತು..... ೨ - ೩ ಘಂಟೆಗಳ ಕಾಲ ಮಳೆ ಸುರಿದರೆ ಸಾಕು, ಕಲ್ಕತ್ತಾದಲ್ಲಿ ರಸ್ತೆಗಳು ಜಲಾವೃತವಾಗಿ ಬಿಡುತ್ತಿತ್ತು. ಆಗ ಎಲ್ಲಾ ಕಛೇರಿಗಳು ಅಘೋಷಿತ ರಜೆಯಾಗಿ ಬಿಡುತ್ತಿತ್ತು. ಬೆಂಗಾಲಿಗಳು ಬೆಚ್ಚಗೆ ಮನೆಯಲ್ಲೇ ಕುಳಿತು ಮಿಷ್ಠಿ (ಸಿಹಿ ಖಾದ್ಯಗಳು), ಸಮೋಸ ತಿಂದು ಬಿಸಿ ಬಿಸಿ ಚಹಾ ಹೀರುತ್ತಿದ್ದರೆ, ನಾವು ಬಿಸಿ ಬಿಸಿ ಪಕೋಡ, ಬಜ್ಜಿ ತಿಂದು ಕಾಫಿ ಕುಡಿಯುತ್ತಿದ್ದೆವು. ಹೊರಗೆ ಹೋದ ಜನಗಳು ಮನೆಗೆ ಮರಳಿ ಬರಲಾರದೆ, ಸೈಕಲ್ ರಿಕ್ಷಾಗಳಲ್ಲಿ ಬರುತ್ತಿದ್ದರೆ, ರಿಕ್ಷಾವಾಲ ಘಂಟೆಯ ಶಬ್ದದ ತರಹ ಶಬ್ದಾ ಮಾಡುತ್ತಾ ದೇಖೇ..... ಓ ದಾದಾ.....(ಅಣ್ಣಾ) ಎಂದು ಕೂಗುತ್ತಿದ್ದರೆ, ನಾವು ಬಾಲ್ಕನಿಯಲ್ಲಿ ನಿಂತು ನೋಡುತ್ತಿದ್ದೆವು. ಒಮ್ಮೊಮ್ಮೆ ನೀರು ಎದೆಯ ಮಟ್ಟದವರೆಗೂ ಇರುತ್ತಿತ್ತು. ಇಂತಹ ಮಳೆಯ ದಿನಗಳೇ ರಿಕ್ಷಾದವರಿಗೆ ಹಬ್ಬ....... ಆ ನೀರಿನಲ್ಲಿ ನಡೆಯಲಾಗದೆ ಅವರು ಕೇಳಿದಷ್ಟು ದುಡ್ಡು ಕೊಟ್ಟು ಅವರನ್ನೂ, ಮಳೆಯನ್ನೂ, ಚರಂಡಿ ವ್ಯವಸ್ಥೆ ಸರಿಯಾಗಿ ಮಾಡದ ಕಲ್ಕತ್ತಾ ನಗರಸಭೆಯನ್ನೂ ಶಪಿಸುತ್ತಾ ಮನೆ ತಲುಪಬೇಕಾಗಿತ್ತು.........

ನನ್ನ ಮಗ ೨ - ೩ ವರ್ಷದವನಿದ್ದಾಗಿನಿಂದ ಅವನು ೪ ನೇ ತರಗತಿಗೆ ಬರುವವರೆಗೂ, ನಾವಿಬ್ಬರೂ ಮಳೆ ಬಂದು ನೀರು ತುಂಬಿದ ತಕ್ಷಣ ದೋಣಿಗಳನ್ನು ಮಾಡಿ ಮಾಡಿ ಮಹಡಿಯಿಂದಲೇ ಕೆಲವನ್ನು ಹಾರಿಸಿ ಬಿಡುತ್ತಿದ್ದೆವು. ತೃಪ್ತಿಯಾಗದೆ ಕೆಳಗೆ ಬಂದು ಮೆಟ್ಟಿಲುಗಳ ಮೇಲೆ ಕುಳಿತು, ಒಂದರ ಹಿಂದೆ ಒಂದರಂತೆ ಸರತಿಯಲ್ಲಿ ಬಿಡುತ್ತಾ ಕುಳಿತಿರುತ್ತಿದ್ದೆವು. ಯಾರ ದೋಣಿ ಮೊದಲು ಮತ್ತು ಎಷ್ಟು ದೂರ ಹೋಗುತ್ತದೆಂದು ನೋಡಿ, ಹಿಗ್ಗುತ್ತಿದ್ದೆವು. ಮಳೆಗಾಲದ ನನ್ನ ಬಾಲ್ಯದ ಆನಂದ, ನಮ್ಮೂರ ನೆನಪು, ನನಗೆ ನನ್ನ ಮಗನ ಮುಖಾಂತರ ದೂರದ ಕಲ್ಕತ್ತಾದಲ್ಲಿ, ಆಗುತ್ತಿತ್ತು........

ಈಗ ತುಂಬಿ ಹರಿಯುತ್ತಿರುವ ತುಂಗಾ ಭದ್ರೆಯರು ನನ್ನೆಲ್ಲಾ ಸವಿಯಾದ ಬಂಗಾರದ ನೆನಪುಗಳನ್ನು ಕೆದಕಿ, ಮನಸ್ಸು ಮರಳಿ ಭದ್ರಾವತಿಗೆ ಹೋಗುವಂತೆ ಮಾಡಿತು....................

Sunday, July 19, 2009

ಕನಸು

೧೩ನೇ ಸೆಪ್ಟೆಂಬರ್, ೨೦೦೮ ರಂದು, ಎಫ್ ಎಮ್ ರೈನ್ಬೋ ೧೦೨ ನ ’ಶ್ರೋತೃ ಬೃಂದಾವನ’ ಕಾರ್ಯಕ್ರಮದಲ್ಲಿ, ಪ್ರಸಾರವಾಗಿತ್ತು..........{ ಮನಸು ಕಾರ್ಯಕ್ರಮದ ಮುಂದುವರೆದ ಭಾಗವಾಗಿ}


ಜೀವನದಲ್ಲಿ ಕನಸು ಕಾಣದವರು ಯಾರೂ ಇರಲಾರರು. ಕೆಲವು ದಿನಗಳ ಕೆಳಗೆ ನನ್ನ ಮಗ ನನಗೊಂದು ಪವರ್ ಪಾಯಿಂಟ್ ಪ್ರೆಸೆನ್ಟೇಷನ್ ತೋರಿಸಿದ. ಅದು ತಾಯಿಯ ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆ ಕುರಿತು. ಕೇವಲ ಕೆಲವೇ ವಾರಗಳಷ್ಟು ಬೆಳೆದಿರುವ, ಇನ್ನೂ ಗರ್ಭದಲ್ಲೇ ಇರುವ ಶಿಶು ಕೂಡ ಕನಸು ಕಾಣುತ್ತದೆ ಎಂಬ ಅಂಶ ನನಗೆ ನಿಜಕ್ಕೂ ಅಚ್ಚರಿ ತಂದಿತ್ತು.

ಯಾವುದೋ ಒಂದು ಹಂತದಲ್ಲಾದರೂ, ಒಂದೇ ಒಂದು ದಿನವಾದರೂ, ಯಾವುದಾದರೊಂದು ವಿಷಯದ ಬಗ್ಗೆ ಎಲ್ಲರೂ ಕನಸು ಕಂಡೇ ಇರುತ್ತಾರೆ. ಬಡವ, ಶ್ರೀಮಂತ ಎಂಬ ಎಲ್ಲಾ ವರ್ಗದ, ಎಲ್ಲಾ ಸ್ವಭಾವದ, ಎಲ್ಲಾ ರೀತಿಯ ಜನಗಳೂ ಖಂಡಿತಾ ಖರ್ಚಿಲ್ಲದೆ ಸಮಾನವಾಗಿ ಮಾಡಬಹುದಾದ ಕೆಲಸವೆಂದರೆ ಅದು ಕನಸು ಕಾಣುವುದೊಂದೇ..........

"ಕನಸಿದೋ..... ನನಸಿದೋ... ಮುಗುದ ಮನದ ಬಿಸಿ ಬಯಕೆಯೋ........."

ಈ ಕನಸು ಎಂದರೆ ಏನು ? ಅವು ಬಹುಶ: ನಮ್ಮ ಸುಪ್ತ ಮನಸ್ಸಿನ ಜಾಗೃತ ಅನಿಸಿಕೆಗಳಷ್ಟೇನಾ ಅಥವಾ ನಮ್ಮ ನೆರವೇರದೆ ಇರುವಂಥಹ ಅಥವಾ ಕೈಗೆಟುಕದೇ ಇರುವಂಥ ವಾಸ್ತವಿಕತೆಗಳಾ ? ರಸ್ತೆ ಬದಿಯಲ್ಲಿ ಮಲಗಿದ್ದ ತಿರುಕ ಕೂಡ ತಾನು ಅರಸನಾದಂತೆ ಕನಸು ಕಾಣುತ್ತಾನೆ. ಇದು ನಮ್ಮ ಭಾವನೆಗಳ ಲಹರಿಯೂ ಹೌದು.

ಸದಾ ಏನನ್ನಾದರೂ ಧ್ಯಾನಿಸುತ್ತಲೇ ಇರುವ ನಮ್ಮ ಭಾವ ಲಹರಿಗಳು, ನಾವು ನಿದ್ರೆಯಲ್ಲಿರುವಾಗ, ಸುಪ್ತಾವಸ್ಥೆಯಿಂದ, ಜಾಗೃತವಾಗಿ, ವಿವಿಧ ರೂಪತಾಳಿ, ನಮ್ಮ ಮನಸ್ಸಿಗೆ ಗೋಚರವಾದಾಗ, ನಾವು ನಿದ್ರೆಯಿಂದ ಎಚ್ಚೆತ್ತು ಕನಸು ಕಂಡೆವೆಂದು ಹೇಳುತ್ತೇವೆ.....

"ಕನಸುಗಳ ಮನಸು ನನ್ನ ಈ ಹಾಡೂ........"

ಕನಸುಗಳು ಅವರವರ ಭಾವಕ್ಕೆ ಮತ್ತು ಭಕುತಿದೆ ತಕ್ಕಂತೆ ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳತ್ತೆ. ಈಡೇರದೇ ಇದ್ದ ಹಲವಾರು ಆಸೆಗಳು, ನಮ್ಮರಿವಿಗೆ ಬರದಂತೆ ಕನಸಿನ ರೂಪದಲ್ಲಿ ಈಡೇರಿ, ನಮಗೆ ಸುಖ ಕೊಡತ್ತೆ.

ನಾವು ನಮ್ಮ ಮಧ್ಯದಲ್ಲೇ ಇರುವ ಅನೇಕ ಹಗಲುಗನಸಿಗರನ್ನೂ ಕಾಣಬಹುದು. ಬರೀ ಹಗಲು ಕನಸು ಕಾಣುವುದರಿಂದೇನೂ ಪ್ರಯೋಜನವಿಲ್ಲ. ಜೀವನದಲ್ಲಿ ನಾವು ಏನನ್ನಾದರೂ ಸಾಧಿಸಬೇಕೆಂದು ಕನಸು ಕಂಡಾಗ, ಅದನ್ನು ಸಾಧಿಸಲು ಕಾಯಾ..ವಾಚಾ..ಮನಸಾ.. ಶ್ರಮವಹಿಸಬೇಕು. ಆಗುವುದೋ ಇಲ್ಲವೋ ಎಂದು ಕೈ ಕಟ್ಟಿ ಕೂರುವ ಬದಲು ಕನಸನ್ನು ಸಾಕಾರಗೊಳಿಸಲು ಕಷ್ಟ ಪಡಬೇಕು.

"ಕನಸೂಗಾರನಾ...... ಒಂದು ಕನಸೂ ಕೇಳಮ್ಮಾ........."

ಮಗು ಹುಟ್ಟಿದಾಗ ನಿದ್ದೆಯಲ್ಲಿ ನಗುವ, ಅಳುವ ಹಾಗೂ ವಿಚಿತ್ರವಾಗಿ ಭಾವನೆಗಳನ್ನು ಬದಲಾಯಿಸುವುದನ್ನು ನಾವು ಕಾಣುತ್ತೇವೆ. ಆಗ ಆ ಮಗು ನಕ್ಕಾಗ ಏನಾದರೂ ಒಳ್ಳೆಯ ಸ್ವಪ್ನ ಕಂಡಿರಬಹುದೆಂದು ನಾವು ಅಂದುಕೊಳ್ಳಬಹುದಲ್ಲವೇ ?

ಮಗು ಬೆಳೆದಂತೆಲ್ಲಾ ಅದರ ಆಸೆಗಳೂ ಮುಖ್ಯವಾಗಿ ಕನಸುಗಳೂ ಬದಲಾಗುತ್ತಾ ಹೋಗುತ್ತವೆ. ಬಾಲ್ಯಾವಸ್ಥೆಯಲ್ಲಿ ಬಣ್ಣ ಬಣ್ಣದ ಬಲೂನ್ ಸಿಕ್ಕಂತೆ ಅಥವಾ ಯಾವುದೋ ಆಟದ ವಸ್ತು ತನಗೆ ಸಿಕ್ಕಂತೆ ಕನಸು ಕಾಣುತ್ತೆ. ಬೆಳೆಯುತ್ತಾ ಬೆಳೆಯುತ್ತಾ ತಿಳುವಳಿಕೆ ಬಂದಂತೆ, ಚಿಕ್ಕ ಪುಟ್ಟ ಆಸೆಗಳನ್ನು ಮೀರಿ, ಹಂತ ಹಂತವಾಗಿ ದೊಡ್ಡ ದೊಡ್ಡ ಕನಸುಗಳನ್ನು ಕಾಣತೊಡಗುತ್ತೇವೆ. ಬಾಲಿಶ ಸ್ವಪ್ನ ಮತೆರು, ಯೌವನಕ್ಕೆ ಕಾಲಿಟ್ಟಂತೆ ಮಧುರವಾದ ಕನಸುಗಳನ್ನು ಕಾಣತೊಡಗುತ್ತೇವೆ. ಜೀವನ ರೂಪಿಸಿಕೊಳ್ಳಲು ಇಷ್ಟವಾದ ಓದು ಓದುವ, ನೌಕರಿ ಮಾಡುವ, ಕೈ ತುಂಬಾ ಸಂಪಾದಿಸುವ ಕನಸು ಕಾಣತೊಡಗುತ್ತೇವೆ. ಜೊತೆಗೇ ಸಂಗಾತಿಯ ಬಗೆಗೂ ಕನಸು ಕಾಣುತ್ತೇವೆ.

"ಕನಸಲೂ ನೀನೇ........... ಮನಸಲೂ ನೀನೇ......... ನನ್ನಾಣೆ.....ನಿನ್ನಾಣೆ........"

ನಾನು, ನನ್ನ ಸಂಸಾರ, ನನ್ನ ಗಂಡ, ಮುದ್ದು ಮಕ್ಕಳು................... ಆಹಾ ಎಂಥ ಮಧುರ...........ಮಕ್ಕಳು ಬೆಳೆದಂತೆಲ್ಲಾ ಅವರ ವಿದ್ಯಾಭ್ಯಾಸ, ಭವಿಷ್ಯದ ಬಗ್ಗೆ ಕನಸು ಕಾಣುತ್ತೇವೆ. ಅಲ್ಲಿಗೆ ನಮ್ಮ ಜೀವನದಲ್ಲಿ ನಮ್ಮದೇ ಕನಸು ಕಾಣುವ ಕಾಲ ಮುಗಿದು ಹೋಗಿರುತ್ತದೆ.

ಮತ್ತೆ ನಮ್ಮ ಯೌವನ ಕಳೆದು ವೃದ್ಧಾಪ್ಯ ಬಂದಂತೆಲ್ಲಾ ನಾವು ನಮ್ಮ ಮೊಮ್ಮಕ್ಕಳ ಕನಸು ಕಾಣತೊಡಗುತ್ತೇವೆ. ನೌಕರಿಯಿಂದ ನಿವೃತ್ತಿ, ಬಾಳ ಸಂಗಾತಿಯ ಜೊತೆ, ಮೊಮ್ಮಕ್ಕಳ ಸಹವಾಸದಿಂದ ನಮಗೆ ಬರಬಹುದಾದ ನೆಮ್ಮದಿ, ಸಂತೋಷದ ಕನಸು ಕಾಣ ತೊಡಗುತ್ತೇವೆ.

ಒಟ್ಟಿನಲ್ಲಿ ಕನಸಿಲ್ಲದ ಮನುಷ್ಯ ಜೀವನ ಬರೀ ನೀರಸ. ಕನಸು - ಅದೂ ರಂಗು ರಂಗಿನ ಕನಸು ಕಾಣುವುದರಲ್ಲಿರುವ ಮಜಾ ಬೇರಾವುದರಲ್ಲೂ ಇಲ್ಲ. ಕಂಡ ಕನಸುಗಳೆಲ್ಲಾ ಸಾಕಾರವಾದಾಗ ಅಥವಾ ನನಸಾದಾಗ, ಆಗುವ ತೃಪ್ತಿ, ಸಂತೋಷಕ್ಕೆ ಸಾಟಿಯೇ ಇಲ್ಲ.

"ಕನಸೋ ಇದು....... ನನಸೋ ಇದು......................."

ನಾವು ಕಾಣುವ ಕನಸು ನಮಗೆ ಬದುಕಲು ಛಲ ಕೊಡತ್ತೆ, ಬದುಕುವ ರೀತಿ ಕಲಿಸುತ್ತೆ, ಎಲ್ಲಕ್ಕಿಂತ ಮುಖ್ಯವಾಗಿ ಬದುಕಲೊಂದು ದಿವ್ಯವಾದ ಕಾರಣ ಕೊಡತ್ತೆ. ಕನಸಿನಲ್ಲಿ ಕಂಡ ಗುರಿ ತಲುಪಲು, ಜೀವನದಲ್ಲಿ ಯಶಸ್ಸು ಕಾಣಲು, ಆ ಕನಸೇ ಸ್ಫೂರ್ತಿ ಹಾಗೂ ಕಾರಣವಾಗತ್ತೆ. ಕನಸೇ ಕಾಣದಿದ್ದರೆ, ಸಾಧಿಸುವುದಕ್ಕೇನೂ ಇರುವುದಿಲ್ಲ. ಏನನ್ನೂ ಸಾಧಿಸದ ಜೀವನ ಬರೀ ಬರಡು ಹಾಗೂ ವ್ಯರ್ಥ........!!

"ಕಂಡ ಕನಸೂ ನನಸಾಗಿ........... ಇಂದು ಮನಸು ಹಗುರಾಗಿ.............ಹಾಯಾಗಿದೆ........."




ಮನಸು

೬ನೇ ಸೆಪ್ಟೆಂಬರ್, ೨೦೦೮ ರಂದು, ಎಫ್ ಎಮ್ ರೈನ್ಬೋ ೧೦೨ ನ ’ಶ್ರೋತೃ ಬೃಂದಾವನ’ ಕಾರ್ಯಕ್ರಮದಲ್ಲಿ, ಪ್ರಸಾರವಾಗಿತ್ತು..........



ನಮ್ಮ ಬುದ್ಧಿ ಈ ಮನಸು ಎಂಬ ಪದ ಯೋಚಿಸಿದ ತಕ್ಷಣವೇ ನಮ್ಮೊಳಗೆ ಒಂಥರಾ ಆರ್ದತೆ - ಒದ್ದೆಯಾದ ಅನುಭವ ಆಗತ್ತೆ. ಹಾಗಾದರೆ ಈ ಮನಸು ಅನ್ನುವುದಾದರೂ ಏನು ? ಅದು ಇರುವುದಾದರೂ ಎಲ್ಲಿ ? ಆಕಾರವೇ ಇಲ್ಲದ, ಯಾವ ಹಿಡಿತಕ್ಕೂ ಸಿಗದ, ತನ್ನಿಷ್ಟದಂತೆ ನಡೆಯುವ, ನಮ್ಮ ಇಡೀ ವ್ಯಕ್ತಿತ್ವವನ್ನೇ ನಿಯಂತ್ರಿಸುವ ಈ ಮನಸು ಎಂಬುದಕ್ಕೆ ನಿಶ್ಚಿತ ಆಕಾರ ಇದ್ದಿದ್ದರೆ, ಅದು ಹೇಗಿರಬಹುದಾಗಿತ್ತು?

ನಮ್ಮನ್ನು ಖುಷಿಯಾಗಿಡುವ, ದು:ಖಕ್ಕೆ ದೂಡುವ, ಕಾರಣವೇ ಇಲ್ಲದೆ ಸಂತೋಷ ಪಡಿಸುವ, ನಗಿಸುವ, ಅಳಿಸುವ ಮನಸು ಎಷ್ಟು ಪವರ್ ಫುಲ್ ಅಬ್ಬಾ......! ಸುಮ್ಮ ಸುಮ್ಮನೆ ಮುದಗೊಂಡು, ತಾನೂ ನಕ್ಕು, ನಾವೂ ನಗುವಂತೆ ಮಾಡುವ ಮನಸು....... ತನ್ನ ಭಾವನೆಗಳ ಈ ಪರಿಯ ಏರಿಳಿತಕ್ಕೆ ಮತ್ತು ಎಲ್ಲಾ ಹುಚ್ಚಾಟಗಳಿಗೆ ಕಾರಣ ಹೇಳತ್ತಾ ?

"ಮನಸೇ ನಗಲೇಕೆ ಹರುಷದಿ ನೀನು ಈ ದಿನ..... ನುಡಿ ಕಾರಣ... ನೀ ನುಡಿ ಕಾರಣ......."

ಮನಸುಗಳಲ್ಲಿ ಎಷ್ಟು ವಿಧಗಳಿರಬಹುದು? ಒಳ ಮನಸು, ಹೊರ ಮನಸು, ಎಳೆ ಮನಸು, ಹಸಿ ಮನಸು, ಬಿಸಿ ಮನಸು, ಹದಿ ಮನಸು........ ಈ ಎಲ್ಲಾ ಮನಸುಗಳಿಗೂ ಮಧ್ಯೆ ಸೌಹಾರ್ದತೆ ಇರಬಹುದಾ ? ಹೊರ ಮನಸು ಮಾಡುವ ಎಲ್ಲಾ ತರಹದ ಶೋಕಿಗಳನ್ನೂ ಒಳ ಮನಸು ಒಪ್ಪುತ್ತಾ ? ಒಂದೊಮ್ಮೆ ಒಳ ಮನಸು ಹೊರ ಮನಸಿನ ಡಂಬಾಚಾರವನ್ನು ಖಂಡಿಸಿದಾಗ / ನಿಯಂತ್ರಣದಲ್ಲಿರಿಸಿದಾಗ, ಹೊರ ಮನಸು ಮುದುಡುತ್ತಾ ?

ಮನಸು ಇನ್ನೊಂದು ಮನಸ್ಸಿನ ಸ್ನೇಹ ಬಯಸಿ, ತನಗೆ ಒಪ್ಪುವಂಥ, ಸ್ನೇಹಪೂರ್ಣ ಮನಸು ಸಿಕ್ಕಾಗ ಬಾಂಧವ್ಯ ಬೆಸೆದು ಬಿಡತ್ತೆ. ತನ್ನಿರವನ್ನೇ ಮರೆತು, ಅಲ್ಲಿಯೇ ನೆಲೆಸಿಯೂ ಬಿಡತ್ತೆ...

"ಮನಸೇ ಓ ಮನಸೇ.... ಎಂಥಾ ಮನಸೇ... ಮನಸೇ ಎಲೆ ಮನಸೇ.........."

ಎಳೆ ಮನಸು ಎಂದಾಗ ನನಗೆ ಮುಗ್ಧ ಮಗುವಿನ ನೆನಪಾಗತ್ತೆ. ಆ ಮಗುವಿನ ಎಳೆ ಮನಸು ತನ್ನ ತಾಯಿಯನ್ನು ಬಿಟ್ಟು ಬೇರೊಬ್ಬರನ್ನರಿಯದೆ, ತಾಯ ಮೊಗ ಕಂಡಾಗ ಬೀರುವ ಹೂ ನಗೆ.. ಆ ಎಳೆ ಮನಸಿನ ಆ ಕಿರು ನಗೆ........ ಸೃಷ್ಟಿಯ ಅತ್ಯದ್ಭುತವೇ ಸರಿ. ಆ ಹೂ ನಗೆಗೆ ಪ್ರತಿಯಾಗಿ ಅರಳುವ ತಾಯ ಮನಸು...... ಆಹಾ ಅದೆಂಥಾ ಸೊಗಸು....... ಅದು ಮಮತೆಯ ಮನಸು ಇರಬೇಕಲ್ವಾ?

"ಮಗುವೇ.... ನಿನ್ನ ಹೂ ನಗೆ....... ಒಡವೆ ನನ್ನ ಪಾಲಿಗೆ.... ತುಂಬು ಎನ್ನ ಜೋಳಿಗೆ........ಮಗುವೇ....."

ಸೃಷ್ಟಿಯ ಅದ್ಭುತ ಅಚ್ಚರಿಗಳನ್ನು ನೋಡಿದಾಗ ಅಂದರೆ... ಅರಳಿರುವ ಸುಂದರ ಹೂಗಳನ್ನು ನೋಡಿದಾಗ, ಪ್ರಕೃತಿ ಸೌಂದರ್ಯವನ್ನು ನೋಡಿದಾಗ ಈ ನಮ್ಮ ನಲಿಯುವ ಸುಂದರೆ, ತುಂಟ, ರಸಿಕ ಮನಸು........

"ಹೂವೂ ಚೆಲುವೆಲ್ಲಾ ನಂದೆಂದಿತು.... ಹೆಣ್ಣೂ ಹೂವ ಮುಡಿದೂ ಚೆಲುವೇ ತಾನೆಂದಿತು........"

ಎಂದು ಹಾಡುತ್ತಾ ಅರಳಿರುವ ಹೂಗಳ ಜೊತೆ ಸ್ಪರ್ಧೆಗೆ ಇಳಿಯಬಹುದಾ ? ಹದಿ ಹರೆಯದ ಈ ತುಂಬು ಮನಸು ಯಾವಾಗಲೂ ಹಾಡುತ್ತಾ ಕುಣಿಯುತ್ತಾ, ಕುಪ್ಪಳಿಸುತ್ತಾ ಇರತ್ತೆ. ತನ್ನ ಸುತ್ತು ಮುತ್ತಲ ಪ್ರಕೃತಿಯನ್ನು ಆಸ್ವಾದಿಸುತ್ತಾ, ಮೈ ಮರೆತು......

"ಚೆಲುವಿನಾ ಕಲೆ ಬಾಳಲೀಲೆ...... ಭಾವದ ಅಲೆ ಮೇಲೆ..... ಜೀವದ ಉಯ್ಯಾಲೆ...."

ಎಂದು ಹಾಡುತ್ತಾ ಭಾವ ಲಹರಿಯಲ್ಲಿ ತೇಲಬಹುದಲ್ವಾ ?

ತಾರುಣ್ಯದಿಂದ ಬೀಗುವ ಈ ತರುಣ ಮನಸು ಲಂಗು ಲಗಾಮಿಲ್ಲದ ಕುದುರೆಯಂತೆ, ಹುಚ್ಚು ಕನಸುಗಳನ್ನು ಕಾಣುತ್ತಾ ಕಣ್ಣೆದುರಿಗೆ ಇಲ್ಲದ, ಪ್ರಿಯತಮನ ಹಾಗೂ ಅವನ ಪ್ರೀತಿಗಾಗಿ ಹಂಬಲಿಸುತ್ತಾ ಇರತ್ತೆ. ತನ್ನ ಜೊತೆಗಾರ / ಪ್ರಿಯತಮನ ಮನಸಿನ ಜೊತೆ ಮಧುರ ಮೈತ್ರಿಯಾದಾಗ........ ಅವನ ಪ್ರೀತಿ ತನ್ನನ್ನೇ ಪೂರ್ತಿಯಾಗಿ ಆವರಿಸಿಕೊಂಡಾಗ, ಎಲ್ಲೆಲ್ಲೂ ಅವನೇ ಕಾಣಿಸಿದಾಗ.........

"ಬಾನಲ್ಲು ನೀನೇ......... ಭುವಿಯಲ್ಲು ನೀನೇ........ಎಲ್ಲೆಲ್ಲು ನೀನೇ........ ನನ್ನಲ್ಲು ನೀನೇ........."

ಪ್ರೀತಿಯಲ್ಲಿ ಮುಳುಗಿದ ಈ ತುಂಟ ಹರೆಯದ ಮನಸ್ಸು, ಪ್ರಿಯತಮನೊಂದಿಗೆ ಸಮಾಗಮಿಸಿದಾಗ, ತನ್ನನ್ನೇ ಪೂರ್ಣ ಅರ್ಪಿಸಿಕೊಂಡಾಗ, ಮನಸು ತನ್ನನ್ನು ಧನ್ಯನಾಗಿಸಿಕೊಂಡಾಗ, ಈ ಮನಸಿನ ಬಾಳು ಶೃತಿ ಮೀಟಿದ, ತಾಳ ಪಕ್ವದ ಸಂಗೀತವಾದಾಗ.......

"ರಾಗ ನಿನ್ನದೂ..... ಭಾವ ನನ್ನದೂ......."

ಹೀಗೇ ಮನಸು ಮನಸುಗಳ ಪಿಸುಮಾತು / ಕಥೆ ಸಾಗುತ್ತಲೇ ಇರುವಾಗ.......

"ಮನಸುಗಳ ಮಮತೆಯಲಿ.................................................ಈ ಜೀವನ........."

ಸಂಗೀತ - ನಮ್ಮ ಬದುಕು

ಸಂಗೀತ ನಮ್ಮ ಮನಸ್ಸಿನ ಮೇಲೆ ನೇರವಾಗಿ ಹಾಗೂ ಆ ಕ್ಷಣದಲ್ಲೇ ಪರಿಣಾಮ ಬೀರುತ್ತದೆ. ಯಾವುದಾದರೊಂದು ಒಳ್ಳೆಯ ಹಾಡನ್ನು ನಾವು ಕೇಳಿದಾಗ, ನಮ್ಮ ಮನಸ್ಸು ಎಷ್ಟೇ ಮುನಿಸಿಕೊಂಡಿರಲಿ, ಅಳುತ್ತಿರಲಿ ಅಥವಾ ಖಿನ್ನವಾಗಿರಲಿ, ಆ ಹಾಡು ಮನಸ್ಸನ್ನು ಖಂಡಿತವಾಗಿ ಮುಟ್ಟತ್ತೆ ಮತ್ತು ಎಚ್ಚತ್ತುಕೊಳ್ಳುವಂತೆ ಮಾಡುತ್ತದೆ. ಅಂದರೆ ಹಾಡು ನಮ್ಮ ಭಾವನೆಳನ್ನು ಜಾಗೃತಿಗೊಳಿಸುತ್ತೆ. ಹಾಡುಗಳ ಸಾಹಿತ್ಯ ನಮ್ಮನ್ನು ನಮ್ಮ ಚಿಂತನೆಗಳಿಂದ ದೂರ ಸರಿಸತ್ತೆ. ಖಿನ್ನಗೊಂಡಿರುವ ಮನಸ್ಸು ತನಗಿಷ್ಟವಾದ, ಒಳ್ಳೆಯ ಹಾಡು ಕೇಳಿದಾಕ್ಷಣ, ರಚ್ಚೆ ಹಿಡಿದ ಮಗು ತನ್ನ ಇಷ್ಟದ ವಸ್ತು ಕೈಗೆ ಸಿಕ್ಕ ತಕ್ಷಣ ಅಳು ನಿಲ್ಲಿಸುವಂತೆ, ಖಿನ್ನತೆಯಿಂದ ಹೊರ ಬಂದು, ಹಾಡಿಗೆ ಕಿವಿಗೊಡುತ್ತದೆ. ಆ ಹಾಡಿನ ರಾಗ ಅಂತರಾಳಕ್ಕೆ ಹೊಕ್ಕಾಕ್ಷಣ ರಾಗದ ಮೋಡಿಯನ್ನು ಹಿಂಬಾಲಿಸಿಕೊಂಡು ಹೋಗಿ ಬಿಡುತ್ತದೆ.

ಹಾಡುಗಳು ಅನಾದಿ ಕಾಲದಿಂದಲೂ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉತ್ಕಟವಾಗಿ ಸಾರುತ್ತಿದೆ. ಸಂಶೋಧನೆಗಳೂ ಕೂಡ ಸಂಗೀತ ಹಾಡುವಿಕೆ ಆರೋಗ್ಯವನ್ನು ಉತ್ತಮ ಪಡಿಸುತ್ತದೆಂದು ಖಚಿತಪಡಿಸಿವೆ. ಅಂದರೆ ಹಾಡುಗಾರರು, ರಾಗಗಳನ್ನಾಗಲೀ, ಕೃತಿಗಳನ್ನಗಲೀ ಹಾಡುವಾಗ, ಉಸಿರಾಟದಿಂದ ಪ್ರಾಣವಾಯು ಹೆಚ್ಚಾಗಿ, ರಕ್ತ ಪರಿಚಲನೆ ಸುಗಮವಾಗುತ್ತದೆ, ಮತ್ತು ನಮ್ಮ ಪಚನ ಶಕ್ತಿ ಕೂಡ ಹೆಚ್ಚಾಗುತ್ತದೆ ಎನ್ನುತ್ತಾರೆ ನಮ್ಮ ಸಂಶೋಧಕರು. ಅದರಲ್ಲೂ ಶಾಸ್ತ್ರೀಯ ಸಂಗೀತವನ್ನು ನಾವು ಅಡಿ ನಾಭಿಯಿಂದ ಉಸಿರೆಳೆದುಕೊಂಡು ಹಾಡುವುದರಿಂದ, ಉದರದ ಎಲ್ಲಾ ಅವಯವಗಳಿಗೂ ತಕ್ಕುದಾದ ವ್ಯಾಯಾಮ ಆಗುತ್ತದೆ. ನಾವು ಹಾಡುವಾಗ ಉತ್ಪತ್ತಿಯಾಗುವ ಶಬ್ದ ತರಂಗಗಳು ನಮ್ಮ ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಹೆಚ್ಚಿಸುತ್ತದೆ.

ನಮ್ಮ ಪಂಚೇಂದ್ರಿಯಗಳೂ ಶಬ್ದ ತರಂಗಗಳಿಗೆ ಸ್ಪಂದಿಸುವುದರಿಂದ, ಅವುಗಳನ್ನು ನಾವು ಅತ್ಯುತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಲು, ಹಾಡುವಿಕೆ ಸಹಜವಾಗಿ, ಸಹಾಯವಾಗುತ್ತದೆ. ನಮ್ಮ ಒಳಗಿರುವ ಶಬ್ದ ತರಂಗಗಳೂ ಮತ್ತು ನಮ್ಮ ಹೊರಗಿನ ಶಬ್ದ ತರಂಗಗಳೆರಡೂ ಸಮತೋಲನದಲ್ಲಿದ್ದಾಗ ಮಾತ್ರವೇ ನಾವು ಸುಖವಾಗಿ ಬದುಕಲು ಸಾಧ್ಯವಾಗುವುದು. ಹಾಡುಗಾರಿಕೆಯಿಂದ ನಾವು ಉಂಟಾಗಿಸುವ ತರಂಗಗಳು, ನಮ್ಮನ್ನು ಅಶಾಂತಿಯ ಸ್ಥಿತಿಯಿಂದ ಶಾಂತ ಸ್ಥಿತಿಗೆ ತರುತ್ತದೆ. ಶಾಸ್ತ್ರೀಯ ಸಂಗೀತದ ಸಾಹಿತ್ಯದಲ್ಲಿರುವ ಭಕ್ತಿಯ ಪರಕಾಷ್ಠೆ ಅಥವಾ ಭಗವಂತನ ವರ್ಣನೆ, ನಮ್ಮನ್ನು ಹಿಡಿದಿಡುವಾಗ, ಅದರ ಜೊತೆ ನಾವು ಹಾಡುವ ರಾಗ ಕೂಡ ನಮ್ಮ ಸೂಕ್ಷ್ಮ ಮನಸ್ಸನ್ನು ಹಿತವಾಗಿ ಎಚ್ಚರಿಸುತ್ತದೆ. ರಾಗ - ಸಾಹಿತ್ಯ ಎರಡೂ ಒಟ್ಟಿಗೇ ಮೇಳೈಸಿದಾಗ ಮನಸ್ಸು ಧ್ಯಾನ ಸ್ಥಿತಿಗೆ ತನ್ನಂತೆ ತಾನೇ ಸರಿದು ಹೋಗಿ ಬಿಡುತ್ತದೆ. ನಮ್ಮ ಭಾವನೆಗಳು, ಧ್ಯಾನದ ಮೂಲಕ ನಮ್ಮ ಹತೋಟಿಗೆ ಬಂದಾಗ, ನಮ್ಮ ಕೊರಗು, ದು:ಖ, ನಕಾರಾತ್ಮಕ ಚಿಂತನೆ ಎಲ್ಲವೂ ಕರಗಿ, ಅಲ್ಲಿ ಪರಿಶುದ್ಧವಾದ, ಆರೋಗ್ಯ ಹಾಗೂ ಮನ:ಶಾಂತಿಯಿಂದ ಕೂಡಿದ ಮನುಷ್ಯನ ಅವತಾರ ಆಗುತ್ತದೆ.

ಗುಂಪುಕೂಡಿ ಒಟ್ಟಿಗೆ ಹಾಡುವಾಗ ಶಬ್ದ ತರಂಗಗಳು ಅಲ್ಲಿ ಉಪಸ್ಥಿತರಿರುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನೂರು / ಸಾವಿರ ಧ್ವನಿಗಳು ಒಟ್ಟಿಗೆ ನಾದ ಬಿಂದುವಿನಲ್ಲಿ ಲೀನವಾದಾಗ, ಇಡೀ ವಾತಾವರಣವೇ ಸಕಾರಾತ್ಮಕವಾಗಿ ಬದಲಾಗಿ ಬಿಟ್ಟಿರುತ್ತದೆ. ಇದರ ಉಪಯೋಗ ಪಡೆಯುವುದಕ್ಕೋಸ್ಕರವೇ ಹಿಂದಿನಿಂದಲೂ ಸಾಯಂಕಾಲದ ಹೊತ್ತು ಮನೆಯವರೆಲ್ಲರೂ ಕುಳಿತು, ಭಜನೆ ಮಾಡುವುದು, ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದೆಲ್ಲಾ ಅಭ್ಯಾಸದಲ್ಲಿತ್ತು. ಸಂಗೀತ ಮತ್ತು ಹಾಡುಗಾರಿಕೆ ಎರಡೂ ನಮ್ಮ "ಆತ್ಮ". ಜೀವಕ್ಕೆ ಅತ್ಮನೇ ಆಧಾರ. ಆ ಆತ್ಮ ಎಚ್ಚೆತ್ತುಕೊಳ್ಳಬೇಕು, ಜೀವನದ ಸಾರ್ಥಕತೆ ಆಗಬೇಕೆಂದರೆ, ಸಂಗೀತ ನಮ್ಮ ಜೀವನದಲ್ಲಿ ಅವಶ್ಯವಾಗಿರಬೇಕು.

ಮಗುವಿನಿಂದ ವೃದ್ಧರವರೆಗೂ ಸಂಗೀತಕ್ಕೆ ಆಕರ್ಷಿತರಾಗದವರು ಯಾರೂ ಇಲ್ಲ. ಚಿಕ್ಕ ಮಕ್ಕಳು ತಾಯಿಯ ಗರ್ಭದಲ್ಲೇ ಸಂಗೀತದ ಮೋಡಿಗೆ ಸಿಲುಕಿರುತ್ತಾರೆ. ಜನಿಸಿದ ನಂತರವಂತೂ, ಲಾಲಿಯ ಹಾಡಿನ ರಾಗಕ್ಕೆ ಮರುಳಾಗದ ಮಕ್ಕಳೇ ಇಲ್ಲ.
ಹೀಗೆ ಸಂಗೀತ ನಮ್ಮ ಉಸಿರಾದಾಗ, ನಾವು, ನಮ್ಮ ಮನೆ, ನಮ್ಮ ಸುತ್ತ ಮುತ್ತಲಿನ ಜನ, ವಾತಾವರಣ ಎಲ್ಲವೂ ಸಕಾರಾತ್ಮಕವಾಗೇ ಇರತ್ತೆ ಮತ್ತು ಸಂಗೀತಮಯವಾಗೇ ಬದುಕು ಸುಲಲಿತವಾಗಿ ರಾಗ ಪ್ರವಾಹದಂತೆ ಹರಿಯುತ್ತದೆ.

Sunday, July 12, 2009

ಭಗವಾನ್ ಶ್ರೀವೇದವ್ಯಾಸರ ಕಿರು ಪರಿಚಯ :-


ಭಗವಾನ್ ಶ್ರೀ ವೇದವ್ಯಾಸರಿಗೆ ಅನೇಕ ಹೆಸರುಗಳು :

೧) ಕಪ್ಪಗಿದ್ದುದರಿಂದ ಕೃಷ್ಣ ೨) ದ್ವೀಪದಲ್ಲಿ ಹುಟ್ಟಿದ್ದರಿಂದ ದ್ವೈಪಾಯನ

೩) ಬದರೀ ಕ್ಷೇತ್ರದಲ್ಲಿ ಆಶ್ರಮ ನಿರ್ಮಿಸಿಕೊಂಡು ಇದ್ದುದರಿಂದ ಬಾದರಾಯಣ

೪) ಪರಾಶರ ಮಹರ್ಷಿಗಳ ಮಗನಾದ್ದರಿಂದ ಪಾರಾಶರ್ಯ

೫) ತಾಯಿ ವಸುವಿನ ಮಗನಾದ್ದರಿಂದ ವಾಸವೇಯ

೬) ವೇದಗಳನ್ನು ಅನುಕೂಲಕರವಾಗಿ ವಿಂಗಡಿಸಿದ್ದರಿಂದ "ವೇದವ್ಯಾಸ"

"ವ್ಯಾಸ" ಎಂಬುದು ಬಿರುದು. ಇವರ ಮುತ್ತಾತ ವರಿಷ್ಠ, ಅಜ್ಜ ಶಕ್ತಿ, ತಂದೆ ಪರಾಶರ.

ಶ್ರೀ ವೇದವ್ಯಾಸರ ತಾಯಿ ಮತ್ತ್ಸ್ಯಗಂಧಿ ಮೀನುಗಾರರ ಹುಡುಗಿ. ಯಮುನಾ ನದಿಯಲ್ಲಿ ದೋಣಿ ನಡೆಸುವವಳು. ಒಂದು ದಿನ ಪರಾಶರ ಮಹರ್ಷಿಗಳು ಬಂದರು, ದೋಣಿಯಲ್ಲಿ ಕುಳಿತರು. ಆಚೆ ದಡಕ್ಕೆ ಹೋಗುವಷ್ಟರಲ್ಲಿ ಮಹರ್ಷಿಗಳಿಗೆ ಅವಳ ಮೇಲೆ ಪ್ರೀತಿ ಹುಟ್ಟಿತು. ಇವರ ಪ್ರೀತಿಯ ಫಲವೇ ಕೃಷ್ಣ. ಹುಟ್ಟಿದೊಡನೆ ತಾಯಿಗೆ ತಗುಲಿದ್ದ ಮೀನಿನ ದುರ್ಗಂಧ ತೊಲಗಿ ಯೋಜನದವರೆಗೆ ಸುಗಂಧ ಬೀರುವಂತಾದಳು. ಯೋಜನ ಗಂಧಿ ಎನಿಸಿದಳು. ಇದನ್ನೇ ಸಾಂಕೇತಿಕವಾಗಿ ವ್ಯಾಸರ ರಚನೆಗಳನ್ನು ಓದುವವರು ಮನಸ್ಸಿನ ಕಲ್ಮಷ ಕಳೆದುಕೊಂಡು ಪರಿಶುದ್ಧರಾಗುತ್ತಾರೆಂದು ಅರ್ಥೈಸಬಹುದು.

ವ್ಯಾಸರಿಗಿಂತ ಮೊದಲು "ಅಪೌರುಷೇಯ" (ಮನುಷ್ಯ ರಚನೆ ಅಲ್ಲದ್ದು) ಎಂಬ ಖ್ಯಾತಿ ಹೊಂದಿದ ವೇದರಾಶಿ ಬೆಟ್ಟದೋಪಾದಿಯಲ್ಲಿತ್ತು. ಜನರಿಗೆ ಇದನ್ನು ಓದಲು, ಅರಿಯಲು, ಅನುಕೂಲಕರವಾಗುವಂತೆ ವ್ಯಾಸರು ವಿಂಗಡಿಸುವ ಮಹಾಸಾಹಸದ ಕೆಲಸ ಕೈಗೊಂಡು, ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದ ಎಂದು ವಿಂಗಡಿಸಿದರು. ತಮ್ಮ ಶಿಷ್ಯರಲ್ಲಿ ಪ್ರತಿಭಾವಂತರಾದ ಪೈಲನನ್ನು ಋಗ್ವೇದದಲ್ಲಿ, ವೈಶಂಪಾಯನನನ್ನು ಯಜುರ್ವೇದದಲ್ಲಿ, ಜೈಮಿನಿಯನ್ನು ಸಾಮವೇದದಲ್ಲಿ, ಸುಮಂತನನ್ನು ಅಥರ್ವಣವೇದದಲ್ಲಿ ನಿಷ್ಣಾತರನ್ನಾಗಿಸಿದರು. ಇವರ ಮೂಲಕ ಭರತ ಖಂಡದಲ್ಲೆಲ್ಲಾ ವೇದಗಳ ಪ್ರಸಾರ ಆಯಿತು.

ಮಹಾಭಾರತ, ಹರಿವಂಶ, ಭಾಗವತ, ಪುರಾಣಗಳು, ಉಪಪುರಾಣಗಳು, ಭಗವದ್ಗೀತೆ, ಜ್ಯೋತಿಷ್ಯ, ಆಯುರ್ವೇದ, ಧರ್ಮಶಾಸ್ತ್ರ, ಬ್ರಹ್ಮಸೂತ್ರ, ಸ್ಮೃತಿಗಳು ಇವು ವ್ಯಾಸರ ಇನ್ನಿತರ ರಚನೆಗಳು. ಇವು ಮನುಷ್ಯ ಮಾತ್ರರಿಂದ ಆಗಲಾರದ್ದೆಂಬ ಭಾವನೆ ಇರುವುದರಿಂದ ಇವರನ್ನು ಭಗವಂತನ ಅವತಾರವೆಂದೇ ಜನತೆ ಗೌರವಿಸಿದರು.

ವ್ಯಾಸರಿಗೂ ಒಬ್ಬ ಮಗನಿದ್ದ. ಅವನಿಗಾಗಿ ಅವರು ಅನೇಕ ವರ್ಷ ಕೈಲಾಸ ಪರ್ವತದಲ್ಲಿ ತಪಸ್ಸು ಮಾಡಿದ್ದರು. ಆಗ ಒಲಿದು ಬಂದವಳು ಘೃತಾಚಿ ಎಂಬ ಅಪ್ಸರೆ. ಅವಳಲ್ಲಿ ಹುಟ್ಟಿದವನೇ ಶುಕಮಹರ್ಷಿ. ಈತ ಹುಟ್ಟಿನೊಂದಿಗೇ ಮಹಾಗ್ನಾನಿ ಹಾಗೂ ಪರಮ ವೈರಾಗ್ಯ ನಿಧಿ. ಇಂತಹ ಮಗನನ್ನು ಕಳೆದುಕೊಂಡು ವ್ಯಾಸರು, ದು:ಖ ಮರೆಯಲು ಬರವಣಿಗೆಯಲ್ಲಿ ತೊಡಗಿದರು.

ವ್ಯಾಸರ ಗ್ರಂಥಗಳಲ್ಲಿ ೧೮ ಅಥವಾ ೯ ಕ್ಕೆ ತುಂಬಾ ಮಹತ್ವ ಇದೆ :

೧) ಮಹಾಭಾರತ - ೧೮ (೯) ಪರ್ವಗಳು

೨) ಭಗವದ್ಗೀತೆ - ೧೮ (೯) ಅಧ್ಯಾಯಗಳು

೩) ಪುರಾಣಗಳು - ೧೮

೪) ಉಪ ಪುರಾಣಗಳು - ೧೮

೫) ಕುರುಕ್ಷೇತ್ರದಲ್ಲಿದ್ದ ಸೈನ್ಯ - ಅಕ್ಷೋಹಿಣಿ (೧೮)

೬) ಯುದ್ಧಕಾಲ - ೧೮ ದಿನ

೭) ಯಾದವ ಕುಲದ ನಾಶಕ್ಕೆ ಗಾಂಧಾರಿಯ ಶಾಪ ೩೬ ವರ್ಷಗಳು ( ೯)

ವ್ಯಾಸರು ಹುಟ್ಟಿದ ದಿನ ಹುಣ್ಣಿಮೆ (ವ್ಯಾಸ ಪೌರ್ಣಿಮೆ). ಗ್ರಂಥಗಳನ್ನು ಇಟ್ಟುಕೊಂಡು ಪಾರಾಯಣ ಮಾಡುವ ಪೀಠಕ್ಕೆ "ವ್ಯಾಸ ಪೀಠ" ಎಂದು ಹೆಸರು. ಹಿರಿಯರನ್ನು ಗೌರವಿಸುವ ಪರಿಗೆ "ವ್ಯಾಸ ಪೂಜೆ" ಎಂದು ಹೆಸರು.




{ಹಳೆಯ ’ಕಸ್ತೂರಿ’ ಯಿಂದ ಸಂಗ್ರಹಿಸಿಟ್ಟಿದ್ದ ಮಾಹಿತಿ. ಬರೆದವರು ಯಾರೆಂದು ತಿಳಿದಿಲ್ಲ - ಕ್ಷಮಿಸಿ}
ಗುರು

'ಗುರು ಪೂರ್ಣಿಮೆ’ ಈ ತಿಂಗಳ ೭ನೇ ತಾರೀಖು ಬರುತ್ತಿರುವುದರಿಂದ, ನಾನು ಗುರು ವಂದನೆ ಮಾಡಿ, ನನ್ನ ಮನದ ಮಾತುಗಳನ್ನು ದಾಖಲಿಸುವ ಕೆಲಸ ಶುರು ಮಾಡುತ್ತಿದ್ದೇನೆ.
’ಗುರು’ ಎನ್ನುವ ಶಬ್ದ ಎಲ್ಲರ ಜೀವನದಲ್ಲೂ ಅತಿ ಮುಖ್ಯವಾದದ್ದು. ಬರೀ ಶಬ್ದ ಮಾತ್ರವೇ ಅಲ್ಲ, ಗುರು ಎನ್ನುವ ವ್ಯಕ್ತಿಯೊಟ್ಟಿನ ನಮ್ಮ ಸಂಬಂಧವನ್ನು ನಾವು ಅವಲೋಕಿಸಿದಾಗ ಅದು ಎಷ್ಟು ವಿಶಾಲ, ಅದಕ್ಕೇ ಎಂದು ಸೀಮಿತವಾದ ವ್ಯಾಪ್ತಿಯೇ ಇಲ್ಲ ಮತ್ತು ಅದನ್ನು ಅರ್ಥೈಸಿದಷ್ಟೂ ನಿಗೂಡವಾಗಿ ಬಿಚ್ಚಿಕೊಳ್ಳುತ್ತಲೇ ಹೋಗುವ ಒಂದು ಚಿದಂಬರ ರಹಸ್ಯ ಎಂದು ತಿಳಿಯುತ್ತದೆ.

ನಾವು ಗುರುವನ್ನು ಬ್ರಹ್ಮ, ವಿಷ್ಣು ಮಹೇಶ್ವರರಿಗೆ, ಅಂದರೆ ತ್ರಿಮೂರ್ತಿಗಳಿಗೆ ಹೋಲಿಸುತ್ತೇವೆ. ಸೃಷ್ಟಿ, ಸ್ಥಿತಿ, ಲಯಕ್ಕೆ ಕಾರಣರಾದ ತ್ರಿಮೂರ್ತಿಗಳಿಗೇಕೆ ಹೋಲಿಸುತ್ತೇವೆಂದರೆ, ನಮ್ಮ ಜೀವನಗಳಲ್ಲಿ ನಮ್ಮನ್ನು ಸೃಷ್ಟಿಸುವ, ಸ್ಥಿತಿಕಾಯುವ, ಲಯಕೊಡುವ ವ್ಯಕ್ತಿಯೇ "ಗುರು" . ನಾವು ಈ ಭೂಮಿಯಲ್ಲಿ ಜನಿಸಿದಾಗ, ನಮ್ಮನ್ನು ಇಂಥವರ ಮಕ್ಕಳೆಂದು, ನಮ್ಮನ್ನು ವ್ಯಕ್ತಿಯಾಗಿ ಗುರುತಿಸುವ ಹೆಸರಿನಿಂದ ಕರೆಯಲ್ಪಡುತ್ತೇವೆ. ಆದರೆ ಆ ನಮ್ಮ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ, ಅದನ್ನು ಪೋಷಿಸುವುದರಲ್ಲಿ, ಗುರುವಿನ ಪಾತ್ರವೇ ಮಹತ್ತರವಾದದ್ದು.

ಒಂದು ಶಿಶು ಗರ್ಭದಲ್ಲಿ ರೂಪು ತಳೆದಾಕ್ಷಣದಿಂದಲೇ ತಾಯಿ ಅದಕ್ಕೆ ಪ್ರಥಮ ಗುರುವಾಗುತ್ತಾಳೆ. ಆ ಶಿಶುವನ್ನು ನವ ಮಾಸಗಳು ಗರ್ಭದಲ್ಲಿ ಹೊರುವಾಗಲೇ ಅವಳು ಮಗುವಿನ ಜೊತೆ ಭಾವನಾತ್ಮಕ ಸಂಬಂಧವನ್ನೂ ಬೆಳೆಸಿಕೊಳ್ಳುತ್ತಾಳೆ. ಅಂದರೆ ಆ ಮೂಲಕ ಆ ಮಗುವಿಗೆ ಭಾವನೆಗಳನ್ನು ಬೆಳೆಸುತ್ತಾಳೆ / ಕಲಿಸುತ್ತಾಳೆ. ಆ ಮಗುವನ್ನು ಪ್ರೀತಿಸುವುದರ ಮೂಲಕ ಅದಕ್ಕೆ ಪ್ರೀತಿಸುವುದನ್ನು ಕಲಿಸುತ್ತಾಳೆ. ಭಾವನೆಗಳನ್ನು ಕಲಿಸುತ್ತಾಳೆ ಮತ್ತು ತನ್ನೆಲ್ಲಾ ಭಾವನೆಗಳನ್ನೂ ತೋರಿಸಲು ಕಲಿಸುತ್ತಾಳೆ. ಆದ್ದರಿಂದ ಎಲ್ಲರಿಗಿಂತ ಮೊದಲು ನಮಗೆ ಜನ್ಮ ಕೊಟ್ಟ ತಾಯಿಗೆ, ಪ್ರಥಮ ಗುರುವಿಗೆ ನನ್ನ ಅನಂತಾನಂತ ವಂದನೆಗಳು.

ಜನಿಸಿದ ನಂತರ ತಾಯಿಯ ಜೊತೆಗೆ ತಂದೆಯೂ ಗುರುವಿನ ಸ್ಥಾನ ಅಲಂಕರಿಸುತ್ತಾನೆ. ಮಗುವನ್ನು ತಂದೆ, ಅಕ್ಕರೆಯಿಂದ ಎತ್ತಿ, ತನ್ನ ಭುಜದ ಮೇಲೆ ಮಲಗಿಸಿಕೊಂಡಾಗ, ಮಗು ಅನುಭವಿಸುವ ಭದ್ರತೆ, ನಿರಾಳ ಎಲ್ಲಾ ಅಪಾರವಾದದ್ದು. ಮುಂದೆ ತಂದೆಯ ಕೈ ಹಿಡಿದು ನಡೆಯಲು ಕಲಿತು, ದೊಡ್ಡವನಾಗುತ್ತಾ ಆಗುತ್ತಾ, ತಂದೆಯನ್ನೇ ಅನುಕರಿಸುವುದನ್ನೂ ಕಲಿಯುತ್ತದೆ. ಪುಟ್ಟ ಮಕ್ಕಳ ದೃಷ್ಟಿಯಲ್ಲಿ, ಅಪ್ಪಂದಿರು ಯಾವಾಗಲೂ ಎಲ್ಲಾ ಗೊತ್ತಿರುವ, ಶಕ್ತಿವಂತ ಪುರುಷನಾಗಿರುತ್ತಾನೆ.

ಶಾಲೆಯಲ್ಲಿ ಸೇರಿದಾಕ್ಷಣದಿಂದ ಮಗುವಿಗೆ, ವಿದ್ಯೆ, ವಿನಯ, ನಡವಳಿಕೆ, ಜೀವನ ಎದುರಿಸುವ ಪರಿ, ಧೈರ್ಯ, ಕಲಿಸುವ ಗುರು ಸಿಗುತ್ತಾರೆ. ಗುರು ಬರೀ ವಿದ್ಯೆ ಕಲಿಸುವುದಕ್ಕೆ ಮಾತ್ರವೇ ಸೀಮಿತವಾಗಿರಬೇಕಿಲ್ಲ. ಮಕ್ಕಳಿಗೆ ಗುರು ಯಾವಾಗಲೂ ಆದರ್ಶ ಪುರುಷನ ರೂಪದಲ್ಲಿರುತ್ತಾರೆ. ಅನುಕರಣಾ ವ್ಯಕ್ತಿಯಾಗಿರುತ್ತಾರೆ. ಅಜ್ನಾನವೆಂಬ ಕತ್ತಲನ್ನು ಹೊಡೆದೋಡಿಸಿ, ಜ್ನಾನವೆಂಬ ದೀಪ ಬೆಳಗುವವನೇ ಗುರು. ನಮ್ಮ ಜೀವನದಲ್ಲಿ ಕತ್ತಲಾಗಿರುವ, ಮೂಢವಾಗಿರುವ, ಅಂದರೆ ನಾವು ನಮ್ಮ ಬುದ್ಧಿ ಹಾಗೂ ಮನಸ್ಸನ್ನು ಇಲ್ಲಿ ಕತ್ತಲೆಗೆ ಹೋಲಿಸಿಕೊಂಡರೆ, ಆ ಕತ್ತಲನ್ನು ಕರಗಿಸುವವನೇ ಗುರು ಎಂದಾಗುತ್ತದೆ. ಕತ್ತಲನ್ನು ಕರಗಿಸುವುದೆಂದರೇನು ? ನಾವು ಬೆಳಕಿನ ನಂದಾ ದೀಪ ಹಚ್ಚಿಟ್ಟರೆ, ಅಲ್ಲಿರುವ ಕತ್ತಲು ತಾನಾಗೇ ಕರಗತ್ತೆ. ಆ ಬೆಳಕು ಅಥವಾ ಜ್ಯೋತಿ ಅಂದರೆ ಜ್ನಾನವನ್ನು ಕೊಡುವವನೇ ಗುರು.

ಯಾರಿಗೂ ಸಾಟಿಯಿಲ್ಲದ, ಯಾರನ್ನೂ ಹೋಲದ, ಎಲ್ಲರಿಗಿಂತ ಅತ್ಯುನ್ನತ ಸ್ಥಾನ, ಗೌರವ ಪಡೆದವನೇ ಗುರು. ನಮ್ಮ ಅಂಧಕಾರ ಹೊಡೆದೋಡಿಸಿ, ಜ್ನಾನವೆಂಬ ಜ್ಯೋತಿ ಬೆಳಗು ಎಂದು ಪ್ರಾರ್ಥಿಸುತ್ತಾ ನಾನು ಈ ಗುರುವಂದನೆ ಮಾಡುತ್ತಿದ್ದೇನೆ. ನನಗೆ ಜೀವ ಕೊಟ್ಟು, ನನ್ನನ್ನು ಸಂರಕ್ಷಿಸಿದ, ನನ್ನ ತಾಯಿ-ತಂದೆಯರ ಪಾದಾರವಿಂದಗಳಿಗೆ ನನ್ನ ಮೊದಲ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿ, ಈ ತನಕ ನನ್ನ ಜೀವನದಲ್ಲಿ, ಒಂದೇ ಒಂದು ಅಕ್ಷರವನ್ನು ಕಲಿಸಿದವರಿಗೂ (ಒಂದಕ್ಷರಂ ಕಲಿಸಿದಾತಂ ಗುರು), ಇನ್ನೂ ಕಲಿಸುತ್ತಿರುವವರಿಗೂ, ನನ್ನ ಸಂಗೀತದ ಗುರುಗಳು ಶ್ರೀಮತಿ ಉಷಾರವರಿಗೂ, ನನ್ನ ಅನಂತಾನಂತ ನಮನಗಳನ್ನೂ, ಗುರು ಪೂರ್ಣಿಮೆಯ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಕಣ್ಣಿಗೆ ಕಾಣುವ ಗುರುಗಳ ಜೊತೆಗೆ ಅಸಂಖ್ಯ ಅಗೋಚರ ಗುರುಗಳೂ ಇದ್ದಾರೆ, ನಮ್ಮ ಸುತ್ತುಮುತ್ತಲಿನ ವಾತಾವರಣ, ಪ್ರಕೃತಿ, ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಆತ್ಮಸಾಕ್ಷಿ ನಮ್ಮ ಜೀವನದ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ನಮ್ಮ ಸುಪ್ತ ಮನಸ್ಸು, ಅನುಭವದ ದೆಸೆಯಿಂದ, ನಮ್ಮನ್ನು ಸದಾ ಸರಿಯಾದ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿರುತ್ತದೆ. ಆ ನಮ್ಮ ಸುಪ್ತ ಮನಸ್ಸಿನ ಶಕ್ತಿ ಅಥವಾ ತಾಕತ್ತನ್ನು ಊಹಿಸಿಕೊಳ್ಳುವುದಾಗಲೀ, ಅಂದಾಜು ಮಾಡುವುದಾಗಲಿ, ನಮ್ಮ ಬುದ್ಧಿಗೆ ನಿಲುಕದ್ದು. ಇದೊಂದು ಪ್ರಚಂಡ ಬಲದ ತಾಕತ್ತು. ನಾವು ಆ ಅದಮ್ಯ ಚೇತನಕ್ಕೂ ಮತ್ತು ಆ ಭಗವಂತನಿಗೂ ವಂದಿಸುತ್ತಾ... ಸದಾ ಎನ್ನ ಹೃದಯದಲ್ಲಿ ವಾಸಮಾಡೋ ಶ್ರೀ ಹರಿ, ನನ್ನನ್ನು ಸತತವಾಗಿ ಜ್ನಾನದ ದಿಕ್ಕಿಗೆ ಕೈ ಹಿಡಿದು ನಡೆಸು, ದಾರಿ ತೋರೆಂದು ಕೇಳುತ್ತಾ............

" ಗುರುಬ್ರಹ್ಮಾ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರ:
ಗುರುರೇವ ಪರಂಬ್ರಹ್ಮ ತಸ್ಮೈ ಶ್ರೀ ಗುರವೇ ನಮ:

ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ
ತತ್ಪದಂ ದರ್ಶಿತಂ ಯೇನ ತಸ್ಮೈಶ್ರೀ ಗುರವೇ ನಮ:

ಅಜ್ನಾನತಿಮಿರಾಂಧಸ್ಯ ಜ್ನಾನಾಂಜನಶಲಾಕಯಾ
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮ:

ಬ್ರಹ್ಮಾನಂದಂ ಪರವಸುಖದಂ ಕೇವಲಂ ಜ್ನಾನಮೂರ್ತಿಂ
ದ್ವಂದ್ವಾತೀತಂ ಗಗನಸದೃಶಂ ತತ್ತ್ವಮಸ್ಯಾದಿಲಕ್ಷ್ಯಮ್

ಏಕಂ ನಿತ್ಯ ವಿಮಲಂ ಅಚಲಂ ಸರ್ವಧೀ ಸಾಕ್ಷಿಭೂತಂ
ಭಾವಾತೀತಂ ತ್ರಿಗುಣರಹಿತಂ ಸದ್ಗುರುಂ ತಂ ನಮಾಮಿ

ಶ್ರೀ ಗುರುಭ್ಯೋ ನಮ: - ಹರಿ: ಓಂ....