Friday, January 29, 2010

ಮೆಗಾ ಮದುವೆ....

ಮದುವೆಗಳಲಿ ಆಕರ್ಷಣೆಯೇ.... "ಮಂಟಪಗಳು"
ವೇದಿಕೆ ಮೇಲೆ ಬಣ್ಣ ಬಣ್ಣದ ಚೌಕಟ್ಟುಗಳು
ಸ್ಯಾಟಿನ ಹೊದಿಕೆಯಲಿ ಸಿಂಗಾರಗೊಂಡ ಪುಷ್ಪಗಳು
ನಡುವೆ ಮದುಮಕ್ಕಳಿಗೆರಡು ರಾಜಾ ಸೀಟುಗಳು......

ಪೈಪೋಟಿಯ ವೈಭವಗಳೂ...
ಲಕ್ಷ, ಕೋಟಿ ರೂಪಾಯಿಗಳೂ...
ಮಿಂಚಿದ ಬಾಗಿದ ಬಳುಕಿದ ದೌಲತ್ತುಗಳೂ...
ನಡುವೆ ಎಲ್ಲೋ ಮುಚ್ಚಿಹೋಯ್ತು ನವಿರಾದ ಸಂಬಂಧಗಳೂ...

ಅಂದು ಮದುವೆಗಳು ನಿಶ್ಚಿತಗೊಳ್ಳುತ್ತಿದ್ದವು ಸ್ವರ್ಗದಲ್ಲೆಂದು..
ಇಂದು ಐಷಾರಾಮಿ ಮದುವೆಗಳಲಿ ಸ್ವರ್ಗವೇ ಧರೆಗಿಳಿದಿದೆಯೆಂದು...

ಜಗತ್ತೇ ದಂಗು ಬಡಿಯುವ ವೈಭಗದ ಗುಂಗು
ಮೆಗಾ ಮದುವೆಗಳ ಮಾಯಾ ಲೋಕದ ಡೋಂಗು...

ಚಿನ್ನ ಬೆಳ್ಳಿಗಳ, ವಜ್ರ ವೈಢೂರ್ಯಗಳ ಅತೀ ಆರ್ಭಟ
ಆಮಂತ್ರಣ ಪತ್ರಿಕೆಯಿಂದಲೇ ಆರಂಭವಾಗುವ ಅಂತಸ್ಥಿನ ಆಟ....

ಹಾಹಾಕಾರ ಮಾಡುತ್ತಾ ತುತ್ತು ಅನ್ನಕ್ಕೂ ಗೋಳಿಡುವ ಬಡವ
ಕೋಟಿಗಟ್ಟಲೇ ದೋಚುತ್ತಾ ಮಹಾರಾಜರ ವೈಭವ ಮೆರೆಸುವ ಧನ ದಾನವ...

ಕಡಿಮೆ ಖರ್ಚಿನ ಸರಳ ವಿವಾಹಗಳು
ಬೆಸೆಯುವುದು ಗಟ್ಟಿಯಾದ ಸಂಬಂಧಗಳು...

ಎರಡು ಸಂಸಾರಗಳು ಒಟ್ಟಾದಾಗ
ವಧುವರರ ಅಂತರಂಗಗಳು ಒಂದಾದಾಗ
ಬೇಕೇ.... ಈ...... ಭೋಗ..... ವೈಭೋಗ.......

Saturday, January 2, 2010

ಚಂದದ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಶ್ರೀವತ್ಸ ಜೋಶಿಯವರ ಖಾಸಗಿ ಅಂಚೆ ನನ್ನ ಅಂಚೆ ಪೆಟ್ಟಿಗೆ ತಲುಪಿದಾಗ, ತುಂಬಾ ಖುಷಿಯಾಗಿತ್ತು. ತಮ್ಮೆಲ್ಲಾ ಅಭಿಮಾನಿಗಳಿಗೂ ಅವರು ಖಾಸಗಿಯಾಗಿ ಹೀಗೆ ಅಂಚೆ ಕಳುಹಿಸಿದ್ದರೆಂದು ತಿಳಿದು ಹರ್ಷವಾಯಿತು. ಅವರ ಲೇಖನಗಳನ್ನು ಒಂದೂ ಬಿಡದೆ ಓದುವ ಅಭಿಮಾನಿ ನಾನು. ಭಾನುವಾರದ ವಿಜಯ ಕರ್ನಾಟಕದ ಆಕರ್ಷಣೆಯೇ ನನ್ನ ಪಾಲಿಗೆ ಅವರ ಲೇಖನ. ಅವರ ಎರಡು ಪುಸ್ತಕಗಳ ಬಿಡುಗಡೆ ಇಲ್ಲೇ ಇಂಡಿಯನ್ ಇನ್ಸ್ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಎಂದು ನೋಡಿ, ನಿಜವಾಗಿ ನಾನು ಈ ದಿನಕ್ಕಾಗಿ ಎದುರು ನೋಡುತ್ತಿದ್ದೆ. ಸಧ್ಯಕ್ಕೆ ಬೇರಾವುದೇ ಅಡಚಣೆಯಾಗದೆ, ನಾನು ೧೦.೩೦ಕ್ಕೆ ಅಲ್ಲಿ ತಲುಪಿದಾಗ, ಆಗತಾನೆ ಕಾರ್ಯಕ್ರಮ ಶುರುವಾಗಿತ್ತು. ಈ ದಿನದ ಕಾರ್ಯಕ್ರಮದಲ್ಲಿ ನಾನು ಶ್ರೀಯುತರಾದ ಮಾಸ್ಟರ್ ಹಿರಣ್ಣಯ್ಯ, ಜಯಂತ್ ಕಾಯ್ಕಿಣಿ ಹಾಗೂ ಮುಖ್ಯವಾಗಿ ಶ್ರೀವತ್ಸ ಜೋಶಿಯವರ ಮಾತುಗಳನ್ನು ಕೇಳಲು ಉತ್ಸುಕಳಾಗಿದ್ದೆ. ಶ್ರೀವತ್ಸ ಜೋಶಿಯವರನ್ನು ನಾನು ಇದೇ ಮೊದಲ ಬಾರಿಗೆ ಭೇಟಿ ಮಾಡುವ ಅವಕಾಶವನ್ನು ತಪ್ಪಿಸಿಕೊಳ್ಳುವ ಇಷ್ಟ ನನಗೆ ಇರಲಿಲ್ಲ..... ಅಂತೂ ಅಲ್ಲಿ ತಲುಪಿ ಜಾಗ ಹುಡುಕಿ ಕುಳಿತಾಗ ನನಗೊಂತರ ಉದ್ವೇಗವಾಗಿತ್ತು....

ಕಾರ್ಯಕ್ರಮ ಪುಸ್ತಕ ಬಿಡುಗಡೆಯಿಂದ ಮೊದಲುಗೊಂಡು, ಅತ್ಯಂತ ಆತ್ಮೀಯವಾಗಿ ಜೋಶಿ ದಂಪತಿಗಳಿಗೆ ಸನ್ಮಾನ ಮೂಲಕ ಮುಂದುವರೆಯಿತು. ಅತಿಥಿಗಳೆಲ್ಲರೂ ಸೇರಿ ದಂಪತಿಗಳನ್ನು ಸನ್ಮಾನಿಸಿದ ರೀತಿ ನಿಜವಾಗಿ ಕಾರ್ಯಕ್ರಮಕ್ಕೆ ಒಂಥರಾ ನಮ್ಮ ಮನೆಯ ಯಾವುದೋ ಒಂದು ಕಾರ್ಯಕ್ರಮ ಎಂಬ ಭಾವನೆ ಬರುವಂತೆ ಮಾಡಿತು....

ಮೊದಲನೆಯದಾಗಿ ಶ್ರೀ ಜಯಂತ ಕಾಯ್ಕಿಣಿಯವರು ಮಾತನಾಡಿ ಎಂದಿನಂತೆ ತಮ್ಮ ಹಾಸ್ಯ ಮಿಶ್ರಿತ ಧಾಟಿಯಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟರು. ಮದುವೆಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೂ ಅಂತರ ಕಡಿಮೆಯಾಗುತ್ತಿದೆ ಎಂದು ನಗಿಸಿದರು... ಶ್ರೀವತ್ಸ ಜೋಶಿಯವರನ್ನು ಪರಿಚಯಿಸುತ್ತಾ "ಇವರನ್ನು ನೋಡಿದರೇ ಸಾಕು ಇವರದು ಸುಭಿಕ್ಷ ಮತ್ತು ಸೌಹಾರ್ದದ ವ್ಯಕ್ತಿತ್ವವೆನ್ನಿಸುತ್ತದೆ" ಎಂದರು. ಸ್ಪಂದನವಿಲ್ಲದ ಅಂಕಣ ಬರಹಗಳು ’ರದ್ದಿ’ಯಾಗುತ್ತದೆಂದೂ, ಜೋಶಿಯವರ ಅಂಕಣಗಳಿಗೆ ಪ್ರಪಂಚದ ಎಲ್ಲೆಡೆ ಅಭಿಮಾನಿಗಳಿದ್ದಾರೆಂದೂ ಹೇಳಿದರು. ಅಂಕಣ ಬರಹಗಳು ಅಹಂಕಾರವಿಲ್ಲದ, ನಿಸ್ವಾರ್ಥ ಆಂತರಿಕ ಮತ್ತು ಅತ್ಯಂತ ಪ್ರಾಮಾಣಿಕ ಬರಹಗಳಾಗಬೇಕು ಮತ್ತು ಜೋಶಿಯವರ ಬರಹಗಳು ಪೂರ್ವಗ್ರಹ ಮುಕ್ತವಾಗಿ, ಅತ್ಯಂತ ಪ್ರಭಾವಿತವಾಗಿರುತ್ತವೆಂದು ಹೇಳಿದರು. ಹೊರನಾಡಿನಲ್ಲಿರುವ ಕನ್ನಡಿಗರಾದ ಜೋಶಿಯವರು, ತಾನೇನೋ ಕಳೆದುಕೊಂಡಿದ್ದೇನೆಂಬ ಭಾವನೆ ಮೀರಿ, ಅತ್ಯಂತ ಸ್ವಾಭಾವಿಕವಾಗಿ ಬರೆಯುತ್ತಾರೆ ಮತ್ತು ಇವರ ಬರಹಗಳು ಡಿಟಿಪಿ ತಂತ್ರದ ಮೆರವಣಿಗೆಯಿಲ್ಲದ, ಅಂದರೆ ತಾಂತ್ರಿಕ ಸಹಾಯದಿಂದ ಸಾಲಂಕೃತಗೊಂಡ ಬರಹದಂತಿರದೆ, ಆತ್ಮೀಯವಾಗಿರುತ್ತದೆಂದರು. ಮಾಹಿತಿ ಎನ್ನುವುದನ್ನು ನಾವು ಹೀರಿಕೊಂಡು, ಅದು ನಮಗೆ ರಕ್ತಗತವಾಗಿ, ನಮ್ಮಿಂದ ನಮ್ಮತನದೊಂದಿಗೆ "ಬರಹ"ವಾಗಿ ಬಂದಾಗ, ಅದು ಪ್ರಾಮಾಣಿಕ ಬರಹವಾಗುತ್ತದೆ ಮತ್ತು ಜೋಶಿಯವರ ಬರಹಗಳು ನಮ್ಮನ್ನು, ಈ ಕಾರಣಕ್ಕೇ ಸೆಳೆಯುತ್ತವೆ ಎಂದರು. ಅಂಕಣಕಾರರಿಗೆ ಪ್ರತಿವಾರವೂ ಯಾವುದಾದರೊಂದು ವಿಷಯವನ್ನು, ಅಂಕಣಕ್ಕಾಗಿ ಹುಡುಕುವ ಆತಂಕವಿರುತ್ತದೆ, ಶ್ರೀ ಜೋಶಿಯವರು ಅಂಕಣ ಬರಹದ ಚೌಕಟ್ಟನ್ನು ಬಳಸಿ, ಇನ್ನೂ ಹೆಚ್ಚು ಸಾಹಿತ್ಯ ಕೃಷಿ ಮಾಡಲಿ ಮತ್ತು ನಾವು ಅವರ ಕಥೆ, ಪುಸ್ತಕಗಳನ್ನು ಓದುವಂತಾಗಲೆಂದು ಹಾರೈಸಿದರು.

ಕಾರ್ಯಕ್ರಮ ಮುಂದುವರೆದು, ಶ್ರೀ ಮಾಸ್ಟರ್ ಹಿರಣ್ಣಯ್ಯನವರ ಮಾತುಗಳು ಎಂದಿನಂತೆ ಅವರ ಪಂಚ್ ಡೈಲಾಗ್ ಗಳ ಸಮೇತ ಅತ್ಯಂತ ಆಕರ್ಷಕವಾಗಿಯೂ, ಅಷ್ಟೇ ಕಾಳಜಿಯುಕ್ತವೂ ಆಗಿತ್ತು. ಅಮೆರಿಕ ಮತ್ತು ಭಾರತ ನಡುವಿನ ಕೆಲವು ಸಾಂಸ್ಕೃತಿಕ ಅಂತರಗಳನ್ನು ಹೇಳುತ್ತಾ ಕಾಳಜಿ ವ್ಯಕ್ತಪಡಿಸಿದರು. ಅಲ್ಲಿಯ ಜನರು ತಮ್ಮ ದೇಣಿಗೆಗಳನ್ನು ಪುಸ್ತಕ ಭಂಡಾರಗಳಿಗೆ ಕೊಡುವುದನ್ನು, ನಾವಿನ್ನೂ ಕಲಿಯಬೇಕೆಂದರು..

ಕನ್ನಡದ ಏಳಿಗೆ, ಉದ್ಧಾರ ನಮ್ಮೆಲ್ಲರ ಭಾವನೆಗಳ ಸಮ್ಮಿಲನದಿಂದ ಆಗಬೇಕು, ಭಾವನಾ ಪ್ರಪಂಚ ಒಂದಾದರೆ, ಜ್ಞಾನದ ಪ್ರಭೆಗಳೆಷ್ಟಾದರೂ, ಎಲ್ಲೆಲ್ಲಿಂದ ಬಂದರೂ, ಎಲ್ಲಾ ಒಟ್ಟುಗೂಡಿ ಒಂದೇ ಒಂದು ಭಾಷೆಯಾಗಿ ಹೊರ ಹಾಕುವ ಮಾಧ್ಯಮವಾದರೆ, ಮಾರ್ಪಟ್ಟರೆ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯವೆಂದು ಹೇಳಿದರು. ನಮ್ಮತನ ಕಾಪಾಡಿಕೊಂಡು ನಾವು ಎಲ್ಲಿ ಬೇಕಾದರೂ ಬದುಕಲು ಕಲಿಯಬೇಕು ಆದರೆ ನಮ್ಮತನ ನಮ್ಮ ಭಾಷೆ, ನಮ್ಮ ಸಂಸ್ಕೃತಿ ಬಿಟ್ಟರೆ, ನಾವು ಎಲ್ಲಿಯೂ ಸಲ್ಲಲಾರೆವೆಂದರು..

ಶ್ರೀವತ್ಸ ಜೋಶಿಯವರು "ನಾನು ಅಂಕಣವನ್ನಾದರೂ ಬರೆದೇನು... ಭಾಷಣ ಕೊರೆಯಲಾರೆನು".. ಎನ್ನುತ್ತಲೇ ತಮ್ಮ ಹಿತ ಮಿತವಾದ ಮಾತುಗಳನ್ನು ಶುರು ಮಾಡಿದರು. ದಟ್ಸ್ ಕನ್ನಡ ಡಾಟ್ ಕಾಮ್ ನ ಶ್ರೀ ಶ್ಯಾಮ್ ಸುಂದರ್ ಮತ್ತು ಶ್ರೀ ವಿಶ್ವೇಶ್ವರ ಭಟ್ಟರು ಎಂಬ ಎರಡು ಮಹಾನ್ ಶಕ್ತಿಗಳು ನನ್ನ ಬರಹಗಳ ಹಿಂದಿದೆ ಎಂದು ಸ್ಮರಿಸಿದರು. ಓದುಗರ ಪ್ರತಿಕ್ರಿಯೆ, ಪ್ರೋತ್ಸಾಹವೇ ತಮ್ಮ ಬರಹಗಳಿಗೆ ಸ್ಫೂರ್ತಿಯೆಂದರು. ಆಂಗ್ಲ ಪದ LISTEN ಬಿಡಿಸಿ ಜೋಡಿಸಿದರೆ SILENT ಆಗುತ್ತದೆಂದೂ ತಾವು ಯಾವಾಗಲೂ ಸೈಲೆಂಟ್ ಆಗಿ ಹೆಚ್ಚು ಕೇಳಿಸಿಕೊಂಡರೆ, ಮುಂದೆ ವಿಷಯಗಳು ಬರಹಗಳ ಮೂಲಕ ಹೊರ ಹೊಮ್ಮುತ್ತದೆಂದು ತಿಳಿದಿರುವವನೆಂದರು. ತಮ್ಮ ಬರಹಗಳ ಮೂಲಕ, ಜೀವನ ಪ್ರೀತಿ ಬಿಂಬಿಸುವುದೇ ತಮ್ಮ ಉದ್ದೇಶವೆಂಬಂತಹ ಮಾತುಗಳನ್ನಾಡಿ, ತಮ್ಮ ಚಿಕ್ಕ ಚೊಕ್ಕ ಭಾಷಣ ಮುಗಿಸಿದರು.

ಕೊನೆಯದಾಗಿ ಮಾತನಾಡಿದವರು ಶ್ರೀ ವಿಶ್ವೇಶ್ವರ ಭಟ್ಟರು. ಶ್ರೀವತ್ಸ ಜೋಶಿಯವರು ತಮ್ಮ ಅಂಕಣ ಬರಹವನ್ನೆಂದೂ ತಪ್ಪಿಸಿಲ್ಲವೆಂದೂ, ಅಮೆರಿಕದಲ್ಲಿದ್ದೇ ಕನ್ನಡ ಬೆಳೆಸಿದವರು ಎಂದರು. ಜೋಶಿಯವರು ಅಮೆರಿಕದಲ್ಲಿ ನಡೆದ ಯಾವುದೋ ಒಂದು ಘಟನೆಯನ್ನು ಕರ್ನಾಟಕದಲ್ಲಿ ನಡೆದ ಒಂದು ಘಟನೆಗೆ ಹೋಲಿಸಿ ಬರೆಯುವ ವಿಶೇಷ ಪ್ರಯತ್ನ ಶ್ಲಾಘನೀಯವೆಂದರು. ವಿಜಯ ಕರ್ನಾಟಕದ breaking newsಗೆ ಪನ್ ಮಾಡುವ, ಕನ್ನಡದ ಎಲ್ಲಾ ಪತ್ರಿಕೆಗಳನ್ನೂ ಓದುವ, ಅಮೆರಿಕದಲ್ಲಿರುವ ಏಕೈಕ ಕನ್ನಡಿಗ ಶ್ರೀವತ್ಸ ಜೋಶಿಯವರೆಂದರು. ಶ್ರೀ ಜೋಶಿಯವರ ಬರಹಗಳಲ್ಲಿ ವೈಯೆನ್ಕೆಯವರ ಪ್ರಭಾವ ಗಾಢವಾಗಿದೆ ಮತ್ತು ಹೊಸ ಹೊಸ ಶೈಲಿಯ, ವಿವಿಧ ಅರ್ಥ ಬರುವ ಆಕರ್ಷಕ ತಲೆ ಬರಹಗಳಿಂದ ತಮ್ಮ ಲೇಖನ ಓದುವಂತೆ ನಮ್ಮನ್ನು ಪ್ರಚೋದಿಸುತ್ತಾರೆಂದರು. ಒಂದು ಸಣ್ಣ ವಿಚಾರ ಅಥವಾ ಎಳೆಯಿಂದ ಆರಂಭವಾದ ಅಂಕಣ ಕೊನೆಗೆ ಮುಗಿಯುವಾಗ ಒಂದು ವಿಶೇಷ ಅನುಭೂತಿ ಕಟ್ಟಿ ಕೊಡುತ್ತದೆಂದರು.

ಬರೆದು ಬರೆದೂ ಸಾಕಾಗಿದೆ ಎಂಬ ಭಾವ ಯಾವ ರೀತಿಯಲ್ಲೂ ಬಿಂಬಿಸದೇ ಬರೆಯುವ ತಾಳ್ಮೆ/ಜಾಣ್ಮೆ ಅಂಕಣಕಾರರಿಗಿರಬೇಕು, ಕನ್ನಡದಲ್ಲಿ ಅಂಕಣಕಾರರನ್ನು ಹುಟ್ಟು ಹಾಕುವುದು ಅತ್ಯಂತ ಪ್ರಯಾಸದ ಕೆಲಸ, ಸಮಯದ ವಿರುದ್ಧ ಹೋರಾಡುತ್ತಿರುವ ನಮ್ಮೆಲ್ಲರ ಮಧ್ಯದಲ್ಲಿ, ತಪ್ಪದೇ, ಪ್ರಾಮಾಣಿಕವಾಗಿ ಬರೆಯುವ ಶ್ರೀವತ್ಸ ಜೋಶಿಯವರು ಅಭಿನಂದನಾರ್ಹರು ಎಂದು ಮಾತು ಮುಗಿಸಿದರು.

ಈ ದಿನದ ಪುಸ್ತಕ ಬಿಡುಗಡೆ ಸಮಾರಂಭ, ನಾನು ಹಿಂದೆ ನೋಡಿದ ಅನೇಕ ಸಮಾರಂಭಗಳಿಗಿಂತ ಭಿನ್ನವಾಗಿತ್ತು. ಇಲ್ಲೊಂದು ಆತ್ಮೀಯತೆಯಿತ್ತು, ಆದರವಿತ್ತು, ಚೊಕ್ಕವಾಗಿತ್ತು. ಪುಸ್ತಕ ಕೊಂಡು, ಶ್ರೀವತ್ಸ ಜೋಶಿಯವರ ಹಸ್ತಾಕ್ಷರ ಹಾಕಿಸಿಕೊಂಡು, ಮನೆಗೆ ಬರುವಾಗ ಮನಸ್ಸೆಲ್ಲಾ ಪ್ರಫುಲ್ಲವಾಗಿತ್ತು. ಶ್ರೀ ಜೋಶಿಯವರನ್ನು ಭೇಟಿಯಾಗುವ ನನ್ನ ಆಸೆ ಇಷ್ಟು ಸುಲಭವಾಗಿ ಮತ್ತು ಇಷ್ಟು ಬೇಗ ನೆರವೇರುತ್ತದೆಂದು ನಾನು ಅಂದುಕೊಂಡಿರಲಿಲ್ಲ. ತಮ್ಮನ್ನು ಮಾತನಾಡಿಸಲು ಕಾದು ನಿಂತಿದ್ದ ಎಲ್ಲರ ಜೊತೆ ಹಸನ್ಮುಖರಾಗಿ ಮಾತನಾಡಿದ ಜೋಶಿಯವರು, ಜಯಂತ ಕಾಯ್ಕಿಣಿಯವರು ಹೇಳಿದಂತೆ ತುಂಬು ವ್ಯಕ್ತಿತ್ವವನ್ನು ಬಿಂಬಿಸಿದರು. ಶನಿವಾರದ ಬೆಳಗಿನ ಕಾರ್ಯಕ್ರಮ ನಿಜಕ್ಕೂ ಮುದಕೊಟ್ಟಿತು.