Thursday, May 13, 2010

ಸುಪ್ರಭಾತ.... ಶುಭೋದಯ....

ನಮ್ಮ ಜಯನಗರ ೬ನೇ ಬಡಾವಣೆಯಲ್ಲಿ ನಿಮಗೆ ಗೊತ್ತಿರುವಂತೆ ಯಡಿಯೂರು ಕೆರೆ.. . ಎದುರುಗಡೆ ಹಾಗೂ ಸುತ್ತಮುತ್ತ ಅನೇಕ ಬಹು ಮಹಡಿ ಕಟ್ಟಡಗಳು ಇವೆ..... ಇಲ್ಲಿಯ ಕೆಲವು ಮನೆಗಳ ಪೂರ್ವ ದಿಕ್ಕಿನ ಮಾಳಿಗೆಗಳು (ಬಾಲ್ಕನಿಗಳು) ಕೆರೆಯ ಅಭಿಮುಖವಾಗಿ ಇದೆ. ದಿನವೂ ಬೆಳಿಗ್ಗೆ ಸೂರ್ಯೋದಯದ ಪ್ರಥಮ ಕಿರಣಗಳು ಭೂಮಿಯನ್ನು ಮುಟ್ಟುವ ತವಕದಲ್ಲಿ ಇರುವಾಗಲೇ... ಇಲ್ಲಿಯ ಮನೆಗಳ ಅಕ್ಕ ಪಕ್ಕದಲ್ಲಿ ಬೆಳಗಿನ ಸುಪ್ರಭಾತ ಆರಂಭವಾಗಿ ಬಿಡುತ್ತದೆ....... ಕೋಗಿಲೆಗಳ ಮಧುರ ಕಂಠದಿಂದ... ಕುಹೂ.... ಕುಹೂ.... ಎಂದು. ಬೆಳಗಿನ ಸೂರ್ಯೋದಯ ಯಡಿಯೂರು ಕೆರೆಯ ಹತ್ತಿರ ಅತ್ಯಂತ ಸುಂದರವಾದ, ಭಗವಂತನ ದೃಶ್ಯ ಸಂಯೋಜನೆಯಂತಿರುತ್ತದೆ. ನಿಧಾನವಾಗಿ ಪೂರ್ವ ದಿಕ್ಕು ತಿಳಿಯಾಗಿ... ಚಿನ್ನದ ಬಣ್ಣ ಕಣ್ಣನ್ನು ಕಿರಿದಾಗಿಸತೊಡಗುತ್ತದೆ.... ಜೊತೆ ಜೊತೆಗೇ ಸುಂದರವಾದ ಕೆಂಪು ಬಣ್ಣದ ಅತ್ಯಂತ ದೊಡ್ಡ ಚಿನ್ನದ ಮೆರುಗಿನ ದೊಡ್ಡ ತಟ್ಟೆ ಕಾಣತೊಡಗುತ್ತದೆ. ನೋಡು ನೋಡುತ್ತಿರುವಾಗಲೇ... ರಕ್ತ ವರ್ಣದಿಂದ ಕಂಗೊಳಿಸ ತೊಡಗುತ್ತದೆ..... ಮುಗಿಲು ತಿಳಿಯಾಗಲಾರಂಭವಾದೊಡನೇ ಶುರುವಾಗಿ ಬಿಟ್ಟಿರುತ್ತದೆ... ಕುಹೂ ಕುಹೂ ಕೋಗಿಲೆಯ ಸುಪ್ರಭಾತ..."ಇನ್ನು ನಿದ್ದೆಯ ತಳೆದು ತನ್ನ ತಾನವನೊಲಿದು... ಭಿನ್ನ ಭಾವವ ಬಿಟ್ಟ ಕೋಗಿಲೇ... ಎನ್ನ ಕನ್ನಡನಾಡ ಚೆನ್ನರಳೂವಂತೆ ಪಾಡುವೆಯಾ ಪೇಳು ಕೋಗಿಲೆ" ಎಂಬ ಸಾಲು ನೆನಪಿಸುತ್ತಾ..... ಹಿನ್ನೆಲೆ ಸಂಗೀತದ ಸಮೇತ ಎಲ್ಲರ ಮನೆ, ಮನ ಬೆಳಗಲು, ಜ್ಯೋತಿಯಂತೆ ಸೂರ್ಯನ ಉದಯ..... ಸ್ವಲ್ಪ ಮೇಲೆ ಬರುತ್ತಿದ್ದಂತೆ ಸೂರ್ಯನ ಬೆಳ್ಳಗಿನ ಪ್ರತಿಫಲನ ಕೆರೆಯ ನೀರನ್ನು ಬೆಳ್ಳಿಯಂತೆ ಬೆಳಗಿಸುತ್ತದೆ. ಸುಮಾರು ಅರ್ಧ ಕೆರೆಯಷ್ಟು ನೀರು ಮಿರ ಮಿರ ಮಿಂಚುತ್ತಿರುತ್ತದೆ. ಒಂದು ಕಡೆ ಪಕ್ಕದಲ್ಲಿ ಬೆಳೆದ ದೊಡ್ಡ ದೊಡ್ಡ ತಾವರೆ ಎಲೆಗಳ ಗುಂಪು... ನೀರಿನ ಒಂದು ಪಕ್ಕ ಬೆಳ್ಳಂಬೆಳ್ಳ ಬಣ್ಣ, ಈ ಕಡೆ ಪಕ್ಕದಲ್ಲಿ ದಟ್ಟ ಹಸಿರು ಮರಗಳ ಸಾಲು....ತಂಪಾದ ಗಾಳಿ...

ಕೆಲವು ತಿಂಗಳುಗಳ ಹಿಂದೆ ಯಡಿಯೂರು ಕೆರೆ ಸುಂದರಗೊಳಿಸಲ್ಪಟ್ಟಿತ್ತು. ಇಡೀ ಕೆರೆಯ ನೀರನ್ನು ತೆಗೆದು, ಹೂಳು ಎತ್ತಿ, ಹೊಸ ನೀರು ಹರಿಸಿ, ಬೇಕಾ ಬಿಟ್ಟಿ, ಅಡ್ಡಾದಿಡ್ಡಿ ಬೆಳೆದಿದ್ದ ಗಿಡಗಳೆಲ್ಲಾ ಸೌಂದರ್ಯ ತಜ್ಞರ ಕೈಯಲ್ಲಿನ ಕತ್ತರಿಯ ಹೊಡೆತಕ್ಕೆ ಸಿಕ್ಕು, ಸೌಂದರ್ಯ ಸ್ಪರ್ಧೆಗೆ ಹೊರಟವರಂತೆ ನೀಟಾಗಿದ್ದರು. ಹೊಸದಾಗಿ ತಂದು ನೆಟ್ಟಿದ್ದ, ಅನೇಕ ಜಾತಿಯ, ಬಣ್ಣದ, ಚಿಕ್ಕ - ದೊಡ್ಡ ಹೂ ಗಿಡಗಳು ಹೂವು ಬಿಡಲು ಆರಂಭಿಸಿದ್ದವು. ಒಂದು ಕಡೆ ಪಕ್ಕದಲ್ಲಿ ಚಿಕ್ಕ ನೀರಿನ ಕಾರಂಜಿಗೆ ಬಣ್ಣ ಬಣ್ಣದ ದೀಪದ ಸೊಬಗು ಕೂಡ ಸೇರಿತ್ತು. ಮಕ್ಕಳಿಗಾಗಿ ಆಟ ಆಡಲು ಪ್ರತ್ಯೇಕ ಜಾಗ, ನಗೆ ಸಂಘದ ಹಿರಿಯ-ಕಿರಿಯ ಸದಸ್ಯರುಗಳ ಕಲರವ... ಅಬ್ಬರದ ನಗೆ.... ದಿನವೂ ಮುಂಜಾವು ಮತ್ತು ಸಂಜೆ ಬೆಂಚುಗಳ ಮೇಲೆ ಕುಳಿತು ಪಿಸುಮಾತು ಹಂಚಿಕೊಳ್ಳುವ ಯುವ ಪ್ರೇಮಿಗಳು.... ವಾರಾಂತ್ಯಗಳಲ್ಲಿ ಬಸಿರಿ ಮನದನ್ನೆಯ ಜೊತೆ ನಿಧಾನವಾಗಿ ಹೆಜ್ಜೆ ಹಾಕುವ ಪತಿ..... ಆರೋಗ್ಯಕ್ಕಾಗಿ ನಡೆಯುವವರೂ..... ತಮ್ಮ ಸ್ಥೂಲ ಕಾಯವನ್ನು ಕರಗಿಸಲಾರದೆ, ಬೆವರಿಳಿಸುವವರು...... ಮಧ್ಯೆ ಮಧ್ಯೆ ಎಲ್ಲರ ಕಿರಿಕಿರಿಗೆ ಒಳಗಾಗುವಂತೆ ಹಾದಿಯಲ್ಲಿ ನಿಂತು ಏರೋಬಿಕ್ಸ್ ಮಾಡುವವರು...... ಓಯ್..ಓಡಬೇಡಾ... ನಿಲ್ಲು... ಬೀಳ್ತೀಯಾ ಎಂದು ಕೂಗುತ್ತಾ, ಮೊಮ್ಮಕ್ಕಳ ಹಿಂದೆ ಓಡಲಾರದೆ ಏದುಸಿರು ಬಿಡುವ ಅಜ್ಜ-ಅಜ್ಜಿಯರು.......... ಇದು ಬೆಂಗಳೂರಿನ ಅತ್ಯಂತ ಸುಂದರವಾದ, ಯಡಿಯೂರು ಕೆರೆಯ ಸುತ್ತ ಮುತ್ತ ಕಂಡುಬರುವ ಸಾಯಂಕಾಲದ ದೃಶ್ಯ.....

ಶುಭೋದಯದ ದೃಶ್ಯದ ಸಂಭ್ರಮ, ವೈಭವವೇ ಬೇರೆ.... ಆಗ ಮಕ್ಕಳ ಕಲರವ, ನಗೆ ಸಂಘದ ಅಬ್ಬರ ಇರುವುದಿಲ್ಲ.... ಆದರೆ ಆರೋಗ್ಯದ ಕಾಳಜಿಯಿರುವ ಚಿಕ್ಕ ದೊಡ್ಡ, ಗಿಡ್ಡ ಕುಳ್ಳ, ದಪ್ಪ ತೆಳ್ಳ, ಕರಿ ಬಿಳಿ, ವೆಂಕ ಸೀನ ನಾಣಿ, ಸರೋಜ, ಗಿರಿಜಾ, ಪಾರ್ವತಿ, ಲತಾ, ಶಕ್ಕೂ, ಶಾರಿ, .... ಎಲ್ಲಾ ಥರಹದ ಜನಗಳೂ ಬಿರುಸಿನಿಂದ, ನಿಧಾನವಾಗಿ, ಮೆಲ್ಲಗೆ ಓಡುತ್ತಾ, ಜೋರಾಗಿ ಓಡುತ್ತಾ.... ಸಂಚಾರಿ ದೂರವಾಣಿಯಲ್ಲಿ ಸುಪ್ರಭಾತ , ಎಫ್ ಎಂ ರೈನ್ ಬೋದಲ್ಲಿ ಬೆಳ್ಬೆಳಿಗ್ಗೇನೆ... ಮೈ ಇಕ್ ರಾಜಾ ಹೂಂ... ಎಂದು ಪ್ರೇಮ ಗೀತೆ ಕೇಳುತ್ತಾ, ಇನ್ನೂ ಕೆಲವರು ಐ ಪಾಡ್ ನಲ್ಲಿ ಭಕ್ತಿ, ಪ್ರೇಮ, ವಿರಹದ ಕಲಸು ಮೇಲೋಗರದ ಹಾಡುಗಳನ್ನು ಕೇಳುತ್ತಾ....., ಜೊತೆಗೆ ವಿಷ್ಣು / ಲಲಿತಾ ಸಹಸ್ರನಾಮಗಳನ್ನೂ ಕೇಳುತ್ತಾ....... ಥರಹೇವಾರಿ ಚಪ್ಪಲಿಗಳೂ, ಬ್ರ್ಯಾಂಡೆಡ್ ಶೂಗಳನ್ನು ಪ್ರದರ್ಶಿಸುತ್ತಾ....... ಕೆಲವರು ಕೆರೆಯ ಎಡಗಡೆಯಿಂದ ಬಲದಿಕ್ಕಿಗೂ.... ಇನ್ನೂ ಕೆಲವರು ಬಲಗಡೆಯಿಂದ ಎಡ ದಿಕ್ಕಿಗೂ... ನಡೆಯುತ್ತಾ... ಎದುರು ಕಂಡವರಿಗೆ ಒಂದು ಚಂದದ ಬೆಳಗಿನ ಮುಗುಳ್ನಗೆಯನ್ನು... ಹೋದರೆ ಹೋಗಲಿ ಪಾಪ ಅನ್ನೋ ಹಾಗೆ ಬಿಸಾಕಿ... ನಡೆಯುತ್ತಿರುತ್ತಾರೆ...... ಇನ್ನೂ ಕೆಲವರು ಎದ್ದ ಕೂಡಲೆ ಅದೇನು ಶೋಕಿಯೋ... ಅಥವಾ ಇನ್ಯಾವತೆರನಾದ ಸಮಸ್ಯೆಯೋ ಗೊತ್ತಿಲ್ಲ.... ಗಾಢವಾದ perfume ಹಾಕಿ ಎದುರುಗಡೆಯಿಂದ ಹತ್ತಿರ ಬರುವವರ ಉಸಿರು ಕಟ್ಟುವಂತೆ ಹಾದು ಹೋಗುತ್ತಾರೆ......

ಇದೆರಡೂ ವಿಭಿನ್ನ ಸನ್ನಿವೇಶಗಳಿಗೂ ಸಾಕ್ಷಿಯಾಗಿ, ತಮ್ಮದೇ ಲೋಕದಲ್ಲಿ ವಿಹರಿಸುತ್ತಾ.... ಸುತ್ತಲಿನ ಜನರ ಪರಿವೆಯೇ ಇಲ್ಲದೇ ಇರುವವರ.... ದೇಹದ ತೂಕ ಇಳಿಸುವ ಯಾವ ಚಿಂತೆಯೂ ಇಲ್ಲದವರ.... ಹಾಡು, ಸುಪ್ರಭಾತ ಕೇಳಲು ಯಾವುದೇ ಸಂಚಾರಿ ದೂರವಾಣಿಯ, ಐ ಪಾಡ್ ನ ಅವಶ್ಯಕತೆಯೇ ಎಂದಿಗೂ ಬೇಕಾಗದ......, ತಮ್ಮ ತಮ್ಮಲ್ಲೇ ಅತ್ಯಂತ ಸ್ನೇಹದಿಂದಿರುವ.... ಒಟ್ಟಿಗೇ ಅವಿಭಕ್ತ ಕುಟುಂಬದವರು family albumಗಾಗಿ ಫೋಸ್ ಕೊಡುವಂತೆ ಗುಂಪಾಗಿ ಬಹು ಮಹಡಿ ಕಟ್ಟಡಗಳ ಚಿತ್ರ ವಿಚಿತ್ರ ವಿನ್ಯಾಸದ ಬಿಸಿಲು ಮಹಡಿಯ ಪುಟ್ಟ ಗೋಡೆಯ ಮೇಲೋ... ಅಂದಕ್ಕಾಗಿ ಹಾಸಿರುವ ಥರಾವರಿ ಆಕಾರದ ಹಂಚುಗಳ ಮೇಲೋ ಕುಳಿತಿರುವ.... ಸೌಂದರ್ಯ ಸ್ಪರ್ಧೆ ನಡೆಯುತ್ತಿದೆಯೇನೋ ಎಂಬಂತೆ ವೈಯಾರದಿಂದ ಕತ್ತು ಕೊಂಕಿಸಿ ಈ ಕಡೆ ಆ ಕಡೆ ನೋಡುತ್ತಿರುವ..... ಒಂದು ದೊಡ್ಡ ಸಮುದಾಯವೇ ಕೆರೆಯ ಸುತ್ತ ಮುತ್ತ ಪರಿವಾರ ಸಮೇತ ಬೀಡು ಬಿಟ್ಟಿವೆ. ಇಲ್ಲಿಯ ಬಹು ಮಹಡಿ ಕಟ್ಟಡಗಳ ಜನರಂತೆ, ಅವರ ಜೊತೆಗೇ, ಭದ್ರವಾಗಿ ನೆಲೆಯೂರಿರುವ ಈ ಮಿತ್ರ ಸಮುದಾಯ... ಸುಂದರ ಪಾರಿವಾಳಗಳು....... ನೂರಾರು ಪಾರಿವಾಳಗಳು ವಾಸಿಸುವ ಈ ಬಡಾವಣೆ, ಬೆಳಗಿನ ಹೊತ್ತಿನಲ್ಲಿ ಈ ನಮ್ಮ ಮಿತ್ರರ ಕಲರವದಿಂದ, ಚೈತನ್ಯ ಪೂರ್ಣವಾಗಿ, ಚೇತೋಹಾರಿಯಾಗಿ ಇರುತ್ತದೆ...... ಇಲ್ಲಿನ ಬಹು ಮಹಡಿ ಕಟ್ಟಡಗಳ ನಿವಾಸಿಗಳು ಈ ಪಾರಿವಾಳಗಳಿಗೆ ತಮ್ಮ ತಮ್ಮ ಮಾಳಿಗೆಗಳಲ್ಲಿ ಪುಟ್ಟ ಪುಟ್ಟ ಪಾತ್ರೆಗಳಲ್ಲಿ ನೀರು ತುಂಬಿಸಿ ಇಟ್ಟಿರುತ್ತಾರೆ ಮತ್ತು ದಿನವೂ ಬೆಳಗಿನ ಹೊತ್ತು... ಗೋಧಿ, ಜೋಳದ ಕಾಳುಗಳನ್ನು ಹಾಕುತ್ತಾರೆ. ಆಗ ನೋಡಬೇಕು... ಈ ಅವಿಭಕ್ತ ಕುಟುಂಬದ ಒಗ್ಗಟ್ಟು..... ಮನೆಗೆ ಹಿರಿಯ ಅನ್ನಿಸಿಕೊಂಡವ ಬಂದನೆಂದರೆ ಮುಗಿಯಿತು..... ಬಾಕಿಯವರಿಗೆಲ್ಲಾ ಅರೆಹೊಟ್ಟೆ, ಬರಿಹೊಟ್ಟೆಯೇ ಗತಿ.... ಇವನು ತಾನೂ ತಿನ್ನವೊಲ್ಲ.... ಬೇರೆಯವರಿಗೆ ತಿನ್ನಲೂ ಬಿಡಲೊಲ್ಲ... ಈ ಕಾಳಗ ನೋಡುವಾಗ, ಇವರೇನಾ family albumಗೆ ಫೋಸ್ ಕೊಟ್ಟಿದ್ದೋರು ಅನ್ಕೋಬೇಕು..... !!! ಇದು ಬರೀ ಕಾಳು ಹೆಕ್ಕುವಾಗಿನ ಕದನ ಅಷ್ಟೆ... ಎಲ್ಲಾ ಮುಗಿದ ನಂತರ ಮತ್ತೆ ಇವರ ಫೋಸ್ ಕಟ್ಟಡದ ಮಹಡಿಯ ಮೇಲೆ....

ಪಾರಿವಾಳಗಳಂತೆಯೇ.. ಸಾಕ್ಷಿಯಾಗಿ ಇಲ್ಲಿ ಇನ್ನೊಂದು ಬಳಗ ಇದೆ..... ಅವುಗಳು ಮರಗಳ ಮರೆಯಲ್ಲಿ ಅವಿತು ಆಗಾಗ... ಒಮ್ಮೊಮ್ಮೆ... ಮನಬಂದಾಗ, ಮುದಗೊಂಡಾಗ, ಮೈ ಮುರಿಯುವಾಗ, ತನ್ನ ಮನದನ್ನೆಯನ್ನು ಮುದ್ದಿಸುವ ಇಚ್ಛೆಯಾದಾಗ, ಸುಂದರ ಹೂವುಗಳ ಪರಿಮಳ ಗಾಳಿಯಲ್ಲಿ ತೇಲಿ ಬಂದಾಗ...... ಹೀಗೆ ಒಂದೊಂದು ಸನ್ನಿವೇಶಗಳಲ್ಲಿ, ಒಟ್ಟಿನಲ್ಲಿ ತಮಗೆ mood ಬಂದಾಗ, ಲಹರಿ ಶುರು ಮಾಡುತ್ತವೆ.... "ಕುಹೂ ಕುಹೂ... ಬೋಲೇ ಕೋಯಲಿಯಾ..." ಎಂದು.... ಎಲ್ಲಕ್ಕಿಂತ ಮೊದಲು ಇಲ್ಲಿಯ ನಿವಾಸಿಗಳಿಗೆ ಸುಪ್ರಭಾತ ಹಾಡುವವರೇ ಈ ಕೋಗಿಲೆಗಳು.... ಮುಗಿಲು ಚೂರೇ ಚೂರು ತಿಳಿಯಾದ ತಕ್ಷಣವೇ ಅದೆಂತಹ ಸಂಭ್ರಮ ಈ ಬಳಗಕ್ಕೆ... ಸೂರ್ಯನನ್ನು ಎದಿರುಗೊಳ್ಳಲು.... ಪ್ರಥಮ ಕಿರಣಗಳು ವಸುಧೆಯನ್ನು ಮುತ್ತಿಕ್ಕುತ್ತಿದ್ದಂತೆಯೇ... ಧಾರಿಣಿ ಪುಳಕಗೊಳ್ಳುವಾಗಲೇ... ಈ ವಾದ್ಯ ಸಂಗೀತ ಮೇಳೈಸಿಬಿಟ್ಟಿರುತ್ತದೆ.... ಸೂರ್ಯ ರಶ್ಮಿ ಮತ್ತು ಧಾರಿಣಿಯ ಸಂಗಮಕ್ಕೆ... ರಾ ಬೇಂದ್ರೆಯವರ ವ್ಯೋಮ ಮಂಡಲ ಸುಖಧಾಮವಾಗುವಂತೆ... ಕಾಮರತಿಯ ಮೀರಿ ಕೋಗಿಲೇ... ಪ್ರೇಮ ಕವಿಯು ಕಂಡ ಸಾಮವೇದದ ಗಟ್ಟಿಮೇಳ ನುಡಿಸುವಂತೆ... ಒಮ್ಮೆಲೇ ಹತ್ತಾರು ಕಂಠಗಳು ಕುಹೂ ಕುಹೂ... ಕುಹೂ ಕುಹೂ.... ಎಂದು ಹಾಡಲಾರಂಭಿಸಿದಾಗ.... "ಅತ್ತವೋ ಕೋಗಿಲೇ...... ಇತ್ತವೋ ಕೋಗಿಲೇ...." ಎಂದು ನಮ್ಮ ಮನ ಹಾಡಲು ಆರಂಭಿಸಿರುತ್ತದೆ... ಇದು ಬರಿಯ ಬೆಳಗು ಜಾವದ ರವಿ-ಧರಿತ್ರಿಯ ಸಂಗಮದ ಸಂಗೀತವಲ್ಲಾ.... ಸಾಯಂಕಾಲವೂ ಸೂರ್ಯನ ಬೀಳ್ಕೊಡುಗೆಗೂ ಹೀಗೇ ನಿಸ್ಸಂಕೋಚವಾಗಿ, ನಿರ್ವಂಚನೆಯಿಂದ, ಸಂಜೆವೆಣ್ಣು ಬರುವಳೋ ಎಂದು ಸ್ವಾಗತಿಸುವಂತೆ "ದಿನವಿಲ್ಲ ನಿಶೆಯಿಲ್ಲ... ದನಿಗೈಯುತಲಿರುವೆ.. ನೀನ್ಯಾವ ಬಸಂತನ ಕೋಗಿಲೇ"... ಎಂಬಂತೆ ಮತ್ತೆ ಕುಹೂ....ಕುಹೂ ಕುಹೂ.... ಗಾಯನ... "ಮೃಣ್ಮಯ ದೇಹದಿ ಮನ್ಮಯನಾದೆ ನಾ..... ಸನ್ಮಯತೆಯ ಕಂಡು ಕೋಗಿಲೇ..... ಚಿನ್ಮಯಾನಂದದಿ ತನ್ಮಯವಾಗಿ ನೀ ಕುಹುಹೂ... ಕುಕಿಲುವೆ ಕೋಗಿಲೇ...." ಎನ್ನುವಂತೆ ನಿಶೆಯ ರಾಜ್ಯಭಾರ ಶುರುವಾಗುವವರೆಗೂ ಮುಂದುವರೆಯುತ್ತದೆ ಈ ಸಂಗೀತ ಕಛೇರಿ...... ಮತ್ತೆ ಬೆಳಗಿನ ಶುಭೋದಯಕ್ಕೆ ಪ್ರಾರಂಭ..... ಯಾವುದೇ ಸರಕಾರಿ ರಜೆ ಇಲ್ಲ.... ವಾರಾಂತ್ಯದ ವೆರೈಟಿ ಹುಡುಕೋಲ್ಲಾ.... ಸುಖ-ದು:ಖ, ಬೇಸರ-ಸಂತೋಷ, ಪ್ರಸನ್ನತೆ-ಖಿನ್ನತೆ, ಹುಟ್ಟು-ಸಾವು... ಯಾವುದೇ ಸಂದರ್ಭದಲ್ಲೂ ವಿಚಲಿತರಾಗದೆ... ಚಿನ್ಮಯಾನಂದ ಕೊಡುವುದಕ್ಕಾಗಿಯೇ ಹಾಡುವವರು ಈ ನಮ್ಮ ಕೋಗಿಲೆಗಳು.........

Tuesday, May 4, 2010

ವಿಮುಕ್ತಿ..... ಕನ್ನಡ ಚಿತ್ರ.....

ನವ್ಯ ಚಿತ್ರ ಕ್ರಿಯೇಷನ್ಸ್ ರವರ "ವಿಮುಕ್ತಿ" ಚಿತ್ರ ಉತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರ ಪ್ರಶಸ್ತಿಗಳಿಸಿದೆ. ಚಿತ್ರ ಅಪ್ಪ - ಮಗಳ ನವಿರಾದ ಸಂಬಂಧದ ಮೇಲೆ ನಿರ್ಮಿತವಾಗಿದೆ. ಕಥೆಯಲ್ಲಿ ಅಪ್ಪ ಕೇಶವ ಮೈಸೂರು ಶೈಲಿಯ ಚಿತ್ರಕಾರ. ಅವನ ಮಗಳು ಮಾಧವಿ. ಮಾಧವಿ ತಂದೆಯನ್ನು ಉತ್ಕಠವಾಗಿ ಪ್ರೀತಿಸುತ್ತಾಳೆ. ಹೆಣ್ಣು ಮಕ್ಕಳು ಚಿಕ್ಕವರಾಗಿದ್ದಾಗಿನಿಂದಲೇ ತಮ್ಮ ತಂದೆಯನ್ನು ಆರಾಧಿಸುತ್ತಾರೆ. ಬೆಳೆಯುತ್ತಾ ಬೆಳೆಯುತ್ತಾ ಅದು ಪವಿತ್ರ ತಂದೆಯ ಪ್ರೀತಿಯಾಗಿ ಮಾರ್ಪಾಡಾಗುತ್ತದೆ. ಆದರೆ ಇಲ್ಲಿ ಮಾಧವಿ Electra Complex ಎನ್ನುವ, a kind of romantic feelings towards father ಎಂಬ ಭಾವನೆಗಳ ತೀವ್ರತೆಯಿಂದ ಹೊರಬರಲಾಗದೆ ಉಳಿದುಬಿಡುತ್ತಾಳೆ. ಅವಳಿಗೆ "ಅಪ್ಪ"ನೇ ಪ್ರಪಂಚ. ಎಷ್ಟು ಪ್ರೀತಿಸುತ್ತಾಳೆಂದರೆ, ಗಂಡನನ್ನೂ ನಿರ್ಲಕ್ಷಿಸುತ್ತಾಳೆ. ಅದಕ್ಕಾಗಿ ತನ್ನ ತಾಯಿಯನ್ನೂ ದ್ವೇಷಿಸುತ್ತಾಳೆ, ಎಲ್ಲರಲ್ಲೂ ಜಗಳವಾಡುತ್ತಾಳೆ...

ಕೇಶವನ ಹತ್ತಿರ ಮೈಸೂರು ಶೈಲಿಯ ಚಿತ್ರಕಲೆ ಕಲಿಯಲು "ನವಾ" ಎಂಬ ಇರಾನಿಯ ಹುಡುಗಿ ಬರುತ್ತಾಳೆ. ಯಾರಿಗೂ ತಾನು ಕಲಿಸುವುದಿಲ್ಲವೆಂದರೂ, ನವಾಳ ಆಸಕ್ತಿ ಹಾಗೂ ಇತರ ಶೈಲಿಯ ಚಿತ್ರಕಲೆಯಲ್ಲಿ ಪಳಗಿದ ಅವಳನ್ನು ಕಂಡು ಕೇಶವ ಕಲಿಸಲು ಒಪ್ಪುತ್ತಾನೆ. ನಿರಾತಂಕವಾಗಿ ತಂದೆಯ ಪ್ರೀತಿಯನ್ನು ತನ್ನದಾಗಿಸಿಕೊಂಡಿದ್ದ ಮಾಧವಿ ಹೊಟ್ಟೆಕಿಚ್ಚಿಗೊಳಗಾಗುತ್ತಾಳೆ. ರತಿ-ಮನ್ಮಥರ ಚಿತ್ರದಿಂದ ಪ್ರೇರಿತವಾಗಿ ಬರೆದ ಚಿತ್ರಕಲೆಯಲ್ಲಿ ಬೊಂಬೆಗಳ ಮುಖಕ್ಕೆ ಬದಲಾಗಿ ಮಾಧವಿ ತನ್ನ ಹಾಗೂ ತನ್ನ ತಂದೆಯ ಮುಖಗಳನ್ನು ಮಾಡಲು ಹೇಳಿದಾಗ, ಕೇಶವ ಮಾಧವಿ + ಅವಳ ಗಂಡ ವಿಭಿನ್ ನ ಮುಖಗಳನ್ನು ಅಂಟಿಸುತ್ತಾನೆ. ಇದು ನಿರ್ದೇಶಕರು ಪ್ರೇಕ್ಷಕರಿಗೆ ಪರಿಚಯಿಸುವ, ಮಾಧವಿಯ ತಂದೆಯೆಡೆಗಿರುವ ಆಳವಾದ possessivenessನ ಮೊದಲ ದೃಶ್ಯ. ಇದರ ನಂತರ ನವಾಳ ಪ್ರವೇಶವಾಗುತ್ತದೆ. ಈ ಚಿತ್ರ ಕಲೆಯನ್ನು ನವಾ ಕೊಂಡುಕೊಳ್ಳಲು ಇಚ್ಛಿಸಿದಾಗ ಕೇಶವ, ಮಾರಲು ಒಪ್ಪದೇ ಅವಳಿಗೇ giftಆಗಿ ಕೊಟ್ಟು ಬಿಡುತ್ತಾನೆ. ಇದು ಮಾಧವಿಯನ್ನು ಕೆರಳಿಸುತ್ತದೆ. ಕೇಶವ ತನ್ನ ಹೆಂಡತಿಯ ನೆನಪಿಗಾಗೆ ನಿಂತುಹೋದ ಗಡಿಯಾರವನ್ನು ಜೋಬಿನಲ್ಲಿಟ್ಟುಕೊಂಡಿರುತ್ತಾನೆ...

ನವಾಳ ಆಗಮನದಿಂದಾದ ಮಾಧವಿಯ ಭಾವನೆಗಳ ಏರುಪೇರುಗಳನ್ನು ಕೇಶವ ಗಮನಿಸುತ್ತಾನೆ ಮತ್ತು ತನ್ನ ಮಿತ್ರ ಡಾ.ಜನಾರ್ಧನರ ಹತ್ತಿರ ಹೇಳುತ್ತಾನೆ ಕೂಡ. ಡಾಕ್ಟರ್ ಮಾಧವಿಯ ಮನಸ್ಸು ಅತೀ ಸೂಕ್ಷ್ಮವಾಗಿದೆಯೆಂದೂ ಎಚ್ಚರಿಸುತ್ತಾರೆ.

ಈ ಮಧ್ಯೆ ಮೈಸೂರು ಶೈಲಿಯ ಚಿತ್ರಗಳನ್ನು ನೋಡಲು ಕೇಶವ ಮತ್ತು ನವಾ ಮೈಸೂರಿಗೆ ಹೊರಡುತ್ತಾರೆ. ಅವರು ಕಾರಿನಲ್ಲಿ ಶೃಂಗಾರ ರಸದ ಮಾತುಗಳನ್ನಾಡುತ್ತಿರಬಹುದು, ಸರಸವಾಡುತ್ತಿರಬಹುದೆಂದು ಸುಮ್ಮನೆ ಊಹಿಸಿಕೊಂಡು ಮಾಧವಿ ಕುದಿಯುತ್ತಾಳೆ. ತಂದೆಗೆ ಕರೆ ಮಾಡಿ ಅಷ್ಟು ಜೋರಾಗಿ ಇರಾನಿ ಸಂಗೀತ ಏಕೆ ಹಾಕಿದ್ದೀರಿ ಕಾರಲ್ಲಿ ಎಂದಾಗ ತಂದೆ ಯಾವ ಸಂಗೀತವೂ ಹಾಕಿಲ್ಲವಲ್ಲ ಎನ್ನುತ್ತಾನೆ.... ಇಲ್ಲಿ ಪ್ರತಿಯೊಂದು ಸಲ ಮಾಧವಿಯ ಹುಚ್ಚು ಭಾವನೆಗಳನ್ನು ತೋರಿಸುವಾಗಲೂ ನಿರ್ದೇಶಕ ಕೇಶವನ ಶಾಂತ ಚಿತ್ತ ಹಾಗೂ ಕಲ್ಮಶವಿಲ್ಲದ ಮನಸ್ಸನ್ನೂ ಕೂಡ ಅತ್ಯಂತ ಸೂಕ್ಷ್ಮವಾಗಿ ತೋರಿಸಿದ್ದಾರೆ. ತೀರಾ ತಳಮಳಗೊಂಡು ಮಧ್ಯ ರಾತ್ರಿ ನಿದ್ದೆ ಬಾರದೆ ಕೇಶವ, ಸ್ನೇಹಿತ ಡಾ ಜನಾರಿಗೆ ಕರೆಮಾಡಿದಾಗ, ಅವರು ತಮ್ಮ ತಂದೆಯ ಶಾದ್ಧ ಕರ್ಮ ನೆರವೇರಿಸಲು ಹೊರಟಿರುತ್ತಾರೆ. ಅದರಲ್ಲಿ ನಂಬಿಕೆಯೇ ಇಲ್ಲದಿದ್ದ ಡಾಕ್ಟರೂ ಕೂಡ ಇದನ್ನೆಲ್ಲಾ ಮಾಡುವುದನ್ನು ಕಂಡು ಕೇಶವ ಉದ್ವೇಗಗೊಳ್ಳುತ್ತಾನೆ. ಕೆಲವು ಕೆಲಸಗಳನ್ನು ಕೆಲವು ಕಾರಣಗಳಿಗೋಸ್ಕರ ಮಾಡಲೇ ಬೇಕಾಗುತ್ತದೆ ಮತ್ತು ಉತ್ತರ ಸಿಗದಿರುವ ಕೆಲವು ಪ್ರಶ್ನೆಗಳನ್ನು ಬಿಟ್ಟು ಬಿಡುವುದೇ ಮೇಲು ಎಂದುತ್ತರ ಕೊಡುವ ಸ್ನೇಹಿತನ ಮಾತುಗಳು ಕೇಶವನನ್ನು, ಮೈಯ ನೀರೆಲ್ಲ ಸೋರಿಹೋಗಿ, ಆಯಾಸಗೊಳ್ಳುವಂತೆ ಮಾಡುತ್ತದೆ. ೧೫ ವರ್ಷದ ಹಿಂದೆ ಸತ್ತ ತನ್ನ ತಂದೆಗೆ ಶ್ರಾದ್ಧ ಕರ್ಮಗಳನ್ನು ಮಾಡಬೇಕಿತ್ತೆಂದು ಬೇರಸಗೊಳ್ಳುತ್ತಾನೆ.

ಇರಾನಿಗೆ ಹೊರಟು ಹೋಗುವ ಮೊದಲು ಕೊನೆಯ ಬಾರಿಗೆ ತನ್ನನ್ನು ಭೇಟಿ ಮಾಡಲು ಬಂದಿದ್ದ ನವಾಳನ್ನು ಹಾಗೇ ವಾಪಸ್ಸು ಕಳಿಸಿಬಿಡುವ ಮಾಧವಿಯ ಹುಚ್ಚು ಮನಸ್ಸು, ಕೇಶವನಿಗೆ ಮನೆಯ ಹೊರಗಡೆ ಮುದುರಿ ಬಿಸುಟಿದ್ದ, ನವಾಳ ಕಾಗದದಿಂದ ತಿಳಿಯುತ್ತದೆ. ಬೇಸರಗೊಂಡು ಮಾಧವಿಯನ್ನು ಪ್ರಶ್ನಿಸಿದಾಗ, ತನಗೂ ನವಾಗೂ ಸಂಬಂಧ ಕಲ್ಪಿಸಿ ಕೀಳಾಗಿ ಮಾತನಾಡುವ ಮಾಧವಿಯ ಭಾವನೆಗಳ ತೀವ್ರತೆ ತಡೆದುಕೊಳ್ಳಲಾರದೆ, ತತ್ತರಿಸುತ್ತಾನೆ. ಯಾವುದೇ ಕಾರಣಕ್ಕೂ ತನ್ನನ್ನು ಹುಡುಕಿಕೊಂಡು ಹಿಂದೆ ಬರಬಾರದೆಂದು ಚೀಟಿ ಬರೆದಿಟ್ಟು, ಮನೆ ಬಿಟ್ಟು ಹೊರಟು ಹೋಗುತ್ತಾನೆ....

ತಂದೆಯ ನಿರ್ಗಮನದಿಂದ ತೀವ್ರವಾಗಿ ನೊಂದ ಮಾಧವಿ ಡಾ ಜನಾರ ಹತ್ತಿರ ಬಂದಾಗ, ಅವರು ಅವಳ ಭಾವನೆಗಳ ತೀವ್ರತೆಯ ಬಗ್ಗೆ ವಿವರಿಸಿ, ಖಂಡಿಸುತ್ತಾರೆ. ವಿವೇಕವೆಂಬ ಸೂರ್ಯನ ಕಿರಣಗಳ ಮುಂದೆ ಯಾವ ತರಹದ ಭಾವೋದ್ವೇಗಗಳೂ ಕತ್ತಲೆಯಲ್ಲಿ ಉಳಿಯಲು ಸಾಧ್ಯವಿಲ್ಲವೆಂದು ಉಪದೇಶಿಸುತ್ತಾರೆ. ಮನೆಗ ಬಂದ ಮಾಧವಿಗೆ ಗಂಡ ವಿಭಿನ್ ಅವಳು ತನ್ನನ್ನೂ ಕಳೆದುಕೊಳ್ಳುವ ಮೊದಲು, ಪರಿವರ್ತನೆಗೊಳ್ಳಲು ಸಹಾಯ ಮಾಡುವುದಾಗಿ ಹೇಳುತ್ತಾನೆ.

ಎಂಟು ವರ್ಷಗಳ ನಂತರ ಗಂಡನಿಂದ ಬೇರೆಯಾದ, ಹೆಣ್ಣು ಮಗುವಿನ ತಾಯಿಯಾಗಿ, ಕಾಲೇಜಿನಲ್ಲಿ ಅಧ್ಯಾಪಕಿಯಾದ ಮಾಧವಿಯ ಪುನರ್ಪವೇಶವಾಗುತ್ತದೆ. ಸ್ನಾನದ ತೊಟ್ಟಿಯಲ್ಲಿ ಕಾಗದದ ದೋಣಿ ಬಿಡುವ ಮಾಧವಿಯ ಮಗಳು ರಚನಾಳ ಮೂಲಕ, ಜೀವನದ ದೋಣಿ ತೇಲಿ ಮುಂದೆ ಬಂದಿದೆಯೆಂದೂ, ಮಾಧವಿಯ ಮುಂದಿನ ಬಾಳಿನಲ್ಲಿ ಈ ದೋಣಿಯೇ ಮುಖ್ಯ ನಿರ್ಧಾರಗಳ ನೆಲೆಯಾಗುತ್ತದೆಂದೂ ತೋರಿಸಲಾಗಿದೆ. ಇರಾನ್ ನಿಂದ ತಿರುಗಿ ಬರುವ ನವಾ ತನ್ನ ಗುರುಗಳನ್ನು ಕಾಣದೆ, ನೊಂದುಕೊಳ್ಳುತ್ತಾಳೆ. ಕೇಶವ ಹೆಂಡತಿಯ ನೆನಪಿಗೆಂದು ಇಟ್ಟುಕೊಂಡಿದ್ದ ನಿಂತು ಹೋಗಿದ್ದ ಗಡಿಯಾರವನ್ನು ರಿಪೇರಿ ಮಾಡಿಸಿ, ತಂದಿರುತ್ತಾಳೆ. ನವಾಳ ಹತ್ತಿರ ಮಾಧವಿ ತನ್ನ ತಪ್ಪು ಕಲ್ಪನೆಗಾಗಿ ಕ್ಷಮೆಯಾಚಿಸುತ್ತಾಳೆ. ನವಾಳ ನಿರ್ಗಮನದ ನಂತರ, ಪತ್ರಿಕೆಯಲ್ಲಿ ಬಂದ ಒಂದು ವಿಭಿನ್ನ ವರದಿಯು ಮಾಧವಿಯ ಕಣ್ಸೆಳೆಯುತ್ತದೆ. ವಾರಣಾಸಿಯಲ್ಲಿ ಮುಕ್ತಿ ಬಯಸಿದವರಿಗೆ ಜಾಗ ಕೊಡಲಾಗುತ್ತದೆಂದೂ - ಅಕಸ್ಮಾತ್ ೧೫ ದಿನದಲ್ಲಿ ಸಾಯದಿದ್ದರೆ, ಕೋಣೆ ಖಾಲಿ ಮಾಡಬೇಕೆಂದೂ ಬರೆದಿರುತ್ತದೆ. ಸಾಯುವ ಸಮಯದಲ್ಲಿ ವಾರಣಾಸಿಯಲ್ಲಿದ್ದರೆ, ಈಶ್ವರ ಸ್ವತ: ತಾರಕ ಮಂತ್ರವನ್ನು ಸಾಯುವವರ ಕಿವಿಯಲ್ಲಿ ಹೇಳುತ್ತಾನೆಂಬ ನಂಬಿಕೆಯಿಂದ ಜನ ಈ ಮುಕ್ತಿಧಾಮಕ್ಕೆ ಬರುತ್ತಿರುತ್ತಾರೆ... ಅಲ್ಲಿ ಮಲಗಿದ್ದ ವೃದ್ಧನ ಹಿಂದಿನ ಗೋಡೆಯ ಮೇಲಿನ ಈಶ್ವರನ ಮೈಸೂರು ಶೈಲಿಯ ಚಿತ್ರಕಲೆಯನ್ನು ನೋಡಿ ಮಾಧವಿ ಅದು ತನ್ನ ತಂದೆಯದೇ ಕಲೆಯೆಂದು ಗುರುತಿಸುತ್ತಾಳೆ ಹಾಗೂ ತಂದೆಯನ್ನು ಹುಡುಕಲು ಹೋಗುತ್ತಾಳೆ. ವಾರಣಾಸಿಯಲ್ಲಿ ಉರಿಯುವ ಚಿತೆಯನ್ನು ಮೊದಲ ಬಾರಿಗೆ ಕಂಡು, ಮಗು ರಚನಾ ಹೆದರುತ್ತಾಳೆ. ಮೋಕ್ಷ ಎಂದರೇನು ? ಮುಕ್ತಿ ಎಂದರೇನು ಎಂಬಂಥ ಪ್ರಶ್ನೆಗಳನ್ನು ಕೇಳುತ್ತಾಳೆ. ೧೩೦೦೦ ಜನರಿಗೆ ಮುಕ್ತಿ ಸಿಗುವುದನ್ನು ನೋಡಿದ್ದೇನೆನ್ನುವ ರಾಮ ನಾರಾಯಣ ಶರ್ಮ, ದಿನಕ್ಕೊಂದೇ ಒಂದು ಮಾತನಾಡುವ ಮುದುಕ, ಪ್ರೀತಿ ವ್ಯಾಮೋಹ ಆಗಿದ್ದು, ತಾನು ನಿರ್ಗತಿಕನಾದ ನಂತರ ತಿಳಿದು, ಕಾಶಿಗೆ ಬಂದಿದ್ದ ಇನ್ನೊಬ್ಬ ವೃಧ್ಧ, ಪ್ರೀತೀನೇ ಬೇರೆ ವ್ಯಾಮೋಹಾನೇ ಬೇರೆನ್ನುತ್ತಾನೆ. ಸಾಮ್ಯತೆ ಇಲ್ಲದ ತನ್ನವೇ ಆದ ವಿಚಾರಗಳನ್ನು ಹೇಳುವಂತಹ ವಿಭಿನ್ನ ಪಾತ್ರಗಳು..... ಮಗುವಿನ ಹೆಣ ಜಲಸಮಾಧಿ ಮಾಡುವುದನ್ನು ನೋಡಿ ರಚನಾ ಹೆದರಿ ಕಾಗದದ ದೋಣಿಯೇ ಚೆನ್ನ, ನಿಜವಾದ್ದು ಬೇಡವೆನ್ನುತ್ತಾಳೆ.

ಈ ಮಧ್ಯದಲ್ಲಿ ಗಂಗೆಯ ತಟದಲ್ಲಿ ಕುಳಿತು ದಿನವೂ ವೀಕ್ಷಿಸುತ್ತಿದ್ದ ರಚನಾ ತನಗರಿಯದಂತೆಯೇ ಕೇಶವನನ್ನು ಆಕರ್ಷಿಸಿ, ಸ್ನೇಹ ಬೆಳೆಸಿಕೊಳ್ಳುತ್ತಾಳೆ. ಸತ್ತ ಮೇಲೆ ನಾವೆಲ್ಲಾ ಎಲ್ಲಿಗೋಗ್ತೀವಿ ಎಂದು ಕೇಳುತ್ತಾಳೆ. ಯಾರೂ ಬಂದು ಹೇಳಿಲ್ಲವೆಂದಾಗ, ತಾತನಿಗೆ ನೀನು ಬಂದು ನಂಗೆ ಹೇಳ್ತೀನಿ ಅಂತ ಮಾತುಕೊಡು ಎನ್ನುತ್ತಾಳೆ. ಈ ಕಡೆ ಮಾಧವಿ ಕಾಶಿಯ ಎಲ್ಲಾ ಘಾಟಗಳಲ್ಲೂ ತಂದೆಯನ್ನು ಹುಡುಕಿಕೊಂಡು ಅಲೆಯುತ್ತಿದ್ದರೆ, ಆ ಕಡೆ ಗಂಗೆಯ ತಟದಲ್ಲಿ ಮೆಟ್ಟಿಲುಗಳ ಮೇಲೆ ಕುಳಿತು ರಚನಾ ತಾತನ ಜೊತೆ ಹರಟುತ್ತಿರುತ್ತಾಳೆ.......ಕೈಗೆಟುಕಿದ್ದಾಗ ಕಳೆದುಕೊಂಡು, ಹುಡುಕಿ ಅಲೆದರೆ ಸಿಗುವುದಿಲ್ಲವೆಂದು ಮಾಧವಿ ಹಾಗೂ ರಚನಾಳ ಪಾತ್ರಗಳ ಮೂಲಕ ಪ್ರೇಕ್ಷಕ ಅರ್ಥೈಸಿಕೊಳ್ಳುವುದು ಅನಿವಾರ್ಯವಾಗಿ ಚಿತ್ರಿಸಲ್ಪಟ್ಟಿದೆ........

"ಆಕಾಶ ಇಲ್ಲಾನ್ನೋಕಾಗೋಲ್ಲ ಆದರೆ ಅದನ್ನು ಮುಟ್ಟೋಕೂ ಆಗೊಲ್ಲ. ಮನುಷ್ಯ ಸಂಬಂಧಗಳೂ ಅದೇ ರೀತಿ. ಇಲ್ಲದ್ದನ್ನು ಇದೇಂತ ಭಾವಿಸಿಕೊಂಡು ಬದುಕೋದು, ಅದಿಕ್ಕೇ ನೋವು / ಯಾತನೆ / ಕೊನೆಯಿಲ್ಲದ ಹುಡುಕಾಟ ಅನುಭವಿಸುವುದು" ಎಂದು ತನ್ನ ತಂದೆಯೇ ಆ ಶಾಸ್ತ್ರಿಗಳಿಗೆ ಹೇಳಿದ್ದರೆಂದು ತಿಳಿದು ಮಾಧವಿಯ ಕಣ್ಣುಗಳು ಕೊಳವಾಗತ್ತೆ. ನೀರಿನಲ್ಲಿ ತೇಲುತ್ತಿದ್ದ ಹೂವು ತೆಗೆದುಕೊಳ್ಳಲು ಹೋಗಿ ರಚನಾ ಕಾಲು ಜಾರುತ್ತಾಳೆ. ವಿಷಯ ತಿಳಿದು ಮಾಧವಿ ಓಡಿ ಬರುವಷ್ಟರಲ್ಲಿ ರಚನಾ ತನ್ನ ಕೈಯಲ್ಲಿ ಹೂವು ಹಿಡಿದು ಮೆಟ್ಟಿಲುಗಳಲ್ಲಿ ಕುಳಿತಿರುತ್ತಾಳೆ. ಮಾಧವಿ ಕೇಳಿದಾಗ ತಾತ ತನ್ನನ್ನು ಮೇಲೆತ್ತಿದರು ಎನ್ನುತ್ತಾಳೆ ಮತ್ತು ಮಾಧವಿಯ ಬ್ಯಾಗು ಕಳೆದುಹೋದಾಗ, ಅದರಲ್ಲಿದ್ದ ಅದೇ ಹಳೆಯ ಗಡಿಯಾರವನ್ನು ಮಾಧವಿಯ ಕೈಯಲ್ಲಿಟ್ಟು ಹೇಳುತ್ತಾಳೆ - ತಾತ ಹೇಳಿದರು, ಅವರು ಇನ್ನೆಂದೂ ಮತ್ತೆ ಸಿಗುವುದಿಲ್ಲವಂತೆ ಎಂದು. ರಚನಾ ಕೈ ತೋರಿದ ಕಡೆ ನೋಡಿದಾಗ ದೂರದಲ್ಲಿ ನದಿ ಮಧ್ಯದಲ್ಲಿ ದೋಣಿಯಲ್ಲಿ ನೀತು ಕೇಶವ ಮಾಧವಿಯ ಕಡೆಗೆ ತಿರುಗಿಯೂ ನೋಡದೇ ಹೊರಟು ಹೋಗುತ್ತಿರುತ್ತಾನೆ. ಮಗಳಿಗೆ ಕ್ಷಮೆ ಕೇಳುವ ಒಂದು ಅವಕಾಶವನ್ನೂ ಕೊಡುವುದಿಲ್ಲ. ತಂದೆ ಸಿಕ್ಕೂ ಸಿಗದಿದ್ದಾಗ ಮಾಧವಿಗೆ ವಾಸ್ತವ ಅರ್ಥವಾಗಿ ತನ್ನ ಮಗಳ ಕೈಯಲ್ಲಿ ಅವಳ ತಂದೆಗೆ (ತನ್ನ ಗಂಡನಿಗೆ) ಕರೆ ಮಾಡಿಸುತ್ತಾಳೆ.

ಚಿತ್ರಕಥೆ ಎಲ್ಲೂ ಅನವಶ್ಯಕವಾಗಿ ಎಳೆಯದೆ, ಚಿಕ್ಕ - ಚೊಕ್ಕವಾಗಿ ಹೇಳಲ್ಪಟ್ಟಿದೆ. ಲಕ್ಷ್ಮೀಪತೆ ಕೋಲಾರ ಅವರ ಚುರುಕುತನ ಕಥೆಯಲ್ಲಿ ಕಾಣುತ್ತದೆ ಮತ್ತು ಇಷ್ಟವಾಗುತ್ತದೆ. ಎಷ್ಟೋ ವಿಷಯಗಳನ್ನು ಹೇಳದೆಯೇ ಹೇಳಿಬಿಡುತ್ತಾರೆ. ಸನ್ನಿವೇಶಗಳೂ, ಪಾತ್ರಗಳೂ ತಾವೇ ತಾವಾಗಿ ಕಥೆಯನ್ನು ಹೆಣೆಯುತ್ತಾ ಹೋಗುತ್ತವೆ. ಅರ್ಥವತ್ತಾದ ಸಂಭಾಷಣೆಗಳು ಅತ್ಯಂತ ಮಾರ್ಮಿಕವಾಗಿ, ಸೂಕ್ತವಾಗಿ ಹೇಳಲ್ಪಟ್ಟಿವೆ. ಪ್ರವೀಣ್ ಗೋಡ್ಕಿಂಡಿಯವರ ಸಂಗೀತ ಇಂಪಾಗಿದೆ, ಮಧುರವಾಗಿದೆ. ರಾಮಚಂದ್ರ ಅಹಿಯಾಳರ ಸಿನಿಮಟೋಗ್ರಾಫಿ ಅದ್ಭುತವಾಗಿದೆ. ತುಂಬಿ ಹರಿಯುವ ನದಿ, ಸೇತುವೆ, ಸ್ಮಶಾನ ಘಟ್ಟ, ದೋಣಿ ಎಲ್ಲವನ್ನೂ ನಮ್ಮ ಜೀವನಕ್ಕೆ ಹೊಂದಿಸಿ ಅತ್ಯಂತ ಅರ್ಥಗರ್ಭಿತವಾಗಿ ತೋರಿಸಿದ್ದಾರೆ. ಎಲ್ಲರ / ಎಲ್ಲದರ ಜೊತೆಗೂ ಇದ್ದೂ, ವ್ಯಾಮೋಹ ಬೆಳೆಸಿಕೊಳ್ಳದೇ ಕಮಲದ ದಳದಮೇಲಿನ ನೀರಿನಂತಿರಬೇಕೆಂಬುದು ಸಂದೇಶ......

ಕೊನೆಯದಾಗಿ ಪಿ ಶೇಷಾದ್ರಿಯವರ ನಿರ್ದೇಶನ ಅತ್ಯಂತ ಯಶಸ್ವಿಯಾಗಿದೆ. ಎಲ್ಲೂ ಒಂದರೆ ಘಳಿಗೆಯೂ ಬೇಸರವಾಗದಂತೆ ನಿರೂಪಿಸಿದ್ದಾರೆ. ರ‍ಾಮಕೃಷ್ಣರ ನಟನೆ ಅಮೋಘವಾಗಿದೆ. ಭಾವನಾ ರಾಮ ಕೃಷ್ಣರ ಎದುರು ಸ್ವಲ್ಪ ಸಪ್ಪೆ ಎನಿಸಿದರೂ ಕೂಡ ಲವಲವಿಕೆಯ ಮಾತುಗಳಿಂದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದ ಅಂತ್ಯ ಅತ್ಯಂತ ಭಾವುಕವಾಗಿ, ಅರ್ಥವತ್ತಾಗಿ, ಸುಂದರವಾಗಿ ಚಿತ್ರಿಸಲ್ಪಟ್ಟಿದೆ. ಭಾವನಾ ತಂದೆಯ ಪ್ರೀತಿಯನ್ನೂ ಪಡೆದುಕೊಳ್ಳುತ್ತಾಳೆ ಮತ್ತು ತನ್ನನ್ನು ತಾನು ಆ ಭಾವನೆಗಳ ತೀವ್ರತೆಯಿಂದ... Electra Complexನಿಂದ ಹೊರತರುವುದರಲ್ಲೂ ಯಶಸ್ವಿಯಾಗುತ್ತಾಳೆ.... ಮಗಳಿಗೆ ತಂದೆಯ ಪ್ರೀತಿ ದಕ್ಕುವಂತೆ ಮಾಡುತ್ತಾಳೆ. ಮಾಧವಿ ತಂದೆಯನ್ನು ಕಳೆದುಕೊಂಡೂ, ಜೀವನವನ್ನೂ ತಂದೆಯ ಪ್ರೀತಿಯನ್ನೂ ಮರಳಿ ಪಡೆದುಕೊಳ್ಳುತ್ತಾಳೆ. ಕೊನೆಗೂ ತನ್ನ ಮಗಳಿಗೆ ತಂದೆಯ ಪ್ರೀತಿ ದಕ್ಕುವಂತೆ ಮಾಡುತ್ತಾಳೆ...... ತುಂಬಾ ದಿನಗಳ ನಂತರ ನೋಡಿದ ಒಂದು ಅತ್ಯುತ್ತಮ ಚಿತ್ರ....