Friday, December 10, 2010

ಸುಂದರ ಸಂಜೆ.....

ದಿನವೂ ಮುಂಜಾವಿನಲೇ ಶುರುವಾಗುವ ದಿನಚರಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದೇ ರೀತಿಯದ್ದಾಗಿರುತ್ತದೆ. ಸತಿ-ಪತಿಯರಿಬ್ಬರೂ ಕೆಲಸಕ್ಕೆ ಹೋಗಬೇಕಾದ ಸಂಸಾರಗಳಲ್ಲಂತೂ ಆ ಒತ್ತಡ ಶುಭೋದಯಕ್ಕೆ ಮುಂಚೆಯೇ ಪ್ರಾರಂಭವಾಗಿಯೇ ಬಿಟ್ಟಿರುತ್ತದೆ. ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿ ಗಡಿಯಾರದ ಓಟದ ಜೊತೆಗೇ ತಾವೂ ಓಡುತ್ತಾ, ಏದುತ್ತಾ, ಕಛೇರಿ ಸರಿಯಾದ ಸಮಯಕ್ಕೆ ತಲುಪಲು ಹರ ಸಾಹಸ ಪಡುತ್ತಾರೆ. ಇದೆಲ್ಲವೂ ನನಗೂ ಸ್ವಾನುಭವವೇ ಆಗಿತ್ತಾದ್ದರಿಂದ ಆ ಗಡಿಬಿಡಿ ಬದುಕು ನನಗೆ ಚೆನ್ನಾಗಿ ಅರ್ಥವಾಗಿದೆ. ಆದರೆ ಈಗ ನಾನು ಕೆಲಸ ಬಿಟ್ಟು ಒಂದು ದಶಕವೇ ಕಳೆದು ಹೋಗಿರುವುದರಿಂದ, ಎಲ್ಲವನ್ನೂ ಸ್ವಲ್ಪ ವಿರಾಮದಲ್ಲಿ ನೋಡಲು, ಅರ್ಥ ಮಾಡಿಕೊಳ್ಳಲೂ, ಗಮನಿಸಲೂ ಸಮಯ ಸಿಕ್ಕಿದೆ. ಹೀಗೆ ಒಂದು ದಿನ ನನ್ನ ಸ್ನೇಹಿತರ ಜೊತೆಯ ಉಲ್ಲಾಸದ ಮಾತುಕತೆಗಳಲ್ಲಿ ಮೊದಲಿನಿಂದಲೂ ಮನೆಯನ್ನೇ ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುತ್ತಿರುವ, ಪೂಜೆ, ಹಬ್ಬ ಹರಿದಿನ, ಮನೆಗೆ ಬಂದು ಹೋಗುವ ನೆಂಟರು, ಇಷ್ಟರು, ಮನೆಯ ಸದಸ್ಯರು ಎಲ್ಲವನ್ನೂ ಅಚ್ಚು ಕಟ್ಟಾಗಿ ನಿರ್ವಹಿಸುತ್ತಾ ಇರುವ ಒಬ್ಬ ಗೃಹಿಣಿ... ಮದುವೆಯಾಗಿ ೧೫ – ೨೦ ವರ್ಷಗಳ ನಂತರವೂ.... ಬೆಳಗಿನಿಂದ ದುಡಿದು, ದಣಿದು ಬರುವ ಪತಿಯನ್ನು ಹೇಗೆ ಸ್ವಾಗತಿಸಬಹುದು ಎಂಬ ಮಾತು ಬಂದಿತ್ತು. ಬೆಳಗಿನಿಂದ ಕಾರ್ಖಾನೆಯಲ್ಲಿ ಯಂತ್ರಗಳ ನಡುವೆ, ಯಂತ್ರಗಳದ್ದೇ ಮನಸ್ಸಿನ ಮಾನವರ ನಡುವೆ, ಕೆಲಸ ಮಾಡಿ ಬಂದಾಗ ಪತಿ ಏನನ್ನು ನಿರೀಕ್ಷಿಸಬಹುದು..?

ಒಂದು ಸುಂದರ ಸಂಜೆ... ಶುಭ್ರವಾದ ಬಾನು, ಇಳೆಯ ಕದಪುಗಳನ್ನು ರಂಗೇರಿಸಿ, ತನ್ನ ಪ್ರೇಮ ನಿವೇದನೆಯನ್ನು ಮಾಡುತ್ತಾ, ತಾನೂ ರಂಗು ರಂಗಾಗಿರುವ ರವಿ, ಇನಿಯನ ಚೆಲ್ಲಾಟಕೆ ಸೋತು, ತಲೆಬಾಗಿ, ನಾಚಿ ನಸುಗೆಂಪಾಗಿ, ಅರಳಿ ನಿಂತ ವಸುಂಧರೆ.. ಹೀಗೊಂದು ದೃಶ್ಯ ಕಲ್ಪಿಸಿಕೊಂಡಾಗ ನನಗೆ ಬೆಳಗಿನಿಂದ ಮನೆಯ ಕೆಲಸಗಳಲ್ಲಿ ಮುಳುಗಿ, ಮಧ್ಯಾಹ್ನದ ಊಟದ ನಂತರ ತುಸು ವಿಶ್ರಾಂತಿ ಪಡೆದು, ದಣಿದು ಬರುವ ಪತಿಯ ಸ್ವಾಗತಕ್ಕಾಗಿ, ಶುಭ್ರ ಸೀರೆಯ ಉಟ್ಟು, ಹೂ ಮುಡಿದು, ನಸು ನಗುತ್ತಾ ಗೇಟ್ ನಲ್ಲಿ ಕಾದು ನಿಂತಿರುವ ಮಡದಿಯ ನೆನಪಾಯಿತು. ಇಡೀ ಮನೆಯ ಉಸ್ತುವಾರಿ ನೋಡಿಕೊಂಡು, ಆ ಒತ್ತಡದ ಕೆಲಸಗಳಲ್ಲೂ ತನ್ನ ಪತಿಗೆ ಇಷ್ಟವಾದ ಪಾಯಸ ತಯಾರಿಸಿ, ಕಾದು ನಿಂತಿಹಳು ಮಡದಿ....

ದ್ವಿಚಕ್ರ ವಾಹನದಲ್ಲಿ, ಮನದನ್ನೆಯ ಬಳಿಗೆ ಹಾರಿ ಬಂದ ಪತಿ ಅವಳ ಒಂದು ಮುಗುಳ್ನಗೆ ಪಡೆದು, ಹೊಸ ಚೈತನ್ಯ ಪಡೆಯುತ್ತಾನೆ. ಬೆಳಗಿನಿಂದ ದುಡಿದ ಮಡದಿಯ ಜೊತೆ ಸ್ವಲ್ಪ ಹೊತ್ತು ಕುಳಿತು ಸಾಂತ್ವನದ, ಪ್ರೇಮದ ಮಾತುಗಳನ್ನಾಡುತ್ತಾ ಅಂದಿನ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲು ಮುಂದಾಗುತ್ತಾನೆ. ಇದೇ ಸಮಯಕ್ಕಾಗಿಯೇ ಕಾತುರದಿಂದ ಕಾಯುತ್ತಿದ್ದ ಮಡದಿ, ಮೆಲ್ಲಗೆ ಅಡಿಯಿಡುತ್ತಾ ಕೈಯಲ್ಲಿ ಲೋಟ ಹಿಡಿದು ಬಂದಾಗ, ಪ್ರಸನ್ನನಾದ ಪತಿ.... ಆಹಾ ಎಂಥಹ ಸುಂದರ ಗಳಿಗೆ, ಪತ್ನಿಯ ಕೈಯ ಬಿಸಿ ಕಾಫಿ... ಎಂದು ಕನಸು ಕಾಣುತ್ತಾನೆ. ಆದರೆ ಹತ್ತಿರ ಬಂದ ಮಡದಿಯ ಕೈಯಲ್ಲಿ ತನ್ನಿಷ್ಟದ ಪಾಯಸದ ಲೋಟ ಕಂಡು, ಹಿಗ್ಗಿ ಹೂವಿನಂತೆ ಅರಳಿ, ಅನುರಾಗ ತುಂಬಿದ ನೋಟದಿಂದ, ಮೆಚ್ಚುಗೆಯಿಂದ ಪತ್ನಿಯನ್ನೇ ನೋಡುತ್ತಾ ಪಾಯಸದ ಲೋಟ ಹಿಡಿದ ಕೈಯನ್ನು ತನ್ನ ಕೈಯೊಳು ತೆಗೆದುಕೊಂಡು ನಸುನಗುತ್ತಾನೆ. ಅತ್ಯಂತ ಮನೋಹರ ದೃಶ್ಯ ಕಂಡ (ಕಲ್ಪನೆಯಲ್ಲಿ) ನನ್ನ ಮನಸ್ಸು ಲಹರಿಯಲ್ಲಿ ತೇಲಾಡ ತೊಡಗಿತ್ತು... ಮನಕ್ಕೆ ಮುದಕೊಟ್ಟಿತ್ತು... ದೃಶ್ಯದ ವರ್ಣನೆ ಕೆಲವೇ ಮಾತುಗಳಲ್ಲಿ ಹಿಡಿದಿಡಿವ ನನ್ನ ಪ್ರಯತ್ನ :


ಮುಸ್ಸಂಜೆಯ ಇಳಿ ಬಿಸಿಲಲಿ
ದಣಿದು ಬಾಯಾರಿ ಬಳಲಿ
ಹಿಂತಿರುಗಿದ ಇನಿಯನ
ಮನದಿಂಗಿತವ ತಿಳಿದು
ಮನ ಮೆಚ್ಚಿದ ಮಡದಿ
ಪಾಯಸದ ಬಟ್ಟಲು ಹಿಡಿದು
ಮೆಲ್ಲನೇ ಬಳಿ ಬರಲು
ಹೊನ್ನ ಹೂನಗೆ ಬೀರಲು
ಅನುರಾಗ ಅರಳಿತು
ಜೊನ್ನ ಜೇನು ಬೆರೆತ
ಪಾಯಸ ಗಂಟಲಿಗೂ
ಮನಕೂ ಸಿಹಿಯ ಲೇಪಿಸಿತು ...

ಅನುರಾಗದ ಅಲೆಯಲ್ಲಿ ತೇಲುತ್ತಾ ಜೋಡಿ ಮನಸ್ಸುಗಳು ಜೋಡಿ ಹಕ್ಕಿಗಳಂತೆ ಸಂತೋಷದಿಂದ ನಲಿದವು.....



ಚಿತ್ರಕೃಪೆ : ಅಂತರ್ಜಾಲ