Wednesday, October 27, 2010

ಪುಸ್ತಕ ಪರಿಚಯ - ಹಣ್ಣೆಲೆ ಚಿಗುರಿದಾಗ....

ತ್ರಿವೇಣಿಯವರ ಹಣ್ಣೆಲೆ ಚಿಗುರಿದಾಗ ಒಂದು ಸಾಮಾಜಿಕ, ಸಾಂಸಾರಿಕ ಕಾದಂಬರಿ. ಇಡೀ ಕಾದಂಬರಿ ಒಂದು ಸಂಸಾರದಲ್ಲಿ ನಡೆಯುವ ಘಟನೆಗಳ ಮತ್ತು ಸಂಸಾರದ ಸದಸ್ಯರ ಸ್ವಭಾವದ ಸುತ್ತಲೂ ಹೆಣೆಯಲ್ಪಟ್ಟಿದೆ.

ಮನೆಯ ಯಜಮಾನ “ರಾಯರು” ತಮ್ಮಮರೆಗುಳಿತನದಿಂದಾಗಿ ಯಾವಾಗಲೂ ಮನೆಯವರಿಂದ ಅಪಹಾಸ್ಯಕ್ಕೊಳಗಾಗುತ್ತಿರುತ್ತಾರೆ. ಇಡೀ ಕಥೆಯಲ್ಲಿ ಈ ರಾಯರ ಪಾತ್ರ ತುಂಬಾ ಮುಖ್ಯ ಕೊಂಡಿಯಾಗಿದೆ. ಬೇರೆಲ್ಲಾ ಪಾತ್ರಗಳಿಗೂ ಮತ್ತು ಅವರ ಮಗುವಿನಂತಹ ಮೊಂಡು ಸ್ವಭಾವದಿಂದಲೂ, ಮರೆವಿನಿಂದಲೂ ನಡೆಯುವ ಘಟನೆಗಳು ಓದುಗರನ್ನು ನಗೆಯ ಕಡಲಲ್ಲಿ ತೇಲಿಸುತ್ತದೆ. ರಾಯರ ವ್ಯಕ್ತಿತ್ವದ ಜೊತೆ ಇಷ್ಟು ಹಾಸ್ಯ ಬೆರೆತಿದ್ದರೂ ಕೂಡ ಅವರು ತುಂಬಾ ತೂಕದ, ಅಪರೂಪದ ವ್ಯಕ್ತಿಯಾಗಿ ನಮ್ಮ ನೆನಪಲ್ಲಿ ಉಳಿಯುತ್ತಾರೆ. ನಿವೃತ್ತಿ ಹೊಂದಿ ಮನೆಯಲ್ಲಿರುವ ರಾಯರು ಎಲ್ಲರ ಗಮನ ತಮ್ಮ ಕಡೆ ಸೆಳೆಯುವ ಪ್ರಯತ್ನ ಪುಟ್ಟ ಮಗುವಿನಂತೆ ಯಾವಾಗಲೂ ಅವರು ಮಾಡುತ್ತಲೇ ಇರುತ್ತಾರೆ. ಪ್ರತಿಯೊಂದಕ್ಕೂ ಲೆಕ್ಕ ಹಾಕುತ್ತಾ ತಮ್ಮ ಜಿಹ್ವಾ ಚಾಪಲ್ಯವನ್ನು ಹಿಡಿತದಲ್ಲಿಡಲಾರದೆ, ಬೇಕು ಬೇಕೆಂದ ತಿಂಡಿಗಳನ್ನೂ, ಅಡುಗೆಯನ್ನೂ ಮಾಡಿಕೊಡುವಂತೆ ತಮ್ಮ ಪತ್ನಿ ರಾಜಮ್ಮನನ್ನು ಗೋಳಾಡಿಸುತ್ತಾ, ಸೊಸೆಯಂದಿರ ಹಾಸ್ಯಕ್ಕೂ ಗುರಿಯಾಗುತ್ತಿರುತ್ತಾರೆ ರಾಯರು. ಎಲೆ ಆದಿಕೆ ಹಾಕಿಕೊಳ್ಳಲು ಶುರು ಮಾಡಿದರೆಂದರೆ, ಮನೆ ಮಂದಿಗೆಲ್ಲಾ ಸಂತಸದ ಸಮಯ ಏಕೆಂದರೆ ಪತ್ನಿ ರಾಜಮ್ಮನವರು ಎಲೆ ಮಡಿಸಿ ಕೊಡುತ್ತಿದ್ದರೆ, ಒಂದಾದ ಮೇಲೊಂದರಂತೆ ಲೆಕ್ಕವಿಲ್ಲದೆ ಮೆಲ್ಲುತ್ತಾ ಕುಳಿತಿರುತ್ತಾರೆ. ಆಗ ಯಾವುದೇ ಕಾರಣಕ್ಕೂ ಸಿಟ್ಟು ಮಾಡಿಕೊಳ್ಳದೇ ತಾಂಬೂಲದ ಸ್ವಾದವನ್ನು ಮೆಲ್ಲುತ್ತಾ, ಅಮಲಿನಲ್ಲಿ ಮೈ ಮರೆತಿರುತ್ತಾರೆ.

ತಮಗೆ ಸಕ್ಕರೆ ಖಾಯಿಲೆ ಇದೆಯೆಂದು ಗೊತ್ತಾದ ದಿನ, ಆಕಾಶ ಭೂಮಿ ಒಂದು ಮಾಡುತ್ತಾ... ಮುಸುಕೆಳೆದು ಮಲಗಿ ಬಿಡುತ್ತಾರೆ ರಾಯರು. ವೈದ್ಯನಾದ ಮಗ ಮಾಧವ ತಂದೆಯ ಖಾಯಿಲೆ ಕೇಳಿ ನಕ್ಕು ಬಿಟ್ಟಾಗ, ರೇಗುತ್ತಾ “ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತ್ತದೆ” ಎನ್ನುತ್ತಾರೆ. “ಹಣ್ಣೆಲೆಗಳು ಚಿಗುರತೊಡಗಿದರೆ ಚಿಗುರೆಲೆಗಳ ಗತಿಯೇನು” ಎಂದ ಮಗನ ಮೇಲೆ ಉರಿದು ಬೀಳುತ್ತಾರೆ. ರಾಯರು ಸಾವಿಗೆ ಅತೀವ ಹೆದರುತ್ತಿದ್ದರಾದ್ದರಿಂದ ಚಿಕ್ಕ ಪುಟ್ಟ ನೆಗಡಿಯಂತಹ ಖಾಯಿಲೆಗೂ ಮನೆಯವರೆಲ್ಲರ ಕೈ ಕಾಲು ಕೆಡಿಸಿ ಬಿಡುತ್ತಿರುತ್ತಾರೆ.

ಒಬ್ಬಳೇ ಮಗಳು ಮಾಲತಿಗೆ ಗಂಡು ನೋಡಲು ಮೈಸೂರಿಗೆ ರೈಲಿನಲ್ಲಿ ಹೊರಟು, ನಿದ್ದೆ ಮಾತ್ರೆ ತಗೊಂಡು ಎಚ್ಚರವೇ ಆಗದೆ, ಮತ್ತೆ ಅದೇ ರೈಲಿನಲ್ಲಿ ಬೆಂಗಳೂರಿಗೆ ವಾಪಸ್ಸು ಬಂದಿರುತ್ತಾರೆ. ಹೀಗೆ ಹಾಸ್ಯ ಘಟನೆಗಳ ಸರಮಾಲೆಯ ಜೊತೆ ಜೊತೆಗೇ ರಾಯರ ವ್ಯಕ್ತಿತ್ವ, ಗೌರವಯುತವಾಗಿ ಚಿತ್ರಿಸಲ್ಪಟ್ಟಿದೆ. ನಮ್ಮದೇ ಮನೆಯ ಹಿರಿಯರೊಬ್ಬರ ಗಲಾಟೆಗಳೇನೋ ಎನ್ನುವಷ್ಟು ಆತ್ಮೀಯವಾಗಿ ಬಿಡತ್ವೆ ಘಟನೆಗಳೂ, ರಾಯರ ಸಂಸಾರವೂ...

ರಾಯರಿಗೆ ೫ ಜನ ಗಂಡು ಮಕ್ಕಳು ಮತ್ತು ಒಬ್ಬಳೇ ಮಗಳು ಮಾಲತಿ. ಹೆಚ್ಚು ಓದಿದರೆ ನವೆಯುತ್ತಾಳೆಂದು SSLCಗೇ ಓದು ಬಿಡಿಸಿ ಬಿಡುತ್ತಾರೆ. ೫ ಜನ ಅಣ್ಣಂದಿರ ಮುದ್ದಿನ ತಂಗಿಯಾಗಿ, ಮಗುವಿನಂತೆಯೇ ಒಂದೂ ಕಷ್ಟ ತಿಳಿಯದೆ ಬೆಳೆಯುತ್ತಾಳೆ ಮಾಲತಿ. ಅದ್ಧೂರಿಯಾಗಿ.. ಖರ್ಚು ಹೆಚ್ಚಾಯಿತೆಂದು ಕೂಗಾಡುತ್ತಲೇ ಮಗಳ ಮದುವೆ ಮಾಡುತ್ತಾರೆ. ರಾಯರ ಪತ್ನಿ ಮಗಳ ಮದುವೆಯಾಗಲೆಂದೇ ಕಾದಿದ್ದರೇನೋ ಎಂಬಂತೆ, ಯಾರಿಗೂ ಯಾವ ಸುಳಿವೂ ಕೊಡದೇ, ಇದ್ದಕ್ಕಿದ್ದಂತೆ ಇಲ್ಲಿಯ ಕಥೆ ಮುಗಿಸಿ ಹೊರಟು ಬಿಡುತ್ತಾರೆ. ಮಾಲತಿ ಗಂಡನ ಮನೆಗೆ ಹೋಗುವ ಮೊದಲೇ.. ಮದುವೆಯಾಗಿ ೩ ತಿಂಗಳಿಗೇ ವಿಧವೆಯಾಗಿ ತಮ್ಮಲ್ಲೇ ಉಳಿದಾಗ ರಾಯರು ಮಾನಸಿಕವಾಗಿ ತುಂಬಾ ಬಳಲುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಮಗಳ ಬದುಕಿನ ದುರಂತ.. ಪತ್ನಿಯ ವಿಯೋಗ ಎಲ್ಲವನ್ನೂ ಎದುರಿಸಿ, ನಮ್ಮ ರಾಯರು ಮತ್ತೆ ತಮ್ಮ ತನವನ್ನು ಮೆರೆಯುತ್ತಾರೆ.

ಹಳೆಯ ಕಾಲದ ರಾಯರು ವಿಧವೆ ಮಗಳನ್ನು ಕಾಲೇಜಿಗೆ ಕಳುಹಿಸಲು ಒಪ್ಪೋಲ್ಲ ಆದರೆ ಗಂಡು ಮಕ್ಕಳ ಬಲವಂತದಿಂದಿ ಮಾಲತಿ ವಿದ್ಯಾಭ್ಯಾಸ ಮುಂದುವರೆಸುತ್ತಾಳೆ. ಮಗಳು ಸಂತೋಷವಾಗಿರುವುದನ್ನು ಕಂಡು ರಾಯರೂ ಸಂತಸ ಪಡುತ್ತಾರೆ. ಆದರೆ ತಮ್ಮ ಸೊಸೆಯ ಚಿಕ್ಕಮ್ಮನ ಮಗ, ವಿಧುರ ಹಾಗೂ ೩-೪ ವರ್ಷದ ಮಗನ ತಂದೆ ಪ್ರಸಾದ್ ತಮ್ಮ ಮಗಳನ್ನು ಮದುವೆಯಾಗ ಬಯಸಿದಾಗ ಮಾತ್ರ ನಿಜಕ್ಕೂ ತುಂಬಾ ಕೆರಳುತ್ತಾರೆ. ಕೊನೆಗೂ ಇಲ್ಲೂ ಅವರು ತಮ್ಮ ನಿಲುವಿನಲ್ಲಿ ಬದಲಾವಣೆ ತಂದುಕೊಂಡೇ ಬಿಡುತ್ತಾರೆ. ಮದುವೆ ನಡೆಯುತ್ತದೆ.

ಕಥೆಯ climax ರಾಯರ ವ್ಯಕ್ತಿತ್ವದ high light and ultimatum. ಜ್ವರ ಬಂದು ಮಲಗಿ, ತಾವಿನ್ನು ಸತ್ತೇ ಹೋಗಬಹುದೆಂದು ಹೆದರಿ, ಇಷ್ಟವಿಲ್ಲದಿದ್ದರೂ ತಿಜೋರಿ ಬೀಗದ ಕೈ ದೊಡ್ಡ ಮಗನ ಕೈಗೆ ಕೊಡುವ ರಾಯರು... ಜ್ವರ ಬಿಟ್ಟ ತಕ್ಷಣ, ಮಗನ ಮುಂದೆ ಕೈ ಚಾಚಿ ತಿಜೋರಿ ಬೀಗದ ಕೈ ವಾಪಸ್ಸು ಪಡೆಯುತ್ತಾರೆ...... :-)

ಪುಸ್ತಕ ಓದಿ ಮುಗಿಸಿದಾಗ, ಒಂದು ತಿಳಿನಗೆ ನಮ್ಮ ಮುಖದಲ್ಲಿರುತ್ತದೆ.... ರಾಯರ ಪಾತ್ರ ಹಾಸ್ಯಮಯವಾಗಿ ರೂಪಿತವಾಗಿದ್ದರೂ, ತುಂಬಾ ಭಾವನಾತ್ಮಕವಾಗಿ, ಆ ವಯಸ್ಸಿನವರ ಮನಸ್ಥಿತಿಯನ್ನು ಲೇಖಕಿ ಸರಳವಾಗಿ, ಸೂಚ್ಯವಾಗಿ ಚಿತ್ರಿಸಿದ್ದಾರೆ. ಬಹು ಕಾಲ ಮನದಲ್ಲುಳಿಯ ಬಹುದಾದ ಕಥೆ.

ಚಲನ ಚಿತ್ರ ಕೂಡ ಬಂದಿರುವುದರಿಂದ ನಮಗೆ ಎಲ್ಲಾ ಪಾತ್ರಗಳೂ ಮನದಲ್ಲಿ ಅಚ್ಚೊತ್ತಿ ಬಿಡುತ್ತವೆ..........



Monday, October 11, 2010

ಇಳೆ - ವರುಣ - ರವಿ...



ಬೆಳಿಗ್ಗೆಯಿಂದ ಏನೋ ಒಂಥರಾ ಆಲಸ್ಯವಾಗಿತ್ತು. ರವಿ ಅತ್ಯಂತ ತುಂಟತನದಲ್ಲಿ ಕಣ್ಣು ಮುಚ್ಚಾಲೆಯಾಡುತ್ತಾ ಆಡುತ್ತಾ.... ನನ್ನ ಬೆಳಗಿನ ಉತ್ಸಾಹಕ್ಕೆ ಸ್ವಲ್ಪ ನಿಧಾನಗತಿಯನ್ನು ಜೋಡಿಸಿದ್ದ. ಆದರೂ ನನಗೇಕೋ ರೀತಿಯ ಮೋಡ ಮುಸುಕಿದ ಆಗ, ವಾತಾವರಣ ತುಂಬಾ ಇಷ್ಟವಾಗುತ್ತದೆ. ಹಗಲಿನಲ್ಲೂ ನಸುಕತ್ತಲ ಛಾಯೆಯನ್ನು ಅನುಭವಿಸುವುದೆಂದರೆ ನನಗದೇನೋ ಒಂದು ರೀತಿಯ ಸಂತೋಷ. ಹಗಲಿನಲ್ಲಿ ವಿದ್ಯುತ್ ದೀಪ ಬೆಳಗಿಸಿ, ಓದುತ್ತಾ ಕೂರುವುದೊಂದು ಇಷ್ಟವಾದ ಹವ್ಯಾಸ ನನಗೆ. ಮಧ್ಯೆ ಮಧ್ಯೆ ತನ್ನಿಷ್ಟ ಬಂದಾಗ ಚೂರೇ ಇಣುಕಿ, ತಾನಲ್ಲೇ ಬಾನಿನಲ್ಲಿ ಮುಚ್ಚಿಟ್ಟುಕೊಂಡಿದ್ದೇನೆಂದು ನನಗೆ ತೋರಿಸುತ್ತಾ ಮುದ ಕೊಡುವ ಸೂರ್ಯನನ್ನು ಕಾಯುತ್ತಾ, ಕಂಡಾಗೊಮ್ಮೆ, ಛಕ್ಕನೆ ಬೆಳಕ ಹಾಯಿಸುವ ಜೀವ ಜ್ಯೋತಿಯನ್ನು ಹುಡುಕುತ್ತಾ, ನನ್ನದೇ ಲಹರಿಯ ಬೆನ್ನತ್ತಿ ಹೋಗುತ್ತಾ, ಮನದಲ್ಲಿಯ ಮಾತುಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ ಮಾಡುತ್ತಾ, ನನ್ನ ಅಂತರಂಗದಲ್ಲಿಯ ಪುಸ್ತಕದ ಒಂದು ಹಾಳೆ ಮಗುಚುವ ಅಭ್ಯಾಸ ನನಗೆ ನೆನಪಿರುವಂತೆ ೮ – ೯ನೇ ತರಗತಿಯಿಂದಲೇ ಬಂದಿದೆ. ಆಗ ಅಕ್ಕಂದಿರೂ, ಅಮ್ಮ ಎಲ್ಲರೂ ಇವಳೊಬ್ಬಳು ಯಾವಾಗಲೂ ಮೋಡ ಕವಿದರೆ ಚೆನ್ನಾಗಿರತ್ತೆ ಅಂತಿರ್ತಾಳೆ... ನನ್ನ ಹಪ್ಪಳ-ಸಂಡಿಗೆ ಒಣಗೋಲ್ಲ, ಆಹಾರ ಪದಾರ್ಥಗಳೆಲ್ಲ ಕೆಟ್ಟು ಹೋಗತ್ತೆ ಎಂದು ಅಮ್ಮ, ಥೂ.. ಬೇಜಾರು ಮೂಡೇ ಇರಲ್ಲ ಎಂದು ಅಕ್ಕ, ಸುಮ್ಮನೆ ಬಿಸಿ ಕಾಫಿ ಕುಡಿದು ಬೆಚ್ಚಗೆ ಕೂತಿರೋಣ ಅನ್ಸತ್ತೆ, ಹೊರಗೆ ಹೋಗುವ ಇಷ್ಟವಾಗೋಲ್ಲ ಎಂದು ಅಪ್ಪ.... ಗೊಣಗುಟ್ಟುತ್ತಿದ್ದರೆ ನಾನು ಮಾತ್ರ, ಆಹಾ ಎಂದು ಸಂತಸಪಡುತ್ತಾ, ಅಮ್ಮನ ಕೈಯಲ್ಲಿ ಬೈಸಿಕೊಂಡು, ಬಿಸಿ ಕಾಫಿ ಕುಡಿಯುತ್ತಾ, ಚಕ್ಕುಲಿ-ಕೋಡುಬಳೆಗಳ ಸಂಗ್ರಹಕ್ಕೆ ಲಗ್ಗೆ ಹಾಕುತ್ತಾ, ಕೈಯಲ್ಲೊಂದು ಕಥೆ ಪುಸ್ತಕ ಹಿಡಿದೋ ಅಥವಾ ಕಿಟಕಿಯ ಬಳಿ ಕುಳಿತು ಹೊರಗೆ ನೋಡುತ್ತಲೋ, ಕಲ್ಪನಾ
MySpace Layouts

ಸಾಮ್ರಾಜ್ಯದಲ್ಲಿ ವಿಹರಿಸುತ್ತಲೋ ಕಳೆಯುತ್ತಿದ್ದೆ...

ಅಂಥದೊಂದು ಬಾಲ್ಯ, ಯೌವನದ ದಿನಗಳ ನೆನಪಾಗಿತ್ತು ಇಂದು ಕೂಡ. ಈಗ ಸುಮಾರು ಕೆಲವು ದಿನಗಳಿಂದಲೇ ಹೀಗೆ ನಡುನಡುವೆ ಮೋಡ ಕವಿದು ನನ್ನ ಮನದಾಳದ ಮಾತುಗಳನ್ನು ಕೆದಕುತ್ತಿದ್ದರೂ, ಅದೇಕೋ ಇಂದು ಇನ್ನು ತಡೆಯಲಾರೆ, ನಾ ಹೊರಗೆ ಬಂದೇ ಬರುವೆನೆನ್ನುತ್ತಾ ಆ ಸಂತಸದ, ಮುದದ ಭಾವ ಇಣುಕ ತೊಡಗಿತ್ತು...

ಕೆಲವು ದಿನಗಳ ಹಿಂದೆ ವಿಜಯ ಕರ್ನಾಟಕದಲ್ಲಿ ಮೊದಲನೆ ಪುಟದಲ್ಲೇ ಭದ್ರಾ ಜಲಾಶಯ ತುಂಬಿ, ನೀರು ನದಿಗೆ ಹರಿಯ ಬಿಟ್ಟಿರುವ ಚಿತ್ರ ಕೂಡ ನನ್ನ ಮನದ ಬಾಗಿಲನ್ನು ತಟ್ಟಿತ್ತು. ನದಿಯಲ್ಲಿ ನೀರು ತುಂಬಿರುವ ದೃಶ್ಯ ಕಣ್ಣ ಮುಂದೆ ಸುಳಿದಾಡುತ್ತಿರುವಾಗ, ಇಲ್ಲಿ ಬೆಂಗಳೂರಿನಲ್ಲಿ ನಮ್ಮೆಲ್ಲರ ಪ್ರಿಯ ಮಿತ್ರ ರವಿ, ನಿಧಾನವಾಗೆದ್ದು, ತುಂಟತನದ ಭಾವದಲ್ಲಿದ್ದ. ಸ್ವಲ್ಪ ಸ್ವಲ್ಪವೇ ಇಣುಕಿ ನೋಡುತ್ತಾ, ಸಂಭ್ರಮ ಪಡುತ್ತಿದ್ದದ್ದು ಕಂಡಾಗ ನನಗೇಕೋ ಒಂದು ಹೊಸ ಅಲೆಯ ಭಾವ ಬಂದಿತ್ತು. ಈ ತುಂಟ ರವಿ ಯಾವುದೋ ಅತ್ಯಂತ ಆಪ್ತವಾದ, ಆಳವಾದ ಒಂದು ದೃಶ್ಯ ಕಾವ್ಯಕ್ಕೆ ವೇದಿಕೆ ಸಿದ್ಧ ಪಡಿಸುತ್ತಿದ್ದಾನೆಂಬ ಚಿಕ್ಕ ಸಂಶಯ ಕೂಡ ಬಂದಿತ್ತು. ಅದಾವ ಭಾವೋಲ್ಲಾಸದ ಕ್ಷಣಗಳನ್ನು ಸೃಷ್ಟಿಸುವನೋ, ಅನುರಾಗದ ಅಲೆಯನ್ನು ಹರಿಸುವನೋ, ಅದಾವ ಅದ್ಭುತ ಅನುಭವವಾಗುವುದೋ, ಮತ್ತಾವ ಮಹಾ ಕಾವ್ಯದ ಉದ್ಭವಕ್ಕೆ ನಾ ಸಾಕ್ಷಿಯಾಗುವೆನೋ ಎಂದೆಲ್ಲಾ ಕಲ್ಪನೆಗಳ ಕುದುರೆ ಹತ್ತಿ ನಾಗಾಲೋಟದಲ್ಲೋಡುತ್ತಿತ್ತು ನನ್ನ ಮನಸ್ಸು. ಹೀಗೇ ಹೊರಗೆ ನೋಡುತ್ತಾ ನನ್ನ ಲಹರಿಯನ್ನು ಸ್ವಚ್ಛಂದವಾಗಿ ಹರಿಯ ಬಿಟ್ಟು ಕಾತುರದಿಂದ ಕಾಯುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಧೋ.... ಎಂದು ಸುರಿಯಲಾರಂಭಿಸಿದ ಮಳೆ ನನ್ನೆಲ್ಲ ಭಾವಗಳನ್ನೂ ಅಚ್ಚ ಬಿಳಿಯ ವೇದಿಕೆಯಲ್ಲಿ, ಬಣ್ಣ ಬಣ್ಣದ, ವಿವಿಧ ಆಕಾರಗಳ, ಮೋಡಿ ಮಾಡುವ ಅಕ್ಷರಗಳ ಸಾಲುಗಳನ್ನು ರೂಪಿಸಲು ಪ್ರೇರೇಪಿಸಿತು.



ಒಮ್ಮೆಲೇ... ಪಕ್ಕ ವಾದ್ಯಗಳೊಂದಿಗಿನ ಸಂಗೀತಕ್ಕೆ ನಾಟ್ಯವಾಡುತ್ತಾ ಧರೆಗಿಳಿದ ವರುಣರಾಯ.... ಸುಮಾರು ೧೫ ನಿಮಿಷಗಳ ಕಾಲ ತನ್ಮಯತೆಯಿಂದ ತರು ಲತೆಗಳೊಂದಿಗೆ ಉಲ್ಲಾಸದ ನರ್ತನ ಮಾಡಿ, ಮೋಡಿ ಮಾಡುತ್ತಾ.. ವಸುಂಧರೆಯ ತನು, ಮನವನ್ನು ತನ್ನ ಧಾರೆಯಲ್ಲಿ ರಭಸದಿಂದ ತೋಯಿಸಿದ ಪ್ರಣಯರಾಜ,... ಮುದದಿಂದ ಮೈ ಮರೆತು, ಅರಳಿ, ಬಂದಷ್ಟೇ ವೇಗವಾಗಿ ತನ್ನ ಕೆಲಸ ಮುಗಿಯಿತೆಂದು, ವಸುಂಧರೆಗೆ ವಿದಾಯ ಕೂಡ ಹೇಳದೆ, ಇದ್ದಕ್ಕಿದ್ದಂತೆ ಹೊರಟೇ ಹೋಗಿದ್ದ.... ಮಂದ ಮಂದವಾಗಿ, ಹಿತವಾಗಿ ಹತ್ತಿರದಲ್ಲೇ ಸುಳಿದಾಡಿದ ಮಂದಾನಿಲನ ಸ್ಪರ್ಶದಿಂದ, ಕನಸಿನ ಲೋಕದಲ್ಲಿದ್ದ ಇಳೆ, ಸುಖದಿಂದ ಇನಿಯನ ಅನುರಾಗದಲ್ಲಿ ಲೀನವಾಗಿದ್ದವಳು, ಆಯಾಸದಿಂದಲೂ, ಕಷ್ಟದಿಂದಲೂ , ಮೆಲ್ಲನೆ ಕಣ್ಣು ತೆರೆದಳು....

ಇನಿಯನನ್ನು ಕಾಣದೆ, ಅವಳ ಕಣ್ಗಳು ಪಟಪಟನೆ ರೆಪ್ಪೆ ಬಡಿಯುತ್ತಾ, ಒಮ್ಮೆಲೇ ಸ್ಥಬ್ದವಾಗಿ, ತಬ್ಬಿಬ್ಬಾಗಿ ಸುತ್ತಲೂ ನೋಡತೊಡಗಿದ್ದಳು. ಅದೇ ಸಮಯಕ್ಕೆ ಸರಿಯಾಗಿ ವರುಣನ ಆರ್ಭಟಕ್ಕೆ ಹೆದರಿದ್ದನೋ ಅಥವಾ ಭಕ್ತಿಯ ಅರ್ಪಣೆಯಲ್ಲಿ ತಾನಿರಬಾರದು ಎಂಬಂತೆಯೋ, ಮೋಡಗಳ ತೆಕ್ಕೆಯಲ್ಲಿ ಅಡಗಿದ್ದ ರವಿ... ಮೆಲ್ಲಗೆ ಇಣುಕುತ್ತಾ... ಕತ್ತಲ ಛಾಯೆಯಾವರಿಸಿದ್ದ ವಸುಂಧರೆಗೆ ಬಂಗಾರದ ಕಿರಣಗಳ ಸೋಕಿಸುತ್ತಾ ಹೊರ ಬರತೊಡಗಿದ. ಸೂರ್ಯರಶ್ಮಿಯ ಬಂಗಾರದ ಬಣ್ಣ ತನ್ನನ್ನಾವರಿಸಿದ್ದು ಕಂಡು ಇಳೆ, ಎಚ್ಚೆತ್ತು... ನಾಚಿ ನೀರಾದಾಗ, ಅವಳ ಸುಂದರ ಸುಕೋಮಲ ಕದಪುಗಳು ರಂಗೇರಿದವು. ತನ್ನ ಹಾಗೂ ತನ್ನಿನಿಯ ವರುಣನ ಚೆಲ್ಲಾಟವನ್ನೂ, ಪ್ರೀತಿಯ ಧಾರೆಯನ್ನು ರವಿ ಕಂಡು ಬಿಟ್ಟನೇನೋ ಎಂದು ಇಳೆ ಗಲಿಬಿಲಿಗೊಂಡಾಗ, ಅವಳ ರಂಗೇರಿದ ಕದಪುಗಳೂ, ಅರಳಿದ ತನುವೂ ಸೂರ್ಯರಶ್ಮಿಯ ಬಂಗಾರದ ಬಣ್ಣದೊಡನೆ ನೇರ ಸ್ಪರ್ಧೆಗಿಳಿದಂತಿತ್ತು... ರವಿಯು ತನ್ನ ಹೊಂಗಿರಣಗಳ, ಹೂ ಬಿಸಿಲಿನಲ್ಲಿ ಇಳೆಯನ್ನು ಆವರಿಸಿದಾಗ, ತನ್ನಿನಿಯ ವರುಣನ ಪ್ರೇಮದಾಟವನ್ನು ಕಣ್ಮುಚ್ಚಿ ನೆನೆಯುತ್ತಾ, ಅನುರಾಗದ ಅನುಭೂತಿಯನ್ನು ಸವಿಯುತ್ತಾ, ಸುಖಿಸುತ್ತಾ, ತೇಲಾಡುತ್ತಾ ಮೋಡಗಳ ಹೊನ್ನಿನ ರಥವನ್ನೇರಿ, ಮತ್ತೇರಿದಂತೆ ಇಳೆ ವರುಣನನ್ನು ಹುಡುಕುತ್ತಾ ಹೊರಟಿದ್ದಳು........


ಚಿತ್ರಕೃಪೆ : ಅಂತರ್ಜಾಲ

Monday, October 4, 2010

ನಿಶ್ಯಬ್ದ.... ಶಾಂತತೆ...



ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ....
ಚಿನ್ಮನವ
ಬೆಳಗಿಸುತ್ತಾ....
ಹೃದಯಾ೦ತರಾಳದಲ್ಲಿ...

ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ....
ಹೊರಗೆ ಬ್ರಹ್ಮಾಂಡದಲ್ಲಿ
ಸಾಧನೆಯ ಹಾದಿಯಲ್ಲಿ
ಗುರಿ ತಲುಪುವಲ್ಲಿ....

ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ.....
ಅನಂತ ಭಾವದಿ
ಅಮೂರ್ತ ಸ್ನೇಹದಿ
ಕತ್ತಲೆಯ ಮನಕೆ
ಜ್ಞಾನ ದೀಪವ
ಬೆಳಗಿಸುವಲ್ಲಿ..

ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ.....
ನಿಸ್ವಾರ್ಥ ಮನದಿ
ನಿಷ್ಕಾಮ ಪ್ರೇಮದಿ
ಅಖಂಡ ವಾತ್ಸಲ್ಯವನು
ಧಾರೆಯಾಗಿಸುವಲ್ಲಿ..

ಅಲ್ಲಿತ್ತೊಂದು ನಿಶ್ಯಬ್ದ
ಶಾಂತತೆ.....
ಮುಂಜಾವಿನ ಶುಭ್ರ
ಬೆಳಕಿನಲ್ಲಿ....
ಅಂತರಾಳದಿಂದೇಳುತ್ತಾ
ಚಿನ್ಮುದ್ರೆಯಲ್ಲಿ....

ಚಿತ್ರಕೃಪೆ : ಅಂತರ್ಜಾಲ