Wednesday, January 5, 2011

ಒಮ್ಮೆ ಬಸ್ಸಿನಲ್ಲಿ.... :-)...

ನಮ್ಮ ಮದುವೆಯಾದ ಹೊಸತರಲ್ಲಿ ಒಮ್ಮೆ ನಾನೂ, ನನ್ನವರೂ, ನಮ್ಮಣ್ಣ ರಾತ್ರಿ ಬಸ್ಸಿನಲ್ಲಿ ಭದ್ರಾವತಿಗೆ ಹೊರಟಿದ್ದೆವು. ಆಗೆಲ್ಲಾ ಮುಂಗಡವಾಗಿ ಸೀಟು ಕಾಯ್ದಿರಿಸಿಕೊಳ್ಳುವ ಅಭ್ಯಾಸ ನಾವು ಮಾಡಿಕೊಂಡಿರಲಿಲ್ಲ. ಯಾವಾಗ ಸಾಧ್ಯವಾದರೆ ಆಗ, ಯಾವ ಬಸ್ಸು ಸಿಕ್ಕರೆ ಅದರಲ್ಲಿ ಪ್ರಯಾಣ ಮಾಡುವ ಸಾಹಸ ಮಾಡುತ್ತಿದ್ದೆವು. ನಾವು ಬಸ್ ನಿಲ್ದಾಣಕ್ಕೆ ಬಂದು ತುಂಬಿದ್ದ ಒಂದೆರಡು ಬಸ್ಸುಗಳನ್ನು ಬಿಟ್ಟು ಕಾಯುತ್ತಾ ನಿಂತರೂ ನಮ್ಮಣ್ಣನ ಸುಳಿವೇ ಇರಲಿಲ್ಲ. ಆಗ ಮೊಬೈಲ್ ಕೂಡ ಇರಲಿಲ್ಲವಲ್ಲ. ಇನ್ನೊಂದೇ ಬಸ್ಸು ಕೊನೆಯದು ಶಿವಮೊಗ್ಗಕ್ಕೆ ಹೋಗಲು ಎಂದು ಗೊತ್ತಾದಾಗ, ನಾವು ಹತ್ತಿ, ಬಾಗಿಲ ಪಕ್ಕದಲ್ಲೇ ಇದ್ದ ಕೊನೆಯ ಒಂದೇ ಒಂದು ಖಾಲಿ ಸೀಟಲ್ಲಿ ಕುಳಿತೆವು. ಪಕ್ಕದಲ್ಲಿ ಮೂರು ಜನರು ಕುಳಿತುಕೊಳ್ಳುವ ಸೀಟಿನಲ್ಲಿ ಅಣ್ಣನಿಗಾಗಿ ಸ್ಥಳ ಕಾಯ್ದಿರಿಸಿ, ಕೂತಿದ್ದೆವು. ಓಡುತ್ತಾ ಬಂದ ಅಣ್ಣ ತನಗಾಗಿ ಒಂದು ಸೀಟು ಕಾಯ್ದಿರಿಸಲಾಗಿದೆಯೆಂದು ನೋಡಿ, ತಂದಿದ್ದ ಕಿಟ್ ಬ್ಯಾಗನ್ನು ಮೇಲೆ ನಮ್ಮ ಸೂಟ್ಕೇಸ್ ಹಾಗೂ ಒಂದು ಕಿಟ್ ಇಟ್ಟಿದ್ದ ಜಾಗದಲ್ಲಿ ಇಟ್ಟು... ಇನ್ನೂ ಸಮಯ ಇದೆ.. ಈಗ ಬಂದೆ ಕಣೇ ಎಂದು.. ನಾನು ಬೇಡ್ವೋ ಇಳೀಬೇಡ ಎಂದರೂ ಕೇಳದೆ ಇಳಿದು ಹೊರಟೇ ಹೋದ.

ಬಸ್ಸಿನಲ್ಲಿ ಜನರು ಇನ್ನೂ ಹತ್ತುತ್ತಲೇ ಇದ್ದರು. ಪಾಪ ಕೂರಲು ಜಾಗವಿಲ್ಲದೇ ಅದೇ ಕೊನೆಯ ಬಸ್ಸೆಂದು ನಿಂತೇ ಪ್ರಯಾಣ ಮಾಡುವ ನಿರ್ಧಾರವನ್ನು ಮಾಡಿ ಹತ್ತುತ್ತಿದ್ದರು. ಇದ್ದಕ್ಕಿದ್ದಂತೆ ಜೋರಾಗಿ ಊದಿದ ವಿಷಲ್ ಶಬ್ದ ಕಿವಿಗಪ್ಪಳಿಸುತ್ತಿದ್ದಂತೆ... ಬಸ್ಸಿನ ಪಕ್ಕೆಯ ಮೇಲೆ ಎರಡು ದಪ್ ದಪ್ ಎಂಬ ಏಟಿನ ಶಬ್ದದ ಜೊತೆಗೇ ರೈಟ್ ರೈಟ್ ಎನ್ನುತ್ತಾ ಕಂಡಕ್ಟರ್ ಎಲ್ರೀ ಜಾಗ ಬಿಡ್ರೀ ಎನ್ನುತ್ತಾ ಎಲ್ಲರನ್ನೂ ತಳ್ಳಿಕೊಂಡು ಒಳಗೆ ತೂರಿಯೇ ಬಿಟ್ಟ. ಅದಕ್ಕಾಗೇ ಕಾದಿದ್ದಂತೆ ಬಸ್ಸು ಹೊರಟೇ ಬಿಡ್ತು.... ನಮ್ಮಣ್ಣ ಎಲ್ಲೂ ಕಾಣಲೇ ಇಲ್ಲ. ನನ್ನವರಿಗೆ ಆಗಲೇ ಸಿಟ್ಟು ಬರತೊಡಗಿತ್ತು. ಯಾವಾಗ್ಲೂ ಹೀಗೆ ನಿಮ್ಮಣ್ಣ ಎಂದು ಸ್ವಲ್ಪ ಜೋರಾಗೇ ಸ್ವಗತ ಅನ್ನೋ ಹಾಗೆ ಹೇಳ್ತಾ ಕಿಟಕಿಯಿಂದ ಹೊರಗೆ ಬಗ್ಗಿ ನೋಡುತ್ತಿದ್ದರು. ಅಷ್ಟರಲ್ಲಿ ಇಲ್ಲಿ ಒಳಗೆ ಆಗಲೇ... ಯಾರಿಗ್ರೀ ಸೀಟು ಕಾಯ್ದಿರಿಸಿರೋದು... ತೆಗೀರೀ ಕೂತ್ಕೋತೀವಿ ಎಂಬ ಗಲಾಟೇ ಬೇರೆ. ನಂಗೆ ತುಂಬಾ ಆತಂಕವಾಗಿ ನಾನು ಕುಳಿತಲ್ಲಿಂದ ಎದ್ದು, ಇವರನ್ನು ಸರಿಸಿ, ಕಿಟಕಿಯಿಂದ ಹೊರಗೆ ಬಗ್ಗಿ ನೋಡಿದಾಗ, ಫುಟ್ ಬೋರ್ಡ್ ಮೇಲೆ ತುಂಬಿದ್ದ ಅಷ್ಟೊಂದು ಜನಗಳ ಮಧ್ಯದಲ್ಲಿ ಒಂದು ಬಕ್ಕ ತಲೆ ಹೊಳೆಯುವುದು ಕಂಡಿತು. ನಾನು ಖುಷಿಯಿಂದ ರೀ... ಅಣ್ಣ ಬಸ್ಸು ಹತ್ತಿದಾನ್ರೀ ಎಂದು ಕೂಗುತ್ತಾ... ಇವರ ಪಿಟಿಪಿಟಿ, ಸ್ವಗತಗಳಿಗೆ ಒಂದು ಪೂರ್ಣ ವಿರಾಮದ ಚಿನ್ಹೆ ಬರೆದಿದ್ದೆ. ಸಮಾಧಾನದಿಂದ ಇವರೂ ಬಗ್ಗಿ ನೋಡಿದಾಗ ನಮಗೆ ಕಂಡಿದ್ದು.. ಅಣ್ಣ ಒಂದು ಕೈಯಲ್ಲಿ ಬಸ್ಸಿನ ಕಂಬಿ ಹಿಡಿದು, ಜೋತಾಡ್ತಾ ನನ್ನ ಕಂಡೊಡನೆ... ಹಲ್ಲು ಕಿರಿಯುತ್ತಿದ್ದಾನೆ .

ಅಂತೂ ಅದು ಹೇಗೋ ಕಷ್ಟಪಟ್ಟು ಅವನನ್ನು ಒಳಗೆ ಎಳೆದುಕೊಂಡು ನಿಟ್ಟುಸಿರು ಬಿಟ್ಟಿದ್ದಾಯ್ತು.

ಬಸ್ಸು ಹೊರಟ ಸ್ವಲ್ಪ ಹೊತ್ತಿನಲ್ಲೇ ಅದರ ಕುಲುಕಾಟವೇ ತೊಟ್ಟಿಲ ತೂಗುವಿಕೆಯೇನೋ, ಆಗಲೇ ನಿದ್ರಾ ದೇವಿಯ ವಶರಾಗಿದ್ದವರ ಗೊರಕೆಯೇ ಜೋಗುಳವೇನೋ ಎಂಬಂತೆ ಮೆಲ್ಲಮೆಲ್ಲಗೆ ಎಲ್ಲರೂ ತೂಕಡಿಸಲಾರಂಭಿಸಿದ್ದೆವು. ಇದ್ದಕ್ಕಿದ್ದಂತೆ ಡ್ರೈವರ್ ಅದೇನು ಕಂಡು ಬ್ರೇಕ್ ಹಾಕಿದನೋ ತಿಳಿಯದು, ಹಿಂದೆ ತಲೆಯೊರಗಿಸಿ, ಬಾಯಿ ಬಿಟ್ಟು, ಅರ್ಧನಿಮೀಲಿತರಾಗಿದ್ದವರೆಲ್ಲರ ಹಲ್ಲು, ಮೂಗು, ಹಣೆ ಮುಂದಿನ ಸೀಟಿನ ಕಂಬಿಗೆ ಡೀ... ಡೀ.... ಡಿಚ್ಚೀ....ಹೊಡೆದಿತ್ತು.

ಅದೇ ಕ್ಷಣ ಸರಿಯಾಗಿ ನಮ್ಮಣ್ಣನ ತಲೆಯ ಮೇಲೊಂದು ಕಿಟ್ ಅನಾಮತ್ತು ಟಪ್ ಎಂದು ಎಗರಿ ಕುಳಿತಿತ್ತು... ಪಾಪ ಬಡಪಾಯಿ ಅಣ್ಣ, ಜಜ್ಜಿದ ಮೂಗು ಉಜ್ಜಬೇಕೋ.... ಏಟು ತಿಂದ ಬಕ್ಕತಲೆಯ ಸವರಬೇಕೋ ತಿಳಿಯದೇ ಪೆಚ್ಚಾಗಿದ್ದ. ನಾವಿಬ್ಬರೂ ನಗು ಬಂದರೂ ಅವನ ಕೋಪಕ್ಕೆ ಹೆದರಿ ತಡೆದುಕೊಂಡು, ಅಯ್ಯೋ ಪಾಪ ಎಂಬಂತೆ ಮುಖ ಮಾಡಿ, ಏನಾದರಾಗಲಿ ಎಂದು ಕಿಟ್ ಕೆಳಗೇ ಇಟ್ಟು, ಹಾಗೇ ಮತ್ತೆ ನಿಧಾನವಾಗಿ ನಿದ್ರಾ ದೇವಿಯನ್ನು ಕರೆಯಲಾರಂಭಿಸಿದ್ದೆವು. ಆಗ.. ಇದ್ದಕಿದ್ದಂತೆ "ಅಯ್ಯೋ.... ಅಮ್ಮಾ..." ಎಂಬ ಆಕ್ರಂದನ ನಮ್ಮನ್ನು ಬೆಚ್ಚಿ ಬೀಳಿಸಿತ್ತು.... ಡ್ರೈವರ್ ಮತ್ತೊಮ್ಮೆ ಬ್ರೇಕ್ ಹಾಕಿದಾಗ, ನೋಡಿದರೆ, ಸಾರಿ ಒಂದು ಸೂಟ್ಕೇಸ್ ನಮ್ಮಣ್ಣನ ತಲೆಯನ್ನು ಸ್ಪ್ರಿಂಗ್ ಬೋರ್ಡ್ ಮಾಡಿಕೊಂಡು, ಅವನ ಮಂಡಿಯನ್ನೊಮ್ಮೆ ಗುದ್ದಿ, ಕೆಳಗೆ ನನ್ನ ಕಾಲ ಬಳಿ, ಏನೂ ತಿಳಿಯದಂತೆ, ಮುಗ್ಧವಾಗಿ ಕುಳಿತಿತ್ತು. ಬಾರಿ ನಿದ್ದೆಯಿಂದ ಬೆಚ್ಚಿ ಎದ್ದಿದ್ದ ಎಲ್ಲರೂ ನಗೆಗಡಲಲ್ಲಿ ತೇಲ ತೊಡಗಿದ್ದರು....... ಎರಡನೆಯ ಬಾರಿಗೂ ತಾನೇ ಎಲ್ಲರ ದೃಷ್ಟಿಗೆ ಬೀಳಬೇಕಾಯಿತೆಂಬ ಸಂಕೋಚ, ಬಕ್ಕ ತಲೆಗೆ ಬಲವಾಗಿ ಬಿದ್ದ ಏಟಿನ ನೋವು, ಮನಸಾರ ಪಕ್ಕೆ ಹಿಡಿದು ನಗುತ್ತಿದ್ದ ನಾವಿಬ್ಬರೂ... ಎಲ್ಲರನ್ನೂ..

ಎಲ್ಲವನ್ನೂ ಒಮ್ಮೆ ದುರುಗುಟ್ಟಿಕೊಂಡು ನೋಡಿದ ಅಣ್ಣ ಮೆಲ್ಲಗೆ ತಾನೂ ನಗುವುದೋ ಬಿಡುವುದೋ ಎಂಬಂತೆ ನಗುಮುಖ ಮಾಡಿದ.... ಅಲ್ಲಿಂದ ನಾವ್ಯಾರೂ ಭದ್ರಾವತಿ ತಲುಪುವವರೆಗೂ ನಿದ್ದೆ ಮಾಡಲೇ ಇಲ್ಲ. ಒಬ್ಬರಾದ ಮೇಲೊಬ್ಬರಂತೆ, ಸರದಿಯಲ್ಲಿ ತಲೆ ಮೇಲೆತ್ತಿಕೊಂಡು... ಅಲ್ಲಿ ಜೋಡಿಸಿಟ್ಟಿದ್ದ ಸೂಟ್ ಕೇಸ್ ಗಳು ಹಾಗೂ ತರಹೇವಾರಿ ಕಿಟ್ಟು ಬ್ಯಾಗ್ ಗಳನ್ನು ಸಂಶಯಾತ್ಮಕವಾದ (ಯಾರು ನಮ್ಮ ತಲೆಗಳನ್ನಪ್ಪಳಿಸಲು ಕಾದಿರುವರೋ ಎಂಬಂತೆ) ದೃಷ್ಟಿಯಿಂದ ನೋಡುತ್ತಾ, ಹರಟುತ್ತಾ ಊರು ತಲುಪಿದ್ದೆವು.

ಇದು ನಮ್ಮ ಮೂವರಿಗೂ ಮರೆಯಲಾಗದ ಒಂದು ಹಾಸ್ಯಮಯ ಘಟನೆಯಾಗಿ ಹೋಯಿತು...