Sunday, February 6, 2011

ಪುಟ್ಟ-ಪುಟ್ಟಿಯ ಜಾತ್ರೆ ವಿಶೇಷ...



ಭದ್ರಾ ನದಿಯ ತೀರದಲ್ಲೊಂದು ಪುಟ್ಟ ಊರು. ತುಂಬಿ ಹರಿಯುವ ಹೊಳೆ. ನದಿಯ ಮಧ್ಯದಲ್ಲೊಂದು ಚಿಕ್ಕ ಮಂಟಪ. ಅದರಲ್ಲಿ ಈಶ್ವರ ನೆಲೆಸಿದ್ದ... ಸುತ್ತಲೂ ಹಸಿರು ಬೆಟ್ಟ ಗುಡ್ಡಗಳಿಂದಾವೃತ್ತವಾಗಿದ್ದ ಊರು... ಪ್ರಕೃತಿ ಮಾತೆಯ, ವನದೇವತೆಯ ಮಡಿಲು ಹಸಿರು ತೊಟ್ಟಿಲಿನಂತೆ ಕಂಗೊಳಿಸುತ್ತಿತ್ತು. ಬಲು ರಮ್ಯವಾದ ನೋಟ. ನದೀ ತೀರದಲ್ಲೊಂದು ಶ್ರೀ ರಾಮಚಂದ್ರನ ದೇವಸ್ಥಾನ. ಸೀತಾ, ಲಕ್ಷ್ಮಣ, ಆಂಜನೇಯರ ಸಮೇತ... ಜೊತೆಗೆ ಈಶ್ವರನೂ...ಒಳಗೆ ಸುಬ್ರಹ್ಮಣ್ಯನೂ ಇದ್ದರು. ಪಕ್ಕದಲ್ಲೇ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ. ರಾಮದೇವರ ದೇವಸ್ಥಾನದ ಎದುರಿನಲ್ಲಿ ದೊಡ್ಡ ಅರಳೀಮರ, ಪಕ್ಕದಲ್ಲೇ ನದಿಗೆ ಇಳಿದು ಹೋಗಲು ಮೆಟ್ಟಿಲುಗಳು. ಭದ್ರೆಯ ಒಡಲು ಯಾವಾಗಲೂ ತುಂಬಿ, ಲಯವಾದ ಸಂಗೀತದಂತೆ ಜುಳು ಜುಳು ಹರಿಯುವ ಅವಳ ಸೌಂದರ್ಯ ನೋಡುವುದೇ ಒಂದು ಆನಂದ. ಎಷ್ಟೋ ಜನರು ಸಾಯಂಕಾಲ ದೇವರ ದರ್ಶನಾರ್ಥವಾಗಿ ಬಂದವರು, ಸಂಸಾರ ಜಂಜಟವನ್ನೆಲ್ಲಾ ಮರೆತು ಹಾಯಾಗಿ, ಅರಳೀ ಕಟ್ಟೆಯ ಮೇಲೆ ಕುಳಿತು, ಭದ್ರೆಯನ್ನು ನೋಡುತ್ತಾ, ಆಹ್ಲಾದಕರ ಗಾಳಿಯನ್ನು ಸೇವಿಸುತ್ತಾ, ಹಸಿರು ದಿಟ್ಟಿಸುತ್ತಾ, ಕನಸುಗಳ ಲೋಕಕ್ಕೆ ಹೋಗಿ ಬಿಡುತ್ತಿದ್ದರು. ರಾಯರ ಮಠದಲ್ಲಿ ಹೊರಗೆ ಪ್ರಾಕಾರದಲ್ಲಿ ಒಂದು ಮೂಲೆಗೆ ಆಳವಾದ ಭಾವಿ ಇತ್ತು. ಪ್ರಾಕಾರದ ಬಾಗಿಲು ಯಾವಾಗಲೂ ತೆಗೆದೇ ಇರುತ್ತಿತ್ತು. ಮಧ್ಯಾಹ್ನ ಮೂರು ಘಂಟೆಯಾದರೆ ಸಾಕು... ಮಕ್ಕಳ ಒಂದು ದೊಡ್ಡ ಗುಂಪು ಅರಳೀ ಮರದ ನೆರಳಿನಲ್ಲೂ.. ರಾಯರ ಮಠದ ಪ್ರಾಕಾರದಲ್ಲೂ ಆಟವಾಡಲು ತಪ್ಪದೆ ಹಾಜರಾಗಿಬಿಡುತ್ತಿತ್ತು. ದೇವಸ್ಥಾನದ ಅರ್ಚಕರ ಮನೆಯ ಸುಧಾ, ಪಕ್ಕದ ಬೀದಿಯ ಉಮಾ, ಎದುರುಗಡೆ ಮನೆಯ ಹೆಲೆನ್, ಲಿನೆಟ್, ಆಕಡೆ ಬೀದಿಯ ನಾಗರತ್ನ, ಪೋಲೀಸ್ ಠಾಣೆ ಎದುರುಮನೆಯ ನಟರಾಜ, ಅಲ್ಲೇ ಸ್ವಲ್ಪ ಮುಂದಿನ ಮನೆಯ ರೋಹಿಣಿ, ರೇಣುಕಾ, ಗೋಪಿ, ಕಿಟ್ಟಿ, ವಾಸು, ಸೀನ, ನಾಗರಾಜ... ಹೀಗೆ ಒಂದು ದೊಡ್ಡ ಗುಂಪು ಸೇರಿ ರಜಾ ದಿನಗಳಲ್ಲಿ, ಸ್ಕೂಲು ಮುಗಿದ ನಂತರ ಗಲಾಟೆ ಮಾಡುತ್ತಾ, ಮಠದ ಪ್ರಾಕಾರದಲ್ಲಿ ಐಸ್ ಪೈಸ್ ಆಡುತ್ತಾ, ಒಬ್ಬರನ್ನೊಬ್ಬರು ಹಿಡಿಯಲು ಅಟ್ಟಿಸಿಕೊಂಡು ಓಡುತ್ತಾ... ಇಡೀ ವಾತಾವರಣವನ್ನೇ ವಿದ್ಯುದೀಕರಿಸುತ್ತಿದ್ದರು. ಆ ಊರು ಇತಿಹಾಸ ಪ್ರಸಿದ್ಧವಾದ ಊರು. ಅಲ್ಲಿ ಹೊಯ್ಸಳರ ಕಾಲದ, ನಕ್ಷತ್ರದಾಕಾರದ, ಸುತ್ತಲೂ ಅತ್ಯಂತ ಸುಂದರ ಕೆತ್ತನೆಯುಳ್ಳ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ದೇವಸ್ಥಾನವೂ ಇತ್ತು. ಈ ಇತಿಹಾಸ ಪ್ರಸಿದ್ಧ ದೇವಸ್ಥಾನದ ಪಕ್ಕದಲ್ಲೇ ಒಂದು ಮಸೀದಿಯೂ ಇತ್ತು. ಊರು ಬರೀ ಇತಿಹಾಸಕ್ಕೆ ಮಾತ್ರವಲ್ಲ, ಉದ್ಯಮಕ್ಕೂ ಪ್ರಸಿದ್ಧಿಯಾಗಿತ್ತು. ಒಂದು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗೂ ಒಂದು ಕಾಗದ ಕಾರ್ಖಾನೆಯೂ ಇತ್ತು. ತುಂಬಾ ದೊಡ್ಡ ಊರಲ್ಲದಿದ್ದರೂ, ತಾಲೂಕು ಮಟ್ಟಕ್ಕೆ ಚೆನ್ನಾಗಿಯೇ ಇತ್ತು. ಸುತ್ತ ಮುತ್ತಲಿನ ಹಳ್ಳಿಗಳೂ, ತುಂಗ-ಭದ್ರಾ ನದಿಯ ಸಂಗಮ ಕ್ಷೇತ್ರ, ಎಲ್ಲಿ ನೋಡಿದರೂ ಕಣ್ಣು ಕಾಣುವಷ್ಟು ದೂರಕ್ಕೂ ಹಸಿರು ತುಂಬಿ ನಿಂತ ಗದ್ದೆಗಳು, ಭದ್ರೆಯ ಒಡಲಿನಲ್ಲಿ ಮೂಡಿನಿಂತ ಎರಡು ಸೇತುವೆಗಳು... ಒಂದು ರೈಲು ಓಡಾಡಲು ಇನ್ನೊಂದು ಬಸ್ಸು ಮತ್ತು ಪಾದಚಾರಿಗಳಿಗಾಗಿ.. ಒಟ್ಟಿನಲ್ಲಿ ಊರು ತುಂಬಾ ಲವಲವಿಕೆಯಿಂದ ಕೂಡಿತ್ತು. ಊರಿನ ಗ್ರಾಮ ದೇವತೆ ಹಳದಮ್ಮ, ತನ್ನ ಇಬ್ಬರು ಸಹೋದರಿಯರೊಂದಿಗೆ ನೆಲೆಸಿದ್ದ ಸಮೃದ್ಧ ಊರು. ಊರಿನಲ್ಲಿದ್ದ ಇತರ ಅನೇಕ ಕುಟುಂಬಗಳಂತೆ.. ಊರಿನ ಮಧ್ಯದಲ್ಲಿ, ಗ್ರಾಮ ದೇವತೆ ಹಳದಮ್ಮನ ದೇವಸ್ಥಾನಕ್ಕೆ ಸ್ವಲ್ಪವೇ ದೂರದಲ್ಲಿ ನೆಲೆಸಿದ್ದ ಒಂದು ಚಿಕ್ಕ ಕುಟುಂಬ. ಅಪ್ಪ-ಅಮ್ಮ, ಅಜ್ಜಿ-ತಾತ ಮತ್ತು ಪುಟ್ಟ-ಪುಟ್ಟಿ... ಪುಟ್ಟನಿಗೆ ಆರು ವರ್ಷ ಮತ್ತು ಪುಟ್ಟಿಗೆ ೩ ೧/೨ ವರುಷ ಅಷ್ಟೇ. ಅಣ್ಣ-ತಂಗಿ ಇಬ್ಬರೂ ಯಾವಾಗಲೂ ಒಟ್ಟಿಗೇ ಇರುತ್ತಿದ್ದರು. ಪುಟ್ಟ ತಾನು ತುಂಬಾ ದೊಡ್ಡವನೆಂದುಕೊಳ್ಳುತ್ತಾ ಪುಟ್ಟಿಯ ಜವಾಬ್ದಾರಿಯನ್ನು ವಹಿಸಿಕೊಂಡು ಬಿಡುತ್ತಿದ್ದ. ಎಲ್ಲಿಗೆ ಹೋದರೂ ಕೈ ಹಿಡಿದುಕೊಂಡು ಕರೆದುಕೊಂಡು ಹೋಗುವುದು, ಪುಟ್ಟಿಯ ಬೇಕು ಬೇಡಗಳನ್ನೆಲ್ಲಾ ಆಸೆ-ಅಕ್ಕರೆಯಿಂದ ನೋಡಿಕೊಳ್ಳುವುದು ಮಾಡುತ್ತಿದ್ದ. ಪುಟ್ಟಿಯನ್ನು ಅಣ್ಣನ ವಶಕ್ಕೆ ಒಪ್ಪಿಸಿ, ಪುಟ್ಟಿಯ ಅಮ್ಮ-ಅಜ್ಜಿ ಹಾಯಾಗಿ ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು. ಊರಲ್ಲಿ ಪ್ರತೀವರ್ಷ ಗ್ರಾಮದೇವತೆ ಹಳದಮ್ಮನ ಜಾತ್ರೆ ಬಹಳ ಅದ್ಧೂರಿಯಾಗಿ ನಡೆಯುತ್ತಿತ್ತು. ಒಂದು ವಾರ ದಿನವೂ ದೇವರಿಗೆ ವಿಶೇಷ ಪೂಜೆ, ಆರತಿ, ಪ್ರಸಾದ ವಿನಿಯೋಗ ಎಲ್ಲವೂ ಇರುತ್ತಿತ್ತು. ಜಾತ್ರೆಯ ಕೊನೆಯ ದಿನ ದೇವಿ ಹಳದಮ್ಮ ತನ್ನ ಅಕ್ಕ-ತಂಗಿಯರೊಡಗೂಡಿ ಊರಿನ ಬೀದಿಗಳಲ್ಲಿ ಮೆರವಣಿಗೆ ಬರುತ್ತಾ... ಎಲ್ಲರ ಮನೆಯ ಹತ್ತಿರವೂ ಬಂದು, ಅರಿಸಿನ-ಕುಂಕುಮ ಇಸ್ಕೊಂಡು, ಮಂಗಳಾರತಿ ಮಾಡಿಸಿಕೊಂಡು, ಹರಸುತ್ತಿದ್ದಳು. ದೇವಿಯರ ಕೃಪೆಯಿಂದ ಊರು ಸುಭಿಕ್ಷವಾಗಿತ್ತು. ಜನರು ನೆಮ್ಮದಿಯಾಗಿದ್ದರು. ಈ ವರ್ಷದ ಜಾತ್ರೆಯ ಡಂಗೂರ ಸಾರಿದ್ದರು. ಆಗಲೇ ಜಾತ್ರೆಯ ಹಬ್ಬ, ಸಡಗರ ಶುರುವಾಗಿತ್ತು. ದೇವಸ್ಥಾನದ ಮುಂದಿನ ರಸ್ತೆಯುದ್ದಕ್ಕೂ ಅಂಗಡಿಗಳ ಸಾಲುಗಳು ಎದ್ದು ನಿಂತಿದ್ದವು. ಬೆಂಡು-ಬತ್ತಾಸು, ಟೇಪು-ಬಳೆ, ಆಟದ ಸಾಮಾನುಗಳು, ಬಣ್ಣ ಬಣ್ಣದ ಬೊಂಬೆಗಳು ಎಲ್ಲವೂ ತಮ್ಮ ತಮ್ಮ ಅಂಗಡಿಗಳಲ್ಲಿ, ಆಗಲೇ ತಯ್ಯಾರಾಗಿ ನಿಂತಿದ್ದವು. ಜಾತ್ರೆಯ ಇನ್ನೊಂದು ವಿಶೇಷವೆಂದರೆ, ಗ್ರಾಮದ ಆಟಗಳು ಮತ್ತು ಕೆಂಡ ತುಳಿಯುವುದು. ಜಾತ್ರೆಗೆ ಊರಿನ ಜನರೆಲ್ಲರೂ ಹೋಗುತ್ತಿದ್ದರು. ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮದಿಂದ ಹೋಗುತ್ತಿದ್ದ ಜನರನ್ನು ಮನೆಯ ಕಟ್ಟೆಯ ಮೇಲೆ ಕುಳಿತು ನೋಡುತ್ತಿತ್ತು ನಮ್ಮ ಪುಟ್ಟಿ. "ಅಣ್ಣಾ... ನಾವೂ ಜಾತ್ರೆಗೆ ಹೋಗನಾ.."? ಅಂತ ಮುದ್ದಾಗಿ ಪುಟ್ಟನ ಹಿಂದೆ ಮುಂದೆ ಪುಟು ಪುಟು ಓಡಾಡುತ್ತಾ ಅದೇ ಒಂದೇ ಪ್ರಶ್ನೆಯನ್ನು ಕೇಳಿ ಕೇಳಿ ತಲೆತಿನ್ನುತ್ತಿತ್ತು ಪುಟ್ಟಿ. ಬೇರೇ ಏನೂ ಇಲ್ಲ ಪುಟ್ಟಿಗೆ ಜಾತ್ರೆಗೆ ಹೋಗಿ, ಅಲ್ಲಿ ಕಣ್ಣಿಗೆ ಅಂದವಾಗಿ, ಬಣ್ಣವಾಗಿ ಕಾಣುವ ಹೊಸ ಟೇಪು, ಬಳೆ ಕೊಂಡು, ಬೆಂಡು-ಬತ್ತಾಸು, ಮಂಡಕ್ಕಿ ತಿನ್ನುತ್ತಾ ತಿರುಗಾಡಬೇಕು ಅಷ್ಟೆ. ಆದರೆ ಪುಟ್ಟನಿಗೆ ಬೇರೆಲ್ಲಕ್ಕಿಂತಲೂ.. ತನ್ನ ಮುದ್ದಿನ ತಂಗಿ ಪುಟ್ಟಿಯ ಕೈ ಹಿಡಿದುಕೊಂಡು, "ಅಲ್ನೋಡು ಚಿನ್ನೂ... ಎಷ್ಟು ಚೆನ್ನಾಗಿದೆ..".. "ಇಲ್ನೋಡು ಬಂಗಾರ... ದೇವಿಗೆ ಅಲಂಕಾರ"... "ಎಷ್ಟೊಂದು ಬಣ್ಣ ಬಣ್ಣದ ಹೂವು ನೋಡು ಅಮ್ಮೂ.." ಅಂತ ಎಡಗೈಯಲ್ಲಿ ಬೊಟ್ಟು ಮಾಡಿ ತೋರಿಸುತ್ತಾ, ಬಲಗೈಯಲ್ಲಿ ಪುಟ್ಟಿಯ ಕೈ ಹಿಡಿದು ಜಾತ್ರೆಯಲ್ಲಿ ತಿರುಗೋದು ತುಂಬಾ ಇಷ್ಟ. ಪುಟ್ಟಿ ಏನಕ್ಕಾದರೂ ಹೆದರಿ, ಬೆಚ್ಚಿದಾಗ, ಆಪ್ತತೆಯಿಂದ ಮಗುವಿನ ಹೆಗಲು ತಬ್ಬಿ "ಓನಿಲ್ಲ ಬಂಗಾರೂ.." "ನಾನಿದೀನಲ್ಲ ಚಿನ್ನೂ.. ಹೆದರ್ಕೊಬೇಡ"... ಎಂದು ಮುದ್ದು ಮಾಡುತ್ತಾ ತಾನೇನೋ ತುಂಬಾ ದೊಡ್ಡ ಗಂಡಸೆಂಬಂತೆ.. ಸುತ್ತಾಡುವುದು ತುಂಬಾ ಇಷ್ಟವಾದ ಕೆಲಸವಾಗಿತ್ತು. ಇಷ್ಟವಾಗುವುದೆಂಬುದಕ್ಕಿಂತ ಊಟ, ತಿಂಡಿ, ನೀರು, ನಿದ್ದೆ ಯಾವುದೂ ಬೇಡ ಪುಟ್ಟನಿಗೆ. ತನ್ನ ಪುಟ್ಟ ತಂಗಿಯೇ ಒಬ್ಬ ಪುಟ್ಟ ದೇವತೆಯೆಂಬಂತೆ, ಹೆಮ್ಮೆಯಿಂದ, ಅಕ್ಕರೆಯ ಧಾರೆ ಹರಿಸುತ್ತಾ ಎಲ್ಲವನ್ನೂ ಮರೆತು ಇದ್ದು ಬಿಡುತ್ತಿದ್ದ ನಮ್ಮ ಪುಟ್ಟ... ಪುಟ್ಟಿಯ ವರಾತ ಶುರುವಾಗಿತ್ತಲ್ಲಾ ಆಗಲೇ... ಪುಟ್ಟ "ಅಮ್ಮಾ ಮಗೂ ಅಣ್ಣಾ ಜಾತ್ರೆಗೋಗನಾ" ಅಂತ ಕೇಳ್ತಿದೆಯಮ್ಮಾ... ಪಾಪ ಅಮ್ಮಾ ಪುಟ್ಟೀ... "ಕರ್ಕೊಂಡು ಹೋಗ್ಲಾ" ಅಂತ ಅಮ್ಮನ್ನ ಕೇಳಿದ. ಅಮ್ಮ ಸ್ವಲ್ಪ ಹಿಂಜರಿಯುತ್ತಲೇ.."ಪುಟ್ಟಾ ಹುಷಾರಾಗಿ ಕರ್ಕೊಂಡೋಗಿ ಬರ್ತೀಯಾಪ್ಪಾ ರಾಜಾ..?" ಅಂದ್ರು. "ಹೂ ನಮ್ಮಾ ನೀನೇನು ಹೆದರ್ಕೋಬೇಡ... ಕತ್ತಲಾಗೋಷ್ಟರಲ್ಲಿ ಬಂದು ಬಿಡ್ತೀವಿ" ಅಂದ ಪುಟ್ಟ. ಸರಿ ಅಮ್ಮ ಪುಟ್ಟಿಯನ್ನೂ, ಪುಟ್ಟನನ್ನೂ ಉತ್ಸವ ಮೂರ್ತಿಗಳಂತೆ ಅಲಂಕರಿಸಿ, ಹತ್ತು ಸಾರಿ... "ಪುಟ್ಟಾ ಮಗೂ ಕೈ ಬಿಡಬೇಡ್ವೋ ಬಂಗಾರ..." "ಹುಷಾರು ಕಣಪ್ಪಾ..." "ದುಡ್ಡು ಸರಿಯಾಗಿ ಜೋಬಲ್ಲಿಟ್ಕೊಂಡ್ಯೇನೋ."? ಅಂತೆಲ್ಲಾ ಕೇಳುತ್ತಾ... ಹೊರ ಬಾಗಿಲವರೆಗೂ ಬಂದು ಕಳಿಸಿ ಅಲ್ಲಿಯೇ ನೋಡುತ್ತಾ ನಿಂತಿದ್ದರು. ಹಿಂದೆ ತಿರುಗಿ ನೋಡುತ್ತಾ... "ಅಮ್ಮಾ ಟಾ ಟಾ" ಎಂದು ಹಿಗ್ಗಿನಿಂದ, ಎಡಗೈ ಬೀಸುತ್ತಾ... ಹೊರಟಿತ್ತು ಪುಟ್ಟಿ. ತಂಗಿಯ ಬಲಗೈಯನ್ನು ಭದ್ರವಾಗಿ ಹಿಡಿದುಕೊಂಡು, ಪುಟ್ಟ ಖುಷಿಯಿಂದ ತಾನೂ ತಾಯಿಗೆ ಕೈ ಬೀಸಿದ. ಕೈ ಕೈ ಹಿಡಿದು ಪುಟ್ಟ-ಪುಟ್ಟಿಯರ ಬಣ್ಣದ ತೇರು ಜಾತ್ರೆಗೆ ಹೊರಟಿತ್ತು. ಈ ಸಲದ ಜಾತ್ರೆಯಲ್ಲಿ ಒಂದು ವಿಶೇಷವಿತ್ತು. ಮೊಟ್ಟ ಮೊದಲ ಬಾರಿಗೆ, ಜಾತ್ರೆಯಲ್ಲಿ "ತೂಗು ತೊಟ್ಟಿಲು" - ಮೆರ್ರಿ ಗೋ ರೌಂಡ್ ಬಂದಿತ್ತು. ಅಷ್ಟೆತ್ತರಕ್ಕೆ ತೂಗುತ್ತಾ ಹೋಗುವ ತೊಟ್ಟಿಲ ವಿಷಯ ಆಗಲೇ ಸ್ನೇಹಿತರಿಂದ ಕೇಳಿ ತಿಳಿದಿದ್ದ ಪುಟ್ಟ, ಕುತೂಹಲದಿಂದ ನೋಡಲು ಕಾಯುತ್ತಿದ್ದ. ಪುಟ್ಟ - ಪುಟ್ಟಿ ಇಬ್ಬರೂ.. ಹಾಗೇ ನಿಧಾನವಾಗಿ ನೋಡುತ್ತಾ ದೇವಸ್ಥಾನದ ಹತ್ತಿರ ಬಂದರು. "ಅಲ್ನೋಡು ಚಿನ್ನೂ... ಹೇಗೆ ಕಂಭದ ಮೇಲೆ ಹುಡುಗ ಗಿರಗಿರ ತಿರುಗ್ತಿದಾನೆ"... ಅಂತ ಪುಟ್ಟಿಗೆ ತೋರಿಸಿದ ಪುಟ್ಟ. ಪುಟ್ಟಿಯೂ ತಾನೇನೂ ಕಮ್ಮಿ ಇಲ್ಲವೆಂಬಂತೆ... "ಅಣ್ಣಾ ಅಲ್ನೋಡು..." ಅಂತ ಕೈ ಜಗ್ಗಿತು. ಏನೋ ತೋರಿಸುತ್ತಿದೆ ಮಗೂ ಎಂದು ಪುಟ್ಟ ಅದು ಬೊಟ್ಟು ಮಾಡಿದ ಕಡೆ ನೋಡಿದರೆ... ಅಲ್ಲೆರಡು ಕೋಳಿಗಳು ಕಾಳಗಕ್ಕೆ ತಯ್ಯಾರಾಗಿ ನಿಂತಿದ್ದವು. ಪುಟ್ಟನಿಗೆ ನಗು ಬಂತು. ಮೆಲ್ಲಗೆ ನಕ್ಕಾಗ, ಪುಟ್ಟಿಯ ಅಸಮಧಾನದ ನೋಟ ಎದುರಿಸಬೇಕಾಯಿತು. ಊಂ.. ಎಂದು ಉದ್ದ ಮೂತಿ ಮಾಡಿದ ಚಿನ್ನಾರಿ ಮಗುವನ್ನು ಕಂಡು ಪುಟ್ಟನಿಗೆ ಮುದ್ದು ಬಂತು. ಆಸೆಯಿಂದ ಪುಟ್ಟಿಯನ್ನು ಹತ್ತಿರಕ್ಕೆಳೆದುಕೊಂಡು... "ಅಮ್ಮೂ ಕೋಪಾನಾ" ಅಂದಾಗ, ಪುಟ್ಟಿ ಇಲ್ಲಾ ಎಂಬಂತೆ, ಎರಡು ಜುಟ್ಟು ಕುಣಿಸುತ್ತಾ, ತಲೆಯಾಡಿಸಿ, "ಹೀ....." ಎಂದು ಹಲ್ಲು ಕಿರಿಯಿತು. "ಪುಟ್ಟೀ.. ಕಂದಾ... ನೀ ನನ್ಜೊತೆನೇ ಇರ್ಬೇಕು... ಕೈ ಬಿಡಬಾರದು... ಗೊತ್ತಾಯ್ತಾ.."? ಎನ್ನುತ್ತಾ... ಮುಂದೆ ಮುಂದೆ ನಡೆದು ಹೋದರು ಇಬ್ಬರೂ.... "ತೂಗು ತೊಟ್ಟಿಲು" ದೂರದಿಂದಲೇ ತಿರುಗುತ್ತಿರುವುದು ಕಣ್ಣಿಗೆ ಬಿದ್ದಾಗ, ಪುಟ್ಟ... "ಬಾ ಚಿನ್ನೂ.." ಎಂದು ಆ ಕಡೆ ಕರೆದುಕೊಂಡು ಹೋದ. ಈ ಸಾರಿ ಏನೇನೋ ಹೊಸಾದೆಲ್ಲಾ ಬಂದಿದೆ ಪುಟ್ಟೀ... "ನೋಡೋಣ ಬಾರೆ"... ಅಂತ ಅಲ್ಲಿ ಹೋಗಿ ನಿಂತುಕೊಂಡ. ಪುಟ್ಟಿಯೂ ಕೈ ಹಿಡ್ಕೊಂಡು ಪಕ್ಕದಲ್ಲೇ ನಿಂತಿತ್ತು. ಪುಟ್ಟ ಮೆರ್ರಿ ಗೋ ರೌಂಡ್ ನಲ್ಲಿ ತಾನು ಪುಟ್ಟಿಯನ್ನು ಬಿಟ್ಟು ಹೋಗೋಕ್ಕಾಗಲ್ಲ... ಪುಟ್ಟಿಗೆ ಆಗದ್ದು ತನಗೂ ಬೇಡವೆಂದು ಕೊಳ್ಳುತ್ತಾ... ನೋಡುತ್ತಾ ನಿಂತಿದ್ದ. ಪಕ್ಕದಲ್ಲೇ ನಿಂತಿದ್ದ ಪುಟ್ಟಿಗೆ... ಎರಡೇ ನಿಮಿಷದಲ್ಲಿ ಬೇಸರವಾಗಿತ್ತು. ಅದು ಸುತ್ತಲೂ ತಿರುಗಿ ನೋಡಲಾರಂಭಿಸಿತ್ತು. ಅದರ ಕಣ್ಣು ದೃಷ್ಟಿ ಅಂಗಡಿ ಸಾಲಿನಲ್ಲಿನ ಒಂದು ಅಂಗಡಿಯಲ್ಲಿ ಕಂಡ ಬಣ್ಣ ಬಣ್ಣದ ಟೇಪು, ಬಳೆಗಳ ಮೇಲೆ ಬಿತ್ತು, ಖುಷಿಯಾಗಿ ಬಿಡ್ತು ಪುಟ್ಟಿ. ಸ್ವಲ್ಪ ಸಡಿಲವಾಗಿದ್ದ ಅಣ್ಣನ ಹಿಡಿತವನ್ನ ಮೆತ್ತಗೆ ಬಿಡಿಸಿಕೊಂಡು ನಮ್ಮ ತರ್ಲೆ ಪುಟ್ಟಕ್ಕನ ಸವಾರಿ ಅಂಗಡಿಯ ಸಾಲಿನ ಕಡೆ ಹೊರಟಿತು. ಆಸೆಯಿಂದ ನೋಡುತ್ತಾ... ಉಗುರು ಕಚ್ಚುತ್ತಾ... ಅಲ್ಲಿಯೇ ನಿಂತು ಬಿಟ್ಟಿತು ಪುಟ್ಟಿಯ ತೇರು.....

ಮುಂದುವರೆಯುವುದು.....

ಚಿತ್ರಕೃಪೆ : ಅಂತರ್ಜಾಲ