Tuesday, February 21, 2012

ಶಿವ ಮಾನಸ ಪೂಜಾ...

ಶಿವನಿಗೆ ಬಾಹ್ಯ ಪೂಜೆಗಿಂತ "ಮಾನಸಪೂಜೆ"ಯೇ ಅತ್ಯಂತ ಪ್ರಿಯವಂತೆ. ಹಾಗೇ ಬಿಲ್ವಪತ್ರೆಯೆಂದರೆ ಕೂಡ ತುಂಬಾ ಪ್ರಿಯವಂತೆ. ಶಿವರಾತ್ರಿಯ ದಿವಸ ವಿಶೇಷವಾಗಿ ನಾವು ನಮ್ಮನ್ನೇ ಅರ್ಪಿಸಿಕೊಳ್ಳಬೇಕೆಂದಾಗ, ನಮ್ಮ ದೇಹವನ್ನೇ ಬಿಲ್ವವೃಕ್ಷವೆಂದೂ, ನಮ್ಮ ತ್ರಿಗುಣಗಳೇ ಬಿಲ್ವಪತ್ರೆಯೆಂಬ ಅನುಸಂಧಾನ ಮಾಡಿಕೊಂಡಾಗ ಮತ್ತು ಮನಸಾರ ಸಮರ್ಪಿಸಿದಾಗ, ಮನೋನಿಯಾಮಕನಾದ ಈಶ್ವರನ ಕೃಪೆ ನಮಗೆ ಸಿಕ್ಕುತ್ತದೆಯೆಂಬ ನಂಬಿಕೆಯಿಂದ ನಾವು ಶಿವರಾತ್ರಿಯನ್ನು ಆಚರಿಸುತ್ತೇವೆ. ಎಲ್ಲಾ ಪೂಜೆಗಳಿಗಿಂತಲೂ ಮಾನಸ ಪೂಜೆ ಶ್ರೇಷ್ಠವಾದದ್ದು. ಅಂತರಂಗದ ಈ ಪೂಜೆಗೆ ಹೊರಗಿನ ಯಾವ ಪೂಜಾ ಕರಣಗಳ ಅವಶ್ಯಕತೆಯೂ ಇಲ್ಲ. ಇಲ್ಲಿ ನಮ್ಮೊಳಗಿನ ಇಂದ್ರಿಯಗಳೇ ಪೂಜಾಕರಣಗಳು, ನಮ್ಮ ಉಚ್ವಾಸ-ನಿಚ್ವಾಸವೇ ಮಂತ್ರಗಳು, ನಮ್ಮ ಹೃದಯ ಕಮಲವೇ ಹೂವು, ಅಂತರಂಗದಲ್ಲಿ ಜಪಿಸುವ ನಾಮ ಸ್ಮರಣೆಯೇ ಆರತಿ. ನಮ್ಮ ದೇಹವನ್ನೇ ಶಿವಾಲಯವಾಗಿಸಿ ಹೀಗೆ ಅಂತರಂಗದಲ್ಲಿ ಶಿವನನ್ನು ಪೂಜಿಸುವ ಕ್ರಿಯೆಯೇ “ಮಾನಸ ಪೂಜೆ”. ಇಲ್ಲಿ ಆವಾಹನೆ, ವಿಸರ್ಜನೆ ಯಾವುದೂ ಇಲ್ಲ. ಸಂಪೂರ್ಣ ಶರಣಾಗತಿ ಮತ್ತು ಸಮರ್ಪಣೆ ಮಾತ್ರವೇ ಇರುತ್ತದೆ. ಮಾನಸಪೂಜೆ ನಮ್ಮಂತರಂಗವನ್ನು ಶುದ್ಧಿಯಾಗಿಸುತ್ತದೆ. ಅಂತರಂಗ ಪರಿಶುದ್ಧವಾದಾಗಲೇ ಭಕ್ತಿಯ ಪರಾಕಾಷ್ಠೆ ತಲುಪುವುದು ಮತ್ತು ಭಕ್ತಿಯ ಅಭಿವ್ಯಕ್ತಿಯಾಗುವುದು.

ಶ್ರೀ ಶಂಕರರು "ಶಿವ ಮಾನಸ ಪೂಜಾ" ಎಂಬ ರಚನೆಯಲ್ಲಿ

"ಆತ್ಮಾ ತ್ವಂ ಗಿರಿಜಾ ಮತಿ: ಸಹಚರಾಃ ಪ್ರಾಣಾಃ ಶರೀರಂ ಗೃಹಂ

ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿ: |

ಸಂಚಾರಃ ಪದಯೋ: ಪ್ರದಕ್ಷಿಣವಿಧಿ: ಸ್ತೋತ್ರಾಣಿ ಸರ್ವಾಗಿರೋ

ಯದ್ಯತ್ ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್ ||

ನಮ್ಮ ಶರೀರವನ್ನೇ ಆಲಯವನ್ನಾಗಿಸಿ, ನಮ್ಮ ಸಂಚಾರವನ್ನು ಪ್ರದಕ್ಷಿಣೆಯಾಗಿಸಿ, ನಿದ್ರೆಯನ್ನು ಸಮಾಧಿ ಸ್ಥಿತಿ, ನಾನು ಮಾಡುವ ಪ್ರತಿ ಕೆಲಸವೂ ನಿನ್ನ ಪೂಜೆ, ನಾನು ಆಡುವ ಒಂದೊಂದು ಮಾತೂ ನಿನ್ನ ಸ್ತುತಿ ಎಂದು ವಿವರಿಸುತ್ತಾ ನಮ್ಮ ಮನಸ್ಸನ್ನು ಹೇಗೆ ಶಿವನಲ್ಲಿ ಲೀನವಾಗಿಸಿ ಮಾನಸ ಪೂಜೆಯನ್ನು ಮಾಡಬೇಕೆಂದು ತಿಳಿಸುತ್ತಾರೆ.

“ಶಿವಾನಂದಲಹರಿ”ಯಲ್ಲಿ ಮನಸ್ಸನ್ನು ಶಿವನಲ್ಲಿ ಲೀನವಾಗಿಸುವ ಅನೇಕ ಮಾರ್ಗಗಳನ್ನೂ, ಮಹತ್ವವನ್ನೂ ಭಗವತ್ಪಾದ ಶ್ರೀ ಶಂಕರರು ವಿವರಿಸುತ್ತಾರೆ :

ಮನಸ್ತೇ ಪಾದಾಬ್ಜೇ ನಿವಸತು ವಚ:ಸ್ತೋತ್ರ ಫಣಿತೌ

ಕರೌ ಚಾಭ್ಯರ್ಚಾಯಾಂ ಶ್ರುತಿರಪಿ ಕಥಾಕರ್ಣನವಿಧೌ |

ತವ ಧ್ಯಾನೇ ಬುದ್ಧಿರ್ನಯನಯುಗಲಂ ಮೂರ್ತಿವಿಭವೇ

ಪರಗ್ರಂಥಾನ್ ಕೈರ್ವಾ ಪರಮಶಿವ ಜಾನೇ ಪರಮತ: ||

ನಮ್ಮೆಲ್ಲಾ ಇಂದ್ರಿಯಗಳೂ ವಿಷಯಾಸಕ್ತಿಗಳಲ್ಲಿ ಅಂಟಿಕೊಂಡು ತೊಳಲಾಡುತ್ತವೆ. ಪರಮಾತ್ಮನಿಂದ ವಿಮುಖವಾಗಿ ಬಿಡುತ್ತವೆ. ಆದ್ದರಿಂದ ಹೇ ಪರಮೇಶ್ವರ ನನ್ನ ಮನಸ್ಸು ನಿನ್ನ ಪಾದ ಕಮಲಗಳಲ್ಲಿ ನೆಲೆಸುವಂತೆ ಮಾಡು. ಆಡುವ ಮಾತುಗಳೆಲ್ಲಾ ನಿನ್ನನ್ನು ಸ್ತೋತ್ರ ಮಾಡುವ ಮಾತುಗಳೆ ಆಗಿರಲಿ, ನನ್ನೆರಡು ಕೈಗಳು ಸದಾ ನಿನ್ನನ್ನು ಅರ್ಚಿಸುತ್ತಲೇ ಇರಲಿ, ಕಿವಿಗಳು ನಿನ್ನ ಕಥೆಗಳನ್ನೂ, ಮಹಿಮೆಗಳನ್ನೂ ಕೇಳುತ್ತಲೇ ಇರಲಿ, ಬುದ್ಧಿಯ ಸದಾ ನಿನ್ನ ಧ್ಯಾನದಲ್ಲಿರಲಿ, ಕಣ್ಣುಗಳೆರಡೂ ಸರ್ವದಾ ಸದಾ ನಿನ್ನ ಭವ್ಯ ಮೂರ್ತಿಯನ್ನು ಕಾಣುತ್ತಾ ಸುಖಿಸಲಿ ಎಂದು ಹೇಳುತ್ತಾರೆ. ಹೀಗೆ ಎಲ್ಲಾ ಇಂದ್ರಿಯಗಳೂ ಸದಾ ತಮ್ಮ ಧ್ಯಾನ, ಕೆಲಸಗಳನ್ನು ಮಾಡುತ್ತಿರುವಾಗ, ಗಮನ ಬೇರೆ ಯಾವ ವಿಷಯಾಸಕ್ತಿಗಳ ಕಡೆಗೂ ತಿರುಗಲೂ ಸಾಧ್ಯವಾಗುವುದೇ ಇಲ್ಲ.

ಗಭೀರೇ ಕಾಸಾರೇ ವಿಶತಿ ವಿಜನೇ ಘೋರವಿಪಿನೇ

ವಿಶಾಲೇ ಶೈಲೇ ಭ್ರಮತಿ ಕುಸುಮಾರ್ಥಂ ಜಡಮತಿ: |

ಸಮರ್ಪೈಕಂ ಚೇತ:ಸರಸಿಜಮುಮಾನಾಥ ಭವತೇ

ಸುಖೇನೈವಸ್ಥಾತುಂ ಜನ ಇಹ ನ ಜಾನಾತಿ ಕಿಮಹೋ ||

ಈಶ್ವರನ ಪೂಜೆ ಮಾಡಲು ನಾವು ಬೆಟ್ಟ, ಗುಡ್ಡಗಳಲ್ಲಿ ಅಲೆದು, ಸುಂದರವಾದ ಪುಷ್ಪಗಳನ್ನು ಹುಡುಕಿ ತರುತ್ತೇವೆ. ಆಳವನ್ನು ಲೆಕ್ಕಿಸದೆ ಸರೋವರಗಳಲ್ಲಿ ಇಳಿದು ಕಷ್ಟ ಪಡುತ್ತೇವೆ, ನಿರ್ಜನ ಕಾಡಿನಲ್ಲಿ ಅಪರೂಪದ ಹೂವುಗಳನ್ನು ಹುಡುಕಲು ಅಲೆಯುತ್ತೇವೆ. ಎಷ್ಟೆಲ್ಲಾ ಕಷ್ಟ ಪಟ್ಟು ಬಾಹ್ಯ ವಸ್ತುಗಳನ್ನು ಸಂಗ್ರಹಿಸಿ ಶಿವನಿಗೆ ಅರ್ಪಿಸುವುದರಲ್ಲೇ ಮಗ್ನರಾಗಿರುವ ನಾವು ಹೀಗೆ ಯಾವ ಕಷ್ಟವನ್ನೂ ಪಡದೆ, ಸುಲಭವಾಗಿ ಇರುವಲ್ಲೇ ಇದ್ದು, ನಮ್ಮ ಅಂತರಂಗದಲ್ಲಿ ಅರಳಿರುವ ಮನಸ್ಸೆಂಬ ಹೂವನ್ನು ನಿನಗೆ ಅರ್ಪಿಸಿದರೆ ಸಾಕು ಎಂಬುದನ್ನು ತಿಳಿಯದೇ ಮೂಢರಾಗಿದ್ದೇವಲ್ಲಾ..?

ಗುಹಾಯಾಂ ಗೇಹೇ ವಾ ಬಹಿರಪಿ ವನೇ ವಾದ್ರಿಶಿಖರೇ

ಜಲೇ ವಾ ವಹ್ನೌ ವಾ ವಸತು ವಸತೇ: ಕಿಂ ವದ ಫಲಮ್ |

ಸದಾ ಯಸ್ಯೈವಾಂತ:ಕರಣಮಪಿ ಶಂಭೋ ತವ ಪದೇ

ಸ್ಥಿತಂ ಚೇದ್ಯೋಗೋSಸೌ ಸ ಚ ಪರಮಯೋಗೀ ಸ ಚ ಸುಖೀ ||

ನಾವು ಈ ಭೌತಿಕ ದೇಹ ಧರಿಸಿ, ಜನಿಸಿರುವುದೇ ಆಧ್ಯಾತ್ಮದ ಹಾದಿಯಲ್ಲಿ ಸಾಧನೆ ಮಾಡಲೆಂದು. ಆದ್ದರಿಂದ ನಾವು ಎಲ್ಲಿ ವಾಸಿಸುತ್ತೇವೆ, ಗವಿಯಲ್ಲೋ, ಮನೆಯಲ್ಲೋ, ಹೊರಗಡೆಯೋ, ಕಾಡಿನಲ್ಲೋ, ನಾಡಿನಲ್ಲೋ, ಪರ್ವತದ ತುದಿಯಲ್ಲೋ, ನೀರಿನಲ್ಲೋ, ಬೆಂಕಿಯಲ್ಲೋ ಎಂಬುದು ಮುಖ್ಯವಾಗುವುದಿಲ್ಲ. ಎಲ್ಲಾದರೂ ನೆಲೆಸಿರಲಿ, ಹೇಗಾದರೂ ವಾಸ ಮಾಡುತ್ತಿರಲಿ ಅದರಿಂದ ಏನೂ ಉಪಯೋಗವಿಲ್ಲ. ಬಾಹ್ಯ ವಾಸ್ತವ್ಯದ ಬಗ್ಗೆ ಹೆಚ್ಚು ಚಿಂತಿಸುತ್ತಾ, ಮನಸ್ಸನ್ನು ಅದರಲ್ಲಿಯೇ ಮುಳುಗಿಸುವುದಕ್ಕಿಂತ, ನಿನ್ನ ಪದತಲದಲ್ಲಿ ಮನಸ್ಸು ಲೀನವಾಗಿಸಿಕೊಂಡವರು ಮಾತ್ರ ನಿಜ ಅರ್ಥದಲ್ಲಿ ಸುಖಿಗಳಾಗುತ್ತಾರೆ ಮತ್ತು ಸಾಧನೆಯ ಪಥದಲ್ಲಿ ಮುಂದುವರೆಯುತ್ತಾರೆ. ಅಂದರೆ ಇಲ್ಲಿ ಮನಸ್ಸು ಬೇರೆಯ ಬೇಡದ ವಿಚಾರಗಳಲ್ಲಿ ವಿಕ್ಷೇಪಗೊಳ್ಳದೆ, ನಿನ್ನ ಪದತಲದಲ್ಲಿ ಸದಾ ನೆಲೆಸಿರಬೇಕು ಎನ್ನುವುದು ಇಲ್ಲಿ ಮುಖ್ಯವಾದ ಅಂಶ.

ಪ್ರಲೋಭಾದ್ಯೈರರ್ಥಾಹರಣಪರತಂತ್ರೋ ಧನಿಗೃಹೇ

ಪ್ರವೇಶೋದ್ಯುಕ್ತ: ಸನ್ ಭ್ರಮತಿ ಬಹುಧಾ ತಸ್ಕರಪತೇ |

ಇಮಂ ಚೇತಶ್ಚೋರಂ ಕಥಮಿಹ ಸಹೇ ಶಂಕರ ವಿಭೋ

ತವಾಧೀನಂ ಕೃತ್ವಾಮಯಿ ನಿರಪರಾಧೇ ಕುರು ಕೃಪಾಮ್ ||

ಇಲ್ಲಿ ಆಚಾರ್ಯರು ಮನಸ್ಸನ್ನು ಕಳ್ಳನೆಂದಿದ್ದಾರೆ. ಚಿತ್ತ ಚೋರನು ಕಂಡ ಕಂಡೆಯೆಲ್ಲಾ ಅಲೆಯುತ್ತಾ, ವಿಷಯಾಸಕ್ತಿಗಳನ್ನು ಬೆಳೆಸಿಕೊಳ್ಳುತ್ತಾ, ಆ ಆಸೆಗಳನ್ನು ಈಡೇರಿಸಿಕೊಳ್ಳಲು ವ್ಯರ್ಥವಾಗಿ ತನ್ನ ತನು, ಮನವನ್ನು ದಂಡಿಸುತ್ತಾ ಕ್ಷೋಭೆಗೊಳ್ಳುತ್ತಿದ್ದಾನೆ. ಆದ್ದರಿಂದ ಈ ಚಿತ್ತಚೋರನನ್ನು ನೀನು ಕೃಪೆಮಾಡಿ ನಿನ್ನ ವಶಮಾಡಿಕೊಂಡು ಬಿಡು, ನನಗೆ ಬೇರಿನ್ನೇನೂ ಬೇಡ, ನನ್ನ ಮೇಲೆ ಕೃಪೆ ತೋರು ಎಂದು ಕೇಳಿಕೊಳ್ಳುತ್ತಾರೆ.

ಕರಸ್ಥೇ ಹೇಮಾದ್ರೌ ಗಿರಿಶ ನಿಕಟಸ್ಥೇ ಧನಪತೌ

ಗೃಹಸ್ಥೇ ಸ್ವರ್ಭೂಜಾಮರಸುರಭಿಚಿಂತಾಮಣಿಗಣೇ |

ಶಿರಸ್ಥೇ ಶೀತಾಂಶೌ ಚರಣಯುಗಲಸ್ಥೇSಖಿಲಶುಭೇ

ಕಮರ್ಥಂ ದಾಸ್ಯೇSಹಂ ಭವತು ಭವದರ್ಥಂ ಮಮ ಮನ: ||

ನಾವು ಪರಮೇಶ್ವರನಿಗೆ ಏನನ್ನು ತಾನೇ ಕೊಡಬಲ್ಲೆವು ? ಕೊಟ್ಟರೆ ಕೂಡ ಅದರಿಂದ ಭಗವಂತನಿಗೇನು ಉಪಯೋಗ ? ಚಿನ್ನದ ಪರ್ವತದಲ್ಲಿ ನೆಲೆಸಿರುವ, ಚಂದ್ರನನ್ನೂ, ಗಂಗೆಯನ್ನೂ ಮುಡಿಯಲ್ಲಿ ಧರಿಸಿರುವ, “ಶಿವ”ನೆಂದರೆ ಸ್ವತ: ತಾನೇ ಮಂಗಳನೆನಿಸಿಕೊಂಡಿರುವವನಿಗೆ ಏನೂ ಬೇಡ. ಭಕ್ತರಿಂದ ಭಗವಂತ ಬಯಸುವುದೆಲ್ಲಾ ಶುದ್ಧ ಭಕ್ತಿ ಮಾತ್ರವೇ ಮತ್ತು ಮನೋನಿಯಾಮಕನಾದ ಈಶ್ವರನಿಗೆ ಅತ್ಯಂತ ಪ್ರಿಯವಾದದ್ದು ನಾವು ಕೊಡಬಹುದೆಂದರೆ ಅದು ನಮ್ಮ ಮನಸ್ಸು ಮಾತ್ರ. ಅದನ್ನು ಸಮರ್ಪಿಸಿದಾಗ ಮಾತ್ರವೇ ಮಹಾದೇವನ ಕೃಪಾದೃಷ್ಟಿಗೆ ನಾವು ಪಾತ್ರರಾಗಬಹುದು.

ಮಾ ಗಚ್ಛ ತ್ವಮಿತಸ್ತತೋ ಗಿರಿಶ ಭೋ ಮಯ್ಯೇವ ವಾಸಂ ಕುರು

ಸ್ವಾಮಿನ್ನಾದಿಕಿರಾತ, ಮಾಮಕಮನ:ಕಾಂತಾರಸೀಮಾಂತರೇ |

ವರ್ತಂತೇ ಬಹುಶೋ ಮೃಗಾ ಮದಜುಷೋ ಮಾತ್ಸರ್ಯಮೋಹಾದಯ

ಸ್ತಾನ್ ಹತ್ವಾ ಮೃಗಯಾವಿನೋದರುಚಿತಾಲಾಭಂ ಚ ಸಂಪ್ರಾಪ್ಸ್ಯಸಿ ||

ಓ ಸ್ವಾಮಿಯೇ, ಗಿರೀಶನೇ, ಆದಿ ಕಿರಾತಕನೇ ನನ್ನ ಮನಸ್ಸೆಂಬ ಅರಣ್ಯದಲ್ಲಿ ಮದ, ಮಾತ್ಸರ್ಯ, ಮೋಹವೆಂಬ ಅನೇಕ ಕ್ರೂರ ಪ್ರಾಣಿಗಳಿವೆ. ನೀನು ಅವುಗಳನ್ನು ಬೇಟೆಯಾಡುತ್ತಾ ವಿನೋದವನ್ನು ಹೊಂದು ಮತ್ತು ನನ್ನ ಮನಸ್ಸನ್ನು ನೀನು ನೆಲೆಸುವ ಸ್ಥಳವನ್ನಾಗಿ ಮಾಡಿಕೋ. ಅಲ್ಲೇ ವಾಸಿಸ್ಸುತ್ತಾ ನನ್ನನ್ನು ಉದ್ಧರಿಸು, ಕೃಪೆ ತೋರು.

ಶಂಭುದ್ಯಾನವಸಂತಸಂಗಿನಿ ಹೃದಾರಾಮೇSಘಜೀರ್ಣಚ್ಛದಾ:

ಸ್ರಸ್ತಾ ಭಕ್ತಿಲತಾಚ್ಛಟಾ ವಿಲಸಿತಾ: ಪುಣ್ಯಪ್ರವಾಲಶ್ರಿತಾ: |

ದೀಪ್ಯಂತೇ ಗುಣಕೋರಕಾ ಜಪವಚ:ಪುಷ್ಪಾಣಿ ಸದ್ವಾಸನಾ

ಜ್ಞಾನಾನಂದಸುಧಾಮರಂದಲಹರೀ ಸಂವಿತ್ಫಲಾಭ್ಯುನ್ನತಿ: ||

ಶಂಭುವಿನ ಧ್ಯಾನ ಮಾಡುವ ಹೃದಯವೆಂಬ ಉದ್ಯಾನವನದಲ್ಲಿ ಪಾಪವೆಂಬ ತರಗೆಲೆಗಳು ಉದುರಿ ಬೀಳುತ್ತವೆ. ಭಕ್ತಿಯೆಂಬ ಬಳ್ಳಿಗಳ ಸಮೂಹಗಳು ಹಬ್ಬುತ್ತವೆ. ಪುಣ್ಯವೆಂಬ ಚಿಗುರುಗಳ ಮಧ್ಯದಲ್ಲಿರುವ, ಸದ್ಗುಣಗಳೆಂಬ ಮೊಗ್ಗುಗಳು, ಜಪವಾಕುಗಳೆಂಬ ಸುವಾಸನೆಯ ಹೂಗಳು ಅರ್ಳಿವೆ. ಜ್ಞಾನಾನಂದವೆಂಬ ಮಕರಂದದ ಪ್ರವಾಹವೂ ಸಾಕ್ಷಾತ್ಕಾರವೆಂಬ ಫಲದ ಅಭಿವೃದ್ಧಿಯೂ ಉಂಟಾಗುತ್ತದೆ. ಆದ್ದರಿಂದ ನನ್ನ ಮನಸ್ಸನ್ನು ನಿನ್ನ ಧ್ಯಾನದಲ್ಲಿ ನಿಲ್ಲಿಸು ಎಂದು ಪ್ರಾರ್ಥಿಸುತ್ತಾರೆ.

ನಿತ್ಯಾನಂದರಸಾಲಯಂ ಸುರಮುನಿಸ್ವಾಂತಾಂಬುಜಾತಾಶ್ರಯಂ

ಸ್ವಚ್ಛಂ ಸದ್ದ್ವಿಜಸೇವಿತಂ ಕಲುಷಹೃತ್ಸದ್ವಾಸನಾವಿಷ್ಕೃತಮ್ |

ಶಂಭುಧ್ಯಾನಸರೋವರಂ ಬ್ರಜ ಮನೋಹಂಸಾವತಂಸ ಸ್ಥಿರಂ

ಕಿಂ ಕ್ಷುದ್ರಾಶ್ರಯಪಲ್ವಲಭ್ರಮಣಸಂಜಾತಶ್ರಮಂ ಪ್ರಾಪ್ಸ್ಯಸಿ ||

ಇಲ್ಲಿ ನಮ್ಮ ಮನಸ್ಸಿಗೆ ನಾವೇ ಒಂದು ಉಪದೇಶದ ಮಾತು ಹೇಳುವಂತೆ ಇದೆ. ಮನಸ್ಸನ್ನು “ಹಂಸ ಶ್ರೇಷ್ಠ” ಎಂದು ಕರೆಯುತ್ತಾ ಶಂಭು ಧ್ಯಾನವೆಂಬ ತಿಳಿನೀರ ಸರೋವರದಲ್ಲಿ ಸ್ಥಿರವಾಗಿ ನೆಲೆಸು. ಈ ಸರೋವರವು ಮುನಿಗಳ ಹೃದಯ ಕಮಲಗಳಿಗೆ ಆಶ್ರಿತವಾಗಿದೆ, ಸ್ವಚ್ಛವೂ ಸಜ್ಜನರೂ ಎಂಬ ಪಕ್ಷಿಗಳಿಂದ ಸೇವಿತವಾಗಿರುವುದು, ಪಾಪ ಪರಿಹಾರಕವಾದ ಸುವಾಸನೆಯಿಂದ ಕೂಡಿರುವುದು ಎಂದಿದ್ದಾರೆ.

ಆಶಾಪಾಶ ಕ್ಲೇಶದುರ್ವಾಸನಾದಿ –

ಭೇದೋದ್ಯುಕ್ತೈರ್ದಿವ್ಯಗಂಧೈರಮಂದೈ: |

ಆಶಾಶಾಟೀಕಸ್ಯ ಪಾದಾರವಿಂದಂ

ಚೇತ:ಪೇಟೀಂ ವಾಸಿತಾಂ ಮೇ ತನೋತು ||

ಮನಸ್ಸನ್ನು ಪೆಟ್ಟಿಗೆಗೆ ಹೋಲಿಸುತ್ತಾ, ಶಿವನ ಪಾದಕಮಲವು ಪೆಟ್ಟಿಗೆಯಲ್ಲಿ ನೆಲೆಸಿದರೆ ಮನಸ್ಸೆಂಬ ಪೆಟ್ಟಿಗೆಯು ದಿವ್ಯ ಪರಿಮಳದಿಂದ ಕೂಡಿರುತ್ತದೆ. ದಿವ್ಯ ಪರಿಮಳವು, ಆಶಾ ಪಾಶವನ್ನು, ಪಂಚ ವಿಧ ದು:ಖಗಳಾದ ಅವಿದ್ಯಾ, ಅಸ್ಮಿತ, ರಾಗ, ದ್ವೇಷ, ಅಭಿನಿವೇಶಗಳನ್ನು ನಾಶಮಾಡುತ್ತದೆ ಎಂಬ ಭಕ್ತಿ, ನಂಬಿಕೆಯಿಂದ ಪೆಟ್ಟಿಗೆಯಲ್ಲಿ ನೆಲೆಸು ಬಾ ಎಂದು ಶಂಕರನನ್ನು ಪ್ರಾರ್ಥಿಸಬೇಕು.

ಕಲ್ಯಾಣಿನಂ ಸರಸಚಿತ್ರಗತಿಂ ಸವೇಗಂ

ಸರ್ವೇಂಗಿತಜ್ಞಮನಘಂ ಧ್ರುವಲಕ್ಷಣಾಢ್ಯಮ್ |

ಚೇತಸ್ತುರಂಗಮಧಿರುಹ್ಯ ಚರ ಸ್ಮರಾರೇ

ನೇತ: ಸಮಸ್ತಜಗತಾಂ ವೃಷಭಾಧಿರೂಢ ||

ಭಕ್ತನು ತನ್ನ ಮನಸ್ಸನ್ನು ಕುದುರೆಗೆ ಹೋಲಿಸುತ್ತಾ ಪರಮೇಶ್ವರನನ್ನು ಕುದುರೆಯ ಸಂಚಾರ ಮಾಡುವಂತೆ ಪ್ರಾರ್ಥಿಸುವುದು. ನನ್ನ ಮನಸ್ಸೆಂಬ ಕುದುರೆ ಉತ್ತಮ ರೀತಿಯದ್ದು, ವೇಗವಾಗಿ ಸಾಗುವಂತಹುದು, ಎಲ್ಲವನ್ನೂ ತಿಳಿಯಬಲ್ಲದು, ದೋಷರಹಿತವಾಗಿರುವುದು, ಸ್ಥಿರವಾಗಿರುವುದು. ಆದ್ದರಿಂದ ಮಂದಗತಿಯಾದ ವೃಷಭನನ್ನು ಬಿಟ್ಟು ವೇಗವಾಗಿ ಸಾಗುವ ನನ್ನ ಮನಸ್ಸೆಂಬ ಕುದುರೆಯ ಸಂಚಾರ ಮಾಡು. ನನ್ನನ್ನು ಉದ್ಧರಿಸು. ಹೀಗೆ ನನ್ನ ಮನಸ್ಸು ಸದಾ ನಿನ್ನ ಧ್ಯಾನದಲ್ಲಿಯೇ ಮುಳುಗಿರುವಂತೆ ಮಾಡು ಎಂದು ಪ್ರಾರ್ಥಿಸುವುದನ್ನು ತಿಳಿಸಿದ್ದಾರೆ.

ಸಾ ರಸನಾ ತೇ ನಯನೇ

ತಾವೇವ ಕರೌ ಸ ಏವ ಕೃತಕೃತ್ಯ: |

ಯಾ ಯೇ ಯೌ ಯೋ ಭರ್ಗಂ

ವರತೀಕ್ಷೇತೇ ಸದಾರ್ಚತ: ಸ್ಮರತಿ ||

ಇಲ್ಲಿ ಆಚಾರ್ಯರು ನಮ್ಮ ಇಂದ್ರಿಯಗಳು ಸದಾ ಬಹಿರ್ಮುಖವಾಗಿ, ಆಸೆಗಳನ್ನೂ, ಪಾಶಗಳನ್ನೂ ಬೆಳೆಸಿಕೊಳ್ಳುತ್ತಿದ್ದರೆ ಅವು ಅಶಾಂತಿ ಮತ್ತು ಅತೃಪ್ತಿಯಿಂದ ತಲ್ಲಣಿಸುವುವು. ಆದ್ದರಿಂದ ಲೌಕಿಕ ವಿಚಾರಗಳನ್ನು ಬಿಟ್ಟು ನಮ್ಮ ಇಂದ್ರಿಯಗಳನ್ನು ಒಳಮುಖವಾಗಿಸಿದಾಗ, ಮಹಾದೇವನ ಪಾದಗಳಲ್ಲಿ ನೆಲೆಸಿದಾಗ, ಜೀವನ ಸಾರ್ಥಕ್ಯವಾಗುವುದು ಎಂದಿದ್ದಾರೆ.

ಅತಿಮೃದುಲೌ ಮಮ ಚರಣಾ –

ವತಿಕಠಿನಂ ತೇ ಮನೋ ಭವಾನೀಶ |

ಇತಿ ವಿಚಿಕಿತ್ಸಾಂ ಸಂತ್ಯಜ

ಶಿವ ಕಥಮಾಸೀದ್ ಗಿರೌ ತಥಾವೇಶ: ||

ದಯಾಮಯಿ ಶಂಕರನೇ ನನ್ನ ಮನಸ್ಸು ತುಂಬಾ ಕಠಿಣವಾಗಿದೆ, ಕಠೋರವಾಗಿದೆ ನಿನ್ನ ಪಾದಗಳನ್ನು ಹೇಗೆ ಊರಲಿ ಎಂದು ಸಂಶಯಿಸಬೇಡ ತಂದೇ ! ನೀನು ಕಲ್ಲು ಮುಳ್ಳುಗಳನ್ನು ಲೆಕ್ಕಿಸದೆ ಬೆಟ್ಟಗಳಲ್ಲಿ ನಾಟ್ಯವಾಡುವವನು, ನನ್ನ ಮನಸ್ಸೂ ನಿನ್ನ ಪಾದ ಸ್ಪರ್ಶದಿಂದ ಮೃದುವಾಗುವುದು, ಆದ್ದರಿಂದ ನನ್ನ ಮನಸ್ಸಿನಲ್ಲಿಯೂ ನಿನ್ನ ಪಾದಗಳನ್ನೂರಿ ಸಂಚರಿಸು ಎಂದು ಪ್ರಾರ್ಥಿಸಬೇಕು.

ಧೈರ್ಯಾಂಕುಶೇನ ನಿಭೃತಂ

ತಭಸಾದಾಕೃಷ್ಯ ಭಕ್ತಿಶೃಂಖಲಯಾ |

ಪುರಹರ ಚರಣಾಲಾನೇ

ಹೃದಯಮದೇಭಂ ಬಧಾನ ಚಿದ್ಯಂತ್ರೈ: ||

ತ್ರಿಪುರಾಂತಕನೇ.. ನನ್ನ ಮನಸ್ಸು ಮದ್ದಾನೆಯಂತೆ ಅಲೆಯುತ್ತಿದೆ. ದಯವಿಟ್ಟು ನನ್ನಲ್ಲಿ ಕೃಪೆಮಾಡಿ ಮದ್ದಾನೆಯನ್ನು ಧೈರ್ಯವೆಂಬ ಅಂಕುಶದಿಂದ ಶಾಂತಗೊಳಿಸಿ, ಭಕ್ತಿಯೆಂಬ ಸರಪಳಿಯಿಂದ ಬಲವಾಗಿ ಎಳೆದು ನಿನ್ನ ಪಾದವೆಂಬ ಕಂಬಕ್ಕೆ ಕಟ್ಟಿಹಾಕು. ನನ್ನ ಮನಸ್ಸು ಅಲ್ಲೇ ಶಾಶ್ವತವಾಗಿ ನೆಲೆಸುವಂತ ಮಾಡು ಎಂದು ನಮ್ಮ ಭಕ್ತಿಯನ್ನು ಶಿವನಲ್ಲಿ ನಿವೇದಿಸಿಕೊಳ್ಳಬೇಕು.

ಹೀಗೆ ಶ್ರೀ ಶಂಕರಾಚಾರ್ಯರು ತಮ್ಮ ಉತ್ಕೃಷ್ಟ ರಚನೆಯಾದ “ ಶಿವಾನಂದಲಹರಿ ” ಯಲ್ಲಿ ಶಿವನನ್ನು ಮಾನಸಿಕವಾಗಿ ಹೇಗೆ ಸೇವಿಸಬಹುದೆಂಬುದನ್ನು ವರ್ಣಿಸಿದ್ದಾರೆ. ಮಂಗಳಕರನಾದ “ಶಿವ”ನನ್ನೊಲಿಸಿಕೊಳ್ಳಲು ಯಾವ ಪೂಜಾ ಸಾಧನಗಳೂ ಬೇಕಾಗಿಲ್ಲ, ನಮ್ಮ ಮನಸ್ಸನ್ನರ್ಪಿಸಿಕೊಳ್ಳುವುದೊಂದೇ ಸಾಕೆಂದು ಸಾರಿದ್ದಾರೆ.


ಅಧಾರ : ಶಿವಾನಂದಲಹರಿ -

ವೇದಾಂತ ಭಾರತಿ ಪ್ರಕಾಶನ




Saturday, February 18, 2012

ಶಿವರಾತ್ರಿ....


ಮಹಾಶಿವರಾತ್ರಿ ಹಿಂದೂ ಸಂಸ್ಕೃತಿಯ ಎಲ್ಲಾ ಜನಾಂಗದವರಿಗೂ ಅತ್ಯಂತ ಪವಿತ್ರವಾದ ಹಬ್ಬ ಮತ್ತು ಶಿವಭಕ್ತರಿಗೆ ಬಹು ಪ್ರಿಯವಾದದ್ದು. ಶಿವನು ಮನೋನಿಯಾಮಕನಾದ್ದರಿಂದ ಈ ಶಿವರಾತ್ರಿ ಸಾಧಕರಿಗೆ ಕೂಡ ಮುಖ್ಯವಾದ ದಿನ. "ಶಿವ"ನೆಂದರೆ ಮಂಗಳವೆಂದೇ ಅರ್ಥ. ಶಿವ ಧ್ಯಾನ ಮಾಡುವವರ ಮನಸ್ಸನ್ನು ನಿಯಂತ್ರಿಸುವವನು ಈಶ್ವರ. ರುದ್ರ, ವಾಮದೇವ, ಶಂಕರ, ಉಮಾಮಹೇಶ್ವರ, ಚದುರಗಹಾರ, ಮೃಗಧರ, ಪಶುಪತಿ ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಡುವ ಶಿವನದು ಅತ್ಯಂತ ಉನ್ನತವಾದ ಭಾವವು ಮತ್ತು ಎಲ್ಲಾ ಕಾಮನೆಗಳನ್ನೂ ತ್ಯಜಿಸಿದವನು ಶಿವನು. ಉಪನಿಷತ್ತಿನಲ್ಲಿ "ಶರೀರಪುರುಷ" ಎಂದು ಕರೆಯಲ್ಪಡುವ ಶಿವನಿಗೆ ನಮ್ಮ ಶರೀರವೇ ಬಟ್ಟೆ. ಶರೀರ ಬಿದ್ದು ಹೋದಾಗ ಅವನು ದಿಗಂಬರ. ಮುಟ್ಟಿದರೆ ಕಣ್ಣೀರು ಬರಿಸುವುದು ಪಂಚಭೂತಗಳಲ್ಲಿ ಒಂದಾದ ಅಗ್ನಿ ಮತ್ತು ಶಿವ ಅಗ್ನಿಯೂ ಆಗುತ್ತಾನೆ. ಇವನು ಅಹಂಕಾರಕ್ಕೆ ಅಧಿಪತಿಯಾದ ದೇವತೆ. "ರುದ್ರ" ಎಂಬ ಪದವನ್ನು ಬಿಡಿಸಿದಾಗ ರುಕ್+ದ್ರಾ ಎಂದಾಗುತ್ತದೆ. ರುಕ್ ಎಂದರೆ ಭವರೋಗ ಮತ್ತು ದ್ರಾ ಎಂದರೆ ನಾಶಕ ಅಥವಾ ಪಾರುಮಾಡುವವನು ಎಂದರ್ಥ. ಆದ್ದರಿಂದಲೇ ತನಗೆ ಶರಣಾಗಿ ಬಂದವರನ್ನು ಭವ ಸಾಗರದ ಬಂಧನಗಳಿಂದ ಬಿಡಿಸುವವನು ಶಿವನು, ಮೋಕ್ಷದ ಮಾರ್ಗ ತೋರಿಸುವವನು ಎಂದಿದ್ದಾರೆ. ಇಂತಹ ಶಿವನನ್ನು ಭಕ್ತಿಯಿಂದ, ಶ್ರದ್ಧೆಯಿಂದ ಪೂಜಿಸುವ, ಆರಾಧಿಸುವ ದಿನವೇ ಶಿವರಾತ್ರಿ. ಶಿವರಾತ್ರಿ ಎಂದರೆ, ಉಪವಾಸ, ಜಾಗರಣೆಯ ಆಚರಣೆ. "ಉಪ" ಎಂದರೆ ಸಮೀಪದಲ್ಲಿ - ಭಗ ವಂತನ ಸನಿಹದಲ್ಲಿ ವಾಸಿಸುವುದು ಮತ್ತು "ಜಾಗರಣೆ" ಎಂದರೆ ಜಾಗೃತಾವಸ್ಥೆ. ಆಹಾರ ಸೇವಿಸ ದೇ ಇರುವುದೇ ಉಪವಾಸವೆಂದಲ್ಲ, ಹಾಗಾದರೆ ಅದು ಬರಿಯ ಭೌತಿಕ ದೇಹಕ್ಕೆ ಉಪವಾಸವಾದಂತೆ . ಇಂದ್ರಿಯಗಳ ನಿಗ್ರಹ ಮಾಡಿ, ಶಿವನ ಧ್ಯಾನ ಮಾಡುತ್ತಾ, ಮನಸ್ಸನ್ನು ಶಿವತತ್ವದಲ್ಲಿ ಲೀನಗೊಳಿಸುವುದೇ ಉಪವಾಸ. ಅಜ್ಞಾನದ ಕತ್ತಲಲ್ಲಿ ನಿದ್ರಿಸದೆ ಶಿವನ ಧ್ಯಾನವನ್ನು ಮಾಡುತ್ತಾ ಜ್ಞಾನದ ಬೆಳಕಿನೆಡೆಗೆ ಹೆಜ್ಜೆ ಹಾಕು ಎಂಬುದೇ ಜಾಗರಣೆ ಯ ತತ್ವ. ಜಾಗರಣೆ ಎಂದರೆ ಜ್ಞಾನ ದೃಷ್ಟಿಯ ಯಾಚನೆ. ಅಂತ್ಯವಿಲ್ಲದ ಹುಟ್ಟು-ಸಾವುಗಳ ನಡುವೆ ಜರ್ಝರಿತನಾಗಿರುವ ನನಗೆ ಜ್ಞಾನದೃಷ್ಟಿಯನ್ನು ಕೊಟ್ಟು ಉದ್ಧರಿಸು ಎಂಬ ಯಾಚನೆ. ಭಕ್ ತಿಯಿಂದ, ಶ್ರದ್ಧೆಯಿಂದ ನಮ್ಮನ್ನೇ ನಾವು ಶಿವನಿಗೆ ಅರ್ಪಿಸಿ ಕೊಳ್ಳುವ ಒಂದು ಪವಿತ್ರವಾದ ದಿವಸ ಶಿವರಾತ್ರಿ.

ಶ್ರೀ ಶಂಕರರು ಶಿವ ಪಂಚಾಕ್ಷರಿ ಸ್ತೋತ್ರದಲ್ಲಿ ಬೀಜಾಕ್ಷರಗಳಾದ ನಮಃ ಶಿವಾಯವನ್ನು ಸುಂದರವಾಗಿ ಒಂದೊಂದು ಅಕ್ಷರಕ್ಕೆ ಒಂದೊಂದು ವಿವರಣೆಯನ್ನು ಕೊಟ್ಟು ರುದ್ರದೇವನ ವಿಶೇಷತೆಯನ್ನು ಸರಳವಾಗಿ ಚಿತ್ರಿಸಿ, ಸ್ತುತಿಸಿ, ನಮಿಸಿದ್ದಾರೆ :

ನಾಗೇಂದ್ರ ಹಾರಾಯ ತ್ರಿಲೋಚನಾಯ

ಭಸ್ಮಾಂಗರಾಗಾಯs ಮಹೇಶ್ವರಾಯ |

ನಿತ್ಯಾಯ ಶುದ್ಧಾಯs ದಿಗಂಬರಾಯ

ತಸ್ಮೈ ನಕಾರಾಯs ನಮಃ ಶಿವಾಯ ||

ನಾಗೇಂದ್ರನಾದ ವಾಸುಕಿಯನ್ನೇ ಕಂಠಭೂಷಣವಾಗಿ ಉಳ್ಳಂತಹ, ಮೂರು ನೇತ್ರಗಳುಳ್ಳ, ದೇಹವೆಲ್ಲಾ ಭಸ್ಮಧಾರಿಯಾಗಿರುವ, ಮಹೇಶನಾದ, ನಿತ್ಯನೂ, ಶುದ್ಧನೂ, ದಿಗಂಬರನೂ ಆದ ಪರಶಿವನನ್ನು ಪಂಚಾಕ್ಷರೀ ಮಂತ್ರದ ಮೊದಲ ಅಕ್ಷರ "" ಕಾರ ಶಿವನನ್ನು ನಮಿಸುತ್ತೇನೆ.

ಮಂದಾಕಿನೀ ಸಲಿಲ ಚಂದನ ಚರ್ಚಿತಾಯ

ನಂದೀಶ್ವರ ಪ್ರಮಥನಾಥ ಮಹೇಶ್ವರಾಯ |

ಮಂದಾರ ಪುಷ್ಪ ಬಹುಪುಷ್ಪ ಸುಪೂಜಿತಾಯ

ತಸ್ಮೈ ಮಕಾರಾಯs ನಮಃ ಶಿವಾಯ ||

ಗಂಗಾನದಿಯಿಂದ ಅಭಿಷಿಂಚಿತವಾದ ಮತ್ತು ಚಂದನದಿಂದ ಲೇಪಿತವಾದ, ನಂದಿಯೇ ಮೊದಲಾದ ಗಣಗಳಿಂದ ಮಂದಾರ ಮೊದಲಾದ ಅನೇಕ ಪುಷ್ಪಗಳಿಂದ ಪೂಜಿಸಲ್ಪಡುವ "" ಕಾರ ಸ್ವರೂಪಿ ಮಹೇಶ್ವರನನ್ನು ನಮಿಸುತ್ತೇನೆ.

sಶಿವಾಯ ಗೌರೀವದನಾಬ್ಜ ಬೃಂದ

ಸೂರ್ಯಾಯ ದಕ್ಷಾಧ್ವರನಾಶಕಾಯ |

ಶ್ರೀ ನೀಲಕಂಠಾಯs ವೃಶಧ್ವಜಾಯ

ತಸ್ಮೈ ಶಿಕಾರಾಯs ನಮಃ ಶಿವಾಯ ||

ಶುಭಪ್ರದನಾದ, ಸೂರ್ಯೋದಯದಿಂದ ವಿಕಸಿಸುವ ಕಮಲದಂತೆ ಪಾರ್ವತಿಯ ಮುಖವನ್ನು ಹಸನ್ಮುಖವಾಗಿ ಮಾಡುವ, ದಕ್ಷನ ಯಜ್ಞ ನಾಶಕನಾದ ಶುಭಪ್ರದ ನೀಲಕಂಠನೇ, ವೃಷಭವನ್ನೇ ವಾಹನವಾಗಿ ಹೊಂದಿರುವ "ಶಿ"ಕಾರ ಸ್ವರೂಪಿ ಶಿವನಿಗೆ ನಮಿಸುತ್ತೇನೆ.

ವಾಸಿಷ್ಠಕುಂಭೋದ್ಭವ ಗೌತಮಾರ್ಯ -

ಮುನೀಂದ್ರ ದೇವಾರ್ಚಿತ ಶೇಖರಾಯ |

ಚಂದ್ರಾರ್ಕ ವೈಶ್ವಾನರಲೋಚನಾಯ

ತಸ್ಮೈ ವಕಾರಾಯs ನಮಃ ಶಿವಾಯ ||

ಸತ್ಪುರುಷರೂ, ಮುನಿಶ್ರೇಷ್ಠರೂ ಆದ ವಸಿಷ್ಠ, ಅಗಸ್ತ್ಯ ಗೌತಮಾದಿ ಸಕಲ ಮುನಿಸಮೂಹ, ದೇವಸಮೂಹದಿಂದ ಅರ್ಚಿಸಲ್ಪಡುವ ಸೂರ್ಯ, ಚಂದ್ರ, ಅಗ್ನಿಗಳನ್ನೇ ನೇತ್ರವಾಗಿ ಹೊಂದಿರುವ ""ಕಾರವೆಂಬ ಅಕ್ಷರದ ಮಹೇಶ್ವರನಿಗೆ ನಮಿಸುತ್ತೇನೆ.

sಯಜ್ಞಸ್ವರೂಪಾಯs ಜಟಾಧರಾಯ

sಪಿನಾಕಹಸ್ತಾಯs ಸನಾತನಾಯ |

ದಿವ್ಯಾಯ ದೇವಾಯs ದಿಗಂಬರಾಯ

ತಸ್ಮೈ ಯಕಾರಾಯs ನಮಃ ಶಿವಾಯ ||

ಯಜ್ಞ ಸ್ವರೂಪನೂ, ಜಟಾಧಾರಿಯೂ, ಪಿನಾಕವೆಂಬ ಧನುಸ್ಸನ್ನು ಹೊಂದಿರುವವನೂ, ಸನಾತನನೂ, ದಿವ್ಯನೂ, ದೇವನೂ, ದಿಗಂಬರನೂ ಆದ ""ಕಾರ ಸ್ವರೂಪಿಯಾದ ಮಹೇಶ್ವರನಿಗೆ ನಮಿಸುತ್ತೇನೆ, ವಂದನೆಗಳು.

ಹೀಗೆ ಶಿವ ಪಂಚಾಕ್ಷರಿ ಮಂತ್ರವನ್ನು ಸದಾ ಜಪಿಸುವಲ್ಲಿ ನಮ್ಮ ಅಂತರಂಗ ನಿರತವಾಗಿದ್ದರೆ, ಶಿವನ ಒಲುಮೆ ನಮ್ಮದಾಗುತ್ತದೆಂಬುದು ಸತ್ಯ. ಶಂಕರನು ದಯಾಮಯನು ತನ್ನ ಭಕ್ತರ ಯಾವ ಬೇಡಿಕೆಯನ್ನೂ ನಿರಾಕರಿಸದವನು ಎನ್ನುವ ನಂಬಿಕೆ ನಮಗಿದೆ. ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವಂತೆ ಶಿವನು ಅಭಿಷೇಕಪ್ರಿಯನು. ಶುದ್ದ ಭಕ್ತಿಯಿಂದ ಮಾಡುವ ಅಭಿಷೇಕವನ್ನು ಅತಿ ಕರುಣೆಯಿಂದ ಸ್ವೀಕರಿಸಿ, ಬೇಡಿದ ವರಗಳನ್ನು ಕೊಟ್ಟುಬಿಡುವ ಮನೋನಿಯಾಮಕನು. ಚಂಚಲತೆಗೆ ಒಳಗಾಗಿ ದಿಕ್ಕಿಲ್ಲದಂತೆ ವಿಷಯಾಸಕ್ತಿಗಳ ಸುತ್ತ ಅಲೆದಾಡುವ ನಮ್ಮ ಇಂದ್ರಿಯಗಳನ್ನು ನಿಯಂತ್ರಿಸಿ, ದೃಷ್ಟಿಹಾಯಿಸಿದ ಕಡೆಯೆಲ್ಲಾ ಶಿವನ ರೂಪ ಕಾಣುವಂತೆ ನಿನ್ನ ಪಾದದಲ್ಲಿ ನನ್ನ ಚಿತ್ತವನ್ನು ನೆಲೆಗೊಳಿಸು ಎಂದು ಪ್ರಾರ್ಥಿಸುವುದೇ ಶಿವರಾತ್ರಿಯ ವಿಶೇಷತೆ. ನಮಗೆ ತಲೆಯೆತ್ತಿ ನೋಡಿದಾಗೆಲ್ಲಾ ಆಕಾಶದಲ್ಲಿ ಕಾಣುವುದು ಹೊಗೆಯಂತಿರುವ ಮೋಡಗಳು. ಗಂಗೆಯನ್ನು ಶಿರದಲ್ಲಿ ಧರಿಸಲೋಸುಗ ಶಿವ ತನ್ನ ಜಟೆಯನ್ನು ಬಿಚ್ಚಿ ಒಗೆದಾಗ ಅದು ಹೀಗೆ ಹೊಗೆಯಂತೆ ಕಂಡಿತಂತೆ. ಆದ್ದರಿಂದಲೇ ಶಿವನ ನಾಮ ವ್ಯೋಮಕೇಶಿ / ಧೂರ್ಜಟಿ. ಹೀಗೆ ನಾವು ಕಾಣುವ ಪ್ರತಿ ದೃಶ್ಯದಲ್ಲೂ ನಮ್ಮ ಚಿತ್ತಕ್ಕೆ ಶಿವನ ನೆನಪು, ಬರುವಂತೆ ಮಾಡುತ್ತಾ ಸಂಸಾರವೆಂಬ ಸಾಗರದ ಬಂಧನ ಬಿಡಿಸು ಎಂದು ಪ್ರಾರ್ಥಿಸಬೇಕು. ಧೂರ್ಜಟಿ ಎಂದರೇ ವೈರಾಗ್ಯವೆಂಬ ಅರ್ಥವನ್ನು ನಾವು ತಿಳಿದರೆ ಸಾಕು ಆ ನಾಮ ಸ್ಮರಣೆಯೇ ನಮ್ಮ ಚಿತ್ತವನ್ನು ನಿಯಂತ್ರಿಸುತ್ತದೆ ನಮಗೆ ಸಾಗಬೇಕಾದ ಹಾದಿಯನ್ನು ತೋರಿಸುತ್ತದೆ.

“ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ” ಎಂಬ ಗೀತೆಯ ಸಂದೇಶದಂತೆ ಶಿವರಾತ್ರಿಯಂದು ಕವಿದಿರುವ ಗಾಡಾಂಧಕಾರದಲ್ಲಿ, ಅಜ್ಞಾನದ ಕತ್ತಲೆಯಲ್ಲಿ ಮುಳುಗಿ ಜೀವನ ಕತ್ತಲೆಯಾಗಿಸಿಕೊಳ್ಳಬೇಡ, ಅಜ್ಞಾನವನ್ನು ದೂರೀಕರಿಸು, ಜ್ಞಾನದ ಪ್ರಕಾಶದಲ್ಲಿ ಎಚ್ಚೆತ್ತುಕೋ, ಆತ್ಮ ಸಾಕ್ಷಾತ್ಕಾರ ಪಡೆದು ಜನ್ಮ ಸಾರ್ಥಕ ಪಡಿಸಿಕೋ ಎಂಬುದೇ ಜಾಗರಣೆಯ ತತ್ವ ಹಾಗೂ ಸರ್ವ ಭೋಗಗಳನ್ನು ಬಿಟ್ಟು ಪಾಪರಹಿತವಾದ ಜೀವನವನ್ನು ಅಳವಡಿಸಿಕೊಳ್ಳುವುದು ಉಪವಾಸದ ತತ್ವ.

“ಶಿವ” ತತ್ವದಿಂದ ನಾವು ಕಲಿಯಬೇಕಾದ ಮೊದಲ ಪಾಠವೆಂದರೆ ಸರಳತೆ. ಎಲ್ಲವನ್ನೂ ತ್ಯಜಿಸಿದವನು, ಯಾವ ಬಂಧನಕ್ಕೂ ಒಳಗಾಗದವನು ಶಿವ. ಶಿವತತ್ವವೇ ನಮ್ಮ ಅಂತರಂಗದ, ಆತ್ಮದ ಜಾಗೃತಿ ಅಥವಾ ತುರೀಯಾವಸ್ಥೆ, ಅನುಭವದಿಂದ ಮಾತ್ರವೇ ಅರ್ಥವಾಗಬಹುದಾದದ್ದು. ಶಿವನ ಆರಾಧನೆಯೆಂದರೆ, ಸಂಪೂರ್ಣ ಶರಣಾಗತಿ, ಭೌತಿಕ ದೇಹದ ಅರಿವಿನಿಂದ ಆಚೆಗೆ ಅರಿವುಮಾಡಿಕೊಳ್ಳುವುದು ಮತ್ತು ಶಿವತತ್ವದಲ್ಲಿ ಲೀನವಾಗುವುದು. ಶ್ರೀ ವಿಜಯದಾಸರು ತಮ್ಮ ಒಂದು ಕೀರ್ತನೆಯನ್ನು “ಲಿಂಗ.. ಎನ್ನಂತರಂಗ” ಎಂಬ ಮಾತಿನಿಂದಲೇ ಪ್ರಾರಂಭಿಸಿ ಶಿವನನ್ನು ಅಂತರಂಗದಲ್ಲಿ ನೆಲೆಸಿರುವ ದೇವನೆಂದು ಸೂಚಿಸಿದ್ದಾರೆ.

ಶ್ರೀ ಪುರಂದರ ದಾಸರ ಕೀರ್ತನೆಯಲ್ಲಿ ಶಿವರಾತ್ರಿಯಂದು ಶಿವನ ದರುಶನದಿಂದ ಪಡೆಯಬಹುದಾದ ಅನೇಕ ವಿಚಾರಗಳಿವೆ :

|| ಶಿವದರುಶನ ನಮಗಾಯಿತು ಕೇಳಿ | ಶಿವರಾತ್ರಿಯ ಜಾಗರಣೆ ||

|| ಪಾತಾಳಗಂಗೆಯ ಸ್ನಾನವ ಮಾಡಲು | ಪಾಪಗಳೆಲ್ಲ ಪರಿಹಾರವು |

|| ಜ್ಯೋತಿರ್ಲಿಂಗದ ಧ್ಯಾನವ ಮಾಡಲು | ದ್ಯೂತಗಳಿಲ್ಲ ಅನುದಿನವು ||

ಶಿವರಾತ್ರಿಯಂದು ಶಿವನ ದರುಶನಕ್ಕೆ ಪ್ರಾಮುಖ್ಯತೆ ಎಂಬುದು ಈ ಕೀರ್ತನೆಯಲ್ಲಿ ಪುರಂದರ ದಾಸರು ಸ್ಪಷ್ಟವಾಗಿ ತಿಳಿಸಿದ್ದಾರೆ. ಆ ರಾತ್ರಿ ಜಾಗರಣೆ ಮಾಡುವುದರಿಂದ ಶಿವನ ದರುಶನವಾದಂತೆಯೇ ಎಂಬ ಅರ್ಥ. ಪ್ರತೀ ತಿಂಗಳಿನಲ್ಲೂ ಬರುವ ಶಿವರಾತ್ರಿಯಂದು ಜಾಗರಣೆ – ಉಪವಾಸ ಮಾಡಲು ಸರ್ವರಿಗೂ ಸಾಧ್ಯವಿಲ್ಲವಾದ್ದರಿಂದ, ವರ್ಷಕ್ಕೊಮ್ಮೆ ಬರುವ “ಮಹಾಶಿವರಾತ್ರಿ” ಹಬ್ಬದ ಆಚರಣೆ ಮಾಡುವುದರಿಂದ ಮಾಡದೇ ಬಿಟ್ಟ ಎಲ್ಲಾ ತಿಂಗಳುಗಳ ಶಿವರಾತ್ರಿಯನ್ನು ಆಚರಿಸಿದ ಪುಣ್ಯವನ್ನು ಗಳಿಸಿದಂತಾಗುವುದು.

ಪುರಂದರ ದಾಸರ ಇನ್ನೊಂದು ಕೀರ್ತನೆ “ಚಂದ್ರ ಚೂಡ ಶಿವಶಂಕರ ಪಾರ್ವತಿ ರಮಣಾ..ನಿನಗೆ ನಮೋ ನಮೋ” ಎನ್ನುತ್ತಾ “ನಂದಿ ವಾಹನಾ ಆನಂದದಿಂದ ಮೂಜಗದಿ ಮೆರೆವನು ನೀನೆ”.. ಎಂದು ಸ್ತುತಿಸಿದ್ದಾರೆ.

ಶ್ರೀ ಜಗನ್ನಾಥದಾಸರು “ನೀಲಲೋಹಿತಾ ಪಾಲಯ ಮಾಂ” ಎಂಬ ಕೀರ್ತನೆಯಲ್ಲಿ ಕೂಡ ಶಿವನನ್ನು ಒಲಿಸಿಕೊಳ್ಳುವುದು ಮುಕ್ತಿ ಮಾರ್ಗಕ್ಕೆ ಸೋಪಾನವೆಂಬುದನ್ನು ತಿಳಿಸಿದ್ದಾರೆ.

ಶ್ರೀ ಕನಕದಾಸರು ತಮ್ಮ “ಶಿವ ಶಿವ ಶಿವ ಎನ್ನಿರೋ.. ಮೂರ್ಜಗದವರೆಲ್ಲಾ” ಎಂಬ ಕೀರ್ತನೆಯಲ್ಲಿ ಶಿವ ನಾಮದ ಜಪ ಆಗಮ ಸಿದ್ಧಾಂತದ ಮೂಲದ ಜಪವೆಂದೂ, ನಮ್ಮೆಲ್ಲಾ ರೋಗಗಳ ಪರಿಹರಿಸುವ ಔಷಧಿಯೆಂದೂ ಹೇಳುತ್ತಾರೆ. ಮನುಜ ಜನ್ಮದಲ್ಲಿ ಹುಟ್ಟಿ ಮೈ ಮರೆತು ಇರಬಾರದೆಂದೂ, ತನು-ಮನ-ಪ್ರಾಣವನ್ನು ವ್ಯರ್ಥ ಮಾಡದೆ ಶಿವನಿಗೆ ಸಮರ್ಪಿಸಬೇಕೆಂದೂ ತಿಳಿಸುತ್ತಾರೆ. ಕೋಟಿ ಅಪರಾಧಗಳ ತ್ಯಜಿಸಬೇಕಾದರೆ, ಜವನ ಬಾಧೆಯನ್ನು ಜಯಿಸಬೇಕಾದರೆ, ಮೃತ್ಯುಂಜಯನ ಮೊರೆ ಹೋಗದೆ ಬೇರೆ ದಾರಿಯೇ ಇಲ್ಲವೆಂಬ ಸತ್ಯವನ್ನು ತುಂಬಾ ಸ್ಪಷ್ಟವಾಗಿ ಬಿಡಿಸಿ ಇಟ್ಟಿದ್ದಾರೆ.

ಸಂಗೀತ ಪಿತಮಹಾರಾದ ಶ್ರೀ ತ್ಯಾಗರಾಜರು ಕೂಡ ತಮ್ಮ “ಶಿವ ಶಿವ ಶಿವ ಎನ್ನರಾದ”.. ಎಂಬ ಕೃತಿಯಲ್ಲಿ ಭವದ ಬಾಧೆಗಳನ್ನೆಲ್ಲಾ ಕಳೆಯಲು ಶಿವನ ಮೊರೆ ಹೋಗುವುದೊಂದೇ ದಾರಿ ಎಂದಿದ್ದಾರೆ.


ಚಿತ್ರಕೃಪೆ : ಅಂತರ್ಜಾಲ