Friday, July 22, 2016

ಪ್ರವಾಸ ಕಥನ - ಅಮೆರಿಕ (ನಾಲ್ಕನೆಯ ಕಂತು)

ನಾವು ಒಂದು ವಾರಾಂತ್ಯದಲ್ಲಿ ಗ್ರ್ಯಾಂಡ್ ಕ್ಯಾನ್ಯನ್ ಎಂಬ ಅದ್ಭುತ ವಿಚಿತ್ರವನ್ನು ನೋಡಲು ಹೋದೆವು.  ಗ್ರ್ಯಾಂಡ್ ಕ್ಯಾನ್ಯನ್ ಗೆ ಹೋಗುವ ರಸ್ತೆ.....

ಫೆಬ್ರವರಿ - ಮಾರ್ಚ್ ತಿಂಗಳು ಅಮೆರಿಕದಲ್ಲಿ ಛಳಿಗಾಲ ಮುಗಿದು ಬೇಸಿಗೆ ಪ್ರಾರಂಭವಾಗುವ ಸಂಧಿ ಕಾಲದ ಸಮಯ.  ಎತ್ತರದ ಪರ್ವತಗಳ ಶಿಖರಗಳಲ್ಲಿ ಮಾತ್ರ ಸ್ವಲ್ಪ ಸ್ವಲ್ಪ ಹಿಮ ಉಳಿದಿರುವುದು ನೋಡಲು ಸುಂದರ ದೃಶ್ಯ.



 
ಹಾದಿಯಲ್ಲಿ ಕಣ್ಮನ ತಣಿಸುವ ಮರಗಳ ಗುಂಪಿನ ದೃಶ್ಯ ನಮ್ಮ ದೇಶದ ಅನೇಕ ಸುಂದರ ತಾಣಗಳ ನೆನಪು ತರುವುದು. 

ಮರಗಳ ಮಧ್ಯದಲ್ಲಿ ಕಾಣುವ ಹಾಲು ಬಿಳುಪು ಇನ್ನೂ ಪೂರ್ತಿಯಾಗಿ ಕರಗದೆ ಉಳಿದಿರುವ ಹಿಮದ ಹಾಸು.



ಅಮೆರಿಕದಲ್ಲಿ ಪ್ರವಾಸ ಹೋಗುವಾಗ ಹೊರಗೆ ಸಿಕ್ಕುವ ಆಹಾರದ ಜೊತೆ ಮನೆಯಿಂದಲೂ ಏನಾದರೂ ಮಾಡಿಕೊಂಡು ಹೋಗುವುದು ಹೆಚ್ಚು ಸೂಕ್ತವಾಗುತ್ತದೆ.  ನಾವೂ ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟಕ್ಕೆ ತಯಾರಿ ಮಾಡಿಕೊಂಡೇ ಹೊರಟಿದ್ದೆವು.  ಉದ್ದುದ್ದ ರಸ್ತೆಗಳಲ್ಲಿ ಎಲ್ಲೂ ನಿಲ್ಲಿಸುವ ಅವಕಾಶವಿಲ್ಲ.  ಆದರೆ ಹೀಗೆ ದೂರ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿ ಅಲ್ಲೊಂದು ಉಪಯುಕ್ತ ವ್ಯವಸ್ಥೆಯಿದೆ.  ದಾರಿಯಲ್ಲಿ ಒಂದು ಚಿಕ್ಕ ತಿರುವ ತೆಗೆದುಕೊಂಡರೆ ನಮಗೆ ವಾಹನಕ್ಕೆ ಇಂಧನವೂ ಸಿಕ್ಕುತ್ತದೆ ಜೊತೆಗೆ ಅಲ್ಲಿ ನಮ್ಮ ವಾಹನವನ್ನು ನಿಲ್ಲಿಸಿಕೊಂಡು, ಒಳಗೇ ಕುಳಿತು ನಾವು ತಂದುಕೊಂಡ ಆಹಾರವನ್ನು ತಿನ್ನಬಹುದು.  ಹೀಗೆ ಮಾಡುವುದರಿಂದ ದಾರಿಯಲ್ಲಿ ವೇಗವಾಗಿ ಚಲಿಸುವ ಇತರ ವಾಹನಗಳಿಗೆ ತೊಂದರೆಯಿಲ್ಲದೆ, ನಾವೂ ನೆಮ್ಮದಿಯಾಗಿ ವಿಶ್ರಮಿಸಲು ಅವಕಾಶವಾಗುವುದು.  ರಸ್ತೆಗಳಲ್ಲಿ ಅಲ್ಲಲ್ಲಿ ದೊಡ್ಡದಾಗಿ ಚಿಹ್ನೆಗಳನ್ನೂ, ಫಲಕಗಳನ್ನೂ ಹಾಕಿ, ಮುಂದೆ ಇನ್ನೆಷ್ಟು ದೂರದಲ್ಲಿ ಈ ತರಹದ ವ್ಯವಸ್ಥೆಯಿದೆ ಎಂಬುದನ್ನು ಪ್ರದರ್ಶಿಸಿರುತ್ತಾರೆ.  

ಕ್ಯಾನ್ಯನ್ ಹತ್ತಿರ ಬರುವಾಗ ನಮಗೆ ಅಲ್ಲಿ ಒಂದು ವಿಮಾನ ನಿಲ್ದಾಣವಿರುವುದು ಕಾಣುವುದು.  ಪುಟ್ಟ ಪುಟ್ಟ ವಿಮಾನಗಳು ಕ್ಯಾನ್ಯನ್ ಮೇಲೆ ಹಾರಿಸಲಾಗುತ್ತದೆ.  ಇದಲ್ಲದೆ ಹೆಲಿಕಾಪ್ಟರ್ ನಲ್ಲಿ ಸುತ್ತುವ ವ್ಯವಸ್ಥೆ ಕೂಡ ಇದೆಯಂತೆ.
 
ಕ್ಯಾನ್ಯನ್ ನೋಡಲು ಹೋಗುವ ಮೊದಲು ಒಂದು ಚಿತ್ರಮಂದಿರದಲ್ಲಿ ನಾವು ಕ್ಯಾನ್ಯನ್ ರಚನೆಯಾದ ಕಾಲ, ಅಲ್ಲಿದ್ದ ಬುಡಕಟ್ಟು ಜನಾಂಗದವರ ಜೀವನದ ವಿವರಣೆ ತಿಳಿಸುವ ಒಂದು ಚಿತ್ರವನ್ನೂ ನೋಡಿದೆವು.
















ಕ್ಯಾನ್ಯನ್ ನೋಡಲು ಬಂದ ಪ್ರವಾಸಿಗರು ತಂಗಲು ಇಲ್ಲಿ ಹೋಟೆಲುಗಳೂ ಇವೆ.  
ಅಂತಹ ಒಂದು ಹೋಟೆಲ್ ಆಕಾರ ನಮ್ಮ ಗಮನ ಸೆಳೆದಿತ್ತು.  ಅದು ಗೋಪುರಾಕೃತಿಯ ಕಟ್ಟಡವಾಗಿತ್ತು.





ಸಾವಿರಾರು ವರ್ಷಗಳಲ್ಲಿ ಒಂದು ನದಿಯು ಎಷ್ಟೆಲ್ಲಾ ಕೌಶ್ಯಲ್ಯವನ್ನು ಸೃಷ್ಟಿಸಿದೆ ಎಂದು ಚಿಂತಿಸುವಾಗ, ಆಶ್ಚರ್ಯವಾಗುವುದು.  ಸುಮಾರು ೪೫೬ ಅಡಿಗಳವರೆಗೆ ಆಳದಲ್ಲಿ ಕಮರಿಗಳನ್ನು ಕಾಣಬಹುದಾಗಿದೆ.  ಎಲ್ಲಿ ನೋಡಿದರೂ, ಎತ್ತ ತಿರುಗಿದರೂ, ಕೆಂಪು ಮಿಶ್ರಿತ ಬಣ್ಣದಲ್ಲಿ ಕೊರೆದ ಶಿಲ್ಪ ಕಣ್ಮನ ತಣಿಸುವುದು.  ಚಿತ್ರ ವಿಚಿತ್ರವಾದ ನಮೂನೆಗಳನ್ನು ನೋಡುತ್ತಾ ನೋಡುತ್ತಾ ಮನಸ್ಸು ಕಲ್ಪನಾ ಲೋಕದಲ್ಲಿ ವಿಹರಿಸಲಾರಂಭಿಸುವುದು.  ನಮ್ಮ ಅಲ್ಪ ಆಯುಶ್ಯ ಹಾಗೂ ಬುದ್ಧಿಯಲ್ಲಿ ಏನೇನೆಲ್ಲವನ್ನೂ ಕಂಡಿರುವೆವೋ ಅದಕ್ಕೆಲ್ಲಾ ಈ ನಮೂನೆಗಳನ್ನು ಹೋಲಿಸುವ ಪ್ರಯತ್ನ ಮಾಡಲಾರಂಭಿಸುವೆವು.  ಉಬ್ಬು ತಗ್ಗುಗಳು, ಎತ್ತರ ಇಳಿತಗಳು ನಿಜಕ್ಕೂ ಅತಿ ರಮ್ಯವಾದ ನೋಟವನ್ನು ಕಾಣುವೆವು.  ಒಂದು ಕಡೆ ಒಟ್ಟಾಗಿ ಐದು ಕಲಶಗಳನ್ನು ಜೋಡಿಸಿರುವರೇನೋ ಎಂಬಂತೆ ಕಾಣುವುದು, ಇನ್ನೊಂದು ಕಡೆ ಯಾವುದೋ ದೇವತೆಯ ಹೋಲಿಕೆ ಕಾಣುವುದು.  ಕೈಯಲ್ಲಿ ಶಂಖ ಚಕ್ರ ಗಧಾ ಪದ್ಮಗಳಿರುವ ಮಹಾವಿಷ್ಣುವೇನೋ ಎಂದು ಭ್ರಮಿಸುವಂತಾಗುವುದು.

ಉದ್ದಕ್ಕೂ ನಡೆಯುತ್ತಾ ನೋಡುತ್ತಾ ಹೋಗಲು ಮಾರ್ಗವನ್ನು ಮಾಡಿ, ಅಲ್ಲಲ್ಲೇ ವ್ಯೂ ಪಾಯಿಂಟುಗಳನ್ನು ಮಾಡಿರುವರು.  ಅನಾವಶ್ಯಕ ಸಾಹಸ ಮಾಡಿ ಸಂಭ್ರಮಿಸುವ ಕೆಲ ಯುವಕ ಯುವತಿಯರು, ನಿಷಿದ್ಧವಾದ ಪ್ರದೇಶಗಳವರೆಗೂ ಹೋಗಿ ಅಲ್ಲಿ ವಿವಿಧ ರೀತಿಯಲ್ಲಿ ನಿಂತು, ಕುಳಿತು ಸೆಲ್ಫೀ ತೆಗೆದುಕೊಳ್ಳುವ ಹುಚ್ಚುತನ ನೋಡಿ ಸ್ವಲ್ಪ ಬೇಸರವಾಯಿತು.  ಅದ್ಭುತ ಕಲೆಯನ್ನು ಕಾಣಲು ಬಂದಾಗಲೂ, ಅದನ್ನು ಪ್ರಶಂಸಿಸುವ ಬದಲು ಎಲ್ಲೆಂದರಲ್ಲಿ ಸೆಲ್ಫೀ ತೆಗೆದುಕೊಳ್ಳುವ ಹುಚ್ಚುತನ ಕಂಡು ನಗಬೇಕೋ ಅಳಬೇಕೋ ತಿಳಿಯದಾಯಿತು.  ಎಷ್ಟೋ ಅಡಿಗಳ ಆಳದಲ್ಲಿ, ಸಣ್ಣಗೆ ತೊರೆಯಂತೆ ಹರಿಯುತ್ತಿರುವುದೇ  ಪ್ರಖ್ಯಾತ ಕೊಲರೇಡೋ ನದಿಯೆಂದು ಮಗ ಬೆಟ್ಟು ಮಾಡಿ ತೋರಿಸಿದಾಗ, ಎಳೆ ಬಿಸಿಲಿನಲ್ಲಿ ಫಳಫಳಿಸುತ್ತಿದ್ದ ಗುಲಾಬಿ ಬಣ್ಣದ ಮಣ್ಣಿನ ಆಕೃತಿಗಳಲ್ಲಿ ನದಿ ಕಾಣಿಸಲೇ ಇಲ್ಲ.  ಕೊನೆಗೂ ೪-೫ ಬಾರಿ ಬೆಟ್ಟು ಮಾಡಿ, ಬೇರೆ ಬೇರೆ ಜಾಗದಲ್ಲಿ ತೋರಿಸಿದಾಗ ಅಲ್ಲಿ ಸಣ್ಣ ತೊರೆಯೊಂದು ಇದೆಯೆಂಬುದು ತಿಳಿಯಿತು.  ಗುಲಾಬಿ ಬಣ್ಣದ ವಿನ್ಯಾಸಗಳ ಮಧ್ಯದಲ್ಲಿ ಬಿಳಿಯ ಹಾಲಿನಂತೆ ಗೋಚರಿಸುವುದೇ ನದಿಯೆಂದು ಅರ್ಥವಾಗಲು ಸ್ವಲ್ಪ ಸಮಯವಾಯಿತು.



Tuesday, July 5, 2016

ಪ್ರವಾಸ ಕಥನ - ಅಮೆರಿಕ (ಮೂರನೆಯ ಕಂತು)

 
 
 
ಫೀನಿಕ್ಸ್ ನಲ್ಲಿನ ಇನ್ನೊಂದು ತುಂಬಾ ಸೆಳೆಯುವಂತಹ ಜಾಗವೆಂದರೆ ಪುತ್ತಿಗೆ ಮಠದವರ ಶ್ರೀ ವೇಂಕಟರಮಣ ಸ್ವಾಮಿ ದೇವಸ್ಥಾನ.  ಇದು ನನ್ನ ಮಗನ ಮನೆಗೆ ಸುಮಾರು ೭ ಮೈಲಿಯಷ್ಟು ದೂರವಿದೆ.  ಮೊದಲ ಸಲ ನಾವು ಅಲ್ಲಿಗೆ ಹೋದಾಗ, ಅದು ದೇವಸ್ಥಾನ ಎಂದೇ ತಿಳಿಯಲಿಲ್ಲ.  ದೊಡ್ಡದಾಗ ಜಾಗದಲ್ಲಿ ಮುಂದುಗಡೆ ಗಾಡಿಗಳು ನಿಲ್ಲಲು ಜಾಗ ಮಾಡಿ, ದೇವಸ್ಥಾನ ಕಟ್ಟಿದ್ದಾರೆ.  ಎತ್ತರವಾದ ಬಾಗಿಲುಗಳು, ಯಾವಾಗಲೂ ಸುಮ್ಮನೆ ಮುಚ್ಚಿಯೇ ಇರುತ್ತದೆ.  ನಾವು ತೆರೆದುಕೊಂಡು ಒಳಗೆ ಹೋಗಬೇಕು.  ನಮ್ಮಲ್ಲಿಯ ದೇವಾಲಯಗಳಂತೇ ಹೊರಗೆ ಚಪ್ಪಲಿ ಬಿಡಲು ಜಾಗ, ಕಾಲು ತೊಳೆಯಲು ನಲ್ಲಿ ಇದೆ.  ಒಳಗೆ ಪ್ರವೇಶಿಸಲು ಮುಂದು ಮಾಡಿರುವ ಬಾಗಿಲು ತೆರೆದ ಕೂಡಲೆ ಎದುರಿಗೇ ಭವ್ಯವಾಗಿ ಸ್ವಾಮಿ ಅಷ್ಟೆತ್ತರಕ್ಕೆ ನಿಂತುಬಿಟ್ಟಿದ್ದಾನೆ.  ನಿಜಕ್ಕೂ ತುಂಬಾ ಆಕರ್ಷಕವಾಗಿದೆ.  ಮೈ ತುಂಬಾ ಬರಿಯ ಬಿಳಿಯ ಕಲ್ಲಿನ ಆಭರಣಗಳನ್ನು ಧರಿಸಿಕೊಂಡು ಅಗಲವಾದ ಸುಂದರವಾದ ಅಂಚು ಇರುವಂತಹ ಪಂಚೆ ಉಟ್ಟು, ಅಂಚನ್ನು ಕಲಾತ್ಮಕವಾಗಿ ಮಡಿಸಿ, ಪಂಚೆಗೆ ಹೊಂದುವಂತೆ ಹೊದಿಸಿರುವ ಶಲ್ಯ, ಅದರ ಮೇಲೆ ವಿವಿಧ ರೀತಿಯ ಆಭರಣಗಳನ್ನು ಧರಿಸಿ ನಿಂತಿರುವನು.   ಸ್ವಾಮಿಯ ವಿಶೇಷತೆ ಎಂದರೆ ಧರಿಸಿರುವ ಎಲ್ಲಾ ಒಡವೆಗಳೂ ಸ್ವಚ್ಛ ಬಿಳುಪು ಕಲ್ಲಿನಲ್ಲಿ ಮಾಡಲ್ಪಟ್ಟಿರುವುದು.  ದೊಡ್ಡದಾದ ಹಜಾರದ ಒಳಗೆ ಗರ್ಭಗುಡಿ ಇರುವುದು.  ಹಜಾರದಲ್ಲಿ ಹೆಚ್ಚು ಬೆಳಕು ಇದ್ದರೂ ಕೂಡ, ಗರ್ಭಗುಡಿಯಲ್ಲಿ ಎಣ್ಣೆ ದೀಪದ ಬೆಳಕಿನಲ್ಲಿ ಸ್ವಾಮಿಯನ್ನು ನೋಡುವುದೇ ರೋಮಾಂಚಕಾರಿ ಅನುಭವವಾಗುವುದು.  ಗರ್ಭಗುಡಿಗೆ ತುಂಬಾ ಹತ್ತಿರದಲ್ಲಿಯೇ ನಿಂತು ದರ್ಶನ ಪಡೆಯುವ ಅವಕಾಶವಿರುವುದು.  ತಲೆಯೆತ್ತಿ ಸ್ವಾಮಿಯನ್ನು ನೋಡುತ್ತಾ ನಿಂತರೆ, ಸುತ್ತಲ ಪರಿಸರವೂ ಮರೆಯುವಂತಹ ಅನುಭವವಾಗುವುದು.  ಕೆಲವೇ ಕೆಲವು ಹೂಗಳಿಂದ ಅಲಂಕೃತನಾಗಿರುತ್ತಾನೆ ಸ್ವಾಮಿ.  ದೇವಲಯವಂತೂ ಅತ್ಯಂತ ಸ್ವಚ್ಛವಾಗಿರುತ್ತದೆ.  ಎಲ್ಲೂ ಒಂದು ಚೂರು ಕಸ ಕಡ್ಡಿ ಏನೂ ಇಲ್ಲ. 

ಸ್ವಾಮಿಯ ಬಲಪಕ್ಕದಲ್ಲಿ ಅಮ್ಮನವನ ಸನ್ನಿಧಾನವಿದೆ.  ಕೆನ್ನೆಗೆ ಅರಿಸಿನ ಹಚ್ಚಿಕೊಂಡು, ಮಂಗಳಮಯವಾಗಿ, ರೇಷ್ಮೆ ಸೀರೆಯುಟ್ಟು, ಒಡವೆಗಳನ್ನು ಧರಿಸಿ ಕುಳಿತಿರುವ ತಾಯಿ ಲಕ್ಷ್ಮೀದೇವಿ ಗೊಂದಲಗೊಂಡ ಮನಸ್ಸನ್ನು ಕ್ಷಣದಲ್ಲೇ ಸ್ಥಿಮಿತಗೊಳಿಸುವಳು.  ಅಮ್ಮನವರ ದರ್ಶನ ಪಡೆದುಕೊಂಡು ಹಾಗೇ ಪ್ರದಕ್ಷಿಣೆ ಬಂದರೆ ಅಮ್ಮನವರ ಸನ್ನಿಧಾನದ ಹಿಂದುಗಡೆಗೇ ನವಗ್ರಹಗಳ ದರ್ಶನ ಪಡೆಯಬಹುದು.  ಅಲ್ಲಿಂದ ಮುಂದೆ ೫-೬ ಹೆಜ್ಜೆ ಬಂದರೆ ಸರಿಯಾಗಿ ಸ್ವಾಮಿಯ ಹಿಂದೆ ಎಡಗಡೆಗೆ ರಾಯರ ಬೃಂದಾವನವಿದೆ.  ಪುಟ್ಟದಾದ ಪ್ರತ್ಯೇಕವಾದ  ಸನ್ನಿಧಾನದಲ್ಲಿ ರಾಯರು ನೆಲೆಸಿದ್ದಾರೆ.  ಒಳಗೆ ಒಬ್ಬರು ಮಾತ್ರ ಪ್ರದಕ್ಷಿಣೆ ಮಾಡುವಷ್ಟು ಜಾಗವಿದೆ.  ಗೋಡೆಯ ಮೇಲೆ ರಾಯರ ಜೀವನದ ಕೆಲವು ಪ್ರಮುಖ ಘಟನೆಗಳ ಚಿತ್ರ, ಅವರ ಜನನ, ಸಂನ್ಯಾಸ ಸ್ವೀಕಾರದ ದಿನಾಂಕಗಳನ್ನು ಪ್ರದರ್ಶಿಸಿದ್ದಾರೆ.   ರಾಯರಿಗೆ ವಂದಿಸಿ ಮುಂದೆ ಬಂದರೆ, ಪ್ರದಕ್ಷಿಣೆಯ ಕೊನೆಯ ಹಂತದಲ್ಲಿ, ಸ್ವಾಮಿಯ ಎಡಗಡೆಗೆ ಪ್ರತ್ಯೇಕವಾದ ಸ್ಥಾನವಿದೆ.  ಅದರಲ್ಲಿ ಮೇಲುಗಡೆಗೆ ಲಿಂಗರೂಪಿ ಈಶ್ವರನ ಸನ್ನಿಧಾನವಿದೆ.  ತಂದೆಯ ಜೊತೆಗೆಂಬಂತೆ, ಕೆಳಗಡೆಗೆ ವಿಘ್ನೇಶ್ವರನ ಸನ್ನಿಧಾನವಿದೆ.  ಸ್ವಾಮಿಗೆ ಒಂದು ಪ್ರದಕ್ಷಿಣೆ ಬರಲು ಹೆಚ್ಚೆಂದರೆ ೨ ನಿಮಿಷವಾಗಬಹುದು.  ಅಷ್ಟರಲ್ಲಿ ನಮಗೆ ಅಮ್ಮನವರ ದರ್ಶನ, ನವಗ್ರಹಗಳ ದರ್ಶನ, ರಾಯರ ಬೃಂದಾವನ ಹಾಗೂ ಕೊನೆಗೆ ಲಿಂಗರೂಪಿ ಈಶ್ವರ ಹಾಗೂ ವಿಘ್ನೇಶ್ವರನ ದರ್ಶನವಾಗುತ್ತದೆ.  ಪ್ರದಕ್ಷಿಣೆ ಬಂದು ಸ್ವಾಮಿಯ ಮುಂದುಗಡೆ ಹಾಸಿರುವ ಜಮಖಾನದ ಮೇಲೆ ಕಣ್ಮುಚ್ಚಿ ಕುಳಿತರೆ ಅಲ್ಲಿ ದೊರೆಯುವ ಪ್ರಶಾಂತತೆ ಎಂತಹ ಗೊಂದಲ, ಕಳವಳವನ್ನೂ ಕಳೆದು ಬಿಡುವುದು.  ಭಕ್ತಾದಿಗಳು ಯಾರೂ ಜೋರಾಗಿ ಮಾತನಾಡದೆ, ತಮ್ಮ ಪಾಡಿಗೆ ತಾವು ದರ್ಶನ ಮಾಡಿಕೊಂಡು, ನಿಶ್ಯಬ್ದವಾಗಿ ಕುಳಿತು, ಧ್ಯಾನಿಸುತ್ತಾರೆ.  ಮಂದಿರದ ಅಕ್ಕ ಪಕ್ಕಗಳಲ್ಲಿ ಕೋಣೆಗಳನ್ನು ಕಟ್ಟಿಸಿದ್ದಾರೆ.  ಪ್ರತಿ ಹುಣ್ಣಿಮೆಯಲ್ಲೂ ಶ್ರೀ ಸತ್ಯನಾರಾಯಣ ಪೂಜೆ ನಡೆಯುತ್ತದೆ.  ಪೂಜೆ, ಹೋಮ ಹವನಗಳನ್ನು ಮಾಡಲು ಎಲ್ಲಾ ಅನುಕೂಲಗಳನ್ನೂ ಕಲ್ಪಿಸಿದ್ದಾರೆ.   

ಮಗನ ಮನೆಯ ಗೃಹಪ್ರವೇಶ ಮಾಡಿಸಲು ಪುತ್ತಿಗೆ ಮಠದವರೇ ಬಂದಿದ್ದರು.  ಮಠದಲ್ಲಿಯೇ ಊಟಕ್ಕೂ ತಿಳಿಸಿದ್ದರು.  ಪೂಜೆ ಮುಗಿದ ನಂತರ ಊಟವನ್ನು ತರಲು ನಾವೇ ಹೋಗಿದ್ದೆವು.  ದೇವಸ್ಥಾನದ ಬಲಪಕ್ಕದಲ್ಲಿಯೇ ಪಾಕಶಾಲೆಯಿದೆ.  ದೇವರ ದರ್ಶನ ಮಾಡಿಕೊಂಡು ನಾವು ಪಾಕಶಾಲೆಗೆ ಹೋದೆವು.  ಅದಾಗಲೇ ನಮಗಾಗಿ ಊಟ ತಯಾರಾಗಿತ್ತು.  ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಅನ್ನ, ಸಾರು, ಮಿಶ್ರ ತರಕಾರಿಗಳ ಕೂಟು ಮತ್ತು ಪಾಯಸವನ್ನು ತುಂಬಿಸಿ ಅಲ್ಯೂಮಿನಿಯಮ್ ಹಾಳೆಗಳಿಂದ ಮುಚ್ಚಿಟ್ಟಿದ್ದರು.  ಎರಡು ತರಹದ ಪಲ್ಯಗಳು, ಕೋಸುಂಬರಿಯನ್ನು ಅಲ್ಯೂಮಿನಿಯಂನ ಉಪಯೋಗಿಸಿ ತ್ಯಾಜ್ಯಕ್ಕೆ ಹಾಕುವಂತಹ ಅಗಲವಾದ ತಟ್ಟೆಗಳಲ್ಲಿ ತುಂಬಿಸಿ, ಅದಕ್ಕೂ ಮೇಲೆ ಅಲ್ಯುಮಿನಿಯಂ ಹಾಳೆಗಳನ್ನು ಮುಚ್ಚಿದ್ದರು.  ಎಲ್ಲವನ್ನೂ ಅಚ್ಚುಕಟ್ಟಾಗಿ ಎರಡು ಕಾರುಗಳಲ್ಲಿ ಜೋಡಿಸಿಕೊಂಡು ನಾವು ಮನೆಗೆ ತಂದೆವು.  ಒಂದೊಂದು ಪದಾರ್ಥವೂ ಅಷ್ಟೊಂದು ರುಚಿಯಾಗಿತ್ತು.  ಮಧ್ಯಾಹ್ನದ ಊಟವಾಗಿ, ರಾತ್ರಿ ಮತ್ತೆ ಎಲ್ಲರೂ ವಾಪಸ್ಸು ಬಂದು ಊಟ ಮಾಡಿದರೂ ಕೂಡ ಇನ್ನೂ ಮಿಕ್ಕುವಷ್ಟು ಧಾರಾಳವಾಗಿ ಕೊಟ್ಟಿದ್ದರು.  ಲಾಡು ಮತ್ತು ಖಾರಶೇವೆ ೧೫ ದಿನಗಳಾದರೂ ಕೆಡದೆ ಚೆನ್ನಾಗಿತ್ತು.  ಪರಮಾತ್ಮನ ಪ್ರಸಾದವೆಂದರೆ ಅದೆಷ್ಟು ರುಚಿಯಾಗಿರುವುದು ಜೊತೆಗೆ ಇಲ್ಲಿ ಶುಚಿಯಾಗಿಯೂ ಮಾಡಿದ್ದರು.  ಪಾಕಶಾಲೆಯ ಒಳಗೆ ನಾವು ಹೋಗಿ ನೋಡಿದಾಗ ಎಲ್ಲೂ ಸ್ವಲ್ಪವೂ ಪದಾರ್ಥಗಳು ಚೆಲ್ಲಿರಲಿಲ್ಲ.  ಎಲ್ಲಾ ತುಂಬಾ ವ್ಯವಸ್ಥಿತವಾಗಿತ್ತು.  ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಾರೆ.  ನೋಡಿದರೆ ಸಂತೋಷವಾಗುವಂತಿರುವುದು.

ಶಿವರಾತ್ರಿಯ ದಿನ ನಾವು ದೇವಸ್ಥಾನಕ್ಕೆ ಹೋದಾಗ, ಸಾಯಂಕಾಲ ರುದ್ರಾಭಿಷೇಕ ನಡೆಯುತ್ತಿತ್ತು.  ೫-೬ ಜನ ಋತ್ವಿಕರು ಕುಳಿತು ರುದ್ರ ಪಾರಾಯಣ ಮಾಡುತ್ತಿದ್ದರು.  ಅಭಿಷೇಕ ಮಾಡಿದ ಹಾಲು ಎಲ್ಲೂ ಕೆಳಗೆ ಸೋರಿ ಕೊಚ್ಚೆಯಾಗದಂತೆ ಶಿಸ್ತಿನಿಂದ ಅಭಿಷೇಕ ನಡೆಯುತ್ತಿತ್ತು.  ಪಕ್ಕದ ಹಜಾರದಲ್ಲಿ ಲಿಂಗರೂಪಿ ಈಶ್ವರನನ್ನು ಕುಳ್ಳಿರಿಸಿ, ಪಕ್ಕದಲ್ಲಿಯೇ ಕೊಳಗದಲ್ಲಿ ಹಾಲು, ನೀರು ಇಟ್ಟಿದ್ದರು.  ದೇವಸ್ಥಾನಕ್ಕೆ ಹೋದವರೆಲ್ಲಾ, ಅರ್ಧ ಹಾಲು ಅರ್ಧ ನೀರು ಬೆರೆಸಿಕೊಂಡು ಸ್ವತಃ ಈಶ್ವರನಿಗೆ ಅಭಿಷೇಕ ಮಾಡುವ ವ್ಯವಸ್ಥೆ ಮಾಡಲಾಗಿತ್ತು.  ಅಲ್ಲೂ ಕೂಡ ಯಾರೂ ಹೊರಗೆಲ್ಲಾ ಚೆಲ್ಲದೆ ಅಚ್ಚುಕಟ್ಟಾಗಿ ಕೆಲಸ ಪೂರೈಸಿ, ಮನೋನಿಯಾಮಕ ರುದ್ರದೇವರಿಗೆ ನಮಿಸಿ, ನಿಶ್ಯಬ್ದವಾಗಿ ಹೊರಡುತ್ತಿದ್ದರು.  ನಾವುಗಳೂ ಧನ್ಯೋಸ್ಮಿ ಎಂದುಕೊಳ್ಳುತ್ತಾ,  ಶಿವನಿಗೆ ಅಭಿಷೇಕ ಮಾಡಿ, ಮನಸಾರ ನಮಸ್ಕರಿಸಿ ಹೊರಟೆವು.  ೮.೩೦ ತನಕ ದೇವಸ್ಥಾನದಲ್ಲಿಯೇ ಇದ್ದಿದ್ದರೆ, ಊಟವನ್ನೂ ಕೊಡುತ್ತಿದ್ದರೆಂಬುದು ತಿಳಿಯಿತು.  ಸ್ವಾಮಿಯ ನೆನಪಿನಲ್ಲಿಯೇ ಮನೆಗೆ ವಾಪಸಾದೆವು. ಎಲ್ಲೂ, ಕೊಳೆತ ಹೂವುಗಳು, ಓಡಾಡುವ ಜಾಗದಲ್ಲಿ ಚೆಲ್ಲಿದ ಹಾಲು, ಕೊಚ್ಚೆ, ರಾಡಿ ಯಾವುದೂ ಇಲ್ಲದೆ ದೇವಸ್ಥಾನ, ಎಂದಿನಂತೇ ಅತ್ಯಂತ ಶುಚಿಯಾಗಿತ್ತು.  ಇನ್ನೂ ಸ್ವಲ್ಪ ಹೊತ್ತು ಕುಳಿತು ರುದ್ರಾಭಿಷೇಕ ನೋಡಬೇಕೆಂಬ ಆಸೆ ಇದ್ದರೂ, ಮನಸ್ಸಿಲ್ಲದ ಮನಸ್ಸಿನಿಂದ ಹೊರಡಲೇ ಬೇಕಾಯಿತು.  ಆದರೆ ಅಲ್ಲಿನ ಶಿಸ್ತು, ಶುಭ್ರತೆ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಸುಂದರ ದೃಶ್ಯವಾಗಿ ನಿಂತಿರುವುದು.  
 
ಅಂತರ್ಜಾಲದಲ್ಲಿ ದೇವಸ್ಥಾನ :  http://aztemple.org/
 
 
 ಚಿ ತ್ರ ಕೃ ಪೆ  : ಅಂ ತ ರ್ಜಾ ಲ