ದಾಸ ಸಾಹಿತ್ಯಕ್ಕೆ ಕೊಡುಗೆಯನ್ನು ಕೊಟ್ಟ ಮಹಿಳೆಯರಲ್ಲಿ ಅಂಬಾಬಾಯಿಯವರೂ ಪ್ರಮುಖರಾಗಿರುವರು. ಇವರು ಬಹುದಾನ ಸಂವತ್ಸರದ ವಿಜಯದಾಸರ ಆರಾಧನೆಯ ದಿನದಂದು ತಮಗೆ ೩೬ ವರ್ಷಗಳು ತುಂಬಿದವೆಂದು ತಾವೇ ತಮ್ಮ ಒಂದು ರಚನೆಯಲ್ಲಿ ತಿಳಿಸಿರುವರು. ಅಂದರೆ ಅಂಬಾಬಾಯಿಯವರು ಶೋಭನಕೃತ ಸಂವತ್ಸರದ ಕಾರ್ತೀಕ ಶುದ್ಧ ದಶಮಿ (೧೯೦೨)ಯಂದು ಚಿತ್ರದುರ್ಗದಲ್ಲಿ ತಂದೆ ಭೀಮಸೇನರಾಯರು ಹಾಗೂ ತಾಯಿ ಭಾರತೀಬಾಯಿಯವರಿಗೆ ಪುತ್ರಿಯಾಗಿ ಜನಿಸಿದರು. ಆಗಿನ ಕಾಲದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಯಾವ ಪ್ರೋತ್ಸಾಹವೂ ಇಲ್ಲದಿದ್ದರೂ, ಅತಿ ಬುದ್ಧಿವಂತೆಯಾದ ತಮ್ಮ ಮಗಳು ಅಂಬಾಬಾಯಿಯವರನ್ನು ಅವರ ತಂದೆ ಭೀಮರಾಯರು ೪ನೆಯ ತರಗತಿಯವರೆಗೂ ಓದಿಸಿದರು. ೧೦ ವರ್ಷಕ್ಕೆ ಗೋಪಾಲಪುರದ ಹನುಮಂತಾಚಾರ್ಯ ಎಂಬುವವರೊಂದಿಗೆ ವಿವಾಹವಾಯಿತು. ಅಲ್ಲಿಗೆ ವಿದ್ಯಾಭ್ಯಾಸವೂ ಮುಗಿಯಿತು. ೧೨ನೆಯ ವಯಸ್ಸಿನಲ್ಲಿ ಗಂಡನ ಮನೆಗೆ ಹೋದರು. ಆದರೆ ದುರದೃಷ್ಟವಶಾತ್ ಊರಿಗೆ ಮಾರಿಯಂತೆ ಬಂದ ಪ್ಲೇಗ್ ಖಾಯಿಲೆಯಿಂದಾಗಿ ಗಂಡನನ್ನೂ ಹಾಗೂ ತನ್ನ ತಂದೆಯನ್ನೂ ಒಂದೇ ದಿನ ಕಳೆದುಕೊಂಡರು. ಗಂಡನ ಮನೆಯವರು ಕೇಶಮುಂಡನ ಮಾಡಿಸಿ, ತವರಿಗೆ ಅಟ್ಟಿಬಿಟ್ಟರು. ಸಾಕಷ್ಟು ಸ್ಥಿತಿವಂತರಾಗಿದ್ದರೂ ಕೂಡಾ, ಪುಟ್ಟ ಬಾಲಕಿಗೆ ಏನೂ ಕೊಡದೆ, ಅನಾಥರನ್ನಾಗಿಸಿ, ಒಂದು ಹೊತ್ತಿನ ಊಟಕ್ಕೂ ತಮ್ಮ ತಂಗಿಯರ ಮನೆಯ ಆಶ್ರಯ ಪಡೆಯುವಂತೆ ಮಾಡಿಬಿಟ್ಟರು.
ತಂಗಿಯ ಮನೆ ಹಾಗೂ ತಮ್ಮನ ಮನೆಗಳಲ್ಲಿ ಮನೆಕೆಲಸಗಳನ್ನು ಮಾಡುತ್ತಾ ೧೬ ವರ್ಷಗಳನ್ನು ಕಷ್ಟದಲ್ಲಿಯೇ ಕಳೆದರು ಅಂಬಾಬಾಯಿಯವರು. ಆದರೆ ತಮ್ಮೊಳಗಿನ ಧಾರ್ಮಿಕ ಪ್ರಜ್ಞೆಯನ್ನು ಚೆನ್ನಾಗಿ ಬೆಳೆಸಿಕೊಂಡರು. ತಮ್ಮ ಮನೋಬಲವನ್ನು ಕುಸಿಯದಂತೆ ಈ ಧಾರ್ಮಿಕ ಪ್ರವೃತ್ತಿಯಿಂದ ಕಾಪಾಡಿಕೊಂಡರು. ಹೀಗಿರುವಾಗಲೇ ತಂದೆ ಮುದ್ದುಮೋಹನ ದಾಸರಿಂದ "ಗೋಪಾಲಕೃಷ್ಣ ವಿಠಲ" ಎಂಬ ಅಂಕಿತವನ್ನು ೧೯೩೧ ಪ್ರಜೋತ್ಪತ್ತಿ ಸಂವತ್ಸರದ ಚೈತ್ರ ಶುದ್ಧ ಶ್ರೀರಾಮ ನವಮಿಯ ದಿನದಂದು ಪಡೆದರು. "ಜೋ ಜೋ ಶ್ರೀಗೋಪಾಲಕೃಷ್ಣ ಮೂರುತಿಯೆ" ಎಂಬ ರಚನೆಯಲ್ಲಿ ಅಂಕಿತ ಪಡೆದ ವಿಚಾರವನ್ನು ತಿಳಿಸಿದ್ದಾರೆ. ಅಂಬಾಬಾಯಿಯವರ ಕುಟುಂಬದ ಅನೇಕರು ಅಂಕಿತ ಸ್ವೀಕರಿಸಿದ ಹರಿದಾಸರೇ ಆಗಿದ್ದರು. ಅವರ ಅಜ್ಜಿ ’ಸೀತಾಪತಿವಿಠಲ’, ತಾಯಿ ’ಯಾದವೇಂದ್ರವಿಠಲ’, ತಮ್ಮ ’ರಮಾಕಾಂತವಿಠಲ’, ತಮ್ಮನ ಪತ್ನಿ ’ಸುರೇಶವಿಠಲ’, ತಂಗಿ ’ಪರಮಾನಂದವಿಠಲ’, ತಂಗಿಯ ಗಂಡ ’ನಿತ್ಯಾನಂದವಿಠಲ’ ಹೀಗೆ.....
ಅಂಬಾಬಾಯಿಯವರ ಬದುಕಿನ ರೀತಿ - ನೀತಿಗಳು ಅಂಕಿತ ಪಡೆದ ನಂತರ ಸಂಪೂರ್ಣ ಬದಲಾಯಿತು. ಲೌಕಿಕದಲ್ಲಿ ಕಳೆದುಕೊಂಡ ಎಲ್ಲಾ ಸುಖವನ್ನೂ ಗುರುಪಾದಗಳ ಸ್ಮರಣೆ, ಭಗವಂತನ ಆರಾಧನೆಯಲ್ಲಿ ಕಂಡುಕೊಂಡರು. ಕಾಲಿಗೆ ಗೆಜ್ಜೆ ಕಟ್ಟಿ, ತಾಳ - ತಂಬೂರಿ ಹಿಡಿದು, ಜೋಳಿಗೆ ಹಾಕಿಕೊಂಡು, ಸಂಪೂರ್ಣವಾಗಿ ತಮ್ಮನ್ನು ತಾವು ಹರಿದಾಸ ವೃತ್ತಿಗೆ ಸಮರ್ಪಣೆ ಮಾಡಿಕೊಂಡರು. ಹರಿದಾಸ ವೃತ್ತಿ ಅವರಿಗೆ ವಿಠಲನ ಸೇವೆಯಾಯಿತು. ಸದಾಕಾಲವೂ "ನಿನ್ನ ಕಿಂಕರಳಾಗಿ ನಿನ್ನ ಸೇವೆಯ ಮಾಳ್ಪ ಉನ್ನಂತ ಅಭಿಲಾಷೆ"ಯನ್ನು ನೆರವೇರಿಸೆಂದು ಪ್ರಾರ್ಥಿಸುತ್ತಿದ್ದರು. ದಾಸತ್ವವನ್ನು ಅವರು, ಆಸೆಯಿಂದ, ಶ್ರದ್ಧೆಯಿಂದ ಸ್ವೀಕರಿಸಿದರು.
ಅಂಬಾಬಾಯಿಯವರು ತಮಗೆ ಕೇಶಮುಂಡನ ಮಾಡಿಸಿ, ಅತ್ತೆಮನೆಯಿಂದ ಹೊರಗೆ ದಬ್ಬಿದಾಗ, ಅವರ ಮನೆಯಲ್ಲಿದ್ದ ಪುಟ್ಟ ಆರು ಇಂಚಿನ ಗೋಪಾಲಕೃಷ್ಣನ ಕಂಚಿನ ವಿಗ್ರಹವನ್ನು ಬೇಡಿ ಪಡೆದಿದ್ದರು. ಆ ಪುಟ್ಟ ಕೃಷ್ಣನ ವಿಗ್ರಹವೇ ಅವರ ಆರಾಧ್ಯ ದೈವವಾಯಿತು. ಜೀವನವನ್ನು ನೋಡುವ ಅವರ ದೃಷ್ಟಿಯೇ ಸಂಪೂರ್ಣ ಬದಲಾಯಿತು. ಕಳೆದುಹೋದ ತನ್ನ ಸೌಮಾಂಗಲ್ಯದ ಎಲ್ಲಾ ಸಂಕೇತಗಳೂ ಗುರು ಕರುಣೆಯಿಂದ ತಮಗೆ ಮತ್ತೆ ಸಿಕ್ಕಿದವೆಂದು ಸಂತೋಷಿಸುತ್ತಾ "ಅಂಕಿತವೇ ಮಾಂಗಲ್ಯ, ನಾಮವೇ ತಿಲಕ, ಗುರುಕರುಣವೇ ಕವಚ, ಗುರು ಪ್ರೀತಿಯೇ ವಸನ, ಭಕ್ತಿ - ಜ್ಞಾನ - ವೈರಾಗ್ಯಗಳೇ ಮೂರು ಕಾಲಿನ ಜಡೆ, ತತ್ವಗಳೇ ಚೌರಿ, ರಾಗುಟೆ, ಗೊಂಡುಗಳು, ಶ್ರವಣವೇ ಕರ್ಣಕುಂಡಲ, ನಿರ್ಮಾಲ್ಯವೇ ನಾಸಿಕಾಭರಣ, ಭಕ್ತಿಯೇ ನಡುವಿನೊಡ್ಯಾಣ, ಸದ್ಗುಣಗಳೇ ಪಾದಾಭರಣ, ಗುರುವಿನ ಅನುಗ್ರಹವೇ ಮಂಗಳ ದ್ರವ್ಯಗಳೆನ್ನುತ್ತಾ, ಹೀಗೆ ಸಾಲಂಕೃತಳಾದ ತನ್ನನ್ನು ಶ್ರೀಹರಿಗೆ ಧಾರೆಯೆರೆದು ಕೊಡಲಾಯಿತೆಂದು "ಮುತ್ತೈದೆಯಾದೆ ನಾ ಮುರವೈರಿ ದಯದಿ, ನಿತ್ಯತೃಪ್ತನು ಎನ್ನ ನಿಜಕರವ ಪಿಡಿಯೆ" ಎಂಬ ರಚನೆಯಲ್ಲಿ ವಿವರಿಸಿದ್ದಾರೆ.
ಸಂಪೂರ್ಣ ಹರಿದಾಸರಾಗಿ, ದೇಹಾಭಿಮಾನಗಳನ್ನು ಪೂರ್ಣವಾಗಿ ತ್ಯಜಿಸಿ, ತಂಬೂರಿಯೇ ಶ್ರೀಹರಿಯನ್ನು ಒಲಿಸಿಕೊಳ್ಳುವ ಸಾಧನವೆಂದು ಭಾವಿಸಿದರು. "ಹರಿಗುರು ಕರುಣದಿ ದೊರಕಿದುದೆನಗೀ.. ಪರಮ ಪಾವನ ತಂಬೂರಿ" ಎಂಬ ರಚನೆಯಲ್ಲಿ ತಂಬೂರಿಯ ಮಹತ್ವವನ್ನು ತಿಳಿಸುತ್ತಾ...
ಬಲು ಬಲು ಪರಿಯಲಿ ಹರಿದಾಸತ್ವಕೆ
ಬರುವಂತೆ ಮಾಡಿದ ತಂಬೂರಿ
ನೆಲೆಯಾದೆನು ಹರಿದಾಸರ ಮಾರ್ಗದಿ
ಕಲುಷವ ಕಳೆದಿತು ತಂಬೂರಿ.... ಎಂದಿದ್ದಾರೆ. ಹೀಗೆ ತಂಬೂರಿ ಹಿಡಿದು, ಹರಿದಾಸರಾಗಿ, ಗೋಪಾಳ ಧರಿಸಿ, ಭಕ್ತರ ಮನೆಗಳಿಗೆ ಊಂಛವೃತ್ತಿಗೆ ಹೋಗುವುದನ್ನು ನಿತ್ಯ ನಿಯಮವಾಗಿ ಪಾಲಿಸಿದರು ಅಂಬಾಬಾಯಿಯವರು.
ಅಂಬಾಬಾಯಿಯವರು ತಮ್ಮ ಸಂಚಾರ ಕಾಲದಲ್ಲಿ ಪ್ರತಿನಿತ್ಯವೂ ಹೊಸ ಹೊಸ ಹಾಡುಗಳನ್ನು ರಚಿಸಿ, ಹಾಡಿ, ಅದನ್ನು ಸುತ್ತಲಿನ ಮಹಿಳೆಯರಿಗೆ ಹೇಳಿಕೊಡುತ್ತಿದ್ದರು. ಅವರ ರಚನೆಗಳು ಭಗವಂತನ ಹಾಗೂ ತಮ್ಮ ಗುರುಗಳ ಪ್ರೇರಣೆಯಿಂದ ಹೇಗೆ ರಚನೆಯಾಗುತ್ತಿತ್ತು ಎಂಬುದನ್ನು ಈ ಒಂದು ಚಿಕ್ಕ ದೃಷ್ಟಾಂತದ ಮೂಲಕ ಹೇಳಬಹುದು. ಒಮ್ಮೆ ಅಂಬಾಬಾಯಿಯವರು ತಮ್ಮ ತಂಗಿಯ ಮನೆಯಲ್ಲಿದ್ದಾಗ, ಪಕ್ಕದ ಮನೆಯ ಮಹಿಳೆಯು ಲಾಲಿಹಾಡು ಹಾಡುತ್ತಿದ್ದುದನ್ನು ಕೇಳಿ, ತನಗೂ ಅದನ್ನು ಬರೆದುಕೊಡಿರೆಂದು ಅಂಬಾಬಾಯಿಯವರ ತಂಗಿಯು ಆಸೆಯಿಂದ ಕೇಳಿದರು. ಆದರೆ ಆ ಗೃಹಿಣಿ ಅದನ್ನು ತಿರಸ್ಕರಿಸಲು, ಅಂಬಾಬಾಯಿಯವರ ತಂಗಿಯ ಮನಸ್ಸಿಗೆ ನೋವಾಗಿತ್ತು. ಅವರು ಅಕ್ಕನ ಹತ್ತಿರ ದುಃಖ ಹೇಳಿಕೊಂಡಿದ್ದರು. ಅಂದು ಮಧ್ಯರಾತ್ರಿ ಅಂಬಾಬಾಯಿಯವರಿಗೆ ನಿದ್ದೆಯಿಂದ ಎಚ್ಚರಿಕೆಯಾಗಿ, ಅವರೆದ್ದು ಸ್ನಾನ ಮಾಡಿ, ದೇವರ ಮುಂದೆ ಕುಳಿತು ಲಾಲಿ ಹಾಡನ್ನು ರಚಿಸಿದರು. ಅದೂ ಕೂಡ ವಿಶೇಷವಾಗಿ, ಸುವ್ವಾಲೆ ಧಾಟಿಯಲ್ಲಿ, ದೀರ್ಘವಾಗಿ ೩೮೯ ನುಡಿಗಳ ಅದ್ಭುತ ರಚನೆಯಾಗಿತ್ತು. ವಸುದೇವ - ದೇವಕಿಯರ ಸೆರೆವಾಸದಿಂದ ಶುರುವಾಗಿ ಶ್ರೀಕೃಷ್ಣನ ಬಾಲಲೀಲೆಗಳ ವರ್ಣನೆ ಅತೀ ಸುಂದರವಾಗಿ ಮೂಡಿತ್ತು.
ಅಂಬಾಬಾಯಿಯವರು ಹೋದಲ್ಲೆಲ್ಲಾ ಹೆಣ್ಣು ಮಕ್ಕಳಿಗೆ ಹಾಡುಗಳನ್ನು ಹೇಳಿಕೊಡುತ್ತಿದ್ದದ್ದು ಅಷ್ಟೇ ಅಲ್ಲ, ಜೊತೆಗೆ ತಾವೇ ಬರೆದ ರಾಮಾಯಣದ ಸುಂದರಕಾಂಡವನ್ನೂ ಹಾಡಿ ಪ್ರವಚನವನ್ನು ಮಾಡುತ್ತಿದ್ದರಂತೆ. ಅವರನ್ನು ಮನೆಗೆ ಕರೆಸಿ ಸುಂದರಕಾಂಡ ಹಾಡಿಸಿದರೆ, ಎಲ್ಲವೂ ಶುಭವಾಗುವುದೆಂಬ ನಂಬಿಕೆಯೊಂದಿಗೆ, ಗುರುಗಳ ಶಿಷ್ಯವಲಯದಲ್ಲಿ ಆಕೆ ಸುಂದರಕಾಂಡದ ಅಂಬಾಬಾಯಿ ಎಂದೇ ಗುರುತಿಸಲ್ಪಡುತ್ತಿದ್ದರು.......
ಅಂಬಾಬಾಯಿಯವರಿಗೆ ತೀರ್ಥಯಾತ್ರೆ ಮಾಡುವುದೆಂದರೆ ಅತೀ ಪ್ರಿಯವಾಗಿತ್ತು. ತಂಗಿ ಹಾಗೂ ನಾದಿನಿಯರಿಗೆ ಬಾಣಂತನ ಮಾಡಿದಾಗ ಅವರು ಸೀರೆ ಕೊಡಿಸುವೆನೆಂದರೆ, ಬೇಡವೆಂದು ಹಣ ಪಡೆಯುತ್ತಿದ್ದರಂತೆ. ಅದೆಲ್ಲವನ್ನೂ ಕೂಡಿಸಿಟ್ಟುಕೊಂಡು, ತಿಂಗಳುಗಟ್ಟಲೆ ತೀರ್ಥಯಾತ್ರೆಗೆ ಹೊರಟುಬಿಡುತ್ತಿದ್ದರಂತೆ. ತೀರ್ಥಯಾತ್ರೆಗೆ ಹೊರಡುವ ಮುನ್ನ ಶಾಸ್ತ್ರೋಕ್ತವಾಗಿ ಗುರುಗಳ ಅನುಮತಿ ಪಡೆಯುತ್ತಿದ್ದರಂತೆ. ದಾಸತ್ವದ ಸಾಮಗ್ರಿಗಳಾದ ಅಕ್ಷಯಪಾತ್ರೆ, ಕೋಲು, ತಾಳ, ಗೆಜ್ಜೆ ಹಾಗೂ ಶ್ರೀವಿಜಯದಾಸರ ಫೋಟೋಕ್ಕೆ ಪೂಜೆ, ನೈವೇದ್ಯ, ಮಂಗಳಾರತಿ ಎಲ್ಲಾ ಸಾಂಗೋಪಾಂಗವಾಗಿ ನಡೆಸುತ್ತಿದ್ದರು. ಪೂಜೆಯ ನಂತರ ದಾಸತ್ವದ ಸಾಮಗ್ರಿಗಳನ್ನು ಗುರುಗಳಿಂದ ಸ್ವೀಕರಿಸಿ, ಆ ದಿನ ಬೆಳಿಗ್ಗೆಯೇ ರಚಿಸಿದ ದೇವರ ನಾಮಗಳನ್ನು ಪಠಿಸಿ, ಗುರುಗಳಿಗೆ ಒಪ್ಪಿಸಿ, ಗುರುದಂಪತಿಗಳಿಗೆ ನಮಸ್ಕರಿಸಿ, ಅಪರಾಧ ಕ್ಷಮಾಪಣೆ ಯಾಚಿಸಿ, ಫಲಮಂತ್ರಾಕ್ಷತೆ ಪಡೆದು ಹೊರಡುತ್ತಿದ್ದರಂತೆ.
ಅಂಬಾಬಾಯಿಯವರಿಗೆ ಆಗಿನ ಕಾಲದಲ್ಲಿಯೇ ದಿನಚರಿಯನ್ನು ಬರೆಯುವ ಅಭ್ಯಾಸವಿದ್ದಿತು. ಅವರ ತೀರ್ಥಯಾತ್ರೆಗಳೆಲ್ಲವೂ ಬಹಳ ಸರಳವಾದ ಏರ್ಪಾಟುಗಳೊಂದಿಗಿರುತ್ತಿತ್ತು. ಯಾರ ಮನೆಯಲ್ಲೂ ತಂಗದೆ, ದೇವಸ್ಥಾನದ ಕಟ್ಟೆಯ ಮೇಲೆ ವಾಸ್ತವ್ಯ ಹೂಡಿ, ಗೋಪಾಳ ವೃತ್ತಿಯಿಂದ ಆ ದಿನ ದೊರೆತದ್ದನ್ನು, ಯಾರಾದರೂ ಗೃಹಸ್ಥರ ಮನೆಯಲ್ಲಿ ಸ್ವಯಂಪಾಕ ತಯಾರಿಸಿ ಊಟಮಾಡುತ್ತಿದ್ದರು. ಮತ್ತೆಲ್ಲಾ ಸಮಯ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತು ಹಾಡಲು ಪ್ರಾರಂಭಿಸಿ ಬಿಡುತ್ತಿದ್ದರು. ಅವರ ಸುಶ್ರಾವ್ಯ ಕಂಠದಿಂದ ಹೊಮ್ಮುವ ಹೊಸ ಹೊಸ ದೇವರನಾಮಗಳನ್ನು ಕೇಳಿ ಊರಿನ ಹೆಂಗೆಳೆಯರು ಬೆರಗಾಗಿ, ಇದು ಯಾವ ದಾಸರ ರಚನೆ, ನಮಗೂ ಬರೆದುಕೊಡಿ ಎಂದು ಕೇಳುತ್ತಿದ್ದರು. ರಚನೆಗಳು ತಮ್ಮದೆಂದು ಎಲ್ಲೂ ಹೇಳಿಕೊಳ್ಳದೆ "ಗೋಪಾಲಕೃಷ್ಣ ದಾಸ"ರ ರಚನೆಗಳೆಂದು ಹೇಳುತ್ತಾ, ಒಂದು ಕೇಳಿದರೆ ನಾಲ್ಕು ದೇವರನಾಮಗಳನ್ನು ಬರೆದುಕೊಡುತ್ತಿದ್ದರಂತೆ. ಸದಾ ಕಾಗದ, ಲೇಖನಿಯ ಸಹಿತವೇ ತೀರ್ಥಯಾತ್ರೆ ಹೊರಡುತ್ತಿದ್ದರಂತೆ.
ಅಂಬಾಬಾಯಿಯವರು ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿದ್ದಾಗ, ಅವರಿಗೆ ತಂದೆ ಮುದ್ದು ಮೋಹನದಾಸರು, ಅಂಕಿತಕೊಟ್ಟು ದಾಸಪಂಥದ ದಾರಿ ತೋರಿಸಿದರು. ಆದ್ದರಿಂದ ಅಂಬಾಬಾಯಿಯವರಿಗೆ ತಮ್ಮ ಗುರುಗಳ ಮೇಲೆ ಅಪಾರವಾದ ಗೌರವ, ಪ್ರೀತಿ ಹಾಗೂ ಪ್ರಭಾವ ಇದ್ದಿತು. ತಮ್ಮ ಗುರುಗಳನ್ನು ಕುರಿತು ಅಂಬಾಬಾಯಿಯವರು ಸುಮಾರು ೫೦ ಕೃತಿಗಳನ್ನಾದರೂ ರಚಿಸಿರುವರು. "ತೋರೆನಗೆ ಶ್ರೀಕೃಷ್ಣ ತೋಯಜಾಂಬ" ಎಂಬ ಒಂದು ರಚನೆಯಲ್ಲಿ, ಅಂಬಾಬಾಯಿಯವರು ತಮ್ಮ ಗುರುಗಳಾದ ಮುದ್ದುಮೋಹನದಾಸರು ತಮ್ಮ ಪ್ರಿಯಶಿಷ್ಯರಿಗೆ ನೀಡಿದ ೧೬೧ ಅಂಕಿತಗಳು (ಶ್ರೀಹರಿಯ ನಾಮಗಳು) ಉಲ್ಲೇಖಿಸಲ್ಪಟ್ಟಿವೆ. ಈ ಎಲ್ಲಾ ಹರಿದಾಸರುಗಳ ಪರಿಚಯವೂ ಬಹುಶಃ ಅಂಬಾಬಾಯಿಯವರಿಗಿತ್ತು. ಅವರು ಉಲ್ಲೇಖಿಸಿರುವಂತಹ ಹರಿದಾಸರುಗಳಲ್ಲಿ ಅನೇಕರು ಅಜ್ಞಾತವಾಗಿಯೇ ಉಳಿದುಬಿಟ್ಟಿರುವರು.
ಸುಮಾರು ಹತ್ತು ವರ್ಷಗಳ ಕಾಲ, ದಾಸತ್ವದಿಂದ, ಬದುಕಿನಲ್ಲಿ ಅರ್ಥವನ್ನು ಕಂಡುಕೊಂಡಿದ್ದ ಅಂಬಾಬಾಯಿಯವರಿಗೆ, ಅವರ ಗುರುಗಳ ನಿಧನದಿಂದ, ಬಹಳ ದೊಡ್ಡ ಪೆಟ್ಟು ಬೀಳುವುದು. ಅವರಿಗೆ ಅದೊಂದು ಆಘಾತವಾಗುವುದು. ಗುರುಗಳ ಅಗಲಿಕೆಯ ನೋವನ್ನು ದೂರವಾಗಿಸಿಕೊಳ್ಳಲು, ಅಂಬಾಬಾಯಿಯವರು ತಮ್ಮ ಉಳಿದ ದಿನಗಳನ್ನು ತೀರ್ಥಯಾತ್ರೆಯಲ್ಲಿಯೇ ಕಳೆಯುತ್ತಾರೆ. ೪೦ ವಯಸ್ಸಿನ ವಿರಾಗಿಣಿ, ಹರಿದಾಸಿ, ಗೊತ್ತು ಗುರಿಯಿಲ್ಲದ ಅಲೆದಾಟದಲ್ಲಿ ಎಲ್ಲಿ, ಹೇಗೆ, ತೀರಿಕೊಂಡರು ಎಂಬುದು ದಾಖಲಾಗಿಲ್ಲ. ೪೩ನೆಯ ವಯಸ್ಸಿನಲ್ಲಿ ಅವರು ಕಾವೇರಿ ನದಿಯಲ್ಲಿ ಜಲಸಮಾಧಿಯಾದರೆಂದು, ಯಾರೋ ಹೇಳಿದ್ದನ್ನು ರಮಾಕಾಂತ ವಿಠಲರು ಹಾಗೂ ನಿತ್ಯಾನಂದ ವಿಠಲರು, ಅಂಬಾಬಾಯಿಯವರ ಸಂಬಂಧಿಗಳಿಗೆ ತಿಳಿಸಿದರಂತೆ. ಆದರೆ ಸತ್ಯ ಏನೆಂದು ಯಾರಿಗೂ ತಿಳಿದಿಲ್ಲ.
ಅಂಬಾಬಾಯಿಯವರು ಸಾಹಿತ್ಯದ ರಚನೆಯನ್ನು ಪ್ರಾರಂಭಿಸಿದ ನಂತರ ಜೀವಿಸಿದ್ದ ಕಾಲವು ಹೆಚ್ಚೇನೂ ಇಲ್ಲ. ಕೇವಲ ಒಂದೂವರೆ ದಶಕಕ್ಕಿಂತಲೂ ಕಡಿಮೆ ಅವಧಿಯಲ್ಲಿ ಅವರು ರಚಿಸಿದ್ದ ಸುಮಾರು ೩೦೦ ಕೃತಿಗಳ ಹಸ್ತಪ್ರತಿಗಳು ದೊರಕಿವೆಯಂತೆ. ಅವರ ಅನೇಕ ರಚನೆಗಳು ಬೇರೆಯವರ ಅಂಕಿತಗಳಿಂದಲೂ ಪ್ರಕಟವಾಗಿರಬಹುದು (ಅಂಕಿತಗಳಲ್ಲಿನ ಸಾಮ್ಯತೆಯಿಂದಾಗಿ) ಎಂಬುದನ್ನು ಅವರ ಹಸ್ತಪ್ರತಿಗಳನ್ನು ಸಂಪಾದಿಸಿದ ಡಾ. ಅನಂತಪದ್ಮನಾಭರಾವ್ ಅವರು ದಾಖಲಿಸಿರುವರು. ಅಂಬಾಬಾಯಿಯವರು ಆಶುಕವಿಯಿತ್ರಿಯಂತೆ ಹಾಡುಗಳನ್ನು ರಚಿಸುತ್ತಿದ್ದರು. ಅಪಾರವಾದ ಸಾಹಿತ್ಯದ ಹಸ್ತಪ್ರತಿಗಳು ಎಲ್ಲೆಲ್ಲಿಯೋ ಹಂಚಿಹೋಗಿರಬಹುದು, ಆದ್ದರಿಂದ ಇಂತಹ ಪ್ರತಿಭಾವಂತ ಹರಿದಾಸಿಯಾದ ಅಂಬಾಬಾಯಿಯವರು ಅಜ್ಞಾತರಾಗಿಯೇ ಉಳಿದುಬಿಟ್ಟರು. ೧೯೪೦ಕ್ಕಿಂತ ಮುಂಚಿನ ದಿನಗಳಲ್ಲಿ "ಪರಮಾರ್ಥ ಪತ್ರಿಕೆ"ಯಲ್ಲಿ ಇವರ ರಚನೆಗಳು ಕೆಲವು ಪ್ರಕಟವಾಗಿದ್ದವಂತೆ. ಅದು ಬಿಟ್ಟರೆ, ಅಂಬಾಬಾಯಿಯವರ ರಚನೆಗಳು ಜನರ ಬಾಯಲ್ಲಿ ಉಳಿದು, ಹಾಗೇ ಪ್ರಚಾರವಾಗಿರುವುದೇ ಹೆಚ್ಚು.
ಅಂಬಾಬಾಯಿಯವರು ತಮ್ಮ ರಚನೆಗಳಲ್ಲಿ ಕ್ರಮಬದ್ಧವಾದ ಶಿಸ್ತು ಪಾಲಿಸಿರುವುದನ್ನು ನಾವು ಕಾಣಬಹುದಾಗಿದೆ. ಪಲ್ಲವಿ, ಅನುಪಲ್ಲವಿಗಳ ನಂತರ ಪ್ರತಿ ಚರಣವೂ ಒಂದೇ ಗಾತ್ರದಲ್ಲಿ, ಪ್ರಾಸಬದ್ಧವಾಗಿ, ಲಾಲಿತ್ಯಮಯವಾಗಿ, ಸುಲಭ ಹಾಗೂ ಸುಲಲಿತ ಉಚ್ಛಾರಣೆಯೊಂದಿಗೆ ಸಾಗುವುದು. ರಾಗ ಸಂಯೋಜನೆಯನ್ನು ಮಾಡದಿದ್ದರೂ ಕೂಡ, ಯಾರು ಬೇಕಾದರೂ ಸರಳವಾಗಿ ಒಂದು ರೀತಿಯ, ತಮ್ಮ ಮನಕ್ಕೆ ಮುದಕೊಡುವಂತಹ ಲಯದಲ್ಲಿ ಪಠಿಸುತ್ತಾ ಸಾಗಬಹುದು. ಇವರ ರಚನೆಗಳಲ್ಲಿ ಅನೇಕ ವಿಶೇಷತೆಗಳಿರುವುವು. ದಾಸ ಸಾಹಿತ್ಯಕ್ಕೂ, ನಮ್ಮ ಕಸ್ತೂರಿ ಕನ್ನಡ ಭಾಷೆಗೂ ಇವರ ಕೊಡುಗೆ ಅತ್ಯಂತ ಸ್ಮರಣೀಯವಾಗಿರುವುದು.
ಇಲ್ಲಿ ನಾನು ಅತ್ಯಂತ ಸಂತೋಷ ಹಾಗೂ ಹೆಮ್ಮೆಯಿಂದ ತಿಳಿಸುವ ಒಂದು ಕೃತಿ ಯಾವುದೆಂದರೆ, ಅಂಬಾಬಾಯಿಯವರು ನಮ್ಮೂರು ಭದ್ರಾವತಿಯ ಕುರಿತು ರಚಿಸಿರುವುದು. "ಕೇಶವ ಮಾಧವತೀರ್ಥ ಯತಿ, ವಾಸಿಪ ವೃಂದಾವನದಲ್ಲಿ ಖ್ಯಾತಿ" ಎಂದು ಪ್ರಾರಂಭವಾಗುವ ರಚನೆಯಲ್ಲಿ ಭದ್ರಾವತಿಯ ವರ್ಣನೆ ಅತ್ಯಂತ ಮನೋಹರವಾಗಿ ಮೂಡಿ ಬಂದಿದೆ.....
ಕೇಶವ ಮಾಧವತೀರ್ಥ ಯತಿ,
ವಾಸಿಪ ವೃಂದಾವನದಲ್ಲಿ ಖ್ಯಾತಿ (ಪಲ್ಲವಿ)
ವಾಸುದೇವನ ಭಕ್ತ ಸುಜನಕೆ ಪ್ರೀತಿ
ಸೂಸುತ ಪೊರೆಯುವ ಕರುಣಿ ಪ್ರತೀತಿ (ಅನುಪಲ್ಲವಿ)
ಭದ್ರಾವತಿಯ ತೀರ ನರಸಿಂಹ ಕ್ಷೇತ್ರ
ಭದ್ರಾವತೀ ಪುರ ಮಠದಿ ಸತ್ಪಾತ್ರಾ
ಮುದ್ದಾದ ವೀರ ರಾಮನ ಪ್ರೀತಿ ಗಾತ್ರಾ
ಪೊದ್ದಿಸಿಕೊಂಡಿಪ್ಪ ಶಿರದಿ ಪವಿತ್ರ || ೧ ||
ಸ್ವಪ್ನದಿ ತೋರಿದ ಯತಿರೂಪದಿಂದ
ವಪ್ಪದಿ ದರ್ಶನಕೆ ಬಾರೆಂದು ನುಡಿದಾ
ಅಪ್ಪ ತಿಮ್ಮಪ್ಪನ ಸ್ತುತಿಯನಾಲಿಸಿದಾ
ಬಪ್ಪ ನರ ದರ್ಶನಕೆ ಮುಂದೆ ನಿಲ್ಲಿಸಿದಾ || ೨ ||
ಎನ್ನಿಂದ ಸಾರೋದ್ಧಾರ ಪದವನ್ನು
ಎನ್ನಲ್ಲೆ ನಿಂತು ತಾ ಬರಸಿದ ಘನ್ನ
ತನ್ನ ದೇವತ್ವವ ತೋರ್ದ ಪ್ರಸನ್ನ
ಇನ್ನಿಂಥ ಕರುಣಿಯ ಕಾಣೆ ನಾ ಮುನ್ನ || ೩ ||
ಮಧ್ವಕರ ಸಂಜಾತ ಮಾಧವರಂತೇ
ಶುದ್ಧ ಈ ಯತಿಕುಲ ಸಂಜಾತನಂತೇ
ಭದ್ರಾವತೀ ಪುರದಲ್ಲಿ ವಾಸಂತೇ
ಮುದ್ದು ಕೇಶವ ಮಾಧವಾತೀರ್ಥನಂತೆ || ೪ ||
ಕಾಮಿತಾರ್ಥವ ನಂಬೆ ಕೊಡುತಿಪ್ಪನಂತೆ
ಕಾಮಚಾರಿಗಳೀಗೆ ತೋರ್ಪನಲ್ಲಂತೆ
ಸ್ವಾಮಿ ರಾಮನ ಜಪಮೌನ ವ್ರತವಂತೆ
ಈ ಮಹಿಯಲಿ ಯೋಗಿ ಅವಧೂತನಂತೆ || ೫ ||
ಭಾಗವತಾದಲ್ಲಿ ಬಹು ದೀಕ್ಷಾಯುತರು
ಬಾಗಿದ ಜನರಿಗೆ ಪ್ರೇಮ ತೋರುವರು
ಭಾಗವತವ ರಾಜಗ್ ಹೇಳಿದರಿವರು
ಬೇಗರಿತುಕೊಳ್ಳಿರಿ ಬಹುಗೋಪ್ಯಯುತರು || ೬ ||
ನಂಬಿದ ಜನರಿಂದ ಹಂಬಲೊಂದಿಲ್ಲ
ತುಂಬಿದ ಭಕ್ತಿ ಆತ್ಮಾರ್ಪಣೆ ಬಲ್ಲ
ಸಂಬ್ರಹ್ಮದಿಂ ನಲಿವ ಗುರುಭಕ್ತಿ ಬೆಲ್ಲ
ಕುಂಭಿಣಿ ಮೂಢರಿಗೀವನು ಬಲ್ಯಾ || ೭ ||
ಎನ್ನ ಶ್ರೀ ಗುರು ತಂದೆ ಮುದ್ದುಮೋಹನ್ನ
ಘನ್ನರ ಕೃಪೆಯಿಂದ ಈ ಮುನಿವರನಾ
ಸನ್ನುತ ಸುಗುಣವ ಕಂಡ ನಾ ನಿನ್ನ
ಚನ್ನ ಶ್ರೀ ಲಕ್ಷ್ಮೀ ನರಸಿಂಹ ತೋರ್ದರನಾ || ೮ ||
ಸ್ವಾಪರೋಕ್ಷಿಯ ವೃಂದಾವನಸ್ಥಾ
ಗೋಪ್ಯದಿ ವಾಸಿಪ ಮಹಿಮ ವಿಖ್ಯಾತಾ
ಗೋಪಾಲಕೃಷ್ಣವಿಠಲನ ಕೃಪಾ ಪಾತ್ರಾ
ಕಾಪಾಡು ತವ ದಾಸದಾಸರ ನಿರುತಾ || ೯ ||
ಕೇಶವ ಮಾಧವತೀರ್ಥ ಯತಿ,
ವಾಸಿಪ ವೃಂದಾವನದಲ್ಲಿ ಖ್ಯಾತಿ - ಶ್ರೀ ಕೇಶವ ಮಾಧವತೀರ್ಥರು, ಪ್ರಶಾಂತ ಪರಿಸರವಾದ, ಶ್ರೀಮದ್ ಅಕ್ಷೋಭ್ಯತೀರ್ಥರು ತಪಗೈದ ಗ್ರಾಮದ ಸಮೀಪದಲ್ಲಿರುವ ಮಜ್ಜಿಗೇನ ಹಳ್ಳಿಯನ್ನು ತಮ್ಮ ವಾಸಕ್ಕೆ ಆಯ್ದುಕೊಂಡಿದ್ದರು. ಅಲ್ಲಿಂದ ಶ್ರೀಗಳವರು ಭದ್ರಾವತಿಗೆ ಬಂದು ಭದ್ರಾದಂಡೆಯ ಮೇಲೆ ತಮ್ಮ ಮಠವನ್ನು ಕಟ್ಟಿಕೊಂಡು ಜಪ, ತಪಾನುಷ್ಠಾನ ಮಾಡುತ್ತಲಿದ್ದು ಅಲ್ಲಿ ತಮ್ಮ ಶೇಷಾಯುಸ್ಯವನ್ನು ಕಳೆದು ತಮ್ಮ ಶಿಷ್ಯರಲ್ಲಿ ಒಬ್ಬರನ್ನು ತಮ್ಮ ಪೀಠಕ್ಕೆ ನೇಮಿಸಿ ತುರಿಯಾಶ್ರಮವನ್ನಿತ್ತು ಶ್ರೀಪ್ರಾಜ್ಞಮಾಧತೀರ್ಥರೆಂದು ನಾಮಕರಣ ಮಾಡಿದರು.
ಮಧ್ವಕರ ಸಂಜಾತ ಮಾಧವರಂತೇ
ಶುದ್ಧ ಈ ಯತಿಕುಲ ಸಂಜಾತನಂತೇ
ಭದ್ರಾವತೀ ಪುರದಲ್ಲಿ ವಾಸಂತೇ
ಮುದ್ದು ಕೇಶವ ಮಾಧವಾತೀರ್ಥನಂತೆ - ಶ್ರೀಕೇಶವ ಮಾಧವತೀರ್ಥರು ಭದ್ರಾವತಿಯಲ್ಲಿ ಶ್ರೀ ರಾಮಧ್ಯಾನತತ್ಪರರಾದರು. ಇವರ ವೃಂದಾವನವನ್ನು ಕೋಟೆಯಲ್ಲಿ ಭದ್ರಾನದಿ ದಡದಲ್ಲಿ ಶ್ರೀಪ್ರಾಜ್ಞ ಮಾಧವತೀರ್ಥರು ಪ್ರತಿಷ್ಠಾಪಿಸಿದರು. ಮುಂದೆ ಅವರು ಸಂಚಾರ ಕೈಗೊಂಡರು. ಶ್ರೀ ಕೇಶವ ಮಾಧವತೀರ್ಥರು ಆಷಾಢ ಶುಕ್ಲ ಷಷ್ಠಿಯಂದು ಶ್ರೀ ರಾಮಧ್ಯಾನತತ್ಪರರಾದರು. ಅವರ ಶ್ರೀ ವೀರರಾಮನು ಅವರನ್ನು ತನ್ನಲ್ಲಿಗೆ ಕರೆಸಿಕೊಂಡು ತನ್ನ ಕರುಣಾ ಪ್ರವಾಹವನ್ನು ಅವರ ಮೇಲೆ ಹರಿಸಿದನು. ಭದ್ರಾನದಿಯ ದಂಡೆಯ ಮೇಲೆ ಬೃಂದಾವನಸ್ಥರಾಗಿ ವಿರಾಜಮಾನರಾಗಿರುವರು.
ಭದ್ರಾವತಿಯ ತೀರ ನರಸಿಂಹ ಕ್ಷೇತ್ರ
ಭದ್ರಾವತೀ ಪುರ ಮಠದಿ ಸತ್ಪಾತ್ರಾ
ಮುದ್ದಾದ ವೀರ ರಾಮನ ಪ್ರೀತಿ ಗಾತ್ರಾ
ಪೊದ್ದಿಸಿಕೊಂಡಿಪ್ಪ ಶಿರದಿ ಪತಿತ್ರ - ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದ ಬಳಿ ಸಹ್ಯಾದ್ರಿಯ ಒಡಲಲ್ಲಿ ತನ್ನ ಉಗಮಸ್ಥಾನ ಹೊಂದಿರುವ ಭದ್ರಾನದಿಯು ಉತ್ತರಾಭಿಮುಖವಾಗಿ ಹರಿದು ಭದ್ರಾವತಿ ನಗರವನ್ನು ದಕ್ಷಿಣ ದಿಕ್ಕಿನಿಂದ ಪ್ರವೇಶಿಸುತ್ತದೆ. ಹೀಗೆ ಪ್ರವೇಶಿಸುವಾಗ, ಉತ್ತರ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ಎಡಕ್ಕೆ ತಿರುಗಿ ಪಶ್ಚಿಮ ವಾಹಿನಿಯಾಗುತ್ತದೆ. ಉತ್ತರ ದಿಕ್ಕಿನಿಂದ ಪಶ್ಚಿಮ ದಿಕ್ಕಿಗೆ ತಿರುಗುವ ಈ ತಿರುವಿಗೆ ಚಕ್ರತೀರ್ಥ ಎನ್ನುತ್ತಾರೆ. ಈ ಚಕ್ರತೀರ್ಥದ ಬಳಿ ಪುರಾಣ ಪ್ರಸಿದ್ಧ ವಂಕೀ ಮಹರ್ಷಿಗಳ ಆಶ್ರಮವಿತ್ತಂತೆ. ಈ ವಂಕೀ ಮಹರ್ಷಿಗಳು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಕುರಿತು ತಪಸ್ಸನ್ನಾಚರಿಸುತ್ತಾರೆ (ವಿಕಿ ಪಿಡಿಯ ಕೃಪೆ). ಸ್ಥಳ ಪುರಾಣದಂತೆ ಶ್ರೀ ವಂಕಿ ಮಹರ್ಷಿಗಳು ಶ್ರೀ ಲಕ್ಷ್ಮೀ ನರಸಿಂಹದೇವರನ್ನು ಪ್ರತ್ಯಕ್ಷಿಸಿಕೊಂಡರೆಂದು ಪ್ರತೀತಿ. ವಂಕಿ ಮಹರ್ಷಿಗಳು ಇಲ್ಲಿ ವಾಸಿಸುತ್ತಿದ್ದರಿಂದ ಈ ಸ್ಥಳಕ್ಕೆ ’ವಂಕಿಪುರ’ವೆಂದು ಹೆಸರು ಬಂದಿತ್ತು. ಶ್ರೀ ವಾದಿರಾಜ ಸ್ವಾಮಿಗಳು ಭದ್ರಾ ನದಿಯನ್ನು ತಮ್ಮ ’ತೀರ್ಥಪ್ರಬಂಧ’ದಲ್ಲಿ "ಹೃತಪಾಪನಿದ್ರಾಂ ವಿಮುಕ್ತಿ ಪದ್ಯಾಂ ವಿಮಲೈಕ ಸಾಧ್ಯಾಂ ಶ್ರಿತೋಸ್ಮಿ" - ಪರಿಹರಿಸಲ್ಪಟ್ಟ ಪಾಪವೆಂಬ ನಿದ್ರೆಯುಳ್ಳ, ಮೋಕ್ಷದ ಸೋಪಾನ ರೂಪಳಾದ, ನಿರ್ಮಲರಿಂದ ಮಾತ್ರವೇ ಹೊಂದಲು ಯೋಗ್ಯಳಾದ, ಭದ್ರಾ ನದಿಯನ್ನು ಆಶ್ರಯಿಸಿದ್ದೇವೆ ಎಂದು ಉಲ್ಲೇಖಿಸಿರುವರು.
ಮುಂದೆ ಹದಿಮೂರನೇ ಶತಮಾನದಲ್ಲಿ ಹೊಯ್ಸಳರ ವೀರನರಸಿಂಹನು (ವಿಷ್ಣುವರ್ಧನನ ಮೊಮ್ಮಗ ಮತ್ತು ಎರಡನೇ ಬಲ್ಲಾಳನ ಮಗ) ವಂಕೀ ಮಹರ್ಷಿ ಮತ್ತು ಲಕ್ಷ್ಮೀನರಸಿಂಹ ಸ್ಥಳ ಪುರಾಣವಿದ್ದ ಈ ಪ್ರದೇಶದಲ್ಲಿ ಭವ್ಯವಾದ ಲಕ್ಷ್ಮೀನರಸಿಂಹ ದೇವಾಲಯವನ್ನು ಹೊಯ್ಸಳ ಶಿಲ್ಪಕಲಾ ಮಾದರಿಯಲ್ಲಿ ಕಟ್ಟಿಸಿ ಕ್ರಿ.ಶ. ೧೨೨೪ ನೇ ಇಸವಿಯ ವ್ಯಯನಾಮ ಸಂವತ್ಸರದ ದ್ವಿತೀಯ ಶುದ್ಧ ತ್ರಯೋದಶಿಯಂದು ಲೋಕಾರ್ಪಣೆ ಮಾಡಿದನು. ಇಂದಿಗೂ ಈ ದೇವಾಲಯ ಭದ್ರಾವತಿಯ ಹಳೇನಗರದಲ್ಲಿದ್ದು ಭಾರತೀಯ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿ ಐತಿಹಾಸಿಕ ಸ್ಮಾರಕವೆಂದು ಘೋಷಿಸಲ್ಪಟ್ಟಿದೆ (ವಿಕಿ ಪಿಡಿಯಾ ಕೃಪೆ).
ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರು ಇಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪಿಸಿದ ನಂತರ ವಂಕಿಪುರವು ಶ್ರೀ ನಾಲ್ವಡಿ ಕೃಷ್ಣರಾಜ ವಡೆಯರ್ ಆಳ್ವಿಕೆಯಲ್ಲಿ "ಭದ್ರಾವತಿ"ಯಾಗಿ ಮರು ನಾಮಕರಣಗೊಂಡಿದೆ. ಭದ್ರಾ ನದಿಯ ತೀರದಲ್ಲಿರುವ ಭದ್ರಾವತಿಯಲ್ಲಿ ನಂತರದ ದಿನಗಳಲ್ಲಿ ಕಾಗದ ಕಾರ್ಖಾನೆಯೂ ಕೂಡ ಸ್ಥಾಪಿಸಲ್ಪಟ್ಟಿತು. ಹಿಂದೆ ವಶಿಷ್ಟ ಋಷಿಗಳಿಂದ ಭದ್ರಾನದಿಯ ಮಹಾತ್ಮ್ಯವನ್ನು ತಿಳಿದ ಶ್ರೀ ರಾಮಚಂದ್ರನು ಪಶ್ಚಿಮವಾಹಿನಿಯಾದ ಭದ್ರಾನದಿಯಲ್ಲಿ ಸ್ನಾನ ಮಾಡಿದನಂತೆ. ಸ್ನಾನಾನಂತರ ಕಲ್ಯಾಣ ಗುಣಪರಿಪೂರ್ಣನಾದ ಶ್ರೀ ದಾಶರಥಿ ಶ್ರೀ ರಾಮಚಂದ್ರ ಸ್ವಾಮಿಯ ವಂಕಿಋಷಿಗಳಿಗೆ ಪ್ರತ್ಯಕ್ಷನಾದ ಶ್ರೀ ನರಸಿಂಹನನ್ನು ಆರಾಧಿಸಿದನಂತೆ. ಭದ್ರಾವತಿಯಲ್ಲಿ ಶ್ರೀರಾಮಚಂದ್ರ ಸೀತಾ, ಲಕ್ಷ್ಮಣ ಸಮೇತ ಇರುವ ದೇವಸ್ಥಾನವೂ ಇದೆ. ಇಲ್ಲೇ ಈಶ್ವರ ಕೂಡ ಲಿಂಗರೂಪಿಯಾಗಿ ಇದ್ದಾನೆ. ಜೊತೆಗೆ ಸುಬ್ರಹ್ಮಣ್ಯನ ಸನ್ನಿಧಾನವೂ ಇದೆ.
ಮಧ್ವಕರ ಸಂಜಾತ ಮಾಧವರಂತೇ
ಶುದ್ಧ ಈ ಯತಿಕುಲ ಸಂಜಾತನಂತೇ
ಭದ್ರಾವತೀ ಪುರದಲ್ಲಿ ವಾಸಂತೇ
ಮುದ್ದು ಕೇಶವ ಮಾಧವತೀರ್ಥನಂತೆ - ಶ್ರೀ ಮಾಧವ ತೀರ್ಥರ ಕರಕಮಲಸಂಜಾತರಾದ ಶ್ರೀ ಕೇಶವ ಮಾಧವ ತೀರ್ಥರ ಮಠವು ಉತ್ತರಾಭಿಮುಖವಾಗಿದೆ. ರಸ್ತೆಗೆ ಹೊಂದಿಕೊಂಡಿದೆ. ಬೃಂದಾವನವನ್ನು ಹಿಂದೆ ಮೈಸೂರ್ ಸಂಸ್ಥಾನದ ದಿವಾನರಾಗಿದ್ದ ಶ್ರೀ ಮಿರ್ಜಾ ಇಸ್ಮಾಯಿಲ್ ಅವರು ಕಟ್ಟಿಸಿಕೊಟ್ಟಿರುತ್ತಾರೆ. ಮಠದ ಮುಂಬಾಗಿಲಿನಲ್ಲಿ ನಿಂತರೆ ಶ್ರೀ ಕೇಶವ ಮಾಧವತೀರ್ಥರ ಬೃಂದಾವನ ಹಾಗೂ ಬೃಂದಾವನದ ಹಿಂಬದಿಯಲ್ಲಿ ಮುಖ್ಯಪ್ರಾಣನ ವಿಗ್ರಹವಿರುವುದು ಗೋಚರವಾಗುತ್ತದೆ. ಪಾರ್ಶ್ವಮುಖ ಪ್ರಾಣದೇವರ ವಿಗ್ರಹವು ಸುಂದರವಾಗಿದೆ. ಬೃಂದಾವನದಲ್ಲಿ ಯತಿಗಳು ಸಾಕ್ಷಾತ್ ನೆಲೆಸಿದ್ದಾರೆ ಎಂಬ ಪ್ರತೀತಿಯಿದೆ. ಬ್ರಾಹ್ಮೀ ಮುಹೂರ್ತದಲ್ಲಿ ಯತಿಗಳು ಸಾಕಾರವಾಗಿ ನದಿಯಲ್ಲಿ ಸ್ನಾನ ಮಾಡಿ ಬರುವುದನ್ನು ಕಂಡವರಿದ್ದಾರೆ. ದಾರಿಗೆ ಅಡ್ಡಲಾಗಿ ಮಲಗಿದ್ದವರನ್ನು ಎಚ್ಚರಿಸಿ ಹೋಗಿರುವ ಅನುಭವ ಅನೇಕರಿಗೆ ಆಗಿದೆ. ನಂಬಿಕೆಯಿಂದ ಯತಿಗಳಿಗೆ ಶರಣಾಗಿ, ಸೇವೆ ಮಾಡಿದ ಅನೇಕರಿಗೆ ಅವರ ಸಮಸ್ಯೆಗಳು ಪರಿಹಾರವಾಗಿರುವುದು. ಅಂಬಾಬಾಯಿಯವರ ಈ ಸಾಲುಗಳು "ಸ್ವಾಪರೋಕ್ಷಿಯ ವೃಂದಾವನಸ್ಥಾ ಗೋಪ್ಯದಿ ವಾಸಿಪ ಮಹಿಮ ವಿಖ್ಯಾತಾ" ಯತಿಗಳು ಸಾಕ್ಷತ್ ನೆಲೆಸಿರುವರೆಂಬುದನ್ನೇ ಸೂಚಿಸುತ್ತದೆ.
ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಅಂಬಾಬಾಯಿಯವರು ನಮ್ಮೂರು ಭದ್ರಾವತಿಗೂ ಬಂದಿದ್ದರು ಮತ್ತು ನಮ್ಮೂರಿನ ಮಹಿಮೆಯನ್ನು ಕುರಿತು ಹಾಡು ರಚಿಸಿರುವರೆಂಬುದೇ ನನಗೆ ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ವಿಷಯವಾಗಿದೆ. ಎಂಥಹ ಮಹಿಮೆಯುಳ್ಳ ಸ್ಥಳ ನಮ್ಮ "ಭದ್ರಾವತಿ".
ಆಧಾರ ಪುಸ್ತಕಗಳು :
೧) ಸಮಗ್ರ ದಾಸ ಸಾಹಿತ್ಯ - ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
೨) ಶ್ರೀ ಕೇಶವ ಮಾಧವತೀರ್ಥರು - ಎಸ್ ಕೆ ಬದರೀನಾಥ್