Saturday, July 31, 2010

ಪುಸ್ತಕ ಪರಿಷೆ.....

ಇದೇ ತಿಂಗಳ ೨೫ನೇ ತಾರೀಖು ಸೃಷ್ಟಿ ವೆಂಚರ್ಸ್ ನವರು ಕನ್ನಡ ಪುಸ್ತಕ ಪರಿಷೆ ಎಂಬ ಕಾರ್ಯಕ್ರಮ ಏರ್ಪಡಿಸಿದ್ದರು. ಇದುಎರಡನೆಯ ಬಾರಿ ನಡೆಯುತ್ತಿರುವುದು. ಇದಕ್ಕೆ ಮುಂಚೆ ಕೂಡ ಕೆಲವು ತಿಂಗಳುಗಳ ಮೊದಲು ಒಂದು ಹೊಸ ಅಲೆ ಸೃಷ್ಟಿಸುತ್ತಾ, ಸೃಷ್ಟಿ ವೆಂಚರ್ಸ್ ನವರು ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಕನ್ನಡ ಸಾಹಿತ್ಯ.ಕಾಂ ಸದಸ್ಯರಿಗೆಲ್ಲಾ ಕಾರ್ಯಕ್ರಮಕ್ಕೆಆಹ್ವಾನ ಕೊಟ್ಟು ಒಂದು ಮಿಂಚಂಚೆ ಬಂದಾಗ, ನನಗೆ ಮೊದಲು ಸ್ವಲ್ಪ ಆಶ್ಚರ್ಯವಾಗಿತ್ತು ಮತ್ತು ಕುತೂಹಲದಿಂದಲೇ ನಾನುಮೊದಲ ಬಾರಿಗೆ ನೋಡಲು ಹೋಗಿದ್ದೆ. ಸೃಷ್ಟಿ ವೆಂಚರ್ಸ್ ನಮ್ಮ ಯುವಕರ ಗುಂಪು ತಮ್ಮ ಕಛೇರಿಯ ಕೆಲಸಗಳ ಒತ್ತಡದಲ್ಲೂ, ತಮ್ಮ ಎಲ್ಲಾ ರಜಾ ದಿನಗಳನ್ನೂ, ಬಿಡುವಿನ ಸಮಯವನ್ನೂ ಉಪಯೋಗಿಸಿಕೊಂಡು, ಮನೆ ಮನೆಗೂ ಹೋಗಿ ಎಲ್ಲರಿಂದಲೂ, ಹಳೆಯ - ಹೊಸ ಕನ್ನಡ ಪುಸ್ತಕಗಳನ್ನು ಪಡೆದುಕೊಂಡು ಬಂದು ಒಂದು ಭಾನುವಾರ ಎಲ್ಲರಿಗೂ ಅನುಕೂಲವಾಗುವಂತೆ, ಪುಸ್ತಕಗಳ ಪ್ರದರ್ಶನವನ್ನು ಮೊಟ್ಟ ಮೊದಲ ಬಾರಿಗೆ ಜನವರಿ ೧೭ರಂದು ಏರ್ಪಡಿಸಿದ್ದರು. ಜೊತೆಗೆ ದಿನದ ಪುಸ್ತಕ ಪರಿಷೆನೋಡಲು ಬಂದವರಿಗೆ, ಓದಲು ಒಂದು ಪುಸ್ತಕ ಉಚಿತವಾಗಿ ಕೊಡುವುದೆಂಬ ಮಾತನ್ನೂ ಸೇರಿಸಿದ್ದರು.

ಸೃಷ್ಟಿ ವೆಂಚರ್ಸ್ ನವರು ಅನೇಕ ಸೃಜನ ಶೀಲ ಚಟುವಟಿಕೆಗಳನ್ನು ನಡೆಸಿಕೊಡುತ್ತಿದ್ದಾರೆ. ಇವರ ಮೊದಲ ಪುಸ್ತಕ ಪರಿಷೆಯಪರಿಕಲ್ಪನೆಯೇ ನನಗೆ ಹೊಸದೊಂದು ವಿಚಾರವೆನ್ನಿಸಿತ್ತು. ನಾವುಗಳು ಕೊಂಡು ಓದಿ, ಬಿಟ್ಟ ಅಥವಾ ಬಿಸುಟ ಪುಸ್ತಕಗಳನ್ನುನಮ್ಮಿಂದ ದಾನವಾಗಿ ಪಡೆದುಕೊಂಡು, ಅದನ್ನೆಲ್ಲಾ ಒಂದು ಅವಕಾಶವಾಗಿ ಮಾರ್ಪಡಿಸಿ, ಓದಲು ಬಯಸುವ ಸಹೃದಯರಿಗೆತಲುಪಿಸುವ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು. ನಮ್ಮ ಭಾಷೆ ಉಳಿಯಬೇಕು, ಎಲ್ಲೆಡೆಗೂ ಕನ್ನಡ ಪ್ರಚಾರವಾಗಬೇಕು. ಪ್ರತಿಯೊಬ್ಬ ಕನ್ನಡಿಗನೂ, ಕನ್ನಡೇತರನೂ, ಕನ್ನಡ ಭಾಷೆ ಕಲಿಯಬೇಕು, ಕನ್ನಡ ಪುಸ್ತಕಗಳನ್ನು ಓದಬೇಕು ಎಂಬಸೃಷ್ಟಿಯವರಕಾಳಜಿ ನನಗೆ ತುಂಬಾ ಇಷ್ಟವಾಯಿತು. ಮೊದಲ ಬಾರಿ ನಡೆದಾಗಲೇ, ಪರಿಕಲ್ಪನೆ, ಸಾಹಿತ್ಯ ಆರಾಧಕರೂ, ಆಸಕ್ತರೂತುಂಬಿರುವ ನಮ್ಮ ಬೆಂಗಳೂರಿನ ಬಸವನಗುಡಿಯಲ್ಲಿ ಸಾಕಷ್ಟು ಉತ್ತೇಜನ ಪಡೆಯಿತು.... ಅನೇಕ ಸಾಯಿತಿಗಳೂ, ಗಣ್ಯರೂ, ಸಾರ್ವಜನಿಕರೂ ಬಂದು ಉತ್ತೇಜನ ನೀಡಿದ್ದರು. ನಾವು ಹೋದಾಗ ಕೂಡ, ಮೊದಲ ಸಲ ಶ್ರೀಮತಿ ಸುಧಾ ಮೂರ್ತಿಯವರನ್ನುಭೇಟಿಯಾಗಿದ್ದೆವು..

ಸಲವೂ ಸೃಷ್ಟಿಯವರು... ಪುಸ್ತಕ ಪರಿಷೆಯನ್ನು -
"ವಿನೂತನ ಪರಿಕಲ್ಪನೆಗಳಲ್ಲೊಂದು ಸಮಾಜ ವಿಕಾಸದ ಶಕ್ತಿ ಕೇಂದ್ರಗಳಾದ ಪುಸ್ತಕಗಳು ನಿಂತ ನೀರಿನಂತೆ ಒಂದೆಡೆ ಇರದೆ ಹಸ್ತದಿಂದ ಹಸ್ತಕ್ಕೆ,ಮಸ್ತಕದಿಂದ ಮಸ್ತಕಕ್ಕೆ ಸಂಚರಿಸಿ ತಮ್ಮ ಇರುವಿಕೆಯ ಸಾರ್ಥಕತೆಯನ್ನು ಸಾಧಿಸಬೇಕು" ಎಂಬ ಚಿಂತನೆಯಡಿಯಲ್ಲಿ “ಮೇಳಕ್ಕೆ ಬರುವವರಿಗೆ ಒಂದು ಪುಸ್ತಕ ಉಚಿತ" ಮತ್ತು "ತಮ್ಮಿಂದಷ್ಟು ಪುಸ್ತಕಗಳು ಮೇಳಕ್ಕಾಗಿ" ಎಂಬ ಉದ್ದೇಶದಿಂದ ಪುಸ್ತಕಗಳನ್ನು ಸಂಗ್ರಹಿಸಿವಿತರಿಸುವ ಯೋಜನೆ ರೂಪಿಸಿತ್ತು. ಹೆಚ್ಚು ಸಂಖ್ಯೆಯಲ್ಲಿ ಮಕ್ಕಳಿಗೂ, ಯುವಕರಿಗೂ, ವಿದ್ಯಾರ್ಥಿಗಳಿಗೂ ಅನುಕೂಲ ಕಲ್ಪಿಸಿ ಕೊಡುವವಿಶೇಷ ಯೋಜನೆ ರೂಪಿಸಿತ್ತು.. ಪ್ರಾಮಾಣಿಕವಾಗಿ ಪುಸ್ತಕ ಜಾಗೃತಿ ಮತ್ತು ಭಾಷಾ ಜಾಗೃತಿಯನ್ನು ಹೊಂದಿರುವಕನ್ನಡಿಗರಿಂದ...... ಕನ್ನಡಿಗರಿಗಾಗಿ ಮಾತ್ರವೇ ಅಲ್ಲದೆ, ಕನ್ನಡೇತರರಿಗಾಗಿಯೂ ಪುಸ್ತಕ ಪರಿಷೆ ಏರ್ಪಡಿಸಲಾಗಿತ್ತು. ಬೆಳಿಗ್ಗೆ ೧೦ಘಂಟೆಗೆ ಆರಂಭವಾದ ಇದು ಸಾಯಂಕಾಲ ೫ರವರೆಗೆ ಎಂದು ನಿಯೋಜಿಸಲ್ಪಟ್ಟಿತ್ತು.

ಬೆಳಿಗ್ಗೆ ೧೧.೩೦ ಸಮಯದಲ್ಲಿ ನಾವು ಕೆಲವು ಬ್ಲಾಗ್ ಮಿತ್ರರು ಸೇರಿ ಅಲ್ಲಿಗೆ ಭೇಟಿ ಕೊಟ್ಟಾಗ, ಅದಾಗಲೇ ಜನರಿಂದ ತುಂಬಿತ್ತು. ಆರಂಭವಾದ ಒಂದೂವರೆ ಘಂಟೆಯೊಳಗಾಗಿ ಆಗಲೇ ೧೦೦೦ಕ್ಕೂ ಮೇಲ್ಪಟ್ಟು ಪುಸ್ತಕಗಳು ವಿತರಣೆಯಾಗಿ ಹೋಗಿವೆ ಎಂಬುದುತಿಳಿಯಿತು. ಇಲ್ಲಿ ಎಲ್ಲಾ ತರಹದ ಪುಸ್ತಕಗಳನ್ನೂ ಒಂದೇ ಜಾಗದಲ್ಲಿ ನಮ್ಮ ಉಪಯೋಗಕ್ಕಾಗಿ ಕೊಡುತ್ತಿರುವುದರಿಂದ, ಇದು ಒಂದುವರ್ಗಕ್ಕಾಗಿಯೋ, ಅಥವಾ ಮಹಿಳೆಯರಿಗಾಗಿಯೋ ಸೀಮಿತವಾಗಿಲ್ಲ. ಪರೀಕ್ಷೆಯ ತಯ್ಯಾರಿಗೆ ಬೇಕಾಗಿರುವಂತಹ ಪುಸ್ತಕಗಳುವಿದ್ಯಾರ್ಥಿಗಳಿಗಾಗಿ, ಆಧ್ಯಾತ್ಮದ ಪುಸ್ತಕಗಳು ಆಸಕ್ತರಿಗಾಗಿ, ಕನ್ನಡ ಕಾದಂಬರಿಗಳು ಮಹಿಳೆಯರಿಗಾಗಿ, ಚಿಕ್ಕ ಮಕ್ಕಳಿಗಾಗಿಸಾಹಿತ್ಯ.... ಹೀಗೆ ಎಲ್ಲಾ ಬೇರೆ ಬೇರೆ ವಿಷಯಗಳ ಬಗೆಗಿನ ಅನೇಕ ಪುಸ್ತಕಗಳು ಇದ್ದವು.

ಇದಲ್ಲದೇ ಬರಿಯ ವಿತರಣೆಗಿಟ್ಟ ಪುಸ್ತಕಗಳಲ್ಲದೆ.... ಅತ್ಯಂತ ಪುರಾತನವಾದ, ಈಗ ಲಭ್ಯವಿಲ್ಲದಿರುವಂತಹ ಅನರ್ಘ್ಯರತ್ಯಗಳಂತಹ ಪುಸ್ತಕಗಳೂ ಇದ್ದವು.... ಆದರೆ ವಿತರಣೆಗಾಗಿ ಅಲ್ಲ. ಅವುಗಳನ್ನು ಬರಿಯ ಪ್ರಕರ್ಶನಕ್ಕಾಗಿ ಇಡಲಾಗಿತ್ತು. ಜೋಪಾನದಿಂದ, ಮುಂದಿನ ಪೀಳಿಗೆಗಳಿಗಾಗಿ ಕಾಯ್ದಿರಿಸಿಕೊಳ್ಳಬೇಕಾದವುಗಳನ್ನು ಇಲ್ಲಿ, ಯಾರೂ ಮುಟ್ಟದಂತೆ, ಆದರೆ ನೋಡಲುಮಾತ್ರ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿತ್ತು. ಇದು ಸೃಷ್ಟಿ ವೆಂಚರ್ಸ್ ನವರ ಕನ್ನಡ ಸಾಹಿತ್ಯದ ಬಗೆಗಿನ ಕಾಳಜಿಯನ್ನುಪ್ರತಿಬಿಂಬಿಸುತ್ತದೆ..

ಅನೇಕ ಸಾಹಿತಿಗಳೂ, ವೃದ್ಧರೂ, ಮಾಧ್ಯಮದವರೂ ಸೇರಿದಂತೆ ಒಂದು ಪುಟ್ಟ ಜನ ಪ್ರವಾಹವೇ ಅಲ್ಲಿ ನೆರೆದಿತ್ತು........ TV ಮಾಧ್ಯಮದವರೂ ಬಂದಿದ್ದರು... ಮತ್ತು ಅದನ್ನು ರಾತ್ರಿ ಪ್ರಸಾರ ಮಾಡುವ Just Bangalore ಕಾರ್ಯಕ್ರಮದಲ್ಲಿತೋರಿಸಿದರೆಂದೂ ತಿಳಿಯಿತು. ನಾವು ಮೊದಲ ಪುಸ್ತಕ ಪರಿಷೆಯಲ್ಲಿ ತೆಗೆದುಕೊಂಡು ಬಂದ ಪುಸ್ತಕ ಓದಿದ್ದರೆ, ಅದನ್ನು ಬಾರಿಯಪರಿಷೆಯಲ್ಲಿ ವಾಪಸ್ಸು ಕೊಡಬಹುದಿತ್ತು.... ನಿಮ್ಮ ಮನೆಗಳಲ್ಲಿ ನೀವು ಓದಿ ಬಿಟ್ಟಿರುವ ಪುಸ್ತಕಗಳನ್ನು ಇಲ್ಲಿಯ ಪುಸ್ತಕ ಪರಿಷೆಗಾಗಿಸೃಷ್ಟಿ ವೆಂಚರ್ಸ್ ಗೆ ಯಾವಾಗ ಬೇಕಾದರೂ ತಲುಪಿಸಬಹುದು.

ಸೃಷ್ಟಿ ವೆಂಚರ್ಸ್ ನವರು ಬರೀ ಪುಸ್ತಕ ಪರಿಷೆಯೊಂದೇ ಅಲ್ಲದೆ, ಅನೇಕ ಪ್ರಶಸ್ತಿ ವಿಜೇತ, ಉತ್ತಮ ಕನ್ನಡ ಚಿತ್ರಗಳ ಪ್ರದರ್ಶನಮತ್ತು ಚಿತ್ರ ತಂಡಗಳೊಂದಿಗೆ ಸಂವಾದ ಕೂಡ ಏರ್ಪಡಿಸುತ್ತಿರುತ್ತಾರೆ... ತಮ್ಮ ಪುಟ್ಟ ಕಛೇರಿಯಲ್ಲಿ ಮಕ್ಕಳಿಗಾಗಿ creativity classes, ಗೃಹಿಣಿಯರಿಗಾಗಿ ಅನೇಕ ತರಹದ ತರಬೇತಿಗಳನ್ನೂ ಕೂಡ ನಡೆಸುತ್ತಾರೆ... ಹೀಗೆ ನಮಗೆ ಹೊಸಾಪರಿಕಲ್ಪನೆಯೊಂದನ್ನು ಸೃಷ್ಟಿಸಿ ತೋರಿಸಿದ ಸೃಷ್ಟಿ ವೆಂಚರ್ಸ್ ನವರಿಗೆ ಒಂದು ಧನ್ಯವಾದವನ್ನು ತಿಳಿಸುತ್ತಾ, ಇನ್ನೂ ಅನೇಕಸೃಜನಾತ್ಮಕ ಕಾರ್ಯಗಳು ಅವರಿಂದ ನಡೆಯಲಿ ಎಂದು ಹಾರೈಸುತ್ತೇನೆ. ಇದರ ವಿವರಣೆಯನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸಿದಉದ್ದೇಶವೆಂದರೆ, ಮುಂದಿನ ಪುಸ್ತಕ ಪರಿಷೆ ಮತ್ತು ಅವರ ಇತರ ಚಟುವಟಿಕೆಗಳಲ್ಲಿ, ನಮ್ಮ ಬ್ಲಾಗ್ ಮಿತ್ರರುಗಳು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಲಿ ಮತ್ತು ಕನ್ನಡ ಭಾಷೆಯ, ಸಾಹಿತ್ಯದ ಉಳಿವಿಗಾಗಿ ಬೆಂಬಲ ತೋರಿಸಲಿ ಎಂಬ ಆಶಯದಿಂದಲೇ....
“ಸೃಷ್ಟಿ ವೆಂಚರ್ಸ್”
ನಂ. 81 ,ಈ.ಏ.ಟಿ ರಸ್ತೆ,
(ಪುಳಿಯೊಗರೆ ಪಾಯಿಂಟ್ ಮೇಲೆ)
ಬಸವನಗುಡಿ, ಬೆಂಗಳೂರು-560004
9945003479, 9448171069

Monday, July 26, 2010

ಪುಸ್ತಕ ಪರಿಚಯ - ೬ :

ಮೊದಲ ಹೆಜ್ಜೆ....

ತ್ರಿವೇಣಿಯವರ ೭ನೇ ಕಾದಂಬರಿ ಈ ಮೊದಲ ಹೆಜ್ಜೆ... ಇದರಲ್ಲಿ ಹುಟ್ಟುವ ಮೊದಲೇ ಬೇಡವಾಗಿತ್ತು ಎಂಬ ಭಾವನೆಯನ್ನು ಅಂಟಿಸಿಕೊಂಡೇ ಹುಟ್ಟುವ ಮಗು, ಹುಟ್ಟಿದ ತಕ್ಷಣ ತಾತನ್ನ ನುಂಗಿಕೊಂಡಿತೆಂಬ ಇನ್ನೊಂದು ಹಣೆಪಟ್ಟಿಯೊಂದಿಗೆ, ಬೇಡಾದ ಮಗುವಾಗಿಯೇ, ತಾತ್ಸಾರಕ್ಕೊಳಗಾಗೇ ಬೆಳೆಯುತ್ತೆ. ನೋಡಲು ಕಪ್ಪಗಿದ್ದ ಹುಡುಗಿಗೆ ಮದುವೆಯೇ ಆಗದೆ, ಬೆಳ್ಳಗೆ ಅಂದವಾಗಿದ್ದ ತಂಗಿ ಮಣಿಯ ಮದುವೆ ಆಗಿ ಅವಳ ಬಾಣಂತನಕ್ಕಾಗಿ, ಅಕ್ಕ ಬಂದಾಗ, ಅದೇ ಕಾಂಪೌಂಡಿನಲ್ಲಿದ್ದ ಹುಡುಗನ ಪರಿಚಯವಾಗಿ, ಅವನಿಂದ ಮೋಸಹೋಗಿ, ಮನೆ ಬಿಟ್ಟು ಎಲ್ಲೆಲ್ಲೋ ತಿರುಗಿ, ಕೊನೆಗೆ ತಾನೇ ಹೆತ್ತ ಮಗುವನ್ನು ಕೊಂದು ೫ ವರ್ಷದ ಜೈಲು ಶಿಕ್ಷೆ ಅನುಭವಿಸುತ್ತಾಳೆ. ನೋಡಲು ಬಂದ ತಂದೆ-ತಾಯಿಯರನ್ನು ಭೇಟಿ ಮಾಡುವುದೇ ಇಲ್ಲ. ಕೊನೆಗೆ ಅವಳು ಬಿಡುಗಡೆಗಾಗಿ ಕಾಯುತ್ತಾ ಕುಳಿತಿದ್ದ ದಿನ ಜೈಲಿಗೆ ಹೊಸ ಖೈದಿಯ ಪ್ರವೇಶವಾಗುತ್ತದೆ. ಎಲ್ಲೋ ಕೇಳಿದ ಕೊರಳು ಎಂದು ನೋಡಿದಾಗ, ತನಗೆ ಮೋಸ ಮಾಡಿದ್ದ "ಶಿವು" ೧೦ ವರ್ಷದ ಹುಡುಗಿಯ ಮೇಲಿನ ಅತ್ಯಾಚಾರದ ಅಪರಾಧದಲ್ಲಿ ೭ ವರ್ಷದ ಕಠಿಣ ಶಿಕ್ಷೆ ಅನುಭವಿಸಲು ಬಂದಿರುತ್ತಾನೆ. ಜೈಲಿನಿಂದ ಹೊರಬಂದ ನಮ್ಮ ನಾಯಕಿಯನ್ನು ಅವಳ ತಂದೆ ಕರೆದುಕೊಂಡು ಹೋಗುತ್ತಾರೆ.

ಒಲ್ಲದ ಮಗುವಾಗಿ, ಕೃಷ್ಣ ಸುಂದರಿಯಾಗಿದ್ದ ಹುಡುಗಿಯ ಒಳಗೂ ರಂಗು ರಂಗಿನ ಸುಂದರ ಕನಸುಗಳು ಇರುತ್ತವೆಂಬ ಚಿತ್ರಣ ಈ ಕಥೆ. ಸೆರೆಮನೆಯಲ್ಲಿ ಏನೇನು ನಡೆಯುತ್ತದೆಂಬುದೂ ಮತ್ತು ಯಾವ ಯಾವ ಮನಸ್ಥಿತಿಯ ಖೈದಿಗಳಿರುತ್ತಾರೆಂಬುದೂ ಸ್ಥೂಲವಾಗಿ ಚಿತ್ರಿಸಲ್ಪಟ್ಟಿದೆ.......

Friday, July 9, 2010

ಸ್ತ್ರೀ... ಹೆಣ್ತನ...........

ಸ್ತ್ರೀ....ಎನ್ನುವ ಒಂದೇ ಒಂದು ಅಕ್ಷರಕ್ಕೆ ಅತ್ಯಂತ ನವಿರಾದ, ಭಾವನಾತ್ಮಕ ತಂತುಗಳು ಬೆಸೆದುಕೊಂಡಿವೆ. ಇದರ ಅರ್ಥ, ಆಳ, ವ್ಯಾಪ್ತಿ ಅರಿಯುವ ಸತತ ಪ್ರಯತ್ನ ಮಾಡುತ್ತಲೇ ಬಂದಿದ್ದೇವೆ. ಸ್ತ್ರೀ ನಾನಾರೂಪಗಳನ್ನೊಳಗೊಂಡ, ಒಂದು ಪಾತ್ರ..... ಇಳೆ, ಭೂಮಿ, ವಸುಂಧರೆ.... ಎಂದು ನಾನಾ ಹೆಸರಿನಿಂದ ಕರೆಯಲ್ಪಡುವ, ನಮ್ಮ ಭೂದೇವಿಯಂತೆ.... ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಭೂಮಿಯನ್ನು ತಾಯಿಯಾಗಿ ಪೂಜಿಸುತ್ತೇವೆ ಮತ್ತು ನಮ್ಮ ಮನೆಗಳಲ್ಲಿ ಸ್ತ್ರೀಯರನ್ನು ಭೂದೇವಿಗೆ ಹೋಲಿಸುತ್ತೇವೆ. ಯುಗಯುಗಗಳಿಂದ ನಮ್ಮೆಲ್ಲಾ ದುರಾಚಾರ, ದಬ್ಬಾಳಿಕೆಗಳನ್ನೂ ಸಹಿಸಿಕೊಂಡು, ನಮ್ಮನ್ನು ಕ್ಷಮಿಸುತ್ತಲೇ ಇರುವ ಕ್ಷಮಯಾಧರಿತ್ರಿ ನಮ್ಮ ಭೂತಾಯಿ... ಅಂತೆಯೇ ಸ್ತ್ರೀ... ತಾಯಿಯಾಗಿ, ಸೋದರಿಯಾಗಿ, ಸ್ನೇಹಿತೆಯಾಗಿ.... ಹಲವಾರು ರೂಪಗಳಲ್ಲೂ, ಪಾತ್ರಗಳಲ್ಲೂ... ನಮ್ಮನ್ನು ಪೊರೆಯುತ್ತಾಳೆ, ಸಲಹುತ್ತಾಳೆ, ಕ್ಷಮಿಸುತ್ತಾಳೆ ಮತ್ತು ತನ್ನ ಪ್ರೀತಿಯ ಆಳದ ವ್ಯಾಪ್ತಿಯನ್ನು ದಿಗಂತದಾಚೆಗೂ ಪಸರಿಸಿ ಬಿಡುತ್ತಾಳೆ....

The Lifetime of a boy to man:

I was born, A woman was there to hold me :- My mother
I grew as a child, A woman was there to care for me & play with me:- My sister
I went to school, A woman was there to help me learn :- My teacher
I became depressed whenever I lost, A woman was there to offer me shoulder :- My friend
I needed company, compatibility & love, A great woman was there for me:- My wife
I became tough, A woman was there to melt me :- My daughter
When i die, A woman is there to absorb me in :- My motherland

If you are a Man, Value Every Woman & If you are a Woman, Be proud to be one.

Saluting the free spirit of Women hood.

ಈ ಅಂಚೆ ಕೆಲವು ದಿನಗಳ ಕೆಳಗೆ ನನ್ನ ಅಂಚೆ ಪೆಟ್ಟಿಗೆಯಲ್ಲಿ ಬಂದು ಕುಳಿತಿತ್ತು....... ತೆರೆದು ಓದಿದಾಗ, ನಾನು ಹೆಣ್ಣಿನ ಜೀವನದ ಒಂದೊಂದೇ ಘಟ್ಟವನ್ನು ಮನಸ್ಸಿನಲ್ಲೇ ಚಿತ್ರಿಸಿಕೊಳ್ಳ ತೊಡಗಿದೆ......

ಒಬ್ಬ ಹುಡುಗ ಅಥವಾ ಒಂದು ಗಂಡಿನ ದೃಷ್ಟಿಯಿಂದ ನೋಡುವಾಗ ಹೆಣ್ಣು ಖಂಡಿತಾ ಎಲ್ಲಾ ವಿಧದಲ್ಲೂ, ಪಾತ್ರದಲ್ಲೂ ಗಂಡನ್ನು ಪೋಷಿಸುವವಳಂತೆಯೇ ಕಾಣುತ್ತಾಳೆ. ಸ್ತ್ರೀಯ ಮೊದಲ ರೂಪ ಪುರುಷರ ಜೀವನದಲ್ಲಿ ಮಾತೃ ಸ್ವರೂಪವೇ... ತಾಯಿ ತನ್ನ ಗರ್ಭದಲ್ಲಿ ತಿಂಗಳು ಶಿಶುವನ್ನು ಹೊತ್ತು, ಪೋಷಿಸಿ, ತನ್ನ ಎಲ್ಲಾ ಕಷ್ಟಗಳನ್ನೂ ನಗು ನಗುತ್ತಾ ಸಹಿಸಿ, ಮರುಹುಟ್ಟು ಎನ್ನುವಂಥಹ ನೋವನ್ನೂ ಸಹಿಸಿಕೊಂಡು ಜನ್ಮ ಕೊಡುತ್ತಾಳೆ. ಇಲ್ಲಿ ಒಂದು ಹೆಣ್ಣು ಗರ್ಭ ಧರಿಸಿದಂದೇ... ಪುಟ್ಟ ಇನ್ನೂ ಯಾವ ಆಕಾರ, ರೂಪವನ್ನೂ ಪಡೆಯದೇ ಇದ್ದಾಗಲೇ... ಭಾವನಾತ್ಮಕವಾಗಿ ತನ್ನ ಸಂಬಂಧ ಬೆಳೆಸಿಕೊಂಡು ಬಿಟ್ಟಿರುತ್ತಾಳೆ. ತಾಯಿ ಸೇವಿಸುವ ಆಹಾರವನ್ನು, ತನ್ನ ಬೆಳವಣಿಗೆಗೆ ಉಪಯೋಗಿಸಿಕೊಂಡು, ಮಗು ಗರ್ಭದಲ್ಲಿ ಬೆಳೆಯುತ್ತದೆ. ಇದು ಸುಂದರವಾದ ಪ್ರಕೃತಿ ನಿಯಮ ಮತ್ತು ಸ್ತ್ರೀಯ ದೇಹ ರಚನೆಯೇ ಇದಕ್ಕಾಗಿಯೇ ಮಾಡಲ್ಪಟ್ಟಿದೆ... ಗರ್ಭಧಾರಣೆಯಾದಾಗಿನಿಂದಲೂ ಶಿಶು ಎಲ್ಲಕ್ಕೂ ತಾಯನ್ನೇ ಆಶ್ರಯಿಸಿರುತ್ತದೆ. ಬೆಳೆಯುತ್ತಾ ಬೆಳೆಯುತ್ತಾ, ತಾಯಿಯ ಸತ್ವ ಹೀರಿ, ತನ್ನನ್ನು ತಾನು ಬೆಳೆಸಿಕೊಳ್ಳುತ್ತದೆ ಮತ್ತು ಹೊರಗಿನ ಪ್ರಪಂಚಕ್ಕೆ ಬರಲು ಬೇಕಾದಂತೆ ಸಿದ್ಧತೆ ಮಾಡಿಕೊಳ್ಳುತ್ತದೆ. ಪುರುಷ ಗರ್ಭಧಾರಣೆಗೆ ಕಾರಣವಾಗುತ್ತಾನೆಯೇ ಹೊರತು, ಗರ್ಭದ ಬೆಳವಣಿಗೆಗೆ ಮಾನಸಿಕ ಬೆಂಬಲ ಕೊಡುವುದು ಬಿಟ್ಟರೆ ಬೇರೆ ಯಾವ ರೀತಿಯಲ್ಲೂ ಸಹಾಯ ಮಾಡಲಾರ. ಶಾಸ್ತ್ರೋಕ್ತವಾಗಿ ೭ನೇ ತಿಂಗಳಲ್ಲಿ ಮಾಡುವ ಸೀಮಂತೋನ್ನಯನದಲ್ಲಿ (ಸೀಮಂತೋನ್ನಯನವೆಂದರೆ ತಲೆಯ ಮೇಲಿನ ಕೇಶವನ್ನು ಮಧ್ಯಭಾಗದಿಂದ ವಿಂಗಡಿಸುವುದು ಎಂದು ಅರ್ಥ) ಮಾತೃಪೂಜೆ, ನಾಂದಿ ಶಾಸ್ತ್ರಗಳು ಮುಗಿದ ನಂತರ ಪ್ರಜಾಪತಿಗೆ ಮಂತ್ರಪೂರ್ವಕವಾಗಿ ಹವಿಸ್ಸನ್ನು ನೀಡಿದ ನಂತರವೇ ಮಗುವಿನ ಮೇಲೆ ತಂದೆಗೆ ಅಧಿಕಾರವೆಂಬ ಮಾತು ಓದಿದ್ದೇನೆ. ಇದರ ನಂತರ ಮಗು ತಂದೆಯ ವಂಶಸ್ಥನಾಗುತ್ತಾನೆಂಬ ಅರ್ಥದಲ್ಲಿ... ನವಮಾಸಗಳು ತುಂಬಿದಾಗ, ನೋವು ಸಹಿಸಿ, ಮಗುವಿಗೆ ಜನ್ಮವೀಯುತ್ತಾಳೆ ತಾಯಿ.... ಹುಟ್ಟಿದ ಮಗುವಿನ ಮುಖ ನೋಡಿದೊಡನೆ, ತಾನು ಅದುವರೆಗೂ ಪಟ್ಟ ಕಷ್ಟಗಳೆಲ್ಲವನ್ನೂ ಮರೆತು, ತನ್ನ ಜೀವಸತ್ವ ಹೀರಿ, ತನ್ನೊಳಗೆ ಬೆಳೆದು, ಹೊರ ಪ್ರಪಂಚಕ್ಕೆ ಅಡಿಯಿಟ್ಟ ಮಗುವನ್ನು, ಎಲ್ಲದರಿಂದಲೂ ರಕ್ಷಿಸುವಂತೆ ತನ್ನೆದೆಗೆ ಅವುಚಿಕೊಂಡಾಗ, ಗರ್ಭದಲ್ಲಿನ ಬಿಸುಪು ಮಗುವಿಗೆ ತಾಯ ಅಪ್ಪುಗೆಯಲ್ಲಿ ಸಿಗುತ್ತದೆ.... ಕಂದ ತನ್ನೊಳಗಿದ್ದಾಗಲೂ ತನ್ನದೇ ಆಹಾರದಲ್ಲಿ ಪಾಲು ಕೊಟ್ಟು ಬೆಳೆಸುವ ತಾಯಿ, ಕಂದ ಜನ್ಮಿಸಿದ ನಂತರವೂ ತನ್ನ ಎದೆಹಾಲು - ಅಮೃತವನ್ನು ಉಣಿಸಿ ಬೆಳೆಸುತ್ತಾಳೆ.....

ಹೆಣ್ಣು ಮಕ್ಕಳು ಹುಟ್ಟಿನಿಂದಲೇ ಅಮ್ಮಂದಿರಾಗಿರುತ್ತಾರೆಂದು ಓದಿದ್ದೆ. ಅದು ನೂರಕ್ಕೆ ನೂರರಷ್ಟು ಸತ್ಯವಾದ ಮಾತೆಂದು ನಾವು ಪುಟ್ಟ ಪುಟ್ಟ ಹೆಣ್ಣು ಮಕ್ಕಳನ್ನು ಸ್ವಲ್ಪ ಗಮನವಿರಿಸಿ ನೋಡಿದರೆ ತಿಳಿಯುತ್ತದೆ. ತಾನೇ ಇನ್ನೂ ಪುಟ್ಟವಳು... ಆದರೆ ತನಗೊಬ್ಬ ತಮ್ಮನೋ, ತಂಗಿಯೋ ಇದ್ದರೆ, ಆಗಲೇ ತುಂಬಾ ಜವಾಬ್ದಾರಿಯುತವಾಗಿ, ತಾಯಿ ತನ್ನನ್ನು ಹೇಗೆಲ್ಲಾ ನೋಡಿಕೊಳ್ಳುವಳೋ, ಅದನ್ನೆಲ್ಲಾ ತಾನು ತನ್ನ ತಮ್ಮ, ತಂಗಿಯರಿಗೆ ಮಾಡುತ್ತಾ.... ಆಗಲೇ ತಾಯ್ತನ ಮೆರೆಸುತ್ತಾಳೆ. ತನಗಿಂತ ಚಿಕ್ಕ ಮಗು, ತಮ್ಮನಾದರೆ, ನಿಜ ಅರ್ಥದಲ್ಲಿ ತಾಯಿಯೇ ಆಗಿಬಿಡುತ್ತಾಳೆ.... ಆದರೆ ಒಬ್ಬ ಅಣ್ಣನಿಗೆ ತಂಗಿಯಾದರೆ.. ಇಲ್ಲೂ ತಾಯ್ತನವಿದ್ದೇ ಇರತ್ತೆ. ಆದರೆ ಇಲ್ಲಿ ಅಣ್ಣ ತನಗಿಂತ ದೊಡ್ಡವನು, ತನ್ನನ್ನು ರಕ್ಷಿಸುವವನು, ಎಲ್ಲವನ್ನೂ ತಿಳಿದಿರುವವನು ಎಂಬ ಭಾವ ಒಂದು ಕಡೆಯಾದರೆ, ಇನ್ನೊಂದು ಕಡೆ ಅವಳ ಹೆಣ್ತನ, ವಯಸ್ಸನ್ನು ಲೆಖ್ಕಿಸದೇ ಅಣ್ಣನ ಊಟ-ತಿಂಡಿ, ಆರೋಗ್ಯ, ಎಲ್ಲದರ ಬಗ್ಗೆ ಕಾಳಜಿ ವಹಿಸುತ್ತಾ ತಾಯಿಯ ಸ್ಥಾನವನ್ನು ತುಂಬಿಯೇ ಬಿಡುತ್ತಾಳೆ. ಹೆಣ್ಣು ಅಕ್ಕನಾದರೂ, ತಂಗಿಯಾದರೂ, ಒಂದು ಅರ್ಥದಲ್ಲಿ ಗಂಡು ಮಕ್ಕಳಿಗೆ ತಾಯಿಯ ನಂತರದ ತಾಯಿಯೇ.... ಅಕ್ಕನಾದರೆ ತಮ್ಮನಿಗೆ ಬೆಳವಣಿಗೆಯ ಎಲ್ಲಾ ಹಂತಗಳಲ್ಲೂ ಮಾರ್ಗ ದರ್ಶನ ಮಾಡುತ್ತಾ, ಲಾಲಿಸುತ್ತಾಳೆ. ತಂಗಿಯಾದರೆ ಅಣ್ಣನ ಮಾರ್ಗದರ್ಶನದಲ್ಲಿ ನಡೆದರೂ ಕೂಡ, ತಾನು ಒಬ್ಬ ಸಹೃದಯವಂತ, ಆತ್ಮೀಯ, ಗೆಳತಿಯಾಗಿ, ಅಣ್ಣನ ಯಶಸ್ಸು, ದು: ಎರಡರಲ್ಲೂ ತಾನೂ ಪಾಲು ತೆಗೆದುಕೊಳ್ಳುತ್ತಾ, ಆಪ್ತತೆ ತೋರುತ್ತಾಳೆ... ಆಟವಾಡುತ್ತಾಳೆ, ಜೊತೆಗೆ ನಕ್ಕು ನಗಿಸುತ್ತಾಳೆ... ಯಾವುದೇ ಸಂದರ್ಭದಲ್ಲೂ ನಾನಿದ್ದೇನೆ ನಿನ್ನ ಬೆಂಬಲಕ್ಕೆ ಎಂದು ತೋರಿಸುತ್ತಾಳೆ....

ಶಾಲೆಯಲ್ಲಿ ಪಾಠ ಹೇಳುವ ಉಪಾಧ್ಯಾಯಿನಿಯಾಗಿ ಕೂಡ ಹೆಣ್ಣು ತನ್ನ ಎಲ್ಲಾ ತಾಯ್ತನವನ್ನೂ ಸೇರಿಸಿಯೇ ಮಕ್ಕಳನ್ನು ಬೌದ್ಧಿಕವಾಗಿ ಬೆಳೆಸುತ್ತಾಳೆ... ಗಂಡು ಮಕ್ಕಳೂ ಕೂಡ, ಉಪಾಧ್ಯಾಯಿನಿಯ ಹತ್ತಿರವೇ ಹೆಚ್ಚು, ಸಂಕೋಚವಿಲ್ಲದೆ, ತಾಯಿಯ ರೂಪವೆಂದು ಸಲಿಗೆಯಿಂದ ಪಳಗುತ್ತಾರೆ. ನಮ್ಮ ಪ್ರಾಥಮಿಕ, ಮಾಧ್ಯಮಿಕ ಹಂತದ ತರಗತಿಗಳ ಉಪಾಧ್ಯಾಯಿನಿಯರನ್ನು ನಾವು ಮರೆಯುವುದು ಸಾಧ್ಯವೇ ಇಲ್ಲ. ಮಕ್ಕಳ ಮಾನಸಿಕ ಏರುಪೇರುಗಳನ್ನೂ, ವಿಕಾಸದ ಹಂತಗಳನ್ನೂ ಹೆಣ್ಣು ಅತ್ಯಂತ ಪ್ರಭಾವಯುತವಾಗಿ ನಿರ್ವಹಿಸಿ, ಉತ್ತಮ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾಳೆ..

ಸ್ತ್ರೀ ಒಬ್ಬ ಅತ್ಯುತ್ತಮ ಸ್ನೇಹಿತೆಯೂ ಆಗಬಲ್ಲಳು. ಯಾವುದೇ ರೀತಿಯ ರಕ್ತ ಸಂಬಂಧವಿಲ್ಲದಿದ್ದಾಗಲೂ ಸ್ನೇಹಿತೆಯಾಗಿ, ಸಾಂತ್ವನ ಮಾಡುವ ಪರಿ, ಆತ್ಮೀಯವಾಗಿ ಪಳಗುವ ರೀತಿ, ಭಾವನೆಗಳನ್ನು ಹಂಚಿಕೊಳ್ಳುವ ವೇಗ... ಇದೊಂದು ಅದ್ಭುತವಾದ ಕಲೆ ಸ್ತ್ರೀ ವರವಾಗಿ ಪಡೆದಿದ್ದಾಳೆ. ಹುಟ್ಟಿನಿಂದಲೂ ಗಂಡು ಹೆಣ್ಣಿನ ಮೇಲೆ ಅವಲಂಬಿತನಾಗೇ ಇರುತ್ತಾನೆ. ಎಲ್ಲವನ್ನೂ ಕೊಡುವುದಷ್ಟೇ... ಎಷ್ಟು ಹಿಂತಿರುಗಿ ಪಡೆಯುತ್ತಾಳೆಂಬುದು, ಯುಗಗಳಿಂದಲೂ ಪ್ರಸ್ತುತವಾಗುವುದೇ ಇಲ್ಲ. ಮಡದಿಯಾಗಿ ಗಂಡನ ಜೀವನದಲ್ಲಿ ಎಲ್ಲವನ್ನೂ ಹಂಚಿಕೊಳ್ಳುವ ಹೆಂಡತಿ, ಅಲ್ಲಿಯೂ ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಸ್ನೇಹಿತೆಯಾಗಿ, ಕೊನೆಗೆ ಹೆಂಡತಿಯೂ ಆಗಿರುತ್ತಾಳೆ. ಭಾವನಾತ್ಮಕವಾಗಿ ಹೆಣ್ಣು, ಗಂಡಿಗಿಂತ ಹೆಚ್ಚು ಬಲವುಳ್ಳವಳು. ಅವಳು ಯಾವುದೇ ಸಂದರ್ಭದಲ್ಲೂ ಕೈ ಚೆಲ್ಲಿ, ಕುಸಿಯುವುದಿಲ್ಲ.... ಅವಳ ಮುಂದೆ ಒಂದೇ ಗುರಿ, ತಾನು ಬಿದ್ದಷ್ಟು ಸಲವೂ ಎದ್ದು ಮುಂದೆ ಸಾಗಲೇ ಬೇಕು, ಗಮ್ಯ ತಲುಪಲೇ ಬೇಕು ಎಂಬುದು.
ಇದೇ ಪುರುಷನಿಗೆ ಬಲಕೊಡುವ ಅಂಶ. ಗಂಡು, ಮಗುವಾಗಿದ್ದಾಗಿನಿಂದಲೂ, ಸ್ತ್ರೀಯ ಶಕ್ತಿಯನ್ನು ಅವಲಂಬಿಸಿ ಬೆಳೆಯುತ್ತಾನೆ. ದೈಹಿಕವಾಗಿಯೂ, ಸಾಮಾಜಿಕವಾಗಿಯೂ ಪುರುಷ ಸ್ತ್ರೀಗೆ ಬೆಂಬಲವಾದರೂ, ಮಾನಸಿಕವಾಗಿ ಸ್ತ್ರೀ ಅಗಾಧ ಶಕ್ತಿವಂತಳು ಮತ್ತು ಪುರುಷನ ಆಂತರಿಕ ಸ್ಥೈರ್ಯವನ್ನು ಹೆಚ್ಚಿಸುವವಳು.

ಗಂಡು ಇನ್ನೂ ಒಂದು ಹಂತದಲ್ಲಿ ಹೆಣ್ಣಿನ ಸಹಾಯ ಅಥವಾ ಆಶ್ರಯ ಪಡೆಯುತ್ತಾನೆ, ಅದು ಯಾವಾಗೆಂದರೆ, ತಾನು ಹೆಣ್ಣು ಮಗುವಿನ ತಂದೆಯಾದಾಗ.... ಇದು ಸಾಮಾನ್ಯವಾಗಿ ಪುರುಷರ ಮಧ್ಯ ವಯಸ್ಸಿನ ಪ್ರಾರಂಭದ ಹಂತದಲ್ಲಿ ಆಗುವಂತದ್ದು. ಮುದ್ದು ಮಗಳ ಸಹವಾಸದಲ್ಲಿ, ತನ್ನ ವ್ಯಕ್ತಿತ್ವದಲ್ಲೇ ಬಹಳಷ್ಟು ಮಾರ್ಪಾಡು ತನಗೇ ಅರಿಯದಂತೆ ಮಾಡಿಕೊಂಡಿರುತ್ತಾನೆ. ಜೀವನದಲ್ಲಿ ಮೊದಲ ಸಲ ತಂದೆಯಾಗಿ, ಮಗಳ ಜೊತೆಗೂ ಕಲಿಯುತ್ತಾ, ಬೆಳೆಯುತ್ತಾ, ಒಂದು ಹಂತಕ್ಕೆ ಬರುವಷ್ಟರಲ್ಲಿ, ಸಂಪೂರ್ಣವಾಗಿ ಬದಲಾದ ವ್ಯಕ್ತಿತ್ವದವನಾಗಿರುತ್ತಾನೆ. ಹೆಚ್ಚಿನ ಸಂಯಮ, ಕಾಳಜಿ, ಆಪ್ಯಾಯತೆ, ಎಲ್ಲಕ್ಕಿಂತ ಹೆಚ್ಚಾಗಿ ಬದುಕನ್ನು ತನ್ನ ಮಗಳ ಕಣ್ಗಳಲ್ಲಿ ನೋಡುವ ರೀತಿಯನ್ನು ಕಲಿತಿರುತ್ತಾನೆ. ಮಗಳ ಆಗ್ರಹಕ್ಕೆ, ಪ್ರೀತಿಗೆ ಹೆಜ್ಜೆ ಹೆಜ್ಜೆಗೂ ತನ್ನ ಉಕ್ಕಿನಂತಹ ಅಹಂ ಕರಗುತ್ತಿದ್ದರೂ ಲಕ್ಷಿಸದೆ, ಮೃದುವಾಗಿ ಬೆಣ್ಣೆಯ ಮನಸ್ಸಿನ ಮನುಷ್ಯನಾಗಿ ಪರಿವರ್ತಿತನಾಗಿರುತ್ತಾನೆ.

ಹೀಗೆ ಪ್ರತಿಯೊಂದು ಹಂತದಲ್ಲೂ ಸ್ತ್ರೀ ತನ್ನ ಅಗಾಧ ಪ್ರೀತಿಯಲ್ಲಿ ಗಂಡನ್ನು ತೇಲಿಸುತ್ತಾಳೆ, ಬೆಳೆಸುತ್ತಾಳೆ, ತಾನೂ ಬೆಳೆಯುತ್ತಾಳೆ... ಜಿ ಎಸ್ ಶಿವರುದ್ರಪ್ಪನವರ ಕವನ... ಅಶ್ವಥ್ ಅವರ ಕಂಠದಲ್ಲಿ... "ಆಕಾಶದ ನೀಲಿಯಲ್ಲಿ... ಚಂದ್ರತಾರೆ ತೊಟ್ಟಿಲಲ್ಲಿ.... ಬೆಳಕನಿಟ್ಟು ತೂಗಿದಾಕೆ... ನಿನಗೆ ಬೇರೆ ಹೆಸರು ಬೇಕೆ..... ಸ್ತ್ರೀ...... ಎಂದರೆ ಅಷ್ಟೆ ಸಾಕೆ"..... ಕವನದ ಕೊನೆಯ ಸಾಲುಗಳು... "ಮನೆಮನೆಯಲ್ಲಿ ದೀಪ ಮುಡಿಸಿ.... ಹೊತ್ತು ಹೊತ್ತಿಗೆ ಅನ್ನ ಉಣಿಸಿ... ತಂದೆ ಮಗುವ ತಬ್ಬಿದಾಕೆ... " ಎಂಬ ಸಾಲುಗಳು ಸ್ತ್ರೀಯ ಜೀವನದ ಪೂರ್ಣ ಪರಿಚಯ ಮಾಡಿಕೊಟ್ಟು ಬಿಡುತ್ತದೆ..... ಸಾಲುಗಳುಸ್ತ್ರೀಎಂಬ ಶಕ್ತಿಗೆ ಸಂದ ಗೌರವ.......

ಪ್ರಸ್ತುತ ಪ್ರಪಂಚದಲ್ಲಿ ಸ್ತ್ರೀ ಅನೇಕ ರೀತಿಯಲ್ಲಿ ಮುಂದುವರೆದಿದ್ದಾಳೆ. ತನ್ನ ಹಾಗೂ ತನ್ನ ಪರಿವಾರದ ಪೋಷಣೆಗೆ ಸಮಾನವಾಗಿ ದುಡಿಯುತ್ತಾ ಒಳಗಿನ ಹಾಗೂ ಹೊರಗಿನ ಪ್ರಪಂಚಗಳೆರಡನ್ನೂ ಅತ್ಯಂತ ಯಶಸ್ವಿಯಾಗಿ ತೂಗಿಸಿಕೊಂಡು ಹೋಗುತ್ತಿದ್ದಾಳೆ. ಹಿಂದಿನ ಕಾಲದಲ್ಲಿದ್ದಂತೆ ಈಗ ಹೆಚ್ಚು ಅವಿಭಕ್ತ ಕುಟುಂಬಗಳು ಇಲ್ಲದಿರುವುದರಿಂದ, ಹೊರಗೆ ದುಡಿಯುವ ಮಹಿಳೆಗೆ ತನ್ನ ಅಸಂಖ್ಯ ಜವಾಬ್ದಾರಿಗಳನ್ನು ನಿರ್ವಹಿಸಲು ಪುರುಷನ ಸಹಾಯ, ಸೌಹಾರ್ದತೆ ಖಂಡಿತಾ ಬೇಕು. ಅದೇ ನಿಟ್ಟಿನಲ್ಲಿ ನಾವು ವಸ್ತು ಸ್ಥಿತಿಯನ್ನು ಅವಲೋಕಿಸಿದಾಗ, ನಮ್ಮ ಪುರುಷ ಸಮಾಜದಲ್ಲೂ, ಸಾಮಾಜಿಕವಾಗಿ, ಮಾನಸಿಕವಾಗಿ ಅತ್ಯಂತ ಪ್ರಭಾವೀಯುತವಾಗಿ ಬೆಳವಣಿಗೆ ಕಂಡಿದೆ. ಈಗಿನ ಜನಾಂಗದ ಪತಿ ತನ್ನ ಪತ್ನಿಯನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಾನೆ. ಎಲ್ಲಾ ಮಟ್ಟದಲ್ಲೂ ತನ್ನಷ್ಟೇ ಉನ್ನತ ಸ್ಥಾನದಲ್ಲಿರುವ ಪತ್ನಿಯ ಕರ್ತವ್ಯ, ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಾನೆ. ಸಂಸಾರ ನಿಭಾಯಿಸಲು ಸಹಾಯ ಮಾಡುತ್ತಾನೆ. ಇಲ್ಲಿ ತಂದೆ ಹೆಚ್ಚೋ... ತಾಯಿ ಹೆಚ್ಚೋ.. ಎಂಬ ಮಾತಿಗಿಂತ, ಒಬ್ಬರ ಮೇಲೊಬ್ಬರು ಪರಸ್ಪರ ಅವಲಂಬಿತರಾಗಿ ಕುಟುಂಬ ನಿರ್ವಹಣೆ ಮಾಡುವ ರೀತಿ ಮೆಚ್ಚತಕ್ಕದ್ದು...... ತಾಯಿ ಮಗುವಿನ ಬೆಳವಣಿಗೆಯ ಎಲ್ಲಾ ಹಂತಗಳಲ್ಲೂ ಪ್ರಮುಖ ಪಾತ್ರ ವಹಿಸಿದರೂ ಕೂಡ, ತಂದೆಯೂ ಇಲ್ಲಿ ಅಷ್ಟೇ ಪ್ರಮುಖನಾಗುತ್ತಾನೆ. ಪುರುಷ ಗರ್ಭ ಧರಿಸಲಾರ, ತನ್ನ ಆಹಾರದ ಮೂಲಕ ಆಹಾರ ಒದಗಿಸಿ, ಮಗುವನ್ನು ಬೆಳೆಸಲಾರ, ಮಮತೆಯ ಮಡಿಲಲ್ಲಿ ಬೆಚ್ಚಗೆ ಮುಚ್ಚಿಟ್ಟುಕೊಳ್ಳಲಾರ, ಆದರೆ ಅದೆಲ್ಲವನ್ನೂ ಸ್ತ್ರೀ ಮಾಡುತ್ತಾಳೆ ಮತ್ತು ಅವಳ ಸೃಷ್ಟಿಯೇ ಅದಕ್ಕಾಗಿ, ಅದೇ ರೀತಿ ಆಗಿರುವುದರಿಂದ, ಇಲ್ಲಿ ಭಾವನಾತ್ಮಕ ಎಳೆಗೆ ವಿಶೇಷ ಅರ್ಥ ಮತ್ತು ಪ್ರಾಮುಖ್ಯತೆ ಬರುತ್ತದೆ. ತಾಯ ಪ್ರೀತಿ ಅತ್ಯಂತ ಪ್ರಮುಖವೇ ಹೊರತು, ತಾಯಿ ಪ್ರಮುಖಳೋ, ತಂದೆ ಪ್ರಮುಖನೋ ಅನ್ನುವ ಮಾತಲ್ಲ... ಒಟ್ಟಿನಲ್ಲಿ ಮಗುವನ್ನು ಸತ್ಪ್ರಜೆಯಾಗಿ ಬೆಳೆಸುವ ಹೊಣೆ ಮತ್ತು ಜವಾಬ್ದಾರಿ ತಂದೆ-ತಾಯಿ ಇಬ್ಬರಿಗೂ ಸಮಾನವಾಗಿ ಸೇರಿದ್ದು ಎಂಬುದು ನನ್ನ ಅಭಿಪ್ರಾಯ.

ಕೊನೆಯ ಮಾತು... ಗಂಡು ತನ್ನ ಅಂತ್ಯದಲ್ಲೂ ಸ್ತ್ರೀ ಆಶ್ರಯದಲ್ಲೇ ಇರುತ್ತಾನೆನ್ನುವುದನ್ನು ಸತ್ತ ನಂತರ ದೇಹವನ್ನು ಮಣ್ಣು ಮಾಡುವುದರ ಮೂಲಕ ಸಾಬೀತು ಪಡಿಸಲ್ಪಡುತ್ತದೆ. ನಮ್ಮ ದೇಹ ಪಂಚ ಭೂತಗಳಿಂದ ಮಾಡಲ್ಪಟ್ಟಿದೆ ಮತ್ತು ಜೀವ ದೇಹವನ್ನು ಬಿಟ್ಟಾಗ, ಅದನ್ನು ಮಣ್ಣು ಮಾಡುತ್ತೇವೆ ಇಲ್ಲದಿದ್ದರೆ ಅಗ್ನಿಗಾಹುತಿ ಮಾಡುತ್ತೇವೆ. ನಂತರವಾದರೂ ಬೂದಿಯನ್ನು ಮಣ್ಣಿನಲ್ಲೂ, ನೀರಿನಲ್ಲೋ ಕದಡುತ್ತೇವೆ. ಆಗಲೂ ಪುರುಷ ಲೀನವಾಗುವುದು ಪ್ರಕೃತಿಯೊಳಗೇ.... ಪ್ರಕೃತಿಯ ಗರ್ಭದಲ್ಲೇ.... ಪ್ರಕೃತಿ ಸ್ತ್ರೀ ಎಂದೂ ತಾಯಿಯೆಂದೂ ಪೂಜಿಸಲ್ಪಡುವುದರಿಂದ...... ತಾಯ ಗರ್ಭದಿಂದ ಜನಿಸಿ ಬಂದವನು, ಮತ್ತೆ ಹೋಗಿ ಸೇರುವುದು ತಾಯ ಗರ್ಭಕ್ಕೇ.......ಎನ್ನುವ ಮಾತು ಸಾರ್ವಕಾಲಕ್ಕೂ ಅತ್ಯಂತ ಪ್ರಸ್ತುತ !!!