Thursday, March 31, 2011

ಬೆಳಕಿನ ಮಿಂಚು :ಅರಳಿದ್ದ ಸುಮವೊಂದು

ಬಾಡಿ ಮುದುಡಿತ್ತು....

ಮಲ್ಲಿಗೆಯ ಹಾರವು

ಬತ್ತಿ ಕಂದಾಗಿತ್ತು

ಅತ್ತು ಬಸವಳಿದ ಕೂಸು

ನನ್ನಪ್ಪಿ ಮಲಗಿತ್ತು

ಕೆಂದುಟಿಯ ಮೇಲಿದ್ದ

ಕೆಂಪು ಮಾಸಿತ್ತು...

ನಲುಗಿದ್ದ ನಾಸಿಕವು

ಕೆಂಡ ಸಂಪಿಗೆಯಾಗಿತ್ತು

ಪುಟ್ಟ ತೋಳುಗಳಲ್ಲಿ

ಕೊರಳನ್ನು ಬಳಸಿತ್ತು...

ಕೋಮಲ ಕೈಗಳ ಸ್ಪರ್ಶ

ಕುಡಿಯಂತೆ ಮೆದುವಿತ್ತು

ನಿದಿರೆಯಲಿ ಕನಸಿನಲಿ

ಉಮ್ಮಳಿಸಿ ಬಿಕ್ಕಿತ್ತು

ಮುಚ್ಚಿದ ಕಣ್ಣಾಲಿಯಲ್ಲಿ

ಹನಿಯು ಜಿನುಗುತಲಿತ್ತು

ಬೆಚ್ಚಿತ್ತು ಬೆದರಿತ್ತು

ಮಡಿಲಲ್ಲಿ ಹುದುಗಿತ್ತು

ಮೊಗದಲ್ಲಿ ಭಯವಿತ್ತು

ನನ್ನತ್ತ ನೋಡಿತ್ತು..

ತೋಳಿಂದ ಬಳಸುತ್ತ

ಕದಪುಗಳ ಚುಂಬಿಸುತ

ಅಕ್ಕರೆಯ ತೆಕ್ಕೆಯಲಿ

ಮೈಮನವ ಅರಳಿಸುತ

ಮುದುಡಿದ್ದ ಭಾವದಲಿ

ಮುದವನ್ನು ತುಂಬುತ್ತ

ಅಮೃತದ ಧಾರೆಯಲಿ

ಕಂದನಾ ಮೀಯಿಸಲು

ಹಸುಗೂಸ ಕಂಗಳಲಿ

ಬೆಳಕೊಂದು ಮಿಂಚಿತ್ತು

ವದನಾರವಿಂದದಲಿ

ಸಿಹಿ ನಗೆಯು ಚಿಮ್ಮಿತ್ತು

ತಬ್ಬುತ್ತ ಹಬ್ಬುತ್ತ

ಅನುರಾಗ ಹರಡುತ್ತ

ಸಾರ್ಥಕ್ಯ ಭಾವದಲಿ

ಜೀವಗಳು ಬೆರೆತಿತ್ತು...

ಪುಟ್ಟ ಕಂದ... ಅದೇನೋ ನೋಡಿ.. ಬೆದರಿ ತನ್ನ ಅಮ್ಮನನ್ನು ಹುಡುಕಿಕೊಂಡು ಅಡ್ಡಾ ದಿಡ್ಡಿಯಾಗಿ... ಏಳುತ್ತಾ... ಬೀಳುತ್ತಾ.... ಮೈ ಕೈಯೆಲ್ಲಾ ತರಚಿ ಗಾಯ ಮಾಡಿಕೊಂಡು ಓಡೋಡಿ ಬಂದಿದೆ... ತಾಯಿಯನ್ನು ಕಾಣದೆ.. ಕಂಗಾಲಾಗಿದೆ. ಕಣ್ಣಿಂದ ಧಾರೆಯಾಗಿ ಹರಿದ ನೀರು ಮುದ್ದು ಕಂದನ ಕೆನ್ನೆಯ ಮೇಲೆ ಕರೆಗಟ್ಟಿದೆ. ಮುದ್ದಾದ ಸುಂದರ ಮೊಗವು ಕಳೆಗುಂದಿ ಅರಳಿ ನಳನಳಿಸುತ್ತಿದ್ದ ಹೂವೊಂದು ಬಾಡಿ ಮುದುಡಿ ಸೊಪ್ಪಾಗಿ ಹೋದಂತಾಗಿದೆ. ಅಮ್ಮನಿಗಾಗಿ ಅತ್ತು ಅತ್ತು ಸುಸ್ತಾಗಿ ಬಸವಳಿದು.... ತಾಯಿಯನ್ನು ಕಂಡಾಕ್ಷಣ ನುಗ್ಗಿ ಬಂದು... ಬಿಗಿದಪ್ಪಿದೆ. ಕಂದನ ಅವಸ್ಥೆ ಕಂಡ ತಾಯಿ... ತುಂಬಾ ಕಳಕಳಿಯಿಂದ ಮಗುವನ್ನು ತೋಳಲ್ಲಿ ಮೃದುವಾಗಿ ಅಪ್ಪಿಕೊಂಡು... ತಲೆ ನೇವರಿಸಿ, ಕೈ ಕಾಲಿಗೆ ಅಂಟಿದ್ದ ಮಣ್ಣು.. ಧೂಳನ್ನೆಲ್ಲಾ ಉಟ್ಟಿದ್ದ ಸೀರೆಯಲ್ಲೇ ಒರೆಸಿ... ಕಂದನನ್ನು ತನ್ನ ಸೆರಗಿನಲ್ಲಿ ಮುಚ್ಚಿಕೊಂಡಾಗ... ಮಗು ಸೋತು ಹಾಗೆ ಅಮ್ಮನ ಕೊರಳು ಬಳಸಿ ನಿದ್ದೆ ಮಾಡಿತ್ತು. ಮಲಗಿದ್ದ ಮಗುವಿನ ಮುಖವನ್ನೇ ದಿಟ್ಟಿಸುತ್ತಾ ಆ ವಾತ್ಸಲ್ಯಮಯಿ ತಾಯಿ ಅಕ್ಕರೆಯಿಂದ ನಲುಗಿದ್ದ ಪುಟ್ಟ ಕೆಂಡ ಸಂಪಿಗೆಯಂತಹ ಮೂಗನ್ನೂ, ಬೆದರಿದಾಗ ಬಿಳುಚಿಕೊಂಡು ತನ್ನ ಸಹಜ ಕೆಂಪು ಬಣ್ಣ ಕಳೆದುಕೊಂಡ ಪುಟ್ಟ ತುಟಿಗಳನ್ನೂ, ಮುಖವನ್ನೂ... ತಣ್ಣನೆಯ ನೀರಿನಲ್ಲಿ ಅದ್ದಿದ್ದ ತನ್ನ ಸೀರೆಯ ಸೆರಗಿನಿಂದ ಒರೆಸಿದಳು. ಕೊರಳನ್ನು ಬಳಸಿದ್ದ ಮಲ್ಲಿಗೆಯ ಹಾರದಂತಿದ್ದ ಪುಟ್ಟ ತೋಳುಗಳನ್ನು ಮೆದುವಾಗಿ ನೇವರಿಸುತ್ತಾ... ಹಿತವಾಗಿ ಅಮುಕಿದಾಗ ... ತಾಯಿಯ ಅಕ್ಕರೆಯ ಸ್ಪರ್ಶ ಗುರುತಿಸಿತೋ ಎಂಬಂತೆ ಮಗು... ಮತ್ತಷ್ಟು ಒತ್ತಿಕೊಂಡು... ನಿದ್ದೆಯಲ್ಲೂ ಬಿಕ್ಕುತಲಿತ್ತು. ಮುಚ್ಚಿದ ನೀಳ ರೆಪ್ಪೆಗಳಡಿಯಿಂದ ಪನ್ನೀರ ಹನಿ ಜಿನುಗಿತ್ತು. ಉಕ್ಕಿ ಬಂದ ಮಮತೆಯಿಂದ ತಾಯಿ ಕಂದನನ್ನು ತನ್ನೊಳಗೇ ಹುದುಗಿಸಿಕೊಂಡು... ರಕ್ಷಿಸುವಂತೆ... ಕದಪುಗಳ ಮುದ್ದಿಸಿದಾಗ... ಕಂದನ ಮೊಗದಲ್ಲಿದ್ದ ಭಯ ನಿಧಾನವಾಗಿ ಕರಗಿ... ಅಮ್ಮನ ಅಕ್ಕರೆಯ ಆರೈಕೆಯಲ್ಲಿ ಮಗುವಿನ ಕೋಮಲ ಮೈ ಮನ ಅರಳಿ... ಅಮೃತದ ಧಾರೆಯಲಿ ಮಿಂದು ಹೊಸ ಜೀವ ಪಡೆದಂತೆ.. ಹೊಚ್ಚ ಹೊಸ ಹೂವಿನಂತೆ ಅರಳಿ... ಬೊಗಸೆ ಕಂಗಳ ತೆರೆದು ತಾಯ ತೆಕ್ಕೆಯಲಿರುವುದ ಕಂಡು ಹಿಗ್ಗಿ... ತನಗಿನ್ನೇನು ಭಯವಿಲ್ಲ... ತನ್ನಮ್ಮ ರಕ್ಷಿಸುವಳು ಎಂಬ ಅಗಾಧ ನಂಬಿಕೆಯಲ್ಲಿ.. ಮಗುವಿನ ಕಣ್ಣಲ್ಲಿನ ಭಯ ಕಳೆದು... ಬೆಳಕಿನ ಮಿಂಚು ಮೂಡಿತ್ತು.. ತಾವರೆಯಂತೆ ಅರಳಿದ ಮುಖವು .. ಸಿಹಿ ನಗೆಯ ಬುಗ್ಗೆಯನ್ನು ಚಿಮ್ಮಿಸುತ್ತಾ ಕಿಲಕಿಲನೆ ನಗುತ್ತಾ... ಅಮ್ಮಾ... ಮ್ಮಾ... ಎನ್ನುತ್ತಾ.. ಮತ್ತೆ ತಾಯಿಯನ್ನು ಗಟ್ಟಿಯಾಗಿ ತಬ್ಬುತ್ತಾ.. ತೆಕ್ಕೆಯಲ್ಲೇ ಜಿಗಿಯುತ್ತಾ... ಮುದ್ದು ಉಕ್ಕುವಂತೆ ಅನುರಾಗ ಹರಡುತ್ತಾ.... ತಾಯ ಮೈ ನವಿರೇಳಿಸುತ್ತಾ... ತನ್ನಮ್ಮ ತನ್ನದೇ... ಎನ್ನುವ ಒಡೆತನ ತೋರಿಸುತ್ತಾ..... ಪುಟ್ಟ ಕೈಗಳಿಂದ ಅಮ್ಮನ ಕೆನ್ನೆ ತಟ್ಟುತ್ತಾ... ಮುಖವೆಲ್ಲಾ ಮುದ್ದಿಸುತ್ತಾ.... ಅಮ್ಮನ ಭಾವದೊಳಗೆ ಸೇರಿ ಹೋಯಿತು. ಕಂದನ ನಿಷ್ಕಲ್ಮಶ ಪ್ರೀತಿಯಿಂದ ಕರಗಿ ಹೋದ ತಾಯಿ... ತಾನೂ ಮಗುವನ್ನು ಮುದ್ದಿಸುತ್ತಾ... ತನ್ನಲ್ಲೇ ಸೇರಿ ಒಂದಾದ ತನ್ನ ಕಂದನ ಪ್ರೇಮದಲ್ಲಿ ಕೊಚ್ಚಿ ಹೋಗುತ್ತಾ.... ತಾಯ್ತನದ... ತನ್ನ ಜೀವನದ... ಸಾರ್ಥಕ್ಯ ಪಡೆದಳು.


ಸುಂದರವಾದ ಕವನ ಬರೆದು ಕೊಟ್ಟ ಅನಂತ್ ಸರ್... ಹೃದಯಪೂರ್ವಕ ಧನ್ಯವಾದಗಳು.. :-).. ನಿಮ್ಮ ಕವನ ನನ್ನನ್ನು ತುಂಬಾ ಭಾವುಕಳನ್ನಾಗಿಸಿತು. ತಾಯಿ-ಮಗುವಿನ ಪ್ರೇಮದ ಪರಿಯೇ ಅತ್ಯಂತ ಶ್ರೇಷ್ಠವಾದ ಭಾವವೆಂಬುದು ನಮ್ಮ ಮಾತುಗಳಲ್ಲಿ ಹಿಡಿದಿಡಲಾಗದ್ದು... ಯಶೋದೆ – ಕೃಷ್ಣನಲ್ಲದೆ ಬೇರಾವ ಹೋಲಿಕೆಯೂ ಇಲ್ಲವೇ ಇಲ್ಲ ಎಂಬುದೇ ನನ್ನ ಅಭಿಪ್ರಾಯ.....

ಚಿತ್ರಕೃಪೆ : ಅಂತರ್ಜಾಲ

Friday, March 4, 2011

ಪುಟ್ಟ ಪುಟ್ಟಿಯ ಜಾತ್ರೆ ವಿಶೇಷ - ಭಾಗ - ೨


"ತೂಗು ತೊಟ್ಟಿಲು" ನೋಡುವುದರಲ್ಲಿ ಮಗ್ನನಾಗಿ ಬಿಟ್ಟಿದ್ದ ಪುಟ್ಟನಿಗೆ ಇದ್ದಕ್ಕಿದ್ದಂಗೆ ಪುಟ್ಟಿ ಇಲ್ಲದಿರುವುದು ಗೊತ್ತಾಗಿ ಹೆದರಿಕೆ ಆಯಿತು. ಆ ಕಡೆ ಈ ಕಡೆ ಎಲ್ಲಾ ನೋಡ್ತಾ... "ಪುಟ್ಟೀ.... ಅಮ್ಮೂ..." ಅಂತ ಕೂಗಿದ. ಎಲ್ಲೂ ಮಗುನಿನ ಸ್ವರವೂ, ಸುಳಿಹೂ ಎರಡೂ ಇಲ್ಲ. ಪುಟ್ಟನಿಗೆ ಅಳುವೇ ಬಂದು ಬಿಡ್ತು... ಆತಂಕದಿಂದ "ಪುಟ್ಟಕ್ಕಾ... ಚಿನ್ನೂ..." ಅಂತ ಕೂಗ್ತಾ ಆ ಗುಂಪಿನಿಂದ ಹೊರ ಬಂದು ನಿಧಾನವಾಗಿ ಎಲ್ಲ ಕಡೆ ನೋಡುತ್ತಾ ನಿಂತ. ಪುಟ್ಟಿಯು ಎಲ್ಲೂ ಕಾಣದಿರಲು ನಮ್ಮ ಪುಟ್ಟ ನಿಜಕ್ಕೂ ಕಂಗಾಲಾಗಿಬಿಟ್ಟ. ಅಳುತ್ತಾ ಅಳುತ್ತಾ ಪುಟ್ಟ.. ಮತ್ತೆ ಮತ್ತೆ "ಅಮ್ಮೂ... ಎಲ್ಲಿದೀಯ ಚಿನ್ನಮ್ಮಾ..." ಅಂತ ಜೋರು ಜೋರಾಗಿ ಕೂಗುತ್ತಾ ಎಲ್ಲಾ ಕಡೆ ಒಂದೇ ಸಮ ಓಡಲಾರಂಭಿಸಿದ...

ಬಣ್ಣದ ಟೇಪು, ಬಳೆ ಕಂಡು ಆಸೆಯಿಂದ ಬಂದು, ಕಣ್ಣರಳಿಸಿ ತನ್ನದೇ ಬಣ್ಣದ ಲೋಕದಲ್ಲಿ ವಿಹರಿಸುತ್ತಾ ನಿಂತಿದ್ದ ಪುಟ್ಟಿಯನ್ನು ಜನರು ತಳ್ಳಿ ಬಿಟ್ಟರು. ಅಪಾರ ಜನಸಂದಣಿಯಲ್ಲಿ ಇದ್ದಕ್ಕಿದ್ದಂತೆ ತಳ್ಳಿದ್ದರಿಂದ, ಆಯ ತಪ್ಪಿ ಪುಟ್ಟಿ ಬಿದ್ದು.. ಮಂಡಿ ತರಚಿಕೊಂಡಿತು. ಎರಡೂ ಕೈಗಳೂ, ಹಾಕಿದ್ದ ತಿಳಿ ಗುಲಾಬಿ ಬಣ್ಣದ ಲಂಗವೂ ಧೂಳಾಗಿ ಬಿಟ್ಟಿತು. ಎಲ್ಲಿ ನೋಡಿದರೂ ಬರಿಯ ಜನರೇ ಕಾಣುತ್ತಿದ್ದು ಅಣ್ಣನ ಕಾಣದೆ ಪುಟ್ಟಿಗೆ ಹೆದರಿಕೆಯಿಂದ, ಬಿದ್ದ ನೋವಿನಿಂದ... ಅಳು ಬಂತು. ತಾನು ಅಣ್ಣನ ಕೈ ಬಿಟ್ಟು, ಒಬ್ಬಳೇ ಬಂದೆನೆಂಬ ಭಯಕ್ಕೆ "ಅಣ್ಣಾ.....".... "ಅಮ್ಮಾ...." ಎಂದು ಹೋ ಎಂದು ಅರಚುತ್ತಾ, ತಾಳ - ಲಯ ಯಾವುದೂ ಇಲ್ಲದ, ಪುಟ್ಟಿಯದೇ ಸ್ವಂತದ ಹೊಸ ರಾಗವೊಂದರ ಉದಯವಾಗಿ... ಅದು ನಿಮಿಷ ನಿಮಿಷಕ್ಕೂ ತಾರಕಕ್ಕೇರುತ್ತಿತ್ತು...

ಈ ಕಡೆ ಕಂಗಾಲಾಗಿದ್ದ ಪುಟ್ಟನೂ... "ಅಮ್ಮೂ... " ಎಂದು ಕೂಗುತ್ತಾ, ಅಳುತ್ತಾ, ಹುಡುಕುತ್ತಾ ಬರುತ್ತಿದ್ದವನು, ಒಮ್ಮೆಲೇ ಈ ತಾರಕ ಸ್ವರಾಲಾಪನೆ ಕೇಳಿಸಿಕೊಂಡು... ಆ ಕಡೆಗೆ ಹುಡುಕಿಕೊಂಡು ಓಡಿ ಬಂದ. ಅಲ್ಲಿ ಮೈಯೆಲ್ಲಾ ಧೂಳು ಮೆತ್ತಿಕೊಂಡು, ಕಣ್ಣು, ಮೂಗಿನಲ್ಲೆಲ್ಲಾ ನೀರು ಧಾರಕಾರವಾಗಿ ಸುರಿಸಿಕೊಂಡು, ಹೋ ಎಂದು ಅರಚುತ್ತಿದ್ದ ಮಗುವನ್ನು ಕಂಡು ಪುಟ್ಟನಿಗೆ ಅಳುವಿನಲ್ಲೂ ನಗು, ನೆಮ್ಮದಿ, ಸಂತೋಷ... ಎಲ್ಲವೂ ಒಟ್ಟೊಟ್ಟಿಗೇ ಆಯ್ತು. ಅವನ ಅಳು ಮರೆತುಹೋಗಿ, "ಅಯ್ಯೂ ಪುಟ್ಟೀ.... ನನ್ನ ಚಿನ್ನೂ..." "ನೀ ಇಲ್ಲೀವರೆಗೆ ಹ್ಯಾಗೆ ಬಂದ್ಯೋ ಮುದ್ದೂ"... "ನೀ ಕಾಣದೆ ನಂಗೆಷ್ಟು ಭಯ ಆಗಿ ಬಿಟ್ಟಿತ್ತು".... ಕಂದಾ... ಅಂತ ಬಡಬಡಿಸುತ್ತಾ ಓಡೋಡಿ ಬಂದ.... ಅಣ್ಣನನ್ನು ಕಾಣುತ್ತಲೇ ಪುಟ್ಟಿಗೂ ಅಳು ಮರೆತು ಹೋಗಿ, "ಅಣ್ಣಾ..." ಅಂತ ಓಡೋಡಿ ಬಂತು. ಪುಟ್ಟ ಹತ್ತಿರ ಓಡಿ ಬಂದ ಮಗುವಿನ ಕಣ್ಣೊರೆಸಿ, ಖುಷಿಯಿಂದ ಗಟ್ಟಿಯಾಗಿ ಅಪ್ಪಿಕೊಂಡ. ಪುಟ್ಟಿಯೂ ನೆಮ್ಮದಿ, ಖುಷಿಯಿಂದ ಹಿಗ್ಗಿ... ತಾನೂ ಅಣ್ಣನನ್ನು ಗಟ್ಟಿಯಾಗಿ ತಬ್ಬಿಕೊಂಡು, ಧೂಳನ್ನೆಲ್ಲಾ ಪುಟ್ಟನ ಮೈಗೆಲ್ಲಾ ಮೆತ್ತಿ... ಹಾಗೇ ಮುದ್ದು ಮಾಡಿತು.

ಅತ್ತೂ ಅತ್ತೂ ಸುಸ್ತಾಗಿ ಬಿಟ್ಟಿದೀಯಲ್ಲ ಕಂದಮ್ಮಾ.. "ಬಾ ಇಲ್ಲಿ ಕೂತ್ಕೊಳಣ ಸ್ವಲ್ಪ ಹೊತ್ತು" ಅಂತ ಪುಟ್ಟ ಪಕ್ಕದ ಅಂಗಡಿಯ ಕಟ್ಟೆ ಮೇಲೆ ಕುಳಿತುಕೊಂಡಿತು. ಅಣ್ಣ ಕೂತಿದ್ದು ಕಂಡೊಡನೆ, ಪುಟ್ಟಕ್ಕ ಸಂತಸದಿಂದ, ಅಣ್ಣನ ಮಡಿಲಲ್ಲಿ ತಲೆ ಇಟ್ಟು, ಬೆಚ್ಚಗೆ ನಿದ್ದೆ ಮಾಡಿ ಬಿಟ್ಟಿತು... ಸುಸ್ತಾಗಿ ನಿದ್ದೆ ಮಾಡುತ್ತಿದ್ದ ಮಗುವನ್ನೇ ಅಕ್ಕರೆಯಿಂದ ನೋಡುತ್ತಾ, ತಲೆ ಸವರುತ್ತಾ, ಕುಳಿತು ಬಿಟ್ಟ ಪುಟ್ಟ.... ಹಾಗೇ ಒಂದು ಸಣ್ಣ ನಿದ್ದೆ ಮಾಡಿ ಎದ್ದ ಪುಟ್ಟಿ, ಖುಷಿಯಿಂದ ಹೀ ಎಂದು ಹಲ್ಲು ಕಿರಿದಾಗ, ಪುಟ್ಟ... "ಅಮ್ಮೂ ಎಲ್ಲಿ ಅಬ್ಬು ಆಯ್ತು ತೋರಿಚು ಕಂದಾ..." "ಛೂ ಮಂತ್ರ ಹಾಕ್ತೀನಿ... ಮನೇಗೋಗೋಷ್ಟರಲ್ಲಿ ಎಲ್ಲಾ ಮಾಯ ಆಗ್ಬಿಡತ್ತೆ" ಅಂದಾಗ, ಪುಟ್ಟಿ ಮತ್ತೆ ಊಂ.. ಎಂದು ರಾಗ ಹಾಡುತ್ತಾ, ಒಂದೊಂದೇ ಗಾಯಗಳನ್ನು ತೋರಿಸಿತು.

"ಉಫ್ಫಿ.." ಎನ್ನುತ್ತಾ... "ಛೂ ಮಂತ್ರಕಾಳಿ...ನನ್ನಮ್ಮು ನೋವೆಲ್ಲಾ ಹೋಗ್ಬಿಡಲಿ.." ಅಂತ ಪುಟ್ಟ ಮುದ್ದು ಮುದ್ದಾಗಿ ಮಂತ್ರ ಹಾಕುವುದನ್ನೇ... ಬಿಟ್ಟ ಕಣ್ಣುಗಳಿಂದ ನೋಡುತ್ತಾ ಕೂತಿತ್ತು ಪುಟ್ಟಿ. ಮೆಲ್ಲಗೆ ನೋವಾದ ಜಾಗವನ್ನೆಲ್ಲಾ ಕೈಯಿಂದ ಸವರುತ್ತಾ ಪುಟ್ಟ... "ಅಮ್ಮೂ... ನೀ ಯಾಕೆ ಕಂದ ನನ್ನ ಕೈ ಬಿಡಿಸ್ಕೊಂಡು ಒಬ್ಬಳೇ ಬಂದಿ... ಹಾಗೆಲ್ಲಾ ಬರಬಾರದು ಅಲ್ವಾಮ್ಮಾ.." ಎಂದು ಕೇಳಿದಾಗ, ಪುಟ್ಟಿ "ಹೂಂ... ಅಣ್ಣಾ ನಂಗೆ ಹೆದ್ರಿಕೆ ಆಯ್ತು... ಊಂ..." ಎಂದು ಮತ್ತೆ ಬಿಕ್ಕಳಿಸಿತು. ಪುಟ್ಟ "ಸಾಕು ಚಿನ್ನೂ... ಇನ್ನು ಅಳಬಾರದಮ್ಮಾ.. ನಾ ಸಿಕ್ಕಿ ಬಿಟ್ಟೆ ಅಲ್ವಾ ಈಗ.." "ಬಾ ಹೋಗೋಣ.." ಎಂದು ಎದ್ದ. ಪುಟ್ಟ ಮಂತ್ರ ಹಾಕಿದ್ದಕ್ಕೆ ತನ್ನ ನೋವೆಲ್ಲಾ ಮರೆತು ಪುಟ್ಟಿ ಹೀ ಎಂದು ಖುಷಿಯಿಂದ ನಗುತ್ತಾ ಪುಟ್ಟನ ಕೈಹಿಡಿದು ಹೊರಟಿತು. ಇಬ್ಬರೂ ದೇವಸ್ಥಾನಕ್ಕೆ ಹೋಗಿ ಗ್ರಾಮ ದೇವತೆ ಹಳದಮ್ಮನ ದರ್ಶನ ಪಡೆದರು. ಅಣ್ಣ ಮಾಡಿದಂತೇ ತಾನೂ ಕೈ ಮುಗಿದು, ನಮಸ್ಕಾರ ಮಾಡಿ, ಮಂಗಳಾರತಿ ತಗೊಂಡು ಪುಟ್ಟನ ಅಂಗಿ ಹಿಡ್ಕೊಂಡೇ ನಿಂತಿತ್ತು ಪುಟ್ಟಿ. ಪುಟ್ಟ, ದೇವಿಯನ್ನು ಬೇಡಿಕೊಂಡು, ಕುಂಕುಮ ತೆಗೆದು ಪುಟ್ಟಿಯ ಹಣೆಗೆ ಹಚ್ಚಿದ. ಮಧ್ಯೆ ಮಧ್ಯೆ, ಇನ್ನೂ ಬಿಕ್ಕುತ್ತಿದ್ದ ಮಗುವನ್ನು ಕಂಡು ಪುಟ್ಟನಿಗೆ ತುಂಬಾ ಬೇಜಾರಾಗಿತ್ತು..

ಪುಟ್ಟ "ಚಿನ್ನೂ ಬಾಮ್ಮ... ನಾ ನಿಂಗೆ ಟೇಪು, ಬಳೆ ಎಲ್ಲಾ ಕೊಡಿಸ್ತೀನಿ... ಅಮ್ಮ ದುಡ್ಡು ಕೊಟ್ಟಿದ್ದಾರೆ ಪುಟ್ಟೀ..." ಎಂದು ಪುಟ್ಟಿಯನ್ನು ಅಂಗಡಿಗೆ ಕರೆದುಕೊಂಡು ಹೋಗಿ, ಅದು ತೋರಿಸಿದ ಬಣ್ಣದ ಟೇಪು, ಬಳೆ, ಕೊಡಿಸಿದ. ಬಣ್ಣದ ಟೇಪು, ಬಳೆ ಕೊಂಡು ಆಚೆ ಬಂದ ಮಗೂ... "ಅಣ್ಣಾ... ಅಂತ ಬೆಂಡು ಬತ್ತಾಸು ಮಾರುತ್ತಿದ್ದ ಅಂಗಡಿ ಮುಂದೆ ನಿಂತು ಬಿಟ್ಟಿತ್ತು ಪುಟ್ಟಿ. ಪುಟ್ಟ ನಗುತ್ತಾ... ಬೆಂಡು ಬತ್ತಾಸು ಎಲ್ಲಾ ಕೊಡಿಸಿದ. ಪುಟ್ಟಿ ತನ್ನ ನೋವೆಲ್ಲಾ ಮರೆತು, ಹಿಗ್ಗಿನಿಂದ ಬೆಂಡು ಬತ್ತಾಸು ತಿನ್ನುತ್ತಾ... "ಅಣ್ಣಾ... ಮನೆಗೋಗನ" ಅಂತು. ಪುಟ್ಟ ಪಾಪ ಅಮ್ಮ ಕೊಟ್ಟಿದ್ದ ದುಡ್ಡೆಲ್ಲಾ ಪುಟ್ಟಿಗೇ ಖರ್ಚು ಮಾಡಿ, ಮಗುವಿನ ಮುಖದಲ್ಲಿ ನಗುವರಳಿಸಿ, ತನಗೇನೂ ಕೊಳ್ಳದೆ, ಮಗುವಿನ ಹಿಗ್ಗಿನಲ್ಲಿ ತಾನೂ ಭಾಗಿಯಾಗುತ್ತಾ... " ಹೂಂ ಚಿನ್ನೂ... ಕತ್ತಲಾದ್ರೆ ಅಮ್ಮ ಹೆದರ್ಕೋತಾರೆ ಅಲ್ವಾಮ್ಮಾ..." "ಬಾ ಪುಟ್ಟೀ ಮನೆಗೆ ಹೋಗಿ ಬಿಡೋಣ" ಎಂದ.

ಪುಟ್ಟಿಯ ಕೈಯನ್ನು ಭದ್ರವಾಗಿ ಹಿಡಿದುಕೊಂಡು, " ಅಮ್ಮೂ ನೀ ಇನ್ಮೇಲೆ ಯಾವತ್ತೂ ನನ್ನ ಕೈ ಬಿಟ್ಟು ಹೋಗ್ಬಾರ್ದು... ಗೊತ್ತಾಯ್ತಾ ಅಮ್ಮೂ.." "ಚಿನ್ನೂ... ಆ ತೂಗು ತೊಟ್ಟಿಲು ಎಷ್ಟು ಚೆನ್ನಾಗಿತ್ತು ಗೊತ್ತೇನೋ..." ಎಂದೆಲ್ಲಾ ಮಾತಾಡುತ್ತಾ ಬರುತ್ತಿದ್ದರೆ, ಪುಟ್ಟಿ ಬೆಂಡು, ಬತ್ತಾಸು ನೆಕ್ಕುತ್ತಾ... ಹೂಂ..ಹೂಂ.. ಎನ್ನುತ್ತಾ... ಮಧ್ಯೆ ಮಧ್ಯೆ ಅಣ್ಣನ ಮುಖ ನೋಡಿ ಮುದ್ದಾಗಿ ನಗುತ್ತಾ ಬರುತ್ತಿತ್ತು. ಅದು ತನ್ನದೇ ಲೋಕದಲ್ಲಿ, ಹೊಸ ಟೇಪು, ಬಳೆಗಳೊಡನೆ ವಿಹರಿಸುತ್ತಿತ್ತು. ಮನೆ ಹತ್ತಿರ ಬಂದೊಡನೆ, ಹೊರಗೇ ಕಾಯುತ್ತಾ ನಿಂತಿದ್ದ ಅಮ್ಮನನ್ನು ಕಂಡು ಪುಟ್ಟಿ, ಅವಸರದಲ್ಲಿ ಅಣ್ಣನ ಕೈ ಬಿಟ್ಟು... "ಅಮ್ಮಾ... ನೋಡು ಹೊಸ ಟೇಪು..." ಅಂತ ಓಡೋಯ್ತು... ಅದರ ಸಂಭ್ರಮ ನೋಡುತ್ತಾ ಪುಟ್ಟ ಮೈ ಮರೆತು ನಿಂತಿದ್ದ.

ಅಂತೂ ನಮ್ಮ ಪುಟ್ಟ-ಪುಟ್ಟಿಯ ತೇರು ಜಾತ್ರೆಯಲ್ಲಿ ಮೆರವಣಿಗೆ ಮಾಡಿಕೊಂಡು, ಜೋಪಾನವಾಗಿ ಮನೆ ತಲುಪಿತ್ತು.


ಚಿತ್ರಕೃಪೆ : ಅಂತರ್ಜಾಲ