ಹಿಂದಿನ ವಾರದ ಕೊನೆಗೆ ನಾನು ಮತ್ತೆ ನನ್ನೂರು ಭದ್ರಾವತಿಗೆ ಹೋಗುವಾಗ ನನ್ನ ಮನಸ್ಸು ಅದೇಕೋ ತುಂಬಾ ಸಂತಸದಿಂದಿತ್ತು. ನಾ ಹುಟ್ಟಿದ್ದು ಬೆಂಗಳೂರಿನಲ್ಲೇ ಆದರೂ... ಬೆಳೆದಿದ್ದು, ವಿದ್ಯಾಭ್ಯಾಸ, ಮದುವೆ ಎಲ್ಲಾ ಭದ್ರಾವತಿಯಲ್ಲೇ ಆಗಿದ್ದು. ಜೀವನದ ಒಂದು ಘಟ್ಟ ಮುಗಿದು, ಮಹತ್ತರ ಘಟ್ಟ ಆರಂಭವಾಗಲು.. ಮದುವೆಯೆಂಬ ಅಡಿಪಾಯ ನನಗೆ ನನ್ನೂರಲ್ಲೇ ಹಾಕಿದ್ದು. ನಮ್ಮ ಮನೆ ಭದ್ರಾನದಿಯ ಪಕ್ಕದಲ್ಲೇ ಇತ್ತು. ನಮ್ಮ ಮನೆ ಸೇತುವೆಗೆ ಹತ್ತಿರ, ನದೀ ತೀರದಲ್ಲಿ, ಆರಕ್ಷಕ ಠಾಣೆಯ ಸಾಲಿನಲ್ಲಿ, ಮಠದ ಹತ್ತಿರ, ಶಾಲೆಗೆ ಹತ್ತಿರ.. ಮನೆಯ ಹಿಂದುಗಡೆಯೇ ಬಸವೇಶ್ವರ ಸಿನಿಮಾ ಮಂದಿರ, ತರಕಾರಿ ಮಾರುಕಟ್ಟೆ, ಅಲ್ಲಿಂದ ಸ್ವಲ್ಪವೇ ಮುಂದೆ ಸರಕಾರಿ ಆಸ್ಪತ್ರೆ... ಈ ಕಡೆ ಬಂದರೆ... ನಮ್ಮೂರ ಹಳೇನಗರದ ಬಯಲು.. ’ಕನಕ ಮಂಟಪ’.. ಅದಕ್ಕೆ ಎದುರಿಗೇ ಪ್ರಾಥಮಿಕ ಶಾಲೆ, ಪಕ್ಕದಲ್ಲೇ ಪ್ರೌಢ ಶಾಲೆ... ಕೆಲವೇ ಹೆಜ್ಜೆಗಳು ಮುಂದೆ ಹೋದರೆ ನಿರ್ಮಲಾ ಆಸ್ಪತ್ರೆ, ಕೈ ಮುರುಕ ಆಂಜನೇಯನ ಗುಡಿ.. ಅಲ್ಲಿಂದ ಎಡಕ್ಕೆ ತಿರುಗಿ ಸ್ವಲ್ಪ ದೂರ ಹೋದರೆ ಸಿಕ್ಕುವುದೇ.. ಗ್ರಾಮ ದೇವತೆ ಹಳದಮ್ಮ ತನ್ನ ತಂಗಿಯರ ಜೊತೆಗೂಡಿ ನೆಲೆಸಿರುವ ದೇವಸ್ಥಾನ.. ಅಲ್ಲಿಂದ ಹಾಗೇ... ಸ್ವಲ್ಪ ಮುಂದೆ ಬಂದರೆ ಇರುವುದೇ... ಭದ್ರಾವತಿಯ ವಿಶೇಷ.. ಹೊಯ್ಸಳರ ಕಾಲದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ನಕ್ಷತ್ರಾಕಾರದ ಪ್ರಾಕಾರವಿರುವ ದೇವಸ್ಥಾನ.... ಇದೆಲ್ಲಾ ಬರೀ ಹಳೇನಗರದ ವಿಶೇಷತೆಗಳು... ನಾ ಈ ಸಲ ನನ್ನ ಭಾವುಕತೆಯ ಜೋಡಣೆಯನ್ನು ಹಳೇನಗರಕ್ಕೇ ಮೀಸಲಿಡುತ್ತೇನೆ ರೈಲು ಕೆಳಗಿನ ಸೇತುವೆ ದಾಟಿ ಮುಂದೆ ನಾ ಹೋಗೋಲ್ಲ. ಮುಂದಿನ ಬಾರಿ ಹೋದಾಗಿನ ಅನುಭವಗಳ ಜೊತೆಗೆ... ಹೊಸನಗರ, ಕಾಗದ ನಗರ, ಮಿಲಿಟರಿ ಕ್ಯಾಂಪ್, ಹೀಗೆ ಬಾಕಿ ಉಳಿದ ಪ್ರದೇಶಗಳ ವಿವರಗಳನ್ನು ಹೇಳ್ತೀನಿ.
ನಾವು ಅಲ್ಲಿಗೆ ಗುರುವಾರ ರಾತ್ರಿ ಹೋಗಿ ತಲುಪಿದೆವು. ದಾರಿಯುದ್ದಕ್ಕೂ ಜಿಟಿ ಜಿಟಿ ಮಳೆ ಬರುತ್ತಲೇ ಇತ್ತು. ಭದ್ರಾವತಿಯಲ್ಲಿ ಇಳಿದಾಗ ನಮ್ಮನ್ನು ಎದುರ್ಗೊಳ್ಳಲು ನನ್ನ ಭಾವ ಹಾಗೂ ಅಳಿಯ ಬಂದಿದ್ದರು. ಇದು ನನಗೆ ತೀರಾ ಆಶ್ಚರ್ಯದ ಖುಷಿ ಕೊಟ್ಟಿತ್ತು. ರೈಲು ನಿಲ್ದಾಣದಲ್ಲೆಲ್ಲಾ ಸಿಮೆಂಟು ಹಾಕಿ ಜಗುಲಿಯನ್ನು ದುರಸ್ತಿ ಮಾಡುತ್ತಿದ್ದಾರೆ. ನಿಲ್ದಾಣದ ಮುಂಭಾಗವನ್ನೆಲ್ಲಾ ಹೊಸ ವಿನ್ಯಾಸಗೊಳಿಸಿ, ಬಣ್ಣ ಹಚ್ಚಿಸಿ ಸುಂದರವಾಗಿಸಿದ್ದಾರೆ. ರೈಲು ನಿಲ್ದಾಣ ನಮ್ಮೂರ ದೊಡ್ಡ ಮಾರುಕಟ್ಟೆ ಕಟ್ಟಡದ ಹಿಂಭಾಗದಲ್ಲಿತ್ತು. ಆ ಮಾರುಕಟ್ಟೆ ಕಟ್ಟಡ ಒಡೆದು ಹಾಕಿದ್ದಾರೆ. ಈಗ ನಿಲ್ದಾಣ ರಸ್ತೆಗೇ ಕಾಣುತ್ತದೆ.... ರಸ್ತೆಗಳು ಅಗಲೀಕರಿಸಲ್ಪಟ್ಟಿವೆ.. ಒಟ್ಟಿನಲ್ಲಿ ನನ್ನೂರು ಭದ್ರಾವತಿ ಒಂಥರಾ ಹೊಸ ಹಾಗೂ ಹಳೆಯ ಮಿಶ್ರಣದ ಘಮದಲ್ಲಿ ತೇಲುತ್ತಿದೆ.
ತರೀಕೆರೆ ದಾಟುತ್ತಿದ್ದಂತೇ... ಮೈ ಮನ ಅರಳಿ... ಅದೇನೋ ಒಂದು ಹೇಳಲಾರದ ನಿರಾಳ ಭಾವ, ನಾನೀ ಸ್ಥಳಕ್ಕೆ ಸೇರಿದವಳೆಂಬ ’ಅಂಟಿಕೊಳ್ಳುವ’ ಒಂದು ಎಳೆ.. ತಪ್ಪಿಸಿಕೊಂಡ ಪುಟ್ಟ ಕರು.. ಅಮ್ಮನ ಮಡಿಲಿಗೆ ಬಂದಾಗ ಆಗುವ ಬೆಚ್ಚನೆಯ ಅನುಭವ... ಅಬ್ಬಾ.. ವರ್ಣಿಸಲಾಗದಷ್ಟು ಭರಪೂರ ಮನಸ್ಸು.... ರೈಲಿಳಿದು ನನ್ನೂರ ಮಣ್ಣಿನಲ್ಲಿ ಕಾಲಿಟ್ಟ ಕೂಡಲೇ ರೋಮಾಂಚನ....
ಎಲ್ಲಾ ಸುಂದರವಾದ ಮಾತುಗಳೊಂದಿಗೆ ನಮ್ಮೂರ ಕೆಲವು ಬದಲಾವಣೆಗಳ ಬಗ್ಗೆಯೂ ಮಾತನಾಡಲೇ ಬೇಕಾಗುತ್ತದೆ. ಎಲ್ಲಕ್ಕಿಂತ ಮೊತ್ತ ಮೊದಲನೆಯದು... ಆಟೋರಿಕ್ಷಾ ಚಾಲಕರ ಅಟಾಟೋಪ... ಅಲ್ಲಿ ಮೀಟರ್ ಹಾಕಿ ಓಡಿಸುವ ಪದ್ಧತಿ ಇಲ್ಲದಿರುವುದರಿಂದ... ಅವರು ಕೇಳಿದ್ದೇ ರೇಟು. ನಾವೂ ಏನೂ ಕಮ್ಮಿ ಇಲ್ಲವೆನ್ನುವಂತೆ.. ಇದೇನ್ರಿ.. ಇದು... ನಾವೂ ಈ ಊರಿನವರೆ... ಈ ಪಾಟಿ ದುಡ್ಡು ಕೇಳ್ತೀರಾ ಎಂದರೆ ಸಾಕು... ಏನ್ ಮೇಡಂ ಇಷ್ಟು ಕಮ್ಮಿ ಕೇಳಿದ್ರೂ ಹೀಗಂತಿರಲ್ಲಾ... ಎಲ್ಲದರ ಬೆಲೆ ಜಾಸ್ತಿ ಆಗಿದೆ... ಅಂತ ನಮ್ಮನ್ನೇ ದಬಾಯಿಸುತ್ತಾರೆ. ಇರಲಿ ಬಿಡಿ... ಇದೆಲ್ಲಾ ಸಣ್ಣ ಪುಟ್ಟ ಕಿರಿಕಿರಿಗಳು ಇದ್ದಿದ್ದೆ... ಅದು ನನ್ನ ಉತ್ಸಾಹವನ್ನೇನು ಕಮ್ಮಿ ಮಾಡೋಲ್ಲ...
ಇಡೀ ಹಳೆನಗರಕ್ಕೆ.. ದೊಡ್ಡ ಮೈದಾನವೆಂದರೆ.. ಕನಕ ಮಂಟಪ ಒಂದೇ... ನಮ್ಮ ಶಾಲೆಗಳ ಎಲ್ಲಾ ಕಾರ್ಯಕ್ರಮಗಳು.. ಮಹಿಳಾ ಸಮಾಜದ ವಾರ್ಷಿಕೋತ್ಸವಗಳು, ಯಕ್ಷಗಾನಗಳು ಎಲ್ಲವು... ಅಲ್ಲೇ ಅದೇ ಮೈದಾನದಲ್ಲೇ ನಡೆಯುತ್ತಿತ್ತು. ಮಧ್ಯದಲ್ಲಿ ಒಂದು ಧ್ವಜ ಸ್ಥಂಬ ಇತ್ತು. ನಮ್ಮ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಗುತ್ತಿದ್ದ ಸ್ವಾತಂತ್ರ ದಿನೋತ್ಸವ, ಆಟೋಟಗಳು ಎಲ್ಲದಕ್ಕೂ ಈಗಲೂ ಸಾಕ್ಷಿಯಾಗಿ ನಿಂತಿರುವುದು ಈ ನಮ್ಮ ಮೈದಾನವೇ. ಈಗ ಅದಕ್ಕೆ ಸುತ್ತಲಿನ ಗೋಡೆ ಕಟ್ಟಿದ್ದಾರೆ.. ನಾವು ಚಿಕ್ಕವರಿದ್ದಾಗ ಅದು ತೆರೆದ ಬಯಲು ಪ್ರದೇಶ. ಅಲ್ಲಿ ಕೋಳಿ ಜಗಳದ ಮರಗಳು ಅನೇಕವಿದ್ದವು... ಎಲ್ಲಕ್ಕಿಂತ ವಿಶೇಷ ಕಾರ್ಯಕ್ರಮ ಈ ಮೈದಾನದಲ್ಲಿ ನಡೆಯುತ್ತಿದ್ದದ್ದು... “ಬನ್ನಿ ಮುಡಿಯುವ ಕಾರ್ಯಕ್ರಮ.” ಊರಿನ ಎಲ್ಲಾ ದೇವರುಗಳ ಉತ್ಸಾವವೂ ಅಲ್ಲಿಗೆ ಬರುತ್ತಿತ್ತು. ವಿಜಯದಶಮಿಯ ಸಾಯಂಕಾಲ ೬.೩೦ರ ನಂತರ... ಒಂದೊಂದೇ ದೇವರು-ದೇವತೆಗಳು ಮೆರವಣಿಗೆಯಲ್ಲಿ ಬಂದು ಅಲ್ಲಿ ಬೀಡು ಬಿಟ್ಟ ಕೂಡಲೇ ಈ ಕಾರ್ಯಕ್ರಮ ನಡೆಯುತ್ತಿತ್ತು. ಅಪ್ಪ ಪತ್ರಕರ್ತರಾಗಿಯೂ, ಊರಿನ ಹಿರಿಯರಾಗಿಯೂ ಉಪಸ್ಥಿತರಿರುತ್ತಿದ್ದರು. ವಾಪಸ್ಸು ಬರುವಾಗ ಶಮಿ ವೃಕ್ಷದ ಎಲೆಗಳನ್ನು ತಂದು ಕೊಡುತ್ತಿದ್ದರು. ಇದು ಆ ದಿನಗಳ ಮರೆಯಲಾಗದ ವಿಶೇಷ ನನಗೆ. ನಮ್ಮ ಶಾಲೆಯ ಕಾರ್ಯಕ್ರಮಗಳಲ್ಲಿ.. ಬಾವುಟ ಹಿಡಿದು ನಾವೂ ಕವಾಯಿತು ಮಾಡುತ್ತಾ ನಡೆದು ಬಂದು ತಹಸಿಲ್ದಾರರಿಗೂ, ಧ್ವಜ ಸ್ಥಂಬದಲ್ಲಿ ಹಾರಾಡುತ್ತಿದ್ದ ಹೆಮ್ಮೆಯ ಬಾವುಟಕ್ಕೂ ಸೆಲ್ಯೂಟ್ ಮಾಡುತ್ತಿದ್ದ ದೃಶ್ಯ ಮರೆಯಲಾಗದ್ದು. ಅಲ್ಲಿಂದ ಎಲ್ಲರೂ.. ಸಾಲು ಸಾಲಾಗಿ ಮುನಿಸಿಪಲ್ ಕಚೇರಿಗೆ ಹೋಗಿ ಸಿಹಿ ಇಸ್ಕೊಂಡು ಮನೆಗೆ ಹೋಗುತ್ತಿದ್ದೆವು.
ತುಂಬಿ ಹರಿಯುತ್ತಿದ್ದ ಭದ್ರೆಯ ಒಡಲು ಈಗ ಬರಿದಾಗಿದೆ. ಅವಳ ಮಡಿಲಲ್ಲಿ ಇದ್ದ ಒಂದು ಪುಟ್ಟ ಮಂಟಪದಲ್ಲಿ ಈಶ್ವರ ನೆಲೆಸಿದ್ದ. ಈಗ ಬದಲಾದ ಕಾಲಕ್ಕೆ ತಕ್ಕಂತೆ... ಈಶ್ವರನಿಗೂ ಹೊಸ ಮಂಟಪ ಕಟ್ಟಿ.. ಗಾಢ ಬಣ್ಣಗಳಿಂದ ಅಲಂಕರಿಸಿದ್ದಾರೆ. ಒಡಲಲ್ಲಿನ ಹೆಚ್ಚು ನೀರು ಇಲ್ಲದಿರುವುದರಿಂದ ನನ್ನಮ್ಮ ಭದ್ರೆ ತನ್ನ ಮಾತೃ ಭಾವದ ಸಂಕೇತವಾಗಿ... ಅನೇಕ ಬೇಕಾದ.. ಬೇಡಾದ ಬಳ್ಳಿ.. ಗಿಡಗಳಿಗೆ ವಾತ್ಸಲ್ಯದ ಆಸರೆ ಕೊಟ್ಟಿದ್ದಾಳೆ.. ತನ್ನ ಮೊದಲ ಕಂದ (ಹಳೇ ಸೇತುವೆ) ವಯಸ್ಸಿನ ಭಾರದಿಂದ ಕುಗ್ಗುತ್ತಿರುವುದು... ಭಾರ ತೆಗೆದುಕೊಳ್ಳಲಾಗದು ಎಂದು ಅರಿತು... ಮತ್ತೊಂದು ಹೊಸ ಸೇತುವೆಯನ್ನೂ ಮಡಿಲಿನಲ್ಲಿ ಸೇರಿಸಿಕೊಂಡಿದ್ದಾಳೆ. ತಾಯಿಯಲ್ಲವೆ... ಸಹನಾಮಯಿ... ಕಾರ್ಖಾನೆಗಳಿಂದ ಹೊರಬಂದ ತ್ಯಾಜ್ಯಗಳನ್ನೆಲ್ಲಾ ಸಹಿಸಿದಳು..
. ನನ್ನಮ್ಮೆ ಭದ್ರೆ...
ನಾನು ನನ್ನ ಬಾಲ್ಯದ ಬಹುಭಾಗ ಕಳೆದ ರಾಮದೇವರ ದೇವಸ್ಥಾನ ಹಾಗೂ ಗುರು ರಾಘವೇಂದ್ರರ ಮಠ ಹೊರಗಿನಿಂದ ಅನೇಕ ಬದಲಾವಣೆಗಳನ್ನು ಕಂಡರೂ.. ನನ್ನೊಳಗಿನ ಅವಿನಾಭಾವ ಸಂಬಂಧದ ಎಳೆ ಮಾತ್ರ ಯಾವ ಬದಲಾವಣೆಯನ್ನೂ ಕಂಡಿಲ್ಲ.... ನನ್ನ ಮದುವೆ ನನ್ನ ಗುರು ರಾಘವೇಂದ್ರರ ಸನ್ನಿಧಿಯಲ್ಲೇ ನಡೆದಿದ್ದು...
ಗ್ರಾಮ ದೇವತೆ ಮಾರಿಯಮ್ಮನ ದೇವಾಲಯ ಕೂಡ ಪೂರ್ತಿಯಾಗಿ ನವೀಕರಿಸಲ್ಪಟ್ಟಿದೆ.
ಹೊಯ್ಸಳರ ಕಾಲದ ನರಸಿಂಹ ಸ್ವಾಮಿಯ ಗುಡಿಯಲ್ಲಿ ಪ್ರತಿ ವರ್ಷವೂ ರಥೋತ್ಸವ ನಡೆಯುತ್ತದೆ. ಈ ವರ್ಷ ಕೂಡ ಮುಂದಿನ ತಿಂಗಳು ೭ -೮ ನೇ ತಾರೀಖು ಇರಬೇಕು...
ತರೀಕೆರೆ ರಸ್ತೆಯಲ್ಲಿ ಹುಡುಗರ ಪ್ರೌಢ ಶಾಲೆಯ ಎದುರಿಗೆ ಅಪ್ಪ ಒಂದು ವೃತ್ತ ಕಟ್ಟಿಸಿದ್ದರು. ಅದರಲ್ಲಿ ಅಪ್ಪನ ಹಾಗೂ ಅಣ್ಣನ ಹೆಸರುಗಳೂ
ಇದ್ದವು.. (ಈಗಲೂ ಇವೆ, ಪೂರ್ತಿ ಹಾಳಾಗಿಲ್ಲ) ಆದರೆ ಕಾಲ ಸರಿದಂತೆ ಈಗ ಅದಕ್ಕೆ “ಗಾಂಧಿ ವೃತ್ತ” ಎಂದೋ ಏನೋ ಹೆಸರು ಬದಲಾಯಿಸಿದ್ದಾರೆ.. ಈ ಸಾರಿ ಅವರ ಹೆಸರುಗಳ ಚಿತ್ರ ತೆಗೆದುಕೊಂಡು ಬಂದೆ.. ಏನೋ ಮುದವೆನಿಸುತ್ತದೆ ಅಪ್ಪನ ಹೆಸರು ಓದುವಾಗ...
ನಾವಿದ್ದಾಗ ಇದ್ದದ್ದು ೪ ಸಿನಿಮಾ ಮಂದಿರಗಳು ಮಾತ್ರ. ನಮ್ಮನೆ ಹಿಂದುಗಡೆ ಇದ್ದ ಬಸವೇಶ್ವರ ಚಿತ್ರ ಮಂದಿರ ಈಗ ಕಲ್ಯಾಣ ಮಂಟಪ ಆಗಿದೆ. ನಮಗೆ ಪರಿಚಯವಿದ್ದ ಅನೇಕರು ಬೆಂಗಳುರಿನಲ್ಲಿ ಕೆಲಸ ಹುಡುಕಿಕೊಂಡು ಬಂದು ಬಿಟ್ಟಿದ್ದಾರೆ. ಈಗ ಹೋದರೆ... ನನ್ನಪ್ಪನಿಗೆ ಪರಿಚಯವಿದ್ದವರು ಸಿಕ್ಕುವುದು ತುಂಬಾ ವಿರಳವೇ ಆಗಿದೆ. ಇಷ್ಟುಸಾರಿ ಹೋದರೂ ನಾನು ಯಾವಾಗಲೂ ನನ್ನಪ್ಪನ ಸ್ನೇಹಿತರನ್ನು ಭೇಟಿ ಮಾಡಲು ಹೋಗಿರಲೇ ಇಲ್ಲ. ಈ ಸಾರಿ ನಾನು ಒಬ್ಬ ಹಿರಿಯರನ್ನು ನೋಡಲು ಹೋಗಿದ್ದೆ. ಅವರು ಡಾಕ್ಟರ್ ಕರುಣಾಕರ ಶೆಟ್ಟಿ.. ನನ್ನಪ್ಪನ ಜೊತೆ ಲಯನ್ಸ್ ಕ್ಲಬ್ ನಲ್ಲಿ ಕೆಲಸ ಮಾಡಿದ್ದರು... ಅವರು ಈಗಲೂ ಅದೆಲ್ಲಾ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ... ಜೊತೆಗೇ ತಮ್ಮದೇ ಕ್ಲಿನಿಕ್ ಕೂಡ ಇಟ್ಟುಕೊಂಡಿದ್ದಾರೆ. ಸ್ವಲ್ಪ ಆಶ್ಚರ್ಯದಿಂದಲೇ.. ನನ್ನೊಡನೆ ಮಾತಿಗೆ ತೊಡಗಿದರು. ಮೆಲ್ಲಗೆ ನನ್ನ ಪರಿಚಯ ಹೇಳಿಕೊಂಡು... ಸಾರ್ ನಿಮಗೆ ಅಪ್ಪನ ನೆನಪು ಸ್ವಲ್ಪ ಇರಬಹುದಲ್ಲವೇ..? ಎಂದು ಕೇಳಿದಾಗ. ಇದ್ಯಾಕಮ್ಮ ಹೀಗೆ ಹೇಳ್ತೀರಿ... ಸ್ವಲ್ಪ ಅಲ್ಲ... ಚೆನ್ನಾಗಿಯೇ ಇದೇ. ಅವರನ್ನು ಯಾರು ಮರೆಯಲು ಸಾಧ್ಯ..? ಬಿಳಿಯ ಕಚ್ಚೆ ಪಂಚೆ ಉಟ್ಟು... ಯಾವಾಗಲೂ ಕರಿಯ ಕೋಟ್ ತೊಟ್ಟು ಬರುತ್ತಿದ್ದರು. ನಾವೆಲ್ಲಾ ಸೇರಿ... ಡಾಕ್ಟರ್ ಮೋದಿಯವರನ್ನು ಕರೆಸಿದ್ದೆವು... ಎಷ್ಟೊಂದು ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳನ್ನು ಮಾಡುತ್ತಿದ್ದೆವು... ಎಂದೆನ್ನುತ್ತಾ... ಸುಮಾರು ಅರ್ಧ ಘಂಟೆ ಆತ್ಮೀಯವಾಗಿ ಮಾತನಾಡಿ... ಇನ್ನು ಭದ್ರಾವತಿಗೆ ಬಂದಾಗೆಲ್ಲಾ ನನ್ನನ್ನು ಭೇಟಿ ಮಾಡಲು ಬನ್ನಿ... ನಂಗೆ ತುಂಬಾ ಸಂತೋಷವಾಯಿತು ಎನ್ನುತ್ತಾ.. ಭಾವುಕರಾಗಿ ಬೀಳ್ಕೊಟ್ಟರು. ಡಾಕ್ಟರ್ ಯು (ಉಪ್ಪೂರು) ಕರುಣಾಕರ ಶೆಟ್ಟಿಯವರು... ನಮ್ಮ ನಿಮ್ಮೆಲ್ಲರ ಬ್ಲಾಗ್ ಮಿತ್ರ “ಆಸುಮನ”ದ ಶ್ರೀ ಸುರೇಶ್ ಹೆಗ್ಡೆಯವರ ಚಿಕ್ಕಪ್ಪನವರು.....
ಈ ಸಲದ ನನ್ನ ಊರಿನ ಭೇಟಿ.. ಅನೇಕ ಭಾವನೆಗಳ ಸಂಗಮವಾಗಿತ್ತು. ಬಾಲ್ಯದ ನೆನಪಿನ ಜಾಗಗಳಲ್ಲಿ ಓಡಾಡಿ... ಮನಸ್ಸು ಅರಳಿತ್ತು... ವಾಪಸ್ಸು ಬರುವಾಗ ಅದೇನೋ ಹೊಸತನ ಮೈ ಮನದಲ್ಲಿ ತುಂಬಿದ್ದರೂ ಕೂಡ... ಅದೇಕೋ.. ಅಗಲಿಕೆಯ ವಿಷಾದ ಕೂಡ ಸ್ವಲ್ಪವೇ ಸ್ವಲ್ಪ ಇಣುಕಿತ್ತು...!!!