Tuesday, August 31, 2010

ಬೆಕ್ಕಿನ ಕಣ್ಣು

"ಬೆಕ್ಕಿನ ಕಣ್ಣು".... ಕಾದಂಬರಿಯನ್ನು ಓದಿ ಸ್ವಲ್ಪ ದಿನಗಳಾದರೂ ಅದೇಕೋ ಕಾದಂಬರಿಯ ಬಗ್ಗೆ ಬರವಣಿಗೆ ಪೂರ್ಣವಾಗಲೇ ಇಲ್ಲ. ಚಿಕ್ಕದಾಗಿ ಸುಮ್ಮನೆ ಕಥೆಯ ಪರಿಚಯ ಮಾಡಿಕೊಡೋಣವೆಂದು ಏನೆಲ್ಲಾ ಪ್ರಯತ್ನ ಪಟ್ಟರೂ... ಮೊಟಕುಗೊಳಿಸಿ, ಕಥೆಯ ಮತ್ತು ನನ್ನ ಮನಸ್ಸಿನ ಭಾವಗಳನ್ನು ಅರ್ಥಗೆಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ತೀರಾ ವಿವರವಾಗಿ ಹೋಗದೆ... ಸುಮ್ಮನೆ ನಿಮಗೆ ಓದಿ ಮರೆತುಹೋಗಿರಬಹುದಾದ... ಕುಸುಮಳ ವ್ಯಕ್ತಿತ್ವ... ನವಿರು ಭಾವಗಳು.... ಸೂಕ್ಷ್ಮ ಸಂವೇದನೆಗಳನ್ನು... ಸ್ವಲ್ಪವಾದರೂ ಹೇಳಲೇಬೇಕೆಂದು, ನನ್ನ ಮನಸ್ಸಿಗೆ ತೋಚಿದಂತೆ ಇಲ್ಲಿ ಹೇಳಲು ಪ್ರಾರಂಭಿಸಿದ್ದೇನೆ. ಬರಹ ಒಂದು ಕಂತಿಗೆ ತುಂಬಾ ಉದ್ದವಾಗಿದೆ ಅನ್ನಿಸಿದ್ದರಿಂದ.... ಮುಕ್ತಾಯವನ್ನು ಇನ್ನೊಂದು ಬರಹವಾಗಿ ಮುಂದುವರೆಸಿ ಹೇಳಬಯಸುತ್ತೇನೆ. ನಿಮಗೆ ಒಪ್ಪಿಗೆಯಾಗುತ್ತದೆ ಮತ್ತು ನೀವೆಲ್ಲರೂ ಇನ್ನೊಂದು ಭಾಗವನ್ನೂ ಓದಲು ಕಾಯುತ್ತೀರೆಂಬ ನಂಬಿಕೆಯಿಂದ.........

ಅನೇಕ ವರ್ಷಗಳು ಮಕ್ಕಳಿಲ್ಲದ ಜಗನ್ನಾಥರಾಜಮ್ಮ ದಂಪತಿಗಳಿಗೆ, ವರವಾಗಿ, ಮುದ್ದಿನ ಕುವರಿಯಾಗಿ ಜನಿಸಿದ ಕುಸುಮ ಹತ್ತನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಳ್ಳುವ ಹತಭಾಗ್ಯವಂತಳಾಗುತ್ತಾಳೆ. ತಾಯಿಯ ಕಟ್ಟೆಯೊಡೆದ ಪ್ರವಾಹದಂತಿದ್ದ ನಿಸ್ವಾರ್ಥ ಪ್ರೇಮದ ಕಡಲಲ್ಲಿ ತೇಲುತ್ತಿದ್ದ ಮಗು, ಕಂಗೆಟ್ಟು ತಂದೆಯನ್ನೇ ಬಲವಾಗಿ ತಬ್ಬಿದ ಬಳ್ಳಿಯಂತಾಗುತ್ತಾಳೆ. ಎರಡನೆಯ ಮದುವೆಗೆ ಕೊನೆಗೂ ಒಪ್ಪಿಯೇ ಬಿಡುವ ತಂದೆ......

ಬಲವಂತವಾಗಿ ಎರಡನೆಯ ಮದುವೆಯ ವರನನ್ನು ವರಿಸುವ ಸನ್ನಿವೇಶದಲ್ಲಿ ಕ್ಷೋಭೆಗೊಂಡ ಮನಸ್ಸಿನ ಪದ್ಮ, ತನ್ನ ಸವತಿಯ ಮಗಳನ್ನು ಯಾರೋ ಎಳೆದು ತನ್ನ ತೊಡೆಯಲ್ಲಿ ಕೂಡಿಸಿದಾಗ, ತನ್ನ ಕ್ರೋಧವನ್ನೆಲ್ಲಾ ಮಗುವನ್ನು ನೂಕಿ ಬಿಡುವ ಮೂಲಕ ತೋರಿಸಿಬಿಡುತ್ತಾಳೆ. ಇದು ಪುಟ್ಟ ಕುಸುಮಳಿಗೆ ಜೀವನದಲ್ಲಿ ಆಗುವ ಮೊದಲ ಅಪಮಾನ, ತಿರಸ್ಕಾರ.... ಇದ್ಯಾವುದೂ ತಿಳಿಯದ ಜಗನ್ನಾಥನೂ ಕುಸುಮಳ ಮೇಲೆ ಮೊದಲ ಬಾರಿ ಸಿಟ್ಟು ಮಾಡಿಕೊಂಡಾಗ, ತಾನು ತಂದೆಯ ಮನೆಯ.. ಮನಸ್ಸಿನ ಸರ್ವಾಧಿಕಾರಿ, ಶಾಸನಾಧಿಕಾರಿಯೆಂದು.. ಆವರೆಗೂ ನಂಬಿಕೊಂಡಿದ್ದ ಪುಟ್ಟ ಮನಸ್ಸಿಗೆ ತುಂಬಾ ದು:ಖವಾಗುತ್ತದೆ, ಇದು ಎರಡನೆಯ ಘಟನೆ....

ಮೊದಲ ನೋಟದಲ್ಲೇ ಕುಸುಮ ಹಾಗೂ ಪದ್ಮಳ ನಡುವೆ ಸೌಹಾರ್ದವೇ ಇಲ್ಲದೆ ಒಂದು ಸುಪ್ತ ಜ್ವಾಲಾಮುಖಿ ಒಳಗೇ ಕುದಿಯಲು ಆರಂಭವಾಗಿರುತ್ತದೆ. ತಂದೆ ಚಿಕ್ಕಮ್ಮ ಪದ್ಮಳಿಗೆ ತೋರಿದ ಬೆಂಬಲ ಕುಸುಮಳ ಮನದಲ್ಲಿ ಮತ್ಸರದ ಬೆಂಕಿ ಹೊತ್ತಿಸಿಬಿಡುತ್ತದೆ. ತಾನೇನನ್ನೋ ಅಮೂಲ್ಯವಾದದ್ದನ್ನು ಕಳೆದು ಕೊಂಡೆನೆಂದು ರೋಧಿಸತೊಡಗುತ್ತಾಳೆ.

ತಾಯಿ ಬದುಕಿರುವಾಗಲೇ ಕುಸುಮ ಒಂದು ಪುಟ್ಟ ಬೆಕ್ಕಿನ ಮರಿಯನ್ನೂ, ನಾಯಿ ಮರಿಯನ್ನೂ ಕಾಡಿ, ಹಟಮಾಡಿ ತರಿಸಿಕೊಂಡಿರುತ್ತಾಳೆ. ಈಗ ಅವೆರಡೇ ಅವಳ ಸಂಗಾತಿಗಳಾಗುತ್ತಾರೆ...

ಎರಡನೇ ಮದುವೆ ಮಾಡಿಕೊಂಡ ಜಗನ್ನಾಥ, ಮಗಳನ್ನು ದೂರ ಮಲಗಿಸಲಾರದೆ, ಹೊಸ ಹೆಂಡತಿಯ ಮೋಹವನ್ನೂ ಬಿಡಲಾರದೆ ಒದ್ದಾಡುತ್ತಾನೆ. ಉಪಾಯದಿಂದ ಕುಸುಮಳ ಜೊತೆ ತಾನೂ ನಡುಮನೆಯಲ್ಲಿ ಬಂದು ಮಲಗುತ್ತಾನೆ. ಅರ್ಧ ರಾತ್ರಿಯಲ್ಲಿ ಮಿಂಚು-ಗುಡುಗುಗಳಿಗೂ, ದು:ಸ್ವಪ್ನಕ್ಕೂ ಹೆದರಿ ಕಂಗಾಲಾಗಿ ಕುಸುಮ ಎದ್ದಾಗ ಪಕ್ಕದಲ್ಲಿ ತಂದೆ ಇರುವುದಿಲ್ಲ... ಕನಸಿನಲ್ಲಿ ಕುಸುಮ ಸಿಂಹದ ಘರ್ಜನೆಯನ್ನೂ, ಒಂಟಿಯಾಗಿ ನಿಂತಿರುವ ತನ್ನ ಸುತ್ತಲೂ ಚಾಚಿರುವ ಹಸಿರು ಕೆನ್ನಾಲಿಗೆ ಬೆಂಕಿಯನ್ನೂ, ತನ್ನದೇ ಪ್ರಿಯ ಬೆಕ್ಕು ಪಾಲಿ ಭಾಯಾನಕ ಗಾತ್ರ ತಳೆದು ಹುಲಿಯಂತೆ ತನ್ನ ಮೇಲೆರಗುವುದನ್ನೂ ಕಾಣುತ್ತಾಳೆ. ಅದೇ ಸಮಯಕ್ಕೆ ಚಿಟಿಲ್ಲನೆ ಬಡಿದ ಸಿಡಿಲು, ನೂರಾರು ಮಿಂಚುಗಳೂ... ಪ್ರಕೃತಿಯ ರುದ್ರನಾಟ್ಯ, ಕನಸಿನ ಭೀಕರತೆಯ ನಡುವೆ ಕುಸುಮ, ಬೇಟೆಗಾರರಿಂದ ಸುತ್ತುವರಿಯಲ್ಪಟ್ಟ ಮೊಲದಂತೆ ತಲ್ಲಣಿಸುತ್ತಾಳೆ. ತಂದೆಗಾಗಿ ಬೊಬ್ಬಿರಿಯುತ್ತಾಳೆ... ಆದರೆ ಅರ್ಧ ತೆರೆದ ರೂಮಿನ ಬಾಗಿಲಿನಲ್ಲಿ ಲಾಂದ್ರ ಹಿಡಿದ ಪದ್ಮ, ನಿಂತಿರುತ್ತಾಳೆ......

ಅರ್ಧ ನಿದ್ರೆಯಿಂದೆದ್ದು ಬಂದಿದ್ದ ಪದ್ಮ ಕೋಪಅಸಹನೆಯಿಂದ ಕುದಿಯುತ್ತಿರುತ್ತಾಳೆ. ಅವಳ ಹಸಿರು ಕಣ್ಣುಗಳು ಕೆಂಪು ವರ್ಣ ತಾಳಿ ಅಸಹ್ಯವಾಗಿರುತ್ತವೆ. ಕೆದರಿದ ಕೆಂಚು ಕೂದಲು, ಕೆರಳಿದ ಮುಖದ, ಅಸ್ತವ್ಯಸ್ತ ಸೀರೆಯ, ಕುಂಕುಮ ಅಳಿಸಿಹೋದ, ಮುಡಿದ ಮಲ್ಲಿಗೆ ಜಜ್ಜಿ ಹೋಗಿ ಸರ್ಪದಂತೆ ನೇತಾಡುತ್ತಿದ್ದ ... ಅಬ್ಬಾ... ಭಯಾನಕವಾಗಿರುತ್ತಾಳೆ. ಬೆದರಿದ ಹುಲ್ಲೆ ಮರಿಯಂತಿದ್ದ ಕುಸುಮಳ ಹತ್ತಿರ ಬಂದು ಕುಳಿತು, ಹಸಿರು ಕಣ್ಣುಗಳನ್ನು ಚಕ್ರಾಕಾರವಾಗಿ ತಿರುಗಿಸುತ್ತಾ, ಅಣ್ಣಾ ಎಂದು ತಂದೆಯನ್ನು ಕರೆದ ಮಗುವಿನ ಬಾಯಿ ಮುಚ್ಚಿ, ಅಮುಕಿ ಹೆದರಿಸುತ್ತಾಳೆ. ತನ್ನನ್ನೇ ದುರುಗುಟ್ಟಿ ನೋಡುತ್ತಿದ್ದ ಒಂದು ಜೊತೆ ಹಸಿರು ಕಣ್ಣುಗಳು, ಕುಸುಮಳ ರಕ್ತ ಹೆಪ್ಪುಗಟ್ಟಿಸಿ ಬಿಡುತ್ತದೆ. ತಬ್ಬಲಿಯಂತೆ ಬಿಕ್ಕಿ ಬಿಕ್ಕಿ ಅಳುತ್ತಾ ರಾತ್ರಿ ಕಳೆದು, ಬೆಳಗಿನ ಜಾವ ನಿದ್ದೆ ಮಾಡುತ್ತದೆ ಮಗು. ಬೆಳಿಗ್ಗೆ ಎಷ್ಟು ಹೊತ್ತಾದರೂ ಏಳದ ಮಗುವನ್ನು ತಂದೆ ಎಬ್ಬಿಸಿದಾಗ, ಕುಸುಮ ತಂದೆಯನ್ನು ಬಾಚಿ ತಬ್ಬಿ ಬೋರೆಂದು ಅಳುತ್ತಾಳೆ. ಇದು ಮೂರನೆಯ ಘಟನೆ ಕುಸುಮಳ ಬಾಳಿನಲ್ಲಿ.....

ಇದರ ನಂತರ ಪದ್ಮ, ಕುಸುಮಳ ಸರ ಕದ್ದು ಬಿಡುತ್ತಾಳೆ. ವಾಪಸ್ಸು ಕೊಡೆಂದು ಕೇಳಿದ ಮಗುವಿನ ಕೊರಳು ಅಮುಕಿ ಹೆದರಿಸುತ್ತಾಳೆ ಪದ್ಮ... ಇದು ನಾಲಕ್ಕನೆಯದು... ಹಂತದಲ್ಲಿ ಮೊಟ್ಟ ಮೊದಲ ಬಾರಿಗೆ ಕುಸುಮಳ ಮನದಲ್ಲಿ ರೋಷ ಹುಟ್ಟಿಕೊಳ್ಳುತ್ತದೆ. ಯಾರನ್ನಾದರೂ, ಹೊಡೆದು, ಬಡಿದು, ಕಚ್ಚಿ, ಚೂರು ಮಾಡಬೇಕೆನ್ನುವ ಆಕ್ರೋಶ ಮಿಂಚಿ ಮರೆಯಾಗುತ್ತದೆ. ತನ್ನ ಆಶ್ರಯ, ಪ್ರೀತಿ ಬಯಸಿ ಹತ್ತಿರ ಬಂದ ಬೆಕ್ಕಿನ ಹಸಿರು ಕಣ್ಣುಗಳು ಕುಸುಮಳಿಗೆ ಪದ್ಮಳ ನೆನಪು ಕೊಡುವುದರಿಂದ, ತನ್ನೆಲ್ಲಾ ಆಕ್ರೋಶವನ್ನೂ ಅವಳು ಪಾಲಿಯನ್ನು ಬಲವಾಗಿ ನೆಲಕ್ಕೆ ಕೆಡವಿಕೊಂಡು ಮನಸೋ ಇಚ್ಛೆ ಥಳಿಸುವುದು, ಎತ್ತಿ ಎತ್ತಿ ಗೋಡೆಗೆ ಅಪ್ಪಳಿಸುವುದೂ ಮಾಡುತ್ತಾ ಹೊರಗೆಡುವುತ್ತಾಳೆ.

ಕುಸುಮಳಿಗೆ ಚೂರು ಅಕ್ಕರೆ ತೋರಿಸುತ್ತಿದ್ದ, ಅವಳ ತಾಯಿಯ ಗೆಳತಿ ಸೀತಾಬಾಯಿಯ ಸಂಸಾರವೂ ವರ್ಗವಾಗಿ ಹೊರಟು ಹೋದ ನಂತರ ಕುಸುಮ ತೀರಾ ಅಂತರ್ಮುಖಿ ಮತ್ತು ಒಂಟಿಯಾಗಿ ಬಿಡುತ್ತಾಳೆ.

ಹದಿನಾರರ ಹರೆಯದ ಬಾಲೆ ಕುಸುಮ ಭಾವನೆಗಳ ತೀವ್ರತೆಯನ್ನು ತಾಳಲಾರದೆ, ಕೆಲವೊಮ್ಮೆ ಪಾಲಿಯನ್ನು ಅಟ್ಟಿಸಿಕೊಂಡು, ರಸ್ತೆಯಲ್ಲಿ ತನ್ನ ಮೈಮೇಲಿನ ಅರಿವೆಯ ಅರಿವೂ ಇಲ್ಲದಂತೆ ಓಡುತ್ತಾಳೆ. ಮನಸ್ಸು ಕೆರಳಿದಾಗ ಅವಳು ಹಸಿರು ಬಣ್ಣವನ್ನೂ, ಕಣ್ಗಳನ್ನೂ ದ್ವೇಷಿಸುತ್ತಾಳೆ. ಚಿಕ್ಕಮ್ಮ ಪದ್ಮಳ ಶಿಕ್ಷೆಗಳು ಅವಳನ್ನು ಮೊಂಡು, ಹಟವಾದಿಯಾಗಿ ಮಾರ್ಪಡಿಸಿಬಿಡುತ್ತದೆ. ಕೋಲಿನ ಹೊಡೆತಗಳಾಗಲೀ, ಬೈಗುಳಗಳಾಗಲೀ, ಯಾವುದಕ್ಕೂ ಜಗ್ಗದ ಸೆಟೆದ ದೇಹದವಳಾಗಿ ಬಿಡುತ್ತಾಳೆ.

ಮನೆಯಲ್ಲಿ ದುಡ್ಡು ಸಿಕ್ಕದಿದ್ದಾಗ, ಶಾಲೆಯಲ್ಲಿ ಎಲ್ಲರ ಚೀಲಗಳಿಂದ ಯಾವ ಅಳುಕೂ ಇಲ್ಲದೆ, ಹಣ ತೆಗೆದುಕೊಂಡು ಬಿಡುತ್ತಾಳೆ.... ಹೀಗೆ ಹಗರಣಗಳು ನಡೆಯುತ್ತಲೇ ಹೋಗುತ್ತವೆ. ಪದ್ಮ ಉಪವಾಸ ಕೆಡವಿ, ಹೊಡೆದು, ಬಡಿದು ಕುಸುಮಳ ಕೋಮಲ ಮನಸ್ಥಿತಿಯನ್ನೂ, ಬಾಳನ್ನೂ ಇನ್ನೂ ಹೆಚ್ಚು ನರಕವಾಗಿಸಿ ಬಿಡುತ್ತಾಳೆ. ಒಂದು ಹನಿ ಪ್ರೀತಿಯ ಜಲಕ್ಕಾಗಿ ತಪಿಸುವ ಕುಸುಮಳಿಗೆ ಬರಿಯ ಶಿಕ್ಷೆ, ತಿರಸ್ಕಾರ, ಅವಮಾನಗಳೇ ಸಿಕ್ಕುತ್ತಾ ಹೋಗುತ್ತವೆ.

ಚಿತ್ರಕೃಪೆ : ಅಂತರ್ಜಾಲ

Wednesday, August 18, 2010

ದೃಶ್ಯ ವೈಭವ.

ಅನಂತ ಮುತ್ತುಗಳೊಂದಾಗಿ
ಧರೆಗೆ ಮುತ್ತಿಕ್ಕೆ ಧಾವಿಸುತಿರೆ..
ಮುತ್ತುಗಳ ಲಾಸ್ಯಕ್ಕೆ
ಒನಪು ವಯ್ಯಾರಕೆ...
ಮನಸೋತ ತುಂಟ
ಸುಳಿಗಾಳಿ....
ಎಲ್ಲಿಂದಲೋ ಭರೆಂದು
ಬೀಸುತ್ತಾ...
ಮುತ್ತುಗಳ ಬೆನ್ನಟ್ಟುತ್ತಾ...
ಆಟವಾಡುತ್ತಿರೆ
ಎತ್ತರದ ತರುಗಳೂ
ದಟ್ಟ ಹಸಿರು ಗರಿಗಳೂ
ತೂಗುತ್ತಾ ಜೊತೆಗೂಡುತಿರೆ
ಪದ್ಮ ಸರೋವರದಲ್ಲಿ
ಸಂಚಲನ ಮೂಡುತಿರೆ
ಮಾಯದ ಮುಸುಕೊಂದು
ವಸುಂಧರೆಯ ಮರೆಮಾಡಿತ್ತು...

ನಾಚಿ ಮೋಡಗಳಲಿ
ಮರೆಯಾಗಿದ್ದ ರವಿ...
ಚಿನ್ನಾಟವ ಕಾಣಲು
ಮುದದಿಂದ ಇಣುಕೆ...


ಮುಸುಕು ಸರಿದು....

ಮಿಂದು ಶುಭ್ರವಾದ
ಖಾಲಿ ರಸ್ತೆ ಕಣ್ಣಮುಂದಿತ್ತು....

ಮಳೆ ಬಂದಾಗ ಪ್ರಕೃತಿಯ ಸೊಬಗು, ಬಿನ್ನಾಣವನ್ನು ವರ್ಣಿಸಲು ಪದಗಳು ಸಾಲದೇನೋ ಅನ್ನಿಸುವ ಆತಂಕ... ಆ ದಿನ ಮಧ್ಯಾಹ್ನ ಮೋಡ ಕವಿದ ವಾತಾವರಣವಿದ್ದರೂ... ಮಳೆಯಾಗದೇನೋ ಎಂಬ ಉದಾಸ ಭಾವವಿದ್ದಾಗ, ಇದ್ದಕ್ಕಿದ್ದಂತೆ ಒಂದೇ ಸಮನೆ ಶುರುವಾದ ಮುತ್ತಿನ ಹನಿಗಳ ಧಾರೆ ನನ್ನನ್ನು ಹೊರಗೆ ಎಳೆ ತಂದಿತ್ತು. ಯಡಿಯೂರು ಕೆರೆ ಬೀಸುತ್ತಿದ್ದ ಸುಳಿಗಾಳಿಗೆ ಎಬ್ಬಿಸುತ್ತಿದ್ದ ತರಂಗಗಳು ವರ್ಣಿಸಲಸಾಧ್ಯವಾಗಿತ್ತು... ಯಾರಾದರೂ ವಾದ್ಯ ನುಡಿಸಿ ತರಂಗಗಳ ತೇಲಿ ಬಿಡುತ್ತಿರುವರೇನೋ ಅನ್ನುವ ಭ್ರಮೆ ಉಂಟುಮಾಡುತ್ತಿತ್ತು. ಬೆರಗಾಗಿ ನೋಡುತ್ತಾ ನಿಂತಿದ್ದ ನನಗೆ, ಅತ್ಯದ್ಭುತವಾದ ದೃಶ್ಯ ವೈಭೋಗವಿನ್ನೂ ಕಾದಿತ್ತು.....ಭರ್ರ್ ಎಂದು ಬೀಸುತ್ತಿದ್ದ ಸುಳಿಗಾಳಿ ಮುತ್ತಿನ ಧಾರೆಯನ್ನು ಅನಾಮತ್ತು ಎತ್ತಿ ಎತ್ತಲೋ ಕೊಂಡೊಯ್ಯುತಿದೆಯೇನೋ ಅನ್ನಿಸುವಂತಿತ್ತು.... ಜೊತೆಗೆ ಕೆರೆಯ ಪಕ್ಕದಲ್ಲೂ, ನಮ್ಮ ಬಹು ಮಹಡಿ ಕಟ್ಟಡಗಳಲ್ಲೂ ಇರುವ ಎತ್ತರದ ತೆಂಗಿನ ಮರಗಳ ಗರಿಗಳೂ ಬೀಸುವ ಸುಳಿಗಾಳಿಗೆ ತೂಗುತ್ತ, ಮುತ್ತಿನ ಧಾರೆಯ ಸಂಗೀತಕ್ಕೆ ತಲೆದೂಗುತ್ತಿರುವಂತೆ, ತಾನೇನೂ ಎತ್ತರದ ತರುಗಳಿಗಿಂದ ಕಡಿಮೆಯಿಲ್ಲವೆಂದು ಬೀಗುತ್ತಾ, ವೈಯಾರದಿ ಬಳುಕುತ್ತಾ ಲಾಸ್ಯವಾಡುತ್ತಿದ್ದ ಚಿಕ್ಕ ಚಿಕ್ಕ ತರುಗಳೂ.... ಮೋಡದ ಮರೆಯಲ್ಲಿ ಅವಿತಿಟ್ಟು ಕೊಂಡು ವಸುಂಧರೆಯ ಅಪ್ರತಿಮ ಸೌಂದರ್ಯವನ್ನು ಕದ್ದು ನೋಡುತ್ತಿದ್ದ ಸೂರ್ಯ.... ತೇಲುತ್ತಿದ್ದ ಮೋಡಗಳು, ಕೆರೆಯಲ್ಲಿ ಅರಳಿರುವ ಸುಂದರ ಪದ್ಮಗಳನ್ನು ನೋಡಿ, ಮೋಹಗೊಂಡಿರುವರೇನೋ ಎಂಬಂತೆ ಸ್ಥಬ್ದವಾಗಿ, ಮುಸುಕು ಬೀರಿ, ವಸುಂಧರೆಯನ್ನು ಮರೆ ಮಾಡಿದ್ದ ಕೆಲವು ಘಳಿಗೆಗಳು...... ಅಬ್ಬಾ...... ನನ್ನ ಕಣ್ಣ ಮುಂದೆ ಪ್ರಕೃತಿ ಮಾತೆ ಆಡಿದ ಆಟ, ನೋಡಲೆರಡು ಕಣ್ಣುಗಳು ಸಾಲದಂತಾಗಿತ್ತು.

ಹಾಗೇ ಕೆಲವು ಕ್ಷಣಗಳಲ್ಲೇ... ವಸುಂಧರೆಯ ಸೌಂದರ್ಯ ನೋಡದೆ ತಾನಿನ್ನು ಅವಿತಿರಲಾರೆನೆಂದು ಹೊರಗೆ ಬಂದ ಸೂರ್ಯ ಕಿರಣಗಳು ಅತ್ಯಂತ ಮನೋಹರ ದೃಶ್ಯವಾಗಿತ್ತು. ಇವೆಲ್ಲಾ ಅನುಭೂತಿಗಳು ಕೇವಲ ಕೆಲವೇ ಘಳಿಗೆಗಳಲ್ಲಿ ಮುಗಿದಿತ್ತು. ಎಚ್ಚೆತ್ತ ನನಗೆ ಒಮ್ಮೆಲೇ ಆದ ಅನುಭವವೆಂದರೆ ನನ್ನ ಕಣ್ಣಿಗೆ ರಾಚಿದ ಖಾಲಿ ರಸ್ತೆ..... ನನ್ನ ಗಡಿಯಾರದಲ್ಲಿ ಕೆಲವು ಕ್ಷಣಗಳು ಕಳೆದು ಹೋಗಿದ್ದವು.....