Tuesday, December 31, 2013

ಸರಸ್ವತಿ ದೇವಿಯಾಗಿ..

ಪ್ರಣೋ ದೇವೀ ಸರಸ್ವತೀ, ವಾಜೇಭಿರ್ವಾಜಿನೀವತೀ | ಧೀನಾಮವಿತ್ರ್ಯವತು |
ಆ ನೋ ದಿವೋ ಬೃಹತಃ ಪರ್ವತಾದಾ ಸರಸ್ವತೀ ಯಜತಾ ಗಂತು ಯಜ್ಞಮ್ |
ವಾಗ್ದೇವ್ಯೈ ನಮಃ ||
ಸರಸ್ವತಿ ದೇವೀ ಸರ್ವರಕ್ಷಕಳು, ಸಾಮರ್ಥ್ಯಸಂಪನ್ನೆಯೂ ಆಗಿರುವಳು ಮತ್ತು ಲೋಕಕ್ಕೆ ಅನ್ನ ನೀರು ಪೂರೈಸುವವಳು.  ದಾನ ಮಾಡುವವರಿಗೆ ಉತ್ತಮವಾಗಿ ವರದಾನ ಮಾಡುವವಳು, ಯಜ್ಞ ಕರ್ಮದಲ್ಲಿ ವಿಪುಲ ಧನ ಧಾನ್ಯ ಕೊಡುವವಳು ಎಂದು ಋಗ್ವೇದವು ಗುಣಗಾನ ಮಾಡಿದೆ.  ಋಗ್ವೇದ, ಯಜುರ್ವೇದ, ಸಾಮವೇದಗಳಲ್ಲೂ,  ಉಪನಿಷತ್ತುಗಳಲ್ಲೂ ಸರಸ್ವತೀದೇವಿಯನ್ನು "ವಾಕ್" ಎಂದು ಸ್ತುತಿಸಲ್ಪಟ್ಟಿದೆ.  ಓಂ ವಾಜ್ಮೇಮನಸಿ ಪ್ರತಿಷ್ಠಿತಾ - ಮನೋ ಮೇ ವಾಚಿ ಪ್ರತಿಷ್ಠಿತಂ - ನನ್ನ ವಾಕ್ಕು ನಿರಂತರವಾಗಿ ಮನಸ್ಸಿನಲ್ಲಿ ಸ್ಥಿರವಾಗುವಂತಾಗಲೀ, ನನ್ನ ಮನಸ್ಸು ವಾಕ್ಕಿನಲ್ಲಿ ನೆಲೆಸುವಂತಾಗಲೀ ಎಂದು ಐತರೇಯಾದಿ ಉಪನಿಷತ್ತಿನಲ್ಲಿ ಪ್ರಾರ್ಥಿಸಲಾಗಿದೆ.

ಕೃಷ್ಣ ಯಜುರ್ವೇದಾಂತರ್ಗತವಾಗಿರುವ ಸರಸ್ವತೀ ರಹಸ್ಯೋಪನಿಷತ್ ನ  ಸರಸ್ವತೀ ದಶ ಶ್ಲೋಕದಲ್ಲಿ ದೇವಿಯನ್ನು "ಶ್ರೀ ವಾಗೀಶ್ವರೀ ದೇವತಾ.... ಶ್ರದ್ಧಾ, ಮೇಧಾ, ಪ್ರಜ್ಞಾ, ಧಾರಣಾ ವಾಗ್ದೇವತಾ ಮಹಾ ಸರಸ್ವತೀ ತ್ಯೇತೈ ರಂಗನ್ಯಾಸಃ ನಿಹಾರ ಹಾರ ಘನಸಾರ ಸುಧಾಕರಾಭಾಂ ಕಲ್ಯಾಣದಾಂ ಕನಕ ಚಂಪಕ ದಾಮ ಭೂಷಾಮ್, ಉತ್ತುಂಗ ಪೀನಕುಚ ಕುಂಭಮನೋಹರಾಂಗೀಂ ವಾಣೀಂ ನಮಾಮಿ ಮನಸಾ ವಚನಾಂ ವಿಭೂತ್ತೈ" - ಶ್ರೀ ವಾಗೀಶ್ವರೀ ದೇವತಾ ಪ್ರೀತಿಗಾಗಿ, ಶ್ರದ್ಧಾ, ಮೇಧಾ, ಪ್ರಜ್ಞಾ, ಧಾರಣ, ವಾಗ್ದೇವತೇ ಮಹಾಸರಸ್ವತೀ ಬಂಗಾರದ ಸಂಪಂಗೀ ಮಾಲೆಯಿಂದ ಅಲಂಕರಿಸಿಕೊಂಡಿರುವವಳು, ಉತ್ತುಂಗ ಪೀನವಾದ ಕುಚಕುಂಭಗಳಿಂದ ಮನೋಹರವಾದ ಶರೀರವುಳ್ಳವಳಾದ ವಾಣಿಯನ್ನು ವಾಕ್ಕಿನ ವಿಭೂತಿಗಾಗಿ ಮನಸಾ ನಮಸ್ಕರಿಸುತ್ತೇನೆ ಎಂದು ವಿವರಿಸಿದ್ದಾರೆ.  ಮುಂದುವರೆಯುತ್ತಾ "ನಮಸ್ತೇ ಶಾರದಾ ದೇವೀ ಕಾಶ್ಮೀರಪುರವಾಸಿನಿ, ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾದಾನಂ ಚ ದೇಹಿಮೇ, ಅಕ್ಷಸೂತ್ರಾಂ ಕುಶಧರಾ ಪಾಶಪುಸ್ತಕ ಧಾರಿಣೀ, ಮುಕ್ತಾಹಾರ ಸಮಾಯುಕ್ತಾ ವಾಚಿ ತಿಷ್ಠತು ಮೇ ಸದಾ, ಕಂಬುಕಂಠೀ ಸುತಾ ಮ್ರೋಷ್ಠೀ, ಸರ್ವಾಭರಣಭೂಷಿತಾ, ಮಹಾಸರಸ್ವತೀ ದೇವೀ ಜಿಹ್ವಾಗ್ರೇ ಸನ್ನಿವೇಶ್ಯತಾಮ್ - ಜಪಮಾಲೆಯನ್ನೂ, ಅಂಕುಶವನ್ನೂ ಧರಿಸಿರುವಂತಹವಳು, ಮುತ್ತಿನ ಹಾರವನ್ನು ಧರಿಸಿರುವವಳಾದ ಸರಸ್ವತೀ ದೇವಿಯೇ ಸದಾ ನನ್ನ ಜಿಹ್ವಾಗ್ರಗಳಲ್ಲಿ ಸನ್ನಿಧಾನವನ್ನು ಹೊಂದಿರು ಎಂದು ಪ್ರಾರ್ಥಿಸಲಾಗಿದೆ.

ಪದ್ಮ ಪುರಾಣದಲ್ಲಿ ಬರುವ ವಾಗೀಶ್ವರಿ ಸ್ತೋತ್ರದಲ್ಲಿ ಸರಸ್ವತಿಯನ್ನು ಜಗದ್ಧಾತ್ರೀ ಸರಸ್ವತೀಂ, ಸರ್ವಾ ವಿದ್ಯಾಂ ಲಭಂತೇ ತೇ, ಅಮಲ ಕಮಲಾದಿ ವಾಸಿನಿ, ಮನಸೋ ವೈಮಲ್ಯದಾಯಿನಿ, ಮನೋಜ್ಞೆ, ಚರಣಾಂಭೋರುಹಂ, ನಮಾಮಿ ಸದಾ ಎಂದು ಸ್ತುತಿಸಲ್ಪಟ್ಟಿದೆ. 

ಬ್ರಹ್ಮ ವೈವರ್ತಮಹಾಪುರಾಣದಲ್ಲಿ ಸರಸ್ವತೀ ದೇವಿಯ ಅವತಾರದ ಕಥೆ ಹೇಳಲ್ಪಟ್ಟಿದೆ.  ಇದು ನಾರಾಯಣ ಮಹರ್ಷಿ ಮತ್ತು ನಾರದರ ಸಂವಾದ ರೂಪದಲ್ಲಿದೆ.  ನಾರಾಯಣ ಮಹರ್ಷಿಗಳು ಹೇಳಿದ ವಿಶ್ವಬ್ರಹ್ಮಾಂಡದ ಕಥೆಯನ್ನು ಕೇಳಿ ನಾರದರು ಪ್ರಕೃತಿಯ ಚರಿತ್ರೆಯನ್ನು ತಿಳಿಸುವಂತೆ ಪ್ರಾರ್ಥಿಸುತ್ತಾರೆ.  ಆಗ ಮಹರ್ಷಿಗಳು ಸೃಷ್ಟಿಯ ಪ್ರಾರಂಭದಲ್ಲಿ ಪ್ರಕೃತಿಯು ಪಾರ್ವತಿ, ರಾಧೆ, ಲಕ್ಷ್ಮೀ, ಸರಸ್ವತಿ ಮತ್ತು ಸಾವಿತ್ರಿ ಎಂಬ ಐದು ರೂಪಗಳನ್ನು ಧರಿಸಿದಳೆಂದು ತಿಳಿಸುತ್ತಾರೆ.  ಪ್ರಕೃತಿಯ ಅಂಶದಿಂದ ಉದಿಸಿದ ಈ ದೇವಿಯರ ಚರಿತ್ರೆಯನ್ನೂ ಮಹರ್ಷಿಗಳು ನಾರದರಿಗೆ ವಿವರಿಸುತ್ತಾರೆ.  ಇಲ್ಲಿ ಬರುವ ಕಥೆಯ ಪ್ರಕಾರ ಮೊದಲಿಗೆ ಶ್ರೀಕೃಷ್ಣನು ಸರಸ್ವತಿಯನ್ನು ಪೂಜಿಸಿ, ಅನ್ಯ ದೇವತೆಗಳಿಗೆ ಪೂಜಿಸುವ ವಿಧಿಯನ್ನು ವಿಧಿಸುತ್ತಾನೆ.  ಸರಸ್ವತೀ ದೇವಿಯ ಅನುಗ್ರಹದಿಂದ ಮೂರ್ಖನೂ ಕೂಡ ಪಂಡಿತನಾಗುತ್ತಾನೆಂದು ಸಾರುತ್ತಾನೆ.  ಮಾಘ ಶುದ್ಧ ಪಂಚಮಿಯ ದಿನದಲ್ಲೂ, ವಿದ್ಯಾರಂಭದಲ್ಲಿಯೂ ಮಾನವರು, ದೇವತೆಗಳು, ಋಷಿಗಳು, ಸಿದ್ಧರು, ನಾಗರು, ಗಂಧರ್ಮರು, ಕಿಂನರರು ಮುಂತಾದವರೆಲ್ಲರೂ ಭಕ್ತಿಯಿಂದ ಸರಸ್ವತೀದೇವಿಯನ್ನು ಪೂಜಿಸಬೇಕೆಂದೂ, ಷೋಡಶೋಪಚಾರಗಳನ್ನು ಸಮರ್ಪಿಸಬೇಕೆಂದೂ, ಧ್ಯಾನ, ಸ್ತೋತ್ರಗಳನ್ನು ಅರ್ಪಿಸಬೇಕೆಂದೂ ತಿಳಿಸುತ್ತಾನೆ.  ಪುಸ್ತಕ, ಕಲಶಗಳಲ್ಲಿ ದೇವಿಯನ್ನು ಆಹ್ವಾನಿಸಿ ಪೂಜಿಸುವರೆಂದು ತಿಳಿಸುತ್ತಾನೆ.  ಸರಸ್ವತಿ ದೇವಿಯ ಕವಚವನ್ನು ಚಂದನಲಿಪ್ತವಾದ ಚಿನ್ನದ ತಾಯಿತದಲ್ಲಿಟ್ಟು ಕಂಠದಲ್ಲಿ ಅಥವಾ ಬಲತೋಳಲ್ಲಿ ಧರಿಸುವರು ಮತ್ತು ಸರಸ್ವತಿ ದೇವಿಯ ಕವಚವನ್ನು ವಿದ್ವಾಂಸರು ಪಠಿಸುತ್ತಾರೆಂದು ತಿಳಿಸುತ್ತಾನೆ.  ಶ್ರೀಕೃಷ್ಣನು ಹೀಗೆ ಪೂಜಿಸಿದನಂತರ ಬ್ರಹ್ಮ, ವಿಷ್ಣು, ಮಹೇಶ್ವರರು, ಅನ್ಯ ದೇವತೆಗಳೂ, ಮನುಗಳೂ, ಚಕ್ರವರ್ತಿಗಳೂ, ಮಾನವಾದಿಗಳೂ ಪೂಜಿಸಲಾರಂಭಿಸಿದರು.  ಸರಸ್ವತೀ ಕವಚದಲ್ಲಿ ನಮ್ಮ ದೇಹದ ಪ್ರತೀ ಅಂಗಗಳಿಗೂ ಉದ್ದೇಶಿತವಾಗಿ ದೇವಿಯ ಒಂದೊಂದು ಮಂತ್ರವಿದೆ.  ಅದನ್ನು ಜಪಿಸುತ್ತಾ ದೇಹದ ಆ ಅಂಗವನ್ನು ಸರಸ್ವತೀದೇವಿ ರಕ್ಷಿಸಲೆಂದು ಪ್ರಾರ್ಥಿಸುವ ವಿಧಾನವಿದೆ.  ’ವಿಶ್ವಜಯ’ವೆಂದು ಪ್ರಸಿದ್ಧವಾದ ಸರ್ವಮಂತ್ರ ಸಮೂಹಯುಕ್ತವಾದ ಕವಚ ಮಂತ್ರ ಮತ್ತು ಕಾಣ್ವಶಾಖೆಯಲ್ಲಿ ಉಕ್ತವಾದ ಕವಚಮಂತ್ರ, ಸ್ತೋತ್ರ, ಪೂಜಾವಿಧಾನ, ಧ್ಯಾನ ಮತ್ತು ವಂದನೆಗಳು.
 
ಬ್ರಹ್ಮವೈವರ್ತ ಮಹಾಪುರಾಣದಲ್ಲಿಯೇ ಮಹರ್ಷಿ ಯಾಜ್ಞವಲ್ಕ್ಯರ ಕಥೆಯೂ ತಿಳಿಸಲ್ಪಟ್ಟಿದೆ.  ಮಹರ್ಷಿಗಳು ಗುರುಶಾಪದಿಂದ ತಾವು ಕಲಿತ ವಿದ್ಯೆಯನ್ನು ಸಂಪೂರ್ಣವಾಗಿ ಕಳೆದುಕೊಂಡು ದುಃಖಿತರಾಗಿ, ಸೂರ್ಯನನ್ನು ಕುರಿತು ತಪಸ್ಸು ಮಾಡುತ್ತಾರೆ.  ಸೂರ್ಯದೇವನ ದರ್ಶನವಾದಾಗ ದೈನ್ಯತೆಯಿಂದ, ದುಃಖದಿಂದ ಪ್ರಾರ್ಥಿಸಿಕೊಂಡಾಗ, ಸೂರ್ಯ ದೇವನು ಮಹರ್ಷಿಗಳಿಗೆ ವೇದ ವೇದಾಂಗಗಳನ್ನು ಉಪದೇಶಿಸುತ್ತಾನೆ.  ಮಹರ್ಷಿಗಳು ಕಳೆದುಕೊಂಡ ಸ್ಮರಣ ಶಕ್ತಿಗಾಗಿ ವಾಗ್ದೇವಿಯನ್ನು ಸ್ತುತಿಸಬೇಕೆಂದು ತಿಳಿಸುತ್ತಾನೆ. ಯಾಜ್ಞವಲ್ಕ್ಯರು ಸರಸ್ವತೀದೇವಿಯನ್ನು ಭಕ್ತಿಯಿಂದ ಪೂಜಿಸಿ, ಸರಸ್ವತೀ ಸ್ತೋತ್ರ ರಚಿಸುತ್ತಾರೆ.  

| ಬ್ರಹ್ಮ ಸ್ವರೂಪಾ ಪರಮಾ ಜ್ಯೋತಿರೂಪಾ ಸನಾತನೀ, ಸರ್ವ ವಿದ್ಯಾಧಿದೇವಿ ಯಾ ತಸ್ಮೈ ವಾಣ್ಯೈ ನಮೋ ನಮಃ, |
| ಜ್ಞಾನಂ ದೇಹಿ ಸ್ಮೃತಿಂ ದೇಹಿ ವಿದ್ಯಾಂ ದೇಹಿ.. ಸ್ಮೃತಿ ಶಕ್ತಿಃ, ಜ್ಞಾನಶಕ್ತಿಃ, ಬುದ್ಧಿ ಶಕ್ತಿ ಸ್ವರೂಪಿಣಿ.. ನಮೋ ನಮಸ್ತೇ ||
ಎನ್ನುತ್ತಾ ಸ್ತುತಿಸುತ್ತಾರೆ.  ಗುರುಶಾಪದಿಂದ ನಷ್ಟವಾಗಿದ್ದ ತಮ್ಮ ಸ್ಮರಣಶಕ್ತಿಯನ್ನೂ, ವಿದ್ಯೆಯನ್ನೂ, ಕವಿತ್ವಶಕ್ತಿಯನ್ನೂ, ಗ್ರಂಥ ನಿರ್ಮಾಣಶಕ್ತಿಯನ್ನೂ, ಶಿಷ್ಯಬೋಧನ ಶಕ್ತಿಗಳನ್ನೂ ನೀಡೆಂದು ಬೇಡಿಕೊಳ್ಳುತ್ತಾರೆ.  ಭಕ್ತಿ ಪರವಶರಾಗಿ ನಮಿಸುತ್ತಾರೆ.  ಜ್ಯೋತಿ ಸ್ವರೂಪಳಾದ ಸರಸ್ವತೀದೇವಿಯ ಅನುಗ್ರಹ ಪಡೆಯುತ್ತಾರೆ.  ಹೀಗೆ  ಯಾಜ್ಞವಲ್ಕ್ಯರಿಂದ ರಚಿತವಾಗಿರುವ ಸರಸ್ವತೀದೇವಿಯ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವವರು ಶ್ರೇಷ್ಠ ವಾಗ್ಮಿಗಳಾಗುತ್ತಾರೆಂಬ ನಂಬಿಕೆಯಿದೆ.

ಶ್ರೀ ಜಗನ್ನಾಥದಾಸರು ತಮ್ಮ ಹರಿಕಥಾಮೃತಸಾರವೆಂಬ ಮೇರು ಕೃತಿಯಲ್ಲಿ ಸರಸ್ವತಿಯನ್ನು ಚತುರವದನನ ರಾಣಿ ಎಂದು ಕರೆದು ವರ್ಣಿಸಿದ್ದಾರೆ.
ಚತುರವದನನ ರಾಣಿ ಅತಿರೋ
ಹಿತ ವಿಮಲವಿಜ್ಞಾನಿ ನಿಗಮ ಪ್ರ
ತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ |
ನುತಿಸಿ ಬೇಡುವೆ ಜನನಿ ಲಕುಮೀ
ಪತಿಯ ಗುಣಗಳ ತುತಿಪುದಕೆ ಸ
ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನಸದನದಲಿ ||
ಸರಸ್ವತಿ ದೇವಿಯು ವೇದಗಳ ಅಭಿಮಾನಿ.  ಚತುರ್ಮುಖ ಬ್ರಹ್ಮನ ನೀತಪತ್ನಿ ಹಾಗೂ ಪ್ರದ್ಯುಮ್ನ – ಕೃತೀ ದೇವಿಯವರ ಪುತ್ರಿ. ಅತಿರೋಹಿತಳು ಮರೆವೆಯೇ ಎಲ್ಲದವಳು ತಡೆಯಿಲ್ಲದೇ ಪರಮಾತ್ಮನ ಸ್ತುತಿ ಮಾಡುತ್ತಲೇ ಇರುವವಳು, ಬ್ರಹ್ಮಾಣಿ – ತತ್ವಜ್ಞಾನಿ.  ಬ್ರಹ್ಮ ಮತ್ತು ಸರಸ್ವತಿ ಮಹತ್ತತ್ವಕ್ಕೆ ಸೇರಿದವರು. ಪರಮಾತ್ಮನ ಬಗ್ಗೆ ಶುದ್ಧವಾದ ವಿಮಲ ಜ್ಞಾನವು ನಿರಂತರವಾಗಿ ಹರಿಯುತ್ತಲೇ ಇರುತ್ತದೆ.  ಇವಳು ಪರಶುಕ್ಲತ್ರಯರಲ್ಲಿ ಒಬ್ಬಳು ಹಾಗೂ ಗಾನಲೋಲಳೂ ಅಹುದು.  ಇವಳ ಹಸ್ತದಲ್ಲಿ ಸದಾ ಕಚ್ಛಪಿ ಎಂಬ ವೀಣೆ ಇರುವುದರಿಂದ, ಇವಳು ವೀಣಾಪಾಣಿ ಮತ್ತು ಇವಳು ತತ್ವಜ್ಞಾನಿ, ಚಿತ್ತಾಭಿಮಾನಿ, ಸರ್ವರಿಗೂ ಬುದ್ಧಿಯನ್ನು ಕೊಡುವ ಬುದ್ಧ್ಯಾಭಿಮಾನಿ ದೇವತೆಯೂ ಹೌದು.  ಬ್ರಹ್ಮ ದೇವರಿಗಿಂತ ೧೦೦ ಗುಣಗಳಲ್ಲಿ ಕಡಿಮೆ.  ಇವಳೂ ಋಜುಗಣಕ್ಕೆ ಸೇರಿದವಳಾದ್ದರಿಂದ ೩೨ ಲಕ್ಷಣಗಳು ಉಳ್ಳವಳು.  ೧೯೯ ಕಲ್ಪ ಸಾಧನೆಯಾದ ಮೇಲೆ ವಾಣೀ ಪದವಿಗೆ ಬರುವವಳು.  ವೇದಾಭಿಮಾನಿ, ವೇದದ್ವಾರ ಭಗವಂತನಲ್ಲಿ ಉಪಸಂಹಾರ ಮಾಡುವ ಚಿತ್ತಕ್ಕೆ ಅಭಿಮಾನಿ ಸರಸ್ವತಿ.  ನಾಲಿಗೆಗೂ ಅಭಿಮಾನಿ,    ಕ್ಷೀರಕ್ಕೂ ಅಭಿಮಾನಿ.  ಕ್ಷೀರದ ಬಣ್ಣ ಬಿಳುಪು ಮತ್ತು ಬಿಳುಪು ಎಂದರೆ ಜ್ಞಾನ.  ಜೀವರುಗಳಿಗೆ ಜ್ಞಾನ ಕ್ಷೀರ ಉಣಿಸುವವಳು ಸರಸ್ವತಿ ದೇವಿ. ಇಂತಹ ಅಭಿಮಾನಿ ದೇವತೆ ಸದ್ಗುಣಿ ಸರಸ್ವತಿಯು ನಮ್ಮ ವದನದಲ್ಲಿ ಇದ್ದು ಪರಮಾತ್ಮನ ಗುಣಗಳನ್ನು ನುಡಿಸಲಿ  ಎಂದು ದಾಸರು ಕೇಳಿಕೊಂಡಿದ್ದಾರೆ.   ಉಪನಿಷತ್ತುಗಳಲ್ಲಿರುವ ಉಲ್ಲೇಖಗಳ ಆಧಾರದ ಮೇಲೆಯೇ ದಾಸರಾಯರು ಕನ್ನಡ ಭಾಷೆಯಲ್ಲಿ ಸುಲಭವಾಗಿ ಅರ್ಥವಾಗುವಂತೆ ಹರಿಕಥಾಮೃತಸಾರವನ್ನು ರಚಿಸಿದ್ದಾರೆ.
 
ಸರಸ್ವತಿಯ ಜೊತೆಗಿರುವ ಹಂಸವು ತಪ್ಪು-ಸರಿ, ಸತ್ಯ-ಅಸತ್ಯಗಳ ಮಧ್ಯೆಯಿರುವ ವ್ಯತ್ಯಾಸವನ್ನು ಗುರುತಿಸುವ ಶಕ್ತಿಯ ಸಂಕೇತವಾಗಿದೆ.  ಹಂಸವು ಈ ಪ್ರಪಂಚದಲ್ಲಿ ಇರು ಆದರೆ ಯಾವುದಕ್ಕೂ ಅಂಟಿಕೊಳ್ಳಬೇಡ, ಕಮಲದ ಎಲೆಯ ಮೇಲೆ ಹೇಗೆ ನೀರಿನ ಹನಿ ಅಂಟಿಕೊಳ್ಳದೇ ಇರುವುದೋ ಹಾಗೆ ಇರು ಎಂದು ತಿಳಿಸುತ್ತದೆ.    ಹಂಸಜಪ (ಉಸಿರಾಟ) ಜೀವಿ ಹಾಗೂ ಪ್ರಾಣದ ಇರುವಿಕೆಯನ್ನು ಸಂಕೇತಿಸುತ್ತದೆ.  ಹಂಸ ನೀರಿನ ಮೇಲೆ ಧ್ಯಾನಿಸುತ್ತಾ ತೇಲುತ್ತಿರುತ್ತದೆ, ಇದೂ ಕೂಡ ನಾವು ಭವಸಾಗರದಲ್ಲಿ ಭಗವಂತನನ್ನು ಧ್ಯಾನಿಸುತ್ತಿರಬೇಕೆಂಬ ಸೂಚನೆ ನೀಡುತ್ತದೆ.  ಸರಸ್ವತಿಯ ಬಲಗಡೆಗೆ ನವಿಲು, ಅಖಂಡ ಜ್ಞಾನದ ಸಂಕೇತವೂ ಆಗಿದೆ ಮತ್ತು ಪ್ರಾಪಂಚಿಕ ವಿಷಯಾಸಕ್ತಿಗಳೆಡೆಗೆ ಆಕರ್ಷಣೆಯೂ ಆಗಿದೆ.  ಮಾನವನ ಅಜ್ಞಾನ ಅಥವಾ ಅಹಂಕಾರಗಳಿಗೆ ಒಳಪಟ್ಟು ವಿಷಯಾಸಕ್ತಿಗಳಲ್ಲಿ ಮುಳುಗಬಹುದೆನ್ನುವುದನ್ನು ಸಂಕೇತಿಸುತ್ತದೆ.  ಸರಸ್ವತಿ ದೇವಿ ಹಂಸ ಹಾಗೂ ನವಿಲುಗಳ ಮಧ್ಯದಲ್ಲಿ ವಿರಾಜಮಾನಳಾಗಿ ಈ ಎರಡರ ಮಧ್ಯೆ ಸಮತೋಲನ ಕಾಪಾಡಿಕೊಳ್ಳಬೇಕೆಂಬುದನ್ನು ಸೂಚಿಸುತ್ತಾಳೆ.  ಸರಸ್ವತಿ ದೇವಿ ಕುಳಿತಿರುವ ತಾವರೆ ಹೂವು ನೀರಿನಿಂದ ಮೇಲಕ್ಕೆ ಚಾಚಿರುವುದು, ಭವಸಾಗರದಲ್ಲಿ ನಾವು ಅದರಂತೆ ತಲೆ ಎತ್ತಬೇಕು ಎಂದು ತಿಳಿಸುತ್ತದೆ.  ಅಂತರಂಗದ ಕದವನ್ನು ತೆರೆದು ಒಳಗಡೆಗೆ ನೋಟ ಹರಿಸಬೇಕೆಂಬುದರ ಸಂಕೇತವಾಗಿದೆ.  ಬಲಗೈಯಲ್ಲಿ ಜಪಮಾಲೆ, ವ್ಯಾಖ್ಯಾನ ಮುದ್ರೆ ಹಾಗೂ ಎಡಗೈಯಲ್ಲಿ ಪುಸ್ತಕ ಇರುವವಳು.  ಚಂದ್ರಮುಖಿ, ಚತುರ್ಭುಜೆ ಎಂದು ಸರಸ್ವತಿಯ ವರ್ಣನೆ ವಿಷ್ಣು ಧರ್ಮೋತ್ತರದಲ್ಲಿದೆ.  ಸರಸ್ವತಿ ದೇವಿಯು ಕೈಯಲ್ಲಿ ಹಿಡಿದಿರುವ ವೀಣೆ ನಾದದ ಸಂಕೇತ.  ನಮ್ಮೆಲ್ಲಾ ಚಿಂತನೆಗಳು ಮತ್ತು ಕೆಲಸಗಳು ಈ ಶಬ್ದ ಅಥವಾ ನಾದದಿಂದಲೇ ಉತ್ಪತ್ತಿಯಾಗುವುದು.  ಬ್ರಹ್ಮಾಂಡದಲ್ಲಿ ಹುದುಗಿರುವ ದೈವೀಕ ಸಂಗೀತದ ನಾದಕ್ಕೆ ನಮ್ಮ ಇಂದ್ರಿಯಗಳನ್ನು ಒಳಮುಖವಾಗಿ ತಿರುಗಿಸಿಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ.  ಹೃದಯಕ್ಕೆ ಹತ್ತಿರವಾಗಿ ವೀಣೆಯ ಮೇಲೆ ನಾಟ್ಯವಾಡುವ ಎಡಗೈ ಬೆರಳುಗಳು ಸದಾ ಸದ್ವಿಷಯಗಳ ಚಿಂತನೆ ಮಾಡುತ್ತಾ, ನಿಷ್ಕಾಮ ಪ್ರೇಮವನ್ನು ಹಂಚಬೇಕೆಂಬುದನ್ನೂ,  ವೀಣೆಯ ಬುಡದಲ್ಲಿ ಆಧಾರವಾಗುವ ಬಲಗೈಯಿಂದ ಋಣಾತ್ಮಕ ಭಾವಗಳನ್ನು ಹಾಗೆಯೇ ಅದುಮಿ, ಮೆಟ್ಟಬೇಕೆಂದುದನ್ನೂ ಸೂಚಿಸುತ್ತದೆ.

ಸರಸ್ವತಿ ದೇವಿ ಶಾರದೆ ಎಂದೂ ಪೂಜಿಸಲ್ಪಡುತ್ತಾಳೆ.  ನವರಾತ್ರಿಯ ಏಳನೆಯ ದಿನ ಶಾರದಾ ಮಾತೆಯನ್ನು ವಿಶೇಷವಾಗಿ ಆರಾಧಿಸಿ ಬ್ರಹ್ಮಿಣಿ, ಅಗ್ನಿದಾತೆ, ವಿದ್ಯಾದಾತೆ ಶಾರದೆ, ಅಭಯದಾತೆ ಕಾಶ್ಮೀರ ಪುರವಾಸಿನಿಯೇ ನಮಗೆ ವಿದ್ಯಾ ಸಂಪತ್ತನ್ನು ನೀಡಿ ಉದ್ಧರಿಸೆಂದು  ಪ್ರಾರ್ಥಿಸಲಾಗುತ್ತದೆ.   ಮನೆಯಲ್ಲಿ ಇರುವ ವೀಣೆ, ತಂಬೂರಿ ಮುಂತಾದ ಸಂಗೀತ ವಾದ್ಯಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.  ಶ್ರೀ ಶಂಕರಾಚಾರ್ಯರು ತಮ್ಮ ಶಾರದಾಭುಜಂಗ ಪ್ರಯಾತಾಷ್ಟಕಂನಲ್ಲಿ ಶಾರದೆಯನ್ನು ಸ್ತುತಿಸಿದ್ದಾರೆ:
| ಸುವಕ್ಷೋಜಕುಂಭಾಂ ಸುಧಾಪೂರ್ಣಕುಂಭಾಂ | ಪ್ರಸಾದಾವಲಂಬಾಂ ಪ್ರಪುಣ್ಯಾವಲಂಬಾಂ || - ವಕ್ಷ ಸ್ಥಳದಲ್ಲಿ ತುಂಬಿದ ಅಮೃತ ಕಳಶವನ್ನೇ ಹೊಂದಿರುವ, ಪ್ರಸಾದ ಪುಣ್ಯಗಳಿಗೆ ಅವಲಂಬಿತಳಾದ ಚಂದ್ರನಂತೆ ಅರಳಿದ ತುಟಿಯಿಂದ ಹಸನ್ಮುಖಳಾದ ನನ್ನ ಶಾರದಾಂಬೆಯನ್ನು ಭಜಿಸುತ್ತೇನೆ.
| ಕಟಾಕ್ಷೇ ದಯಾರ್ದ್ರಾಂ ಕರೇ ಜ್ಞಾನ ಮುದ್ರಾಂ | ಕಲಾಭಿರ್ವಿನಿದ್ರಾಂ ಕಲಾಪೈಃ  ಸುಭಾದ್ರಾಂ || - ದಯಾಮಯ ನೋಟವುಳ್ಳವಳು , ಕೈಯಲ್ಲಿ ಜ್ಞಾನಮುದ್ರೆ ಇರುವವಳು, ಕಲಾಸಕ್ತಳು, ಶಾಂತಳೂ, ಸೌಂದರ್ಯವತಿಯು, ಜಲಚರ ಪಕ್ಷಿ ಮೃಗ ಹಂಸವಾಹಿನಿಯೂ, ಮಹತ್ತಾದವಳೂ, ನವಗುಣ ಸಂಪನ್ನಳೂ, ಸದಾ ಸೌಮ್ಯರೂಪಳಾದ ಶಾರದೆ ತಾಯಿಯನ್ನು ಭಜಿಸುತ್ತೇನೆ.
| ಜ್ವಲತ್ಕಾಂತಿವಹ್ನಿಂ ಜಗನ್ಮೋಹನಾಂಗೀಂ | ಭಜೇ ಮಾನಸಾಂಭೋಜ ಸುಭ್ರಾಂತ ಭೃಂಗೀಮ್ |
ನಿಜ ಸ್ತೋತ್ರ ಸಂಗೀತ್ಯ ನೃತ್ಯ ಪ್ರಭಾಂಗೀಂ | ಭಜೇ ಶಾರದಾಂಬಾಮಜಸ್ರಂ ಮದಂಬಾಮ್ || - ಪ್ರಜ್ವಲಿಸುವ ಅಗ್ನಿಯಂತೆ ಕಾಂತಿಯುತಳಾದ, ಜಗತ್ತಿಗೆ ಮೋಹನ ರೂಪಳಾದ ಮನಸ್ಸಿನ ಸರೋವರದಲ್ಲಿ ದುಂಬಿಯಂತೆ ವಿಹರಿಸುತ್ತಿರುವ, ಸ್ತೋತ್ರ ಸಂಗೀತ ನೃತ್ಯಗಳಿಗೆ ಒಡೆಯಳಾದ ತಾಯಿ ಶಾರದಾಂಬೆಯನ್ನು ಭಜಿಸುತ್ತೇನೆ.

ಹಿಂದೂ ಸಂಸ್ಕೃತಿಯಲ್ಲಿ ಸರಸ್ವತೀದೇವಿಯು ವಾಣಿ, ಶಾರದೆ, ವೀಣಾಪಾಣಿ, ವಾಗ್ದೇವಿ, ಬ್ರಹ್ಮನರಾಣಿ ಎಂದು ಅನೇಕ ನಾಮಗಳಿಂದ ಪೂಜಿಸಲ್ಪಡುತ್ತಾಳೆ. ಚಿತ್ರಕೃಪೆ : ಅಂತರ್ಜಾಲ


Tuesday, October 15, 2013

ಸರಸ್ವತೀ ನದಿಯಾಗಿ...


 ಯಾಕುಂದೇಂದು ತುಷಾರ ಹಾರ ಧವಲಾ | ಯಾ ಶುಭ್ರ ವಸ್ತ್ರಾನ್ವಿತಾ |
ಯಾ ವೀಣಾ ವರದಂಡ ಮಂಡಿತಕರಾ | ಯಾ ಶ್ವೇತ ಪದ್ಮಾಸನಾ ||
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್ದೇವೈಃ  ಸದಾ ಪೂಜಿತಾ |
ಸಾ ಮಾಂ ಪಾತು ಸರಸ್ವತೀಂ ಭಗವತೀಂ ನಿಃಶೇಷ ಜಾಡ್ಯಾಪಹಾ ||
http://www.youtube.com/watch?v=3gNd2dTCCaM&list=PL0D3CF5D04328C190
ಶ್ರೀ ಅಗಸ್ತ್ಯ ಮಹಾ ಋಷಿಗಳ ರಚನೆಯಲ್ಲಿ ಸರಸ್ವತೀ ದೇವಿಯ ವರ್ಣನೆ ಸುಂದರವಾಗಿ ಮೂಡಿಬಂದಿದೆ.  ದೇವಿ ಸರಸ್ವತಿಯನ್ನು ಕುಬೇರನ ನವನಿಧಿಗಳಲ್ಲೊಂದಾದ ’ಕುಂದ’, ಮಲ್ಲಿಗೆ, ಕಮಲ, ಜ್ಞಾನ, ಶೋಭೆ, ಹಿಮಕಿರಣ, ಶೀತಲಕಿರಣಗಳನ್ನು ಹೊಂದಿದ ಚಂದ್ರನಂತೆ, ನಿರ್ಮಲವಾದ, ಸುಂದರವಾದ, ಬಿಳುಪಾದ ಹಸುವಿನಂತೆ, ಅತಿಯಾಗಿ ಶೋಭಿಸುವ ದೇಹಕಾಂತಿಯುಳ್ಳವಳು, ಸ್ವತಃ ಸರಸ್ವತೀ ದೇವಿಯೇ ಬುದ್ಧಿ, ಮೇಧಾ ಎಂದೆಲ್ಲಾ ಅನುಪಮವಾದ ಉಪಮೆಗಳಿಂದ ಸ್ತುತಿಸುತ್ತಾರೆ.  ವೀಣೆ, ವರದಂಡಗಳಿಂದ ಶೋಭಿತಳಾಗಿ, ಶುಭ್ರ-ಶ್ವೇತ ಪದ್ಮದಲ್ಲಿ ಆಸೀನಳಾಗಿರುವವಳು, ಬ್ರಹ್ಮ-ಅಚ್ಯುತ-ಶಂಕರರಿಂದ ಮೊದಲುಗೊಂಡು ಎಲ್ಲಾ ದೇವಾನು ದೇವತೆಗಳಿಂದಲೂ ಪೂಜಿಸಲ್ಪಡುವವಳಾದ, ನನ್ನ ತಾಯಿಯೇ, ಚಳಿ, ದಡ್ಡತನ, ಸೋಮಾರಿತನ, ಮಂಕುತನಗಳನ್ನು ಸಂಪೂರ್ಣವಾಗಿ, ಶೇಷವಿಲ್ಲದಂತೆ ನಾಶಪಡಿಸು ಮತ್ತು ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸುತ್ತಾರೆ.  ಸರ್ವ ಪಾಪಗಳನ್ನೂ ಕಳೆದು, ಅಜ್ಞಾನವನ್ನು ತೊಡೆದು, ಉದ್ಧರಿಸುವ ಸರಸ್ವತೀ ದೇವಿ  ನದೀ ರೂಪದಲ್ಲಿಯೂ ಈ ಎಲ್ಲಾ ವಿಶಿಷ್ಟ ಗುಣಗಳಿಂದಲೂ ಶೋಭಿಸುತ್ತಾ ಮುಕ್ತಿಯನ್ನು ಬಯಸಿ ಬರುವ ಭಕ್ತರಿಗೆ ವರದಾಯಕಳಾಗಿದ್ದಾಳೆ.

ಸನಾತನ ಕಾಲದಿಂದಲೂ ಭಾರತದಲ್ಲಿ ಸರಸ್ವತಿಯನ್ನು ವಿದ್ಯಾದೇವತೆಯಾಗಿಯೂ ಮತ್ತು ನದಿಯಾಗಿಯೂ ನಾವು ಪೂಜಿಸುತ್ತಾ ಬಂದಿದ್ದೇವೆ.   ಋಗ್ವೇದವು ಸರಸ್ವತಿಯನ್ನು ಅತ್ಯುತ್ತಮ ತಾಯಿ, ದೈವ ಮತ್ತು ನದಿಯೆಂದು ಕೊಂಡಾಡುವುದಲ್ಲದೇ, ಋಗ್, ಯಜು, ಸಾಮವೇದಗಳು ಸರಸ್ವತಿಯನ್ನು "ವಾಕ್" ಎಂದೂ ವಿವರಿಸಿವೆ.  ಸರಸ್ವತಿ ದೇವಿಯು ವೇದಗಳಿಗೆ, ಪುರಾಣಗಳಿಗೆ, ಲಲಿತಕಲೆಗಳಾದ ಸಂಗೀತ ಮತ್ತು ನೃತ್ಯಕ್ಕೆ ಅಭಿಮಾನಿ ದೇವತೆಯಾಗಿರುವಳು.  ಭಾಷೆ, ಲಿಪಿ, ಜ್ಞಾನ, ಮಾತು, ಚಿಂತನೆ, ವಿಚಾರಗಳು ಎಂಬ ದ್ರವ್ಯ ಪ್ರಾಕಾರದ ಆಸಕ್ತಿಗಳನ್ನು ಬೆಳೆಸುವವಳು ಹಾಗೂ ಕರುಣಿಸುವವಳಾದ್ದರಿಂದ ಅವಳು ನದಿಯಾಗಿ ತನ್ನ ದ್ರವ್ಯ ರೂಪವನ್ನು ಪ್ರಕಟಿಸಿಕೊಂಡವಳು.   ಪವಿತ್ರವಾದ ಮತ್ತು ಸ್ಫಟಿಕದಂತೆ ಶುಭ್ರವಾದ ಜಲವನ್ನು ಹೊಂದಿದವಳು.  ಆದ್ದರಿಂದಲೇ ಸರಸ್ವತಿ ದೇವಿಯು ಶುಭ್ರ ವರ್ಣಿಯು, ಬಿಳಿ ಬಟ್ಟೆಯನ್ನು ಧರಿಸಿದವಳು, ಚತುರ್ಭುಜೆ, ಬಲಗೈಯಲ್ಲಿ ಜಪಮಾಲೆ, ವ್ಯಾಖ್ಯಾನ ಮುದ್ರೆ ಹಾಗೂ ಎಡಗೈಯಲ್ಲಿ ಪುಸ್ತಕ, ತಾವರೆ ಹಿಡಿದಿರುವವಳು ಎಂಬ ವಿವರಣೆಯಿದೆ.  ಋಗ್ವೇದದಲ್ಲಿ ಬರುವ ನದಿಸ್ತುತಿ ಭಾಗವು ಸರಸ್ವತಿ ನದಿಯ ಪೂರ್ವಕ್ಕೆ ಯಮುನೆಯೂ, ಪಶ್ಚಿಮಕ್ಕೆ ಶುತಾದ್ರಿಯೂ ಹರಿಯುತ್ತದೆ ಎಂದು ತಿಳಿಸುತ್ತದೆ.  ದೇವೀ ಭಾಗವತದಲ್ಲಿ ಉಲ್ಲೇಖವಾಗಿರುವಂತೆ ಸರಸ್ವತಿ ದೇವಿಯು ವೈಕುಂಠದಲ್ಲಿ ಹರಿಯುವಾಗ ಗಂಗಾದೇವಿಯು ಕೊಟ್ಟ ಶಾಪದಿಂದಾಗಿ ಭಾರತ ವರ್ಷದಲ್ಲಿ ನದಿಯಾಗಿ ಅವತರಣ ಮಾಡಿದಳು.  ನದಿಯಾಗಿ ಸರಸ್ವತಿಯು ಪುಣ್ಯಸ್ವರೂಪಿಣಿಯೂ ಮತ್ತು ಪಾವನಕರಳೂ ಆಗಿರುವಳು.  ಸರಸ್ವತಿ ನದಿಗೆ ಈ ಹೆಸರು, ಅವಳು ಹೊಂದಿದ್ದ ಅನೇಕ ಸರೋವರ(ಸರಸ್ಸು)ಗಳಿಂದಾಗಿ ಬಂದಿತ್ತು.  ಶಿವಾಲಿಕ್ ಪರ್ವತದಲ್ಲಿ ಹುಟ್ಟಿ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ತೆಳ್ಳಗೆ ಹರಿದು ಮಾಯವಾಗುತ್ತಿರುವ ಗಗ್ಗರ್-ಹಕ್ಕರ್ ಎಂಬ ನದಿಯನ್ನು  ಕಳೆದುಹೋದ ಸರಸ್ವತಿಯ ಪೂರ್ವಾರ್ಧವೆಂದು ಉಲ್ಲೇಖಿಸುತ್ತಾರೆ.  ಪುಣ್ಯಸ್ವರೂಪಿಣಿಯೂ ಮತ್ತು ಪಾವನಕರಳೂ ಆಗಿರುವ ಸರಸ್ವತಿ ನದಿಯು ಈಗ "ಗುಪ್ತಗಾಮಿನಿ"ಯಾಗಿ ತ್ರಿವೇಣಿ ಸಂಗಮದಲ್ಲಿ ಯಮುನೆ ಮತ್ತು ಗಂಗೆಯನ್ನು ಕೂಡಿಕೊಳ್ಳುತ್ತಾಳೆ.

ಸರಸ್ವತಿ ಈಗ ನದಿಯಾಗಿ ಇಲ್ಲದೇ ಇದ್ದರೂ ಕೂಡ, ದೇವತೆಯಾಗಿ ಮತ್ತು ಶುಭ್ರತೆಯ ಪ್ರತೀಕವಾಗಿ ನಮ್ಮ ಜೊತೆ ಸದಾ ಇದ್ದಾಳೆ.  ನಮ್ಮ ಮನಸ್ಸಿನಲ್ಲಿನ ಕಲ್ಮಶಗಳನ್ನು ತೊಳೆಯುತ್ತಾ ಶುಭ್ರತೆಯ ಕಡೆ ನಡೆಯುವುದರಿಂದ ನಾವು ಸರಸ್ವತಿ ದೇವಿಯನ್ನು ನಮ್ಮೊಳಗೆ ಸದಾ ಹರಿಯುವ ತರಂಗಿಣಿಯಂತೆ ಜೀವಂತವಾಗಿಟ್ಟುಕೊಳ್ಳಬಹುದು.  ನದಿಯಾಗಿ ಹರಿದ ಸರಸ್ವತಿಯ ಶಕ್ತಿಯನ್ನು ನಮ್ಮೊಳಗೆ ಸದಾ ಜಾಗೃತವಾಗಿರಿಸಿಕೊಳ್ಳುವ ಪ್ರಯತ್ನ ಮಾಡಬೇಕು.  ಸುಮಧುರವಾದ, ಉನ್ನತ ಅರ್ಥ ಬರುವ ಪದಗಳನ್ನು ಪ್ರಯೋಗಿಸಿ ಮಾತನಾಡುವ ಮೂಲಕ ನಮ್ಮ ’ತಾಯಿ’ ’ವಾಕ್ ದೇವಿ’ಗೆ ಗೌರವ ಸೂಚಿಸಬಹುದು.  ಋಗ್ವೇದವು ಸರಸ್ವತಿ ನದಿಯನ್ನು ಹಾಲು ತುಪ್ಪ ಕೊಡುವ ನದಿ ಎಂದೂ ಹೇಳಿದೆ.  ನಾವು ನಮ್ಮ ವಾಕ್ ಶುದ್ಧಿಯನ್ನು ಸದಾ ಪಾಲಿಸುವುದರಿಂದ ಹಾಲು ಕೊಟ್ಟ ತಾಯಿಯ ಶುದ್ಧ ಪ್ರೇಮಕ್ಕೆ ಪ್ರಾಶಸ್ತ್ಯ ಕೊಟ್ಟಂತಾಗುತ್ತದೆ.

ಬದರಿ ಕ್ಷೇತ್ರದ ವ್ಯಾಸಗುಹೆಯ ಬಳಿ ನಮಗೆ ಸರಸ್ವತಿ ನದಿಯ ಉಗಮ ಸ್ಥಾನವು ಕಾಣಸಿಗುತ್ತದೆ.  ಭೋರ್ಗರೆಯುತ್ತಾ ನಾದವನ್ನು ಹೊಮ್ಮಿಸುವ ಸರಸ್ವತಿ ನಂತರದಲ್ಲಿ ಕ್ಷೀಣವಾಗಿ ಹರಿಯುತ್ತಾಳೆ.  ವೇದವ್ಯಾಸರು ಗಣಪತಿಗೆ ಮಹಾಭಾರತದ ಉಕ್ತಲೇಖನ ಮಾಡುತ್ತಿದ್ದಾಗ, ಸರಸ್ವತಿ ದೇವಿಯು ತುಂಬು ಸಂಭ್ರಮದಿಂದ ಅಬ್ಬರಿಸುತ್ತಾ  ಶಬ್ದ ಮಾಡುತ್ತಿದ್ದಳೆಂದೂ, ವ್ಯಾಸರು ಕುಪಿತಗೊಂಡು ಅಂತರ್ಗಾಮಿಯಾಗುವಂತೆ ಶಾಪವಿತ್ತರೆಂದೂ ಸ್ಥಳೀಯರು ಕಥೆ ಹೇಳುತ್ತಾರೆ.  ಇಲ್ಲಿಂದ ಮುಂದುವರೆದು ಸರಸ್ವತೀ ನದಿಯು ಪ್ರಯಾಗದಲ್ಲಿ ಗುಪ್ತಗಾಮಿನಿಯಾಗಿ ಗಂಗೆ ಮತ್ತು ಯಮುನೆಯರನ್ನು ಕೂಡಿಕೊಳ್ಳುವುದರಿಂದ "ತ್ರಿವೇಣಿ ಸಂಗಮ"ವಾಗಿದೆ.

ಬ್ರಹ್ಮ ಪುರಾಣದಲ್ಲಿನ  ಶ್ರೀ ವೇಂಕಟೇಶ ಮಹಿಮೆಯ ಕಥೆಯಲ್ಲಿ ಶೇಷ ದೇವರ ವಿಚಾರ ಬರುತ್ತದೆ.  ಭಗವಂತ ಸದಾ ಶೇಷಶಾಯಿಯೇ ಆಗಿದ್ದರೂ ಕೂಡ, ಶೇಷನಿಗೆ ತೃಪ್ತಿಯೆನ್ನುವುದಿಲ್ಲ.  ಭಗವಂತನನ್ನು ಇನ್ನೂ ಅಧಿಕವಾಗಿ ಸೇವಿಸಬೇಕು ಎಂಬ ಬಯಕೆಯಿಂದ ತಪಸ್ಸು ಮಾಡಿದಾಗ ಭಗವಂತ ಶೇಷನನ್ನು ಕುರಿತು ಕೇಳುತ್ತಾನೆ.  ಸದಾ ಕಾಲವೂ  ನಿನ್ನ ಮೇಲೆಯೇ ಪವಡಿಸಿರುವ ನನ್ನನ್ನು ಇನ್ನೂ ಹೆಚ್ಚು ಸೇವಿಸಬೇಕೆಂಬ ಬಯಕೆ ಏಕೆ ಬಂತು? ಎಂದು.   ಆಗ ಶೇಷದೇವರು ಭಗವಂತನಿಗೆ ಉತ್ತರಿಸುತ್ತಾನೆ "ನೀನು ಅವತಾರವೆತ್ತಿ ಭೂಮಿಯಲ್ಲಿ ಪ್ರಕಟವಾದಾಗಲೂ ಕೂಡ ನಾನು ನಿನ್ನ ಜೊತೆಗೇ ಇರಬೇಕು.  ನೀನು ವೇಂಕಟೇಶನಾಗಿ, ಶಿಲೆಯಲ್ಲಿ ಪ್ರಕಟಗೊಂಡಾಗ, ನಾನೂ ಶಿಲೆಯಾಗಿ ಪರ್ವತ ರೂಪದಲ್ಲಿರುತ್ತೇನೆ, ನೀನು ಸದಾ ನನ್ನ ಮೇಲೆಯೇ ಭೂಮಿಯಲ್ಲೂ ಪವಡಿಸಿರಬೇಕು ಎಂದು ಕೇಳಿಕೊಳ್ಳುತ್ತಾನೆ" ಹಾಗೂ  ಭಗವಂತನ ಕೃಪೆಗೊಳಗಾಗುತ್ತಾನೆ.  ಶೇಷದೇವರು ಸಕಲ ಸತ್ಶಾಸ್ತ್ರಗಳ ಅಭಿಮಾನಿ ದೇವರು.  ಎಲ್ಲ ಜೀವಿಗಳಿಗೂ, ಜೀವಿಗಳ ಮನಸ್ಸಿಗೂ ಅಭಿಮಾನಿ ದೇವರಾದ ಶೇಷದೇವರ ಸಂಕೇತವೇ ತಿರುಪತಿಯ ಬೆಟ್ಟ ಮತ್ತು ಅದರ ಮೇಲೆ ಕುಳಿತಿರುವ ಭಗವಂತನು ಸರ್ವ ಶಾಸ್ತ್ರಗಳಿಗೆ ಒಡೆಯನಾಗಿರುತ್ತಾನೆ.  ಆದ್ದರಿಂದ ತಿರುಪತಿಯಲ್ಲಿ ಭಗವಂತನ ದರ್ಶನ ವಿಶೇಷವಾಗಿದೆ.  ಶೇಷ ದೇವರಂತೆಯೇ ದೇವತೆಗಳಲ್ಲೆಲ್ಲಾ ಉತ್ತಮಳಾದ ಸರಸ್ವತೀ ದೇವಿಯು, ಭಗವಂತನನ್ನು ಸದಾ ನೆನೆಯುತ್ತಾ, ಶರಣಾಗುವ ಭಕ್ತರು ಬಂದು ಮಿಂದಾಗ, ಅವರ ಪಾಪಗಳನ್ನೆಲ್ಲಾ ತೊಳೆದು, ಅವರಿಗೆ ಸತ್ಶಾಸ್ತ್ರದಲ್ಲಿ ಆಸಕ್ತಿ ಹುಟ್ಟಿಸಿ, ಮುಕ್ತಿ ಮಾರ್ಗದಲ್ಲಿ ತನ್ನ ಅಳಿಲು ಸೇವೆ ಸಲ್ಲಿಸಲು ಶ್ರೇಷ್ಠ ನದಿಯಾಗಬೇಕು ಎಂಬ ಮಹತ್ತರವಾದ ಆಸೆಯಿಂದ ತಪಸ್ಸು ಮಾಡುತ್ತಿರುತ್ತಾಳೆ.  ಇದೇ ಸಮಯದಲ್ಲಿ ಪುಲಸ್ತ್ಯ ಋಷಿಗಳು ಅಲ್ಲಿಗೆ ಬರುತ್ತಾರೆ.  ಸರಸ್ವತಿ ದೇವಿ ಗಮನಿಸುವುದಿಲ್ಲ ಮತ್ತು ಎದ್ದು ನಿಂತು ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುವುದಿಲ್ಲ.  ಇದರಿಂದ ಮನಸ್ಸಿಗೆ ನೋವಾದ ಪುಲಸ್ತ್ಯರು ನೀನು ಯಾವ ಕಾರಣಕ್ಕೆ ತಪಸ್ಸು ಮಾಡುತ್ತಿರುವೆಯೋ ಅದು ನೆರವೇರದೇ ಹೋಗಲಿ, ಸಕಲ ನದಿಗಳಲ್ಲಿ ಶ್ರೇಷ್ಠಳೆಂದು ಗಂಗೆಯೇ ಗುರುತಿಸಲ್ಪಡುವಳು ಎಂದು ಶಪಿಸಿಬಿಡುತ್ತಾರೆ.  ಕುಪಿತಗೊಂಡ ಸರಸ್ವತೀ ದೇವಿ ಕೂಡ ನಿನ್ನ ಕುಲದಲ್ಲಿ ರಾಕ್ಷಸರೇ (ಪುಲಸ್ತ್ಯರ ವಂಶಜರೇ ರಾವಣ ಹಾಗೂ ಕುಂಭಕರ್ಣರು) ಹುಟ್ಟಲಿ ಎಂದು ಮರುಶಾಪ ಕೊಟ್ಟುಬಿಡುತ್ತಾಳೆ.  ಪುಲಸ್ತ್ಯರು   ಪಶ್ಚಾತ್ತಾಪದಿಂದ ಸರಸ್ವತಿದೇವಿಗೆ ಶರಣಾಗುತ್ತಾರೆ.  ಆಗ ಸರಸ್ವತಿ ದೇವಿ ಪುಲಸ್ತ್ಯರಿಗೆ ನಿನ್ನ ವಂಶದ ಕೊನೆಯ ಮಗುವು (ವಿಭೀಷಣ) ವಿಷ್ಣು ಭಕ್ತನಾಗಿ ಹುಟ್ಟುವನು ಎಂದು ತಿಳಿಸುತ್ತಾಳೆ.  ಬ್ರಹ್ಮ ದೇವರಲ್ಲಿ ಸರಸ್ವತಿ ದೇವಿ ತನ್ನ ಅಳಲು ತೋಡಿಕೊಳ್ಳುತ್ತಾಳೆ.  ಅದಕ್ಕೆ ಬ್ರಹ್ಮ ದೇವರು, ಅದು ಬ್ರಾಹ್ಮಣ ಶಾಪ, ನೀನು ಅನುಭವಿಸಲೇ ಬೇಕು.  ಪುಲಸ್ತ್ಯರು ನೀನು ಶ್ರೇಷ್ಠ ನದಿಯಾಗಲಾರೆ ಎಂದಿದ್ದಾರೆಯೇ ಹೊರತು ಶ್ರೇಷ್ಠ ಪುಷ್ಕರಣಿ/ ತೀರ್ಥವಾಗಲಾಗದು ಎಂದಿಲ್ಲ.  ಆದ್ದರಿಂದ ನಿನ್ನ ತಪಸ್ಸು ಮುಂದುವರೆಸು ಎನ್ನುತ್ತಾರೆ.  ಸರಸ್ವತಿ ದೇವಿ ತಪಸ್ಸು ಮುಂದುವರೆಸಿ, ಶ್ರೇಷ್ಠ ಸರೋವರ/ ಪುಷ್ಕರಣಿ / ತೀರ್ಥಳಾಗಲು ವರ ಪಡೆಯುತ್ತಾಳೆ ಮತ್ತು ತಿರುಪತಿಯಲ್ಲಿ  "ಸ್ವಾಮಿ ಪುಷ್ಕರಣಿ"ಯೆಂದು ಕರೆಸಿಕೊಳ್ಳುತ್ತಾಳೆ.  ಕೃಷ್ಣನಿಗೆ ತಾಯಿಯಾದ ಯಶೋದೆಯೇ ಬಕುಳಾದೇವಿಯಾಗಿ, ತಿರುಪತಿಯ ಸ್ವಾಮಿ ಪುಷ್ಕರಿಣಿಯಲ್ಲಿ ಸರಸ್ವತೀ ನದಿಯ ನೀರು ನಿಲ್ಲಲು ಆಸರೆಯಾಗುತ್ತಾಳೆ.   ಹೀಗೆ ಶ್ರೇಷ್ಠವಾದ "ಸ್ವಾಮಿ ಪುಷ್ಕರಿಣಿ"ಯೆಂದು ಕರೆಸಿಕೊಂಡ ತಾಯಿ ಸರಸ್ವತಿ ನದಿಯಾಗಿ ಹರಿಯುವಾಗಲೂ ತನ್ನ ಮಡಿಲಲ್ಲಿ ಅನೇಕ ತೀರ್ಥಗಳನ್ನು ಹೊಂದಿದ್ದಳು ಎಂಬ ಅಂಶ ತಿಳಿಯುತ್ತದೆ.

 
ಮಹಾಭಾರತದ ಶಲ್ಯಪರ್ವದಲ್ಲಿ ಬಲರಾಮ ಕುರುಕ್ಷೇತ್ರ ಯುದ್ಧಕ್ಕೆ ಮೊದಲು ತೀರ್ಥಯಾತ್ರೆ ಹೊರಟುಬಿಡುತ್ತಾನೆ.  ತಾನು ಕೌರವರಿಗಾಗಲೀ ಪಾಂಡವರಿಗಾಗಲೀ ಯುದ್ಧದಲ್ಲಿ ಸಹಾಯ ಮಾಡುವುದಿಲ್ಲವೆಂದು ತಿಳಿಸಿರುತ್ತಾನೆ.  ಶ್ರೀಕೃಷ್ಣನು ಪಾಂಡವರಿಗೆ ಮಾತ್ರವಲ್ಲದೇ ಕೌರವರಿಗೂ ಸಹಾಯ ಮಾಡಬೇಕೆಂದು ಬಲರಾಮ ಸೂಚಿಸಿದಾಗ ಕೃಷ್ಣ ಆ ಮಾತನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ.  ಬಲರಾಮ ತೀರ್ಥಯಾತ್ರೆಗೆ "ಸರಸ್ವತಿ" ನದಿಯ ತೀರಕ್ಕೆ ಹೊರಟು ಬಿಡುತ್ತಾನೆ.  ಆ ಕಾಲದಲ್ಲಿ ನದಿಯು ತುಂಬಿ ಹರಿಯುತ್ತಾ ಬಹು ವಿಸ್ತಾರವಾಗಿ ಪಸರಿಸಿದ್ದಳು ಎಂಬುದು ಬಲರಾಮನ ತೀರ್ಥಯಾತ್ರೆಯ ವಿವರಗಳನ್ನು ಓದಿದಾಗ ತಿಳಿಯುತ್ತದೆ.   ತೀರ್ಥಯಾತ್ರೆಯಲ್ಲಿ ಬ್ರಾಹ್ಮಣರಿಗೆ ಕೊಡಬೇಕಾದ ದಾನಕ್ಕಾಗಿ ಪದಾರ್ಥಗಳನ್ನು ಯಥೇಚ್ಛವಾಗಿ ತೆಗೆದುಕೊಂಡು ಬಲರಾಮನು ಪುಣ್ಯಪ್ರದವಾದ ’ಪ್ರಭಾಸ’ ಕ್ಷೇತ್ರಕ್ಕೆ ಬರುತ್ತಾನೆ.  ಈ ಕ್ಷೇತ್ರ ಶಾಪಗ್ರಸ್ತನಾಗಿದ್ದ ಚಂದ್ರನು ಸರಸ್ವತಿ ನದಿಯ ಪ್ರಭಾಸತೀರ್ಥದಲ್ಲಿ ಸ್ನಾನ ಮಾಡಿ ಕಳೆದುಕೊಂಡಿದ್ದ ತನ್ನ ಕಾಂತಿಯನ್ನು ಮರಳಿ ಪಡೆದ ಕ್ಷೇತ್ರವಾಗಿದೆ.  ಹೀಗೆ ಬಲರಾಮನು ನದೀತೀರದಲ್ಲಿ ಮುಂದುವರೆಯುತ್ತಾ ಅನೇಕ ತೀರ್ಥಗಳಲ್ಲಿ ಮಿಂದು, ದಾನ, ಧರ್ಮಾದಿಗಳನ್ನು ಮಾಡುತ್ತಾ ಮುಂದೆ ಸಾಗುತ್ತಾನೆ.  ಸರಸ್ವತೀ ನದಿಯು ಪ್ರಭಾಸತೀರ್ಥ, ಉದಪಾನತೀರ್ಥ, ವಿನಶನತೀರ್ಥ ಸುಭೂಮಿಕಾತೀರ್ಥ, ಗರ್ಗಸ್ರೋತತೀರ್ಥ ಹೀಗೆ ಇನ್ನೂ ಅನೇಕ ತೀರ್ಥಗಳನ್ನು ತನ್ನ ಮಡಿಲಿನಲ್ಲಿ ಸೇರಿಸಿಕೊಂಡಿದೆ.  ಒಂದೊಂದು ತೀರ್ಥಕ್ಕೂ ಅದರದೇ ಆದ ಮಹಿಮೆ ಮತ್ತು ಕಥೆಯ ನಂಟು ಕೂಡ ಇದೆ.  ಸರಸ್ವತೀ ನದಿಯು ಅದೆಷ್ಟು ಕರುಣಾಮಯಿ ಮತ್ತು ಪವಿತ್ರಳು ಎಂದರೆ, ಒಮ್ಮೆ ತನ್ನ ತೀರ ನೈಮಿಷಾರಣ್ಯದಲ್ಲಿ ಸೇರಿದ್ದ ಅಸಂಖ್ಯಾತ ಋಷಿಗಳು ಸ್ನಾನಮಾಡಲಾಗದೇ ಪರಿತಪಿಸಿದಾಗ ತಾನು ಹರಿಯುವ ತನ್ನ ದಿಕ್ಕನ್ನೇ ಬದಲಾಯಿಸಿಕೊಂಡು ಹಿಂತಿರುಗಿ ಪೂರ್ವಕ್ಕೆ ಹರಿದು ಬಂದು ಋಷಿಗಳ ಅಭೀಷ್ಟವನ್ನು ನೆರವೇರಿಸಿದಳಂತೆ.  ಎಲ್ಲರೂ ಸಂತೃಪ್ತರಾದ ನಂತರ ಮತ್ತೆ  ದಿಕ್ಕನ್ನು ಬದಲಿಸಿಕೊಂಡು ಪಶ್ಚಿಮ ದಿಕ್ಕಿನಲ್ಲಿ ಹರಿದು ಹೋದಳೆಂಬ ಉಲ್ಲೇಖ ಮಹಾಭಾರತದಲ್ಲೇ ಬಂದಿದೆ.  ಇದರಿಂದ ನಮಗೆ ಸರಸ್ವತೀ ನದಿಯು ಪಡೆದಿದ್ದ ಪ್ರಾಮುಖ್ಯತೆ, ಅವಳ ವ್ಯಾಪ್ತಿಯ ಅರಿವು ಕೊಂಚ ಸಿಕ್ಕುತ್ತದೆ.  ಹೀಗೆ ತುಂಬಿ ಹರಿಯುತ್ತಿದ್ದ ನದಿಯು ಕಾಲ ಕಳೆದಂತೆ ತನ್ನೆಲ್ಲಾ ಸರಸು (ತೀರ್ಥಗಳು)ಗಳನ್ನೂ, ತನ್ನ ಮಡಿಲಿಗೆ ಬಂದು ಸೇರುತ್ತಿದ್ದ ಯಮುನೆ ಮತ್ತು ಶುತಾದ್ರಿ ನದಿಗಳನ್ನೂ ಕಳೆದುಕೊಂಡು ಸರಸ್ವತಿ ಕೃಶಳಾಗುತ್ತಾ ನೇಪತ್ಯಕ್ಕೆ ಸರಿದುಬಿಡುತ್ತಾಳೆ.  ಪ್ರಮುಖ ನದಿಗಳಾಗಿ ಗಂಗೆ ಯಮುನೆಯರಿಗೆ ಜಾಗ ಬಿಟ್ಟುಕೊಟ್ಟು ತಾನು ಗುಪ್ತಗಾಮಿನಿಯಾಗಿಬಿಡುತ್ತಾಳೆ.

ಸರಸ್ವತಿ ನದಿ ಏಳು ಭಾಗಗಳಾಗಿ ಇಡೀ ಜಗತ್ತನ್ನೇ ವ್ಯಾಪಿಸಿದ್ದಳು ಎಂಬ ಅಂಶ ಮಹಾಭಾರತದಲ್ಲಿ ಬಂದಿದೆ.  ತಪೋಬಲ ಸಂಪನ್ನರಾದ ಋಷಿಗಳು ಸರಸ್ವತಿಯನ್ನು ಎಲ್ಲೆಲ್ಲಿಗೆ ಆಹ್ವಾನಿಸಿದರೋ ಅಲ್ಲೆಲ್ಲಾ  ಬಂದು ಮಹರ್ಷಿಗಳ ಪೂಜೆಗೆ, ಯಜ್ಞ ಯಾಗಾದಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾಳೆ.  ಈ ಏಳು ನಾಮಧೇಯಗಳು ಹೀಗಿವೆ -
ಸುಪ್ರಭಾ ಕಾಂಚನಾಕ್ಷೀ ಚ ವಿಶಾಲಾ ಚ ಮನೋರಮಾ |
ಸರಸ್ವತೀ ಚೌಘವತೀ ಸುರೇಣುರ್ವಿಮಲೋದಕಾ || - ಸುಪ್ರಭಾ, ಕಾಂಚನಾಕ್ಷಿ, ವಿಶಾಲಾ, ಮನೋರಮಾ, ಸರಸ್ವತೀ, ಓಘವತೀ, ಸುರೇಣು ಮತ್ತು ವಿಮಲೋದಕಾ.

ಸರಸ್ವತಿಯ ಒಂದೊಂದು ಕವಲಿಗೂ ಒಂದೊಂದು ಕಥೆ ಮತ್ತು ಹೆಸರು ಬಂದಿದೆ.  ಮೊದಲನೆಯದಾಗಿ  ಪುಷ್ಕರತೀರ್ಥದಲ್ಲಿ ಬ್ರಹ್ಮದೇವನು ಮಹಾಯಜ್ಞವೊಂದನ್ನು ಮಾಡಿದಾಗ ಎಲ್ಲ ಸರಿತ್ತುಗಳಿಗೂ ಶ್ರೇಷ್ಠಳಾದ ಸರಸ್ವತಿಯನ್ನು ಮಂತ್ರಪೂರ್ವಕವಾಗಿ ಆಹ್ವಾನಿಸುತ್ತಾನೆ.  ಆ ಸಮಯದಲ್ಲಿ ಸರಸ್ವತಿಯು ’ಸುಪ್ರಭಾ’ ಎಂಬ ಹೆಸರಿನಲ್ಲಿ ಆವಿರ್ಭೂತಳಾಗುತ್ತಾಳೆ.  ಎರಡನೆಯದಾಗಿ ನೈಮಿಷಾರಣ್ಯದಲ್ಲಿ ಅನೇಕ ಮಹರ್ಷಿಗಳು ಒಟ್ಟಿಗೇ ಸೇರಿ ಸತ್ರಯಾಗ ಮಾಡುವ ಸಮಯದಲ್ಲಿ, ಮುನಿಗಳ ನಡುವೆ ವೇದಗಳ ವಿಷಯವಾಗಿ ವಿಚಿತ್ರ ಕಥೆಗಳಿಂದ ಕೂಡಿದ ಸಂಭಾಷಣೆ ನಡೆಯುತ್ತದೆ.  ಅಲ್ಲಿ ನೆರೆದಿದ್ದ ಮುನಿಗಳೆಲ್ಲರೂ ಕೂಡಿ ಸರಸ್ವತಿಯನ್ನು ಸ್ಮರಿಸುತ್ತಾರೆ.  ಸಮಾವೇಶಗೊಂಡಿದ್ದ ಮಹಾತ್ಮರ ಸಹಾಯಾರ್ಥವಾಗಿ ನೈಮಿಷಾರಣ್ಯದಲ್ಲಿ ’ಕಾಂಚನಾಕ್ಷೀ’ ಎಂಬ ಹೆಸರಿನಲ್ಲಿ ಪ್ರಕಟಗೊಳ್ಳುತ್ತಾಳೆ.  ಮೂರನೆಯದಾಗಿ ಗಯಾದೇಶದಲ್ಲಿ ಗಯಾರಾಜನು ಮಹಾಯಜ್ಞ ಮಾಡಿದಾಗ ಸರಿತ್ತುಗಳಲ್ಲಿ ಶ್ರೇಷ್ಠಳೆಂದು ಮಂತ್ರಪೂರ್ವಕವಾಗಿ ಸರಸ್ವತಿಯನ್ನು ಆಹ್ವಾನಿಸುತ್ತಾನೆ.  ಯಜ್ಞದ ಸಮಯದಲ್ಲಿ ಆಹೂತೆಯಾಗಿ ಬಂದ ಸರಸ್ವತಿಯನ್ನು ಮಹರ್ಷಿಗಳು ’ವಿಶಾಲಾ’ ಎಂದು ಕರೆದಿದ್ದಾರೆ.  ನಾಲ್ಕನೆಯದಾಗಿ ಉತ್ತರಕೋಸಲ ಪ್ರದೇಶದಲ್ಲಿ ಉದ್ದಾಲಕ ಮಹರ್ಷಿಯು ಯಜ್ಞವನ್ನು ಮಾಡಿ, ಸರಸ್ವತೀ ನದಿಯನ್ನು ಸ್ಮರಿಸುತ್ತಾನೆ.  ಋಷಿಗಳು ಸರಸ್ವತಿಯ ಮನೋಹರವಾದ ರೂಪವನ್ನು ಕಲ್ಪಿಸಿಕೊಂಡು ಚಿಂತಿಸಿದುದರಿಂದ ಅಲ್ಲಿ ಸರಸ್ವತಿ ’ಮನೋರಮಾ’ ಎಂದು ಪೂಜಿಸಿಕೊಂಡಳು.  ಐದನೆಯದಾಗಿ  ಮಹಾತ್ಮನಾದ ಕುರುರಾಜನು ಕುರುಕ್ಷೇತ್ರದಲ್ಲಿ ಯಜ್ಞಮಾಡಿದಾಗ ಅಲ್ಲಿಯೇ ಹರಿಯುತ್ತಿದ್ದ ಸರಸ್ವತಿಯನ್ನು ಋಷಿಗಳು ’ಸುರೇಣು’ ಎಂದು ಕರೆದರು ಹಾಗೂ ದಕ್ಷನು ಗಂಗಾದ್ವಾರದಲ್ಲಿ ಯಾಗ ಮಾಡಿ, ಸರಸ್ವತಿಯನ್ನು ಆಹ್ವಾನಿಸಿದಾಗ ಯಾಗದ ಸ್ಥಳಕ್ಕೆ ಶೀಘ್ರವಾಗಿ ಹರಿದು ಬಂದ ಸರಸ್ವತಿಯು ’ಸುರೇಣು’ವಾದಳು.  .  ಆರನೆಯದಾಗಿ ಮಹಾತ್ಮರಾದ ವಸಿಷ್ಠರು ಕುರುಕ್ಷೇತ್ರದಲ್ಲಿ ಯಜ್ಞಮಾಡಿ ಸರಸ್ವತಿಯನ್ನು ಆಮಂತ್ರಿಸಿದಾಗ ಮಹರ್ಷಿಯ ಮೇಲಿನ ಪ್ರೀತಿಯಿಂದ ಯಜ್ಞಶಾಲೆಗೆ ಆಗಮಿಸಿದ ಸರಸ್ವತಿಯನ್ನು ಅಲ್ಲಿದ್ದ ಬ್ರಾಹ್ಮಣ ಶ್ರೇಷ್ಠರು ’ಓಘವತೀ’ ಎಂದು ಕರೆದರು.  ಕೊನೆಯ ಹಾಗೂ ಏಳನೆಯ ಕವಲಾಗಿ ಪಿತಾಮಹನು ಹಿಮವತ್ಪರ್ವತದಲ್ಲಿ ಪುನಃ ಯಜ್ಞ ಮಾಡಿ ಸರಸ್ವತಿಯನ್ನು ಆವಾಹಿಸಿದಾಗ ಬ್ರಹ್ಮನ ಆವಾಹನವನ್ನು ಗೌರವಿಸಿ ಆಗಮಿಸಿದ ಸರಸ್ವತಿಯನ್ನು ’ವಿಮಲೋದಾ’ ಎಂದು ಕರೆದರು.

ಶ್ರೀವಾದಿರಾಜ ಸ್ವಾಮಿಗಳ "ತೀರ್ಥ ಪ್ರಬಂಧ" ಕೃತಿಯಲ್ಲಿ ಸೌರಾಷ್ಟ್ರದ "ಪ್ರಭಾಸಕ್ಷೇತ್ರ"ದಲ್ಲಿ ಕಪಿಲಾ ನದಿಯು ಸರಸ್ವತೀ ನದಿಯನ್ನೂ, ಸರಸ್ವತೀ ನದಿ ಹಿರಣ್ಯೆಯನ್ನೂ, ಹಿರಣ್ಯಾನದಿಯು ಸಮುದ್ರವನ್ನೂ ಸೇರುತ್ತದೆ ಎಂದಿದ್ದಾರೆ.  ಆದ್ದರಿಂದ ಇದೂ ಕೂಡ ತ್ರಿವೇಣೀ ಸಂಗಮ ಮತ್ತು ಇದಕ್ಕೆ "ಪ್ರಾಚೀತ್ರಿವೇಣೀ" ಎಂಬ ಹೆಸರಿದೆ ಎಂದಿದ್ದಾರೆ.   ಈ ಕ್ಷೇತ್ರವನ್ನೂ, ನದಿಗಳ ಸಂಗಮವನ್ನೂ ವರ್ಣಿಸುತ್ತಾ ವಾದಿರಾಜ ಗುರುಗಳು "ಸರಸ್ವತೀ ಹಿರಣ್ಯಾಭ್ಯಾಂ ಸಗೋ ಯತ್ರಪರಾಂಬುಧೇಃ | ಪ್ರಭಾಸಾಖ್ಯಂ ತದಾಭಾತಿ ಪ್ರಭಾಸ ಹಿ ಯತೋ ಭುವಃ" || - ಯಾವ ಪ್ರಭಾಸ ಕ್ಷೇತ್ರದಲ್ಲಿ ಪಶ್ಚಿಮ ಸಮುದ್ರಕ್ಕೆ ಸರಸ್ವತೀ ಮತ್ತು ಹಿರಣ್ಯಾನದಿಗಳ ಸಂಗಮವು ಉಂಟಾಗುತ್ತದೆಯೋ ಅಂತಹ ಪ್ರಾಭಾಸವೆಂಬ ಕ್ಷೇತ್ರವು ಶೋಭಿಸುತ್ತದೆ ಎಂದಿದ್ದಾರೆ. ಶ್ರೀ ರಾಘವೇಂದ್ರ ಸ್ವಾಮಿಗಳು ರಚಿಸಿರುವ "ನದಿ ತಾರತಮ್ಯ" ಸ್ತೋತ್ರದಲ್ಲಿ ಕೂಡಾ "ಸ್ವಾಮಿ ಚಂದ್ರಾ ಪುಷ್ಕರಿಣ್ಯೌ ಮಾನಸಂ ಚ ಸರೋವರಂ |  ಕೃಷ್ಣವೇಣ್ಯಾಃ ಸಮಸ್ತಾಭ್ಯಃ ಕಾವೇರೀ ಚ ಸರಸ್ವತೀ" || ಎಂಬ ಉಲ್ಲೇಖವಿದೆ. 

ನಮ್ಮ ಸಂಸ್ಕೃತಿಯಲ್ಲಿ ನದಿಗಳನ್ನು ಸ್ತ್ರೀಯರಿಗೆ ಹೋಲಿಸಲಾಗಿದೆ.  ಸ್ತ್ರೀ ಶಕ್ತಿಯೇ ಸೃಷ್ಟಿಗೆ, ಸಂಸಾರಕ್ಕೆ, ವ್ಯುತ್ಪತ್ತಿಗೆ ಎಲ್ಲದಕ್ಕೂ ಮೂಲ.  ಪ್ರಳಯ ಕಾಲದಲ್ಲಿ ವಟಪತ್ರಶಾಯಿಯಾಗಿ ಮಲಗಿದ್ದ ಶ್ರಿಮನ್ನಾರಾಯಣನು ಸೃಷ್ಟಿಗಾಗಿ ಎಚ್ಚರಗೊಂಡಾಗ ಅಂಭ್ರಣೀ ದೇವಿಯಾಗಿ ಲಕ್ಷ್ಮೀದೇವಿಯು ಭಗವಂತನನ್ನು ವೇದಾದಿಗಳಿಂದ ಸ್ತುತಿಸುತ್ತಾಳೆ.  ಹೀಗೆ ಅಂಭ್ರಣೀದೇವಿಯನ್ನು ಪ್ರೇರಿಸಿದ ಭಗವಂತ ಮೊಟ್ಟ ಮೊದಲು ವೇದಗಳನ್ನು ಅಭಿವ್ಯಕ್ತಗೊಳಿಸುತ್ತಾನೆ.   ಸೃಷ್ಟಿಯ ಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಭಗವಂತ ಅಂಭ್ರಣೀ ದೇವಿಯು ತನ್ನನ್ನು ಸ್ತುತಿಸುವಂತೆ ಮಾಡಿ, ಪ್ರೇರಕ ಶಕ್ತಿಯಾಗಿ ಸ್ತ್ರೀಶಕ್ತಿಗೆ ಪ್ರಾಧಾನ್ಯತೆ ಕೊಡುತ್ತಾನೆ.  ಶ್ರೀಮದ್ಭಾಗವತದಲ್ಲಿ ಬರುವ ಮೈತ್ರೇಯ ಹಾಗೂ ವಿದುರರ ಸಂವಾದದಿಂದ ತಿಳಿಯುವುದೇನೆಂದರೆ ಭಗವಂತನಾದ ಶ್ರೀಹರಿಯು ಜಡಪ್ರಕೃತಿಯನ್ನೂ ಮತ್ತು ಅದರ ಅಭಿಮಾನಿನಿ ಚೇತನಪ್ರಕೃತಿಯನ್ನೂ ಉಪಯೋಗಿಸಿಕೊಂಡು ಜಗತ್ತನ್ನು ಸೃಷ್ಟಿಸಿದನು. ಪ್ರಳಯ ಕಾಲದಲ್ಲಿ ಶ್ರೀಹರಿಯ ಪತ್ನಿಯಾದ ಚಿತ್ಪ್ರಕೃತಿ (ಜಡ ಹಾಗೂ ಚೇತನ)ದೇವಿಯಾಗಿ ಲಕ್ಷ್ಮಿಯು ಸುಪ್ತಳಾಗಿರುವಳು.  ಸೃಷ್ಟಿಯ ಕಾಲದಲ್ಲಿ  ಹರಿಯೇ ಪ್ರಧಾನನಾದುದರಿಂದ ’ಮಯ’ನೆನಿಸುವನು ಮತ್ತು ಚೇತನ-ಜಡ ಪ್ರಕೃತಿಗಳೆರಡೂ ’ಮಾಯಾ’ ಎನಿಸುವುವು.  ಈ ಉಭಯ ಪ್ರಕೃತಿಗಳಲ್ಲೂ ಶ್ರೀಹರಿಯು ತನ್ನ ವೀರ್ಯವನ್ನಿಟ್ಟು, ಸಾಕ್ಷಾತ್ ಲಕ್ಷ್ಮೀದೇವಿಯಲ್ಲಿ ಪ್ರಳಯ ಕಾಲದಲ್ಲಿ ಸುಪ್ತವಾಗಿದ್ದ ’ಜಗತ್ಸೃಷ್ಟಿ’ಯ ಶಕ್ತಿಯನ್ನು ಉದ್ರೇಕಗೊಳಿಸುವನು.  ಪರಿಣಾಮವಾಗಿ ’ಮಹತ್ತತ್ವ’ವೂ, ಬ್ರಹ್ಮದೇವರೂ  ಹುಟ್ಟಿ, ಸೃಷ್ಟಿಯ ಕಾರ್ಯವು ಮುಂದುವರೆಯಿತು.  ಹೀಗೆ ಭಗವಂತನು ಸ್ತ್ರೀಶಕ್ತಿಯ ಅಭಿವ್ಯಕ್ತತೆಯನ್ನು ಸೃಷ್ಟಿಯ ಕಾಲದಲ್ಲಿಯೇ ಪ್ರಕಟಪಡಿಸಿದ್ದಾನೆ.  ನಿತ್ಯ ಸಂಸಾರಿಗಳನ್ನು ಸೃಷ್ಟಿಸಿ, ಸ್ತ್ರೀಯನ್ನು ಕೇಂದ್ರ ಬಿಂದುವಾಗಿಸಿ ಸಂಸಾರದ ಎಳೆಗಳನ್ನು ಜೋಡಿಸಿ ಹಿಡಿದುಕೊಂಡು, ದಿಕ್ಕು ತಪ್ಪದಂತೆ ಸಂಸಾರ ರಥವನ್ನು ನಡೆಸುವ ಶಕ್ತಿಯನ್ನಾಗಿಸಿದ್ದಾನೆ.  


ಸರಸ್ವತಿ ನದಿಯು ಕೂಡ ಸ್ತ್ರೀಯ ವ್ಯಕ್ತಿತ್ವಕ್ಕೆ ಕನ್ನಡಿಯಂತಿದ್ದವಳು.  ತನ್ನ ಮಡಿಲ ತುಂಬಾ ಅನೇಕ ಸರಸ್ಸುಗಳನ್ನು ಹೊಂದಿದ್ದ ಸರಸ್ವತಿ ಹಲವಾರು ಮಕ್ಕಳನ್ನು ಹೆತ್ತ ತಾಯಿಯಂತಿದ್ದಳು.  ತಾಯಿಯು ತನ್ನ ಮಡಿಲು ತುಂಬಿರುವ ಮಕ್ಕಳನ್ನು ಎಂದಿಗೂ ಭಾರವೆಂದು ತಿಳಿಯುವುದೇ ಇಲ್ಲ.  ಎಲ್ಲರ ಜವಾಬ್ದಾರಿಯನ್ನೂ, ಭಾರವನ್ನೂ ತಾನೇ ಹೊತ್ತು ಸಂತೋಷದಿಂದ, ಅಗಾಧವಾದ ಅಕ್ಕರೆಯನ್ನು ಎಲ್ಲ ಮಕ್ಕಳಿಗೂ ಸಮೃದ್ಧವಾಗಿ ಉಣಬಡಿಸಿ, ಮಕ್ಕಳ ಪವಿತ್ರತೆ, ಪ್ರವರ್ಧಮಾನ ಮತ್ತು ಪ್ರಾಮುಖ್ಯತೆಯನ್ನು ನೋಡಿ ಮನದಲ್ಲೇ ತೃಪ್ತಿ - ಸಂತೋಷವನ್ನು ಅನುಭವಿಸುತ್ತಾಳೆ.  ಸರಸ್ವತಿ ನದಿಯೂ ಕೂಡ ಹೀಗೇ ತನ್ನ ಸರಸ್ಸುಗಳೆಂಬ ಮಕ್ಕಳನ್ನು ಧರಿಸಿ ಗಂಭೀರವಾಗಿ ಪ್ರವಹಿಸುತ್ತಿದ್ದವಳು.  ಸ್ತ್ರೀಯ ಅತಿ ಮುಖ್ಯ ಗುಣವಾದ ಕರುಣೆಯನ್ನೂ ಅಕ್ಕರೆಯನ್ನೂ ತನ್ನ ಒಡಲಿನಲ್ಲಿ ತುಂಬಿಸಿಕೊಂಡಿದ್ದವಳು. ಎಲ್ಲಿ ಋಷಿ ಮುನಿಗಳು ತಮ್ಮ ಸ್ನಾನ-ಪಾನಾದಿಗಳಿಗಾಗಿ ಕರೆಯುತ್ತಿದ್ದರೋ, ಅಲ್ಲಿಗೆ ತಾನು ಹರಿಯುವ ದಿಕ್ಕನ್ನೇ ಬದಲಾಯಿಸಿಕೊಂಡು ಧಾವಿಸಿ ಬಂದೊದಗುತ್ತಿದ್ದವಳು.  ಸದಾ ಸರ್ವದಾ ತನ್ನ ಸಂಸಾರ ಹಾಗೂ ಪರರ ಹಿತಚಿಂತನೆಯನ್ನೇ ಮಾಡುತ್ತಾ, ಪ್ರತಿ ನಿಮಿಷವೂ ಕರೆಗೆ ಓಗೊಟ್ಟು ನಿಲ್ಲುವ ತಾಯಿಯಂತೆ, ಸರಸ್ವತಿ ನದಿ ತನ್ನನ್ನು ಆಹ್ವಾನಿಸಿದಲ್ಲೆಲ್ಲಾ ಕವಲುಗಳಾಗಿ ಆವಿರ್ಭವಿಸಿದಳು.  ಎಲ್ಲೆಲ್ಲಿ ದೇವತಾ ಕಾರ್ಯಗಳು, ಯಾಗ ಯಜ್ಞಗಳು ನಡೆಯುತ್ತಿದ್ದವೋ, ಅಲ್ಲಿಗೆಲ್ಲಾ ಒದಗಿ ಬಂದು ಭಗವತ್ಪೂಜೆಗೆ ಅನುಕೂಲ ಮಾಡಿಕೊಟ್ಟವಳು.  ತನ್ನ ಮಡಿಲಿಗೆ ಬಂದ ಯಾವುದೇ ಮಗುವಾದರೂ ಅದನ್ನು ಬರಸೆಳೆದು, ಅಕ್ಕರೆಯ ಧಾರೆಯನ್ನೇ ಹರಿಸುವ ಅಮ್ಮನಂತೆ, ಸರಸ್ವತಿ ನದಿಯು ತನ್ನನ್ನು ಸೇರಲು ಬಂದ ಶ್ರುತಾದ್ರಿ ಹಾಗೂ ಯಮುನೆಯರನ್ನು ಅಕ್ಕರೆಯಿಂದ ಮೈದುಂಬಿಸಿಕೊಂಡವಳು.  ತಾನು ಅಮೃತವನ್ನೇ ಉಣಬಡಿಸಿದ್ದರೂ, ತನ್ನನ್ನು ಮರೆತು ತೊರೆದು ಹೋದ ಮಕ್ಕಳನ್ನಾಗಲೀ, ಇತರರನ್ನಾಗಲೀ ಎಂದಿಗೂ ಶಪಿಸದೆ, ತನ್ನೊಳಗೇ ಕೊರಗಿ, ಕರಗಿ ಕ್ಷೀಣವಾಗುವ ನಿಷ್ಕಲ್ಮಷ ಭಾವದ ತುಂಬು ಮನಸ್ಸಿನ ತಾಯಿಯಂತೇ ಸರಸ್ವತಿ ನದಿಯು ಕೂಡ ಉದಾತ್ತ ಭಾವವನ್ನು ತೋರಿದ್ದವಳು.  ತನ್ನನ್ನು ತೊರೆದು ಹೋದ ಯಮುನೆಯನ್ನೂ, ಶ್ರುತಾದ್ರಿಯನ್ನೂ ಕಳೆದುಕೊಂಡು, ತಾನು ಕ್ಷೀಣಳಾಗಿ, ಕರಗಿ, ಕೊರಗಿ, ಮೌನದಿಂದಲೇ ಗುಪ್ತಗಾಮಿನಿಯಾಗಿ ಮರೆಯಾಗಿರುವ  ಸರಸ್ವತಿ ನದಿಯು ಮಾತೆಯ ಶ್ರೇಷ್ಠತೆಯ ಪ್ರತೀಕವಾಗುತ್ತಾಳೆ.  ನೆನಪಿಸಿಕೊಂಡಾಗಲೆಲ್ಲಾ ಒಂದು ಮಧುರ ಹಾಗೂ ಗೌರವಯುತವಾದ ತಂಗಾಳಿಯಂತೆ ಸುಳಿದು ಮಾತೃ ಸ್ಥಾನದಲ್ಲಿ ಸರಸ್ವತಿ ನದಿಯು ತಂಪೆರೆಯುತ್ತಾಳೆ. 


ಚಿತ್ರಕೃಪ್ತೆ : ಅಂತರ್ಜಾಲ


Thursday, August 29, 2013

ಭೀಮಸೇನಮಹಾಭಾರತದ ಪಾತ್ರಗಳು ನಮ್ಮ ಬದುಕಿಗೆ ತುಂಬಾ ಹತ್ತಿರವಾದವುಗಳು.  ಧನಾತ್ಮಕ ಗುಣಗಳ ವ್ಯಕ್ತಿತ್ವಕ್ಕೆ ಪಾಂಡವರ ಪಾತ್ರಗಳು ನಿದರ್ಶನಗಳಾದರೆ, ಋಣಾತ್ಮಕ ಭಾವಗಳಿಗೆ ಕೌರವರ ಪಾತ್ರಗಳು ನಿದರ್ಶನಗಳಾಗುತ್ತವೆ.  ಭಗವಂತನಾದ ಶ್ರೀಕೃಷ್ಣನ ವ್ಯಕ್ತಿತ್ವವು ಅತ್ಯಂತ ಉನ್ನತವಾದ ಭಾವವಾಗಿ, ನಮ್ಮ ಎಲ್ಲಾ ವಿಶ್ಲೇಷಣೆಯ ಪರಿಧಿಯನ್ನೂ ಮೀರಿ ಬೆಳೆಯುತ್ತದೆ.  ವಿಶೇಷ ಗುಣಗಳನ್ನೇ ಪ್ರಕಟಿಸುವ ಶ್ರೀಕೃಷ್ಣ ಶೈಶವಾವಸ್ಥೆಯಲ್ಲಿ ನಮ್ಮನ್ನು ಕಾಡುವ ಮುದ್ದು ಮಗುವಾಗಿ, ಅಂತಹ ಒಂದು ಮಗುವಿಗಾಗಿ ಜಗತ್ತಿನ ಎಲ್ಲಾ ತಾಯಂದಿರೂ ಹಂಬಲಿಸುವಂತೆ ಮಾಡುತ್ತಾನೆ.  ಬಾಲ್ಯದ ತುಂಟಾಟಗಳಲ್ಲಿ ತಾನು ನಕ್ಕು, ನಮ್ಮನ್ನು ನಗಿಸಿ, ಕಾಡಿಸಿ, ಪೀಡಿಸಿ, ಮುದ್ದುಗರೆಯುತ್ತಾನೆ.  ಬೆಳೆಯುತ್ತಾ ಹೋದಂತೆಲ್ಲಾ ತಾನು ಸಾಕ್ಷಾತ್ ಭಗವಂತನೇ ಎಂಬುದನ್ನು ನಿರೂಪಿಸುತ್ತಾನೆ.  ಪಾಂಡವರ ಜೊತೆಗೆ ಸದಾ ಇದ್ದು, ಅವರನ್ನು ಸಂರಕ್ಷಿಸುತ್ತಾನೆ.  ಪಾಂಡವರಲ್ಲಿ ಅತಿ ಹೆಚ್ಚಾದ ನಿಷ್ಠೆ ಮತ್ತು ಭಕ್ತಿಯನ್ನು ಕೃಷ್ಣನ ಬಗ್ಗೆ ಹೊಂದಿರುವವರು ಯಾರೆಂದು ಆಲೋಚಿಸಿದಾಗ, ಉಳಿದ ಎಲ್ಲರಿಗಿಂತ ಭೀಮಸೇನ ಅತ್ಯಂತ ಉನ್ನತ ಸ್ಥಾನದಲ್ಲಿ ನಿಲ್ಲುತ್ತಾನೆ.  ತನ್ನ ಶೌರ್ಯ ಮತ್ತು ಬಲದಿಂದಲೇ ಹೆಚ್ಚು ಗುರುತಿಸಿಕೊಂಡಿದ್ದರೂ ಕೂಡ, ಭೀಮನಲ್ಲಿ  ಸಾಮಾನ್ಯವಾಗಿ ಗೋಚರಿಸದ ಹಲವಾರು ಅವ್ಯಕ್ತ ಗುಣಗಳು ಇದ್ದವೆಂಬುದು ಗುರುತಿಸಲ್ಪಟ್ಟಿದೆ.  ಇಡೀ ಮಹಾಭಾರತದ ಕಾಲದಲ್ಲಿ ಅತಿ ಕಡಿಮೆ ಮಾತನಾಡಿರುವ ವ್ಯಕ್ತಿಯೆಂದರೆ ಭೀಮಸೇನನೇ. 

ಪುರಾಣಗಳಿಂದ ನಮಗೆ ತಿಳಿಯುವುದೇನೆಂದರೆ ಭಗವಂತನು ಭೂಭಾರವನ್ನು ಹರಣ ಮಾಡುವುದಕ್ಕೋಸ್ಕರ ಭುವಿಗೆ ಅವತಾರ ರೂಪದಲ್ಲಿ ಇಳಿದು ಬರುತ್ತಾನೆ.  ಹಾಗೆ ಬರುವಾಗ ತಾನೊಬ್ಬನೇ ಬರುವುದಿಲ್ಲ, ತನ್ನ ಪರಿವಾರದ ಎಲ್ಲಾ ಸದಸ್ಯರೊಂದಿಗೇ ಪ್ರಕಟಗೊಳ್ಳುತ್ತಾನೆ.  ಪರಿವಾರದ ಅತಿ ಮುಖ್ಯ ಹಾಗೂ ಪ್ರಧಾನ ಸೇವಕನಾಗಿ ವಾಯು ದೇವನ ಅವತಾರವಾಗುತ್ತದೆ.  ಸದಾ ಸರ್ವದಾ ಎಲ್ಲಾ ಕಡೆಯೂ ಪಸರಿಸಿರುವ ವಾಯುದೇವನು ಭಗವಂತನಿಗೆ ಅತ್ಯಂತ ಪ್ರಿಯನಾದವನು.  ವಾಯುವೆಂದರೆ ’ಪರಿಸರ’ವೆಂದರ್ಥ.  ಶ್ರೀ ಜಗನ್ನಾಥದಾಸರು ತಮ್ಮ ಒಂದು ಕೃತಿಯಲ್ಲಿ "ಪರಿಸರ ನೀನಿರೆ ಹರಿತಾನಿರುವನು, ಇರದಿರೆ ತಾನಿರನು" ಎಂದಿದ್ದಾರೆ.   ದ್ವಾಪರಯುಗದಲ್ಲಿ ಭಗವಂತ ಶ್ರೀಕೃಷ್ಣನಾಗಿ ಅವತರಿಸಿದಾಗ, ವಾಯುದೇವನು ಭೀಮಸೇನನಾಗಿ ಬಂದ.  ಭಗವಂತನ ಭೂಭಾರಹರಣ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದು ವಾಯುದೇವನ ಅವತಾರವಾದ ಭೀಮಸೇನನೇ ಎಂಬುದು ಜರಾಸಂಧ,   ಕಿರ್ಮೀರ, ಬಕ, ಕೀಚಕ ಮುಂದಾದವರ ಹತ್ಯೆಯಿಂದ ನಮಗೆ ತಿಳಿಯಲ್ಪಡುತ್ತದೆ.  ಜರಾಸಂಧನ ವಧೆಯ ನಂತರ ಹನ್ನೊಂದು ಅಕ್ಷೋಹಿಣೀ ಸೈನ್ಯವನ್ನು ಒಟ್ಟು ಸೇರಿಸಿಕೊಂಡು ಜರಾಸಂಧನ ಕಾರ್ಯವನ್ನು ಮುಂದುವರೆಸುವ ಇಚ್ಛೆಯಿದ್ದವನು ದುರ್ಯೋಧನ.  ಅವನ ಮತ್ತು ಅವನ ೯೯ ಜನ ತಮ್ಮಂದಿರನ್ನೂ ವಧಿಸಿ ಧರ್ಮ ರಕ್ಷಣೆಯ ಕಾರ್ಯದಲ್ಲಿ ಭಗವಂತನ ಜೊತೆಗಿರುತ್ತಾನೆ.  ಹರಿ-ವಾಯು ಯಾವಾಗಲೂ ಜೋಡಿಯಾಗಿಯೇ ಇರುತ್ತಾರೆ.

ವಾಯುದೇವನ ಅವತಾರವಾದ ಭೀಮಸೇನ ಅತ್ಯಂತ ಬಲಶಾಲಿಯಾಗಿದ್ದು, ಯುದ್ಧದಲ್ಲಾಗಲೀ, ಅಸುರರ ಹತ್ಯೆಯಲ್ಲಾಗಲೀ, ಅವನಿಗೆ ಯಾರ ಸಹಾಯ, ಯಾವ ಆಯುಧ, ರಥ, ಆನೆ ಇತ್ಯಾದಿಗಳ್ಯಾವುದರ ಅವಶ್ಯಕತೆಯೂ ಇಲ್ಲದಿದ್ದರೂ ಕೂಡ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಶ್ರೀಕೃಷ್ಣ ಪರಮಾತ್ಮ ಭೀಮಸೇನನಿಗೂ ಒಂದು ರಥ ಕೊಟ್ಟು, ತನ್ನ ಪ್ರೀತಿಯ ಪುತ್ರನಾದ ವಿಶೋಕನನ್ನು ಸಾರಥಿಯಾಗಿ ನೇಮಿಸಿರುತ್ತಾನೆ.  ಭೀಮಸೇನನನ್ನು ಕಂಡೊಡನೆ ಕೌರವರು ಆನೆಗಳನ್ನು ಮುಂದೆ ಕಳಿಸಿಬಿಟ್ಟು, ತಾವು ಹಿಂದುಳಿಯುತ್ತಿದ್ದರು.  ಭೀಮಸೇನ ರಥದಿಂದ ಕೆಳಗೆ ಧುಮುಕಿ ಆನೆಗಳೊಡನೆ ಸೆಣೆಸುತ್ತಿದ್ದ.  ಭೀಮಸೇನನ ಅಖಂಡ ಬಲದ ಮೇಲೆ ಅಭಿಮಾನವಿದ್ದರೂ ಕೂಡ ಶ್ರೀಕೃಷ್ಣ ಅವನಿಗೆ ರಥ ಮತ್ತು ಸಾರಥಿಯನ್ನು ನಿಯಮಿಸಿದ್ದನೆಂದರೆ, ಇದು ಭಗವಂತನಿಗೆ ವಾಯುದೇವನ ಮೇಲಿರುವ ಅಭಿಮಾನ ಮತ್ತು ಅಗಾಧ ನಂಬಿಕೆಯನ್ನು ಬಿಂಬಿಸುತ್ತದೆ.

ಪುರಾಣಗಳು ಭೀಮಸೇನನಲ್ಲಿದ್ದ ಹತ್ತು ಅಪೂರ್ವ ಗುಣಗಳನ್ನು ಹೀಗೆ ಉಲ್ಲೇಖಿಸಿವೆ :
ಭಕ್ತಿರ್ಜ್ಞಾನಂ ಸವೈರಾಗ್ಯಂ ಪ್ರಜ್ಞಾ ಮೇಧಾ ಧೃತಿಃ ಸ್ಥಿತಿಃ |
ಯೋಗಃ ಪ್ರಾಣೋ ಬಲಂ ಚೈವ ವೃಕೋದರ ಇತಿ ಸ್ಮೃತಃ ||
ಭಕ್ತಿ:   ಭಗವಂತನಲ್ಲಿ ಪೂರ್ಣಪ್ರಮಾಣದ ಭಕ್ತಿ
ಜ್ಞಾನ:  ಭಗವಂತ ದೊಡ್ಡವ ಎನ್ನುವ ಪೂರ್ಣ ಅರಿವು
ವೈರಾಗ್ಯ:  ಭಗವಂತನ ಮುಂದೆ ಎಲ್ಲವೂ ಸಣ್ಣ ವಸ್ತು ಎಂಬ ಪೂರ್ಣ ಅರಿವು
ಪ್ರಜ್ಞಾ:  ಯಾವ ಸಂದರ್ಭದಲ್ಲಿ ಏನು ಮಾಡಬೇಕೆಂಬ ತಿಳುವಳಿಗೆ
ಮೇಧಾ:  ಅತ್ಯದ್ಭುತವಾದ ಸ್ಮರಣಶಕ್ತಿ
ಧೃತಿ:  ಭಗವಂತನ ಹಿರಿಮೆಯ ಬಗ್ಗೆ, ತನ್ನ ಶಕ್ತಿಯ ಬಗ್ಗೆ, ವಿಶ್ವದ ಬಗ್ಗೆಯೂ ಆತ್ಮವಿಶ್ವಾಸ
ಸ್ಥಿತಿ:    ಅಚಲವಾದ ನಿಲುವು
ಯೋಗ:  ಜೀವನದ ದ್ವಂದ್ವಗಳನ್ನು ಸಮಾನ ದೃಷ್ಟಿಯಿಂದ, 
              ಸಮಚಿತ್ತತೆಯಿಂದ ನೋಡುವ ನಿರ್ಲಿಪ್ತ ನಿಲುವು
ಪ್ರಾಣ:  ನಿರಂತರ ಚಲನಶೀಲತೆ
ಬಲ:   ಆತ್ಮಬಲ, ಪರಿಪೂರ್ಣವಾದ ಸ್ವರೂಪ ಸಾಮರ್ಥ್ಯ. 
"ಭೀಮಸೇನ" - ಭೀಮ ಎಂದರೆ ಎಲ್ಲ ಅರಿವಿನ ಮೇರು (ಭೃತ+ಮಾನ = ಭೀಮ).  ಇನ ಎಂದರೆ ಸ್ವಾಮಿಯಾದ ಭತವಂತ.  ಅವನ ಜೊತೆಗಿರುವವನು ಸೇನ (ಸ+ಇನ = ಸೇನ).
ಮೇಲೆ ಕಾಣಿಸಿದ ಹತ್ತೂ ಗುಣಗಳೂ ವಾಯುತತ್ತ್ವದ ವಿಶೇಷಗಳು.  ಧರ್ಮರಾಜನು ಜನಿಸಿದ ನಂತರ ಕುಂತಿ ಎರಡನೆಯ ಮಗುವನ್ನು ಪಡೆಯಲು ಯಾವ ದೇವತೆಯನ್ನು ಪ್ರಾರ್ಥಿಸಿಕೊಳ್ಳಬೇಕೆಂದು ಚಿಂತಿಸುತ್ತಿದ್ದಳು.  ನಾರಾಯಣ ಆಗಲೇ ವ್ಯಾಸರೂಪನಾಗಿ, ಪಾಂಡುವಿಗೆ ತಂದೆಯಾಗಿದ್ದ ಮತ್ತು ಚತುರ್ಮುಖ ಬ್ರಹ್ಮನಿಗೆ ಭೂಮಿಯಲ್ಲಿ ಜನನವಿರಲಿಲ್ಲ.  ಇವರಿಬ್ಬರ ನಂತರದ ಹಿರಿಯ ದೇವತೆ ವಾಯುದೇವನಾಗಿರುವಾಗ, ಬಲವಂತನೂ ಆದ ವಾಯುದೇವರನ್ನು ಪ್ರಾರ್ಥಿಸಿ ಕುಂತಿ, ಭೀಮಸೇನನನ್ನು ಪಡೆದಳು.  ಭೀಮನ ಜನ್ಮವಾದ ಕೂಡಲೇ ಭೂಮಿಯಲ್ಲಿನ ಎಲ್ಲಾ ರಾಜರುಗಳೂ ಭಯಗೊಂಡರು ಮತ್ತು ದುಷ್ಟರಾಜರುಗಳ ಸಮಸ್ತ ಪ್ರಾಣಿಗಳೂ ಇನ್ನು ತಮ್ಮ ಯಜಮಾನನ ಕಥೆ ಮುಗಿಯಿತೆಂದು ಕಣ್ಣೀರು ಸುರಿಸಿದವಂತೆ.  ಅಶರೀರವಾಣಿಯೊಂದು ಜಗತ್ತಿನಲ್ಲೇ ಬಲಜ್ಯೇಷ್ಠನೇ ಕುಂತಿಗೆ ಮಗನಾಗಿ ಜನಿಸಿದ್ದಾನೆಂದು ನುಡಿಯಿತಂತೆ.  ತನ್ನ ಬಲವನ್ನೂ ಮಿಕ್ಕ ಎಲ್ಲಾ ಗುಣಲಕ್ಷಣಗಳನ್ನೂ ಹುಟ್ಟಿನಲ್ಲೇ ಪ್ರಕಟಪಡಿಸಿದ ದೇವತೆ ವಾಯುದೇವನಾಗಿದ್ದಾನೆ.  ಭೀಮಸೇನ ಪುಟ್ಟ ಮಗುವಾಗಿದ್ದಾಗ ಒಮ್ಮೆ ಕುಂತಿ ಮಗುವನ್ನು ಎತ್ತಿಕೊಂಡಿದ್ದಾಗ ಹುಲಿಯ ಗರ್ಜನೆ ಕೇಳಿ ಗಾಬರಿಯಲ್ಲಿ ಕೈಬಿಟ್ಟಳಂತೆ.  ಮಗು ಕೆಳಗೆ ಕಲ್ಲಿನ ಮೇಲೆ ಬಿದ್ದಾಗ, ಆ ಕಲ್ಲುಬಂಡೆ ಒಡೆದು ನುಚ್ಚುನೂರಾಗಿ ಮುಂದೆ ಅದು ’ಶತಶೃಂಗ’ ಎಂದು ಕರೆಸಿಕೊಂಡಿತು ಎಂಬ ಉಲ್ಲೇಖವಿದೆ.  ಇದು ಭೀಮನ ಅಸಾಮಾನ್ಯ ಬಲದ ಪ್ರಕಟಣೆಯಾಗಿತ್ತು.

ಭೀಮಸೇನನದು ’ಮೇರು’ ವ್ಯಕ್ತಿತ್ವ.  ಪರ್ವತಗಳ ಶಿರೋಮಣಿಯಾದ ಮೇರು ಪರ್ವತದಂತೆ ಅಚಲ, ಧೀರ ಮತ್ತು ವೀರ.  ಶ್ರೀ ತ್ಯಾಗರಾಜರು ಶ್ರೀರಾಮಚಂದ್ರನ ಕುರಿತು ಮಾಯಾಮಾಳವಗೌಳ ರಾಗದಲ್ಲಿ ಒಂದು  ವಿಳಂಬಕಾಲದ ಕೃತಿ ರಚಿಸಿದ್ದಾರೆ.   "ಮೇರು ಸಮಾನ ಧೀರ.. ವರದ".. ಎಂದು ಪ್ರಾರಂಭವಾಗುವ ಈ ಕೃತಿ ಭೀಮಸೇನನ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ.  ತ್ಯಾಗರಾಜರು ಮಾಡಿರುವ ಶ್ರೀರಾಮಚಂದ್ರನ ವರ್ಣನೆಯಲ್ಲಿ ನಾವು ಭೀಮಸೇನನನ್ನು ಕಾಣಬಹುದಾಗಿದೆ.  ಕೃತಿಯ ಅನುಪಲ್ಲವಿಯಲ್ಲಿ "ಸಾರಾಸಾರ... ನೀರದ ಕಾಂತಿನಿ ನೀ ಠೀವಿನಿ... ಮಹಾ ಮೇರು ಸಮಾನ ಧೀರ" ಎಂದಿದೆ.  ಇಲ್ಲಿ ಸಾರಾಸಾರ ಎಂಬ ವರ್ಣನೆಯಲ್ಲಿ ಸಾರದಲ್ಲೂ ಅಸಾರದಲ್ಲೂ ವ್ಯಾಪಿಸಿರುವ, ಪಸರಿಸಿರುವ ಎಂಬ ವಿಶೇಷ ಗುಣ ವಾಯುದೇವನ ವರ್ಣನೆಯೋ ಎಂಬಂತೆ ಇದೆ.  ಪರ್ವತಗಳಲ್ಲಿ ಅತಿಶಯವಾದುದು ಮೇರುಪರ್ವತ.  ಗಾಳಿ, ಮಳೆ, ಮೇಘಗಳಿಗೆ ಜಗ್ಗದೆ ನಿಶ್ಚಲವಾಗಿ ವೀರನೂ, ಧೀರನೂ, ಏಕಾಂಗಿಯೂ ಆಗಿ ನಿಂತಿರುವ ಮೇರುಪರ್ವತದಂತೆಯೇ, ಸಮಾನವಿಲ್ಲದವನು ವಾಯುದೇವನ ಅವತಾರನಾದ ಭೀಮಸೇನನು.  ಕೃತಿಯ ಚರಣದಲ್ಲಿ ತ್ಯಾಗರಾಜರು "ದಳಿತ ದುರ್ಮಾನವ" ಎಂದಿದ್ದಾರೆ.  ಅಂದರೆ ದುಷ್ಟರನ್ನು ದಮನ ಮಾಡಿದವನು ಎಂದು ಅರ್ಥ ಬರುತ್ತದೆ.  ಭೀಮಸೇನನ ಅವತಾರವೂ ದುಷ್ಟರನ್ನು ದಮಿಸಿ ಶ್ರೀಕೃಷ್ಣನ ಭೂಭಾರಹರಣ ಕಾರ್ಯದಲ್ಲಿ ನೆರವಾಗುವ ಉದ್ದೇಶವೇ ಆಗಿದೆಯಾದ್ದರಿಂದ, ಈ ಕೃತಿಯಲ್ಲಿ ಶ್ರೀರಾಮಚಂದ್ರನಿಗೆ ತಿಳಿಸಿರುವ ಗುಣವಿಶೇಷಣಗಳು ವಾಯುದೇವನಾದ ಭೀಮಸೇನನಿಗೂ ಅತ್ಯಂತ ಸೂಕ್ತವಾಗಿ ಹೊಂದಿಕೆಯಾಗಿದೆ. 
ಮುಂದೆ ತನ್ನ ಅಣ್ಣ-ತಮ್ಮಂದಿರು, ತಾಯಿ ಮತ್ತು ದ್ರೌಪದಿಯ ಸಂಪೂರ್ಣ ಜವಾಬ್ದಾರಿಯನ್ನು ಭೀಮಸೇನನೇ ನಿಭಾಯಿಸುವನೆಂಬ ಸೂಕ್ಷ್ಮತೆಗೆ ಬೆಂಬಲವಾಗಿ ಅನೇಕ ನಿದರ್ಶನಗಳೂ, ಸೂಚನೆಗಳೂ ಭೀಮಸೇನನ ಬಾಲ್ಯದಿಂದಲೇ ಸಿಕ್ಕುತ್ತಾ ಹೋಗುತ್ತವೆ.  ತುಂಬಾ ವಿಶೇಷವಾದ ಮತ್ತು ಉಲ್ಲೇಖವಾಗಿಲ್ಲದ ವಾಯುದೇವನ ಇನ್ನೊಂದು ಮುಖ್ಯ ಗುಣ ಲಕ್ಷಣವೆಂದರೆ ನಿಷ್ಠುರತೆ.  ಮುಂದೆ ಬ್ರಹ್ಮ ಪದವಿಗೆ ಬರುವ ವಾಯುದೇವನು ತುಂಬಾ ನಿಷ್ಠುರವಾದಿ.  ತಪ್ಪು ಯಾರೇ ಮಾಡಿದರೂ ಅದಕ್ಕೆ ಶಿಕ್ಷೆಯಾಗಲೇ ಬೇಕೆಂಬ ಅಭಿಪ್ರಾಯವನ್ನು ಖಂಡಿತವಾಗಿ ತಿಳಿಸಿಬಿಡುವವರು.  ಧರ್ಮರಾಜ ಪಗಡೆಯಾಟದಲ್ಲಿ ಸೋತು ಎಲ್ಲವನ್ನೂ ಕಳೆದುಕೊಂಡು ಅರಣ್ಯಕ್ಕೆ ಹೊರಡಲು ತಯಾರಾಗಿ ನಿಂತಾಗ ಭೀಮಸೇನ ಅತ್ಯುಗ್ರನಾಗಿ ದ್ರೌಪದಿಯನ್ನು ಅವಮಾನಿಸಿದ ದುರ್ಯೋಧನನ ತೊಡೆ ಮುರಿಯುವೆನೆಂದು ಪ್ರತಿಜ್ಞೆ ಮಾಡುತ್ತಾನೆ.  ಹಾಗೇ ಜೂಜಾಡಿದ ಧರ್ಮರಾಜನ ಕೈಗಳನ್ನು ಸುಟ್ಟು ಬಿಡಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಾನೆ.  ಅರ್ಜುನ ಹಿರಿಯಣ್ಣನಿಗೆ ಹಾಗೆ ಮಾಡಲಾಗದು ಎಂಬ ಮಾತು ತಿಳಿಸಿದಾಗ, ಭೀಮಸೇನ ಉತ್ತರವಾಗಿ ದೊಡ್ಡವರು ತಪ್ಪು ಮಾಡಿದಾಗ ಅದನ್ನು ಚಿಕ್ಕವರು ತಪ್ಪನ್ನು ತೋರಿಸಿಕೊಟ್ಟು ಅದಕ್ಕಾಗಿ ಶಿಕ್ಷೆಯನ್ನು ಅನುಭವಿಸಬೇಕೆಂಬ ಮಾತು ಆಡಿದರೂ ಸಾಕು, ಅದರಿಂದ ದೊಡ್ಡರ ಮನಸ್ಸಿಗೆ ಉಂಟಾಗುವ ಕ್ಲೇಶದಿಂದಲೇ ಪಾಪ ಪರಿಹಾರವಾಗಿ ಬಿಡುತ್ತದೆ, ಶಿಕ್ಷೆ ಅನುಭವಿಸಬೇಕಾಗಿಲ್ಲ ಎಂದು ತಿಳಿಸಿ ಹೇಳುತ್ತಾನೆ.

ಮಹಾಭಾರತದ ಉದ್ದಕ್ಕೂ ಭೀಮಸೇನ ತನ್ನ ಮೂಲ ಸ್ವರೂಪವಾದ ವಾಯುವಿನ ತತ್ತ್ವಗಳನ್ನು ಸದಾ ಪ್ರಕಟಪಡಿಸುತ್ತಲೇ ಇರುತ್ತಾನೆ.  ಚಿಕ್ಕ ವಯಸ್ಸಿನಿಂದಲೂ ದುರ್ಯೋಧನನ ಎಲ್ಲಾ ಹಿಂಸೆಗಳನ್ನೂ ಮೆಟ್ಟುತ್ತಲೇ ಇದ್ದ.  ವಿಷವನ್ನೂ ಕುಡಿದು ಜೀರ್ಣಿಸಿಕೊಂಡವನು.  ಎಲ್ಲಕ್ಕಿಂತ ಮೊದಲು ಭಗವಂತನಲ್ಲಿನ ಭಕ್ತಿ ಮತ್ತು ನಿಷ್ಠೆ ಪ್ರಮಾಣದಲ್ಲಿ ಪ್ರದರ್ಶಿಸಿದ.  ಶ್ರೀಕೃಷ್ಣನ ಎಲ್ಲಾ ಆಜ್ಞೆಗಳನ್ನೂ ಮರು ಪ್ರಶ್ನಿಸದೆ, ಸಂದೇಹಕ್ಕೆ ಆಸ್ಪದವೇ ಇಲ್ಲದಂತೆ ಶಿರಸಾವಹಿಸಿ ಕಾರ್ಯ ರೂಪಕ್ಕೆ ತರುವಂತಹವನಾಗಿರುತ್ತಾನೆ. ಭಗವಂತನ ಪರಿಪೂರ್ಣ ಜ್ಞಾನವನ್ನು ಹೊಂದಿದವನಾಗಿ,  ಎಲ್ಲಕ್ಕಿಂತ, ಎಲ್ಲರಿಗಿಂತ ಭಗವಂತ ದೊಡ್ಡವನೆಂಬ ಅರಿವು, ಭಗವಂತನ ಎದುರಿಗೆ ಮಿಕ್ಕವೆಲ್ಲವೂ ತೃಣ ಸಮಾನವೆಂಬ ವೈರಾಗ್ಯ ಹೊಂದಿದವನಾಗಿರುತ್ತಾನೆ. 

ಭೀಮಸೇನನ ವ್ಯಕ್ತಿತ್ವವನ್ನು ನಾವು ಸ್ವಲ್ಪ ಆಳವಾಗಿ ಚಿಂತಿಸಿದಾಗ, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅನೇಕ ವಿಚಾರಗಳನ್ನು ಕಾಣಬಹುದಾಗಿದೆ.  ಇವತ್ತಿನ ಈ ನಮ್ಮ ಜೀವನಕ್ಕೂ ಭೀಮಸೇನ ಆದರ್ಶವಾಗುತ್ತಾನೆ.  ಆಧ್ಯಾತ್ಮ ಹಾದಿಯಲ್ಲಿ ನಡೆಯಬೇಕೆಂದವರಿಗೆ, ಭಗವಂತನ ವಿಚಾರಗಳನ್ನು ಅಧ್ಯಯನ ನಡೆಸುವುದು, ಹರಿಯ ಗುಣಗಳನ್ನು ಶ್ರವಣ ಮಾಡುವುದು, ಸದಾ ನಾಮ ಜಪ ಮಾಡುವುದು, ವಿಚಾರ ವಿನಿಮಯ ಮಾಡುವುದು ಮುಂತಾದವುಗಳಲ್ಲಿ ಮಾತ್ರವೇ ಮನಸ್ಸು ನೆಲೆಗೊಳಿಸಬೇಕು, ಅದೊಂದೇ ಸ್ಥಿರ ಮತ್ತು ಬಾಕಿಯದೆಲ್ಲಾ ಅಸ್ಥಿರವೆಂಬ ಅರಿವು ಮೂಡಿಸಿಕೊಳ್ಳಲು ಭೀಮಸೇನ ಮಾದರಿಯಾಗುತ್ತಾನೆ.  ನಮ್ಮ ನಂಬಿಕೆ, ವಿಶ್ವಾಸ ಅಚಲವಾಗಿರಬೇಕೆಂಬ ನೀತಿ ತಿಳಿಯಬಹುದಾಗಿದೆ.  ಯಾವುದೇ ಕಾರ್ಯವನ್ನು ಮಾಡುವಾಗಲೂ ಏಕಚಿತ್ತದಿಂದ, ಅಚಲ ಮನಸ್ಸಿನಿಂದ ಮಾಡಬೇಕು, ಚಂಚಲತೆ ಇರಬಾರದೆಂಬ ಪಾಠ ಕಲಿಯಬಹುದಾಗಿದೆ.  ಅರಗಿನ ಮನೆಯಲ್ಲಿನ ಅಗ್ನಿಯ ಪ್ರಸಂಗದಲ್ಲಿ ಭೀಮಸೇನನ ಸಮಯ ಪ್ರಜ್ಞೆ, ಬಲ ಪ್ರದರ್ಶನ ಸಾಬೀತಾಗಿದೆ.  ತಾನೊಬ್ಬನೇ ತನ್ನ ಅಣ್ಣ, ಮೂವರು ತಮ್ಮಂದಿರು ಮತ್ತು ತಾಯಿಯನ್ನು ಹೊತ್ತುಕೊಂಡು ಹೋಗಿ ಕಾಪಾಡುತ್ತಾನೆ.  ಇಲ್ಲಿ ಭೀಮಸೇನನ ಶೌರ್ಯ ಹಾಗೂ ಬಲದ ಜೊತೆಗೆ ಅವನ ’ಪ್ರಜ್ಞಾ’ ಗುಣ ವಿಶೇಷ ಕೂಡ ಪ್ರಕಟವಾಗಿದೆ. ಅಂದರೆ ಯಾವ ಸಮಯದಲ್ಲಿ ಏನು ಮಾಡಬೇಕೆಂಬ ಪ್ರಜ್ಞೆಯು ಪ್ರತಿಬಿಂಬಿಸಲ್ಪಟ್ಟಿದೆ.

ಭೀಮಸೇನನ ನಿರಂತರ ಚಲನಶೀಲತೆಯ ಗುಣ ವಾಯು ತತ್ತ್ವದ ಮುಖ್ಯಲಕ್ಷಣ.  ಇಡೀ ಬ್ರಹ್ಮಾಂಡದಲ್ಲೇ ಪಸರಿಸಿರುವ ವಾಯು - ’ಪರಿಸರ’ ಸದಾ ಚಲನಶೀಲತೆಯಿಂದ ಕೂಡಿದೆ.  ನಿಂತಲ್ಲಿ ನಿಲ್ಲದೆ ಚಲಿಸುತ್ತಿರುವುದು ಬೆಳವಣಿಗೆಯ ಮತ್ತು ವ್ಯಾಪ್ತಿಯ ವಿಸ್ತಾರದ ಅಂಶವನ್ನು ತೋರುತ್ತದೆ.  ನಮ್ಮ ಮನಸ್ಸೂ, ಬುದ್ಧಿಯೂ ಈ ತತ್ತ್ವದೆಡೆಗೆ ಆಕರ್ಷಣೆಗೊಳಿಸಿಕೊಂಡಲ್ಲಿ, ನಮ್ಮೊಳಗೇ ಹುದುಗಿರುವ ಕ್ರಿಯಾಶೀಲತೆಗೆ ಚಾಲನೆ ಕೊಟ್ಟಂತೆ ಆಗುತ್ತದೆ.  ಸದಾ ನಮ್ಮ ಜ್ಞಾನವನ್ನು ವಿಸ್ತರಿಸುವ, ವಿಸ್ತಾರಗೊಳಿಸಿಕೊಳ್ಳುವ ಹುನ್ನಾರದಲ್ಲಿ ಮನಸ್ಸನ್ನು ಹುದುಗಿಸಿಕೊಂಡಾಗ ಪರಿಸರದೆಲ್ಲೆಡೆ ನಿತ್ಯ ನೂತನವಾದ ಚೈತನ್ಯ ಕಂಡು ಬರುತ್ತದೆ.  ನಮ್ಮೊಳಗಿನ ಪ್ರಾಣಶಕ್ತಿಗೆ ಪರಿಸರದಲ್ಲಿನ ಚೈತನ್ಯ ಕೂಡಿಕೊಂಡಾಗ ಬುದ್ಧಿಯ ವಿಕಸನವಾಗುತ್ತದೆ.

ವಾಯುತತ್ತ್ವದ ಗುಣಲಕ್ಷಣಗಳಾದ ’ಯೋಗ’ ಮತ್ತು ’ಧ್ರುತಿ’ಯ ವಿಶೇಷಣಗಳನ್ನು ನಮ್ಮ ಬದುಕಿಗೆ ಸಮನ್ವಯ ಮಾಡಿಕೊಳ್ಳಬೇಕೆಂದಾಗ ನಮ್ಮ ಜೀವನದಲ್ಲಿ ಪ್ರಾಕೃತಿಕ ಸಂಸಾರದ ಸಾಗರದಲ್ಲಿ ದಿನದಿನವೂ ಎದುರಾಗುವ ಏರಿಳಿತಗಳನ್ನು ಸಮಾನ ಚಿತ್ತದಿಂದ ಸ್ವೀಕರಿಸುವುದು ಎಂದರ್ಥವಾಗುತ್ತದೆ.  ಸಂಸಾರವೆಂಬ ಭವಸಾಗರದಲ್ಲಿ ಸಿಲುಕಿದಾಗಲೇ ನಮ್ಮ ಚಿತ್ತಶಾಂತಿಯನ್ನು ಕಾಪಾಡಿಕೊಳ್ಳಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿರುತ್ತೇವೆ.  ಇಂತಹ ಸಂದರ್ಭಗಳನ್ನು ಪ್ರತಿ ಹಂತದಲ್ಲೂ ದಾಟಿಕೊಂಡು ಮುಂದೆ ನಡೆಯಲೇಬೇಕೆಂಬ ಕಡ್ಡಾಯವಿರುವಾಗ ಮನಸ್ಥಿತಿಯನ್ನು ’ಯೋಗ’ ಲಕ್ಷಣದಲ್ಲಿ ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ.  ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ನಿರ್ಲಿಪ್ತತೆಯ ನಡವಳಿಕೆಯಿಂದ ವರ್ತಿಸುವ ಭೀಮಸೇನನ ವ್ಯಕ್ತಿತ್ವ ನಮ್ಮನ್ನು ಕಂಗೆಡದಂತೆ ಹುರಿದುಂಬಿಸುತ್ತದೆ.  ’ಧ್ರುತಿ’ ಎಂದರೆ ಭಗವಂತನೆಂಬ ಅಗಾಧ ಶಕ್ತಿಯ ಅರಿವು, ನಮ್ಮೊಳಗಿನ ಚೈತನ್ಯವಾಗಿರುವ ಆ ಶಕ್ತಿಯಿಲ್ಲದೇ ನಾವೇನೂ ಅಲ್ಲವೆಂಬ ನಂಬಿಕೆ ಮತ್ತು ಭಗವಂತನ ಸೃಷ್ಟಿಯನ್ನು ಗೌರವಿಸುವುದು.

ವಾಯು ತತ್ತ್ವದ ೧೦ನೆಯ ಲಕ್ಷಣ ’ಬಲ’.  ಭೀಮಸೇನನ ಬಲವೆಂದರೆ ತನ್ನದೇ ಆತ್ಮಶಕ್ತಿ ಮತ್ತು ಸಾಮರ್ಥ್ಯ.  ಭೀಮಸೇನ ವಾಯುದೇವರ ಅವತಾರವಾದ್ದರಿಂದ ಅವನಿಗೆ ತನ್ನ ಸ್ವರೂಪದ ಅರಿವು ತಿಳಿದಿತ್ತು.  ಆದರೆ ನಾವು ನಮ್ಮ ಕರ್ಮಗಳ ಫಲದಿಂದ ಮತ್ತೆ ಮತ್ತೆ ಜನಿಸಿ ಬಂದಿರುವ, ಅಧ್ಯಾತ್ಮದ ಹಾದಿಯಲ್ಲಿ ನಡೆಯಬೇಕೆಂಬ ಇಚ್ಛೆಯುಳ್ಳ ಸಾಮಾನ್ಯ ಮಾನವರಾದ  ನಮಗೆ ನಮ್ಮ ಸ್ವರೂಪ ತಿಳಿದಿಲ್ಲ.  ಆದರೆ ಎಲ್ಲಾ ಜೀವಿಗಳಲ್ಲೂ ತಮ್ಮದೇ ಆದ ಅಂತರ್ಶಕ್ತಿ, ಆತ್ಮಬಲ ಎನ್ನುವುದು ಇದ್ದೇ ಇದೆ.  ಅದನ್ನು ಜತನದಿಂದ ಪೋಷಿಸಿ, ಸರಿಯಾದ ಪ್ರೇರಣೆಗಳಿಗೆ ಅರಳುವಂತಹ ಅಭ್ಯಾಸ ಮಾಡಿಸಿದಾಗ ಅದು ವೃದ್ಧಿಯಾಗುತ್ತದೆ ಮತ್ತು ಅಗಾಧವಾಗಿ ಬೆಳೆಯುತ್ತದೆ.  ತನ್ನಲ್ಲಿ ನಂಬಿಕೆಯೆಂಬ ಪ್ರಚಂಡ ವಿಶ್ವಾಸವಿದ್ದಾಗ ಬದುಕನ್ನು ಎದುರಿಸುವ ತಾಕತ್ತು ಬರುತ್ತದೆ.  ಈ ಅಗಾಧವಾದ ನಂಬಿಕೆಯು ಪರಿಸ್ಥಿತಿಗಳನ್ನು ನಿಭಾಯಿಸುವಾಗ ಸೋಲುವ ಭಯದಿಂದ ಹಿಮ್ಮೆಟ್ಟದಂತೆ ತಡೆಯುತ್ತದೆ.  ಸೋಲು ಎಂಬ ಪದದ ಪರಿಚಯವೇ ಇಲ್ಲದ ವ್ಯಕ್ತಿತ್ವ ಭೀಮಸೇನನದು.  ಯಾವುದೇ ಕಾರ್ಯವನ್ನಾಗಲೀ ಮಾಡಬಲ್ಲೆನೆಂಬ ಒಂದು ಛಲ, ಜಯಿಸಬಲ್ಲೆನೆಂಬ ಧೈರ್ಯ ನಮಗೆ ಭೀಮಸೇನ ಕೊಡುತ್ತಾನೆ.  ಭೀಮಸೇನನನ್ನು ನೆನೆದಾಗ ಉನ್ನತಮಟ್ಟದ ಧನಾತ್ಮಕ ಕಿರಣಗಳು ವಾಯು ತತ್ತ್ವದ ಪ್ರಚಂಡ ಶಕ್ತಿಯ ಆವಾಹನೆ ನಮ್ಮೊಳಗೆ ಆಗುತ್ತದೆ.  ತಲೆಯೆತ್ತಿ ನಿಲ್ಲುವ, ಹೋರಾಡುವ ಬಲ ಬರುತ್ತದೆ.

ವಿಷಯಾಧಾರ : ಶ್ರೀ ಬನ್ನಂಜೆ ಗೋವಿಂದಾಚಾರ್ಯರ "ಭೀಮಸೇನ" ಪುಸ್ತಕ
ಚಿತ್ರಕೃಪೆ : ಅಂತರ್ಜಾಲ


Tuesday, April 9, 2013

ಎಳ್ಳುಕಾಳಿನ ಭಕುತಿ..


ಎಳ್ಳುಕಾಳಿನಷ್ಟು ಭಕುತಿ ಎನ್ನೊಳಗಿಲ್ಲವಯ್ಯ |
ಬೆಳ್ಳಕ್ಕಿಯಂತೆ ನಿನ್ನ ಧ್ಯಾನ ಮಾಡುವೆನಯ್ಯ ||

ಗಂಡುಮುಳುಗ ಹಕ್ಕಿಯಂತೆ ನೀರ ಕಂಡ ಕಡೆಗೆ ಮುಳುಗಿ
ಮಂಡೆಶೂಲೆಯಲ್ಲದೆ ಗತಿಯು ಇಲ್ಲ |
ಮಂಡೂಕನಂದದಿ ಕೆರೆಯ ದಂಡೆಯ ಮೇಲೆ ಕುಳಿತು
ಮಂಡೆಮುಸುಕನಿಕ್ಕಿ ಮಂತ್ರ ಜಪಿಸುವೆನಯ್ಯ ||

ಗಾಣದೆತ್ತಿನಂತೆ ಕಣ್ಣ ಕಟ್ಟಿ ಪ್ರದಕ್ಷಿಣೆಯ ಮಾಡಿ
ಕಾಣದೆ ನಾ ತಿರುಗಿದೆ ಕಂಡುದುದಿಲ್ಲ |
ಮಾಣಿಕ್ಯದ ರಾಶಿ ಅಡಿಗೆ ಕಂಗಳಯ್ಯನು ಪೋಗಿ
ಆಣಿಕಾರಿಗೆ ಮಾಡಿದಂಥ ಈ ಕುಯುಕುತಿ ||

ಇಕ್ಕಳದ ಕೈಯ ಪಿಡಿದುಕೊಂಡು ಕಾದ ಕಬ್ಬಿಣದಂತೆ
ಸಿಕ್ಕಿಸಿಕೊಂಡಲ್ಲದೆ ಗತಿಯು ಇಲ್ಲ |
ಪೊಕ್ಕಳುಪೂವಿನ ಶ್ರೀಪುರಂದರವಿಠಲನೆ
ಮಕ್ಕಳಾಟಿಕೆಯ ಬಿಡೊ ರಕ್ಷಿಸೊ ಎನ್ನೊಡೆಯ ||

ಶ್ರೀ ಪುರಂದರ ದಾಸರು ತಮ್ಮ ಈ ಪದದಲ್ಲಿ ನಮ್ಮಂತಹ ಸಾಮಾನ್ಯ ಜನರ ಮನಸ್ಥಿತಿಯನ್ನು ಅದೆಷ್ಟು ಯಥಾವತ್ತಾದ ಚಿತ್ರಣ ಮಾಡಿದ್ದಾರೆ.  ಆಡು ಮಾತಿನಲ್ಲಿ ಉಪಯೋಗಿಸುವ ಎಲ್ಲಾ ಶಬ್ದಗಳಿಗೂ ಒಂದು ಒಳ ಆಧ್ಯಾತ್ಮ ತತ್ವವನ್ನು ಬೆರೆಸಿ ಅರ್ಥಪೂರ್ಣವಾಗಿ ನುಡಿದಿದ್ದಾರೆ.  ದಿನ ನಿತ್ಯ ನಮ್ಮ ಅಡುಗೆಯಲ್ಲಿ ಬಳಸುವ ಪದಾರ್ಥವಾದ ಎಳ್ಳುಕಾಳನ್ನು ಸಾಂಕೇತಿಕವಾಗಿಟ್ಟುಕೊಂಡು ಪ್ರಾರಂಭಿಸಿದ್ದಾರೆ.  ಎಳ್ಳು ನಮ್ಮ ಅಡುಗೆ ಮನೆಯಲ್ಲೂ ಹಾಗೂ ಆಚರಣೆಗಳಲ್ಲೂ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ.  ಪ್ರಮಾಣದಲ್ಲಿ ಅತ್ಯಂತ ಸಣ್ಣದಾದ ಎಳ್ಳು ಕಾಳಿನಷ್ಟೂ ಭಕ್ತಿ ನನ್ನ ಮನಸ್ಸಿನಲ್ಲಿ ಇಲ್ಲವೆಂದು ಭಗವಂತನಲ್ಲಿ ಅಂತರಂಗ ತೆರೆದು ನಿವೇದಿಸಿಕೊಂಡಿದ್ದಾರೆ.  ಬಕ ಪಕ್ಷಿ (ಬೆಳ್ಳಕ್ಕಿ) ನೀರಿನಲ್ಲಿ ಒಂದು ಕಾಲಲ್ಲಿ ನಿಂತು, ತಲೆ ತಗ್ಗಿಸಿಕೊಂಡು, ಕಣ್ಣು ಮುಚ್ಚಿಕೊಂಡು ಅಲುಗಾಡದೆ ಗಂಟೆಗಟ್ಟಲೆ ನಿಂತಿರುತ್ತದೆ.  ನೋಡಿದವರಿಗೆ ಅದು ಧ್ಯಾನದಲ್ಲಿ ತಲ್ಲೀನವಾಗಿದೆಯೆಂಬ ನಂಬಿಕೆ ಬರಬೇಕು ಹಾಗೆ ನಿಂತಿರುತ್ತದೆ.  ಆದರೆ ಅದರ ಗಮನವೆಲ್ಲಾ ಭಗವಂತನ ಧ್ಯಾನದಲ್ಲಿ ಲೀನವಾಗಿರೋಲ್ಲ.  ಕೆಳಗೆ ನೀರಿನಲ್ಲಿ ಮೀನು ಸಿಗುವುದೋ ಎಂಬ ಧ್ಯಾನದಲ್ಲಿ ಸಿಲುಕಿರುತ್ತದೆ, ಸಿಕ್ಕ ಕೂಡಲೆ ಅದರ ಧ್ಯಾನ, ತಪ, ಒಂಟಿಕಾಲಿನಲ್ಲಿ ನಿಂತಿದ್ದ ಭಂಗಿ ಎಲ್ಲವೂ ಗಾಳಿಯಲ್ಲಿ ತೂರಿಹೋಗಿ, ಕೊಕ್ಕಿನಲ್ಲಿ ಮೀನು ಸಿಕ್ಕಿಕೊಂಡಿರುತ್ತದೆ.  ಈ ಹಾಡಿನ ಪ್ರಾರಂಭದಲ್ಲೇ ದಾಸರು ಈ ಬಕಧ್ಯಾನದ ವಿಷಯ ತಿಳಿಸಿ ನಮ್ಮ ಧ್ಯಾನದ ಪರಿಯನ್ನು ಬಹಿರಂಗಗೊಳಿಸುತ್ತಾರೆ.  ಹೀಗೆ ದಾಸರು ಈ ಪದದಲ್ಲಿ ವಿವಿಧ ಉದಾಹರಣೆಗಳನ್ನು ಕೊಟ್ಟು ನಮ್ಮ ಡಂಭಕತನದ ಭಕ್ತಿಯನ್ನು ಟೀಕಿಸುತ್ತಾರೆ.

ಗಂಡುಮುಳುಗ ಹಕ್ಕಿಯೆಂದು ದಾಸರು ಉಲ್ಲೇಖಿಸಿರುವುದು ದಿನದಲ್ಲಿ ೧೦೦ ಬಾರಿ ಸುಮ್ಮನೆ ನೀರಿನಲ್ಲಿ ತಲೆ ಮುಳುಗಿಸಿ ಮೇಲೇಳುವ ಹಕ್ಕಿಯ ವಿಷಯ.  ಅಂದರೆ ಹಕ್ಕಿ ಯಾವ ಪುಣ್ಯ ಸಂಪಾದನೆಗಾಗಿಯೂ ನೀರಿನಲ್ಲಿ ಮುಳುಗುವುದಿಲ್ಲ, ಅದು ತನ್ನ ಆಹಾರವಾದ ಹುಳು, ಹುಪ್ಪಟೆಗಳನ್ನು ಕಂಡೊಡನೆ ನೀರಿನಲ್ಲಿ ತಲೆ ಮುಳುಗಿಸಿ, ಕೊಕ್ಕಿನಲ್ಲಿ ಹಿಡಿದುಕೊಂಡು ಒಂದೇ ಕ್ಷಣದಲ್ಲಿ ಮೇಲೆ ಬಂದುಬಿಡುತ್ತದೆ.  ಅದಕ್ಕೆ ತಾನು ಮುಳುಗಿ ಏಳುವ ನೀರು ಯಾವ ನದಿಯಾದರೇನು ಯಾವ ಸಮುದ್ರವಾದರೇನೂ, ಎಂತಹ ವ್ಯತ್ಯಾಸವೂ ಇಲ್ಲ.  ಹಾಗೇ ನಾವೂ ಕೂಡ ಕಂಡ ಕಂಡ ನದಿಗಳಲ್ಲೆಲ್ಲಾ ಮುಳುಗೆದ್ದು, ಸಮುದ್ರ ಸ್ನಾನ ಮಾಡಿ, ಪರಿಚಯವಿರುವ ಎಲ್ಲರಲ್ಲಿಯೂ ನಾನು ಗಂಗಾಸ್ನಾನ ಮಾಡಿದೆ, ತುಂಗಾಸ್ನಾನ ಮಾಡಿದೆ ಎಂದು ಡಂಗುರವನ್ನು ಸಾರುತ್ತೇವೆ.  ಆದರೆ ಮನದಲ್ಲಿ ಎಳ್ಳುಕಾಳಿನಷ್ಟೂ ಭಕ್ತಿಯಿಲ್ಲದಿರುವಾಗ, ಯಾವ ನದಿಯಲ್ಲಿ ಮುಳುಗಿದರೂ, ಸಮುದ್ರ ಸ್ನಾನ ಮಾಡಿದರೂ ನಮಗೆ ಪುಣ್ಯ ಲಭಿಸುವುದಿಲ್ಲ ಬದಲಿಗೆ ನೀರಿನಲ್ಲಿ ಮುಳುಮುಳುಗೆದ್ದ ಕಾರಣ ತಲೆನೋವು ಅಂಟಿಕೊಳ್ಳುತ್ತದೆ ಅಷ್ಟೆ.  ಕೆರೆಯ ದಂಡೆಯ ಮೇಲೆಯೇ ಕುಳಿತ ಮಂಡೂಕ ಸದಾ ತನ್ನ ವಟವಟಗುಟ್ಟುವ ಅಭ್ಯಾಸದಂತೆ, ನಾವು ಕೂಡ ದಂಡೆಯ ಮೇಲೆ ಕುಳಿತು ಯಾರಿಗೂ ತಿಳಿಯಬಾರದೆಂದು ಮುಸುಕು ಹೊದ್ದು, ಬೆರೆಳೆಣಿಸುತ್ತಾ ಜಪವನ್ನು ಮಾಡಿದರೆ, ಎಳ್ಳಷ್ಟೂ ಪುಣ್ಯ ದೊರಕುವುದಿಲ್ಲ ಎಂಬ ಅರ್ಥವಾಗುತ್ತದೆ.

ಎರಡನೆಯ ಚರಣದಲ್ಲಿ ದಾಸರು ನಮ್ಮನ್ನು ಗಾಣದೆತ್ತಿಗೆ ಹೋಲಿಕೆ ಕೊಟ್ಟಿದ್ದಾರೆ.  ಹಿಂದಿನ ಕಾಲದಲ್ಲಿ ಎಣ್ಣೆ ಬೇಕೆಂದರೆ ಗಾಣದವರ ಮನೆಗೇ ಹೋಗಬೇಕಿತ್ತು.  ಅಲ್ಲಿ ಕಾಳುಗಳನ್ನು ಹಾಕಿ ಒಂದು ಗಾಣ ಕಟ್ಟಿ, ಆ ಗಾಣಕ್ಕೆ ಎತ್ತು ಕಟ್ಟಿಬಿಡುತ್ತಿದ್ದರು.  ಕಣ್ಣುಗಳನ್ನು ತೆರೆದು ಸುತ್ತಿದರೆ, ತಲೆ ಸುತ್ತಬಹುದೆಂದು, ಆ ಎತ್ತಿನ ಕಣ್ಣು ಕಟ್ಟಿಬಿಡುತ್ತಿದ್ದರು.  ಅದು ತನ್ನನ್ನು ಕಟ್ಟಿದ್ದ ಗಾಣಕ್ಕೇ ಸುತ್ತುತ್ತಾ ಪ್ರದಕ್ಷಿಣೆ ಬರುತ್ತಿತ್ತು, ಆದರೆ ಮನದಲ್ಲಿ ತಾನೆಲ್ಲೋ ತುಂಬಾ ದೂರ ಪಯಣಿಸಿದ್ದೇನೆಂಬ ಆಲೋಚನೆ ಇರುತ್ತಿತ್ತು.  ಹಾಗೇ ನಾವು ಕೂಡ ಮನದಲ್ಲಿ ಎಳ್ಳಷ್ಟೂ ಭಕ್ತಿಯಿಲ್ಲದೆ, ಸುಮ್ಮನೆ ತೀರ್ಥಕ್ಷೇತ್ರಗಳನ್ನು ಸುತ್ತುತ್ತಾ, ಭಗವಂತನನ್ನು ಕಂಡೆವೇನೋ ಎಂದು ಕೊಂಡರೆ ಏನೂ ಪ್ರಯೋಜನವಿಲ್ಲ.  ಅಂತರಂಗದಾಳದಲ್ಲೇ ಇರುವ ನಮ್ಮೊಡೆಯನ ಅರಿವು, ನಮಗೆ ಆಗಬೇಕೇ ಹೊರತು, ಬಾಹ್ಯ ಮನಸ್ಸಿನ ಪದರದಲ್ಲೇ ಉಳಿದು, ಸುಖಾ ಸುಮ್ಮನೆ ಪುಣ್ಯಕ್ಷೇತ್ರಗಳನ್ನು ಸುತ್ತುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ.  ತನ್ನ ತಪೋಬಲದಿಂದ, ಜ್ಞಾನದ ಕಣ್ಣನ್ನು ಕಾಲಿನಲ್ಲಿ ಪಡೆದಿದ್ದ ಭೃಗು ಮಹರ್ಷಿಗಳು ಅಹಂಕಾರಕ್ಕೆ ಜಾಗ ಕೊಟ್ಟರು.  ಸಾಕ್ಷಾತ್ ವೈಕುಂಠಕ್ಕೇ ತೆರಳಿದರೂ ಕೂಡ, ಕಣ್ಣ ಮುಂದೆಯೇ ಮಾಣಿಕ್ಯದ ರಾಶಿಯೇ ಇದ್ದರೂ ಕೂಡ, ಅದನ್ನು ಅರಿತುಕೊಳ್ಳದೇ ಭಗವಂತನ ವಕ್ಷಸ್ಥಲಕ್ಕೇ ಕಾಲಿನಿಂದ ಒದ್ದು ಅಹಂಕಾರ ಪ್ರದರ್ಶನ ಮಾಡಿದರು.  ಶ್ರೀಹರಿ ಮುಗುಳ್ನಗುತ್ತಾ ಅವರ ಕಾಲಿನಲ್ಲಿ ಒಂದು ಆಣಿ ಇದೆಯೇನೋ ಎಂಬಂತೆ ಪಾದ ಒತ್ತುತ್ತಾ, ಜ್ಞಾನದ ಕಣ್ಣನ್ನು ಕಿತ್ತುಬಿಟ್ಟ.  ಅಹಂಕಾರ ಇಳಿಯಿತು.  ಆದರೆ ಮಾಣಿಕ್ಯದ ರಾಶಿಗೆ ಹೋಗಿ, ಕಾಲಿನ ಆಣಿಗೆ ಉಪಚಾರ ಮಾಡಿಸಿಕೊಂಡಂತಹುದು ಮೂರ್ಖತನವೆಂಬುದು ದಾಸರ ಅಭಿಪ್ರಾಯ.

ಕಬ್ಬಿಣವನ್ನು ಬಗ್ಗಿಸಬೇಕಾದರೆ ಸುಲಭವಲ್ಲ.  ಅದನ್ನು ಚೆನ್ನಾಗಿ ಕಾಯಿಸಿ, ಕಾಯಿಸಿ ಅದು ಸಿಕ್ಕಾಪಟ್ಟೆ ಬಿಸಿಯಾಗಿದ್ದಾಗಲೇ ಬಡಿದು ನಮಗೆ ಬೇಕಾದಂತೆ ಬಗ್ಗಿಸಬೇಕು.  ಆದರೆ ಅತ್ಯಂತ ತೀಕ್ಷ್ಣ ಉಷ್ಣತೆ ಇರುವುದನ್ನು ಹಿಡಿದುಕೊಳ್ಳಲು ತುಂಬಾ ಬಲಿಷ್ಠವಾದ ಇಕ್ಕಳವೇ ಬೇಕು.  ಹಾಗೆ ಅನೇಕ ವಿಷಯಾಸಕ್ತಿಗಳಲ್ಲಿ ಮುಳುಗಿ ಮುಳುಗಿ ತೊಂದರೆ ಕೊಡುವ ಈ ಮನಸ್ಸನ್ನು ಕಬ್ಬಿಣದಂತೆ ಚೆನ್ನಾಗಿ ಕಾಯಿಸಿ, ಬಡಿದು ಒಂದು ಆಕಾರ ಕೊಡು ಎಂದು ಭಗವಂತನನ್ನು ಪ್ರಾರ್ಥಿಸುತ್ತಾರೆ ದಾಸರು.  ಆದರೆ ಕಬ್ಬಿಣ ಕಾಯಿಸಿದರೆ ಸಾಲದು, ಅದನ್ನು ಭದ್ರವಾಗಿ ಸಿಕ್ಕಿಸಿಕೊಂಡು ಬಿಡುವ ಇಕ್ಕಳದ ಕೈಯಿಲ್ಲದೆ ಯಾವ ಪ್ರಯೋಜನವೂ ಇಲ್ಲ.  ಆದ್ದರಿಂದ ಬೇರೆ ಗತಿಯೇ ಇಲ್ಲವೆಂದು ನಿನ್ನತ್ತ ಶರಣಾಗಿ ಬಂದಿರುವ ಈ ಕಬ್ಬಿಣವನ್ನು ಕಾಯಿಸಿ, ಪಿಡಿವ ಇಕ್ಕಳ ನೀನಾಗಿ, ನನ್ನನ್ನು ಸಿಕ್ಕಿಸಿಕೊಂಡು, ರಕ್ಷಿಸು ಎನ್ನುತ್ತಾರೆ.

ಕೊನೆಯ ಎರಡು ಸಾಲಿನಲ್ಲಿ ಶೀ ಪುರಂದರದಾಸರು, ಭಗವಂತನನ್ನು ಲೀಲಾಮಯನೆಂದೂ, ಬ್ರಹ್ಮಾಂಡವೆಂಬ ಆಟಿಕೆಯನ್ನು ಸೃಷ್ಟಿಸಿ, ಮಕ್ಕಳಂತೆ ಆಡುವವನೆಂದೂ ಹೇಳುತ್ತಾರೆ.  ಹೊಕ್ಕಳಲ್ಲಿ ಹೂವಿಟ್ಟುಕೊಂಡು, ಬ್ರಹ್ಮನನ್ನು ಹುಟ್ಟಿಸಿದ ಜಗದ್ರಕ್ಷಕನೇ, ನಿನ್ನ ಮಕ್ಕಳಾಟಿಕೆಯನ್ನು ಬಿಟ್ಟು, ಕೊಂಚ ನನ್ನತ್ತ ನೋಡಿ, ನನ್ನನ್ನು ರಕ್ಷಿಸು, ಉದ್ಧರಿಸು ಎಂದು ಬೇಡುತ್ತಾರೆ.


 ಚಿತ್ರಕೃಪೆ : ಅಂತರ್ಜಾಲ