Thursday, April 29, 2010

ಬಯಕೆ........

ಮನೆಯಲ್ಲಿ ಸಡಗರ.....
ಮನದಲ್ಲಿ ದುಗುಡ.......


’ಬಯಕೆ’ ಕವನವನ್ನು ಓದಿದಾಗ ನನ್ನ ಮನಸ್ಸಿಗೆ ಬಂದ ಭಾವನೆಗಳು ನೂರಾರು.... ಸಾವಿರಾರು.... ವರ್ಣಿಸಲಸಾಧ್ಯವಾದ..... ಅಲೌಕಿಕವಾದ ಆನಂದ ಅನುಭವಿಸಿದೆ.... ನನ್ನ ಮನಸ್ಸಿಗೆ ತೋಚಿದ್ದು ಕೆಲವು ಮಾತುಗಳಲ್ಲಿ....

ಕವಿ "ಬಯಕೆ" ಕವನದಲ್ಲಿ ಎಷ್ಟು ನವಿರಾಗಿ ತನ್ನ ಪತ್ನಿಯ ಸೀಮಂತನವನ್ನು ಮೈದುಂಬಿ, ಮನದುಂಬಿ, ಭಾವ ಪರವಶತೆಯಿಂದ ನೋಡುತ್ತಾನೆಂಬುದನ್ನು ಚಿತ್ರಿಸಿದ್ದಾರೆ..... ಮನೆಯ ತುಂಬಾ ಸೇರಿರುವ ಜನ, ಆಪ್ತರು, ಬಂಧು - ಬಾಂಧವರು, ಸಡಗರದಿಂದ ಓಡಾಡುತ್ತಾ ಸಿದ್ಧತೆಗಳನ್ನು ಮಾಡುತ್ತಿದ್ದಾರೆ..... ತಳಿರು ತೋರಣದಿಂದ ಸಿಂಗರಿಸಲ್ಪಟ್ಟ ಮನೆ.... ಇಡೀ ವಾತಾವರಣವೇ ಅತ್ಯಂತ electrifying ಆಗಿರುವಾಗ..... ಪತಿಯ ಮನದಲ್ಲೇನೋ ದುಗುಡ.. ಮೋಡ ಕವಿದಂತಿದೆಯೇಕೋ..... ಮಡದಿಯ ತೀರಿಸದೆ ಉಳಿದ ಬಯಕೆಯೇನಾದರೂ ಇರಬಹುದೇ ಎಂಬ ಯೋಚನೆಯೇ.... ಇಂದಿನ ಶುಭಗಳಿಗೆಯಲ್ಲಿ ಮನದನ್ನೆಗೆ ಪ್ರೇಮದಿಂದ ಇನ್ನೇನಾದರೂ ಪರಿಸು ಕೊಡಬೇಕೆನ್ನುವ ಆಲೋಚನೆಯೇ.... ಏನೋ ಅಂತೂ ಪತಿಯ ಮುಖ ದುಗುಡದಿಂದ ಕೂಡಿದೆ... ಏಕೋ...

ಶ್ರೀಮತಿಗೆ ಸೀಮಂತನ...
ಹಸಿರು ಸೀರೆಯನುಟ್ಟು...
ಕುಸುರಿ ರವಿಕೆಯ ತೊಟ್ಟ...
ಬಸಿರಿ ಮನದನ್ನೆಗೆ....


ಶ್ರೀಮತಿಯ ಸೌಂದರ್ಯ ಶುಭ-ಮಂಗಳ ಸೂಚಕ ಹಸಿರು ಸೀರೆಯಿಂದ ನೂರ್ಮಡಿಸಿದೆ.... ಗೋಧಿ ಮೈ ಬಣ್ಣಕ್ಕೊಪ್ಪುವ ಕುಸುರಿ ಕೆಲಸ ಮಾಡಿದ ರವಿಕೆಯ ತೊಟ್ಟು, ಅಭ್ಯಂಗನ ಸ್ನಾನದಿಂದ ಮುಂಗುರುಳುಗಳು ಕೆದರಿ ಹಾರಾಡುತ್ತಾ, ಅರಿಸಿನ ಬಳಿದ ಕೆನ್ನೆಗಳನ್ನು ಮುತ್ತಿಡುತ್ತಾ... ಕಿವಿಯ ಝುಮುಕಿಯೊಂದಿಗೆ ಸ್ಪರ್ಧೆಗೆ ಇಳಿದಿವೆ.... ಮುಡಿಯ ತುಂಬಿದ ಮಲ್ಲಿಗೆಯ ಘಮ, ನೆತ್ತಿಯನ್ನಲಂಕರಿಸಿದ ದೇವರ ಪ್ರಸಾದದ ಕುಂಕುಮ, ಎರಡೂ ಕೈಗಳಲ್ಲೂ ಸುವಾಸಿನಿಯರು ಹರಸಿ ತೊಡಿಸಿದ ಹಸಿರು ಬಳೆಗಳು.... ಮುದ್ದಿನ ಮನ ಮೆಚ್ಚಿದ ಮಡದಿಯಿಂದ ನೋಟ ಕೀಳಲಾಗದೇ, ಕಡೆದ ಶಿಲ್ಪದಂತೆ ನಿಂತ ಪತಿಯನ್ನು ಕಂಡು ನಸು ನಾಚಿದ ತುಂಬಿದ ಬಸುರಿ....

ತುಸು ಸಮಯ ಸಾಧಿಸಿ...
ಪಿಸು ಮಾತಿನಲಿ...
ಬಯಕೆಯದೇನೆಂದು ಕೇಳೆ...


ಸಮಯ ಸಾಧಿಸಿ ಎಂಬ ಸಾಲು ಇಲ್ಲಿ ಪತಿ ಎಷ್ಟು ಕಾತುರದಿಂದ ತುಸುವೇ ತುಸು ಏಕಾಂತಕ್ಕಾಗಿ ಹಂಬಲಿಸುತ್ತಿದ್ದ ಎಂಬುದು ಮನದಟ್ಟು ಮಾಡಿಸುತ್ತೆ... ಸಿಕ್ಕ ಕೆಲವೇ ಕ್ಷಣಗಳ ಏಕಾಂತವನ್ನು ಬಿಡದೇ, ಉಪಯೋಗಿಸಿಕೊಂಡು, ಕಾತುರದಿಂದ, ಆಸೆಯಿಂದ... ಅತ್ತಿತ್ತ ನೋಡುತ್ತಾ, ತನ್ನನ್ನು ಯಾರೂ ಗಮನಿಸಿಲ್ಲವೆಂದು ಖಾತ್ರಿ ಮಾಡಿಕೊಳ್ಳುತ್ತಾ... ಮಡದಿಯ ಬಳಿ ಸಾರಿ... ಏಕಾಂತವಿದ್ದರೂ ಯಾರಿಗಾದರೂ ಕೇಳಿಸೀತೋ ಎಂಬ ಅಂಜಿಕೆಯಿಂದ... ಸ್ವಲ್ಪವೇ ಬಾಗಿ, ನೆತ್ತಿಯ ಘಮ ಆಸ್ವಾದಿಸುತ್ತಾ... ಪಿಸು ಮಾತಿನಲಿ, ಪ್ರಿಯೆ ಹೇಳು... ಏನು ನಿನ್ನ ಬಯಕೆಯೆಂದು, ಆಪ್ಯಾಯಮಾನವಾಗಿ ಕೇಳುವಾಗ....

ಮಡದಿಯ ಬಸಿರು, ಸೀಮಂತನ ಎಲ್ಲರ ಜೀವನದಲ್ಲೂ ನಡೆಯುವ ಒಂದು ಅತಿ ಮುಖ್ಯ ಸನ್ನಿವೇಶ. ಆದರೆ ಅದು ಎಲ್ಲರಿಗೂ ಒಂದೇ ತರಹದ ಅನುಭವ ಆಗಿರುವುದಿಲ್ಲ.... ಪ್ರೇಮಿಸಿ ಮದುವೆ ಮಾಡಿಕೊಂಡಾಗ, ಹೆತ್ತವರ ವಿರುದ್ಧ ನಿರ್ಣಯ ತೆಗೆದುಕೊಂಡಾಗ, ಎಷ್ಟೋ ಸನ್ನಿವೇಶಗಳಲ್ಲಿ ಸೀಮಂತನ ನಡೆಯುವುದೇ ಇಲ್ಲವೇನೋ...... ನಡೆದರೂ ಹೆತ್ತವರು ಭಾಗವಹಿಸದೆ ನೀರಸವಾಗಿಯೂ ಆಗಿರಬಹುದು......ಪತಿ ಮತ್ತು ಆತನ ಮನೆಯವರು ಮುನಿಸಿಕೊಂಡು ಸೀಮಂತನಕ್ಕೆ ಬರದೆಯೂ ಇರಬಹುದು... ನಾವು "ಬಳೆಗಾರ ಚನ್ನಯ್ಯ ಬಾಗಿಲಿಗೆ ಬಂದಿಹನು.. ಒಳಗೆ ಬರಲಪ್ಪಣೆಯೇ ದೊರೆಯೇ..." ಕವನದಲ್ಲಿ ಮಡದಿಯ ಆತಂಕ, ದುಗುಡಗಳನ್ನು ಚಿತ್ರಿಸಿರುವುದನ್ನು ನೆನಪಿಸಿಕೊಳ್ಳಬಹುದು....... ಆದರೆ ಇಲ್ಲಿ ಕವಿ ಅತ್ಯಂತ ಸುಂದರವಾದ ಒಂದು ಸನ್ನಿವೇಶವನ್ನು ಶಬ್ದಗಳಲ್ಲಿ ಹಿಡಿದಿಟ್ಟಿದ್ದಾರೆ.....

ಪತಿಯ ಸಾನಿಧ್ಯದಿಂದ ನಸು ನಾಚಿ ಕುಳಿತಿದ್ದ ಮಡದಿ, ಪಿಸುಮಾತ ಕೇಳಿ ತುಸು ಅಚ್ಚರಿಯಿಂದಲೇ ಮೊಗವೆತ್ತಿ ಪತಿಯನ್ನು ದಿಟ್ಟಿಸುತ್ತಾಳೆ.... ಮೆಲುದನಿಯಲ್ಲಿ...

ಬಯಕೆಯಿದೆ ದೊರೆಯೇ....
ಅದು ನಿಮ್ಮ ಬಾಯಿ ತುಂಬಾ ಹರಕೆ.....


ಎಂದುಸುರುತ್ತಾಳೆ... ಹಾಲು ಸಕ್ಕರೆಯಂತೆ ಬೆರೆತ ಎರಡು ಜೀವಗಳು, ತುಂಬು ಅಭಿಮಾನ - ಪ್ರೀತಿಯಿಂದ ಒಂದಾದ...... ರಸಘಳಿಗೆಗಳನ್ನು ಹಂಚಿಕೊಂಡು ಒಂದೇ ಜೀವವಾದ ಎರಡು ತನುಗಳು... ಒಬ್ಬರನ್ನೊಬ್ಬರು ದಿಟ್ಟಿಸುವಾಗ.....

ಭಾವನೆಗಳು ಉಮ್ಮಳಿಸಿದ.....

ಭಾವಾವೇಶದ ಮಹಾಪೂರದಲ್ಲಿ ತೇಲುತ್ತಾರೆ... ತಾಯ್ತನದ ಭಾರ ಹೊತ್ತ ಮಡದಿ ಧನ್ಯತೆಯ ಭಾವದಿಂದಲೂ, ತನ್ನನ್ನು ತಂದೆಯ ಪಟ್ಟಕ್ಕೇರಿಸುವ ಪುಟ್ಟ ಜೀವದ ನಿರೀಕ್ಷೆಯ ಕ್ಷಣಗಳಲ್ಲಿ ಪತಿಯೂ.... ಇಬ್ಬರೂ ತಮ್ಮ ಬದುಕಿನ ಸಾರ್ಥಕ ಕ್ಷಣಗಳಿಗಾಗಿ, ಭವಿಷ್ಯದ ಕನಸಿಗಾಗಿ, ಧನ್ಯವಾದಗಳನ್ನರ್ಪಿಸಿ ಕೊಳ್ಳುವಂತೆ... ಕಣ್ಣಲ್ಲಿ ಕಣ್ಣಿಟ್ಟು ನೋಟ ನೆಟ್ಟಾಗ, ಕಾಲದ ಪರಿವೆಯ ಅರಿವು ಇಬ್ಬರಿಗೂ ಇರುವುದಿಲ್ಲ....

ಬಟ್ಟಲು ಕಣ್ಣಾಲಿಗಳ ತುಂಬಾ....
ನನ್ನದೇ ಪ್ರತಿಬಿಂಬ......


ಮಡದಿಯ ಬಟ್ಟಲು ಕಣ್ಗಳಲ್ಲಿ ಪಸರಿದ್ದ ತೆಳು ನೀರಿನ ಪರೆಯಲ್ಲಿ..... ಪತಿ ತನ್ನದೇ ಪ್ರತಿಬಿಂಬ ಕಂಡು ಸಂತೋಷ್, ತೃಪ್ತಿ, ಸಂಭ್ರಮದಿಂದ ನಸು ನಗುತ್ತಾನೆ......

ಕೊನೆಯ ಎರಡು ಸಾಲುಗಳು ನನಗೆ ಬಹಳ ಇಷ್ಟವಾಯಿತು... ಕವನದ ಜೀವವೇ ಎರಡು ಸಾಲುಗಳಲ್ಲಿದೆಯೆಂದು ಅನ್ನಿಸಿತು... ಒಲವಿನ ಮಹಾಪೂರ ಹರಿಯುವಾಗ, ಮಡದಿಯ ಕಣ್ಗಳಲ್ಲಿ ತನ್ನದೇ ಪ್ರತಿಬಿಂಬ ಕಾಣುವ ಪತಿ..... ದಾಂಪತ್ಯ ಜೀವನದಲ್ಲಿ ತಾವಿಬ್ಬರೂ ಒಬ್ಬರ ಕಣ್ಣಲ್ಲಿ ಇನ್ನೊಬ್ಬರ ಪ್ರತಿಬಿಂಬದಂತೆ ಬಾಳುವೆವೆಂಬ ಸಂಕೇತ ಅನ್ನಿಸಿತು... ಪರಸ್ಪರ ಅರಿತು, ಭಿನ್ನಾಭಿಪ್ರಾಯಗಳಿಲ್ಲದಂತೆ ಬಾಳ್ವೆ ಮಾಡುವ ಜೋಡಿಯಿದೆಂದೂ.. ಕವನ ಓದುವ ನವ ದಂಪತಿಗಳ ಮನದಲ್ಲೂ.... ಪ್ರೀತಿಸುವ ಪ್ರತಿ ಹೃದಯದಲ್ಲೂ ಆಸೆ ಮೂಡಿಸುವಂತೆ..... ಆಪ್ತವಾಗಿದೆ. ಸರಳ ಪದಗಳ ಜೋಡಣೆ, ಕವನವನ್ನು ಓದಿದ ಪ್ರತಿಯೊಬ್ಬರಿಗೂ... ತಮ್ಮದೇ ಸ್ವಂತ ಎನ್ನುವ ಒಂದು ಭಾವನೆ ಮೂಡಿಸುತ್ತದೆ.....
-------------------------------------------
ಬಯಕೆ - ಒಂದು ಗುಕ್ಕಿನಲ್ಲಿ :
ಮನೆಯಲ್ಲಿ ಸಡಗರ.....
ಮನದಲ್ಲಿ ದುಗುಡ.......

ಶ್ರೀಮತಿಗೆ
ಸೀಮಂತನ...
ಹಸಿರು ಸೀರೆಯನುಟ್ಟು...
ಕುಸುರಿ ರವಿಕೆಯ ತೊಟ್ಟ...
ಬಸಿರಿ ಮನದನ್ನೆಗೆ....

ತುಸು
ಸಮಯ ಸಾಧಿಸಿ...
ಪಿಸು ಮಾತಿನಲಿ...
ಬಯಕೆಯದೇನೆಂದು ಕೇಳೆ...

ಉಸುರಿದಳು ಮುದ್ದಿನ ಮಡದಿ....
ಬಯಕೆಯಿದೆ ದೊರೆಯೇ....
ಅದು ನಿಮ್ಮ ಬಾಯಿ ತುಂಬಾ ಹರಕೆ.....

ಭಾವನೆಗಳು
ಉಮ್ಮಳಿಸಿದ.....

ಬಟ್ಟಲು ಕಣ್ಣಾಲಿಗಳ ತುಂಬಾ....
ನನ್ನದೇ ಪ್ರತಿಬಿಂಬ......


ನಮ್ಮೆಲ್ಲರ ಅಭಿಮಾನಕ್ಕೆ ಸ್ಪಂದಿಸಿ, ನಾನು ಬರೆದ ನನ್ನ ಮನದಾಳದ ಮಾತುಗಳನ್ನು ಇಷ್ಟಪಟ್ಟು ತಮ್ಮ ಹೆಸರು ಸೇರಿಸಲು ಅನುಮತಿಸಿದ ನನ್ನ ಆತ್ಮಿಯ ಬಂಧು ಶ್ರೀ ಅನಂತ್ ಅವರಿಗೆ..... ನಿಮ್ಮೆಲ್ಲರ ಮೆಚ್ಚುಗೆಯ ಜೊತೆ ನನ್ನ ನಮಸ್ಕಾರಗಳು ಮತ್ತು ಹೃತ್ಪೂರ್ವಕ ಧನ್ಯವಾದಗಳು.....