Monday, June 28, 2010

ಮಧ್ಯ ವಯಸ್ಸು..........

ಕಳೆದ ವರ್ಷ "ತುಳಸೀವನ" ಬ್ಲಾಗ್ ಒಡತಿ ಶ್ರೀಮತಿ ತ್ರಿವೇಣಿ ಶ್ರೀನಿವಾಸ ರಾವ್ ಅವರು ವಿಜಯ ಕರ್ನಾಟಕದಲ್ಲಿ "ಮುಪ್ಪು ನಮ್ಮನ್ನೇಕೆ ಹೆದರಿಸುತ್ತದೆ"? ಎಂಬ ಅಂಕಣ ಬರೆದಿದ್ದರು. ಅವರ ಬರಹ ನನ್ನನ್ನು ಆಗಿಂದಾಗ್ಗೆ ಚಿಂತನೆಗೆ ಹಚ್ಚುತ್ತಲೇ ಇರುತ್ತದೆ. ಮಧ್ಯ ವಯಸ್ಸಿನಲ್ಲಿರುವ ನನ್ನಂಥವರೆಲ್ಲರನ್ನೂ ಚಿಂತೆ ಕಾಡುತ್ತದೆಯೇ...? ಗೊತ್ತಿಲ್ಲ. ಮುಪ್ಪು ಹತ್ತಿರ ಬರುತ್ತಿದೆ ಎಂಬ ಭಯ ನನಗಿಲ್ಲ, ಆದರೆ ಇದೇನು ಆಗಲೇ ಚೌಕಟ್ಟಿಗೆ ಬಂದು ಬಿಟ್ಟೆನೇ.? ಏನನ್ನೂ ಸಾಧಿಸಲೇ ಇಲ್ಲವಲ್ಲ ಎಂಬ ಕಳವಳ ಅಷ್ಟೇ.....

ಕ್ರಿಕೆಟ್ ಮೈದಾನದಲ್ಲಿ ಅರ್ಧ ಶತಕ ಮುಟ್ಟಲು ಕಾದಿರುವ ಆಟಗಾರನ ಮನಸ್ಥಿತಿಯಂತಿರಬಹುದೇ ಮಧ್ಯ ಮಯಸ್ಕರದು ಎಂದು ಒಂಥರಾ ಕ್ರಿಕೆಟ್ ಆಟಕ್ಕೆ ಸಂಬಂಧ ಕಲ್ಪಿಸಿಕೊಂಡು, ಯೋಚಿಸುತ್ತಿರುತ್ತೇನೆ. ಇನ್ನೇನು ನಾವು ಹೊಸ್ತಿಲ ಬಳಿಯೇ ನಿಂತು ಬಿಟ್ಟಿದ್ದೀವಲ್ಲ ಎಂದುಕೊಂಡು, ಒಮ್ಮೆ ಸುಮ್ಮನೆ ಒಂದು ಆತ್ಮಾವಲೋಕನ ಮಾಡಿಕೊಳ್ಳುವುದಕ್ಕೆಂದೇ ಹಿಂದೆ ತಿರುಗಿ ನೋಡಿದಾಗ, ಕಳೆದ ಜೀವನ ಎಷ್ಟು ಸಾರ್ಥಕ ಎಂಬ ಗುಣಾಕಾರ, ಭಾಗಾಕಾರದಲ್ಲಿ ಮನಸ್ಸು ತೊಡಗುತ್ತದೆ. ನನ್ನ ಜೀವನ ನಾ ಅಂದುಕೊಂಡಂತೆ ಆಗಿದ್ದು ಬಹಳ ಕಡಿಮೆ... ಅದು ಹೋದ ದಾರಿಗೆ ನಾನು ಹೋಗಿದ್ದೇ ಜಾಸ್ತಿ..... ಆದರೂ ಮದುವೆ, ಸಂಸಾರ, ಕೆಲಸ, ಮಗು, ಜವಾಬ್ದಾರಿ ಎಲ್ಲದರ ಮಧ್ಯೆ ಎಲ್ಲೋ ಕಳೆದು ಹೋಗಿದ್ದ ನನ್ನನ್ನು ನಾನು ಅರಿತುಕೊಳ್ಳುವ, ಎಚ್ಚೆತ್ತುಕೊಳ್ಳುವ ಪ್ರಯತ್ನ ಈಗ ಶುರುವಾಗಿದೆ. ಮಿಕ್ಕಿದ ವರ್ಷಗಳಲ್ಲಾದರೂ ಏನಾದರೂ ಸಾಧಿಸಬಹುದಾ ಎಂಬ ಯೋಚನೆ ಮಾಡತೊಡಗಿದ್ದೇನೆ...

ಸಾರ್ಥಕ ಜೀವನವೆಂದರೆ ಬರೀ ಮಕ್ಕಳನ್ನು ಬೆಳೆಸಿ, ಸಂಸಾರ ಉಳಿಸುವುದು ಮಾತ್ರವೇನಾ..? ಮುಪ್ಪು ಬರುವ ಮೊದಲು ಇರುವ ತಾರುಣ್ಯದ ಕೆಚ್ಚಿನಲ್ಲಿ ಎಲ್ಲವನ್ನೂ ಧೈರ್ಯವಾಗಿ ಎದುರಿಸಿ, ಹೋರಾಡಿ ಗೆಲ್ಲುತ್ತಿದ್ದ ಮನ ಒಮ್ಮೆಗೇ ಕಡಿವಾಣ ಹಾಕಿದಂತಾಡುವುದೇಕೋ..? ಮಕ್ಕಳು ದೊಡ್ಡವರಾಗಿ ತಮ್ಮ ಜೀವನ ರಥದ ಚುಕ್ಕಾಣಿ ಹಿಡಿದ ನಂತರವಾದರೂ ನಾವು ನಮ್ಮ ರಥವನ್ನು ನಮಗೆ ಬೇಕಾದ ದಾರಿಯಲ್ಲಿ ನಡೆಸಬಹುದಲ್ಲವೇ...?

ಹಂತವನ್ನು ತೀರಾಮುಪ್ಪುಎಂದು ಕರೆಯಲಾಗದಿದ್ದರೂ, ಅದಕ್ಕಿನ್ನಾ ಒಂದೆರಡು ಮೆಟ್ಟಿಲು ಹಿಂದಿರುವ..."ಮುಪ್ಪಿನ ತಾರುಣ್ಯ" ಅಥವಾ "ಮಧ್ಯಾವಸ್ಥೆ" ಎನ್ನಬಹುದೇನೋ... ಶ್ರೀಮತಿ ತ್ರಿವೇಣಿಯವರು ಹೇಳಿದಂತೆ ಮುಪ್ಪನ್ನು "ಬಾ ಗೆಳೆಯಾ ನೀ ಬರುವ ನಿರೀಕ್ಷೆ ನನಗೆ ಮೊದಲೇ ಇತ್ತು..." ಎಂದು ಸ್ವಾಗತಿಸುವ ಚಿಂತನೆಯೇನೋ ತುಂಬಾ ಚೆನ್ನಾಗಿದೆ. ಆದರೆ ನಮ್ಮ ಬಾಲ್ಯ, ಯೌವನ, ಗೃಹಸ್ಥ ಎಷ್ಟು ಬೇಗ ಕಳೆದು ಹೋಗುತ್ತದೆಂದರೆ, ನಾವಿನ್ನೂ ಏನನ್ನೂ ಆಲೋಚಿಸಿಯೇ ಇರುವುದಿಲ್ಲ ಅಥವಾ ಅನುಭೂತಿಸಿಯೇ ಇರುವುದಿಲ್ಲ, ಆಗಲೇ ಮುಪ್ಪು ಬಲವಂತದಿಂದ, ನಾವು ಬಾ ಎನ್ನುವುದನ್ನು ಕಾಯದೆಲೇ ಬಂದು ಅಚ್ಚುಕಟ್ಟಾಗಿ ಪದ್ಮಾಸನ ಹಾಕಿಕೊಂಡು ಕುಳಿತಾಗಿರತ್ತೆ. ಅದರಲ್ಲೂ ಒಂದು ಹೆಣ್ಣು ತನ್ನ ಎಲ್ಲಾ ಜವಾಬ್ದಾರಿಗಳನ್ನೂ, ತನ್ನ ಎಲ್ಲಾ ತರಹದ ಪಾತ್ರಗಳನ್ನೂ ಯಶಸ್ವಿಯಾಗಿ ನಿರ್ವಹಿಸಿ, ಅಬ್ಬಾ...! ಇನ್ನಾದರೂ ನನಗೆ ಬೇಕಾದದ್ದೇನಾದರೂ ಸಾಧಿಸಬೇಕೆಂದು, ತುಡಿಯುವಷ್ಟರಲ್ಲಿ, ಮೈಯಲ್ಲಿನ ಶಕ್ತಿ ಎಲ್ಲಾ ಸೋರಿ ಹೋಗಿರುತ್ತೆ. ಮನಸು ತನ್ನ ಇರುವಿಕೆಯನ್ನು ಮನವರಿಕೆ ಮಾಡಿಕೊಡಲು ಸಜ್ಜಾಗುವ ವೇಳೆಗಾಗಲೇ ದೇಹ ಮೊಂಡುಗಟ್ಟಿ, ಕೈಕಟ್ಟಿ ಕುಳಿತುಬಿಟ್ಟಿರುತ್ತೆ...!!!

ಆದರೂ ದೇಹದಲ್ಲಿ ಬಂದು ಪಟ್ಟಾಂಗ ಹೊಡೆಯುತ್ತಾ ಕುಳಿತಿರುವ ಮುಪ್ಪಿನ ದೇವತೆಯನ್ನು ಸಂತುಷ್ಠಗೊಳಿಸಿ, ಮನಸ್ಸು ಸಾಧಿಸಬೇಕೆಂದು ಕಾಣುತ್ತಿರುವ ಕನಸುಗಳಲ್ಲಿ ಕೆಲವನ್ನಾದರೂ ನಾವು ಸಾಕಾರಗೊಳಿಸಿಕೊಂಡರೆ, ಮುನಿದು, ಸೋಮಾರಿಯಾಗಿ ಕುಳಿತಿರುವ ಮುಪ್ಪೂ ಕೂಡ, ಎಚ್ಚೆತ್ತು ಮೈ ಕೊಡವಿ, ಮನಸಿನ ಜೊತೆ ಕೈಗೂಡಿಸಬಹುದು. ತಾನಿನ್ನು ಮೈ ಮುದುರಿ ಮಲಗಿದರೆ ಏನೇನೂ ಪ್ರಯೋಜನವಿಲ್ಲವೆಂದು ಅರ್ಥ ಮಾಡಿಕೊಂಡಾಗ ಮಾತ್ರವೇ ಮುಪ್ಪು ಕೂಡ ಅದ್ಭುತವಾಗಿ, ನಳನಳಿಸುವ ಸೌಂದರ್ಯ ದೇವತೆಯಾಗಬಹುದು...

ಕ್ರಿಯಾಶೀಲತೆ ಎನ್ನುವುದು ಎಲ್ಲಿಯವರೆಗೆ ನಮ್ಮೊಳಗೆ ಜಾಗೃತವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೋ, ಅಲ್ಲಿಯವರೆಗೆ ನಮ್ಮ ತನುವೆಂಬ ಮನೆಗೆ ಬರುವ ಅತಿಥಿಗಳಾದ, ಮುಪ್ಪು, ರೋಗ, ಚಿಂತೆ ಎಲ್ಲರೂ ನಮ್ಮನ್ನು ಬಳಲಿಸದೆ, ಆರಾಮವಾಗಿ ಇದ್ದು, ಅತಿಥಿ ಸತ್ಕಾರವನ್ನು ಮೌನವಾಗಿ, ಸದ್ದಿಲ್ಲದೆ ಸ್ವೀಕರಿಸಿ, ಕಟ್ಟ ಕಡೆಯ ಬೆಂಚಿನ ವಿದ್ಯಾರ್ಥಿಗಳಂತೆ ಕುಳಿತಲ್ಲೇ ತೂಕಡಿಸುತ್ತಾ ಇರುತ್ತಾರೆ. ಇವರೆಲ್ಲರ ಜೊತೆಯೇ ಸಹಬಾಳ್ವೆ ಮಾಡಲೇಬೇಕಾದ ನಾವು, ಜೀವನವನ್ನು ನೋಡುವ ದೃಷ್ಟಿ ಬದಲಾಯಿಸಿಕೊಂಡಷ್ಟೂ ಶಾಂತಿಯುತವಾದ, ನೆಮ್ಮದಿಯ ಜೀವನವನ್ನು ನಡೆಸಬಹುದು.... ಇದು ನನ್ನ ಅನಿಸಿಕೆ.....!!! :-)

Tuesday, June 22, 2010

ಹೊಸ ಬ್ಲಾಗ್......

ನನ್ನ ಬ್ಲಾಗ್ ಲೋಕದ ಗೆಳೆಯರೇ.......

ನಿಮಗೆಲ್ಲರಿಗೂ ಒಂದು ಸಂತಸದ ಸುದ್ದಿ ಹೇಳುವುದಕ್ಕಾಗಿ ಈ ಬರಹ....

ನಮ್ಮೆಲ್ಲರ ಮೆಚ್ಚಿನ ಕವಿ, "ಬಯಕೆ" ಕವನದ ಕತೃ ಶ್ರೀ ಅನಂತರಾಜ್ ನಾಯಕ್ ಅವರು ತಮ್ಮದೇ ಆದ

ಹೊಸ ಬ್ಲಾಗ್ ತೆರೆದಿದ್ದಾರೆ. ಇನ್ನು ನಮಗೆಲ್ಲಾ ಅವರ ಕವನಗಳ ರಸದೌತಣ.... ಅವರನ್ನು ನಿಮ್ಮೆಲ್ಲರ ಪರವಾಗಿ

ನಾನು ಆತ್ಮೀಯವಾಗಿ, ಹಾರ್ದಿಕವಾಗಿ ಬ್ಲಾಗ್ ಲೋಕಕ್ಕೆ ಸ್ವಾಗತಿಸುತ್ತಿದ್ದೇನೆ...... ಅವರ ಬ್ಲಾಗ್ "ಅನಂತದಿಂದ

ದಿಗಂತದವರೆಗೂ
"... ಪಸರಿಸಲಿ, ಕಂಪು ಬೀರಲಿ, ನಮ್ಮೆಲ್ಲರ ಮನ ತಣಿಸಲಿ. ಅನಂತದಿಂ... ಕೊಂಡಿ......

http://ananthadimdigantha.blogspot.com ನಿಮ್ಮೆಲ್ಲರ ಸ್ನೇಹ ಪೂರ್ವಕ ಶುಭ ಹಾರೈಕೆಗಳನ್ನು

ನೀವು ಅವರಿಗೆ ಕೋರುತ್ತೀರಲ್ಲವೇ.......

ಧನ್ಯವಾದಗಳೂ.........

Monday, June 14, 2010

ಸಂಪದಿಗರ 'ಸಮ್ಮಿಲನ'

ಸಂಮಿಲನದ ಎರಡು ದಿನಗಳ ಮೊದಲಿನಿಂದಲೇ ನನ್ನಲ್ಲೊಂಥರಾ ಕುತೂಹಲದ ಆತಂಕ ಶುರುವಾಗಿ ಬಿಟ್ಟಿತ್ತು. ನಮ್ಮ ಆತ್ಮೀಯ ಹರಿ ದೂರವಾಣಿ ಮೂಲಕ ನನಗೆ ಕರೆ ಮಾಡಿ, ನಾನು ಶನಿವಾರ ಸಿಐಎಸ್ ಕಟ್ಟಡ ನೋಡಲು ಹೋಗುತ್ತೇನೆ ಎಂದು ಹೇಳಿದಾಗ ನನ್ನ ಕ್ಷಣ ಗಣನೆ ಆರಂಭವಾಗಿ ಬಿಟ್ಟಿತು. ಭಾನುವಾರ (13.06.2010)ಬೆಳಿಗ್ಗೆ ೭.೩೦ಕ್ಕೇ ಹರಿ ಕರೆ ಮಾಡಿ ರೆಡೀನಾ... ಎಂದಾಗ
ನನಗೆ ಭಯವೇ ಆಗಿತ್ತು. ಇಷ್ಟು ಬೇಗನಾ...? ಏನಪ್ಪಾ ಇದು ಎಂದರೆ... ನಾನಾಗಲೇ ಬಸ್ ನಿಲ್ದಾಣದಲ್ಲಿದ್ದೇನೆ, ನಿನ್ನೆ ಮಳೆಯಲ್ಲಿ ಸಿಕ್ಕಿಕೊಂಡೆ, ಹೋಗಲಾಗಲಿಲ್ಲ. ಈಗ ಬೇಗ ಎಲ್ಲರಿಗಿಂತ ಮೊದಲು ಹೋದರೆ ಸ್ವಲ್ಪ ಏನಾದರೂ ತಯಾರಿ ಮಾಡಬಹುದು ಮತ್ತು ಬಂದವರನ್ನು ಸ್ವಾಗತಿಸಬಹುದು ಎಂದರು. ಸರಿ ನೀವು ಹೊರಡಿ ನಾ ಬರ್ತೀನಿ ಎಂದೆ. ಹಾಗೂ ಹೀಗೂ ಬೆಳಗಿನ ಅವಸರದ ಕೆಲಸಗಳನ್ನು ಮುಗಿಸಿ, ನಾನು ರೆಡಿಯಾದಾಗ ಆಗಲೇ ೯.೧೫. ಇನ್ನೂ ನಮ್ಮ ಮನೆ ಗಲ್ಲಿಯನ್ನೂ ದಾಟಿರಲಿಲ್ಲ, ಆಗಲೇ ಹರಿಯ ಕರೆ.... ಈಗ ಮನೆಯಿಂದ ಹೊರಟ್ರಾ... ಅಯ್ಯೋ ಎಷ್ಟೊತ್ತಿಗಪ್ಪಾ ನೀವು ಬರೋದು ಅಂದ್ರು.... ಟ್ರಾಫಿಕ್ ಇರಲ್ಲ ಹರಿ, ಭಾನುವಾರ ೨೦ ನಿಮಿಷದಲ್ಲಿ ಅಲ್ಲಿರ್ತೀನಿ.... ಯಾರು ಬಂದಿದ್ದಾರೆ ಅಂದೆ. ಹರಿ ಒಂದು ಪುಟ್ಟ ಪಟ್ಟಿಯನ್ನೇ ಕೊಟ್ಟಾಗ... ನನಗೆ ಅತ್ಯಂತ ಸಂತೋಷವಾಗಿತ್ತು. ಮನೆಯಿಂದ ದೊಮ್ಮಲೂರು ತಲುಪಿದ್ದೇನೋ ನಾನೆಂದಂತೆ ಬರೀ ೧೫ ನಿಮಿಷದಲ್ಲೇ... ಆದರೆ ಆ ನೀರಿನ ತೊಟ್ಟಿಯ ಗುರುತು ಇಟ್ಟುಕೊಂಡು ಸಿಐಎಸ್ ಕಟ್ಟಡ ಹುಡುಕುವಲ್ಲಿ ಇನ್ನರ್ಧ ಘಂಟೆಯಾಗಿ ಹೋಗಿತ್ತು. ೩೦ ನಿಮಿಷದಲ್ಲಿ ೪ ಸಲ ಹರಿಗೆ ಕರೆ ಮಾಡಿ, ಅವರ ತಲೆಯೂ ತಿಂದಿದ್ದಾಯ್ತು.... :-) ಕೊನೆಗೂ ಹರಿ ಮುಖ್ಯ ರಸ್ತೆಗೆ ಬಂದು ಕಾದಿದ್ದು, ನನ್ನನ್ನು ಕರೆದುಕೊಂಡು ಹೋದಾಗ, ಅಲ್ಲಾಗಲೇ ಸಂಪದಿಗರ ಕಲರವ ಶುರುವಾಗಿ ಬಿಟ್ಟಿತ್ತು.

ಸಿಐಎಸ್ ಕಟ್ಟಡ ಸುಂದರವಾಗಿದೆ. ಹೊರಗೆ ಹಸಿರು ವಾತಾವರಣ... ಕೋಗಿಲೆಯ ಎಡಬಿಡದ ಕುಹೂ ಗಾನ, ಮನಕ್ಕೆ ನಿಜಕ್ಕೂ ಮುದಕೊಟ್ಟಿತ್ತು. ಅತ್ಯಂತ ಪ್ರಶಸ್ಥವಾದ ಜಾಗವಾಗಿತ್ತು ಅದು ನಮ್ಮ ಸಂಮಿಲನಕ್ಕೆ... ನಾಗರಾಜ್ ರ ಚಿತ್ರ ನೋಡಿದ್ದ ಕಾರಣ ನಾನವರನ್ನು ಗುರುತು ಹಿಡಿದೆ. ಪಕ್ಕಕ್ಕೆ ತಿರುಗೆ ಕಾಫಿ ಲೋಟ ಹಿಡಿದಿರುವ ಚಿಕ್ಕೂ... ಎದುರಿಗೇ ಕುಳಿತಿದ್ದರೂ ನನಗೆ ಗುರುತು ಹಿಡಿಯುವುದಾಗಲಿಲ್ಲ... ಅಷ್ಟರಲ್ಲಿ ಪಕ್ಕದ ಸೋಫಾದಲ್ಲಿ ಕುಳಿತಿದ್ದವರು... ನಮಸ್ಕಾರ ಎಂದು ಜೋರು ದನಿಯಲ್ಲೆಂದಾಗ, ನಾ ಬೆಚ್ಚಿ ತಿರುಗಿದರೆ... ಯಾವ ಸಂಶಯವೂ ಇಲ್ಲ... ನಮ್ಮೆಲ್ಲರ ಮಿತ್ರ ಆತ್ರಾಡಿ ಸುರೇಶ್... ಅಬ್ಬ ಅಂತೂ ಒಬ್ಬರಾದರೂ ಪರಿಚಿತರಿದ್ದಾರೆಂದು ಸಮಾಧಾನದ ನಿಟ್ಟುಸಿರಿಡುವಷ್ಟರಲ್ಲಿ ಸುರೇಶ್, ಗೋಪಿನಾಥ್ ಮತ್ತು ಕುಟುಂಬ, ಮಂಜುನಾಥ್ ಮತ್ತು ಕುಟುಂಬದವರನ್ನು ಪರಿಚಯಿಸಿದರು. ಮಂಜುನಾಥ್ ರ ಮಗ, ಮಗಳೂ ಬಂದಿದ್ದರು. ಜೊತೆಗೆ ಒಬ್ಬ ಪುಟ್ಟ ಅತಿಥಿಯೂ ಇದ್ದಳು.... ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳುತ್ತಾ ಇರುವಾಗ ಆಗಲೇ ಹರಿ "ಸಂಪದ ಸಂಮಿಲನ" ಎಂಬ ದೊಡ್ಡ ಅಚ್ಚು ಹಾಕಿದ ಫಲಕದಂತಹುದನ್ನು ಅಂಟಿಸಿ, ಕುರ್ಚಿಗಳನ್ನು ಈ ಕಡೆ, ಆ ಕಡೆ ಸರಿಸಿ ವೇದಿಕೆ ಸಜ್ಜುಗೊಳಿಸುತ್ತಿದ್ದರು. ಅಷ್ಟುಹೊತ್ತಿಗೆ ಕವಿ ನಾಗರಾಜ್, ಅಂಜನ್ ಕುಮಾರ್ ಅವರೂ ಬಂದು ಸೇರಿದರು.

ಪ್ರಾರ್ಥನೆಯಾದ ನಂತರ ನಮ್ಮ ಕಾರ್ಯಕ್ರಮ ತೇಜಸ್ವಿ ಅವರ ಕವಿತಾ ವಾಚನದಿಂದ ಆರಂಭವಾಯಿತು. ಅವರು ತಾವು ಬರೆದ ಮೊಟ್ಟ ಮೊದಲ ಕವನ - ತಮ್ಮ ಭಗ್ನ ಪ್ರೇಮದ ಬಗೆಗೆ ಓದಿದರು. ನಂತರ ಎರಡನೆಯದಾಗಿ ಓದಿದ ಕವನ ’ತನ್ನನ್ನು ಮೊದಲು ಪ್ರೀತಿಸು’.... ಇದರಲ್ಲಿನ ಸಾಲುಗಳು "ನಿಲ್ಲು... ಓಡುತ್ತಿರುವ ಗೆಳೆಯನೆ... ಮರೆತೆಯೇನು ಪ್ರೀತಿಸಲು ತನ್ನನೇ".. ನನ್ನನ್ನು ತುಂಬಾ ಸೆಳೆಯಿತು. ಮತ್ತೂ ಮುಂದುವರೆದು ತೇಜಸ್ವಿ ಅವರು ’ಗುರಿ ಮುಟ್ಟುವ ಬಗ್ಗೆ’, ’ಉತ್ತಮ ಅಭ್ಯಾಸಗಳ ಬಗ್ಗೆ’’ವಾಸ್ತವವ ಅರಿಮನವೇ’.. ಕವನಗಳನ್ನು ಓದಿದರು. ತುಂಬಾ ಚೆನ್ನಾಗಿದ್ದವು ಅವರ ಶೈಲಿ. ತಾವು ಕವನ ಬರೆಯುವ ಪರಿಯನ್ನೂ ಕೂಡ ನಮ್ಮ ಯುವ ಕವಿ ವರ್ಣಿಸಿದರು. ಘಟನೆಗಳನ್ನು ವಿವರಿಸುತ್ತಾ ಕವನ ಬರೆಯುವುದನ್ನು ಅವರು ಅಭ್ಯಾಸ ಮಾಡಿಕೊಂಡಿದ್ದಾರೆ. ಪ್ರಾಸಕ್ಕಾಗಿ ನಿಘಂಟನ್ನು ತೆರೆದಿಟ್ಟುಕೊಂಡು, ಪದಗಳನ್ನು ಹುಡುಕಿ, ಪ್ರಾಸ ಜೋಡಿಸಿ, ತಮ್ಮ ಭಾವ ಕೂಡ ಸೇರಿಸಿ ಕವನ ರಚಿಸುತ್ತಾರಂತೆ.

ಎರಡನೆಯದಾಗಿ ನಾಗರಾಜ್ ಸಂಪದ ಸೇರಿದ ಬಗ್ಗೆ ಹಾಗೂ ತಮ್ಮ ಮಳೆನೀರು ಕೊಯಿಲಿನ ಪ್ರಾಜೆಕ್ಟ್ ಗಳ ಬಗ್ಗೆ ಮಾತನಾಡಿದರು. ಯಾವುದೋ ತುರ್ತು ಮೀಟಿಂಗ್ ಗಾಗಿ ಹೋಗಲೇ ಬೇಕಾದ ಅನಿವಾರ್ಯವಿದೆಯೆಂದು ಬೇಸರದಿಂದಲೇ ಅವರು ಹೊರಟು ಬಿಟ್ಟರು.

ಗೋಪಿನಾಥ್ ಬೆಳ್ಳಾಳ್ ರವರು ತಮ್ಮ ಕವನಗಳನ್ನು ಅತ್ಯಂತ ಸುಂದರವಾಗಿ ವಾಚಿಸಿದರು. ೮೦ರ ಇಳಿವಯಸ್ಸಿನಲ್ಲೂ ಹೊಸತು ಕಲಿಯಬೇಕೆನ್ನುವ ತುಡಿತ ಇರುವ ತಮ್ಮ ತಾಯಿಯವರ ಬಗ್ಗೆ ಎರಡು ಮಾತುಗಳನ್ನು ಅವರು ಆಡಿದಾಗ ನನಗೆ ಅವರೂ ಬಂದಿದ್ದರೆ ಭೇಟಿಯಾಗಬಹುದಿತ್ತಲ್ಲವೇ ಎಂದನ್ನಿಸಿತು. ಅವರ ವಯಸ್ಸಿಗೆ ಅವರು ಉತ್ಸಾಹದ ಚಿಲುಮೆಯಂತಿದ್ದಾರೆಂದರೆ ಖಂಡಿತಾ ಅವರು ನಮಗೆಲ್ಲರಿಗೂ ಆದರ್ಶಪ್ರಾಯರು.... ಗೋಪಿನಾಥ್ ಸಾರ್... ಒಮ್ಮೆ ಖಂಡಿತಾ ಭೇಟಿ ಮಾಡಿಸಿ ತಾಯಿಯವರನ್ನು (ಬಹುಶ: ಮುಂದಿನ ಸಂಮಿಲನದಲ್ಲಿ)....
ರೈತ ಮತ್ತು ಸೈನಿಕನ ಮಧ್ಯೆ ಸಾಮ್ಯತೆ ವಿವರಿಸುವ ಕವನ ನಮ್ಮ ಮನಗಳನ್ನು ಚಿಂತಿಸುವಂತೆ ಮಾಡಿತ್ತು..

ಹೊಳೆನರಸೀಪುರ ಮಂಜುನಾಥ್ ಅವರು ತಮ್ಮ ಬಾಲ್ಯ, ಜೀವನದ ಬಗ್ಗೆ ಎರಡು ಮಾತನಾಡಿ, ’ಅಪಘಾತ’ ಕಥೆ ಮನ ಮುಟ್ಟುವಂತೆ ಓದಿದರು. ಅವರ ಶೈಲಿ, ಓದುವ ರೀತಿ ಎಲ್ಲಾ ತುಂಬಾ ಚೆನ್ನಾಗಿತ್ತು. ಆದರೆ ಕಥೆಯ ವಿಷಯ ಸ್ವಲ್ಪ ಮಟ್ಟಿಗೆ ಮನಸ್ಸನ್ನು ಆವರಿಸಿದ್ದಂತೂ ನಿಜ...

ಈಗ ಬಂತು ನಮ್ಮ ಆತ್ರಾಡಿ ಸುರೇಶ ಹೆಗ್ಡೆಯವರ ಸರದಿ... ಚಿತ್ರದಲ್ಲೂ, ಎದುರಿಗೂ ನೋಡಲು ಸ್ವಲ್ಪ ಹೆಚ್ಚೇ ಎನಿಸುವ ಗಾಂಭೀರ್ಯವಿದ್ದರೂ, ಮಾತನಾಡಲು ಶುರು ಮಾಡಿದರೆ ಅತ್ಯಂತ ಸರಳವಾಗಿ ಮಾತನಾಡಿ, ಎಲ್ಲರನ್ನೂ ನಗಿಸಿ, ತಾವೂ ನಗುತ್ತಾರೆ... ಅವರು ’ನಾವು ಬೆಳೆಯುವುದೆಂತು’ ಎಂಬ ತಮ್ಮ ಕವನದಿಂದ ಆರಂಭಿಸಿ... ಒಳ್ಳೆಯದು ಬೆಳೆಯಲು ಅನವರತ ಶ್ರಮಬೇಕು ಎಂಬ ಸಂದೇಶವನ್ನೂ ಕೊಟ್ಟರು. ಜೊತೆಗೆ ’ಸಂಗಾತಿ ಯಾವಾಗ ನಮ್ಮೊಟ್ಟಿಗಿರಬೇಕು’, ’ಸ್ವಾತಂತ್ರ್ಯ’ .. ಇನ್ನೊಬ್ಬರು ಕಟ್ಟಿಕೊಟ್ಟ ಬುತ್ತಿ ಹೊತ್ತು ನಡೆಯುವ ನಮಗೆ ಎಲ್ಲಿದೆ ಸ್ವಾತಂತ್ರ್ಯ ಎಂಬ ಭಾವವುಳ್ಳ ಕವನಗಳನ್ನೂ ಓದಿದರು. ಕೊನೆಗೆ ಎಲ್ಲರನ್ನೂ ಉದ್ದೇಶಿಸಿ, ಈ ಸಂಮಿಲನಕ್ಕಾಗಿಯೇ ಬರೆದ "ಕಾಲೆಳೆದು ಕಾಲೆಳೆದು" ಎಂಬ ಕವನವನ್ನೂ ಪದ್ಯದ ಧಾಟಿಯಲ್ಲಿ ಓದಿ ನಮ್ಮನ್ನು ನಗೆಗಡಲಲ್ಲಿ ತೇಲಿಸಿದರು.

ಚಿಕ್ಕೂ ಚೇತನ್ ರವರ ಕವನಗಳೂ, ಚುರುಮುರಿಗಳೂ ಸಕತ್ತಾಗಿ ಚುರುಕಾಗಿದ್ದವು..

ರೂಪ ಅವರ ಸ್ಥಳದಲ್ಲೇ ಹೆಣೆದ ಕಥೆಯೂ ಸುಂದರವಾಗಿತ್ತು. ಯಶಿತಾಳ ಹಾಜರಿ ಸಂಮಿಲನಕ್ಕೊಂದು ಸುಂದರ ಕಂಪು ಮೂಡಿಸಿತ್ತು.

ಕವಿನಾಗರಾಜ್ ಅವರು ತಮ್ಮ ಕೆಲವು ಅನುಭವಗಳನ್ನೂ, ಸಂಪದ ಉಳಿವು, ಬೆಳವಣಿಗೆಯ ಬಗೆಗೂ ತಮ್ಮ ಅಭಿಪ್ರಾಯಗಳನ್ನು ನಮ್ಮೊಡನೆ ಹಂಚಿಕೊಂಡರು.

ಅಂಜರ್ ಕುಮಾರ್ ಅವರ ಬ್ಯಾಂಕಿನಲ್ಲಿ ನಡೆಯುವ ಹಾಸ್ಯ ಪ್ರಸಂಗಗಳ ಮರು ಸೃಷ್ಟಿ ಚೆನ್ನಾಗಿತ್ತು. ಅವರು ತಾವು ಓದಿದ ’ಯೋಗಿಯ ಆತ್ಮ ಕಥೆ’ ಪುಸ್ತಕದಲ್ಲಿನ ಒಂದು ನುಡಿ "ಮರಳಿನ ಮಧ್ಯೆ ಸಕ್ಕರೆ ಕಣಗಳಿರುತ್ತವೆ. ಜೀವನ ಇದರ ಮಿಶ್ರಣ. ಸಕ್ಕರೆ ಮಾತ್ರವೇ ಆರಿಸಿಕೊಳ್ಳಬೇಕು" ಎಂಬ ಮಾತನ್ನು ನಮಗೂ ತಿಳಿಸಿದರು.

ಈಗ ನಾನು ಓದಿದ ಕಥೆ "ಸಂಬಂಧಗಳು" ಬಗ್ಗೆ ಎರಡು ಮಾತು.... ಕಥೆಯ ಲೇಖಕರು ನಮ್ಮ ಸಂಪದಿಗರೇ ಆದ ಶ್ರೀ ಅನಂತ್ ಅವರು. ನನಗೆ ಕಥೆ ಇಷ್ಟವಾಗಿದ್ದರಿಂದ ಅವರ ಅನುಮತಿ ಪಡೆದು ಅವರ ಪರವಾಗಿ ನಾ ಓದಿದೆ. ರೂಪ ಅವರು ಬರೆದಂತೆ ನಾನು ಅದರ ವಿಮರ್ಶೆ ಮಾಡಲಿಲ್ಲ. ಕಥೆಯ ಬಗ್ಗೆ ನಾ ಆಡಿದ ಎಲ್ಲಾ ಮಾತುಗಳೂ ನಾನು ಅನಂತ್ ಅವರೊಂದಿಗೆ ಚರ್ಚಿಸಿದ ಮಾತುಗಳು. ಇಲ್ಲಿ ವಿಮರ್ಶೆ ಮಾಡುವ ಉದ್ದೇಶ ನನಗಿರಲಿಲ್ಲ. ಕಥೆಯನ್ನು ಬೇರೊಬ್ಬರು ಓದಿದಾಗ ಕೆಲವೊಮ್ಮೆ ನಮಗೆ ಚಿಕ್ಕ ಪುಟ್ಟ ವಿವರಗಳು ಮರೆತುಹೋಗುವ ಸಂದರ್ಭ ಇರುತ್ತಾದ್ದರಿಂದ, ನಾನು ಅದರಲ್ಲಿ ಅನಂತ್ ಅವರು ಏನು ಹೇಳಿದ್ದಾರೆಂಬುದನ್ನೂ, ಕಥೆ ಬರೆಯುವಾಗಿನ ಅವರ ಮನಸ್ಥಿತಿಯನ್ನೂ, ಉದ್ದೇಶವನ್ನೂ, ಅದರಲ್ಲಿರುವ ಪಾತ್ರಗಳ ಹಾಗೂ ಕಥೆಯ ಮೌಲ್ಯವನ್ನೂ ನಿಮ್ಮಲ್ಲಿ ಹಂಚಿಕೊಳ್ಳುವುದಕ್ಕಾಗಿ ಮಾತ್ರವೇ ಹೇಳಿದ್ದು. ಆ ನಿಟ್ಟಿನಲ್ಲಿ ನಾನು ಸಫಲಳಾಗಿದ್ದೇನೆ ಮತ್ತು ಕಥೆಯ ಲೇಖಕರ ಮನೋಭಿಪ್ರಾಯವನ್ನು ಸರಿಯಾದ ರೀತಿಯಲ್ಲಿ ನಿಮಗೆ ತಲುಪಿಸಿದ್ದೇನೆಂದುಕೊಂಡಿದ್ದೇನೆ. ಕಥೆಯ ಮೆಚ್ಚುಗೆಯೆಲ್ಲಾ ಲೇಖಕರಿಗೇ ಸಲ್ಲಬೇಕು, ಓದಿದವರಿಗಲ್ಲವೆಂದು ನನ್ನ ಅಭಿಪ್ರಾಯ.

ಇನ್ನು ಕೊನೆಯದಾಗಿ ನಮ್ಮೆಲ್ಲರ ಆತ್ಮೀಯ ಮಿತ್ರ ಹರೀಶ್ ಆತ್ರೇಯರ ವಿಚಾರ. ಯಾರು ಯಾರು ಬರುತ್ತಾರೆಂದು ನೋಡಿಕೊಂಡು, ಪಟ್ಟಿ ಮಾಡಿಕೊಂಡು, ಅವರೆಲ್ಲರ ವ್ಯಕ್ತಿ ಪರಿಚಯಗಳನ್ನೂ, ಅವರು ಬರೆದಿರುವ ಲೇಖನಗಳನ್ನೂ ನೋಡಿ, ಓದಿ, ಒಬ್ಬೊಬ್ಬರನ್ನೂ ಪರಿಚರಿಯಿಸಿದ ರೀತಿ ನಿಜಕ್ಕೂ ಹರ್ಷ ತಂದಿತ್ತು. ಎಲ್ಲರಿಗೂ ಆಹಾ ಇದು ನಾನೇನಾ... ಇಷ್ಟೆಲ್ಲಾ ಬರೆದಿದ್ದೇನಾ ನಾನು ಎಂಬ ಭಾವನೆ ಬರುವಂತೆ ನಮ್ಮೆಲ್ಲರನ್ನೂ ಉಬ್ಬಿಸಿದರು. ಅದಕ್ಕಾಗಿ ಅವರಿಗೆ ಒಂದು ವಿಶೇಷ ಧನ್ಯವಾದ. ಆಸೆ ಅಕ್ಕರೆಯಿಂದ ನಮ್ಮೆಲ್ಲರನ್ನೂ ಒಟ್ಟುಗೂಡಿಸುವ ಉದ್ದೇಶದಿಂದ ಈ ಸಂಮಿಲನಕ್ಕೆ ತಯ್ಯಾರಿ ನಡೆಸಿದ್ದಕ್ಕೆ ಎರಡನೇ ವಿಶೇಷ ಧನ್ಯವಾದ. ತಮ್ಮ ಸರದಿ ಬಂದಾಗ, ಅವರು ಎಲ್ಲರ ಬರಹಗಳಿಗೂ ಪ್ರತಿಕ್ರಿಯೆ ರೂಪದಲ್ಲಿ ಬರಿದಿದ್ದ ಕವನಗಳನ್ನು ಮಾತ್ರವೇ ಓದಿ ತಪ್ಪಿಸಿಕೊಂಡು ಬಿಡುವ ಸಂಚು ಮಾಡಿದ್ದರು. ಆದರೆ ಹಿಂದಿನ ದಿನವೇ ನನಗೆ ತಮ್ಮ ಕವನ ಓದಬೇಕೆಂದು ಒಂದು ಮಾತು ಹೇಳಿದ್ದರಿಂದ, ನಾನು ಅವರ ಯಾವ ಮಾತೂ ಕೇಳದೆ... ಒಂದೇ ಒಂದು ಕವನ ಓದುವ ಅವಕಾಶ ಪಡೆದೆ. ನಮ್ಮ ಯುವ ಕವಿ ನಿಜಕ್ಕೂ ಸುಂದರ ಕವನಗಳನ್ನು ಬರೆಯುತ್ತಾರೆ. ಜೊತೆಗೆ ನಮ್ಮೆಲ್ಲರಿಗೂ ತಿಳಿದಂತೆ ಅವರ ಬರಹಗಳೂ ಬಹಳ ಪ್ರಬುದ್ಧವಾಗಿವೆ. ನಾನೂ ಹರಿಯನ್ನು ಮೊದಲ್ ಬಾರಿ ಭೇಟಿಯಾದಾಗ ಆಘಾತಗೊಂಡಿದ್ದೆ :-) :-) ಏಕೆಂದರೆ ಅವರ ಬರಹಗಳನ್ನೋದಿ, ಕಮ್ಮಿಯೆಂದರೂ ೩೫ ವರ್ಷದ ಒಬ್ಬ ವ್ಯಕ್ತಿಯನ್ನು ಎದುರು ನೋಡಿದ್ದ ನನಗೆ, ಯುವ ಕವಿಯ ದರ್ಶನ ಸರಿಯಾಗಿ ಬೇಸ್ತು ಬೀಳಿಸಿತ್ತು.

ಸಂಮಿಲನಕ್ಕೆ ಬಂದ ಎಲ್ಲಾ ಸಂಪದ ಮಿತ್ರರಿಗೂ ಹೃತ್ಪೂರ್ವಕ ಧನ್ಯವಾದಗಳು...... ಬರದೇ ಒಳ್ಳೆಯ ಅವಕಾಶ ಕಳೆದುಕೊಂಡು ನಿರಾಶರಾದವರೆಲ್ಲರೂ ಮುಂದಿನ ಸಲ ತಪ್ಪದೇ ಬರುತ್ತಾರೆಂದು ಆಶಿಸೋಣವೇ....?

Tuesday, June 1, 2010

ಬೆಂಗಳೂರು ಗ್ರಾಮ ದೇವತೆಗಳ ಹಬ್ಬ..

ಕೆಲವು ದಿನಗಳ ಕೆಳಗೆ ಯಡಿಯೂರು, ಸಾಕಮ್ಮ ಗಾರ್ಡನ್ಸ್ ವ್ಯಾಪ್ತಿಯಲ್ಲಿ ದೇವಿ ಪಟಾಲಮ್ಮನ ವಾರ್ಷಿಕ ಕರಗ ಮಹೋತ್ಸವ ಮತ್ತು ಬೆಂಗಳೂರಿನ ಗ್ರಾಮ ದೇವತೆಗಳ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಈ ಹಬ್ಬದ ವಿಶೇಷತೆಯೆಂದರೆ, ಗ್ರಾಮ ದೇವತೆಗಳೆಲ್ಲ ಉತ್ಸವ ಮಾಡಿಕೊಂಡು ಸಾಕಮ್ಮ ಗಾರ್ಡನ್ಸ್ ನಲ್ಲಿರುವ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಂದು ತಾಯಿಯನ್ನು ಭೇಟಿ ಮಾಡಿಕೊಂಡು ಹೋಗುವುದು. ವಾಡಿಕೆ ಪ್ರಕಾರ ಇದು ವರ್ಷದಲ್ಲಿ ಒಂದು ಸಾರಿ ನಡೆಯುವ ಅಕ್ಕ ತಂಗಿಯರ ಭೇಟಿ....ಸಮಾರಂಭ ಒಟ್ಟು ಮೂರು ದಿನ ನಡೆಯುತ್ತದೆ... ಯಡಿಯೂರು ಮತ್ತು ಸಾಕಮ್ಮ ಬಡಾವಣೆಯ ಎಲ್ಲಾ ಹೆಂಗೆಳೆಯರೂ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಮೂರನೆಯ ಹಾಗೂ ಕೊನೆಯ ದಿನದಂದು ಈ ಅಕ್ಕ-ತಂಗಿಯರ ಭೇಟಿ... ಬೇರೆಲ್ಲಾ ಬಡಾವಣೆಗಳಿಂದ ದೇವಿಯರ ಉತ್ಸವಗಳು ಸಾಕಮ್ಮ ಗಾರ್ಡನ್ಸ್ ಗೆ ಬರುತ್ತವೆ... ಆ ದಿನ ಬೆಳಿಗ್ಗೆಯೇ ಈ ಬಡಾವಣೆಯ ಹೆಣ್ಣು ಮಕ್ಕಳು ಅಭ್ಯಂಜನ ಸ್ನಾನ ಮಾಡಿ, ತಮ್ಮಲ್ಲಿರುವ ಒಳ್ಳೆಯ ವಸ್ತ್ರಗಳನ್ನು ಧರಿಸಿ, ಮಂಗಳ ದ್ರವ್ಯಗಳೊಂದಿಗೆ ರಾಜರಾಜೇಶ್ವರಿ ದೇವಾಲಯಕ್ಕೆ ಬರುತ್ತಾರೆ. ಮೊದಲೇ ಹೆಸರು ನೋಂದಾಯಿಸಿಕೊಂಡ ಹೆಣ್ಣು ಮಕ್ಕಳು, ಹೂವಿನಿಂದ ವಿಧವಿಧವಾಗಿ ಅಲಂಕರಿಸಲ್ಪಟ್ಟ ಕಲಶಗಳನ್ನು ತಮ್ಮ ತಮ್ಮ ತಲೆಯ ಮೇಲೆ ಹೊರಲು ಸಿದ್ಧರಾಗುತ್ತಾರೆ. ಮಂಗಳ ವಾದ್ಯಗಳೊಂದಿಗೆ ಯಡಿಯೂರು ಕೆರೆಗೆ ಬಂದು ಅಭಿಷೇಕಕ್ಕೆ ನೀರು ತೆಗೆದುಕೊಂಡು ಹೋಗುತ್ತಾರೆ......

ಹೂವಿನಿಂದ ಪುಟ್ಟ ಪುಟ್ಟ ಪಲ್ಲಕ್ಕಿಗಳ ಥರಹದ, ಬೇರೆ ಬೇರೆ ಆಕಾರದ ಮಂಟಪಗಳಲ್ಲಿ ಕಲಶಗಳನ್ನು ಹೊತ್ತು, ಬಣ್ಣ ಬಣ್ಣದ ರೇಶಿಮೆ ಸೀರೆ, ಲಂಗಗಳನ್ನು ತೊಟ್ಟ...ಚಿಕ್ಕ - ದೊಡ್ಡ ಹೆಣ್ಣು ಮಕ್ಕಳ ಒಂದು ದೊಡ್ಡ ಕೂಟ, ಸಡಗರದಿಂದ ಮೆರವಣಿಗೆಯಲ್ಲಿ ಸಾಲು ಸಾಲಾಗಿ ಬರುತ್ತಾರೆ. ಯಡಿಯೂರು ಕೆರೆಯ ಎದುರು ಇರುವ ಚಿಕ್ಕ ಆಟದ ಮೈದಾನದ ಮಧ್ಯದಲ್ಲಿ ಪುಟ್ಟದಾದ ಒಂದು ಹಸಿರು ಚಪ್ಪರದ ಕೆಳಗೆ ಒಂದು ಕಲ್ಲನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಮಾವಿನ ತಳಿರು ತೋರಣಗಳಿಂದ ಅಲಂಕರಿಸಿರುತ್ತಾರೆ. ಶಾಮಿಯಾನ ಹಾಕಿ ಅಲ್ಲಿ ಬಂದವರಿಗೆ ನೀರು, ಪಾನಕ, ಹಾಲು ಸರಬರಾಜು ಮಾಡುವ ವ್ಯವಸ್ಥೆಯೂ ಇರುತ್ತದೆ.

ಮೆರವಣಿಗೆಯ ಮುಂಚೂಣಿಯಲ್ಲಿ ಡೊಳ್ಳು ಕುಣಿತದವರು... ಎಲ್ಲರಿಗಿಂತ ಮೊದಲು ಬಂದು ಮೈದಾನದಲ್ಲಿ ತಮ್ಮ ಪ್ರದರ್ಶನ ಆರಂಭಿಸುತ್ತಾರೆ. ಸುಮಾರು ಒಂದು ಘಂಟೆಯ ಹೊತ್ತು, ಇವರು ತಮ್ಮ ಡೊಳ್ಳು ಕುಣಿತದ ಪ್ರದರ್ಶನದಿಂದ ಅಲ್ಲಿ ನೆರೆದವರ ಕಣ್ಣಿಗೆ ಹಬ್ಬವಾಗಿಸುತ್ತಾರೆ. ಇವರ ಜೊತೆಗೆ ಅದೇ ಮೆರವಣಿಗೆಯಲ್ಲಿ ಭಾಗವಹಿಸಿದ ಸಾರ್ವಜನಿಕರೂ ತಮ್ಮದೇ ಧಾಟಿಯ ಕುಣಿತ ಲಯಬದ್ಧವಾಗಿ ಆರಂಭಿಸಿ ಬಿಟ್ಟಿರುತ್ತಾರೆ.... ನಾವಿನ್ನೂ ಡೊಳ್ಳು ಕುಣಿತದ ಗುಂಗಿನಲ್ಲೇ ಇರುವಾಗಲೇ... ಮಂಗಳ ವಾದ್ಯಗಳ ಸಮೇತ ಕಲಶಗಳನ್ನು ಹೊತ್ತ ಹೆಂಗೆಳೆಯರ ದಂಡು ಮೈದಾನವನ್ನು ಪ್ರವೇಶಿಸಿ, ಅಲ್ಲಿ ಸ್ಥಾಪಿಸಿದ್ದ ಚಪ್ಪದರ ದೇವರಿಗೆ ನಮಿಸಿ, ಸುತ್ತಲೂ ಕಟ್ಟಿರುವ ಮೈದಾನದ ಮೆಟ್ಟಿಲುಗಳ ಮೇಲೆ ತಮ್ಮ ತಲೆಯ ಮೇಲೆ ಹೊತ್ತು ತಂದ ಮಂಟಪಗಳನ್ನು ಇಳಿಸಿ, ಕುಳಿತುಕೊಳ್ಳುತ್ತಾರೆ..

ಇಷ್ಟು ಹೊತ್ತಿಗಾಗಲೇ ವಾತಾವರಣ ಸೂರ್ಯನ ಪ್ರಖರತೆಯ ಜೊತೆಗೆ ಸ್ಪರ್ಧಿಸುವಂತೆ ಕಾವೇರಿರುತ್ತದೆ. ಆಗಲೇ... ಎಲ್ಲಿಂದಲೋ ಒಂದು ಚೆನ್ನಾಗಿ ಕೊಬ್ಬಿದ ಕುರಿಯನ್ನು ಹಗ್ಗ ಕಟ್ಟಿ ಎಳೆದು ತರುತ್ತಾರೆ. ಅದರ ಬಾಯುಗೂ ಹಗ್ಗ ಕಟ್ಟಿರುತ್ತಾರೆ. ಇವರ ಯಾವೊಂದು ಕೆಲಸವೂ ತನಗೆ ಏನೂ ಸಂಬಂಧಿಸಿದ್ದಲ್ಲವೆಂಬಂತೆ ಅದು ತಲೆ ಬಗ್ಗಿಸಿ ನಿಂತಿರುತ್ತದೆ. ಹಗ್ಗ ಹಿಡಿದು ಜಗ್ಗುತ್ತಾ.. ಅದನ್ನು ಆ ಕಡೆ ಈ ಕಡೆ ಎಳೆದಾಡುತ್ತಾ, ಅಲ್ಲಿಗೆ ಪೂಜಾದ್ರವ್ಯಗಳೊಂದಿಗೆ ಬಂದ ಪೂಜಾರಪ್ಪನಿಂದ ಕುರಿಗೆ ತಿಲಕ ಇಡಿಸಿ, ಹೂವಿನ ಹಾರ ಹಾಕಿಸಿ, ಪೂಜೆ ಮಾಡಿಸಲಾಗುತ್ತದೆ. ಪಾಪ ತನ್ನ ಸ್ಥಿತಿ-ಗತಿಯ ಅರಿವಿಲ್ಲದ ಆ ಕುರಿ ತಲೆ ಬಗ್ಗಿಸಿ ನಿಂತಿರುತ್ತದೆ. ಜೋರಾಗಿ ಘಂಟೆ ಬಾರಿಸುತ್ತಾ ದೇವರಿಗೆ ಮಂಗಳಾರತಿ ಮಾಡಿ, ಅದೇ ಆರತಿಯನ್ನು ಕುರಿಯ ಮೂತಿಗೂ ಎತ್ತಲಾಗುತ್ತದೆ.... ದೇವಿಯ ಹೆಸರು ಜೈಕಾರ ಕೂಗುತ್ತಾ ಎಲ್ಲರೂ ವಾತಾವರಣವನ್ನು ಇನ್ನಷ್ಟು ಉದ್ರಿಕ್ತಗೊಳಿಸುತ್ತಾರೆ.... ಇದ್ದಕಿದ್ದಂತೆ ಎಲ್ಲಿಂದಲೋ ಬಂದು ಮಧ್ಯದಲ್ಲಿ ಪ್ರತ್ಯಕ್ಷನಾದ ಒಬ್ಬ ಕಟುಕ, ಕೈಯಲ್ಲಿ ಮಚ್ಚು ಹಿಡಿದು, ದೂರ... ಎಲ್ಲರೂ ದೂರ... ಎಂದು ಅಬ್ಬರಿಸುತ್ತಾ... ಒಂದೇ ಏಟಿಗೆ... ಛಕ್ಕೆಂದು ಕುರಿಯ ತಲೆ ಕತ್ತರಿಸಿಯೇ ಬಿಡುತ್ತಾನೆ. ರಕ್ತ ಚಿಮ್ಮಿ, ಅದೇ ಕ್ಷಣ ಕುರಿಯ ದೇಹ ಧರೆಗುರುಳುತ್ತದೆ.... ಮುಂದಿನ ಕೇವಲ ೧೦ ನಿಮಿಷಗಳೊಳಗೆ, ಅದೇ ಮಂಗಳ ವಾದ್ಯಗಳ ಸಮೇತ, ಎಲ್ಲಾ ಹೆಣ್ಣು ಮಕ್ಕಳೂ ತಮ್ಮ ತಮ್ಮ ಪಲ್ಲಕ್ಕಿಗಳನ್ನು ಮತ್ತೆ ತಲೆಯ ಮೇಲೆ ಹೊತ್ತು... ಗಂಡಸರು ಕತ್ತರಿಸಿದ ಕುರಿಯ ದೇಹದ ಭಾಗಗಳನ್ನು ಹೊತ್ತು, ಮೆರವಣಿಗೆಯಲ್ಲಿ ಅಲ್ಲಿಂದ ನಿರ್ಗಮಿಸುತ್ತಾರೆ. ಇಷ್ಟರ ಮಧ್ಯದಲ್ಲಿ, ಅಲ್ಲಿ ಪುಟ್ಟ ಹಸಿರು ಚಪ್ಪರದ ಕೆಳಗ ಪ್ರತಿಷ್ಠಾಪಿಸಲ್ಪಟ್ಟ ದೇವರನ್ನೂ ವರ್ಗಾಯಿಸಿಬಿಟ್ಟಿರುತ್ತಾರೆ. ಚಪ್ಪರ ಹರಿದು.. ಅವಶೇಷಗಳು ಮಾತ್ರ, ಅಲ್ಲಿ ನಡೆದ ಬಲಿಗೆ ಸಾಕ್ಷಿಯಾಗಿ ನಿಂತಿರುತ್ತದೆ. ಇಡೀ ವಾತಾವರಣ ಒಮ್ಮೆಗೇ ಸ್ಥಬ್ಧವಾಗಿ ಬಿಟ್ಟಿರುತ್ತದೆ.......

ಗ್ರಾಮದೇವತೆಗಳ ಹಬ್ಬ ಎಂದು ಅತ್ಯಂತ ಸಂಭ್ರಮ, ಆಸಕ್ತಿಯಿಂದ ನೋಡುತ್ತಿದ್ದ ನಾನು, ಹಟಾತ್ತನೆ ನನ್ನೆದುರೇ ನಡೆದ ಈ ಬಲಿಯನ್ನು ನೋಡಿ ನಿಜಕ್ಕೂ ಆಘಾತಗೊಂಡಿದ್ದೆ. ಮೈದಾನದಲ್ಲಿ ಚೆಲ್ಲಿದ್ದ ರಕ್ತ ನಡೆದ ಘಟನೆಗೆ ಸಾಕ್ಷಿ.... ಎರಡು ದಿನಗಳ ನಂತರ ಹಾಗೇ ಮಣ್ಣಲ್ಲಿ ಬೆರೆತು ರಕ್ತ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲೇ ಇಲ್ಲವೇನೋ ಎಂಬಂತೆ ನೋಡುವವರಿಗೆ ಅನ್ನಿಸುತ್ತದೆ. ನಿರ್ಭಾವುಕತೆಯಿಂದ ನಿಂತ ಮೈದಾನ, ತನ್ನ ಮಡಿಲಲ್ಲಿ ನಡೆದ ಹತ್ಯೆಗೆ ನೊಂದಿತೋ.... ಇದು ಪ್ರತೀ ವರ್ಷ ನಡೆಯುವುದೇ.... ಎಷ್ಟೆಂದು ದು:ಖ ಪಡಲಿ ಎಂದು ಕೊಂಡಿತೋ ಗೊತ್ತಿಲ್ಲ. ಆದರೆ ಬಲಿಕೊಟ್ಟಿದ್ದನ್ನು ನೋಡಿದ ನನ್ನ ನಿದ್ದೆ ಮಾತ್ರ ಮಾರುದೂರ ಹಾರಿಹೋಗಿತ್ತು....

ಸರಕಾರ ಬಲಿಯನ್ನು ನಿಷೇಧಿಸಿದ್ದರೂ.... ಹೀಗೆ ಸಾರ್ವಜನಿಕವಾಗಿ ನಡೆಸುತ್ತಾರಲ್ಲಾ... ಎಂಬ ಮಾತು ನನಗೆ ನೋವು ತಂದಿತ್ತು... ದೇವರನ್ನು ಒಲಿಸಿಕೊಳ್ಳಲು ಈ ಮಾರ್ಗವೇ ಏಕೆ ಬೇಕು...? ಸಾತ್ವಿಕವಾಗಿ ಕರೆದರೆ ನಮ್ಮ ಕರೆಯನ್ನು ದೇವರು ಕೇಳಿಸಿಕೊಳ್ಳುವುದಿಲ್ಲವೇ...? ಹತ್ತಾರು ಪ್ರಶ್ನೆಗಳು ನನ್ನನ್ನು ಕಾಡತೊಡಗಿದ್ದವು....