Saturday, June 25, 2011

ದೇಹ ದೇವಾಲಯ - ೨

ದೇಹವನ್ನೇ ದೇವಾಲಯವಾಗಿಸದೇ ಇದ್ದಲ್ಲಿ ನಮಗೆ ಮುಕ್ತಿಯ ಅನುಭವವಾಗದು ಎಂದ ಶಿವಶರಣರ ವಚನಗಳನ್ನು ನೋಡಿದಾಗ, ನನಗೆ ನಮ್ಮ ದಾಸವರೇಣ್ಯರ ಸಾಹಿತ್ಯದಲ್ಲೂ ಇದೇ ಅರ್ಥದ ಸ್ವಲ್ಪ ಬೇರೆ ಪ್ರಾಕಾರದಲ್ಲಿ ಹೇಳಲ್ಪಟ್ಟಿರುವ ಪದಗಳು ನೆನಪಾದವು. ಅವುಗಳನ್ನು ಪರಿಚಯಿಸುವ ಚಿಕ್ಕ ಪ್ರಯತ್ನ ಇಲ್ಲಿ...

ವಿಜಯದಾಸರು "ಲಿಂಗ.. ರಾಮಲಿಂಗ ಎನ್ನಂತರಂಗ" ಎನ್ನುತ್ತಾ.. "ಚಿತ್ತ ನಿನ್ನಯ ಚಿಂತೆಯೊಳಿರಲಿ.. ಅಂತರಂಗದಲ್ಲಾನಂದಿಸಲಿ" ಎಂದು ಹೇಳುತ್ತಾ, ನಮ್ಮ ಚಿತ್ತವನ್ನು ಸದಾ ಭಗವಂತನ ಧ್ಯಾನದಲ್ಲಿಡಬೇಕು ಎನ್ನುತ್ತಾರೆ. ನಕದಾಸರು "ತನು ನಿನ್ನದು.. ಜೀವನ ನಿನ್ನದೂ ರಂಗ.." ಎನ್ನುತ್ತಾ ತಮ್ಮ ತನುವೂ ಶ್ರೀ ಹರಿಯದೇ ಮತ್ತು ಜೀವನವೂ ಶ್ರೀಹರಿಯದೇ ಎಂದು ತಮ್ಮನ್ನೇ ಸಮರ್ಪಿಸಿಕೊಂಡು ಬಿಡುತ್ತಾರೆ. ಹೀಗೆ ದಾಸ ಶ್ರೇಷ್ಠರೆಲ್ಲರೂ ಕೂಡ ನಾವು ನಮ್ಮ ತನುವನ್ನೂ, ಮನವನ್ನೂ ಪರಮಾತ್ಮನಿಗೇ ಮೀಸಲಾಗಿಡಬೇಕೆಂದೂ ಅವನಲ್ಲಿ ಲೀನವಾಗುವುದೇ ನಮ್ಮ ಬದುಕಿನ ಗುರಿಯಾಗಬೇಕೆಂದೂ ಹೇಳುತ್ತಾರೆ.

ಕನ್ನಡದಲ್ಲಿ ದೇವರನಾಮಗಳನ್ನು ರಚಿಸಿ ಭಾಗವತ ಧರ್ಮ ಪ್ರಚಾರವನ್ನು ಪ್ರಾರಂಭಿಸಿದವರಲ್ಲಿ ಶ್ರೀಪಾದರಾಯರು ಮೊದಲಿಗರಾದ್ದರಿಂದ ಹರಿದಾಸ ಪೀಳಿಗೆಯವರು ಮೊದಲುನಮಃ ಶ್ರೀಪಾದರಾಜಾಯಎಂದು ರಾಯರಿಗೆ ವಂದಿಸುವ ಸಂಪ್ರದಾಯವಿದೆ. ಶ್ರೀಪಾದರಾಜರು “ರಂಗವಿಠಲಮತ್ತುಶ್ರೀರಂಗಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳು, ಸುಳಾದಿಗಳನ್ನು ಸರಳವಾಗಿ ಹೃದಯಂಗಮವಾಗಿ ರಚಿಸಿದ್ದಾರೆ. ಇವರ ನಾ ನಿನಗೇನೂ ಬೇಡುವುದಿಲ್ಲ ಎನ್ನ..... ಹೃದಯ ಕಮಲದೊಳು ನಿಂದಿರು ಹರಿಯೇ ಎಂಬ ಪದದಲ್ಲಿ

ಶಿರ ನಿನ್ನ ಚರಣದಲ್ಲೆರಗಲಿ ಎನ್ನ

ಚಕ್ಷುಗಳು ನಿನ್ನ ನೋಡಲಿ ಹರಿಯೇ

ಕರ್ಣ ಗೀತಂಗಳ ಕೇಳಲಿ ಎನ್ನ

ನಾಸಿಕ ನಿರ್ಮಾಲ್ಯ ಘ್ರಾಣಿಸಲಿ ಹರಿಯೆ ||

ನಾಲಿಗೆ ನಿನ್ನ ಕೊಂಡಾಡಲಿ ಎನ್ನ

ಕರಗಳೆರಡು ನಿನಗೆ ಮುಗಿಯಲಿ ಹರಿಯೆ

ಪಾದ ತೀರ್ಥಯಾತ್ರೆ ಹೋಗಲಿ ನಿನ್ನ

ಧ್ಯಾನ ಎನಗೊಂದು ಕೊಡು ಕಂಡ್ಯ ಹರಿಯೆ ||

ಬುದ್ಧಿ ನಿನ್ನೊಳು ಬೆರೆತ್ಹೋಗಲಿ ಎನ್ನ

ಚಿತ್ತ ನಿನ್ನಲಿ ನಲಿದಾಡಲಿ ಹರಿಯೆ

ಭಕ್ತ ಜನರ ಸಂಗವು ದೊರಕಲಿ ರಂಗ

ವಿಠಲ ನಿನ್ನ ದಯವಾಗಲಿ ಹರಿಯೆ |೩|

ಎನ್ನುತ್ತಾ ನಮ್ಮ ದೇಹದ ಒಂದೊಂದು ಅಂಗವೂ ಕೂಡ ಹೇಗೆ ನಿರುತ ಹರಿಯ ಧ್ಯಾನದಲ್ಲೇ, ಸ್ಮರಣೆಯಲ್ಲೇ, ನಮಿಸುವುದರಲ್ಲೇ ಮಗ್ನವಾಗಿರಬೇಕು, ಹರಿ ನಮಗೆ ಪ್ರಸಾದಿಸಿದ ದೇಹವನ್ನು ಸದುಪಯೋಗ ಪಡಿಸಿಕೊಳ್ಳ ಬೇಕೆಂದು ವಿವರಿಸುತ್ತಾರೆ.


ಕ್ರಿ.ಶ. ೧೪೪೭ರಲ್ಲಿ ಜನಿಸಿ, ಬ್ರಹ್ಮಣ್ಯ ತೀರ್ಥರ ಶಿಷ್ಯರೂ ಹಾಗೂ ಶ್ರೀಪಾದರಾಯರ ಶಿಷ್ಯರೂ ಆದ ಶ್ರೀ ವ್ಯಾಸತೀರ್ಥರು “ಶ್ರೀಕೃಷ್ಣ” ಎಂಬ ಅಂಕಿತದಿಂದ ಅನೇಕ ಸುಳಾದಿಗಳನ್ನೂ, ವೃತ್ತನಾಮಗಳು ಮತ್ತು ದೇವರನಾಮಗಳನ್ನು ರಚಿಸಿದರು. ಅವರ ಒಂದು ಪದ

ಅಂತರಂಗದಲಿ ಹರಿಯ ಕಾಣದವ ಹುಟ್ಟು ಕುರುಡನೋ

ಸಂತತ ಸಿರಿಕೃಷ್ಣ ಚರಿತೆ ಕೇಳದವ ಜಡಮತಿ ಕಿವುಡನೋ ಎಂದೆಂದಿಗೂ ||

ಹರುಷದಿಂದಲಿ ನರಹರಿಯ ಪೂಜೆಯ | ಮಾಡದವನೆ ಕೈ ಮುರಿದವನೋ |

ಕುರುವರಸೂತನ ಮುಂದೆ ಕೃಷ್ಣಾ ಎಂದು | ಕುಣಿಯದವನೆ ಕುಂಟನೋ ||

ಶ್ರೀ ವ್ಯಾಸತೀರ್ಥರು ನಮ್ಮ ಶ್ರೀಹರಿಯ ಪೂಜೆಯ ಮಾಡದ ಕೈಗಳು ಇದ್ದರೂ ಅದು ಮುರಿದ, ಉಪಯೋಗಕ್ಕೆ ಬಾರದ ಮೊಂಡು ಕೈನಂತೆ, ಕುರುಗಳಲ್ಲಿ ಶ್ರೇಷ್ಠನಾದ ಅರ್ಜುನನ ರಥ ನಡೆಸುವವನಾದ ಕೃಷ್ಣನನ್ನು ಕಂಡು, ಆನಂದದಿಂದ ಕುಣಿಯಲಾರದ ಕಾಲುಗಳು ಇದ್ದರೂ ಉಪಯೋಗವಿಲ್ಲದೆ, ಅವನು ಕುಂಟನಿಗೆ ಸಮನಾದವನು ಎಂದೂ, ನಿರಂತರವಾಗಿ ಹರಿಯ ಲೀಲೆಗಳನ್ನು ಕೇಳದ ಕಿವಿಗಳು ಇದ್ದರೂ ಆ ಮನುಷ್ಯ ಕಿವುಡನಿಗೆ ಸಮನಾದವನು ಮತ್ತು ತನ್ನೊಳಗೇ ನೆಲೆಸಿರುವ ಕರುಣಾ ಮೂರುತಿ ಪರಮಾತ್ಮ ಶ್ರೀ ಹರಿಯ ಕಾಣದ ಕಣ್ಣುಗಳು ಇದ್ದರೂ ಕುರುಡನೇ ಎಂದು ನಮ್ಮ ಇಂದ್ರಿಯಗಳ ಉಪಯೋಗದ ರೀತಿ ವಿವರಿಸುತ್ತಾರೆ.

ಶ್ರೀ ವ್ಯಾಸತೀರ್ಥರು ತಮ್ಮ ಸೇರಿದೆನು ಸೇರಿದೆನು ಜಗದೀಶನ | ನರಕ ಜನ್ಮದ ಭಯವು ಎನಗೆ ಇನಿತಿಲ್ಲ|| ಎಂಬ ಪದದಲ್ಲಿ

ನೇತ್ರಗಳು ಕೃಷ್ಣನ ಮೂರ್ತಿಯನು ನೋಡುತಿವೆ |

ಶ್ರೋತೃಗಳು ಹರಿಕಥೆಯ ಕೇಳುತಲಿವೆ |

ರಾತ್ರಿ ಹಗಲು ಎನ್ನ ಮನಸು ಶ್ರೀರಂಗನಲಿ|

ಪಾತ್ರವಾಡುತಿದೆನ್ನ ಗಾತ್ರ ಕೃಷ್ಣನ ಮುಂದೆ |೧|

ಹಸ್ತಗಳು ಮಂಟಪದ ಮಾರ್ಜನೆಯ ಮಾಡುತಿವೆ | ಮಸ್ತಕವು ಶ್ರೀ ಹರಿಯ ಚರಣಕೆರಗುತಿವೆ |

ವಿಸ್ತಾರವಾಗಿ ಪದ ಪ್ರದಕ್ಷಿಣೆಯ ಮಾಡುತಿದೆ | ಕಸ್ತೂರಿ ಗಂಧವಾಘ್ರಾಣಿಸುತಿದೆ ನಾಸಿಕವು |೨|

ಹರಿನಾಮ ಕೀರ್ತನೆಯ ಮಾಡುತಿದೆ ಎನಜಿಹ್ವೆ | ಹರಿನಾಮಜನ್ಯ ಪಾವನತೆಯಿಂದ |

ಹರಿಪ್ರೀತಿಯಾಗಿದೆ ನೋಡಿದರೆ ಎನದೇಹ | ಸಿರಿಕೃಷ್ಣ ನೆಲಸಯ್ಯ ಎನ್ನ ಮನಮಂದಿರದಿ |೩|

ನಿರಂತರ ಅಂತರಂಗದಿ ಹರಿ ಧ್ಯಾನ ಮಾಡುತ್ತಾ, ದೇಹವೆಂಬ ಈ ಶರೀರ ಜೀವನದ ನಾಟಕದಲ್ಲಿ ಪಾತ್ರ ಮಾಡುತ್ತಿರ ಬೇಕು. ನಮ್ಮೆರಡು ಕೈಗಳು ಶ್ರೀಹರಿಯು ಆಸೀನನಾಗಿರುವ ಮಂಟಪವನ್ನು ಸದಾ ಶುಚಿಗೊಳಿಸುತ್ತಿರಬೇಕು. ಶಿರವು ಸದಾ ಚರಣಾರವಿಂದಗಳಲ್ಲಿ ಎರಗಿರಬೇಕು. ನಾಲಿಗೆಯು ಸದಾ ಹರಿನಾಮ ಜಪ ಮಾಡುತ್ತಿರಬೇಕು. ಹರಿನಾಮ ಜಪದಿಂದ ಪಾವನವಾಗಿಹ, ಹರಿಪ್ರೀತಿಯಿಂದ ಶುದ್ಧವಾಗಿಹ ಈ ನನ್ನ ದೇಹದಲ್ಲಿರುವ ಮನವೆಂಬ ಮಂದಿರದಲ್ಲಿ ಬಂದು ನೆಲೆಸಯ್ಯಾ ಎನ್ನೊಡೆಯ ಶ್ರೀ ಕೃಷ್ಣ ಎನ್ನುತ್ತಾರೆ. ಹೀಗೆ ಶ್ರೀಹರಿಯೇ ನೆಲೆಸಿರುವ ನನ್ನ ಈ ಆತ್ಮಕ್ಕೆ, ಶ್ರೀಹರಿಯ ನಿರಂತರ ಧ್ಯಾನದಲ್ಲೇ ಮುಳುಗಿರುವ ನನಗೆ ಯಾವ ಭಯಾನಕ ನರಕದ ಭಯವೂ ಇಲ್ಲ ನಾನು ಕಾಯಾ, ವಾಚಾ, ಮನಸಾ ನನ್ನ ಆರಾಧ್ಯ ದೈವ ಜಗದೀಶನನ್ನು ಸೇರಿಬಿಟ್ಟಿರುವೆ ಎನ್ನುತ್ತಾರೆ.

ಶ್ರೀವ್ಯಾಸತೀರ್ಥರ ಇನ್ನೊಂದು ಪದ ಅತ್ಯಂತ ಶ್ರೇಷ್ಠವಾದ ಭಾವವನ್ನು ಹೊಂದಿದೆ ಎಂದು ನನ್ನ ಅನಿಸಿಕೆ. ಅದು ಯಾವುದೆಂದರೆ

ಎನ್ನ ಬಿಂಬ ಮೂರುತಿಯ ಪೂಜಿಸುವೆ ನಾನು | ಮನಮುಟ್ಟಿ ಅನುದಿನದಿ ಮರೆಯದೆ ಜನರೇ ||

ಈ ಪದ್ಯದಲ್ಲಿ ದಾಸರು ಭಗವಂತನನ್ನು “ಬಿಂಬ” ಮೂರುತಿ ಎಂದಿದ್ದಾರೆ. ಅಂದರೆ ಶ್ರೀಹರಿ ಬಿಂಬ ಮತ್ತು ಭಕ್ತರು ಅವನ ಪ್ರತಿಬಿಂಬ ಎನ್ನುವ ಮಾತು ಇಲ್ಲಿ ಸ್ಪಷ್ಟೀಕರಣ ಮಾಡಿದ್ದಾರೆ.

ಗಾತ್ರವೇ ಮಂದಿರ ಹೃದಯವೇ ಮಂಟಪ | ನೇತ್ರವೇ ಮಹದ್ದೀಪ ಹಸ್ತ ಚಾಮರವು ||

ಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರ | ಶಾಸ್ತ್ರ ಮಾತುಗಳೆಲ್ಲ ಮಂತ್ರಗಳು |೧|

ಇಲ್ಲಿ ದೇಹ ದೇವಾಲಯವಾಗಿಸುವ ಮಾತು ತುಂಬಾ ಸಮರ್ಥವಾಗಿ ಬಂದಿದೆ. ಗಾತ್ರವೆಂಬುದೇ ದೇಹ ಮತ್ತು ದೇವಾಲಯವೆಂದಾಗ, ನಮ್ಮ ಅಂತರಂಗ ಅಥವಾ ಹೃದಯ ಭಗವಂತ ನೆಲೆಸುವ ಗರ್ಭಗುಡಿ ಅಥವಾ ಮಂಟಪವಾಗುತ್ತದೆ. ದೇದೀಪ್ಯಮಾನವಾಗಿ ಬೆಳಗುವ ಎರಡು ನೇತ್ರಗಳು ದೇವರ ಮುಂದೆ ಬೆಳಗುವ ಜೋಡಿ ದೀಪಗಳು. ಮೇಲೆ ಕೆಳಗೆ ಆಡುವ ಎರಡು ಹಸ್ತಗಳು ಚಾಮರವಾಗುತ್ತವೆ. ನಾವು ಮಾಡುವ ಎಲ್ಲಾ ತೀರ್ಥ ಯಾತ್ರೆಗಳೂ ನಾವು ಭಗವಂತನಿಗೆ ಮಾಡುವ ವಿಸ್ತಾರವಾದ ಪ್ರದಕ್ಷಿಣೆಯಾಗುತ್ತದೆ. ನಮ್ಮ ದೇಹ ಹರಿ ಚಿಂತನೆಯನ್ನೇ ಮಾಡುತ್ತಾ ಮಲಗಿದಾಗ ಅದು ಭಗವಂತನಿಗೆ ಅರ್ಪಿಸುವ ನಮಸ್ಕಾರ ಮತ್ತು ನಾವು ಆಡುವ ಎಲ್ಲ ಮಾತುಗಳೂ ಅವನಿಗೆ ಅರ್ಪಿಸುವ ಮಂತ್ರಗಳು.

ಎನ್ನ ಸ್ವರೂಪವೆಂಬುದೇ ರನ್ನಗನ್ನಡಿ | ಎನ್ನ ಮನೋವೃತ್ತಿಎಂಬುದೇ ಛತ್ರಿಕೆ |

ಇನ್ನು ನುಡಿವ ಹರಿನಾಮಾಮೃತವೇ ತೀರ್ಥ | ಎನ್ನ ಮನವೆಂಬುದೇ ಸಿಂಹಾಸನ |೨|

ಅನ್ಯ ದೇವತೆ ಯಾಕೆ ? ಅನ್ಯ ಪ್ರತಿಮೆ ಯಾಕೆ ? | ಅನ್ಯವಾದ ಮಂತ್ರ ತಂತ್ರವೇಕೆ ಎನ್ನಲಿ |

ಭರಿತ ಸಾಧನೆಗಳು ಇರುತಿರಲು | ಚೆನ್ನಾಗಿ ಶ್ರೀ ಕೃಷ್ಣ ಸ್ವಾಮಿಯ ಪೂಜಿಸುವೆ |೩|

ನನ್ನದಾದ ಸ್ವರೂಪವೇ ನನ್ನ ಭಗವಂತನ ಪ್ರತಿಬಿಂಬ (ನನ್ನನ್ನೇ) ತೋರಿಸುವ ಅತಿಶಯವಾದ ಹೊನ್ನಿನ, ರತ್ನದ ಕನ್ನಡಿ. ಹರಿನಾಮ ಸ್ಮರಣೆಯ ಅಮೃತವೇ ತೀರ್ಥ. ಹೀಗೆ ಈ ನನ್ನ ದೇಹವೆಂಬುದು ಶ್ರೀಹರಿಯ ಪೂಜೆಗೆ ಬೇಕಾಗುವ ಎಲ್ಲ ಸಾಧನ ಸಲಕರಣೆಗಳನ್ನು ಹೊಂದಿರುವಾಗ, ಪರಮಾತ್ಮ ನನ್ನೊಳಗೇ ಬಿಂಬರೂಪಿಯಾಗಿದ್ದು, ನಾನವನ ಪ್ರತಿಬಿಂಬವಾಗಿರುವಾಗ ನನಗೆ ಬೇರೆ ಮಂತ್ರಗಳಾಗಲಿ, ಪ್ರತಿಮೆಯಾಗಲಿ ಬೇಕಿಲ್ಲ. ನನ್ನ ಕಾಯವನ್ನೇ ಮಂದಿರವಾಗಿಸಿಕೊಂಡು, ಶ್ರೀಹರಿಯ, ಮುದ್ದು ಮೊಗದ ಶ್ರೀ ಕೃಷ್ಣನ ಸೇವಿಸುವೆ, ಪೂಜಿಸುವೆ, ಆರಾಧಿಸುವೆ, ಮುಕ್ತಿಯನ್ನು ಪಡೆಯುವೆ ಎನ್ನುತ್ತಾರೆ ಶ್ರೀ ವ್ಯಾಸರಾಯರು.

ನಮ್ಮ ನಮ್ಮ ಅಂತರಂಗದೊಳಗಿರುವ ದೇವನ ಕಾಣುವ ಪರಿಯನ್ನು ಸುಲಭ ಹಾಗೂ ಸರಳ ಮಾತುಗಳಲ್ಲಿ ವಿವರಿಸುತ್ತಾರೆ ನಮ್ಮ ದಾಸವರೇಣ್ಯರು.ದಾಸರ ಪದಗಳನ್ನು ಆರಿಸಿ ಕೊಟ್ಟ ಸತ್ಯವತಿ ಅಕ್ಕನಿಗೆ ವಿಶೇಷ ಧನ್ಯವಾದಗಳು.
ಚಿತ್ರಕೃಪೆ : ಅಂತರ್ಜಾಲ


Wednesday, June 1, 2011

ದೇಹ - ದೇವಾಲಯ

ಬ್ರಹ್ಮಮು ಬಯಲೈ ವುಂಡಗ

ವೆದಕುಚು ಭುವಿಯೆಲ್ಲ ತಿರುಗು ವೆರ್ರುಲು ಕಲರಾ ?

ವೆದಕವಲೇ ಘಟಮು ಚೊರಬಡಿ

ಚಿಕ್ಕುನು ಬ್ರಹ್ಮಂಬಪ್ಪುಡು ಶೀಘ್ರಂಬುನನು ||

ಬ್ರಹ್ಮವು ಸರ್ವತ್ರ ವ್ಯಾಪಿಸಿ ಬಯಲಾಗಿರುವಾಗ ಹುಡುಕುತ್ತ ಭೂಮಂಡಲವೆಲ್ಲ ಅಲೆಯುವ ಹುಚ್ಚರುಂಟೆ ?

ದೇಹದ ಒಳಹೊಕ್ಕು ಹುಡುಕಬೇಕು. ಆಗ ಬ್ರಹ್ಮವು ಶೀಘ್ರವಾಗಿ ಸಿಕ್ಕುತ್ತದೆ.

ನಿನ್ನು ನೀವೇ ತೆಲಿಯ ರಾ - ನೀಲೋ ವುನ್ನದಿ ದ್ಯಾವರಾ - ನಿನ್ನನ್ನು ನೀನೇ ತಿಳಿ.. ನಿನ್ನೊಳಗೆ ಇದ್ದಾನೆ ದೇವರು ಎನ್ನುತ್ತಾರೆ ಕೈವಾರ ತಾತಯ್ಯನವರು.

ಪ್ರತಿಯೊಂದು ಆತ್ಮವೂ ಈ ಜಗತ್ತಿನಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಒಂದು ದೇಹಕ್ಕೆ ಸೇರಲೇ ಬೇಕು. ತನ್ನ ಕರ್ಮಗಳಿಗನುಸಾರವಾಗಿ, ದೇಹವನ್ನು ಧರಿಸಿ, ಲ್ಲಿ ಅಂದರೆ ಈ ಭೌತಿಕ ಜಗತ್ತಿನಲ್ಲಿ ಯಾವುದೋ ಒಂದು ಹೆಸರಿನಿಂದ, ಯಾರದೋ ಮಗ/ಮಗಳು, ತಂಗಿ-ಅಕ್ಕ, ತಮ್-ಅಣ್ಣ, ಸ್ನೇಹಿತ-ಸ್ನೇಹಿತೆ ಹೀಗೇ ನಾನಾ ತರದ ಸಂಬಂಧಗಳಿಂದ ಗುರುತಿಸಲ್ಪಡುತ್ತದೆ. ಆದರೆ ಆತ್ಮದ ನಿಜವಾದ ಪರಿಚಯ ಆ ಆತ್ಮಕ್ಕೇ ತಿಳಿದುಕೊಳ್ಳುವ ಒಂದು ಅದ್ಭುತವಾದ ಅವಕಾಶವನ್ನು ಭಗವಂತ ಮನುಷ್ಯರಿಗೆ ಮಾತ್ರ ಕೊಟ್ಟಿದ್ದಾನೆ. ನಮಗೆ ನಮ್ಮದೇ ಆದ ಒಂದು "ವಿವೇಕ" ಕೊಟ್ಟಿದ್ದಾನೆ. ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದನ್ನು ತರ್ಕಿಸಿ ನೋಡುವ ಬುದ್ಧಿವಂತಿಕೆಯನ್ನೂ ಕೊಟ್ಟಿದ್ದಾನೆ. ಅದರ ಜೊತೆಗೇ.. ನಾವು ಆ ಭಗವಂತನನ್ನು ಅರಿಯುವ ಪ್ರಯತ್ನ ಮಾಡಬೇಕೆಂಬ ಪ್ರೇರಣೆಯನ್ನೂ ಕೊಡುತ್ತಾನೆ. ನಾವು ಜನ್ಮಗಳ ನಂತರ ಜನ್ಮಗಳನ್ನೆತ್ತುವುದೇ ನಮ್ಮನ್ನು ನಾವು, ನಮ್ಮ ಮೂಲ ಸ್ವರೂಪವನ್ನು ಅರಿಯಲು, ನಮ್ಮೊಳಗಿನ ಆ ಭಗವಂತನನ್ನು ಅರಿಯಲು. ಆದರೆ ಈ ಮೂಲವಾದ ಉದ್ದೇಶವನ್ನೇ ನಾವು ಮರೆತು ಬಿಟ್ಟಿರುತ್ತೇವೆ. ಯಾವುದೂ ನಮ್ಮದಲ್ಲಾ ಎಲ್ಲಾ ಅವನ ಕರುಣೆ ಎನ್ನುವುದನ್ನು ಮರೆತು ನಮ್ಮ "ವಿವೇಕ"ವನ್ನು ನಮ್ಮ ಅಹಂಕಾರ ಬೆಳೆಸುವುದರಲ್ಲೇ ವ್ಯಯ ಮಾಡಿ, ಮತ್ತೆ ಮತ್ತೆ ಕರ್ಮಗಳನ್ನು ಮಾಡುತ್ತಾ, ಜನ್ಮಗಳನ್ನು ಎತ್ತುತ್ತಾ ಮುಗಿಯದ ಸುಳಿಯಲ್ಲಿ ಸಿಲುಕಿ ಬಿಡುತ್ತೇವೆ. ಈ ಒಂದು ವರ್ತುಲದಿಂದ ನಮ್ಮನ್ನು ನಾವು ಬಿಡಿಸಿಕೊಳ್ಳಲು ನಮ್ಮ ಆತ್ಮ ಧರಿಸಿ ಬರುವುದೇ ದೇಹವನ್ನು ಎಂಬ ಒಂದು ಮಾತನ್ನು ನಾವು ಸ್ವಲ್ಪ ಆಳವಾಗಿ ಯೋಚಿಸಬಹುದು. ಪರಮಾತ್ಮನಲ್ಲಿ ಅಗಾಧ ನಂಬಿಕೆ ಇಟ್ಟು ಅವನನ್ನು ಅರಿಯು ಒಂದು ಅವಕಾಶ ನಮಗೆ ಹುಟ್ಟಿನಲ್ಲಿ ಲಭಿಸಿದೆ ಎಂಬ ಭಾವ
ನಮಗೆ ಬಂದಾಗ, ನಮ್ಮ ದೇಹ ನಮ್ಮ ಈ ಜೀವಕ್ಕೆ ಸಂಬಂಧ ಪಟ್ಟಿದ್ದು ಮಾತ್ರ ಒಳಗಿರುವ ಚೇತನ ಬೇರೆಯೇ ಇದೆ. ಜೀವಕ್ಕೆ ಸಂಬಂಧ ಪಟ್ಟಿದ್ದೆಲ್ಲಾ ಆ ಚೇತನಕ್ಕೆ ಸಂಬಂಧ ಪಟ್ಟಿರುವುದಿಲ್ಲ, ನಮ್ಮೊಳಗಿದ್ದರೂ, ಭಗವಂತ ನಮ್ಮಲ್ಲಿ ನೆಲೆಯಿಲ್ಲ ಎಂಬ ಸತ್ಯ ನಮಗೆ ಗೋಚರವಾದ ಕ್ಷಣದಿಂದ ನಾವು ಭಗವಂತನ ವರವಾಗಿ ನಮಗೆ ಲಭ್ಯವಾಗಿರುವ ಈ ದೇಹವನ್ನೇ ಒಂದು ದೇವಾಲಯವಾಗಿಸುವತ್ತ ಮನಸ್ಸು ತಿರುಗಿಸಬೇಕು. ದೇಹ ನಮಗೆ ಭಗವಂತನ ಅರಿವನ್ನು ತಿಳಿಯಲು ಸಿಕ್ಕಿರುವ ಒಂದು ಅಪೂರ್ವ ಸಾಧನ.
ದೇಹವನ್ನೇ ದೇಗುಲವಾಗಿಸುವುದೆಂಬ ಮಾತು ಮೇಲೆ ಕಂಡು ಬರುವಷ್ಟು ಸುಲಭ ಹಾಗೂ ಸರಳವಾಗಿಲ್ಲ. ನಾವು ದಿನ ನಿತ್ಯ ತಿಳಿದು ಮಾಡುವ
, ತಿಳಿಯದೇ ಮಾಡುವ, ಮಾನಸಾದಿ ಸಹಿತ ಕರ್ಮಗಳನ್ನೆಲ್ಲಾ ಅವಲೋಕನ ಮಾಡುಕೊಳ್ಳುತ್ತಾ.. ಎಚ್ಚರದಲ್ಲೂ, ನಿದ್ರೆಯಲ್ಲೂ, ಸದಾಕಾಲವೂ ಭಗವಂತನ ಸ್ಮರಣೆ ಮಾಡುತ್ತಾ, ಸಮಸ್ತವನ್ನೂ ಅವನಿಗೇ ಅರ್ಪಿಸುತ್ತಾ ಈ ಹುಟ್ಟಿನಿಂದ ಗುರುತಿಸಲ್ಪಟ್ಟಿರುವ ಈ ದೇಹವನ್ನು ಸ್ವಚ್ಚ ಮಾಡುವ ಕಾರ್ಯ ಶುರುವಾಗ ಬೇಕಾಗುತ್ತದೆ. ನಮ್ಮ ಮನಸ್ಸೆನ್ನುವುದು ಒಂದು ಖಾಲಿ ನಿವೇಶನದಂತೆ. ನಿವೇಶನದಲ್ಲಿ ಮನೆಯನ್ನು ಕಟ್ಟಬೇಕಾದರೆ ಹೇಗೆ ನೆಲವನ್ನು ಅಗೆದು, ಮಣ್ಣು ಸಡಿಲಿಸಿ, ಕಸ ಕಡ್ಡಿ, ಕಲ್ಲುಗಳನ್ನು ಹೆಕ್ಕಿ ದೂರ ಬಿಸುಟು, ಆಳವಾದ ಗುಂಡಿಯನ್ನು ತೋಡಿ, ನೆಲದೊಳಗಿಂದ ಅಡಿಪಾಯ ಹಾಕಿ ಮೇಲಿನ ಮನೆ ಗಟ್ಟಿಯಾಗಿ ನೆಲೆ ನಿಲ್ಲುವಂತೆ ಮಾಡುತ್ತೇವೆಯೋ ಹಾಗೆ, ನಮ್ಮ ಮನಸ್ಸನ್ನೂ ಮೊದಲು ನಾವು ಅಗೆದು, ಶುಚಿಗೊಳಿಸಬೇಕು. ಕಸ ಕಡ್ಡಿ ಹೆಕ್ಕಿದಂತೆ, ನಾವು ಆಡುವ ಪ್ರತಿಯೊಂದು ಅನವಶ್ಯಕ ಶಬ್ದಗಳನ್ನೂ ಹೆಕ್ಕಿ ದೂರ ಬಿಸಾಡಬೇಕು. ಹಲವಾರು ಜನ್ಮಗಳಿಂದಲೂ ಗಂಟುಗಳಾಗಿ ಬೆಳೆಸಿಕೊಂಡು ತಂದಿರುವಂತಹ ಅನೇಕ ಋಣಾತ್ಮಕ ಭಾವಗಳನ್ನೂ, ಅಹಂಕಾರವನ್ನೂ ಬುಡ ಸಮೇತ ಕಿತ್ತು ಎಸೆಯಬೇಕು. ತಿಳಿಯಾದ ಧನಾತ್ಮಕ ಭಾವವನ್ನು ಬೆರೆಸಿ, ಪ್ರೇಮ ಜಲದಿಂದ ಮನಸ್ಸೆಂಬ ನೆಲವನ್ನು ನೆನೆಸಿ, ಅಗೆದು, ಭದ್ರವಾದ ಭಕ್ತಿಯೆಂಬ ಬುನಾದಿಯನ್ನು ಹಾಕಬೇಕು. ಅದರ ಮೇಲೆ ಕಲ್ಲು, ಇಟ್ಟಿಗೆ, ಸಿಮೆಂಟು, ಮರಳು ಎಂಬ ಸರಿಯಾದ ಪ್ರಮಾಣದಲ್ಲಿ ಬೆರೆತ ವಸ್ತುಗಳಿಂದ ಗಟ್ಟಿಯಾದ ಗೋಡೆಗಳನ್ನು ಕಟ್ಟಬೇಕು. ಇಲ್ಲಿ ಗೋಡೆಗಳು ಎಂದರೆ, ನಾವು ನಮ್ಮ ಮನದಲ್ಲಿ ನಿರಂತರವಾಗಿ ಬರುವ ದುಷ್ಟ ವಿಚಾರಗಳನ್ನು, ಋಣಾತ್ಮಕ ಭಾವಗಳನ್ನು ಅಡ್ದಗಟ್ಟಲು ಶಕ್ಯವಾಗುವ ಭಗವಂತ ಸ್ಮರಣೆಯ ಬಲು ಮಜಬೂತಾದ ಗೋಡೆಯನ್ನು ಕಟ್ಟಬೇಕೆಂಬ ಅರ್ಥ. ಹೀಗೆ ನಮ್ಮ ದೇಹವನ್ನು ದೇವಾಲಯವಾಗಿಸ ಬೇಕೆಂಬ ವಿಚಾರ ಹೊಸದಲ್ಲ. ಅನೇಕ ಶತಮಾನಗಳ ಹಿಂದಿನಿಂದಲೂ ನಮ್ಮ ಜನ್ಮದ ಉದ್ದೇಶ ಅರಿತಿದ್ದ ನಮ್ಮ ಶಿವಶರಣ / ಶರಣೆಯರ ಮತ್ತು ಸರ್ವಜ್ಞನ ವಚನಗಳಲ್ಲಿ ಈ ತತ್ವವನ್ನು ಕಾಣಬಹುದು.

ವಚನಗಳು ಎಂದಾಗ ಎಲ್ಲಕ್ಕಿಂತ ಮೊದಲು ನೆನಪಿಗೆ ಬರುವುದು ಬಸವಣ್ಣನವರ ಉಳ್ಳವರೂ ಶಿವಾಲಯವ ಮಾಡುವರಯ್ಯ.. ನಾನೇನು ಮಾಡಲಿ ಬಡವನಯ್ಯಾ....” ಇದರಲ್ಲಿ ಭಕ್ತಿ ಭಾವದಿಂದ ಬಸವಣ್ಣನವರು ತಮಗೆ ಶಿವನಲ್ಲಿ ಲಯಗೊಳ್ಳಲು ಭೌತಿಕವಾಗಿ ಆಲಯ ಕಟ್ಟಿಸುವ ಶಕ್ತಿಯಿಲ್ಲವೆಂದೂ, ಸಾಂಕೇತಿಕವಾಗಿ ಇಲ್ಲಿ ಹಣ ಮುಖ್ಯವಲ್ಲ ಮನವೇ ಮುಖ್ಯವೆಂದು ಹೇಳಿರುತ್ತಾರೆ. ಮುಂದುವರೆಯುತ್ತಾ ಅವರು ತಮ್ಮ ದೇಹವನ್ನೇ ಶಿವನ ಅಲಯವನ್ನಾಗಿ ಮಾಡುವ ವಿವರಣೆ ಕೊಡುತ್ತಾರೆ. ಎನ್ನ ಕಾಲೇ ಕಂಭವು, ದೇಹವೇ ದೇಗುಲ" ಎನ್ನುತ್ತಾ ತಮ್ಮೆರಡು ಕಾಲುಗಳನ್ನು ಕಂಭಗಳಾಗಿ ದೇಹವೆಂಬ ದೇಗುಲಕ್ಕೆ ಆಧಾರ ಮಾಡಿ ನಿಲ್ಲಿಸುತ್ತಾರೆ. ತಮ್ಮ ಶಿರವನ್ನೇ ಶಿವನ ಆಲಯದ ಹೊನ್ನ ಕಳಶವನ್ನಾಗಿಸುತ್ತಾರೆ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎನ್ನುವ ಮೂಲಕ ಈ ದೇಹ ನಶ್ವರ ಅದರೊಳಗಿನ ಆತ್ಮ ಮಾತ್ರ ನಿರಂತರ ಎಂಬ ಶ್ರೇಷ್ಠ ಮಾತು ಹೇಳುತ್ತಾರೆ. “ಲಯ” ವೆಂದರೆ ಸೇರಿ ಹೋಗುವುದು, ಲೀನವಾಗುವುದು ಎಂಬ ಅರ್ಥದಲ್ಲಿ... ಬಸವಣ್ಣನವರು ದೇಹವನ್ನು ದೇವನ ಅವಾಸ ಸ್ಥಾನವಾಗಿಸಿ ಸಾಧನೆಗೆ ಉಪಯೋಗಿಸಿಕೊಂಡು ನಮ್ಮ ಒಳಗಿರುವ ಅಂತರಾತ್ಮವನ್ನು ಮುಕ್ತಿ ಪಥದತ್ತ ನಡೆಯಿಸ ಬೇಕೆನ್ನುತ್ತಾರೆ.

ಅಕ್ಕಮಹಾದೇವಿಯವರ ವಚನಗಳಲ್ಲೂ ನಾವು ಈ ತತ್ವವನ್ನು ತುಂಬಾ ಗಾಢವಾಗಿ ಕಾಣಬಹುದು. ಅಕ್ಕ ತನ್ನ ಬದಕನ್ನು ಮಲ್ಲಿಕಾರ್ಜುನನ ಆರಾಧನೆಗೆ ಮೀಸಲಿಟ್ಟಳು. ಸಮಾಜದ ಎಲ್ಲ ಹಂಗುಗಳನ್ನೂ ತೊರೆದು ಸಾಧನೆಗೆ ನಡೆದವಳು ಮತ್ತು ಮಲ್ಲಿಕಾರ್ಜುನನನ್ನು ಒಲಿಸಿಕೊಂಡವಳು.

“ಅಂಗವ ಲಿಂಗಮುಖಕ್ಕೆ ಅರ್ಪಿಸಿ ಅಂಗ ಅನಂಗವಾಯಿತ್ತು

ಮನನ ಅರಿವಿಂಗರ್ಪಿಸಿ ಮನ ಲಯವಾಯಿತ್ತು

ಭಾವವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತು"

ಅಂಗ ಈಶ್ವರನ ಆಲಯವಾಗಿ ಹೋಗಿತ್ತು. ಮನದ ಕ್ಲೇಶಗಳನ್ನೆಲ್ಲಾ, ಆಸೆಗಳನ್ನೆಲ್ಲಾ ತೃಪ್ತಿಗೆ ಅರ್ಪಿಸಿದಾಗ ಮನವೇ ಉಳಿಯದೆ ಶೂನ್ಯವಾಗಿ ಹೋಯಿತು. ಭಾವವನ್ನು ತೃಪ್ತಿಯಾವರಿಸಿದಾಗ ಅದು ಕರಗಿ ಬಯಲಾಗಿ ಹೋಯಿತು. ಅಂಗ, ಮನ, ಭಾವ ಎಲ್ಲವೂ ಅಳಿದು ಬಿಟ್ಟಾಗ ದೇಹವೇ ಮಾಯವಾಯಿತು. ಮಲ್ಲಿಕಾರ್ಜುನನಲ್ಲಿ ಲೀನವಾದ ಆನಂದದ ಅನುಭವ ಅತ್ಮಕ್ಕಾಯಿತು. ಕಾಯ ಅಕಾಯವಾಯಿತ್ತು ಎನ್ನುತ್ತಾಳೆ.

ಕಾಯ ಪ್ರಸಾದವೆನ್ನ ಜೀವ ಪ್ರಸಾದವೆನ್ನ

ಪ್ರಾಣ ಪ್ರಸಾದವೆನ್ನ ಭಾವ ಪ್ರಸಾದವೆನ್ನ

ಸುಯಿದಾನ ಪ್ರಸಾದವೆನ್ನ ಸಮಯ ಪ್ರಸಾದವೆನ್ನ

ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಪ್ರಸಾದವ ಹಾಸಿ ಹೊದೆದು ಕೊಂಡಿಪ್ಪೆನು ||

ಎನ್ನುತ್ತಾ ಅಕ್ಕ ಹೇಗೆ ತನ್ನದೆಂದು ಈ ಭೌತಿಕ ಪ್ರಪಂಚದಲ್ಲಿ ಗುರುತಿಸಲ್ಪಡುವುದನ್ನೆಲ್ಲಾ ಮಲ್ಲಿಕಾರ್ಜುನನ ಪ್ರಸಾದವೆಂದು ಆ ಭಗವಂತನಿಗೇ ಸಮರ್ಪಿಸುತ್ತಾ... ನನ್ನ ದೇಹ, ಪ್ರಾಣ, ಭಾವ, ಜೀವ, ಸುಯಿದಾನ (ರಕ್ಷಣೆ), ಸಮಯ ಎಲ್ಲವೂ ನಿನ್ನದೆ ಪ್ರಸಾದ. ಅದನ್ನೇ ಹಾಸಿ, ಹೊದ್ದು, ಬದುಕಾಗಿಸಿ ಕೊಂಡಿದ್ದೇನೆ. ಅದನ್ನೇ.. ನಿನ್ನದನ್ನೇ ನಿನಗೇ ಅರ್ಪಿಸುತ್ತೇನೆ ಎನ್ನುತ್ತಾ....

ತನುವನುವಾಯಿತ್ತು... ಮನವನುವಾಯಿತ್ತು.... ಪ್ರಾಣವನುವಾಯಿತ್ತು”..... ಎನ್ನುತ್ತಾಳೆ. ತನ್ನ ತನುವನ್ನೂ, ಮನವನ್ನೂ, ಪ್ರಾಣವನ್ನೂ ಶುಚಿಗೊಳಿಸಿ ನಿರ್ಮಲ ಚಿತ್ತವನ್ನು ಚೆನ್ನ ಮಲ್ಲಿಕಾರ್ಜುನನೊಡನೆ ಲಯಗೊಳಿಸಿ.. ಬಾರಾ ಎಂದು ಆರ್ತಳಾಗಿ ಕರೆಯುವ ಪರಿ ಅತಿ ಭಾವುಕವಾಗಿದೆ.

ಸರ್ವಜ್ಞನ ವಚನಗಳಲ್ಲೂ ದೇಹದ ಮೋಹ ಬಿಟ್ಟು, ಭಕ್ತಿ – ವಿರಕ್ತಿ ಬೆಳೆಸಿಕೊಂಡು, ನಮಗೆ ವರವಾಗಿ ಸಿಕ್ಕಿರುವ ಈ ದೇಹವನ್ನು ಪರಮಾತ್ಮನ ಅರಿವು ಮೂಡಿಸಿಕೊಳ್ಳಲು ಸಾಧನವಾಗಿ ಮಾಡಿಕೊಳ್ಳುವ ಮಾತುಗಳು ತುಂಬಾ ಪರಿಣಾಮಕಾರಿಯಾಗಿಯೇ ಇವೆ. ನಮಗೆ ಈ ದೇಹವೆಂಬ ಚಿನ್ಹೆ ಸಿಕ್ಕಿರುವುದೇ ಪರಮಾತ್ಮನನ್ನು ಅರಿಯಲು ಎನ್ನುತ್ತಾ..

ಕುರುಹು ದೊರೆಯಿತು ದೇಹ ಅರಿವನರಿಯಿತು ಪ್ರಾಣ

ಹರುವಾಗಿ ಹೋಯ್ತು ಭವಪಾಶ ಮುಕ್ತಿಯ

ಎರವು ನಿರವಯವು ಸರ್ವಜ್ಞ " ||

ಯಾವಾಗ ಪ್ರಾಣವು ಜ್ಞಾನವನ್ನು ತಿಳಿಯಿತೋ ಆಗ ಈ ಭವವೆಂಬ ಸಂಸಾರದ ಮಾಯೆ ತೊಲಗಿ ಹೋಯಿತು ಎನ್ನುತ್ತಾರೆ.

ಭಕ್ತಿಯಿಂದಲೇ ಮುಕ್ತಿ ಭಕ್ತಿಯಿಂದಲೇ ಶಕ್ತಿ ಭಕ್ತಿಯೆಂಬುದೆ ಬೀಜ ಮುಕ್ತಿ ಎಂಬುದೇ ಫಲವು
ಭಕ್ತಿ ವಿರಕ್ತಿ ಯುಳಿದರೀ ಜಗದಲ್ಲಿ ಯುಕ್ತಿಯಿಂ ವೃಕ್ಷ ವೇರಿದಗೆ ಇಹದಲ್ಲಿ
ಮುಕ್ತಿಯಿಲ್ಲೆಂದ ಸರ್ವಜ್ಞ ಮುಕ್ತಿ ಇಹುದೆಂದ ಸರ್ವಜ್ಞ

ಭಕ್ತಿ, ಸಮರ್ಪಣೆ ಎಂಬುದು ಕಾಯಾ ವಾಚ ಮನಸಾ ಆಗದಿದ್ದರೆ ಆತ್ಮ ಸಾಕ್ಷಾತ್ಕಾರ ಆಗುವುದಿಲ್ಲವೆಂದು ಹೇಳುತ್ತಾ

ದೇಹ ದೇವಾಲಯವು ಜೀವವೇ ಶಿವಲಿಂಗ
ಬಾಹ್ಯಂಗಗಳಿದು ಭಜಿಪಂಗೆ ಮುಕ್ತಿ ಸಂದೇಹವಿಲ್ಲೆಂದ ಸರ್ವಜ್ಞ
ವೆನ್ನುತ್ತಾರೆ. ನಮ್ಮ ದೇಹವೇ ದೇವಾಲಯ / ಶಿವಾಲಯ ಆದರೆ.. ಒಳಗಿರುವ ಜೀವವೇ ಶಿವಲಿಂಗ. ನಮ್ಮ ಇಂದ್ರಿಯಗಳ ಅಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕಿ, ಸದಾ ಕಾಲ ಭಗವಂತನನ್ನು ಭಜಿಸುತ್ತಾ ಇರುವವನಿಗೆ ಮುಕ್ತಿಯು ನಿಶ್ಚಿತವಾಗಿದೆ ಎನ್ನುತ್ತಾನೆ ಸರ್ವಜ್ಞ.