Thursday, July 14, 2011

ಗುರು ಮಹಿಮೆ ...

ಆಷಾಢ ಮಾಸದ ಹುಣ್ಣಿಮೆಯ ದಿನ ನಾವು ಆಚರಿಸುವ, ಶ್ರೇಷ್ಠವಾದ ಹಬ್ಬವೆಂದರೆ “ಗುರು ಪೂರ್ಣಿಮೆ”. ಈ ದಿನ ನಾವು ನಮ್ಮ ಗುರುಗಳಿಗೆ ವಂದನೆ ಸಲ್ಲಿಸುವ ದಿನ. ಗುರುವಿನ ಮಹತ್ವವನ್ನು ಸಾರುವ ದಿನ. ಗುರು ನಮಗೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ, ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮವನ್ನು ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಆಧ್ಯಾತ್ಮದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟಲು ಸಹಾಯ ಮಾಡುವವನೇ “ಗುರು”. ಹುಡುಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ನಾವು ಗುರುವಿನ ಮುಖಾಂತರವೇ ಪರಮಾತ್ಮನ ಅರಿವು ಅರಿಯಬೇಕಾಗಿರುವುದರಿಂದ, ನಾವು ಆಷಾದ ಪೌರ್ಣಮಿಯಂದು ಮಾತ್ರ ಗುರುವನ್ನು ಪೂಜಿಸದೆ.. ಅನು ದಿನ, ಅನು ಕ್ಷಣ, ಗುರುವನ್ನು ಅಂತರಂಗದಲ್ಲೇ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲವೆಂಬ ಭಾವ ನಮ್ಮಲ್ಲಿ ಸದಾ ಜಾಗೃತವಾಗಿಟ್ಟುಕೊಂಡು, ಗುರುವಿನಲ್ಲಿ ಶರಣಾದರೆ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಸಫಲವಾಗುತ್ತದೆ.

ಉಪನಿಷತ್ತಿನ ಪ್ರಕಾರ “ಗು” ಎಂದರೆ ಅಂಧಕಾರವೆಂದೂ “ರು” ಎಂದರೆ ದೂರೀಕರಿಸುವವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವವ ಎಂಬ ಅರ್ಥವಾಗುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆಯೆನ್ನುತ್ತಾರೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ಗುರು ಎಂದು ಅರ್ಥೈಸಬಹುದೇನೋ.

ಸ್ಕಂದ ಪುರಾಣದ “ಗುರುಗೀತೆ”ಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನು ವಿಸ್ತಾರವಾಗಿ ತಿಳಿಸಿಲಾಗಿದೆ :

ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ |

ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀಗುರವೇ ನಮಃ |

ಆದಿಗುರು ಶ್ರೀ ಶಂಕರಾಚಾರ್ಯರು ಗುರು ಸ್ತೋತ್ರವನ್ನು ಹೀಗೆ ಹೇಳುತ್ತಾರೆ :

ಗುರುರ್ಬ್ರಹ್ಮಾ ಗುರುರ್ವಿಷ್ಣುಃ | ಗುರುರ್ದೇವೋ ಮಹೇಶ್ವರಃ |

ಗುರುಸ್ಸಾಕ್ಶಾತ್ ಪರಬ್ರಹ್ಮಃ | ತಸ್ಮೈ ಶ್ರೀ ಗುರವೇ ನಮಃ ||

ಗುರುವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ. ಅಂಥ ಗುರುವಿಗೆ ಪ್ರಣಾಮಗಳು ಎಂಬ ಅರ್ಥವಾಗುತ್ತದೆ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |

ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||

ಅಂದರೆ ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಕಡ್ಡಿಯಿಂದ ಗುಣಪಡಿಸಿ, ಶಿಷ್ಯನ ಏಳಿಗೆಗೆ ಬೇಕಾದ ಸೋಪಾನವನ್ನು ಹತ್ತಿಸುವ, ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.

ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಗುರುವಿನ ಮಹತ್ವವನ್ನು ಸಾರುತ್ತಾ
ನ ಗುರೋರಧಿಕಂ ತತ್ವಂ, ನ ಗುರೋರಧಿಕಂ ತಪಃ
|
ತತ್ವ ಜ್ಞಾನಾ
ತ್ ಪರಂ ನಾಸ್ತಿ, ತಸ್ಮೈ ಶ್ರೀ ಗುರವೇ ನಮಃ ||
ಅಂದರೆ
ಗುರುವಿಗಿಂತ ಮೀರಿದ
ತತ್ವ, ತಪಸ್ಸು ಬೇರೆ ಯಾವುದೂ ಇಲ್ಲ. ಜ್ಞಾನದ ದಾರಿದೀಪ ತೋರುವವನಾದ ಶ್ರೀ ಗುರುವೇ ನಿನಗೆ ವಂದನೆಗಳು ಎಂದು ಹೇಳಿದ್ದಾರೆ.

ಶಾಶ್ವತವಾದ ಆನಂದವನ್ನು ಹೊಂದುವುದು ಸದ್ಗುರುವಿನ ಅನುಗ್ರಹದಿಂದ ಮಾತ್ರವೇ ಸಾಧ್ಯವೆಂದು ಶ್ರೀ ಶಂಕರಾಚಾರ್ಯರು ತಮ್ಮ ಗುರ್ವಷ್ಟಕಮ್ ನಲ್ಲಿ ಕೂಡ ಹೀಗೆ ಹೇಳಿದ್ದಾರೆ :

ಶರೀರಂ ಸುರೂಪಂ ತಥಾ ವಾ ಕಲತ್ರಂ

ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ||೧||

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ

ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್ ||೨||

ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ ಶ್ರದ್ಧೆ ಇಲ್ಲದವನಿಗೆ ಮೋಕ್ಷವಿಲ್ಲ.

ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ

ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ ||೩||

ವೇದ, ಶಾಸ್ತ್ರ ಪಾರಂಗತನಾಗಿ ಅನೇಕ ವಿದ್ಯೆಗಳನ್ನು ತಿಳಿದವನಾಗಿದ್ದರೂ ಕೂಡ ಸದ್ಗುರುವಿನ ಚರಣಗಳಲ್ಲಿ ನಿಷ್ಠೆ ಇಡದಿದ್ದರೆ ಮುಕ್ತಿಯಿಲ್ಲ.

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ

ಸದಾಚಾರವೃತ್ತೇಷು ಮತ್ತೋ ನಾ ಚಾನ್ಯಃ ||೪||

ವಿದೇಶಗಳಲ್ಲಿ ತುಂಬಾ ಹೆಸರು ಮಾಡಿ, ಸ್ವದೇಶದಲ್ಲಿ ಆಚಾರ ಪಾಲಿಸಿ, ಎಲ್ಲರಿಗಿಂತ ಶ್ರೇಷ್ಠ ವ್ಯಕ್ತಿ ಎಂಬ ಹೆಸರು ಪಡೆದಿದ್ದರೂ ಸಹ ಗುರುಚರಣಗಳಲ್ಲಿ ಭಕ್ತಿ ಇಲ್ಲದವನ ಜೀವನ ನಿರರ್ಥಕ.

ಕ್ಷಮಾಮಂಡಲೇ ಭೂಪಭೂಪಾಲಬೃಂದೈ:

ಸದಾ ಸೇವಿತಂ ಯಸ್ಯ ಪಾದಾರವಿಂದಮ್ ||೫||

ಭೂಮಂಡಲದಲ್ಲಿ ಅನೇಕರಿಂದ ಪಾದ ಪೂಜಿಸಿ ಕೊಳ್ಳುವಂತಹ ವ್ಯಕ್ತಿಯಾಗಿದ್ದರೂ ಕೂಡ ತನ್ನ ಗುರುಗಳ ಪಾದ ಪೂಜಿಸದವನು ಮೇರು ವ್ಯಕ್ತಿತ್ವದವನಾಗಿದ್ದರೂ ವ್ಯರ್ಥವೇ.

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್

ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ ||೬||

ಅನೇಕ ದಾನ ಧರ್ಮಗಳನ್ನು ಮಾಡಿ ಇಡೀ ಜಗತ್ತನ್ನೇ ಗೆದ್ದಿರುವೆನೆಂದು ಕೊಂಡಾಗಲೂ ಅವನು ತನ್ನ ಗುರುವಿನ ಅನುಗ್ರಹಕ್ಕೆ ಪಾತ್ರನಾಗದಿದ್ದರೆ ಎಲ್ಲವೂ ತೃಣ ಮಾತ್ರವೇ.

ನ ಭೋಗೇ ನ ಯೋಗೇ ನ ವಾ ವಾಜಿರಾಜೌ

ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್ ||೭||

ಲೌಕಿಕದ ಎಲ್ಲಾ ವ್ಯಾಪಾರಗಳಲ್ಲಿ ಆಸಕ್ತಿ ತೊರೆದಿದ್ದರೂ ಕೂಡ ಆ ವ್ಯಕ್ತಿಯ ಮನಸ್ಸು ಅಚಲವಾಗಿ ಗುರು ಚರಣಗಳಲ್ಲಿ ಶ್ರದ್ಧೆ ಹೊಂದಿರದಿದ್ದರೆ ಅವನ ವೈರಾಗ್ಯ ಉಪಯೋಗವಿಲ್ಲದ್ದು, ಮೋಕ್ಷವನ್ನು ಹೊಂದಲಾರ.

ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ

ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ ||೮||

ಸಮಸ್ತವನ್ನೂ ತ್ಯಜಿಸಿ, ಅರಣ್ಯದಲ್ಲಿ ವಾಸಿಸಿದರೂ ಕೂಡ, ಗುರುಚರಣಗಳಿಗೆ ಶರಣಾಗತನಾಗದಿದ್ದರೆ ಆತ ಸಂಸಾರ ಬಂಧನದಿಂದ ಮುಕ್ತನಾಗುವುದು ಸುಳ್ಳು.

ಹೀಗೆ ಮೇಲಿನ ಶ್ಲೋಕಗಳಲ್ಲಿ ನಾವು ಬದುಕಿನಲ್ಲಿ ಏನೆಲ್ಲಾ ಸಾಧಿಸಿದ್ದರೂ, ತ್ಯಜಿಸಿದ್ದರೂ, ಗುರುವಿನ ಕರುಣೆ ಯಿಲ್ಲದೆ ಎಲ್ಲವೂ ವ್ಯರ್ಥ ಎಂದು ತಿಳಿಸುತ್ತಾ ಪ್ರತಿಯೊಂದು ಶ್ಲೋಕದ ಕೊನೆಗೂ ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ | ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ಎಂಬ ಮಾತನ್ನು ಪದೇ ಪದೇ ಪುನಶ್ಚರಣ ಮಾಡುತ್ತಾ ಗುರುವಿನ ಪಾದಗಳಲ್ಲಿ ಮನಸ್ಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆ ಕಷ್ಟಸಾಧ್ಯ ಎನ್ನುತ್ತಾ ಗುರುವಿನ ಮಹತ್ವವನ್ನು ವಿವರಿಸುತ್ತಾರೆ.

ಆದಿ ಗುರು ಶ್ರೀ ಶಂಕರಾಚಾರ್ಯರು ಹಿಂದೂ ಧರ್ಮದ ಪುನರ್ಸ್ಥಾಪನೆ ಮತ್ತು ಪ್ರಚಾರ ಕಾರ್ಯಕ್ಕಾಗಿಯೇ ಬಂದವರು. ಅವರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ನಂತರ ಬಂದವರು ಶ್ರೀ ರಾಮಾನುಜಾಚಾರ್ಯರು ಮತ್ತು ಇವರು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಇವರಿಬ್ಬರ ನಂತರ ಬಂದವರು ಶ್ರೀ ಮಧ್ವಾಚಾರ್ಯರು. ಆಚಾರ್ಯ ತ್ರಯರೆಂದೇ ಗುರುತಿಸಲ್ಪಡುವರು ನಮ್ಮ ಈ ಮೂವರು ಶ್ರೇಷ್ಠ ಗುರುಗಳು. ಅದ್ವೈತ, ವಿಶಿಷ್ಟಾದ್ವೈತ ಹಾಗೂ ದ್ವೈತ ಸಿದ್ಧಾಂತಗಳನ್ನು ಅನುಸರಿಸುವ ಗುರು ಪರಂಪರೆಯೇ ಬೆಳೆಯಿತು ಮತ್ತು ಈಗಲೂ ಅನೇಕ ಶಾಖೆಗಳಾಗಿ ವಿಭಜಿತವಾಗಿದ್ದರೂ, ಪರಂಪರೆ ಮುಂದುವರೆದಿದೆ. ಈ ಪರಂಪರೆಯಲ್ಲಿ ಈಗಿರುವ ಗುರುವಿನ ಗುರುವಿಗೆ ಪರಮಗುರು ಎಂದೂ, ಪರಮ ಗುರುವಿನ ಗುರುವನ್ನು ಪರಾಪರ ಗುರು ಎಂದೂ, ಪರಾಪರ ಗುರುವಿನ ಗುರುವನ್ನು ಪರಮೇಷ್ಠಿ ಗುರು ಎಂದೂ ಗುರುತಿಸಲ್ಪಡುತ್ತಾರೆ. “ಗುರು ಪೂರ್ಣಿಮೆ’ ಯಂದು ಸಮಸ್ತ ಗುರು ಪರಂಪರೆಯೇ ಪೂಜಿಸಲ್ಪಡುತ್ತದೆ.

ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನ ಅವತಾರವೆಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನು ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜೊತೆಗೇ “ಗುರು ಪೂರ್ಣಿಮೆ” ಯಂದು ಪೂಜಿಸುತ್ತೇವೆ. ಲೋಕಗುರು ಪರಮಗುರು ಎಂದೇ ಪ್ರಖ್ಯಾತರಾಗಿದ್ದರು ಶ್ರೀ ವೇದವ್ಯಾಸರು. ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ “ಮಹಾಭಾರತ”ವೆಂಬ ಲಕ್ಷ್ಯ ಶ್ಲೋಕಗಳಿರುವ “ಪಂಚಮವೇದ”ವನ್ನು ರಚಿಸಿ ಕೊಟ್ಟರು. ಜೊತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರು ವೇದವ್ಯಾಸರು. ಆದ್ದರಿಂದಲೇ ಅವರನ್ನು ಲೋಕಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರು ಪೂರ್ಣಿಮೆಯಂದು ಪೂಜಿಸುತ್ತೇವೆ.

“ಗುರು” ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಶಕ್ತಿ ಎಂದು ಅರ್ಥೈಸಿ ಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ. ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬಾ ಚೈತನ್ಯದಾಯಕವಾಗಿರುತ್ತದೆ. ಗುರುವಿಗೆ ಯಾವಾಗಲೂ ಶಿಷ್ಯನ

ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ. ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ.

ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.

ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾಗಿರುವ ಶ್ರೀ ಯೋಗಿನಾರೇಯಣರ ಬ್ರಹ್ಮಾಂಡಪುರಿ ಶತಕದಲ್ಲಿ ಕೂಡ ತಾತಯ್ಯನವರು ಗುರುವಿನ ಮಹತ್ವವನ್ನು ಸಾರುವ ಮಾತುಗಳನ್ನು ಆಡಿದ್ದಾರೆ :

ಬ್ರಹ್ಮರುದ್ರುಲಕೈನ - ಭಾವಿಂಪ ಶಕ್ಯಮಾ

ಆಧ್ಯಾತ್ಮವಿದ್ಯ ಗುರುಕೀಲು ಮಹಿಮ

ಆಧ್ಯಾತ್ಮ ವಿದ್ಯೆಗೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು ; ಗುರುವಿಲ್ಲದಿದ್ದರೆ ಬ್ರಹ್ಮರುದ್ರರಿಗೂ ಅಶಕ್ಯ. ಆತ್ಮ ಸಾಕ್ಷಾತ್ಕಾರವಾಗಲು ಆಧ್ಯಾತ್ಮವಿದ್ಯ "ಗುರುಕೀಲು ಮಹಿಮೆ" - ಎಂಬುದು ಆಳವಾದ ತತ್ವಾರ್ಥ ಪದ. ಇದು ಮನಸ್ಸಿನ ಸಂಸ್ಕಾರಕ್ಕೆ ಹತ್ತಿರವಾದದ್ದು. ಭ್ರಮೆಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. "ಗುರುಕೀಲು" ಎಂದರೆ ಗುರುದೇವನು ಕಲಿಸಿಕೊಟ್ಟ ಕೀಲಿಕೈನಂತಹ ಸಾಧನಸೂತ್ರವೆಂದು ಅರ್ಥವಾಗುತ್ತದೆ. ತಾತಯ್ಯನವರು ಗುರುವಿಗೆ 'ಮಾತೃಸ್ಥಾನ' ಕೊಟ್ಟಿದ್ದಾರೆ. ಯೋಗ್ಯ ಹಾಗೂ ಸದ್ಗುರುವಿನ ಪಾದಗಳಿಗೆ ಶರಣಾದರೆ ಆತ ಉಪದೇಶ ಕೊಟ್ಟು ಉದ್ಧರಿಸುತ್ತಾನೆ. ನೀನು ಹುಡುಕುತ್ತಿರುವ ಕುರಿಮರಿ ನಿನ್ನ ಕಂಕುಳಲ್ಲೇ ಇದೆ ಎಂದು ನಮ್ಮಲ್ಲೇ ಇರುವ ದೇವರನ್ನು ತೋರಿಸುತ್ತಾನೆ, ಸಾಧನಮಾರ್ಗ ಕಲಿಸುತ್ತಾನೆ. ಅದೇ ಗುರುಮಾರ್ಗ, ಅದು ಗುರುಸೂತ್ರ, ಅದೇ ಗುರುಕೀಲು. ಮನಸ್ಸನ್ನು ನಿಲ್ಲಿಸಲು ಜ್ಞಾನಬೋಧೆ ಮಾಡಿ ಗುರುವು ಸಾಧನಮಾರ್ಗ ತೋರಿಸುತ್ತಾನೆ.

ಗುರು ಪರಂಪರೆ ಹಾಗೂ ಗುರು-ಶಿಷ್ಯರ ಅತ್ಯಂತ ನಿಕಟ ಸಂಬಂಧವು ಮುಂದುವರೆದು ನಮ್ಮ ದಾಸ ಸಾಹಿತ್ಯದಲ್ಲೂ ಗಾಢವಾಗಿ ಕಾಣಬಹುದಾಗಿದೆ......


ಚಿತ್ರಕೃಪೆ : ಅಂತರ್ಜಾಲ

Friday, July 8, 2011

ದೇಹ ದೇವಾಲಯ - ೩


ದೇಹ ದೇವಾಲಯವಾಗಿಸಬೇಕೆಂಬ ವಿಚಾರ ಚಿಂತಿಸಿದಷ್ಟೂ ಆಳವಾಗುತ್ತಾ ಹೋಗುವ ಅತ್ಯಂತ ಗಹನವಾದ ವಿಷಯವಾಗಿದೆ. ನಮ್ಮ ವೇದ, ಶಾಸ್ತ್ರ, ಪುರಾಣ, ನಮ್ಮ ಆಚಾರ್ಯರುಗಳು, ದಾಸರುಗಳು, ಶಿವಶರಣ-ಶರಣೆಯರು ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಅದನ್ನೇ ಹೇಳುತ್ತಾ ಬಂದಿದ್ದರೂ, ಎಷ್ಟೆಷ್ಟು ಸರಳವಾಗಿ ಸಾಧ್ಯವೋ ಅಷ್ಟು ಹೇಳಿದ್ದರೂ ಕೂಡ, ನಾವು ಈ ಪ್ರಪಂಚಕ್ಕೆ ಬಂದಾಗಿನಿಂದಲೂ ಹೋಗುವ ತನಕವೂ ಆಂತರಿಕ ಬೆಳವಣಿಗೆಗಾಗಿಯೇ ಭಗವಂತ ನಮಗೆ ಕರುಣಿಸಿರುವ ಇಷ್ಟು ಚಂದದ, ಉತ್ಕೃಷ್ಟವಾದ ದೇಹವನ್ನು ಸದುಪಯೋಗ ಮಾಡಿಕೊಳ್ಳದೇ, ಬರಿಯ ವಿಷಯಾಂಕಾಂಕ್ಷಿಗಳಾಗಿ ಬೇಡದ ವ್ಯರ್ಥ ಬದುಕು ಬದುಕುತ್ತೇವೆ. ಕೊನೆಗೊಮ್ಮೆ ನಮ್ಮ ದೇಹದಲ್ಲಿ ಎಲ್ಲಾ ಶಕ್ತಿಗಳೂ ಕುಂದಿಹೋದಾಗ, ಪರಮಾತ್ಮನ ನೆನೆಯುವ ಪ್ರಯತ್ನ ಮಾಡತೊಡಗುತ್ತೇವೆ. ಕೆಲವರು ಆಗಲೂ ಕೂಡ ಮಾಡದೆ, ಲ್ಲವೂ ತಮ್ಮಿಂದಲೇ ಸಾಧ್ಯವಾಯಿತು, ತಾವೇ ಗಳಿಸಿದೆವೆಂದು ಚಿಂತಿಸುತ್ತಾ, ಹಿಂದೆ ತಿರುತಿರುಗಿ ಬಾಳಿದ ಬರಿಯ ಬರಡು ಬದುಕನ್ನೇ ಶ್ರೇಷ್ಠವಾಗಿ ಬದುಕಿದೆವೆಂದುಕೊಂಡು ನೋಡುತ್ತಾ, ತಾವು ಗಳಿಸಿದ ಆಸ್ತಿ, ನಗ-ನಾಣ್ಯ, ಮಕ್ಕಳು, ಮೊಮ್ಮಕ್ಕಳು... ಹೀಗೇ ಇದೇ ವಿಷಯ, ವಾಸನೆಗಳ ಸುತ್ತಲೇ ಗಿರಿಗಿಟ್ಟೆ ತಿರುಗುತ್ತಾ, ಕೈಯಿಂದ ಜಾರಿಹೋದ ಸಮಯದ ಬಗ್ಗೆ, ತಾವು ಭಗವಂತನ ಧ್ಯಾನ ಮಾಡದೆ ವ್ಯರ್ಥವಾಗಿಸಿದ ಒಂದು ಜನ್ಮದ ಬಗ್ಗೆ ಚಿಂತಿಸದೆಯೇ ಹೊರಟೇ ಹೋಗುತ್ತಾರೆ. ಆದರೆ ನಾವು ಯಾವಾಗ ಈ ವಿಷಯಾಸಕ್ತಿಗಳ ಪರಿಧಿಯಿಂದ ಒಂದು ಹೆಜ್ಜೆ ಮುಂದೆ ಹೋಗಿ ನೋಡುತ್ತೇವೆಯೋ ಆಗ ನಮ್ಮ ಈ ದೇಹವೆಂಬ ಆಸ್ತಿಯನ್ನು ಭಗವಂತ ನಮಗೆ ಅದೆಷ್ಟು ಕರುಣೆಯಿಂ, ಅವನ ಪೂಜೆಗಾಗಿ, ಆರಾಧನೆಗಾಗಿ, ನಮ್ಮ ಆತ್ಮೋನ್ನತಿಗಾಗಿ ಉಪಯೋಗಿಸಲೆಂದು ಕೊಟ್ಟಿದ್ದಾನೆಂಬ ಸತ್ಯದ ಅರಿವಾಗುತ್ತದೆ.

ಕೈವಾರ ತಾತಯ್ಯನವರು ಕೂಡ ತಮ್ಮ ನಾದಬ್ರಹ್ಮಾನಂದ ನಾರೇಯಣ ಕವಿ ಶತಕದಲ್ಲಿ ನಮಗೆ ದೇಹದ ಸದುಪಯೋಗದ ಬಗ್ಗೆ ಅತ್ಯಂತ ಕಾಳಜಿಯಿಂದ ವಿವರಿಸುತ್ತಾರೆ. ನಮಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ. ಅವರು ಯೋಗಶಾಸ್ತ್ರಕ್ಕೆ ಅತ್ಯಂತ ಪ್ರಾಮುಖ್ಯತೆ ಕೊಡುತ್ತಾ, ನಮ್ಮ ದೇಹದಲ್ಲಿರುವ ಆರು ಚಕ್ರಗಳು, ಮೂರು ನಾಡಿಗಳು, ನಮ್ಮ ಉಚ್ಛ್ವಾಸ-ನಿಚ್ಛ್ವಾಸಗಳು, ಆಸನಗಳು, ಧ್ಯಾನ ಮುಂತಾದ ಹಲವಾರು ಪ್ರಕ್ರಿಯೆಗಳ ಮೂಲಕ ಭಗವಂತನ ಸಾಕ್ಷಾತ್ಕಾರ ಪಡೆಯಲು ನಮ್ಮ ದೇಹವನ್ನು ಸಾಧನವನ್ನಾಗಿ ಮಾಡಿಕೊಳ್ಳಬೇಕೆಂಬ ಮಾತನ್ನು ತಿಳಿಸುತ್ತಾರೆ. ತಾತಯ್ಯನವರ ಶತಕಗಳನ್ನು ಬಹಳ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹೀಗೆ ಶ್ರೀ ಕೈಪು ಲಕ್ಷ್ಮೀ ನರಸಿಂಹಶಾಸ್ತ್ರೀಗಳು ನಮಗೆ ವಿವರಿಸುತ್ತಾರೆ:

ದೇಹಮು ದೇವಳಮಾಯೆನು

ಜೀವುಡು ಬ್ರಹ್ಮಸ್ವರೂಪ ದೇವುಂಡಾಯೆನ್ |

ಅನುದಿನಮು ಆತ್ಮರಾಮುನಿ

ಮಂದಿರಮುನ ಚೇರಿ ಸೇತು ಮಾನಸ ಪೂಜ || ಅಂದರೆ ದೇಹವೇ ದೇವಾಲಯವು. ನಮ್ಮ ಹೃದಯದಲ್ಲಿಯೇ ನೆಲೆಸಿರುವ ಆತ್ಮರಾಮನಿಗೆ ನಾವು ಕ್ಷಣ ಕ್ಷಣವೂ, ಅನುದಿನವೂ ಮಾನಸ ಪೂಜೆಯನ್ನು ಸಲ್ಲಿಸುತ್ತಲೇ ಇರಬೇಕು. ಶ್ರೀ ಯೋಗಿನಾರೇಯಣ ತಾತಯ್ಯನವರು ಸಿದ್ಧಿಯೋಗಿಗಳು. ಅವರು ಸಮಸ್ತ ಇಂದ್ರಿಯಗಳು, ಮನಸ್ಸು, ಎಲ್ಲವನ್ನೂ ಭಗವಂತನ ಪಾದಾರವಿಂದಕ್ಕೆ ಸಮರ್ಪಿಸಿಬಿಟ್ಟವರು. ಪರಮಾತ್ಮನ ಧ್ಯಾನವನ್ನೇ ಮಂತ್ರವನ್ನಾಗಿಸಿಕೊಂಡವರು, ಮತ್ತು ತಮ್ಮ ಈ ಮಾನಸಿಕ ಪೂಜೆಯಿಂದ ಅವರು ನಿರೀಕ್ಷಿಸಿದ್ದ ಫಲವೆಂದರೆ ಬ್ರಹ್ಮಾನಂದ ಪ್ರಾಪ್ತಿಯನ್ನು ಪಡೆದವರು. ದೇಹ ದೇವಾಲಯವಾದಾಗ ಬಾಹ್ಯ ಪ್ರಪಂಚದ ವಿಷಯಾಸಕ್ತಿಗಳನ್ನು ನಾವು ತ್ಯಾಗ ಮಾಡಿದರೆ ಅದುವೇ ಅಜ್ಞಾನದ ನಿರ್ಮಾಲ್ಯ ತ್ಯಾಗವಾಗುತ್ತದೆ. ನಮ್ಮ ಹೃದಯ ಕಮಲದಲ್ಲೇ ನೆಲೆಸಿರುವ, ನಮ್ಮ ಕಣ ಕಣದಲ್ಲೂ ಅಣೋರಣೀಯನಾಗಿರುವ, ಪರಮಾತ್ಮನನ್ನು ಮಾನಸ ಪೂಜೆಯಿಂದ ಸಂತುಷ್ಟಗೊಳಿಸಿ, ಸಾಕ್ಷಾತ್ಕಾರ ಮಾಡಿಕೊಳ್ಳಬೇಕು.

ತಲಕಾಯಂತ ಕೊಂಡ - ಯಾವದಿ ಲೇದು |

ಕೊಂಡಲೋ ವುನ್ನದಿ - ಕೋಟಿ ಧನಮು |

ವೆಳ್ಳ ತೀಸಿನವಾಡು ಯೆವ್ವರು ಲೇರುರಾ |

ನಾದಬ್ರಹ್ಮಾನಂದ - ನಾರೇಯಣ ಕವಿ ||

ದೇಹವೆಂಬ ದೇಗುಲಕ್ಕೆ ಶಿಖರವಾಗಿರುವ ತಲೆಗೆ ಸಮಾನವಾದ ಬೇರೆ ಯಾವುದೇ ಬೆಟ್ಟವಿಲ್ಲ. ಈ ತಲೆಯೆಂಬ ಶಿಖರದಲ್ಲಿ ಕೋಟಿಗಟ್ಟಲೆ ಸಂಪತ್ತು ಇದೆ. ಇದನ್ನು ಹೊರಗೆ ತೆಗೆದವರು ಯಾರೆಂದರೆ ಯಾರೂ ಇಲ್ಲ ಎನ್ನುತ್ತಾರೆ ತಾತಯ್ಯ. ಮುಂದುವರೆಯುತ್ತಾ ತಾತಯ್ಯನವರು ದೇಹವನ್ನು ಬ್ರಹ್ಮಾಂಡಪುರವೆಂದು ಕರೆಯುತ್ತಾರೆ. ಹದಿನಾಲ್ಕು ಲೋಕಗಳುಳ್ಳ ಬ್ರಹ್ಮಾಂಡದಲ್ಲಿ ನೆಲೆಸಿರುವ ಆ ಭಗವಂತನೇ ಈ ಬ್ರಹ್ಮಾಂಡಪುರದಲ್ಲೂ (ನಮ್ಮ ದೇಹದಲ್ಲೂ) ನೆಲೆಸಿರುವವನು. ಬ್ರಹ್ಮಾಂಡವು ಹೇಗೆ ಪಂಚಭೂತಗಳಿಂದ ಕೂಡಿದೆಯೋ ಹಾಗೆ ನಮ್ಮ ದೇಹವೂ ಪಂಚಭೂತಗಳಿಂದಲೇ ಮಾಡಲ್ಪಟ್ಟಿದೆ. ಆದ್ದರಿಂದ ಬ್ರಹ್ಮಾಂಡದಲ್ಲಿರುವ ಸಮಸ್ತವೂ ನಮ್ಮ ದೇಹವಾದ ಬ್ರಹ್ಮಾಂಡಪುರದಲ್ಲೂ ಇದೆ, ನವದ್ವಾರೇ ಪುರೇ ದೇಹಿ ಎಂಬಂತೆ ತಾತಯ್ಯನವರು ದ್ವಾರಾಲು ತೊಮ್ಮಿದಿ ದೊಡ್ಡದಿ ಮಾವೂರು ಎನ್ನುತ್ತಾ ನಾವು ಶರೀರವನ್ನು ನಮ್ಮ ಹೃತ್ಕಮಲದಲ್ಲಿ ಗೋಚರವಾಗದೇ ಕುಳಿತಿರುವ ಆ ಭಗವಂತನನ್ನು ಅರಿಯುವ ಸಾಧನವಾಗಿ ಉಪಯೋಗಿಸಬೇಕು ಎಂದು ಹೇಳುತ್ತಾರೆ.

ವಿಷ್ಣು ಸಹಸ್ರನಾಮದಲ್ಲಿ ಯೋಗಿಹೃದ್ಧ್ಯಾನಗಮ್ಯಂ - ಯೋಗಿಗಳು ಧ್ಯಾನದ ಮೂಲಕ ಅರಿತುಕೊಳ್ಳಬಲ್ಲ ಭಗವಂತ ನಮ್ಮ ಹೃದಯದಲ್ಲೇ ನೆಲೆಸಿದ್ದಾನೆ ಎಂಬ ಮಾತು ಬರುತ್ತದೆ.

ನಮ್ಮ ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಕೂಡ ಇದೇ ವಿಚಾರವನ್ನು ಪ್ರಸ್ತುತ ಪಡಿಸುತ್ತಾರೆ :

ದೇಹವೆಂಬುದು ಕುದುರೆಯಾತ್ಮನದರಾರೋಹಿ |

ವಾಹನವನುಪವಾಸವಿರಿಸೆ ನಡೆದೀತೆ ? ||

ರೋಹಿ ಜಾಗ್ರತೆದಪ್ಪೆ ಯಾತ್ರೆ ಸುಖ ಸಾಗೀತೆ ? |

ಸ್ನೇಹವೆರಡಕಮುಚಿತ - ಮಂಕುತಿಮ್ಮ ||

ದೇಹವೆಂಬುದು ತಾನೇ ಕೆಲಸ ಮಾಡಲಾರದು. ನಾವು ಅದನ್ನು ಉಪಯೋಗಿಸಿಕೊಂಡು ನಮ್ಮ ಇಂದ್ರಿಯಗಳು, ಬುದ್ಧಿ ಮತ್ತು ಮನಸ್ಸಿನಿಂದ ಕೆಲಸ ಮಾಡಿಸಬೇಕು. ಇಂದ್ರಿಯಗಳು ತಮಗೊಪ್ಪಿಸಿದ ಕೆಲಸವನ್ನು ಮಾಡಿದಾಗ, ಅವು ಕಳುಹಿಸಿ ಕೊಡುವ ಎಲ್ಲಾ ವಿಚಾರಗಳನ್ನೂ ಗಮನಿಸಿ, ನಮಗೆ ಯಾವುದು ಉಪಯುಕ್ತ, ಯಾವುದು ಅನುಪಯುಕ್ತ ಎಂದು ವಿಂಗಡಿಸಿ, ಬೇಕಾದ್ದನ್ನು ಮಾತ್ರ ಬುದ್ಧಿ ತನ್ನ ಒಳಗಿನ ಪದರಗಳಲ್ಲಿ ಶೇಖರಿಸಿಟ್ಟುಕೊಳ್ಳುತ್ತದೆ. ಆದರೆ ಇಂದ್ರಿಯಗಳಿಗೆ ಭೋಗ ಲಾಲಸೆ ಹೆಚ್ಚು. ಅವುಗಳನ್ನು ನಾವು ಹತೋಟಿಯಲ್ಲಿಟ್ಟು ಕೊಂಡಾಗಷ್ಟೇ, ನಮ್ಮ ಸುಪ್ತ ಮನಸ್ಸು ಮತ್ತು ಅಂತರಾತ್ಮ ತಮಗೆ ಬೇಕಾದ ಅತಿ ಅವಶ್ಯಕವಾದ ಆಧ್ಯಾತ್ಮ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಇಲ್ಲಿ ಡಿವಿಜಿಯವರು ನಮ್ಮ ದೇಹವನ್ನು ಒಂದು ರಥಕ್ಕೆ ಹೋಲಿಸಿದ್ದಾರೆ. ಇಂದ್ರಿಯಗಳು ರಥವನ್ನೆಳೆಯುವ ಕುದುರೆಗಳು. ಮನಸ್ಸು, ಬುದ್ಧಿಗಳು ಕುದುರೆಗಳ ಹಗ್ಗವನ್ನು ಹಿಡಿದೆಳೆದು ನಡೆಸುವ ಸಾರಥಿಗಳು. ರಥವನ್ನು ಸರಿಯಾದ ಹಾದಿಯಲ್ಲಿ ನಡೆಸುತ್ತಾ, ನಾವು ನಮ್ಮ ಅಂತರಾಳದಲ್ಲಿ ಕುಳಿತಿರುವ ಚೇತನಾ ಸ್ವರೂಪನಾದ ಭಗವಂತನನ್ನು ತಿಳಿಯುವ ಪ್ರಯತ್ನ ಮಾಡಬಹುದು ಎನ್ನುತ್ತಾರೆ.

ಶ್ರೀ ಕನಕದಾಸರು ಕೂಡ ತಮ್ಮ ಒಂದು ಕೀರ್ತನೆಯಲ್ಲಿ ....

ಎಲ್ಲಿ ನೋಡಿದರಲ್ಲಿ ರಾಮ - ಇದ ಬಲ್ಲ ಜಾಣರ ದೇಹದಲ್ಲಿ ನೋಡಣ್ಣ ||

ಕಣ್ಣಿ ಕಾಮನ ಬೀಜ | ಕಣ್ಣಿನಿಂದಲೆ ನೋಡು ಮೋಕ್ಷ ಸಾಮ್ರಾಜ್ಯ |

ಕಣ್ಣಿನ ಮೂರುತಿ ಬಿಗಿದು | ಒಳಗಣ್ಣಿನಿಂದಲೆ ದೇವರ ನೋಡಣ್ಣ || 1 ||

ಮೂಗೆ ಶ್ವಾಸ ನಿಶ್ವಾಸ | ಈ ಮೂಗಿನಿಂದಲೆ ಕಾಣೋ ಯೋಗ ಸನ್ಯಾಸ |

ಮೂಗನಾದರೆ ವಿಶೇಷ | ಒಳ ಮೂಗಿನಿಂದ ನೋಡಣ್ಣ ಲೀಲಾ ವಿಲಾಸ ||2||

ಕಿವಿಯೆ ಕರ್ಮಕ್ಕೆ ದ್ವಾರ | ಈ ಕಿವಿಯಿಂದಲೆ ಕೇಳೋ ಮೋಕ್ಷಸಾರ |

ಕಿವಿಯ ಕರ್ಮಕುಠಾರ | ಒಳಗಿವಿಯಲ್ಲಿ ಕಾಣೋ ನಾದದ ಬೇರ ||3||

ಇಂದ್ರಿಯಗಳು ಬಾಹ್ಯಾಡಂಬರಗಳಲ್ಲಿ ಆಸಕ್ತರಾಗಿ ಬದುಕು ವ್ಯರ್ಥ ಮಾಡಿಕೊಳ್ಳದೆ ವಾಸನೆಗಳನ್ನು ಬಿಟ್ಟು, ಕಣ್ಣು, ಕಿವಿ, ಮೂಗುಗಳನ್ನು ನಮ್ಮ ದೇಹದೊಳಗಿನ ಅಂತರಂಗದ ಪ್ರಪಂಚಕ್ಕೆ ನೆಟ್ಟರೆ, ಆ ಕರುಣಾಮಯಿ ಶ್ರೀ ರಾಮಚಂದ್ರ ಎಲ್ಲೆಲ್ಲೂ ಕಾಣತೊಡಗುತ್ತಾನೆ ಎನ್ನುತ್ತಾರೆ.


ಚಿತ್ರಕೃಪೆ : ಅಂತರ್ಜಾಲ