Tuesday, April 9, 2013

ಎಳ್ಳುಕಾಳಿನ ಭಕುತಿ..














ಎಳ್ಳುಕಾಳಿನಷ್ಟು ಭಕುತಿ ಎನ್ನೊಳಗಿಲ್ಲವಯ್ಯ |
ಬೆಳ್ಳಕ್ಕಿಯಂತೆ ನಿನ್ನ ಧ್ಯಾನ ಮಾಡುವೆನಯ್ಯ ||

ಗಂಡುಮುಳುಗ ಹಕ್ಕಿಯಂತೆ ನೀರ ಕಂಡ ಕಡೆಗೆ ಮುಳುಗಿ
ಮಂಡೆಶೂಲೆಯಲ್ಲದೆ ಗತಿಯು ಇಲ್ಲ |
ಮಂಡೂಕನಂದದಿ ಕೆರೆಯ ದಂಡೆಯ ಮೇಲೆ ಕುಳಿತು
ಮಂಡೆಮುಸುಕನಿಕ್ಕಿ ಮಂತ್ರ ಜಪಿಸುವೆನಯ್ಯ ||

ಗಾಣದೆತ್ತಿನಂತೆ ಕಣ್ಣ ಕಟ್ಟಿ ಪ್ರದಕ್ಷಿಣೆಯ ಮಾಡಿ
ಕಾಣದೆ ನಾ ತಿರುಗಿದೆ ಕಂಡುದುದಿಲ್ಲ |
ಮಾಣಿಕ್ಯದ ರಾಶಿ ಅಡಿಗೆ ಕಂಗಳಯ್ಯನು ಪೋಗಿ
ಆಣಿಕಾರಿಗೆ ಮಾಡಿದಂಥ ಈ ಕುಯುಕುತಿ ||

ಇಕ್ಕಳದ ಕೈಯ ಪಿಡಿದುಕೊಂಡು ಕಾದ ಕಬ್ಬಿಣದಂತೆ
ಸಿಕ್ಕಿಸಿಕೊಂಡಲ್ಲದೆ ಗತಿಯು ಇಲ್ಲ |
ಪೊಕ್ಕಳುಪೂವಿನ ಶ್ರೀಪುರಂದರವಿಠಲನೆ
ಮಕ್ಕಳಾಟಿಕೆಯ ಬಿಡೊ ರಕ್ಷಿಸೊ ಎನ್ನೊಡೆಯ ||

ಶ್ರೀ ಪುರಂದರ ದಾಸರು ತಮ್ಮ ಈ ಪದದಲ್ಲಿ ನಮ್ಮಂತಹ ಸಾಮಾನ್ಯ ಜನರ ಮನಸ್ಥಿತಿಯನ್ನು ಅದೆಷ್ಟು ಯಥಾವತ್ತಾದ ಚಿತ್ರಣ ಮಾಡಿದ್ದಾರೆ.  ಆಡು ಮಾತಿನಲ್ಲಿ ಉಪಯೋಗಿಸುವ ಎಲ್ಲಾ ಶಬ್ದಗಳಿಗೂ ಒಂದು ಒಳ ಆಧ್ಯಾತ್ಮ ತತ್ವವನ್ನು ಬೆರೆಸಿ ಅರ್ಥಪೂರ್ಣವಾಗಿ ನುಡಿದಿದ್ದಾರೆ.  ದಿನ ನಿತ್ಯ ನಮ್ಮ ಅಡುಗೆಯಲ್ಲಿ ಬಳಸುವ ಪದಾರ್ಥವಾದ ಎಳ್ಳುಕಾಳನ್ನು ಸಾಂಕೇತಿಕವಾಗಿಟ್ಟುಕೊಂಡು ಪ್ರಾರಂಭಿಸಿದ್ದಾರೆ.  ಎಳ್ಳು ನಮ್ಮ ಅಡುಗೆ ಮನೆಯಲ್ಲೂ ಹಾಗೂ ಆಚರಣೆಗಳಲ್ಲೂ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ.  ಪ್ರಮಾಣದಲ್ಲಿ ಅತ್ಯಂತ ಸಣ್ಣದಾದ ಎಳ್ಳು ಕಾಳಿನಷ್ಟೂ ಭಕ್ತಿ ನನ್ನ ಮನಸ್ಸಿನಲ್ಲಿ ಇಲ್ಲವೆಂದು ಭಗವಂತನಲ್ಲಿ ಅಂತರಂಗ ತೆರೆದು ನಿವೇದಿಸಿಕೊಂಡಿದ್ದಾರೆ.  ಬಕ ಪಕ್ಷಿ (ಬೆಳ್ಳಕ್ಕಿ) ನೀರಿನಲ್ಲಿ ಒಂದು ಕಾಲಲ್ಲಿ ನಿಂತು, ತಲೆ ತಗ್ಗಿಸಿಕೊಂಡು, ಕಣ್ಣು ಮುಚ್ಚಿಕೊಂಡು ಅಲುಗಾಡದೆ ಗಂಟೆಗಟ್ಟಲೆ ನಿಂತಿರುತ್ತದೆ.  ನೋಡಿದವರಿಗೆ ಅದು ಧ್ಯಾನದಲ್ಲಿ ತಲ್ಲೀನವಾಗಿದೆಯೆಂಬ ನಂಬಿಕೆ ಬರಬೇಕು ಹಾಗೆ ನಿಂತಿರುತ್ತದೆ.  ಆದರೆ ಅದರ ಗಮನವೆಲ್ಲಾ ಭಗವಂತನ ಧ್ಯಾನದಲ್ಲಿ ಲೀನವಾಗಿರೋಲ್ಲ.  ಕೆಳಗೆ ನೀರಿನಲ್ಲಿ ಮೀನು ಸಿಗುವುದೋ ಎಂಬ ಧ್ಯಾನದಲ್ಲಿ ಸಿಲುಕಿರುತ್ತದೆ, ಸಿಕ್ಕ ಕೂಡಲೆ ಅದರ ಧ್ಯಾನ, ತಪ, ಒಂಟಿಕಾಲಿನಲ್ಲಿ ನಿಂತಿದ್ದ ಭಂಗಿ ಎಲ್ಲವೂ ಗಾಳಿಯಲ್ಲಿ ತೂರಿಹೋಗಿ, ಕೊಕ್ಕಿನಲ್ಲಿ ಮೀನು ಸಿಕ್ಕಿಕೊಂಡಿರುತ್ತದೆ.  ಈ ಹಾಡಿನ ಪ್ರಾರಂಭದಲ್ಲೇ ದಾಸರು ಈ ಬಕಧ್ಯಾನದ ವಿಷಯ ತಿಳಿಸಿ ನಮ್ಮ ಧ್ಯಾನದ ಪರಿಯನ್ನು ಬಹಿರಂಗಗೊಳಿಸುತ್ತಾರೆ.  ಹೀಗೆ ದಾಸರು ಈ ಪದದಲ್ಲಿ ವಿವಿಧ ಉದಾಹರಣೆಗಳನ್ನು ಕೊಟ್ಟು ನಮ್ಮ ಡಂಭಕತನದ ಭಕ್ತಿಯನ್ನು ಟೀಕಿಸುತ್ತಾರೆ.

ಗಂಡುಮುಳುಗ ಹಕ್ಕಿಯೆಂದು ದಾಸರು ಉಲ್ಲೇಖಿಸಿರುವುದು ದಿನದಲ್ಲಿ ೧೦೦ ಬಾರಿ ಸುಮ್ಮನೆ ನೀರಿನಲ್ಲಿ ತಲೆ ಮುಳುಗಿಸಿ ಮೇಲೇಳುವ ಹಕ್ಕಿಯ ವಿಷಯ.  ಅಂದರೆ ಹಕ್ಕಿ ಯಾವ ಪುಣ್ಯ ಸಂಪಾದನೆಗಾಗಿಯೂ ನೀರಿನಲ್ಲಿ ಮುಳುಗುವುದಿಲ್ಲ, ಅದು ತನ್ನ ಆಹಾರವಾದ ಹುಳು, ಹುಪ್ಪಟೆಗಳನ್ನು ಕಂಡೊಡನೆ ನೀರಿನಲ್ಲಿ ತಲೆ ಮುಳುಗಿಸಿ, ಕೊಕ್ಕಿನಲ್ಲಿ ಹಿಡಿದುಕೊಂಡು ಒಂದೇ ಕ್ಷಣದಲ್ಲಿ ಮೇಲೆ ಬಂದುಬಿಡುತ್ತದೆ.  ಅದಕ್ಕೆ ತಾನು ಮುಳುಗಿ ಏಳುವ ನೀರು ಯಾವ ನದಿಯಾದರೇನು ಯಾವ ಸಮುದ್ರವಾದರೇನೂ, ಎಂತಹ ವ್ಯತ್ಯಾಸವೂ ಇಲ್ಲ.  ಹಾಗೇ ನಾವೂ ಕೂಡ ಕಂಡ ಕಂಡ ನದಿಗಳಲ್ಲೆಲ್ಲಾ ಮುಳುಗೆದ್ದು, ಸಮುದ್ರ ಸ್ನಾನ ಮಾಡಿ, ಪರಿಚಯವಿರುವ ಎಲ್ಲರಲ್ಲಿಯೂ ನಾನು ಗಂಗಾಸ್ನಾನ ಮಾಡಿದೆ, ತುಂಗಾಸ್ನಾನ ಮಾಡಿದೆ ಎಂದು ಡಂಗುರವನ್ನು ಸಾರುತ್ತೇವೆ.  ಆದರೆ ಮನದಲ್ಲಿ ಎಳ್ಳುಕಾಳಿನಷ್ಟೂ ಭಕ್ತಿಯಿಲ್ಲದಿರುವಾಗ, ಯಾವ ನದಿಯಲ್ಲಿ ಮುಳುಗಿದರೂ, ಸಮುದ್ರ ಸ್ನಾನ ಮಾಡಿದರೂ ನಮಗೆ ಪುಣ್ಯ ಲಭಿಸುವುದಿಲ್ಲ ಬದಲಿಗೆ ನೀರಿನಲ್ಲಿ ಮುಳುಮುಳುಗೆದ್ದ ಕಾರಣ ತಲೆನೋವು ಅಂಟಿಕೊಳ್ಳುತ್ತದೆ ಅಷ್ಟೆ.  ಕೆರೆಯ ದಂಡೆಯ ಮೇಲೆಯೇ ಕುಳಿತ ಮಂಡೂಕ ಸದಾ ತನ್ನ ವಟವಟಗುಟ್ಟುವ ಅಭ್ಯಾಸದಂತೆ, ನಾವು ಕೂಡ ದಂಡೆಯ ಮೇಲೆ ಕುಳಿತು ಯಾರಿಗೂ ತಿಳಿಯಬಾರದೆಂದು ಮುಸುಕು ಹೊದ್ದು, ಬೆರೆಳೆಣಿಸುತ್ತಾ ಜಪವನ್ನು ಮಾಡಿದರೆ, ಎಳ್ಳಷ್ಟೂ ಪುಣ್ಯ ದೊರಕುವುದಿಲ್ಲ ಎಂಬ ಅರ್ಥವಾಗುತ್ತದೆ.

ಎರಡನೆಯ ಚರಣದಲ್ಲಿ ದಾಸರು ನಮ್ಮನ್ನು ಗಾಣದೆತ್ತಿಗೆ ಹೋಲಿಕೆ ಕೊಟ್ಟಿದ್ದಾರೆ.  ಹಿಂದಿನ ಕಾಲದಲ್ಲಿ ಎಣ್ಣೆ ಬೇಕೆಂದರೆ ಗಾಣದವರ ಮನೆಗೇ ಹೋಗಬೇಕಿತ್ತು.  ಅಲ್ಲಿ ಕಾಳುಗಳನ್ನು ಹಾಕಿ ಒಂದು ಗಾಣ ಕಟ್ಟಿ, ಆ ಗಾಣಕ್ಕೆ ಎತ್ತು ಕಟ್ಟಿಬಿಡುತ್ತಿದ್ದರು.  ಕಣ್ಣುಗಳನ್ನು ತೆರೆದು ಸುತ್ತಿದರೆ, ತಲೆ ಸುತ್ತಬಹುದೆಂದು, ಆ ಎತ್ತಿನ ಕಣ್ಣು ಕಟ್ಟಿಬಿಡುತ್ತಿದ್ದರು.  ಅದು ತನ್ನನ್ನು ಕಟ್ಟಿದ್ದ ಗಾಣಕ್ಕೇ ಸುತ್ತುತ್ತಾ ಪ್ರದಕ್ಷಿಣೆ ಬರುತ್ತಿತ್ತು, ಆದರೆ ಮನದಲ್ಲಿ ತಾನೆಲ್ಲೋ ತುಂಬಾ ದೂರ ಪಯಣಿಸಿದ್ದೇನೆಂಬ ಆಲೋಚನೆ ಇರುತ್ತಿತ್ತು.  ಹಾಗೇ ನಾವು ಕೂಡ ಮನದಲ್ಲಿ ಎಳ್ಳಷ್ಟೂ ಭಕ್ತಿಯಿಲ್ಲದೆ, ಸುಮ್ಮನೆ ತೀರ್ಥಕ್ಷೇತ್ರಗಳನ್ನು ಸುತ್ತುತ್ತಾ, ಭಗವಂತನನ್ನು ಕಂಡೆವೇನೋ ಎಂದು ಕೊಂಡರೆ ಏನೂ ಪ್ರಯೋಜನವಿಲ್ಲ.  ಅಂತರಂಗದಾಳದಲ್ಲೇ ಇರುವ ನಮ್ಮೊಡೆಯನ ಅರಿವು, ನಮಗೆ ಆಗಬೇಕೇ ಹೊರತು, ಬಾಹ್ಯ ಮನಸ್ಸಿನ ಪದರದಲ್ಲೇ ಉಳಿದು, ಸುಖಾ ಸುಮ್ಮನೆ ಪುಣ್ಯಕ್ಷೇತ್ರಗಳನ್ನು ಸುತ್ತುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ.  ತನ್ನ ತಪೋಬಲದಿಂದ, ಜ್ಞಾನದ ಕಣ್ಣನ್ನು ಕಾಲಿನಲ್ಲಿ ಪಡೆದಿದ್ದ ಭೃಗು ಮಹರ್ಷಿಗಳು ಅಹಂಕಾರಕ್ಕೆ ಜಾಗ ಕೊಟ್ಟರು.  ಸಾಕ್ಷಾತ್ ವೈಕುಂಠಕ್ಕೇ ತೆರಳಿದರೂ ಕೂಡ, ಕಣ್ಣ ಮುಂದೆಯೇ ಮಾಣಿಕ್ಯದ ರಾಶಿಯೇ ಇದ್ದರೂ ಕೂಡ, ಅದನ್ನು ಅರಿತುಕೊಳ್ಳದೇ ಭಗವಂತನ ವಕ್ಷಸ್ಥಲಕ್ಕೇ ಕಾಲಿನಿಂದ ಒದ್ದು ಅಹಂಕಾರ ಪ್ರದರ್ಶನ ಮಾಡಿದರು.  ಶ್ರೀಹರಿ ಮುಗುಳ್ನಗುತ್ತಾ ಅವರ ಕಾಲಿನಲ್ಲಿ ಒಂದು ಆಣಿ ಇದೆಯೇನೋ ಎಂಬಂತೆ ಪಾದ ಒತ್ತುತ್ತಾ, ಜ್ಞಾನದ ಕಣ್ಣನ್ನು ಕಿತ್ತುಬಿಟ್ಟ.  ಅಹಂಕಾರ ಇಳಿಯಿತು.  ಆದರೆ ಮಾಣಿಕ್ಯದ ರಾಶಿಗೆ ಹೋಗಿ, ಕಾಲಿನ ಆಣಿಗೆ ಉಪಚಾರ ಮಾಡಿಸಿಕೊಂಡಂತಹುದು ಮೂರ್ಖತನವೆಂಬುದು ದಾಸರ ಅಭಿಪ್ರಾಯ.

ಕಬ್ಬಿಣವನ್ನು ಬಗ್ಗಿಸಬೇಕಾದರೆ ಸುಲಭವಲ್ಲ.  ಅದನ್ನು ಚೆನ್ನಾಗಿ ಕಾಯಿಸಿ, ಕಾಯಿಸಿ ಅದು ಸಿಕ್ಕಾಪಟ್ಟೆ ಬಿಸಿಯಾಗಿದ್ದಾಗಲೇ ಬಡಿದು ನಮಗೆ ಬೇಕಾದಂತೆ ಬಗ್ಗಿಸಬೇಕು.  ಆದರೆ ಅತ್ಯಂತ ತೀಕ್ಷ್ಣ ಉಷ್ಣತೆ ಇರುವುದನ್ನು ಹಿಡಿದುಕೊಳ್ಳಲು ತುಂಬಾ ಬಲಿಷ್ಠವಾದ ಇಕ್ಕಳವೇ ಬೇಕು.  ಹಾಗೆ ಅನೇಕ ವಿಷಯಾಸಕ್ತಿಗಳಲ್ಲಿ ಮುಳುಗಿ ಮುಳುಗಿ ತೊಂದರೆ ಕೊಡುವ ಈ ಮನಸ್ಸನ್ನು ಕಬ್ಬಿಣದಂತೆ ಚೆನ್ನಾಗಿ ಕಾಯಿಸಿ, ಬಡಿದು ಒಂದು ಆಕಾರ ಕೊಡು ಎಂದು ಭಗವಂತನನ್ನು ಪ್ರಾರ್ಥಿಸುತ್ತಾರೆ ದಾಸರು.  ಆದರೆ ಕಬ್ಬಿಣ ಕಾಯಿಸಿದರೆ ಸಾಲದು, ಅದನ್ನು ಭದ್ರವಾಗಿ ಸಿಕ್ಕಿಸಿಕೊಂಡು ಬಿಡುವ ಇಕ್ಕಳದ ಕೈಯಿಲ್ಲದೆ ಯಾವ ಪ್ರಯೋಜನವೂ ಇಲ್ಲ.  ಆದ್ದರಿಂದ ಬೇರೆ ಗತಿಯೇ ಇಲ್ಲವೆಂದು ನಿನ್ನತ್ತ ಶರಣಾಗಿ ಬಂದಿರುವ ಈ ಕಬ್ಬಿಣವನ್ನು ಕಾಯಿಸಿ, ಪಿಡಿವ ಇಕ್ಕಳ ನೀನಾಗಿ, ನನ್ನನ್ನು ಸಿಕ್ಕಿಸಿಕೊಂಡು, ರಕ್ಷಿಸು ಎನ್ನುತ್ತಾರೆ.

ಕೊನೆಯ ಎರಡು ಸಾಲಿನಲ್ಲಿ ಶೀ ಪುರಂದರದಾಸರು, ಭಗವಂತನನ್ನು ಲೀಲಾಮಯನೆಂದೂ, ಬ್ರಹ್ಮಾಂಡವೆಂಬ ಆಟಿಕೆಯನ್ನು ಸೃಷ್ಟಿಸಿ, ಮಕ್ಕಳಂತೆ ಆಡುವವನೆಂದೂ ಹೇಳುತ್ತಾರೆ.  ಹೊಕ್ಕಳಲ್ಲಿ ಹೂವಿಟ್ಟುಕೊಂಡು, ಬ್ರಹ್ಮನನ್ನು ಹುಟ್ಟಿಸಿದ ಜಗದ್ರಕ್ಷಕನೇ, ನಿನ್ನ ಮಕ್ಕಳಾಟಿಕೆಯನ್ನು ಬಿಟ್ಟು, ಕೊಂಚ ನನ್ನತ್ತ ನೋಡಿ, ನನ್ನನ್ನು ರಕ್ಷಿಸು, ಉದ್ಧರಿಸು ಎಂದು ಬೇಡುತ್ತಾರೆ.


 ಚಿತ್ರಕೃಪೆ : ಅಂತರ್ಜಾಲ