Monday, November 23, 2009

"ದಿವ್ಯ" ನಿರ್ಲಕ್ಷ್ಯ

"ನಿರ್ಲಕ್ಷ್ಯ" ಗೊತ್ತು, ಆದರೆ ಇದೇನಿದೂ....... "ದಿವ್ಯ ನಿರ್ಲಕ್ಷ್ಯ" ಎಂದು ಹುಬ್ಬೇರಿಸಬೇಡಿ..... ಬರೀ ನಿರ್ಲಕ್ಷ್ಯವೆಂದರೆ ಹೆಚ್ಚು ಒತ್ತು ಬರೋಲ್ಲ... ದಿವ್ಯವಾಗಿ ಅಥವಾ ಭವ್ಯವಾಗಿ ನಿರ್ಲಕ್ಷಿಸಲ್ಪಟ್ಟಾಗ, ಅದರ ಆಳ, ಒತ್ತು, ಅರ್ಥ ಎಲ್ಲಾ ಒಮ್ಮಿಂದೊಮ್ಮೆಗೇ ಗೋಚರವಾಗತೊಡಗುತ್ತದೆ....

ನಾವು ನಮ್ಮ ಬದುಕಿನಲ್ಲಿ ಅನೇಕ ವಿಷಯಗಳನ್ನೂ, ಅನೇಕ ಜನರನ್ನೂ ನಿರ್ಲಕ್ಷಿಸಿರುತ್ತೇವೆ, ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿಯೂ ಮತ್ತು ಕೆಲವೊಮ್ಮೆ ಅರಿವಿಲ್ಲದೆಯೂ..... ಘಟನೆಗಳನ್ನು ಕಹಿಯಾಗಿದ್ದರೆ ಮರೆಯಬಹುದು... ಆದರೆ ಪ್ರಾಮುಖ್ಯವಲ್ಲದವನ್ನು ನಿರ್ಲಕ್ಷಿಸ ಬೇಕಾಗುತ್ತದೆ. ಕೆಲವೊಮ್ಮೆ ನಾವು ಇದು ಸಾಧಾರಣ ಗುಣ ಮಟ್ಟದ್ದು, ಇದಕ್ಕೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿಲ್ಲವೆಂದು ನಿರ್ಲಕ್ಷಿಸಿದ್ದ ಕೆಲವು ವಿಷಯಗಳು, ಮುಂದೊಂದು ದಿನ ನಮ್ಮ ನಿರೀಕ್ಷೆಗೆ ಮೀರಿ, ಹಠಾತ್ತಾಗಿ ಫೀನಿಕ್ಸಿನಂತೆ ಮೇಲೆದ್ದು ಬಿಡತ್ತೆ ಪ್ರಾಮುಖ್ಯತೆ ಪಡೆದು... ವಿಷಯ ಅದೇ ಆಗಿದ್ದರೂ ಸಮಯ ಬದಲಾದಾಗ ಅದರ ಪ್ರಾಮುಖ್ಯತೆಯೂ ಬದಲಾಗಿ ಬಿಟ್ಟಿರುತ್ತದೆ. ಅದು ನಮ್ಮನ್ನು ಮೂರ್ಖರನ್ನಾಗಿಸಿ, ಮೆರೆಯುತ್ತದೆ... ಇದೆಲ್ಲಾ ಘಟನೆಗಳೋ / ವಿಷಯಗಳೋ ಆದವು...

ಆದರೆ ನಾನೀಗ ಹೇಳುತ್ತಿರುವುದು ಮನುಷ್ಯರ ಬಗ್ಗೆ, ಸಂಬಂಧಗಳ ಬಗ್ಗೆ.. ಈ ಸಂಬಂಧಗಳ ಕಬಂಧ ಬಾಹುವಿನಲ್ಲಿ ಸಿಲುಕಿ ಪ್ರಮುಖವಾದ ವಿಷಯವೊಂದು ನರಳಿದ ಬಗ್ಗೆ.... ತಪ್ಪು ತಿಳುವಳಿಕೆ, ಅಹಂ ಅಥವಾ ಸ್ವಪ್ರತಿಷ್ಠೆಗೆ ಸಿಲುಕಿ ನರಳಿದ ನವಿರಾದ ಸಂಬಂಧದ ಬಗೆಗೆ...

"ನಿರ್ಲಕ್ಷ್ಯ" ಎನ್ನುವುದು ವ್ಯಕ್ತಿ ತಾನೇ ಅನುಭವಿಸಿದಾಗ ಮಾತ್ರ ಅರ್ಥ ಮಾಡಿಕೊಳ್ಳಲಿಕ್ಕಾಗುವಂತಹ ಸೂಕ್ಷ್ಮ ವಿಚಾರ. ಅದೂ ತನ್ನವರೆಂದು ಕೊಂಡು, ತುಂಬಾ ಬೇಕಾದವರೆಂದು ಕೊಂಡಿದ್ದ ಒಬ್ಬ ವ್ಯಕ್ತಿಯಿಂದ, ನಾವು ದಿವ್ಯವಾಗಿ ನಿರ್ಲಕ್ಷಿಸಲ್ಪಟ್ಟಾಗ, ಆಗುವ ನೋವು, ತುಡಿತ ಅನುಭವಿಸಿದ ಮನಸ್ಸಿಗಲ್ಲದೆ ಬೇರೆಯವರಿಗೆ ತಿಳಿಯುವುದು ಸ್ವಲ್ಪ ಕಷ್ಟವೇ...

ಈ ಘಟನೆಯ ಮುಖ್ಯ ಪಾತ್ರಧಾರಿ ಒಮ್ಮೆ ನನಗೆ ತುಂಬಾ ಹತ್ತಿರದ ವ್ಯಕ್ತಿಯಾಗಿದ್ದರು.... ನನಗೆ ಸಂಬಂಧದಲ್ಲೂ ಅತೀ ಹತ್ತಿರದವರೇ.... ಕಾರಣಾಂತರಗಳಿಂದ ನನ್ನಿಂದ ದೂರವಾಗಿ ಮಾತು-ಕತೆ ಕೂಡ ನಿಂತು ಹೋದಾಗಲೂ ನನಗಿಷ್ಟೊಂದು ನೋವು ಆಗಿರಲಿಲ್ಲವೇನೋ... ಈಗ ತನ್ನ ಒಬ್ಬನೇ ಮಗನಿಗೆ ಮದುವೆ ಗೊತ್ತಾದ ಸಂಭ್ರಮದಲ್ಲಿ ಕೂಡ... ಅವರಿಗೆ ನನ್ನ ನೆನಪೂ ಬಾರದಿದ್ದಾಗ... ನಾನು ನಿರ್ಲಕ್ಷಿಸಲ್ಪಟ್ಟಿದ್ದೇನೆಂಬ ವಾಸ್ತವ ನನಗರ್ಥವಾಯಿತು.... ಊರಿಗೆಲ್ಲಾ ತಾನೇ ದೂರವಾಣಿ ಮೂಲಕ ಮದುವೆ ಸಮಾಚಾರ ಹೇಳುವಾಗ, ತನ್ನ ಸಂತೋಷ ಹಂಚಿಕೊಂಡಾಗ ಕೂಡ, ನನ್ನ ನೆನಪೂ ಆ ವ್ಯಕ್ತಿಗೆ ಆಗಿಲ್ಲವೆಂದರೆ ನನ್ನ ಈ ಹುಚ್ಚು ಮನಸ್ಸೇಕೋ ಒಪ್ಪುತ್ತಲೇ ಇಲ್ಲ.... ಯಾರಿಗೋ ದೂರದವರಿಗೆ ಹೇಳಿದಂತೆ ಹೇಳಿದ್ದರೂ ಪರವಾಗಿರಲಿಲ್ಲ... ಒಂದೇ ಒಂದು ಕರೆ ನನ್ನನ್ನು ಈ ದಿನ ಈ ತರಹದ ನೋವಿನಿಂದ ಪಾರುಮಾಡಿರುತ್ತಿತ್ತು. ಈಗ ನನಗಾಗುತ್ತಿರುವ ನೋವು ಹೆಪ್ಪುಗಟ್ಟಿ ಈ ಸಾಧಾರಣ ಶಬ್ದ ನಿರ್ಲಕ್ಷ್ಯಕ್ಕೆ ದಿವ್ಯ, ಭವ್ಯ, ಮಹತ್ತರ ಎಂಬೆಲ್ಲಾ ಗುಣವಾಚಕ ಬಾಲಗಳನ್ನು ಅಂಟಿಸುವಂತೆ ಮಾಡಿದೆ... ನಿರ್ಲಕ್ಷ್ಯ ಎಂಬ ಶಬ್ದ ಸಾಧಾರಣವಾಗಿದ್ದರೂ, ಇದನ್ನು ಅನುಭವಿಸಿದಾಗ ಆಗುವ ನೋವಿಗೆ ಆಳ, ಅಳತೆ ಎಂಬ ಯಾವ ಮಾಪನಗಳೂ ಉಪಯೋಗವಾಗೊಲ್ಲ....

ಏನಾಗುತ್ತಿದೆ ನಮ್ಮ ಸಂಬಂಧಗಳ ಬೆಸುಗೆಗೆ..... ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ.... ಎಲ್ಲಾ ಶಿಷ್ಟಾಚಾರಗಳನ್ನೂ ಮರೆತೇಬಿಟ್ಟಿದ್ದೇವಾ..... ಪ್ರೀತಿ-ವಿಶ್ವಾಸ-ನಂಬಿಕೆ ಎಂಬೆಲ್ಲಾ ಶಬ್ದಗಳೂ ಎಲ್ಲಿ ಹೋದವು.... ಎಂದು ಒಂಟಿಯಾಗಿ ಕುಳಿತು ನನ್ನ ಮನಸ್ಸು ...... ನಾನು ನಿರ್ಲಕ್ಷಿಸಲ್ಪಟ್ಟಿದ್ದೇನೆಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾರದೇ ಮೂಕವಾಗಿ ರೋದಿಸುತ್ತಿದೆ......

Thursday, November 19, 2009

ನವಾವರಣ ಕೃತಿಗಳು - ೫

ದ್ವಿತೀಯಾವರಣ ಕೃತಿ :

ದ್ವಿತೀಯಾವರಣ ಕೃತಿ ೬೫ನೇ ಮೇಳ ಮೇಚ ಕಲ್ಯಾಣಿ ರಾಗದಲ್ಲಿ ರಚಿಸಲ್ಪಟ್ಟಿದೆ. ಶ್ರೀ ಚಕ್ರ ಪೂಜೆಯ ಈ ಎರಡನೇ ಆವರಣಕ್ಕೆ "ಸರ್ವಾಶಾಪರಿಪೂರಕ್ ಚಕ್ರ" ಎಂದು ಹೆಸರು. ಇದು ನಮ್ಮ ದೇಹದ ಸುಶುಮ್ನಾ ನಾಡಿಯಲ್ಲಿರುವ ಕಂಠದ ಸಮೀಪವಿರುವಕ್ ವಿಶುದ್ಧ ಚಕ್ರ. ಈ ಆವರಣಕ್ಕೆ ದೇವಿ ’ತ್ರಿಪುರೇಶಿ’ಯೇ ಸಾಮ್ರಾಜ್ಞಿ. ಇಲ್ಲಿ ಷೋಡಶ ದಳಗಳ ಪದ್ಮವಿದೆ. ಆ ಪದ್ಮಗಳಲ್ಲಿ ಷೋಡಶ ಗುಪ್ತಯೋಗಿನಿಯರಿದ್ದಾರಂತೆ. ಸ್ವಪ್ನದಲ್ಲಿ ಹೊಂದಿರುವ ವಿಶೇಷ ವೃತ್ತಿಗಳನ್ನೂ ಚಿಚ್ಛಕ್ತಿಯಲ್ಲಿ ಹೊಂದಿರುವ ವಿಶೇಷ ಲಕ್ಷಣಗಳನ್ನೂ ಹೊಂದಿರುವ, ಗುಪ್ತಯೋಗಿನಿ ಎಂದು ಕರೆಯಲ್ಪಡುವ ಚಕ್ರದ ಅಧಿದೇವರೆ ಈ ಆವರಣದಲ್ಲಿ ಪೂಜಿಸಲ್ಪಡುತ್ತಾಳೆ. ನಾವು ನಮ್ಮ ಸೂಕ್ಷ್ಮ ಶರೀರದಲ್ಲಿ ಹೊಂದುವ ಎಲ್ಲಾ ಅನುಭವಗಳನ್ನೂ ಈ ದ್ವಿತೀಯ ಆವರಣ ಸೂಚಿಸುತ್ತದೆ. ಇದರಲ್ಲಿ ಸೂಚಿಸಿರುವ ಹದಿನಾರು ದಳಗಳೆಂದರೆ ಐದು ಪ್ರಾಣ, ಐದು ಜ್ಞಾನೇಂದ್ರಿಯ, ಐದು ಕರ್ಮೇಂದ್ರಿಯ ಮತ್ತು ಒಂದು ಮನಸ್ಸು..... ಎರಡನೆಯ ಆವರಣ ಕೃತಿಯ ಸಾಹಿತ್ಯ ಈ ರೀತಿ ಇದೆ .......

ಪಲ್ಲವಿ

ಕಮಲಾಂಬಾ
ಭಜರೇ ರೇ ಮಾನಸ..
ಕಲ್ಪಿತ ಮಾಯಾಕಾರ್ಯಂತ್ಯಜರೇ... ||

ಅನುಪಲ್ಲವಿ


ಕಮಲಾ ವಾಣಿ ಸೇವಿತಪಾರ್ಶ್ವಾಂ...
ಕಂಬುಜಗ್ರೀವಾಂ ನತದೇವಾಂ.... ||

ಮಧ್ಯಮಕಾಲದ ಸಾಹಿತ್ಯ

ಕಮಲಾಪುರಸದನಾಂ ಮೃದುಗದನಾಂ....
ಕಮನೀಯ ರದನಾಂ ಕಮಲವದನಾಂ.....||


ಚರಣ

ಸರ್ವಾಶಾಪರಿಪೂರಕ ಚಕ್ರಸ್ವಾಮಿನೀಂ.. ಪರಮಶಿವ ಕಾಮಿನೀಂ..
ದೂರ್ವಾಸಾರ್ಚಿತ ಗುಪ್ತ ಯೋಗಿನೀಂ... ದು:ಖ ಧ್ವಂಸಿನೀಂ ಹಂಸಿನೀಂ...
ನಿರ್ವಾಣ ನಿಜಸುಖ ಪ್ರದಾಯಿನೀಂ... ನಿತ್ಯ ಕಲ್ಯಾಣೀಂ ಕಾತ್ಯಾಯಿನೀಂ..
ಶರ್ವಾಣೀಂ ಮಧುಪ ವಿಜಯ ವೇಣೀಂ... ಸದ್ಗುರು ಗುಹ ಜನನೀಂ.. ನಿರಂಜನೀಂ.. ||

ಮಧ್ಯಮಕಾಲದ ಸಾಹಿತ್ಯ


ಗರ್ವಿತ ಭಂಡಾಸುರ ಭಂಜನೀಂ.. ಕಾಮಾಕರ್ಷಿಣ್ಯಾದಿ ರಂಜನೀಂ...
ನಿರ್ವಿಶೇ ಚೈತನ್ಯರೂಪಿಣೀಂ.. ಉರ್ವಿತತ್ವಾದಿ ಸ್ವರೂಪಿಣೀಂ... ||

ಈ ಕೃತಿಯಲ್ಲಿ ದೀಕ್ಷಿತರು ಮನಸ್ಸನ್ನು ಕುರಿತು ಹೇಳುತ್ತಾರೆ... ಎಲೆ ಮನವೇ ನೀನು ಕಲ್ಪಿಸಿಕೊಂಡಿರುವ ಮಾಯಾ, ಮೋಹವನ್ನೆಲ್ಲಾ ತ್ಯಜಿಸಿ, ಕಮಲಾಂಬಿಕೆಯನ್ನು ಭಜಿಸು....... ಮುಂದುವರೆಯುತ್ತಾ ಅನುಪಲ್ಲವಿಯಲ್ಲಿ ಲಕ್ಷ್ಮೀ ಸರಸ್ವತಿಯರಿಂದ ಸೇವಿಸಲ್ಪಡುವವಳೂ, ಅಂದವಾದ ದಂತಪಂಕ್ತಿಯುಳ್ಳವಳೂ, ಶಂಖುವಿನಂತಹ ಸುಂದರ ಕುತ್ತಿಗೆಯುಳ್ಳವಳೂ, ದೇವತೆಗಳೆಲ್ಲರಿಂದಲೂ ನಮಸ್ಕರಿಸಲ್ಪಡುವವಳೂ, ಕಮಲಾಪುರದಲ್ಲಿ ನೆಲೆಸಿರುವವಳೂ ಆದ ಕಮಲಾಂಬಿಕೆಯನ್ನು ಓ ಮನಸೇ... ನೀನು ಮನಸಾರ ಪ್ರಾರ್ಥಿಸು... ಎನ್ನುತ್ತಾರೆ.

ಚರಣದಲ್ಲಿ ಮುಂದುವರೆಯುತ್ತಾ ದೀಕ್ಷಿತರು ದೇವಿಯನ್ನು ಅವಳ ಶಕ್ತಿಗಳನ್ನೂ ಅತ್ಯಂತ ಸುಂದರವಾಗಿ ಸ್ತುತಿಸುತ್ತಾರೆ. ಇಲ್ಲಿ ಮೊದಲೇ ಹೇಳಿದಂತೆ ಸರ್ವಾಶಾಪರಿಪೂರಕ ಚಕ್ರದಲ್ಲಿ ಬರುವ ೧೬ ಶಕ್ತಿಗಳು ಅಂದರೆ ೧) ಕಾಮಾಕರ್ಷಿಣಿ ೨)ಬುಧ್ಯಾಕರ್ಷಿಣಿ ೩)ಅಹಂಕಾರಾಕರ್ಷಿಣಿ ೪)ಶಬ್ದಾಕರ್ಷಿಣಿ ೫)ಸ್ಪರ್ಶಾಕರ್ಶಿಣಿ ೬)ರೂಪಾಕರ್ಷಿಣಿ ೭)ರಸಾಕರ್ಷಿಣಿ ೮)ಗಂಧಾಕರ್ಷಿಣಿ ೯)ಚಿತ್ತಾಕರ್ಷಿಣಿ ೧೦) ಧೈರ್ಯಾಕರ್ಷಿಣಿ ೧೧)ಸ್ಥೈರ್ಯಾಕರ್ಷಿಣಿ ೧೨)ನಾಮಾಕರ್ಷಿಣಿ ೧೩)ಬೀಜಾಕರ್ಷಿಣಿ ೧೪)ಆತ್ಮಾಕರ್ಷಿಣಿ ೧೫)ಅಮೃತಾಕರ್ಷಿಣಿ ೧೬)ಶರೀರಾಕರ್ಷಿಣಿ... ಎಲ್ಲವನ್ನೂ ಸೇರಿಸಿ, ಈ ಚಕ್ರದ ಸ್ವಾಮಿನೀಂ.... ಅಧಿದೇವತೆಯೂ, ಪರಶಿವನ ಪತ್ನಿಯೂ, ದೂರ್ವಾಸರಿಂದ ಪೂಜಿಸಲ್ಪಡುವವಳೂ, ಗುಪ್ತಯೋಗಿನಿಯೂ, ಸರ್ವಾರ್ಥಗಳನ್ನೂ ಕೊಡುವವಳೂ, ದು:ಖವನ್ನು ಧ್ವಂಸ ಮಾಡುವವಳೂ, ಹಂಸಸ್ವರೂಪಿಣಿಯೂ, ಕಾತ್ಯಾಯಿನಿಯೆಂದು ಕರೆಯಲ್ಪಡುವವಳೂ, ಮೋಕ್ಷ ಪ್ರಧಾನ ಮಾಡುವವಳೂ, ಆನಂದ ಸ್ವರೂಪಿಯಾದವಳೂ, ಗುರುಗುಹನ ಜನನಿಯೂ, ಮಾಯಾರಹಿತಳೂ, ಗರ್ವದಿಂದ ಕೊಬ್ಬಿದ್ದ ಭಂಡಾಸುರನನ್ನು ವಧಿಸಿದವಳೂ, ಚೈತನ್ಯ ಸ್ವರೂಪಳೂ, ಪಂಚಭೂತ ಸ್ವರೂಪಳೂ ಆದ ಶ್ರೀ ದೇವಿ ಕಮಲಾಂಬಿಕೆಯನ್ನು ಧ್ಯಾನಿಸು... ಆರಾಧಿಸು... ಓ ಮನಸೇ....

Tuesday, November 17, 2009

ದೂರವಾಣಿ...... ಟ್ರೀಣ್.... ಟ್ರೀಣ್...... ೨

ಆ ದಿನ ನಿಮಗೆ ನಮ್ಮ ಮನೆಗೆ ದೂರವಾಣಿಯ ಆಗಮನ ಮತ್ತು ಅದರ ಸಂಭ್ರಮದ ಬಗ್ಗೆ ಹೇಳಿದ್ದೆ... ಈಗ ಅದರಿಂದಾಗುವ ಕಿರಿಕಿರಿಗಳೂ ಮತ್ತು ತೊಂದರೆಗಳ ಬಗ್ಗೆ ಹೇಳ್ತೀನಿ.... ಇದು ನನ್ನ ಸ್ವಂತ ಅನುಭವ... ನಿಮ್ಮ ಅನುಭವಗಳು ಬೇರೆಯೂ ಇರಬಹುದು.... ಈಗ ಸಧ್ಯಕ್ಕೆ ಎಲ್ಲಕ್ಕಿಂತ ಹೆಚ್ಚು ಕಿರಿಕಿರಿ ಮಾಡುತ್ತಿರುವ ಕರೆಗಳು ಎಂದರೆ ಎರಡು ಥರದ್ದು :

೧) ಮೊದಲನೆಯದು ವಿಳಾಸ ಬದಲಾದಾಗ ನಮಗೆ ಹೊಸದಾಗಿ ಸಿಗುವ ದೂರವಾಣಿ ಸಂಖ್ಯೆ ಹೊಚ್ಚ್ ಹೊಸದಲ್ಲದೇ, ಇದಕ್ಕೆ ಮುಂಚೆ ಬೇರೆ ಯಾರ ಹೆಸರಿನಲ್ಲೋ ಇದ್ದದ್ದು... ಅಕಸ್ಮಾತ್ ಆ ವ್ಯಕ್ತಿ ಏನಾದರೂ ಐಸಿಐಸಿಐ ಅಥವಾ ಸಿಟಿ ಬ್ಯಾಂಕ್ ನಂತಹ ಕಡೆ ಸಾಲ ತೆಗೆದುಕೊಂಡಿದ್ದರಂತೂ..., ನಮ್ಮ (ಮನೆಯಲ್ಲಿರುವ ಮಡದಿಯರ) ಪಾಡು ಆ ದೇವರಿಗೇ ಪ್ರೀತಿ !! ನೀವು ಕರೆ ಮಾಡಿದ ವ್ಯಕ್ತಿಯ ದೂರವಾಣಿ ಈಗ ಹೊಸದಾಗಿ ನಮಗೆ ಕೊಡಲ್ಪಟ್ಟಿದೆ.. ಹಿಂದಿನ ಗ್ರಾಹಕರು ಯಾರೆಂದು ನಮಗೆ ಗೊತ್ತಿಲ್ಲವೆಂದು ಎಲ್ಲಾ (ಗೊತ್ತಿರುವ) ಭಾಷೆಗಳಲ್ಲಿ ವಿವರಿಸಿದರೂ.. ಬೆಂಬಿಡದ ಭೂತಗಳಂತೆ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ಕರೆ ಮಾಡಿ... ಮಾಡಿ... ಸುಸ್ತು ಮಾಡಿಸಿಬಿಡುವುದು....

೨) ಎರಡನೆಯದು ಸ್ವಲ್ಪ ವಿಭಿನ್ನ ರೂಪ.. ಏನಪ್ಪಾಂದರೆ.. ದೂರವಾಣಿಯ ವಿಳಾಸ ಹಾಗೂ ಸಂಖ್ಯೆಗಳ ಪುಸ್ತಕ ಎದುರಿಗಿಟ್ಟುಕೊಂಡು, ಎಲ್ಲಾ ಮನೆಯ ಸಂಖ್ಯೆಗಳಿಗೂ ಕರೆ ಮಾಡಿ.. ಅತಿ ವಿನಯತೆ ಪ್ರಕಟಿಸುತ್ತ.. "ನಮಸ್ಕಾರ ಮೇಡಮ್... Mr... ಇದ್ದಾರ ಎಂದು ಕೇಳುವುದು... ನಾವು ಮಧ್ಯಾಹ್ನ ೧೨ ಘಂಟೆಗೆ ಅವರು ಕಛೇರಿಯಲ್ಲಿ ಇರ್ತಾರಲ್ವೇನ್ರಿ ಎಂದರೆ... ಹ್ಹೆ ಹ್ಹೆ ಹ್ಹೆ.. ಎಂದು ದೇಶಾವರಿ ನಗೆ ಸಶಬ್ದವಾಗಿ ನಗುತ್ತಾ.. ನಾನು "...." ಫೈನಾನ್ಸ್ ನಿಂದ ಕರೆ ಮಾಡುತ್ತಿದ್ದೇನೆ, ನಿಮಗೆ ಸಾಲ ಏನಾದರೂ ಬೇಕಿತ್ತಾ ಅಂತಾನೋ... ಇಲ್ಲ "....." ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ವಿಭಾಗದಿಂದ.. ನಮ್ಮ ಹೊಸ ಪ್ರಾಡಕ್ಟ್ ಬಂದಿದೆ, ನಿಮಗೇನಾದರೂ ಆಸಕ್ತಿಯಿದೆಯೇ ಎಂದೋ ಕೇಳುತ್ತಾ ನಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡುವಾಗ ಆಗುವ ಕಿರಿಕಿರಿ.... ಆಹಾ.... ಅನುಭವಿಸಿದವರಿಗೇ ಗೊತ್ತು...

ಈ ತರಹದ ಕರೆಗಳು ದಿನಕ್ಕೆ ೨ - ೩ ವಿವಿಧ ಕಡೆಗಳಿಂದ ಬರುತ್ತವೆ ಮತ್ತು ನಾಳೆ ಮತ್ತದೇ ಸಮಯಕ್ಕೆ ಸರಿಯಾಗಿ, ಅದೇ ಕಛೇರಿಯಿಂದ, ಆದರೆ ಬೇರೆ ಹುಡುಗನೋ / ಹುಡುಗಿಯೋ ಮಾಡಿದಾಗ... ಸಿಟ್ಟು ತನ್ನೆಲ್ಲಾ ಅಣೆಕಟ್ಟುಗಳನ್ನೂ ಒಡೆದುಕೊಂಡು ಭೋರ್ಗರೆಯುತ್ತೆ..... ಆದರೂ ತಾಳ್ಮೆಯಿಂದ "ನಿನ್ನೆ ತಾನೇ ನಿಮ್ಮಲ್ಲಿಂದ ಯಾರೋ ಹುಡುಗಿ ಮಾಡಿದ್ದರು, ಆಸಕ್ತಿಯಿಲ್ಲ ಎಂದಿದ್ದೆನಲ್ಲಾ"... ಎಂದಿನ್ನೂ ಮಾತು ಪೂರೈಸುವ ಮುನ್ನವೇ ’ದಡ್’ ಎಂದು ನಮ್ಮ ಕಿವಿಯೇ ತೂತಾಗ ಬೇಕು ಹಾಗೆ, ಏನೋ ನಾವೇ ಅವರನ್ನು ಕೆಲಸದ ಮಧ್ಯೆ ಮಾತಾಡಿಸಿ, ತೊಂದರೆ ಉಂಟುಮಾಡಿದೆವೆಂಬಂತೆ... ದೂರವಾಣಿಯನ್ನು ಕುಕ್ಕುವಾಗ... ನಮ್ಮ ಗತಿ ನಿಜವಾಗಲೂ ಆ ಪರಮಾತ್ಮನಿಗೇ ಪ್ರೀತಿಯಾಗಬೇಕು...

ಇನ್ನೊಂದು ಮೂರನೆಯ ಥರದ ಕಿರಿಕಿರಿ ಮೇಲಿನ ಎರಡಲ್ಲದ, ಬೇರೆಯದೇ ರೀತಿಯದು.... ಇದು ಸಂಚಾರಿ ದೂರವಾಣಿಗೆ ಬರುವ ವಿವಿಧ ಸೌಲಭ್ಯಗಳ ಉಚಿತ ಮಾಹಿತಿ ಕರೆಗಳು.... ಸರಿಯಾಗಿ ಮಧ್ಯಾಹ್ನ ೩ ರಿಂದ ೪ ರೊಳಗೆ, ಇಡೀ ಮನೆಯೇ ನಿಶ್ಯಬ್ದವಾಗಿರುವಾಗ, ಅತ್ಯಂತ ಆಸಕ್ತಿಯಿಂದ ಏನನ್ನಾದರೂ ಓದುತ್ತಿರುವಾಗ ಇದ್ದಕ್ಕಿದ್ದಂತೆ ಶುರುವಾಗುವ ಈ ಭಾಜಾ ಭಜಂತ್ರಿ ಬೆಚ್ಚಿ ಬೀಳುವಂತೆ ಮಾಡುವುದಂತೂ ಖಂಡಿತ.... ಈ ರೀತಿ ಗ್ರಾಹಕರಿಗೆ ಕಿರಿಕಿರಿಯಾಗುವಂತಹ ಸಮಯದಲ್ಲಿ, ಅವರ ಅವಶ್ಯಕತೆ ತಿಳಿದುಕೊಳ್ಳದೆ, ಎಲ್ಲಾ ಸಂಖ್ಯೆಗಳಿಗೂ ಮಾಡಲ್ಪಡುವ ಈ ಕರೆಗಳು ನಿಜಕ್ಕೂ ಬೇಕಾ ಅನ್ನಿಸುತ್ತದೆ....

ಎಲ್ಲಕ್ಕಿಂತ ಹೆಚ್ಚಾಗಿ ನನಗಾದ ಒಂದು ಕಹಿ ಅನುಭವ... ೧೯೯೩ ರಲ್ಲಿ ನಾವು ಕಲ್ಕತ್ತಾದಲ್ಲಿದ್ದಾಗ, ನನ್ನವರು ಇದ್ದ ಕೆಲಸ ಬಿಟ್ಟು ಬೇರೊಂದು ಹೊಸ ಕೆಲಸಕ್ಕಾಗಿ... ರಷ್ಯಾಗೆ ಹೋಗಿದ್ದರು. ಅವರು ಹೊರಟ ಮಾರನೇ ದಿನದಿಂದಲೇ ಶುರುವಾಯಿತು ನೋಡಿ ನನಗೆ ಎಲ್ಲಾ ಗ್ರಹಗಳದ್ದೂ ಕಾಟ ಒಟ್ಟಿಗೇ... ದಿನವೂ ನಾನು ಕಛೇರಿಯಿಂದ ಮನೆಗೆ ಬಂದು ಒಳಗೆ ಕಾಲಿಟ್ಟ ಕ್ಷಣ ದೂರವಾಣಿ ಟ್ರೀಣ್........ ಟ್ರೀಣ್....... ಯಾರೆಂದು ಎತ್ತಿದ ತಕ್ಷಣ ಆ ಕಡೆಯಿಂದ ಬರೀ ಅಸಹ್ಯವಾದ... ಅಶ್ಲೀಲವಾದ.... ಅನಾಗರಿಕವಾದ ಮಾತುಗಳು ತೂರಿ ಬರುತ್ತಿದ್ದವು.... ಜೊತೆಗೆ ಕೆಟ್ಟ ಕೊಳಕ ಪೋಲಿ ಹಾಡುಗಳ ಭಜನೆ ಬೇರೆ.... ಎಷ್ಟು ಬೆದರಿಸಿದರೂ, ಉಗಿದರೂ ನಿಲ್ಲದೆ ನನ್ನನ್ನು ತುಂಬಾ ಚಿಂತೆಗೊಳಪಡಿಸಿತ್ತು... ಇದು ನನ್ನ ಪ್ರಕಾರ ಯಾರೋ ಚೆನ್ನಾಗಿ ಪರಿಚಯವಿದ್ದವರದ್ದೇ ಕೆಲಸ... ಆದರೂ ಆ ಕಹಿ ಈಗ ನೆನಪಾದರೂ ಹಿಂಸೆಯಾಗುತ್ತೆ... ನಾನೇನಾದರೂ ಕರೆ ಸ್ವೀಕರಿಸದಿದ್ದರೆ... ಮತ್ತೆ ಮತ್ತೆ ಮಾಡುತ್ತಲೇ ಇರುತ್ತಿದ್ದ ಆ ರಾಕ್ಷಸ. ಆಗ ಇನ್ನೂ ನಮ್ಮ ಹತ್ತಿರ ಕರೆ ಮಾಡಿದವರ ಸಂಖ್ಯೆ ತೋರಿಸುವ ಯಂತ್ರ ಇರಲಿಲ್ಲ..... ಕೊನೆಗೂ ಅಂತೂ ಆ ಕರೆಗಳು ಬರುವುದು ನಿಂತಾಗ ನಾನು ನೆಮ್ಮದಿಯ ನಿಟ್ಟುಸಿರಿಟ್ಟಿದ್ದೆ.....

ಈಗ ಕೆಲವು ದಿನಗಳ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಟೆಲಿವ್ಯಾಪಾರಿಗಳಿಂದ ಪಾರಾಗುವ ದಾರಿಗಳು" ಎಂದು ಕೆಲವು ಕ್ರಿಯೇಟಿವ್ (ಅದು ಅವರಿಗೆ ಮಾತ್ರ ಕ್ರಿಯೇಟಿವ್ ಅನ್ನಿಸಿರಬೇಕು, ನನಗನ್ನಿಸಲಿಲ್ಲ) ಐಡಿಯಾಗಳು ಕೊಟ್ಟಿದ್ದರು... ನೀವೆಲ್ಲಾ ನೋಡಿರಬಹುದು... ಅದನ್ನೆಲ್ಲಾ ಇಲ್ಲಿ ಬರೆಯುವ ತಾಳ್ಮೆ, ಅವಶ್ಯಕತೆ ಎರಡೂ ಇಲ್ಲ ಅನ್ನಿಸ್ತು.... ಈ ಸಲಹೆಗಳನ್ನು ಕೆಲಸವಿಲ್ಲದೆ ಕುಳಿತ ಸೋಮಾರಿ ಹೆಂಗಸರು ಬೇಕಾದರೆ ಪ್ರಯತ್ನಿಸಬಹುದೇನೋ.....

ನನಗೇಕೋ ಈಗೀಗ ಸ್ಥಿರ ಹಾಗೂ ಸಂಚಾರಿ ಎರಡೂ ದೂರವಾಣಿಗಳ ಮೇಲೆ "ಸ್ಮಶಾನ ವೈರಾಗ್ಯ" ಅಂತಾರಲ್ಲ ಅದು ಬಂದಿದೆ.... ತ್ಯಾಗ ಮಾಡಿಬಿಡಲೇ ಅಥವಾ ಕಾಶಿ-ಗಯಾಕ್ಕೆಲ್ಲಾದರೂ ಹೋಗಿ ಬಿಟ್ಟು ಬಂದು ಬಿಡಲೇ ಎಂಬ ಯೋಚನೆಯಲ್ಲಿ ಮುಳುಗಿದ್ದೇನೆ......:-)


ಸಂಪದದಲ್ಲಿ ಪ್ರಕಟವಾಗಿದೆ.. ಕೊಂಡಿ..http://www.sampada.net/article/22553#node-22553

Monday, November 16, 2009

ದೂರವಾಣಿ...... ಟ್ರೀಣ್.... ಟ್ರೀಣ್...... ೧

ಈಚಿನ ದಿನಗಳಲ್ಲಿ ಸಂಚಾರಿ ದೂರವಾಣಿ ಹಾಗೂ ಮನೆಯ ಸ್ಥಿರ ದೂರವಾಣಿ ಎರಡೂ ಏಕೋ ತುಂಬಾ ತಲೆನೋವು ಕೊಡುತ್ತಿವೆ. ಮೊದ ಮೊದಲು ನಾನು ಚಿಕ್ಕವಳಿದ್ದಾಗ, ಅಪ್ಪ ಮನೆಗೆ ದೂರವಾಣಿ ಸಂಪರ್ಕ ತೆಗೆದುಕೊಂಡಾಗ, ಅದು ಅವರಿಗೆ ಅವರ ಪತ್ರಿಕೋದ್ಯಮದ ವೃತ್ತಿಗೆ ಪೂರಕವಾಗಿ ಅತ್ಯಂತ ಅವಶ್ಯಕತೆಯಾಗಿತ್ತು. ಎಲ್ಲಾ ತುರ್ತು ವರದಿಗಳನ್ನೂ ಟೆಲಿಗ್ರಾಂ ಮೂಲಕವೇ ಕಳುಹಿಸಲಾಗುವುದಿಲ್ಲ ಮತ್ತು ಸುತ್ತ ಮುತ್ತಲ ಹಳ್ಳಿಯವರು ತಂದೆಯವರನ್ನು ಅಂಚೆ ಕಛೇರಿಯ ಮೂಲಕವಾದರೂ ತಲುಪಬಹುದೆನ್ನುವ ಮುಖ್ಯ ಉದ್ದೇಶ, ನಮ್ಮನೆಗೆ ದೂರವಾಣಿಯ ಆಗಮನಕ್ಕೆ ನಾಂದಿ ಹಾಡಿತ್ತು. ಆ ದಿನ, ನಾನು ಬಹುಶ: ೬ - ೭ ನೇ ತರಗತಿಯಲ್ಲಿದ್ದೆ..... ನಮ್ಮ ಮನೆಗೆ ದೂರವಾಣಿ ಕೇಂದ್ರದವರು ಬಂದು ಆ ಹಳೆಯ ದಪ್ಪಗೆ-ಕಪ್ಪಗೆ, ಭಾರವಾಗಿ ಇದ್ದ ಒಂದು ಅಪರೂಪದ (ನಮಗೆ ಮಾತ್ರ) ವಸ್ತು ತಂದಾಗ ಮನೆಯಲ್ಲಿ ನಮ್ಮ ಸಂಭ್ರಮ ನೋಡಬೇಕಿತ್ತು....!!!

ನಡುಮನೆಯಲ್ಲಿ ಒಳಬಂದಾಗ ಎಡಗಡೆಗೆ ಬಾಗಿಲ ಪಕ್ಕ ಖಾಲಿಯಿದ್ದ ಮೂಲೆಗೆ ಒಂದು ಎತ್ತರವಾದ ಚೌಕಾಕಾರದ ಟೇಬಲ್ ಬಂದು ಕುಳಿತಿತ್ತು. ಅದು ದಶಕಗಳ ನಂತರ ಮಿಂದು ಮಡಿಯುಟ್ಟು ಕಂಗೊಳಿಸುತ್ತಿತ್ತು. ಅದರ ಮೇಲೆ ಶೋಭೆ ಹೆಚ್ಚಿಸಲು ಅಮ್ಮ ತಾನೇ ಬಣ್ಣ ಬಣ್ಣದ ದಾರಗಳಿಂದ ಕಸೂತಿ ಮಾಡಿದ್ದ ಹಾಸು ಹಾಕಲಾಗಿತ್ತು.... ಬರಲಿರುವ ಈ ದೂರವಾಣಿ ಎಂಬ ಮಹಾರಾಜನಿಗೆ ಸಿಂಹಾಸನ ಸಿದ್ಧವಾಗಿ, ನಾವೆಲ್ಲಾ ತಾಳ್ಮೆಗೆಟ್ಟು ಚಡಪಡಿಸುವಂತಾಗಿತ್ತು.... ಕೊನೆಗೂ ಆ ವ್ಯಕ್ತಿ ನಮ್ಮ "ಕಡು ಕಪ್ಪು" ಮಹಾರಾಜನನ್ನು ಎತ್ತಿ ತಂದು ಸಿಂಹಾಸನದಲ್ಲಿ ಕೂರಿಸಿದಾಗ ನಮಗೆಲ್ಲೋ ಏನೋ ಹೆಮ್ಮೆ... ಕೋಡು, ಕಿರೀಟ ಎಲ್ಲಾ ಬಂದಿತ್ತು.... ಜೊತೆಗೆ ಜಂಭ... ದೊಡ್ಡಸ್ತಿಕೆ ಕೂಡ... ಏಕೆಂದರೆ ನಮ್ಮ ಶಾಲೆಯಲ್ಲಿ ನಮ್ಮ ಮನೆಗೇ ಮೊದಲು ದೂರವಾಣಿ ಎಂಬ ಗೋಚರ (ಅಗೋಚರ ಅಲ್ಲ) ಮಾಂತ್ರಿಕ ವಸ್ತು ಬಂದಿದ್ದು.... ಮೊದಲ ಕರೆ ದೂರವಾಣಿ ಕಛೇರಿಯಿಂದ ಬರುವುದೆಂದೂ... ಮಕ್ಕಳು (ನಾನೊಬ್ಬಳೇ ಚಿಕ್ಕವಳು) ತಲೆಹರಟೆಗಳಂತೆ ವರ್ತಿಸದೆ ಸುಮ್ಮನಿರಬೇಕೆಂಬ ಅಪ್ಪನ ತಾಕೀತು ಬೇರೆ..... ಅಂತೂ ನಾವೆಲ್ಲರೂ ’ಬೇಚೈನೀಸೆ’ ಕಾಯುತ್ತಿದ್ದ ಕ್ಷಣ ಕಳೆದು, ನಮ್ಮ ದೂರವಾಣಿ "ಟ್ರೀಣ್... ಟ್ರೀಣ್..." ಎಂಬ ಶಬ್ದ ಮಾಡಲಾರಂಭಿಸಿದಾಗ, ಅಪ್ಪನ ತಾಕೀತು, ಅಮ್ಮನ ಸುಡುನೋಟ ಎಲ್ಲಾ ಗಾಳಿಗೆ ತೂರಿ ಓಡಿದ್ದೆವು.

ಆಷ್ಟರಲ್ಲಾಗಲೇ ಅಪ್ಪ ಆ ಮಾಂತ್ರಿಕ ಮಹಾರಾಜನ ಮುಂಡದಿಂದ ರುಂಡವನ್ನು ಬೇರ್ಪಡಿಸಿ, ತಮ್ಮ ಕಿವಿಗೆ ಹಿಡಿದಿದ್ದರು ಮತ್ತು ತುಂಬಾ ಗತ್ತಿನಿಂದ "ಹಲೋ"... ಎಂದಿದ್ದರು. ಇಷ್ಟು ಹೊತ್ತಿಗಾಗಲೇ ಒಂದು ಕೈನಲ್ಲಿ ಕಾಗದ ಮತ್ತು ಪೆನ್ ರೆಡಿಯಾಗೆ ಇಟ್ಟುಕೊಂಡಿದ್ದರಿಂದ, ಅಪ್ಪ ಏನೋ ಬರೆದುಕೊಂಡರು ಮತ್ತು ಹಾಂ.. ಸರಿ ಸರಿ... ಥ್ಯಾಂಕ್ಸ್ ಎಂದು ಮತ್ತೆ ಬೇರ್ಪಟ್ಟಿದ್ದ ರುಂಡ ಮುಂಡಗಳನ್ನು ಜೋಡಿಸಿಟ್ಟರು. ಅಮ್ಮ ಮತ್ತು ನಮ್ಮನ್ನೆಲ್ಲಾ (ಕುತೂಹಲದಿಂದ ಕಣ್ಣು ಪಿಳಿಪಿಳಿ ಬಿಡುತ್ತಾ ನಿಂತಿದ್ದೆವಲ್ಲಾ) ಕರೆದು ಇನ್ನು ಮೇಲೆ ಇದು ನಮ್ಮ ದೂರವಾಣಿ ಸಂಖ್ಯೆ... ಯಾರಾದರೂ ಕೇಳಿದರೆ ಹೇಳಿ ಎಂದರು.... ನಮ್ಮ ಕತ್ತುಗಳು ಸುಮ್ಮನೆ ’ಸರಿ’ ಎಂಬಂತೆ ಆಡಿದ್ದವು. ನಾವು ನಮ್ಮದೇ ಸಂಖ್ಯೆ ಮರೆತು ಬಿಡಬಹುದೆಂದು, ಅಪ್ಪ ಮುಂದಾಲೋಚಿಸಿ ಅದನ್ನು ಸಣ್ಣ ಚೀಟಿಯಲ್ಲಿ ಬರೆದು ದೂರವಾಣಿ ಯಂತ್ರದ ಮೇಲೆ ಅಂಟಿಸಿ ಬಿಟ್ಟರು. ಆಗ ಎರಡೇ ಸಂಖ್ಯೆಗಳಿದ್ದವು. ಅಪ್ಪ ಹೊರಗೆ ಹೊರಟ ನಂತರ, ನಾವೆಲ್ಲಾ ರುಂಡ-ಮುಂಡಗಳನ್ನು ಬೇರ್ಪಡಿಸಿ, ಕಿವಿಗಿಟ್ಟು ನೋಡಿದ್ದೇ.. ನೋಡಿದ್ದು.. ಕಿವಿಯಲ್ಲಿ ಕೇಳುವ ಟರ್.... ಶಬ್ದ ನಮ್ಮನ್ನು ರೋಮಾಂಚನಗೊಳಿಸಿದ್ದಂತೂ ನಿಜ.... ಅಮ್ಮ ತಾನೇ ಹಾಕಿದ ಸ್ವಲ್ಪ ಚಿಕ್ಕದಾದ ಕಸೂತಿಯ ಇನ್ನೊಂದು ಹಾಸು ತಂದು, ಆ ಮಾಯಾ ಯಂತ್ರದ ಧೂಳೆಲ್ಲಾ ಒರೆಸಿ ಮುಚ್ಚಿಬಿಟ್ಟು, ನಮ್ಮೆಡೆ ’ಉರಿನೋಟ’ ರವಾನಿಸಿದಾಗಷ್ಟೇ ನಾವು ಅಲ್ಲಿಂದ ಕಾಲ್ಕಿತ್ತಿದ್ದು....

ಅಲ್ಲಿಂದ ಪ್ರತೀ ಸಾರಿ ದೂರವಾಣಿಯ ಘಂಟೆ ಬಾರಿಸಿದಾಗಲೂ, ಅದೇನು ಸಂಭ್ರಮ, ಅದೇನು ಕಾತುರ... ಅಬ್ಬಾ ! ನಮಗೆ ಅದೊಂದು ಹಬ್ಬದ ಸಡಗರವೇ ಆಗಿಹೋಗಿತ್ತು..... ಪರಿಚಿತರು, ನೆಂಟರೂ ಎಲ್ಲರೂ ಬಂದು ಅಪ್ಪನನ್ನು ನೋಡಿ ಇವರೇ ಸ್ವಲ್ಪ ಎಡವಟ್ಟಾಗಿಬಿಟ್ಟಿದೆ... ಈ ಇಂಥವರಿಗೆ ಒಂದು ಫೋನ್ ಮಾಡಿಕೊಡೀಪ್ಪ... ಮಾತಾಡಬೇಕು... ಇದಕ್ಕೆಲ್ಲಾ ನೀವೇ ಸರಿ ನೋಡಿ ಎಂದು ಅಪ್ಪನನ್ನು ಅಟ್ಟ ಹತ್ತಿಸಿ ಬಿಟ್ಟಿ ಕರೆಯೂ ಮಾಡಿ, ಅಮ್ಮನ ಕೈಯ ಕಾಫಿಯೂ ಕುಡಿದು ಹೋದವರೆಷ್ಟು ಜನರೋ.....

ದೂರದೂರುಗಳಿಗೆ ಮತ್ತು ವಿದೇಶಗಳಿಗೆ ಕರೆಗಳನ್ನು ನೋಂದಣಿ ಮಾಡಿಸಿ, ರಾತ್ರಿ ೧೨ ಘಂಟೆಯಾದರೂ, ತೂಕಡಿಸುತ್ತಾ ಕಾಯುತ್ತಿದ್ದೆವು... ಅದೆಲ್ಲಾ ನಮಗೆಂದೂ ’ಕಾಟ’ ಎಂದಾಗಲೀ ಅಥವಾ ತೊಂದರೆಯೆಂದಾಗಲೀ ಅನ್ನಿಸಿರಲೇ ಇಲ್ಲ... ಇದೆಲ್ಲಾ ಸಂಭ್ರಮ, ಸಡಗರ, ಅನುಕೂಲ ಅಂದು.....

ಆದರೆ ಇಂದು ದೂರವಾಣಿ ಜಗತ್ತಲ್ಲಿ ಅತ್ಯಂತ ನವೀನ ಆವಿಷ್ಕಾಗಳಾಗಿವೆ.... ಸಂಚಾರಿ ದೂರವಾಣಿ, ಬೇಕೆಂದ ಕಡೆ ಎತ್ತಿಕೊಂಡು ಹೋಗಿ ಕುಳಿತು ಮಾತಾಡ ಬಲ್ಲ ದೂರವಾಣಿ ಎಲ್ಲಾ ಬಂದು ಹಳೆಯದಾಗಿಹೋಗಿವೆ.... ಆ ದಿನಗಳಲ್ಲಿ ತಪ್ಪಿ ಒಮ್ಮೊಮ್ಮೆ ಬರುತ್ತಿದ್ದ "ತಪ್ಪು ಸಂಖ್ಯೆ"ಗಳ ಕರೆ ಕೂಡ ಒಂಥರಾ ಖುಷಿನೇ ಕೊಡ್ತಿತ್ತು... ಆದರೆ ಈಗ ಸಂಚಾರಿ ದೂರವಾಣಿಯಲ್ಲೂ ಬರುವ ತಪ್ಪು ಸಂಖ್ಯೆಗಳ ಕರೆಗಳು ಒಮ್ಮೊಮ್ಮೆ ನೆಮ್ಮದೆ ಕೆಡಿಸುವುದಂತೂ ನಿಜ.

ನಮ್ಮ ಮನೆಗೆ ದೂರವಾಣಿ ಬಂದ ಹೊಸತು... ಮೊದಲ ರಾಂಗ್ ನಂಬರ್ ಕರೆ ಬಂದಾಗ... ಕರೆ ಮಾಡಿದವನು ಯಾವುದೋ ಹೋಟೆಲ್ ಎಂದು ಸ್ನಾನಕ್ಕೆ ಬಿಸಿನೀರು ಬೇಕಿತ್ತು ಎಂದಾಗ ನನ್ನ ಅಕ್ಕ ಹೆದರಿ ಇಟ್ಟುಬಿಟ್ಟಿದ್ದಳು... ಆದರೆ ಅದೇ ಕರೆ ೨ - ೩ ನೇ ಸಲ ಬಂದಾಗ... ಧೈರ್ಯದಿಂದ ’ನಮ್ಮನೆ ಹಂಡೇಲಿ ಕುದೀತಿದೆ... ತಲೆ ಮೇಲೆ ಸುರೀತೀನಿ ಬಾರೋ’.... ಎಂದಿದ್ದಳು....

ಮತ್ತೊಂದು ದಿನ... ಯಾರೋ ಕರೆ ಮಾಡಿ.... ಮಸಾಲೆ ದೋಸೆ ಪಾರ್ಸೆಲ್ ಕಳಿಸಿ ಎಂದಾಗ... ನಾನು ಇದು .....ಇಂಥವರ ಮನೆ, ಇಲ್ಲಿಗೂ ಮೂರು ದೋಸೆ ಪಾರ್ಸೆಲ್ ನಿಮ್ಮ ಲೆಕ್ಕದಲ್ಲೇ ಕಳಿಸಿ ಎಂದಿದ್ದೆ....

ಹೀಗೆ ನಮ್ಮ ಮನೆಯಲ್ಲಿ ಮೊದಲ ಬಾರಿಗೆ ಸ್ಥಾಪಿತಗೊಂಡ ಸ್ಥಿರ ದೂರವಾಣಿಯ ಸಂಪರ್ಕ ಹಲವು ವಿನೋದ ಪ್ರಸಂಗಗಳಿಗೆ ದಾರಿ ಮಾಡಿಕೊಟ್ಟಿತ್ತು....

ಮತ್ತೆ ನಾಳೆ ನಿಮಗೆ ಇದರಿಂದಾಗಿ ಅನುಭವಿಸಿದ/ಇನ್ನೂ ಅನುಭವಿಸುತ್ತಿರುವ ಕಿರಿಕಿರಿಗಳನ್ನು ತಿಳಿಸುತ್ತೇನೆ.... ಅಲ್ಲೀವರೆಗೂ ನಿಮ್ಮ ದೂರವಾಣಿ ಟ್ರೀಣ್... ಟ್ರೀಣ್.... ಅನ್ನುತ್ತಿರಲಿ......

ಸಂಪದದಲ್ಲಿ ಇದು ಪ್ರಕಟವಾಗಿದೆ ಈ ಕೆಳಗಿನ ಕೊಂಡಿಯಲ್ಲಿ..
http://www.sampada.net/article/22493

Wednesday, November 11, 2009

ಪುಸ್ತಕ ಪರಿಚಯ...... ೧

ದಿವಂಗತ ತ್ರಿವೇಣಿಯವರು ಬದುಕಿ - ಬಾಳಿದ ಕಾಲ ಅಲ್ಪವಾದರೂ, ಅವರು ಈ ದಿನಕ್ಕೂ ನಮ್ಮೊಳಗೆ ತಮ್ಮ ಕೃತಿಗಳ ಮೂಲಕ ಜೀವಂತವಾಗಿದ್ದಾರೆ. ಅವರ ಒಂದೊಂದು ಕಾದಂಬರಿಯೂ ಸಂಗ್ರಹ ಯೋಗ್ಯವಾಗಿದೆ. ಕಥಾ ಸಂಕಲನದ ಪ್ರತಿಯೊಂದು ಸಣ್ಣ ಕಥೆಯೂ ಅತ್ಯಂತ ನಿಪುಣತೆಯಿಂದ ಹೆಣೆದು ನಮ್ಮೆದುರಿಗಿಟ್ಟ ಶ್ರೇಷ್ಠ ಕಥೆಯಾಗಿದೆ. ಆ ದಿನದಲ್ಲೇ ಅವರಿಗಿದ್ದ ಮುನ್ನೋಟ, ವಿಷಯ ನಿರೂಪಣೆಯ ನೈಪುಣ್ಯ, ಇಂದಿಗೂ ನಮ್ಮನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.

ಈ ಕಥಾ ಸಂಕಲನ "ಸಮಸ್ಯೆಯ ಮಗು" ಬಹಳ ಹಿಂದೆ ಓದಿದ್ದೆ. ಈಗ ಮತ್ತೆ ನನ್ನ ಕೈಗೆ ಸಿಕ್ಕ ಪುಸ್ತಕ ಪ್ರತಿಯೊಂದು ಕಥೆಯನ್ನೂ ಹೊಸ ಆಯಾಮದಿಂದ ನೋಡುವಂತೆ ಮಾಡಿದೆ. ಮೊದಲನೆ ಸಲ ನಾನು ಓದಿದಾಗ ವಯಸ್ಸಿನ ಪ್ರಭಾವ ಇರಬಹುದು, ಇಷ್ಟೊಂದು ಗಂಭೀರ ಪರಿಣಾಮ ಬೀರಿರಲಿಲ್ಲ. ಸುಮ್ಮನೆ ಕಥೆ ಎಂಬಂತೆ ಓದಿದ್ದೆ ಅಷ್ಟೆ. ಆದರೆ ಈಗ ಓದುತ್ತಿದ್ದಾಗ ಪ್ರತಿಯೊಂದು ಕಥೆಯ ಜೊತೆಗೂ ನನ್ನನ್ನು ನಾನು ಗುರುತಿಸಿಕೊಳ್ಳಲಾಗುತ್ತಿದೆ. ಚಿಂತಿಸುವ ರೀತಿ ಬದಲಾಗಿದೆ. ಆದರೆ ತ್ರಿವೇಣಿಯವರ ದೂರದೃಷ್ಟಿ ನನ್ನನ್ನು ಅಚ್ಚರಿಪಡಿಸಿದೆ. ನನಗನ್ನಿಸಿದ ಕೆಲವು ಸಂಗತಿಗಳು ನಿಮಗಾಗಿ :..............

೧. ಮೊದಲನೆಯ ಕಥೆಯೇ ಪುಸ್ತಕದ ಶೀರ್ಷಿಕೆ "ಸಮಸ್ಯೆಯ ಮಗು". ಹಿಂದಿನ ಕಾಲದಲ್ಲಿ ಮನೆ ತುಂಬಾ ಮಕ್ಕಳಿದ್ದರೂ ಒಬ್ಬರಿಂದೊಬ್ಬರಿಗೆ ನೋವಾಗುವುದಾಗಲೀ, ವ್ಯಕ್ತಿತ್ವಕ್ಕೆ ಧಕ್ಕೆ ಬರುವುದಾಗಲೀ ಆಗುತ್ತಿರಲಿಲ್ಲ. ಆದರೆ ಈಗ ಮೊದಲ ಮಗುವಿನ ನಂತರ ಎರಡನೆಯ ಮಗು ಹುಟ್ಟಿದಾಗ, ಮೊದಲ ಮಗುವಿಗೆ ತನ್ನನ್ನು ಅಪ್ಪ-ಅಮ್ಮ ಕಡೆಗಣಿಸುತ್ತಿದ್ದಾರೆಂಬ ಭಾವನೆ ಸಹಜವಾಗಿ ಬಂದು ಸಮಸ್ಯೆ ಉಂಟು ಮಾಡುತ್ತದೆ. ಈ ಕಥೆಯಲ್ಲಿ ತ್ರಿವೇಣಿಯವರು ಆಗಿನ ದಿನಗಳಲ್ಲೇ ಈ ಸಮಸ್ಯೆಯನ್ನು ತಮ್ಮ ದೂರ ದೃಷ್ಟಿಯ ಚಿಂತನೆಗಳಿಂದ ನೋಡಬಲ್ಲವರಾಗಿದ್ದರು.

ಇಲ್ಲಿ ಕಥಾನಾಯಕ ನಮ್ಮ ಪುಟ್ಟ ನಾಗೇಂದ್ರ ಅದೇ ರೀತಿಯ ಮನೋ ವೇದನೆಗೊಳಪಡುತ್ತಾನೆ. ತನ್ನನ್ನು ಇನ್ನೂ ಹೆಚ್ಚಾಗಿ ಪ್ರೀತಿಸಲಿ, ತನ್ನ ಕಡೆ ಗಮನ ಕೊಡಲಿ ಎಂಬ ಒಂದೇ ಕಾರಣಕ್ಕಾಗಿ ಮನೆ ಬಿಟ್ಟು ಓಡಿ ಹೋಗುತ್ತಾನೆ. ಆದರೆ ಅದೃಷ್ಟವಶಾತ್ ಒಬ್ಬ ಸಹೃದಯರ ಮೂಲಕ ಮನೆ ತಲುಪುತ್ತಾನೆ. ಅಲ್ಲಿಯ ವಿದ್ಯಾಮಾನಗಳನ್ನೂ, ಆ ಹುಡುಗನ ತಂದೆ ತಾಯಿಯರನ್ನೂ ಭೇಟಿ ಮಾಡಿದ ನಂತರ, ಸಮಸ್ಯೆ ಏನೆಂದು ಅರ್ಥ ಮಾಡಿಕೊಂಡು, ತಂದೆ ತಾಯಿಗೆ ತಿಳಿ ಹೇಳುತ್ತಾರೆ. ಇಲ್ಲಿ ತಾಯ್ತಂದೆಯರ ಎಲ್ಲಾ ಪ್ರೀತಿಗೂ ಹಕ್ಕುದಾರನಾಗಿ, ಸರ್ವಾಧಿಕಾರಿಯಂತಿದ್ದ ನಾಗೇಂದ್ರ, ತಮ್ಮನ ಆಗಮನದಿಂದ ಕಡೆಗಣಿಸಲ್ಪಡುತ್ತಾನೆ. ಇದರಿಂದ ನೊಂದ ನಾಗೇಂದ್ರ ತನ್ನ ಸಿಟ್ಟು, ವೇದನೆಯೆಲ್ಲವನ್ನೂ ಏನೂ ಅರಿಯದ ಹಸುಳೆಯನ್ನು ಹಿಂಸಿಸುವುದರಿಂದಲೋ, ಮನೆ ಬಿಟ್ಟು ಹೋಗಿ ತಾಯ್ತಂದೆಯರನ್ನು ಆತಂಕಪಡಿಸುವುದರಿಂದಲೋ ವ್ಯಕ್ತ ಪಡಿಸುತ್ತಿರುತ್ತಾನೆ.

ಕೊನೆಗೆ ಎರಡು ತಿಂಗಳ ನಂತರ ನಾಗೇಂದ್ರನನ್ನು ಕಾಣಲು ಹೋದ ಆ ಸಹೃದಯರಿಗೆ ಅಚ್ಚರಿಯಾಗುವಂತೆ, ಮಗುವನ್ನು ಆಡಿಸುತ್ತಿರುವ ನಾಗೇಂದ್ರ ಕಾಣಸಿಗುತ್ತಾನೆ. ತಂದೆ ತಾಯಿಯರ ಪ್ರೀತಿ ಪಡೆದು ನಾಗೇಂದ್ರ ಸಂತೃಪ್ತನಾಗಿ, ತನ್ನ ಪ್ರೀತಿಯನ್ನು ಮಗುವಿಗೆ ಧಾರೆಯೆರೆಯ ತೊಡಗಿರುತ್ತಾನೆ. ಸಮಸ್ಯೆ ಮಗುವಿನದಲ್ಲ, ಪಿತೃಗಳದ್ದು ಎಂಬುದು ಇಲ್ಲಿ ಹೃದಯಂಗಮವಾಗಿ ಹೇಳಲ್ಪಟ್ಟಿದೆ. ಕಥೆಯ ಜೊತೆ ಲೇಖಕಿ ತುಂಬಾ ಸರಳವಾಗಿ ತಾಯ್ತಂದೆಯರಿಗೆ ತಿಳುವಳಿಕೆ ಹೇಳಿದ್ದಾರೆ ಮತ್ತು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

೨. ತುಂಬಿದ ಕೊಡ ಮತ್ತು ಮಗುವಿನ ಕರೆ :

ಮಗುವನ್ನು ಕಳೆದುಕೊಂಡ ತಾಯಿ - ತಾಯಿಯನ್ನು ಕಳೆದು ಕೊಂಡ ಮಗು, ಎರಡು ಜೀವಗಳ ಸುತ್ತ ಸುತ್ತುವ ತೀವ್ರ ಭಾವನೆಗಳನ್ನೊಳಗೊಂಡ ಕಥೆ. ಪಾಪದ ಕೂಸು, ಅಸಹ್ಯ ಎಂದೆಲ್ಲಾ ಜರಿದಿದ್ದ ಮನಸ್ಸನ್ನೂ ಮಾತೃ ಪ್ರೇಮ ಜಯಿಸಿ, ಕೊನೆಗೆ ಹಾಲು ಇಂಗದೆ, ಮಗುವಿನ ಪಾಲಿಗೆ ಅಮೃತವಾಗುತ್ತದೆ. ಒಂದು ಪುಟ್ಟ ಜೀವ ಬದುಕಲು ಬೇಕಾದ ಜೀವಧಾರೆಯಾಗತ್ತೆ. ಎಲ್ಲಕ್ಕಿಂತಲೂ ಅತ್ಯಂತ ಹಿರಿದಾದದ್ದು ಮಾತೃ ಪ್ರೇಮ ಮತ್ತು ತಾಯಿ ಕರುಳು ಎಂಬುದು ಈ ಕಥೆಯ ಸಾರಾಂಶ. ಮನ ಕಲಕುವಂಥ ನಿರೂಪಣೆ.

ತನ್ನ ಭವಿಷ್ಯ ಹಾಳಾದರೂ ಪರವಾಗಿಲ್ಲ ಮಗುವನ್ನು ತಾನೇ ಸಾಕುವುದಾಗಿ ನಿರ್ಧರಿಸುವ ನಾಗಮ್ಮ ತಾಯಿಯ ಮಮತೆಯನ್ನು ಮೆರೆಸುತ್ತಾಳೆ. ವೀರಪ್ಪ ಕೊಟ್ಟ ಪೊಳ್ಳು ಆಶ್ವಾಸನೆಯಿಂದ, ತಾಯಿಯಾಗುವ ನಾಗಮ್ಮ, ತನ್ನ ಕರುಳ ಬಳ್ಳಿಯನ್ನು ಹೊಸಕಲಾರದೆ, ಎಲ್ಲರಿಂದಲೂ ದೂರ ಹೋಗಿ, ಹೊಸ ಬದುಕು ಕಂಡುಕೊಳ್ಳುವ ಉತ್ತಮ ನಿರ್ಧಾರಕ್ಕೆ ಬರುತ್ತಾಳೆ.

೩. ಮಗಳ ಮನಸ್ಸು :

ತೀರ ಬಡವನಾದ ತಂದೆ ತನ್ನ ಮೂರನೆಯ ಮಗಳ ಮದುವೆ, ಸಾಲ ತೀರಿಸಲು ತನಗೆ ದುಡ್ಡು ಕೊಟ್ಟ, ಶ್ರೀಮಂತ ಮುದುಕನ ಜೊತೆ ಮಾಡಿಬಿಟ್ಟಾಗ, ಮನಸ್ಸು ಮುರಿದು, ಎಲ್ಲಾ ಸಂಬಂಧಗಳನ್ನೂ ತೊರೆದುಕೊಂಡು ಹೊರಟು ಹೋಗುತ್ತಾಳೆ ಚಂದ್ರ. ನಾಲ್ಕು ವರ್ಷಗಳ ನಂತರ ಸಹಾಯ ಕೇಳಲು ಬಂದ ತಂದೆಯನ್ನು ನಿಂದಿಸಿ, ಅಟ್ಟಿ ಬಿಡುತ್ತಾಳೆ. ಆದರೆ ತಾಯಿ ಮತ್ತು ಚಿಕ್ಕ ತಮ್ಮನ ಅನಾರೋಗ್ಯದ ವಾರ್ತೆ ಅವಳಲ್ಲಿನ ಪ್ರೀತಿಯನ್ನು ತಟ್ಟಿ ಎಬ್ಬಿಸಿ, ತಂದೆಯ ಹಿಂದೆ ಓಡಿ ಬಂದು ತನ್ನ ಕೈಲಿದ್ದ ಎರಡು ಚಿನ್ನದ ಬಳೆಗಳನ್ನು ಕೊಟ್ಟು ಹೋಗುತ್ತಾಳೆ. ಮುಂದೆಯೂ ಸಹಾಯ ಬೇಕಾದರೆ ಮತ್ತೆ ಬರುವಂತೆ ವಿನಂತಿಸಿಕೊಂಡು, ತಂದೆಯ ಕ್ಷಮೆಯಾಚಿಸಿ, ಆಶೀರ್ವಾದ ಪಡೆದು ಹೋಗುತ್ತಾಳೆ. ಇಲ್ಲಿ ಹೆಣ್ಣು ಮಕ್ಕಳ ಅಂತ:ಕರಣ ಎಷ್ಟು ಮೃದು ತನ್ನ ಜೀವನವನ್ನೇ ಹಾಳು ಮಾಡಿದನೆಂದು ದ್ವೇಷಿಸುತ್ತಿದ್ದ ತಂದೆಯ ಸಹಾಯಕ್ಕೆ ಎಲ್ಲವನ್ನೂ ಮರೆತು ಹೇಗೆ ಧಾವಿಸಿದಳೆಂಬುದು ಚಿತ್ರಿತವಾಗಿದೆ. ಒಳ್ಳೆಯ ಕಥೆ..

೪. ಪ್ರೇಮದ ಬೆಳಕು :

ಪ್ರೇಮ ಅನುರಾಗವೆಂಬುದು ಬಾಹ್ಯ ಸೌಂದರ್ಯದಲ್ಲಲ್ಲ, ಆಂತರಿಕ ಸೌಂದರ್ಯದಲ್ಲಿದೆ ಎನ್ನುವುದನ್ನು ಬಿಂಬಿಸುವ ಕಥೆ. ಕಲಾವಿದನಾದವನು ಎಂತಹ ಕುರೂಪಿಯನ್ನು ನೋಡಿದರೂ, ಅದರಲ್ಲಿರುವ ಕಲೆಯ ಸೌಂದರ್ಯ ಹುಡುಕುತ್ತಾನೇ ಹೊರತು, ಅಶಾಶ್ವತವಾದ ದೈಹಿಕ ಸೌಂದರ್ಯವನ್ನಲ್ಲ. ಕಥಾನಾಯಕ ಸಂಜಯ ಕೊನೆಗೆ ಸಹನೆ, ಭಕ್ತಿ, ಪ್ರೀತಿ, ಅನುರಾಗದಿಂದ ಹೊಳೆಯುತ್ತಿದ್ದ ಮಂಜುವಿನ ಕಣ್ಣುಗಳ ಭಾಷೆಯನ್ನು ಅರಿಯುತ್ತಾನೆ.

೫. ಆ ಸಂಜೆ :

ತನ್ನನ್ನೇ ಬಸ್ ನಿಲ್ದಾಣದಿಂದಲೂ ಹಿಂಬಾಲಿಸಿ ಬಂದ ಯುವಕನ ಮೇಲೆ ಸಿಟ್ಟು ಮಾಡಿಕೊಂಡು, ಅಸಹ್ಯಿಸಿಕೊಂಡು, ಅವಸರದಲ್ಲಿ ಕಾಶ್ಮೀರ್ ಸಿಲ್ಕ್ ಸೀರೆ ಕೊಂಡು, ಅಂಗಡಿಯಿಂದ ಹೊರಗೋಡಿ ಬಿಡುತ್ತಾಳೆ ಕಥಾನಾಯಕಿ. ಆದರೆ ಅವಳು ಕೊಂಡ ಅಂತಹುದೇ ಸೀರೆಕೊಂಡು, ಮೊದಲ ದೀಪಾವಳಿಯನ್ನು ಹೆಂಡತಿಯೊಡನೆ ಆಚರಿಸಲು, ಸಿಹಿ ಕನಸೊಂದನ್ನು ಕಾಣುತ್ತಾ ಹೋಗುತ್ತಾನೆ, ಅವಳನ್ನು ಹಿಂಬಾಲಿಸಿ ಬಂದಿದ್ದ "ವಿಲನ್". ಇಲ್ಲಿ ಕಥಾನಾಯಕ ಹಿಂಬಾಲಿಸಿ ಬಂದಿದ್ದ ಹುಡುಗಿ ನೋಡಲು ತನ್ನ ಹೆಂಡತಿಯಂತೆಯೇ ಇದ್ದದ್ದು ಮತ್ತು ತನ್ನನ್ನು ಅವನು ಹಿಂಬಾಲಿಸಿದ ಉದ್ದೇಶ ಎರಡೂ ತಿಳಿಯದೆ ಹೆದರುತ್ತಾಳೆ. ಆದರೆ ಅಂತ್ಯ ನವಿರಾದ ಹಾಸ್ಯದಿಂದ ಕೂಡಿದ್ದು, ಮನಸ್ಸು ಮುದಗೊಳ್ಳುತ್ತದೆ.

೬. ಕೊನೆಯ ನಿರ್ಧಾರ :

೨೨ ವರ್ಷಗಳ ಹಿಂದೆ ವೆಂಕಟೇಶಮೂರ್ತಿ ಅನುಮಾನಿಸಿ ಬಿಟ್ಟು ಬಿಟ್ಟಿದ್ದ ತಮ್ಮ ಹೆಂಡತಿಯನ್ನು ಮತ್ತೆ ಕರೆಯಲು ಬಂದಾಗ, ಸ್ವಾಭಾವಿಕವಾಗಿಯೇ ಕ್ಷಮಯಾ ಧರಿತ್ರಿಯಾದ ಲಲಿತಾ ಸ್ವಲ್ಪ ಸ್ವಲ್ಪ ಕರಗುತ್ತಾಳೆ. ಆದರೆ ತನ್ನ ಗಂಡನ ಎರಡನೆಯ ಹೆಂಡತಿ ಸತ್ತು, ಮನೆಯಲ್ಲಿ ಐದು ಮಕ್ಕಳಿರುವ ವಿಷಯ ತಿಳಿದಾಗ, ಕರಗಿದ ಮನಸ್ಸು ಕಲ್ಲಿನಂತಾಗಿ, ಕಾಳಿಯಾಗುತ್ತಾಳೆ. ಇದು ನಿಜವಾದ ಪ್ರೀತಿ ಅಲ್ಲ, ತನ್ನ ಅನುಕೂಲಕ್ಕಾಗಿ ವೆಂಕಟೇಶಮೂರ್ತಿ ಮಾಡಿಕೊಳ್ಳುತ್ತಿರುವ ಸಂಧಾನ ಎಂದು ಅರಿತುಕೊಂಡು, ಅವರನ್ನು ತನ್ನ ಜೀವನದಿಂದ ಎರಡನೇ ಸಲ ಹೊರ ಹಾಕುತ್ತಾಳೆ ಮತ್ತು ಇನ್ನೆಂದೂ ಪುನ: ಬರಬಾರದೆಂದು ಹೇಳುತ್ತಾಳೆ. ಇಲ್ಲಿ ಲಲಿತಾ ತಾನು ಮಾಡಿಲ್ಲದ ತಪ್ಪಿಗಾಗಿ, ತನ್ನ ಸ್ವಮರ್ಯಾದೆ ಬಿಟ್ಟು ಕೊಡದೆ, ಸ್ವಾಭಿಮಾನ ಮೆರೆಸುವುದು, ಸಮಾಧಾನಕರವಾಗಿದೆ.

೭. ಮೂರನೆಯ ಕಣ್ಣು ಕೂಡ ತಾಯ ಮಮತೆಯನ್ನು ಬಿಂಬಿಸುತ್ತದೆ. ಹೆಣ್ಣು ಹೇಗೆ ಎಲ್ಲರನ್ನೂ ತಾಯಿಯಂತೆ ಕಾಣಬಲ್ಲಳೆಂಬುದಕ್ಕೆ ಈ ಕಥೆ ಸಾಕ್ಷಿ.

೮. ನರಬಲಿ : ಇದರಲ್ಲಿ ಲೇಖಕಿ ಕಥಾ ನಾಯಕಿ ರತ್ನ ಯಾರಿಂದಲೋ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದಾಗ ಪಡುವ ಮಾನಸಿಕ ಹಿಂಸೆಯನ್ನು ಚಿತ್ರಿಸಲಾಗಿದೆ. ತಾನು ಅತಿಯಾಗಿ ಪ್ರೀತಿಸಿದ ತನ್ನ ಗಂಡನ ಹೋಲಿಕೆಯದೇ ಮಗು ಹುಟ್ಟಿದಾಗ ಅದು ತಮ್ಮಿಬ್ಬರದೇ ಎಂದು ಉದ್ವೇಗದಿಂದು ಕಿರುಚಿ ಅಪ್ಪಿ ಹಿಡಿಯುತ್ತಾಳೆ, ಹಾಗೇ ಕೊನೆಯುಸಿರೆಳೆಯುತ್ತಾಳೆ.

ಈ ಕಥಾ ಸಂಕಲದ ಕೆಲವು ಕಥೆಗಳ ಬಗ್ಗೆ ನಾನು ಏನನ್ನೂ ಬರೆದಿಲ್ಲ. ಸೌಂದರ್ಯ ನೋಡಿ ಮೋಹಿಸಿ ಮದುವೆಯಾಗಲಿಚ್ಛಿಸುವ ಇಬ್ಬರು ಹುಡುಗರು, ಅವಳು ಬಾಲ ವಿಧವೆಯೆಂದು ತಿಳಿದೊಡನೆ ಹಿಂತೆಗೆಯುವ ಕಥೆ ಈಗಿನ ಕಾಲಕ್ಕೆ ಪ್ರಸ್ತುತವೆಂದು ನನಗನ್ನಿಸಲಿಲ್ಲ. ವಯಸ್ಸಾದ ಸಿನಿಮಾ ನಟಿ ಸಾಯುವವರೆಗೂ ನಾಯಕಿಯ ಪಾತ್ರವನ್ನೇ ಮಾಡಬೇಕೆಂದು ಆಶಿಸುವುದು ಮತ್ತು ಸಿಗಲಿಲ್ಲವೆಂದ ಆತ್ಮಹತ್ಯೆ ಮಾಡಿಕೊಳ್ಳುವುದು, ಎಲ್ಲಾ ಕಾಲಕ್ಕೂ ಸಲ್ಲುತ್ತದಾದರೂ, ಓದಿದ ನನ್ನ ಮನಸ್ಸನ್ನೇನು ಸೆಳೆಯಲಿಲ್ಲವಾದ್ದರಿಂದ ಇಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸಿಲ್ಲ.

ಒಟ್ಟು ೧೫ ಕಥೆಗಳನ್ನೊಳಗೊಂಡ ಈ ಕಥಾ ಸಂಕಲನ, ಅದ್ಭುತವಾಗಿ ಓದಿಸಿಕೊಂಡು ಹೋಗುತ್ತದೆ. ವಿಷಯವನ್ನು ಮನಮುಟ್ಟುವಂತೆ ಸರಳ ಶಬ್ದಗಳನ್ನುಪಯೋಗಿಸಿ, ಎತ್ತಿಕಟ್ಟುವ ತ್ರಿವೇಣಿಯವರ ಕಲೆ ಅದ್ಭುತ. ಅವರ ಶೈಲಿ, ಲೀಲಾಜಾಲ ಬರವಣಿಗೆ ನಮ್ಮನ್ನು ಸುಖಾಸನದಲ್ಲಿ ಕುಳಿತು, ಅನುಭವಿಸುತ್ತಾ, ಓದುವಂತೆ ಪ್ರೇರೇಪಿಸುತ್ತದೆ.

ಎರಡು ದಶಕಗಳ ನಂತರ ಮತ್ತೆ ಓದಿದ ಈ ಪುಸ್ತಕ, ಹಲವು ಒಳ್ಳೆಯ ವಿಷಯಗಳಾಧಾರಿತ ಕಥೆಗಳನ್ನು ಹೊಂದಿದೆ. ಒಟ್ಟಿನಲ್ಲಿ ಒಂದು ಸಂಜೆ ಸುಖವಾಗಿ ಒಳ್ಳೆಯ ಓದಿನಿಂದ ಕಾಲ ಕಳೆಯಬಹುದಾದ ಪುಸ್ತಕ. ಕೆಲವು ಕಥೆಗಳನ್ನು ಸುಲಭದಲ್ಲಿ ಮರೆಯಲಾಗುವುದಿಲ್ಲ, ಕಾಡುತ್ತವೆ, ಕಾಡುತ್ತಲೇ ಇರುತ್ತವೆ........ ಮತ್ತೆ.......... ಮತ್ತೆ...........

Wednesday, November 4, 2009

ನವಾವರಣ ಕೃತಿಗಳು - ೪

ಶ್ರೀ ಮಹಾಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯನ ಪ್ರಾರ್ಥನೆಯ ನಂತರ, ನಾವು ದೇವಿ ಕಮಲಾಂಬಿಕೆಯನ್ನೇ ಧ್ಯಾನಿಸುತ್ತೇವೆ. ಈ ಧ್ಯಾನ ಕೃತಿಯನ್ನು ದೀಕ್ಷಿತರು ೮ನೇ ಮೇಳ ಹನುಮ ತೋಡಿ ರಾಗದಲ್ಲಿ ರಚಿಸಿದ್ದಾರೆ. ಈ ಕೃತಿಯು ತೋಡಿ ರಾಗದ ನಿಷಾದ ಸ್ವರದಿಂದ ಆರಂಭವಾಗುವುದು ಮತ್ತು ಗಾಯಕರನ್ನು ಶುರುವಿನಿಂದಲೇ ಭಕ್ತಿಯ ದಾರಿಗೆ ಎಳೆದುಕೊಂಡುಬಿಡುತ್ತದೆ... ಸ್ವರ ಪ್ರಸ್ತಾರ ಇಡೀ ಕೃತಿಯಲ್ಲಿ, ತೋಡಿ ರಾಗದ ಸಾರವನ್ನು ಪರಿಪೂರ್ಣವಾಗಿ ಬಿಂಬಿಸುತ್ತದೆ. ಸಂಗೀತಗಾರರಿಗೆ ಈ ಕೃತಿ ಹಾಡುವುದೊಂಥರಾ ಆತ್ಮ ತೃಪ್ತಿಕೊಡುತ್ತದೆ.

ಪಲ್ಲವಿ

ಕಮಲಾಂಬಿಕೆಯೇ... ಅಂಬ.... ಕಮಲಾಂಬಿಕೇ ಆಶೃತ ಕಲ್ಪಲತಿಕೇ... ಚಂಡಿಕೇ...
ಕಮನೀಯಾರುಣಾಂಶುಕೇ..... ಕರವಿಧೃತ ಶುಕೇ ಮಾಮವ..... ||

ಅನುಪಲ್ಲವಿ

ಕಮಲಾಸನಾನಿ ಪೂಜಿತ... ಕಮಲಪದೇ... ಬಹು ವರದೇ....
ಕಮಲಾಲಯ ತೀರ್ಥವೈಭವೇ... ಶಿವೇ.... ಕರುಣಾರ್ಣವೇ...... ||

ಚರಣ

ಸಕಲಲೋಕ ನಾಯಿಕೇ... ಸಂಗೀತ ರಸಿಕೇ... ಸುಕವಿತ್ವ ಪ್ರದಾಯಿಕೇ...
ಸುಂದರಿಗತ ಮಾಯಿಕೇ.... ವಿಕಳೇ... ಬರಮುಕ್ತಿದಾನ ನಿಪುಣೇ....
ಅಘಹರಣೇ..... ವಿಯದಾದಿ ಭೂತ ಕಿರಣೇ... ವಿನೋದ ಚರಣೇ... ಅರುಣೇ...
ಸಕಲೇ ಗುರುಗುಹ ಚರಣೇ..... ಸದಾಶಿವಾಂತ:ಕರಣೇ.....
ಅಕಚಟತಪಾದಿವರ್ಣೇ.... ಅಖಂಡೈಕರಸಪೂರ್ಣೇ..... ||


ಭಕ್ತರಿಗೆ ಮತ್ತು ನಿನ್ನನ್ನು ಆಶ್ರಯಿಸಿದವರಿಗೆ ಕಲ್ಪಲತೆಯಂತೆ, ಬೇಡಿದ್ದನ್ನೆಲ್ಲಾ, ಇಷ್ಟಾರ್ಥಗಳನ್ನೆಲ್ಲಾ ಕೊಡುವವಳೇ, ಚಂಡಿಕಾರೂಪದಿಂದ ದುಷ್ಟರನ್ನು ಸಂಹರಿಸುವವಳೇ, ಸುಂದರವಾದ ಕೆಂಪು ವಸ್ತ್ರವನ್ನುಟ್ಟಿರುವವಳೇ, ಕೈಯಲ್ಲಿ ಗಿಣಿಯನ್ನು ಹಿಡಿದು, ಅತ್ಯಂತ ಸೌಂದರ್ಯವತಿಯಾದವಳೇ, ಪ್ರಜ್ವಲಿಸುತ್ತಿರುವವಳೇ, ಕಮಲಾಂಬಿಕೆಯೇ... ನನ್ನನ್ನು ರಕ್ಷಿಸು, ಸಂರಕ್ಷಿಸು ಎಂದು ಆರಂಭಿಸುತ್ತಾರೆ ದೀಕ್ಷಿತರು...

ಬ್ರಹ್ಮಾದಿ ಮೊದಲುಗೊಂಡು ಇಡೀ ದೇವತಾ ಸಮೂಹದಿಂದಲೇ ಪುಜಿಸಲ್ಪಡುವವಳೇ... ಪಾದ ಕಮಲಗಳುಳ್ಳವಳೇ.. ನಾವು ಬೇಡಿದ್ದಕ್ಕಿನಾ ಹೆಚ್ಚಾಗಿಯೇ ವರವನ್ನು ಕರುಣಿಸುವಂಥಹ, ಕರುಣಾಮಯಿಯೇ.. ಮಾತೆಯೇ.. ತಿರುವಾರೂರಿನಲ್ಲಿರುವ ಕಮಲಾಂಬಾ ದೇವಸ್ಥಾನದ ಸರೋವರವಾದ ಬ್ರಹ್ಮತೀರ್ಥದ ವೈಭವವುಳ್ಳವಳೇ, ಶಿವೇ... ಮಂಗಳ ಸ್ವರೂಪಿಣಿಯೇ... ನನ್ನನ್ನು ರಕ್ಷಿಸು... ಸಂರಕ್ಷಿಸು ತಾಯೇ...

ಚರಣದಲ್ಲಿ ದೀಕ್ಷಿತರು ದೇವಿಯನ್ನು ಸಕಲ ಲೋಕದ ನಾಯಕಿಯೇ.. ಜಗನ್ಮಾತೆಯೇ... ಜಗತ್ತಿಗೇ ಒಡೆಯಳೇ... ಸಂಗೀತವನ್ನು ರಸಿಕತೆಯಿಂದ ಅನುಭವಿಸುವವಳೇ... ಗಾನಪ್ರಿಯಳೇ... ಸುಖವನ್ನು ದಯಪಾಲಿಸುವವಳೇ.. ವಾಕ್ಚಾತುರ್ಯ ನೀಡುವವಳೇ... ಸುಂದರೇಶ್ವರನನ್ನು ಮೋಹಿಸಿದ, ಅತ್ಯಂತ ಮೋಹಕಳಾದ, ಸುಂದರಾಂಗಿಯೇ... ವಿದೇಹ ಮುಕ್ತಿದಾನವನ್ನು ದಯಪಾಲಿಸುವಲ್ಲಿ ನಿಪುಣಳೇ ಆಗಿರುವ ದೇವಿ ಕಮಲಾಂಬಿಕೆಯೇ ರಕ್ಷಿಸು... ಓ ದೇವಿಯೇ ನೀನು ಪಾಪಗಳನ್ನು ಪರಿಹರಿಸುವವಳೂ, ಪಂಚಭೂತಗಳನ್ನು ಹಿಡಿತದಲ್ಲಿಟ್ಟುಕೊಂಡಿರುವವಳೂ, ಪ್ರಕಾಶಿಸುವಂತೆ ಮಾಡುವವಳೂ, ವಿನೋದಶೀಲಳೂ, ಸಕಲ ಚರಾಚರಗಳನ್ನೂ ನಿಯಂತ್ರಿಸುವವಳೂ... ಸ್ಕಂದನ ಮಾತೆಯೂ... ಸದಾಶಿವನ ಸತಿಯೂ.. ಜಗತ್ಸ್ವರೂಪಿಣಿಯೂ, ಸೌಂದರ್ಯವತಿಯೂ... ಕಮಲಾಂಬಿಕೆಯೂ ಆದ ತಾಯಿಯೇ ನನ್ನನ್ನು ರಕ್ಷಿಸು ಎಂದು ದೇವಿಯಲ್ಲಿ ಮೊರೆಯಿಡುತ್ತಾರೆ...


ಪ್ರಥಮಾವರಣ ಕೃತಿ :

ಆನಂದಭೈರವಿ ರಾಗದಲ್ಲಿ ರಚಿಸಲ್ಪಟ್ಟಿದೆ. ಮುದ ನೀಡುವ ಆನಂದಭೈರವಿ ರಾಗ ಈ ಕೃತಿಯನ್ನು ಹಾಡಿದಾಗ ಮನಸ್ಸಿಗೆ ಸಮಾಧಾನ ತಂದುಕೊಡುತ್ತದೆ. ಶಾಂತವಾದ, ಧೃಡ ಮನಸ್ಸನ್ನು ದೇವಿಯ ಪಾದಾರವಿಂದಗಳಲ್ಲಿ ನೆಲೆಗೊಳಿಸರು ವೇದಿಕೆ ಸಿದ್ಧಪಡಿಸುವಂತೆ ಮಾಡುತ್ತದೆ. ಮೊದಲನೆಯ ಆವರಣ ಪೂಜೆ ಮಾಡಲು ಆರಂಭಿಸಿದೊಡನೆಯೇ ಆರಾಧಕನ ಮನಸ್ಸು ಪಕ್ವಗೊಂಡು, ದೇವಿಯ ಆರಾಧನೆಯಲ್ಲಿ ತಲ್ಲೀನವಾಗಿ ಬಿಡುತ್ತದೆ.

ಪಲ್ಲವಿ

ಕಮಲಾಂಬಾ ಸಂರಕ್ಷತು ಮಾಂ.... ಹೃತ್ಕಮಲಾ ನಗರ ನಿವಾಸಿನೀ... ಅಂಬ... ||

ಅನುಪಲ್ಲವಿ

ಸುಮನ ಸಾರಾಧಿತಾಬ್ಜಮುಖೀ... ಸುಂದರಮನ: ಪ್ರಿಯಕರ ಸಖೀ...
ಕಮಲಜಾನಂದ ಬೋಧಸುಖೀ... ಕಾಂತಾಧಾರ ಪಂಜರಶುಕೀ..... ||

ಚರಣ

ತ್ರಿಪುರಾದಿ ಚಕ್ರೇಶ್ವರೀ... ಅಣಿಮಾದಿ ಸಿದ್ಧೀಶ್ವರೀ... ನಿತ್ಯಕಾಮೇಶ್ವರೀ...
ಕ್ಷಿತಿಪುರ ತ್ರೈಲೋಕ್ಯಮೋಹನ ಚಕ್ರವರ್ತಿನೀ... ಪ್ರಕಟಯೋಗಿನೀ...
ಸುರರಿಪು ಮಹಿಷಾಸುರಾದಿ ಮರ್ಧಿನೀ... ನಿಗಮಪುರಾಣಾದಿ ಸಂವೇದಿನೀ.. ||

ಮಧ್ಯಮಕಾಲದ ಸಾಹಿತ್ಯ

ತ್ರಿಪುರೇಶೀ ಗುರುಗುಹ ಜನನೀ... ತ್ರಿಪುರ ಭಂಜನ ರಂಜನೀ..
ಮಧುರಿಪು ಸಹೋದರೀ ತಲೋದರೀ... ತ್ರಿಪುರಸುಂದರೀ ಮಹೇಶ್ವರೀ.... ||

ನನ್ನ ಹೃದಯಕಮಲದಲ್ಲಿ ನೆಲೆಸಿರುವವಳೇ ಮತ್ತು ತಿರುವಾರೂರು ಜಿಲ್ಲೆಯ ಕಮಲಾನಗರವೆಂಬ ಜಾಗದಲ್ಲಿ ನೆಲೆಸಿರುವ ಓ ಕಮಲಾಂಬಿಕೆಯೇ.. ನನ್ನನ್ನು ರಕ್ಷಿಸಲಿ ಎಂದು ದೀಕ್ಷಿತರು ದೇವಿಯನ್ನು ಪ್ರಾರ್ಥಿಸುತ್ತಾ ಈ ಪ್ರಥಮಾವರಣ ಕೃತಿಯನ್ನು ಶುರುಮಾಡುತ್ತಾರೆ...

ಅನುಪಲ್ಲವಿಯಲ್ಲಿ ಮುಂದುವರೆಯುತ್ತಾ ದೀಕ್ಷಿತರು ಕಮಲದಂತೆ ಸುಂದರ ಮುಖಾರವಿಂದವುಳ್ಳವಳೇ... ಸಕಲ ದೇವತೆಗಳಿಂದಲೂ ಪೂಜಿಸಲ್ಪಡುವವಳೇ... ಸುಂದರೇಶನ ಪ್ರಿಯಕರಿಯೇ.. ಬ್ರಹ್ಮಾನಂದಾನುಭವದಿಂದ ಸುಖಿಸುವವಳೇ... ಓಂಕಾರವೆಂಬ ಸುಂದರವಾದ ಪಂಜರದಲ್ಲಿ ವಿಹರಿಸುತ್ತಿರುವ ಗಿಳಿಯೂ ಆದ ಓ ಕಮಲಾಂಬಿಕೆಯೇ ನನ್ನನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತಾರೆ...

ದೇವಿಯನ್ನು ತ್ರಿಪುರಾದಿ ಚಕ್ರೇಶ್ವರೀ ಎಂದೆನ್ನುತ್ತಾರೆ, ಅಂದರೆ ನವಚಕ್ರಗಳಾದ ೧) ತ್ರೈಲೋಕ್ಯ ಮೋಹನ ಚಕ್ರ.. ೨) ಸರ್ವಾಶಾಪರಿಪೂರಕ ಚಕ್ರ... ೩) ಸರ್ವ ಸಂಕ್ಷೋಭಣ ಚಕ್ರ... ೪) ಸರ್ವ ಸೌಭಾಗ್ಯದಾಯಕ ಚಕ್ರ... ೫) ಸರ್ವಾರ್ಥ ಸಾಧಕ ಚಕ್ರ.. ೬) ಸರ್ವ ರಕ್ಷಾಕರ ಚಕ್ರ... ೭) ಸರ್ವ ರೋಗಹರ ಚಕ್ರ... ೮) ಸರ್ವ ಸಿದ್ಧಿ ಪ್ರದಾಯಕ ಚಕ್ರ... ೯) ಸರ್ವಾನಂದಮಯ ಚಕ್ರ... ಇವುಗಳ ಅಂದರೆ ಈ ಚಕ್ರಗಳಿಗೆಲ್ಲಾ ಸಾಮ್ರಾಜ್ಞೀ ಎನ್ನುತ್ತಾರೆ. ಇಷ್ಟೇ ಅಲ್ಲ ಅಣಿಮಾದಿಯಾದ ಅಷ್ಟ ಸಿದ್ಧಿಗಳಿಗೆ ಅಂದರೆ .. ೧) ಅಣಿಮಾ.. ೨) ಮಹಿಮಾ.. ೩) ಈಶಿತ್ವ.. ೪) ವಶಿತ್ವ... ೫) ಪ್ರಾಕಾಮ್ಯ... ೬) ಭಕ್ತಿ... ೭) ಇಚ್ಛಾ... ೮) ಪ್ರಾಪ್ತಿ... ಸಿದ್ಧಿಗಳಿಗೆಲ್ಲಾ ಈ ದೇವಿ ಕಮಲಾಂಬಿಕೆಯೇ ಅಧೀಶ್ವರಿ.... ಒಡೆಯಳು..... ಕಾರಣ ಕರ್ತಳು....
ನಿತ್ಯ ಕಾಮೇಶ್ವರಿ ಎಂಬ ೧೫ ನಿತ್ಯೆಗಳಿಗೂ... ಅಂದರೆ.. ೧) ಕಾಮೇಶ್ವರಿ... ೨) ಭಗಮಾಲಿನಿ... ೩) ನಿತ್ಯಕ್ಲಿನ್ನಾ... ೪) ಭೇರುಂಡಾ... ೫) ವಹ್ನಿ ವಾಹಿನಿ.... ೬)
ಮಹಾ ವಿದ್ಯೇಶ್ವರಿ... ೭) ಶಿವದೂತಿ... ೮) ತ್ವರಿತಾ... ೯) ಕುಳ ಸುಂದರಿ... ೧೦) ನಿತ್ಯಾ... ೧೧) ನೀಲಪತಾಕಾ... ೧೨) ವಿಜಯಾ... ೧೩) ಸರ್ವ ಮಂಗಳ... ೧೪) ಜ್ವಾಲಾಮಾಲಿನಿ... ಮತ್ತು ೧೫) ಚಿತ್ರಾ... ಮೊದಲಾದವುಗಳಿಗೆ ಯಜಮಾನಿಯೂ... ಒಡೆಯಳೂ.... ತ್ರೈಲೋಕ್ಯ ಅಥವಾ ಭೂಪುರವೆಂಬ ಮೂರು ಲೋಕಗಳಿಗೂ... ಮೋಹನರೂಪಳಾದ, ಚಕ್ರವರ್ತಿನಿಯೂ... ಸಾಮ್ರಾಜ್ಞಿಯೂ, ಪ್ರಕಟಯೋಗಿನೀ ಎಂಬ ಹೆಸರು ಗಳಿಸಿದವಳೂ... ಸುರರ ಶತೃಗಳಾದ ಮಹಿಷಾಸುರ ಮುಂತಾದ ಅಸುರರನ್ನು ಸಂಹರಿಸಿದವಳೂ.... ವೇದ ಪುರಾಣಾದಿ ಸಕಲ ಶಾಸ್ತ್ರಗಳನ್ನು ಬಲ್ಲವಳೂ.... ಪರಶಿವನ ಮಡದಿಯೂ... ಗುರುಗುಹ / ಷಣ್ಮುಖನ ಮಾತೆಯೂ... ತ್ರಿಪುರಾಸುರನನ್ನು ನಿಗ್ರಹಿಸಿ ತುಷ್ಟಿ ಪಡೆದವಳೂ.... ಮಹಾ ವಿಷ್ಣುವಿನ ಪ್ರಿಯ ಸಹೋದರಿಯೂ ಆದ ಕಮಲಾಂಬಿಕೆಯು ನನ್ನನ್ನು ಪಾಲಿಸಲಿ ಎಂದು ಪ್ರಾರ್ಥಿಸುತ್ತಾರೆ....


ಶ್ರೀ ವಾಮಕೇಶ್ವರ ತಂತ್ರದಲ್ಲಿ ಬರುವ ಶ್ರೀ ಉಮಾ ಮಹೇಶ್ವರರ ಸಂವಾದ, ದೇವಿ ಖಡ್ಗಮಾಲಾ ಸ್ತೋತ್ರದಲ್ಲಿ, ದೇವಿಯ ಒಡೆತನದ ನವ ಚಕ್ರಗಳು, ನವ ಸಿದ್ಧಿಗಳು, ೧೫ ನಿತ್ಯೆಗಳೂ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಇಷ್ಟೇ ಅಲ್ಲದೆ ದೇವಿಯನ್ನು ಅತಿ ರಹಸ್ಯಯೋಗಿನಿ, ತ್ರಿಪುರೇ, ತ್ರಿಪುರೇಶಿ, ತ್ರಿಪುರ ಸುಂದರಿ, ತ್ರಿಪುರವಾಸಿನಿ, ತ್ರಿಪುರಾಶ್ರೀ:, ತ್ರಿಪುರಮಾಲಿನಿ, ತ್ರಿಪುರಾಸಿದ್ಧೇ, ತ್ರಿಪುರಾಂಬಾ, ಮಹಾತ್ರಿಪುರಸುಂದರಿ, ಮಹಾಮಹೇಶ್ವರಿ, ಮಹಾಮಹಾರಾಜ್ಞೀ, ಮಹಾಮಹಾ ಶಕ್ತೇ, ಮಹಾಮಹಾ ಸ್ಕಂದೇ, ಮಹಾಮಹಾಶಯೇ, ಮಹಾಮಹಾ ಶ್ರೀ ಚಕ್ರನಗರ ಸಾಮ್ರಾಜ್ಞೀ.... ನಮಸ್ತೇ... ನಮಸ್ತೇ... ಎಂದೆಲ್ಲಾ ವರ್ಣಿಸುತ್ತಾರೆ. ಈ ದೇವಿ ಖಡ್ಗಮಾಲಾ ಸ್ತೋತ್ರವನ್ನು ದಿನವೂ ಪಠಿಸುವುದರಿಂದ ನಮ್ಮ ಎಲ್ಲಾ ಕಷ್ಟಗಳನ್ನೂ ದೇವಿಯ ಖಡ್ಗ ಕತ್ತರಿಸಿ ಎಸೆಯುತ್ತದೆಂಬ ನಂಬಿಕೆ ಕೂಡ ಇದೆ....