Friday, August 10, 2012

ಶ್ರೀ ಕೃಷ್ಣಪ್ರಜ್ಞೆ..
"ಕೃಷ್ಣ" ಎಂದರೇ "ಕರ್ಷಿಸುವವ - ಸೆಳೆಯುವವ", ಭಗವಂತ.  ಕೃಷ್ಣ ಒಬ್ಬ ವ್ಯಕ್ತಿಯೇ, ಭಾವವೇ, ಶಕ್ತಿಯೇ, ನಮ್ಮಂತರಂಗದ ಆಳವೇ ಎಂದುಕೊಂಡಾಗ ನಮಗೆ ಕೃಷ್ಣ ಎಂದರೆ ಭಗವಂತನಾದರೂ ಅವನು ಅರಿತವರಿಗೆ - ಅರಿತಂತೆ, ದೊರೆತವರಿಗೆ - ದೊರೆತಂತೆ, ತಿಳಿದವರಿಗೆ - ತಿಳಿದಂತೆ,  ಎಲ್ಲರೊಳಗೂ ನೆಲೆಯಿದ್ದು, ಯಾರ ಅಂಕೆಗೂ ಸಿಲುಕದವ, ಸಿಕ್ಕಂತೆ ಮಾಡಿ ನುಣುಚಿಕೊಳ್ಳುವವ ಎಂಬುದು ಅರ್ಥವಾಗುತ್ತದೆ.   ಅವರವರ ಭಾವಕ್ಕೆ ತಕ್ಕಂತೆ, ಅವರವರ ಭಕುತಿಗೆ ತಕ್ಕಂತೆ ದೊರಕುವ ಕೃಷ್ಣ ನಮ್ಮ ಬಾಹ್ಯ ಬುದ್ಧಿ ಮತ್ತು ಮನಸ್ಸಿಗೆ ಒಂದು ಪ್ರಜ್ಞೆ ಎನ್ನಿಸುತ್ತಾನೆ.   ಭಾಗವತ ಕಥೆಗಳನ್ನು ಓದಿದಾಗ ನಮಗೆ ಕೃಷ್ಣನ ಜೀವನದ ಪೂರ್ತಿ ವಿವರಗಳು ಸಿಕ್ಕುತ್ತವೆ.  ಆದರೆ ಅಲ್ಲಿ ವಿವರಿಸಿರುವಷ್ಟೇ ವ್ಯಾಪ್ತಿಯೇ ಕೃಷ್ಣನದು ? ಅಲ್ಲ ಎನ್ನುತ್ತದೆ ಅಂತರಂಗ.  ಏಕೆಂದರೆ ಆತ್ಮದ ಅರಿವಿಗೆ ಬರುವ, ಆತ್ಮದಲ್ಲಿ ಲೀನವಾಗಿಸಿಕೊಳ್ಳ ಬಹುದಾದ ಒಂದು ಭಾವ ಕೃಷ್ಣ.  ಸಾಮಾಜಿಕವಾಗಿ ವಿಸ್ತಾರವಾದ ವ್ಯಾಪ್ತಿ ಹೊಂದಿರುವ ಕೃಷ್ಣ, ಸಾಮಾಜಿಕವಾಗಿಯೇ ವಿಶ್ಲೇಷಣೆ ಮಾಡಿದಾಗ "ಪ್ರಜ್ಞೆ" ಎನ್ನಿಸುತ್ತಾನೆ.  ಹಾಗಾದರೆ ಕೃಷ್ಣ ಎಲ್ಲರಿಗೂ ಒಂದೇ ರೀತಿಯಾಗಿಯೇ ಕಾಣುತ್ತಾನೆಯೇ ಎಂಬ ಪ್ರಶ್ನೆ ಬಂದಾಗ ಮಾತ್ರ, ಬಾಹ್ಯ ಮನಸ್ಸಿನ ಅರಿವಿಗೆ ಬರುವ ಕೃಷ್ಣ ಒಬ್ಬ ಭಗವಂತನಾಗಿ, ಪ್ರಜ್ಞೆಯಾಗಿ ಕಾಣಿಸುತ್ತಾನೆ.  ಆದರೆ ಅವನು ನಮ್ಮೆಲ್ಲರ ಒಳಗೂ ವ್ಯಾಪಿಸಿದ್ದಾನೆಂಬ ಭಾವ ಬಂದಾಗ ಮಾತ್ರ ಅಂತರಂಗದಲ್ಲಿ ಸುಳಿಯುವ ಕೃಷ್ಣಭಾವ ಬೇರೆಯದೇ ಅರ್ಥ ಕೊಡುತ್ತದೆ.  ನನಗೆ ಕೃಷ್ಣ ನನ್ನೆಲ್ಲಾ ಭಾವನೆಗಳಿಗೂ ಸ್ಪಂದಿಸುವ, ಒಂದು ದಿವ್ಯ ಚೇತನ.  ನನ್ನೊಳಗಿನ ಪ್ರಶ್ನೆಗಳಿಗೆ, ಹತಾಶೆಗಳಿಗೆ, ಪ್ರಯತ್ನಗಳಿಗೆ ಸದಾ ಜೊತೆಗೂಡುವ ಒಂದು ಅವಿನಾಭಾವದ ಸಂಬಂಧಿ.  ನನ್ನ ಚಿಕ್ಕ ಚಿಕ್ಕ ಸಂತಸಗಳಿಗೂ ಹಿಗ್ಗಿ ನಲಿಯುವ, ಪ್ರೋತ್ಸಾಹಿಸುವ, ಬದುಕಬೇಕೆಂಬ ತುಡಿತವನ್ನು ಸದಾ ಜಾಗೃತಗೊಳಿಸುವ ಅದಮ್ಯ ಚೇತನ.  ನನ್ನೊಳಗೆ ನಾನಾಗಿ ಬೆರೆತುಹೋಗಿರುವ ಒಂದು ಸುಂದರವಾದ ಶೃತಿ - ಸ್ಮೃತಿ. 

ಕೃಷ್ಣನನ್ನು ಒಂದು ಭಾವವೆಂದುಕೊಂಡಾಗ ನಮಗೆ ತುಂಬಾ ಹತ್ತಿರವಾಗುತ್ತಾನೆ.  ನಮ್ಮ ಸುತ್ತುಮುತ್ತಲಿನ ಪ್ರತಿ ವಸ್ತುವಿನಲ್ಲೂ ಕಾಣತೊಡಗುತ್ತಾನೆ.   ಕೃಷ್ಣನನ್ನು ನಾವು ಭಗವಂತನೆಂದು ಸೌಂದರ್ಯ ವರ್ಣನೆ ಮಾಡುವಾಗ "ನೀಲಮೇಘಶ್ಯಾಮ", "ನೀಲಿಕಣ್ಣಿನವ" ಎಂದು ಹೇಳುತ್ತೇವೆ.  ಕೃಷ್ಣ ಒಂದು ಪ್ರಜ್ಞೆಯಾದಾಗ ನಮಗೆ ಕಣ್ಣಿಗೆ ಕಾಣಿಸುವ ನೀಲಿ ಬಣ್ಣದಲ್ಲೆಲ್ಲಾ ಅವನು ಕಾಣಿಸತೊಡಗುತ್ತಾನೆ, ನಮ್ಮೊಡನೆ ಬೆರೆಯುತ್ತಾನೆ.  ನೀಲಿ ಬಣ್ಣ ನಾವು ಧರಿಸಿರುವ ಬಟ್ಟೆಯಾದರೆ, ಕೃಷ್ಣ ನಮ್ಮ ಇಂದ್ರಿಯಗಳಲ್ಲೊಂದಾದ ಚರ್ಮಕ್ಕೆ ಹೊದಿಕೆಯಾಗಿರುತ್ತಾನೆ.  ಭೌತಿಕ ದೇಹದ ಸಂಪರ್ಕದಲ್ಲಿ ಸದಾ ಪ್ರಜ್ಞೆ ಮೂಡಿಸುತ್ತಿರುತ್ತಾನೆ.  ನಮ್ಮನ್ನೇ ನಾವು ನೋಡಿಕೊಳ್ಳುವಾಗ ಮುಖ್ಯ ಇಂದ್ರಿಯವಾದ ಕಣ್ಣಿಗೆ ಕೃಷ್ಣನ ಪ್ರಜ್ಞೆ ಗೋಚರಿಸಿ, ಮನಸ್ಸೆಂಬ ಇಂದ್ರಿಯಕ್ಕೆ ಸದಾ ನೆನಪಿನ ಅಲೆ ಮೂಡಿಸುತ್ತಿರುತ್ತಾನೆ.  ತಿಳಿನೀಲಿ ಬಣ್ಣದ ಕಣ್ಣುಗಳುಳ್ಳ ವ್ಯಕ್ತಿಯನ್ನು ಕಂಡಾಗ,  ಕೃಷ್ಣ ಪ್ರಜ್ಞೆ ಮರುಕಳಿಸಿ, ಮನಸ್ಸಿಗೆ ಹಿತವಾದ ಭಾವ ಹಾಗೂ ಪರಿಚಯದ ಅಲೆ ಮೂಡಿಸುತ್ತದೆ.  ತಲೆಯೆತ್ತಿ ನಿರ್ಮಲವಾದ ನೀಲಿ ಆಕಾಶ ಕಂಡಾಗ ಮನದಲ್ಲಿ ಏಳುವ ಕೃಷ್ಣ ಪ್ರಜ್ಞೆ ತುಂಬಾ ಆಪ್ಯಾಯಮಾನವಾಗುತ್ತದೆ.  ಎಲ್ಲೆಲ್ಲಿ ನೋಡಿದರೂ, ನೋಡಿದಷ್ಟೂ ಕಾಣುವ ಕೊನೆ ಮೊದಲಿಲ್ಲದ ಆಕಾಶದ ಬಣ್ಣ ಕೃಷ್ಣ ಪ್ರಜ್ಞೆಯನ್ನು ಮನಸ್ಸಿನಲ್ಲಿ ಉತ್ಪತ್ತಿಮಾಡಿದಾಗ, ಭಗವಂತನಾದ ಕೃಷ್ಣ ನಮ್ಮನ್ನು ಕಾಪಾಡುತ್ತಾ, ನಾವು ಹೋದಲ್ಲೆಲ್ಲಾ ತನ್ನಿರವನ್ನು ತಿಳಿಸುತ್ತಿದ್ದಾನೆ, ನಂಬಿಕೆಯನ್ನು, ಆಪ್ತತೆಯನ್ನು ವಿಶಾಲವಾಗಿ ಹರಡಿದ್ದಾನೆ ಎನ್ನಿಸುತ್ತದೆ.  ನೀಲಿ ಬಣ್ಣದ ಸಮುದ್ರದ ಮುಂದೆ ನಿಂತಾಗ ತಿಳಿಯಾದ ನೀರಿನಲ್ಲೂ, ಜುಳು ಜುಳು ಸದ್ದಿನಲ್ಲೂ, ಕೃಷ್ಣ ಪ್ರಜ್ಞೆ ಜಾಗೃತವಾಗುತ್ತದೆ.  ಎಷ್ಟು ನೋಡಿದರೂ ಮುಗಿಯದ ಸಮುದ್ರದ ವಿಸ್ತಾರ ನಮ್ಮಲ್ಲಿ ಮೂಡಿದ್ದ ಕೃಷ್ಣ ಪ್ರಜ್ಞೆಯನ್ನು ವಿಸ್ತರಿಸುತ್ತದೆ.  ಸಮುದ್ರದ ಆಳದ ಅರಿವಾದಾಗ, ಕೃಷ್ಣನ ಆಳದ ಒಂದು ಪುಟ್ಟ ತಿಳಿವು, ವ್ಯಾಪ್ತತೆಗೆ ಎಣೆಯೇ ಇಲ್ಲ, ಕೊನೆಯೇ ಇಲ್ಲ ಎಂದಾಗ, "ಕೃಷ್ಣ" ಪ್ರಜ್ಞೆ ಎಲ್ಲಾ ಅಳತೆಗೂ ಮೀರಿ ವಿಜೃಂಭಿಸುತ್ತದೆ.

ಕೃಷ್ಣನನ್ನು ಜೀವನದ ಪ್ರತಿ ಹಂತದಲ್ಲೂ ಪ್ರತಿ ನಿಮಿಷದಲ್ಲೂ ನಾವು ನಮ್ಮ ಜೊತೆಗೇ ಕಾಣುತ್ತಿರುತ್ತೇವೆ.  ಸುಂದರ ಪ್ರಕೃತಿಯನ್ನು ನೋಡಿದಾಗಲಾಗಲೀ, ಶೃಂಗಾರದ ಭಾವ ನಮಗರಿವಿಲ್ಲದಂತ ಮನವನ್ನು ಕೂಡಿದಾಗಲಾಗಲೀ, ಹಕ್ಕಿಗಳ ಚಿಲಿಪಿಲಿ ಇಂಚರವನ್ನು ಕೇಳಿದಾಗಲಾಗಲೀ ನಮಗೆ ಕೃಷ್ಣನ ನೆನಪೇ ಆಗುತ್ತದೆ.  ಕೃಷ್ಣನನ್ನು ಭಗವಂತನೆಂದುಕೊಂಡರೂ ಕೂಡ, ಅದನ್ನು ಮೀರಿದ ಒಂದು ಸ್ನೇಹ, ನಮ್ಮದೇ ಮುಂದುವರೆದ ಭಾವ ಎಂಬ ಅರ್ಥವೇ ಹೆಚ್ಚು ಮುದಕೊಡುತ್ತದೆ. ಕೃಷ್ಣನ ನಿಕಟವರ್ತಿಗಳಾದ ಗೋವು, ಕೊಳಲು, ತುಳಸಿ, ಬೆಣ್ಣೆ ಹೀಗೆ ಪ್ರತಿಯೊಂದೂ ನಮಗೆ ಕೃಷ್ಣ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತಲೇ ಇರುತ್ತವೆ.  ಕೃಷ್ಣ ನಮ್ಮೊಳಗೇ, ನಮ್ಮೊಂದಿಗೇ ಸದಾ ಇದ್ದಾನೆಂಬ ಅಲೌಕಿಕ ಸುಖ ತನು ಮನಗಳನ್ನು ಪುಳಕಿತಗೊಳಿಸುತ್ತಲೇ ಇರುತ್ತದೆ.

ಕೃಷ್ಣನ ಬಾಲ್ಯಲೀಲೆಗಳು, ಗೋಪಿಕಾ ಸ್ತ್ರೀಯರ ಒಡನಾಟ, ರಾಧೆಯ ಒಲವು, ಗೀತೆಯ ಬೋಧನೆ ಎಲ್ಲವೂ ಪ್ರತೀ ಜೀವಿಯ ಜೀವಿತದ ಜೊತೆಯಲ್ಲಿ ಅತೀ ಗಟ್ಟಿಯಾಗಿ ಬೆಸೆದುಕೊಂಡಿರುವ ವಿಚಾರಗಳು.  ಕೃಷ್ಣನನ್ನು ಭಗವಂತನೆಂದು ನಾವೆಷ್ಟು ಆರಾಧಿಸಿದರೂ ಕೂಡ ಎಲ್ಲವನ್ನೂ ಮೀರುವ ಕೃಷ್ಣನ ವ್ಯಕ್ತಿತ್ವ, ಕೃಷ್ಣನನ್ನು "ಪ್ರಜ್ಞೆ" ಎನ್ನುತ ಸತ್ಯವಾಗಿ ನಮ್ಮೆದುರಿಗೆ ತೆರೆದುಕೊಳ್ಳುತ್ತದೆ.  ಈ ಪ್ರಜ್ಞೆಯ ಅರಿವನ್ನು ಅರಿಯುವುದೇ ನಿಜವಾದ ಜನ್ಮಾಷ್ಟಮಿಯ ಆಚರಣೆಯಾಗುತ್ತದೆ.  ಕೃಷ್ಣನಿಗೆ ಹುಟ್ಟು ಸಾವುಗಳಿಲ್ಲ, ಅವನು ನಿರಂತರವಾಗಿ ನಮ್ಮೊಳಗೇ ಹರಿಯುವ ಚೈತನ್ಯ. ಇದೇ "ಕೃಷ್ಣಪ್ರಜ್ಞೆ". 

ಸರ್ವರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು....

 ಚಿತ್ರಕೃಪೆ : ಅಂತರ್ಜಾಲ