Wednesday, September 19, 2012

ಮೂಲಾಧಾರ ಚಕ್ರದಲ್ಲಿ ಗಣಪನಮ್ಮ ಭಾರತೀಯ ಪರಂಪರೆಯಲ್ಲಿ ಎಲ್ಲಕ್ಕಿಂತಲೂ, ಎಲ್ಲರಿಗಿಂತಲೂ ಮೊದಲ ಪೂಜೆ ಸ್ವೀಕರಿಸುವವನು ವಿಘ್ನ ನಿವಾರಕನಾದ ವಿಘ್ನೇಶ್ವರನು.   ಗಣಪತಿ, ಬೆನಕ, ಮೋದಕಪ್ರಿಯ, ಲಂಬೋಧರ ಎಂಬ ಅನೇಕ ಹೆಸರುಗಳಿಂದ ಕರೆಯಲ್ಪಡುವವನು.  ಗಣೇಶ ನಮ್ಮ ಭಾರತದಲ್ಲಿ ಮಾತ್ರವೇ ಅಲ್ಲದೇ ಇಡೀ ಪ್ರಪಂಚದಲ್ಲೇ ಪ್ರಸಿದ್ಧನಾದವನು.  ಪಾರ್ವತಿ ಪುತ್ರನಾಗಿ ಉದ್ಭವಿಸಿದವನು.  ತಾಯಿ ಪಾರ್ವತಿ ಬಾಗಿಲಿನಲ್ಲಿ ಕಾವಲಿಗೆ ನಿಲ್ಲಿಸಿದ್ದಳು ಎಂದು ಪುರಾಣ ಕಥೆಗಳಲ್ಲಿ ತಿಳಿಸಲ್ಪಟ್ಟಿದೆ.  ಅದರ ಅರ್ಥ ಗಣೇಶ ನಮ್ಮನ್ನು ಕಾಪಾಡುವವನು, ರಕ್ಷಿಸುವವನು, ನಮ್ಮೆಲ್ಲಾ ಕಷ್ಟಗಳನ್ನೂ ನಿವಾರಿಸುವವನು ಎಂದಾಗುತ್ತದೆ.  ಗಣಪತಿ ಅತೀ ಬುದ್ಧಿಶಾಲಿ ಮತ್ತು ಸೂಕ್ಷ್ಮ ತರಂಗಗಳನ್ನು ಸೃಷ್ಟಿಸುವವನು.  ಆನೆಗಳು ವಾತಾವರಣದಲ್ಲಿರುವ ಅತೀ ಸೂಕ್ಷ್ಮವಾದ ಶಬ್ದ  ತರಂಗಗಳನ್ನು ಗ್ರಹಿಸಬಲ್ಲದು.  ಮುಂದಾಗುವ ಅಪಾಯದ ಸೂಚನೆಯನ್ನು ಬೇರೆಲ್ಲಾ ಪ್ರಾಣಿಗಳಿಗಿಂತಲೂ ಮೊದಲೇ ಗ್ರಹಿಸುವ ಶಕ್ತಿಯುಳ್ಳದ್ದು.  ಆನೆಯ ಮೊಗದವನಾದ ಗಣೇಶ ಕೂಡ ಹೀಗೆ ಮುಂಬರುವ ನಮ್ಮೆಲ್ಲಾ ಅಪಾಯಗಳನ್ನೂ ಗ್ರಹಿಸಿ ನಮ್ಮನ್ನು ಪೊರೆಯುವನೆಂಬ ನಂಬಿಕೆ ನಮ್ಮಲ್ಲಿ ತುಂಬಾ ಆಳವಾಗಿ ನೆಲೆಸಿದೆ. 


ಗಣಪತಿಯನ್ನು ವಿಘ್ನನಿವಾರಕನೆಂದು ಪ್ರಥಮವಾಗಿ ಪೂಜಿಸುತ್ತೇವೆ.  ನಾವು ಮಾಡುವ ಯಾವುದೇ ಕಾರ್ಯದಲ್ಲಾಗಲೀ ವಿಘ್ನಗಳು ಬಾರದಂತೆ ತಡೆಯುತ್ತಾನೆಂಬ ನಂಬಿಕೆ.  ಆದ್ದರಿಂದಲೇ ಅವನು "ಪ್ರಥಮ ಪೂಜಿತ ಪ್ರಮಥಾದಿ ವಂದಿಪ".  ಬೇರೆಲ್ಲಾ ದೇವತೆಗಳಿಗಿಂತಲೂ ವಿಭಿನ್ನಾಕೃತಿ ಹೊಂದಿರುವ ಗಣಪ ನೋಡಿದ ಕೂಡಲೇ ಆತ್ಮೀಯತೆಯನ್ನು ಉಂಟುಮಾಡುತ್ತಾನೆ.  ಸುಲಭವಾಗಿ ಒಲಿಯಬಲ್ಲವ, ನಮ್ಮ ಕಷ್ಟಗಳನ್ನು ಅರ್ಥೈಸಿಕೊಳ್ಳಬಲ್ಲವ ಎಂಬ ಭಾವ ಪ್ರಕಟಿಸುತ್ತಾನೆ.

ಗಣಪತಿಯ ಆರಾಧನೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.  ಪ್ರಾಚೀನ ಕಾಲದಿಂದಲೂ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ ನಾವು ಗಣಪತಿಯ ವರ್ಣನೆ, ಆರಾಧನೆಯನ್ನು ಕಾಣಬಹುದು.  ನಮ್ಮ ಜನಪದ ಸಾಹಿತ್ಯದಲ್ಲೇ ಅತ್ಯಂತ ಮಧುರವಾದ  "ಶರಣು ಶರಣುವಯ್ಯ ಗಣನಾಯಕ | ನಮ್ಮ ಕರುಣದಿಂದಲಿ ಕಾಯೊ ಗಣನಾಯಕ | ಎಂಬ ಪದದಲ್ಲಿ ಗಣಪತಿಗೆ ಪ್ರಿಯವೆನ್ನಲಾದ ಭಕ್ಷ್ಯಗಳ ವಿವರಣೆಯೆಲ್ಲಾ ಕೊಟ್ಟಾದ ನಂತರ "ನಿಮ್ಮಲ ಮನದಲ್ಲಿ ಗಣನಾಯಕ | ನಿಮ್ಮ ಧ್ಯಾನವ ಮಾಡುವೆ ಗಣನಾಯಕ|" ಎನ್ನುತ್ತಾ ನಿಮ್ಮಲ ಮನದವನಾದ ದೇವನು ನಮಗೂ ನಿರ್ಮಲ ಚಿತ್ತವನ್ನು ಕರುಣಿಸುವವನು ಎಂದಿದ್ದಾರೆ.   ದಾಸ ಸಾಹಿತ್ಯದಲ್ಲಿ ಕೂಡ ನೂರಾರು ಕೀರ್ತನೆಗಳನ್ನು ವಿವಿಧ ದಾಸರುಗಳು ರಚಿಸಿರುವುದನ್ನು ನಾವು ಕಾಣುತ್ತೇವೆ.

ಶ್ರೀ ಶಂಕರಾಚಾರ್ಯರು ತಮ್ಮ "ಗಣೇಶ ಪಂಚಕ - ಮುದಾಕರಾತ್ತ ಮೋದಕಂ ಸದಾ ವಿಮುಕ್ತಿ ಸಾಧಕಂ"ದಲ್ಲಿ ಸಾಧಕರಿಗೆ ಮೋಕ್ಷವನ್ನು ಕೊಡುವವನು ಮತ್ತು  "ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ" - ಆಧ್ಯಾತ್ಮ ಸಾಧನೆಯಲ್ಲಿ ನಿರತರಾಗಿರುವಂತಹ ಸಾಧಕರು ಮತ್ತು ಯೋಗಿಗಳ ಹೃದಯದಲ್ಲಿ ನಿರಂತರವಾಗಿ ನೆಲೆಸಿರುವವನಾದ್ದರಿಂದ ಗಣೇಶನನ್ನು ಸದಾ ಧ್ಯಾನಿಸುತ್ತಿರಬೇಕು ಎಂದಿದ್ದಾರೆ.  ಇದಲ್ಲದೆ ಶ್ರೀ ಶಂಕರರ ಏಕಶ್ಲೋಕೀ ಗಣಪತಿ ಸ್ತೋತ್ರಮ್, ಶ್ರೀ ಗಣೇಶ ಭುಜಂಗ ಸ್ತೋತ್ರ ಮತ್ತು ಶ್ರೀ ಗಣೇಶ ಸ್ತೋತ್ರ ಮಾಲ ಎಂಬ ರಚನೆಗಳೂ ಪ್ರಚಲಿತದಲ್ಲಿವೆ.

ನಮ್ಮ ದೇಹದಲ್ಲಿರುವ ಏಳು ಚಕ್ರಗಳಲ್ಲಿ ಮೊದಲನೆಯದೂ, ಹಾಗೂ ಭೂಮಿ ತತ್ವಕ್ಕೆ ಹೊಂದಿಕೊಂಡಿರುವುದೂ  ಮೂಲಾಧಾರ ಚಕ್ರ.  ಏಳು ಚಕ್ರಗಳಿಗೂ ತಮ್ಮದೇ ಆದ ಬೇರೆ ಬೇರೆ ಬಣ್ಣಗಳಿವೆ ಮತ್ತು ಪ್ರತ್ಯೇಕ ಬೀಜಾಕ್ಷರಗಳಿವೆ.  ಮೂಲಾಧಾರ ಚಕ್ರವೇ ವಿಘ್ನೇಶ್ವರನ ನಿವಾಸ ಸ್ಥಾನ ಮತ್ತು ಗಣೇಶ ಆದಿಶಕ್ತಿಯ ಮಗನಾದ್ದರಿಂದ ಅವನು ಶಕ್ತಿದೇವಿಯ ಜೊತೆಗೆ ನಮ್ಮ ದೇಹದಲ್ಲಿನ ಎಲ್ಲಾ ಚಕ್ರಗಳನ್ನೂ ನೆಲೆಸಿದ್ದಾನೆಂಬ ನಂಬಿಕೆಯಿದೆ.   ಮೂಲಧಾರ ಚಕ್ರದ ಬೀಜಾಕ್ಷರ "ಲಂ" - ಲಂಬೋದರನ ಹೆಸರಿನ ಮೊದಲ ಅಕ್ಷರವೇ ಲಂ.  ಈ ಚಕ್ರದ ಬಣ್ಣ ಕೆಂಪು ಮತ್ತು ಅಧಿಪತಿ ಬುಧ.  ಬುಧ ಬುದ್ಧಿಯ ಸಂಕೇತನಾದ್ದರಿಂದ ಗಣಪತಿ ಕೂಡ ಜ್ಞಾನವನ್ನು ಕೊಡುವವನಾಗುತ್ತಾನೆ.  ಗಣೇಶನ ಪೂಜೆಯಲ್ಲಿ ಕೆಂಪು ಹೂವಿಗೆ ಪ್ರಾಧಾನ್ಯತೆ ಇದೆ. ಮೂಲಾಧಾರ ಚಕ್ರ ನಮ್ಮ ಭೌತಿಕ ಬದುಕಿಗೆ ಬಹಳ ಬಲವಾದ ಅಡಿಪಾಯ ಕೊಡುವುದು.  ಭೂಮಿತತ್ವದ ಈ ಮೂಲಾಧಾರ ಚಕ್ರವನ್ನು ವಿಕಸನಗೊಳಿಸಲು ಸತತವಾಗಿ "ಲಂ" ಬೀಜಾಕ್ಷರದ ಜಪಾನುಷ್ಠಾನ ಮಾಡಬೇಕು.  ಸದಾ ಲಂಬೋದರನನ್ನು ಧ್ಯಾನಿಸುವುದರ ಮೂಲಕ ನಾವು ಚಕ್ರ ಉದ್ದೀಪನಗೊಳಿಸಿಕೊಳ್ಳಬಹುದಾಗಿದೆ.   ಪೃಥ್ವಿ ತತ್ವದಲ್ಲಿ ನೆಲೆಸಿರುವುದರಿಂದಲೇ ಗಣಪತಿ ನಮಗೆ ಅತ್ಯಂತ ಆತ್ಮೀಯನಾಗುತ್ತಾನೆ.  ಗಣಪತಿಗೆ ಅಗ್ರ ಪೂಜೆ ಸಲ್ಲಿಸುವ ಕಾರಣವೂ ಇದೇ ಆಗಿದೆ ಮತ್ತು ಗಣಪತಿಯ ಆರಾಧನೆಯಿಂದ ನಮಗೆ ಜೀವನದಲ್ಲಿ ಧೃಡತೆ ಸಿಕ್ಕುತ್ತದೆ.  ನಮ್ಮ ಬದುಕಿನ ನೆಲೆ ಗಟ್ಟಿಯಾಗಿದ್ದಾಗ, ನಾವು ಜೀವನದಲ್ಲಿ ಮುಂದೆ ಉನ್ನತವಾದ ಧ್ಯೇಯಗಳನ್ನು ಪಾಲಿಸಲು, ಗುರಿ ತಲುಪಲು ಅನುಕೂಲವಾಗುತ್ತದೆ.  "ಗಂ" ಎಂಬ ಬೀಜ ಮಂತ್ರ ನಮ್ಮ ಅಂತರಂಗದ ಮೌನವನ್ನು ಸೂಚಿಸುತ್ತದೆ.  ಹಾಗೆಂದರೆ ನಮ್ಮೊಳಗೇ ಇರುವ ಆಂತರ್ಯದ ಮೌನವನ್ನು ನಾವು ಉದ್ದೀಪನಗೊಳಿಸಿಕೊಳ್ಳಬೇಕೆಂಬ ಮಾತನ್ನು "ಗಂ ಗಣಪತಿಯೇ ನಮಃ" ಎಂಬ ಮಂತ್ರ ಸ್ಪಷ್ಟ ಪಡಿಸುತ್ತದೆ.  ಮೂಲಾಧಾರ ಚಕ್ರದಲ್ಲಿ ಕುಳಿತಿರುವ ಗಣಪತಿ ತಾನೇ ಒಂದು ಮಗುವಾಗಿ ನಮಗೆ ಮಗುವಿನ ಮುಗ್ಧತೆಯನ್ನು ದಯಪಾಲಿಸುತ್ತಾನೆ.  ನಮ್ಮ ಸುತ್ತಲೂ ನಾವು ಕಟ್ಟಿಕೊಂಡಿರುವ ಭೌತಿಕ ಬಂಧನಗಳನ್ನು ಬಿಡಿಸಲು ಸಹಾಯ ಮಾಡುತ್ತಾನೆ.

ನಾವು ಗಣಪತಿಯ ಮುಂದೆ ತೆಂಗಿನಕಾಯಿಯನ್ನು ಅಪ್ಪಳಿಸುತ್ತೇವೆ, ಇದು ನಮ್ಮ "ಅಹಂ"ನ್ನು ಚೂರು ಚೂರಾಗಿ ನೆಲಕ್ಕೆ ಅಪ್ಪಳಿಸಿ, ಗಣೇಶನಿಗೆ ಸಂಪೂರ್ಣ ಶರಣಾಗತರಾಗುವ ಸೂಚನೆ.  ಯಾವಾಗ ನಾವು ನಮ್ಮ "ಅಹಂಸಂಪೂರ್ಣವಾಗಿ ತೊರೆಯುತ್ತೇವೆಯೋ ಆಗ ನಾವು ಮುಂದಿನ ಹಂತದ ಸಾಧನೆಗೆ ಅರ್ಹತೆ ಪಡೆಯುತ್ತೇವೆ.   ಎಲ್ಲಾ ಭಾವಗಳನ್ನೂ ಬಿಟ್ಟು, ನಿರ್ಮೋಹ ಭಾವದಿಂದ ನಾವು ಶರಣಾದಾಗಲೇ ನಮ್ಮ ಆಧ್ಯಾತ್ಮದ ಮುಗ್ಧ ಚೇತನದ ಅರಿವು ನಮಗಾಗುವುದು.  ಪ್ರತೀ ವರ್ಷವೂ ಗಣಪತಿಯ ಮೂರ್ತಿಯನ್ನು ತಂದು ಪೂಜಿಸಿ, ನೀರಿನಲ್ಲಿ ವಿಸರ್ಜಿಸಿ ಬಿಡುವುದರ ಅರ್ಥ, ನಮ್ಮ ಬದುಕೂ ಕೂಡ ಹೀಗೆ ಪಂಚಭೂತಗಳಿಂದ ಮಾಡಲ್ಪಟ್ಟಿದೆಯೆಂದೂ ಮತ್ತು ಒಂದು ದಿನ ಮತ್ತೆ ಅಲ್ಲಿಯೇ ಲೀನವಾಗಬೇಕೆಂದೂ ಅಶಾಶ್ವತವೆಂದೂ ಸ್ಪಷ್ಟಪಡಿಸುತ್ತದೆ.  ತನ್ನನ್ನೇ ತಾನು ನೀರಿನಲ್ಲಿ ಕರಗಿಸಿಕೊಂಡು ನಮಗೆ ತಾವರೆ ಎಲೆಯ ಮೇಲಿನ ನೀರಿನ ಹನಿಯಂತೆ ಬದುಕಬೇಕೆಂಬುದನ್ನು ಉಪದೇಶಿಸುತ್ತಿದ್ದಾನೆ ವಿನಾಯಕ.

ಕರ್ನಾಟಕ ಸಂಗೀತದಲ್ಲಿ ಕೂಡ ಶ್ರೀ ಗಣೇಶನ ಆರಾಧನೆ ವಾಗ್ಗೇಯಕಾರರುಗಳಿಂದ ಮಾಡಲ್ಪಟ್ಟಿದೆ.  ಸಂಗೀತ ಪಿತಾಮಹತ್ರಯರಲ್ಲಿ ಒಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ಹಂಸಧ್ವನಿ ರಾಗದ "ವಾತಾಪಿ ಗಣಪತಿಂ ಭಜೇ" ಎಂಬ ಕೃತಿಯಲ್ಲಿ
"ಭೂತಾದಿ ಸಂಸೇವಿತ ಚರಣಂ |  ಭೂತ ಭೌತಿಕ ಪ್ರಪಂಚ ಭರಣಂ ||
ವೀತ ರಾಗಿಣಂ ವಿನುತ ಯೋಗಿನಂ | ವಿಶ್ವ ಕಾರಣಂ ವಿಘ್ನ ವಾರಣಂ" ||  - ಪಂಚ ಭೂತಾದಿಗಳಿಂದಲೂ ನಮಸ್ಕರಿಸಲ್ಪಟ್ಟ ಪಾದಂಗಳ ಹೊಂದಿರುವವನೂ, ಪ್ರಪಂಚವನ್ನು ಸಮಸ್ಥಿತಿಯಲ್ಲಿ ಇಟ್ಟಿರುವವನೂ, ಕಾಮ, ಕ್ರೋಧ, ರಾಗ ದ್ವೇಷಗಳನ್ನು ತ್ಯಜಿಸಿ, ವೈರಾಗ್ಯವನ್ನು ತಳೆದಿರುವ ಯೋಗಿಗಳಿಂದ ನಮಸ್ಕರಿಕೊಳ್ಳುವವನೂ, ಪ್ರಪಂಚಕ್ಕೆಲ್ಲ ಕಾರಣ ಭೂತನಾದವನು, ವಿಘ್ನಗಳನ್ನು ನಿವಾರಿಸುವವನೂ ಆದ ಗಣಪತಿಯನ್ನು ಸ್ಮರಿಸುತ್ತೇನೆ ಎನ್ನುತ್ತಾರೆ.  ಮುಂದುವರೆಯುತ್ತಾ ಕೃತಿಯ ಚರಣದಲ್ಲಿ
"ಪುರಾ ಕುಂಭಸಂಭವ ಮುನಿವರ ಪ್ರಪೂಜಿತಂ - ತ್ರಿಕೋಣ ಮಧ್ಯಗತಂ |
ಮುರಾರಿ ಪ್ರಮುಖಾದ್ಯುಪಾಸಿತಂ - ಮೂಲಾಧಾರ ಕ್ಷೇತ್ರಂ ಸ್ಥಿತಂ |
ಪರಾದಿ ಚತ್ವಾರಿ ವಾಗಾತ್ಮಕಂ - ಪ್ರಣವ ಸ್ವರೂಪ ವಕ್ರ ತುಂಡಂ |
ನಿರಂತರಂ ನಿಟಿಲ ಚಂದ್ರಖಂಡಂ - ನಿಜ ವಾಮಕರ - ವಿಧೃತೇಕ್ಷು ದಂಡಂ |
ಕರಾಂಬುಜ ಪಾಶ ಬೀಜಾಪೂರಂ - ಕಲುಷ ವಿದೂರಂ - ಭೂತಾಕಾರಂ |
ಹರಾದಿ ಗುರುಗುಹ ತೋಷಿತಬಿಂಬಂ - ಹಂಸಧ್ವನಿ ಭೂಷಿತ ಹೇರಂಬಂ" || - ಅನಾದಿ ಕಾಲದಿಂದಲೂ ಮುನಿ ಶ್ರೇಷ್ಠರಿಂದಲೂ, ಮುರಾರಿಯಂತಹ ಪ್ರಮುಖ ದೇವತೆಗಳಿಂದ ಉಪಾಸಿಸಲ್ಪಟ್ಟವನೂ, ಮೂಲಾಧಾರ ಚಕ್ರದಲ್ಲಿ ನೆಲೆಸಿರುವವನೂ, ಪರಾ-ಪಶ್ಯಂತಿ-ಮಧ್ಯಮಾ-ವೈಖರೀ ಎಂಬ ನಾಲ್ಕು ಮಾತುಗಳಿಂದ ಕೂಡಿದ "ಓಂ"ಕಾರ ಸ್ವರೂಪನೂ, ವಕ್ರತುಂಡನೂ, ಹಣೆಯಲ್ಲಿ ಚಂದ್ರನ ಗುರುತನ್ನು ಹೊಂದಿರುವವನೂ, ಕಬ್ಬಿನ ಕೋಲನ್ನು ಹಿಡಿದಿರುವವನೂ, ಮನಸ್ಸಿನ ಕಲ್ಮಷವನ್ನು ದೂರಮಾಡುವವನೂ, ಭೂತಕಾರನಾದ ಪರಮೇಶ್ವರನೇ ಮೊದಲಾದವರಿಂದ ವಂದಿಸಲ್ಪಡುವವನೂ ಸುಬ್ರಹ್ಮಣ್ಯನಿಂದ ಸಂತೋಷಿಸಲ್ಪಡುವವನೂ, ಹಂಸಧ್ವನಿ ರಾಗದ ಭೂಷಣನೂ ಆದ ಗಣಪತಿಯನ್ನು ಭಜಿಸುತ್ತೇನೆ ಎನ್ನುತ್ತಾರೆ. 

ಶ್ರೀ ದೀಕ್ಷಿತರು ತಮ್ಮ "ಶ್ರೀ" ರಾಗದ ಇನ್ನೊಂದು ಕೃತಿ "ಶ್ರೀ ಮೂಲಾಧಾರ ಚಕ್ರ ವಿನಾಯಕ | ಅಮೂಲ್ಯ ಪರಪ್ರದಾಯಕ || ಯಲ್ಲಿ ಪ್ರಾರಂಭದಲ್ಲೇ ಮೂಲಾಧಾರ ಚಕ್ರದಲ್ಲಿ ನೆಲೆಸಿರುವವನು ಎಂಬುದನ್ನು ಸ್ಪಷ್ಟ ಪಡಿಸುತ್ತಾರೆ.  ಅಮೂಲ್ಯವಾದ ವರಗಳನ್ನು ಬೇಡಿದ ಭಕ್ತರಿಗೆ ಕರುಣಿಸುವವನು ಎನ್ನುತ್ತಾ "ಮೂಲಜ್ಞಾನ ಶೋಕ ವಿನಾಶಕ | ಮೂಲಕಂದ ಮುಕ್ತಿಪ್ರದಾಯಕ || - ಭಕ್ತರ ದುಃಖ ಮತ್ತು ಅಜ್ಞಾನವನ್ನು ಹೋಗಲಾಡಿಸುವವನು, ಸಂಪೂರ್ಣ ಶರಣಾಗತರಾದವರಿಗೆ ಮುಕ್ತಿಯನ್ನು ಕರುಣಿಸುವವನು ಎಂದು ಸ್ತುತಿಮಾಡುತ್ತಾರೆ.

ಯೋಗಶಾಸ್ತ್ರದ ಪ್ರಕಾರ ಮೂಲಾಧಾರ ಚಕ್ರದಲ್ಲಿರುವ ಶಕ್ತಿ ದೇವತೆಯನ್ನು ಜಾಗೃತಿಗೊಳಿಸುವುದಕ್ಕೆ ನಾವು ಮೂಲವಾಗಿ ಗಣಪತಿಯನ್ನೇ ಆರಾಧಿಸ ಬೇಕೆಂಬ ಮಾತು ನಿಶ್ಚಿತವಾಗಿ ಹೇಳಲ್ಪಡುತ್ತದೆ.  ವಿಭಿನ್ನವಾದ ಆಕಾರ, ಅಗಾಧವಾದ ಆಕೃತಿಯ, ಆನೆಯ ಮೊಗದ ವಿನಾಯಕ ನಾವು ನಮ್ಮ ಭೌತಿಕ ಶರೀರದ ಪ್ರಜ್ಞೆಯನ್ನು ಮೀರಿ ಭಗವತ್ತತ್ವದೆಡೆಗೆ ಸಾಗಬೇಕೆಂಬ ಸತ್ಯವನ್ನು ನಿಚ್ಚಳವಾಗಿ ತೋರಿಸುತ್ತಾನೆ.   ಹೆಚ್ಚು ಮಾತನಾಡದೆ, ಸೂಕ್ಷವಾಗಿ ಕಿವಿಗಳನ್ನು ಅಗಲವಾಗಿ ತೆರೆದಿಟ್ಟುಕೊಂಡು, ಪುಟ್ಟ ಪುಟ್ಟ ತೀಕ್ಷ್ಣ ಕಣ್ಣುಗಳಿಂದ ಎಲ್ಲವನ್ನೂ ಗ್ರಹಿಸಬೇಕು.  ವಿಷಯಾಸಕ್ತಿಗಳಿಗೆ, ಆಹಾರ ಸೇವನೆಗೆ ಎಲ್ಲಕ್ಕೂ ಒಂದು ಕಡಿವಾಣ ಹಾಕಿಕೊಂಡು ಹಿತ ಮಿತವಾಗಿ ಭಗವಂತನ ಪಾದದಲ್ಲಿ ಚಿತ್ತವನ್ನು ನೆಡಬೇಕೆಂದು ಬೋಧಿಸುವವನು ನಮ್ಮೆಲ್ಲರ ಪ್ರೀತಿಯ ಆರಾಧ್ಯ ದೈವ ಶ್ರೀ ಗಣೇಶ.

ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಚಿತ್ರಕೃಪೆ : ಅಂತರ್ಜಾಲ