Tuesday, August 31, 2010

ಬೆಕ್ಕಿನ ಕಣ್ಣು

"ಬೆಕ್ಕಿನ ಕಣ್ಣು".... ಕಾದಂಬರಿಯನ್ನು ಓದಿ ಸ್ವಲ್ಪ ದಿನಗಳಾದರೂ ಅದೇಕೋ ಕಾದಂಬರಿಯ ಬಗ್ಗೆ ಬರವಣಿಗೆ ಪೂರ್ಣವಾಗಲೇ ಇಲ್ಲ. ಚಿಕ್ಕದಾಗಿ ಸುಮ್ಮನೆ ಕಥೆಯ ಪರಿಚಯ ಮಾಡಿಕೊಡೋಣವೆಂದು ಏನೆಲ್ಲಾ ಪ್ರಯತ್ನ ಪಟ್ಟರೂ... ಮೊಟಕುಗೊಳಿಸಿ, ಕಥೆಯ ಮತ್ತು ನನ್ನ ಮನಸ್ಸಿನ ಭಾವಗಳನ್ನು ಅರ್ಥಗೆಡಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ತೀರಾ ವಿವರವಾಗಿ ಹೋಗದೆ... ಸುಮ್ಮನೆ ನಿಮಗೆ ಓದಿ ಮರೆತುಹೋಗಿರಬಹುದಾದ... ಕುಸುಮಳ ವ್ಯಕ್ತಿತ್ವ... ನವಿರು ಭಾವಗಳು.... ಸೂಕ್ಷ್ಮ ಸಂವೇದನೆಗಳನ್ನು... ಸ್ವಲ್ಪವಾದರೂ ಹೇಳಲೇಬೇಕೆಂದು, ನನ್ನ ಮನಸ್ಸಿಗೆ ತೋಚಿದಂತೆ ಇಲ್ಲಿ ಹೇಳಲು ಪ್ರಾರಂಭಿಸಿದ್ದೇನೆ. ಬರಹ ಒಂದು ಕಂತಿಗೆ ತುಂಬಾ ಉದ್ದವಾಗಿದೆ ಅನ್ನಿಸಿದ್ದರಿಂದ.... ಮುಕ್ತಾಯವನ್ನು ಇನ್ನೊಂದು ಬರಹವಾಗಿ ಮುಂದುವರೆಸಿ ಹೇಳಬಯಸುತ್ತೇನೆ. ನಿಮಗೆ ಒಪ್ಪಿಗೆಯಾಗುತ್ತದೆ ಮತ್ತು ನೀವೆಲ್ಲರೂ ಇನ್ನೊಂದು ಭಾಗವನ್ನೂ ಓದಲು ಕಾಯುತ್ತೀರೆಂಬ ನಂಬಿಕೆಯಿಂದ.........

ಅನೇಕ ವರ್ಷಗಳು ಮಕ್ಕಳಿಲ್ಲದ ಜಗನ್ನಾಥರಾಜಮ್ಮ ದಂಪತಿಗಳಿಗೆ, ವರವಾಗಿ, ಮುದ್ದಿನ ಕುವರಿಯಾಗಿ ಜನಿಸಿದ ಕುಸುಮ ಹತ್ತನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಳ್ಳುವ ಹತಭಾಗ್ಯವಂತಳಾಗುತ್ತಾಳೆ. ತಾಯಿಯ ಕಟ್ಟೆಯೊಡೆದ ಪ್ರವಾಹದಂತಿದ್ದ ನಿಸ್ವಾರ್ಥ ಪ್ರೇಮದ ಕಡಲಲ್ಲಿ ತೇಲುತ್ತಿದ್ದ ಮಗು, ಕಂಗೆಟ್ಟು ತಂದೆಯನ್ನೇ ಬಲವಾಗಿ ತಬ್ಬಿದ ಬಳ್ಳಿಯಂತಾಗುತ್ತಾಳೆ. ಎರಡನೆಯ ಮದುವೆಗೆ ಕೊನೆಗೂ ಒಪ್ಪಿಯೇ ಬಿಡುವ ತಂದೆ......

ಬಲವಂತವಾಗಿ ಎರಡನೆಯ ಮದುವೆಯ ವರನನ್ನು ವರಿಸುವ ಸನ್ನಿವೇಶದಲ್ಲಿ ಕ್ಷೋಭೆಗೊಂಡ ಮನಸ್ಸಿನ ಪದ್ಮ, ತನ್ನ ಸವತಿಯ ಮಗಳನ್ನು ಯಾರೋ ಎಳೆದು ತನ್ನ ತೊಡೆಯಲ್ಲಿ ಕೂಡಿಸಿದಾಗ, ತನ್ನ ಕ್ರೋಧವನ್ನೆಲ್ಲಾ ಮಗುವನ್ನು ನೂಕಿ ಬಿಡುವ ಮೂಲಕ ತೋರಿಸಿಬಿಡುತ್ತಾಳೆ. ಇದು ಪುಟ್ಟ ಕುಸುಮಳಿಗೆ ಜೀವನದಲ್ಲಿ ಆಗುವ ಮೊದಲ ಅಪಮಾನ, ತಿರಸ್ಕಾರ.... ಇದ್ಯಾವುದೂ ತಿಳಿಯದ ಜಗನ್ನಾಥನೂ ಕುಸುಮಳ ಮೇಲೆ ಮೊದಲ ಬಾರಿ ಸಿಟ್ಟು ಮಾಡಿಕೊಂಡಾಗ, ತಾನು ತಂದೆಯ ಮನೆಯ.. ಮನಸ್ಸಿನ ಸರ್ವಾಧಿಕಾರಿ, ಶಾಸನಾಧಿಕಾರಿಯೆಂದು.. ಆವರೆಗೂ ನಂಬಿಕೊಂಡಿದ್ದ ಪುಟ್ಟ ಮನಸ್ಸಿಗೆ ತುಂಬಾ ದು:ಖವಾಗುತ್ತದೆ, ಇದು ಎರಡನೆಯ ಘಟನೆ....

ಮೊದಲ ನೋಟದಲ್ಲೇ ಕುಸುಮ ಹಾಗೂ ಪದ್ಮಳ ನಡುವೆ ಸೌಹಾರ್ದವೇ ಇಲ್ಲದೆ ಒಂದು ಸುಪ್ತ ಜ್ವಾಲಾಮುಖಿ ಒಳಗೇ ಕುದಿಯಲು ಆರಂಭವಾಗಿರುತ್ತದೆ. ತಂದೆ ಚಿಕ್ಕಮ್ಮ ಪದ್ಮಳಿಗೆ ತೋರಿದ ಬೆಂಬಲ ಕುಸುಮಳ ಮನದಲ್ಲಿ ಮತ್ಸರದ ಬೆಂಕಿ ಹೊತ್ತಿಸಿಬಿಡುತ್ತದೆ. ತಾನೇನನ್ನೋ ಅಮೂಲ್ಯವಾದದ್ದನ್ನು ಕಳೆದು ಕೊಂಡೆನೆಂದು ರೋಧಿಸತೊಡಗುತ್ತಾಳೆ.

ತಾಯಿ ಬದುಕಿರುವಾಗಲೇ ಕುಸುಮ ಒಂದು ಪುಟ್ಟ ಬೆಕ್ಕಿನ ಮರಿಯನ್ನೂ, ನಾಯಿ ಮರಿಯನ್ನೂ ಕಾಡಿ, ಹಟಮಾಡಿ ತರಿಸಿಕೊಂಡಿರುತ್ತಾಳೆ. ಈಗ ಅವೆರಡೇ ಅವಳ ಸಂಗಾತಿಗಳಾಗುತ್ತಾರೆ...

ಎರಡನೇ ಮದುವೆ ಮಾಡಿಕೊಂಡ ಜಗನ್ನಾಥ, ಮಗಳನ್ನು ದೂರ ಮಲಗಿಸಲಾರದೆ, ಹೊಸ ಹೆಂಡತಿಯ ಮೋಹವನ್ನೂ ಬಿಡಲಾರದೆ ಒದ್ದಾಡುತ್ತಾನೆ. ಉಪಾಯದಿಂದ ಕುಸುಮಳ ಜೊತೆ ತಾನೂ ನಡುಮನೆಯಲ್ಲಿ ಬಂದು ಮಲಗುತ್ತಾನೆ. ಅರ್ಧ ರಾತ್ರಿಯಲ್ಲಿ ಮಿಂಚು-ಗುಡುಗುಗಳಿಗೂ, ದು:ಸ್ವಪ್ನಕ್ಕೂ ಹೆದರಿ ಕಂಗಾಲಾಗಿ ಕುಸುಮ ಎದ್ದಾಗ ಪಕ್ಕದಲ್ಲಿ ತಂದೆ ಇರುವುದಿಲ್ಲ... ಕನಸಿನಲ್ಲಿ ಕುಸುಮ ಸಿಂಹದ ಘರ್ಜನೆಯನ್ನೂ, ಒಂಟಿಯಾಗಿ ನಿಂತಿರುವ ತನ್ನ ಸುತ್ತಲೂ ಚಾಚಿರುವ ಹಸಿರು ಕೆನ್ನಾಲಿಗೆ ಬೆಂಕಿಯನ್ನೂ, ತನ್ನದೇ ಪ್ರಿಯ ಬೆಕ್ಕು ಪಾಲಿ ಭಾಯಾನಕ ಗಾತ್ರ ತಳೆದು ಹುಲಿಯಂತೆ ತನ್ನ ಮೇಲೆರಗುವುದನ್ನೂ ಕಾಣುತ್ತಾಳೆ. ಅದೇ ಸಮಯಕ್ಕೆ ಚಿಟಿಲ್ಲನೆ ಬಡಿದ ಸಿಡಿಲು, ನೂರಾರು ಮಿಂಚುಗಳೂ... ಪ್ರಕೃತಿಯ ರುದ್ರನಾಟ್ಯ, ಕನಸಿನ ಭೀಕರತೆಯ ನಡುವೆ ಕುಸುಮ, ಬೇಟೆಗಾರರಿಂದ ಸುತ್ತುವರಿಯಲ್ಪಟ್ಟ ಮೊಲದಂತೆ ತಲ್ಲಣಿಸುತ್ತಾಳೆ. ತಂದೆಗಾಗಿ ಬೊಬ್ಬಿರಿಯುತ್ತಾಳೆ... ಆದರೆ ಅರ್ಧ ತೆರೆದ ರೂಮಿನ ಬಾಗಿಲಿನಲ್ಲಿ ಲಾಂದ್ರ ಹಿಡಿದ ಪದ್ಮ, ನಿಂತಿರುತ್ತಾಳೆ......

ಅರ್ಧ ನಿದ್ರೆಯಿಂದೆದ್ದು ಬಂದಿದ್ದ ಪದ್ಮ ಕೋಪಅಸಹನೆಯಿಂದ ಕುದಿಯುತ್ತಿರುತ್ತಾಳೆ. ಅವಳ ಹಸಿರು ಕಣ್ಣುಗಳು ಕೆಂಪು ವರ್ಣ ತಾಳಿ ಅಸಹ್ಯವಾಗಿರುತ್ತವೆ. ಕೆದರಿದ ಕೆಂಚು ಕೂದಲು, ಕೆರಳಿದ ಮುಖದ, ಅಸ್ತವ್ಯಸ್ತ ಸೀರೆಯ, ಕುಂಕುಮ ಅಳಿಸಿಹೋದ, ಮುಡಿದ ಮಲ್ಲಿಗೆ ಜಜ್ಜಿ ಹೋಗಿ ಸರ್ಪದಂತೆ ನೇತಾಡುತ್ತಿದ್ದ ... ಅಬ್ಬಾ... ಭಯಾನಕವಾಗಿರುತ್ತಾಳೆ. ಬೆದರಿದ ಹುಲ್ಲೆ ಮರಿಯಂತಿದ್ದ ಕುಸುಮಳ ಹತ್ತಿರ ಬಂದು ಕುಳಿತು, ಹಸಿರು ಕಣ್ಣುಗಳನ್ನು ಚಕ್ರಾಕಾರವಾಗಿ ತಿರುಗಿಸುತ್ತಾ, ಅಣ್ಣಾ ಎಂದು ತಂದೆಯನ್ನು ಕರೆದ ಮಗುವಿನ ಬಾಯಿ ಮುಚ್ಚಿ, ಅಮುಕಿ ಹೆದರಿಸುತ್ತಾಳೆ. ತನ್ನನ್ನೇ ದುರುಗುಟ್ಟಿ ನೋಡುತ್ತಿದ್ದ ಒಂದು ಜೊತೆ ಹಸಿರು ಕಣ್ಣುಗಳು, ಕುಸುಮಳ ರಕ್ತ ಹೆಪ್ಪುಗಟ್ಟಿಸಿ ಬಿಡುತ್ತದೆ. ತಬ್ಬಲಿಯಂತೆ ಬಿಕ್ಕಿ ಬಿಕ್ಕಿ ಅಳುತ್ತಾ ರಾತ್ರಿ ಕಳೆದು, ಬೆಳಗಿನ ಜಾವ ನಿದ್ದೆ ಮಾಡುತ್ತದೆ ಮಗು. ಬೆಳಿಗ್ಗೆ ಎಷ್ಟು ಹೊತ್ತಾದರೂ ಏಳದ ಮಗುವನ್ನು ತಂದೆ ಎಬ್ಬಿಸಿದಾಗ, ಕುಸುಮ ತಂದೆಯನ್ನು ಬಾಚಿ ತಬ್ಬಿ ಬೋರೆಂದು ಅಳುತ್ತಾಳೆ. ಇದು ಮೂರನೆಯ ಘಟನೆ ಕುಸುಮಳ ಬಾಳಿನಲ್ಲಿ.....

ಇದರ ನಂತರ ಪದ್ಮ, ಕುಸುಮಳ ಸರ ಕದ್ದು ಬಿಡುತ್ತಾಳೆ. ವಾಪಸ್ಸು ಕೊಡೆಂದು ಕೇಳಿದ ಮಗುವಿನ ಕೊರಳು ಅಮುಕಿ ಹೆದರಿಸುತ್ತಾಳೆ ಪದ್ಮ... ಇದು ನಾಲಕ್ಕನೆಯದು... ಹಂತದಲ್ಲಿ ಮೊಟ್ಟ ಮೊದಲ ಬಾರಿಗೆ ಕುಸುಮಳ ಮನದಲ್ಲಿ ರೋಷ ಹುಟ್ಟಿಕೊಳ್ಳುತ್ತದೆ. ಯಾರನ್ನಾದರೂ, ಹೊಡೆದು, ಬಡಿದು, ಕಚ್ಚಿ, ಚೂರು ಮಾಡಬೇಕೆನ್ನುವ ಆಕ್ರೋಶ ಮಿಂಚಿ ಮರೆಯಾಗುತ್ತದೆ. ತನ್ನ ಆಶ್ರಯ, ಪ್ರೀತಿ ಬಯಸಿ ಹತ್ತಿರ ಬಂದ ಬೆಕ್ಕಿನ ಹಸಿರು ಕಣ್ಣುಗಳು ಕುಸುಮಳಿಗೆ ಪದ್ಮಳ ನೆನಪು ಕೊಡುವುದರಿಂದ, ತನ್ನೆಲ್ಲಾ ಆಕ್ರೋಶವನ್ನೂ ಅವಳು ಪಾಲಿಯನ್ನು ಬಲವಾಗಿ ನೆಲಕ್ಕೆ ಕೆಡವಿಕೊಂಡು ಮನಸೋ ಇಚ್ಛೆ ಥಳಿಸುವುದು, ಎತ್ತಿ ಎತ್ತಿ ಗೋಡೆಗೆ ಅಪ್ಪಳಿಸುವುದೂ ಮಾಡುತ್ತಾ ಹೊರಗೆಡುವುತ್ತಾಳೆ.

ಕುಸುಮಳಿಗೆ ಚೂರು ಅಕ್ಕರೆ ತೋರಿಸುತ್ತಿದ್ದ, ಅವಳ ತಾಯಿಯ ಗೆಳತಿ ಸೀತಾಬಾಯಿಯ ಸಂಸಾರವೂ ವರ್ಗವಾಗಿ ಹೊರಟು ಹೋದ ನಂತರ ಕುಸುಮ ತೀರಾ ಅಂತರ್ಮುಖಿ ಮತ್ತು ಒಂಟಿಯಾಗಿ ಬಿಡುತ್ತಾಳೆ.

ಹದಿನಾರರ ಹರೆಯದ ಬಾಲೆ ಕುಸುಮ ಭಾವನೆಗಳ ತೀವ್ರತೆಯನ್ನು ತಾಳಲಾರದೆ, ಕೆಲವೊಮ್ಮೆ ಪಾಲಿಯನ್ನು ಅಟ್ಟಿಸಿಕೊಂಡು, ರಸ್ತೆಯಲ್ಲಿ ತನ್ನ ಮೈಮೇಲಿನ ಅರಿವೆಯ ಅರಿವೂ ಇಲ್ಲದಂತೆ ಓಡುತ್ತಾಳೆ. ಮನಸ್ಸು ಕೆರಳಿದಾಗ ಅವಳು ಹಸಿರು ಬಣ್ಣವನ್ನೂ, ಕಣ್ಗಳನ್ನೂ ದ್ವೇಷಿಸುತ್ತಾಳೆ. ಚಿಕ್ಕಮ್ಮ ಪದ್ಮಳ ಶಿಕ್ಷೆಗಳು ಅವಳನ್ನು ಮೊಂಡು, ಹಟವಾದಿಯಾಗಿ ಮಾರ್ಪಡಿಸಿಬಿಡುತ್ತದೆ. ಕೋಲಿನ ಹೊಡೆತಗಳಾಗಲೀ, ಬೈಗುಳಗಳಾಗಲೀ, ಯಾವುದಕ್ಕೂ ಜಗ್ಗದ ಸೆಟೆದ ದೇಹದವಳಾಗಿ ಬಿಡುತ್ತಾಳೆ.

ಮನೆಯಲ್ಲಿ ದುಡ್ಡು ಸಿಕ್ಕದಿದ್ದಾಗ, ಶಾಲೆಯಲ್ಲಿ ಎಲ್ಲರ ಚೀಲಗಳಿಂದ ಯಾವ ಅಳುಕೂ ಇಲ್ಲದೆ, ಹಣ ತೆಗೆದುಕೊಂಡು ಬಿಡುತ್ತಾಳೆ.... ಹೀಗೆ ಹಗರಣಗಳು ನಡೆಯುತ್ತಲೇ ಹೋಗುತ್ತವೆ. ಪದ್ಮ ಉಪವಾಸ ಕೆಡವಿ, ಹೊಡೆದು, ಬಡಿದು ಕುಸುಮಳ ಕೋಮಲ ಮನಸ್ಥಿತಿಯನ್ನೂ, ಬಾಳನ್ನೂ ಇನ್ನೂ ಹೆಚ್ಚು ನರಕವಾಗಿಸಿ ಬಿಡುತ್ತಾಳೆ. ಒಂದು ಹನಿ ಪ್ರೀತಿಯ ಜಲಕ್ಕಾಗಿ ತಪಿಸುವ ಕುಸುಮಳಿಗೆ ಬರಿಯ ಶಿಕ್ಷೆ, ತಿರಸ್ಕಾರ, ಅವಮಾನಗಳೇ ಸಿಕ್ಕುತ್ತಾ ಹೋಗುತ್ತವೆ.

ಚಿತ್ರಕೃಪೆ : ಅಂತರ್ಜಾಲ

13 comments:

 1. ಬೆಕ್ಕಿನ ಕಣ್ಣು ಕಾದಂಬರಿಯನ್ನು ಓದಿದ್ದೆ. ನೀವು ಬರೆದ recapitulation
  ಓದುತ್ತಿದ್ದಂತೆ, ಅದೆಲ್ಲ ಮತ್ತೆ ನೆನಪಾಯಿತು. ನಿಮ್ಮ ಸಂಗ್ರಹಣ ಚೆನ್ನಾಗಿದೆ. ಮುಂದಿನ ಭಾಗವನ್ನೂ ಸಹ ಬೇಗನೇ ನೀಡಿ.

  ReplyDelete
 2. ಬಾಲ್ಯದಲ್ಲಿ ಓದಿದ್ದ ಬೆಕ್ಕಿನ ಕಣ್ಣು ಮತ್ತೆ ಕಣ್ಣ ಮುಂದೆ ತಿರುಗಿದಂತಾಯಿತು. ಸರಳವಾಗಿ ಕಥೆಯನ್ನೂ ಹೇಳುತ್ತಿದ್ದೀರಾ... ಮುಂದುವರೆಸಿ

  ReplyDelete
 3. ಇಂತಹ ಕಾದಂಬರಿಗಳು ಅಂದು ಪ್ರತಿ ಹೆಣ್ಣುಮಕ್ಕಳ ಪ್ರೀತಿಗೆ ಪಾತ್ರವಾಗಿ ಮೆಚ್ಚುಗೆ ಪಡೆದಿದ್ದವು. ಜೊತೆಗೆ ಜೀವನದ ಹಲವು ಮಜಲುಗಳ ಪರಿಚಯ ಆಗುತ್ತಿತ್ತು. ಲೇಖನ ಚೆನ್ನಾಗಿದೆ

  ReplyDelete
 4. ಕಾದಂಬರಿ ಓದಿದ್ದೆ. ಮರೆತು ಹೋಗಿದ್ದ ಎಷ್ಟೋ ಸನ್ನಿವೇಶಗಳು ಮತ್ತೆ ನೆನಪಾದವು. ಬಹಳ ಚೆನ್ನಾಗಿ ಪರಿಚಯಿಸುತ್ತಿದ್ದೀರಿ. ಧನ್ಯವಾದಗಳು ನಿಮಗೆ.

  ReplyDelete
 5. ಶ್ಯಾಮಲಾ,

  ಇವತ್ತು ಸೆಪ್ಟೆಂಬರ್‍ ೧, ತ್ರಿವೇಣಿಯವರ ಜನ್ಮದಿನ ಅಂತಿ ತಿಳಿಯಿತು. ಸೂಕ್ತ ಸಂದರ್ಭಕ್ಕೆ ಬೆಕ್ಕಿನ ಕಣ್ಣು ಕಾದಂಬರಿಯ ಪರಿಚಯ ಮಾಡಿಕೊಡುತ್ತಿರುವುದಕ್ಕೆ ಧನ್ಯವಾದಗಳು.
  ಸ್ನೇಹದಿಂದ,

  ReplyDelete
 6. ಕಾದಂಬರಿಯ ಬಗ್ಗೆ ಒಳ್ಳೆಯ ಬರಹ
  ಧನ್ಯವಾದಗಳು ತಿಳಿಸಿದ್ದಕ್ಕೆ

  ReplyDelete
 7. ಅಕ್ಕಾ,

  ನನ್ನ ಮೆಚ್ಚಿನ ಕಾದಂಬರಿಗಳಲ್ಲಿ ಇದೂ ಒಂದು. ಓದಿದ ಸ್ವಲ್ಪ ದಿನ ಈ ಕಥೆ ಎಷ್ಟು ನನ್ನ ಕಾಡಿತ್ತೆಂದರೆ ನನಗೂ ಸ್ವಲ್ಪ ಕಾಲ ಹಸಿರು ಬಣ್ಣವೆಂದರೆ ಆಗದಂತಾಗಿತ್ತು! ಈಗಲೂ ಹಸಿರು ಬಣ್ಣವೆಂದರೆ ಅಷ್ಟೊಂದು ಹಿತವಾಗದು ಯಾಕೋ?! :)

  ReplyDelete
 8. ಸಂಗ್ರಹಣ ಚೆನ್ನಾಗಿದೆಯೆಂದೂ, ಕಥೆ ಮತ್ತೊಮ್ಮೆ ನೆನಪು ಮಾಡಿಕೊಂಡಂತಾಯಿತೆಂದೂ, ಪ್ರತಿಕ್ರಿಯಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು....

  ’ನಿಮ್ಮೊಳಗೊಬ್ಭ’ ಬಾಲು ಸಾರ್ ತ್ರಿವೇಣಿಯವರ ಕಾದಂಬರಿಗಳು ಇಂದಿನ ಪೀಳಿಗೆಯವರಿಗೂ ಅಚ್ಚು ಮೆಚ್ಚಾಗುವಂತೆಯೇ ಇದೆ. ಅವರ ಸಾಹಿತ್ಯವೆಲ್ಲವೂ ಬದುಕಿನ ಸಮಸ್ಯೆಗಳು, ಮಜಲುಗಳೇ ಆಗಿವೆ. ನಿರೂಪಣಾ ಶೈಲಿ ಅಷ್ಟು ಉತ್ತಮವಾಗಿರುವುದರಿಂದ ಸಾರ್ವಕಾಲಿಕವಾಗಿದೆ. ಧನ್ಯವಾದಗಳು...

  ಚಂದ್ರೂ...
  ನಾನೂ ಓದಿದೆ ವಿಜಯ ಕರ್ನಾಟಕದಲ್ಲಿ ತ್ರಿವೇಣಿಯವರ ಬಗ್ಗೆ... ನನಗೇ ಗೊತ್ತಿಲ್ಲದೆ ಅವರ ಜನ್ಮದಿನದ ಹಿಂದಿನ ದಿನ ಅವರ ಪುಸ್ತಕದ ಪರಿಚಯ ಮಾಡಿಕೊಟ್ಟಂತಾಯಿತು. ಇದು ಅತ್ಯಂತ ಸಂತೋಷದ ವಿಷಯವಾಯ್ತು ನನಗೆ. ಧನ್ಯವಾದಗಳು....

  ತಂಗೀ ತೇಜಸ್ವಿನೀ...
  ನೀವು ಒಮ್ಮೆ ಈ ಪುಸ್ತಕದ ವಿಷಯ ನನ್ನ ಬಳಿ ಮಾತನಾಡಿದ್ದಿರಿ ಮತ್ತು ಪರಿಚಯಿಸಿ ಎಂದು ಕೂಡ ಹೇಳಿದ್ದಿರಿ. ಈ ಬರಹಕ್ಕೆ ನಿಮ್ಮದೇ ಸ್ಫೂರ್ತಿ. ಓದಿದವರಿಗೆ, ದಿನಗಟ್ಟಲೆ, ವಾರಗಟ್ಟಲೆ ಕಾಡುವಂತಹ ಕಥೆಯೇ ಇದು. ಹಸಿರು ಪ್ರಕೃತಿ ಮತ್ತು ಪ್ರೀತಿಯ ಸಂಕೇತವಲ್ಲವೇ ತಂಗಿ.. ಅದೇಕೆ ನಿಮಗೀಗಲೂ ಹಿತವಾಗದು..? ಕಥೆಗೆ ಪೂರಕವಾಗಿರಲಿ ಎಂದು ನಾನು ಹಸಿರು ಬಣ್ಣವನ್ನೇ ಹಾಕಿದೆ ಬರಹಕ್ಕೆ....:-).. ಆದರೂ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.......

  ReplyDelete
 9. ಶ್ಯಾಮಲ ಮೇಡಂ, 'ಬೆಕ್ಕಿನ ಕಣ್ಣು' ಒಂದು ಅದ್ಬುತ ಕಾದಂಬರಿ, ಅದರ ರೋಚಕತೆ ಮತ್ತು ಬೆಚ್ಚಿ ಬೀಳಿಸುವ ಕೆಲವು ಸನ್ನಿವೇಶಗಳು ಇನ್ನೂ ನನ್ನನ್ನು ಕಾಡುತ್ತವೆ, ಲೇಖಕಿಯ ನಿರೂಪಣೆ ಬಹಳ ಆಪ್ತವಾಗುತ್ತದೆ, ಕತ್ತಲಲ್ಲಿ ಸಣ್ಣ ದೀಪದಲ್ಲಿ ಒಬ್ಬನೇ ಕುಳಿತು ಓದಲು ಸಣ್ಣವನಿದ್ದಾಗ ಹೆದರುತ್ತಿದ್ದೆ! ವಿವರಣೆ ಬಹಳ ಹಿಡಿಸಿತು, ಧನ್ಯವಾದಗಳು

  ReplyDelete
 10. ಭಟ್ ಸಾರ್
  ಆಗ ಓದಿದಾಗ ನಿಜವಾಗಿಯೂ ತುಂಬಾ ಭಯವಾಗಿದ್ದಿತು. ವಾರಗಟ್ಟಲೆ ಹೆದರಿ ನಿದ್ರೆ ಬರದೆ ಅಮ್ಮ ಬೈದಿದ್ದು ನನಗೂ ಇನ್ನೂ ಹಸಿರಾಗೇ ಇದೆ!! ಆದರೆ ಈಗ ಓದಿದಾಗ ನಿಜಕ್ಕೂ ತುಂಬಾ ವೇದನೆಯಾಯಿತು. ನಮಗರಿವಿಲ್ಲದೇ ಯಾವುದೋ ಕಾರಣಕ್ಕೆ ನಾವು ಮಕ್ಕಳ ಜೊತೆ ಕ್ರೂರವಾಗಿ ನಡೆದುಕೊಂಡಾಗ, ಎಳೆ ಮನಸ್ಸಿನ ಮೇಲೆ ಎಂತಹ ಆಘಾತಕರ ಪರಿಣಾಮವಾಗಬಹುದೆಂದು ನೆನೆದಾಗ ಆತಂಕವಾಗುತ್ತದೆ. ನನ್ನ ವಿವರಣೆ ಮೆಚ್ಚಿದ್ದಕ್ಕೆ ಧನ್ಯವಾದಗಳು........

  ReplyDelete
 11. "ಬೆಕ್ಕಿನ ಕಣ್ಣು" ನಾನು ಚಿಕ್ಕಂದಿನಲ್ಲಿ ಓದಿದ್ದ ಕಾದಂಬರಿ. ಅದೆಷ್ಟು ಅರ್ಥವಾಗಿತ್ತೋ, ಆದರೆ ಇಷ್ಟವಾಗಿತ್ತು. ಮುಂದೆ ಅದು ತ್ರಿವೇಣಿಯವರದ್ದೆಂದು ತಿಳಿದ ಮೇಲೆ ಮತ್ತೆ ಓದಬೇಕೆಂದುಕೊಂಡಿದ್ದೆ, ಆಗಲೇ ಇಲ್ಲ. ಮತ್ತೊಂದು ಕಾದಂಬರಿ "ಶ್ರಾವಣಸಂಧ್ಯಾ" ಅನ್ನುವುದನ್ನು ಓದಿದ್ದೆ. ಅದರ ಕಥೆಕೂಡ ಸರಿಸುಮಾರು ಇದರಂತೆಯೇ, ಲೇಖಕಿ (ಲೇಖಕಿಯೇ ಇರಬೇಕು) ಯಾರೆನ್ನುವುದು ನೆನಪಿಲ್ಲ.

  ಉತ್ತಮ ಸಂಗ್ರಹಣ. ಧನ್ಯವಾದಗಳು

  ReplyDelete
 12. ಮೇಡಮ್,

  ಬೆಕ್ಕಿನ ಕಣ್ಣು ನಾನು ಕಾಲೇಜು ಹೋಗುವಾಗ ಓದಿದ್ದೆ. ಅದರ ರೋಚಕತೆ ಆಗ ತುಂಬಾ ಇಷ್ಟವಾಗುತ್ತಿತ್ತು. ಒಂಥರ ದಿಗಿಲು ಕೂಡ ಆಗುತ್ತಿತ್ತು. ಮತ್ತೊಮ್ಮೆ ಅದರ ಅನಾವರಣ ಚೆನ್ನಾಗಿದೆ.

  ReplyDelete