Friday, December 10, 2010

ಸುಂದರ ಸಂಜೆ.....

ದಿನವೂ ಮುಂಜಾವಿನಲೇ ಶುರುವಾಗುವ ದಿನಚರಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಒಂದೇ ರೀತಿಯದ್ದಾಗಿರುತ್ತದೆ. ಸತಿ-ಪತಿಯರಿಬ್ಬರೂ ಕೆಲಸಕ್ಕೆ ಹೋಗಬೇಕಾದ ಸಂಸಾರಗಳಲ್ಲಂತೂ ಆ ಒತ್ತಡ ಶುಭೋದಯಕ್ಕೆ ಮುಂಚೆಯೇ ಪ್ರಾರಂಭವಾಗಿಯೇ ಬಿಟ್ಟಿರುತ್ತದೆ. ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ನಿರತರಾಗಿ ಗಡಿಯಾರದ ಓಟದ ಜೊತೆಗೇ ತಾವೂ ಓಡುತ್ತಾ, ಏದುತ್ತಾ, ಕಛೇರಿ ಸರಿಯಾದ ಸಮಯಕ್ಕೆ ತಲುಪಲು ಹರ ಸಾಹಸ ಪಡುತ್ತಾರೆ. ಇದೆಲ್ಲವೂ ನನಗೂ ಸ್ವಾನುಭವವೇ ಆಗಿತ್ತಾದ್ದರಿಂದ ಆ ಗಡಿಬಿಡಿ ಬದುಕು ನನಗೆ ಚೆನ್ನಾಗಿ ಅರ್ಥವಾಗಿದೆ. ಆದರೆ ಈಗ ನಾನು ಕೆಲಸ ಬಿಟ್ಟು ಒಂದು ದಶಕವೇ ಕಳೆದು ಹೋಗಿರುವುದರಿಂದ, ಎಲ್ಲವನ್ನೂ ಸ್ವಲ್ಪ ವಿರಾಮದಲ್ಲಿ ನೋಡಲು, ಅರ್ಥ ಮಾಡಿಕೊಳ್ಳಲೂ, ಗಮನಿಸಲೂ ಸಮಯ ಸಿಕ್ಕಿದೆ. ಹೀಗೆ ಒಂದು ದಿನ ನನ್ನ ಸ್ನೇಹಿತರ ಜೊತೆಯ ಉಲ್ಲಾಸದ ಮಾತುಕತೆಗಳಲ್ಲಿ ಮೊದಲಿನಿಂದಲೂ ಮನೆಯನ್ನೇ ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುತ್ತಿರುವ, ಪೂಜೆ, ಹಬ್ಬ ಹರಿದಿನ, ಮನೆಗೆ ಬಂದು ಹೋಗುವ ನೆಂಟರು, ಇಷ್ಟರು, ಮನೆಯ ಸದಸ್ಯರು ಎಲ್ಲವನ್ನೂ ಅಚ್ಚು ಕಟ್ಟಾಗಿ ನಿರ್ವಹಿಸುತ್ತಾ ಇರುವ ಒಬ್ಬ ಗೃಹಿಣಿ... ಮದುವೆಯಾಗಿ ೧೫ – ೨೦ ವರ್ಷಗಳ ನಂತರವೂ.... ಬೆಳಗಿನಿಂದ ದುಡಿದು, ದಣಿದು ಬರುವ ಪತಿಯನ್ನು ಹೇಗೆ ಸ್ವಾಗತಿಸಬಹುದು ಎಂಬ ಮಾತು ಬಂದಿತ್ತು. ಬೆಳಗಿನಿಂದ ಕಾರ್ಖಾನೆಯಲ್ಲಿ ಯಂತ್ರಗಳ ನಡುವೆ, ಯಂತ್ರಗಳದ್ದೇ ಮನಸ್ಸಿನ ಮಾನವರ ನಡುವೆ, ಕೆಲಸ ಮಾಡಿ ಬಂದಾಗ ಪತಿ ಏನನ್ನು ನಿರೀಕ್ಷಿಸಬಹುದು..?

ಒಂದು ಸುಂದರ ಸಂಜೆ... ಶುಭ್ರವಾದ ಬಾನು, ಇಳೆಯ ಕದಪುಗಳನ್ನು ರಂಗೇರಿಸಿ, ತನ್ನ ಪ್ರೇಮ ನಿವೇದನೆಯನ್ನು ಮಾಡುತ್ತಾ, ತಾನೂ ರಂಗು ರಂಗಾಗಿರುವ ರವಿ, ಇನಿಯನ ಚೆಲ್ಲಾಟಕೆ ಸೋತು, ತಲೆಬಾಗಿ, ನಾಚಿ ನಸುಗೆಂಪಾಗಿ, ಅರಳಿ ನಿಂತ ವಸುಂಧರೆ.. ಹೀಗೊಂದು ದೃಶ್ಯ ಕಲ್ಪಿಸಿಕೊಂಡಾಗ ನನಗೆ ಬೆಳಗಿನಿಂದ ಮನೆಯ ಕೆಲಸಗಳಲ್ಲಿ ಮುಳುಗಿ, ಮಧ್ಯಾಹ್ನದ ಊಟದ ನಂತರ ತುಸು ವಿಶ್ರಾಂತಿ ಪಡೆದು, ದಣಿದು ಬರುವ ಪತಿಯ ಸ್ವಾಗತಕ್ಕಾಗಿ, ಶುಭ್ರ ಸೀರೆಯ ಉಟ್ಟು, ಹೂ ಮುಡಿದು, ನಸು ನಗುತ್ತಾ ಗೇಟ್ ನಲ್ಲಿ ಕಾದು ನಿಂತಿರುವ ಮಡದಿಯ ನೆನಪಾಯಿತು. ಇಡೀ ಮನೆಯ ಉಸ್ತುವಾರಿ ನೋಡಿಕೊಂಡು, ಆ ಒತ್ತಡದ ಕೆಲಸಗಳಲ್ಲೂ ತನ್ನ ಪತಿಗೆ ಇಷ್ಟವಾದ ಪಾಯಸ ತಯಾರಿಸಿ, ಕಾದು ನಿಂತಿಹಳು ಮಡದಿ....

ದ್ವಿಚಕ್ರ ವಾಹನದಲ್ಲಿ, ಮನದನ್ನೆಯ ಬಳಿಗೆ ಹಾರಿ ಬಂದ ಪತಿ ಅವಳ ಒಂದು ಮುಗುಳ್ನಗೆ ಪಡೆದು, ಹೊಸ ಚೈತನ್ಯ ಪಡೆಯುತ್ತಾನೆ. ಬೆಳಗಿನಿಂದ ದುಡಿದ ಮಡದಿಯ ಜೊತೆ ಸ್ವಲ್ಪ ಹೊತ್ತು ಕುಳಿತು ಸಾಂತ್ವನದ, ಪ್ರೇಮದ ಮಾತುಗಳನ್ನಾಡುತ್ತಾ ಅಂದಿನ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲು ಮುಂದಾಗುತ್ತಾನೆ. ಇದೇ ಸಮಯಕ್ಕಾಗಿಯೇ ಕಾತುರದಿಂದ ಕಾಯುತ್ತಿದ್ದ ಮಡದಿ, ಮೆಲ್ಲಗೆ ಅಡಿಯಿಡುತ್ತಾ ಕೈಯಲ್ಲಿ ಲೋಟ ಹಿಡಿದು ಬಂದಾಗ, ಪ್ರಸನ್ನನಾದ ಪತಿ.... ಆಹಾ ಎಂಥಹ ಸುಂದರ ಗಳಿಗೆ, ಪತ್ನಿಯ ಕೈಯ ಬಿಸಿ ಕಾಫಿ... ಎಂದು ಕನಸು ಕಾಣುತ್ತಾನೆ. ಆದರೆ ಹತ್ತಿರ ಬಂದ ಮಡದಿಯ ಕೈಯಲ್ಲಿ ತನ್ನಿಷ್ಟದ ಪಾಯಸದ ಲೋಟ ಕಂಡು, ಹಿಗ್ಗಿ ಹೂವಿನಂತೆ ಅರಳಿ, ಅನುರಾಗ ತುಂಬಿದ ನೋಟದಿಂದ, ಮೆಚ್ಚುಗೆಯಿಂದ ಪತ್ನಿಯನ್ನೇ ನೋಡುತ್ತಾ ಪಾಯಸದ ಲೋಟ ಹಿಡಿದ ಕೈಯನ್ನು ತನ್ನ ಕೈಯೊಳು ತೆಗೆದುಕೊಂಡು ನಸುನಗುತ್ತಾನೆ. ಅತ್ಯಂತ ಮನೋಹರ ದೃಶ್ಯ ಕಂಡ (ಕಲ್ಪನೆಯಲ್ಲಿ) ನನ್ನ ಮನಸ್ಸು ಲಹರಿಯಲ್ಲಿ ತೇಲಾಡ ತೊಡಗಿತ್ತು... ಮನಕ್ಕೆ ಮುದಕೊಟ್ಟಿತ್ತು... ದೃಶ್ಯದ ವರ್ಣನೆ ಕೆಲವೇ ಮಾತುಗಳಲ್ಲಿ ಹಿಡಿದಿಡಿವ ನನ್ನ ಪ್ರಯತ್ನ :


ಮುಸ್ಸಂಜೆಯ ಇಳಿ ಬಿಸಿಲಲಿ
ದಣಿದು ಬಾಯಾರಿ ಬಳಲಿ
ಹಿಂತಿರುಗಿದ ಇನಿಯನ
ಮನದಿಂಗಿತವ ತಿಳಿದು
ಮನ ಮೆಚ್ಚಿದ ಮಡದಿ
ಪಾಯಸದ ಬಟ್ಟಲು ಹಿಡಿದು
ಮೆಲ್ಲನೇ ಬಳಿ ಬರಲು
ಹೊನ್ನ ಹೂನಗೆ ಬೀರಲು
ಅನುರಾಗ ಅರಳಿತು
ಜೊನ್ನ ಜೇನು ಬೆರೆತ
ಪಾಯಸ ಗಂಟಲಿಗೂ
ಮನಕೂ ಸಿಹಿಯ ಲೇಪಿಸಿತು ...

ಅನುರಾಗದ ಅಲೆಯಲ್ಲಿ ತೇಲುತ್ತಾ ಜೋಡಿ ಮನಸ್ಸುಗಳು ಜೋಡಿ ಹಕ್ಕಿಗಳಂತೆ ಸಂತೋಷದಿಂದ ನಲಿದವು.....



ಚಿತ್ರಕೃಪೆ : ಅಂತರ್ಜಾಲ

11 comments:

  1. This comment has been removed by the author.

    ReplyDelete
  2. ನಿಮ್ಮ ಮಧುರ ಕವನ, ಮಧುರ ಕನಸು ನನಸಾಗಲಿ!

    ReplyDelete
  3. ಮಧುರ ದಾಂಪತ್ಯದ ಕನಸು ಸೊಗಸು...

    ಚಂದದ ಕಾವ್ಯ ಲೇಖನಕ್ಕೆ ಅಭಿನಂದನೆಗಳು...

    ReplyDelete
  4. ಶ್ಯಾಮಲಾ ಅವರೆ, ಸುಂದರ ಸಂಜೆಯ ಚಿತ್ರಣ ಅದರ ಜೊತೆಗೆ ಸುಂದರ ಕವನ ಚೆನ್ನಾಗಿದೆ. ಅಭಿನಂದನೆಗಳು.
    ಚಂದ್ರು

    ReplyDelete
  5. ಶ್ಯಾಮಲಾ ಮೇಡಂ, ದಾಂಪತ್ಯದ ರಹಸ್ಯವೇ ನಿಷ್ಕಲ್ಮಶ ಪ್ರೀತಿ ಅಲ್ಲವೇ? ಎಲ್ಲಿ ಅನ್ಯೋನ್ಯತೆ ಕಡಿಯಾಗುತ್ತದೋ ಅಲ್ಲಿ ಸಂಶಯ,ಜಗಳ,ದೊಂಬಿ, ಅನರ್ಥ ಶುರುವಾಗುತ್ತದೆ. ಪರಸ್ಪರರ ಅರ್ಥೈಸುವಿಕೆಯಿಂದ ಅರಳುವ ಅನುರಾಗವೇ ಶಾರೀರಿಕ ಆಕರ್ಷಣೆಯನ್ನು ಅವಲಂಬಿಸದೇ ಕೊನೆಯವರೆಗೂ ನಡೆಸುತ್ತದೆ, ಈ ವಿಷಯನ್ನು ಮೊನ್ನೆ ಮೊನ್ನೆಯವರೆಗೂ ಇದ್ದ ದಿ| ಶ್ರೀ ಕೆ.ಎಸ್.ನ. ಅವರ ಬಾಳಿನಲ್ಲಿ ಹಾಗೂ ಅವರ ಬಾಳು ಕೃತಿಯಾದ ಸೊಬಗಿನಲ್ಲಿ ತಾವು ನೋಡಿರಬಹುದಲ್ಲ? ಕಥನ ಚೆನ್ನಾಗಿದೆ, ಧನ್ಯವಾದಗಳು.

    ReplyDelete
  6. ಕಂಡದ್ದನ್ನು ಬಹಳ ರಮ್ಯವಾಗಿ ವರ್ಣಿಸಿದ್ದೀರಿ. ಅನುಭವದ ಮೇಳವೂ ಚೆನ್ನಾಗಿದೆ.

    ReplyDelete
  7. ಸುಂದರ ಸಂಜೆಯ ಚಿತ್ರಣ...
    ಅದರ ಜೊತೆಗೆ ಸುಂದರ ಕವನ.

    ಚೆನ್ನಾಗಿದೆ. ಅಭಿನಂದನೆಗಳು.

    ReplyDelete
  8. Akka,

    Tumba muddagive hakkigaLu.. Chitra istavaayitu... jothege nimma sihi kalpaneyU :)

    ReplyDelete
  9. sakat akka :) olle kalpane ,kelavara balalli vaastava kuda :)

    ReplyDelete
  10. ಸುನಾತ್ ಕಾಕಾ, ಪ್ರಕಾಶ್ ಸಾರ್, ಚಂದ್ರೂ.., ವೆಂಕಟಕೃಷ್ಣ, ವಸಂತ್... ಧನ್ಯವಾದಗಳು.

    ಸುಬ್ರಹ್ಮಣ್ಯರೇ...
    ಇದು ಕಂಡದ್ದು ಅಲ್ಲ, ನನ್ನ ಅನುಭವದ ಮೇಳವೂ ಅಲ್ಲ...:-) ಇದೊಂದು ಸ್ವಚ್ಛ ಕಲ್ಪನೆ ಅಷ್ಟೆ.... ಧನ್ಯವಾದಗಳು.

    ತಂಗಿ ತೇಜಸ್ವಿನಿ...
    ಚಿತ್ರವನ್ನೂ ಮೆಚ್ಚಿದ್ದೀರಿ.. ಹೌದು ತುಂಬಾ ಮುದ್ದಾಗಿವೆ ಗಿಣಿಗಳು ಅಲ್ವಾ? ಧನ್ಯವಾದಗಳು

    ತಮ್ಮಾ ವಿನಯ್...
    ನನ್ನ ಕಲ್ಪನೆಯನ್ನು ನೀನು ಅನುಭೂತಿಸಿದ್ದಕ್ಕೆ ಧನ್ಯವಾದಗಳು. ಹೌದು ತಮ್ಮಾ ಖಂಡಿತಾ ಎಷ್ಟೋ ಜನರ ಬಾಳಿನಲ್ಲಿ ಇದು ನಿಜವಾಗಿರುತ್ತದೆ. ನಮಗೆ ಗೊತ್ತಾಗಿರೋಲ್ಲ ಅಷ್ಟೆ...:-)

    ಭಟ್ ಸಾರ್
    ದಾಂಪತ್ಯದ ರಹಸ್ಯ ನಿಷ್ಕಲ್ಮಷ ಪ್ರೀತಿ ಎಂಬ ಮಾತಿಗೆ ನಾನಿನ್ನೊಂದು ಮಾತು ಸೇರಿಸಲಿಷ್ಟ ಪಡುತ್ತೇನೆ... ಅದು ನಂಬಿಕೆ ಮತ್ತು ವಿಶ್ವಾಸ. ಇವೆರಡು ಇದ್ದಾಗಷ್ಟೇ... ಅನುರಾಗ ಎಲ್ಲಾ ದೈಹಿಕ ಮಟ್ಟವನ್ನೂ ದಾಟಿ... ಕೇವಲ ದೈವೀಕ ಆಗುವುದು..............

    ReplyDelete
  11. ಶ್ಯಾಮಲ ಮೇಡಮ್,
    ನಿಶ್ಕಲ್ಮಶ ಪ್ರೀತಿಯ ದಾಂಪತ್ಯದ ಬಗ್ಗೆ ಬರೆದ ಲೇಖನ ಮತ್ತು ಕವನ ತುಂಬಾ ಚೆನ್ನಾಗಿದೆ.

    ReplyDelete