Friday, March 4, 2011

ಪುಟ್ಟ ಪುಟ್ಟಿಯ ಜಾತ್ರೆ ವಿಶೇಷ - ಭಾಗ - ೨


"ತೂಗು ತೊಟ್ಟಿಲು" ನೋಡುವುದರಲ್ಲಿ ಮಗ್ನನಾಗಿ ಬಿಟ್ಟಿದ್ದ ಪುಟ್ಟನಿಗೆ ಇದ್ದಕ್ಕಿದ್ದಂಗೆ ಪುಟ್ಟಿ ಇಲ್ಲದಿರುವುದು ಗೊತ್ತಾಗಿ ಹೆದರಿಕೆ ಆಯಿತು. ಆ ಕಡೆ ಈ ಕಡೆ ಎಲ್ಲಾ ನೋಡ್ತಾ... "ಪುಟ್ಟೀ.... ಅಮ್ಮೂ..." ಅಂತ ಕೂಗಿದ. ಎಲ್ಲೂ ಮಗುನಿನ ಸ್ವರವೂ, ಸುಳಿಹೂ ಎರಡೂ ಇಲ್ಲ. ಪುಟ್ಟನಿಗೆ ಅಳುವೇ ಬಂದು ಬಿಡ್ತು... ಆತಂಕದಿಂದ "ಪುಟ್ಟಕ್ಕಾ... ಚಿನ್ನೂ..." ಅಂತ ಕೂಗ್ತಾ ಆ ಗುಂಪಿನಿಂದ ಹೊರ ಬಂದು ನಿಧಾನವಾಗಿ ಎಲ್ಲ ಕಡೆ ನೋಡುತ್ತಾ ನಿಂತ. ಪುಟ್ಟಿಯು ಎಲ್ಲೂ ಕಾಣದಿರಲು ನಮ್ಮ ಪುಟ್ಟ ನಿಜಕ್ಕೂ ಕಂಗಾಲಾಗಿಬಿಟ್ಟ. ಅಳುತ್ತಾ ಅಳುತ್ತಾ ಪುಟ್ಟ.. ಮತ್ತೆ ಮತ್ತೆ "ಅಮ್ಮೂ... ಎಲ್ಲಿದೀಯ ಚಿನ್ನಮ್ಮಾ..." ಅಂತ ಜೋರು ಜೋರಾಗಿ ಕೂಗುತ್ತಾ ಎಲ್ಲಾ ಕಡೆ ಒಂದೇ ಸಮ ಓಡಲಾರಂಭಿಸಿದ...

ಬಣ್ಣದ ಟೇಪು, ಬಳೆ ಕಂಡು ಆಸೆಯಿಂದ ಬಂದು, ಕಣ್ಣರಳಿಸಿ ತನ್ನದೇ ಬಣ್ಣದ ಲೋಕದಲ್ಲಿ ವಿಹರಿಸುತ್ತಾ ನಿಂತಿದ್ದ ಪುಟ್ಟಿಯನ್ನು ಜನರು ತಳ್ಳಿ ಬಿಟ್ಟರು. ಅಪಾರ ಜನಸಂದಣಿಯಲ್ಲಿ ಇದ್ದಕ್ಕಿದ್ದಂತೆ ತಳ್ಳಿದ್ದರಿಂದ, ಆಯ ತಪ್ಪಿ ಪುಟ್ಟಿ ಬಿದ್ದು.. ಮಂಡಿ ತರಚಿಕೊಂಡಿತು. ಎರಡೂ ಕೈಗಳೂ, ಹಾಕಿದ್ದ ತಿಳಿ ಗುಲಾಬಿ ಬಣ್ಣದ ಲಂಗವೂ ಧೂಳಾಗಿ ಬಿಟ್ಟಿತು. ಎಲ್ಲಿ ನೋಡಿದರೂ ಬರಿಯ ಜನರೇ ಕಾಣುತ್ತಿದ್ದು ಅಣ್ಣನ ಕಾಣದೆ ಪುಟ್ಟಿಗೆ ಹೆದರಿಕೆಯಿಂದ, ಬಿದ್ದ ನೋವಿನಿಂದ... ಅಳು ಬಂತು. ತಾನು ಅಣ್ಣನ ಕೈ ಬಿಟ್ಟು, ಒಬ್ಬಳೇ ಬಂದೆನೆಂಬ ಭಯಕ್ಕೆ "ಅಣ್ಣಾ.....".... "ಅಮ್ಮಾ...." ಎಂದು ಹೋ ಎಂದು ಅರಚುತ್ತಾ, ತಾಳ - ಲಯ ಯಾವುದೂ ಇಲ್ಲದ, ಪುಟ್ಟಿಯದೇ ಸ್ವಂತದ ಹೊಸ ರಾಗವೊಂದರ ಉದಯವಾಗಿ... ಅದು ನಿಮಿಷ ನಿಮಿಷಕ್ಕೂ ತಾರಕಕ್ಕೇರುತ್ತಿತ್ತು...

ಈ ಕಡೆ ಕಂಗಾಲಾಗಿದ್ದ ಪುಟ್ಟನೂ... "ಅಮ್ಮೂ... " ಎಂದು ಕೂಗುತ್ತಾ, ಅಳುತ್ತಾ, ಹುಡುಕುತ್ತಾ ಬರುತ್ತಿದ್ದವನು, ಒಮ್ಮೆಲೇ ಈ ತಾರಕ ಸ್ವರಾಲಾಪನೆ ಕೇಳಿಸಿಕೊಂಡು... ಆ ಕಡೆಗೆ ಹುಡುಕಿಕೊಂಡು ಓಡಿ ಬಂದ. ಅಲ್ಲಿ ಮೈಯೆಲ್ಲಾ ಧೂಳು ಮೆತ್ತಿಕೊಂಡು, ಕಣ್ಣು, ಮೂಗಿನಲ್ಲೆಲ್ಲಾ ನೀರು ಧಾರಕಾರವಾಗಿ ಸುರಿಸಿಕೊಂಡು, ಹೋ ಎಂದು ಅರಚುತ್ತಿದ್ದ ಮಗುವನ್ನು ಕಂಡು ಪುಟ್ಟನಿಗೆ ಅಳುವಿನಲ್ಲೂ ನಗು, ನೆಮ್ಮದಿ, ಸಂತೋಷ... ಎಲ್ಲವೂ ಒಟ್ಟೊಟ್ಟಿಗೇ ಆಯ್ತು. ಅವನ ಅಳು ಮರೆತುಹೋಗಿ, "ಅಯ್ಯೂ ಪುಟ್ಟೀ.... ನನ್ನ ಚಿನ್ನೂ..." "ನೀ ಇಲ್ಲೀವರೆಗೆ ಹ್ಯಾಗೆ ಬಂದ್ಯೋ ಮುದ್ದೂ"... "ನೀ ಕಾಣದೆ ನಂಗೆಷ್ಟು ಭಯ ಆಗಿ ಬಿಟ್ಟಿತ್ತು".... ಕಂದಾ... ಅಂತ ಬಡಬಡಿಸುತ್ತಾ ಓಡೋಡಿ ಬಂದ.... ಅಣ್ಣನನ್ನು ಕಾಣುತ್ತಲೇ ಪುಟ್ಟಿಗೂ ಅಳು ಮರೆತು ಹೋಗಿ, "ಅಣ್ಣಾ..." ಅಂತ ಓಡೋಡಿ ಬಂತು. ಪುಟ್ಟ ಹತ್ತಿರ ಓಡಿ ಬಂದ ಮಗುವಿನ ಕಣ್ಣೊರೆಸಿ, ಖುಷಿಯಿಂದ ಗಟ್ಟಿಯಾಗಿ ಅಪ್ಪಿಕೊಂಡ. ಪುಟ್ಟಿಯೂ ನೆಮ್ಮದಿ, ಖುಷಿಯಿಂದ ಹಿಗ್ಗಿ... ತಾನೂ ಅಣ್ಣನನ್ನು ಗಟ್ಟಿಯಾಗಿ ತಬ್ಬಿಕೊಂಡು, ಧೂಳನ್ನೆಲ್ಲಾ ಪುಟ್ಟನ ಮೈಗೆಲ್ಲಾ ಮೆತ್ತಿ... ಹಾಗೇ ಮುದ್ದು ಮಾಡಿತು.

ಅತ್ತೂ ಅತ್ತೂ ಸುಸ್ತಾಗಿ ಬಿಟ್ಟಿದೀಯಲ್ಲ ಕಂದಮ್ಮಾ.. "ಬಾ ಇಲ್ಲಿ ಕೂತ್ಕೊಳಣ ಸ್ವಲ್ಪ ಹೊತ್ತು" ಅಂತ ಪುಟ್ಟ ಪಕ್ಕದ ಅಂಗಡಿಯ ಕಟ್ಟೆ ಮೇಲೆ ಕುಳಿತುಕೊಂಡಿತು. ಅಣ್ಣ ಕೂತಿದ್ದು ಕಂಡೊಡನೆ, ಪುಟ್ಟಕ್ಕ ಸಂತಸದಿಂದ, ಅಣ್ಣನ ಮಡಿಲಲ್ಲಿ ತಲೆ ಇಟ್ಟು, ಬೆಚ್ಚಗೆ ನಿದ್ದೆ ಮಾಡಿ ಬಿಟ್ಟಿತು... ಸುಸ್ತಾಗಿ ನಿದ್ದೆ ಮಾಡುತ್ತಿದ್ದ ಮಗುವನ್ನೇ ಅಕ್ಕರೆಯಿಂದ ನೋಡುತ್ತಾ, ತಲೆ ಸವರುತ್ತಾ, ಕುಳಿತು ಬಿಟ್ಟ ಪುಟ್ಟ.... ಹಾಗೇ ಒಂದು ಸಣ್ಣ ನಿದ್ದೆ ಮಾಡಿ ಎದ್ದ ಪುಟ್ಟಿ, ಖುಷಿಯಿಂದ ಹೀ ಎಂದು ಹಲ್ಲು ಕಿರಿದಾಗ, ಪುಟ್ಟ... "ಅಮ್ಮೂ ಎಲ್ಲಿ ಅಬ್ಬು ಆಯ್ತು ತೋರಿಚು ಕಂದಾ..." "ಛೂ ಮಂತ್ರ ಹಾಕ್ತೀನಿ... ಮನೇಗೋಗೋಷ್ಟರಲ್ಲಿ ಎಲ್ಲಾ ಮಾಯ ಆಗ್ಬಿಡತ್ತೆ" ಅಂದಾಗ, ಪುಟ್ಟಿ ಮತ್ತೆ ಊಂ.. ಎಂದು ರಾಗ ಹಾಡುತ್ತಾ, ಒಂದೊಂದೇ ಗಾಯಗಳನ್ನು ತೋರಿಸಿತು.

"ಉಫ್ಫಿ.." ಎನ್ನುತ್ತಾ... "ಛೂ ಮಂತ್ರಕಾಳಿ...ನನ್ನಮ್ಮು ನೋವೆಲ್ಲಾ ಹೋಗ್ಬಿಡಲಿ.." ಅಂತ ಪುಟ್ಟ ಮುದ್ದು ಮುದ್ದಾಗಿ ಮಂತ್ರ ಹಾಕುವುದನ್ನೇ... ಬಿಟ್ಟ ಕಣ್ಣುಗಳಿಂದ ನೋಡುತ್ತಾ ಕೂತಿತ್ತು ಪುಟ್ಟಿ. ಮೆಲ್ಲಗೆ ನೋವಾದ ಜಾಗವನ್ನೆಲ್ಲಾ ಕೈಯಿಂದ ಸವರುತ್ತಾ ಪುಟ್ಟ... "ಅಮ್ಮೂ... ನೀ ಯಾಕೆ ಕಂದ ನನ್ನ ಕೈ ಬಿಡಿಸ್ಕೊಂಡು ಒಬ್ಬಳೇ ಬಂದಿ... ಹಾಗೆಲ್ಲಾ ಬರಬಾರದು ಅಲ್ವಾಮ್ಮಾ.." ಎಂದು ಕೇಳಿದಾಗ, ಪುಟ್ಟಿ "ಹೂಂ... ಅಣ್ಣಾ ನಂಗೆ ಹೆದ್ರಿಕೆ ಆಯ್ತು... ಊಂ..." ಎಂದು ಮತ್ತೆ ಬಿಕ್ಕಳಿಸಿತು. ಪುಟ್ಟ "ಸಾಕು ಚಿನ್ನೂ... ಇನ್ನು ಅಳಬಾರದಮ್ಮಾ.. ನಾ ಸಿಕ್ಕಿ ಬಿಟ್ಟೆ ಅಲ್ವಾ ಈಗ.." "ಬಾ ಹೋಗೋಣ.." ಎಂದು ಎದ್ದ. ಪುಟ್ಟ ಮಂತ್ರ ಹಾಕಿದ್ದಕ್ಕೆ ತನ್ನ ನೋವೆಲ್ಲಾ ಮರೆತು ಪುಟ್ಟಿ ಹೀ ಎಂದು ಖುಷಿಯಿಂದ ನಗುತ್ತಾ ಪುಟ್ಟನ ಕೈಹಿಡಿದು ಹೊರಟಿತು. ಇಬ್ಬರೂ ದೇವಸ್ಥಾನಕ್ಕೆ ಹೋಗಿ ಗ್ರಾಮ ದೇವತೆ ಹಳದಮ್ಮನ ದರ್ಶನ ಪಡೆದರು. ಅಣ್ಣ ಮಾಡಿದಂತೇ ತಾನೂ ಕೈ ಮುಗಿದು, ನಮಸ್ಕಾರ ಮಾಡಿ, ಮಂಗಳಾರತಿ ತಗೊಂಡು ಪುಟ್ಟನ ಅಂಗಿ ಹಿಡ್ಕೊಂಡೇ ನಿಂತಿತ್ತು ಪುಟ್ಟಿ. ಪುಟ್ಟ, ದೇವಿಯನ್ನು ಬೇಡಿಕೊಂಡು, ಕುಂಕುಮ ತೆಗೆದು ಪುಟ್ಟಿಯ ಹಣೆಗೆ ಹಚ್ಚಿದ. ಮಧ್ಯೆ ಮಧ್ಯೆ, ಇನ್ನೂ ಬಿಕ್ಕುತ್ತಿದ್ದ ಮಗುವನ್ನು ಕಂಡು ಪುಟ್ಟನಿಗೆ ತುಂಬಾ ಬೇಜಾರಾಗಿತ್ತು..

ಪುಟ್ಟ "ಚಿನ್ನೂ ಬಾಮ್ಮ... ನಾ ನಿಂಗೆ ಟೇಪು, ಬಳೆ ಎಲ್ಲಾ ಕೊಡಿಸ್ತೀನಿ... ಅಮ್ಮ ದುಡ್ಡು ಕೊಟ್ಟಿದ್ದಾರೆ ಪುಟ್ಟೀ..." ಎಂದು ಪುಟ್ಟಿಯನ್ನು ಅಂಗಡಿಗೆ ಕರೆದುಕೊಂಡು ಹೋಗಿ, ಅದು ತೋರಿಸಿದ ಬಣ್ಣದ ಟೇಪು, ಬಳೆ, ಕೊಡಿಸಿದ. ಬಣ್ಣದ ಟೇಪು, ಬಳೆ ಕೊಂಡು ಆಚೆ ಬಂದ ಮಗೂ... "ಅಣ್ಣಾ... ಅಂತ ಬೆಂಡು ಬತ್ತಾಸು ಮಾರುತ್ತಿದ್ದ ಅಂಗಡಿ ಮುಂದೆ ನಿಂತು ಬಿಟ್ಟಿತ್ತು ಪುಟ್ಟಿ. ಪುಟ್ಟ ನಗುತ್ತಾ... ಬೆಂಡು ಬತ್ತಾಸು ಎಲ್ಲಾ ಕೊಡಿಸಿದ. ಪುಟ್ಟಿ ತನ್ನ ನೋವೆಲ್ಲಾ ಮರೆತು, ಹಿಗ್ಗಿನಿಂದ ಬೆಂಡು ಬತ್ತಾಸು ತಿನ್ನುತ್ತಾ... "ಅಣ್ಣಾ... ಮನೆಗೋಗನ" ಅಂತು. ಪುಟ್ಟ ಪಾಪ ಅಮ್ಮ ಕೊಟ್ಟಿದ್ದ ದುಡ್ಡೆಲ್ಲಾ ಪುಟ್ಟಿಗೇ ಖರ್ಚು ಮಾಡಿ, ಮಗುವಿನ ಮುಖದಲ್ಲಿ ನಗುವರಳಿಸಿ, ತನಗೇನೂ ಕೊಳ್ಳದೆ, ಮಗುವಿನ ಹಿಗ್ಗಿನಲ್ಲಿ ತಾನೂ ಭಾಗಿಯಾಗುತ್ತಾ... " ಹೂಂ ಚಿನ್ನೂ... ಕತ್ತಲಾದ್ರೆ ಅಮ್ಮ ಹೆದರ್ಕೋತಾರೆ ಅಲ್ವಾಮ್ಮಾ..." "ಬಾ ಪುಟ್ಟೀ ಮನೆಗೆ ಹೋಗಿ ಬಿಡೋಣ" ಎಂದ.

ಪುಟ್ಟಿಯ ಕೈಯನ್ನು ಭದ್ರವಾಗಿ ಹಿಡಿದುಕೊಂಡು, " ಅಮ್ಮೂ ನೀ ಇನ್ಮೇಲೆ ಯಾವತ್ತೂ ನನ್ನ ಕೈ ಬಿಟ್ಟು ಹೋಗ್ಬಾರ್ದು... ಗೊತ್ತಾಯ್ತಾ ಅಮ್ಮೂ.." "ಚಿನ್ನೂ... ಆ ತೂಗು ತೊಟ್ಟಿಲು ಎಷ್ಟು ಚೆನ್ನಾಗಿತ್ತು ಗೊತ್ತೇನೋ..." ಎಂದೆಲ್ಲಾ ಮಾತಾಡುತ್ತಾ ಬರುತ್ತಿದ್ದರೆ, ಪುಟ್ಟಿ ಬೆಂಡು, ಬತ್ತಾಸು ನೆಕ್ಕುತ್ತಾ... ಹೂಂ..ಹೂಂ.. ಎನ್ನುತ್ತಾ... ಮಧ್ಯೆ ಮಧ್ಯೆ ಅಣ್ಣನ ಮುಖ ನೋಡಿ ಮುದ್ದಾಗಿ ನಗುತ್ತಾ ಬರುತ್ತಿತ್ತು. ಅದು ತನ್ನದೇ ಲೋಕದಲ್ಲಿ, ಹೊಸ ಟೇಪು, ಬಳೆಗಳೊಡನೆ ವಿಹರಿಸುತ್ತಿತ್ತು. ಮನೆ ಹತ್ತಿರ ಬಂದೊಡನೆ, ಹೊರಗೇ ಕಾಯುತ್ತಾ ನಿಂತಿದ್ದ ಅಮ್ಮನನ್ನು ಕಂಡು ಪುಟ್ಟಿ, ಅವಸರದಲ್ಲಿ ಅಣ್ಣನ ಕೈ ಬಿಟ್ಟು... "ಅಮ್ಮಾ... ನೋಡು ಹೊಸ ಟೇಪು..." ಅಂತ ಓಡೋಯ್ತು... ಅದರ ಸಂಭ್ರಮ ನೋಡುತ್ತಾ ಪುಟ್ಟ ಮೈ ಮರೆತು ನಿಂತಿದ್ದ.

ಅಂತೂ ನಮ್ಮ ಪುಟ್ಟ-ಪುಟ್ಟಿಯ ತೇರು ಜಾತ್ರೆಯಲ್ಲಿ ಮೆರವಣಿಗೆ ಮಾಡಿಕೊಂಡು, ಜೋಪಾನವಾಗಿ ಮನೆ ತಲುಪಿತ್ತು.


ಚಿತ್ರಕೃಪೆ : ಅಂತರ್ಜಾಲ

8 comments:

  1. ಮಗ್ಧ ಮಕ್ಕಳ ಬಾಂಧವ್ಯವನ್ನು ಸೊಗಸಾಗಿ ಚಿತ್ರಿಸಿರುವಿರಿ. ನನ್ನ ಮನಸ್ಸೂ ಒಂದು ಗಳಿಗೆ ನನ್ನ ಬಾಲ್ಯಕಾಲಕ್ಕೆ ಹೋಗಿ, ನನ್ನ ತಮ್ಮಂದಿರ ಜೊತೆಯಾಟವನ್ನು ನೆನೆಸಿಕೊಂಡಿತು. ನಿಮಗೆ ಧನ್ಯವಾದಗಳು.

    ReplyDelete
  2. ಸುನಾಥರು ಹೇಳಿದ್ದನ್ನೇ ನಾನೂ ಹೇಳಬಯಸುತ್ತೇನೆ, ಮಕ್ಕಳು ಎಲ್ಲಿದ್ದರೂ ಸುಂದರ,ಗಾರೆ/ಕೂಲಿ ಕೆಲಸದವರ ಪಾಪದ ಮಕ್ಕಳು ಒಂದೆ ಒಂದು ಚಾಕಲೇಟ್ ಬಯಸಿ ಅಂಗಡಿಯ ಮುಂದೆ ನಿಂತಾಗ ಬಹಳ ಬೇಸರವಾಗುತ್ತದೆ, ದುಃಖವಾಗುತ್ತದೆ, ಈ ಸಂಬಂಧ ಬರೆಯಲಿದ್ದೇನೆ, ನಮಸ್ಕಾರ

    ReplyDelete
  3. Muddada baraha akka... Muddumuddaaaada PutaNigaLa photos...... chennagide.

    ReplyDelete
  4. ಮೇಡಮ್,

    ಮುಗ್ದ ಮಕ್ಕಳ ಆಟಪಾಠ ಇತ್ಯಾದಿಗಳನ್ನು ನೋಡಲು ತುಂಬಾ ಖುಷಿಯಾಗುತ್ತದೆ. ನಿಮ್ಮ ಲೇಖನವನ್ನು ನನಗೂ ಬಾಲ್ಯದ ಜಾತ್ರೆಯ ನೆನಪಾಯಿತು..

    ReplyDelete
  5. ಕಾಕಾ..
    ಕಥೆ ಹಾಕಿದ ತಕ್ಷಣವೇ ನೀವು ಪ್ರತಿಕ್ರಿಯಿಸಿದ್ದಿರಿ. ನನ್ನ ಪುಟ್ಟ-ಪುಟ್ಟಿಯ ಕಥೆ ನಿಮಗೆ ನಿಮ್ಮ ಬಾಲ್ಯದ ದಿನಗಳನ್ನು ನೆನಪಿಸಿತು ಎಂದ ನಿಮ್ಮ ಮಾತು ನನಗೆ ತುಂಬಾ ಸಂತೋಷ ಕೊಟ್ಟಿತು. ಧನ್ಯವಾದಗಳು ಕಾಕಾ. ನಿಜಕ್ಕೂ ಅಣ್ಣ-ತಂಗಿಯ ಸಂಬಂಧವೇ ಅತಿ ಮಧುರವಾದ, ಕಲ್ಪನೆಗೆ ನಿಲುಕದ, ಮೃದು ಭಾವದ ಅತ್ಯಂತ ಪವಿತ್ರ ಸಂಬಂಧ. ನನಗೆ ಇದು ಮತ್ತು ತಾಯಿ-ಮಗುವಿನ ಸಂಬಂಧ ಎರಡರ ಮೇಲೂ ಎಷ್ಟು ಓದಿದರೂ, ಬರೆದರೂ ಇನ್ನೂ ಹೆಚ್ಚೆಚ್ಚು... ನನ್ನ ಭಾವನೆಗಳನ್ನು ತೋರ್ಪಡಿಸಬೇಕೆನ್ನಿಸುತ್ತದೆ...

    ReplyDelete
  6. ಭಟ್ ಸಾರ್...
    ನಿಜ ಮಕ್ಕಳು ಎಲ್ಲಿದ್ದರೂ ಚೆಂದ. ಕಾಕಾ ರ ಮಾತುಗಳನ್ನು ಅನುಮೋದಿಸಿ, ಬರಹ ಮೆಚ್ಚಿದ ನಿಮಗೆ ನನ್ನ ಧನ್ಯವಾದಗಳು.

    ತಂಗೀ ತೇಜಸ್ವಿನೀ...
    ಬರಹ ಮುದ್ದಾಗಿದೆ ಎಂದಿದ್ದೀರಿ. ಈ ಒಂದು ಸಂಬಂಧವೇ ಹಾಗೆ ಅಲ್ವಾಮ್ಮಾ? ಜೀವನದುದ್ದಕ್ಕೂ ಮುದ್ದಾಗಿಯೇ ಇರುವಂತಹುದು. ಬರಹದ ಜೊತೆಗೆ ಚಿತ್ರಗಳನ್ನೂ ಮೆಚ್ಚಿದ್ದೀರಿ. ಧನ್ಯವಾದಗಳು. ನಾನು ಚಿತ್ರ ಹುಡುಕುತ್ತಿದ್ದಾಗ.. ಈ ಚಿತ್ರ ನನ್ನನ್ನು ತುಂಬಾ ಅಂದರೆ ತುಂಬಾ ಸೆಳೆಯಿತು. ಈಗಲೂ ಸೆಳೆಯುತ್ತಲೇ ಇದೆ. ಆ ಪುಟ್ಟಿಯ ಮುಖದಲ್ಲಿನ ಭಾವ.. ಅದೆಷ್ಟು ಸುಂದರವಾಗಿದೆ ಅಲ್ವಾ? ವರ್ಣಿಸಲಸಾಧ್ಯವಾಗಿದೆ.. ನನ್ನ ಕಥೆಯಲ್ಲಿನ ಪುಟ್ಟಿಯ ಪಾತ್ರಕ್ಕೆ ಆ ಮಗು ಹಾಗೂ ಪುಟ್ಟನ ಪಾತ್ರಕ್ಕೆ ಆ ಮುದ್ದಾದ ಹುಡುಗ.. ತುಂಬಾ ಹೊಂದಾಣಿಕೆಯಾಗಿದೆ. :-)

    ಶಿವು ಸಾರ್...
    ನನ್ನ ಬರಹದಿಂದ ನಿಮಗೂ ನಿಮ್ಮ ಬಾಲ್ಯದಲ್ಲಿ ಭಾಗವಹಿಸಿದ ಜಾತ್ರೆಯ ನೆನಪಾದದ್ದು ನನಗೆ ತುಂಬಾ ಖುಷಿ ತಂದಿದೆ. ಧನ್ಯವಾದಗಳು..

    ReplyDelete
  7. ಶ್ಯಾಮಲಾಜೀ,

    ನನಗೆ ಜನಗಣತಿ ಕೆಲಸವಿದ್ದುದರಿಂದ ವಿ-ಅಂಚೆ, ಬ್ಲಾಗ್‌ ಬರಹಗಳಿಗೆ ಪ್ರತಿಕ್ರಿಯೆ ನೀಡಲು ತಡವಾಗುತ್ತಿತ್ತು. ಈವತ್ತು ನಿಮ್ಮ ಈ ಪುಟ್ಟ ಕಥೆ ಓದಿದೆ.

    ಪುಟ್ಟ-ಪುಟ್ಟಿಯ ಜಾತ್ರೆಯ.... ಚೆನ್ನಾಗಿದೆ. ಕಥೆಯು ಇನ್ನೇನೋ ತಿರುವು ಪಡೆಯುತ್ತದೆ ತಂಗಿಯು ಕಾಣದಿದ್ದಾಗ ಎನಿಸಿತ್ತು. ಆದರೆ... ಮತ್ತೊಬ್ಬರ ಸಂತಸದಲ್ಲಿಯೇ ನಮ್ಮ ಸಂತೋಷ ಕಾಣುವುದು ಎಂದರೆ ಇದೇ ಅಲ್ಲವೇ?

    ಧನ್ಯವಾದಗಳು.

    ಚಂದ್ರು

    ReplyDelete
  8. ಚಂದ್ರೂ...
    ಬೇರೇನೆ ತಿರುವು ಕೊಟ್ಟಿದ್ದರೆ... ಅದು ಮಾಮೂಲು ಮಸಾಲೆ ಕಥೆಯಾಗಿ ಬಿಡುತ್ತಿತ್ತೇನೋ... ನನಗೆ ಇಲ್ಲಿ ಆ ಮುಗ್ಧ ಮಕ್ಕಳ ನಿಷ್ಕಳಂಕ ಪ್ರೇಮವನ್ನು ತೋರಿಸುವುದು ಮುಖ್ಯವಾಗಿತ್ತು. ಅಣ್ಣ-ತಂಗಿಯ ಅಕ್ಕರೆಯ ಧಾರೆಯನ್ನು ಚಿತ್ರಿಸಬೇಕಿತ್ತು.... ಹಾಗಾಗಿ ನಾನು ಅದನ್ನು ಮಕ್ಕಳ ಮುಗ್ಧ ವಿಚಾರಕ್ಕೆ ಸೀಮಿತ ಮಾಡಿದೆ.... ಮೆಚ್ಚಿದ್ದಕ್ಕೆ ಧನ್ಯವಾದಗಳು ಚಂದ್ರೂ... ನಿಜ ಅಣ್ಣನೆಂದರೆ ಹಾಗೆ ಅಲ್ಲವೇ...? ಅಣ್ಣನು ಕೂಡ ಅಮ್ಮಾನೇ... ತಮ್ಮಾ...

    ReplyDelete