Showing posts with label ಮೋಕ್ಷಸಾರ. Show all posts
Showing posts with label ಮೋಕ್ಷಸಾರ. Show all posts

Friday, July 8, 2011

ದೇಹ ದೇವಾಲಯ - ೩


ದೇಹ ದೇವಾಲಯವಾಗಿಸಬೇಕೆಂಬ ವಿಚಾರ ಚಿಂತಿಸಿದಷ್ಟೂ ಆಳವಾಗುತ್ತಾ ಹೋಗುವ ಅತ್ಯಂತ ಗಹನವಾದ ವಿಷಯವಾಗಿದೆ. ನಮ್ಮ ವೇದ, ಶಾಸ್ತ್ರ, ಪುರಾಣ, ನಮ್ಮ ಆಚಾರ್ಯರುಗಳು, ದಾಸರುಗಳು, ಶಿವಶರಣ-ಶರಣೆಯರು ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಅದನ್ನೇ ಹೇಳುತ್ತಾ ಬಂದಿದ್ದರೂ, ಎಷ್ಟೆಷ್ಟು ಸರಳವಾಗಿ ಸಾಧ್ಯವೋ ಅಷ್ಟು ಹೇಳಿದ್ದರೂ ಕೂಡ, ನಾವು ಈ ಪ್ರಪಂಚಕ್ಕೆ ಬಂದಾಗಿನಿಂದಲೂ ಹೋಗುವ ತನಕವೂ ಆಂತರಿಕ ಬೆಳವಣಿಗೆಗಾಗಿಯೇ ಭಗವಂತ ನಮಗೆ ಕರುಣಿಸಿರುವ ಇಷ್ಟು ಚಂದದ, ಉತ್ಕೃಷ್ಟವಾದ ದೇಹವನ್ನು ಸದುಪಯೋಗ ಮಾಡಿಕೊಳ್ಳದೇ, ಬರಿಯ ವಿಷಯಾಂಕಾಂಕ್ಷಿಗಳಾಗಿ ಬೇಡದ ವ್ಯರ್ಥ ಬದುಕು ಬದುಕುತ್ತೇವೆ. ಕೊನೆಗೊಮ್ಮೆ ನಮ್ಮ ದೇಹದಲ್ಲಿ ಎಲ್ಲಾ ಶಕ್ತಿಗಳೂ ಕುಂದಿಹೋದಾಗ, ಪರಮಾತ್ಮನ ನೆನೆಯುವ ಪ್ರಯತ್ನ ಮಾಡತೊಡಗುತ್ತೇವೆ. ಕೆಲವರು ಆಗಲೂ ಕೂಡ ಮಾಡದೆ, ಎಲ್ಲವೂ ತಮ್ಮಿಂದಲೇ ಸಾಧ್ಯವಾಯಿತು, ತಾವೇ ಗಳಿಸಿದೆವೆಂದು ಚಿಂತಿಸುತ್ತಾ, ಹಿಂದೆ ತಿರುತಿರುಗಿ ಬಾಳಿದ ಬರಿಯ ಬರಡು ಬದುಕನ್ನೇ ಶ್ರೇಷ್ಠವಾಗಿ ಬದುಕಿದೆವೆಂದುಕೊಂಡು ನೋಡುತ್ತಾ, ತಾವು ಗಳಿಸಿದ ಆಸ್ತಿ, ನಗ-ನಾಣ್ಯ, ಮಕ್ಕಳು, ಮೊಮ್ಮಕ್ಕಳು... ಹೀಗೇ ಇದೇ ವಿಷಯ, ವಾಸನೆಗಳ ಸುತ್ತಲೇ ಗಿರಿಗಿಟ್ಟೆ ತಿರುಗುತ್ತಾ, ಕೈಯಿಂದ ಜಾರಿಹೋದ ಸಮಯದ ಬಗ್ಗೆ, ತಾವು ಭಗವಂತನ ಧ್ಯಾನ ಮಾಡದೆ ವ್ಯರ್ಥವಾಗಿಸಿದ ಒಂದು ಜನ್ಮದ ಬಗ್ಗೆ ಚಿಂತಿಸದೆಯೇ ಹೊರಟೇ ಹೋಗುತ್ತಾರೆ. ಆದರೆ ನಾವು ಯಾವಾಗ ಈ ವಿಷಯಾಸಕ್ತಿಗಳ ಪರಿಧಿಯಿಂದ ಒಂದು ಹೆಜ್ಜೆ ಮುಂದೆ ಹೋಗಿ ನೋಡುತ್ತೇವೆಯೋ ಆಗ ನಮ್ಮ ಈ ದೇಹವೆಂಬ ಆಸ್ತಿಯನ್ನು ಭಗವಂತ ನಮಗೆ ಅದೆಷ್ಟು ಕರುಣೆಯಿಂದ, ಅವನ ಪೂಜೆಗಾಗಿ, ಆರಾಧನೆಗಾಗಿ, ನಮ್ಮ ಆತ್ಮೋನ್ನತಿಗಾಗಿ ಉಪಯೋಗಿಸಲೆಂದು ಕೊಟ್ಟಿದ್ದಾನೆಂಬ ಸತ್ಯದ ಅರಿವಾಗುತ್ತದೆ.

ಕೈವಾರ ತಾತಯ್ಯನವರು ಕೂಡ ತಮ್ಮ ನಾದಬ್ರಹ್ಮಾನಂದ ನಾರೇಯಣ ಕವಿ ಶತಕದಲ್ಲಿ ನಮಗೆ ದೇಹದ ಸದುಪಯೋಗದ ಬಗ್ಗೆ ಅತ್ಯಂತ ಕಾಳಜಿಯಿಂದ ವಿವರಿಸುತ್ತಾರೆ. ನಮಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ. ಅವರು ಯೋಗಶಾಸ್ತ್ರಕ್ಕೆ ಅತ್ಯಂತ ಪ್ರಾಮುಖ್ಯತೆ ಕೊಡುತ್ತಾ, ನಮ್ಮ ದೇಹದಲ್ಲಿರುವ ಆರು ಚಕ್ರಗಳು, ಮೂರು ನಾಡಿಗಳು, ನಮ್ಮ ಉಚ್ಛ್ವಾಸ-ನಿಚ್ಛ್ವಾಸಗಳು, ಆಸನಗಳು, ಧ್ಯಾನ ಮುಂತಾದ ಹಲವಾರು ಪ್ರಕ್ರಿಯೆಗಳ ಮೂಲಕ ಭಗವಂತನ ಸಾಕ್ಷಾತ್ಕಾರ ಪಡೆಯಲು ನಮ್ಮ ದೇಹವನ್ನು ಸಾಧನವನ್ನಾಗಿ ಮಾಡಿಕೊಳ್ಳಬೇಕೆಂಬ ಮಾತನ್ನು ತಿಳಿಸುತ್ತಾರೆ. ತಾತಯ್ಯನವರ ಶತಕಗಳನ್ನು ಬಹಳ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹೀಗೆ ಶ್ರೀ ಕೈಪು ಲಕ್ಷ್ಮೀ ನರಸಿಂಹಶಾಸ್ತ್ರೀಗಳು ನಮಗೆ ವಿವರಿಸುತ್ತಾರೆ:

ದೇಹಮು ದೇವಳಮಾಯೆನು

ಜೀವುಡು ಬ್ರಹ್ಮಸ್ವರೂಪ ದೇವುಂಡಾಯೆನ್ |

ಅನುದಿನಮು ಆತ್ಮರಾಮುನಿ

ಮಂದಿರಮುನ ಚೇರಿ ಸೇತು ಮಾನಸ ಪೂಜ || ಅಂದರೆ ದೇಹವೇ ದೇವಾಲಯವು. ನಮ್ಮ ಹೃದಯದಲ್ಲಿಯೇ ನೆಲೆಸಿರುವ ಆತ್ಮರಾಮನಿಗೆ ನಾವು ಕ್ಷಣ ಕ್ಷಣವೂ, ಅನುದಿನವೂ ಮಾನಸ ಪೂಜೆಯನ್ನು ಸಲ್ಲಿಸುತ್ತಲೇ ಇರಬೇಕು. ಶ್ರೀ ಯೋಗಿನಾರೇಯಣ ತಾತಯ್ಯನವರು ಸಿದ್ಧಿಯೋಗಿಗಳು. ಅವರು ಸಮಸ್ತ ಇಂದ್ರಿಯಗಳು, ಮನಸ್ಸು, ಎಲ್ಲವನ್ನೂ ಭಗವಂತನ ಪಾದಾರವಿಂದಕ್ಕೆ ಸಮರ್ಪಿಸಿಬಿಟ್ಟವರು. ಪರಮಾತ್ಮನ ಧ್ಯಾನವನ್ನೇ ಮಂತ್ರವನ್ನಾಗಿಸಿಕೊಂಡವರು, ಮತ್ತು ತಮ್ಮ ಈ ಮಾನಸಿಕ ಪೂಜೆಯಿಂದ ಅವರು ನಿರೀಕ್ಷಿಸಿದ್ದ ಫಲವೆಂದರೆ ಬ್ರಹ್ಮಾನಂದ ಪ್ರಾಪ್ತಿಯನ್ನು ಪಡೆದವರು. ದೇಹ ದೇವಾಲಯವಾದಾಗ ಬಾಹ್ಯ ಪ್ರಪಂಚದ ವಿಷಯಾಸಕ್ತಿಗಳನ್ನು ನಾವು ತ್ಯಾಗ ಮಾಡಿದರೆ ಅದುವೇ ಅಜ್ಞಾನದ ನಿರ್ಮಾಲ್ಯ ತ್ಯಾಗವಾಗುತ್ತದೆ. ನಮ್ಮ ಹೃದಯ ಕಮಲದಲ್ಲೇ ನೆಲೆಸಿರುವ, ನಮ್ಮ ಕಣ ಕಣದಲ್ಲೂ ಅಣೋರಣೀಯನಾಗಿರುವ, ಪರಮಾತ್ಮನನ್ನು ಮಾನಸ ಪೂಜೆಯಿಂದ ಸಂತುಷ್ಟಗೊಳಿಸಿ, ಸಾಕ್ಷಾತ್ಕಾರ ಮಾಡಿಕೊಳ್ಳಬೇಕು.

ತಲಕಾಯಂತ ಕೊಂಡ - ಯಾವದಿ ಲೇದು |

ಕೊಂಡಲೋ ವುನ್ನದಿ - ಕೋಟಿ ಧನಮು |

ವೆಳ್ಳ ತೀಸಿನವಾಡು ಯೆವ್ವರು ಲೇರುರಾ |

ನಾದಬ್ರಹ್ಮಾನಂದ - ನಾರೇಯಣ ಕವಿ ||

ದೇಹವೆಂಬ ದೇಗುಲಕ್ಕೆ ಶಿಖರವಾಗಿರುವ ತಲೆಗೆ ಸಮಾನವಾದ ಬೇರೆ ಯಾವುದೇ ಬೆಟ್ಟವಿಲ್ಲ. ಈ ತಲೆಯೆಂಬ ಶಿಖರದಲ್ಲಿ ಕೋಟಿಗಟ್ಟಲೆ ಸಂಪತ್ತು ಇದೆ. ಇದನ್ನು ಹೊರಗೆ ತೆಗೆದವರು ಯಾರೆಂದರೆ ಯಾರೂ ಇಲ್ಲ ಎನ್ನುತ್ತಾರೆ ತಾತಯ್ಯ. ಮುಂದುವರೆಯುತ್ತಾ ತಾತಯ್ಯನವರು ದೇಹವನ್ನು ಬ್ರಹ್ಮಾಂಡಪುರವೆಂದು ಕರೆಯುತ್ತಾರೆ. ಹದಿನಾಲ್ಕು ಲೋಕಗಳುಳ್ಳ ಬ್ರಹ್ಮಾಂಡದಲ್ಲಿ ನೆಲೆಸಿರುವ ಆ ಭಗವಂತನೇ ಈ ಬ್ರಹ್ಮಾಂಡಪುರದಲ್ಲೂ (ನಮ್ಮ ದೇಹದಲ್ಲೂ) ನೆಲೆಸಿರುವವನು. ಬ್ರಹ್ಮಾಂಡವು ಹೇಗೆ ಪಂಚಭೂತಗಳಿಂದ ಕೂಡಿದೆಯೋ ಹಾಗೆ ನಮ್ಮ ದೇಹವೂ ಪಂಚಭೂತಗಳಿಂದಲೇ ಮಾಡಲ್ಪಟ್ಟಿದೆ. ಆದ್ದರಿಂದ ಬ್ರಹ್ಮಾಂಡದಲ್ಲಿರುವ ಸಮಸ್ತವೂ ನಮ್ಮ ದೇಹವಾದ ಬ್ರಹ್ಮಾಂಡಪುರದಲ್ಲೂ ಇದೆ, ನವದ್ವಾರೇ ಪುರೇ ದೇಹಿ ಎಂಬಂತೆ ತಾತಯ್ಯನವರು ದ್ವಾರಾಲು ತೊಮ್ಮಿದಿ ದೊಡ್ಡದಿ ಮಾವೂರು ಎನ್ನುತ್ತಾ ನಾವು ಶರೀರವನ್ನು ನಮ್ಮ ಹೃತ್ಕಮಲದಲ್ಲಿ ಗೋಚರವಾಗದೇ ಕುಳಿತಿರುವ ಆ ಭಗವಂತನನ್ನು ಅರಿಯುವ ಸಾಧನವಾಗಿ ಉಪಯೋಗಿಸಬೇಕು ಎಂದು ಹೇಳುತ್ತಾರೆ.

ವಿಷ್ಣು ಸಹಸ್ರನಾಮದಲ್ಲಿ ಯೋಗಿಹೃದ್ಧ್ಯಾನಗಮ್ಯಂ - ಯೋಗಿಗಳು ಧ್ಯಾನದ ಮೂಲಕ ಅರಿತುಕೊಳ್ಳಬಲ್ಲ ಭಗವಂತ ನಮ್ಮ ಹೃದಯದಲ್ಲೇ ನೆಲೆಸಿದ್ದಾನೆ ಎಂಬ ಮಾತು ಬರುತ್ತದೆ.

ನಮ್ಮ ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಕೂಡ ಇದೇ ವಿಚಾರವನ್ನು ಪ್ರಸ್ತುತ ಪಡಿಸುತ್ತಾರೆ :

ದೇಹವೆಂಬುದು ಕುದುರೆಯಾತ್ಮನದರಾರೋಹಿ |

ವಾಹನವನುಪವಾಸವಿರಿಸೆ ನಡೆದೀತೆ ? ||

ರೋಹಿ ಜಾಗ್ರತೆದಪ್ಪೆ ಯಾತ್ರೆ ಸುಖ ಸಾಗೀತೆ ? |

ಸ್ನೇಹವೆರಡಕಮುಚಿತ - ಮಂಕುತಿಮ್ಮ ||

ದೇಹವೆಂಬುದು ತಾನೇ ಕೆಲಸ ಮಾಡಲಾರದು. ನಾವು ಅದನ್ನು ಉಪಯೋಗಿಸಿಕೊಂಡು ನಮ್ಮ ಇಂದ್ರಿಯಗಳು, ಬುದ್ಧಿ ಮತ್ತು ಮನಸ್ಸಿನಿಂದ ಕೆಲಸ ಮಾಡಿಸಬೇಕು. ಇಂದ್ರಿಯಗಳು ತಮಗೊಪ್ಪಿಸಿದ ಕೆಲಸವನ್ನು ಮಾಡಿದಾಗ, ಅವು ಕಳುಹಿಸಿ ಕೊಡುವ ಎಲ್ಲಾ ವಿಚಾರಗಳನ್ನೂ ಗಮನಿಸಿ, ನಮಗೆ ಯಾವುದು ಉಪಯುಕ್ತ, ಯಾವುದು ಅನುಪಯುಕ್ತ ಎಂದು ವಿಂಗಡಿಸಿ, ಬೇಕಾದ್ದನ್ನು ಮಾತ್ರ ಬುದ್ಧಿ ತನ್ನ ಒಳಗಿನ ಪದರಗಳಲ್ಲಿ ಶೇಖರಿಸಿಟ್ಟುಕೊಳ್ಳುತ್ತದೆ. ಆದರೆ ಇಂದ್ರಿಯಗಳಿಗೆ ಭೋಗ ಲಾಲಸೆ ಹೆಚ್ಚು. ಅವುಗಳನ್ನು ನಾವು ಹತೋಟಿಯಲ್ಲಿಟ್ಟು ಕೊಂಡಾಗಷ್ಟೇ, ನಮ್ಮ ಸುಪ್ತ ಮನಸ್ಸು ಮತ್ತು ಅಂತರಾತ್ಮ ತಮಗೆ ಬೇಕಾದ ಅತಿ ಅವಶ್ಯಕವಾದ ಆಧ್ಯಾತ್ಮ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಇಲ್ಲಿ ಡಿವಿಜಿಯವರು ನಮ್ಮ ದೇಹವನ್ನು ಒಂದು ರಥಕ್ಕೆ ಹೋಲಿಸಿದ್ದಾರೆ. ಇಂದ್ರಿಯಗಳು ರಥವನ್ನೆಳೆಯುವ ಕುದುರೆಗಳು. ಮನಸ್ಸು, ಬುದ್ಧಿಗಳು ಕುದುರೆಗಳ ಹಗ್ಗವನ್ನು ಹಿಡಿದೆಳೆದು ನಡೆಸುವ ಸಾರಥಿಗಳು. ರಥವನ್ನು ಸರಿಯಾದ ಹಾದಿಯಲ್ಲಿ ನಡೆಸುತ್ತಾ, ನಾವು ನಮ್ಮ ಅಂತರಾಳದಲ್ಲಿ ಕುಳಿತಿರುವ ಚೇತನಾ ಸ್ವರೂಪನಾದ ಭಗವಂತನನ್ನು ತಿಳಿಯುವ ಪ್ರಯತ್ನ ಮಾಡಬಹುದು ಎನ್ನುತ್ತಾರೆ.

ಶ್ರೀ ಕನಕದಾಸರು ಕೂಡ ತಮ್ಮ ಒಂದು ಕೀರ್ತನೆಯಲ್ಲಿ ....

ಎಲ್ಲಿ ನೋಡಿದರಲ್ಲಿ ರಾಮ - ಇದ ಬಲ್ಲ ಜಾಣರ ದೇಹದಲ್ಲಿ ನೋಡಣ್ಣ ||

ಕಣ್ಣಿ ಕಾಮನ ಬೀಜ | ಕಣ್ಣಿನಿಂದಲೆ ನೋಡು ಮೋಕ್ಷ ಸಾಮ್ರಾಜ್ಯ |

ಕಣ್ಣಿನ ಮೂರುತಿ ಬಿಗಿದು | ಒಳಗಣ್ಣಿನಿಂದಲೆ ದೇವರ ನೋಡಣ್ಣ || 1 ||

ಮೂಗೆ ಶ್ವಾಸ ನಿಶ್ವಾಸ | ಈ ಮೂಗಿನಿಂದಲೆ ಕಾಣೋ ಯೋಗ ಸನ್ಯಾಸ |

ಮೂಗನಾದರೆ ವಿಶೇಷ | ಒಳ ಮೂಗಿನಿಂದ ನೋಡಣ್ಣ ಲೀಲಾ ವಿಲಾಸ ||2||

ಕಿವಿಯೆ ಕರ್ಮಕ್ಕೆ ದ್ವಾರ | ಈ ಕಿವಿಯಿಂದಲೆ ಕೇಳೋ ಮೋಕ್ಷಸಾರ |

ಕಿವಿಯ ಕರ್ಮಕುಠಾರ | ಒಳಗಿವಿಯಲ್ಲಿ ಕಾಣೋ ನಾದದ ಬೇರ ||3||

ಇಂದ್ರಿಯಗಳು ಬಾಹ್ಯಾಡಂಬರಗಳಲ್ಲಿ ಆಸಕ್ತರಾಗಿ ಬದುಕು ವ್ಯರ್ಥ ಮಾಡಿಕೊಳ್ಳದೆ ವಾಸನೆಗಳನ್ನು ಬಿಟ್ಟು, ಕಣ್ಣು, ಕಿವಿ, ಮೂಗುಗಳನ್ನು ನಮ್ಮ ದೇಹದೊಳಗಿನ ಅಂತರಂಗದ ಪ್ರಪಂಚಕ್ಕೆ ನೆಟ್ಟರೆ, ಆ ಕರುಣಾಮಯಿ ಶ್ರೀ ರಾಮಚಂದ್ರ ಎಲ್ಲೆಲ್ಲೂ ಕಾಣತೊಡಗುತ್ತಾನೆ ಎನ್ನುತ್ತಾರೆ.


ಚಿತ್ರಕೃಪೆ : ಅಂತರ್ಜಾಲ