ಕೆಲವು ದಿನಗಳ ಹಿಂದೆ ರಾಜಾ ಶ್ರೀ ಗುರುರಾಜಾಚಾರ್ಯರ ಪುಸ್ತಕ ’ಕಲಿಯುಗ ಕಲ್ಪತರು’ ನಮ್ಮ ಮನೆಗೆ ಬಂದಾಗ, ನನಗೆ ಅತ್ಯಂತ ಸಂತೋಷವಾಗಿತ್ತು. ರಾಯರ ಜನ್ಮ ಸಮಯದ ವಿವರಣೆಗಳನ್ನು ಓದುತ್ತಿದ್ದಾಗ ಬಂದ ಒಂದು ಪ್ರಸಂಗ ನನಗೆ ರೋಮಾಂಚನಗೊಳಿಸಿತು. ರಾಯರು ಜನಿಸಿದಾಗ ಅವರ ಮನೆಯಂಗಳದಲ್ಲಿದ್ದ ಪಾರಿಜಾತ ವೃಕ್ಷಗಳು ಪಾರಿಜಾತ ಕುಸುಮ ರಾಶಿಯನ್ನು ವೃಷ್ಟಿಯಾದಂತೆ ಉದುರಿಸಿತಂತೆ, ದೇವಾಲಯದಿಂದ ಭೇರಿ-ದುಂದುಭಿ ಮಂಗಳವಾದ್ಯಗಳು ಮೊಳಗಿದವಂತೆ. ಮಹನೀಯ ಭಾಗವತಾಗ್ರೇಸರನಾದ ಪ್ರಹ್ಲಾದರಾಜ ಅವತರಿಸಿದರೆಂಬ ಶುಭ ಮಂಗಳ ಸಂಕೇತಗಳು ಇವೆಲ್ಲಾ ಎಂದು ಗ್ರಂಥ ಕರ್ತರ ವಿವರಣೆ ಯಾರನ್ನಾದರೂ ಪುಳಕಿತಗೊಳಿಸುತ್ತದೆ.
ದಾಸ ಪರಂಪರೆಯಲ್ಲಿ ಬಂದಿರುವ ಎಲ್ಲರೂ ರಾಯರನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ, ರಚಿಸುತ್ತಲೇ ಇದ್ದಾರೆ, ಇನ್ನು ಮುಂದೂ ಹೊಸ ಹೊಸ ರಚನೆಗಳ ಉಗಮ ಆಗುತ್ತಲೇ ಇರುತ್ತದೆ. ಆದರೆ ನನಗೆ ಆಪ್ತವೆನಿಸಿ, ಮನದಾಳದಲ್ಲಿ ರಾಯರ ಪ್ರತಿಷ್ಠಾಪನೆ ಮಾಡಿಸಿಬಿಟ್ಟಿದ್ದು, ನನ್ನನ್ನು ಅವರತ್ತ ಅತಿ ಹೆಚ್ಚು ಸೆಳೆದಿದ್ದು ಶ್ರೀ ಜಗನ್ನಾಥ ದಾಸರ ಯಾಕೆ ಮೂಕನಾದೋ ಗುರುವೆ ನೀ... ಎಂಬ ಕೃತಿ.....
ಯಾಕೆ ಮೂಕನಾದೋ ಗುರುವೆ ನೀ |ಪ|
ಯಾಕೆ ಮೂಕನಾದೆ ಲೋಕಪಾಲಕನೇ | ಸಾಕುವರ್ಯಾರಯ್ಯಾ ಶ್ರೀಕರ ರಾಘವೇಂದ್ರ |ಅ.ಪ|
ಹಿಂದಕ್ಕೆ ನೀ ಎನ್ನ ಮುಂದೆ ಸುಳಿದೂ ಈಗ | ಮಂದಿಯಂದದೆ ಎನ್ನ ಮಂದನ್ನ ಮಾಡಿ |
ಬೇಕಾಗದಿದ್ದರೆನ್ನ ಯಾಕೆ ಕೈಯ ಪಿಡಿದೀ | ಕಾಕುಜನರೊಳೆನ್ನ ನೂಕಿ ಬಿಟ್ಟೀಗ || 1 ||
ನಿನ್ನಂಥ ಕರುಣಿ ಇಲ್ಲ ನನ್ನಂಥ ಜಿಪುಣರಿಲ್ಲ | ಘನ್ನ ಮಹಿಮ ನೀ ಎನ್ನನು ಬಿಟ್ಟೀಗ |
ಎಂದಿಗಾದರು ನಿನ್ನ ಹೊಂದಿಕೊಂಡೆನು ನಾನು | ಇಂದು ನೀ ಬಿಟ್ಟರೆನ್ನ ಮುಂದೆ ಕಾಯ್ವರಾರೋ ||2||
ಜನ್ಯನು ನಾನಯ್ಯ ಜನಕನು ನೀನಯ್ಯ | ಮನ್ನಿಸು ನೀ ನಿತ್ಯ ನನ್ನ ಶರಣನಲ್ಲೇ |
ಈಗ ಪಾಲಿಸಿದರೆ ಯೋಗಿ ಕುಲವರ್ಯಾ | ರಾಘವೇಂದ್ರನೆ ಭವ ಸಾಗುವರ್ಯಾರಯ್ಯ ||3||
ಇದು ನನಗೆ ದಾಸರ ಅಳಲು ಎಂಬಂತೆ ಎಂದಿಗೂ ಅನ್ನಿಸಿಯೇ ಇಲ್ಲ. ನಮ್ಮೆಲ್ಲರ ಮನದ ಮಾತುಗಳನ್ನು ಅವರು ಅಕ್ಷರ ರೂಪದಲ್ಲಿ, ರಚಿಸಿಬಿಟ್ಟಿದ್ದಾರೆಂಬುದೇ ನನ್ನ ಅಭಿಪ್ರಾಯ. ನೀನು ಹೀಗೆ ಮೂಕನಾಗಿ ಯಾಕಪ್ಪಾ ಕುಳಿತುಬಿಟ್ಟೆ ಎಂದು ದೀನತೆಯಿಂದ ಬೇಡಿಕೊಳ್ಳುವ ಪರಿ ಮನಕರಗಿಸುತ್ತದೆ. ರಾಯರು ಎಂಥಾ ಕರುಣಿಗಳು ಎಂಬ ಮಾತು ಕೂಡ ಇಲ್ಲಿ ಪ್ರಾಮುಖ್ಯತೆ ಪಡೆದಿದೆ. ಅವರನ್ನು ನೆನೆಯದೆ, ಆರಾಧಿಸದೇ ನಾವು ಮರೆತಿದ್ದರೂ ಕೂಡ, ನಮಗೆ ಸಂಕಟವೆಂದು ಅವರ ಮೊರೆ ಹೊಕ್ಕಾಗ ಅವರು ತಮ್ಮ ಕರುಣೆಯ ಮಹಾಸಾಗರವನ್ನೇ ನಮ್ಮೆಡೆಗೆ ಹರಿಸುತ್ತಾರೆಂಬ ದಾಸರ ಮಾತು ನಿಜಕ್ಕೂ ಮಹತ್ವದ್ದಾಗಿದೆ. ಹಿಂದೆಯೂ, ಇಂದಿಗೂ ಮತ್ತು ಮುಂದೂ ನೀವೇ ನನ್ನನ್ನು ಕಾಯಬೇಕಾದವರು. ನೀನೇ ನನ್ನ ತಂದೆ ನೀ ನನ್ನ ಕೈಬಿಟ್ಟು ಬಿಟ್ಟರೆ ಸಂಸಾರವೆಂಬ ಈ ಭವ ಸಾಗರವನ್ನು ದಾಟಿಸುವವರು ನನಗ್ಯಾರೂ ದಿಕ್ಕಿಲ್ಲ. ನಿನ್ನ ಕರುಣೆಯಿಲ್ಲದ ನಾನೊಬ್ಬ ಅನಾಥನಂತೆ, ಶರಣು ಬಂದಿರುವೆ ಕೈ ಹಿಡಿದು ಉದ್ಧರಿಸು ಎಂಬ ಭಾವ ನಮ್ಮ ಮನದಲ್ಲಿ ಕರುಣೆ, ಭಕ್ತಿಯನ್ನು ಹುಟ್ಟಿಸುತ್ತದೆ. ರಾಯರ ಮಂದಸ್ಮಿತ ವದನ ನಮಗೆ ಭರವಸೆಯ ಆಗರ, ಅದನ್ನೇ ನಂಬಿ ಕುಳಿತಿದ್ದೇನೆ ಎಂದು ವಿನೀತರಾಗಿ ಅಲವತ್ತುಕೊಳ್ಳುವ ಜಗನ್ನಾಥ ದಾಸರ ಮಾತುಗಳು ನಮ್ಮದೇ ಮಾತುಗಳಾಗಿಬಿಟ್ಟಿವೆ.
ಅವರ ಇನ್ನೊಂದು ರಚನೆ ಕೂಡ ನನ್ನನ್ನು ತುಂಬಾ ಆರ್ದಳಾಗಿಸುವುದು, ಯಾವುದೆಂದರೆ :
ಕರುಣಿಗಳೊಳಗೆಣೆ ಕಾಣೆನೊ ನಿನಗೆ ಸದ್ಗುರುವರ ರಾಘವೇ೦ದ್ರ || ಪ ||
ಚರಣ ಕಮಲಯುಗ್ಮ ಮೊರೆಹೊಕ್ಕವರ ಮನದ | ಹರಕೆಯ ನಿರುತದಲೀವೆ ನೀ ಕಾವೇ || ಅಪ ||
ರಾಘವೇ೦ದ್ರ ಗುರುವೇ ಗತಿ | ಎ೦ದನುರಾಗದಿ೦ದಲಿ ಭಜಿಪ
ಭಾಗವತರ ದುರಿತೌಘಗಳಳಿದು ಚೆನ್ನಾಗಿ ಸ೦ತೈಸುವೆ ನೀ ಸನ್ಮೌನಿ || ೧ ||
ಸುಧೀ೦ದ್ರಯತಿಕರ ಪದುಮಸ೦ಭವ | ಮಧುವಧ ಪಾದಾ೦ಬುಜ ಮಧುಪ |
ತ್ರಿದಶಭೂರುಹದ೦ತೆ ಬುಧಜನರೀಪ್ಸಿತ | ಒದಗಿ ಪಾಲಿಸಿ ಪೊರೆವೆ ಮದ್ಗುರುವೆ || ೨ ||
ಕುಧರದೇವನ ದಿವ್ಯರದನದಿ ಜನಿಸಿದ | ನದಿಯ ತೀರದಿ ಶೋಭಿಪ |
ಸದಮಲ ಘನ ಮ೦ತ್ರಸದನನಿಲಯ ಜಿತಮದನ ಶ್ರೀ ಜಗನ್ನಾಥವಿಠ್ಠಲನ ದೂತ || ೩ ||
ಭಕ್ತರನ್ನು ಕರುಣೆಯಿಂದ ಕಾಣುವ ಅನೇಕ ಕರುಣಿಗಳಿದ್ದರೂ ಸದ್ಗುರುವೇ ನಿನ್ನಂಥಹ ಕರುಣಾಸಾಗರ ಇನ್ನೊಬ್ಬರಿಲ್ಲ. ನಿನ್ನ ಚರಣ ಕಮಲವ ನಂಬಿ ನಿನ್ನನ್ನು ಮೊರೆಹೊಕ್ಕವರನ್ನು ಅವರವರ ಮನದೀಷ್ಟಗಳನ್ನು ಕರುಣಿಸಿ, ಹರಸುತ್ತಾ ನಿರುತದಲಿ ಕಾಯುತ್ತಲೇ ಇರುವೆ ಎಂದು ಹಾಡುವಾಗ ನಮ್ಮ ಮನಸ್ಸಿಗೆ ಬರುವ ಒಂದು ರೀತಿಯ ಸುಭದ್ರವಾದ ಭಾವಕ್ಕೆ ಎಣೆಯೇ ಇಲ್ಲವೆನ್ನಿಸುತ್ತದೆ. ಯಾರು ’ರಾಘವೇಂದ್ರ ಗುರುವೇ ಗತಿ’ ಎಂದು ನಿನ್ನಲ್ಲಿ ಶರಣಾಗತರಾಗುವರೋ, ನಿನ್ನನ್ನು ಅನುದಿನ ಭಜಿಸುವರೋ ಅವರ ಅಘಗಳನ್ನೆಲ್ಲಾ ಕಳೆದು, ಮಕ್ಕಳನ್ನು ಸಂತೈಸಿ ಸಮಾಧಾನಗೊಳಿಸುವೆ ಹೇ ಗುರುವೇ ನೀನು. ತುಂಗಾ ತೀರದಿ ನೆಲೆಸಿ ಯತಿವರ ನೀ ನಂಬಿ ಬಂದ ಭಕುತರಿಗೆಲ್ಲಾ ಸದ್ಗತಿ ಕರುಣಿಸಿ, ಉದ್ಧರಿಸುತ್ತಿರುವೆ ಎಂಬ ಮಾತುಗಳು ಆತ್ಮ ನಿವೇದನೆಯನ್ನು ಖಂಡಿತವಾಗಿ ಪ್ರೋತ್ಸಾಹಿಸುತ್ತದೆ.
ರಾಯರ ಚಿತ್ರದ ಎದುರು ಕುಳಿತಾಗ ಅವರ ಪ್ರಶಾಂತ ಮುಖ ನಮ್ಮ ಎಲ್ಲಾ ಚಿಂತೆಗಳನ್ನೂ ಪರಿಹರಿಸಿ, ಸಮಾಧಾನಗೊಳಿಸುವುದು. ಆರ್ತರಾಗಿ ಬೇಡಿದವರಿಗೆ ನಾನಾ ರೂಪಗಳಲ್ಲಿ ತಮ್ಮ ಇರುವನ್ನು ತೋರಿಸುತ್ತಲೇ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳು ನೆನೆದವರ ಮನದಲ್ಲಿ ನೆಲೆಸಿ ನಮ್ಮನ್ನು ಸನ್ಮಾರ್ಗಕ್ಕೆ ಹಚ್ಚುವುದರಲ್ಲಿ ಸಂದೇಹವೇ ಇಲ್ಲ. ಆಧ್ಯಾತ್ಮ ಕಠಿಣ ಹಾದಿಯಲ್ಲಿ ನಡೆಯ ಬಯಸುವ ಎಲ್ಲರಿಗೂ ನಮ್ಮ ರಾಯರು ಕೈ ಹಿಡಿದು ನಡೆಸುವ ಕರುಣಾಳು, ಪ್ರಜ್ವಲ ದೀಪ ತೋರಿಸುವ ದಯಾಮಯ.
ಜಗನ್ನಾಥ ದಾಸರ ಈ ಎರಡು ಹಾಡುಗಳು ನನಗೆ ಬಹುಪ್ರಿಯವಾದವು ಮತ್ತು ಇದನ್ನು ಹಾಡುವುದರ ಮೂಲಕ, ನನ್ನ ಆತ್ಮ ನಿವೇದನೆಯನ್ನು ನಾನು ಆ ತಂದೆಯೆದುರು ಮಾಡಿಕೊಳ್ಳುತ್ತಿದ್ದೇನೆಂಬ ನಂಬಿಕೆ ನನಗೆ.
ಮನದಾಳದಿಂದ ಒಡಮೂಡಿದ ಲೇಖನ. ಓದುಗನ ಮನಸ್ಸನ್ನು ನೇರವಾಗಿ ತಟ್ಟುತ್ತದೆ.
ReplyDeleteಈ ಲೇಖನಕ್ಕಾಗಿ ನಿಮಗೆ ಧನ್ಯವಾದಗಳು.
‘ನಿನ್ನಂಥ ಕರುಣಿ ಇಲ್ಲ ನನ್ನಂಥ ಜಿಪುಣರಿಲ್ಲ’ ಎನ್ನುವದು ಎಲ್ಲ ಭಕ್ತರಿಗೂ ಅನ್ವಯವಾಗುವ ಮಾತೇ. ಗುರುವು ಅನುಗ್ರಹಿಸುವಲ್ಲಿ ಧಾರಾಳಿ;ಭಕ್ತನು ಅರ್ಚನೆಯಲ್ಲಿ ಜಿಪುಣನು!
ಉತ್ತಮ ಲೇಖನ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ReplyDeleteGod Bless you....
ಯಾಕೆ ಮುಖ ನಾದ್ಯೋ ಮನ ತಟ್ಟುವ ಗೀತೆ.
ReplyDeleteಬಾಲ ಮುರಳಿಯವರ ಧ್ವನಿಯಲ್ಲಿ ಇನ್ನು ಚೆನ್ನ.
ನೆನಪಿಸಿದಕ್ಕೆ ಧನ್ಯವಾದಗಳು.
ಜಾತಿ ಪಂಗಡಗಳ ಹಂಗಿಲ್ಲದೆ ಎಲ್ಲರ ಮುಟ್ಟಿದ
ಸಂತರು /ಗುರುಗಳಲ್ಲಿ ರಾಯರು ಅಗ್ರಗಣ್ಯರು
ಸ್ವರ್ಣ
ಶ್ಯಾಮಲಾಜೀ...
ReplyDeleteಶ್ರೀ ಗುರು ರಾಘವೇಂದ್ರರ ಆರಾಧನಾ ಮೊನ್ನೆಯಿಂದ ನಡೆಯುತ್ತಲಿದೆ. ಈ ಒಂದು ಸಂದರ್ಭದಲ್ಲಿ ಕಲಿಯುಗದ ಕಲ್ಪತರು ರಾಯರನ್ನು ಕುರಿತು ಶ್ರೀ ಜಗನ್ನಾಥದಾಸರು ಕಂಡದ್ದನ್ನು ನಮಗೂ ಕಾಣಿಸಿದ್ದೀರಿ. ಉತ್ತಮ, ಸರಳ ಲೇಖನದಲ್ಲಿ ಶ್ರೀ ರಾಯರನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.
ಶ್ರೀ ರಾಘವೇಂದ್ರತೀರ್ಥರಿಗೆ ನಮನಗಳು.
ನನ್ನಂತರಂಗದ ಮಾತುಗಳನ್ನು ಮೆಚ್ಚಿದ ನಿಮಗೆ ಧನ್ಯವಾದಗಳು. ಹೌದು ಕಾಕಾ ನಿಮ್ಮ ಮಾತು ನಿಜ, ಭಗವಂತ ಅದೆಷ್ಟು ಕರುಣೆ ತೋರಿದರೂ, ನಾವು ನಮ್ಮ ಜಿಪುಣತನವನ್ನು ಬಿಡುವುದೇ ಇಲ್ಲ....
ReplyDeleteಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ಪ್ರಕಾಶ್ ಅವರೇ...
ReplyDeleteಸ್ವರ್ಣ ಅವರೇ... ನನ್ನ ತಾಣಕ್ಕೆ ಸ್ವಾಗತ. ಯಾಕೆ ಮೂಕನಾದೆ.. ನಾನು ಶ್ರೀ ಭೀಮಸೇನ ಜೋಶಿಯವರ ಹಾಡುಗಾರಿಕೆಯಲ್ಲಿ ಕೇಳಿ ಕರಗುತ್ತೇನೆ. ಹೌದು ರಾಯರು ಎಲ್ಲರಿಗೂ ತುಂಬಾ ಹತ್ತಿರವಾದವರು, ಅದಕ್ಕೇ ಅವರನ್ನು ಕರುಣಾಸಮುದ್ರವೆನ್ನುವುದು ಅಲ್ಲವೇ...?
ಧನ್ಯವಾದಗಳು ಚಂದ್ರೂ... ರಾಯರನ್ನು ನೆನೆದವರೇ ಧನ್ಯರು ಆಲ್ವಾ? ನಿಮಗೆ ಇಷ್ಟವಾಯಿತೆಂದಿರಿ... ಸಂತೋಷ ಮತ್ತು ಧನ್ಯವಾದಗಳು ನಿಮಗೆ...:-)
ರಾಘವೇಂದ್ರ ತೀರ್ಥರ ಬಗ್ಗೆ ಹೊಸದಾಗಿ ಯಾರಿಗೂ ತಿಳಿಹೇಳುವ ಅಗತ್ಯವಿಲ್ಲಾ ಎಂಬ ಕಾರಣಕ್ಕೆ ನಾನು ಮತ್ತೆ ಈಸಲ ಆ ಬಗ್ಗೆ ಬರೆಯಲಿಲ್ಲ, ಸುವರ್ಣ ವಾಹಿನಿಯಲ್ಲಿ ಬರುತ್ತಿರುವ ಅವರ ಬಗೆಗಿನ ಧಾರಾವಾಹಿಯಂತೂ ಪರಮಾಪ್ತವಾಗಿದೆ. ಎಲ್ಲರಿಗೊ ಶ್ರೀಗಳ ಕೃಪೆಯಿರಲಿ.
ReplyDeleteನಿಮಗೂ ನಿಮ್ಮ ಮನೆಯ ಎಲ್ಲಾ ಸದಸ್ಯರಿಗೂ ಸ್ವರ್ಣಗೌರೀ-ಗಣೇಶ ಹಬ್ಬದ ಶುಭಾಶಯಗಳು.
Good blog.Keep writing
ReplyDeleteAlso visit my blog which contain some dasasahitya which may subject of interest for you.
suragange.blogspot.com