ಮಹಾಶಿವರಾತ್ರಿ ಹಿಂದೂ ಸಂಸ್ಕೃತಿಯ ಎಲ್ಲಾ ಜನಾಂಗದವರಿಗೂ ಅತ್ಯಂತ ಪವಿತ್ರವಾದ ಹಬ್ಬ ಮತ್ತು ಶಿವಭಕ್ತರಿಗೆ ಬಹು ಪ್ರಿಯವಾದದ್ದು. ಶಿವನು ಮನೋನಿಯಾಮಕನಾದ್ದರಿಂದ ಈ ಶಿವರಾತ್ರಿ ಸಾಧಕರಿಗೆ ಕೂಡ ಮುಖ್ಯವಾದ ದಿನ. "ಶಿವ"ನೆಂದರೆ ಮಂಗಳವೆಂದೇ ಅರ್ಥ. ಶಿವ ಧ್ಯಾನ ಮಾಡುವವರ ಮನಸ್ಸನ್ನು ನಿಯಂತ್ರಿಸುವವನು ಈಶ್ವರ. ರುದ್ರ, ವಾಮದೇವ, ಶಂಕರ, ಉಮಾಮಹೇಶ್ವರ, ಚದುರಗಹಾರ, ಮೃಗಧರ, ಪಶುಪತಿ ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಡುವ ಶಿವನದು ಅತ್ಯಂತ ಉನ್ನತವಾದ ಭಾವವು ಮತ್ತು ಎಲ್ಲಾ ಕಾಮನೆಗಳನ್ನೂ ತ್ಯಜಿಸಿದವನು ಶಿವನು. ಉಪನಿಷತ್ತಿನಲ್ಲಿ "ಶರೀರಪುರುಷ" ಎಂದು ಕರೆಯಲ್ಪಡುವ ಶಿವನಿಗೆ ನಮ್ಮ ಶರೀರವೇ ಬಟ್ಟೆ. ಶರೀರ ಬಿದ್ದು ಹೋದಾಗ ಅವನು ದಿಗಂಬರ. ಮುಟ್ಟಿದರೆ ಕಣ್ಣೀರು ಬರಿಸುವುದು ಪಂಚಭೂತಗಳಲ್ಲಿ ಒಂದಾದ ಅಗ್ನಿ ಮತ್ತು ಶಿವ ಅಗ್ನಿಯೂ ಆಗುತ್ತಾನೆ. ಇವನು ಅಹಂಕಾರಕ್ಕೆ ಅಧಿಪತಿಯಾದ ದೇವತೆ. "ರುದ್ರ" ಎಂಬ ಪದವನ್ನು ಬಿಡಿಸಿದಾಗ ರುಕ್+ದ್ರಾ ಎಂದಾಗುತ್ತದೆ. ರುಕ್ ಎಂದರೆ ಭವರೋಗ ಮತ್ತು ದ್ರಾ ಎಂದರೆ ನಾಶಕ ಅಥವಾ ಪಾರುಮಾಡುವವನು ಎಂದರ್ಥ. ಆದ್ದರಿಂದಲೇ ತನಗೆ ಶರಣಾಗಿ ಬಂದವರನ್ನು ಭವ ಸಾಗರದ ಬಂಧನಗಳಿಂದ ಬಿಡಿಸುವವನು ಶಿವನು, ಮೋಕ್ಷದ ಮಾರ್ಗ ತೋರಿಸುವವನು ಎಂದಿದ್ದಾರೆ. ಇಂತಹ ಶಿವನನ್ನು ಭಕ್ತಿಯಿಂದ, ಶ್ರದ್ಧೆಯಿಂದ ಪೂಜಿಸುವ, ಆರಾಧಿಸುವ ದಿನವೇ ಶಿವರಾತ್ರಿ. ಶಿವರಾತ್ರಿ ಎಂದರೆ, ಉಪವಾಸ, ಜಾಗರಣೆಯ ಆಚರಣೆ. "ಉಪ" ಎಂದರೆ ಸಮೀಪದಲ್ಲಿ - ಭಗ ವಂತನ ಸನಿಹದಲ್ಲಿ ವಾಸಿಸುವುದು ಮತ್ತು "ಜಾಗರಣೆ" ಎಂದರೆ ಜಾಗೃತಾವಸ್ಥೆ. ಆಹಾರ ಸೇವಿಸ ದೇ ಇರುವುದೇ ಉಪವಾಸವೆಂದಲ್ಲ, ಹಾಗಾದರೆ ಅದು ಬರಿಯ ಭೌತಿಕ ದೇಹಕ್ಕೆ ಉಪವಾಸವಾದಂತೆ . ಇಂದ್ರಿಯಗಳ ನಿಗ್ರಹ ಮಾಡಿ, ಶಿವನ ಧ್ಯಾನ ಮಾಡುತ್ತಾ, ಮನಸ್ಸನ್ನು ಶಿವತತ್ವದಲ್ಲಿ ಲೀನಗೊಳಿಸುವುದೇ ಉಪವಾಸ. ಅಜ್ಞಾನದ ಕತ್ತಲಲ್ಲಿ ನಿದ್ರಿಸದೆ ಶಿವನ ಧ್ಯಾನವನ್ನು ಮಾಡುತ್ತಾ ಜ್ಞಾನದ ಬೆಳಕಿನೆಡೆಗೆ ಹೆಜ್ಜೆ ಹಾಕು ಎಂಬುದೇ ಜಾಗರಣೆ ಯ ತತ್ವ. ಜಾಗರಣೆ ಎಂದರೆ ಜ್ಞಾನ ದೃಷ್ಟಿಯ ಯಾಚನೆ. ಅಂತ್ಯವಿಲ್ಲದ ಹುಟ್ಟು-ಸಾವುಗಳ ನಡುವೆ ಜರ್ಝರಿತನಾಗಿರುವ ನನಗೆ ಜ್ಞಾನದೃಷ್ಟಿಯನ್ನು ಕೊಟ್ಟು ಉದ್ಧರಿಸು ಎಂಬ ಯಾಚನೆ. ಭಕ್ ತಿಯಿಂದ, ಶ್ರದ್ಧೆಯಿಂದ ನಮ್ಮನ್ನೇ ನಾವು ಶಿವನಿಗೆ ಅರ್ಪಿಸಿ ಕೊಳ್ಳುವ ಒಂದು ಪವಿತ್ರವಾದ ದಿವಸ ಶಿವರಾತ್ರಿ.
ಶ್ರೀ ಶಂಕರರು “ಶಿವ ಪಂಚಾಕ್ಷರಿ ಸ್ತೋತ್ರ”ದಲ್ಲಿ ಬೀಜಾಕ್ಷರಗಳಾದ “ನಮಃ ಶಿವಾಯ” ವನ್ನು ಸುಂದರವಾಗಿ ಒಂದೊಂದು ಅಕ್ಷರಕ್ಕೆ ಒಂದೊಂದು ವಿವರಣೆಯನ್ನು ಕೊಟ್ಟು ರುದ್ರದೇವನ ವಿಶೇಷತೆಯನ್ನು ಸರಳವಾಗಿ ಚಿತ್ರಿಸಿ, ಸ್ತುತಿಸಿ, ನಮಿಸಿದ್ದಾರೆ :
ನಾಗೇಂದ್ರ ಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯs ಮಹೇಶ್ವರಾಯ |
ನಿತ್ಯಾಯ ಶುದ್ಧಾಯs ದಿಗಂಬರಾಯ
ತಸ್ಮೈ ನಕಾರಾಯs ನಮಃ ಶಿವಾಯ ||
ನಾಗೇಂದ್ರನಾದ ವಾಸುಕಿಯನ್ನೇ ಕಂಠಭೂಷಣವಾಗಿ ಉಳ್ಳಂತಹ, ಮೂರು ನೇತ್ರಗಳುಳ್ಳ, ದೇಹವೆಲ್ಲಾ ಭಸ್ಮಧಾರಿಯಾಗಿರುವ, ಮಹೇಶನಾದ, ನಿತ್ಯನೂ, ಶುದ್ಧನೂ, ದಿಗಂಬರನೂ ಆದ ಪರಶಿವನನ್ನು ಪಂಚಾಕ್ಷರೀ ಮಂತ್ರದ ಮೊದಲ ಅಕ್ಷರ "ನ" ಕಾರ ಶಿವನನ್ನು ನಮಿಸುತ್ತೇನೆ.
ಮಂದಾಕಿನೀ ಸಲಿಲ ಚಂದನ ಚರ್ಚಿತಾಯ
ನಂದೀಶ್ವರ ಪ್ರಮಥನಾಥ ಮಹೇಶ್ವರಾಯ |
ಮಂದಾರ ಪುಷ್ಪ ಬಹುಪುಷ್ಪ ಸುಪೂಜಿತಾಯ
ತಸ್ಮೈ ಮಕಾರಾಯs ನಮಃ ಶಿವಾಯ ||
ಗಂಗಾನದಿಯಿಂದ ಅಭಿಷಿಂಚಿತವಾದ ಮತ್ತು ಚಂದನದಿಂದ ಲೇಪಿತವಾದ, ನಂದಿಯೇ ಮೊದಲಾದ ಗಣಗಳಿಂದ ಮಂದಾರ ಮೊದಲಾದ ಅನೇಕ ಪುಷ್ಪಗಳಿಂದ ಪೂಜಿಸಲ್ಪಡುವ "ಮ" ಕಾರ ಸ್ವರೂಪಿ ಮಹೇಶ್ವರನನ್ನು ನಮಿಸುತ್ತೇನೆ.
sಶಿವಾಯ ಗೌರೀವದನಾಬ್ಜ ಬೃಂದ
ಸೂರ್ಯಾಯ ದಕ್ಷಾಧ್ವರನಾಶಕಾಯ |
ಶ್ರೀ ನೀಲಕಂಠಾಯs ವೃಶಧ್ವಜಾಯ
ತಸ್ಮೈ ಶಿಕಾರಾಯs ನಮಃ ಶಿವಾಯ ||
ಶುಭಪ್ರದನಾದ, ಸೂರ್ಯೋದಯದಿಂದ ವಿಕಸಿಸುವ ಕಮಲದಂತೆ ಪಾರ್ವತಿಯ ಮುಖವನ್ನು ಹಸನ್ಮುಖವಾಗಿ ಮಾಡುವ, ದಕ್ಷನ ಯಜ್ಞ ನಾಶಕನಾದ ಶುಭಪ್ರದ ನೀಲಕಂಠನೇ, ವೃಷಭವನ್ನೇ ವಾಹನವಾಗಿ ಹೊಂದಿರುವ "ಶಿ"ಕಾರ ಸ್ವರೂಪಿ ಶಿವನಿಗೆ ನಮಿಸುತ್ತೇನೆ.
ವಾಸಿಷ್ಠಕುಂಭೋದ್ಭವ ಗೌತಮಾರ್ಯ -
ಮುನೀಂದ್ರ ದೇವಾರ್ಚಿತ ಶೇಖರಾಯ |
ಚಂದ್ರಾರ್ಕ ವೈಶ್ವಾನರಲೋಚನಾಯ
ತಸ್ಮೈ ವಕಾರಾಯs ನಮಃ ಶಿವಾಯ ||
ಸತ್ಪುರುಷರೂ, ಮುನಿಶ್ರೇಷ್ಠರೂ ಆದ ವಸಿಷ್ಠ, ಅಗಸ್ತ್ಯ ಗೌತಮಾದಿ ಸಕಲ ಮುನಿಸಮೂಹ, ದೇವಸಮೂಹದಿಂದ ಅರ್ಚಿಸಲ್ಪಡುವ ಸೂರ್ಯ, ಚಂದ್ರ, ಅಗ್ನಿಗಳನ್ನೇ ನೇತ್ರವಾಗಿ ಹೊಂದಿರುವ "ವ"ಕಾರವೆಂಬ ಅಕ್ಷರದ ಮಹೇಶ್ವರನಿಗೆ ನಮಿಸುತ್ತೇನೆ.
sಯಜ್ಞಸ್ವರೂಪಾಯs ಜಟಾಧರಾಯ
sಪಿನಾಕಹಸ್ತಾಯs ಸನಾತನಾಯ |
ದಿವ್ಯಾಯ ದೇವಾಯs ದಿಗಂಬರಾಯ
ತಸ್ಮೈ ಯಕಾರಾಯs ನಮಃ ಶಿವಾಯ ||
ಯಜ್ಞ ಸ್ವರೂಪನೂ, ಜಟಾಧಾರಿಯೂ, ಪಿನಾಕವೆಂಬ ಧನುಸ್ಸನ್ನು ಹೊಂದಿರುವವನೂ, ಸನಾತನನೂ, ದಿವ್ಯನೂ, ದೇವನೂ, ದಿಗಂಬರನೂ ಆದ "ಯ"ಕಾರ ಸ್ವರೂಪಿಯಾದ ಮಹೇಶ್ವರನಿಗೆ ನಮಿಸುತ್ತೇನೆ, ವಂದನೆಗಳು.
ಹೀಗೆ ಶಿವ ಪಂಚಾಕ್ಷರಿ ಮಂತ್ರವನ್ನು ಸದಾ ಜಪಿಸುವಲ್ಲಿ ನಮ್ಮ ಅಂತರಂಗ ನಿರತವಾಗಿದ್ದರೆ, ಶಿವನ ಒಲುಮೆ ನಮ್ಮದಾಗುತ್ತದೆಂಬುದು ಸತ್ಯ. ಶಂಕರನು ದಯಾಮಯನು ತನ್ನ ಭಕ್ತರ ಯಾವ ಬೇಡಿಕೆಯನ್ನೂ ನಿರಾಕರಿಸದವನು ಎನ್ನುವ ನಂಬಿಕೆ ನಮಗಿದೆ. ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವಂತೆ ಶಿವನು ಅಭಿಷೇಕಪ್ರಿಯನು. ಶುದ್ದ ಭಕ್ತಿಯಿಂದ ಮಾಡುವ ಅಭಿಷೇಕವನ್ನು ಅತಿ ಕರುಣೆಯಿಂದ ಸ್ವೀಕರಿಸಿ, ಬೇಡಿದ ವರಗಳನ್ನು ಕೊಟ್ಟುಬಿಡುವ ಮನೋನಿಯಾಮಕನು. ಚಂಚಲತೆಗೆ ಒಳಗಾಗಿ ದಿಕ್ಕಿಲ್ಲದಂತೆ ವಿಷಯಾಸಕ್ತಿಗಳ ಸುತ್ತ ಅಲೆದಾಡುವ ನಮ್ಮ ಇಂದ್ರಿಯಗಳನ್ನು ನಿಯಂತ್ರಿಸಿ, ದೃಷ್ಟಿಹಾಯಿಸಿದ ಕಡೆಯೆಲ್ಲಾ ಶಿವನ ರೂಪ ಕಾಣುವಂತೆ ನಿನ್ನ ಪಾದದಲ್ಲಿ ನನ್ನ ಚಿತ್ತವನ್ನು ನೆಲೆಗೊಳಿಸು ಎಂದು ಪ್ರಾರ್ಥಿಸುವುದೇ ಶಿವರಾತ್ರಿಯ ವಿಶೇಷತೆ. ನಮಗೆ ತಲೆಯೆತ್ತಿ ನೋಡಿದಾಗೆಲ್ಲಾ ಆಕಾಶದಲ್ಲಿ ಕಾಣುವುದು ಹೊಗೆಯಂತಿರುವ ಮೋಡಗಳು. ಗಂಗೆಯನ್ನು ಶಿರದಲ್ಲಿ ಧರಿಸಲೋಸುಗ ಶಿವ ತನ್ನ ಜಟೆಯನ್ನು ಬಿಚ್ಚಿ ಒಗೆದಾಗ ಅದು ಹೀಗೆ ಹೊಗೆಯಂತೆ ಕಂಡಿತಂತೆ. ಆದ್ದರಿಂದಲೇ ಶಿವನ ನಾಮ ವ್ಯೋಮಕೇಶಿ / ಧೂರ್ಜಟಿ. ಹೀಗೆ ನಾವು ಕಾಣುವ ಪ್ರತಿ ದೃಶ್ಯದಲ್ಲೂ ನಮ್ಮ ಚಿತ್ತಕ್ಕೆ ಶಿವನ ನೆನಪು, ಬರುವಂತೆ ಮಾಡುತ್ತಾ ಸಂಸಾರವೆಂಬ ಸಾಗರದ ಬಂಧನ ಬಿಡಿಸು ಎಂದು ಪ್ರಾರ್ಥಿಸಬೇಕು. ಧೂರ್ಜಟಿ ಎಂದರೇ ವೈರಾಗ್ಯವೆಂಬ ಅರ್ಥವನ್ನು ನಾವು ತಿಳಿದರೆ ಸಾಕು ಆ ನಾಮ ಸ್ಮರಣೆಯೇ ನಮ್ಮ ಚಿತ್ತವನ್ನು ನಿಯಂತ್ರಿಸುತ್ತದೆ ನಮಗೆ ಸಾಗಬೇಕಾದ ಹಾದಿಯನ್ನು ತೋರಿಸುತ್ತದೆ.
“ಯಾ ನಿಶಾ ಸರ್ವಭೂತಾನಾಂ ತಸ್ಯಾಂ ಜಾಗರ್ತಿ ಸಂಯಮೀ” ಎಂಬ ಗೀತೆಯ ಸಂದೇಶದಂತೆ ಶಿವರಾತ್ರಿಯಂದು ಕವಿದಿರುವ ಗಾಡಾಂಧಕಾರದಲ್ಲಿ, ಅಜ್ಞಾನದ ಕತ್ತಲೆಯಲ್ಲಿ ಮುಳುಗಿ ಜೀವನ ಕತ್ತಲೆಯಾಗಿಸಿಕೊಳ್ಳಬೇಡ, ಅಜ್ಞಾನವನ್ನು ದೂರೀಕರಿಸು, ಜ್ಞಾನದ ಪ್ರಕಾಶದಲ್ಲಿ ಎಚ್ಚೆತ್ತುಕೋ, ಆತ್ಮ ಸಾಕ್ಷಾತ್ಕಾರ ಪಡೆದು ಜನ್ಮ ಸಾರ್ಥಕ ಪಡಿಸಿಕೋ ಎಂಬುದೇ ಜಾಗರಣೆಯ ತತ್ವ ಹಾಗೂ ಸರ್ವ ಭೋಗಗಳನ್ನು ಬಿಟ್ಟು ಪಾಪರಹಿತವಾದ ಜೀವನವನ್ನು ಅಳವಡಿಸಿಕೊಳ್ಳುವುದು ಉಪವಾಸದ ತತ್ವ.
“ಶಿವ” ತತ್ವದಿಂದ ನಾವು ಕಲಿಯಬೇಕಾದ ಮೊದಲ ಪಾಠವೆಂದರೆ ಸರಳತೆ. ಎಲ್ಲವನ್ನೂ ತ್ಯಜಿಸಿದವನು, ಯಾವ ಬಂಧನಕ್ಕೂ ಒಳಗಾಗದವನು ಶಿವ. ಶಿವತತ್ವವೇ ನಮ್ಮ ಅಂತರಂಗದ, ಆತ್ಮದ ಜಾಗೃತಿ ಅಥವಾ ತುರೀಯಾವಸ್ಥೆ, ಅನುಭವದಿಂದ ಮಾತ್ರವೇ ಅರ್ಥವಾಗಬಹುದಾದದ್ದು. ಶಿವನ ಆರಾಧನೆಯೆಂದರೆ, ಸಂಪೂರ್ಣ ಶರಣಾಗತಿ, ಭೌತಿಕ ದೇಹದ ಅರಿವಿನಿಂದ ಆಚೆಗೆ ಅರಿವುಮಾಡಿಕೊಳ್ಳುವುದು ಮತ್ತು ಶಿವತತ್ವದಲ್ಲಿ ಲೀನವಾಗುವುದು. ಶ್ರೀ ವಿಜಯದಾಸರು ತಮ್ಮ ಒಂದು ಕೀರ್ತನೆಯನ್ನು “ಲಿಂಗ.. ಎನ್ನಂತರಂಗ” ಎಂಬ ಮಾತಿನಿಂದಲೇ ಪ್ರಾರಂಭಿಸಿ ಶಿವನನ್ನು ಅಂತರಂಗದಲ್ಲಿ ನೆಲೆಸಿರುವ ದೇವನೆಂದು ಸೂಚಿಸಿದ್ದಾರೆ.
ಶ್ರೀ ಪುರಂದರ ದಾಸರ ಕೀರ್ತನೆಯಲ್ಲಿ ಶಿವರಾತ್ರಿಯಂದು ಶಿವನ ದರುಶನದಿಂದ ಪಡೆಯಬಹುದಾದ ಅನೇಕ ವಿಚಾರಗಳಿವೆ :
|| ಶಿವದರುಶನ ನಮಗಾಯಿತು ಕೇಳಿ | ಶಿವರಾತ್ರಿಯ ಜಾಗರಣೆ ||
|| ಪಾತಾಳಗಂಗೆಯ ಸ್ನಾನವ ಮಾಡಲು | ಪಾಪಗಳೆಲ್ಲ ಪರಿಹಾರವು |
|| ಜ್ಯೋತಿರ್ಲಿಂಗದ ಧ್ಯಾನವ ಮಾಡಲು | ದ್ಯೂತಗಳಿಲ್ಲ ಅನುದಿನವು ||
ಶಿವರಾತ್ರಿಯಂದು ಶಿವನ ದರುಶನಕ್ಕೆ ಪ್ರಾಮುಖ್ಯತೆ ಎಂಬುದು ಈ ಕೀರ್ತನೆಯಲ್ಲಿ ಪುರಂದರ ದಾಸರು ಸ್ಪಷ್ಟವಾಗಿ ತಿಳಿಸಿದ್ದಾರೆ. ಆ ರಾತ್ರಿ ಜಾಗರಣೆ ಮಾಡುವುದರಿಂದ ಶಿವನ ದರುಶನವಾದಂತೆಯೇ ಎಂಬ ಅರ್ಥ. ಪ್ರತೀ ತಿಂಗಳಿನಲ್ಲೂ ಬರುವ ಶಿವರಾತ್ರಿಯಂದು ಜಾಗರಣೆ – ಉಪವಾಸ ಮಾಡಲು ಸರ್ವರಿಗೂ ಸಾಧ್ಯವಿಲ್ಲವಾದ್ದರಿಂದ, ವರ್ಷಕ್ಕೊಮ್ಮೆ ಬರುವ “ಮಹಾಶಿವರಾತ್ರಿ” ಹಬ್ಬದ ಆಚರಣೆ ಮಾಡುವುದರಿಂದ ಮಾಡದೇ ಬಿಟ್ಟ ಎಲ್ಲಾ ತಿಂಗಳುಗಳ ಶಿವರಾತ್ರಿಯನ್ನು ಆಚರಿಸಿದ ಪುಣ್ಯವನ್ನು ಗಳಿಸಿದಂತಾಗುವುದು.
ಪುರಂದರ ದಾಸರ ಇನ್ನೊಂದು ಕೀರ್ತನೆ “ಚಂದ್ರ ಚೂಡ ಶಿವಶಂಕರ ಪಾರ್ವತಿ ರಮಣಾ..ನಿನಗೆ ನಮೋ ನಮೋ” ಎನ್ನುತ್ತಾ “ನಂದಿ ವಾಹನಾ ಆನಂದದಿಂದ ಮೂಜಗದಿ ಮೆರೆವನು ನೀನೆ”.. ಎಂದು ಸ್ತುತಿಸಿದ್ದಾರೆ.
ಶ್ರೀ ಜಗನ್ನಾಥದಾಸರು “ನೀಲಲೋಹಿತಾ ಪಾಲಯ ಮಾಂ” ಎಂಬ ಕೀರ್ತನೆಯಲ್ಲಿ ಕೂಡ ಶಿವನನ್ನು ಒಲಿಸಿಕೊಳ್ಳುವುದು ಮುಕ್ತಿ ಮಾರ್ಗಕ್ಕೆ ಸೋಪಾನವೆಂಬುದನ್ನು ತಿಳಿಸಿದ್ದಾರೆ.
ಶ್ರೀ ಕನಕದಾಸರು ತಮ್ಮ “ಶಿವ ಶಿವ ಶಿವ ಎನ್ನಿರೋ.. ಮೂರ್ಜಗದವರೆಲ್ಲಾ” ಎಂಬ ಕೀರ್ತನೆಯಲ್ಲಿ ಶಿವ ನಾಮದ ಜಪ ಆಗಮ ಸಿದ್ಧಾಂತದ ಮೂಲದ ಜಪವೆಂದೂ, ನಮ್ಮೆಲ್ಲಾ ರೋಗಗಳ ಪರಿಹರಿಸುವ ಔಷಧಿಯೆಂದೂ ಹೇಳುತ್ತಾರೆ. ಮನುಜ ಜನ್ಮದಲ್ಲಿ ಹುಟ್ಟಿ ಮೈ ಮರೆತು ಇರಬಾರದೆಂದೂ, ತನು-ಮನ-ಪ್ರಾಣವನ್ನು ವ್ಯರ್ಥ ಮಾಡದೆ ಶಿವನಿಗೆ ಸಮರ್ಪಿಸಬೇಕೆಂದೂ ತಿಳಿಸುತ್ತಾರೆ. ಕೋಟಿ ಅಪರಾಧಗಳ ತ್ಯಜಿಸಬೇಕಾದರೆ, ಜವನ ಬಾಧೆಯನ್ನು ಜಯಿಸಬೇಕಾದರೆ, ಮೃತ್ಯುಂಜಯನ ಮೊರೆ ಹೋಗದೆ ಬೇರೆ ದಾರಿಯೇ ಇಲ್ಲವೆಂಬ ಸತ್ಯವನ್ನು ತುಂಬಾ ಸ್ಪಷ್ಟವಾಗಿ ಬಿಡಿಸಿ ಇಟ್ಟಿದ್ದಾರೆ.
ಸಂಗೀತ ಪಿತಮಹಾರಾದ ಶ್ರೀ ತ್ಯಾಗರಾಜರು ಕೂಡ ತಮ್ಮ “ಶಿವ ಶಿವ ಶಿವ ಎನ್ನರಾದ”.. ಎಂಬ ಕೃತಿಯಲ್ಲಿ ಭವದ ಬಾಧೆಗಳನ್ನೆಲ್ಲಾ ಕಳೆಯಲು ಶಿವನ ಮೊರೆ ಹೋಗುವುದೊಂದೇ ದಾರಿ ಎಂದಿದ್ದಾರೆ.
ಚಿತ್ರಕೃಪೆ : ಅಂತರ್ಜಾಲ
ಶಿವರಾತ್ರಿಯ ಶುಭಸಮಯದಲ್ಲಿ ಉದ್ಬೋಧಕವಾದ ಲೇಖನವನ್ನು ಬರೆದಿರುವಿರಿ. ಶಂಕರಾಚಾರ್ಯರ ಶಿವಪಂಚಾಕ್ಷರೀ ಸ್ತುತಿಯ ವಿವರಣೆಯನ್ನು ಓದಿ ಖುಶಿಯಾಯಿತು. ಧನ್ಯವಾದಗಳು.
ReplyDelete'ಕರುಣಾನಿಧಿಯೆ ಈಶ ಅರುಣಗಿರಿಯ ವಾಸ'. ಶಿವರಾತ್ರಿಗೆ ಉತ್ತಮ ಲೇಖನವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಮತ್ತು ನಿಮಗೆ ಶಿವರಾತ್ರಿಯ ಶುಭಾಶಯಗಳು.
ReplyDeleteಮುಕುತಿ ಪಥಕೆ ಮನವೀವ ಮಹಾರುದ್ರದೇವರನ್ನು ಸ್ಮರಿಸುತ್ತಾ, ಶಿವರಾತ್ರಿ ಆಚರಣೆಯ ಸ೦ದರ್ಭದಲ್ಲಿ ಉತ್ತಮ ಸ೦ಗ್ರಹಯೋಗ್ಯ ಲೇಖನವನ್ನು ಪ್ರಸ್ತುತಿಸಿದ ಶ್ಯಾಮಲಾ ಅವರಿಗೆ ಅಭಿನ೦ದನೆಗಳು ಹಾಗೂ ಶಿವರಾತ್ರಿಯ ಶುಭಾಶಯಗಳು.
ReplyDeleteಅನ೦ತ್
ಮೇಡಮ್,
ReplyDeleteಶಿವರಾತ್ರಿಯಂದು ತುಂಬಾ ಸೊಗಸಾದ ಲೇಖನವನ್ನು ಬರೆದಿದ್ದೀರಿ...ತುಂಬಾ ಚೆನ್ನಾಗಿದೆ...
ಶ್ಯಾಮಲಾಜೀ, ಶಿವರಾತ್ರಿಯ ದಿನಕ್ಕೆ ಸೊಗಸಾದ ಮಾಹಿತಿ ಮತತು ನಿರೂಪಣೆಯೊಂದಿಗೆ ಶಿವಧ್ಯಾನದ ಮಹತ್ವವನ್ನು ತಿಳಿಸಿದ್ದೀರಿ. ಧನ್ಯವಾದಗಳು.
ReplyDeleteshivaraatriyandu shivana panchakshari mantrada mahatva chennaagi tilisiddiri.
ReplyDelete+1
ReplyDeleteಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.... :-)
ReplyDeleteಧನ್ಯವಾದಗಳು. ಅಕ್ಕನವರಿಗೆ.
ReplyDelete