ಶ್ರೀ ರಾಮಚಂದ್ರ ರಾಮಾಯಣದ ನಾಯಕನಾದರೂ, ಭಗವಂತನ ಅವತಾರವೇ ಆದರೂ ನಮ್ಮಂತಹ ಸಾಮಾನ್ಯರ ಮನಸ್ಸಿನಲ್ಲಿ “ರಾಮ” ನಾಗಿಯೇ ಉಳಿದಿದ್ದಾನೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ರಾಮಾವತಾರ ವಿಶಿಷ್ಟವಾದ ಪ್ರಾಮುಖ್ಯತೆ ಪಡೆದಿದ್ದರೂ, ಶ್ರೀರಾಮನನ್ನು ಪ್ರತಿಯೊಬ್ಬರೂ ತಮ್ಮದೇ ಆದ ಒಂದು ಆಯಾಮದಲ್ಲಿ, ತಮ್ಮದೇ ಆದ ಒಂದು ಅಭಿಪ್ರಾಯದಲ್ಲಿ, ತಮ್ಮದೇ ಆದ ಒಂದು ಭಾವದಲ್ಲಿ ಜೀವಂತ ಮೂರ್ತಿಯಾಗಿ ತಮ್ಮ ಮನದಂಗಳದಲ್ಲಿ ಪ್ರತಿಷ್ಠಾಪಿಸಿಕೊಂಡಿರುತ್ತಾರೆ. ಸುಖವಾಗಲಿ, ದು:ಖವಾಗಲಿ, ರಾಮನನ್ನು ಅತಿ ಸುಲಭವಾಗಿ ಕರೆದುಬಿಡುವ ನಮ್ಮ ಜೀವನದಲ್ಲಿ, ದೈನಂದಿನ ಬದುಕಿನಲ್ಲಿ ರಾಮ ಪ್ರತಿ ಕ್ಷಣವೂ, ಜ್ವಲಂತವಾಗಿ ಅತ್ಯಂತ ನಿಕಟವಾಗಿ ಹಾಸುಹೊಕ್ಕಾಗಿದ್ದಾನೆ. ಭಗವಂತನ ಅವತಾರವಾದರೂ ಕೂಡ ರಾಮ “ನಮ್ಮ ರಾಮ”ನೆಂಬ ಒಂದು ಸುಂದರ ಭಾವವಾಗಿ ನಮ್ಮೊಡನೆ ಸದಾ ನೆಲೆಸಿದ್ದಾನೆ.
ರಾಮ ಎಂಬ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲಿರಯ್ಯಾ.? ಎಂಬ ದಾಸರ ಪದ ರಾಮನನ್ನು ನಮಗೆ ಇನ್ನೂ ಹತ್ತಿರದವನಾಗಿ ಕಾಣಿಸುವಂತೆ ಮಾಡುತ್ತದೆ. ಎರಡೇ ಎರಡು ಅಕ್ಷರಗಳ ಉಚ್ಛಾರಣೆಯಿಂದಲೇ ನಮ್ಮ ದು:ಖತಪ್ತ ಮನಸ್ಸು ಹತೋಟಿಯಾಗಿ ಬಿಡುತ್ತದೆ, ಸುಖದ ಗಮವನ್ನು ನಾಸಿಕಕ್ಕೆ ತಂದು ಕೊಡುತ್ತದೆಂದರೆ ರಾಮ ಭಗವಂತನೆಂಬ ಭಕ್ತಿಗಿಂತ ಹೆಚ್ಚಾದ ಇನ್ನೇನೋ ಒಂದು ಶಕ್ತಿ, ಭಾವ ಇರಬೇಕೆಂದು ಮನಸ್ಸು ಹುಡುಕುವಂತೆ ಮಾಡುತ್ತದೆ. ರಾಮಾಯಣದಲ್ಲಿನ ಅಸಂಖ್ಯಾತ ಪಾತ್ರಧಾರಿಗಳಲ್ಲಿ, ತುಂಬಾ ಆಪ್ತವಾಗುವುದು ರಾಮನ ಪಾತ್ರ ಮಾತ್ರವೇ, ಕಥಾನಾಯಕನೆಂದಲ್ಲ, ಭಗವಂತನ ಅವತಾರವೆಂದೂ ಅಲ್ಲ... ಹಾಗಾದರೆ ಮತ್ತೇನು ಎಂದು ಹುಡುಕುವಾಗ ಬರೀ ಒಂದಲ್ಲಾ, ಅಸಂಖ್ಯಾತ ಭಾವಗಳ ಸಮ್ಮಿಲನ “ರಾಮ”, ಪ್ರತೀ ವ್ಯಕ್ತಿಯೂ ತನ್ನ ಸುತ್ತಲೂ ಇರುವ ಎಲ್ಲಾ ಪಾತ್ರಗಳಲ್ಲೂ ಕಾಣ ಬಯಸುವ ಒಂದು ವಿಶೇಷ “ಭಾವ” ಎಂಬುದರ ಅರಿವು ನಮಗೆ ಆಗುತ್ತದೆ.
ಇದುವರೆಗೂ ರಾಮಾವತಾರದ ಮೇಲೆಯೂ, ರಾಮಾಯಣ ಕಾವ್ಯದ ಮೇಲೆಯೂ ಅನೇಕ ಗ್ರಂಥ, ಸಾಹಿತ್ಯ ರಚನೆಗಳಾಗಿವೆ. ಆದರೆ ಅದೆಲ್ಲಕ್ಕೂ ಮೀರಿದ ಒಂದು ವೈಯುಕ್ತಿಕ ಭಾವ, ಅವರವರದೇ ಆದ ಒಂದು ಅಂತರಂಗದ ಅನಿಸಿಕೆ, ಆತ್ಮದ ಜೊತೆಗಿನ ಸಂಬಂಧ ರಾಮನನ್ನು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ರೂಪದಲ್ಲಿ, ವಿಧದಲ್ಲಿ, ಅದೊಂದು “ತತ್ವ” ಎಂಬಂತಹ ಅನುಭವವಾಗುವಂತೆ ಮಾಡುತ್ತದೆ.
ರಾಮನನ್ನು ನಾವು ಎಲ್ಲದರಲ್ಲೂ ಕಾಣಬಹುದು. ಕಣ್ಣು ಮುಚ್ಚಿ “ರಾಮ” ಜಪ ಆರಂಭಿಸಿದರೆ, ನಮ್ಮ ಕಣ್ಣೆದುರಿಗೆ ಒಂದು ಅತೀ ಸುಂದರವಾದ ರೂಪ ಸುಳಿಯುತ್ತದೆ. ಪ್ರಸನ್ನ ಮುಖಭಾವ ಶಾಂತತೆಯನ್ನು ಪ್ರಚೋದಿಸುವ ಆಹ್ಲಾದಕರ ಮುಖಮುದ್ರೆ. ನಮ್ಮ ವಿಚಲಿತವಾದ ಮನಸ್ಸಿನ ಎಲ್ಲಾ ಭಾವಗಳನ್ನೂ ಒಮ್ಮೆಲೇ ಶಾಂತಗೊಳಿಸಬಲ್ಲ ಮುದ್ರೆ. ಹೀಗೆ ಕಣ್ಣು ಮುಚ್ಚಿದ ಕೂಡಲೇ ನಮ್ಮ ಮುಂದೆ ಬಂದ ರೂಪ ನಮ್ಮ ಮನಸ್ಸಿಗೆ ಸಮಾಧಾನವನ್ನು ಕೊಡುತ್ತದೆ. ಹಾಗಾದರೆ ಇಲ್ಲಿ ನಾವು ಯಾವಾಗಲೂ ಅರಸುವ “ಶಾಂತಿ”ಯನ್ನು ರಾಮ ಎನ್ನಬಹುದಲ್ಲವೇ..? ಆ ಪ್ರಮಾಣಬದ್ಧ ಸುಂದರ ಮುಖ ನಮಗೆ ಅರಳಿದ ಕಮಲದಂತಿದೆ ಎನ್ನಿಸಿದಾಗ ನಮಗೆ ಸುಂದರ ಹೂವಿನ ಭಾವ ಜಾಗೃತಿಗೊಳಿಸಿದ್ದಕ್ಕಾಗಿ, ಸುಖವಾದ ಭಾವವನ್ನು ಅನುಭವಿಸುವಂತೆ ಮಾಡಿದ್ದಕ್ಕಾಗಿ ನಾವು ರಾಮನನ್ನು “ಸುಖಾಸ್ಪದ” – ನಿತ್ಯಸುಖದ ನೆಲೆಮನೆಯಾಗಿರುವವನು, ಆದ್ದರಿಂದ ರಾಮ “ಸುಖ”ವೆಂಬ ಒಂದು ಭಾವ ಎನ್ನಬಹುದೇ..? ರಾಮನ ಗುಣವಿಶೇಷಣಗಳನ್ನೂ, ಸೌಂದರ್ಯವನ್ನೂ ವರ್ಣಿಸುತ್ತಾ ಹೋದಂತೆ ರಾಮ ನಮಗೆ ಪ್ರತಿಯೊಂದರಲ್ಲೂ ಅಭಿವ್ಯಕ್ತವಾಗುತ್ತಾ ಹೋಗುತ್ತಾನೆ. ರಾಮನ ಅವತಾರ ಭೂಮಿಗೆ ಬಂದಾಗ, ಆ ದಿವ್ಯ ಬೆಳಕಿನ ಕಿರಣಗಳ ಸ್ಪರ್ಶದಿಂದ ಅನೇಕ ಜೀವ ಕೋಟಿಗಳಿಗೆ ಚೈತನ್ಯ ಬಂದಿತೆಂಬ ಮಾತು ನೆನಪಾದಾಗ, ನಾವು ರಾಮನನ್ನು “ಚೈತನ್ಯ” ಎನ್ನಬಹುದೇ....? ರಾಮನ ನೆನಪೇ ನಮ್ಮಲ್ಲಿರುವ ಜಡತ್ವವನ್ನು ತೊಲಗಿಸಿ, ಚೈತನ್ಯದಾಯಕರನ್ನಾಗಿ ಮಾಡುತ್ತದಲ್ಲವೇ..? ಮಾನವರ ಭೌತಿಕ ದೇಹದಲ್ಲೇ ಇಷ್ಟು ಬದಲಾವಣೆ ಸಾಧ್ಯವಾಗುವುದಾದರೆ, ನಾವು ರಾಮನನ್ನು ನಮ್ಮದೇ “ಆತ್ಮ”ದಲ್ಲಿ ನೆಲೆಸಿರುವ ದಿವ್ಯ ಪ್ರಭೆಯೆಂಬ ಭಾವವನ್ನು ಬೆಳೆಸಿಕೊಂಡಾಗ ನಮಗೆ ರಾಮ ನಮ್ಮೆಲ್ಲಾ ಭಾವಗಳ ಒಡೆಯನಲ್ಲವೇ ಎನ್ನುವುದಕ್ಕಿಂತ ಅವನೇ ನಮ್ಮೆಲ್ಲಾ ಭಾವಗಳು ಎಂಬ ಆನಂದಾನುಭವ ಆಗುವುದಲ್ಲಾ, ಹಾಗಾದರೆ ನಾವು ರಾಮನನ್ನು “ಭಾವನೆ” ಎನ್ನಬಹುದೇ..?
ಇನ್ನು ಶ್ರೀರಾಮನ ಆಗಮನದಿಂದ ಪ್ರಕೃತಿಯಲ್ಲಿನ ಬದಲಾವಣೆಗಳನ್ನು ಗಮನಿಸಿದರೆ, ವಸಂತ ಋತುವಿನ ಆಗಮನವೆನ್ನಬಹುದಾದರೆ ರಾಮ “ಋತು” ಎಂದಾಯಿತು. ವಸಂತ ಋತುವೆಂದರೆ ಹೊಸ ಚಿಗುರು ಚಿಗುರುವುದೆಂಬರ್ಥ. ಹಾಗಾದರೆ ಇಲ್ಲಿಯೂ ರಾಮ ಹೊಸ ಚಿಗುರು – ಜೀವ ಸೃಷ್ಟಿಯಾದನೆಂದಾಯಿತು. ರಾಮನನ್ನು “ಚಿಗುರು” ಎನ್ನಬಹುದೇ...? ಪ್ರಖರ ಬೆಳಕು, ತಿಳಿ ತಿಳಿ ಮೋಡಗಳೂ, ದಟ್ಟ ಹಸಿರೂ ಸೇರಿ ವಸಂತ ಋತುವಾದರೆ, ರಾಮನನ್ನು ನಾವು ಬೆಳಕು, ತಿಳಿ ಮೋಡ, ಹಸಿರು ಎಂದೂ ಕೂಡ ತಿಳಿಯಬಹುದು.
ರಾಮಚಂದ್ರನ ವಿಶೇಷಣಗಳನ್ನು ಗಮನಿಸುತ್ತಾ ಹೋದರೆ, ಭಗವಂತನ ಅವತಾರವೆಂದು ಸ್ಪಷ್ಟವಾದರೂ ಕೂಡ, ನಮಗೆ ಭೌತಿಕವಾಗಿ ನಮ್ಮ ಇಂದ್ರಿಯಗಳು ಅನುಭವಿಸುವ ಭಾವಗಳೇ ಹೆಚ್ಚು ಅರ್ಥವಾಗುವುದರಿಂದ, ನಾವು ನಮ್ಮ ಸುತ್ತಲಿನ ಎಲ್ಲಾ ಜೀವ – ನಿರ್ಜೀವ ವಸ್ತುಗಳಲ್ಲೂ ರಾಮನನ್ನು ಹುಡುಕುತ್ತಾ, ಎಲ್ಲದರಲ್ಲೂ ರಾಮನನ್ನೇ ಕಾಣುತ್ತಾ, “ರಾಮ” ಎಂಬ ಎರಡೇ ಅಕ್ಷರದ ಅನುಭೂತಿ ಪಡೆಯುವ ಪ್ರಯತ್ನ ಮಾಡುತ್ತಾ ಸಾಗಿದಾಗ, ನಮಗೆ ರಾಮ ಎಷ್ಟು ಆತ್ಮೀಯ, ಆಳ, ವ್ಯಾಪ್ತಿ, ವಿಸ್ಮಯ ಎನ್ನುವುದು ಅಚ್ಚರಿ ಹುಟ್ಟಿಸುತ್ತದೆ. ನಮ್ಮ ನವರಸಗಳೆಲ್ಲವೂ ರಾಮನೇ.. ನಮ್ಮ ಅತಿ ಹತ್ತಿರದ ಬಂಧು, ನಮ್ಮ ಆತ್ಮೀಯ ಎನ್ನುವ ಭಾವ ದಟ್ಟವಾಗುತ್ತಾ ಹೋಗುತ್ತದೆ.
ರಾಮ "ನವರಸ"ಗಳು ಎಂಬುದನ್ನು ವಿಸ್ತರಿಸುತ್ತಾ ಹೋದಾಗ ಎಲ್ಲಕ್ಕಿಂತ ಮೊದಲು ನಾವು ’ರಸ’ವೆಂದರೇನೆಂಬ ಅರ್ಥ ವಿವರಣೆ ಕೊಡಬೇಕಾಗುತ್ತದೆ. ರಸವೆಂದರೆ ನಮ್ಮ ಮನಸ್ಸಿನ ಭಾವ, ಬುದ್ಧಿಯು ಗುರುತಿಸುವ ವಿವಿಧ ರೀತಿಯಲ್ಲಿ ಭಾವಗಳನ್ನು ತೋರ್ಪಡಿಸಿಕೊಳ್ಳುವ ಒಂದು ನವಿರಾದ ವಿಧಾನ. ಒಂದೊಂದು ರಸವೂ ಒಂದೊಂದು ಭಾವದೊಂದಿಗೆ ಬೆರೆತುಕೊಂಡಿದೆ. ಇವು ಒಂಬತ್ತು ಬಗೆಯಲ್ಲಿ ಪ್ರದರ್ಶಿತಗೊಳ್ಳುತ್ತವೆ. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಎಲ್ಲಕ್ಕಿಂತ ಅತಿ ಮುಖ್ಯವಾದದ್ದು ಶಾಂತ.
೧) ರಾಮ-ಸೀತೆಯರ ಒಲವು ಅನೇಕ ಶೃಂಗಾರ ಕಾವ್ಯಗಳಿಗೆ ಸ್ಫೂರ್ತಿಯಾಗಿದೆ. "ಸಂಯೋಗ" ಮತ್ತು "ವಿಯೋಗ" ಎರಡೂ ಸಂದರ್ಭಗಳಲ್ಲೂ ಅವರ ಆದರ್ಶ ಪ್ರೇಮ ವಿಶ್ವಕ್ಕೇ ಮಾದರಿಯಾಗಿದೆ.
೨) ಸುಂದರಕಾಯನಾದ ರಾಮ ಕರುಣಾಸಮುದ್ರನಂತಿದ್ದಾನೆ. ನಮ್ಮ ಅಂತರಂಗವನ್ನು ತೆರೆದು ರಾಮನ ಮುಂದೆ ಕುಳಿತಾಗ ಕರುಣೆಯ ಅಲೆಗಳಲ್ಲಿ ನಮ್ಮನ್ನು ತೇಲಿಸಿ, ಸಂತೈಸುತ್ತಾನೆ.
೩) ರಾಮ ಬಾಲಕನಿದ್ದಾಗಿನಿಂದಲೂ ರಾಮಾಯಣದ ಉದ್ದಕ್ಕೂ ಪ್ರದರ್ಶಿತವಾಗುವ ರಾಮನ ಧೈರ್ಯ, ವೀರತ್ವ ಎಲ್ಲರಿಗೂ, ಎಂದಿಗೂ ಆದರ್ಶಪ್ರಾಯವಾಗಿದೆ. ನಮ್ಮ ಬಾಳಿನ ಸಂಕಟಗಳನ್ನೆಲ್ಲಾ ಧೈರ್ಯವಾಗಿ ಮತ್ತು ವೀರರಾಗಿ ಎದುರಿಸುವ ಸ್ಥೈರ್ಯವನ್ನು ನಾವು ರಾಮನಿಂದ ಪಡೆಯುತ್ತೇವೆ. ನಾವೇ ರಾಮನಾಗಿ, ಎಂದಿಗೂ ಗುರಿ ತಪ್ಪದ "ರಾಮಬಾಣ"ಗಳನ್ನು ಬಿಟ್ಟು ಸಂಸಾರವೆಂಬ ಕದನದಲ್ಲಿ ಜಯಿಸುತ್ತೇವೆ.
೪) ರಾಮನನ್ನು ನವರಸಗಳಲ್ಲಿ ವಿವರಿಸಲು ಹೋದಾಗ ನನ್ನ ಅಭಿಪ್ರಾಯದಲ್ಲಿ "ರೌದ್ರ", "ಭಯಾನಕ" ಹಾಗೂ "ಭೀಭತ್ಸ"ವೆಂಬ ಭಾವಗಳಲ್ಲಿ, ದಾನವರನ್ನು ರೌದ್ರರೂಪನಾಗಿ ದಮನ ಮಾಡಿ ಯಜ್ಞಗಳನ್ನು ರಕ್ಷಿಸಿದನೆಂದೂ, ದರ್ಶನ ಮಾತ್ರದಿಂದಲೇ ಅಭಯ ಪ್ರಧಾನ ಮಾಡುವ ಮೂಲಕ ಭಯಾನಕ ರಸವನ್ನೇ ತೊಡೆದು ಬಿಡುವವನನೆಂದೂ, ನಾವು ರೌದ್ರತೆ (ಕೋಪ) ಬಿಡಬೇಕು, ಭಯವನ್ನು ಜಯಿಸಬೇಕು, ಯಾರನ್ನೂ ದ್ವೇಷಿಸಬಾರದು ಎಂಬ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.
೫) "ಅದ್ಭುತ"ವಾದ ರಾಮನ ಕಥೆಗಳನ್ನು ಕೇಳುತ್ತಾ, ನಮ್ಮೊಳಗೇ ಎಲ್ಲಾ ಭಾವಗಳನ್ನೂ ಅನುಭೂತಿಸುತ್ತಾ, ರಾಮನೊಡನೆ ನಮ್ಮಂತರಂಗದ ಪ್ರತೀ ಭಾವಕ್ಕೂ, ಪ್ರತೀ ಕ್ಷಣವೂ ನಂಟುಬೆಳೆಸಿಕೊಳ್ಳುತ್ತಾ "ರಾಮ"ನೆಂಬ ಅದ್ಭುತ ತತ್ವವನ್ನು ಅರಿಯುವ ಪ್ರಯತ್ನವೇ ನಮ್ಮ ಬಾಳಿನ ಗುರಿಯಾಗಬೇಕು.
ಇವೆಲ್ಲಾ ಭಾವಗಳ ಜೊತೆಗೆ ರಾಮನ ಅತಿ ಮನೋಹರ ರೂಪ, ಧೃಡಕಾಯ ನಮಗೆ "ಧೃಡತೆ"ಯ ಭಾವವನ್ನು ಸೂಚಿಸುತ್ತದೆ. ಆಜಾನುಬಾಹು ರಾಮನ ಮುಂದೆ ನಾವು ತಲೆಬಾಗಿದಾಗ, ನಮ್ಮನ್ನು ಪೊರೆಯುವ, ರಕ್ಷಿಸುವ ದೇವ ಎಂಬ ಭಾವ ನೆಲೆಸುತ್ತದೆ. ರಾಮ "ನಂಬಿಕೆ" ಕೂಡ ಬಿಂಬಿಸುತ್ತಾನೆ. ಒಂದೇ ಒಂದು ಕ್ಷಣ ಶ್ರೀರಾಮ ಚಂದ್ರನ ಮೂರ್ತಿಯನ್ನು ನಮ್ಮ ಮನದಲ್ಲಿ ನೆನಪಿಸಿಕೊಂಡಾಗ ಬರುವ ಆ ಆತ್ಮನಂಬಿಕೆಯ ಭಾವ, ರಾಮ ನಮ್ಮದೇ ದೈವ, ನಂಬಿಕೆಯ ಸಾಕಾರಮೂರ್ತಿ ಎಂದುಕೊಂಡಾಗ ಜೀವ ಧನ್ಯವೆನಿಸುತ್ತದೆ ಮತ್ತು ಉತ್ಸಾಹದ ಚಿಲುಮೆಯಾಗುತ್ತದೆ. ಇದೆಲ್ಲಕ್ಕಿಂತಲೂ ಮಿಗಿಲಾದ ಮತ್ತು ಮುಖ್ಯವಾದ ಒಂದೇ ಒಂದು ಭಾವ ನನಗೆ ತುಂಬಾ ಆರ್ದ್ರತೆಯನ್ನು ಕೊಡುವುದು ರಾಮನನ್ನು ತಾಯಿಯೆಂಬ ಭಾವದಲ್ಲಿ ನೋಡಿದಾಗ. ಶ್ರೀರಾಮನ ಮೂರ್ತಿಯ ಮುಂದೆ ಮಂಡಿಯೂರಿ ಕುಳಿತಾಗ, ನನ್ನ ಮನಸ್ಸು "ಅಮ್ಮಾ..." ಎಂದು ಕರೆಯುತ್ತಾ ತಾಯಿಯೆಡೆಗೆ ನೋಡುವ ಮಗುವಾಗಿ ಬಿಡುತ್ತದೆ.
ಶ್ರೀರಾಮನೆಂದರೆ ಮರ್ಯಾದಾ ಪುರುಷೋತ್ತಮನೆಂದೂ, ಅತ್ಯಂತ ಸಂಭಾವಿತನೆಂದೂ ಆರಾಧಿಸುತ್ತೇವೆ. ಸಮಯ ಬಂದಾಗ ದುಷ್ಟ ಶಕ್ತಿಗಳ ನಿವಾರಣೆ ಮಾಡಿದ ಭಗವಂತನೆಂದು ಕೊಂಡಾಗ, ನಮಗೆ ರಾಮ ನಮ್ಮಲ್ಲಿರುವ ದುರ್ವ್ಯಸನಗಳನ್ನು ದಮನ ಮಾಡಲು, ನಮ್ಮ ಮನಸ್ಸನ್ನು ಭಗವಂತನ ಪಾದದಲ್ಲಿ ನೆಲೆಗೊಳಿಸಲು, ಗುರುವಾಗಿ ಹತ್ತಿರವಾಗುತ್ತಾನೆ. ಸಮಚಿತ್ತದಿಂದ ಬದುಕು ನಡೆಸಲು ಆದರ್ಶ ವ್ಯಕ್ತಿಯಾಗಿ ಕಾಣಿಸುತ್ತಾನೆ. ಅನುಕರಿಸಲೇ ಬೇಕಾದ ಸೌಮ್ಯ ಸ್ವಭಾವ, ಗಂಭೀರಾಕೃತಿ, ಇಂದ್ರಿಯಗಳ ನಿಗ್ರಹ ಶಕ್ತಿ, ರೂಪ ಲಾವಣ್ಯ.. ಎಲ್ಲವೂ ರಾಮನನ್ನು ನಮ್ಮ ಮನದಲ್ಲಿ ನೆಲೆಗೊಳಿಸಲು ಸುಲಭ ಸಾಧ್ಯವಾಗುವಂತೆ ಮಾಡಿದೆ. ಪತ್ನಿಯೆಡೆಗಿನ ಅನುಪಮ ಪ್ರೇಮ, ಸೋದರ ವಾತ್ಸಲ್ಯ.. ಹೀಗೆ ಪಟ್ಟಿ ಮಾಡುತ್ತಾ ಹೋದಾಗ ರಾಮ ಭಗವಂತ ಎನ್ನುವುದಕ್ಕಿಂತ ನಮ್ಮೆಲ್ಲೇ, ನಮ್ಮೊಳಗೇ ನೆಲೆಸಿರುವ ನಮ್ಮದೇ ಆತ್ಮಸಖ ಎನ್ನುವ ಅತಿ ನಿಕಟ ಸಂಬಂಧದ ಭಾವ ಬರುತ್ತದೆ.
"ರಾಮಾಯ ರಾಮಭದ್ರಾಯ | ರಾಮಚಂದ್ರಾಯ ವೇಧಸೇ |
ರಘುನಾಥಾಯ ನಾಥಾಯ | ಸೀತಾಯ ಪತಯೇ ನಮ: || ಎಂಬ ಎರಡು ಸಾಲಿನ ಶ್ಲೋಕದಲ್ಲಿ ರಾಮ ತನ್ನ ತಂದೆಗೆ ರಾಮನೂ, ವಾತ್ಸಲ್ಯಮಯಿ ತಾಯಿಗೆ ರಾಮಭದ್ರನೂ, ಕನ್ನಡಿಯಲ್ಲಿ ಚಂದ್ರನನ್ನು ತೋರಿಸಿದ ಕೈಕೇಯಿಗೆ ರಾಮಚಂದ್ರನೂ, ಪರತತ್ವವೆಂದು ತಿಳಿದ ವಸಿಷ್ಠರಿಗೆ ವೇಧಸೇ, ಅಯೋಧ್ಯೆಯ ಜನರಿಗೆ ರಘುನಾಥ ಮತ್ತು ಸೀತಮ್ಮನ ಪತಿ ಮತ್ತು ಸೀತೆಗೆ ನಾಥ. ಹೀಗೆ ರಾಮ ಎಲ್ಲರಿಗೂ ಅವರವರದೇ ಭಾವ, ಅವರವರದೇ ಭಕುತಿಯಾಗಿದ್ದಾನೆ.
ಶ್ರೀರಾಮಚಂದ್ರನನ್ನು ನಾವು ಬರೀ ಭಾವಗಳ ಜೊತೆಗೆ ಮಾತ್ರ ಹೊಂದಿಸುವುದಿಲ್ಲ. ಬದುಕಿನ ಪ್ರತೀ ಹಂತದಲ್ಲೂ, ನಮ್ಮ ಸುತ್ತಲಿರುವ ಪ್ರತೀ ವ್ಯಕ್ತಿಯ ಜೊತೆಗೂ ಹೋಲಿಸಿಕೊಳ್ಳುತ್ತೇವೆ. ರಾಮನ ಗುಣವಿಶೇಷತೆಗಳನ್ನು ನಮ್ಮ ಪರಿವಾರದ ವ್ಯಕ್ತಿಗಳಲ್ಲಿ ಹುಡುಕುತ್ತೇವೆ. ರಾಮನಂತಹ ಅಣ್ಣ, ರಾಮನಂತಹ ಪತಿ, ರಾಮನಂತಹ ಮಗ, ರಾಮನಂತಹ ಗೆಳೆಯ... ಹೀಗೆ ಪ್ರತೀ ಸಂಬಂಧದಲ್ಲೂ ರಾಮನನ್ನು ಕಾಣ ಬಯಸುತ್ತೇವೆಂದರೆ ರಾಮ ನಮ್ಮಲ್ಲಿ ಅದೆಷ್ಟು ಆಳವಾಗಿ ಯಾವ ಯಾವ ರೂಪದಲ್ಲಿ ನೆಲೆಸಿದ್ದಾನೆಂಬುದು ತಿಳಿಯುತ್ತದೆ.
ದೇವರ ಮೂರ್ತಿ ಮನದಲ್ಲಿ ಮೂಡಲು ಭಕ್ತಿ ಭಾವದ ಅವಶ್ಯಕತೆಯನ್ನು ಎಲ್ಲಾ ಧಮಗಳಲ್ಲೂ ಬೋಧಿಸಲಾಗಿದೆ... ಪುರಾತನ ಹಿಂದೂ ಧರ್ಮದ ಶ್ರೀರಾಮಾವತಾರ..ಮಾನವನಾಗಿ ತನ್ನಲ್ಲಿನ ದೈವೀ ಶಕ್ತಿಗಳನ್ನು ಎಲ್ಲಿಯೂ ತೋರಿಸದೇ ಕಷ್ಟ ಕಾರ್ಪಣ್ಯ ಸಹಿಸಿ ಕೆಡುಕನ್ನು ಎದುರಿಸಿ ಜಯಿಸಿದ ರೀತಿ... ಮಾನವನಿಗೆ ತನ್ನ ಶಕ್ತಿ ಸೀಮೆಗಳಲ್ಲಿದ್ದು ಜಯಿಸಬಹುದೆಂದು ಹೇಳುತ್ತದೆ... ನನ್ನ ವಿಶ್ಲೇಷಣೆ ಸರಿನಾ ಶ್ಯಾಮಲಾ ಮೇಡಂ...
ReplyDeleteರಾಮ ಎನ್ನುವ ನಾಮಕ್ಕೆ ಶಾಸ್ತ್ರದಲ್ಲಿ ಅನೇಕ ಅರ್ಥಗಳನ್ನು ಕಾಣಬಹುದು. 'ರಾ+ಅಮಃ', ಎಂದರೆ ಅಪರಿಮಿತವಾದ ಆನಂದ ಸ್ವರೂಪ ಹಾಗೂ ಎಲ್ಲರಿಗೂ ಆನಂದವನ್ನು ಹಂಚುವವನು. ಭಗವಂತನ ಈ ಗುಣ ರಾಮಾವತಾರದಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ. ರಾಮಾವತಾರದಲ್ಲಿ ಭಗವಂತ ಎಲ್ಲಿಯೂ ಇನ್ನೊಬ್ಬರಿಗೆ ನೋವಾಗುವಂತೆ ನಡೆದುಕೊಂಡಿಲ್ಲ. ತನ್ನನ್ನು ಕಾಡಿಗೆ ಕಳುಹಿಸಲು ಕಾರಣಕರ್ತೆಯಾದ ಕೈಕೇಯಿಯ ಮೇಲೆ ಎಲ್ಲರೂ ಕೂಪಗೊಂಡಾಗಲೂ ಸಹ ರಾಮಚಂದ್ರ ಒಮ್ಮೆಯೂ ಕೂಡಾ ಕೆಟ್ಟ ಮಾತನ್ನು ಆಡಲಿಲ್ಲ, ಬದಲಿಗೆ "ಸಲಿಗೆಯಿಂದ ನನ್ನಿಂದೇನಾದರೂ ಅಪರಾಧವಾಗಿದ್ದರೆ ಕ್ಷಮಿಸು" ಎಂದು ಹೇಳಿ ಕಾಡಿಗೆ ಹೊರಟು ಹೋದ. ಹೀಗೆ ಇನ್ನೊಬ್ಬರ ಸಂತೋಷಕ್ಕಾಗಿ ತ್ಯಾಗಮಾಡಿ ತೋರಿಸಿದ ಅಪೂರ್ವ ಅವತಾರ ರಾಮಾವತಾರ. ರಮೆಯ ಅರಸಾದ ಸೀತಾಪತಿ ಭಗವಂತ ಈ ಅವತಾರದಲ್ಲಿ ಗಂಡು-ಹೆಣ್ಣಿನ ನಡುವೆ ದಾಂಪತ್ಯ ಜೀವನ ಹೇಗಿರಬೇಕು, ಅಣ್ಣ-ತಮ್ಮಂದಿರ ಪ್ರೀತಿ ಹೇಗಿರಬೇಕು, ತಂದೆ-ತಾಯಿ-ಮಕ್ಕಳ ಬಾಂಧವ್ಯ ಹೇಗಿರಬೇಕು ಎನ್ನುವುದನ್ನು ಸ್ವಯಂ ತೋರಿಸಿ ಕೊಟ್ಟಿದ್ದಾನೆ.
ReplyDeleteರಂ+ಅಮ, ಇಲ್ಲಿ ರಂ 'ಅಗ್ನಿಬೀಜ' 'ಅಮ' ಎಂದರೆ ಅಜ್ಞಾನ. ಆದ್ದರಿಂದ ರಾಮ ಎಂದರೆ ಅಜ್ಞಾನವನ್ನು ಸುಟ್ಟುಬಿಡುವ ಶಕ್ತಿ. ಆದ್ದರಿಂದ ನಿರಂತರ ರಾಮ ಜಪದಿಂದ ನಮ್ಮ ಅಜ್ಞಾನ ಹಾಗೂ ದುರ್ಗುಣಗಳು ಸುಟ್ಟು ಹೋಗುತ್ತವೆ.
ಉತ್ತಮ ಲೇಖನ ಕೊಟ್ಟಿದ್ದಕ್ಕೆ ಧನ್ಯವಾದಗಳು.....
"ರಾಮನಂತಹ ಅಣ್ಣ, ರಾಮನಂತಹ ಪತಿ, ರಾಮನಂತಹ ಮಗ, ರಾಮನಂತಹ ಗೆಳೆಯ..." ಅದ್ಭುತ ಪರಿಕಲ್ಪನೆ. ಜೀವನದಲ್ಲಿ ರಾಮ-ಭಾವ ಹಾಸುಹೊಕ್ಕಾಗಿದ್ದಲ್ಲಿ ಜಗತ್ತೇ ರಾಮರಾಜ್ಯವಾಗುವುದರಲ್ಲಿ ಸ೦ದೇಹವಿಲ್ಲ. ಇದೆಲ್ಲಕ್ಕಿ೦ತ ಹೆಚ್ಚಾಗಿ "ಅಮ್ಮ" ನಾಗುವ ರಾಮ ಮನಸ್ಸನ್ನು ತು೦ಬಿಸಿ ಬಿಡುತ್ತಾನೆ. ಉತ್ತಮ ಲೇಖನವನ್ನು ಪ್ರಸ್ತುತಿಸಿದ ಶ್ಯಾಮಲಾ ಅವರಿಗೆ ಅಭಿನ೦ದನೆಗಳು. ನ೦ದನ ಸ೦ವತ್ಸರದ ಯುಗಾದಿಯು, ಬದುಕನ್ನು ಆನ೦ದಮಯವನ್ನಾಗಿಸಲಿ ಎ೦ದು ಹಾರೈಸುತ್ತೇನೆ.
ReplyDeleteಅನ೦ತ್
ಶ್ಯಾಮಲಾ, ಶ್ರೀರಾಮಚಂದ್ರನ ಕುರಿತ ಬರಹ ಸರಳವಾಗಿ ಮನಮುಟ್ಟುವಂತಿದೆ. ಸಂಸ್ಕೃತ ವ್ಯಾಕರಣ ಕಲಿಯುವವರಿಗೆ 'ರಾಮ' ಶಬ್ದದಿಂದಲೇ... ಆರಂಭವಾಗುತ್ತದೆ. ಉತ್ತಮವಾದ ಲೇಖನವನ್ನು ನೀಡಿದ್ದೀರಿ. ನಿಮಗೂ ಯುಗಾದಿಯ ಶುಭಾಶಯಗಳು ಜೊತೆಗೆ ಮುಂಬರುವ ಶ್ರೀರಾಮ ನವಮಿ ಶುಭಾಶಯಗಳು.
ReplyDeleteಸ್ನೇಹದಿಂದ,
ಚಂದ್ರು
ಶ್ಯಾಮಲಾ ಮೇಡಮ್,
ReplyDeleteಮರ್ಯಾದಾ ಪುರುಷೋತ್ತಮನ ಗುಣಗಳನ್ನು ಸೆರೆ ಹಿಡಿದಂತಹ ಲೇಖನಕ್ಕಾಗಿ ಧನ್ಯವಾದಗಳು.
ರಾಮನವಮಿಯ ಶುಭಾಶಯಗಳು.
ಆಜಾದ್ ಅವರಿಗೆ ನಮಸ್ಕಾರ
ReplyDeleteಶ್ರೀರಾಮ ನಮ್ಮ ಭಾವಕ್ಕೆ.. ನಮ್ಮ ಭಕ್ತಿಗೆ ತಕ್ಕಂತೆ ಮನದಲ್ಲಿ ನೆಲೆ ನಿಲ್ಲುವವ. ನಾವು ಹೇಗೆಲ್ಲಾ ಭಗವಂತನ ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತೇವೋ, ಹಾಗೆಲ್ಲಾ ಒಲಿಯುವ ಸುಂದರ ಭಾವ. ಮಾನವರಂತೆಯೇ ಎಲ್ಲಾ ಕಷ್ಟಗಳನ್ನೂ ಸಹಿಸಿ, ಆದರ್ಶ ಮೆರೆದ ಅವತಾರ. ಧನ್ಯವಾದಗಳು..
ಪ್ರಕಾಶ್..
ReplyDeleteನಿಮ್ಮ ವಿಶ್ಲೇಷಣೆ ನನಗೆ ತುಂಬಾ ಇಷ್ಟವಾಯಿತು. ರಾಮ ಎನ್ನುವುದರ ಅರ್ಥ ಬಿಡಿಸಿ ತಿಳಿಸಿದ್ದೀರಿ. ಹೆಚ್ಚಿನ ಮಾಹಿತಿ ಒದಗಿಸಿದ ನಿಮಗೆ ಧನ್ಯವಾದಗಳು.
ಅನಂತ್ ಸಾರ್...
ReplyDeleteನಿಮ್ಮ ಮಾತು ನಿಜ. ’ಅಮ್ಮ’ ಅನ್ನುವ ಭಾವ ಬಂದರೇ ಸಾಕು ಮನಸ್ಸು ತುಂಬಿ ಬಿಡುತ್ತದೆ. ನಾವು ಆರಾಧಿಸುವ ಭಗವಂತನನ್ನು ಅಮ್ಮನಾಗಿ ಕಾಣುವ ವಿಚಾರವೇ ಪುಳಕಗೊಳ್ಳುವಂತೆ ಮಾಡುತ್ತೆ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..
ಚಂದ್ರೂ...
ReplyDeleteನಮ್ಮ ಕಲಿಯುವಿಕೆ (ಸಂಸ್ಕೃತ) ರಾಮ ಶಬ್ದದಿಂದ ಪ್ರಾರಂಭವಾಗುತ್ತದೆನ್ನುವ ಮಾತು ನೆನಪಿಸಿದ್ದಕ್ಕೂ, ಲೇಖನ ಮೆಚ್ಚಿದ್ದಕ್ಕೂ ಧನ್ಯವಾದಗಳು.
ಕಾಕಾ...
ReplyDeleteಮರ್ಯಾದಾ ಪುರುಷೋತ್ತಮನ ವಿಷಯ ಎಷ್ಟು ಬರೆದರೂ ಮುಗಿಯದು ಕಾಕಾ. ನೀವು ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಆದರೆ ಇದೇನು ಹೊಸ ಪರಿ.. "ಮೇಡಂ"..? :-).. ಬೇಡ ಕಾಕಾ !!
ಎಲ್ಲರಿಗೂ ಶ್ರೀರಾಮ ನವಮಿಯ ಹಾರ್ದಿಕ ಶುಭಾಶಯಗಳು.....
ReplyDeleteಶ್ರೀರಾಮಚಂದ್ರನನ್ನು ಇನ್ನೊಂದು ಆಯಾಮದಲ್ಲಿ ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ. ನಿಮಗೆ ಧನ್ಯವಾದಗಳು.
ReplyDeleteಒಳ್ಳೆಯ ವಿಚಾರ.
ReplyDeleteಮೇಡಮ್,
ReplyDeleteಶ್ರೀರಾಮನ ಬಗ್ಗೆ ಇಷ್ಟೆಲ್ಲಾ ಗೊತ್ತಿರಲಿಲ್ಲ. ಓದಿ ಖುಷಿಯಾಯ್ತು..
ಓದಿ ಪ್ರತಿಕ್ರಿಯಿಸಿದ ಸುಬ್ರಹ್ಮಣ್ಯರಿಗೂ, ಕವಿ ನಾಗರಾಜ್ ರಿಗೂ ಮತ್ತು ಶಿವು ಅವರಿಗೂ ಧನ್ಯವಾದಗಳು..
ReplyDeleteGood writing
ReplyDelete