Showing posts with label ಬೆಳಗು. Show all posts
Showing posts with label ಬೆಳಗು. Show all posts

Sunday, September 19, 2010

ಬೆಳಗಾಗ ನಾನೆದ್ದು ಯಾರ್ ಯಾರ ನೆನೆಯಲಿ......

ಶ್ರವಣ ಮನಕಾನಂದವೀವುದು| ಭವ ಜನಿತ ದು:ಖಗಳ ಪರಿಹರಿಪುದು|
ವಿವಿಧ ಭೋಗಗಳ ಇಹಪರಂಗಳಲಿತ್ತು ಸಲಹುವುದು||
ಭುವನಪಾವನವೆನಿಪ ಲಕ್ಷ್ಮೀ| ರಮಣನ ಮಂಗಳ ಕಥೆಯ ಪರಮೋ |
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ.....


ಬೆಳಗಾಗ ನಾನೆದ್ದು ಯಾರ್ ಯಾರ ನೆನಯಲೀ... ಎಳ್ಳು ಜೀರಿಗೆ ಬೆಳೆಯೋರ ಎಂಬ ನಮ್ಮ ಜಾನಪದ ಉಕ್ತಿಯಂತೇ... ಶ್ರೀ ಜಗನ್ನಾಥ ದಾಸರು ಮಾಡಿರುವ ಸುಭಾಷಿತದ ಅರ್ಥವೂ..... ಚಿಕ್ಕ ವಯಸ್ಸಿನಿಂದಲೂ ನಮಗೆಲ್ಲಾ ಅಮ್ಮ ಬೆಳಿಗ್ಗೆ ಏಳುವಾಗಲಿಂದಲೇ ಭಗವಂತನ ಚಿಂತನೆಯನ್ನುಮಾಡಿಸ ತೊಡಗುತ್ತಾರೆ. ಬಲಗಡೆಗೇ ತಿರುಗಿ ಎದ್ದೇಳು... ಎದ್ದು ಹಾಸಿಗೆಯ ಮೇಲೆ ಪದ್ಮಾಸನದಲ್ಲಿ ಕುಳಿತುಕೋ... ಕಣ್ಣು ಬಿಡಬೇಡ... ಎರಡು ಕರಗಳನ್ನೂ ಬೇಡುವಂತೆ ತೆರೆದು ಜೋಡಿಸಿಟ್ಟುಕೋ... ಕಣ್ಣು ಮುಚ್ಚಿಯೇ... ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ... ಕರಮೂಲೇ ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಂ.. ಎಂದು ಹೇಳಿಕೊಂಡು, ನಿಧಾನವಾಗಿ ಕಣ್ಣು ತೆರೆದು ಮೊದಲು ಕರಗಳನ್ನು ನೋಡು.... ! ಪ್ರಭಾತೇ ಕರದರ್ಶನಂ ಮಾಡುವುದರಿಂದ, ನಮ್ಮಕರಗಳಲ್ಲೇ ನೆಲೆಸಿರುವರೆಂದು ನಾವು ನಂಬಿರುವ ಮುವ್ವತ್ತು ಮೂರು ಕೋಟಿ ದೇವರುಗಳ ದರ್ಶನದಿಂದ ನಮ್ಮ ದಿನ ಉತ್ತಮವಾಗಿ ಆರಂಭವಾಗಲೀ ಎಂಬುದರ ಸಂಕೇತ..... ಅಂದರೆ ನಾವು ನಿದ್ದೆಯಿಂದ ತಿಳಿವು ತಿಳಿದಾಕ್ಷಣ ಸದ್ವಿಚಾರ ಚಿಂತನೆಯಿಂದ ನಮ್ಮ ದಿನಚರಿ ಶುರುವಾಗಲಿ ಎಂಬುದೇ ಇದರ ಉದ್ದೇಶ. ಇದರ ನಂತರ ಸಮುದ್ರವಸನೇ ದೇವಿ ಪರ್ವತಸ್ಥನ ಮಂಡಲೇ.. ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶ ಕ್ಷಮಸ್ವಮೇ.. ಎಂದು ಹೇಳುತ್ತಾ ನಾವು ತುಳಿಯಲಿರುವ ಭೂದೇವಿಯ ಕ್ಷಮೆ ಯಾಚಿಸು... ದಿನ ಪೂರ್ತಿ ಕಾಲಲ್ಲಿ ತುಳಿದು ನೋವು ಕೊಡುವೆಯಾದ್ದರಿಂದ ಭೂಮಾತೆಯನ್ನು ಒಳ್ಳೆಯ ಮನದಿಂದ ನೆನೆದು, ನನ್ನನ್ನು ಸಹಿಸಿಕೋ ಎಂದು ಪ್ರಾರ್ಥಿಸಿ ನಂತರ ಅಡಿ ಎತ್ತಿ ಇಡು.... ಹೀಗೆ ಎಲ್ಲದರಲ್ಲೂ, ಎಲ್ಲರಲ್ಲೂ ಭಗವಂತನನ್ನು ಕಾಣುವ ನಮ್ಮ ಆಚಾರ, ಸಂಸ್ಕೃತಿ ಎಷ್ಟೊಂದು ಶ್ರೀಮಂತವಾಗಿದೆ....

ಮೇಲಿನ ಸುಭಾಷಿತವನ್ನು ನಾನು ಶ್ರೀ ಅರಳು ಮಲ್ಲಿಗೆ ಪಾರ್ಥಸಾರಥಿಯವರ ವಾಚನದಲ್ಲಿ ಕೇಳಿದೆ. ಜಗನ್ನಾಥದಾಸರು ಪರಿಶುದ್ಧ ಮನಸ್ಸಿನಿಂದ ಭಗವಂತನ ಸಾಕ್ಷಾತ್ಕಾರ ಪಡೆದ ದಾಸವರೇಣ್ಯರು... ದಿನಾ ಬೆಳಿಗ್ಗೆ ಏಳುತ್ತಲೇ ಶ್ರೀಪುರುಷೋತ್ತಮನ, ಲಕ್ಷ್ಮೀ ರಮಣನ ಪುಣ್ಯ ನಾಮಸ್ಮರಣೆ ಮಾಡುತ್ತಾ, ಪುಣ್ಯ ಕಥೆಗಳನ್ನು ಕೇಳುತ್ತಾ ದಿನಚರಿ ಆರಂಭಿಸುವುದರಿಂದ, ನಮ್ಮ ಇಡಿಯ ದಿವಸ ಚೆನ್ನಾಗಿ ಒಳ್ಳೆಯ ಕೆಲಸ ಮಾಡುವುದರಲ್ಲಿಯೂ, ಸತ್ ಚಿಂತನೆಗಳಲ್ಲೂ ಕಳೆಯುವುದೆಂಬ ಆದೇಶ..... ನಮ್ಮ ಬದುಕಿನ, ಸಂಸಾರದ ಜಂಝಟಗಳೆಲ್ಲಾ ಕಳೆಯುವುದೂ, ನಾವು ಅಪೇಕ್ಷೆಯೇ ಪಡಲಾರದಷ್ಟು ಸುಖ, ಭೋಗಗಳನ್ನು ಮಹಾಮಹಿಮನು ನಮಗೆ ದಯಪಾಲಿಸುವನು...

ಅತ್ಯಂತ ಒತ್ತಡದ ಬದುಕು ಬದುಕುವ ನಾವು ಹರಿ ಚಿಂತನೆಯಿಂದಲೂ, ಸಕಾರಾತ್ಮಕ ವಿಚಾರಗಳಿಂದಲೂ ದಿನಚರಿ ಆರಂಭಿಸಿದರೆ, ನಾವು ತೆಗೆದುಕೊಳ್ಳಬೇಕಾದ ಮಹತ್ವದ ನಿರ್ಣಯಗಳು ಮತ್ತು ಕೆಲಸಗಳೂ ಸುಗಮವಾಗಿ ಮಾಡುವ ಅವಕಾಶ ಲಭಿಸುತ್ತದೆನ್ನುವುದು ಇದರ ಅರ್ಥ.

ದಾಸರು ಬರಿಯ ಇಹದ ಭೋಗ, ನೆಮ್ಮದಿ, ಸುಖಗಳ ಬಗ್ಗೆ ಹೇಳಿಲ್ಲ. ಅವರು "ಇಹ ಪರ" ಎರಡರ ಮಾತನ್ನೂ ಇಲ್ಲಿ

ಆಡಿದ್ದಾರೆ. ನಮ್ಮ ವಿಚಾರಗಳೇನಿದ್ದರೂ ಕೊನೆಗೆ, ಒಂದೇ ವ್ಯಾಪ್ತಿಗೆ ತಲುಪಬೇಕು.... ಅದೇ "ಶರಣಾಗತಿ". ನಮ್ಮ ಇಲ್ಲಿಯ ಎಲ್ಲಾ ಕರ್ಮಗಳೂ ಮುಂದಿನ ಜನ್ಮಕ್ಕೆ ಬುತ್ತಿ ಎಂದಾಗ, ಅರಿವು ಉಂಟಾಗಿರುವ ಜೀವನ ಸಾರ್ಥಕ್ಯ ಪಡಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಕಲಿಯುಗದಲ್ಲಿ ನಮಸ್ಕಾರ ಮತ್ತು ನಾಮ ಸಂಕೀರ್ತನೆಗಳೆರಡೇ ಸಾಕು ಸದ್ಗತಿ ಹೊಂದಲು ಎಂಬ ಮಾತಿದೆ. ಅದರಂತೆ ನಾವು ಬೆಳಗಾಗುತ್ತಲೇ ಹರಿಸ್ಮರಣೆ ಮಾಡುತ್ತಾ ಶುಭ ಮಂಗಳಕರವಾಗಿರುವ ಲಕ್ಷ್ಮೀ ರಮಣನ ಕಥೆ ಕೇಳುತ್ತಾ ಮನಕಾನಂದ ಪಡೆಯೋಣ ಎಂಬುದೇ ಇದರ ಅರ್ಥ. ಪ್ರಾಥ: ಕಾಲವೇ ಮನಸ್ಸು ಆನಂದ ಹೊಂದಿದರೆ, ದಿನವೆಲ್ಲಾ ಖಂಡಿತಾ ಆನಂದವಾಗಿ ಕಳೆಯಲು ಒಳ್ಳೆಯ ಬುನಾದಿ ಆಗುತ್ತದೆಂಬುದನ್ನು ಸುಭಾಷಿತ ಸೂಚಿಸುತ್ತದೆ. ಒಳ್ಳೆಯ ಮಾತುಗಳನ್ನೂ, ಕಥೆಗಳನ್ನೂ, ಸಂಗೀತವನ್ನೂ, ಕೇಳುವುದರಿಂದ ಮನವೆಂಬ ವನದಲ್ಲಿರುವ ಜೀವ ಕುಸುಮವು ವಿಕಸಿತಗೊಳ್ಳುತ್ತದೆ......


ಚಿತ್ರಕೃಪೆ : ಅಂತರ್ಜಾಲ