Wednesday, November 11, 2009

ಪುಸ್ತಕ ಪರಿಚಯ...... ೧

ದಿವಂಗತ ತ್ರಿವೇಣಿಯವರು ಬದುಕಿ - ಬಾಳಿದ ಕಾಲ ಅಲ್ಪವಾದರೂ, ಅವರು ಈ ದಿನಕ್ಕೂ ನಮ್ಮೊಳಗೆ ತಮ್ಮ ಕೃತಿಗಳ ಮೂಲಕ ಜೀವಂತವಾಗಿದ್ದಾರೆ. ಅವರ ಒಂದೊಂದು ಕಾದಂಬರಿಯೂ ಸಂಗ್ರಹ ಯೋಗ್ಯವಾಗಿದೆ. ಕಥಾ ಸಂಕಲನದ ಪ್ರತಿಯೊಂದು ಸಣ್ಣ ಕಥೆಯೂ ಅತ್ಯಂತ ನಿಪುಣತೆಯಿಂದ ಹೆಣೆದು ನಮ್ಮೆದುರಿಗಿಟ್ಟ ಶ್ರೇಷ್ಠ ಕಥೆಯಾಗಿದೆ. ಆ ದಿನದಲ್ಲೇ ಅವರಿಗಿದ್ದ ಮುನ್ನೋಟ, ವಿಷಯ ನಿರೂಪಣೆಯ ನೈಪುಣ್ಯ, ಇಂದಿಗೂ ನಮ್ಮನ್ನು ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.

ಈ ಕಥಾ ಸಂಕಲನ "ಸಮಸ್ಯೆಯ ಮಗು" ಬಹಳ ಹಿಂದೆ ಓದಿದ್ದೆ. ಈಗ ಮತ್ತೆ ನನ್ನ ಕೈಗೆ ಸಿಕ್ಕ ಪುಸ್ತಕ ಪ್ರತಿಯೊಂದು ಕಥೆಯನ್ನೂ ಹೊಸ ಆಯಾಮದಿಂದ ನೋಡುವಂತೆ ಮಾಡಿದೆ. ಮೊದಲನೆ ಸಲ ನಾನು ಓದಿದಾಗ ವಯಸ್ಸಿನ ಪ್ರಭಾವ ಇರಬಹುದು, ಇಷ್ಟೊಂದು ಗಂಭೀರ ಪರಿಣಾಮ ಬೀರಿರಲಿಲ್ಲ. ಸುಮ್ಮನೆ ಕಥೆ ಎಂಬಂತೆ ಓದಿದ್ದೆ ಅಷ್ಟೆ. ಆದರೆ ಈಗ ಓದುತ್ತಿದ್ದಾಗ ಪ್ರತಿಯೊಂದು ಕಥೆಯ ಜೊತೆಗೂ ನನ್ನನ್ನು ನಾನು ಗುರುತಿಸಿಕೊಳ್ಳಲಾಗುತ್ತಿದೆ. ಚಿಂತಿಸುವ ರೀತಿ ಬದಲಾಗಿದೆ. ಆದರೆ ತ್ರಿವೇಣಿಯವರ ದೂರದೃಷ್ಟಿ ನನ್ನನ್ನು ಅಚ್ಚರಿಪಡಿಸಿದೆ. ನನಗನ್ನಿಸಿದ ಕೆಲವು ಸಂಗತಿಗಳು ನಿಮಗಾಗಿ :..............

೧. ಮೊದಲನೆಯ ಕಥೆಯೇ ಪುಸ್ತಕದ ಶೀರ್ಷಿಕೆ "ಸಮಸ್ಯೆಯ ಮಗು". ಹಿಂದಿನ ಕಾಲದಲ್ಲಿ ಮನೆ ತುಂಬಾ ಮಕ್ಕಳಿದ್ದರೂ ಒಬ್ಬರಿಂದೊಬ್ಬರಿಗೆ ನೋವಾಗುವುದಾಗಲೀ, ವ್ಯಕ್ತಿತ್ವಕ್ಕೆ ಧಕ್ಕೆ ಬರುವುದಾಗಲೀ ಆಗುತ್ತಿರಲಿಲ್ಲ. ಆದರೆ ಈಗ ಮೊದಲ ಮಗುವಿನ ನಂತರ ಎರಡನೆಯ ಮಗು ಹುಟ್ಟಿದಾಗ, ಮೊದಲ ಮಗುವಿಗೆ ತನ್ನನ್ನು ಅಪ್ಪ-ಅಮ್ಮ ಕಡೆಗಣಿಸುತ್ತಿದ್ದಾರೆಂಬ ಭಾವನೆ ಸಹಜವಾಗಿ ಬಂದು ಸಮಸ್ಯೆ ಉಂಟು ಮಾಡುತ್ತದೆ. ಈ ಕಥೆಯಲ್ಲಿ ತ್ರಿವೇಣಿಯವರು ಆಗಿನ ದಿನಗಳಲ್ಲೇ ಈ ಸಮಸ್ಯೆಯನ್ನು ತಮ್ಮ ದೂರ ದೃಷ್ಟಿಯ ಚಿಂತನೆಗಳಿಂದ ನೋಡಬಲ್ಲವರಾಗಿದ್ದರು.

ಇಲ್ಲಿ ಕಥಾನಾಯಕ ನಮ್ಮ ಪುಟ್ಟ ನಾಗೇಂದ್ರ ಅದೇ ರೀತಿಯ ಮನೋ ವೇದನೆಗೊಳಪಡುತ್ತಾನೆ. ತನ್ನನ್ನು ಇನ್ನೂ ಹೆಚ್ಚಾಗಿ ಪ್ರೀತಿಸಲಿ, ತನ್ನ ಕಡೆ ಗಮನ ಕೊಡಲಿ ಎಂಬ ಒಂದೇ ಕಾರಣಕ್ಕಾಗಿ ಮನೆ ಬಿಟ್ಟು ಓಡಿ ಹೋಗುತ್ತಾನೆ. ಆದರೆ ಅದೃಷ್ಟವಶಾತ್ ಒಬ್ಬ ಸಹೃದಯರ ಮೂಲಕ ಮನೆ ತಲುಪುತ್ತಾನೆ. ಅಲ್ಲಿಯ ವಿದ್ಯಾಮಾನಗಳನ್ನೂ, ಆ ಹುಡುಗನ ತಂದೆ ತಾಯಿಯರನ್ನೂ ಭೇಟಿ ಮಾಡಿದ ನಂತರ, ಸಮಸ್ಯೆ ಏನೆಂದು ಅರ್ಥ ಮಾಡಿಕೊಂಡು, ತಂದೆ ತಾಯಿಗೆ ತಿಳಿ ಹೇಳುತ್ತಾರೆ. ಇಲ್ಲಿ ತಾಯ್ತಂದೆಯರ ಎಲ್ಲಾ ಪ್ರೀತಿಗೂ ಹಕ್ಕುದಾರನಾಗಿ, ಸರ್ವಾಧಿಕಾರಿಯಂತಿದ್ದ ನಾಗೇಂದ್ರ, ತಮ್ಮನ ಆಗಮನದಿಂದ ಕಡೆಗಣಿಸಲ್ಪಡುತ್ತಾನೆ. ಇದರಿಂದ ನೊಂದ ನಾಗೇಂದ್ರ ತನ್ನ ಸಿಟ್ಟು, ವೇದನೆಯೆಲ್ಲವನ್ನೂ ಏನೂ ಅರಿಯದ ಹಸುಳೆಯನ್ನು ಹಿಂಸಿಸುವುದರಿಂದಲೋ, ಮನೆ ಬಿಟ್ಟು ಹೋಗಿ ತಾಯ್ತಂದೆಯರನ್ನು ಆತಂಕಪಡಿಸುವುದರಿಂದಲೋ ವ್ಯಕ್ತ ಪಡಿಸುತ್ತಿರುತ್ತಾನೆ.

ಕೊನೆಗೆ ಎರಡು ತಿಂಗಳ ನಂತರ ನಾಗೇಂದ್ರನನ್ನು ಕಾಣಲು ಹೋದ ಆ ಸಹೃದಯರಿಗೆ ಅಚ್ಚರಿಯಾಗುವಂತೆ, ಮಗುವನ್ನು ಆಡಿಸುತ್ತಿರುವ ನಾಗೇಂದ್ರ ಕಾಣಸಿಗುತ್ತಾನೆ. ತಂದೆ ತಾಯಿಯರ ಪ್ರೀತಿ ಪಡೆದು ನಾಗೇಂದ್ರ ಸಂತೃಪ್ತನಾಗಿ, ತನ್ನ ಪ್ರೀತಿಯನ್ನು ಮಗುವಿಗೆ ಧಾರೆಯೆರೆಯ ತೊಡಗಿರುತ್ತಾನೆ. ಸಮಸ್ಯೆ ಮಗುವಿನದಲ್ಲ, ಪಿತೃಗಳದ್ದು ಎಂಬುದು ಇಲ್ಲಿ ಹೃದಯಂಗಮವಾಗಿ ಹೇಳಲ್ಪಟ್ಟಿದೆ. ಕಥೆಯ ಜೊತೆ ಲೇಖಕಿ ತುಂಬಾ ಸರಳವಾಗಿ ತಾಯ್ತಂದೆಯರಿಗೆ ತಿಳುವಳಿಕೆ ಹೇಳಿದ್ದಾರೆ ಮತ್ತು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

೨. ತುಂಬಿದ ಕೊಡ ಮತ್ತು ಮಗುವಿನ ಕರೆ :

ಮಗುವನ್ನು ಕಳೆದುಕೊಂಡ ತಾಯಿ - ತಾಯಿಯನ್ನು ಕಳೆದು ಕೊಂಡ ಮಗು, ಎರಡು ಜೀವಗಳ ಸುತ್ತ ಸುತ್ತುವ ತೀವ್ರ ಭಾವನೆಗಳನ್ನೊಳಗೊಂಡ ಕಥೆ. ಪಾಪದ ಕೂಸು, ಅಸಹ್ಯ ಎಂದೆಲ್ಲಾ ಜರಿದಿದ್ದ ಮನಸ್ಸನ್ನೂ ಮಾತೃ ಪ್ರೇಮ ಜಯಿಸಿ, ಕೊನೆಗೆ ಹಾಲು ಇಂಗದೆ, ಮಗುವಿನ ಪಾಲಿಗೆ ಅಮೃತವಾಗುತ್ತದೆ. ಒಂದು ಪುಟ್ಟ ಜೀವ ಬದುಕಲು ಬೇಕಾದ ಜೀವಧಾರೆಯಾಗತ್ತೆ. ಎಲ್ಲಕ್ಕಿಂತಲೂ ಅತ್ಯಂತ ಹಿರಿದಾದದ್ದು ಮಾತೃ ಪ್ರೇಮ ಮತ್ತು ತಾಯಿ ಕರುಳು ಎಂಬುದು ಈ ಕಥೆಯ ಸಾರಾಂಶ. ಮನ ಕಲಕುವಂಥ ನಿರೂಪಣೆ.

ತನ್ನ ಭವಿಷ್ಯ ಹಾಳಾದರೂ ಪರವಾಗಿಲ್ಲ ಮಗುವನ್ನು ತಾನೇ ಸಾಕುವುದಾಗಿ ನಿರ್ಧರಿಸುವ ನಾಗಮ್ಮ ತಾಯಿಯ ಮಮತೆಯನ್ನು ಮೆರೆಸುತ್ತಾಳೆ. ವೀರಪ್ಪ ಕೊಟ್ಟ ಪೊಳ್ಳು ಆಶ್ವಾಸನೆಯಿಂದ, ತಾಯಿಯಾಗುವ ನಾಗಮ್ಮ, ತನ್ನ ಕರುಳ ಬಳ್ಳಿಯನ್ನು ಹೊಸಕಲಾರದೆ, ಎಲ್ಲರಿಂದಲೂ ದೂರ ಹೋಗಿ, ಹೊಸ ಬದುಕು ಕಂಡುಕೊಳ್ಳುವ ಉತ್ತಮ ನಿರ್ಧಾರಕ್ಕೆ ಬರುತ್ತಾಳೆ.

೩. ಮಗಳ ಮನಸ್ಸು :

ತೀರ ಬಡವನಾದ ತಂದೆ ತನ್ನ ಮೂರನೆಯ ಮಗಳ ಮದುವೆ, ಸಾಲ ತೀರಿಸಲು ತನಗೆ ದುಡ್ಡು ಕೊಟ್ಟ, ಶ್ರೀಮಂತ ಮುದುಕನ ಜೊತೆ ಮಾಡಿಬಿಟ್ಟಾಗ, ಮನಸ್ಸು ಮುರಿದು, ಎಲ್ಲಾ ಸಂಬಂಧಗಳನ್ನೂ ತೊರೆದುಕೊಂಡು ಹೊರಟು ಹೋಗುತ್ತಾಳೆ ಚಂದ್ರ. ನಾಲ್ಕು ವರ್ಷಗಳ ನಂತರ ಸಹಾಯ ಕೇಳಲು ಬಂದ ತಂದೆಯನ್ನು ನಿಂದಿಸಿ, ಅಟ್ಟಿ ಬಿಡುತ್ತಾಳೆ. ಆದರೆ ತಾಯಿ ಮತ್ತು ಚಿಕ್ಕ ತಮ್ಮನ ಅನಾರೋಗ್ಯದ ವಾರ್ತೆ ಅವಳಲ್ಲಿನ ಪ್ರೀತಿಯನ್ನು ತಟ್ಟಿ ಎಬ್ಬಿಸಿ, ತಂದೆಯ ಹಿಂದೆ ಓಡಿ ಬಂದು ತನ್ನ ಕೈಲಿದ್ದ ಎರಡು ಚಿನ್ನದ ಬಳೆಗಳನ್ನು ಕೊಟ್ಟು ಹೋಗುತ್ತಾಳೆ. ಮುಂದೆಯೂ ಸಹಾಯ ಬೇಕಾದರೆ ಮತ್ತೆ ಬರುವಂತೆ ವಿನಂತಿಸಿಕೊಂಡು, ತಂದೆಯ ಕ್ಷಮೆಯಾಚಿಸಿ, ಆಶೀರ್ವಾದ ಪಡೆದು ಹೋಗುತ್ತಾಳೆ. ಇಲ್ಲಿ ಹೆಣ್ಣು ಮಕ್ಕಳ ಅಂತ:ಕರಣ ಎಷ್ಟು ಮೃದು ತನ್ನ ಜೀವನವನ್ನೇ ಹಾಳು ಮಾಡಿದನೆಂದು ದ್ವೇಷಿಸುತ್ತಿದ್ದ ತಂದೆಯ ಸಹಾಯಕ್ಕೆ ಎಲ್ಲವನ್ನೂ ಮರೆತು ಹೇಗೆ ಧಾವಿಸಿದಳೆಂಬುದು ಚಿತ್ರಿತವಾಗಿದೆ. ಒಳ್ಳೆಯ ಕಥೆ..

೪. ಪ್ರೇಮದ ಬೆಳಕು :

ಪ್ರೇಮ ಅನುರಾಗವೆಂಬುದು ಬಾಹ್ಯ ಸೌಂದರ್ಯದಲ್ಲಲ್ಲ, ಆಂತರಿಕ ಸೌಂದರ್ಯದಲ್ಲಿದೆ ಎನ್ನುವುದನ್ನು ಬಿಂಬಿಸುವ ಕಥೆ. ಕಲಾವಿದನಾದವನು ಎಂತಹ ಕುರೂಪಿಯನ್ನು ನೋಡಿದರೂ, ಅದರಲ್ಲಿರುವ ಕಲೆಯ ಸೌಂದರ್ಯ ಹುಡುಕುತ್ತಾನೇ ಹೊರತು, ಅಶಾಶ್ವತವಾದ ದೈಹಿಕ ಸೌಂದರ್ಯವನ್ನಲ್ಲ. ಕಥಾನಾಯಕ ಸಂಜಯ ಕೊನೆಗೆ ಸಹನೆ, ಭಕ್ತಿ, ಪ್ರೀತಿ, ಅನುರಾಗದಿಂದ ಹೊಳೆಯುತ್ತಿದ್ದ ಮಂಜುವಿನ ಕಣ್ಣುಗಳ ಭಾಷೆಯನ್ನು ಅರಿಯುತ್ತಾನೆ.

೫. ಆ ಸಂಜೆ :

ತನ್ನನ್ನೇ ಬಸ್ ನಿಲ್ದಾಣದಿಂದಲೂ ಹಿಂಬಾಲಿಸಿ ಬಂದ ಯುವಕನ ಮೇಲೆ ಸಿಟ್ಟು ಮಾಡಿಕೊಂಡು, ಅಸಹ್ಯಿಸಿಕೊಂಡು, ಅವಸರದಲ್ಲಿ ಕಾಶ್ಮೀರ್ ಸಿಲ್ಕ್ ಸೀರೆ ಕೊಂಡು, ಅಂಗಡಿಯಿಂದ ಹೊರಗೋಡಿ ಬಿಡುತ್ತಾಳೆ ಕಥಾನಾಯಕಿ. ಆದರೆ ಅವಳು ಕೊಂಡ ಅಂತಹುದೇ ಸೀರೆಕೊಂಡು, ಮೊದಲ ದೀಪಾವಳಿಯನ್ನು ಹೆಂಡತಿಯೊಡನೆ ಆಚರಿಸಲು, ಸಿಹಿ ಕನಸೊಂದನ್ನು ಕಾಣುತ್ತಾ ಹೋಗುತ್ತಾನೆ, ಅವಳನ್ನು ಹಿಂಬಾಲಿಸಿ ಬಂದಿದ್ದ "ವಿಲನ್". ಇಲ್ಲಿ ಕಥಾನಾಯಕ ಹಿಂಬಾಲಿಸಿ ಬಂದಿದ್ದ ಹುಡುಗಿ ನೋಡಲು ತನ್ನ ಹೆಂಡತಿಯಂತೆಯೇ ಇದ್ದದ್ದು ಮತ್ತು ತನ್ನನ್ನು ಅವನು ಹಿಂಬಾಲಿಸಿದ ಉದ್ದೇಶ ಎರಡೂ ತಿಳಿಯದೆ ಹೆದರುತ್ತಾಳೆ. ಆದರೆ ಅಂತ್ಯ ನವಿರಾದ ಹಾಸ್ಯದಿಂದ ಕೂಡಿದ್ದು, ಮನಸ್ಸು ಮುದಗೊಳ್ಳುತ್ತದೆ.

೬. ಕೊನೆಯ ನಿರ್ಧಾರ :

೨೨ ವರ್ಷಗಳ ಹಿಂದೆ ವೆಂಕಟೇಶಮೂರ್ತಿ ಅನುಮಾನಿಸಿ ಬಿಟ್ಟು ಬಿಟ್ಟಿದ್ದ ತಮ್ಮ ಹೆಂಡತಿಯನ್ನು ಮತ್ತೆ ಕರೆಯಲು ಬಂದಾಗ, ಸ್ವಾಭಾವಿಕವಾಗಿಯೇ ಕ್ಷಮಯಾ ಧರಿತ್ರಿಯಾದ ಲಲಿತಾ ಸ್ವಲ್ಪ ಸ್ವಲ್ಪ ಕರಗುತ್ತಾಳೆ. ಆದರೆ ತನ್ನ ಗಂಡನ ಎರಡನೆಯ ಹೆಂಡತಿ ಸತ್ತು, ಮನೆಯಲ್ಲಿ ಐದು ಮಕ್ಕಳಿರುವ ವಿಷಯ ತಿಳಿದಾಗ, ಕರಗಿದ ಮನಸ್ಸು ಕಲ್ಲಿನಂತಾಗಿ, ಕಾಳಿಯಾಗುತ್ತಾಳೆ. ಇದು ನಿಜವಾದ ಪ್ರೀತಿ ಅಲ್ಲ, ತನ್ನ ಅನುಕೂಲಕ್ಕಾಗಿ ವೆಂಕಟೇಶಮೂರ್ತಿ ಮಾಡಿಕೊಳ್ಳುತ್ತಿರುವ ಸಂಧಾನ ಎಂದು ಅರಿತುಕೊಂಡು, ಅವರನ್ನು ತನ್ನ ಜೀವನದಿಂದ ಎರಡನೇ ಸಲ ಹೊರ ಹಾಕುತ್ತಾಳೆ ಮತ್ತು ಇನ್ನೆಂದೂ ಪುನ: ಬರಬಾರದೆಂದು ಹೇಳುತ್ತಾಳೆ. ಇಲ್ಲಿ ಲಲಿತಾ ತಾನು ಮಾಡಿಲ್ಲದ ತಪ್ಪಿಗಾಗಿ, ತನ್ನ ಸ್ವಮರ್ಯಾದೆ ಬಿಟ್ಟು ಕೊಡದೆ, ಸ್ವಾಭಿಮಾನ ಮೆರೆಸುವುದು, ಸಮಾಧಾನಕರವಾಗಿದೆ.

೭. ಮೂರನೆಯ ಕಣ್ಣು ಕೂಡ ತಾಯ ಮಮತೆಯನ್ನು ಬಿಂಬಿಸುತ್ತದೆ. ಹೆಣ್ಣು ಹೇಗೆ ಎಲ್ಲರನ್ನೂ ತಾಯಿಯಂತೆ ಕಾಣಬಲ್ಲಳೆಂಬುದಕ್ಕೆ ಈ ಕಥೆ ಸಾಕ್ಷಿ.

೮. ನರಬಲಿ : ಇದರಲ್ಲಿ ಲೇಖಕಿ ಕಥಾ ನಾಯಕಿ ರತ್ನ ಯಾರಿಂದಲೋ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದಾಗ ಪಡುವ ಮಾನಸಿಕ ಹಿಂಸೆಯನ್ನು ಚಿತ್ರಿಸಲಾಗಿದೆ. ತಾನು ಅತಿಯಾಗಿ ಪ್ರೀತಿಸಿದ ತನ್ನ ಗಂಡನ ಹೋಲಿಕೆಯದೇ ಮಗು ಹುಟ್ಟಿದಾಗ ಅದು ತಮ್ಮಿಬ್ಬರದೇ ಎಂದು ಉದ್ವೇಗದಿಂದು ಕಿರುಚಿ ಅಪ್ಪಿ ಹಿಡಿಯುತ್ತಾಳೆ, ಹಾಗೇ ಕೊನೆಯುಸಿರೆಳೆಯುತ್ತಾಳೆ.

ಈ ಕಥಾ ಸಂಕಲದ ಕೆಲವು ಕಥೆಗಳ ಬಗ್ಗೆ ನಾನು ಏನನ್ನೂ ಬರೆದಿಲ್ಲ. ಸೌಂದರ್ಯ ನೋಡಿ ಮೋಹಿಸಿ ಮದುವೆಯಾಗಲಿಚ್ಛಿಸುವ ಇಬ್ಬರು ಹುಡುಗರು, ಅವಳು ಬಾಲ ವಿಧವೆಯೆಂದು ತಿಳಿದೊಡನೆ ಹಿಂತೆಗೆಯುವ ಕಥೆ ಈಗಿನ ಕಾಲಕ್ಕೆ ಪ್ರಸ್ತುತವೆಂದು ನನಗನ್ನಿಸಲಿಲ್ಲ. ವಯಸ್ಸಾದ ಸಿನಿಮಾ ನಟಿ ಸಾಯುವವರೆಗೂ ನಾಯಕಿಯ ಪಾತ್ರವನ್ನೇ ಮಾಡಬೇಕೆಂದು ಆಶಿಸುವುದು ಮತ್ತು ಸಿಗಲಿಲ್ಲವೆಂದ ಆತ್ಮಹತ್ಯೆ ಮಾಡಿಕೊಳ್ಳುವುದು, ಎಲ್ಲಾ ಕಾಲಕ್ಕೂ ಸಲ್ಲುತ್ತದಾದರೂ, ಓದಿದ ನನ್ನ ಮನಸ್ಸನ್ನೇನು ಸೆಳೆಯಲಿಲ್ಲವಾದ್ದರಿಂದ ಇಲ್ಲಿ ಪ್ರತ್ಯೇಕವಾಗಿ ಪ್ರಸ್ತಾಪಿಸಿಲ್ಲ.

ಒಟ್ಟು ೧೫ ಕಥೆಗಳನ್ನೊಳಗೊಂಡ ಈ ಕಥಾ ಸಂಕಲನ, ಅದ್ಭುತವಾಗಿ ಓದಿಸಿಕೊಂಡು ಹೋಗುತ್ತದೆ. ವಿಷಯವನ್ನು ಮನಮುಟ್ಟುವಂತೆ ಸರಳ ಶಬ್ದಗಳನ್ನುಪಯೋಗಿಸಿ, ಎತ್ತಿಕಟ್ಟುವ ತ್ರಿವೇಣಿಯವರ ಕಲೆ ಅದ್ಭುತ. ಅವರ ಶೈಲಿ, ಲೀಲಾಜಾಲ ಬರವಣಿಗೆ ನಮ್ಮನ್ನು ಸುಖಾಸನದಲ್ಲಿ ಕುಳಿತು, ಅನುಭವಿಸುತ್ತಾ, ಓದುವಂತೆ ಪ್ರೇರೇಪಿಸುತ್ತದೆ.

ಎರಡು ದಶಕಗಳ ನಂತರ ಮತ್ತೆ ಓದಿದ ಈ ಪುಸ್ತಕ, ಹಲವು ಒಳ್ಳೆಯ ವಿಷಯಗಳಾಧಾರಿತ ಕಥೆಗಳನ್ನು ಹೊಂದಿದೆ. ಒಟ್ಟಿನಲ್ಲಿ ಒಂದು ಸಂಜೆ ಸುಖವಾಗಿ ಒಳ್ಳೆಯ ಓದಿನಿಂದ ಕಾಲ ಕಳೆಯಬಹುದಾದ ಪುಸ್ತಕ. ಕೆಲವು ಕಥೆಗಳನ್ನು ಸುಲಭದಲ್ಲಿ ಮರೆಯಲಾಗುವುದಿಲ್ಲ, ಕಾಡುತ್ತವೆ, ಕಾಡುತ್ತಲೇ ಇರುತ್ತವೆ........ ಮತ್ತೆ.......... ಮತ್ತೆ...........

Wednesday, November 4, 2009

ನವಾವರಣ ಕೃತಿಗಳು - ೪

ಶ್ರೀ ಮಹಾಗಣಪತಿ ಮತ್ತು ಶ್ರೀ ಸುಬ್ರಹ್ಮಣ್ಯನ ಪ್ರಾರ್ಥನೆಯ ನಂತರ, ನಾವು ದೇವಿ ಕಮಲಾಂಬಿಕೆಯನ್ನೇ ಧ್ಯಾನಿಸುತ್ತೇವೆ. ಈ ಧ್ಯಾನ ಕೃತಿಯನ್ನು ದೀಕ್ಷಿತರು ೮ನೇ ಮೇಳ ಹನುಮ ತೋಡಿ ರಾಗದಲ್ಲಿ ರಚಿಸಿದ್ದಾರೆ. ಈ ಕೃತಿಯು ತೋಡಿ ರಾಗದ ನಿಷಾದ ಸ್ವರದಿಂದ ಆರಂಭವಾಗುವುದು ಮತ್ತು ಗಾಯಕರನ್ನು ಶುರುವಿನಿಂದಲೇ ಭಕ್ತಿಯ ದಾರಿಗೆ ಎಳೆದುಕೊಂಡುಬಿಡುತ್ತದೆ... ಸ್ವರ ಪ್ರಸ್ತಾರ ಇಡೀ ಕೃತಿಯಲ್ಲಿ, ತೋಡಿ ರಾಗದ ಸಾರವನ್ನು ಪರಿಪೂರ್ಣವಾಗಿ ಬಿಂಬಿಸುತ್ತದೆ. ಸಂಗೀತಗಾರರಿಗೆ ಈ ಕೃತಿ ಹಾಡುವುದೊಂಥರಾ ಆತ್ಮ ತೃಪ್ತಿಕೊಡುತ್ತದೆ.

ಪಲ್ಲವಿ

ಕಮಲಾಂಬಿಕೆಯೇ... ಅಂಬ.... ಕಮಲಾಂಬಿಕೇ ಆಶೃತ ಕಲ್ಪಲತಿಕೇ... ಚಂಡಿಕೇ...
ಕಮನೀಯಾರುಣಾಂಶುಕೇ..... ಕರವಿಧೃತ ಶುಕೇ ಮಾಮವ..... ||

ಅನುಪಲ್ಲವಿ

ಕಮಲಾಸನಾನಿ ಪೂಜಿತ... ಕಮಲಪದೇ... ಬಹು ವರದೇ....
ಕಮಲಾಲಯ ತೀರ್ಥವೈಭವೇ... ಶಿವೇ.... ಕರುಣಾರ್ಣವೇ...... ||

ಚರಣ

ಸಕಲಲೋಕ ನಾಯಿಕೇ... ಸಂಗೀತ ರಸಿಕೇ... ಸುಕವಿತ್ವ ಪ್ರದಾಯಿಕೇ...
ಸುಂದರಿಗತ ಮಾಯಿಕೇ.... ವಿಕಳೇ... ಬರಮುಕ್ತಿದಾನ ನಿಪುಣೇ....
ಅಘಹರಣೇ..... ವಿಯದಾದಿ ಭೂತ ಕಿರಣೇ... ವಿನೋದ ಚರಣೇ... ಅರುಣೇ...
ಸಕಲೇ ಗುರುಗುಹ ಚರಣೇ..... ಸದಾಶಿವಾಂತ:ಕರಣೇ.....
ಅಕಚಟತಪಾದಿವರ್ಣೇ.... ಅಖಂಡೈಕರಸಪೂರ್ಣೇ..... ||


ಭಕ್ತರಿಗೆ ಮತ್ತು ನಿನ್ನನ್ನು ಆಶ್ರಯಿಸಿದವರಿಗೆ ಕಲ್ಪಲತೆಯಂತೆ, ಬೇಡಿದ್ದನ್ನೆಲ್ಲಾ, ಇಷ್ಟಾರ್ಥಗಳನ್ನೆಲ್ಲಾ ಕೊಡುವವಳೇ, ಚಂಡಿಕಾರೂಪದಿಂದ ದುಷ್ಟರನ್ನು ಸಂಹರಿಸುವವಳೇ, ಸುಂದರವಾದ ಕೆಂಪು ವಸ್ತ್ರವನ್ನುಟ್ಟಿರುವವಳೇ, ಕೈಯಲ್ಲಿ ಗಿಣಿಯನ್ನು ಹಿಡಿದು, ಅತ್ಯಂತ ಸೌಂದರ್ಯವತಿಯಾದವಳೇ, ಪ್ರಜ್ವಲಿಸುತ್ತಿರುವವಳೇ, ಕಮಲಾಂಬಿಕೆಯೇ... ನನ್ನನ್ನು ರಕ್ಷಿಸು, ಸಂರಕ್ಷಿಸು ಎಂದು ಆರಂಭಿಸುತ್ತಾರೆ ದೀಕ್ಷಿತರು...

ಬ್ರಹ್ಮಾದಿ ಮೊದಲುಗೊಂಡು ಇಡೀ ದೇವತಾ ಸಮೂಹದಿಂದಲೇ ಪುಜಿಸಲ್ಪಡುವವಳೇ... ಪಾದ ಕಮಲಗಳುಳ್ಳವಳೇ.. ನಾವು ಬೇಡಿದ್ದಕ್ಕಿನಾ ಹೆಚ್ಚಾಗಿಯೇ ವರವನ್ನು ಕರುಣಿಸುವಂಥಹ, ಕರುಣಾಮಯಿಯೇ.. ಮಾತೆಯೇ.. ತಿರುವಾರೂರಿನಲ್ಲಿರುವ ಕಮಲಾಂಬಾ ದೇವಸ್ಥಾನದ ಸರೋವರವಾದ ಬ್ರಹ್ಮತೀರ್ಥದ ವೈಭವವುಳ್ಳವಳೇ, ಶಿವೇ... ಮಂಗಳ ಸ್ವರೂಪಿಣಿಯೇ... ನನ್ನನ್ನು ರಕ್ಷಿಸು... ಸಂರಕ್ಷಿಸು ತಾಯೇ...

ಚರಣದಲ್ಲಿ ದೀಕ್ಷಿತರು ದೇವಿಯನ್ನು ಸಕಲ ಲೋಕದ ನಾಯಕಿಯೇ.. ಜಗನ್ಮಾತೆಯೇ... ಜಗತ್ತಿಗೇ ಒಡೆಯಳೇ... ಸಂಗೀತವನ್ನು ರಸಿಕತೆಯಿಂದ ಅನುಭವಿಸುವವಳೇ... ಗಾನಪ್ರಿಯಳೇ... ಸುಖವನ್ನು ದಯಪಾಲಿಸುವವಳೇ.. ವಾಕ್ಚಾತುರ್ಯ ನೀಡುವವಳೇ... ಸುಂದರೇಶ್ವರನನ್ನು ಮೋಹಿಸಿದ, ಅತ್ಯಂತ ಮೋಹಕಳಾದ, ಸುಂದರಾಂಗಿಯೇ... ವಿದೇಹ ಮುಕ್ತಿದಾನವನ್ನು ದಯಪಾಲಿಸುವಲ್ಲಿ ನಿಪುಣಳೇ ಆಗಿರುವ ದೇವಿ ಕಮಲಾಂಬಿಕೆಯೇ ರಕ್ಷಿಸು... ಓ ದೇವಿಯೇ ನೀನು ಪಾಪಗಳನ್ನು ಪರಿಹರಿಸುವವಳೂ, ಪಂಚಭೂತಗಳನ್ನು ಹಿಡಿತದಲ್ಲಿಟ್ಟುಕೊಂಡಿರುವವಳೂ, ಪ್ರಕಾಶಿಸುವಂತೆ ಮಾಡುವವಳೂ, ವಿನೋದಶೀಲಳೂ, ಸಕಲ ಚರಾಚರಗಳನ್ನೂ ನಿಯಂತ್ರಿಸುವವಳೂ... ಸ್ಕಂದನ ಮಾತೆಯೂ... ಸದಾಶಿವನ ಸತಿಯೂ.. ಜಗತ್ಸ್ವರೂಪಿಣಿಯೂ, ಸೌಂದರ್ಯವತಿಯೂ... ಕಮಲಾಂಬಿಕೆಯೂ ಆದ ತಾಯಿಯೇ ನನ್ನನ್ನು ರಕ್ಷಿಸು ಎಂದು ದೇವಿಯಲ್ಲಿ ಮೊರೆಯಿಡುತ್ತಾರೆ...


ಪ್ರಥಮಾವರಣ ಕೃತಿ :

ಆನಂದಭೈರವಿ ರಾಗದಲ್ಲಿ ರಚಿಸಲ್ಪಟ್ಟಿದೆ. ಮುದ ನೀಡುವ ಆನಂದಭೈರವಿ ರಾಗ ಈ ಕೃತಿಯನ್ನು ಹಾಡಿದಾಗ ಮನಸ್ಸಿಗೆ ಸಮಾಧಾನ ತಂದುಕೊಡುತ್ತದೆ. ಶಾಂತವಾದ, ಧೃಡ ಮನಸ್ಸನ್ನು ದೇವಿಯ ಪಾದಾರವಿಂದಗಳಲ್ಲಿ ನೆಲೆಗೊಳಿಸರು ವೇದಿಕೆ ಸಿದ್ಧಪಡಿಸುವಂತೆ ಮಾಡುತ್ತದೆ. ಮೊದಲನೆಯ ಆವರಣ ಪೂಜೆ ಮಾಡಲು ಆರಂಭಿಸಿದೊಡನೆಯೇ ಆರಾಧಕನ ಮನಸ್ಸು ಪಕ್ವಗೊಂಡು, ದೇವಿಯ ಆರಾಧನೆಯಲ್ಲಿ ತಲ್ಲೀನವಾಗಿ ಬಿಡುತ್ತದೆ.

ಪಲ್ಲವಿ

ಕಮಲಾಂಬಾ ಸಂರಕ್ಷತು ಮಾಂ.... ಹೃತ್ಕಮಲಾ ನಗರ ನಿವಾಸಿನೀ... ಅಂಬ... ||

ಅನುಪಲ್ಲವಿ

ಸುಮನ ಸಾರಾಧಿತಾಬ್ಜಮುಖೀ... ಸುಂದರಮನ: ಪ್ರಿಯಕರ ಸಖೀ...
ಕಮಲಜಾನಂದ ಬೋಧಸುಖೀ... ಕಾಂತಾಧಾರ ಪಂಜರಶುಕೀ..... ||

ಚರಣ

ತ್ರಿಪುರಾದಿ ಚಕ್ರೇಶ್ವರೀ... ಅಣಿಮಾದಿ ಸಿದ್ಧೀಶ್ವರೀ... ನಿತ್ಯಕಾಮೇಶ್ವರೀ...
ಕ್ಷಿತಿಪುರ ತ್ರೈಲೋಕ್ಯಮೋಹನ ಚಕ್ರವರ್ತಿನೀ... ಪ್ರಕಟಯೋಗಿನೀ...
ಸುರರಿಪು ಮಹಿಷಾಸುರಾದಿ ಮರ್ಧಿನೀ... ನಿಗಮಪುರಾಣಾದಿ ಸಂವೇದಿನೀ.. ||

ಮಧ್ಯಮಕಾಲದ ಸಾಹಿತ್ಯ

ತ್ರಿಪುರೇಶೀ ಗುರುಗುಹ ಜನನೀ... ತ್ರಿಪುರ ಭಂಜನ ರಂಜನೀ..
ಮಧುರಿಪು ಸಹೋದರೀ ತಲೋದರೀ... ತ್ರಿಪುರಸುಂದರೀ ಮಹೇಶ್ವರೀ.... ||

ನನ್ನ ಹೃದಯಕಮಲದಲ್ಲಿ ನೆಲೆಸಿರುವವಳೇ ಮತ್ತು ತಿರುವಾರೂರು ಜಿಲ್ಲೆಯ ಕಮಲಾನಗರವೆಂಬ ಜಾಗದಲ್ಲಿ ನೆಲೆಸಿರುವ ಓ ಕಮಲಾಂಬಿಕೆಯೇ.. ನನ್ನನ್ನು ರಕ್ಷಿಸಲಿ ಎಂದು ದೀಕ್ಷಿತರು ದೇವಿಯನ್ನು ಪ್ರಾರ್ಥಿಸುತ್ತಾ ಈ ಪ್ರಥಮಾವರಣ ಕೃತಿಯನ್ನು ಶುರುಮಾಡುತ್ತಾರೆ...

ಅನುಪಲ್ಲವಿಯಲ್ಲಿ ಮುಂದುವರೆಯುತ್ತಾ ದೀಕ್ಷಿತರು ಕಮಲದಂತೆ ಸುಂದರ ಮುಖಾರವಿಂದವುಳ್ಳವಳೇ... ಸಕಲ ದೇವತೆಗಳಿಂದಲೂ ಪೂಜಿಸಲ್ಪಡುವವಳೇ... ಸುಂದರೇಶನ ಪ್ರಿಯಕರಿಯೇ.. ಬ್ರಹ್ಮಾನಂದಾನುಭವದಿಂದ ಸುಖಿಸುವವಳೇ... ಓಂಕಾರವೆಂಬ ಸುಂದರವಾದ ಪಂಜರದಲ್ಲಿ ವಿಹರಿಸುತ್ತಿರುವ ಗಿಳಿಯೂ ಆದ ಓ ಕಮಲಾಂಬಿಕೆಯೇ ನನ್ನನ್ನು ರಕ್ಷಿಸಲಿ ಎಂದು ಪ್ರಾರ್ಥಿಸುತ್ತಾರೆ...

ದೇವಿಯನ್ನು ತ್ರಿಪುರಾದಿ ಚಕ್ರೇಶ್ವರೀ ಎಂದೆನ್ನುತ್ತಾರೆ, ಅಂದರೆ ನವಚಕ್ರಗಳಾದ ೧) ತ್ರೈಲೋಕ್ಯ ಮೋಹನ ಚಕ್ರ.. ೨) ಸರ್ವಾಶಾಪರಿಪೂರಕ ಚಕ್ರ... ೩) ಸರ್ವ ಸಂಕ್ಷೋಭಣ ಚಕ್ರ... ೪) ಸರ್ವ ಸೌಭಾಗ್ಯದಾಯಕ ಚಕ್ರ... ೫) ಸರ್ವಾರ್ಥ ಸಾಧಕ ಚಕ್ರ.. ೬) ಸರ್ವ ರಕ್ಷಾಕರ ಚಕ್ರ... ೭) ಸರ್ವ ರೋಗಹರ ಚಕ್ರ... ೮) ಸರ್ವ ಸಿದ್ಧಿ ಪ್ರದಾಯಕ ಚಕ್ರ... ೯) ಸರ್ವಾನಂದಮಯ ಚಕ್ರ... ಇವುಗಳ ಅಂದರೆ ಈ ಚಕ್ರಗಳಿಗೆಲ್ಲಾ ಸಾಮ್ರಾಜ್ಞೀ ಎನ್ನುತ್ತಾರೆ. ಇಷ್ಟೇ ಅಲ್ಲ ಅಣಿಮಾದಿಯಾದ ಅಷ್ಟ ಸಿದ್ಧಿಗಳಿಗೆ ಅಂದರೆ .. ೧) ಅಣಿಮಾ.. ೨) ಮಹಿಮಾ.. ೩) ಈಶಿತ್ವ.. ೪) ವಶಿತ್ವ... ೫) ಪ್ರಾಕಾಮ್ಯ... ೬) ಭಕ್ತಿ... ೭) ಇಚ್ಛಾ... ೮) ಪ್ರಾಪ್ತಿ... ಸಿದ್ಧಿಗಳಿಗೆಲ್ಲಾ ಈ ದೇವಿ ಕಮಲಾಂಬಿಕೆಯೇ ಅಧೀಶ್ವರಿ.... ಒಡೆಯಳು..... ಕಾರಣ ಕರ್ತಳು....
ನಿತ್ಯ ಕಾಮೇಶ್ವರಿ ಎಂಬ ೧೫ ನಿತ್ಯೆಗಳಿಗೂ... ಅಂದರೆ.. ೧) ಕಾಮೇಶ್ವರಿ... ೨) ಭಗಮಾಲಿನಿ... ೩) ನಿತ್ಯಕ್ಲಿನ್ನಾ... ೪) ಭೇರುಂಡಾ... ೫) ವಹ್ನಿ ವಾಹಿನಿ.... ೬)
ಮಹಾ ವಿದ್ಯೇಶ್ವರಿ... ೭) ಶಿವದೂತಿ... ೮) ತ್ವರಿತಾ... ೯) ಕುಳ ಸುಂದರಿ... ೧೦) ನಿತ್ಯಾ... ೧೧) ನೀಲಪತಾಕಾ... ೧೨) ವಿಜಯಾ... ೧೩) ಸರ್ವ ಮಂಗಳ... ೧೪) ಜ್ವಾಲಾಮಾಲಿನಿ... ಮತ್ತು ೧೫) ಚಿತ್ರಾ... ಮೊದಲಾದವುಗಳಿಗೆ ಯಜಮಾನಿಯೂ... ಒಡೆಯಳೂ.... ತ್ರೈಲೋಕ್ಯ ಅಥವಾ ಭೂಪುರವೆಂಬ ಮೂರು ಲೋಕಗಳಿಗೂ... ಮೋಹನರೂಪಳಾದ, ಚಕ್ರವರ್ತಿನಿಯೂ... ಸಾಮ್ರಾಜ್ಞಿಯೂ, ಪ್ರಕಟಯೋಗಿನೀ ಎಂಬ ಹೆಸರು ಗಳಿಸಿದವಳೂ... ಸುರರ ಶತೃಗಳಾದ ಮಹಿಷಾಸುರ ಮುಂತಾದ ಅಸುರರನ್ನು ಸಂಹರಿಸಿದವಳೂ.... ವೇದ ಪುರಾಣಾದಿ ಸಕಲ ಶಾಸ್ತ್ರಗಳನ್ನು ಬಲ್ಲವಳೂ.... ಪರಶಿವನ ಮಡದಿಯೂ... ಗುರುಗುಹ / ಷಣ್ಮುಖನ ಮಾತೆಯೂ... ತ್ರಿಪುರಾಸುರನನ್ನು ನಿಗ್ರಹಿಸಿ ತುಷ್ಟಿ ಪಡೆದವಳೂ.... ಮಹಾ ವಿಷ್ಣುವಿನ ಪ್ರಿಯ ಸಹೋದರಿಯೂ ಆದ ಕಮಲಾಂಬಿಕೆಯು ನನ್ನನ್ನು ಪಾಲಿಸಲಿ ಎಂದು ಪ್ರಾರ್ಥಿಸುತ್ತಾರೆ....


ಶ್ರೀ ವಾಮಕೇಶ್ವರ ತಂತ್ರದಲ್ಲಿ ಬರುವ ಶ್ರೀ ಉಮಾ ಮಹೇಶ್ವರರ ಸಂವಾದ, ದೇವಿ ಖಡ್ಗಮಾಲಾ ಸ್ತೋತ್ರದಲ್ಲಿ, ದೇವಿಯ ಒಡೆತನದ ನವ ಚಕ್ರಗಳು, ನವ ಸಿದ್ಧಿಗಳು, ೧೫ ನಿತ್ಯೆಗಳೂ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಇಷ್ಟೇ ಅಲ್ಲದೆ ದೇವಿಯನ್ನು ಅತಿ ರಹಸ್ಯಯೋಗಿನಿ, ತ್ರಿಪುರೇ, ತ್ರಿಪುರೇಶಿ, ತ್ರಿಪುರ ಸುಂದರಿ, ತ್ರಿಪುರವಾಸಿನಿ, ತ್ರಿಪುರಾಶ್ರೀ:, ತ್ರಿಪುರಮಾಲಿನಿ, ತ್ರಿಪುರಾಸಿದ್ಧೇ, ತ್ರಿಪುರಾಂಬಾ, ಮಹಾತ್ರಿಪುರಸುಂದರಿ, ಮಹಾಮಹೇಶ್ವರಿ, ಮಹಾಮಹಾರಾಜ್ಞೀ, ಮಹಾಮಹಾ ಶಕ್ತೇ, ಮಹಾಮಹಾ ಸ್ಕಂದೇ, ಮಹಾಮಹಾಶಯೇ, ಮಹಾಮಹಾ ಶ್ರೀ ಚಕ್ರನಗರ ಸಾಮ್ರಾಜ್ಞೀ.... ನಮಸ್ತೇ... ನಮಸ್ತೇ... ಎಂದೆಲ್ಲಾ ವರ್ಣಿಸುತ್ತಾರೆ. ಈ ದೇವಿ ಖಡ್ಗಮಾಲಾ ಸ್ತೋತ್ರವನ್ನು ದಿನವೂ ಪಠಿಸುವುದರಿಂದ ನಮ್ಮ ಎಲ್ಲಾ ಕಷ್ಟಗಳನ್ನೂ ದೇವಿಯ ಖಡ್ಗ ಕತ್ತರಿಸಿ ಎಸೆಯುತ್ತದೆಂಬ ನಂಬಿಕೆ ಕೂಡ ಇದೆ....






Thursday, October 22, 2009

ನವಾವರಣ ಕೃತಿಗಳು - ೩

ಶ್ರೀ ಮುತ್ತುಸ್ವಾಮಿ ದೀಕ್ಷಿತರು ರಚಿಸಿರುವ ನವಾವರಣ ಕೃತಿಗಳನ್ನು ಹಾಡಲು ಸಂಗೀತಗಾರರು ಒಂದು ಪದ್ಧತಿಯನ್ನು ಅನುಸರಿಸುತ್ತಾರೆ. ನಾವು ಯಾವುದೇ ಕೆಲಸ ಮಾಡಬೇಕಾದರೂ ನಿರ್ವಿಘ್ನವಾಗಿ ನೆರವೇರುವಂತೆ, ಅಗ್ರ ಪೂಜೆಯನ್ನು ವಿಘ್ನೇಶ್ವರನಿಗೆ ಸಲ್ಲಿಸಿ ಯಾವುದೇ ಅಡ್ಡಿ ಆತಂಕಗಳಿಲ್ಲದಂತೆ ನೆರವೇರಿಸು ಎಂದು ಹೇಗೆ ಪ್ರಾರ್ಥಿಸುತ್ತೇವೋ, ಹಾಗೇ ಇಲ್ಲೂ ಅಗ್ರಸ್ಥಾನ ನಮ್ಮ ಗಜಾನನನಿಗೇ ಮೀಸಲು. ನಾವು ದೀಕ್ಷಿತರ ಶ್ರೀ ಮಹಾಗಣಪತಿ ರವತುಮಾಂ... ಎಂಬ ಗೌಳ ರಾಗದಲ್ಲಿ ರಚಿಸಲ್ಪಟ್ಟಿರುವ ಮಿಶ್ರಛಾಪುತಾಳದ ಕೃತಿಯೊಂದಿಗೆ ಆರಂಭಿಸುತ್ತೇವೆ. ಕೃತಿಯ ಸಾಹಿತ್ಯ........

ಪಲ್ಲವಿ

ಶ್ರೀ ಮಹಾಗಣಪತಿ ರವತುಮಾಂ... - ಸಿದ್ಧಿ ವಿನಾಯಕೋ..
ಮಾತಂಗಮುಖ:
||

ಅನುಪಲ್ಲವಿ


ಕಾಮಜಕ ವಿಧೀಂದ್ರ ಸನ್ನುತ... ಕಮಲಾಲಯ ತಟನಿವಾಸೋ..

ಕೋಮಳಕರ ಪಲ್ಲವ ಪದಕರ ಗುರುಗುಹಾಗ್ರಜ ಶಿವಾತ್ಮಜ:.................
||

ಚರಣ

ಸುವರ್ಣಾಕರ್ಷಣ ವಿಘ್ನರಾಜೋ.... ಪಾದಾಂಬುಜೋ....
ಗೌರವರ್ಣ ವಸನಧರೋ.... ಫಾಲಚಂದ್ರೋ.... ನರಾದಿವಿನುತ ಲಂಬೋದರೋ... ಕುವಲಯ ಸ್ವವಿಷಾಣ ಪಾಶಾಂಕುಶ ಮೋದಕ ಪ್ರಕಾಶಕರೋ... ಭವ ಜಲಧಿ ನಾವೋ..... ಮೂಲ ಪ್ರಕೃತಿ ಸ್ವಭಾವಸ್ಸುಖತರೋ... ರವಿಸಹಸ್ರ ಸನ್ನಿಭ ದೇಹೋ.... ಕವಿಜನನುತ ಮೂಷಿಕ ವಾಹೋ.. ಅವನತ ದೇವತಾ ಸಮೂಹೋ.... ಅವಿನಾಶ ಕೈವಲ್ಯ ಗೇಹೋ..... ||

ಈ ಕೃತಿಯಲ್ಲಿ ದೀಕ್ಷಿತರು ವಿಘ್ನರಾಜನನ್ನು ಹೊಗಳಿ ಸಿದ್ಧಿ ವಿನಾಯಕನೇ.... ಆನೆಯ ಮುಖದವನೇ..... ನನ್ನನ್ನು ರಕ್ಷಿಸು..... ಮನ್ಮಥನ ತಂದೆಯಾದ ವಿಷ್ಣು, ಬ್ರಹ್ಮ ಮತ್ತು ದೇವೇಂದ್ರರಿಂದ ಪೂಜೆಗೊಳ್ಳುವವನೇ...... ಅತ್ಯಂತ ಮೃದುವಾದ ಕೈಗಳೂ, ಕಾಲುಗಳನ್ನೂ ಹೊಂದಿದವನೇ. ..... ತಿರುವಾರೂರು ಎಂಬ ಕ್ಷೇತ್ರದ ಕಮಲಾಂಬಾ ದೇವಾಲಯದ ಸರೋವರದ ದಡದಲ್ಲಿರುವವನೇ..... ಸುಬ್ರಹ್ಮಣ್ಯನ ಮೊದಲು ಜನಿಸಿ ಅಣ್ಣನಾದವನೇ... ಶ್ರೀ ಮಹಾಗಣಪತಿಯೇ ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸುತ್ತಾರೆ.

ಮುಂದುವರೆಯುತ್ತಾ ಚಿನ್ನವನ್ನು ಒರೆಹಚ್ಚಿದ ವಿಘ್ನರಾಜನೆಂದು ಪ್ರಸಿದ್ಧಿಯಾದವನೇ ಕಮಲ ಪುಷ್ಪದಷ್ಟು ಮೃದು ಮತ್ತು ಸುಂದರವಾದ ಪಾದಗಳುಳ್ಳವನೇ..... ಹಣೆಯಲ್ಲಿ ಚಂದ್ರನನ್ನು ಧರಿಸಿದವನೇ.... ಶುಭ್ರ ಬಿಳುಪು ವಸ್ತ್ರಧರಿಸಿದವನೇ... ನರರು ಸುರರು ಎಲ್ಲರಿಂದಲೂ ಸ್ತುತಿಸಲ್ಪಡುವವನೇ.... ಇಡೀ ಜಗತ್ತನ್ನೇ ಅಡಗಿಸಿಕೊಂಡ ದೊಡ್ಡ ಹೊಟ್ಟೆಯವನೇ.... ಪಾಶ-ಅಂಕುಶಧಾರನೇ..... ಕನ್ನೈದಿಲೆ ಪುಷ್ಪವನ್ನು ಕೈಯಲ್ಲಿ ಹಿಡಿದಿರುವವನೇ....... ಮೂಲ ಪ್ರಕೃತಿಯ ಸ್ವಭಾವದವನೇ..... ಸಹಸ್ರಾರು ಸೂರ್ಯರ ಕಾಂತಿಯಷ್ಟು ಕಂಗೊಳಿಸುವ ದೇಹದವನೇ...... ಕವಿ - ಸುರ - ನರರೆಲ್ಲರ ಅತ್ಯಂತ ಪ್ರಿಯನಾದವನೇ..... ಇಲಿಯನ್ನು ವಾಹನವನ್ನಾಗಿಸಿಕೊಂಡವನೇ..... ನಾಶವೇ ಇಲ್ಲದವನೇ.... ಮೋಕ್ಷದಾಯಕನೇ..... ಎಲ್ಲರಿಂದಲೂ ನಮಸ್ಕರಿಸಲ್ಪಡುವವನೇ..... ನನ್ನನ್ನು ರಕ್ಷಿಸು ಎನ್ನುತ್ತಾರೆ.

ಗಣೇಶನ ಪ್ರಾರ್ಥನೆಯ ನಂತರ ನಾವು ದೀಕ್ಷಿತರ ಸುರುಟಿ ರಾಗದ, ಆದಿತಾಳದ ರಚನೆ, ಬಾಲಸುಬ್ರಹ್ಮಣ್ಯಂ ಹಾಡಿ ಷಣ್ಮುಖನನ್ನು ಪ್ರಾರ್ಥಿಸುತ್ತೇವೆ......

ಪಲ್ಲವಿ

ಬಾಲಸುಬ್ರಹ್ಮಣ್ಯಂ ಭಜೇಹಂ...... ಭಕ್ತ ಕಲ್ಪ ಭೂರುಹಂ ಶ್ರೀ..........||

ಅನುಪಲ್ಲವಿ

ನೀಲ ಕಂಠ ಹೃದಾನಂದಕರಂ......... ನಿತ್ಯ ಶುದ್ಧ ಬುದ್ಧ ಮುಕ್ತಾಂಬರಂ............||

ಚರಣ

ವೇಲಾಯುಧ ಧರಂ....... ಸುಂದರಂ...... ವೇದಾಂತಾರ್ಥ ಬೋಧ ಚತುರಂ...........
ಫಾಲಕ್ಷ ಗುರುಗುಹಾವತಾರಂ........ ಪರಾಶಕ್ತಿ ಸುಕುಮಾರಂ ಧೀರಂ..........

ಪಾಲಿತ ಗೀರ್ವಾಣಾದಿ ಸಮೂಹಂ........ ಪಂಚಭೂತಮಯ ಮಾಯಾಮೋಹಂ........
ನೀಲಕಂಠ ವಾಹಂ.......... ಸುದೇಹಂ......... ನಿರತಿಶಯಾನಂದ ಪ್ರವಾಹಂ..........||

ದೀಕ್ಷಿತರು ಈ ಕೃತಿಯಲ್ಲಿ ಬಾಲಸುಬ್ರಹ್ಮಣ್ಯನೇ.... ಭಕ್ತರು ಕೇಳಿದ್ದನ್ನೆಲ್ಲಾ ಕರುಣಿಸುವ ಕಲ್ಪವೃಕ್ಷವೇ ನಿನ್ನನ್ನು ನಾನು ಭಜಿಸುತ್ತೇನೆ, ಪೂಜಿಸುತ್ತೇನೆ, ನಿನಗೆ ನನ್ನ ನಮಸ್ಕಾರಗಳು ಎಂದು ಆರಂಭಿಸಿ.... ಅನುಪಲ್ಲವಿಯಲ್ಲಿ ... ಷಣ್ಮುಖನೇ ನೀನು ನೀಲಕಂಠನಾದ ನಿನ್ನ ತಂದೆ ಈಶ್ವರನಿಗೆ ಆನಂದ ಕೊಡುವವನೂ, ಪರಿಶುದ್ಧತೆಗೆ ಹೆಸರಾದವನೂ, ಅತಿಜ್ಞಾನಿಯೂ - ನಮಗೆ ಜ್ಞಾನವನ್ನು ದಯಪಾಲಿಸುವವನೂ, ಮೋಕ್ಷಸ್ವರೂಪಿಯೂ ಅಂದರೆ ಮುಕ್ತಿಯನ್ನು ಕೊಡುವವನೂ, ಅಂಬರದಲ್ಲೆಲ್ಲಾ ವ್ಯಾಪಿಸಿಕೊಂಡಿರುವವನೂ... ನಿನಗೆ ಇದೋ ನನ್ನ ಪ್ರಣಾಮಗಳು.........ಎನ್ನುತ್ತಾರೆ.

ಮುಂದುವರೆಯುತ್ತಾ ಚರಣದಲ್ಲಿ ಷಣ್ಮುಖನನ್ನು ವರ್ಣಿಸುತ್ತಾ.... ನಿನ್ನ ಕೈಯಲ್ಲಿ ವೇಲಾಯುಧವನ್ನು ಹಿಡಿರುವವನೂ, ಮುದ್ದು ಮುಖದವನು, ಸುಂದರ ದೇಹದವನು, ವೇದ ಉಪನಿಷತ್ತುಗಳ ಅರ್ಥವನ್ನು ತಿಳಿದಿರುವವನೂ ಅಂದರೆ ’ಓಂ’ ಕಾರದ ಅರ್ಥವನ್ನು ನಿನ್ನ ತಂದೆಗೇ ಬೋಧಿಸಿದವನು... ತುಂಬಾ ಧೈರ್ಯವಂತನೂ, ಪಾರ್ವತಿಯ ಸುಕುಮಾರನೂ... ಮಯೂರ ವಾಹನನೂ... ಸದೃಡಕಾಯನೂ.... ಅತಿಶಯವಾದ ಆನಂದವನ್ನು ಕೊಡುವವನೂ ಗುರುವಾದ ಗುಹನ ಅವತಾರವನ್ನು ತಾಳಿದವನೂ ಆದ ಶ್ರೀ ಸುಬ್ರಹ್ಮಣ್ಯನೇ ನಿನಗೇ ನಮೋ ನಮ: ಎನ್ನುತ್ತಾರೆ.

ದೀಕ್ಷಿತರು ತಮ್ಮ ಸುಬ್ರಹ್ಮಣ್ಯನ ಕುರಿತಾದ ಎಲ್ಲಾ ಕೃತಿಗಳಲ್ಲೂ ಷಣ್ಮುಖನ ಆರಾಧನೆ ಮಾಡುವವರು ಎಲ್ಲಾ ಜಂಜಾಟಗಳಿಂದಲೂ ಮುಕ್ತಿಹೊಂದಿ ಮೋಕ್ಷ ಸಾಧನೆ ಮಾಡಬಹುದೆಂದು ತಿಳಿಸುತ್ತಾರೆ. ಅವರ ಕೃತಿಗಳಲ್ಲಿನ ಷಣ್ಮುಖನ ವರ್ಣನೆ ಅತಿಶಯವಾಗಿರುತ್ತದೆ. ಅವರ ಇನ್ನೊಂದು ರಚನೆ... ಸಮಷ್ಠಿ ಚರಣವನ್ನೊಳಗೊಂಡ, ನಾಟ ರಾಗದ "ಸ್ವಾಮಿನಾಥ ಪರಿಪಾಲಯ ಶುಮಾಂ"... ಕೂಡ ಸುಂದರವಾದ ಕೃತಿ. ಎಲ್ಲಾ ರಚನೆಗಳಲ್ಲೂ ಅವರ ಗುರುಗುಹನ ಮೇಲಿನ ಭಕ್ತಿ ಉತ್ಕಟವಾಗಿ ತೋರಿಸಲ್ಪಟ್ಟಿದೆ.

Friday, October 16, 2009

ಶ್ರೀ ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೃತಿಗಳು - 2

ಶ್ರೀ ಚಕ್ರ ಉಪಾಸನೆಯಲ್ಲಿ ದೇವಿಯನ್ನು ನಾನಾ ವಿಧವಾಗಿ ಅತ್ಯಂತ ಭಕ್ತಿಯಿಂದ ಆರಾಧಿಸ ಬೇಕಾಗುತ್ತದೆ. ಇದರಲ್ಲಿ ಒಂಭತ್ತು ಆವರಣಗಳನ್ನು ಪೂಜಿಸಬೇಕಾಗುತ್ತದೆ. ಪ್ರತಿಯೊಂದು ವೃತ್ತದಲ್ಲೂ ಪೂಜೆಯ ವಿಧಾನಕ್ಕೆ ಬೇರೆಯದೇ ಆದ ಹೆಸರೂ ಮತ್ತು ಶಕ್ತಿಯೂ ಇದೆ. ಇಲ್ಲಿರುವ ಒಂಭತ್ತು ಚಕ್ರಗಳನ್ನೂ ಪೂಜಿಸಿದ ನಂತರವೇ ದೇವಿಯ ಅನುಗ್ರಹ ನಮಗೆ ಲಭಿಸುವುದು. ಈ ನವ ಆವರಣಗಳಿಂದ ಕೂಡಿದ "ಶ್ರೀ ಚಕ್ರ"ದ ಉಪಾಸನೆಯೇ "ಶ್ರೀ ವಿದ್ಯೆ". ಆ ಲಲಿತಾಂಬಿಕೆ, ಜಗನ್ಮಾತೆ, ಪರಾಶಕ್ತಿ, ಬಿಂದು ಸ್ವರೂಪಳಾಗಿ ಶ್ರೀ ಚಕ್ರದಲ್ಲಿ ಕುಳಿತಿದ್ದಾಳೆ. ಈ ನವಾವರನ ಕೃತಿಗಳಲ್ಲಿ ದೀಕ್ಷಿತರು ದೇವಿಯ ಆರಾಧನೆಯನ್ನೂ, ದೇವಿಯ ಸೌಂದರ್ಯವನ್ನೂ ಅತ್ಯಂತ ಮನೋಹರವಾಗಿ ವರ್ಣಿಸಿದ್ದಾರೆ.....

ಆಶ್ವೀಜ ಬಹುಳ ಚತುರ್ದಶಿ - ನರಕ ಚತುರ್ದಶಿ ದೀಪಾವಳಿ ಪರ್ವ ದಿನವಾದ್ದರಿಂದ ದೀಕ್ಷಿತರು ಆ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಸಾಯಂಕಾಲ ತಮ್ಮ ಎಲ್ಲಾ ಶಿಷ್ಯರನ್ನೂ ಕರೆದು ತಾವೇ ರಚಿಸಿದ ಪೂರ್ವಿ ಕಲ್ಯಾಣಿ ರಾಗದ "ಮೀನಾಕ್ಷಿ ಮುದಂ ದೇಹಿ" ಕೃತಿಯನ್ನು ವೀಣೆಯಲ್ಲಿ ನುಡಿಸುತ್ತಾ, ಎಲ್ಲರಿಗೂ ಹಾಡಲು ಹೇಳುತ್ತಾರೆ. "ಮೀನಲೋಚನಿ ಪಾಶಮೋಚನಿ....." ಎಂಬ ಅನುಪಲ್ಲವಿಯ ಸಾಹಿತ್ಯವನ್ನು ಪದೇ ಪದೇ ಹಾಡಿಸುತ್ತಾ... ವೀಣೆ ಬದಿಗಿಟ್ಟು ತಂಬೂರಿಯ ನಾದ ಕೇಳುತ್ತಾ...... ಆ ಜಗನ್ಮಾತೆಯ ಮಡಿಲಿನಲ್ಲಿ ಒರಗಿ ಬಿಡುತ್ತಾರೆ..... ತಾಯಿಯಲ್ಲಿ ಅವರ ಆತ್ಮ ಲೀನವಾಗಿ ಬಿಡುತ್ತದೆ........

ನಮ್ಮ ಸಂಗೀತ ಪ್ರಪಂಚದಲ್ಲಿ ದೀಪಾವಳಿಯನ್ನು "ದೀಕ್ಷಿತರ ದಿನ" ಎಂದೇ ಆಚರಿಸಲಾಗುತ್ತದೆ. ದೀಕ್ಷಿತರ್ಯ್ ಸಂಗೀತದ ಜ್ಯೋತಿಯನ್ನು ಬೆಳಗಿ, ನಮಗಾಗಿ ಇಂತಹ ಅಪೂರ್ವ ಹಾಗೂ ಅಮೂಲ್ಯ ಸಂಪತ್ತನ್ನು ಅನುಗ್ರಹಿಸಿದ್ದಾರೆ. ಮಹಾನ್ ಚೇತನವಾದ ದೀಕ್ಷಿತರನ್ನು, ನಾವು ಅವರ ರಚನೆಗಳನ್ನು ಹಾಡುತ್ತಾ, ಅವರು ಹಚ್ಚಿದ ನಾದ ಜ್ಯೋತಿಯನ್ನು ನಿರಂತರವಾಗಿ ಬೆಳಗುತ್ತಾ, ತಲೆಬಾಗಿ ನಮಿಸೋಣ............


ಮುಂದುವರೆಯುವುದು........

Wednesday, October 14, 2009

ಶ್ರೀ ಮುತ್ತುಸ್ವಾಮಿ ದೀಕ್ಷಿತರ ನವಾವರಣ ಕೃತಿಗಳು

ಅತ್ಯಂತ ವಿದ್ವತ್ತ್ ಪೂರ್ಣ ಮತ್ತು ಶ್ರೇಷ್ಠವಾದ ನವಾವರಣ ಕೃತಿಗಳ ಬಗ್ಗೆ ನನಗೆ ತಿಳಿದ ಅರ್ಥ ಹಾಗೂ ಅನಿಸಿಕೆಗಳನ್ನು ನಿಮ್ಮ ಜೊತೆ ವಿನಿಮಯ ಮಾಡಿಕೊಳ್ಳುವ ಮೊದಲು ಈ ಕೃತಿಗಳ ಕರ್ತೃ, ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರಾದ ಶ್ರೀ ಮುತ್ತುಸ್ವಾಮಿ ದೀಕ್ಷಿತರ ಜೀವನದ ಬಗ್ಗೆ ಒಂದು ಚಿಕ್ಕ ಇಣುಕು ನೋಟ ಅಥವಾ ಪೀಠಿಕೆ :..........


ಒಂದು ಶತಮಾನ ಕ್ರಿ.ಶ.೧೭೫೦ ರಿಂದ ೧೮೫೦ ರವರೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸುವರ್ಣಯುಗ. ಶ್ರೀ ಮುತ್ತುಸ್ವಾಮಿ ದೀಕ್ಷಿತರು ಶಾಸ್ತ್ರೀಯ ಸಂಗೀತದ ರತ್ನತ್ರಯರೂ, ತ್ರಿಮೂರ್ತಿಗಳಲ್ಲೂ ಒಬ್ಬರು. ಇವರು ಹಂಸಧ್ವನಿ ರಾಗದ ಕರ್ತೃಗಳಾದ ಶ್ರೀ ರಾಮಸ್ವಾಮಿ ದೀಕ್ಷಿತರು ಮತ್ತು ತಾಯಿ ಸುಬ್ಬಲಕ್ಷ್ಮಿ ಅಮ್ಮಾಳ್ ರವರ ಸುಪುತ್ರರಾಗಿ ತಿರುವಾರೂರಿನಲ್ಲಿ ೧೭೭೫ರಲ್ಲಿ ಜನಿಸಿದರು. ತಂದೆ ತಾಯಿಯರ ಭಕ್ತಿಗೆ ಒಲಿದ ವೈದೀಶ್ವರ ಕೋಯಿಲ್ ಮುತ್ತು ಕುಮರಸ್ವಾಮಿಯ ಅನುಗ್ರಹಿತ ಮಗು ದೀಕ್ಷಿತರು. ೧೬ನೇ ವಯಸ್ಸಿಗೇ ವೇದಾಧ್ಯಯನ, ಕಾವ್ಯಾಲಂಕಾರ, ಜ್ಯೋತಿ:ಶಾಸ್ತ್ರ, ವೈದ್ಯ ಮತ್ತು ಮಂತ್ರ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಇವರು ತಮ್ಮ ಗುರುಗಳ ಆಣತಿಯಂತೆ ಕಾಶಿಯಲ್ಲಿ ಗಂಗೆಯಲ್ಲಿ ಮಿಂದು ಪ್ರಾರ್ಥಿಸಿದಾಗ ಇವರ ಬೊಗಸೆಯ ನೀರಿನಲ್ಲಿ ವೀಣೆಯ ದರ್ಶನವಾಗಿತ್ತು. ನಿಷ್ಣಾತ ವೈಣಿಕರಾದ ದೀಕ್ಷಿತರು ಪಂಚದಶ ಗಮಕಗಳನ್ನು ಪ್ರಯೋಗಮಾಡಿ ತೋರಿಸಿದ್ದರು. ತಿರುತ್ತಣಿಯ ಷಣ್ಮುಖನ ಆರಾಧಕರೂ ಮತ್ತು ಒಲಿಸಿಕೊಂಡವರೂ ಆಗಿದ್ದರು. ಸ್ವಾಮಿ ಇವರಿಗೆ ವಲ್ಲಿ-ದೇವಯಾನಿ ಸಮೇತ, ಮಯೂರ ವಾಹನನಾಗಿ ಸಾಕ್ಷಾತ್ಕರಿಸಿದ್ದನು. ತಾವು ಈ ’ಗುರುಗುಹ’ನ ದಾಸ, ಅವನ ಕಾಲಿನ ಕಸವೆಂಬ ಭಾವನೆಯಿಂದ ತಮ್ಮ ಮೊಟ್ಟ ಮೊದಲ ಕೃತಿ "ಶ್ರೀನಾಥಾದಿ ಗುರುಗುಹೋ ಜಯತಿ ಜಯತಿ.." ಎಂದು ಮಾಯಾ ಮಾಳವಗೌಳ ರಾಗದಲ್ಲಿ ರಚಿಸಿದರು. ಇವರು ಈ ಕೃತಿಯಲ್ಲಿ ಭಗವಂತನ ಚರಣ ಒಂದೇ ಎಲ್ಲದಕ್ಕೂ ಆಶ್ರಯ ಎಂಬ ಭಾವ ವ್ಯಕ್ತಪಡಿಸಿದ್ದಾರೆ.

ದೀಕ್ಷಿತರು ಶ್ರೀ ವಿದ್ಯೆಯ ಉಪಾಸಕರೂ ಆಗಿದ್ದರು. ಅವರು ರಚಿಸಿದ ಅತ್ಯಂತ ಶ್ರೇಷ್ಠ ಕೃತಿಗಳಲ್ಲಿ ಅವರ ಪಾಂಡಿತ್ಯ ಮತ್ತು ವಿದ್ವತ್ತ್ ಗಳ ಅನುಭವ ನಮಗಾಗುತ್ತದೆ. ಕೃತಿಗಳಲ್ಲಿ ಅವರು ಅದರ ರಚನೆಯ ರಾಗದ ಹೆಸರನ್ನು ಅತ್ಯಂತ ಅರ್ಥಪೂರ್ಣವಾಗಿ ಹೊಂದಿಸಿರುವುದೂ ಕೂಡ ಅವರ ವಿಶೇಷತೆಯೇ....

ದೀಕ್ಷಿತರು ಅನೇಕ ಚಿಕ್ಕ ಚಿಕ್ಕ ಕೃತಿಗಳನ್ನು ಸಮಷ್ಠಿ ಚರಣಗಳನ್ನೊಳಗೊಂಡಂತೆ ಅದ್ಭುತವಾಗಿ ರಚಿಸಿದ್ದಾರೆ..... ದೀಕ್ಷಿತರು ತಮ್ಮ ಕ್ಷೇತ್ರ ಕೃತಿಗಳಲ್ಲಿ ಆಯಾ ಕ್ಷೇತ್ರದ ವಿವರಣೆ, ವಿಶೇಷತೆಯನ್ನು ಅಳವಡಿಸಿದ್ದಾರೆ. ನವಗ್ರಹ ಕೃತಿಗಳಲ್ಲಿ ಗ್ರಹಗಳ ಪರಿಚಯ, ಸ್ಥಾನ ವಿವರಿಸಿದ್ದಾರೆ. ಮೋಕ್ಷ ಸಾಧನೆಗೆ ಕರ್ಮ, ಭಕ್ತಿ ಮತ್ತು ಜ್ಞಾನ ಮಾರ್ಗಗಳನ್ನು ಅನುಸರಿಸಬೇಕೆಂಬುದನ್ನು ನಮಗೆ ತೋರಿಸಿಕೊಟ್ಟಿದ್ದಾರೆ.......

ದೀಕ್ಷಿತರು ಶ್ರೀ ಶಂಕರಾಚಾರ್ಯರ ವೇದಾಂತ ಸೂತ್ರಗಳಿಗೆ ಅನುಗುಣವಾಗಿ ಇಡೀ ವಿಶ್ವವು ಮಾಯೆಯಿಂದ ಸೃಷ್ಟಿಸಲ್ಪಟ್ಟಿದೆ, ಪರಮಾತ್ಮನ ಸಾಕ್ಷಾತ್ಕಾರ ನಮ್ಮಲ್ಲಿಯೇ ನಮಗೆ ಆಗಬೇಕಾದರೆ, ನಾವು ಮಾಯೆಯನ್ನು ಜಯಿಸಬೇಕೆಂದು ತೋರಿಸಿದವರು. ತಮ್ಮದೇ ರಚನೆ "ಮಾಯೆ ತ್ವಂ ಯಾಹಿ, ಮಾಂ ಬಾದಿತುಂ ಕಾಹಿ".... ಎಂಬ ಕೃತಿಯಲ್ಲಿ ಎಲೈ ಮಾಯೆಯೇ ನನ್ನನ್ನು ತ್ಯಜಿಸು, ಬಾಧಿಸಬೇಡವೆಂದು ಹೇಳುತ್ತಾರೆ...... ದೀಕ್ಷಿತರು ಎಲ್ಲಾ ೭೨ ಮೇಳಕರ್ತ ರಾಗಗಳಲ್ಲೂ ರಚಿಸಿದ್ದಾರೆ.


ದೀಕ್ಷಿತರು ತಮ್ಮ ಜೀವಿತದ ಕೊನೆಯ ಉಸಿರಿರುವವರೆಗೂ ದೇವರನ್ನು ಪೂಜಿಸುತ್ತಿದ್ದರು. ಅವರು ಬಹಳ ಮೃದು ಹೃದಯದವರೂ, ಕರುಣೆಯುಳ್ಳವರೂ ಆಗಿದ್ದರು. ಬರದಿಂದ ಬಸವಳಿದ ಜೀವಿಗಳನ್ನು ನೋಡಿ, ಮರುಗಿ... "ಆನಂದಾಮೃತ ಕರ್ಷಿಣೀ... ಅಮೃತ ವರ್ಷಿಣೀ...." ಎಂದು ಬೇಡಿದರು. ನನ್ನ ಮನಸ್ಸಿನಲ್ಲಿ ಸಂತೋಷದ / ಆನಂದದ ಮಳೆಗರೆದ ತಾಯೇ... "ಸಲಿಲಂ ವರ್ಷಯ ವರ್ಷಯ".... ಎಂದು ಹಾಡಿದರು.........


ರ‍ಾಗ : ಅಮೃತವರ್ಷಿಣಿ ತಾಳ : ಆದಿತಾಳ

ಪಲ್ಲವಿ

ಆನಂದಾಮೃತ ಕರ್ಷಿಣಿ.. ಅಮೃತ ವರ್ಷಿಣಿ....
ಹರಾದಿ ಪೂಜಿತೇ ಶಿವೇ ಭವಾನಿ.......||

ಸಮಷ್ಟಿ ಚರಣ

ಶ್ರೀನಂದಾದಿ ಸಂರಕ್ಷಿಣಿ...... ಶ್ರೀ ಗುರುಗುಹ ಜನನಿ ಚಿದ್ರೂಪಿಣಿ...
ಸಾನಂದ ಹೃದಯ ನಿಲಯೇ ಸದ್ಯ ಸ್ಸುವೃಷ್ಟಿ ಹೇತವೇ ತ್ವಾಂ.....
ಸಂತತಂ ಚಿಂತಯೇ ಅಮೃತೇಶ್ವರಿ......
ಸಲಿಲಂ ವರ್ಷಯ ವರ್ಷಯ ವರ್ಷಯ............ ||


ತಮ್ಮ ಶಿಷ್ಯನೊಬ್ಬನ ಹೊಟ್ಟೆ ಶೂಲೆಯನ್ನು ಪರಿಹರಿಸುವ ಸಲುವಾಗಿ, ಅವನಿಗೆ ಗುರು ಮತ್ತು ಶನಿ ಗ್ರಹಗಳನ್ನು ಬಲ ಪಡಿಸುವುದಕ್ಕೋಸ್ಕರವೇ ಅವರು ಗುರು, ಶನಿ ಗ್ರಹಗಳನ್ನು ಕುರಿತು ಕೃತಿ ರಚಿಸಿದರು. ಹೀನ ಕುಲದವನಾದ ಅವನು ನವಗ್ರಹ ಶಾಂತಿ ಮಾಡಲಾಗುವುದಿಲ್ಲವೆಂದು, ಅವನಿಗೆ ಈ ಕೃತಿಗಳನ್ನು ಸ್ವತ: ಹೇಳಿಕೊಟ್ಟರು. ಮಂತ್ರಗಳಿಂದ ಹೇಗೆ ನಾವು ದೇವತೆಗಳನ್ನು ಒಲಿಸಿಕೊಂಡು ಗ್ರಹಗಳ ಶಾಂತಿ ಮಾಡಿಕೊಳ್ಳಬಹುದೋ ಹಾಗೆ ಸಂಗೀತದಿಂದಲೂ ಸಾಧ್ಯವೆಂದು ಶಿಷ್ಯನಿಗೆ ಉಪದೇಶಿಸಿದರು. ತನ್ಮಯನಾಗಿ, ಭಕ್ತಿಯಿಂದ ಅಭ್ಯಸಿಸಿದ ಶಿಷ್ಯನ ಉದರ ಬೇನೆ ವಾಸಿಯಾಗಿತ್ತು.... ಹೀಗೆ ದೀಕ್ಷಿತರು ಮಂತ್ರಾನುಷ್ಠಾನದ ಫಲವನ್ನು ನಾದೋಪಾಸನೆಯಿಂದ ಮಾಡಬಹುದೆಂದು ಜ್ಯೋತಿಷ್ಯ ಶಾಸ್ತ್ರದ ವಿಶೇಷಗಳನ್ನೆಲ್ಲಾ ಒಟ್ಟಾಗಿಸಿ, ನವಗ್ರಹ ಕೃತಿಗಳನ್ನು ರಚಿಸಿದರು. ಈ ಕೃತಿಗಳು ಸಂಗೀತ ಲೋಕದಲ್ಲೇ ಅತ್ಯಂತ ಶ್ರೇಷ್ಟ ಕೃತಿಗಳಾಗಿವೆ.........

ಮುಂದುವರೆಯುವುದು.............

ಕೊನೆಯ ಮಾತು : ಆನಂದಾಮೃತಕರ್ಷಿಣಿ ಕೃತಿಯ ಕೊಂಡಿ ಹಂಸಾನಂದಿಯವರ ಬ್ಲಾಗ್ ಮೂಲಕ ಸಿಕ್ಕಿತ್ತು. ಅವರಿಗೆ ಧನ್ಯವಾದಗಳು....

Tuesday, October 6, 2009

ಆನಂದ..ಬ್ರಹ್ಮಾನಂದ..ಪರಮಾನಂದ.. ಸಂಗೀತವೇ........

ಶ್ರೀ ಕೃಷ್ಣರಾಜೇಂದ್ರ ರಸ್ತೆಯಲ್ಲಿರುವ ಬೆಂಗಳೂರು ಗಾಯನ ಸಮಾಜ ತನ್ನ ೪೧ನೇ ಸಂಗೀತ ಸಮ್ಮೇಳನವನ್ನು ಈ ತಿಂಗಳ ೪ನೇ ತಾರೀಖಿನಿಂದ ನಡೆಸುತ್ತಿದೆ. ಪ್ರತಿದಿನ ಬೆಳಿಗ್ಗೆ ವಿದ್ವತ್ ಘೋಷ್ಟಿಗಳು ನಡೆಯುತ್ತಿವೆ. ಸಂಜೆ ೪.೧೫ರಿಂದ ೫.೪೫ರವರೆಗೆ ಯುವ ಉದಯೋನ್ಮುಖ ಕಲಾವಿದರುಗಳ ಸಂಗೀತ ಕಛೇರಿಗಳು ನಡೆಯುತ್ತಿವೆ. ಸಾಯಂಕಾಲ ೬ ಘಂಟೆಯಿಂದ ರಾತ್ರಿ ೯ ಘಂಟೆಯವರೆಗೆ ಭವ್ಯ ಸಂಗೀತ ಕಛೇರಿಗಳು ನಡೆಯುತ್ತಿವೆ.

ನಿನ್ನೆ ೬ನೇ ತಾರೀಖು ಸಾಯಂಕಾಲ ಶ್ರೀ ಆರ್ ಕೆ ಪದ್ಮನಾಭನ್ ರವರ ಹಾಡುಗಾರಿಕೆ ಏರ್ಪಡಿಸಿದ್ದರು. ಸರಿಯಾಗಿ ೬ ಘಂಟೆಗೆ ಕಛೇರಿ ನಠಭೈರವಿ ರಾಗದ, ಅವರ ಸ್ವಂತ ರಚನೆಯಾದ ವರ್ಣದಿಂದ ಆರಂಭವಾಯಿತು. ಈ ವರ್ಣ ಈ ಕಛೇರಿಗೆಂದೇ ಮಾಡಿದ ಮತ್ತು ಅರ್ಪಿಸಲ್ಪಟ್ಟ ಕೃತಿ ಎಂದು ಶ್ರೀ ಪದ್ಮನಾಭನ್ ಹೇಳಿದರು. ಮುಂದುವರೆದು ಮಾಮವಸದಾವಂದೇ...... ಭಾವಯಾಚ್ಯುತಂ ವಾಸುದೇವಂ, ಪೂರ್ವಿ ಕಲ್ಯಾಣಿ ರಾಗದಲ್ಲಿ...... ಕೃತಿಗೆ ಸೊಗಸಾದ ನೆರವಲ್ ಹಾಡಿ, ಕಲ್ಪನಾ ಸ್ವರಗಳನ್ನು ಹಾಡಿದರು. ಕೃತಿ ಆರಂಭಿಸುವ ಮೊದಲು ಮಾಡಿದ ಪೂರ್ವಿ ಕಲ್ಯಾಣಿ ರಾಗದ ಆಲಾಪನೆ ನಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ದಿತ್ತು.

ಇದರ ನಂತರ ಅವರು ಹಾಡಿದ್ದು ಚಪಲವಿರಬೇಕು... ನಮಗೆ ಗಾನ ಹೋಳಿಗೆ ತಿಂದು ತೇಗುವಂತಾ, ವೈಕುಂಠ ತೋರಿಸುವ ಗಾಯನ (ಗಾನದ) ಚಪಲವಿರಬೇಕು..... ಎಂಬ ಸ್ವಂತ ರಚನೆ ಹಾಡಿದರು. ಈ ಕೃತಿಯ ಸಾಹಿತ್ಯ ನನಗೆ ಬರೆದುಕೊಳ್ಳಲಾಗದಿದ್ದರೂ ಅದರ ಭಾವಾರ್ಥ ಮಾತ್ರ ನನ್ನನ್ನು ಆಶ್ಚರ್ಯಗೊಳಿಸಿತು. ಶ್ರೀ ಪದ್ಮನಾಭನ್ ರವರು ಈ ರಚನೆಯಲ್ಲಿ ಗಾನದ ಹೋಳಿಗೆ ತಿನ್ನಲು ಅನಿಲದ ಅಡಚಣೆಯಿಲ್ಲ, ಅನ್ನ ವರ್ಜ್ಯವಿಲ್ಲ.... ಎಂದು ಸೊಗಸಾಗಿ ಹಾಡುತ್ತಾ ಹೋದಂತೆ, ನಮಗೆ ಅರ್ಥ ತಿಳಿಯಾಗಿ ನಮ್ಮ ಮನಮುಟ್ಟುವಂತಾಯಿತು. ಒಟ್ಟಿನಲ್ಲಿ ಅವರು ಹೂರಣದ ಒಬ್ಬಟ್ಟನ್ನು ವರ್ಣಿಸುತ್ತಾ... ಒಳಗಿರುವ ಹೂರಣ ಸಂಗೀತದ ಸಾಹಿತ್ಯ.... ಹೋಳಿಗೆಯ ಬಣ್ಣವೇ ನಾವು ಹಾಡುವ ’ವರ್ಣ’.... ಸಕ್ಕರೆಯ ಒಬ್ಬಟ್ಟಿಗೆ ಮತ್ತೆ ಮೇಲೆ ಹಾಕಿಕೊಳ್ಳುವ ಸ್ವಲ್ಪ ಸಕ್ಕರೆಯೇ ಸಂಗೀತದ ಲಯ, ತಾಳ, ಭಾವ ಎಲ್ಲವನ್ನೂ ಹೋಳಿಗೆಗೆ ರುಚಿ ಹೆಚ್ಚಾಗಲು ಸೇರಿಸುವ ಕ್ಷೀರ (ಹಾಲು) ಮತ್ತು ಅಭಿಗಾರ (ತುಪ್ಪ) ಎಂದು ಮನತುಂಬಿ ಹಾಡುತ್ತಾ ಹೋದಂತೆ, ಕೇಳುವವರಿಗೆ ನಿಜವಾಗಲೂ ಹೋಳಿಗೆ ಸವಿದದ್ದಕ್ಕಿಂತ ಹೆಚ್ಚು ಆನಂದ ಉಂಟಾಯಿತು.

ಕಛೇರಿ ಮುಂದುವರೆಸುತ್ತಾ.. ಎಂತವೇಡುಕೊಂದೂ ರಾಘವಾ.....ಹಾಡಿದ ನಂತರ ಮತ್ತೊಂದು ಕೃತಿ ನನ್ನನ್ನು ಅತಿಯಾಗಿ ಸೆಳೆದಿದ್ದು ಅವರು ಹಾಡಿದ ಏನು ಬಂದ್ಯೋ ಜೀವವೆ ಶರೀರದೊಳು ವ್ಯರ್ಥವಾಗಿ.... ಎಂಬ ಸಾಹಿತ್ಯ. ಇದರ ಚರಣದಲ್ಲಿ ಅವರು ಹೇಳುತ್ತಾರೆ...
ದಾನ ಧರ್ಮ ಮಾಡಲಿಲ್ಲ.. ದಯಬುದ್ಧಿ ಹುಟ್ಟಲಿಲ್ಲ... ಜ್ಞಾನ ಅರಿತೂ ಹರಿ ಪೂಜೆ ಮಾಡಲಿಲ್ಲ... ಜ್ಞಾನಿ ಸುಜ್ಞಾನಿಗಳ ಸನ್ನಿಧಿಯಲ್ಲಿರಲಿಲ್ಲ... ನಿರ್ಮಲ ಮನದಲ್ಲಿ ಒಂದೂ ದಿನವಿರಲಿಲ್ಲ... ಉಂಡು ಸುಖಿಯಲ್ಲ.. ಉಟ್ಟು ತೊಟ್ಟು ಹರಿನಾಮವಿಲ್ಲ... ದುಡ್ಡು ಕೊಟ್ಟು ಹರಿಸೇವೆ ಮಾಡಲಿಲ್ಲ... ಗುಂಡು ನಾಯಿಯಂತೆ ಮನೆ ಮನೆಗಳ ತಿರುಗಿ ಇದ್ದೆ... ಮೊಂಡು ಜೋಗಿಗಳ ಗುಣಗಳ ಬಿಡಿಸೋ ದಯವ ಮಾಡೋ.....

ಹಾಡಿ ಮುಗಿಸಿ ಮತ್ತೆ ದಾನ ಧರ್ಮ ಮಾಡಲಿಲ್ಲ ಎಂಬ ಕಡೆ ನೆರವೆಲ್ ಮಾಡಿದರು.. ನಂತರ ಹಾಡಿದ್ದೇ ಬಂಟುರೀತಿ ಕೊಲುವು ವಿಯವಯ್ಯ ರಾಮಾ...., ಇದರ ನಂತರ ಬಂದಿದ್ದು ಸರ್ವಕಾಲಕ್ಕೂ ಅತ್ಯಂತ ಜನಪ್ರಿಯವಾದ ದ್ವಿಜಾವಂತಿ ರಾಗದ ಅಖಿಲಾಂಡೇಶ್ವರಿ ರಕ್ಷಮಾಂ........ ಇದಾದ ಮೇಲೆ ಹಾಡಿದ್ದೇ ಕಛೇರಿಯ ವಿಶೇಷ ಘಟ್ಟ... ನಠ ಭೈರವಿಯ ರಾಗಾಲಾಪನೆ... ತಾನ... ಪಲ್ಲವಿ "ಆನಂದ.... ಬ್ರಹ್ಮಾನಂದ..... ಪರಮಾನಂದ.... ಸಂಗೀತವೇ.....". ಇದಂತೂ ನಿಜವಾಗಿ ಶ್ರೋತೃಗಳಿಗೆಲ್ಲಾ ಸಂಗೀತದ ಪರಮಾನಂದವನ್ನೇ ಉಣಬಡಿಸಿತು. ಶ್ರೀ ಪದ್ಮನಾಭನ್ ರವರ ಕಛೇರಿಗಳಲ್ಲಿ ಅವರು ಪ್ರಯೋಗಿಸುವ ಕಲ್ಪನಾ ಸ್ವರಗಳು, ಆಲಾಪನೆಗಳು, ನೆರವೆಲ್ ಮಾಡುವ ಹೊಸ ಹೊಸ ವಿಧಾನಗಳು ನಮ್ಮನ್ನು ಖಂಡಿತಾ ಸ್ವರ್ಗಕ್ಕೇ ಕರೆದುಕೊಂಡು ಹೋಗಿಬಿಡತ್ತೆ. ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳುತ್ತಲೇ ಇರೋಣ ಎನ್ನಿಸುವಷ್ಟು ಅದ್ಭುತವಾಗಿರುತ್ತದೆ.

ನಂತರ ಹಾಡಿದ್ದು ಪಾರ್ಥಸಾರಥಿ ರುಕ್ಮಿಣೀಪತಿ.....ಸ್ವಯಂ ರಚನೆ ಮಾಡಿದ್ದು.... ಕೊನೆಯ ಘಟ್ಟ ಮುಟ್ಟಿದ್ದ ಈ ಸಾಯಂಕಾಲದ ಕಛೇರಿಗೆ ಶ್ರೀ ಪದ್ಮನಾಭರ್ ರವರು ಭಕ್ತಿಯ ಸಿಂಚನ ಲೇಪಿಸಿದ್ದು ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮವ್ರತಾಯಚ, ಭಜತಾಂ ಕಲ್ಪವೃಕ್ಷಾಯ, ನಮತಾಂ ಕಾಮಧೇನುವೆ... ಎಂಬ ಗುರುರಾಯರ ಸ್ತುತಿಯನ್ನು ಬೇರೆ ಬೇರೆ ರಾಗಗಳಲ್ಲಿ ಹಾಡಿದ್ದು.....

ಕಛೇರಿ ಮುಕ್ತಾಯದ ಹಂತ ತಲುಪುತ್ತಿದ್ದಂತೆ ನನ್ನೊಳಗಿನ ಚಡಪಡಿಕೆ ಮಿತಿ ಮೀರಿತ್ತು... ಯಾವ ತಿಲ್ಲಾನ ಹಾಡಿ ಮುಗಿಸುತ್ತಾರೆಂಬ ಕುತೂಹಲ.... ನೆನೆಸಿದ್ದಂತೆಯೇ.. ಸಿಂಧೂಭೈರವಿಯ ತಿಲ್ಲಾನ ಶುರು ಮಾಡಿದರು. ಮಧ್ಯದ ಸಾಹಿತ್ಯ ಕೂಡ ಅವರ ಸ್ವಂತ ರಚನೆಯೇ.... ಅವರು ತಿಲ್ಲಾನ ಹಾಡಿದ ವೇಗ ಯಾವ ಯುವ ಕಲಾವಿದನನ್ನೂ ಪೋಟಿಗೊಡ್ಡಬಹುದಾಗಿತ್ತು. ಮೂರು ಘಂಟೆಗಳ ಕಾಲ ಸುಶ್ರಾವ್ಯವಾಗಿ ಗಾನದ ಅಮೃತವನ್ನೇ ಸುರಿಸುವ ಶ್ರೀ ಆರ್ ಕೆ ಪದ್ಮನಾಭನ್ ರವರ ಹಾಡುಗಾರಿಕೆ ಎಷ್ಟು ಕೇಳಿದರೂ, ಇನ್ನೂ ಗಾನಾಮೃತಕ್ಕಾಗಿ ತಹತಹಿಸುವಂತೆ ಮಾಡುತ್ತದೆ. ಸಂಗೀತವನ್ನೇ ಜೀವ, ಸರ್ವಸ್ವವೆಂದುಕೊಂಡು, ಅದೊಂದು ಪೂಜೆಯೇನೋ ಎಂಬಂತೆ ಹಾಡುತ್ತಾ ಮೋಡಿ ಮಾಡುವ ಈ ಕಲಾವಿದರನ್ನು ಹೋಲಿಸಲು ಅಥವಾ ವರ್ಣಿಸಲು ನನಗೆ ಶಬ್ದ ಭಂಡಾರ ಸಾಲದು..... ಕಛೇರಿ ಮುಗಿಸಿ ಹೊರಗೆ ಬಂದರೆ, ಯಾವುದೋ ದಿವ್ಯವಾದ ಗಾನ ಲೋಕದಿಂದ ಧರೆಗಿಳಿದು ಬಂದಂತೆ ಅನ್ನಿಸುತ್ತದೆ.........

ಬೆಂಗಳೂರು ಗಾಯನ ಸಮಾಜ ಪ್ರತೀ ವರ್ಷ ನಡೆಸುವ ಈ ಸಮ್ಮೇಳನದಲ್ಲಿ ವಾರದ ದಿನಗಳು ಶ್ರೋತೃಗಳ ಹಾಜರಾತಿ ಸ್ವಲ್ಪ ಕಮ್ಮಿಯಾಗೇ ಇರತ್ತೆ. ಇಂಥಹ ಸತ್ಕಾರ್ಯ ಮಾಡುತ್ತಿರುವ ಒಂದು ಸಂಸ್ಥೆಯನ್ನು ನಾವು ಪ್ರೋತ್ಸಾಹಿಸಲೇ ಬೇಕು, ನಮ್ಮ ಅತ್ಯಮೂಲ್ಯವಾದ ಕರ್ನಾಟಕ ಸಂಗೀತವನ್ನು ಉಳಿಸಲೇ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಇಂಥಹ ಅಪರೂಪದ ಕಲಾವಿದರು ತಮ್ಮನ್ನೇ ಮರೆತು ಅಮೃತಧಾರೆಯನ್ನೇ ಹರಿಸುವಾಗ ನಾವು ಕನಿಷ್ಠ ಕೇಳಿಯಾದರೂ ನಮ್ಮ ಜನ್ಮ ಸಾರ್ಥಕ್ಯ ಪಡೆಯಬಹುದಲ್ವಾ?............

Friday, October 2, 2009

ಎರಡು ಸಾವಿನ ಸುತ್ತ.........

ಮೊದಲನೆಯ ಸಂದರ್ಭ :

ಸಾವು ಮನುಷ್ಯನ ಗತ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ ಎಂಬ ಚಿಕ್ಕ ಸತ್ಯ ನಿನ್ನೆ ನನ್ನ ಅನುಭವಕ್ಕೆ ಬಂತು. ನಮ್ಮ ಕಟ್ಟಡದಲ್ಲಿ ಕಾವಲುಪಡೆಯ ಸದಸ್ಯನಾದ ಒಬ್ಬ ವ್ಯಕ್ತಿ ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ಮರಳಲು ಸಮವಸ್ತ್ರ ಬದಲಿಸಿ ಬಂದಾಗ, ಸುಸ್ತಾಗುತ್ತಿದೆ ಎಂದನಂತೆ. ಬೆಳಿಗ್ಗೆ ಕೆಲಸಕ್ಕೆ ಬಂದವರು ಮತ್ತು ಅಲ್ಲಿದ್ದ ಮತ್ತಿತರು, ಆ ವ್ಯಕ್ತಿಯನ್ನು ಕುರ್ಚಿಯಲ್ಲಿ ಕುಳ್ಳಿರಿಸಿ, ಕಾಫಿ ತರಿಸಿ ಕುಡಿಸಿ, ಚಾಕೊಲೇಟ್ ಕೊಟ್ಟು, ಮಾತನಾಡಿಸಿ ಉಪಚರಿಸಿದ್ದಾರೆ. ಆದರೆ ತೀವ್ರ ಹೃದಯಾಘಾತದಿಂದ ಆ ವ್ಯಕ್ತಿ ಕುಳಿತಲ್ಲೇ ನಿಧನ ಹೊಂದಿದ್ದ. ಮನೆಗೆ ತಲುಪಿಸುವ ಏರ್ಪಾಟು ಮಾಡಿದಾಗ, ವ್ಯಕ್ತಿಯ ಮನೆಯಲ್ಲಿ ಅವನ ಹೆಂಡತಿ ಮತ್ತು ಮಕ್ಕಳು ಸ್ವೀಕರಿಸಲು ನಿರಾಕರಿಸಿಬಿಟ್ಟಿದ್ದಾರೆ. ಕಾರಣವೇನೆಂದರೆ ಸತ್ತ ವ್ಯಕ್ತಿ ಒಂದು ವರುಷದ ಹಿಂದೆ ಮನೆಯವರ ಜೊತೆ ಜಗಳವಾಡಿಕೊಂಡು, ಮನೆ ಬಿಟ್ಟು ಬಂದಿದ್ದನಂತೆ....... ಕೊನೆಗೆ ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿದ ನಂತರ, ಆ ವ್ಯಕ್ತಿಯ ಮಗ ಬಂದು ತಂದೆಯ ಶವವನ್ನು ತೆಗೆದುಕೊಂಡು ಹೋದ.....

ಮನುಷ್ಯ ಬದುಕಿರುವಾಗ ಮಾಡುವ ಎಲ್ಲಾ ಕಾರ್ಯಗಳಿಗೂ ಅವನ ಸಾವಿನ ನಂತರದಲ್ಲಿ ಅವನ ಸಂಬಂಧಿಕರಿಂದಾಗಲಿ ಅಥವಾ ಅವನ ಸಹವಾಸಕ್ಕೆ ಬಂದ ಇತರರಿಂದಾಗಲಿ ಅರ್ಥ ಹುಡುಕುವಂತಾಗುತ್ತದೆ. ಈ ವ್ಯಕ್ತಿ ಬದುಕಿದ್ದಾಗ ಹೇಗಿದ್ದ, ತನ್ನ ಸಂಸಾರವನ್ನು ಹೇಗೆ ಪಾಲಿಸಿದ ಅಥವಾ ಹೆಂಡತಿ ಮಕ್ಕಳೊಂದಿಗೆ ಯಾವ ರೀತಿಯ ಬಾಂಧವ್ಯ ಹೊಂದಿದ್ದ ಎಂಬ ವಿಚಾರ ನನಗೆ ತಿಳಿದಿಲ್ಲ. ತಿಳಿದುಕೊಳ್ಳುವ ಅವಶ್ಯಕತೆಯೂ ಇಲ್ಲಿ ಇಲ್ಲ. ಆದರೆ ಈ ಸಂದರ್ಭದಲ್ಲಿ ಆ ಮೃತ ವ್ಯಕ್ತಿಯ ಕುಟುಂಬ ನಡೆದುಕೊಂಡ ರೀತಿ ನನಗೆ ಗೊಂದಲವನ್ನುಂಟುಮಾಡಿದೆ. ಮರಣದಲ್ಲಿ ನಮ್ಮ ಆಕ್ರೋಶ, ಸಿಟ್ಟು, ದ್ವೇಷ, ಹತಾಶೆ ಎಂಬ ಭಾವೋದ್ವೇಗಗಳನ್ನು ಹರಿಯ ಬಿಡಬಹುದೋ - ಬಾರದೋ ಎಂಬುದೇ ನನ್ನ ತರ್ಕಕ್ಕೆ ನಿಲುಕದ ವಿಷಯವಾಗಿದೆ. ಜೀವ ದೇಹವನ್ನು ಬಿಟ್ಟು ಹೋದ ನಂತರ ನಮ್ಮ ಸಂಸ್ಕೃತಿಯ ಪ್ರಕಾರ ಅದಕ್ಕೆ ಸಂಸ್ಕಾರ ಮಾಡಬೇಕದದ್ದು ಮಗನ ಅಥವಾ ಕುಟುಂಬದ ಇತರ ಸದಸ್ಯರ ಕರ್ತವ್ಯ. ಆದರೆ ಮನೆಬಾಗಿಲಿಗೆ ಬಂದ ಶವವನ್ನು ನಿರಾಕರಿಸುವುದರಿಂದ ಏನನ್ನು ಸಾಧಿಸಿದಂತಾಗಿದೆ? ಬದುಕಿದ್ದಾಗ ಆ ವ್ಯಕ್ತಿ ನಡೆದುಕೊಂಡಿದ್ದಿಕ್ಕಿಂತ ಕೀಳ್ತನದಲ್ಲಿ, ಕುಟುಂಬದವರು ನಡೆದುಕೊಂಡರೆಂದು ನನಗನ್ನಿಸಿತು. ದೇಹವನ್ನು ಸಂಸ್ಕಾರ ಮಾಡದೆ ಬಿಡುವುದರಿಂದ, ನಾವು ಪರಿಸರನಾಶಕ್ಕೆ ಕಾರಣರಾಗಬಹುದೇ ಹೊರತು, ಸತ್ತ ಆ ವ್ಯಕ್ತಿಗೆ ಅವನು ಮಾಡಿದ ತಪ್ಪುಗಳನ್ನು ಯಾವ ರೀತಿ ಅರ್ಥಮಾಡಿಸಿದಂತಾಯಿತು ?

ಎರಡನೆಯ ಸಂದರ್ಭ :

ಕೆಲವು ದಿನಗಳ ಕೆಳಗೆ ನಮಗೆ ತುಂಬಾ ತಿಳಿದವರ ಸಾವು ಘಟಿಸಿತ್ತು. ಮೃತರಾದ ವ್ಯಕ್ತಿ ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಎಂದಿಗೂ ಗೌರವಿಸಲೇಯಿಲ್ಲ. ಒಬ್ಬನೇ ಮಗನನ್ನು ಆದರಿಸಲೇ ಇಲ್ಲ. ಬದುಕಿದ್ದಷ್ಟೂ ದಿನವೂ ಹೆಂಡತಿಯನ್ನು ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಹಿಂಸಿಸಿದ ಆತ, ಸಾಯುವ ಕಾಲಕ್ಕೆ ಒಂದು ಅಪರೂಪದ ಲಿವರ್ ಕ್ಯಾನ್ಸರ್ ನಿಂದ ನರಳುತ್ತಿದ್ದರು. ಆದರೆ ತನಗೆ ಈ ಮಾರಕ ರೋಗ ಇರುವ ವಿಷಯ ಅವರಿಗೆ ತಿಳಿಯಲೇ ಇಲ್ಲ. ಜಾಂಡೀಸ್ ಎಂದು ಆಸ್ಪತ್ರೆ ಸೇರಿದವರಿಗೆ ೪ನೇ ಹಂತದಲ್ಲಿದ್ದ ಕ್ಯಾನ್ಸರ್ ರೋಗ ಕಂಡುಹಿಡಿಯಲ್ಪಟ್ಟಿತ್ತು. ಕೆಮೋ ಥೆರಪಿ ಬೇಡವೆಂದ ಹೆಂಡತಿ, ಊರಿಗೆ ಕರೆದುಕೊಂಡು ಹೋಗಿ ಅಲ್ಲಿಯ ಆಸ್ಪತ್ರೆಗೆ ಸೇರಿಸಿ, ವೈದ್ಯ ಮಾಡಿಸಿ, ಬದುಕಿದ್ದ ಹದಿನೈದು ದಿನಗಳು ಆರೈಕೆ ಮಾಡಿದರು. ತನಗೆ ಆತ ಮಾಡಿದ ಎಲ್ಲಾ ಅನ್ಯಾಯ-ಅಕ್ರಮವನ್ನೂ ಮರೆತು ಮಾನವೀಯತೆ ಮೆರೆದರು.

ಮರಣಾನಂತರವೂ ಈ ವ್ಯಕ್ತಿಯ ಅಂತ್ಯ ಸಂಸ್ಕಾರ ಎದುರು ನೋಡದಿದ್ದ ರೀತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ತಂದೆ ಪ್ರೀತಿಯನ್ನೇ ಪಡೆಯದೆ ಬರಿಯ ಅಪಮಾನಗಳನ್ನೇ ಸಹಿಸಿದ ಮಗ ಕೂಡ ಶದ್ಧೆಯಿಂದ, ಪಾಂಗಿತವಾಗಿ ಎಲ್ಲವನ್ನೂ ಮಾಡಿದ. ಯಾವುದೋ ಜಾತಿಯಲ್ಲಿ ಹುಟ್ಟಿದ್ದರೂ ಕೂಡ ಉತ್ತಮ ರೀತಿಯಲ್ಲಿ ಸಂಸ್ಕಾರ ಪಡೆದ ಈ ವ್ಯಕ್ತಿ ನಿಜವಾಗಿ ಹಿಂದಿನ ಜನ್ಮದಲ್ಲಿ ಏನೋ ಪುಣ್ಯ ಮಾಡಿದ್ದಿರಬೇಕೆಂಬ ಕಲ್ಪನೆ ನನ್ನ ಮನಸ್ಸಿನಲ್ಲಿ ಮೂಡಿತ್ತು !!!

ಇಷ್ಟೆಲ್ಲಾ ಮಾಡಿ ಮುಗಿಸುವಾಗ ಹೆಂಡತಿಯ ಮನದಲ್ಲಿ ಏನು ಭಾವನೆಗಳಿದ್ದವೋ ಗೊತ್ತಿಲ್ಲ ಆದರೆ ನಾನು ನನ್ನ ಕರ್ತವ್ಯ ಮಾಡಿದೆ ಎಂಬಂಥ ಮಾತುಗಳನ್ನು ಆಡಿದ್ದರು ಆಕೆ.

ಮೇಲಿನ ಘಟನೆಗೆ ವಿರುದ್ಧವಾದ ಈ ಪ್ರಸಂಗ ಈ ವ್ಯಕ್ತಿಯ ಗತಜೀವನದತ್ತ ಬೆಳಕು ಚೆಲ್ಲಲೇಯಿಲ್ಲ. ಬಾಹ್ಯ ಪ್ರಪಂಚಕ್ಕೆ ಎಲ್ಲಾ ಒಳ್ಳೆಯತನವನ್ನೂ ಹೊಂದಿದ್ದ ವ್ಯಕ್ತಿ ಕೀಳರಿಮೆಯಿಂದ ನರಳುತ್ತಿದ್ದರೆಂಬ ನನ್ನ ನಂಬಿಕೆ ಧೃಡಪಟ್ಟಿತ್ತು. ಇಂತಹ ಕೀಳರಿಮೆಯಿಂದ ನರಳುವ ಗಂಡಸರು ನಮ್ಮ ಸಮಾಜದಲ್ಲಿ ಇನ್ನೂ ಅನೇಕರಿದ್ದಾರೆ. ಹೆಂಡತಿಯ ಏಳಿಗೆ ಸಹಿಸದ, ತನ್ನನ್ನು ಉದ್ಧರಿಸಿಕೊಳ್ಳಲು ಅರಿಯದ ಜನರು, ಸ್ವಲ್ಪ ಗಮನ ಇಟ್ಟು ನೋಡಿದರೆ, ನಮ್ಮ ಮಧ್ಯೆ ಇನ್ನೂ ಅನೇಕರು ಇದ್ದಾರೆ.