Thursday, May 31, 2012

ಮೌನ - ಬಂಗಾರ

ಅತಿ ಪ್ರಚಲಿತದಲ್ಲಿರುವ ಒಂದು ಗಾದೆ "ಮಾತು ಬೆಳ್ಳಿ - ಮೌನ ಬಂಗಾರ".  ಮಾತು ನಮ್ಮ ಭಾವನೆಗಳನ್ನು ಪ್ರಸ್ತುತ ಪಡಿಸಲು ನಾವು ಅನಾದಿ ಕಾಲದಿಂದಲೂ ಉಪಯೋಗಿಸುತ್ತಾ ಬಂದಿರುವ ಒಂದು ವಿಧಾನ.  ಮಾತಿಲ್ಲದೆ ಬದುಕೇ ಇಲ್ಲವೆಂಬಂತಹ ಒಂದು ಅವಲಂಬನೆ.  ಈ ಮಾತು ಒಂದು ಸುಂದರ ಉದ್ಯಾನವನ.  ನಳನಳಿಸುತ್ತಿರುವ ಬಣ್ಣ ಬಣ್ಣದ ಹೂವು ತುಂಬಿರುವ ಒಂದು ತೋಟ ಎಂಬ ಕಲ್ಪನೆಯಲ್ಲಿ ನೋಡಿದಾಗ, ನಾವು ಹೂವುಗಳ ಸೊಬಗನ್ನು ಆಸ್ವಾದಿಸುತ್ತಾ ಒಳಗೆ ನಡೆದಾಗ ನಮಗೆ ತುಸುವೇ ನಾಚುತ್ತಾ, ಸಿಂಗಾರಗೊಂಡು ಮಾತಿನ ಹೂ ಗಿಡಗಳ ಎರಡೇ ಎರಡು ಹೆಜ್ಜೆ ಹಿಂದೆ ನಿಂತಿರುವ ಸುಂದರಿ, ಮೌನದ ಬಳ್ಳಿ ಕಾಣುತ್ತಾಳೆ.  ಬಣ್ಣ ಬಣ್ಣದ ಹೂಗಳನ್ನು ತುಂಬಿಕೊಂಡು, ಬೀಸುವ ಗಾಳಿಗೆ ಅತ್ತಿತ್ತ ತುಯ್ಯುತ್ತಾ, ಕಣ್ಣು - ಮನಸ್ಸುಗಳನ್ನು ಸೆಳೆಯುವ ಮಾತಿನಂತಲ್ಲ ಮೌನ.  ತನ್ನ ಇರುವಿಕೆಯನ್ನು ಸ್ವಚ್ಛವಾದ ಶುಭ್ರ ಬಿಳುಪಿನಿಂದ ಮೌನವಾಗಿಯೇ ಸುಗಂಧ ಬೀರುತ್ತಾ, ಬೀಸುವ ಮಂದಾನಿಲಕ್ಕೆ ತಕ್ಕಂತೆ ಮೆಲ್ಲಗೆ ತಲೆದೂಗುತ್ತಾ, ಸಂಗೀತವನ್ನು ಕೇಳುತ್ತಾ ಮೈ ಮರೆತಿರುವಳೇನೋ ಎಂಬಂತೆ ಕಾಣುವವಳು.  ಮಲ್ಲಿಗೆಯಂತೆ ಹಸಿರು ಒಡಲಲ್ಲಿ ಬಿಳಿಯ ಪುಟ್ಟ ಪುಟ್ಟ ಹೂವುಗಳಂತಿರುವವಳು ಮೌನ.  ಶುಭ್ರತೆಯೇ ಮೈವೆತ್ತಂತಿರುವ ಮೌನ ತನ್ನ ಬಣ್ಣದಿಂದಲೇ ತಾನೆಷ್ಟು ಶುದ್ಧ ಮನಸ್ಸಿನವಳು, ಸ್ನೇಹಪರ ಜೀವ ಎಂಬುದನ್ನು ನೋಡಿದೊಡನೆ ಮನವರಿಕೆ ಮಾಡಿಸುವವಳು.  ಉದ್ಯಾನವನದ ತುಂಬಾ ತುಂಬಿರುವ ಎಲ್ಲಾ ಬಣ್ಣದ ಹೂವುಗಳು ನಮ್ಮ ಮನಸ್ಸನ್ನು ಆಕರ್ಷಿಸಿದರೂ ಕೂಡ, ಕೊನೆಗೆ ನಮ್ಮನ್ನು ಆವರಿಸುವವಳು ಶುಭ್ರಳಾದ  ಶ್ವೇತಾಂಬರಿಯೇ.  ಇವಳೇ, ಈ ಮೌನಳೇ ನಮ್ಮ ಅಂತರಂಗದ ಸಾಮ್ರಾಜ್ಞಿ, ನಮ್ಮಿಂದ ಕಡೆಗಣಿಸಲ್ಪಟ್ಟವಳು.   ಮಾತಿಲ್ಲದೇ ಬದುಕೇ ಇಲ್ಲವೆಂದು ತಿಳಿದಿರುವ ನಾವು, "ಮೌನ"ವೇ ಬದುಕು ಎಂಬುದನ್ನು ತಿಳಿಯುವುದೇ ಇಲ್ಲ.  ಬೆಳ್ಳಿಗಿಂತ ಹೆಚ್ಚು ಬೆಲೆಬಾಳುವುದು ಬಂಗಾರ.

ಮಾತು ನಮ್ಮ ವ್ಯಕ್ತಿತ್ವದ ಹೊರ ಮುಖದ ಸೌಂದರ್ಯವನ್ನು ತೆರೆದಿಟ್ಟರೆ, ಮೌನ ನಮ್ಮ ಅಂತರಂಗದ  ಒಳಮುಖದ ಸೌಂದರ್ಯವನ್ನು ತೆರೆದಿಡುತ್ತದೆ.  ಸಾವಿರಾರು ಮಾತುಗಳು ಆಡಿದರೂ ಅರ್ಥವೇ ಆಗದ ಕೆಲವು ಸಂಗತಿಗಳು, ಮಾತೇ ಆಡದೆ ಮೌನ ಪಾಲಿಸುವುದರಿಂದಲೇ ಅರ್ಥವಾಗಿ ಬಿಡುತ್ತವೆ.  ಮಾತು ಅಬ್ಬರದ ಅಲೆಗಳನ್ನು ಸೃಷ್ಟಿಸಿದರೆ, ಮೌನ ಸಂಗೀತದಂತಹ ಅಲೆಗಳನ್ನು ಸೃಷ್ಟಿಸುತ್ತದೆ.  ಅನೇಕ ಸಂದರ್ಭಗಳಲ್ಲಿ ಒಂದೇ ಒಂದು ಸಣ್ಣ ಶಬ್ದವೂ ಕೂಡ ಹೊರಗೆ ಬರದೇ ಮೌನ ತಾನೇ ಮಾತಾಗಿಬಿಡುತ್ತಾಳೆ.  ಮೌನ ಸಂಗೀತದಂತಹ ಅಲೆಗಳನ್ನು  ಸೃಷ್ಟಿಸಿದಾಗ, ಮೆಲ್ಲ ಮೆಲ್ಲನೆ ಮನಕ್ಕೆ ಮುದಕೊಡುವ ತರಂಗಗಳೊಂದಿಗೆ ಮೌನ ಬಂದು ನಮ್ಮನ್ನು ಅಪ್ಪಿದಾಗ ಆಗುವ ರೋಮಾಂಚನವೇ ಅದ್ಭುತ.   ಶ್ರೀ ಗೋಪಾಲಕೃಷ್ಣ ಅಡಿಗರ ಒಂದು ಸುಂದರ ಕವಿತೆ "ಮೌನ... ಮೌನ ತಬ್ಬಿತು ನೆಲವ ಝುಂ ಎನೆ.. ಪುಳಕಗೊಂಡಿತು ಧಾರಿಣಿ"... ಇಲ್ಲಿ ಪ್ರಕೃತಿಯ ಸುಂದರ ವರ್ಣನೆಯಾಗಿದೆ.  ನಮ್ಮ ನಿತ್ಯದ ಬದುಕಿನಲ್ಲೂ ನಾವು ಹೀಗೆ ಕೆಲವು "ಮೌನ"ದ ಘಳಿಗೆಗಳಿಗೆ ಅವಕಾಶ ಮಾಡಿಕೊಟ್ಟಾಗ ಮಾತ್ರವೇ ನಮ್ಮೊಳಗಿನ ನಮ್ಮ ಅಂತರಂಗದ ಮೌನದ ಮಾತು, ಸಂಗೀತ ನಮಗೆ ಕೇಳಿಸುವುದು.

ಉದಯವಾದಾಗಿನಿಂದಲೂ ನಾವೇ ನಮ್ಮ ಸುತ್ತಲೂ, ನಮ್ಮೊಳಗೂ, ಹೊರಗೂ ಸೃಷ್ಟಿಸಿಕೊಳ್ಳುವ "ಶಬ್ದ" ಪ್ರಪಂಚದಿಂದ ಬೇಸತ್ತು, ಶಬ್ದವಿಲ್ಲದ ಜಾಗವನ್ನು ಹುಡುಕುವ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತೇವೆ.  ಆಗಲೂ ನಾವು ಮಾತು - ಶಬ್ದವೆಂಬ ಉದ್ಯಾನವನದ ಮಧ್ಯದಲ್ಲೇ ನಿಂತಿರುತ್ತೇವೆಯೇ ಹೊರತು, ನಾಲ್ಕು ಹೆಜ್ಜೆ ಮುಂದೆ ಹೋಗಿ, ಹಿಂದೆಯೇ ನಾಚುತ್ತಾ ನಿಂತಿರುವ ಮೌನವೆಂಬ ಸುಂದರಿಯನ್ನು ಕಂಡುಕೊಳ್ಳುವುದೇ ಇಲ್ಲ.  ಶಾಂತಿ ಬೇಕೆಂದು ಮತ್ತೆ ಮತ್ತೆ ಶಬ್ದ ಭಂಡಾರದ ಕದವನ್ನೇ ತಟ್ಟುತ್ತಾ, ಮತ್ತಷ್ಟು ಮಗದಷ್ಟು ಮಾತುಗಳನ್ನಾಡುತ್ತಾ ಅಲ್ಲೇ ಸಿಲುಕುತ್ತೇವೆಯೇ ಹೊರತು, ಶಬ್ದ ಭಂಡಾರದ ಕದವನ್ನು ಮುಚ್ಚಿ, ಶಾಂತಿಯನ್ನು ಹುಡುಕಲು ಮೌನವನ್ನು ಆಶ್ರಯಿಸುವುದೇ ಇಲ್ಲ.   ಈ ಮಾತಿನ ಅರ್ಥ ಮೌನವನ್ನು ಹುಡುಕಲು ಶಬ್ದ ರಹಿತವಾಗಿರಬೇಕೆಂದರೆ ತಪ್ಪಾಗುವುದು.  ಏಕೆಂದರೆ ಶಬ್ದ ರಹಿತವೆಂದರೆ ಮೌನವಲ್ಲ.  ಅದು ನಿಶ್ಯಬ್ದ, ಅಂದರೆ ನಮ್ಮ ಬಾಹ್ಯ ಇಂದ್ರಿಯಗಳ ಚಟುವಟಿಕೆ ನಿಲ್ಲಿಸುವುದೆಂಬ ಅರ್ಥ ಅಷ್ಟೆ.  ಶಬ್ದವಿಲ್ಲದಿದ್ದರೂ ಮನಸ್ಸಿನಲ್ಲಿ ಪುಂಖಾನುಪುಂಕವಾಗಿ ಶಬ್ದಗಳು ಉತ್ಪತ್ತಿಯಾಗುತ್ತಲೇ ಇರುತ್ತದೆ.  ಅದು ಮೌನವಲ್ಲ.  ಕವಿ ಮಧುರ ಚೆನ್ನರು..  “ ನಿಶ್ಯಬ್ದ ನಿಶ್ಯಬ್ದ ಶಬ್ದದಾಚೆಗೆ ಶಬ್ದ – ನಿಶ್ಯಬ್ದವಿದ್ದರೂ ಮೌನವಿಲ್ಲ”  ಎಂದಿದ್ದಾರೆ.  ಎಷ್ಟು ಅರ್ಥಪೂರ್ಣ ಸಾಲುಗಳು.   

ಮೌನವೆಂದರೆ ನಮ್ಮ ಎಲ್ಲಾ ವಿಷಯಾಸಕ್ತಿಗಳನ್ನೂ, ಹತಾಶೆಗಳನ್ನೂ, ಲೌಕಿಕ ಬಂಧನಗಳನ್ನೂ ಹೊರಗೋಡಿಸುವುದು.  ಹೀಗೆ ನಮ್ಮೊಳಗಿನ ಕಲ್ಮಶವನ್ನೆಲ್ಲಾ ಖಾಲಿ ಮಾಡಿ, ಅಂತರಂಗ ಶುದ್ಧ ಮಾಡಿಕೊಂಡಾಗ, ನಮ್ಮೆಲ್ಲಾ ಇಂದ್ರಿಯಗಳೂ ತಟಸ್ಥವಾಗಿರುವಾಗ, ನಮಗೆ ಕೇಳಿಸುವ ನಮ್ಮ ಒಳಕಣ್ಣಿನ, ಅಂತರಂಗದ ಒಂದು ಧ್ವನಿ, ತರಂಗಗಳು ಅಥವಾ ಸಂಗೀತ.  ಈ ಅಂತರಂಗದ ಸಂಗೀತಕ್ಕೆ ತನ್ನದೇ ಆದ ಒಂದು ಆಹ್ಲಾದಕರವಾದ ಸುವಾಸನೆ ಇದೆ, ತನ್ನದೇ ಆದ ಲಯವಿದೆ, ಲಾಲಿತ್ಯವಿದೆ.  ಅತ್ಯಂತ ಶಕ್ತಿಶಾಲಿಯಾದ ಇದು ಧನಾತ್ಮಕ ತರಂಗಗಳನ್ನು ನಮ್ಮೊಳಗೇ ಸೃಷ್ಟಿಸುತ್ತದೆ ಆದರೆ ಅದರ ಅರಿವು ನಮಗಿರುವುದಿಲ್ಲ ಅಷ್ಟೆ.  ದೇಹಕ್ಕೆ ನಿದ್ದೆ ಹೇಗೋ ಹಾಗೆ ಮೌನ ನಮ್ಮ ಬುದ್ಧಿಗೆ ಎನ್ನಬಹುದೇನೋ.  ರಜನೀಶರು ಹೇಳುತ್ತಾರೆ ಈ ಮೌನದ ರಾಗ ಪ್ರತಿಯೊಬ್ಬರಲ್ಲೂ ದೈವದತ್ತವಾಗಿ ಇದ್ದೇ ಇರುತ್ತದೆ ಎಂದು.  ಅವರದೇ ಮಾತುಗಳಲ್ಲಿ  ಹೇಳುವುದಾದರೆ ನಮ್ಮ ಮಿಕ್ಕೆಲ್ಲಾ ಇಂದ್ರಿಯಗಳೂ ಹೊರಗಡೆಗೆ ತೆರೆದುಕೊಳ್ಳುತ್ತವೆ ಆದರೆ ಆರನೆಯ ಇಂದ್ರಿಯವೆಂಬ “ಸುಪ್ತ ಮನಸ್ಸು” ಒಳಗೇ ಇದೆ, ಒಳಗೇ ತೆರೆದುಕೊಳ್ಳುತ್ತದೆ.  ಒಂದು ಹೊಚ್ಚ ಹೊಸಾ ಪ್ರಪಂಚವನ್ನೇ ಅನಾವರಣಗೊಳಿಸುತ್ತದೆ.  ಆದರೆ ನಾವು ಅದನ್ನೆಂದೂ ಅರಿಯುವ ಪ್ರಯತ್ನವನ್ನೇ ಮಾಡುವುದಿಲ್ಲ.  “ಮೌನ”ವೆಂಬುದು ಈ ಸುಪ್ತವಾಗಿ ಮಲಗಿರುವ ಇಂದ್ರಿಯದ ಹೆಬ್ಬಾಗಿಲು.  

ಮೌನ ನಮ್ಮೆಲ್ಲಾ ಒತ್ತಡಗಳನ್ನೂ, ತೊಂದರೆಗಳನ್ನೂ, ಅರ್ಥವಾಗದ ಗೊಂದಲಗಳನ್ನೂ ಸರಿಪಡಿಸುತ್ತದೆನ್ನಬಹುದು.  ಅನೇಕ ಸಲ ಉತ್ತರ ಸಿಕ್ಕದ ಎಷ್ಟೋ ಪ್ರಶ್ನೆಗಳಿಗೂ, ಬಗೆಹರಿಯದ ಸಮಸ್ಯೆಗಳಿಗೂ ಮೌನದಲ್ಲಿ ಸರಿಪಡಿಸಿಕೊಳ್ಳುವ ಮಾರ್ಗ ಕಾಣಿಸುತ್ತದೆ.  ಮೌನ ನಮ್ಮನ್ನು ನಾವೇ ತಿಳಿದುಕೊಳ್ಳಲು, ಪರಿಶುದ್ಧಗೊಳಿಸಿಕೊಳ್ಳಲು ಸಹಾಯ ಮಾಡುತ್ತದೆ.  ಮೌನವು ವಿಷಯಾಸಕ್ತಿಗಳಿಂದ ಖಾಲಿಯಾದ ಜಾಗದಲ್ಲಿ ಪ್ರಕೃತಿಯಲ್ಲಿರುವ ಧನಾತ್ಮಕ ಕಿರಣಗಳು, ಚೈತನ್ಯದಾಯಕ ತರಂಗಗಳು, ವಿಶ್ವ ಚಿಕಿತ್ಸಕ ಶಕ್ತಿಯ ಧಾರೆಯು ನಮ್ಮೊಳಗೆ ಸೇರಲು  ಅನುವು ಮಾಡಿಕೊಡುತ್ತದೆ.  ತುಂಬಾ ಮುಖ್ಯವಾಗಿ ಮೌನ ನಮ್ಮನ್ನು ಭಗವಂತನೆಡೆಗೆ ತಿರುಗುವಂತೆ ಮಾಡುತ್ತದೆ.  ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗುವಂತೆ ಮಾಡುತ್ತದೆ.  ಭಗವಂತನ ಜೊತೆ ಮೌನದಲ್ಲಿ ಸಂಭಾಷಿಸುವಂತೆ ಪ್ರೇರೇಪಿಸುತ್ತದೆ ಮತ್ತು ಈ ಧನಾತ್ಮಕ ತರಂಗಗಳು ನಮ್ಮನ್ನು ಹೆಚ್ಚು ಬೆಳೆಯುವಂತೆ ಮಾಡುತ್ತವೆ.  ಜೊತೆಗೇ ಮೌನ ನಮ್ಮನ್ನು ನಾವೇ ನಿಜ ಅರ್ಥದಲ್ಲಿ ಅರಿತಿಕೊಳ್ಳಲು ಸಹಾಯ ಮಾಡುತ್ತದೆ.  ಏಕೆಂದರೆ ಮೌನವಾಗಿದ್ದಾಗಲೇ “ನಾನು ಯಾರು” ಎಂಬ ಪ್ರಶ್ನೆ ಹುಟ್ಟುವುದು ಮತ್ತು ನಾವು ಅದಕ್ಕೆ ಉತ್ತರ ಹುಡುಕುವುದು ಕೂಡ.  ಭಗವದ್ಗೀತೆಯಲ್ಲಿ ಕೂಡ “ನಿಜ ಅರ್ಥದಲ್ಲಿ ನಮ್ಮನ್ನು ನಾವು ಅರಿತುಕೊಳ್ಳಲಾಗುವುದು ಆತ್ಮ ಮೌನದಲ್ಲಿದ್ದಾಗ ಮಾತ್ರ ಸಾಧ್ಯ” ಎಂದಿದ್ದಾರೆ.  “ಮೌನ”ವೆಂದರೆ “ಮನನ” ಮತ್ತು ಮನನವೇ ಭಗವಂತನ ಚಿಂತನೆ.

ಬದುಕಿನಲ್ಲಿದ್ದೂ ಬದುಕುವುದೆಂದರೆ “ಮೌನ”ವೆಂಬ ಹೆಬ್ಬಾಗಿಲನ್ನು ತೆರೆಯುವ ಪ್ರಯತ್ನವಾದರೂ ಮಾಡುವುದು.  ಶಬ್ದಮಯ ಪ್ರಪಂಚದಲ್ಲಿದ್ದರೂ ನಮ್ಮೊಳಗಿನ ನಿಶ್ಯಬ್ದವನ್ನು  ಕಾಣುವುದು, ಆ ಸುಮಧುರ ಶಬ್ದರಹಿತ ಸಂಗೀತಕ್ಕೆ ಕಿವಿಯಾಗುವುದು, ರಮಣೀಯ ತೋಟದಲ್ಲಿ ವಿಹರಿಸುವುದು, ಕೊನೆಗೆ ಅಲೆ ಅಲೆಯಾಗಿ, ಬಳುಕುತ್ತಾ ಮೆಲ್ಲ ಮೆಲ್ಲಗೆ ನಮ್ಮೆಡೆಗೆ ತೇಲಿ ಬರುವ ಅಲೆಗಳೇ ನಾವಾಗಿಬಿಡುವುದು.  ಹೀಗೆ ನಮ್ಮ ಹೃದಯದಲ್ಲಿರುವ ಅರಳಲು ಕಾದಿರುವ ಜೀವ ಕುಸುಮವನ್ನು ವಿಕಸಿಸುವಂತೆ ಮಾಡಿದಾಗ ನಮಗೆ ಅರಿವಾಗುವುದೇ, ಸಿಗುವುದೇ  “ಪ್ರಾಂಜಲ ಸ್ನೇಹ, ಪವಿತ್ರ ಪ್ರೇಮ, ಅನೂಹ್ಯ ಅನುಭಾವ”.  ಇದು ದೈವೀಕವಾದದ್ದು.  ಸುಂದರವಾದ ಶುಭ್ರ ಮಲ್ಲಿಗೆಯ ತೋಟದಲ್ಲಿ ವಿಹರಿಸಿದಾಗ, ನಮಗೆ “ಕುಂದಾಭನಾದ ಶ್ರೀಹರಿ”ಯ ಇರುವಿಕೆಯ ವಿಶೇಷ ಅನುಭಾವವಾಗುವುದು.  ಮೌನ ಬಂಗಾರವಲ್ಲ ಅದಕ್ಕಿಂತಲೂ ಬೆಲೆಬಾಳುವ ವಜ್ರ, ವೈಢೂರ್ಯವೆನ್ನಬಹುದಲ್ಲವೇ...

ಚಿತ್ರಕೃಪೆ : ಅಂತರ್ಜಾಲ

Thursday, March 22, 2012

ಶ್ರೀ ರಾಮಚಂದ್ರ ...


ಶ್ರೀ ರಾಮಚಂದ್ರ ರಾಮಾಯಣದ ನಾಯಕನಾದರೂ, ಭಗವಂತನ ಅವತಾರವೇ ಆದರೂ ನಮ್ಮಂತಹ ಸಾಮಾನ್ಯರ ಮನಸ್ಸಿನಲ್ಲಿರಾಮನಾಗಿಯೇ ಉಳಿದಿದ್ದಾನೆ. ನಮ್ಮ ಹಿಂದೂ ಸಂಸ್ಕೃತಿಯಲ್ಲಿ ರಾಮಾವತಾರ ವಿಶಿಷ್ಟವಾದ ಪ್ರಾಮುಖ್ಯತೆ ಪಡೆದಿದ್ದರೂ, ಶ್ರೀರಾಮನನ್ನು ಪ್ರತಿಯೊಬ್ಬರೂ ತಮ್ಮದೇ ಆದ ಒಂದು ಆಯಾಮದಲ್ಲಿ, ತಮ್ಮದೇ ಆದ ಒಂದು ಅಭಿಪ್ರಾಯದಲ್ಲಿ, ತಮ್ಮದೇ ಆದ ಒಂದು ಭಾವದಲ್ಲಿ ಜೀವಂತ ಮೂರ್ತಿಯಾಗಿ ತಮ್ಮ ಮನದಂಗಳದಲ್ಲಿ ಪ್ರತಿಷ್ಠಾಪಿಸಿಕೊಂಡಿರುತ್ತಾರೆ. ಸುಖವಾಗಲಿ, ದು:ಖವಾಗಲಿ, ರಾಮನನ್ನು ಅತಿ ಸುಲಭವಾಗಿ ಕರೆದುಬಿಡುವ ನಮ್ಮ ಜೀವನದಲ್ಲಿ, ದೈನಂದಿನ ಬದುಕಿನಲ್ಲಿ ರಾಮ ಪ್ರತಿ ಕ್ಷಣವೂ, ಜ್ವಲಂತವಾಗಿ ಅತ್ಯಂತ ನಿಕಟವಾಗಿ ಹಾಸುಹೊಕ್ಕಾಗಿದ್ದಾನೆ. ಭಗವಂತನ ಅವತಾರವಾದರೂ ಕೂಡ ರಾಮನಮ್ಮ ರಾಮನೆಂಬ ಒಂದು ಸುಂದರ ಭಾವವಾಗಿ ನಮ್ಮೊಡನೆ ಸದಾ ನೆಲೆಸಿದ್ದಾನೆ.

ರಾಮ ಎಂಬ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲಿರಯ್ಯಾ.? ಎಂಬ ದಾಸರ ಪದ ರಾಮನನ್ನು ನಮಗೆ ಇನ್ನೂ ಹತ್ತಿರದವನಾಗಿ ಕಾಣಿಸುವಂತೆ ಮಾಡುತ್ತದೆ. ಎರಡೇ ಎರಡು ಅಕ್ಷರಗಳ ಉಚ್ಛಾರಣೆಯಿಂದಲೇ ನಮ್ಮ ದು:ಖತಪ್ತ ಮನಸ್ಸು ಹತೋಟಿಯಾಗಿ ಬಿಡುತ್ತದೆ, ಸುಖದ ಗಮವನ್ನು ನಾಸಿಕಕ್ಕೆ ತಂದು ಕೊಡುತ್ತದೆಂದರೆ ರಾಮ ಭಗವಂತನೆಂಬ ಭಕ್ತಿಗಿಂತ ಹೆಚ್ಚಾದ ಇನ್ನೇನೋ ಒಂದು ಶಕ್ತಿ, ಭಾವ ಇರಬೇಕೆಂದು ಮನಸ್ಸು ಹುಡುಕುವಂತೆ ಮಾಡುತ್ತದೆ. ರಾಮಾಯಣದಲ್ಲಿನ ಅಸಂಖ್ಯಾತ ಪಾತ್ರಧಾರಿಗಳಲ್ಲಿ, ತುಂಬಾ ಆಪ್ತವಾಗುವುದು ರಾಮನ ಪಾತ್ರ ಮಾತ್ರವೇ, ಕಥಾನಾಯಕನೆಂದಲ್ಲ, ಭಗವಂತನ ಅವತಾರವೆಂದೂ ಅಲ್ಲ... ಹಾಗಾದರೆ ಮತ್ತೇನು ಎಂದು ಹುಡುಕುವಾಗ ಬರೀ ಒಂದಲ್ಲಾ, ಅಸಂಖ್ಯಾತ ಭಾವಗಳ ಸಮ್ಮಿಲನರಾಮ”, ಪ್ರತೀ ವ್ಯಕ್ತಿಯೂ ತನ್ನ ಸುತ್ತಲೂ ಇರುವ ಎಲ್ಲಾ ಪಾತ್ರಗಳಲ್ಲೂ ಕಾಣ ಬಯಸುವ ಒಂದು ವಿಶೇಷಭಾವಎಂಬುದರ ಅರಿವು ನಮಗೆ ಆಗುತ್ತದೆ.

ಇದುವರೆಗೂ ರಾಮಾವತಾರದ ಮೇಲೆಯೂ, ರಾಮಾಯಣ ಕಾವ್ಯದ ಮೇಲೆಯೂ ಅನೇಕ ಗ್ರಂಥ, ಸಾಹಿತ್ಯ ರಚನೆಗಳಾಗಿವೆ. ಆದರೆ ಅದೆಲ್ಲಕ್ಕೂ ಮೀರಿದ ಒಂದು ವೈಯುಕ್ತಿಕ ಭಾವ, ಅವರವರದೇ ಆದ ಒಂದು ಅಂತರಂಗದ ಅನಿಸಿಕೆ, ಆತ್ಮದ ಜೊತೆಗಿನ ಸಂಬಂಧ ರಾಮನನ್ನು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆ ರೂಪದಲ್ಲಿ, ವಿಧದಲ್ಲಿ, ಅದೊಂದುತತ್ವಎಂಬಂತಹ ಅನುಭವವಾಗುವಂತೆ ಮಾಡುತ್ತದೆ.

ರಾಮನನ್ನು ನಾವು ಎಲ್ಲದರಲ್ಲೂ ಕಾಣಬಹುದು. ಕಣ್ಣು ಮುಚ್ಚಿರಾಮಜಪ ಆರಂಭಿಸಿದರೆ, ನಮ್ಮ ಕಣ್ಣೆದುರಿಗೆ ಒಂದು ಅತೀ ಸುಂದರವಾದ ರೂಪ ಸುಳಿಯುತ್ತದೆ. ಪ್ರಸನ್ನ ಮುಖಭಾವ ಶಾಂತತೆಯನ್ನು ಪ್ರಚೋದಿಸುವ ಆಹ್ಲಾದಕರ ಮುಖಮುದ್ರೆ. ನಮ್ಮ ವಿಚಲಿತವಾದ ಮನಸ್ಸಿನ ಎಲ್ಲಾ ಭಾವಗಳನ್ನೂ ಒಮ್ಮೆಲೇ ಶಾಂತಗೊಳಿಸಬಲ್ಲ ಮುದ್ರೆ. ಹೀಗೆ ಕಣ್ಣು ಮುಚ್ಚಿದ ಕೂಡಲೇ ನಮ್ಮ ಮುಂದೆ ಬಂದ ರೂಪ ನಮ್ಮ ಮನಸ್ಸಿಗೆ ಸಮಾಧಾನವನ್ನು ಕೊಡುತ್ತದೆ. ಹಾಗಾದರೆ ಇಲ್ಲಿ ನಾವು ಯಾವಾಗಲೂ ಅರಸುವಶಾಂತಿಯನ್ನು ರಾಮ ಎನ್ನಬಹುದಲ್ಲವೇ..? ಪ್ರಮಾಣಬದ್ಧ ಸುಂದರ ಮುಖ ನಮಗೆ ಅರಳಿದ ಕಮಲದಂತಿದೆ ಎನ್ನಿಸಿದಾಗ ನಮಗೆ ಸುಂದರ ಹೂವಿನ ಭಾವ ಜಾಗೃತಿಗೊಳಿಸಿದ್ದಕ್ಕಾಗಿ, ಸುಖವಾದ ಭಾವವನ್ನು ಅನುಭವಿಸುವಂತೆ ಮಾಡಿದ್ದಕ್ಕಾಗಿ ನಾವು ರಾಮನನ್ನುಸುಖಾಸ್ಪದ” – ನಿತ್ಯಸುಖದ ನೆಲೆಮನೆಯಾಗಿರುವವನು, ಆದ್ದರಿಂದ ರಾಮಸುಖವೆಂಬ ಒಂದು ಭಾವ ಎನ್ನಬಹುದೇ..? ರಾಮನ ಗುಣವಿಶೇಷಣಗಳನ್ನೂ, ಸೌಂದರ್ಯವನ್ನೂ ವರ್ಣಿಸುತ್ತಾ ಹೋದಂತೆ ರಾಮ ನಮಗೆ ಪ್ರತಿಯೊಂದರಲ್ಲೂ ಅಭಿವ್ಯಕ್ತವಾಗುತ್ತಾ ಹೋಗುತ್ತಾನೆ. ರಾಮನ ಅವತಾರ ಭೂಮಿಗೆ ಬಂದಾಗ, ದಿವ್ಯ ಬೆಳಕಿನ ಕಿರಣಗಳ ಸ್ಪರ್ಶದಿಂದ ಅನೇಕ ಜೀವ ಕೋಟಿಗಳಿಗೆ ಚೈತನ್ಯ ಬಂದಿತೆಂಬ ಮಾತು ನೆನಪಾದಾಗ, ನಾವು ರಾಮನನ್ನುಚೈತನ್ಯಎನ್ನಬಹುದೇ....? ರಾಮನ ನೆನಪೇ ನಮ್ಮಲ್ಲಿರುವ ಜಡತ್ವವನ್ನು ತೊಲಗಿಸಿ, ಚೈತನ್ಯದಾಯಕರನ್ನಾಗಿ ಮಾಡುತ್ತದಲ್ಲವೇ..? ಮಾನವರ ಭೌತಿಕ ದೇಹದಲ್ಲೇ ಇಷ್ಟು ಬದಲಾವಣೆ ಸಾಧ್ಯವಾಗುವುದಾದರೆ, ನಾವು ರಾಮನನ್ನು ನಮ್ಮದೇಆತ್ಮದಲ್ಲಿ ನೆಲೆಸಿರುವ ದಿವ್ಯ ಪ್ರಭೆಯೆಂಬ ಭಾವವನ್ನು ಬೆಳೆಸಿಕೊಂಡಾಗ ನಮಗೆ ರಾಮ ನಮ್ಮೆಲ್ಲಾ ಭಾವಗಳ ಒಡೆಯನಲ್ಲವೇ ಎನ್ನುವುದಕ್ಕಿಂತ ಅವನೇ ನಮ್ಮೆಲ್ಲಾ ಭಾವಗಳು ಎಂಬ ಆನಂದಾನುಭವ ಆಗುವುದಲ್ಲಾ, ಹಾಗಾದರೆ ನಾವು ರಾಮನನ್ನುಭಾವನೆಎನ್ನಬಹುದೇ..?

ಇನ್ನು ಶ್ರೀರಾಮನ ಆಗಮನದಿಂದ ಪ್ರಕೃತಿಯಲ್ಲಿನ ಬದಲಾವಣೆಗಳನ್ನು ಗಮನಿಸಿದರೆ, ವಸಂತ ಋತುವಿನ ಆಗಮನವೆನ್ನಬಹುದಾದರೆ ರಾಮಋತುಎಂದಾಯಿತು. ವಸಂತ ಋತುವೆಂದರೆ ಹೊಸ ಚಿಗುರು ಚಿಗುರುವುದೆಂಬರ್ಥ. ಹಾಗಾದರೆ ಇಲ್ಲಿಯೂ ರಾಮ ಹೊಸ ಚಿಗುರುಜೀವ ಸೃಷ್ಟಿಯಾದನೆಂದಾಯಿತು. ರಾಮನನ್ನುಚಿಗುರುಎನ್ನಬಹುದೇ...? ಪ್ರಖರ ಬೆಳಕು, ತಿಳಿ ತಿಳಿ ಮೋಡಗಳೂ, ದಟ್ಟ ಹಸಿರೂ ಸೇರಿ ವಸಂತ ಋತುವಾದರೆ, ರಾಮನನ್ನು ನಾವು ಬೆಳಕು, ತಿಳಿ ಮೋಡ, ಹಸಿರು ಎಂದೂ ಕೂಡ ತಿಳಿಯಬಹುದು.

ರಾಮಚಂದ್ರನ ವಿಶೇಷಣಗಳನ್ನು ಗಮನಿಸುತ್ತಾ ಹೋದರೆ, ಭಗವಂತನ ಅವತಾರವೆಂದು ಸ್ಪಷ್ಟವಾದರೂ ಕೂಡ, ನಮಗೆ ಭೌತಿಕವಾಗಿ ನಮ್ಮ ಇಂದ್ರಿಯಗಳು ಅನುಭವಿಸುವ ಭಾವಗಳೇ ಹೆಚ್ಚು ಅರ್ಥವಾಗುವುದರಿಂದ, ನಾವು ನಮ್ಮ ಸುತ್ತಲಿನ ಎಲ್ಲಾ ಜೀವನಿರ್ಜೀವ ವಸ್ತುಗಳಲ್ಲೂ ರಾಮನನ್ನು ಹುಡುಕುತ್ತಾ, ಎಲ್ಲದರಲ್ಲೂ ರಾಮನನ್ನೇ ಕಾಣುತ್ತಾ, “ರಾಮಎಂಬ ಎರಡೇ ಅಕ್ಷರದ ಅನುಭೂತಿ ಪಡೆಯುವ ಪ್ರಯತ್ನ ಮಾಡುತ್ತಾ ಸಾಗಿದಾಗ, ನಮಗೆ ರಾಮ ಎಷ್ಟು ಆತ್ಮೀಯ, ಆಳ, ವ್ಯಾಪ್ತಿ, ವಿಸ್ಮಯ ಎನ್ನುವುದು ಅಚ್ಚರಿ ಹುಟ್ಟಿಸುತ್ತದೆ. ನಮ್ಮ ನವರಸಗಳೆಲ್ಲವೂ ರಾಮನೇ.. ನಮ್ಮ ಅತಿ ಹತ್ತಿರದ ಬಂಧು, ನಮ್ಮ ಆತ್ಮೀಯ ಎನ್ನುವ ಭಾವ ದಟ್ಟವಾಗುತ್ತಾ ಹೋಗುತ್ತದೆ.

ರಾಮ "ನವರಸ"ಗಳು ಎಂಬುದನ್ನು ವಿಸ್ತರಿಸುತ್ತಾ ಹೋದಾಗ ಎಲ್ಲಕ್ಕಿಂತ ಮೊದಲು ನಾವುರಸವೆಂದರೇನೆಂಬ ಅರ್ಥ ವಿವರಣೆ ಕೊಡಬೇಕಾಗುತ್ತದೆ. ರಸವೆಂದರೆ ನಮ್ಮ ಮನಸ್ಸಿನ ಭಾವ, ಬುದ್ಧಿಯು ಗುರುತಿಸುವ ವಿವಿಧ ರೀತಿಯಲ್ಲಿ ಭಾವಗಳನ್ನು ತೋರ್ಪಡಿಸಿಕೊಳ್ಳುವ ಒಂದು ನವಿರಾದ ವಿಧಾನ. ಒಂದೊಂದು ರಸವೂ ಒಂದೊಂದು ಭಾವದೊಂದಿಗೆ ಬೆರೆತುಕೊಂಡಿದೆ. ಇವು ಒಂಬತ್ತು ಬಗೆಯಲ್ಲಿ ಪ್ರದರ್ಶಿತಗೊಳ್ಳುತ್ತವೆ. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಎಲ್ಲಕ್ಕಿಂತ ಅತಿ ಮುಖ್ಯವಾದದ್ದು ಶಾಂತ.

೧) ರಾಮ-ಸೀತೆಯರ ಒಲವು ಅನೇಕ ಶೃಂಗಾರ ಕಾವ್ಯಗಳಿಗೆ ಸ್ಫೂರ್ತಿಯಾಗಿದೆ. "ಸಂಯೋಗ" ಮತ್ತು "ವಿಯೋಗ" ಎರಡೂ ಸಂದರ್ಭಗಳಲ್ಲೂ ಅವರ ಆದರ್ಶ ಪ್ರೇಮ ವಿಶ್ವಕ್ಕೇ ಮಾದರಿಯಾಗಿದೆ.

೨) ಸುಂದರಕಾಯನಾದ ರಾಮ ಕರುಣಾಸಮುದ್ರನಂತಿದ್ದಾನೆ. ನಮ್ಮ ಅಂತರಂಗವನ್ನು ತೆರೆದು ರಾಮನ ಮುಂದೆ ಕುಳಿತಾಗ ಕರುಣೆಯ ಅಲೆಗಳಲ್ಲಿ ನಮ್ಮನ್ನು ತೇಲಿಸಿ, ಸಂತೈಸುತ್ತಾನೆ.

೩) ರಾಮ ಬಾಲಕನಿದ್ದಾಗಿನಿಂದಲೂ ರಾಮಾಯಣದ ಉದ್ದಕ್ಕೂ ಪ್ರದರ್ಶಿತವಾಗುವ ರಾಮನ ಧೈರ್ಯ, ವೀರತ್ವ ಎಲ್ಲರಿಗೂ, ಎಂದಿಗೂ ಆದರ್ಶಪ್ರಾಯವಾಗಿದೆ. ನಮ್ಮ ಬಾಳಿನ ಸಂಕಟಗಳನ್ನೆಲ್ಲಾ ಧೈರ್ಯವಾಗಿ ಮತ್ತು ವೀರರಾಗಿ ಎದುರಿಸುವ ಸ್ಥೈರ್ಯವನ್ನು ನಾವು ರಾಮನಿಂದ ಪಡೆಯುತ್ತೇವೆ. ನಾವೇ ರಾಮನಾಗಿ, ಎಂದಿಗೂ ಗುರಿ ತಪ್ಪದ "ರಾಮಬಾಣ"ಗಳನ್ನು ಬಿಟ್ಟು ಸಂಸಾರವೆಂಬ ಕದನದಲ್ಲಿ ಜಯಿಸುತ್ತೇವೆ.

೪) ರಾಮನನ್ನು ನವರಸಗಳಲ್ಲಿ ವಿವರಿಸಲು ಹೋದಾಗ ನನ್ನ ಅಭಿಪ್ರಾಯದಲ್ಲಿ "ರೌದ್ರ", "ಭಯಾನಕ" ಹಾಗೂ "ಭೀಭತ್ಸ"ವೆಂಬ ಭಾವಗಳಲ್ಲಿ, ದಾನವರನ್ನು ರೌದ್ರರೂಪನಾಗಿ ದಮನ ಮಾಡಿ ಯಜ್ಞಗಳನ್ನು ರಕ್ಷಿಸಿದನೆಂದೂ, ದರ್ಶನ ಮಾತ್ರದಿಂದಲೇ ಅಭಯ ಪ್ರಧಾನ ಮಾಡುವ ಮೂಲಕ ಭಯಾನಕ ರಸವನ್ನೇ ತೊಡೆದು ಬಿಡುವವನನೆಂದೂ, ನಾವು ರೌದ್ರತೆ (ಕೋಪ) ಬಿಡಬೇಕು, ಭಯವನ್ನು ಜಯಿಸಬೇಕು, ಯಾರನ್ನೂ ದ್ವೇಷಿಸಬಾರದು ಎಂಬ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ.

೫) "ಅದ್ಭುತ"ವಾದ ರಾಮನ ಕಥೆಗಳನ್ನು ಕೇಳುತ್ತಾ, ನಮ್ಮೊಳಗೇ ಎಲ್ಲಾ ಭಾವಗಳನ್ನೂ ಅನುಭೂತಿಸುತ್ತಾ, ರಾಮನೊಡನೆ ನಮ್ಮಂತರಂಗದ ಪ್ರತೀ ಭಾವಕ್ಕೂ, ಪ್ರತೀ ಕ್ಷಣವೂ ನಂಟುಬೆಳೆಸಿಕೊಳ್ಳುತ್ತಾ "ರಾಮ"ನೆಂಬ ಅದ್ಭುತ ತತ್ವವನ್ನು ಅರಿಯುವ ಪ್ರಯತ್ನವೇ ನಮ್ಮ ಬಾಳಿನ ಗುರಿಯಾಗಬೇಕು.

ಇವೆಲ್ಲಾ ಭಾವಗಳ ಜೊತೆಗೆ ರಾಮನ ಅತಿ ಮನೋಹರ ರೂಪ, ಧೃಡಕಾಯ ನಮಗೆ "ಧೃಡತೆ"ಯ ಭಾವವನ್ನು ಸೂಚಿಸುತ್ತದೆ. ಆಜಾನುಬಾಹು ರಾಮನ ಮುಂದೆ ನಾವು ತಲೆಬಾಗಿದಾಗ, ನಮ್ಮನ್ನು ಪೊರೆಯುವ, ರಕ್ಷಿಸುವ ದೇವ ಎಂಬ ಭಾವ ನೆಲೆಸುತ್ತದೆ. ರಾಮ "ನಂಬಿಕೆ" ಕೂಡ ಬಿಂಬಿಸುತ್ತಾನೆ. ಒಂದೇ ಒಂದು ಕ್ಷಣ ಶ್ರೀರಾಮ ಚಂದ್ರನ ಮೂರ್ತಿಯನ್ನು ನಮ್ಮ ಮನದಲ್ಲಿ ನೆನಪಿಸಿಕೊಂಡಾಗ ಬರುವ ಆ ಆತ್ಮನಂಬಿಕೆಯ ಭಾವ, ರಾಮ ನಮ್ಮದೇ ದೈವ, ನಂಬಿಕೆಯ ಸಾಕಾರಮೂರ್ತಿ ಎಂದುಕೊಂಡಾಗ ಜೀವ ಧನ್ಯವೆನಿಸುತ್ತದೆ ಮತ್ತು ಉತ್ಸಾಹದ ಚಿಲುಮೆಯಾಗುತ್ತದೆ. ಇದೆಲ್ಲಕ್ಕಿಂತಲೂ ಮಿಗಿಲಾದ ಮತ್ತು ಮುಖ್ಯವಾದ ಒಂದೇ ಒಂದು ಭಾವ ನನಗೆ ತುಂಬಾ ಆರ್ದ್ರತೆಯನ್ನು ಕೊಡುವುದು ರಾಮನನ್ನು ತಾಯಿಯೆಂಬ ಭಾವದಲ್ಲಿ ನೋಡಿದಾಗ. ಶ್ರೀರಾಮನ ಮೂರ್ತಿಯ ಮುಂದೆ ಮಂಡಿಯೂರಿ ಕುಳಿತಾಗ, ನನ್ನ ಮನಸ್ಸು "ಅಮ್ಮಾ..." ಎಂದು ಕರೆಯುತ್ತಾ ತಾಯಿಯೆಡೆಗೆ ನೋಡುವ ಮಗುವಾಗಿ ಬಿಡುತ್ತದೆ.

ಶ್ರೀರಾಮನೆಂದರೆ ಮರ್ಯಾದಾ ಪುರುಷೋತ್ತಮನೆಂದೂ, ಅತ್ಯಂತ ಸಂಭಾವಿತನೆಂದೂ ಆರಾಧಿಸುತ್ತೇವೆ. ಸಮಯ ಬಂದಾಗ ದುಷ್ಟ ಶಕ್ತಿಗಳ ನಿವಾರಣೆ ಮಾಡಿದ ಭಗವಂತನೆಂದು ಕೊಂಡಾಗ, ನಮಗೆ ರಾಮ ನಮ್ಮಲ್ಲಿರುವ ದುರ್ವ್ಯಸನಗಳನ್ನು ದಮನ ಮಾಡಲು, ನಮ್ಮ ಮನಸ್ಸನ್ನು ಭಗವಂತನ ಪಾದದಲ್ಲಿ ನೆಲೆಗೊಳಿಸಲು, ಗುರುವಾಗಿ ಹತ್ತಿರವಾಗುತ್ತಾನೆ. ಸಮಚಿತ್ತದಿಂದ ಬದುಕು ನಡೆಸಲು ಆದರ್ಶ ವ್ಯಕ್ತಿಯಾಗಿ ಕಾಣಿಸುತ್ತಾನೆ. ಅನುಕರಿಸಲೇ ಬೇಕಾದ ಸೌಮ್ಯ ಸ್ವಭಾವ, ಗಂಭೀರಾಕೃತಿ, ಇಂದ್ರಿಯಗಳ ನಿಗ್ರಹ ಶಕ್ತಿ, ರೂಪ ಲಾವಣ್ಯ.. ಎಲ್ಲವೂ ರಾಮನನ್ನು ನಮ್ಮ ಮನದಲ್ಲಿ ನೆಲೆಗೊಳಿಸಲು ಸುಲಭ ಸಾಧ್ಯವಾಗುವಂತೆ ಮಾಡಿದೆ. ಪತ್ನಿಯೆಡೆಗಿನ ಅನುಪಮ ಪ್ರೇಮ, ಸೋದರ ವಾತ್ಸಲ್ಯ.. ಹೀಗೆ ಪಟ್ಟಿ ಮಾಡುತ್ತಾ ಹೋದಾಗ ರಾಮ ಭಗವಂತ ಎನ್ನುವುದಕ್ಕಿಂತ ನಮ್ಮೆಲ್ಲೇ, ನಮ್ಮೊಳಗೇ ನೆಲೆಸಿರುವ ನಮ್ಮದೇ ಆತ್ಮಸಖ ಎನ್ನುವ ಅತಿ ನಿಕಟ ಸಂಬಂಧದ ಭಾವ ಬರುತ್ತದೆ.

"ರಾಮಾಯ ರಾಮಭದ್ರಾಯ | ರಾಮಚಂದ್ರಾಯ ವೇಧಸೇ |

ರಘುನಾಥಾಯ ನಾಥಾಯ | ಸೀತಾಯ ಪತಯೇ ನಮ: || ಎಂಬ ಎರಡು ಸಾಲಿನ ಶ್ಲೋಕದಲ್ಲಿ ರಾಮ ತನ್ನ ತಂದೆಗೆ ರಾಮನೂ, ವಾತ್ಸಲ್ಯಮಯಿ ತಾಯಿಗೆ ರಾಮಭದ್ರನೂ, ಕನ್ನಡಿಯಲ್ಲಿ ಚಂದ್ರನನ್ನು ತೋರಿಸಿದ ಕೈಕೇಯಿಗೆ ರಾಮಚಂದ್ರನೂ, ಪರತತ್ವವೆಂದು ತಿಳಿದ ವಸಿಷ್ಠರಿಗೆ ವೇಧಸೇ, ಅಯೋಧ್ಯೆಯ ಜನರಿಗೆ ರಘುನಾಥ ಮತ್ತು ಸೀತಮ್ಮನ ಪತಿ ಮತ್ತು ಸೀತೆಗೆ ನಾಥ. ಹೀಗೆ ರಾಮ ಎಲ್ಲರಿಗೂ ಅವರವರದೇ ಭಾವ, ಅವರವರದೇ ಭಕುತಿಯಾಗಿದ್ದಾನೆ.

ಶ್ರೀರಾಮಚಂದ್ರನನ್ನು ನಾವು ಬರೀ ಭಾವಗಳ ಜೊತೆಗೆ ಮಾತ್ರ ಹೊಂದಿಸುವುದಿಲ್ಲ. ಬದುಕಿನ ಪ್ರತೀ ಹಂತದಲ್ಲೂ, ನಮ್ಮ ಸುತ್ತಲಿರುವ ಪ್ರತೀ ವ್ಯಕ್ತಿಯ ಜೊತೆಗೂ ಹೋಲಿಸಿಕೊಳ್ಳುತ್ತೇವೆ. ರಾಮನ ಗುಣವಿಶೇಷತೆಗಳನ್ನು ನಮ್ಮ ಪರಿವಾರದ ವ್ಯಕ್ತಿಗಳಲ್ಲಿ ಹುಡುಕುತ್ತೇವೆ. ರಾಮನಂತಹ ಅಣ್ಣ, ರಾಮನಂತಹ ಪತಿ, ರಾಮನಂತಹ ಮಗ, ರಾಮನಂತಹ ಗೆಳೆಯ... ಹೀಗೆ ಪ್ರತೀ ಸಂಬಂಧದಲ್ಲೂ ರಾಮನನ್ನು ಕಾಣ ಬಯಸುತ್ತೇವೆಂದರೆ ರಾಮ ನಮ್ಮಲ್ಲಿ ಅದೆಷ್ಟು ಆಳವಾಗಿ ಯಾವ ಯಾವ ರೂಪದಲ್ಲಿ ನೆಲೆಸಿದ್ದಾನೆಂಬುದು ತಿಳಿಯುತ್ತದೆ.