Sunday, July 19, 2009

ಮನಸು

೬ನೇ ಸೆಪ್ಟೆಂಬರ್, ೨೦೦೮ ರಂದು, ಎಫ್ ಎಮ್ ರೈನ್ಬೋ ೧೦೨ ನ ’ಶ್ರೋತೃ ಬೃಂದಾವನ’ ಕಾರ್ಯಕ್ರಮದಲ್ಲಿ, ಪ್ರಸಾರವಾಗಿತ್ತು..........ನಮ್ಮ ಬುದ್ಧಿ ಈ ಮನಸು ಎಂಬ ಪದ ಯೋಚಿಸಿದ ತಕ್ಷಣವೇ ನಮ್ಮೊಳಗೆ ಒಂಥರಾ ಆರ್ದತೆ - ಒದ್ದೆಯಾದ ಅನುಭವ ಆಗತ್ತೆ. ಹಾಗಾದರೆ ಈ ಮನಸು ಅನ್ನುವುದಾದರೂ ಏನು ? ಅದು ಇರುವುದಾದರೂ ಎಲ್ಲಿ ? ಆಕಾರವೇ ಇಲ್ಲದ, ಯಾವ ಹಿಡಿತಕ್ಕೂ ಸಿಗದ, ತನ್ನಿಷ್ಟದಂತೆ ನಡೆಯುವ, ನಮ್ಮ ಇಡೀ ವ್ಯಕ್ತಿತ್ವವನ್ನೇ ನಿಯಂತ್ರಿಸುವ ಈ ಮನಸು ಎಂಬುದಕ್ಕೆ ನಿಶ್ಚಿತ ಆಕಾರ ಇದ್ದಿದ್ದರೆ, ಅದು ಹೇಗಿರಬಹುದಾಗಿತ್ತು?

ನಮ್ಮನ್ನು ಖುಷಿಯಾಗಿಡುವ, ದು:ಖಕ್ಕೆ ದೂಡುವ, ಕಾರಣವೇ ಇಲ್ಲದೆ ಸಂತೋಷ ಪಡಿಸುವ, ನಗಿಸುವ, ಅಳಿಸುವ ಮನಸು ಎಷ್ಟು ಪವರ್ ಫುಲ್ ಅಬ್ಬಾ......! ಸುಮ್ಮ ಸುಮ್ಮನೆ ಮುದಗೊಂಡು, ತಾನೂ ನಕ್ಕು, ನಾವೂ ನಗುವಂತೆ ಮಾಡುವ ಮನಸು....... ತನ್ನ ಭಾವನೆಗಳ ಈ ಪರಿಯ ಏರಿಳಿತಕ್ಕೆ ಮತ್ತು ಎಲ್ಲಾ ಹುಚ್ಚಾಟಗಳಿಗೆ ಕಾರಣ ಹೇಳತ್ತಾ ?

"ಮನಸೇ ನಗಲೇಕೆ ಹರುಷದಿ ನೀನು ಈ ದಿನ..... ನುಡಿ ಕಾರಣ... ನೀ ನುಡಿ ಕಾರಣ......."

ಮನಸುಗಳಲ್ಲಿ ಎಷ್ಟು ವಿಧಗಳಿರಬಹುದು? ಒಳ ಮನಸು, ಹೊರ ಮನಸು, ಎಳೆ ಮನಸು, ಹಸಿ ಮನಸು, ಬಿಸಿ ಮನಸು, ಹದಿ ಮನಸು........ ಈ ಎಲ್ಲಾ ಮನಸುಗಳಿಗೂ ಮಧ್ಯೆ ಸೌಹಾರ್ದತೆ ಇರಬಹುದಾ ? ಹೊರ ಮನಸು ಮಾಡುವ ಎಲ್ಲಾ ತರಹದ ಶೋಕಿಗಳನ್ನೂ ಒಳ ಮನಸು ಒಪ್ಪುತ್ತಾ ? ಒಂದೊಮ್ಮೆ ಒಳ ಮನಸು ಹೊರ ಮನಸಿನ ಡಂಬಾಚಾರವನ್ನು ಖಂಡಿಸಿದಾಗ / ನಿಯಂತ್ರಣದಲ್ಲಿರಿಸಿದಾಗ, ಹೊರ ಮನಸು ಮುದುಡುತ್ತಾ ?

ಮನಸು ಇನ್ನೊಂದು ಮನಸ್ಸಿನ ಸ್ನೇಹ ಬಯಸಿ, ತನಗೆ ಒಪ್ಪುವಂಥ, ಸ್ನೇಹಪೂರ್ಣ ಮನಸು ಸಿಕ್ಕಾಗ ಬಾಂಧವ್ಯ ಬೆಸೆದು ಬಿಡತ್ತೆ. ತನ್ನಿರವನ್ನೇ ಮರೆತು, ಅಲ್ಲಿಯೇ ನೆಲೆಸಿಯೂ ಬಿಡತ್ತೆ...

"ಮನಸೇ ಓ ಮನಸೇ.... ಎಂಥಾ ಮನಸೇ... ಮನಸೇ ಎಲೆ ಮನಸೇ.........."

ಎಳೆ ಮನಸು ಎಂದಾಗ ನನಗೆ ಮುಗ್ಧ ಮಗುವಿನ ನೆನಪಾಗತ್ತೆ. ಆ ಮಗುವಿನ ಎಳೆ ಮನಸು ತನ್ನ ತಾಯಿಯನ್ನು ಬಿಟ್ಟು ಬೇರೊಬ್ಬರನ್ನರಿಯದೆ, ತಾಯ ಮೊಗ ಕಂಡಾಗ ಬೀರುವ ಹೂ ನಗೆ.. ಆ ಎಳೆ ಮನಸಿನ ಆ ಕಿರು ನಗೆ........ ಸೃಷ್ಟಿಯ ಅತ್ಯದ್ಭುತವೇ ಸರಿ. ಆ ಹೂ ನಗೆಗೆ ಪ್ರತಿಯಾಗಿ ಅರಳುವ ತಾಯ ಮನಸು...... ಆಹಾ ಅದೆಂಥಾ ಸೊಗಸು....... ಅದು ಮಮತೆಯ ಮನಸು ಇರಬೇಕಲ್ವಾ?

"ಮಗುವೇ.... ನಿನ್ನ ಹೂ ನಗೆ....... ಒಡವೆ ನನ್ನ ಪಾಲಿಗೆ.... ತುಂಬು ಎನ್ನ ಜೋಳಿಗೆ........ಮಗುವೇ....."

ಸೃಷ್ಟಿಯ ಅದ್ಭುತ ಅಚ್ಚರಿಗಳನ್ನು ನೋಡಿದಾಗ ಅಂದರೆ... ಅರಳಿರುವ ಸುಂದರ ಹೂಗಳನ್ನು ನೋಡಿದಾಗ, ಪ್ರಕೃತಿ ಸೌಂದರ್ಯವನ್ನು ನೋಡಿದಾಗ ಈ ನಮ್ಮ ನಲಿಯುವ ಸುಂದರೆ, ತುಂಟ, ರಸಿಕ ಮನಸು........

"ಹೂವೂ ಚೆಲುವೆಲ್ಲಾ ನಂದೆಂದಿತು.... ಹೆಣ್ಣೂ ಹೂವ ಮುಡಿದೂ ಚೆಲುವೇ ತಾನೆಂದಿತು........"

ಎಂದು ಹಾಡುತ್ತಾ ಅರಳಿರುವ ಹೂಗಳ ಜೊತೆ ಸ್ಪರ್ಧೆಗೆ ಇಳಿಯಬಹುದಾ ? ಹದಿ ಹರೆಯದ ಈ ತುಂಬು ಮನಸು ಯಾವಾಗಲೂ ಹಾಡುತ್ತಾ ಕುಣಿಯುತ್ತಾ, ಕುಪ್ಪಳಿಸುತ್ತಾ ಇರತ್ತೆ. ತನ್ನ ಸುತ್ತು ಮುತ್ತಲ ಪ್ರಕೃತಿಯನ್ನು ಆಸ್ವಾದಿಸುತ್ತಾ, ಮೈ ಮರೆತು......

"ಚೆಲುವಿನಾ ಕಲೆ ಬಾಳಲೀಲೆ...... ಭಾವದ ಅಲೆ ಮೇಲೆ..... ಜೀವದ ಉಯ್ಯಾಲೆ...."

ಎಂದು ಹಾಡುತ್ತಾ ಭಾವ ಲಹರಿಯಲ್ಲಿ ತೇಲಬಹುದಲ್ವಾ ?

ತಾರುಣ್ಯದಿಂದ ಬೀಗುವ ಈ ತರುಣ ಮನಸು ಲಂಗು ಲಗಾಮಿಲ್ಲದ ಕುದುರೆಯಂತೆ, ಹುಚ್ಚು ಕನಸುಗಳನ್ನು ಕಾಣುತ್ತಾ ಕಣ್ಣೆದುರಿಗೆ ಇಲ್ಲದ, ಪ್ರಿಯತಮನ ಹಾಗೂ ಅವನ ಪ್ರೀತಿಗಾಗಿ ಹಂಬಲಿಸುತ್ತಾ ಇರತ್ತೆ. ತನ್ನ ಜೊತೆಗಾರ / ಪ್ರಿಯತಮನ ಮನಸಿನ ಜೊತೆ ಮಧುರ ಮೈತ್ರಿಯಾದಾಗ........ ಅವನ ಪ್ರೀತಿ ತನ್ನನ್ನೇ ಪೂರ್ತಿಯಾಗಿ ಆವರಿಸಿಕೊಂಡಾಗ, ಎಲ್ಲೆಲ್ಲೂ ಅವನೇ ಕಾಣಿಸಿದಾಗ.........

"ಬಾನಲ್ಲು ನೀನೇ......... ಭುವಿಯಲ್ಲು ನೀನೇ........ಎಲ್ಲೆಲ್ಲು ನೀನೇ........ ನನ್ನಲ್ಲು ನೀನೇ........."

ಪ್ರೀತಿಯಲ್ಲಿ ಮುಳುಗಿದ ಈ ತುಂಟ ಹರೆಯದ ಮನಸ್ಸು, ಪ್ರಿಯತಮನೊಂದಿಗೆ ಸಮಾಗಮಿಸಿದಾಗ, ತನ್ನನ್ನೇ ಪೂರ್ಣ ಅರ್ಪಿಸಿಕೊಂಡಾಗ, ಮನಸು ತನ್ನನ್ನು ಧನ್ಯನಾಗಿಸಿಕೊಂಡಾಗ, ಈ ಮನಸಿನ ಬಾಳು ಶೃತಿ ಮೀಟಿದ, ತಾಳ ಪಕ್ವದ ಸಂಗೀತವಾದಾಗ.......

"ರಾಗ ನಿನ್ನದೂ..... ಭಾವ ನನ್ನದೂ......."

ಹೀಗೇ ಮನಸು ಮನಸುಗಳ ಪಿಸುಮಾತು / ಕಥೆ ಸಾಗುತ್ತಲೇ ಇರುವಾಗ.......

"ಮನಸುಗಳ ಮಮತೆಯಲಿ.................................................ಈ ಜೀವನ........."

No comments:

Post a Comment