ಈ ದಿನ ಸಂಬಂಧಗಳಲ್ಲೇ ಅತ್ಯಂತ ಮಧುರವಾದ, ನವಿರಾದ, ಪವಿತ್ರವಾದ, ಜೀವಜಲವಾದ, ಸ್ನೇಹದ ಬಗ್ಗೆ ಬರೆಯುತ್ತಿದ್ದೇನೆ. ಸ್ನೇಹ ಸಿಹಿಗಾಳಿ, ಸುಗಂಧವಿದ್ದಂತೆ... ಪಸರಿಸಿದೆಡೆಯೆಲ್ಲಾ ಘಮ ಘಮ.... ಎಲ್ಲರ ಮನಸ್ಸನ್ನೂ ಸ್ನೇಹದ ಸಿಂಚನದಿಂದ ತಂಪೆರೆಯುತ್ತದೆ. ಉದ್ರಿಕ್ತ ವಾತಾವರಣವನ್ನು ತಂಪಾಗಿಸುತ್ತದೆ..... ನೆಮ್ಮದಿ ಕೊಡುತ್ತದೆ. ..... ಸಂತಸ ತರುತ್ತದೆ.....
ಸ್ನೇಹಿತರ ಜೊತೆಗಿನ ಸಂಬಂಧಗಳು ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರಬಲ್ಲದು. ಚಿಕ್ಕ ಚಿಕ್ಕ ಮಕ್ಕಳಿರುವಾಗಿನಿಂದಲೇ ನಮ್ಮದೇ ವಯಸ್ಸಿನ ಪುಟಾಣಿಗಳೊಡನೆ ನಮ್ಮ ಸ್ನೇಹದ ಪ್ರಪಂಚ ಸೃಷ್ಟಿಯಾಗಿಬಿಟ್ಟಿರುತ್ತದೆ. ನಮ್ಮ ನೆರೆ-ಹೊರೆಯಲ್ಲಿರುವ ಚಿಕ್ಕ-ದೊಡ್ಡ ಮಕ್ಕಳೆಲ್ಲರೂ ವಯಸ್ಸಿನ ಅಂತರವಿಲ್ಲದೇ ಸ್ನೇಹಿತರಾಗಿ ಬಿಟ್ಟಿರುತ್ತಾರೆ. ಆದರೆ ಈ ಸ್ನೇಹ ಲೋಕದಲ್ಲಿ ಒಳಬರುವ ಹಾಗೂ ಹೊರಹೋಗುವ ಸ್ನೇಹಿತರ ಲೆಕ್ಕವಿಡುವುದು ಸ್ವಲ್ಪ ಕಷ್ಟದ ಕೆಲಸವಾಗಿ ಬಿಟ್ಟಿರುತ್ತದೆ. ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲ್ಲಿ ಪಯಣಿಸುತ್ತಾ..... ಪ್ರೀತಿಯೆಂಬ ದೇವರಿರುವ ಗುಡಿಯನ್ನು ಸೇರುವುದನ್ನೇ ಬಾಳಿನ ಗುರಿಯಾಗಿಸಿಕೊಂಡಾಗಲೇ ನಮ್ಮ ಜೀವನದ ಪ್ರತಿಯೊಂದು ಕ್ಷಣವೂ ಅತ್ಯಂತ ಆಪ್ತವಾಗಿ... ಅಕ್ಕರೆಯಿಂದ ಕೂಡಿದ ಬದುಕಾಗಿ ಮಾರ್ಪಾಡುಗುವುದು....
ಎಷ್ಟೋ ಸಲ ನಮ್ಮ ಬಾಲ್ಯ ಸ್ನೇಹಿತರು ನಮಗೆ ಸ್ಕೂಲು, ಕಾಲೇಜುವರೆಗೂ ಜೊತೆಯಲ್ಲೇ ಇರುವ ಅದೃಷ್ಟ ಕೂಡ ಇರುತ್ತದೆ. ಮುಂದೆ ಓದು ಮುಗಿಸಿ, ಕೆಲಸ ಮಾಡುವಾಗ ಕೂಡ ಈ ಸಂಬಂಧ ಮುಂದುವರೆಯುತ್ತಲೇ ಇರುತ್ತದೆ. ಈ ಸ್ನೇಹ ಸಂಬಂಧ ಮಾತ್ರ ಅತ್ಯಂತ ಸುಖಕರವಾದದ್ದು. ಇಲ್ಲಿ ಲಿಂಗ ಭೇದವಿಲ್ಲದ, ನಿರ್ಮಲವಾದ, ನಿಷ್ಕಲ್ಮಶವಾದ ಸ್ವಚ್ಛ ಪ್ರೀತಿ, ಅದಮ್ಯ ವಿಶ್ವಾಸ, ನಂಬಿಕೆಗೆ ಮಾತ್ರ ಪ್ರಾಧಾನ್ಯತೆ ಇರುತ್ತದೆ.
ಸ್ನೇಹ ನಮಗೆ ಜೀವನದ ಎಲ್ಲಾ ಮಜಲುಗಳಲ್ಲೂ, ಎಲ್ಲಾ ವಯೋಗುಣದಲ್ಲೂ ಅತ್ಯಂತ ಅವಶ್ಯಕವಾದದ್ದು. ನಮ್ಮನ್ನು ಅರಿತು, ಅರ್ಥ ಮಾಡಿಕೊಂಡು, ನಮ್ಮ ತಪ್ಪನ್ನು ತೋರಿಸಿ, ನಾವು ದು:ಖಿಗಳಾಗಿದ್ದಾಗ ನಮ್ಮನ್ನು ಸಮಾಧಾನಿಸಿ, ನಾವು ಸೋತಾಗ ನಮ್ಮನ್ನು ಹುರಿದುಂಬಿಸಿ, ನಾವು ಎಡವಿದಾಗ, ಕೈ ಹಿಡಿದು ದಾರಿ ತೋರಿಸಿ, ಆತ್ಮ ವಿಶ್ವಾಸ ಹೆಚ್ಚಿಸಿ, ಸಕಾರಾತ್ಮಕ ಚಿಂತನೆಯಲ್ಲಿ ನಮ್ಮನ್ನು ಯಾವಾಗಲೂ ಹಿಡಿದಿಡುವ, ವ್ಯಕ್ತಿಯೇ ಸ್ನೇಹಿತ ಅಥವಾ ಸ್ನೇಹಿತೆ. ಇಲ್ಲಿ ನಮಗೆ "ಸ್ನೇಹ ಅತಿ ಮಧುರ.. ಸ್ನೇಹ ಅದು ಅಮರ... ಸ್ನೇಹವೇ ಗುಡಿಯು... ಪ್ರೀತಿಯೇ ದೇವರು.... ಎಂಬ ಕವಿತೆಯ ನೆನಪಾಗದೇ ಇರದು. ಸ್ನೇಹವೆಂಬ ಗುಡಿಯಲ್ಲಿ ಪ್ರೀತಿಯೆಂಬ ದೇವರನ್ನಿಟ್ಟು ಪೂಜೆ ಮಾಡಿದಲ್ಲಿ, ಜೀವನ ಅತ್ಯಂತ ಸುಖಕರ... ನಾವೆಲ್ಲರೂ ಈ ಪವಿತ್ರ ಗುಡಿಗಳನ್ನು ಕಟ್ಟುತ್ತಲೇ ಇದ್ದಾಗ ಮಾತ್ರವೇ ಸ್ನೇಹವೆಂಬ ಗುಡಿಯಲ್ಲಿ ಪ್ರೀತಿಯೆಂಬ ದೇವರ ಪೂಜೆ, ಶಾಶ್ವತವಾಗಿ ಅತ್ಯಂತ ವೈಭವಯುತವಾಗಿ ನಡೆಯುತ್ತಲೇ ಇರುತ್ತದೆ.
ಸ್ನೇಹ ಎನ್ನುವ ಪವಿತ್ರ ಬಂಧ ಕಾಲ, ದೇಶ, ಜಾತಿ, ಮತ, ಧರ್ಮ, ಲಿಂಗ ಎಲ್ಲವನ್ನೂ ಮೀರಿದ್ದು ಮತ್ತು ಈ ಬಂಧ - ಸಂಬಂಧ ಗಟ್ಟಿಯಾಗಿ ಉಳಿಯುವುದು, ಎರಡು ಹೃದಯಗಳು ಪ್ರತಿಫಲಾಪೇಕ್ಷೆಯಿಲ್ಲದೆ, ಪ್ರೀತಿ, ನಂಬಿಕೆ, ವಿಶ್ವಾಸ ವ್ಯಕ್ತಪಡಿಸಿದಾಗ ಮಾತ್ರ. ಸ್ನೇಹ ಎನ್ನುವ ಭಾವನೆಯೊಂದು ಇಲ್ಲದಿದ್ದಿದ್ದರೆ, ಈ ಸಂಬಂಧ ಎನ್ನುವ ಪದ ಬರೀ ಒಡಹುಟ್ಟಿದವರ ಅಥವಾ ರಕ್ತ ಸಂಬಂಧಿಗಳಿಗೆ ಮಾತ್ರ ಸೀಮಿತವಾಗಿ ಬಿಡುತ್ತಿತ್ತು. ಸ್ನೇಹ ಹೊಸ ಹೊಸ ಸಂಬಂಧಗಳನ್ನು ಬೆಳೆಸುವ, ಮನಸ್ಸುಗಳನ್ನು ಬೆಸೆಯುವ ಮತ್ತು ಬೆಸೆದ ಮನಸ್ಸುಗಳ ವಿಚಾರ ವಿನಿಮಯ, ಪರಸ್ಪರ ಗೌರವ ಉಳಿಸುವ ಸೇತುವೆ. ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲೂ ಸ್ನೇಹದ ಭಾವ ಏರ್ಪಟ್ಟಾಗ ಮಾತ್ರವೇ ನಮ್ಮ ಜೀವನ ನೆಮ್ಮದಿ, ತೃಪ್ತಿ, ಸಂತೋಷ ಕಾಣಬಹುದು.
ಒಳ್ಳೆಯದೇ ಆಗಲಿ, ಕೆಟ್ಟದ್ದೇ ಆಗಲಿ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು, ನಮ್ಮನ್ನು ನಾವಿರುವಂತೇ ಒಪ್ಪಿಕೊಳ್ಳಲು ನಮಗೆ ಸ್ನೇಹಿತರ ಅವಶ್ಯಕತೆ ನಮ್ಮ ಬದುಕಿನುದ್ದಕ್ಕೂ ಇದೆ. ನಾನು ಕಾಲೇಜಿನಲ್ಲಿ ಓದುವಾಗ ನನಗೊಬ್ಬಳು ಸ್ನೇಹಿತೆಯಿದ್ದಳು. ಇಬ್ಬರ ಐಚ್ಛಿಕ ವಿಷಯಗಳು ಬೇರೆಯಾಗಿದ್ದರೂ.. ಸಂಗೀತ ನಮ್ಮನ್ನು ಬೆಸೆದಿತ್ತು. ಇಬ್ಬರೂ ಒಟ್ಟಿಗೇ, ಕಲಿಯುತ್ತಿದ್ದೆವು. ಆದರೆ ಆಮೇಲೆ ಇಬ್ಬರಿಗೂ ಮದುವೆಗಳಾಗಿ ಬೇರೆ ಯಾಗಿ, ಅವಳು ಗೋವಾ ಮತ್ತು ನಾನು ಕೊಲ್ಕತ್ತಾ ಸೇರಿದ್ದೆವು. ೨೫ ವರ್ಷಗಳ ನಂತರ, ಈಗ ಕಳಚಿಕೊಂಡಿದ್ದ ಕೊಂಡಿ ಮತ್ತೆ ಬೆಸೆದುಕೊಂಡಿದೆ. ನನಗಾಗಿ ಮಿಡಿಯುವ ಒಂದು ಸಹೃದಯವಿದೆಯೆಂಬ ನೆಮ್ಮದಿ ನನಗೂ... ಅವಳ ಅಂತರಂಗದ ಖುಷಿ ಹಾಗೂ ವ್ಯಥೆಗಳನ್ನು ಕೇಳಲು ನಾನಿದ್ದೇನೆಂಬ ತೃಪ್ತಿ ಅವಳಿಗೂ.... ನಾವಿಬ್ಬರೂ ದಿನದಿನವೂ ಮಾತಾಡದಿದ್ದರೂ, ನಮಗೆ ಬೇಕಾದಾಗ ಒಬ್ಬರಿಗೊಬ್ಬರು ಇದ್ದೇವೆಂಬ ಭಾವವೇ ಮುದಕೊಡುತ್ತದೆ. ಇಷ್ಟು ವರ್ಷಗಳ ನಂತರ, ಆ ಹಳೆಯ ದಿನಗಳ ನೆನಪುಗಳನ್ನು ಮೆಲುಕು ಹಾಕುವುದು ನಮ್ಮಿಬ್ಬರಿಗೂ ಅತ್ಯಂತ ಪ್ರಿಯವಾದ ಕೆಲಸ........ ಮನಸ್ಸು ಕುಗ್ಗಿದಾಗೊಮ್ಮೆ ದೂರವಾಣಿಯಲ್ಲಿ ಕೆಲವು ಮಾತುಗಳನ್ನು ಹಂಚಿಕೊಂಡಾಗ, ಮನಸ್ಸು ನಿರಾಳ. ಇದು ನನ್ನ ಅತ್ಯಂತ ಹಳೆಯ ಹಾಗೂ ಅತ್ಮೀಯ ಸ್ನೇಹ... ಹೀಗೇ ಇನ್ನೊಂದಿಬ್ಬರು ಹಳೆಯ ಗೆಳೆಯ / ಗೆಳತಿಯರಿದ್ದಾರೆ.. ಅವರೂ ಒಮ್ಮೊಮ್ಮೆ ಕರೆ ಮಾಡುವುದುಂಟು, ಆದರೆ ಇಷ್ಟು ಆಪ್ತತೆ ಯಾರಲ್ಲಿಯೂ ಮತ್ತೆ ಬೆಳೆಯಲಿಲ್ಲ.... ಆದರೂ ಶಾಲಾ / ಕಾಲೇಜುಗಳ ಸ್ನೇಹಿತರು ಕರೆ ಮಾಡಿ ಮಾತಾಡಿದಾಗ ಆಗುವ ರೋಮಾಂಚನವೇ ಒಂದು ವಿಶೇಷ ರೀತಿಯದ್ದು..... ಕೊಲ್ಕತ್ತಾದಲ್ಲಿ ಕಛೇರಿಯ ಸ್ನೇಹಿತೆಯರು... ಇಬ್ಬರು ಈಗಲೂ ಖರ್ಚು ಮಾಡಿಕೊಂಡು, ನನಗಾಗಿ ಸಮಯ ಮೀಸಲಿಟ್ಟು ಕರೆ ಮಾಡಿ ಮಾತನಾಡಿದಾಗ, ಮನಸ್ಸೆಲ್ಲಾ ಒದ್ದೆ ಒದ್ದೆ... ಈ ಸ್ನೇಹ ಎನ್ನುವ ಒಂದು ಪುಟ್ಟ ಅನುಭೂತಿ, ಹೇಗೆ ನಮ್ಮ ಇಡೀ ವ್ಯಕ್ತಿತ್ವನ್ನೇ ಹಿಡಿದು ಕರಗಿಸಿಬಿಡುತ್ತದೆ ಅಲ್ವಾ?.....
ಸ್ನೇಹ ಅತ್ಯಂತ ಪುರಾತನ ಅಸ್ಥಿತ್ವದ್ದು... ಪುರಾಣಗಳಲ್ಲೂ, ಭಾಗವತದಲ್ಲೂ, ಮಹಾಭಾರತದಲ್ಲೂ ಕೂಡ ನಿಕಟ ಹಾಗೂ ಗಾಢ ಸ್ನೇಹದ ಉದಾಹರಣೆಗಳಿವೆ..... ಶ್ರೀ ಕೃಷ್ಣ - ಸುಧಾಮರ ಸ್ನೇಹ ಹಾಗೂ ಕರ್ಣ - ದುರ್ಯೋಧನರ ಸ್ನೇಹ ಯಾವಾಗಲೂ ಹಿಂದೂ, ಇಂದೂ ಮತ್ತೂ ಮುಂದೂ ಗಟ್ಟಿಯಾಗಿ ಉಳಿಯುವಂತಹುದು..... ಸ್ನೇಹ ಬೆಳೆಯಲು ಕಾರಣವೇನೂ ಬೇಕಾಗಿಲ್ಲ. ನಾವು ಆ ವ್ಯಕ್ತಿಯನ್ನು ಪೂರ್ಣವಾಗಿ ಇಷ್ಟಪಟ್ಟೇ ಸ್ನೇಹ ಬೆಳೆಸಬೇಕೆಂದೇನೂ ಇಲ್ಲ... ಕೆಲವೊಮ್ಮೆ ಕೆಲವು ಅಪರೂಪದ ಅಭ್ಯಾಸಗಳೂ, ಗುಣಗಳೂ ಕೂಡ, ನಮ್ಮ ಸ್ವಭಾವಕ್ಕೆ ಹೊಂದಿಕೆಯಾಗದಂಥಹ ವ್ಯಕ್ತಿಗೂ ಸ್ನೇಹ ಹಸ್ತ ಚಾಚುವಂತೆ ಮಾಡುತ್ತದೆ. ವಿಲಕ್ಷಣ ಪರಿಸ್ಥಿತಿಯಲ್ಲಿ, ಅಕಸ್ಮಾತ್ತಾಗಿ ಕೂಡ ಸ್ನೇಹದ ಹೂವು ಅರಳುತ್ತದೆ.... ಆದರೆ ನಾವಾಗೇ ಇಚ್ಛೆಪಟ್ಟು ಮಾಡಿಕೊಳ್ಳುವ ಸ್ನೇಹದ ಕೊಂಡಿ ಮಾತ್ರ ಭದ್ರವಾಗಿ ಬೆಸೆದಿರುತ್ತದೆ... ಏಕೆಂದರೆ ಅಲ್ಲಿ ನಾವು ನಮ್ಮ ಸ್ನೇಹದಿಂದ ಏನೂ ನಿರೀಕ್ಷಣೆ ಇಟ್ಟುಕೊಂಡಿರುವುದಿಲ್ಲ... ಅದು ಬರಿಯ ಭಾವನಾತ್ಮಕವಾದ, ಮುದಕೊಡುವ ಸ್ನೇಹವಾಗಿರುತ್ತದೆ...
ಇದೇ ೭ನೇ ತಾರಿಖಿನ ವಿಜಯ ಕರ್ನಾಟಕದ ’ಸೂರ್ಯ ಶಿಕಾರಿ’ ಅಂಕಣದಲ್ಲಿ ಶ್ರೀ ರವಿ ಬೆಳಗೆರೆಯವರು... ನಮ್ಮ ಗೆಳೆಯರು ನಮ್ಮ ಬದುಕನ್ನು ರೂಪಿಸುತ್ತಾರೆ, ಅಭ್ಯಾಸಗಳನ್ನು ರೂಢಿಸುತ್ತಾರೆ, ಚಟಗಳನ್ನು ಕಲಿಸುತ್ತಾರೆ, ಚಿಂತನೆಯನ್ನೂ ಕಟ್ಟಿಕೊಡುತ್ತಾರೆ... ಎಂದಿದ್ದಾರೆ. ಎಷ್ಟು ಸತ್ಯವಾದ ಮಾತುಗಳು. ಒಳ್ಳೆಯ ಸ್ನೇಹಿತರು ನಮಗೇ ಅರಿವಿಲ್ಲದಂತೆ ನಮ್ಮಲ್ಲಿರುವ ದೋಷಗಳನ್ನು ಸರಿಪಡಿಸಿರುತ್ತಾರೆ..... ಅತ್ಯಂತ ಆಪ್ತ ಸಲಹೆಗಳನ್ನು ಕೊಟ್ಟಿರುತ್ತಾರೆ.... ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು, ನಾವೇ ಆಗಿರುವಂತೆ ಸ್ವೀಕರಿಸಿ, ವರ್ಷಾನುಗಟ್ಟಲೆ ಸಹಿಸಿಕೊಂಡಿರುತ್ತಾರೆ.......
ಹಿಂದೆಲ್ಲಾ ನಮಗೆ ಹೊಸ ಹೊಸ ಸ್ನೇಹಿತರನ್ನು ಹುಡುಕುವುದೇ ಒಂದು ರೋಮಾಂಚನದ ಅನುಭವವಾಗಿತ್ತು. ಈಗಲೂ ಇದೆ ಆದರೆ ಹುಡುಕಾಟದ ಮಾಧ್ಯಮಗಳು ಮಾತ್ರ ಅನೇಕ ಹಾಗೂ ಸರಳ ಮತ್ತು ಸುಲಭದವಾಗಿವೆ. ಅಂತರ್ಜಾಲದಲ್ಲಿ ನಮ್ಮ ಕಳೆದುಹೋದ ಶಿಶುವಿಹಾರದ ಸ್ನೇಹಿತರನ್ನೂ ಹುಡುಕಬಹುದು... :-) ಹಾಗೇ ಹೊಸ ಹೊಸ ಸ್ನೇಹಿತರ ಸಂಬಂಧಗಳನ್ನು ಬೆಸೆಯುವುದನ್ನೂ ಮಾಡಬಹುದು. ಅಂತರ್ಜಾಲದಂತಹ ವಿಸ್ಮಯ ಲೋಕದಲ್ಲಿ ಎಲ್ಲವೂ ಒಳ್ಳೆಯದೇ ಇದೆಯೆಂದೋ, ಎಲ್ಲರೂ ಒಳ್ಳೆಯವರೇ ಇದ್ದಾರೆಂದೋ ಹೇಳಲು ಬಾರದು. ಇಲ್ಲೂ ಇದ್ದಾರೆ ಕೀಳು ಅಭಿರುಚಿಯ ವ್ಯಕ್ತಿಗಳು... ಆದರೆ ಇಲ್ಲಿ ನಾನು ನನ್ನ ಸ್ವಂತ ಅಭಿಪ್ರಾಯ ಹಾಗೂ ಅನುಭವಕ್ಕೆ ಮಾತ್ರ ಕಟ್ಟುಪಾಡು ಮಾಡಿಕೊಂಡಿರುವುದರಿಂದ.... ನನ್ನ ಅನುಭವ ಇದುವರೆಗೂ ಸನ್ಮಾನಯುತವಾಗೇ ಇದೆ. ನನ್ನ ಅಂತರ್ಜಾಲದ ಹಿರಿಯ, ಕಿರಿಯ ಮಿತ್ರರೆಲ್ಲರೂ ಸಹೃದಯವಂತರೂ, ಒಳ್ಳೆಯ ಸಂಸ್ಕಾರವಂತರೂ, ಸಜ್ಜನರೂ ಆಗಿದ್ದಾರೆ.... ಸ್ನೇಹ ಬೆಳೆಸುವಾಗ ಹಿಂಜರಿಕೆಯಿಂದಲೇ ಆರಂಭವಾಗಿದ್ದರೂ ಕೂಡ.. ಈಗ ನಾ ಅವರನ್ನು ಅರಿವ ಪ್ರಯತ್ನದ ಮೂಲಕ, ಅವರು ನನಗೆ ಆಪ್ತ ಮಿತ್ರರುಗಳಾಗಿದ್ದಾರೆ... ನನ್ನ ಸುಖ - ದು:ಖವನ್ನು ಹಂಚಿಕೊಳ್ಳುವ , ನನಗೆ ಮಾರ್ಗದರ್ಶನ ನೀಡುವ, ನನ್ನಣ್ಣ ನನಗಿದ್ದಾರೆ..... (ಅವರೂ ನಾನೂ ಒಂದೇ ಕಾಲೇಜ್ ನಲ್ಲಿ ಓದಿದ್ದರೂ ಕೂಡ.. ಅತ್ಯಾಶ್ಚರ್ಯಕರ ರೀತಿಯಲ್ಲಿ ನಾವು ಅಂತರ್ಜಾಲದ ಮುಖಾಂತರ ಒಬ್ಬರಿಗೊಬ್ಬರು ಪರಿಚಿತರಾದೆವು) .... ಇದಲ್ಲವೇ ಜೀವನ...!!! ನಾನು ಬೇಸರ ಪಟ್ಟಾಗ, ಖೇದ ಗೊಂಡಾಗ, ದು:ಖ ಪಟ್ಟಾಗ, ನನ್ನ ನೋವು ಮರೆಸಲು ಪ್ರಯತ್ನಿಸುವ, ಮನ ಅರಳಿಸುವ ಅತ್ಯಂತ ಆತ್ಮೀಯ ತಮ್ಮನಿದ್ದಾರೆ... ಏನೂ ಬರೆಯಲು ತೋಚದೇ ಹತಾಷೆಗೊಂಡಾಗ, ಒಳ್ಳೆಯ ’ನುಡಿಮುತ್ತು’ಗಳನ್ನೂ, ಉತ್ಕಟ ಸಹೋದರಿ ಪ್ರೀತಿಯ ಮೆರೆಸುವ ಕವನವನ್ನೂ ಮಿಂಚಂಚೆ ಮೂಲಕ ಕಳುಹಿಸಿ, ನನ್ನನ್ನು ಬರೆಯುವಂತೆ ಪ್ರೋತ್ಸಾಹಿಸುವ, ನನ್ನ ಆಪ್ತ ಸಹೋದರ - ಸ್ನೇಹಿತ ಇದ್ದಾರೆ.... ತಮ್ಮ, ತಂಗಿಯರೇ ಇಲ್ಲದ ನನಗೆ ನಿಜವಾದ ಪುಟ್ಟ ತಮ್ಮನ ಅಕ್ಕರೆ, ಆಸೆ ತೋರಿಸಿ, ಆಗಾಗ ಕಾಲೆಳೆದು, ಹಾಸ್ಯ ಮಾಡಿ ನಗಿಸುವ, ಮೊಂಡು ವಾದ ಹೂಡುವ, ಹುಡುಗಾಟದ, ತರ್ಲೇ ತಮ್ಮನೂ ಇದ್ದಾನೆ.... ಈ ಎಲ್ಲಾ ಸ್ನೇಹ ತಂತುಗಳೂ ನನಗೆ ಈ ಅಂತರ್ಜಾಲವೆಂಬ ಮಾಯಾಲೋಕದಿಂದಲೇ ದೊರಕಿದ್ದು.... ಮತ್ತೂ... ಯಾವ ಸಂಬಂಧದ ರೂಪವನ್ನೂ ಕೊಡದಿದ್ದರೂ, ಆತ್ಮೀಯತೆ ತೋರುವ... ಓದಲು ಪುಸ್ತಕಗಳನ್ನು ಕೊಡಲೊಪ್ಪುವ, ಕಿರಿಯ ಸ್ನೇಹಿತ.... ನಿಮ್ಮ ಶೈಲಿ ಚೆನ್ನಾಗಿದೆ ಬರವಣಿಗೆ ಮುಂದುವರೆಸಿ, ಬಿಡಬೇಡಿ, ಏನಾದರೂ ಸಲಹೆ ಬೇಕಿದ್ದರೆ, ಧಾರಾಳವಾಗಿ ಕೇಳಿ ಎಂದು ಪ್ರೋತ್ಸಾಹಿಸುವ ಹಿರಿಯ ಸ್ನೇಹ ಜೀವಿಯೂ ಇದ್ದಾರೆ....
ಮುಂದುವರೆಯುವುದು.....
ನಮಸ್ತೆ.
ReplyDeleteಅಬ್ಬಬ್ಬಾ.. ಸ್ನೇಹ ಮತ್ತು ಸ್ನೇಹದಿಂದ ಮನಸು ಹಗುರಾಗುವ, ಸದುಪಯೋಗವಾಗುವ, ಹಾಗೆಯೇ ಪುರಾಣ ಪ್ರಸಿದ್ಧರ ಸ್ನೇಹ ಎಂದೆಂದಿಗೂ ಶಾಶ್ವತ ಎಂದು ತಿಳಿಸುವ, ಜೊತೆಗೆ ನಿಮ್ಮ ಮನದಾಳದಲ್ಲಿ ಮನೆಮಾಡಿದ ಸ್ನೇಹಿತೆ/ತರ ವಿಚಾರಗಳನ್ನು ಸರಳವಾಗಿ ತಿಳಿಸಿದ್ದೀರಿ.
ಸ್ನೇಹ ಎಂದು? ಯಾವಾಗ? ಶುರುವಾಗುವುದು ತಿಳಿಯುವುದಿಲ್ಲ.
ಹೀಗೆಯೆ ನನಗೆ ಒಬ್ಬ ವಿದೇಶಿ ಸ್ನೇಹಿತನ ಪರಿಚಯವಾಗಿದ್ದು ಕನ್ನಡ ಕಲಿಸಿಕೊಡಿ ಎಂದು ಆತನಿಂದ ಬಂದ ಒಂದು ಈ ಮೇಲ್ನಿಂದ. ಇಂದಿಗೂ ಆ ಸ್ನೇಹ ಉಳಿದಿದೆ.
ಒಂದು ದಿನ ನನ್ನ ೨೦ ವರ್ಷದ ಒಂದು ಸ್ನೇಹದ ಬಂಧವನ್ನು ಒಂದು ಸಣ್ಣ ಕಾರಣದಿಂದ ಕಳೆದುಕೊಂಡಿದ್ದೇನೆ (ಅದು ನನ್ನ ತಪ್ಪಲ್ಲ ಎಂದು ಆ ನಂತರ ತಿಳಿಯಿತು).
ನನ್ನ ಶಾಲಾ ಸ್ನೇಹಿತರಲ್ಲಿ ಕೆಲವರು ಇನ್ನೂ ಗಟ್ಟಿಯಾಗಿ ಈ ಬಂಧ ಅನುಬಂಧ ಎಂಬಂತೆ ಇದ್ದಾರೆ. ಭೇಟಿಯಾಗದಿದ್ದರೂ, ವರ್ಷಕ್ಕೊಮ್ಮೆಯಾದರೂ ಸಿಗುತ್ತಿರುತ್ತಾರೆ, ವಿಚಾರಣೆಯಿರುತ್ತದೆ. ಈ ಬರಹ ಓದುತ್ತಿರುವಾಗ ನನ್ನ ಬಾಲ್ಯಮಿತ್ರನೊಬ್ಬನನ್ನು ಆಕಸ್ಮಿಕವಾಗಿ ಈ ಲೋಕದಿಂದಲೇ ಕಳೆದುಹೋದ ನೆನಪೂ ಬಂದಿತು.
ಸ್ನೇಹ ಎಂದರೆ ಸುವರ್ಣ (ಚಿನ್ನ) ಎಂದು ಅಮರಕೋಶದಲ್ಲಿ ಓದಿದ್ದ ನೆನಪು. ಅಂತಹ ಸುವರ್ಣವನ್ನು ಕಳೆದುಕೊಳ್ಳುವುದು ಬಹಳ ಕಷ್ಠ.ಏಕೆಂದರೆ, ಚಿನ್ನವನ್ನು ರಕ್ಷಿಸುವಂತೆ ಹೃದಯಗಳಿರಬೇಕು.
ಕೆಲಸಕ್ಕೆ ಸೇರಿದ ಜಾಗದಲ್ಲಿದ್ದ ಸ್ನೇಹಿತರು (ನಾನು ಅದೇ ಸಂಸ್ಥೆಯಲ್ಲಿ ಈಗ ಕೆಲಸದಲ್ಲಿದ್ದರೂ) ಬೇರೆ ಬೇರೆ ಕೆಲಸಗಳಲ್ಲಿ ನಿಯೋಜಿತರಾಗಿದ್ದಾರೆ. ಕೆಲವರು ಸರ್ಕಾರಿ, ಖಾಸಗಿ ಹಾಗೂ ದೂರದೂರಿನಲ್ಲಿದ್ದರೂ ಇಂದಿಗೂ ಆ ಮೊದಲ ದಿನದ ಸ್ನೇಹದ ಆತ್ಮೀಯತೆ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದೇವೆ. ಕಾಲೇಜಿನಲ್ಲಿ ಓದಿದ (ಪಿಯುಸಿ ಯಾರೂ ಸಿಗುತ್ತಿಲ್ಲ)ಗೆಳೆಯನ ಕರೆಗೆ 'ಊರಿಗೆ ಇನ್ನೂ' ಹೋಗಲು ಆಗಿಲ್ಲವಾದರೂ ಸ್ನೇಹ ಉಳಿದಿದೆ.
ನಾವಿಬ್ಬರೂ ಎದಿರುಬದಿರು ಬಂದರೂ ಗುರುತಿಸದೆ, ಎಲ್ಲೋ ನೋಡಿದ ನೆನಪು ಎಂದುಕೊಂಡು ಸಾಕಷ್ಟು ದೂರ ಹೋಗಿದ್ದವರು ಮತ್ತೆ ಅದೇ ಸ್ಥಳಕ್ಕೆ ವಾಪಸಾಗಿದ್ದು ಒಂದು ರೋಚಕ ವಿಚಾರವಾಗಿಯೇ ಇದೆ ಇನ್ನೂ ನನ್ನ ಮನಸ್ಸಿನಲ್ಲಿ. ಶಾಲೆ ಮುಗಿಸಿ ೧೦ ವರ್ಷದ ನಂತರ ಸಿಕ್ಕಿದ್ದ ಸ್ನೇಹಿತನೊಬ್ಬ ಮತ್ತೆ ಸಿಗದೇ ಹೋದದ್ದು ವಿಪರ್ಯಾಸ.
ಹೀಗೆ ಸ್ನೇಹದ ಬಗ್ಗೆ ಬರಯಲು ಕುಳಿತರೆ, ಮಹಾ ಪ್ರಬಂಧವನ್ನೇ ಮಂಡಿಸಬಹುದು, ಏನಂತೀರಿ? ಅಂತರಂಗದ ಮಾತುಗಳನ್ನು ಮುಂದಿನ ಭಾಗದಲ್ಲಿ ಎದುರುನೋಡುತ್ತಿರುವೆ.
ವಂದನೆಗಳು,
ಚಂದ್ರು
ಚಂದ್ರೂ... ಓದಿ ನನ್ನ ಬರಹಕ್ಕೆ ಉತ್ತರವಾಗಿ ನಿಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದೀರಿ... ಧನ್ಯವಾದಗಳು. ನಿಮ್ಮ ಪ್ರೋತ್ಸಾಹವೇ ನನ್ನ ಸ್ಫೂರ್ತಿ...
ReplyDeleteShyamala this is a nice logic and magical expalianation of the Bond that doesnt see age, sex, cost, creed and even can happen between living and non-living. I remember the attachments I had with a particula badmisnton court during my college days...
ReplyDeletenice...
ಸ್ನೇಹ ಜಾತಿ, ಧರ್ಮ, ಭಾಷೆ, ವಯಸ್ಸು, ಅಂತಸ್ತನ್ನು ಮೀರಿದ್ದು. ಈಗ ಅಂತರಜಾಲದ ಮೂಲಕ ಹೊಸ ಹೊಸ ಸ್ನೇಹಿತರು ದೊರಕುತ್ತಾರೆ. ಬ್ಲಾಗ್ ಲೋಕವನ್ನೇ ನೋಡಿ, ಬರೆದ್ದನ್ನು ಓದಿ, ವಿಮರ್ಶಿಸಿ, ಪ್ರೋತ್ಸಾಹಿಸಿ, ಹೀಗೆ ಬಹು ಬೇಗ ಆತ್ಮೀಯರಾಗಿ ಬಿಡುತ್ತಾರೆ
ReplyDeleteಡಾ ಆಜಾದ್...
ReplyDeleteಧನ್ಯವಾದಗಳು... ಹೌದು ಸ್ನೇಹ ಬೆಳೆಸಲು ಯಾವುದೇ ರೀತಿಯ ಕನಿಷ್ಠ ವಿದ್ಯಾರ್ಹತೆ, ಅಂತಸ್ತು ಅಥವಾ ಇನ್ನಾವುದೇ ರೀತಿಯ ನಿಪುಣತೆ ಯಾವುದೂ ಬೇಡ. ನಿರ್ಮಲವಾದ ಅಂತ:ಕರಣ ಮತ್ತು ಸಹೃದಯತೆ ಇದ್ದರೆ ಸಾಕು....
"ದೀಪಸ್ಮಿತ"... ಸಾರ್
ReplyDeleteಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. ನೀವೂ ಕೂಡ ನನ್ನ ಮಾತುಗಳನ್ನು ಅನುಮೋದಿಸಿದ್ದೀರಿ. ಈ ಬ್ಲಾಗ್ ಲೋಕವೆಂಬುದು ಒಂಥರಾ wonderland... ಯಾವುದೇ ಜಾಗದಲ್ಲಿ ಕುಳಿತು ಬೇಕಾದರೂ ಓದಬಹುದು, ವಿಮರ್ಶಿಸಬಹುದು... ಹೀಗೆ ಪ್ರೋತ್ಸಾಹಿಸಲೂ ಬಹುದು... ಸ್ನೇಹ ಶುರುವಾಗುವುದೇ ಹೀಗಲ್ಲವೇ... ಸ್ನೇಹ ಅರಳಿದಂತೆ ಆತ್ಮೀಯತೆಯೂ ತಾನೇ ತಾನಾಗಿ ಸದ್ದಿಲ್ಲದೆ ಬಂದು ಕುಳಿತಿರುತ್ತದೆ...
ಸೋದರಿ,
ReplyDeleteಬಹಳ ದಿನಗಳ ನಂತರ ಬಿಡುವುಮಾಡಿಕೊಂಡು ನಿಮ್ಮಂತರಂಗದ ಮಾತುಗಳನ್ನಾಲಿಸಲು ಇಲ್ಲಿಗೆ ಬಂದೆ. ಓಹ್!
ಸ್ನೇಹದ ಬಗ್ಗೆ ನಿಮ್ಮ ವ್ಯಾಖ್ಯೆ, ವಿಶ್ಲೇಷಣೆಗಳನ್ನೋದಿದಮೇಲೆ ನನ್ನೊಳಗಿನ ಸ್ನೇಹಜೀವಿಗೆ ಗರಿ ಮೂಡಿದೆ!
ಮುಂದಿನ ಕಂತು ಹೊರಹೊಮ್ಮಲಿ.
ಸೋದರರೆ... ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...
ReplyDeleteಒಂದೆರಡು ದಿನಗಳಲ್ಲೇ ಮುಂದಿನ ಕಂತು ಬರೆಯುತ್ತೇನೆ. ನಿಮ್ಮ
ಪ್ರೋತ್ಸಾಹವೇ ನನಗೆ ಸ್ಫೂರ್ತಿ...
ನಿಜ ಶ್ಯಾಮಲ ಅವರೆ... ಸ್ನೇಹಕ್ಕಿಂತ ದೊಡ್ಡ ಬಂಧ ಯಾವುದೂ ಇಲ್ಲ ಅನಿಸುತ್ತದೆ. ಉತ್ತಮ ಸ್ನೇಹಿತರ ಸಂಪಾದನೆಯೂ ಒಂದು ಕಲೆ ಹಾಗೂ ಪುಣ್ಯವೇ ಸರಿ. ಪತಿ ಯಲ್ಲಿ ಉತ್ತಮ ಸ್ನೇಹಿತ, ಪತ್ನಿಯಲ್ಲಿ ಉತ್ತಮ ಸ್ನೇಹಿತೆ ಕಂಡುಕೊಂಡ ದಾಂಪತ್ಯವೇ ಸುಂದರವಾಗಿರುತ್ತದೆ ಎಂದಿದ್ದಾರೆ ಹಿರಿಯರು. ಉತ್ತಮ ಲೇಖನ.
ReplyDeleteಮುಂದಿನ ಭಾಗ ಯಾವಾಗ?
ನಿಮ್ಮ ಮಾತು ತುಂಬಾ ನಿಜ ತೇಜಸ್ವಿನಿ...
ReplyDeleteಉತ್ತಮ ಸ್ನೇಹಿತರನ್ನು ಹೊಂದುವುದು ಸೌಭಾಗ್ಯವೇ ಸರಿ. ನಾನಿನ್ನೂ ಮುಂದಿನ ಕಂತಿನಲ್ಲಿ ಬರೆಯಬೇಕಿದ್ದ ವಿಷಯದ ಎಳೆಯನ್ನು ನೀವಾಗಲೇ ಇಲ್ಲಿ ಪ್ರಸ್ತಾಪಿಸಿ ಬಿಟ್ಟಿದ್ದೀರಿ... :-) ಇರಲಿ ಪರವಾಗಿಲ್ಲ....ಬೇಗ ಬರೆಯುವ ಪ್ರಯತ್ನ ಮಾಡುತ್ತೇನೆ, ಧನ್ಯವಾದಗಳು...
ಹ್ಮ್ಮ್ಮ್ , ಅಂತು ಇವತ್ತು ನಿಮ್ಮ ಲೇಖನ ಓದಿಯೇ ಬಿಟ್ಟೆ ನೋಡಿ ಅಕ್ಕ :)
ReplyDeleteನೀವು ಹೇಳಿದ್ದರಲ್ಲಿ ಕೊಂಚವೂ ತಪ್ಪು ಇಲ್ಲ .
ಆದರೆ ನನ್ನ ಕೆಲವೊಮ್ಮೆ ಕಾಡುವ ಪ್ರಶ್ನೆ ಅಂದರೆ , ಇತರರ ಸ್ನೇಹವನ್ನು ನಾವಾಗೇ ಬಯಸಿಕೊಂಡು ಹೋಗುವುದು ತಪ್ಪೇ ?
ಕೆಲವೊಮ್ಮೆ ಕೆಲವರನ್ನ ನೋಡಿದ ತಕ್ಷಣ ಸ್ನೇಹದ ಹಸ್ತ ಚಾಚ ಬೇಕೆಂದಿನುಸುತ್ತದೆ ಆದರೆ ಅವರಿಗೆ ಅದರಲ್ಲಿ ಎಷ್ಟು ಆಸಕ್ತಿ ಎನ್ನುವುದು ತಿಳಿಯುವುದು ಹೇಗೆ ?
ಏನೇ ಆಗಲಿ ನನಗೂ ಒಳ್ಳೆ ಅಕ್ಕ ಹಾಗೂ ಅಕ್ಕಂದಿರು ಸಿಕ್ಕಿದ್ದಾರೆ :)
ಅಬ್ಬಾ... ಅಂತೂ ಬಿಡುವು ಮಾಡಿಕೊಂಡು ಓದಿದೆಯಲ್ಲಾ ತಮ್ಮಾ...
ReplyDeleteಸ್ನೇಹ ಬಯಸುವುದರಲ್ಲಿ ತಪ್ಪೇ ಇಲ್ಲ... ನಿನಗೆ ಯಾರನ್ನಾದರೂ ನೋಡಿದ ತಕ್ಷಣ ಸ್ನೇಹ ಹಸ್ತ ಚಾಚಬೇಕೆನ್ನಿಸಿದರೆ ನೀನು ಮುಂದುವರೆಯುವುದರಲ್ಲಿ ಯಾವ ತಪ್ಪೂ ಇಲ್ಲ... ನೀ ಒಂದು ಹೆಜ್ಜೆ ಮುಂದಿಟ್ಟು ನೋಡು, ಅವರಿಗೆ ತೀರಾ ಆಸಕ್ತಿ ಇಲ್ಲದಿದ್ದರೆ, ಅವರು ನಿಂತಲ್ಲೇ ನಿಂತಿರುತ್ತಾರೆ... ಯಾವುದನ್ನೂ ಬಲವಂತವಾಗಿ, ಮನಸ್ಸಿಗೆ ವಿರುದ್ಧವಾಗಿ ಮಾಡಲಾಗುವುದಿಲ್ಲ ಅಲ್ಲವೇ... ನೀ ಹೇಳಿದಂತೆ ಸ್ವಲ್ಪ ಅಪರೂಪವಾಗಿಯೇ ಆಗುವುದೆಂದು ನನ್ನ ಅನುಭವ, ಏಕೆಂದರೆ, ನಾನು ಯಾರ ಸ್ನೇಹ ಅಪೇಕ್ಷಿಸಿದ್ದೇನೋ ನನಗೆ ಅದು ಸಿಕ್ಕಿದೆ. ನಾನೇ ಕೆಲವೊಮ್ಮೆ ಮುಂದುವರೆಯದೇ ಬಿಟ್ಟ ಸಂದರ್ಭಗಳು ಕೆಲವು ಇವೆ ಏಕೆಂದರೆ ಈ ಸ್ನೇಹಗಳು ತೀರಾ ನಿಭಾಯಿಸುವುದು ಕಷ್ಟಕರವಾದುದಾಗಿವೆ...ಸ್ನೇಹ ಮಾಡುವುದು ದೊಡ್ಡದಲ್ಲಾ ತಮ್ಮಾ... ಮುಂದುವರೆಸಿಕೊಂಡು ಹೋಗುವುದೇ ದೊಡ್ಡ ಜವಾಬ್ದಾರಿ... ನಿನ್ನ ಮುಂದಿನ ಸ್ನೇಹದ ಎಲ್ಲಾ ಹುಡುಕಾಟಗಳೂ ಯಶಸ್ವಿಯಾಗಲೆಂದು ಹಾರೈಸುವೆ...
ನೀವು ಓದುವ ಬ್ಲಾಗ್‌ಗಳ ಪಟ್ಟಿಯಲ್ಲಿ ನನ್ನ ಬ್ಲಾಗ್: 'ಅಂತರಗಂಗೆ'(http://antaragange.blogspot.com) ಸೇರಿಸಿದ್ದೀರಿ, ವಂದನೆಗಳು.
ReplyDeleteಡಾ.ಜೆ.ಬಾಲಕೃಷ್ಣ
ಡಾ. ಬಾಲಕೃಷ್ಣ ಅವರೇ...
ReplyDeleteನನ್ನ ಅಂತರಂಗದ ಮಾತುಗಳ ಮನೆಗೆ ನಿಮಗೆ ಆದರದ ಸ್ವಾಗತ. ನಿಮ್ಮ ಅಂತರಗಂಗೆಯನ್ನೋದಲು ನಾ ಅಲ್ಲಿಗೆ ಬರುತ್ತಿರುತ್ತೇನೆ... ಧನ್ಯವಾದಗಳು