Saturday, September 4, 2010

ಬೆಕ್ಕಿನ ಕಣ್ಣು - ಮುಕ್ತಾಯ ......

ಚಿಕ್ಕಮ್ಮನ ತಮ್ಮ ರಾಜಶೇಖರನನ್ನು ತನ್ನ ತಂದೆಯ ಮದುವೆಯ ಸಮಯದಲ್ಲೇ ನೋಡಿರುತ್ತಾಳೆ ಕುಸುಮ. ತನ್ನತ್ತ ಸ್ನೇಹದ ನಗೆ ಬೀರಿದ್ದ ರಾಜನಲ್ಲಿ ಅವಳಿಗೆ ಸ್ವಲ್ಪ ವಿಶ್ವಾಸವಿರುತ್ತದೆ. ಮುಂದೆ ಹಲವು ವರ್ಷಗಳ ನಂತರ ಅಕ್ಕನ ಮನೆಗೆ ಬಂದ ಸ್ಫುರದ್ರೂಪಿ ಯುವಕ, ಮನ:ಶಾಸ್ತ್ರದ ವಿದ್ಯಾರ್ಥಿ ರಾಜನನ್ನು ನೋಡಿ ಲಜ್ಜೆ, ಸಂಕೋಚದಿಂದ ದೂರವೇ ಇರುತ್ತಾಳೆ. ಆದರೆ ಅವಳು ಉದ್ವೇಗದಿಂದ ಬೆಕ್ಕು ಪಾಲಿಗೆ ಕಲ್ಲು ಹೊಡೆಯುತ್ತಿದ್ದಾಗ, ಅನುನಯದ ಮಾತಾಡಿ, ಕಥೆ ಹೇಳಿ ರಾಜ ಅವಳ ವಿಶ್ವಾಸ ಗೆಲ್ಲುತ್ತಾನೆ. ಮಾನಸಿಕ ತಜ್ಞರಿಗೆ ತೋರಿಸುವಂತೆ ಕುಸುಮಳ ತಂದೆಗೆ ಹೇಳುತ್ತಾನೆ. ಆದರೆ ಅವರು ಅವಳನ್ನು ತಾಯಿಯ ದೆವ್ವ ಮೆಟ್ಟಿದೆಯೆಂದೂ, ಬಿಡಿಸಲು ಅಮಾವಾಸ್ಯೆಯಂದು ತಿಪ್ಪಯ್ಯನ ಬಳಿ ಕರೆದೊಯ್ಯುತ್ತಾರೆ. ಬರಲಾರೆನೆಂದು ಹಟ ಮಾಡುವ ಕುಸುಮ ರಾಜನೂ ಬರುತ್ತೇನೆಂದ ಮೇಲೆ ತನ್ನನ್ನು ಅವನು ರಕ್ಷಿಸುತ್ತಾನೆ, ಎಲ್ಲರಂತಲ್ಲ ಅವನು ಎಂದು ಅವನ ಮೇಲಿನ ವಿಶ್ವಾಸದಿಂದ ಹೊರಡುತ್ತಾಳೆ. ರೌದ್ರ ರೂಪದ ತಿಪ್ಪಯ್ಯನನ್ನು ಕಂಡು, ಕುಸುಮಳ ಜೊತೆ ರಾಜನೂ ಬೆಚ್ಚುತ್ತಾನೆ. ತಿಪ್ಪಯ್ಯ, ದೇವೀರಪ್ಪ ಇಬ್ಬರ ಭೂತ ಬಿಡಿಸುವ ಹಿಂಸೆಯ ಪರಿಯಿಂದ ನೊಂದ ಕುಸುಮ ನಿರಾಶೆ, ವಿಫಲತೆ, ಅಸಹಾಯಕತೆಯಿಂದ, ಬದುಕೇ ಬೇಡವೆಂದು ವಿರಕ್ತಿಯಲ್ಲಿ ಮುಳುಗುತ್ತಾಳೆ. ಎಲ್ಲರಂತೆ ಬದುಕಬೇಕೆನ್ನುವ ತನ್ನ ಕನಸು ಕಣ್ಣೆದುರೇ ನುಚ್ಚು ನೂರಾಗುವುದು ನೋಡಿ, ಬದುಕಿಗಿಂತ ಸಾವೇ ವಾಸಿ ಎಂದು ಕೊಳ್ಳುತ್ತಾ, ಗಂಟೆಗಟ್ಟಲೆ ಶೂನ್ಯದಲ್ಲಿ ದೃಷ್ಟಿ ನೆಟ್ಟು ಕುಳಿತು ಬಿಡುತ್ತಾಳೆ......

ರಾಜ ಅವಳನ್ನು ಉಲ್ಲಾಸಗೊಳಿಸಲೋಸುಗ ಹೊರಗೆ ಕರೆದುಕೊಂಡು ಹೋದವನು, ಕುಸುಮಳನ್ನು ತಾವು ಪ್ರೀತಿಸುವುದಾಗಿಯೂ, ಅವಳು ತನಗಾಗಿ ಬದುಕಬೇಕೆಂದೂ ಹೇಳುತ್ತಾನೆ. ಎಂದೂ ಇಲ್ಲದ ಅನಂತ ಶಾಂತಿ ಮೂಡುತ್ತದೆ, ಕುಸುಮಳ ಕಣ್ಣುಗಳಲ್ಲಿ. ಆದರೆ....ಎಲ್ಲರಂತೆ ತಾನೂ ನೆಮ್ಮದಿಯ ಜೀವನ ನಡೆಸಬಹುದೆನ್ನುವ ಕುಸುಮಳ ಆಕಾಂಕ್ಷೆಗೆ, ಕನಸಿಗೆ ಪದ್ಮ ಕಲ್ಲೆಸೆದು, ಆಳವಾಗಿ ಕಲಕಿ ಬಿಡುತ್ತಾಳೆ. ರಾಜನ ಜೊತೆಯ ಕುಸುಮಳ ಸ್ನೇಹದ ಆಳ ಅತಿ ಹೆಚ್ಚಾಗುವುದು, ಪದ್ಮಳಿಗೆ ಇಷ್ಟವಿರುವುದಿಲ್ಲ. ಅವಳು ತುಸುವೇ ಚೇತರಿಸಿಕೊಂಡಿದ್ದ ಕುಸುಮಳ ಮೃದು ಅಂತರಂಗವನ್ನು ಮತ್ತೆ ಘಾಸಿಗೊಳಿಸಿಬಿಡುತ್ತಾಳೆ. ಅಕ್ಕ ಪಕ್ಕದವರೂ ಅವಳ ಪ್ರತಿಯೊಂದು ಚಲನವಲನಕ್ಕೂ ಸಂಶಯದ ಅರ್ಥ ಕೊಡಲಾರಂಭಿಸಿದಾಗ, ಕುಸುಮ ಮತ್ತೆ ಉನ್ಮಾದ ಸ್ಥಿತಿಗೆ ತಲುಪುತ್ತಾಳೆ. ಮನೆಯವರಿಗೆ ಗೊತ್ತಿಲ್ಲದಂತೆ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕುಸುಮಳನ್ನು ರಾಜ, ಮಾನಸಿಕ ಚಿಕಿತ್ಸಾ ಆಸ್ಪತ್ರೆಗೆ ಸೇರಿಸಿ ಬಿಡುತ್ತಾನೆ. ಆಸ್ಪತ್ರೆಯಲ್ಲಿ ಕುಸುಮಳಿಗೆ ಒಂದು ಹೊಸ ಪ್ರಪಂಚವೇ ತೆರೆದುಕೊಳ್ಳತ್ತೆ. ಮಗಳಿಗಾಗಿ ಹಂಬಲಿಸುವ ಲಕ್ಷಮ್ಮ ಕುಸುಮಳಲ್ಲಿ ತನ್ನ ಮಗಳು ನಾಗುವನ್ನು ಕಾಣುತ್ತಾರೆ. ತಾಯಿ ಪ್ರೇಮದಿಂದ ವಂಚಿತಳಾಗಿದ್ದ ಕುಸುಮಳೂ ಅಮ್ಮಾ ಎಂದು ಹಚ್ಚಿಕೊಳ್ಳುತ್ತಾಳೆ. ಕೆಲವು ದಿನಗಳಲ್ಲಿ ಕುಸುಮ ಆಸ್ಪತ್ರೆಯ ವಾತಾವರಣಕ್ಕೆ ಹೊಂದಿ ಕೊಳ್ಳುತ್ತಾಳೆ. ಬಾಕಿಯಂತೆ ಅವಳು ಶಾಂತವಾಗಿದ್ದರೂ ಹಸಿರು ಬಣ್ಣದ ಮೇಲಿನ ದ್ವೇಷ ಅವಳ ಅಂತರಂಗಕ್ಕಿಳಿದಿರತ್ತೆ. ಅದು ಕೆಲವೊಮ್ಮೆ ಅವಳ ಕೆಲಸಗಳಲ್ಲಿ - ಅಂದರೆ ಕಸೂತಿಯ ಗುಲಾಬಿ ಹೂವಿನ ಜೊತೆ ನೀಲಿ ಎಲೆ ಮಾಡುವುದರಲ್ಲಿ... ಹೀಗೆ ವ್ಯಕ್ತವಾಗುತ್ತಿರುತ್ತದೆ...

ಆಸ್ಪತ್ರೆಯ ಡಾಕ್ಟರು ಕುಸುಮಳನ್ನು ನಾನಾ ಬಗೆಯಲ್ಲಿ ಅವಳಿಗೆ ತಿಳಿಯದಂತೆ ಕೂಡ ಪರೀಕ್ಷಿಸುತ್ತಾರೆ. ಇದರಲ್ಲಿ ಒಂದು ವಿಧವೆಂದರೆ.. ಕುಸುಮಳಿಗೆ ಅನೇಕ ಬೊಂಬೆಗಳನ್ನು ಆಡಲು ಕೊಟ್ಟು, ಅವಳಿಗರಿವಿಲ್ಲದಂತೆ ಅವಳನ್ನು ಗಮನಿಸುವುದು. ಕುಸುಮ ಆಟದಲ್ಲೂ... ಹೆಣ್ಣು ಬೊಂಬೆಯನ್ನು ತಂದೆಯ ಪಕ್ಕದಲ್ಲಿ ನಿಲ್ಲಿಸಿ, ಮತ್ತೆ ತೆಗೆದು ದೂರ ಎಸೆಯುತ್ತಾಳೆ, ಬೆಕ್ಕಿನ ಬೊಂಬೆಯನ್ನು ನೆಲಕ್ಕೆ ಬಿಸಾಕಿ, ಕೈಗೆ ಸಿಕ್ಕಿದ್ದು ತೆಗೆದುಕೊಂಡು ಚಚ್ಚುತ್ತಾಳೆ... ಹೀಗೆ ಅವಳ ಪರೀಕ್ಷೆಯನ್ನು ಮಾಡಿದ ಡಾಕ್ಟರ್ ಕುಸುಮಳ ತಂದೆಯನ್ನೂ, ಪದ್ಮಳನ್ನೂ ಕರೆಸಿ ಮಾತುಕತೆಯಾಡಿ, ತಿಳಿಸಿ ಹೇಳುತ್ತಾರೆ. ಜಗನ್ನಾಥರಿಗೆ ತಾವೆಂತಹ ತಪ್ಪು ಮಾಡಿ ತಮ್ಮ ಮುದ್ದು ಮಗಳ ಬದುಕು ಸಂಕಟಮಯವಾಗಲು ಕಾರಣರಾದೆವೆಂದು ಅರ್ಥವಾಗುತ್ತದೆ. ಅವರು ಡಾಕ್ಟರರ ಮಾತಿಗೆ ಸ್ಪಂದಿಸಿ, ಬದಲಾದ ಮನಸ್ಸಿನಿಂದ ಕುಸುಮಳನ್ನು ನೋಡಲು ಬರುತ್ತಾರೆ ಹಾಗೂ ಹೆಂಡತಿಗೂ ಸರಿಯಾಗಿ ಬೈದು ತಮ್ಮ ಕಳವಳ ತೋಡಿಕೊಳ್ಳುತ್ತಾರೆ.... ಪದ್ಮಳಿಗೂ ತನ್ನ ತಪ್ಪಿನ ಅರಿವಾಗುತ್ತದೆ. ಹೀಗೆ ಎಲ್ಲರೂ ಬದಲಾದ ಹೃದಯದಿಂದ, ತುಂಬಿದ ಪ್ರೀತಿಯಿಂದ, ಮತ್ತೆ ಮತ್ತೆ ಆಸ್ಪತ್ರೆಗೆ ಭೇಟಿ ನೀಡಿ ಕುಸುಮಳನ್ನು ಸಂತೈಸುತ್ತಾರೆ. ಅವಳ ಮನಸ್ಸಿನಲ್ಲಿ ಬದುಕಿನ ಬಗ್ಗೆ ಉತ್ಸಾಹ, ಮತ್ತು ಮೃದು ಭಾವನೆಗಳನ್ನು ಉದ್ದೀಪನಗೊಳಿಸುತ್ತಾರೆ. ರಾಜನ ಸಮಯೋಚಿತ ನಿರ್ಧಾರದಿಂದ ಕುಸುಮಳ ಬಾಳು ಬೆಳಗುತ್ತದೆ. ರಾಜ ತನ್ನ ಓದು ಮುಗಿಸಿದ ನಂತರ ರಾಜನಿಗೂ ಕುಸುಮಳಿಗೂ ಮದುವೆಯೆಂಬ ಮಾತು ಕೂಡ ನಿರ್ಧಾರದ ಆಕಾರ ಪಡೆಯುತ್ತದೆ. ಕುಸುಮಳಿಗೂ SSLC ಪಾಸು ಮಾಡುವಂತೆ ಹೇಳಬೇಕೆಂದುಕೊಳ್ಳುತ್ತಾನೆ ರಾಜ.......

ಕಥೆಯೇನೋ ಸುಖಾಂತ್ಯವಾಗಿ ಮುಗಿದುಹೋಗುತ್ತದೆ. ಆದರೆ ಅಲ್ಲಿನ ಪಾತ್ರಗಳು ನಮ್ಮನ್ನು ಬಿಡದೇ ಕಾಡುತ್ತವೆ. ಹೆಂಡತಿಯನ್ನು ಕಳೆದುಕೊಂಡು, ಮನೆ-ವ್ಯಾಪಾರ ಎರಡನ್ನೂ ತೂಗಿಸಲಾಗದೇ, ವಯಸ್ಸಿನ ಸಹಜ ಕಾಮನೆಗಳನ್ನೂ ಗೆಲ್ಲಲಾಗದೇ, ಎರಡನೆಯ ಮದುವೆಗೆ ಒಪ್ಪುವ ಜಗನ್ನಾಥನ ವ್ಯಕ್ತಿತ್ವ ನಿಶ್ಯಕ್ತವಾಗಿದೆ ಎನ್ನಿಸುತ್ತದೆ. ತನಗಿಂತ ತುಸು ಹೆಚ್ಚೇ ವಯಸ್ಸಿನ, ೧೦ವರ್ಷದ ಮಗಳ ತಂದೆಯನ್ನು ಮದುವೆಯಾಗ ಬೇಕೆನ್ನುವ ಒತ್ತಡಕ್ಕೆ ಸಿಲುಕಿ, ಆಕ್ರೋಶದ ಮನಸ್ಥಿತಿಯಲ್ಲಿನ ಪದ್ಮ ಓದುಗರ ಮನದಲ್ಲಿ ಕರಾಳವಾಗಿ ಬಿಂಬಿಸಲ್ಪಡುತ್ತಾಳೆ. ಕೊನೆಗೆ ಅವಳು ಬದಲಾದರೂ ಕೂಡ, ಅವಳ ಒಳ್ಳೆಯ ಮುಖದ ಪರಿಚಯಕ್ಕೆ ಇಲ್ಲಿ ಅವಕಾಶವಿಲ್ಲದಿರುವುದರಿಂದ, ಅವಳು ನಮ್ಮ ಮನದಲ್ಲಿ ಭೀಕರವಾಗಿಯೇ ಉಳಿದುಬಿಡುತ್ತಾಳೆ. ಮುಂಚಿನಿಂದಲೂ ಮನ:ಶಾಸ್ತ್ರದಲ್ಲಿ ಆಸಕ್ತಿಯುಳ್ಳವನಾಗಿ, ಕುಸುಮಳಿಗೆ ಪ್ರೀತಿ, ಭರವಸೆ, ಧೈರ್ಯ ಕೊಟ್ಟು, ಸಕಾಲದಲ್ಲಿ ಚಿಕಿತ್ಸೆ ಒದಗಿಸಿ, ಅವಳ ಬಾಳು ಚಿಗುರುವಂತೆ ಮಾಡುವ, ಅವಳ ಹೃದಯದಲ್ಲಿ ಅನುರಾಗದ ಅಲೆ ಹುಟ್ಟಿಸುವ ರಾಜ ಸ್ವಾಭಾವಿಕವಾಗಿಯೇ ನಾಯಕನಾಗುತ್ತಾನೆ.

ದುಕಿನಲ್ಲಿ ನಡೆಯುವ ಚಿಕ್ಕ ಚಿಕ್ಕ ಘಟನೆಗಳೂ ಕೂಡ ತೀವ್ರತರವಾಗಿ ನಮ್ಮ ಅಂತರಂಗವನ್ನು ಕಲಕಿ ಜೀವನದ ಗತಿಯನ್ನೇ ಬದಲಿಸಿ ಬಿಡಬಹುದೆಂಬ ಒಂದು ಎಳೆಯ ಮೇಲೆ ಈ ಕಾದಂಬರಿ ರಚಿಸಿದ ಲೇಖಕಿ, ತಾನೇ ಸ್ವತ: case study ಮಾಡಿಯೇ ಕಥೆಯ ಹಂದರ ನಿರ್ಮಿಸಿದ್ದಾರೆ. ಎಂದಿನಂತೆ ತಮ್ಮದೇ ಶೈಲಿಯಲ್ಲಿ ತ್ರಿವೇಣಿಯವರು ಛಾಪು ಒತ್ತಿ ಕಥೆಗೆ ಒಂದು ನಿರ್ದಿಷ್ಟ ವೇಗ ಕೊಟ್ಟಿದ್ದಾರೆ. ಓದಿದ ಹಲವಾರು ತಿಂಗಳುಗಳವರೆಗೂ, ವರ್ಷಗಳವರೆಗೂ ನಮ್ಮ ಮನಸ್ಸು ಕಲಕಬಲ್ಲ ಕಥೆ ಮತ್ತು ನಿರೂಪಣೆ.....

ಚಿತ್ರಕೃಪೆ : ಅಂತರ್ಜಾಲ

12 comments:

  1. ನಾನು ಕಾದ೦ಬರಿಗಳನ್ನು ಓದಿದ್ದು ಕಡಿಮೆ, ನಿಮ್ಮ ಈ ಲೇಖನದ ಮೂಲಕ ತ್ರಿವೇಣಿಯವರ ಕಾದ೦ಬರಿ ಓದಿದ ಅನುಭವವಾಯ್ತು.

    ReplyDelete
  2. ತ್ರಿವೇಣಿಯವರ ಕಾದಂಬರಿಯ ಸೂಕ್ಷ್ಮತೆಯನ್ನು ಅಷ್ಟೇ ಸೂಕ್ಷ್ಮವಾಗಿ ಬಿಂಬಿಸಿದ್ದೀರಿ.
    ಪಾತ್ರಗಳ ವಿಮರ್ಶೆಯನ್ನೂ ಸಹ ಸೊಗಸಾಗಿ ಮಾಡಿದ್ದೀರಿ.

    ReplyDelete
  3. ಶ್ಯಾಮಲ ಮೇಡಮ್,

    ಬೆಕ್ಕಿನ ಕಣ್ಣು ಕಾದಂಬರಿಯನ್ನು ಕಾಲೇಜು ದಿನಗಳಲ್ಲಿ ಓದಿದ್ದೆ. ಈಗ ಅದರ ಕತೆ ನೆನಪಾಗುತ್ತಿಲ್ಲ. ನಿಮ್ಮ ಸೂಕ್ಷ್ಮ ವಿವರಗಳಿಂದಾಗಿ ಮತ್ತೆ ಎಲ್ಲವೂ ನೆನಪಾಯಿತು..

    ReplyDelete
  4. ಕಾದಂಬರಿಯ ತಿರುಳನ್ನು ಸರಳವಾಗಿ ಎರಡೇ ಕಂತಿನಲ್ಲಿ ಹೇಳಿ ಬಾಲ್ಯದಲ್ಲಿ ಓದಿದ್ದ ಕಾದ೦ಬರಿ ಕಣ್ಣ ಮುಂದೆ ನಿಲ್ಲುವಂತೆ ಮಾಡಿದಿರಿ. ಧನ್ಯವಾದಗಳು.

    ReplyDelete
  5. ಬೆಕ್ಕಿನ ಕಣ್ಣು ನಾನು ಹೈಸ್ಕೂಲ್ ದಿನಗಳಲ್ಲಿ ಮೊದಲ ಬಾರಿಗೆ ಓದಿದ್ದೆ..
    ನೀವು ಹೇಳಿದಂತೆ ಅದರ ಪಾತ್ರಗಳು ನಮ್ಮ ಮನಸ್ಸಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತವೆ..

    ಎನ್. ನರಸಿಂಹಯ್ಯನವರ "ಪುರುಷೋತ್ತಮನ ಸಾಹಸದ" ಪತ್ತೆದಾರಿ ಕಾದಂಬರಿ ಓದುತ್ತಿದ್ದ ನನಗೆ ತ್ರಿವೇಣಿಯವರ ಈ ಕಾದಂಬರಿ ಬಹಳ ಆಕರ್ಷಿಸಿತು..
    ನಾನು ಸಾಮಾಜಿಕ ಕಾದಂಬರಿಗಳನ್ನು ಓದುವಂತೆ ಪ್ರೇರೇಪಿಸಿತು..

    ಮನಶ್ಯಾಸ್ತ್ರದ ಬಗೆಗೆ ಕುತೂಹಲ ಹುಟ್ಟಿಸಿತು..

    ಮತ್ತೆ ನನ್ನ ನೆನಪುಗಳನ್ನು ಹಸಿರಾಗಿದ್ದಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್ !

    ReplyDelete
  6. ಶ್ಯಾಮಲ ಅವರೆ,
    ಕಾದಂಬರಿಯನ್ನು ಸೂಕ್ಷ್ಮವಾಗಿ ಪರಿಚಯಿಸಿದ್ದರಿಂದ ನನಗೂ ಈ ಕಾದಂಬರಿಯನ್ನು ಓದಬೇಕೆಂಬ ಕುತೂಹಲವಾಗಿದೆ.
    ಧನ್ಯವಾದಗಳು..

    ReplyDelete
  7. ತುಂಬ ಸ್ವಾರಸ್ಯಕರವಾಗಿತ್ತು ವಿವರಣೆಗಳು. ಇಡೀ ಕಾದಂಬರಿಯನ್ನೊಮ್ಮೆ ಅವಲೋಕಿಸಿದಂತಾಯಿತು. ತ್ರಿವೇಣಿಯವರ ಇನ್ನಷ್ಟು ಕಾದಂಬರಿಗಳನ್ನು ಪರಿಚಯಿಸಿರೆಂದು ವಿನಂತಿ.

    ReplyDelete
  8. ಆತ್ಮೀಯ
    ಉತ್ತಮ ವಿಮರ್ಷೆ ತ್ರಿವೇಣಿ ಮನಃಶಾಸ್ತ್ರೀಯ ಕಾದ೦ಬರಿಗಳನ್ನು ಬರೆದ ಪ್ರಥಮ ಕಾದ೦ಬರಿಕಾರ್ತಿಯೇನೋ. ಆಕೆಯ ಸಣ್ನ ಕಥೆಗಳು ಎಲ್ಲವೂ ಸೈಕಾಲಜಿಗೆ ಸ೦ಬ೦ಧ ಪಟ್ಟ೦ಥ ಕಥೆಗಳು ನಿಜಕ್ಕೂ ಅದ್ಭುತ. ಇನ್ನೂ ಹೆಚ್ಚು ಕಾದ೦ಬರಿಗಳನ್ನು ವಿಮರ್ಷಿಸಿ. ಮತ್ತು ನಮಗೆ ಪರಿಚಯಿಸಿ.
    ನಿಮ್ಮವ
    ಹರಿ

    ReplyDelete
  9. ಕಾದಂಬರಿಗಳನ್ನ ಓದದಿದ್ದರೂ... ನನ್ನ ಮಾತುಗಳನ್ನು ಓದಿ ಮೆಚ್ಚಿದ ಪರಾಂಜಪೆ ಸಾರ್...

    ಪಾತ್ರಗಳ ವಿಮರ್ಶೆ ಮೆಚ್ಚಿರುವ ಸುನಾತ್ ಕಾಕಾ...

    ಓದಿ ಮರೆತು ಹೋಗಿದ್ದ ಕಥೆಯನ್ನು ಈ ಮೂಲಕ ನೆನಪಿಸಿಕೊಂಡ ಶಿವು ಸಾರ್...

    ಬಾಲ್ಯದಲ್ಲಿ ಓದಿದ್ದ ಕಾದಂಬರಿ ನೆನಪಾಯಿತು ಎಂದ ಸೀತಾರಾಮ್ ಸಾರ್...

    ತ್ರಿವೇಣಿಯವರ ಕೆಲವು ಪುಸ್ತಕಗಳನ್ನು ಈಗಾಗಲೇ ನಾನು ಪರಿಚಯಿಸಿದ್ದೇನೆ ಇಲ್ಲೇ... ನನ್ನ ’ಅಂತರಂಗದ ಮಾತುಗಳಲ್ಲೇ’. ಬಿಡುವಾದಾಗ ನೋಡಿ.. ವಿವರಣೆ ಸ್ವಾರಸ್ಯಕರವಾಗಿತ್ತು ಎಂದು ಮೆಚ್ಚಿದ ಸುಬ್ರಹ್ಮಣ್ಯ ಸಾರ್...

    ನಾ ಮಾಡಿದ ಸೂಕ್ಷ್ಮ ಪರಿಚಯದಿಂದ ಕಾದಂಬರಿ ಓದಬೇಕೆನ್ನಿಸಿದೆ ಎಂದ ಚಂದ್ರೂ...
    ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.....


    ಪ್ರಕಾಶ್ ಸಾರ್...
    ಸಾಮಾಜಿಕ ಕಾದಂಬರಿ ಓದುವಂತೆ ಪ್ರೇರೇಪಿಸಿತು ಈ ಪುಸ್ತಕ ಮತ್ತು ಮನ:ಶಾಸ್ತ್ರದಲ್ಲಿ ಆಸಕ್ತಿ ಮೂಡಿಸಿತು ಎಂದು ನಿಮ್ಮ ನೆನಪುಗಳನ್ನು ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ಹರೀ...
    ಒಂದು ವಿಧದಲ್ಲಿ ನಿಮ್ಮ ಮಾತು ನಿಜ. ತ್ರಿವೇಣಿಯವರ ಎಲ್ಲ ಕಥೆ, ಕಾದಂಬರಿಗಳಲ್ಲೂ ಮನ:ಶಾಸ್ತ್ರ ಪ್ರತ್ಯಕ್ಷ / ಪರೋಕ್ಷವಾಗಿ ಇದ್ದೇ ಇದೆ. ಅದು ಅವರಿಗೆ ತುಂಬಾ ಇಷ್ಟವಾದ ಮತ್ತು ಮನಸ್ಸಿಗೆ ಹತ್ತಿರವಾದ ವಿಚಾರವಾಗಿತ್ತೆಂದು ಓದಿದ್ದೆ.... ಅವರು ಮಾನಸಿಕವಾಗಿ ನೊಂದ ಮನಸ್ಸುಗಳ ನೋವನ್ನು ನವಿರಾಗಿ ಬಿಡಿಸಿಡುವ ರೀತಿ ನಿಜಕ್ಕೂ ಅದ್ಭುತ. ನನಗೂ ಮನ:ಶಾಸ್ತ್ರ ತುಂಬಾ ಆಸಕ್ತಿಕರ ವಿಷಯವಾದ್ದರಿಂದ... ಇಲ್ಲಿ ನನ್ನ ಭಾವನೆಗಳೂ ಕೂಡ ತುಂಬಾ ಮುಕ್ತವಾಗಿ ಹೊರಬಂದಿದೆ... ನೀವೂ ಓದಿ ತ್ರಿವೇಣಿ ಪುಸ್ತಕಗಳನ್ನು ಹರೀ... ನಿಮಗೂ ಮನ:ಶಾಸ್ತ್ರ ಆಸಕ್ತಿಕರ ವಿಷಯವಾದ್ದರಿಂದ, ನಿಮ್ಮ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಲು ನನಗೆ ಇಷ್ಟವಾಗತ್ತೆ.... :-) ಧನ್ಯವಾದಗಳು.....

    ReplyDelete
  10. ನಾನು ಈಗ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ ನನಗೆ ಈ ಕಾದಂಬರಿಯು ನನ್ನ ಮನಸಿನ ಮೇಲೆ ತುಂಬಾ ಪ್ರಭಾವ ಬೀರಿದೆ ನಾವು ಏಷ್ಟು ಸಣ್ಣ ವಿಷಯಗಳಿಗು ಹಾತೋರೆಸುತ್ತಿವಿ ಎಂದು ತಿಳಿದೇ.☺️☺️☺️

    ReplyDelete