ನಮ್ಮ ದೊಡ್ಡಕ್ಕ ಮತ್ತು ಭಾವ ಮೊದಲ ದೀಪಾವಳಿಗೆ ಬಂದಿದ್ದರು. ಭಾವನವರಿಗೆ ನಾಯಿ ಕಂಡರೆ ತುಂಬಾ ಭಯ. ನಮ್ಮನೆಯಲ್ಲೊಂದು ಅತೀ ತುಂಟ ನಾಯಿ ಇತ್ತು. ಭಾವ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿನಿಂದ ಬಂದರೆ, ನಮ್ಮ ನಾಯಿಗೆ ಹೆದರಿ ಶಿವಮೊಗ್ಗಾವರೆಗೂ ಹೋಗಿ, ಬೆಳಗಾಗಿ, ನಾವು ನಾಯಿಯನ್ನು ಕಟ್ಟಿಹಾಕಿದ ಮೇಲೆ ಭದ್ರಾವತಿಗೆ ಬರುತ್ತಿದ್ದರು...
ಭಾವನವರು ಸ್ವಲ್ಪ ಹೆದರಿಕೆಯ ಸ್ವಭಾವದವರು. ಆದ್ದರಿಂದ ದೀಪಾವಳಿಯ ಸಾಯಂಕಾಲ ನಾನು ನಮ್ಮಣ್ಣ ಇಬ್ಬರೂ ಪಟಾಕಿ ಹಚ್ಚಲು ಕರೆದರೂ ಬರದೆ ಕುಳಿತಿದ್ದರು. ಮನೆಯ ಮುಂದೆ ಮೆಟ್ಟಿಲುಗಳ ಮೇಲೆ ಅಕ್ಕ-ಭಾವ, ಅಪ್ಪ-ಅಮ್ಮ, ನನ್ನ ಎರಡನೆಯ ಅಕ್ಕ ಎಲ್ಲರೂ ಹೊಸ ಬಟ್ಟೆ ಧರಿಸಿ, ಸಂತೋಷವಾಗಿ ಮಾತನಾಡುತ್ತಾ ಕುಳಿತಿದ್ದರು. ನಾನು ನಮ್ಮಣ್ಣ ಇಬ್ಬರೂ ಪಟಾಕಿ ಹಚ್ಚುತ್ತಿದ್ದೆವು. ನಾವು ಚಿನಕುರಳಿ, ಕುದುರೆ ಪಟಾಕಿ, ಆನೆ ಪಟಾಕಿ, ಲಕ್ಷ್ಮೀ ಪಟಾಕಿ ಎಂದು ಎಲ್ಲವನ್ನೂ ಒಂದು ಸ್ಟೀಲ್ ತಟ್ಟೆಯಲ್ಲಿ ಜೋಡಿಸಿಟ್ಟುಕೊಂಡು, ಒಂದೊಂದಾಗಿ ಸಿಡಿಸುತ್ತಿದ್ದೆವು. ಟ್ರೇನಲ್ಲಿ ಒಂದು ಬೆಂಕಿ ಪೊಟ್ಟಣ ಕೂಡ ಇತ್ತು. ಮನೆಯ ಮುಂದುಗಡೆ ಮೆಟ್ಟಿಲುಗಳ ಮೇಲೆ ನನ್ನ ಎರಡನೆಯ ಅಕ್ಕ ಆ ಪಟಾಕಿ ಟ್ರೇ ಪಕ್ಕದಲ್ಲೇ ಕುಳಿತಿದ್ದಳು. ಹೊಸಾ ಸೀರೆ ಉಟ್ಟು, ಸಂತೋಷದಿಂದ ಕೂತಿದ್ದಳು ಅಕ್ಕ ಪಾಪ. ಅಣ್ಣ ಆನೆ ಪಟಾಕಿಗಳನ್ನು ಕೈಯಲ್ಲಿ ಹಚ್ಚಿ ಬಿಸಾಕುತ್ತಿದ್ದ. ಆನೆ ಪಟಾಕಿ ಕೈಯಲ್ಲಿ ಹಿಡಿದು, ಹಚ್ಚಿ ಎಸೆಯುತ್ತಿದ್ದ ನಮ್ಮಣ್ಣ.... ಇದ್ದಕ್ಕಿದ್ದಂತೆ ಜೋರಾಗಿ ಹತ್ತಿಕೊಂಡ ಪಟಾಕಿ ಕೈಯಲ್ಲೇ ಇರುವುದು ನೋಡಿ ಹೆದರಿ ಹಿಂದೆ-ಮುಂದೆ ನೋಡದೆ, ಯಾವುದೋ ದಿಕ್ಕಿಗೆ ಎಸೆದುಬಿಟ್ಟ. ಓಹ್.. ಅದು ಹೋಗಿ ಹಚ್ಚಲು ರೆಡಿಯಾಗಿ ಇಟ್ಟಿದ್ದ ಟ್ರೇನಲ್ಲಿ ಬಿದ್ದು, ಅದರಲ್ಲಿದ್ದ ಪಟಾಕಿಗಳು ಹತ್ತಿಕೊಂಡು, ಒಮ್ಮೆಲೇ ಸಿಡಿಯುತ್ತಾ ದಶ ದಿಕ್ಕುಗಳಿಗೂ ಹಾರಲಾರಂಭಿಸಿತ್ತು.. ಟ್ರೇ ಎಗರಿ, ಪಕ್ಕದಲ್ಲೇ ಕುಳಿತಿದ್ದ ನನ್ನ ಎರಡನೇ ಅಕ್ಕನ ಮಡಿಲಲ್ಲಿ ಬಿದ್ದು... ಪಟಾಕಿಗಳು ಸಿಡಿದಾಗ, ಅಮ್ಮಾ.... ಎಂಬ ಚೀರುವಿಕೆ ಕೇಳಿ, ಎಲ್ಲರೂ ಗಾಬರಿಯಿಂದ ಏನಾಯ್ತು.... ಏನಾಯ್ತು ಅನ್ನೋಷ್ಟರಲ್ಲಿ... ಸಿಕ್ಕಾಪಟ್ಟೆ ಜೋರಾಗಿ ಚೀರಾಡುತ್ತಿದ್ದ ಅಕ್ಕ, ಮಡಿಲಿನಿಂದ ಪಟಾಕಿಗಳನ್ನೂ, ಟ್ರೇಯನ್ನೂ ಒದರಿ, ಎಲ್ಲರನ್ನೂ ತಳ್ಳಿಕೊಂಡು, ಅಳುತ್ತಾ ಮನೆಯೊಳಗೆ ಓಡಿದ್ದಳು....
ಅವಳ ಹಿಂದೆಯೇ ಎಲ್ಲರೂ, ಆತಂಕದಿಂದ ಓಡಿದಾಗ, ಸದ್ಯ ದೇವರ ದಯೆಯಿಂದ, ಅವಳ ಕೈ-ಮೈಗೆ ತೀರಾ ಚಿಕ್ಕಪುಟ್ಟ ಕಿಡಿಗಳು ಸಿಡಿದಿದ್ದವು. ಆದರೆ ಮಡಿಲಲ್ಲಿ ಪಟಾಕಿ ಟ್ರೇ ಮೊಗುಚಿ ಬಿದ್ದಿದ್ದರಿಂದ, ಅವಳುಟ್ಟಿದ್ದ ಹೊಸಾ ಸೀರೆಯ ನೆರಿಗೆಗಳಲ್ಲಿ ಸಾಲಾಗಿ ಅನೇಕ ತೂತುಗಳಾಗಿದ್ದವು. ಸೀರೆ ಪೂರ್ತಿ ಬಿಡಿಸಿ ನೋಡಿದಾಗ ಉದ್ದಕ್ಕೂ ಚಿತ್ರ ವಿಚಿತ್ರವಾಗಿ ತೂತುಗಳಿಂದ ಒಂದು ಹೊಸಾ ವಿನ್ಯಾಸವನ್ನೇ ಮೂಡಿಸಿತ್ತು...
ಏನೂ ಹೆಚ್ಚು ಅನಾಹುತವಾಗಿಲ್ಲವೆಂಬುದು ಅರಿವಾದಾಗ... ಎಲ್ಲರ ಕೆಂಗಣ್ಣೂ, ಆಕ್ರೋಶವೂ ಪಾಪ ಬಡಪಾಯಿ ಅಣ್ಣನ ಕಡೆ ತಿರುಗಿತ್ತು... ಅವನು ನಂದೇನ್ ತಪ್ಪು... ನಾ ಬಿಸಾಕ್ದೆ ಇದ್ದಿದ್ರೆ... ಅದು ನನ್ನ ಕೈಯಲ್ಲೇ ಸಿಡೀತಿತ್ತು ಎಂದು ಪೆದ್ದು ಪೆದ್ದಾಗಿ ಹೇಳ್ತಿದ್ರೆ... ಪಾಪ ಯಾರೂ ಅವನಿಗೆ ಅಯ್ಯೋ ಪಾಪ ಕೂಡ ಹೇಳದೆ... ಅಕ್ಕನಿಗೆ ಸಮಾಧಾನ ಮಾಡುವುದರಲ್ಲೇ ಮಗ್ನರಾಗಿದ್ದರು. ಎಷ್ಟೋ ದಿನಗಳಾದರೂ ಅಕ್ಕನಿಗೆ ಆಸೆ ಪಟ್ಟು ಕೊಂಡಿದ್ದ ಹೊಸ ಸೀರೆ ಹಾಳಾಯಿತೆಂಬ ದು:ಖ ಕಮ್ಮಿ ಆಗಿರಲೇ ಇಲ್ಲ. ......