Saturday, November 6, 2010

ದೀಪಾವಳಿಯ ಒಂದು ನೆನಪು....ನಮ್ಮ ದೊಡ್ಡಕ್ಕ ಮತ್ತು ಭಾವ ಮೊದಲ ದೀಪಾವಳಿಗೆ ಬಂದಿದ್ದರು. ಭಾವನವರಿಗೆ ನಾಯಿ ಕಂಡರೆ ತುಂಬಾ ಭಯ. ನಮ್ಮನೆಯಲ್ಲೊಂದು ಅತೀ ತುಂಟ ನಾಯಿ ಇತ್ತು. ಭಾವ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿನಿಂದ ಬಂದರೆ, ನಮ್ಮ ನಾಯಿಗೆ ಹೆದರಿ ಶಿವಮೊಗ್ಗಾವರೆಗೂ ಹೋಗಿ, ಬೆಳಗಾಗಿ, ನಾವು ನಾಯಿಯನ್ನು ಕಟ್ಟಿಹಾಕಿದ ಮೇಲೆ ಭದ್ರಾವತಿಗೆ ಬರುತ್ತಿದ್ದರು...

ಭಾವನವರು ಸ್ವಲ್ಪ ಹೆದರಿಕೆಯ ಸ್ವಭಾವದವರು. ಆದ್ದರಿಂದ ದೀಪಾವಳಿಯ ಸಾಯಂಕಾಲ ನಾನು ನಮ್ಮಣ್ಣ ಇಬ್ಬರೂ ಪಟಾಕಿ ಹಚ್ಚಲು ಕರೆದರೂ ಬರದೆ ಕುಳಿತಿದ್ದರು. ಮನೆಯ ಮುಂದೆ ಮೆಟ್ಟಿಲುಗಳ ಮೇಲೆ ಅಕ್ಕ-ಭಾವ, ಅಪ್ಪ-ಅಮ್ಮ, ನನ್ನ ಎರಡನೆಯ ಅಕ್ಕ ಎಲ್ಲರೂ ಹೊಸ ಬಟ್ಟೆ ಧರಿಸಿ, ಸಂತೋಷವಾಗಿ ಮಾತನಾಡುತ್ತಾ ಕುಳಿತಿದ್ದರು. ನಾನು ನಮ್ಮಣ್ಣ ಇಬ್ಬರೂ ಪಟಾಕಿ ಹಚ್ಚುತ್ತಿದ್ದೆವು. ನಾವು ಚಿನಕುರಳಿ, ಕುದುರೆ ಪಟಾಕಿ, ಆನೆ ಪಟಾಕಿ, ಲಕ್ಷ್ಮೀ ಪಟಾಕಿ ಎಂದು ಎಲ್ಲವನ್ನೂ ಒಂದು ಸ್ಟೀಲ್ ತಟ್ಟೆಯಲ್ಲಿ ಜೋಡಿಸಿಟ್ಟುಕೊಂಡು, ಒಂದೊಂದಾಗಿ ಸಿಡಿಸುತ್ತಿದ್ದೆವು. ಟ್ರೇನಲ್ಲಿ ಒಂದು ಬೆಂಕಿ ಪೊಟ್ಟಣ ಕೂಡ ಇತ್ತು. ಮನೆಯ ಮುಂದುಗಡೆ ಮೆಟ್ಟಿಲುಗಳ ಮೇಲೆ ನನ್ನ ಎರಡನೆಯ ಅಕ್ಕ ಆ ಪಟಾಕಿ ಟ್ರೇ ಪಕ್ಕದಲ್ಲೇ ಕುಳಿತಿದ್ದಳು. ಹೊಸಾ ಸೀರೆ ಉಟ್ಟು, ಸಂತೋಷದಿಂದ ಕೂತಿದ್ದಳು ಅಕ್ಕ ಪಾಪ. ಅಣ್ಣ ಆನೆ ಪಟಾಕಿಗಳನ್ನು ಕೈಯಲ್ಲಿ ಹಚ್ಚಿ ಬಿಸಾಕುತ್ತಿದ್ದ. ಆನೆ ಪಟಾಕಿ ಕೈಯಲ್ಲಿ ಹಿಡಿದು, ಹಚ್ಚಿ ಎಸೆಯುತ್ತಿದ್ದ ನಮ್ಮಣ್ಣ.... ಇದ್ದಕ್ಕಿದ್ದಂತೆ ಜೋರಾಗಿ ಹತ್ತಿಕೊಂಡ ಪಟಾಕಿ ಕೈಯಲ್ಲೇ ಇರುವುದು ನೋಡಿ ಹೆದರಿ ಹಿಂದೆ-ಮುಂದೆ ನೋಡದೆ, ಯಾವುದೋ ದಿಕ್ಕಿಗೆ ಎಸೆದುಬಿಟ್ಟ. ಓಹ್.. ಅದು ಹೋಗಿ ಹಚ್ಚಲು ರೆಡಿಯಾಗಿ ಇಟ್ಟಿದ್ದ ಟ್ರೇನಲ್ಲಿ ಬಿದ್ದು, ಅದರಲ್ಲಿದ್ದ ಪಟಾಕಿಗಳು ಹತ್ತಿಕೊಂಡು, ಒಮ್ಮೆಲೇ ಸಿಡಿಯುತ್ತಾ ದಶ ದಿಕ್ಕುಗಳಿಗೂ ಹಾರಲಾರಂಭಿಸಿತ್ತು.. ಟ್ರೇ ಎಗರಿ, ಪಕ್ಕದಲ್ಲೇ ಕುಳಿತಿದ್ದ ನನ್ನ ಎರಡನೇ ಅಕ್ಕನ ಮಡಿಲಲ್ಲಿ ಬಿದ್ದು... ಪಟಾಕಿಗಳು ಸಿಡಿದಾಗ, ಅಮ್ಮಾ.... ಎಂಬ ಚೀರುವಿಕೆ ಕೇಳಿ, ಎಲ್ಲರೂ ಗಾಬರಿಯಿಂದ ಏನಾಯ್ತು.... ಏನಾಯ್ತು ಅನ್ನೋಷ್ಟರಲ್ಲಿ... ಸಿಕ್ಕಾಪಟ್ಟೆ ಜೋರಾಗಿ ಚೀರಾಡುತ್ತಿದ್ದ ಅಕ್ಕ, ಮಡಿಲಿನಿಂದ ಪಟಾಕಿಗಳನ್ನೂ, ಟ್ರೇಯನ್ನೂ ಒದರಿ, ಎಲ್ಲರನ್ನೂ ತಳ್ಳಿಕೊಂಡು, ಅಳುತ್ತಾ ಮನೆಯೊಳಗೆ ಓಡಿದ್ದಳು....

ಅವಳ ಹಿಂದೆಯೇ ಎಲ್ಲರೂ, ಆತಂಕದಿಂದ ಓಡಿದಾಗ, ಸದ್ಯ ದೇವರ ದಯೆಯಿಂದ, ಅವಳ ಕೈ-ಮೈಗೆ ತೀರಾ ಚಿಕ್ಕಪುಟ್ಟ ಕಿಡಿಗಳು ಸಿಡಿದಿದ್ದವು. ಆದರೆ ಮಡಿಲಲ್ಲಿ ಪಟಾಕಿ ಟ್ರೇ ಮೊಗುಚಿ ಬಿದ್ದಿದ್ದರಿಂದ, ಅವಳುಟ್ಟಿದ್ದ ಹೊಸಾ ಸೀರೆಯ ನೆರಿಗೆಗಳಲ್ಲಿ ಸಾಲಾಗಿ ಅನೇಕ ತೂತುಗಳಾಗಿದ್ದವು. ಸೀರೆ ಪೂರ್ತಿ ಬಿಡಿಸಿ ನೋಡಿದಾಗ ಉದ್ದಕ್ಕೂ ಚಿತ್ರ ವಿಚಿತ್ರವಾಗಿ ತೂತುಗಳಿಂದ ಒಂದು ಹೊಸಾ ವಿನ್ಯಾಸವನ್ನೇ ಮೂಡಿಸಿತ್ತು...

ಏನೂ ಹೆಚ್ಚು ಅನಾಹುತವಾಗಿಲ್ಲವೆಂಬುದು ಅರಿವಾದಾಗ... ಎಲ್ಲರ ಕೆಂಗಣ್ಣೂ, ಆಕ್ರೋಶವೂ ಪಾಪ ಬಡಪಾಯಿ ಅಣ್ಣನ ಕಡೆ ತಿರುಗಿತ್ತು... ಅವನು ನಂದೇನ್ ತಪ್ಪು... ನಾ ಬಿಸಾಕ್ದೆ ಇದ್ದಿದ್ರೆ... ಅದು ನನ್ನ ಕೈಯಲ್ಲೇ ಸಿಡೀತಿತ್ತು ಎಂದು ಪೆದ್ದು ಪೆದ್ದಾಗಿ ಹೇಳ್ತಿದ್ರೆ... ಪಾಪ ಯಾರೂ ಅವನಿಗೆ ಅಯ್ಯೋ ಪಾಪ ಕೂಡ ಹೇಳದೆ... ಅಕ್ಕನಿಗೆ ಸಮಾಧಾನ ಮಾಡುವುದರಲ್ಲೇ ಮಗ್ನರಾಗಿದ್ದರು. ಎಷ್ಟೋ ದಿನಗಳಾದರೂ ಅಕ್ಕನಿಗೆ ಆಸೆ ಪಟ್ಟು ಕೊಂಡಿದ್ದ ಹೊಸ ಸೀರೆ ಹಾಳಾಯಿತೆಂಬ ದು:ಖ ಕಮ್ಮಿ ಆಗಿರಲೇ ಇಲ್ಲ. ......

14 comments:

 1. ಶ್ಯಾಮಲ ಮೇಡಂ, ಪಟಾಕಿಯನ್ನು ಬಹಳ ಕಾಳಜಿಯಿಂದ ಬಳಸುವುದು ಉತ್ತಮ, ಚಿಕ್ಕವರೇ ಈ ಕೆಲಸಕ್ಕೆ ತೊಡಗುವುದರಿಂದಲೂ, ಕೆಲವು ಪಟಾಕಿಗಳು ಬಹಳಬೇಗ ಸಿದಿಯುವುದರಿಂದಲೂ ಆಗಾಗ ಅಪಘಾತಗಳನ್ನು ನೋಡುತ್ತೇವೆ. ವಾಸ್ತವವಾಗಿ ಹಿಂದೆ ದೀಪಾವಳಿಯಲ್ಲಿ ಪಟಾಕಿಗಳಿರಲಿಲ್ಲ. ಆಮೇಲೆ ಆನಂದಕ್ಕಾಗಿ ಅವುಗಳ ಸೃಷ್ಟಿಯಾಯಿತು. ಅವುಗಳಲ್ಲೇ ಹಲವು ತೆರನ ವೈಖರಿಗಳು ತಾಯಾರಿಸಲ್ಪಟ್ಟವು. ತಮ್ಮ ಬಾಲ್ಯದ ಘಟನೆಯನ್ನು ಚೆನ್ನಾಗಿ ಮೆಲುಕು ಹಾಕಿದ್ದೀರಿ, ತಮಗೆ ಮತ್ತೊಮ್ಮೆ ಹಾರ್ದಿಕ ಶುಭಾಶಯಗಳು

  ReplyDelete
 2. ಶ್ಯಾಮಲ ಮೇಡಮ್,

  ಸದ್ಯ ಸ್ವಲ್ಪದರಲ್ಲೇ ತಪ್ಪಿತಲ್ಲ ಅನಾಹುತ..ಆದರೂ ಬಾಲ್ಯದಲ್ಲಿ ಇಂಥ ತರಲೇ ಆಟಗಳು ತುಂಬಾ ಖುಷಿಕೊಡುತ್ತವೆ. ನಾನು ಹೀಗೆ ಕೈಯಲ್ಲಿ ಹಿಡಿದು ಎಸೆಯುತ್ತಿದ್ದೆ. ಮೇಲೆ ಸಿಡಿದಾಗ ಅದೇಂತದೋ ದೊಡ್ಡ ಸಾಧನೆ ಮಾಡಿದ ಭಾವನೆ. ದೊಡ್ಡವರಾಗುತ್ತಿದ್ದಂತೆ ಅದೆಲ್ಲ ಮಾಡುವುದು ತಪ್ಪು ಎನಿಸುತ್ತದೆ ಅಲ್ಲವೇ...ಬಾಲ್ಯದ ಘಟನೆಗಳನ್ನು ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

  ReplyDelete
 3. ಶಾಮಲ ಅವರೆ ದೀಪಾವಳಿಯ ನಿಮ್ಮ ನೆನಪು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.ಕೊನೆಗೆ ನಿಮ್ಮ ಅಣ್ಣ ನಿಮ್ಮ ಅಕ್ಕನಿಗೆ
  ಹೊಸ ಸೀರೆ ತಂದುಕೊಟ್ಟಿರಲು ಸಾಕು..ಅಲ್ಲವೆ

  ReplyDelete
 4. ಶ್ಯಾಮಲಾ,
  ಎಂತಹ ಆಘಾತಕಾರಿ ಅನುಭವ! ದೇವರ ದಯೆಯಿಂದ ಹೆಚ್ಚಿನ ಅವಘಡವಾಗಲಿಲ್ಲ ಎನ್ನಬೇಕು.

  ReplyDelete
 5. ಶ್ಯಾಮಲಾ,
  ದೀಪಾವಳಿಯಲ್ಲಿನ ಪಟಾಕಿ ಸಿಡಿತದ ಅನುಭವವನ್ನು ಹಂಚಿಕೊಂಡಿದ್ದೀರಿ. ಅಷ್ಟೇನೂ ಆಘಾತವಾಗದಿದ್ದುದು ಸಂತಸದ ವಿಚಾರ. ಚಿಕ್ಕವರಿದ್ದಾಗ ಹೀಗೆಲ್ಲ ಪಟಾಕಿ ಕೈಯಲ್ಲಿ ಹಿಡಿದು ಹಚ್ಚಿಸಿ ಎಸೆಯುವುದು, ಅದರ ಖುಷಿಯ ಜೊತೆಗೆ ಇಂತಹ ಅನಾಹುತಗಳೂ ಆಗುತ್ತಿದ್ದವು. ಕೆಲವೊಮ್ಮೆ ನಮ್ಮ ಕೈಯಲ್ಲಿಯೇ ಸಿಡಿದದ್ದಿದೆ. ಇವೆಲ್ಲ ನೆನಪಾದವು.
  ಧನ್ಯವಾದಗಳು.

  ReplyDelete
 6. ಶ್ಯಾಮಲಕ್ಕಾ,

  ನನಗೂ ಇಂತಹ ಕಹಿ ಅನುಭವವಾಗಿದೆ. ಹಲವು ವರುಷಗಳ ಹಿಂದೆ ನನ್ನ ತಂದೆಯವರ ಕೈಕೂಡ ಹೀಗೇ ಸುಟ್ಟುಹೋಗಿತ್ತು. ಆಗಿನಿಂದ ನನಗೆ ಈ ಪಟಾಕೆ ಅಂದರೆ ಆಗದು. (ಮೊದಲೂ ಅಷ್ಟಕಷ್ಟೇ ಅನ್ನಿ :)) ಈ ಶಬ್ದಮಾಲಿನ್ಯವನ್ನುಂಟು ಮಾಡುವ ಢಂ ಢಂ ಪಟಾಕಿಗಳೆಂದರೆ ವಿಪರೀತ ಸಿಟ್ಟು. ಕೇವಲ ದುಡ್ಡನ್ನೇ ಹಿಡಿ ಹಿಡಿಯಾಗಿ ಸುಟ್ಟಂತೆ ಅನುಭವವಾಗುತ್ತದೆ ನನಗೆ. ಹಾಗಾಗಿ ನಮ್ಮಲ್ಲಿ ಬರೀ ಸುರ್ ಸುರ್ ಕಡ್ಡಿಯನ್ನಷ್ಟೇ ತರುತ್ತೇವೆ ಅದೂ ಮಗಳಿಗಾಗಿ :)

  ReplyDelete
 7. ಶ್ಯಾಮಲಾರವರೆ..

  ಪಟಾಕಿ ಮೋಜಿನ ಸಂಗತಿಯಾದರೂ..
  ಅದು ಎಷ್ಟೊಂದು ಅವಾಂತರಗಳನ್ನು ಸೃಷ್ಟಿಸುತ್ತದೆ ಅಲ್ಲವೆ?

  ನಿಮ್ಮ ಅನುಭವ ಓದಿ ನನ್ನ ಬಾಲ್ಯದ ನೆನಪುಗಳು ಮತ್ತೆ ನೆನಪಾದವು...

  ಧನ್ಯವಾದಗಳು...

  ReplyDelete
 8. ಭಟ್ ಸಾರ್..
  ನಿಮ್ಮ ಮಾತು ನಿಜ. ಇದು ನಾನಿನ್ನೂ ೮ನೇ ತರಗತಿಯಲ್ಲಿದ್ದಾಗ ನಡೆದ ಘಟನೆ. ಅಪ್ಪ ಯಾವತ್ತೂ ನಮಗೆ ಸಿಡಿಯುವ ಪಟಾಕಿಗಳನ್ನು ಕೊಡಿಸುತ್ತಿರಲಿಲ್ಲ. ಆ ಸಾರಿ ಅದು ಹೇಗೆ ಸ್ವಲ್ಪ ಕೊಡಿಸಿದ್ದರೋ ನೆನಪಿಲ್ಲ. ಅದೂ ಹೀಗೆ ಸಿಡಿದು ಖಾಲಿಯಾಗಿತ್ತು. ಪಾಪ ಅಣ್ಣ.. ಕೊನೆಗೂ ಆಸೆ ಆಸೆಯಾಗೇ ಉಳಿಯಿತು. ಧನ್ಯವಾದಗಳು...

  ಶಿವು ಸಾರ್...
  ಈ ಸಾರಿ ದೀಪಾವಳಿಯಲ್ಲಿ ಯಡಿಯೂರು ಕೆರೆ ಎದುರುಗಡೆಯ ಚಿಕ್ಕ ಮೈದಾನದಲ್ಲಿ ಹುಡುಗರು ದೊಡ್ಡ ದೊಡ್ಡ ಪಟಾಕಿಗಳನ್ನು ಹಚ್ಚಿ ಎಸೆಯುತ್ತಿದ್ದರು. ಅವುಗಳು ರಸ್ತೆಯಲ್ಲಿ ಹೋಗಿ ಬೀಳುತ್ತಿದ್ದವು. ಒಂದು ಕಾರಿನ ಮೇಲೆ ಬೀಳುವುದು ಒಂದು ಗೆರೆಯ ಅಂತರದಲ್ಲಿ ತಪ್ಪಿತು. ಇನ್ನೊಂದು ಹೋಗುತ್ತಿದ್ದ ಬಸ್ಸಿನ ಗಾಜಿನ ಮುಂದೇ ಸಿಡಿಯಿತು. ನೋಡಿ ನಿಜಕ್ಕೂ ತುಂಬಾ ಆತಂಕವಾಯಿತು. ಮಾಡಿದ್ದೆಲ್ಲಾ ದೊಡ್ಡ ದೊಡ್ಡ ಹುಡುಗರೇ... ಇವರ್ಯಾವಾಗ ತಿಳಿದುಕೊಳ್ಳುವುದು ಅಲ್ವಾ ಸಾರ್...ಧನ್ಯವಾದಗಳು.

  ಉಮೇಶ್ ಸಾರ್
  ನಮ್ಮಣ್ಣ ಆಗಿನ್ನೂ ಪಿಯುಸಿ ಕಲಿಯುತ್ತಿದ್ದ. ಆಮೇಲೆ ಅದಕ್ಕೆ ಬದಲೆಂದು ಸೀರೆ ಕೊಡಿಸಿದನೋ ಇಲ್ಲವೋ ನೆನಪಿಲ್ಲ ಸಾರ್... :-) ಧನ್ಯವಾದಗಳು

  ಕಾಕಾ..
  ಹೌದು ದೇವರ ದಯವೇ ಸರಿ ಹೆಚ್ಚಿನ ಅವಗಡವಾಗಲಿಲ್ಲ. ಆದರೆ ಹಬ್ಬದ ಸಂತೋಷ ಸ್ವಲ್ಪ ಮಟ್ಟಿಗೆ ಕಮ್ಮಿಯಾಗಿದ್ದಂತೂ ನಿಜ. ಧನ್ಯವಾದಗಳು ಕಾಕಾ.

  ReplyDelete
 9. ಚಂದ್ರೂ...
  ನನ್ನ ಬರಹ ಓದಿ ನಿಮಗೂ ನಿಮ್ಮ ತುಂಟಾಟ ನೆನಪಾಯಿತೇ ತಮ್ಮಾ..? :-) ಅದೊಂದು ಸಮಯ ಅಲ್ವಾ? ಜವಾಬ್ದಾರಿ ಅರ್ಥವಾಗದ, ಭಯವಿಲ್ಲದ ಮುಕ್ತ ದಿನಗಳು. ಧನ್ಯವಾದಗಳು..

  ತಂಗೀ ತೇಜಸ್ವಿನೀ...
  ನನಗೂ ಶಬ್ದ ಮಾಲಿನ್ಯ ಇಷ್ಟವಾಗೋಲ್ಲ. ಇದು ನಡೆದದ್ದು ನಾ ಚಿಕ್ಕವಳಿದ್ದಾಗ. ಈಗ ನಿಜ್ಜ ನಂಗೆ ಈ ದೀಪಾವಳಿಯ ದಿನಗಳು ಕಳೆದರೆ ಸಾಕೆಂಬಂತೆ ಆಗುತ್ತದೆ, ಶಬ್ದ ಕೇಳಲಾಗದೆ.. ಏನು ಮಾಡುವುದು ನಮಗೆ ಬೇಡವೆಂದರೂ, ಬೇರೆಯವರು ಪಟಾಕಿ ಸಿಡಿಸುವುದನ್ನು, ಶಬ್ದ ಮಾಡುವುದನ್ನೂ ಸಹಿಸಿಕೊಳ್ಳಲೇಬೇಕಲ್ಲ.. :-)
  ಧನ್ಯವಾದಗಳು..

  ಪ್ರಕಾಶ್ ಸಾರ್
  Buzzನಲ್ಲೇ ತುಂಬಾ busy ಆಗಿದ್ದೆ ಅಂದಿದೀರಿ...!! :-) ತುಂಬಾ ದಿನಗಳ ನಂತರ ಬಂದಿರಿ. ಹಬ್ಬ ಚೆನ್ನಾಗಾಯಿತಾ? ನನ್ನ ನೆನಪು ನಿಮಗೆ ಬಾಲ್ಯ ನೆನಪಿಸಿತೆಂದಿದ್ದೀರಿ, ಸಂತೋಷ ಸಾರ್. ಧನ್ಯವಾದಗಳು...

  ReplyDelete
 10. ಮೇಡಂ ಚೆನ್ನಾಗಿದೆ ನಿಮ್ಮ ಪ್ರಯತ್ನ. ಏನಾದರೂ ಹೊಸತನ್ನು ಕೋಡಿ.
  ಧನ್ಯವಾದಗಳು.

  ReplyDelete
 11. pataaki bagge tamma anubhava heluttaa echcharike sandeshavannu neediddiraa..

  ReplyDelete
 12. ಗುಬ್ಬಚ್ಚಿ ಸತೀಶ್, ಸೀತಾರಾಮ ಸಾರ್ ಮತ್ತು ಅಂಜನಾ ಅವರಿಗೆ ಧನ್ಯವಾದಗಳು...

  ReplyDelete
 13. Thanks for u r suggestions. I will follow it thank u very much.

  ReplyDelete