Wednesday, October 27, 2010

ಪುಸ್ತಕ ಪರಿಚಯ - ಹಣ್ಣೆಲೆ ಚಿಗುರಿದಾಗ....

ತ್ರಿವೇಣಿಯವರ ಹಣ್ಣೆಲೆ ಚಿಗುರಿದಾಗ ಒಂದು ಸಾಮಾಜಿಕ, ಸಾಂಸಾರಿಕ ಕಾದಂಬರಿ. ಇಡೀ ಕಾದಂಬರಿ ಒಂದು ಸಂಸಾರದಲ್ಲಿ ನಡೆಯುವ ಘಟನೆಗಳ ಮತ್ತು ಸಂಸಾರದ ಸದಸ್ಯರ ಸ್ವಭಾವದ ಸುತ್ತಲೂ ಹೆಣೆಯಲ್ಪಟ್ಟಿದೆ.

ಮನೆಯ ಯಜಮಾನ “ರಾಯರು” ತಮ್ಮಮರೆಗುಳಿತನದಿಂದಾಗಿ ಯಾವಾಗಲೂ ಮನೆಯವರಿಂದ ಅಪಹಾಸ್ಯಕ್ಕೊಳಗಾಗುತ್ತಿರುತ್ತಾರೆ. ಇಡೀ ಕಥೆಯಲ್ಲಿ ಈ ರಾಯರ ಪಾತ್ರ ತುಂಬಾ ಮುಖ್ಯ ಕೊಂಡಿಯಾಗಿದೆ. ಬೇರೆಲ್ಲಾ ಪಾತ್ರಗಳಿಗೂ ಮತ್ತು ಅವರ ಮಗುವಿನಂತಹ ಮೊಂಡು ಸ್ವಭಾವದಿಂದಲೂ, ಮರೆವಿನಿಂದಲೂ ನಡೆಯುವ ಘಟನೆಗಳು ಓದುಗರನ್ನು ನಗೆಯ ಕಡಲಲ್ಲಿ ತೇಲಿಸುತ್ತದೆ. ರಾಯರ ವ್ಯಕ್ತಿತ್ವದ ಜೊತೆ ಇಷ್ಟು ಹಾಸ್ಯ ಬೆರೆತಿದ್ದರೂ ಕೂಡ ಅವರು ತುಂಬಾ ತೂಕದ, ಅಪರೂಪದ ವ್ಯಕ್ತಿಯಾಗಿ ನಮ್ಮ ನೆನಪಲ್ಲಿ ಉಳಿಯುತ್ತಾರೆ. ನಿವೃತ್ತಿ ಹೊಂದಿ ಮನೆಯಲ್ಲಿರುವ ರಾಯರು ಎಲ್ಲರ ಗಮನ ತಮ್ಮ ಕಡೆ ಸೆಳೆಯುವ ಪ್ರಯತ್ನ ಪುಟ್ಟ ಮಗುವಿನಂತೆ ಯಾವಾಗಲೂ ಅವರು ಮಾಡುತ್ತಲೇ ಇರುತ್ತಾರೆ. ಪ್ರತಿಯೊಂದಕ್ಕೂ ಲೆಕ್ಕ ಹಾಕುತ್ತಾ ತಮ್ಮ ಜಿಹ್ವಾ ಚಾಪಲ್ಯವನ್ನು ಹಿಡಿತದಲ್ಲಿಡಲಾರದೆ, ಬೇಕು ಬೇಕೆಂದ ತಿಂಡಿಗಳನ್ನೂ, ಅಡುಗೆಯನ್ನೂ ಮಾಡಿಕೊಡುವಂತೆ ತಮ್ಮ ಪತ್ನಿ ರಾಜಮ್ಮನನ್ನು ಗೋಳಾಡಿಸುತ್ತಾ, ಸೊಸೆಯಂದಿರ ಹಾಸ್ಯಕ್ಕೂ ಗುರಿಯಾಗುತ್ತಿರುತ್ತಾರೆ ರಾಯರು. ಎಲೆ ಆದಿಕೆ ಹಾಕಿಕೊಳ್ಳಲು ಶುರು ಮಾಡಿದರೆಂದರೆ, ಮನೆ ಮಂದಿಗೆಲ್ಲಾ ಸಂತಸದ ಸಮಯ ಏಕೆಂದರೆ ಪತ್ನಿ ರಾಜಮ್ಮನವರು ಎಲೆ ಮಡಿಸಿ ಕೊಡುತ್ತಿದ್ದರೆ, ಒಂದಾದ ಮೇಲೊಂದರಂತೆ ಲೆಕ್ಕವಿಲ್ಲದೆ ಮೆಲ್ಲುತ್ತಾ ಕುಳಿತಿರುತ್ತಾರೆ. ಆಗ ಯಾವುದೇ ಕಾರಣಕ್ಕೂ ಸಿಟ್ಟು ಮಾಡಿಕೊಳ್ಳದೇ ತಾಂಬೂಲದ ಸ್ವಾದವನ್ನು ಮೆಲ್ಲುತ್ತಾ, ಅಮಲಿನಲ್ಲಿ ಮೈ ಮರೆತಿರುತ್ತಾರೆ.

ತಮಗೆ ಸಕ್ಕರೆ ಖಾಯಿಲೆ ಇದೆಯೆಂದು ಗೊತ್ತಾದ ದಿನ, ಆಕಾಶ ಭೂಮಿ ಒಂದು ಮಾಡುತ್ತಾ... ಮುಸುಕೆಳೆದು ಮಲಗಿ ಬಿಡುತ್ತಾರೆ ರಾಯರು. ವೈದ್ಯನಾದ ಮಗ ಮಾಧವ ತಂದೆಯ ಖಾಯಿಲೆ ಕೇಳಿ ನಕ್ಕು ಬಿಟ್ಟಾಗ, ರೇಗುತ್ತಾ “ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತ್ತದೆ” ಎನ್ನುತ್ತಾರೆ. “ಹಣ್ಣೆಲೆಗಳು ಚಿಗುರತೊಡಗಿದರೆ ಚಿಗುರೆಲೆಗಳ ಗತಿಯೇನು” ಎಂದ ಮಗನ ಮೇಲೆ ಉರಿದು ಬೀಳುತ್ತಾರೆ. ರಾಯರು ಸಾವಿಗೆ ಅತೀವ ಹೆದರುತ್ತಿದ್ದರಾದ್ದರಿಂದ ಚಿಕ್ಕ ಪುಟ್ಟ ನೆಗಡಿಯಂತಹ ಖಾಯಿಲೆಗೂ ಮನೆಯವರೆಲ್ಲರ ಕೈ ಕಾಲು ಕೆಡಿಸಿ ಬಿಡುತ್ತಿರುತ್ತಾರೆ.

ಒಬ್ಬಳೇ ಮಗಳು ಮಾಲತಿಗೆ ಗಂಡು ನೋಡಲು ಮೈಸೂರಿಗೆ ರೈಲಿನಲ್ಲಿ ಹೊರಟು, ನಿದ್ದೆ ಮಾತ್ರೆ ತಗೊಂಡು ಎಚ್ಚರವೇ ಆಗದೆ, ಮತ್ತೆ ಅದೇ ರೈಲಿನಲ್ಲಿ ಬೆಂಗಳೂರಿಗೆ ವಾಪಸ್ಸು ಬಂದಿರುತ್ತಾರೆ. ಹೀಗೆ ಹಾಸ್ಯ ಘಟನೆಗಳ ಸರಮಾಲೆಯ ಜೊತೆ ಜೊತೆಗೇ ರಾಯರ ವ್ಯಕ್ತಿತ್ವ, ಗೌರವಯುತವಾಗಿ ಚಿತ್ರಿಸಲ್ಪಟ್ಟಿದೆ. ನಮ್ಮದೇ ಮನೆಯ ಹಿರಿಯರೊಬ್ಬರ ಗಲಾಟೆಗಳೇನೋ ಎನ್ನುವಷ್ಟು ಆತ್ಮೀಯವಾಗಿ ಬಿಡತ್ವೆ ಘಟನೆಗಳೂ, ರಾಯರ ಸಂಸಾರವೂ...

ರಾಯರಿಗೆ ೫ ಜನ ಗಂಡು ಮಕ್ಕಳು ಮತ್ತು ಒಬ್ಬಳೇ ಮಗಳು ಮಾಲತಿ. ಹೆಚ್ಚು ಓದಿದರೆ ನವೆಯುತ್ತಾಳೆಂದು SSLCಗೇ ಓದು ಬಿಡಿಸಿ ಬಿಡುತ್ತಾರೆ. ೫ ಜನ ಅಣ್ಣಂದಿರ ಮುದ್ದಿನ ತಂಗಿಯಾಗಿ, ಮಗುವಿನಂತೆಯೇ ಒಂದೂ ಕಷ್ಟ ತಿಳಿಯದೆ ಬೆಳೆಯುತ್ತಾಳೆ ಮಾಲತಿ. ಅದ್ಧೂರಿಯಾಗಿ.. ಖರ್ಚು ಹೆಚ್ಚಾಯಿತೆಂದು ಕೂಗಾಡುತ್ತಲೇ ಮಗಳ ಮದುವೆ ಮಾಡುತ್ತಾರೆ. ರಾಯರ ಪತ್ನಿ ಮಗಳ ಮದುವೆಯಾಗಲೆಂದೇ ಕಾದಿದ್ದರೇನೋ ಎಂಬಂತೆ, ಯಾರಿಗೂ ಯಾವ ಸುಳಿವೂ ಕೊಡದೇ, ಇದ್ದಕ್ಕಿದ್ದಂತೆ ಇಲ್ಲಿಯ ಕಥೆ ಮುಗಿಸಿ ಹೊರಟು ಬಿಡುತ್ತಾರೆ. ಮಾಲತಿ ಗಂಡನ ಮನೆಗೆ ಹೋಗುವ ಮೊದಲೇ.. ಮದುವೆಯಾಗಿ ೩ ತಿಂಗಳಿಗೇ ವಿಧವೆಯಾಗಿ ತಮ್ಮಲ್ಲೇ ಉಳಿದಾಗ ರಾಯರು ಮಾನಸಿಕವಾಗಿ ತುಂಬಾ ಬಳಲುತ್ತಾರೆ. ಆದರೆ ಕೆಲವೇ ದಿನಗಳಲ್ಲಿ ಮಗಳ ಬದುಕಿನ ದುರಂತ.. ಪತ್ನಿಯ ವಿಯೋಗ ಎಲ್ಲವನ್ನೂ ಎದುರಿಸಿ, ನಮ್ಮ ರಾಯರು ಮತ್ತೆ ತಮ್ಮ ತನವನ್ನು ಮೆರೆಯುತ್ತಾರೆ.

ಹಳೆಯ ಕಾಲದ ರಾಯರು ವಿಧವೆ ಮಗಳನ್ನು ಕಾಲೇಜಿಗೆ ಕಳುಹಿಸಲು ಒಪ್ಪೋಲ್ಲ ಆದರೆ ಗಂಡು ಮಕ್ಕಳ ಬಲವಂತದಿಂದಿ ಮಾಲತಿ ವಿದ್ಯಾಭ್ಯಾಸ ಮುಂದುವರೆಸುತ್ತಾಳೆ. ಮಗಳು ಸಂತೋಷವಾಗಿರುವುದನ್ನು ಕಂಡು ರಾಯರೂ ಸಂತಸ ಪಡುತ್ತಾರೆ. ಆದರೆ ತಮ್ಮ ಸೊಸೆಯ ಚಿಕ್ಕಮ್ಮನ ಮಗ, ವಿಧುರ ಹಾಗೂ ೩-೪ ವರ್ಷದ ಮಗನ ತಂದೆ ಪ್ರಸಾದ್ ತಮ್ಮ ಮಗಳನ್ನು ಮದುವೆಯಾಗ ಬಯಸಿದಾಗ ಮಾತ್ರ ನಿಜಕ್ಕೂ ತುಂಬಾ ಕೆರಳುತ್ತಾರೆ. ಕೊನೆಗೂ ಇಲ್ಲೂ ಅವರು ತಮ್ಮ ನಿಲುವಿನಲ್ಲಿ ಬದಲಾವಣೆ ತಂದುಕೊಂಡೇ ಬಿಡುತ್ತಾರೆ. ಮದುವೆ ನಡೆಯುತ್ತದೆ.

ಕಥೆಯ climax ರಾಯರ ವ್ಯಕ್ತಿತ್ವದ high light and ultimatum. ಜ್ವರ ಬಂದು ಮಲಗಿ, ತಾವಿನ್ನು ಸತ್ತೇ ಹೋಗಬಹುದೆಂದು ಹೆದರಿ, ಇಷ್ಟವಿಲ್ಲದಿದ್ದರೂ ತಿಜೋರಿ ಬೀಗದ ಕೈ ದೊಡ್ಡ ಮಗನ ಕೈಗೆ ಕೊಡುವ ರಾಯರು... ಜ್ವರ ಬಿಟ್ಟ ತಕ್ಷಣ, ಮಗನ ಮುಂದೆ ಕೈ ಚಾಚಿ ತಿಜೋರಿ ಬೀಗದ ಕೈ ವಾಪಸ್ಸು ಪಡೆಯುತ್ತಾರೆ...... :-)

ಪುಸ್ತಕ ಓದಿ ಮುಗಿಸಿದಾಗ, ಒಂದು ತಿಳಿನಗೆ ನಮ್ಮ ಮುಖದಲ್ಲಿರುತ್ತದೆ.... ರಾಯರ ಪಾತ್ರ ಹಾಸ್ಯಮಯವಾಗಿ ರೂಪಿತವಾಗಿದ್ದರೂ, ತುಂಬಾ ಭಾವನಾತ್ಮಕವಾಗಿ, ಆ ವಯಸ್ಸಿನವರ ಮನಸ್ಥಿತಿಯನ್ನು ಲೇಖಕಿ ಸರಳವಾಗಿ, ಸೂಚ್ಯವಾಗಿ ಚಿತ್ರಿಸಿದ್ದಾರೆ. ಬಹು ಕಾಲ ಮನದಲ್ಲುಳಿಯ ಬಹುದಾದ ಕಥೆ.

ಚಲನ ಚಿತ್ರ ಕೂಡ ಬಂದಿರುವುದರಿಂದ ನಮಗೆ ಎಲ್ಲಾ ಪಾತ್ರಗಳೂ ಮನದಲ್ಲಿ ಅಚ್ಚೊತ್ತಿ ಬಿಡುತ್ತವೆ..........17 comments:

 1. This is such a coincidence.... I just finished reading this novel 1 week ago... the charaters are still on my mind!! :) beautifully Written novel.. and your introduction is very nice.. :)

  ReplyDelete
 2. ‘ಹಣ್ಣೆಲೆ ಚಿಗುರಿದಾಗ’ಕಾದಂಬರಿಯ ತಿರುಳನ್ನು ಸ್ವಾರಸ್ಯಕರವಾಗಿ ಬಿಡಿಸಿ ಇಟ್ಟಿದ್ದೀರಿ. ಈ ಕಾದಂಬರಿ ಓದುತ್ತಿರುವಾಗ ಹಾಗು ಓದಿ ಮುಗಿಸಿದಾಗ ತಿಳಿನಗುವಿನಲ್ಲಿ ತೇಲುವದು ನಿಜ. ಈ ಕಾದಂಬರಿಯ ಚಲನಚಿತ್ರವನ್ನೂ ಸಹ ನೋಡಿದ್ದೇನೆ.ಸೊಗಸಾದ ಸದಭಿರುಚಿಯ ಚಲನಚಿತ್ರ.

  ReplyDelete
 3. ಅಕ್ಕ,

  ನಾನು ಈ ಕಥೆಯ ಚಲನ ಚಿತ್ರ ನೋಡಿರುವೆ. ಆಗಿನ ಕಾಲಕ್ಕೆ ಈ ರೀತಿಯ ಸಾಮಾಜಿಕ ಕ್ರಾಂತಿಯುಳ್ಳ ಕಥೆಯನ್ನು ಹಣೆದಿರುವ ತ್ರಿವೇಣಿಯವರು ನಿಜಕ್ಕೂ ಅಭಿನಂದನೀಯರು.

  ReplyDelete
 4. ಶಾಂತಲಾ ಮೇಡಮ್ ಕಾದಂಬರಿ ಹಾಗೂ ಚಿತ್ರ ಎರಡೂ ಒದಿದ್ದೆ/ನೋಡಿದ್ದೆ
  ಕಾದಂಬರಿನೇ ಛಂದ ಅನಿಸಿತ್ತು,

  ReplyDelete
 5. ಹೌದು, ತ್ರಿವೇಣಿಯವರ ’ಹಣ್ಣೆಲೆ ಚಿಗುರಿದಾಗ’ ಕಾದಂಬರಿಯನ್ನು ನಾನು ಓದಿದ್ದೇನೆ. ಕಾದಂಬರಿಯ ಪಾತ್ರಗಳು ಮನಸ್ಸಲ್ಲಿ ಅಚ್ಚೊತ್ತುವಂತೆ ಬರೆಯುವುದರಲ್ಲಿ ತ್ರಿವೇಣಿಯವರನ್ನು ಮೀರಿಸುವವರಿಲ್ಲ.
  ಚಂದದ ಪುಸ್ತಕದ ಪರಿಚಯಕ್ಕೆ ಧನ್ಯವಾದಗಳು.

  ReplyDelete
 6. ತ್ರಿವೇಣಿಯವರ "ಹಣ್ಣೆಲೆ ಚಿಗುರಿದಾಗ" ಕೃತಿಯ ಬಗ್ಗೆ ನೀವು ಬಹಳ ಚೆನ್ನಾಗಿ ಬರೆದಿದ್ದೀರಿ. ನಿಜ ಹೇಳಬೇಕೆ೦ದರೆ ನಾನು ಕನ್ನಡ ಪುಸ್ತಕ ಗಳನ್ನು ಓದಿದ್ದು ತು೦ಬ ಕಡಿಮೆ.

  ReplyDelete
 7. ಚಂದದ ವಿವರಣೆ ಕೊಟ್ಟಿದ್ದೀರಿ. ತ್ರಿವೇಣಿಯವರ ಕಥೆಗಳು ಆಗಿನ ಸಾಮಾಜಿಕ ಸ್ಥಿತಿಯನ್ನು ವರ್ಣಿಸುತ್ತದೆ. ಅವರ ಬೆಕ್ಕಿನ ಕಣ್ಣು, ಶರಪಂಜರದಂತಹ ಮನೋವೈಜ್ನಾನಿಕ ಕಥೆಗಳು ಈಗಲೂ ಪ್ರಸ್ತುತ

  ReplyDelete
 8. ಭಾವನಾ ಅವರೇ...

  ನಿಜವಾಗಿಯೂ ಕಾಕತಾಳೀಯವೇ ಇರಬೇಕು... ನೀವು ಓದಿನ ಪುಸ್ತಕವನ್ನೇ ನಾನೂ ಪರಿಚಯಿಸಿರುವುದು. ಪುಸ್ತಕದ ಬಗ್ಗೆ ಬರೆದ ನನ್ನ ಅಂತರಂಗದ ಮಾತುಗಳು ನಿಮಗಿಷ್ಟವಾಗಿದ್ದು, ನನಗೂ ಸಂತೋಷವಾಯಿತು. ಧನ್ಯವಾದಗಳು..

  ಕಾಕಾ...

  ಈ ಕಾದಂಬರಿ ಓದಿನ ಎಲ್ಲರ ಮುಖದಲ್ಲೂ ತಿಳಿನಗೆ ತೇಲುತ್ತದೆಂಬ ಮಾತನ್ನು ನೀವೂ ಒಪ್ಪಿದ್ದೀರಿ.. ನಿಜಕ್ಕೂ ಒಳ್ಳೆಯ ಸದಭಿರುಚಿಯ ಕಾದಂಬರಿ ಹಾಗೂ ಚಲನ ಚಿತ್ರ. ಧನ್ಯವಾದಗಳು ಕಾಕಾ.

  ತೇಜಸ್ವಿನೀ..

  ನೀವು ಕಾದಂಬರಿ ಓದಿಲ್ಲವೇ? ಒಮ್ಮೆ ಓದಿ ತಂಗೀ.. ಸಿನೆಮಾಗಿಂತ ಕಥೆ ಓದುತ್ತಾ... ರಾಯರ ಎಲ್ಲಾ ವೈಚಿತ್ರ್ಯಗಳನ್ನೂ ಊಹಿಸಿಕೊಳ್ಳುವುದು ನನಗೆ ಮನಸ್ಸನ್ನು ಅತ್ಯಂತ ಹಗುರ ಮಾಡಿದ ವಿಚಾರ. ಎಲ್ಲಾ ಮರೆತು ಮನತುಂಬಿ ನಗಬಹುದು... ಹೌದು ತಂಗೀ... ಅಂದಿನ ದಿನಗಳಲ್ಲೇ ತ್ರಿವೇಣಿಯವರು ಸ್ತ್ರೀಯ ಸಾಮಾಜಿಕ ಸಮಸ್ಯೆಗಳನ್ನು ಕುರಿತು ಧೈರ್ಯವಾಗಿ ಬರೆಯುತ್ತಿದ್ದರು. ನನಗೆ ಅದೇ ಇಷ್ಟವಾಗಿದ್ದು.. ಧನ್ಯವಾದಗಳು.

  ReplyDelete
 9. ಉಮೇಶ್ ಸಾರ್

  ನಂಗೂ ಕಾದಂಬರಿಯೇ ಇಷ್ಟವಾಯಿತು. ಧನ್ಯವಾದಗಳು

  ಪ್ರವೀಣ್..
  ಹೌದು ತ್ರಿವೇಣಿಯವರ ಕಥಾ ಪಾತ್ರಗಳು ಮನದಲ್ಲಿ ನೆಲೆ ನಿಂತುಬಿಡುತ್ತವೆ. ಸುಲಭದಲ್ಲಿ ಮರೆಯಲಾಗೋದಿಲ್ಲ... ಧನ್ಯವಾದಗಳು

  ಪರಾಂಜಪೆ ಸಾರ್..

  ನನ್ನ ಪುಸ್ತಕ ಪರಿಚಯದಿಂದ ನಿಮಗೆ ಕನ್ನಡ ಪುಸ್ತಕಗಳನ್ನೋದುವ ಆಸೆ ಹುಟ್ಟಿದರೆ.. ನನಗೆ ಸಂತೋಷ ಮತ್ತು ನಾನು ಪುಸ್ತಕ ಪರಿಚಯಿಸಿದ್ದೂ ಸಾರ್ಥಕ ಅನ್ಕೋತೀನಿ... :-).. ಓದಲು ಶುರುಮಾಡಿ ಸಾರ್... ಧನ್ಯವಾದಗಳು

  ದೀಪಸ್ಮಿತಾ ಅವರೆ..

  ತ್ರಿವೇಣಿಯವರ ಮನೋವೈಜ್ಞಾನಿಕ ಕಾದಂಬರಿಗಳಂತೂ ನಿಜಕ್ಕೂ ಎಲ್ಲಾ ಕಾಲಕ್ಕೂ ಸಲ್ಲುವಂತವು. ಬೆಕ್ಕಿನ ಕಣ್ಣು ಕಾದಂಬರಿ ಕೂಡ ನಾನು ಪರಿಚಯಿಸಿದ್ದೇನೆ. ಸಮಯವಾದಾಗ ನೋಡಿ... ಧನ್ಯವಾದಗಳು.

  ReplyDelete
 10. ಶ್ಯಾಮಲ ಮೇಡಮ್,
  ಈ ಸಿನಿಮಾವನ್ನು ನಾನು ನೋಡಿದ್ದೇನೆ. ತ್ರಿವೇಣಿಯವರ ಕಾದಂಬರಿಯ ಬಗೆಗೆ ನೀವು ವಿವರಿಸಿ ಅನೇಕ ವಿಚಾರಗಳನ್ನು ತಿಳಿಸಿದ್ದೀರಿ..ಅವರ ಮನೋವೈಜ್ಞಾನಿಕ ಬರಹಗಳು ತುಂಬಾ ಇಷ್ಟವಾಗುತ್ತವೆ..
  ಧನ್ಯವಾದಗಳು.

  ReplyDelete
 11. ಕಾದಂಬರಿ ಲೋಕದಲ್ಲಿ ತ್ರಿವೇಣಿಯವರ 'ಹೆಣ್ಣೆಲೆ ಚಿಗುರಿದಾಗ' ಹೊಸದೊಂದು ತಂಗಾಳಿಯನ್ನು ತಂದಿದ್ದು ಅಂದು ಅದು ಸಿನಿಮಾಕ್ಕೆ ಬೇಕಾದ ಪೂರಕ ವಸ್ತುವಾಗಿ ಬಳಕೆಯಾದಾಗ. ತಮ್ಮ ವಿಶ್ಲೇಷಣೆ ಸರಳ ಹಾಗೂ ಸುಂದರವಾಗಿದೆ, ಇದೆ ರೀತಿ ಹಲವು ಕೃತಿಗಳ ಬಗ್ಗೆ ನಿಮ್ಮಿಂದ ಲೇಖನಗಳು ಬರಲಿ ಎಂದು ಹೇಳುತ್ತಾ ಅಭಿನಂದಿಸುತ್ತಿದ್ದೇನೆ, ಮತ್ತೊಮ್ಮೆ ನಿಮಗೆ ಪ್ರಶಸ್ತಿ ಲಭಿಸಿದ್ದಕ್ಕೆ ಪ್ರತ್ಯೇಕ ಅಭಿನಂದನೆಗಳು

  ReplyDelete
 12. ಶಿವು ಸಾರ್...
  ಸಿನಿಮಾ ಕೂಡ ತುಂಬಾ ಸುಂದರವಾಗಿಯೇ ಇತ್ತು, ಅದಕ್ಕೆ ಕಾರಣ ಸಾಂಸಾರಿಕ ಕಥೆಯೇ ಅಲ್ವಾ..? ನನಗೆ ಚಿತ್ರ ನೋಡಿದ್ದು ತುಂಬಾ ವಿವರವಾಗಿ ನೆನಪಿಲ್ಲ. ಈಗ ಮತ್ತೊಮ್ಮೆ ನೋಡಿದರೆ ಕಾದಂಬರಿಯ ಜೊತೆ ತುಲನೆ ಮಾಡಿ ನೋಡಿಕೊಳ್ಳಬಹುದು ಅನ್ಸತ್ತೆ. ತ್ರಿವೇಣಿಯವರು ಮನೋವೈಜ್ಞಾನಿಕ ವಿಷಯಾಧಾರಿತ ಕಥೆಗಳು ಎಂದಿಗೂ ಮರೆಯಲಾಗದವು... ಧನ್ಯವಾದಗಳು..

  ReplyDelete
 13. ಭಟ್ ಸಾರ್..
  ಆ ಕಾಲದಲ್ಲಿ ಇಡೀ ಸಂಸಾರವೇ ಕುಳಿತು ನೋಡಿ ಸಂತೋಷ ಪಡುವಂತಹ ಸಾಮಾಜಿಕ ಕಥೆಗಳನ್ನಾಧರಿಸಿಯೇ ಹೆಚ್ಚು ಸಿನಿಮಾಗಳನ್ನು ತೆಗೆಯುತ್ತಿದ್ದರು. ಆದ್ದರಿಂದಲೇ ಆ ಸಿನಿಮಾಗಳೂ, ಕಾದಂಬರಿಗಳೂ... ಇಂದಿಗೂ ತಂಗಾಳಿಯಾಗಿವೇ ಇವೆ ಸಾಹಿತ್ಯ ಲೋಕದಲ್ಲಿ. ನಿಮ್ಮ ಪ್ರೋತ್ಸಾಹಕ್ಕೆ ಮತ್ತು ಪ್ರತ್ಯೇಕ ಅಭಿನಂದನೆಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಸಾರ್...

  ReplyDelete
 14. ತ್ರಿವೇಣಿ ಅವರ ಕಥೆಗಳು ಸುಮಾರು ಸಂಗ್ರಹಗಳು ನಮ್ಮ ಅಮ್ಮ ಮನೆಯಲ್ಲಿಟ್ಟಿದ್ದಾರೆ... ಅವರು ಅವರ ಕಥೆಗಳನ್ನೆಲ್ಲಾ ಓದಿದ್ದಾರೆ..... ನಾನು ಸಹ ಇನ್ನು ೮, ೯ ನೇ ತರಗತಿ ಇರುವಾಗಲೇ ಅವರ ಕಥೆಗಳನ್ನೆಲ್ಲಾ ಓದಿ ಮುಗಿಸಿದ್ದೆ.... ತ್ರಿವೇಣಿ ನನ್ನ ಮೆಚ್ಚಿನ ಕಥೆಗಾರ್ತಿ... ನಿಮ್ಮ ಲೇಖನ ನೋಡಿ ಮತ್ತೊಮ್ಮೆ ಓದಬೇಕೆನಿಸುತ್ತಲಿದೆ... ತುಂಬಾ ಚೆನ್ನಾಗಿ ಬರೆದಿದ್ದೀರಿ.

  ReplyDelete
 15. baalyadalli naanu odi mechchida kaadambari. nenapisiddakke vandanegalu.

  ReplyDelete
 16. This comment has been removed by the author.

  ReplyDelete
 17. ಹಣ್ಣೆಲೆ ಚಿಗುರಿದಾಗ ಸಾಲನ್ನು ನೋಡಿದರೆ ಸಂತೋಷ ಚಂದ ಎನ್ನಿಸುತ್ತದೆ..... ನಾನು ಚಿಕ್ಕವಳಿದ್ದಾಗ ಓದಿದ ಮೊದಲ ಕಾದಂಬರಿ......

  ReplyDelete