Thursday, August 29, 2013

ಭೀಮಸೇನ



ಮಹಾಭಾರತದ ಪಾತ್ರಗಳು ನಮ್ಮ ಬದುಕಿಗೆ ತುಂಬಾ ಹತ್ತಿರವಾದವುಗಳು.  ಧನಾತ್ಮಕ ಗುಣಗಳ ವ್ಯಕ್ತಿತ್ವಕ್ಕೆ ಪಾಂಡವರ ಪಾತ್ರಗಳು ನಿದರ್ಶನಗಳಾದರೆ, ಋಣಾತ್ಮಕ ಭಾವಗಳಿಗೆ ಕೌರವರ ಪಾತ್ರಗಳು ನಿದರ್ಶನಗಳಾಗುತ್ತವೆ.  ಭಗವಂತನಾದ ಶ್ರೀಕೃಷ್ಣನ ವ್ಯಕ್ತಿತ್ವವು ಅತ್ಯಂತ ಉನ್ನತವಾದ ಭಾವವಾಗಿ, ನಮ್ಮ ಎಲ್ಲಾ ವಿಶ್ಲೇಷಣೆಯ ಪರಿಧಿಯನ್ನೂ ಮೀರಿ ಬೆಳೆಯುತ್ತದೆ.  ವಿಶೇಷ ಗುಣಗಳನ್ನೇ ಪ್ರಕಟಿಸುವ ಶ್ರೀಕೃಷ್ಣ ಶೈಶವಾವಸ್ಥೆಯಲ್ಲಿ ನಮ್ಮನ್ನು ಕಾಡುವ ಮುದ್ದು ಮಗುವಾಗಿ, ಅಂತಹ ಒಂದು ಮಗುವಿಗಾಗಿ ಜಗತ್ತಿನ ಎಲ್ಲಾ ತಾಯಂದಿರೂ ಹಂಬಲಿಸುವಂತೆ ಮಾಡುತ್ತಾನೆ.  ಬಾಲ್ಯದ ತುಂಟಾಟಗಳಲ್ಲಿ ತಾನು ನಕ್ಕು, ನಮ್ಮನ್ನು ನಗಿಸಿ, ಕಾಡಿಸಿ, ಪೀಡಿಸಿ, ಮುದ್ದುಗರೆಯುತ್ತಾನೆ.  ಬೆಳೆಯುತ್ತಾ ಹೋದಂತೆಲ್ಲಾ ತಾನು ಸಾಕ್ಷಾತ್ ಭಗವಂತನೇ ಎಂಬುದನ್ನು ನಿರೂಪಿಸುತ್ತಾನೆ.  ಪಾಂಡವರ ಜೊತೆಗೆ ಸದಾ ಇದ್ದು, ಅವರನ್ನು ಸಂರಕ್ಷಿಸುತ್ತಾನೆ.  ಪಾಂಡವರಲ್ಲಿ ಅತಿ ಹೆಚ್ಚಾದ ನಿಷ್ಠೆ ಮತ್ತು ಭಕ್ತಿಯನ್ನು ಕೃಷ್ಣನ ಬಗ್ಗೆ ಹೊಂದಿರುವವರು ಯಾರೆಂದು ಆಲೋಚಿಸಿದಾಗ, ಉಳಿದ ಎಲ್ಲರಿಗಿಂತ ಭೀಮಸೇನ ಅತ್ಯಂತ ಉನ್ನತ ಸ್ಥಾನದಲ್ಲಿ ನಿಲ್ಲುತ್ತಾನೆ.  ತನ್ನ ಶೌರ್ಯ ಮತ್ತು ಬಲದಿಂದಲೇ ಹೆಚ್ಚು ಗುರುತಿಸಿಕೊಂಡಿದ್ದರೂ ಕೂಡ, ಭೀಮನಲ್ಲಿ  ಸಾಮಾನ್ಯವಾಗಿ ಗೋಚರಿಸದ ಹಲವಾರು ಅವ್ಯಕ್ತ ಗುಣಗಳು ಇದ್ದವೆಂಬುದು ಗುರುತಿಸಲ್ಪಟ್ಟಿದೆ.  ಇಡೀ ಮಹಾಭಾರತದ ಕಾಲದಲ್ಲಿ ಅತಿ ಕಡಿಮೆ ಮಾತನಾಡಿರುವ ವ್ಯಕ್ತಿಯೆಂದರೆ ಭೀಮಸೇನನೇ. 

ಪುರಾಣಗಳಿಂದ ನಮಗೆ ತಿಳಿಯುವುದೇನೆಂದರೆ ಭಗವಂತನು ಭೂಭಾರವನ್ನು ಹರಣ ಮಾಡುವುದಕ್ಕೋಸ್ಕರ ಭುವಿಗೆ ಅವತಾರ ರೂಪದಲ್ಲಿ ಇಳಿದು ಬರುತ್ತಾನೆ.  ಹಾಗೆ ಬರುವಾಗ ತಾನೊಬ್ಬನೇ ಬರುವುದಿಲ್ಲ, ತನ್ನ ಪರಿವಾರದ ಎಲ್ಲಾ ಸದಸ್ಯರೊಂದಿಗೇ ಪ್ರಕಟಗೊಳ್ಳುತ್ತಾನೆ.  ಪರಿವಾರದ ಅತಿ ಮುಖ್ಯ ಹಾಗೂ ಪ್ರಧಾನ ಸೇವಕನಾಗಿ ವಾಯು ದೇವನ ಅವತಾರವಾಗುತ್ತದೆ.  ಸದಾ ಸರ್ವದಾ ಎಲ್ಲಾ ಕಡೆಯೂ ಪಸರಿಸಿರುವ ವಾಯುದೇವನು ಭಗವಂತನಿಗೆ ಅತ್ಯಂತ ಪ್ರಿಯನಾದವನು.  ವಾಯುವೆಂದರೆ ’ಪರಿಸರ’ವೆಂದರ್ಥ.  ಶ್ರೀ ಜಗನ್ನಾಥದಾಸರು ತಮ್ಮ ಒಂದು ಕೃತಿಯಲ್ಲಿ "ಪರಿಸರ ನೀನಿರೆ ಹರಿತಾನಿರುವನು, ಇರದಿರೆ ತಾನಿರನು" ಎಂದಿದ್ದಾರೆ.   ದ್ವಾಪರಯುಗದಲ್ಲಿ ಭಗವಂತ ಶ್ರೀಕೃಷ್ಣನಾಗಿ ಅವತರಿಸಿದಾಗ, ವಾಯುದೇವನು ಭೀಮಸೇನನಾಗಿ ಬಂದ.  ಭಗವಂತನ ಭೂಭಾರಹರಣ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ್ದು ವಾಯುದೇವನ ಅವತಾರವಾದ ಭೀಮಸೇನನೇ ಎಂಬುದು ಜರಾಸಂಧ,   ಕಿರ್ಮೀರ, ಬಕ, ಕೀಚಕ ಮುಂದಾದವರ ಹತ್ಯೆಯಿಂದ ನಮಗೆ ತಿಳಿಯಲ್ಪಡುತ್ತದೆ.  ಜರಾಸಂಧನ ವಧೆಯ ನಂತರ ಹನ್ನೊಂದು ಅಕ್ಷೋಹಿಣೀ ಸೈನ್ಯವನ್ನು ಒಟ್ಟು ಸೇರಿಸಿಕೊಂಡು ಜರಾಸಂಧನ ಕಾರ್ಯವನ್ನು ಮುಂದುವರೆಸುವ ಇಚ್ಛೆಯಿದ್ದವನು ದುರ್ಯೋಧನ.  ಅವನ ಮತ್ತು ಅವನ ೯೯ ಜನ ತಮ್ಮಂದಿರನ್ನೂ ವಧಿಸಿ ಧರ್ಮ ರಕ್ಷಣೆಯ ಕಾರ್ಯದಲ್ಲಿ ಭಗವಂತನ ಜೊತೆಗಿರುತ್ತಾನೆ.  ಹರಿ-ವಾಯು ಯಾವಾಗಲೂ ಜೋಡಿಯಾಗಿಯೇ ಇರುತ್ತಾರೆ.

ವಾಯುದೇವನ ಅವತಾರವಾದ ಭೀಮಸೇನ ಅತ್ಯಂತ ಬಲಶಾಲಿಯಾಗಿದ್ದು, ಯುದ್ಧದಲ್ಲಾಗಲೀ, ಅಸುರರ ಹತ್ಯೆಯಲ್ಲಾಗಲೀ, ಅವನಿಗೆ ಯಾರ ಸಹಾಯ, ಯಾವ ಆಯುಧ, ರಥ, ಆನೆ ಇತ್ಯಾದಿಗಳ್ಯಾವುದರ ಅವಶ್ಯಕತೆಯೂ ಇಲ್ಲದಿದ್ದರೂ ಕೂಡ, ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಶ್ರೀಕೃಷ್ಣ ಪರಮಾತ್ಮ ಭೀಮಸೇನನಿಗೂ ಒಂದು ರಥ ಕೊಟ್ಟು, ತನ್ನ ಪ್ರೀತಿಯ ಪುತ್ರನಾದ ವಿಶೋಕನನ್ನು ಸಾರಥಿಯಾಗಿ ನೇಮಿಸಿರುತ್ತಾನೆ.  ಭೀಮಸೇನನನ್ನು ಕಂಡೊಡನೆ ಕೌರವರು ಆನೆಗಳನ್ನು ಮುಂದೆ ಕಳಿಸಿಬಿಟ್ಟು, ತಾವು ಹಿಂದುಳಿಯುತ್ತಿದ್ದರು.  ಭೀಮಸೇನ ರಥದಿಂದ ಕೆಳಗೆ ಧುಮುಕಿ ಆನೆಗಳೊಡನೆ ಸೆಣೆಸುತ್ತಿದ್ದ.  ಭೀಮಸೇನನ ಅಖಂಡ ಬಲದ ಮೇಲೆ ಅಭಿಮಾನವಿದ್ದರೂ ಕೂಡ ಶ್ರೀಕೃಷ್ಣ ಅವನಿಗೆ ರಥ ಮತ್ತು ಸಾರಥಿಯನ್ನು ನಿಯಮಿಸಿದ್ದನೆಂದರೆ, ಇದು ಭಗವಂತನಿಗೆ ವಾಯುದೇವನ ಮೇಲಿರುವ ಅಭಿಮಾನ ಮತ್ತು ಅಗಾಧ ನಂಬಿಕೆಯನ್ನು ಬಿಂಬಿಸುತ್ತದೆ.

ಪುರಾಣಗಳು ಭೀಮಸೇನನಲ್ಲಿದ್ದ ಹತ್ತು ಅಪೂರ್ವ ಗುಣಗಳನ್ನು ಹೀಗೆ ಉಲ್ಲೇಖಿಸಿವೆ :
ಭಕ್ತಿರ್ಜ್ಞಾನಂ ಸವೈರಾಗ್ಯಂ ಪ್ರಜ್ಞಾ ಮೇಧಾ ಧೃತಿಃ ಸ್ಥಿತಿಃ |
ಯೋಗಃ ಪ್ರಾಣೋ ಬಲಂ ಚೈವ ವೃಕೋದರ ಇತಿ ಸ್ಮೃತಃ ||
ಭಕ್ತಿ:   ಭಗವಂತನಲ್ಲಿ ಪೂರ್ಣಪ್ರಮಾಣದ ಭಕ್ತಿ
ಜ್ಞಾನ:  ಭಗವಂತ ದೊಡ್ಡವ ಎನ್ನುವ ಪೂರ್ಣ ಅರಿವು
ವೈರಾಗ್ಯ:  ಭಗವಂತನ ಮುಂದೆ ಎಲ್ಲವೂ ಸಣ್ಣ ವಸ್ತು ಎಂಬ ಪೂರ್ಣ ಅರಿವು
ಪ್ರಜ್ಞಾ:  ಯಾವ ಸಂದರ್ಭದಲ್ಲಿ ಏನು ಮಾಡಬೇಕೆಂಬ ತಿಳುವಳಿಗೆ
ಮೇಧಾ:  ಅತ್ಯದ್ಭುತವಾದ ಸ್ಮರಣಶಕ್ತಿ
ಧೃತಿ:  ಭಗವಂತನ ಹಿರಿಮೆಯ ಬಗ್ಗೆ, ತನ್ನ ಶಕ್ತಿಯ ಬಗ್ಗೆ, ವಿಶ್ವದ ಬಗ್ಗೆಯೂ ಆತ್ಮವಿಶ್ವಾಸ
ಸ್ಥಿತಿ:    ಅಚಲವಾದ ನಿಲುವು
ಯೋಗ:  ಜೀವನದ ದ್ವಂದ್ವಗಳನ್ನು ಸಮಾನ ದೃಷ್ಟಿಯಿಂದ, 
              ಸಮಚಿತ್ತತೆಯಿಂದ ನೋಡುವ ನಿರ್ಲಿಪ್ತ ನಿಲುವು
ಪ್ರಾಣ:  ನಿರಂತರ ಚಲನಶೀಲತೆ
ಬಲ:   ಆತ್ಮಬಲ, ಪರಿಪೂರ್ಣವಾದ ಸ್ವರೂಪ ಸಾಮರ್ಥ್ಯ. 
"ಭೀಮಸೇನ" - ಭೀಮ ಎಂದರೆ ಎಲ್ಲ ಅರಿವಿನ ಮೇರು (ಭೃತ+ಮಾನ = ಭೀಮ).  ಇನ ಎಂದರೆ ಸ್ವಾಮಿಯಾದ ಭತವಂತ.  ಅವನ ಜೊತೆಗಿರುವವನು ಸೇನ (ಸ+ಇನ = ಸೇನ).
ಮೇಲೆ ಕಾಣಿಸಿದ ಹತ್ತೂ ಗುಣಗಳೂ ವಾಯುತತ್ತ್ವದ ವಿಶೇಷಗಳು.  ಧರ್ಮರಾಜನು ಜನಿಸಿದ ನಂತರ ಕುಂತಿ ಎರಡನೆಯ ಮಗುವನ್ನು ಪಡೆಯಲು ಯಾವ ದೇವತೆಯನ್ನು ಪ್ರಾರ್ಥಿಸಿಕೊಳ್ಳಬೇಕೆಂದು ಚಿಂತಿಸುತ್ತಿದ್ದಳು.  ನಾರಾಯಣ ಆಗಲೇ ವ್ಯಾಸರೂಪನಾಗಿ, ಪಾಂಡುವಿಗೆ ತಂದೆಯಾಗಿದ್ದ ಮತ್ತು ಚತುರ್ಮುಖ ಬ್ರಹ್ಮನಿಗೆ ಭೂಮಿಯಲ್ಲಿ ಜನನವಿರಲಿಲ್ಲ.  ಇವರಿಬ್ಬರ ನಂತರದ ಹಿರಿಯ ದೇವತೆ ವಾಯುದೇವನಾಗಿರುವಾಗ, ಬಲವಂತನೂ ಆದ ವಾಯುದೇವರನ್ನು ಪ್ರಾರ್ಥಿಸಿ ಕುಂತಿ, ಭೀಮಸೇನನನ್ನು ಪಡೆದಳು.  ಭೀಮನ ಜನ್ಮವಾದ ಕೂಡಲೇ ಭೂಮಿಯಲ್ಲಿನ ಎಲ್ಲಾ ರಾಜರುಗಳೂ ಭಯಗೊಂಡರು ಮತ್ತು ದುಷ್ಟರಾಜರುಗಳ ಸಮಸ್ತ ಪ್ರಾಣಿಗಳೂ ಇನ್ನು ತಮ್ಮ ಯಜಮಾನನ ಕಥೆ ಮುಗಿಯಿತೆಂದು ಕಣ್ಣೀರು ಸುರಿಸಿದವಂತೆ.  ಅಶರೀರವಾಣಿಯೊಂದು ಜಗತ್ತಿನಲ್ಲೇ ಬಲಜ್ಯೇಷ್ಠನೇ ಕುಂತಿಗೆ ಮಗನಾಗಿ ಜನಿಸಿದ್ದಾನೆಂದು ನುಡಿಯಿತಂತೆ.  ತನ್ನ ಬಲವನ್ನೂ ಮಿಕ್ಕ ಎಲ್ಲಾ ಗುಣಲಕ್ಷಣಗಳನ್ನೂ ಹುಟ್ಟಿನಲ್ಲೇ ಪ್ರಕಟಪಡಿಸಿದ ದೇವತೆ ವಾಯುದೇವನಾಗಿದ್ದಾನೆ.  ಭೀಮಸೇನ ಪುಟ್ಟ ಮಗುವಾಗಿದ್ದಾಗ ಒಮ್ಮೆ ಕುಂತಿ ಮಗುವನ್ನು ಎತ್ತಿಕೊಂಡಿದ್ದಾಗ ಹುಲಿಯ ಗರ್ಜನೆ ಕೇಳಿ ಗಾಬರಿಯಲ್ಲಿ ಕೈಬಿಟ್ಟಳಂತೆ.  ಮಗು ಕೆಳಗೆ ಕಲ್ಲಿನ ಮೇಲೆ ಬಿದ್ದಾಗ, ಆ ಕಲ್ಲುಬಂಡೆ ಒಡೆದು ನುಚ್ಚುನೂರಾಗಿ ಮುಂದೆ ಅದು ’ಶತಶೃಂಗ’ ಎಂದು ಕರೆಸಿಕೊಂಡಿತು ಎಂಬ ಉಲ್ಲೇಖವಿದೆ.  ಇದು ಭೀಮನ ಅಸಾಮಾನ್ಯ ಬಲದ ಪ್ರಕಟಣೆಯಾಗಿತ್ತು.

ಭೀಮಸೇನನದು ’ಮೇರು’ ವ್ಯಕ್ತಿತ್ವ.  ಪರ್ವತಗಳ ಶಿರೋಮಣಿಯಾದ ಮೇರು ಪರ್ವತದಂತೆ ಅಚಲ, ಧೀರ ಮತ್ತು ವೀರ.  ಶ್ರೀ ತ್ಯಾಗರಾಜರು ಶ್ರೀರಾಮಚಂದ್ರನ ಕುರಿತು ಮಾಯಾಮಾಳವಗೌಳ ರಾಗದಲ್ಲಿ ಒಂದು  ವಿಳಂಬಕಾಲದ ಕೃತಿ ರಚಿಸಿದ್ದಾರೆ.   "ಮೇರು ಸಮಾನ ಧೀರ.. ವರದ".. ಎಂದು ಪ್ರಾರಂಭವಾಗುವ ಈ ಕೃತಿ ಭೀಮಸೇನನ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ.  ತ್ಯಾಗರಾಜರು ಮಾಡಿರುವ ಶ್ರೀರಾಮಚಂದ್ರನ ವರ್ಣನೆಯಲ್ಲಿ ನಾವು ಭೀಮಸೇನನನ್ನು ಕಾಣಬಹುದಾಗಿದೆ.  ಕೃತಿಯ ಅನುಪಲ್ಲವಿಯಲ್ಲಿ "ಸಾರಾಸಾರ... ನೀರದ ಕಾಂತಿನಿ ನೀ ಠೀವಿನಿ... ಮಹಾ ಮೇರು ಸಮಾನ ಧೀರ" ಎಂದಿದೆ.  ಇಲ್ಲಿ ಸಾರಾಸಾರ ಎಂಬ ವರ್ಣನೆಯಲ್ಲಿ ಸಾರದಲ್ಲೂ ಅಸಾರದಲ್ಲೂ ವ್ಯಾಪಿಸಿರುವ, ಪಸರಿಸಿರುವ ಎಂಬ ವಿಶೇಷ ಗುಣ ವಾಯುದೇವನ ವರ್ಣನೆಯೋ ಎಂಬಂತೆ ಇದೆ.  ಪರ್ವತಗಳಲ್ಲಿ ಅತಿಶಯವಾದುದು ಮೇರುಪರ್ವತ.  ಗಾಳಿ, ಮಳೆ, ಮೇಘಗಳಿಗೆ ಜಗ್ಗದೆ ನಿಶ್ಚಲವಾಗಿ ವೀರನೂ, ಧೀರನೂ, ಏಕಾಂಗಿಯೂ ಆಗಿ ನಿಂತಿರುವ ಮೇರುಪರ್ವತದಂತೆಯೇ, ಸಮಾನವಿಲ್ಲದವನು ವಾಯುದೇವನ ಅವತಾರನಾದ ಭೀಮಸೇನನು.  ಕೃತಿಯ ಚರಣದಲ್ಲಿ ತ್ಯಾಗರಾಜರು "ದಳಿತ ದುರ್ಮಾನವ" ಎಂದಿದ್ದಾರೆ.  ಅಂದರೆ ದುಷ್ಟರನ್ನು ದಮನ ಮಾಡಿದವನು ಎಂದು ಅರ್ಥ ಬರುತ್ತದೆ.  ಭೀಮಸೇನನ ಅವತಾರವೂ ದುಷ್ಟರನ್ನು ದಮಿಸಿ ಶ್ರೀಕೃಷ್ಣನ ಭೂಭಾರಹರಣ ಕಾರ್ಯದಲ್ಲಿ ನೆರವಾಗುವ ಉದ್ದೇಶವೇ ಆಗಿದೆಯಾದ್ದರಿಂದ, ಈ ಕೃತಿಯಲ್ಲಿ ಶ್ರೀರಾಮಚಂದ್ರನಿಗೆ ತಿಳಿಸಿರುವ ಗುಣವಿಶೇಷಣಗಳು ವಾಯುದೇವನಾದ ಭೀಮಸೇನನಿಗೂ ಅತ್ಯಂತ ಸೂಕ್ತವಾಗಿ ಹೊಂದಿಕೆಯಾಗಿದೆ. 
ಮುಂದೆ ತನ್ನ ಅಣ್ಣ-ತಮ್ಮಂದಿರು, ತಾಯಿ ಮತ್ತು ದ್ರೌಪದಿಯ ಸಂಪೂರ್ಣ ಜವಾಬ್ದಾರಿಯನ್ನು ಭೀಮಸೇನನೇ ನಿಭಾಯಿಸುವನೆಂಬ ಸೂಕ್ಷ್ಮತೆಗೆ ಬೆಂಬಲವಾಗಿ ಅನೇಕ ನಿದರ್ಶನಗಳೂ, ಸೂಚನೆಗಳೂ ಭೀಮಸೇನನ ಬಾಲ್ಯದಿಂದಲೇ ಸಿಕ್ಕುತ್ತಾ ಹೋಗುತ್ತವೆ.  ತುಂಬಾ ವಿಶೇಷವಾದ ಮತ್ತು ಉಲ್ಲೇಖವಾಗಿಲ್ಲದ ವಾಯುದೇವನ ಇನ್ನೊಂದು ಮುಖ್ಯ ಗುಣ ಲಕ್ಷಣವೆಂದರೆ ನಿಷ್ಠುರತೆ.  ಮುಂದೆ ಬ್ರಹ್ಮ ಪದವಿಗೆ ಬರುವ ವಾಯುದೇವನು ತುಂಬಾ ನಿಷ್ಠುರವಾದಿ.  ತಪ್ಪು ಯಾರೇ ಮಾಡಿದರೂ ಅದಕ್ಕೆ ಶಿಕ್ಷೆಯಾಗಲೇ ಬೇಕೆಂಬ ಅಭಿಪ್ರಾಯವನ್ನು ಖಂಡಿತವಾಗಿ ತಿಳಿಸಿಬಿಡುವವರು.  ಧರ್ಮರಾಜ ಪಗಡೆಯಾಟದಲ್ಲಿ ಸೋತು ಎಲ್ಲವನ್ನೂ ಕಳೆದುಕೊಂಡು ಅರಣ್ಯಕ್ಕೆ ಹೊರಡಲು ತಯಾರಾಗಿ ನಿಂತಾಗ ಭೀಮಸೇನ ಅತ್ಯುಗ್ರನಾಗಿ ದ್ರೌಪದಿಯನ್ನು ಅವಮಾನಿಸಿದ ದುರ್ಯೋಧನನ ತೊಡೆ ಮುರಿಯುವೆನೆಂದು ಪ್ರತಿಜ್ಞೆ ಮಾಡುತ್ತಾನೆ.  ಹಾಗೇ ಜೂಜಾಡಿದ ಧರ್ಮರಾಜನ ಕೈಗಳನ್ನು ಸುಟ್ಟು ಬಿಡಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಾನೆ.  ಅರ್ಜುನ ಹಿರಿಯಣ್ಣನಿಗೆ ಹಾಗೆ ಮಾಡಲಾಗದು ಎಂಬ ಮಾತು ತಿಳಿಸಿದಾಗ, ಭೀಮಸೇನ ಉತ್ತರವಾಗಿ ದೊಡ್ಡವರು ತಪ್ಪು ಮಾಡಿದಾಗ ಅದನ್ನು ಚಿಕ್ಕವರು ತಪ್ಪನ್ನು ತೋರಿಸಿಕೊಟ್ಟು ಅದಕ್ಕಾಗಿ ಶಿಕ್ಷೆಯನ್ನು ಅನುಭವಿಸಬೇಕೆಂಬ ಮಾತು ಆಡಿದರೂ ಸಾಕು, ಅದರಿಂದ ದೊಡ್ಡರ ಮನಸ್ಸಿಗೆ ಉಂಟಾಗುವ ಕ್ಲೇಶದಿಂದಲೇ ಪಾಪ ಪರಿಹಾರವಾಗಿ ಬಿಡುತ್ತದೆ, ಶಿಕ್ಷೆ ಅನುಭವಿಸಬೇಕಾಗಿಲ್ಲ ಎಂದು ತಿಳಿಸಿ ಹೇಳುತ್ತಾನೆ.

ಮಹಾಭಾರತದ ಉದ್ದಕ್ಕೂ ಭೀಮಸೇನ ತನ್ನ ಮೂಲ ಸ್ವರೂಪವಾದ ವಾಯುವಿನ ತತ್ತ್ವಗಳನ್ನು ಸದಾ ಪ್ರಕಟಪಡಿಸುತ್ತಲೇ ಇರುತ್ತಾನೆ.  ಚಿಕ್ಕ ವಯಸ್ಸಿನಿಂದಲೂ ದುರ್ಯೋಧನನ ಎಲ್ಲಾ ಹಿಂಸೆಗಳನ್ನೂ ಮೆಟ್ಟುತ್ತಲೇ ಇದ್ದ.  ವಿಷವನ್ನೂ ಕುಡಿದು ಜೀರ್ಣಿಸಿಕೊಂಡವನು.  ಎಲ್ಲಕ್ಕಿಂತ ಮೊದಲು ಭಗವಂತನಲ್ಲಿನ ಭಕ್ತಿ ಮತ್ತು ನಿಷ್ಠೆ ಪ್ರಮಾಣದಲ್ಲಿ ಪ್ರದರ್ಶಿಸಿದ.  ಶ್ರೀಕೃಷ್ಣನ ಎಲ್ಲಾ ಆಜ್ಞೆಗಳನ್ನೂ ಮರು ಪ್ರಶ್ನಿಸದೆ, ಸಂದೇಹಕ್ಕೆ ಆಸ್ಪದವೇ ಇಲ್ಲದಂತೆ ಶಿರಸಾವಹಿಸಿ ಕಾರ್ಯ ರೂಪಕ್ಕೆ ತರುವಂತಹವನಾಗಿರುತ್ತಾನೆ. ಭಗವಂತನ ಪರಿಪೂರ್ಣ ಜ್ಞಾನವನ್ನು ಹೊಂದಿದವನಾಗಿ,  ಎಲ್ಲಕ್ಕಿಂತ, ಎಲ್ಲರಿಗಿಂತ ಭಗವಂತ ದೊಡ್ಡವನೆಂಬ ಅರಿವು, ಭಗವಂತನ ಎದುರಿಗೆ ಮಿಕ್ಕವೆಲ್ಲವೂ ತೃಣ ಸಮಾನವೆಂಬ ವೈರಾಗ್ಯ ಹೊಂದಿದವನಾಗಿರುತ್ತಾನೆ. 

ಭೀಮಸೇನನ ವ್ಯಕ್ತಿತ್ವವನ್ನು ನಾವು ಸ್ವಲ್ಪ ಆಳವಾಗಿ ಚಿಂತಿಸಿದಾಗ, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಅನೇಕ ವಿಚಾರಗಳನ್ನು ಕಾಣಬಹುದಾಗಿದೆ.  ಇವತ್ತಿನ ಈ ನಮ್ಮ ಜೀವನಕ್ಕೂ ಭೀಮಸೇನ ಆದರ್ಶವಾಗುತ್ತಾನೆ.  ಆಧ್ಯಾತ್ಮ ಹಾದಿಯಲ್ಲಿ ನಡೆಯಬೇಕೆಂದವರಿಗೆ, ಭಗವಂತನ ವಿಚಾರಗಳನ್ನು ಅಧ್ಯಯನ ನಡೆಸುವುದು, ಹರಿಯ ಗುಣಗಳನ್ನು ಶ್ರವಣ ಮಾಡುವುದು, ಸದಾ ನಾಮ ಜಪ ಮಾಡುವುದು, ವಿಚಾರ ವಿನಿಮಯ ಮಾಡುವುದು ಮುಂತಾದವುಗಳಲ್ಲಿ ಮಾತ್ರವೇ ಮನಸ್ಸು ನೆಲೆಗೊಳಿಸಬೇಕು, ಅದೊಂದೇ ಸ್ಥಿರ ಮತ್ತು ಬಾಕಿಯದೆಲ್ಲಾ ಅಸ್ಥಿರವೆಂಬ ಅರಿವು ಮೂಡಿಸಿಕೊಳ್ಳಲು ಭೀಮಸೇನ ಮಾದರಿಯಾಗುತ್ತಾನೆ.  ನಮ್ಮ ನಂಬಿಕೆ, ವಿಶ್ವಾಸ ಅಚಲವಾಗಿರಬೇಕೆಂಬ ನೀತಿ ತಿಳಿಯಬಹುದಾಗಿದೆ.  ಯಾವುದೇ ಕಾರ್ಯವನ್ನು ಮಾಡುವಾಗಲೂ ಏಕಚಿತ್ತದಿಂದ, ಅಚಲ ಮನಸ್ಸಿನಿಂದ ಮಾಡಬೇಕು, ಚಂಚಲತೆ ಇರಬಾರದೆಂಬ ಪಾಠ ಕಲಿಯಬಹುದಾಗಿದೆ.  ಅರಗಿನ ಮನೆಯಲ್ಲಿನ ಅಗ್ನಿಯ ಪ್ರಸಂಗದಲ್ಲಿ ಭೀಮಸೇನನ ಸಮಯ ಪ್ರಜ್ಞೆ, ಬಲ ಪ್ರದರ್ಶನ ಸಾಬೀತಾಗಿದೆ.  ತಾನೊಬ್ಬನೇ ತನ್ನ ಅಣ್ಣ, ಮೂವರು ತಮ್ಮಂದಿರು ಮತ್ತು ತಾಯಿಯನ್ನು ಹೊತ್ತುಕೊಂಡು ಹೋಗಿ ಕಾಪಾಡುತ್ತಾನೆ.  ಇಲ್ಲಿ ಭೀಮಸೇನನ ಶೌರ್ಯ ಹಾಗೂ ಬಲದ ಜೊತೆಗೆ ಅವನ ’ಪ್ರಜ್ಞಾ’ ಗುಣ ವಿಶೇಷ ಕೂಡ ಪ್ರಕಟವಾಗಿದೆ. ಅಂದರೆ ಯಾವ ಸಮಯದಲ್ಲಿ ಏನು ಮಾಡಬೇಕೆಂಬ ಪ್ರಜ್ಞೆಯು ಪ್ರತಿಬಿಂಬಿಸಲ್ಪಟ್ಟಿದೆ.

ಭೀಮಸೇನನ ನಿರಂತರ ಚಲನಶೀಲತೆಯ ಗುಣ ವಾಯು ತತ್ತ್ವದ ಮುಖ್ಯಲಕ್ಷಣ.  ಇಡೀ ಬ್ರಹ್ಮಾಂಡದಲ್ಲೇ ಪಸರಿಸಿರುವ ವಾಯು - ’ಪರಿಸರ’ ಸದಾ ಚಲನಶೀಲತೆಯಿಂದ ಕೂಡಿದೆ.  ನಿಂತಲ್ಲಿ ನಿಲ್ಲದೆ ಚಲಿಸುತ್ತಿರುವುದು ಬೆಳವಣಿಗೆಯ ಮತ್ತು ವ್ಯಾಪ್ತಿಯ ವಿಸ್ತಾರದ ಅಂಶವನ್ನು ತೋರುತ್ತದೆ.  ನಮ್ಮ ಮನಸ್ಸೂ, ಬುದ್ಧಿಯೂ ಈ ತತ್ತ್ವದೆಡೆಗೆ ಆಕರ್ಷಣೆಗೊಳಿಸಿಕೊಂಡಲ್ಲಿ, ನಮ್ಮೊಳಗೇ ಹುದುಗಿರುವ ಕ್ರಿಯಾಶೀಲತೆಗೆ ಚಾಲನೆ ಕೊಟ್ಟಂತೆ ಆಗುತ್ತದೆ.  ಸದಾ ನಮ್ಮ ಜ್ಞಾನವನ್ನು ವಿಸ್ತರಿಸುವ, ವಿಸ್ತಾರಗೊಳಿಸಿಕೊಳ್ಳುವ ಹುನ್ನಾರದಲ್ಲಿ ಮನಸ್ಸನ್ನು ಹುದುಗಿಸಿಕೊಂಡಾಗ ಪರಿಸರದೆಲ್ಲೆಡೆ ನಿತ್ಯ ನೂತನವಾದ ಚೈತನ್ಯ ಕಂಡು ಬರುತ್ತದೆ.  ನಮ್ಮೊಳಗಿನ ಪ್ರಾಣಶಕ್ತಿಗೆ ಪರಿಸರದಲ್ಲಿನ ಚೈತನ್ಯ ಕೂಡಿಕೊಂಡಾಗ ಬುದ್ಧಿಯ ವಿಕಸನವಾಗುತ್ತದೆ.

ವಾಯುತತ್ತ್ವದ ಗುಣಲಕ್ಷಣಗಳಾದ ’ಯೋಗ’ ಮತ್ತು ’ಧ್ರುತಿ’ಯ ವಿಶೇಷಣಗಳನ್ನು ನಮ್ಮ ಬದುಕಿಗೆ ಸಮನ್ವಯ ಮಾಡಿಕೊಳ್ಳಬೇಕೆಂದಾಗ ನಮ್ಮ ಜೀವನದಲ್ಲಿ ಪ್ರಾಕೃತಿಕ ಸಂಸಾರದ ಸಾಗರದಲ್ಲಿ ದಿನದಿನವೂ ಎದುರಾಗುವ ಏರಿಳಿತಗಳನ್ನು ಸಮಾನ ಚಿತ್ತದಿಂದ ಸ್ವೀಕರಿಸುವುದು ಎಂದರ್ಥವಾಗುತ್ತದೆ.  ಸಂಸಾರವೆಂಬ ಭವಸಾಗರದಲ್ಲಿ ಸಿಲುಕಿದಾಗಲೇ ನಮ್ಮ ಚಿತ್ತಶಾಂತಿಯನ್ನು ಕಾಪಾಡಿಕೊಳ್ಳಲೇ ಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿರುತ್ತೇವೆ.  ಇಂತಹ ಸಂದರ್ಭಗಳನ್ನು ಪ್ರತಿ ಹಂತದಲ್ಲೂ ದಾಟಿಕೊಂಡು ಮುಂದೆ ನಡೆಯಲೇಬೇಕೆಂಬ ಕಡ್ಡಾಯವಿರುವಾಗ ಮನಸ್ಥಿತಿಯನ್ನು ’ಯೋಗ’ ಲಕ್ಷಣದಲ್ಲಿ ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ.  ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ನಿರ್ಲಿಪ್ತತೆಯ ನಡವಳಿಕೆಯಿಂದ ವರ್ತಿಸುವ ಭೀಮಸೇನನ ವ್ಯಕ್ತಿತ್ವ ನಮ್ಮನ್ನು ಕಂಗೆಡದಂತೆ ಹುರಿದುಂಬಿಸುತ್ತದೆ.  ’ಧ್ರುತಿ’ ಎಂದರೆ ಭಗವಂತನೆಂಬ ಅಗಾಧ ಶಕ್ತಿಯ ಅರಿವು, ನಮ್ಮೊಳಗಿನ ಚೈತನ್ಯವಾಗಿರುವ ಆ ಶಕ್ತಿಯಿಲ್ಲದೇ ನಾವೇನೂ ಅಲ್ಲವೆಂಬ ನಂಬಿಕೆ ಮತ್ತು ಭಗವಂತನ ಸೃಷ್ಟಿಯನ್ನು ಗೌರವಿಸುವುದು.

ವಾಯು ತತ್ತ್ವದ ೧೦ನೆಯ ಲಕ್ಷಣ ’ಬಲ’.  ಭೀಮಸೇನನ ಬಲವೆಂದರೆ ತನ್ನದೇ ಆತ್ಮಶಕ್ತಿ ಮತ್ತು ಸಾಮರ್ಥ್ಯ.  ಭೀಮಸೇನ ವಾಯುದೇವರ ಅವತಾರವಾದ್ದರಿಂದ ಅವನಿಗೆ ತನ್ನ ಸ್ವರೂಪದ ಅರಿವು ತಿಳಿದಿತ್ತು.  ಆದರೆ ನಾವು ನಮ್ಮ ಕರ್ಮಗಳ ಫಲದಿಂದ ಮತ್ತೆ ಮತ್ತೆ ಜನಿಸಿ ಬಂದಿರುವ, ಅಧ್ಯಾತ್ಮದ ಹಾದಿಯಲ್ಲಿ ನಡೆಯಬೇಕೆಂಬ ಇಚ್ಛೆಯುಳ್ಳ ಸಾಮಾನ್ಯ ಮಾನವರಾದ  ನಮಗೆ ನಮ್ಮ ಸ್ವರೂಪ ತಿಳಿದಿಲ್ಲ.  ಆದರೆ ಎಲ್ಲಾ ಜೀವಿಗಳಲ್ಲೂ ತಮ್ಮದೇ ಆದ ಅಂತರ್ಶಕ್ತಿ, ಆತ್ಮಬಲ ಎನ್ನುವುದು ಇದ್ದೇ ಇದೆ.  ಅದನ್ನು ಜತನದಿಂದ ಪೋಷಿಸಿ, ಸರಿಯಾದ ಪ್ರೇರಣೆಗಳಿಗೆ ಅರಳುವಂತಹ ಅಭ್ಯಾಸ ಮಾಡಿಸಿದಾಗ ಅದು ವೃದ್ಧಿಯಾಗುತ್ತದೆ ಮತ್ತು ಅಗಾಧವಾಗಿ ಬೆಳೆಯುತ್ತದೆ.  ತನ್ನಲ್ಲಿ ನಂಬಿಕೆಯೆಂಬ ಪ್ರಚಂಡ ವಿಶ್ವಾಸವಿದ್ದಾಗ ಬದುಕನ್ನು ಎದುರಿಸುವ ತಾಕತ್ತು ಬರುತ್ತದೆ.  ಈ ಅಗಾಧವಾದ ನಂಬಿಕೆಯು ಪರಿಸ್ಥಿತಿಗಳನ್ನು ನಿಭಾಯಿಸುವಾಗ ಸೋಲುವ ಭಯದಿಂದ ಹಿಮ್ಮೆಟ್ಟದಂತೆ ತಡೆಯುತ್ತದೆ.  ಸೋಲು ಎಂಬ ಪದದ ಪರಿಚಯವೇ ಇಲ್ಲದ ವ್ಯಕ್ತಿತ್ವ ಭೀಮಸೇನನದು.  ಯಾವುದೇ ಕಾರ್ಯವನ್ನಾಗಲೀ ಮಾಡಬಲ್ಲೆನೆಂಬ ಒಂದು ಛಲ, ಜಯಿಸಬಲ್ಲೆನೆಂಬ ಧೈರ್ಯ ನಮಗೆ ಭೀಮಸೇನ ಕೊಡುತ್ತಾನೆ.  ಭೀಮಸೇನನನ್ನು ನೆನೆದಾಗ ಉನ್ನತಮಟ್ಟದ ಧನಾತ್ಮಕ ಕಿರಣಗಳು ವಾಯು ತತ್ತ್ವದ ಪ್ರಚಂಡ ಶಕ್ತಿಯ ಆವಾಹನೆ ನಮ್ಮೊಳಗೆ ಆಗುತ್ತದೆ.  ತಲೆಯೆತ್ತಿ ನಿಲ್ಲುವ, ಹೋರಾಡುವ ಬಲ ಬರುತ್ತದೆ.

ವಿಷಯಾಧಾರ : ಶ್ರೀ ಬನ್ನಂಜೆ ಗೋವಿಂದಾಚಾರ್ಯರ "ಭೀಮಸೇನ" ಪುಸ್ತಕ
ಚಿತ್ರಕೃಪೆ : ಅಂತರ್ಜಾಲ


No comments:

Post a Comment