Tuesday, October 15, 2013

ಸರಸ್ವತೀ ನದಿಯಾಗಿ...


 ಯಾಕುಂದೇಂದು ತುಷಾರ ಹಾರ ಧವಲಾ | ಯಾ ಶುಭ್ರ ವಸ್ತ್ರಾನ್ವಿತಾ |
ಯಾ ವೀಣಾ ವರದಂಡ ಮಂಡಿತಕರಾ | ಯಾ ಶ್ವೇತ ಪದ್ಮಾಸನಾ ||
ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್ದೇವೈಃ  ಸದಾ ಪೂಜಿತಾ |
ಸಾ ಮಾಂ ಪಾತು ಸರಸ್ವತೀಂ ಭಗವತೀಂ ನಿಃಶೇಷ ಜಾಡ್ಯಾಪಹಾ ||
http://www.youtube.com/watch?v=3gNd2dTCCaM&list=PL0D3CF5D04328C190
ಶ್ರೀ ಅಗಸ್ತ್ಯ ಮಹಾ ಋಷಿಗಳ ರಚನೆಯಲ್ಲಿ ಸರಸ್ವತೀ ದೇವಿಯ ವರ್ಣನೆ ಸುಂದರವಾಗಿ ಮೂಡಿಬಂದಿದೆ.  ದೇವಿ ಸರಸ್ವತಿಯನ್ನು ಕುಬೇರನ ನವನಿಧಿಗಳಲ್ಲೊಂದಾದ ’ಕುಂದ’, ಮಲ್ಲಿಗೆ, ಕಮಲ, ಜ್ಞಾನ, ಶೋಭೆ, ಹಿಮಕಿರಣ, ಶೀತಲಕಿರಣಗಳನ್ನು ಹೊಂದಿದ ಚಂದ್ರನಂತೆ, ನಿರ್ಮಲವಾದ, ಸುಂದರವಾದ, ಬಿಳುಪಾದ ಹಸುವಿನಂತೆ, ಅತಿಯಾಗಿ ಶೋಭಿಸುವ ದೇಹಕಾಂತಿಯುಳ್ಳವಳು, ಸ್ವತಃ ಸರಸ್ವತೀ ದೇವಿಯೇ ಬುದ್ಧಿ, ಮೇಧಾ ಎಂದೆಲ್ಲಾ ಅನುಪಮವಾದ ಉಪಮೆಗಳಿಂದ ಸ್ತುತಿಸುತ್ತಾರೆ.  ವೀಣೆ, ವರದಂಡಗಳಿಂದ ಶೋಭಿತಳಾಗಿ, ಶುಭ್ರ-ಶ್ವೇತ ಪದ್ಮದಲ್ಲಿ ಆಸೀನಳಾಗಿರುವವಳು, ಬ್ರಹ್ಮ-ಅಚ್ಯುತ-ಶಂಕರರಿಂದ ಮೊದಲುಗೊಂಡು ಎಲ್ಲಾ ದೇವಾನು ದೇವತೆಗಳಿಂದಲೂ ಪೂಜಿಸಲ್ಪಡುವವಳಾದ, ನನ್ನ ತಾಯಿಯೇ, ಚಳಿ, ದಡ್ಡತನ, ಸೋಮಾರಿತನ, ಮಂಕುತನಗಳನ್ನು ಸಂಪೂರ್ಣವಾಗಿ, ಶೇಷವಿಲ್ಲದಂತೆ ನಾಶಪಡಿಸು ಮತ್ತು ನನ್ನನ್ನು ರಕ್ಷಿಸು ಎಂದು ಪ್ರಾರ್ಥಿಸುತ್ತಾರೆ.  ಸರ್ವ ಪಾಪಗಳನ್ನೂ ಕಳೆದು, ಅಜ್ಞಾನವನ್ನು ತೊಡೆದು, ಉದ್ಧರಿಸುವ ಸರಸ್ವತೀ ದೇವಿ  ನದೀ ರೂಪದಲ್ಲಿಯೂ ಈ ಎಲ್ಲಾ ವಿಶಿಷ್ಟ ಗುಣಗಳಿಂದಲೂ ಶೋಭಿಸುತ್ತಾ ಮುಕ್ತಿಯನ್ನು ಬಯಸಿ ಬರುವ ಭಕ್ತರಿಗೆ ವರದಾಯಕಳಾಗಿದ್ದಾಳೆ.

ಸನಾತನ ಕಾಲದಿಂದಲೂ ಭಾರತದಲ್ಲಿ ಸರಸ್ವತಿಯನ್ನು ವಿದ್ಯಾದೇವತೆಯಾಗಿಯೂ ಮತ್ತು ನದಿಯಾಗಿಯೂ ನಾವು ಪೂಜಿಸುತ್ತಾ ಬಂದಿದ್ದೇವೆ.   ಋಗ್ವೇದವು ಸರಸ್ವತಿಯನ್ನು ಅತ್ಯುತ್ತಮ ತಾಯಿ, ದೈವ ಮತ್ತು ನದಿಯೆಂದು ಕೊಂಡಾಡುವುದಲ್ಲದೇ, ಋಗ್, ಯಜು, ಸಾಮವೇದಗಳು ಸರಸ್ವತಿಯನ್ನು "ವಾಕ್" ಎಂದೂ ವಿವರಿಸಿವೆ.  ಸರಸ್ವತಿ ದೇವಿಯು ವೇದಗಳಿಗೆ, ಪುರಾಣಗಳಿಗೆ, ಲಲಿತಕಲೆಗಳಾದ ಸಂಗೀತ ಮತ್ತು ನೃತ್ಯಕ್ಕೆ ಅಭಿಮಾನಿ ದೇವತೆಯಾಗಿರುವಳು.  ಭಾಷೆ, ಲಿಪಿ, ಜ್ಞಾನ, ಮಾತು, ಚಿಂತನೆ, ವಿಚಾರಗಳು ಎಂಬ ದ್ರವ್ಯ ಪ್ರಾಕಾರದ ಆಸಕ್ತಿಗಳನ್ನು ಬೆಳೆಸುವವಳು ಹಾಗೂ ಕರುಣಿಸುವವಳಾದ್ದರಿಂದ ಅವಳು ನದಿಯಾಗಿ ತನ್ನ ದ್ರವ್ಯ ರೂಪವನ್ನು ಪ್ರಕಟಿಸಿಕೊಂಡವಳು.   ಪವಿತ್ರವಾದ ಮತ್ತು ಸ್ಫಟಿಕದಂತೆ ಶುಭ್ರವಾದ ಜಲವನ್ನು ಹೊಂದಿದವಳು.  ಆದ್ದರಿಂದಲೇ ಸರಸ್ವತಿ ದೇವಿಯು ಶುಭ್ರ ವರ್ಣಿಯು, ಬಿಳಿ ಬಟ್ಟೆಯನ್ನು ಧರಿಸಿದವಳು, ಚತುರ್ಭುಜೆ, ಬಲಗೈಯಲ್ಲಿ ಜಪಮಾಲೆ, ವ್ಯಾಖ್ಯಾನ ಮುದ್ರೆ ಹಾಗೂ ಎಡಗೈಯಲ್ಲಿ ಪುಸ್ತಕ, ತಾವರೆ ಹಿಡಿದಿರುವವಳು ಎಂಬ ವಿವರಣೆಯಿದೆ.  ಋಗ್ವೇದದಲ್ಲಿ ಬರುವ ನದಿಸ್ತುತಿ ಭಾಗವು ಸರಸ್ವತಿ ನದಿಯ ಪೂರ್ವಕ್ಕೆ ಯಮುನೆಯೂ, ಪಶ್ಚಿಮಕ್ಕೆ ಶುತಾದ್ರಿಯೂ ಹರಿಯುತ್ತದೆ ಎಂದು ತಿಳಿಸುತ್ತದೆ.  ದೇವೀ ಭಾಗವತದಲ್ಲಿ ಉಲ್ಲೇಖವಾಗಿರುವಂತೆ ಸರಸ್ವತಿ ದೇವಿಯು ವೈಕುಂಠದಲ್ಲಿ ಹರಿಯುವಾಗ ಗಂಗಾದೇವಿಯು ಕೊಟ್ಟ ಶಾಪದಿಂದಾಗಿ ಭಾರತ ವರ್ಷದಲ್ಲಿ ನದಿಯಾಗಿ ಅವತರಣ ಮಾಡಿದಳು.  ನದಿಯಾಗಿ ಸರಸ್ವತಿಯು ಪುಣ್ಯಸ್ವರೂಪಿಣಿಯೂ ಮತ್ತು ಪಾವನಕರಳೂ ಆಗಿರುವಳು.  ಸರಸ್ವತಿ ನದಿಗೆ ಈ ಹೆಸರು, ಅವಳು ಹೊಂದಿದ್ದ ಅನೇಕ ಸರೋವರ(ಸರಸ್ಸು)ಗಳಿಂದಾಗಿ ಬಂದಿತ್ತು.  ಶಿವಾಲಿಕ್ ಪರ್ವತದಲ್ಲಿ ಹುಟ್ಟಿ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ತೆಳ್ಳಗೆ ಹರಿದು ಮಾಯವಾಗುತ್ತಿರುವ ಗಗ್ಗರ್-ಹಕ್ಕರ್ ಎಂಬ ನದಿಯನ್ನು  ಕಳೆದುಹೋದ ಸರಸ್ವತಿಯ ಪೂರ್ವಾರ್ಧವೆಂದು ಉಲ್ಲೇಖಿಸುತ್ತಾರೆ.  ಪುಣ್ಯಸ್ವರೂಪಿಣಿಯೂ ಮತ್ತು ಪಾವನಕರಳೂ ಆಗಿರುವ ಸರಸ್ವತಿ ನದಿಯು ಈಗ "ಗುಪ್ತಗಾಮಿನಿ"ಯಾಗಿ ತ್ರಿವೇಣಿ ಸಂಗಮದಲ್ಲಿ ಯಮುನೆ ಮತ್ತು ಗಂಗೆಯನ್ನು ಕೂಡಿಕೊಳ್ಳುತ್ತಾಳೆ.

ಸರಸ್ವತಿ ಈಗ ನದಿಯಾಗಿ ಇಲ್ಲದೇ ಇದ್ದರೂ ಕೂಡ, ದೇವತೆಯಾಗಿ ಮತ್ತು ಶುಭ್ರತೆಯ ಪ್ರತೀಕವಾಗಿ ನಮ್ಮ ಜೊತೆ ಸದಾ ಇದ್ದಾಳೆ.  ನಮ್ಮ ಮನಸ್ಸಿನಲ್ಲಿನ ಕಲ್ಮಶಗಳನ್ನು ತೊಳೆಯುತ್ತಾ ಶುಭ್ರತೆಯ ಕಡೆ ನಡೆಯುವುದರಿಂದ ನಾವು ಸರಸ್ವತಿ ದೇವಿಯನ್ನು ನಮ್ಮೊಳಗೆ ಸದಾ ಹರಿಯುವ ತರಂಗಿಣಿಯಂತೆ ಜೀವಂತವಾಗಿಟ್ಟುಕೊಳ್ಳಬಹುದು.  ನದಿಯಾಗಿ ಹರಿದ ಸರಸ್ವತಿಯ ಶಕ್ತಿಯನ್ನು ನಮ್ಮೊಳಗೆ ಸದಾ ಜಾಗೃತವಾಗಿರಿಸಿಕೊಳ್ಳುವ ಪ್ರಯತ್ನ ಮಾಡಬೇಕು.  ಸುಮಧುರವಾದ, ಉನ್ನತ ಅರ್ಥ ಬರುವ ಪದಗಳನ್ನು ಪ್ರಯೋಗಿಸಿ ಮಾತನಾಡುವ ಮೂಲಕ ನಮ್ಮ ’ತಾಯಿ’ ’ವಾಕ್ ದೇವಿ’ಗೆ ಗೌರವ ಸೂಚಿಸಬಹುದು.  ಋಗ್ವೇದವು ಸರಸ್ವತಿ ನದಿಯನ್ನು ಹಾಲು ತುಪ್ಪ ಕೊಡುವ ನದಿ ಎಂದೂ ಹೇಳಿದೆ.  ನಾವು ನಮ್ಮ ವಾಕ್ ಶುದ್ಧಿಯನ್ನು ಸದಾ ಪಾಲಿಸುವುದರಿಂದ ಹಾಲು ಕೊಟ್ಟ ತಾಯಿಯ ಶುದ್ಧ ಪ್ರೇಮಕ್ಕೆ ಪ್ರಾಶಸ್ತ್ಯ ಕೊಟ್ಟಂತಾಗುತ್ತದೆ.

ಬದರಿ ಕ್ಷೇತ್ರದ ವ್ಯಾಸಗುಹೆಯ ಬಳಿ ನಮಗೆ ಸರಸ್ವತಿ ನದಿಯ ಉಗಮ ಸ್ಥಾನವು ಕಾಣಸಿಗುತ್ತದೆ.  ಭೋರ್ಗರೆಯುತ್ತಾ ನಾದವನ್ನು ಹೊಮ್ಮಿಸುವ ಸರಸ್ವತಿ ನಂತರದಲ್ಲಿ ಕ್ಷೀಣವಾಗಿ ಹರಿಯುತ್ತಾಳೆ.  ವೇದವ್ಯಾಸರು ಗಣಪತಿಗೆ ಮಹಾಭಾರತದ ಉಕ್ತಲೇಖನ ಮಾಡುತ್ತಿದ್ದಾಗ, ಸರಸ್ವತಿ ದೇವಿಯು ತುಂಬು ಸಂಭ್ರಮದಿಂದ ಅಬ್ಬರಿಸುತ್ತಾ  ಶಬ್ದ ಮಾಡುತ್ತಿದ್ದಳೆಂದೂ, ವ್ಯಾಸರು ಕುಪಿತಗೊಂಡು ಅಂತರ್ಗಾಮಿಯಾಗುವಂತೆ ಶಾಪವಿತ್ತರೆಂದೂ ಸ್ಥಳೀಯರು ಕಥೆ ಹೇಳುತ್ತಾರೆ.  ಇಲ್ಲಿಂದ ಮುಂದುವರೆದು ಸರಸ್ವತೀ ನದಿಯು ಪ್ರಯಾಗದಲ್ಲಿ ಗುಪ್ತಗಾಮಿನಿಯಾಗಿ ಗಂಗೆ ಮತ್ತು ಯಮುನೆಯರನ್ನು ಕೂಡಿಕೊಳ್ಳುವುದರಿಂದ "ತ್ರಿವೇಣಿ ಸಂಗಮ"ವಾಗಿದೆ.

ಬ್ರಹ್ಮ ಪುರಾಣದಲ್ಲಿನ  ಶ್ರೀ ವೇಂಕಟೇಶ ಮಹಿಮೆಯ ಕಥೆಯಲ್ಲಿ ಶೇಷ ದೇವರ ವಿಚಾರ ಬರುತ್ತದೆ.  ಭಗವಂತ ಸದಾ ಶೇಷಶಾಯಿಯೇ ಆಗಿದ್ದರೂ ಕೂಡ, ಶೇಷನಿಗೆ ತೃಪ್ತಿಯೆನ್ನುವುದಿಲ್ಲ.  ಭಗವಂತನನ್ನು ಇನ್ನೂ ಅಧಿಕವಾಗಿ ಸೇವಿಸಬೇಕು ಎಂಬ ಬಯಕೆಯಿಂದ ತಪಸ್ಸು ಮಾಡಿದಾಗ ಭಗವಂತ ಶೇಷನನ್ನು ಕುರಿತು ಕೇಳುತ್ತಾನೆ.  ಸದಾ ಕಾಲವೂ  ನಿನ್ನ ಮೇಲೆಯೇ ಪವಡಿಸಿರುವ ನನ್ನನ್ನು ಇನ್ನೂ ಹೆಚ್ಚು ಸೇವಿಸಬೇಕೆಂಬ ಬಯಕೆ ಏಕೆ ಬಂತು? ಎಂದು.   ಆಗ ಶೇಷದೇವರು ಭಗವಂತನಿಗೆ ಉತ್ತರಿಸುತ್ತಾನೆ "ನೀನು ಅವತಾರವೆತ್ತಿ ಭೂಮಿಯಲ್ಲಿ ಪ್ರಕಟವಾದಾಗಲೂ ಕೂಡ ನಾನು ನಿನ್ನ ಜೊತೆಗೇ ಇರಬೇಕು.  ನೀನು ವೇಂಕಟೇಶನಾಗಿ, ಶಿಲೆಯಲ್ಲಿ ಪ್ರಕಟಗೊಂಡಾಗ, ನಾನೂ ಶಿಲೆಯಾಗಿ ಪರ್ವತ ರೂಪದಲ್ಲಿರುತ್ತೇನೆ, ನೀನು ಸದಾ ನನ್ನ ಮೇಲೆಯೇ ಭೂಮಿಯಲ್ಲೂ ಪವಡಿಸಿರಬೇಕು ಎಂದು ಕೇಳಿಕೊಳ್ಳುತ್ತಾನೆ" ಹಾಗೂ  ಭಗವಂತನ ಕೃಪೆಗೊಳಗಾಗುತ್ತಾನೆ.  ಶೇಷದೇವರು ಸಕಲ ಸತ್ಶಾಸ್ತ್ರಗಳ ಅಭಿಮಾನಿ ದೇವರು.  ಎಲ್ಲ ಜೀವಿಗಳಿಗೂ, ಜೀವಿಗಳ ಮನಸ್ಸಿಗೂ ಅಭಿಮಾನಿ ದೇವರಾದ ಶೇಷದೇವರ ಸಂಕೇತವೇ ತಿರುಪತಿಯ ಬೆಟ್ಟ ಮತ್ತು ಅದರ ಮೇಲೆ ಕುಳಿತಿರುವ ಭಗವಂತನು ಸರ್ವ ಶಾಸ್ತ್ರಗಳಿಗೆ ಒಡೆಯನಾಗಿರುತ್ತಾನೆ.  ಆದ್ದರಿಂದ ತಿರುಪತಿಯಲ್ಲಿ ಭಗವಂತನ ದರ್ಶನ ವಿಶೇಷವಾಗಿದೆ.  ಶೇಷ ದೇವರಂತೆಯೇ ದೇವತೆಗಳಲ್ಲೆಲ್ಲಾ ಉತ್ತಮಳಾದ ಸರಸ್ವತೀ ದೇವಿಯು, ಭಗವಂತನನ್ನು ಸದಾ ನೆನೆಯುತ್ತಾ, ಶರಣಾಗುವ ಭಕ್ತರು ಬಂದು ಮಿಂದಾಗ, ಅವರ ಪಾಪಗಳನ್ನೆಲ್ಲಾ ತೊಳೆದು, ಅವರಿಗೆ ಸತ್ಶಾಸ್ತ್ರದಲ್ಲಿ ಆಸಕ್ತಿ ಹುಟ್ಟಿಸಿ, ಮುಕ್ತಿ ಮಾರ್ಗದಲ್ಲಿ ತನ್ನ ಅಳಿಲು ಸೇವೆ ಸಲ್ಲಿಸಲು ಶ್ರೇಷ್ಠ ನದಿಯಾಗಬೇಕು ಎಂಬ ಮಹತ್ತರವಾದ ಆಸೆಯಿಂದ ತಪಸ್ಸು ಮಾಡುತ್ತಿರುತ್ತಾಳೆ.  ಇದೇ ಸಮಯದಲ್ಲಿ ಪುಲಸ್ತ್ಯ ಋಷಿಗಳು ಅಲ್ಲಿಗೆ ಬರುತ್ತಾರೆ.  ಸರಸ್ವತಿ ದೇವಿ ಗಮನಿಸುವುದಿಲ್ಲ ಮತ್ತು ಎದ್ದು ನಿಂತು ಅವರಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುವುದಿಲ್ಲ.  ಇದರಿಂದ ಮನಸ್ಸಿಗೆ ನೋವಾದ ಪುಲಸ್ತ್ಯರು ನೀನು ಯಾವ ಕಾರಣಕ್ಕೆ ತಪಸ್ಸು ಮಾಡುತ್ತಿರುವೆಯೋ ಅದು ನೆರವೇರದೇ ಹೋಗಲಿ, ಸಕಲ ನದಿಗಳಲ್ಲಿ ಶ್ರೇಷ್ಠಳೆಂದು ಗಂಗೆಯೇ ಗುರುತಿಸಲ್ಪಡುವಳು ಎಂದು ಶಪಿಸಿಬಿಡುತ್ತಾರೆ.  ಕುಪಿತಗೊಂಡ ಸರಸ್ವತೀ ದೇವಿ ಕೂಡ ನಿನ್ನ ಕುಲದಲ್ಲಿ ರಾಕ್ಷಸರೇ (ಪುಲಸ್ತ್ಯರ ವಂಶಜರೇ ರಾವಣ ಹಾಗೂ ಕುಂಭಕರ್ಣರು) ಹುಟ್ಟಲಿ ಎಂದು ಮರುಶಾಪ ಕೊಟ್ಟುಬಿಡುತ್ತಾಳೆ.  ಪುಲಸ್ತ್ಯರು   ಪಶ್ಚಾತ್ತಾಪದಿಂದ ಸರಸ್ವತಿದೇವಿಗೆ ಶರಣಾಗುತ್ತಾರೆ.  ಆಗ ಸರಸ್ವತಿ ದೇವಿ ಪುಲಸ್ತ್ಯರಿಗೆ ನಿನ್ನ ವಂಶದ ಕೊನೆಯ ಮಗುವು (ವಿಭೀಷಣ) ವಿಷ್ಣು ಭಕ್ತನಾಗಿ ಹುಟ್ಟುವನು ಎಂದು ತಿಳಿಸುತ್ತಾಳೆ.  ಬ್ರಹ್ಮ ದೇವರಲ್ಲಿ ಸರಸ್ವತಿ ದೇವಿ ತನ್ನ ಅಳಲು ತೋಡಿಕೊಳ್ಳುತ್ತಾಳೆ.  ಅದಕ್ಕೆ ಬ್ರಹ್ಮ ದೇವರು, ಅದು ಬ್ರಾಹ್ಮಣ ಶಾಪ, ನೀನು ಅನುಭವಿಸಲೇ ಬೇಕು.  ಪುಲಸ್ತ್ಯರು ನೀನು ಶ್ರೇಷ್ಠ ನದಿಯಾಗಲಾರೆ ಎಂದಿದ್ದಾರೆಯೇ ಹೊರತು ಶ್ರೇಷ್ಠ ಪುಷ್ಕರಣಿ/ ತೀರ್ಥವಾಗಲಾಗದು ಎಂದಿಲ್ಲ.  ಆದ್ದರಿಂದ ನಿನ್ನ ತಪಸ್ಸು ಮುಂದುವರೆಸು ಎನ್ನುತ್ತಾರೆ.  ಸರಸ್ವತಿ ದೇವಿ ತಪಸ್ಸು ಮುಂದುವರೆಸಿ, ಶ್ರೇಷ್ಠ ಸರೋವರ/ ಪುಷ್ಕರಣಿ / ತೀರ್ಥಳಾಗಲು ವರ ಪಡೆಯುತ್ತಾಳೆ ಮತ್ತು ತಿರುಪತಿಯಲ್ಲಿ  "ಸ್ವಾಮಿ ಪುಷ್ಕರಣಿ"ಯೆಂದು ಕರೆಸಿಕೊಳ್ಳುತ್ತಾಳೆ.  ಕೃಷ್ಣನಿಗೆ ತಾಯಿಯಾದ ಯಶೋದೆಯೇ ಬಕುಳಾದೇವಿಯಾಗಿ, ತಿರುಪತಿಯ ಸ್ವಾಮಿ ಪುಷ್ಕರಿಣಿಯಲ್ಲಿ ಸರಸ್ವತೀ ನದಿಯ ನೀರು ನಿಲ್ಲಲು ಆಸರೆಯಾಗುತ್ತಾಳೆ.   ಹೀಗೆ ಶ್ರೇಷ್ಠವಾದ "ಸ್ವಾಮಿ ಪುಷ್ಕರಿಣಿ"ಯೆಂದು ಕರೆಸಿಕೊಂಡ ತಾಯಿ ಸರಸ್ವತಿ ನದಿಯಾಗಿ ಹರಿಯುವಾಗಲೂ ತನ್ನ ಮಡಿಲಲ್ಲಿ ಅನೇಕ ತೀರ್ಥಗಳನ್ನು ಹೊಂದಿದ್ದಳು ಎಂಬ ಅಂಶ ತಿಳಿಯುತ್ತದೆ.

 
ಮಹಾಭಾರತದ ಶಲ್ಯಪರ್ವದಲ್ಲಿ ಬಲರಾಮ ಕುರುಕ್ಷೇತ್ರ ಯುದ್ಧಕ್ಕೆ ಮೊದಲು ತೀರ್ಥಯಾತ್ರೆ ಹೊರಟುಬಿಡುತ್ತಾನೆ.  ತಾನು ಕೌರವರಿಗಾಗಲೀ ಪಾಂಡವರಿಗಾಗಲೀ ಯುದ್ಧದಲ್ಲಿ ಸಹಾಯ ಮಾಡುವುದಿಲ್ಲವೆಂದು ತಿಳಿಸಿರುತ್ತಾನೆ.  ಶ್ರೀಕೃಷ್ಣನು ಪಾಂಡವರಿಗೆ ಮಾತ್ರವಲ್ಲದೇ ಕೌರವರಿಗೂ ಸಹಾಯ ಮಾಡಬೇಕೆಂದು ಬಲರಾಮ ಸೂಚಿಸಿದಾಗ ಕೃಷ್ಣ ಆ ಮಾತನ್ನು ಗಣನೆಗೇ ತೆಗೆದುಕೊಳ್ಳುವುದಿಲ್ಲ.  ಬಲರಾಮ ತೀರ್ಥಯಾತ್ರೆಗೆ "ಸರಸ್ವತಿ" ನದಿಯ ತೀರಕ್ಕೆ ಹೊರಟು ಬಿಡುತ್ತಾನೆ.  ಆ ಕಾಲದಲ್ಲಿ ನದಿಯು ತುಂಬಿ ಹರಿಯುತ್ತಾ ಬಹು ವಿಸ್ತಾರವಾಗಿ ಪಸರಿಸಿದ್ದಳು ಎಂಬುದು ಬಲರಾಮನ ತೀರ್ಥಯಾತ್ರೆಯ ವಿವರಗಳನ್ನು ಓದಿದಾಗ ತಿಳಿಯುತ್ತದೆ.   ತೀರ್ಥಯಾತ್ರೆಯಲ್ಲಿ ಬ್ರಾಹ್ಮಣರಿಗೆ ಕೊಡಬೇಕಾದ ದಾನಕ್ಕಾಗಿ ಪದಾರ್ಥಗಳನ್ನು ಯಥೇಚ್ಛವಾಗಿ ತೆಗೆದುಕೊಂಡು ಬಲರಾಮನು ಪುಣ್ಯಪ್ರದವಾದ ’ಪ್ರಭಾಸ’ ಕ್ಷೇತ್ರಕ್ಕೆ ಬರುತ್ತಾನೆ.  ಈ ಕ್ಷೇತ್ರ ಶಾಪಗ್ರಸ್ತನಾಗಿದ್ದ ಚಂದ್ರನು ಸರಸ್ವತಿ ನದಿಯ ಪ್ರಭಾಸತೀರ್ಥದಲ್ಲಿ ಸ್ನಾನ ಮಾಡಿ ಕಳೆದುಕೊಂಡಿದ್ದ ತನ್ನ ಕಾಂತಿಯನ್ನು ಮರಳಿ ಪಡೆದ ಕ್ಷೇತ್ರವಾಗಿದೆ.  ಹೀಗೆ ಬಲರಾಮನು ನದೀತೀರದಲ್ಲಿ ಮುಂದುವರೆಯುತ್ತಾ ಅನೇಕ ತೀರ್ಥಗಳಲ್ಲಿ ಮಿಂದು, ದಾನ, ಧರ್ಮಾದಿಗಳನ್ನು ಮಾಡುತ್ತಾ ಮುಂದೆ ಸಾಗುತ್ತಾನೆ.  ಸರಸ್ವತೀ ನದಿಯು ಪ್ರಭಾಸತೀರ್ಥ, ಉದಪಾನತೀರ್ಥ, ವಿನಶನತೀರ್ಥ ಸುಭೂಮಿಕಾತೀರ್ಥ, ಗರ್ಗಸ್ರೋತತೀರ್ಥ ಹೀಗೆ ಇನ್ನೂ ಅನೇಕ ತೀರ್ಥಗಳನ್ನು ತನ್ನ ಮಡಿಲಿನಲ್ಲಿ ಸೇರಿಸಿಕೊಂಡಿದೆ.  ಒಂದೊಂದು ತೀರ್ಥಕ್ಕೂ ಅದರದೇ ಆದ ಮಹಿಮೆ ಮತ್ತು ಕಥೆಯ ನಂಟು ಕೂಡ ಇದೆ.  ಸರಸ್ವತೀ ನದಿಯು ಅದೆಷ್ಟು ಕರುಣಾಮಯಿ ಮತ್ತು ಪವಿತ್ರಳು ಎಂದರೆ, ಒಮ್ಮೆ ತನ್ನ ತೀರ ನೈಮಿಷಾರಣ್ಯದಲ್ಲಿ ಸೇರಿದ್ದ ಅಸಂಖ್ಯಾತ ಋಷಿಗಳು ಸ್ನಾನಮಾಡಲಾಗದೇ ಪರಿತಪಿಸಿದಾಗ ತಾನು ಹರಿಯುವ ತನ್ನ ದಿಕ್ಕನ್ನೇ ಬದಲಾಯಿಸಿಕೊಂಡು ಹಿಂತಿರುಗಿ ಪೂರ್ವಕ್ಕೆ ಹರಿದು ಬಂದು ಋಷಿಗಳ ಅಭೀಷ್ಟವನ್ನು ನೆರವೇರಿಸಿದಳಂತೆ.  ಎಲ್ಲರೂ ಸಂತೃಪ್ತರಾದ ನಂತರ ಮತ್ತೆ  ದಿಕ್ಕನ್ನು ಬದಲಿಸಿಕೊಂಡು ಪಶ್ಚಿಮ ದಿಕ್ಕಿನಲ್ಲಿ ಹರಿದು ಹೋದಳೆಂಬ ಉಲ್ಲೇಖ ಮಹಾಭಾರತದಲ್ಲೇ ಬಂದಿದೆ.  ಇದರಿಂದ ನಮಗೆ ಸರಸ್ವತೀ ನದಿಯು ಪಡೆದಿದ್ದ ಪ್ರಾಮುಖ್ಯತೆ, ಅವಳ ವ್ಯಾಪ್ತಿಯ ಅರಿವು ಕೊಂಚ ಸಿಕ್ಕುತ್ತದೆ.  ಹೀಗೆ ತುಂಬಿ ಹರಿಯುತ್ತಿದ್ದ ನದಿಯು ಕಾಲ ಕಳೆದಂತೆ ತನ್ನೆಲ್ಲಾ ಸರಸು (ತೀರ್ಥಗಳು)ಗಳನ್ನೂ, ತನ್ನ ಮಡಿಲಿಗೆ ಬಂದು ಸೇರುತ್ತಿದ್ದ ಯಮುನೆ ಮತ್ತು ಶುತಾದ್ರಿ ನದಿಗಳನ್ನೂ ಕಳೆದುಕೊಂಡು ಸರಸ್ವತಿ ಕೃಶಳಾಗುತ್ತಾ ನೇಪತ್ಯಕ್ಕೆ ಸರಿದುಬಿಡುತ್ತಾಳೆ.  ಪ್ರಮುಖ ನದಿಗಳಾಗಿ ಗಂಗೆ ಯಮುನೆಯರಿಗೆ ಜಾಗ ಬಿಟ್ಟುಕೊಟ್ಟು ತಾನು ಗುಪ್ತಗಾಮಿನಿಯಾಗಿಬಿಡುತ್ತಾಳೆ.

ಸರಸ್ವತಿ ನದಿ ಏಳು ಭಾಗಗಳಾಗಿ ಇಡೀ ಜಗತ್ತನ್ನೇ ವ್ಯಾಪಿಸಿದ್ದಳು ಎಂಬ ಅಂಶ ಮಹಾಭಾರತದಲ್ಲಿ ಬಂದಿದೆ.  ತಪೋಬಲ ಸಂಪನ್ನರಾದ ಋಷಿಗಳು ಸರಸ್ವತಿಯನ್ನು ಎಲ್ಲೆಲ್ಲಿಗೆ ಆಹ್ವಾನಿಸಿದರೋ ಅಲ್ಲೆಲ್ಲಾ  ಬಂದು ಮಹರ್ಷಿಗಳ ಪೂಜೆಗೆ, ಯಜ್ಞ ಯಾಗಾದಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾಳೆ.  ಈ ಏಳು ನಾಮಧೇಯಗಳು ಹೀಗಿವೆ -
ಸುಪ್ರಭಾ ಕಾಂಚನಾಕ್ಷೀ ಚ ವಿಶಾಲಾ ಚ ಮನೋರಮಾ |
ಸರಸ್ವತೀ ಚೌಘವತೀ ಸುರೇಣುರ್ವಿಮಲೋದಕಾ || - ಸುಪ್ರಭಾ, ಕಾಂಚನಾಕ್ಷಿ, ವಿಶಾಲಾ, ಮನೋರಮಾ, ಸರಸ್ವತೀ, ಓಘವತೀ, ಸುರೇಣು ಮತ್ತು ವಿಮಲೋದಕಾ.

ಸರಸ್ವತಿಯ ಒಂದೊಂದು ಕವಲಿಗೂ ಒಂದೊಂದು ಕಥೆ ಮತ್ತು ಹೆಸರು ಬಂದಿದೆ.  ಮೊದಲನೆಯದಾಗಿ  ಪುಷ್ಕರತೀರ್ಥದಲ್ಲಿ ಬ್ರಹ್ಮದೇವನು ಮಹಾಯಜ್ಞವೊಂದನ್ನು ಮಾಡಿದಾಗ ಎಲ್ಲ ಸರಿತ್ತುಗಳಿಗೂ ಶ್ರೇಷ್ಠಳಾದ ಸರಸ್ವತಿಯನ್ನು ಮಂತ್ರಪೂರ್ವಕವಾಗಿ ಆಹ್ವಾನಿಸುತ್ತಾನೆ.  ಆ ಸಮಯದಲ್ಲಿ ಸರಸ್ವತಿಯು ’ಸುಪ್ರಭಾ’ ಎಂಬ ಹೆಸರಿನಲ್ಲಿ ಆವಿರ್ಭೂತಳಾಗುತ್ತಾಳೆ.  ಎರಡನೆಯದಾಗಿ ನೈಮಿಷಾರಣ್ಯದಲ್ಲಿ ಅನೇಕ ಮಹರ್ಷಿಗಳು ಒಟ್ಟಿಗೇ ಸೇರಿ ಸತ್ರಯಾಗ ಮಾಡುವ ಸಮಯದಲ್ಲಿ, ಮುನಿಗಳ ನಡುವೆ ವೇದಗಳ ವಿಷಯವಾಗಿ ವಿಚಿತ್ರ ಕಥೆಗಳಿಂದ ಕೂಡಿದ ಸಂಭಾಷಣೆ ನಡೆಯುತ್ತದೆ.  ಅಲ್ಲಿ ನೆರೆದಿದ್ದ ಮುನಿಗಳೆಲ್ಲರೂ ಕೂಡಿ ಸರಸ್ವತಿಯನ್ನು ಸ್ಮರಿಸುತ್ತಾರೆ.  ಸಮಾವೇಶಗೊಂಡಿದ್ದ ಮಹಾತ್ಮರ ಸಹಾಯಾರ್ಥವಾಗಿ ನೈಮಿಷಾರಣ್ಯದಲ್ಲಿ ’ಕಾಂಚನಾಕ್ಷೀ’ ಎಂಬ ಹೆಸರಿನಲ್ಲಿ ಪ್ರಕಟಗೊಳ್ಳುತ್ತಾಳೆ.  ಮೂರನೆಯದಾಗಿ ಗಯಾದೇಶದಲ್ಲಿ ಗಯಾರಾಜನು ಮಹಾಯಜ್ಞ ಮಾಡಿದಾಗ ಸರಿತ್ತುಗಳಲ್ಲಿ ಶ್ರೇಷ್ಠಳೆಂದು ಮಂತ್ರಪೂರ್ವಕವಾಗಿ ಸರಸ್ವತಿಯನ್ನು ಆಹ್ವಾನಿಸುತ್ತಾನೆ.  ಯಜ್ಞದ ಸಮಯದಲ್ಲಿ ಆಹೂತೆಯಾಗಿ ಬಂದ ಸರಸ್ವತಿಯನ್ನು ಮಹರ್ಷಿಗಳು ’ವಿಶಾಲಾ’ ಎಂದು ಕರೆದಿದ್ದಾರೆ.  ನಾಲ್ಕನೆಯದಾಗಿ ಉತ್ತರಕೋಸಲ ಪ್ರದೇಶದಲ್ಲಿ ಉದ್ದಾಲಕ ಮಹರ್ಷಿಯು ಯಜ್ಞವನ್ನು ಮಾಡಿ, ಸರಸ್ವತೀ ನದಿಯನ್ನು ಸ್ಮರಿಸುತ್ತಾನೆ.  ಋಷಿಗಳು ಸರಸ್ವತಿಯ ಮನೋಹರವಾದ ರೂಪವನ್ನು ಕಲ್ಪಿಸಿಕೊಂಡು ಚಿಂತಿಸಿದುದರಿಂದ ಅಲ್ಲಿ ಸರಸ್ವತಿ ’ಮನೋರಮಾ’ ಎಂದು ಪೂಜಿಸಿಕೊಂಡಳು.  ಐದನೆಯದಾಗಿ  ಮಹಾತ್ಮನಾದ ಕುರುರಾಜನು ಕುರುಕ್ಷೇತ್ರದಲ್ಲಿ ಯಜ್ಞಮಾಡಿದಾಗ ಅಲ್ಲಿಯೇ ಹರಿಯುತ್ತಿದ್ದ ಸರಸ್ವತಿಯನ್ನು ಋಷಿಗಳು ’ಸುರೇಣು’ ಎಂದು ಕರೆದರು ಹಾಗೂ ದಕ್ಷನು ಗಂಗಾದ್ವಾರದಲ್ಲಿ ಯಾಗ ಮಾಡಿ, ಸರಸ್ವತಿಯನ್ನು ಆಹ್ವಾನಿಸಿದಾಗ ಯಾಗದ ಸ್ಥಳಕ್ಕೆ ಶೀಘ್ರವಾಗಿ ಹರಿದು ಬಂದ ಸರಸ್ವತಿಯು ’ಸುರೇಣು’ವಾದಳು.  .  ಆರನೆಯದಾಗಿ ಮಹಾತ್ಮರಾದ ವಸಿಷ್ಠರು ಕುರುಕ್ಷೇತ್ರದಲ್ಲಿ ಯಜ್ಞಮಾಡಿ ಸರಸ್ವತಿಯನ್ನು ಆಮಂತ್ರಿಸಿದಾಗ ಮಹರ್ಷಿಯ ಮೇಲಿನ ಪ್ರೀತಿಯಿಂದ ಯಜ್ಞಶಾಲೆಗೆ ಆಗಮಿಸಿದ ಸರಸ್ವತಿಯನ್ನು ಅಲ್ಲಿದ್ದ ಬ್ರಾಹ್ಮಣ ಶ್ರೇಷ್ಠರು ’ಓಘವತೀ’ ಎಂದು ಕರೆದರು.  ಕೊನೆಯ ಹಾಗೂ ಏಳನೆಯ ಕವಲಾಗಿ ಪಿತಾಮಹನು ಹಿಮವತ್ಪರ್ವತದಲ್ಲಿ ಪುನಃ ಯಜ್ಞ ಮಾಡಿ ಸರಸ್ವತಿಯನ್ನು ಆವಾಹಿಸಿದಾಗ ಬ್ರಹ್ಮನ ಆವಾಹನವನ್ನು ಗೌರವಿಸಿ ಆಗಮಿಸಿದ ಸರಸ್ವತಿಯನ್ನು ’ವಿಮಲೋದಾ’ ಎಂದು ಕರೆದರು.

ಶ್ರೀವಾದಿರಾಜ ಸ್ವಾಮಿಗಳ "ತೀರ್ಥ ಪ್ರಬಂಧ" ಕೃತಿಯಲ್ಲಿ ಸೌರಾಷ್ಟ್ರದ "ಪ್ರಭಾಸಕ್ಷೇತ್ರ"ದಲ್ಲಿ ಕಪಿಲಾ ನದಿಯು ಸರಸ್ವತೀ ನದಿಯನ್ನೂ, ಸರಸ್ವತೀ ನದಿ ಹಿರಣ್ಯೆಯನ್ನೂ, ಹಿರಣ್ಯಾನದಿಯು ಸಮುದ್ರವನ್ನೂ ಸೇರುತ್ತದೆ ಎಂದಿದ್ದಾರೆ.  ಆದ್ದರಿಂದ ಇದೂ ಕೂಡ ತ್ರಿವೇಣೀ ಸಂಗಮ ಮತ್ತು ಇದಕ್ಕೆ "ಪ್ರಾಚೀತ್ರಿವೇಣೀ" ಎಂಬ ಹೆಸರಿದೆ ಎಂದಿದ್ದಾರೆ.   ಈ ಕ್ಷೇತ್ರವನ್ನೂ, ನದಿಗಳ ಸಂಗಮವನ್ನೂ ವರ್ಣಿಸುತ್ತಾ ವಾದಿರಾಜ ಗುರುಗಳು "ಸರಸ್ವತೀ ಹಿರಣ್ಯಾಭ್ಯಾಂ ಸಗೋ ಯತ್ರಪರಾಂಬುಧೇಃ | ಪ್ರಭಾಸಾಖ್ಯಂ ತದಾಭಾತಿ ಪ್ರಭಾಸ ಹಿ ಯತೋ ಭುವಃ" || - ಯಾವ ಪ್ರಭಾಸ ಕ್ಷೇತ್ರದಲ್ಲಿ ಪಶ್ಚಿಮ ಸಮುದ್ರಕ್ಕೆ ಸರಸ್ವತೀ ಮತ್ತು ಹಿರಣ್ಯಾನದಿಗಳ ಸಂಗಮವು ಉಂಟಾಗುತ್ತದೆಯೋ ಅಂತಹ ಪ್ರಾಭಾಸವೆಂಬ ಕ್ಷೇತ್ರವು ಶೋಭಿಸುತ್ತದೆ ಎಂದಿದ್ದಾರೆ. ಶ್ರೀ ರಾಘವೇಂದ್ರ ಸ್ವಾಮಿಗಳು ರಚಿಸಿರುವ "ನದಿ ತಾರತಮ್ಯ" ಸ್ತೋತ್ರದಲ್ಲಿ ಕೂಡಾ "ಸ್ವಾಮಿ ಚಂದ್ರಾ ಪುಷ್ಕರಿಣ್ಯೌ ಮಾನಸಂ ಚ ಸರೋವರಂ |  ಕೃಷ್ಣವೇಣ್ಯಾಃ ಸಮಸ್ತಾಭ್ಯಃ ಕಾವೇರೀ ಚ ಸರಸ್ವತೀ" || ಎಂಬ ಉಲ್ಲೇಖವಿದೆ. 

ನಮ್ಮ ಸಂಸ್ಕೃತಿಯಲ್ಲಿ ನದಿಗಳನ್ನು ಸ್ತ್ರೀಯರಿಗೆ ಹೋಲಿಸಲಾಗಿದೆ.  ಸ್ತ್ರೀ ಶಕ್ತಿಯೇ ಸೃಷ್ಟಿಗೆ, ಸಂಸಾರಕ್ಕೆ, ವ್ಯುತ್ಪತ್ತಿಗೆ ಎಲ್ಲದಕ್ಕೂ ಮೂಲ.  ಪ್ರಳಯ ಕಾಲದಲ್ಲಿ ವಟಪತ್ರಶಾಯಿಯಾಗಿ ಮಲಗಿದ್ದ ಶ್ರಿಮನ್ನಾರಾಯಣನು ಸೃಷ್ಟಿಗಾಗಿ ಎಚ್ಚರಗೊಂಡಾಗ ಅಂಭ್ರಣೀ ದೇವಿಯಾಗಿ ಲಕ್ಷ್ಮೀದೇವಿಯು ಭಗವಂತನನ್ನು ವೇದಾದಿಗಳಿಂದ ಸ್ತುತಿಸುತ್ತಾಳೆ.  ಹೀಗೆ ಅಂಭ್ರಣೀದೇವಿಯನ್ನು ಪ್ರೇರಿಸಿದ ಭಗವಂತ ಮೊಟ್ಟ ಮೊದಲು ವೇದಗಳನ್ನು ಅಭಿವ್ಯಕ್ತಗೊಳಿಸುತ್ತಾನೆ.   ಸೃಷ್ಟಿಯ ಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಭಗವಂತ ಅಂಭ್ರಣೀ ದೇವಿಯು ತನ್ನನ್ನು ಸ್ತುತಿಸುವಂತೆ ಮಾಡಿ, ಪ್ರೇರಕ ಶಕ್ತಿಯಾಗಿ ಸ್ತ್ರೀಶಕ್ತಿಗೆ ಪ್ರಾಧಾನ್ಯತೆ ಕೊಡುತ್ತಾನೆ.  ಶ್ರೀಮದ್ಭಾಗವತದಲ್ಲಿ ಬರುವ ಮೈತ್ರೇಯ ಹಾಗೂ ವಿದುರರ ಸಂವಾದದಿಂದ ತಿಳಿಯುವುದೇನೆಂದರೆ ಭಗವಂತನಾದ ಶ್ರೀಹರಿಯು ಜಡಪ್ರಕೃತಿಯನ್ನೂ ಮತ್ತು ಅದರ ಅಭಿಮಾನಿನಿ ಚೇತನಪ್ರಕೃತಿಯನ್ನೂ ಉಪಯೋಗಿಸಿಕೊಂಡು ಜಗತ್ತನ್ನು ಸೃಷ್ಟಿಸಿದನು. ಪ್ರಳಯ ಕಾಲದಲ್ಲಿ ಶ್ರೀಹರಿಯ ಪತ್ನಿಯಾದ ಚಿತ್ಪ್ರಕೃತಿ (ಜಡ ಹಾಗೂ ಚೇತನ)ದೇವಿಯಾಗಿ ಲಕ್ಷ್ಮಿಯು ಸುಪ್ತಳಾಗಿರುವಳು.  ಸೃಷ್ಟಿಯ ಕಾಲದಲ್ಲಿ  ಹರಿಯೇ ಪ್ರಧಾನನಾದುದರಿಂದ ’ಮಯ’ನೆನಿಸುವನು ಮತ್ತು ಚೇತನ-ಜಡ ಪ್ರಕೃತಿಗಳೆರಡೂ ’ಮಾಯಾ’ ಎನಿಸುವುವು.  ಈ ಉಭಯ ಪ್ರಕೃತಿಗಳಲ್ಲೂ ಶ್ರೀಹರಿಯು ತನ್ನ ವೀರ್ಯವನ್ನಿಟ್ಟು, ಸಾಕ್ಷಾತ್ ಲಕ್ಷ್ಮೀದೇವಿಯಲ್ಲಿ ಪ್ರಳಯ ಕಾಲದಲ್ಲಿ ಸುಪ್ತವಾಗಿದ್ದ ’ಜಗತ್ಸೃಷ್ಟಿ’ಯ ಶಕ್ತಿಯನ್ನು ಉದ್ರೇಕಗೊಳಿಸುವನು.  ಪರಿಣಾಮವಾಗಿ ’ಮಹತ್ತತ್ವ’ವೂ, ಬ್ರಹ್ಮದೇವರೂ  ಹುಟ್ಟಿ, ಸೃಷ್ಟಿಯ ಕಾರ್ಯವು ಮುಂದುವರೆಯಿತು.  ಹೀಗೆ ಭಗವಂತನು ಸ್ತ್ರೀಶಕ್ತಿಯ ಅಭಿವ್ಯಕ್ತತೆಯನ್ನು ಸೃಷ್ಟಿಯ ಕಾಲದಲ್ಲಿಯೇ ಪ್ರಕಟಪಡಿಸಿದ್ದಾನೆ.  ನಿತ್ಯ ಸಂಸಾರಿಗಳನ್ನು ಸೃಷ್ಟಿಸಿ, ಸ್ತ್ರೀಯನ್ನು ಕೇಂದ್ರ ಬಿಂದುವಾಗಿಸಿ ಸಂಸಾರದ ಎಳೆಗಳನ್ನು ಜೋಡಿಸಿ ಹಿಡಿದುಕೊಂಡು, ದಿಕ್ಕು ತಪ್ಪದಂತೆ ಸಂಸಾರ ರಥವನ್ನು ನಡೆಸುವ ಶಕ್ತಿಯನ್ನಾಗಿಸಿದ್ದಾನೆ.  


ಸರಸ್ವತಿ ನದಿಯು ಕೂಡ ಸ್ತ್ರೀಯ ವ್ಯಕ್ತಿತ್ವಕ್ಕೆ ಕನ್ನಡಿಯಂತಿದ್ದವಳು.  ತನ್ನ ಮಡಿಲ ತುಂಬಾ ಅನೇಕ ಸರಸ್ಸುಗಳನ್ನು ಹೊಂದಿದ್ದ ಸರಸ್ವತಿ ಹಲವಾರು ಮಕ್ಕಳನ್ನು ಹೆತ್ತ ತಾಯಿಯಂತಿದ್ದಳು.  ತಾಯಿಯು ತನ್ನ ಮಡಿಲು ತುಂಬಿರುವ ಮಕ್ಕಳನ್ನು ಎಂದಿಗೂ ಭಾರವೆಂದು ತಿಳಿಯುವುದೇ ಇಲ್ಲ.  ಎಲ್ಲರ ಜವಾಬ್ದಾರಿಯನ್ನೂ, ಭಾರವನ್ನೂ ತಾನೇ ಹೊತ್ತು ಸಂತೋಷದಿಂದ, ಅಗಾಧವಾದ ಅಕ್ಕರೆಯನ್ನು ಎಲ್ಲ ಮಕ್ಕಳಿಗೂ ಸಮೃದ್ಧವಾಗಿ ಉಣಬಡಿಸಿ, ಮಕ್ಕಳ ಪವಿತ್ರತೆ, ಪ್ರವರ್ಧಮಾನ ಮತ್ತು ಪ್ರಾಮುಖ್ಯತೆಯನ್ನು ನೋಡಿ ಮನದಲ್ಲೇ ತೃಪ್ತಿ - ಸಂತೋಷವನ್ನು ಅನುಭವಿಸುತ್ತಾಳೆ.  ಸರಸ್ವತಿ ನದಿಯೂ ಕೂಡ ಹೀಗೇ ತನ್ನ ಸರಸ್ಸುಗಳೆಂಬ ಮಕ್ಕಳನ್ನು ಧರಿಸಿ ಗಂಭೀರವಾಗಿ ಪ್ರವಹಿಸುತ್ತಿದ್ದವಳು.  ಸ್ತ್ರೀಯ ಅತಿ ಮುಖ್ಯ ಗುಣವಾದ ಕರುಣೆಯನ್ನೂ ಅಕ್ಕರೆಯನ್ನೂ ತನ್ನ ಒಡಲಿನಲ್ಲಿ ತುಂಬಿಸಿಕೊಂಡಿದ್ದವಳು. ಎಲ್ಲಿ ಋಷಿ ಮುನಿಗಳು ತಮ್ಮ ಸ್ನಾನ-ಪಾನಾದಿಗಳಿಗಾಗಿ ಕರೆಯುತ್ತಿದ್ದರೋ, ಅಲ್ಲಿಗೆ ತಾನು ಹರಿಯುವ ದಿಕ್ಕನ್ನೇ ಬದಲಾಯಿಸಿಕೊಂಡು ಧಾವಿಸಿ ಬಂದೊದಗುತ್ತಿದ್ದವಳು.  ಸದಾ ಸರ್ವದಾ ತನ್ನ ಸಂಸಾರ ಹಾಗೂ ಪರರ ಹಿತಚಿಂತನೆಯನ್ನೇ ಮಾಡುತ್ತಾ, ಪ್ರತಿ ನಿಮಿಷವೂ ಕರೆಗೆ ಓಗೊಟ್ಟು ನಿಲ್ಲುವ ತಾಯಿಯಂತೆ, ಸರಸ್ವತಿ ನದಿ ತನ್ನನ್ನು ಆಹ್ವಾನಿಸಿದಲ್ಲೆಲ್ಲಾ ಕವಲುಗಳಾಗಿ ಆವಿರ್ಭವಿಸಿದಳು.  ಎಲ್ಲೆಲ್ಲಿ ದೇವತಾ ಕಾರ್ಯಗಳು, ಯಾಗ ಯಜ್ಞಗಳು ನಡೆಯುತ್ತಿದ್ದವೋ, ಅಲ್ಲಿಗೆಲ್ಲಾ ಒದಗಿ ಬಂದು ಭಗವತ್ಪೂಜೆಗೆ ಅನುಕೂಲ ಮಾಡಿಕೊಟ್ಟವಳು.  ತನ್ನ ಮಡಿಲಿಗೆ ಬಂದ ಯಾವುದೇ ಮಗುವಾದರೂ ಅದನ್ನು ಬರಸೆಳೆದು, ಅಕ್ಕರೆಯ ಧಾರೆಯನ್ನೇ ಹರಿಸುವ ಅಮ್ಮನಂತೆ, ಸರಸ್ವತಿ ನದಿಯು ತನ್ನನ್ನು ಸೇರಲು ಬಂದ ಶ್ರುತಾದ್ರಿ ಹಾಗೂ ಯಮುನೆಯರನ್ನು ಅಕ್ಕರೆಯಿಂದ ಮೈದುಂಬಿಸಿಕೊಂಡವಳು.  ತಾನು ಅಮೃತವನ್ನೇ ಉಣಬಡಿಸಿದ್ದರೂ, ತನ್ನನ್ನು ಮರೆತು ತೊರೆದು ಹೋದ ಮಕ್ಕಳನ್ನಾಗಲೀ, ಇತರರನ್ನಾಗಲೀ ಎಂದಿಗೂ ಶಪಿಸದೆ, ತನ್ನೊಳಗೇ ಕೊರಗಿ, ಕರಗಿ ಕ್ಷೀಣವಾಗುವ ನಿಷ್ಕಲ್ಮಷ ಭಾವದ ತುಂಬು ಮನಸ್ಸಿನ ತಾಯಿಯಂತೇ ಸರಸ್ವತಿ ನದಿಯು ಕೂಡ ಉದಾತ್ತ ಭಾವವನ್ನು ತೋರಿದ್ದವಳು.  ತನ್ನನ್ನು ತೊರೆದು ಹೋದ ಯಮುನೆಯನ್ನೂ, ಶ್ರುತಾದ್ರಿಯನ್ನೂ ಕಳೆದುಕೊಂಡು, ತಾನು ಕ್ಷೀಣಳಾಗಿ, ಕರಗಿ, ಕೊರಗಿ, ಮೌನದಿಂದಲೇ ಗುಪ್ತಗಾಮಿನಿಯಾಗಿ ಮರೆಯಾಗಿರುವ  ಸರಸ್ವತಿ ನದಿಯು ಮಾತೆಯ ಶ್ರೇಷ್ಠತೆಯ ಪ್ರತೀಕವಾಗುತ್ತಾಳೆ.  ನೆನಪಿಸಿಕೊಂಡಾಗಲೆಲ್ಲಾ ಒಂದು ಮಧುರ ಹಾಗೂ ಗೌರವಯುತವಾದ ತಂಗಾಳಿಯಂತೆ ಸುಳಿದು ಮಾತೃ ಸ್ಥಾನದಲ್ಲಿ ಸರಸ್ವತಿ ನದಿಯು ತಂಪೆರೆಯುತ್ತಾಳೆ. 


ಚಿತ್ರಕೃಪ್ತೆ : ಅಂತರ್ಜಾಲ


2 comments:

  1. ಸರಸ್ವತಿ ನದಿಯ ಬಗೆಗೆ ಅನೇಕ ಪೌರಾಣಿಕ ಹಾಗು ಭೌಗೋಲಿಕ ವಿವರಗುಳ್ಳ ವಿಶಿಷ್ಟ ಲೇಖನವನ್ನು ನೀಡಿದ್ದೀರಿ. ಓದುತ್ತಿದ್ದಂತೆ ವಿಸ್ಮಯಭರಿತನಾದೆನು. ಧನ್ಯವಾದಗಳು.

    ReplyDelete
  2. ಸರಸ್ವತಿ ಬಗೆಗಿನ ವಿಷಯ ವಿಶೇಷಗಳು ತುಂಬಾ ಸೋಘಸಾಗಿ ತಿಳಿಸಿದ್ದೀರಾ. ಧನ್ಯವಾದಗಳು

    ReplyDelete