Friday, April 15, 2016

ಶ್ರೀರಾಮ ನವಮಿ...


ಮತ್ತೆ ಯುಗಾದಿ ಬಂದಾಯಿತು.  ಹೊಸ ವರುಷ "ದುರ್ಮುಖ" ನಾಮದ ಸಂವತ್ಸರ ಪ್ರಾರಂಭವಾಗಿದೆ.  ವಸಂತ ಋತುವಿನ ಚೈತ್ರ ಮಾಸದ ಮೊದಲ ದಿನದಿಂದಲೇ ಎಲ್ಲರ ಮನದಲ್ಲಿ ಒಂದು ಹೊಸ ಹುರುಪು, ಸಂಭ್ರಮ ಅರಳುವುದು.  ಪಾಡ್ಯದಿಂದಲೇ ಕಾತುರದಿಂದ ಎದುರು ನೋಡುವ ದಿನವೇ ’ನವಮಿ’ಯಾಗಿದೆ.  ನವಮಿ ದಿನ ಬಂದೀತೇ, ರಾಮ ಬಂದಾನೇ ಎನ್ನುವ ಸುಖ-ಸಂಭ್ರಮ ಮಿಶ್ರಿತ ಕಾತುರ  ದಿನಗಳನ್ನೂ, ಕ್ಷಣಗಳನ್ನೂ, ಘಳಿಗೆಗಳನ್ನೂ ಎಣಿಸುವಂತೆ ಮಾಡುವುದು.

ವಸಂತ ಋತುವಿನ ರಾಜನ ಆಗಮನಕ್ಕಾಗಿ ವಸುಂದರೆಯು ತನ್ನ ಹಳೆಯ ಎಲೆಗಳನ್ನುದುರಿಸಿ, ಮೈ ಕೊಡವಿಕೊಂಡು ಹಸಿರು ಹೊದೆಯುತ್ತಾಳೆ.  ಹೂ ಮುಡಿದು ಚಿಕ್ಕ-ಪುಟ್ಟ-ದೊಡ್ಡ ಮಕ್ಕಳನ್ನು ಮಡಿಲ ತುಂಬಾ ತುಂಬಿಸಿಕೊಂಡು ಕಾಯುವಳು.  ನವಮಿ ದಿನದಲ್ಲಿ ರಾಮನ ಆಗಮನಕ್ಕಾಗಿ ಅವನಿದೇವಿ ಸಿಂಗರಿಕೊಳ್ಳುವಳು.  ನವವಧುವಿನಂತೆ ಆಕರ್ಷಕವಾಗಿ ಅಲಂಕರಿಸಿಕೊಂಡಿರುವ ಅವನಿ ದೇವಿಯ ಚೆಲುವಿಗೆ ಸೊಬಗನ್ನು ತರುವವನು, ನವಮಿ ದಿನದಲ್ಲಿ ಧರೆಗಿಳಿಯುವ ಶ್ರೀರಾಮಚಂದ್ರನಾಗಿರುವನು.  ಯುಗಾದಿಯ ದಿನದಿಂದಲೇ ಮನೆಮನೆಗಳಲ್ಲೂ ಪ್ರಾರಂಭವಾಗುವ ಸಂಭ್ರಮ, ಉತ್ಸಾಹ ನವಮಿ ದಿನದಂದು ಶ್ರೀರಾಮನ ಆಗಮನದ ಸಂಕೇತವಾದ ಆಚರಣೆಯಾಗುವುದು.  ರಾಮನ ಆಗಮನ ಕವಿ ಮನಸ್ಸಿನಲ್ಲಿ ಹೊಸಹೊಸ ಕವಿತೆಯ ಸಾಲುಗಳನ್ನು ಮೂಡಿಸುವುದು.  ಶ್ರೀರಾಮನ ಆಗಮನವನ್ನು ಕವಿಯೊಬ್ಬರು ಅತೀ ಸುಂದರವಾಗಿ ಬಿಚ್ಚಿದ ಕುಸುಮದ ಒಂದೊಂದು ಎಸಳಿನಲ್ಲೂ, ಹಚ್ಚ ಹಸಿರು ಬಣ್ಣ ಹೊದ್ದಿರುವ, ಆಗತಾನೆ ಚಿಗುರಿರುವ ಎಳಸಾದ ಎಲೆಎಲೆಯಲ್ಲೂ ಚೆಲುವಿಕೆಯನ್ನು ತುಂಬಿಸುತ್ತಾ ರಾಮನು ಬರುವನೆಂದು ವರ್ಣಿಸುವರು.    ನಲಿನಲಿದು ಉಲಿಯುವ ಇಂಪು ಗಾನವು ಮಂದಮಂದವಾಗಿ ಬರುವ ಮರುತನ ತಂಪಾದ ಸ್ಪರ್ಶವು, ಮಂದ್ರ ರಾಗದಲ್ಲಿ ಭಾವದ  ಅಲೆಗಳನ್ನೆಬ್ಬಿಸುವುದು ಎಂದಿದ್ದಾರೆ.  ವಸುಂಧರೆಯ ಸೊಬಗನ್ನೂ ಸೌಂದರ್ಯವನ್ನೂ ವರ್ಣಿಸುತ್ತಾ ಹಸಿರು ಶಾಲನ್ನು ಹರಡಿಕೊಂಡಿರುವಳು, ತನ್ನ ಗೆಳೆಯನಾದ ಗಗನವು ತಿಳಿ ನೀಲಿ ಬಣ್ಣದ ಸ್ವಚ್ಛ ಹೊದಿಕೆಯನ್ನು ಹೊದ್ದಿರುವ ಸಮಯದಲ್ಲಿ, ತಂಪು ತರುವ ಮಳೆಯ ಮೇಘವು ಬಾನಂಗಳವನ್ನು ಪ್ರೇಮದಿಂದ ಚುಂಬಿಸಿದಾಗ, ರಾಮ ಬರುವನು, ’ಅವನಿ’ಗೆ ಚೆಲುವನ್ನು ತರುವನು ಎಂದಿದ್ದಾರೆ.  ಕೊನೆಯ ಚರಣದಲ್ಲಿ ಗಿರಿಯ ಸಾಲುಗಳ ನಡುವೆ ಹರಿಯುವ ತೊರೆಯೂ ಕೂಡ ಮುದಗೊಂಡು ಬಳುಕುತ್ತಾ, ಹರುಷ ಉಕ್ಕಿಸುತ್ತಾ, ವಸುಂಧರೆಯ ಒಡಲಿನ ತುಂಬೆಲ್ಲಾ ಬಿಡದೇ ಬಳಸುತ್ತಾ ಹರಿಯುವ ಸಮಯದಲ್ಲಿ ಶ್ರೀರಾಮಚಂದ್ರನು ಧರೆಗಿಳಿಯುವನು ಎಂದಿದ್ದಾರೆ.  ಸಮಸ್ತ ಭೂಮಂಡಲವೇ ಹರುಷದಿಂದ, ಸಂಭ್ರಮದಿಂದ ನಲಿಯುತ್ತಾ ಭಗವಂತನು ರಾಮಚಂದ್ರನಾಗಿ ಬರುವ ಕಾಲವನ್ನು ಎದುರು ನೋಡುವುದೆಂಬ ಭಾವನೆಯಲ್ಲಿ ಮೈ ಮನಗಳನ್ನು ತೇಲಿಸುವ ಸಮಯವೇ ವಸಂತ ಋತು, ಚೈತ್ರ ಶುದ್ಧ ನವಮಿಯ ದಿನವಾಗಿದೆ.   ಸುಲಲಿತವಾದ ಸುಂದರ, ಸರಳ ಪದಗಳಿಂದ ಮೋಡಿ ಮಾಡುವ ಕವನದ ಸಾಲುಗಳು :

ನವಮಿ ದಿನದಲಿ ರಾಮ ಬಂದನು | ಅವನಿಗೆಲ್ಲಾ ಚೆಲುವ ತಂದನು...||

ಬಿಚ್ಚಿ ಕುಸುಮದ ಎಸಳು ಎಸಳಲಿ | ಹಚ್ಚ ಹಸುರಿನ ಚಿಗುರು ಎಲೆಯಲಿ |
ಸ್ವಚ್ಛ ತರುವಿನ ದಟ್ಟ ನೆರಳಲಿ | ಅವನಿಗೆಲ್ಲಾ ಚೆಲುವ ತಂದನು... ||

ನಲಿದು ಉಲಿಯುವ ಇಂಪು ಗಾನದಿ | ಮಂದ ಮರುತನ ತಂಪು ಸ್ಪರ್ಶದಿ |
ಮಂದ್ರ ರಾಗದ ಭಾವ ಅಲೆಯಲಿ | ಅವನಿಗೆಲ್ಲಾ ಚೆಲುವ ತಂದನು... ||

ಚಂದ್ರ ಶೀತಲ ತನುವು ಕೋಮಲ | ಸಾಂದ್ರ ಚೆಲುವಿಗೆ ಮೆರುಗು ಅಸದಳ |
ನಲಿದ ಭೃಂಗದ ಒಲವ ಒಸಗೆಲಿ | ಅವನಿಗೆಲ್ಲಾ ಚೆಲುವ ತಂದನು... ||

ಇಳೆಯು ಹರಡಿದ ಹಸಿರು ಶಾಲಿಗೆ | ಗೆಳೆಯ ಗಗನಕೆ ನೀಲ ಹೊದ್ದಿಕೆ |
ಮಳೆಯ ಮೇಘವು ಬಾನ ಚುಂಬಿಸೆ | ಅವನಿಗೆಲ್ಲಾ ಚೆಲುವ ತಂದನು... ||

ಗಿರಿಯ ಸಾಲಿನ ನಡುವೆ ಬಳುಕುತ | ತೊರೆಯು ಹರಿಯಿತು ಹರುಷ ಉಕ್ಕುತ |
ಧರೆಯ ಒಡಲನು ಬಿಡದೆ ಬಳಸುತ | ಅವನಿಗೆಲ್ಲಾ ಚೆಲುವ ತಂದನು... ||
(ಅನಂತರಾಜ್ ನಾಯಕ್)
https://soundcloud.com/shyamalarao/navamidinadali

ಅಯೋಧ್ಯೆಯ ಮಹಾರಾಜನಾದ ಇಕ್ಷ್ವಾಕು ವಂಶದ ದಶರಥನು ಪುತ್ರ ಸಂತಾನಕ್ಕಾಗಿ ಹಂಬಲಿಸುತ್ತಿರುವನು.  ಸಂತಾನಾಪೇಕ್ಷೆಯಿಂದ ಸಂಕಲ್ಪ ಮಾಡಿ ಅಶ್ವಮೇಧಯಾಗವನ್ನು ಮಾಡಬೇಕೆಂಬ ಆಲೋಚನೆಯು ಮನಸ್ಸಿನಲ್ಲಿ ಮೂಡಿದಾಗ ಮಂತ್ರಿಗಳಾದ ಸುಮಂತ್ರನ ಮೂಲಕ ತನ್ನ ಗುರುಗಳಾದ ವಸಿಷ್ಠರು ಹಾಗೂ ವಾಮದೇವಾದಿ ಪುರೋಹಿತರನ್ನು ಕರೆಸುವನು.  ಅಶ್ವಮೇಧಯಾಗವನ್ನು ಮಾಡುವುದೆಂದು ನಿಶ್ಚಯಿಸಲಾಗುವುದು.  ಸರ್ವ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಾ ದಶರಥ ಮಹಾರಾಜನು ವಸಿಷ್ಠರನ್ನು ಅಶ್ವಮೇಧ ಯಾಗವನ್ನು ಮಾಡಿಸುವಂತೆ ಪ್ರಾರ್ಥಿಸುವನು.  ವಸಿಷ್ಠರು ಭರದಿಂದ ಯಾಗವನ್ನು ಮಾಡಿಸುವರು.  ಇಷ್ಟರಿಂದಲೇ ಪುತ್ರೋತ್ಪತ್ತಿಯಾಗುವುದಿಲ್ಲವೆಂದೂ,  ಋಷ್ಯಶೃಂಗರ ವರಪ್ರಸಾದದಿಂದಲೇ ಅದು ನೆರವೇರಬೇಕೆಂದೂ ತಿಳಿದಿದ್ದ  ದಶರಥ ಮಹಾರಾಜನು ಋಷ್ಯಶೃಂಗರನ್ನು ಅನುಗ್ರಹಿಸಬೇಕೆಂದು ಕೇಳಿಕೊಳ್ಳುವನು.  ವಿಭಂಡಕ ಮಹರ್ಷಿಗಳ ಔರಸ ಪುತ್ರರಾದ ಋಷ್ಯಶೃಂಗರು ಸಂತೋಷದಿಂದಲೇ ದಶರಥ ಮಹಾರಾಜನಿಂದ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸುವರು.  ಯಜ್ಞ ಕುಂಡದಿಂದ ಆವಿರ್ಭವಿಸಿದ ಅತ್ಯಂತ ತೇಜೋಪೂರ್ಣನಾದ ಪ್ರಾಜಾಪತ್ಯ ಪುರುಷನಿಂದ ಪಡೆದ ಪಾಯಸದ ಸೇವನೆಯಿಂದ ದಶರಥ ಮಹಾರಾಜನ ಪತ್ನಿಯರಾದ ಕೌಸಲ್ಯ, ಸುಮಿತ್ರ ಹಾಗೂ ಕೈಕೇಯಿಯರಿಗೆ ನಾಲ್ವರು ಪುತ್ರರು ಜನಿಸುವರು. 

ದುಷ್ಟನಾದ ರಾವಣನ  ಸಂಹಾರಕ್ಕಾಗಿ ದೇವತೆಗಳ  ಪ್ರಾರ್ಥನೆಯನ್ನು  ಆಲಿಸಿ  ಭಗವಂತನು  ವೇದಿಕೆಯನ್ನು    ಸಿದ್ಧಪಡಿಸಿರುವನು.  ದೇವಾನು ದೇವತೆಗಳೆಲ್ಲರೂ ಸ್ವಾಮಿಯ ಲೀಲಾ ವಿನೋದದಲ್ಲಿ ಪಾಲ್ಗೊಳ್ಳಲು ಆಗಲೇ ಅನೇಕ ರೂಪಗಳಲ್ಲಿ ಭೂಮಿಯಲ್ಲಿ ಜನಿಸಿರುವರು.  ಭಗವಂತನು ಮಾನವ ರೂಪದಲ್ಲಿ ಶ್ರೀರಾಮನಾಗಿ ಅವತರಿಸಲು ವಸುಂಧರೆಯ ಸಹಿತ ಸಮಸ್ತ ದೇವತೆಗಳೂ ಸಿದ್ಧರಾಗಿರುವರು.  ಪರಮಾತ್ಮನ ಲೀಲೆಯಲ್ಲಿ ಕಿಂಚಿತ್ ಪಾತ್ರ ಧರಿಸುವ, ಸೇವೆ ಮಾಡುವ ಅವಕಾಶಕ್ಕಾಗಿ, ಕಾತುರ, ಸಂಭ್ರಮಗಳಿಂದ ಕಾಯುವರು. 

ಅಶ್ವಮೇಧ ಯಾಗ ಸಮಾಪ್ತಿಗೊಂಡು ಒಂದು ವರ್ಷದ ನಂತರ ಚೈತ್ರಮಾಸ, ಶುಕ್ಲನವಮಿಯ ದಿನದಂದು ಪುನರ್ವಸು ನಕ್ಷತ್ರದಲ್ಲಿ ರವಿ, ಕುಜ, ಶನಿ, ಗುರು ಮತ್ತು ಶುಕ್ರ ಎಂಬ ಐದು ಗ್ರಹಗಳು ಉಚ್ಚರಾಶಿಗಳಲ್ಲಿರುವಾಗ, ಕರ್ಕಾಟಕ ಲಗ್ನವು ಚಂದ್ರ - ಬೃಹಸ್ಪತಿಗಳೊಡನೆ ವಿಜೃಂಭಿಸುತ್ತಿರುವಾಗ, ಸರ್ವಲೋಕ ನಮಸೃತನಾದ ಭಗವಂತನು ಕೌಸಲ್ಯಾ ದೇವಿಯ ಗರ್ಭಸಂಜಾತನಾಗಿ ಅವತರಿಸುವನು.  ಭಗವಂತನ ಆಗಮನದ ಸೂಚಕವಾಗಿ ಪುಷ್ಪವೃಷ್ಟಿಯಾಗುವುದು, ಗಂಧರ್ವರು ಮಧುರಗಾಯನ ಮಾಡುವರು.  ಸಾಲಂಕೃತೆಯಾದ ವಸುಂಧರೆಯು ಕಂಗೊಳಿಸುವಳು.  ಇಕ್ಷ್ವಾಕು ವಂಶದ ಕುಲತಿಲಕನ ಉದಯವಾಗುವುದು.

ಸಂಗೀತ ಪ್ರಪಂಚದಲ್ಲಿ ಶ್ರೀರಾಮಚಂದ್ರನನ್ನು ಸ್ತುತಿಸುವ ಸಾವಿರಾರು ಕೃತಿಗಳಿವೆ.  ಪ್ರತಿಯೊಬ್ಬ ವಾಗ್ಗೇಯಕಾರರೂ ಶ್ರೀರಾಮಚಂದ್ರನ ಕುರಿತಾದ ಕೃತಿಗಳನ್ನು ರಚಿಸಿದ್ದಾರೆ.  ಶ್ರೀರಾಮನು ಎಲ್ಲರಿಗೂ ಇಷ್ಟದೈವ ಹಾಗೂ ಆರಾಧ್ಯದೈವನಾಗಿರುವನು.  ರಾಮನ ಬಾಲ್ಯವನ್ನು ವರ್ಣಿಸುವ, ಷೋಡಶೋಪಚಾರಗಳನ್ನು ಮಾಡುವ, ಲಾಲಿ ಹಾಡಿ ಶಯನೋತ್ಸವವನ್ನು ಮಾಡಿಸುವಂತಹ ಮಧುರವಾದ ರಚನೆಗಳನ್ನು ರಚಿಸಲಾಗಿದೆ.  ಶ್ರೀ ಪ್ರಯಾಗ ರಂಗದಾಸ ಎಂಬ ರಚನೆಕಾರರು (ಇವರು ಶ್ರೀ ಎಂ ಬಾಲಮುರಳೀಕೃಷ್ಣ ರವರ ತಾತಯ್ಯನವರು) ತೆಲುಗಿನಲ್ಲಿ ಸುಂದರವಾದ ರಚನೆಯನ್ನು ಮಾಡಿದ್ದಾರೆ.  "ರಾಮುಡುದ್ಭವಿಂಚಿನಾಡು ರಘುಕುಲಂಬುನಾ" ಎಂಬ ಕೃತಿಯಲ್ಲಿ ತಾಮಸರನ್ನು ನಿಗ್ರಹಿಸಿ ಸ್ತೋಮ ಜನರ ಕ್ಷೇಮಾಭಿವೃದ್ಧಿಗಾಗಿ ರಘುಕುಲದಲ್ಲಿ ಕೋಮಲೆಯಾದ ಕೌಸಲ್ಯೆಯಲ್ಲಿ ಶ್ರೀರಾಮನು ಉದ್ಭವಿಸಿರುವನು ಎನ್ನುತ್ತಾರೆ.  ಮುಂದುವರೆಯುತ್ತಾ ವಸುಮತಿಯ ದುರ್ಭರವನ್ನು ಕಡಿಮೆಗೊಳಿಸಲು ರಾಮನು ಉದ್ಭವಿಸಿರುವನು ಎಂದಿದ್ದಾರೆ.  ಕಿಲಕಿಲನೆ ನಗುತ್ತಾ ಆಣಿಮುತ್ತಿನಂತಹ ಮುದ್ದು ಕುವರನು ಮಿಂಚಿನ ಕಾಂತಿಯಿಂದ ಮಿನುಗುತ್ತಾ ರಾಮನು ಉದ್ಭವಿಸಿರುವನು, ಭಕ್ತಾಗ್ರೇಸರರು ಕೋರಿದ ವರಗಳನ್ನೆಲ್ಲಾ ಕೊಡುವುದಕ್ಕಾಗಿ ರಾಮನು ಉದ್ಭವಿಸಿರುವನು ಎನ್ನುತ್ತಾ ಶ್ರೀರಾಮಚಂದ್ರನ ಆಗಮನವನ್ನು ಸರಳ ಹಾಗೂ ಸುಂದರವಾಗಿ ವಿವರಿಸುತ್ತಾರೆ.

ಎಲ್ಲರಿಗೂ ಶ್ರೀರಾಮನವಮಿಯ ಹಾರ್ದಿಕ ಶುಭಾಶಯಗಳು..




ಚಿ ತ್ರ ಕೃ ಪೆ  : ಅಂ ತ ರ್ಜಾ ಲ
http://ananthadimdigantha.blogspot.in/2012/03/blog-post_22.html
 https://soundcloud.com/shyamalarao/navamidinadali

1 comment:

  1. ಅನಂತರಾಜರೆ,
    ನಿಮಗೂ ಸಹ ರಾಮನವಮಿಯ ಶುಭಾಶಯಗಳು. ಶ್ರೀರಾಮಚಂದ್ರೋದಯವನ್ನು ಸೊಗಸಾಗಿ ವಿವರಿಸಿದ್ದೀರಿ. ಧನ್ಯವಾದಗಳು.

    ReplyDelete