Tuesday, March 2, 2010

ಸಂಬಂಧಗಳ ಸುಳಿಯಲ್ಲಿ..............

ದಿನ ಸಂಬಂಧಗಳಲ್ಲೇ ಅತ್ಯಂತ ಮಧುರವಾದ, ನವಿರಾದ, ಪವಿತ್ರವಾದ, ಜೀವಜಲವಾದ, ಸ್ನೇಹದ ಬಗ್ಗೆ ಬರೆಯುತ್ತಿದ್ದೇನೆ. ಸ್ನೇಹ ಸಿಹಿಗಾಳಿ, ಸುಗಂಧವಿದ್ದಂತೆ... ಪಸರಿಸಿದೆಡೆಯೆಲ್ಲಾ ಘಮ ಘಮ.... ಎಲ್ಲರ ಮನಸ್ಸನ್ನೂ ಸ್ನೇಹದ ಸಿಂಚನದಿಂದ ತಂಪೆರೆಯುತ್ತದೆ. ಉದ್ರಿಕ್ತ ವಾತಾವರಣವನ್ನು ತಂಪಾಗಿಸುತ್ತದೆ..... ನೆಮ್ಮದಿ ಕೊಡುತ್ತದೆ. ..... ಸಂತಸ ತರುತ್ತದೆ.....

ಸ್ನೇಹಿತರ ಜೊತೆಗಿನ ಸಂಬಂಧಗಳು ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರಬಲ್ಲದು. ಚಿಕ್ಕ ಚಿಕ್ಕ ಮಕ್ಕಳಿರುವಾಗಿನಿಂದಲೇ ನಮ್ಮದೇ ವಯಸ್ಸಿನ ಪುಟಾಣಿಗಳೊಡನೆ ನಮ್ಮ ಸ್ನೇಹದ ಪ್ರಪಂಚ ಸೃಷ್ಟಿಯಾಗಿಬಿಟ್ಟಿರುತ್ತದೆ. ನಮ್ಮ ನೆರೆ-ಹೊರೆಯಲ್ಲಿರುವ ಚಿಕ್ಕ-ದೊಡ್ಡ ಮಕ್ಕಳೆಲ್ಲರೂ ವಯಸ್ಸಿನ ಅಂತರವಿಲ್ಲದೇ ಸ್ನೇಹಿತರಾಗಿ ಬಿಟ್ಟಿರುತ್ತಾರೆ. ಆದರೆ ಸ್ನೇಹ ಲೋಕದಲ್ಲಿ ಒಳಬರುವ ಹಾಗೂ ಹೊರಹೋಗುವ ಸ್ನೇಹಿತರ ಲೆಕ್ಕವಿಡುವುದು ಸ್ವಲ್ಪ ಕಷ್ಟದ ಕೆಲಸವಾಗಿ ಬಿಟ್ಟಿರುತ್ತದೆ. ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲ್ಲಿ ಪಯಣಿಸುತ್ತಾ..... ಪ್ರೀತಿಯೆಂಬ ದೇವರಿರುವ ಗುಡಿಯನ್ನು ಸೇರುವುದನ್ನೇ ಬಾಳಿನ ಗುರಿಯಾಗಿಸಿಕೊಂಡಾಗಲೇ ನಮ್ಮ ಜೀವನದ ಪ್ರತಿಯೊಂದು ಕ್ಷಣವೂ ಅತ್ಯಂತ ಆಪ್ತವಾಗಿ... ಅಕ್ಕರೆಯಿಂದ ಕೂಡಿದ ಬದುಕಾಗಿ ಮಾರ್ಪಾಡುಗುವುದು....

ಎಷ್ಟೋ ಸಲ ನಮ್ಮ ಬಾಲ್ಯ ಸ್ನೇಹಿತರು ನಮಗೆ ಸ್ಕೂಲು, ಕಾಲೇಜುವರೆಗೂ ಜೊತೆಯಲ್ಲೇ ಇರುವ ಅದೃಷ್ಟ ಕೂಡ ಇರುತ್ತದೆ. ಮುಂದೆ ಓದು ಮುಗಿಸಿ, ಕೆಲಸ ಮಾಡುವಾಗ ಕೂಡ ಸಂಬಂಧ ಮುಂದುವರೆಯುತ್ತಲೇ ಇರುತ್ತದೆ. ಸ್ನೇಹ ಸಂಬಂಧ ಮಾತ್ರ ಅತ್ಯಂತ ಸುಖಕರವಾದದ್ದು. ಇಲ್ಲಿ ಲಿಂಗ ಭೇದವಿಲ್ಲದ, ನಿರ್ಮಲವಾದ, ನಿಷ್ಕಲ್ಮಶವಾದ ಸ್ವಚ್ಛ ಪ್ರೀತಿ, ಅದಮ್ಯ ವಿಶ್ವಾಸ, ನಂಬಿಕೆಗೆ ಮಾತ್ರ ಪ್ರಾಧಾನ್ಯತೆ ಇರುತ್ತದೆ.

ಸ್ನೇಹ ನಮಗೆ ಜೀವನದ ಎಲ್ಲಾ ಮಜಲುಗಳಲ್ಲೂ, ಎಲ್ಲಾ ವಯೋಗುಣದಲ್ಲೂ ಅತ್ಯಂತ ಅವಶ್ಯಕವಾದದ್ದು. ನಮ್ಮನ್ನು ಅರಿತು, ಅರ್ಥ ಮಾಡಿಕೊಂಡು, ನಮ್ಮ ತಪ್ಪನ್ನು ತೋರಿಸಿ, ನಾವು ದು:ಖಿಗಳಾಗಿದ್ದಾಗ ನಮ್ಮನ್ನು ಸಮಾಧಾನಿಸಿ, ನಾವು ಸೋತಾಗ ನಮ್ಮನ್ನು ಹುರಿದುಂಬಿಸಿ, ನಾವು ಎಡವಿದಾಗ, ಕೈ ಹಿಡಿದು ದಾರಿ ತೋರಿಸಿ, ಆತ್ಮ ವಿಶ್ವಾಸ ಹೆಚ್ಚಿಸಿ, ಸಕಾರಾತ್ಮಕ ಚಿಂತನೆಯಲ್ಲಿ ನಮ್ಮನ್ನು ಯಾವಾಗಲೂ ಹಿಡಿದಿಡುವ, ವ್ಯಕ್ತಿಯೇ ಸ್ನೇಹಿತ ಅಥವಾ ಸ್ನೇಹಿತೆ. ಇಲ್ಲಿ ನಮಗೆ "ಸ್ನೇಹ ಅತಿ ಮಧುರ.. ಸ್ನೇಹ ಅದು ಅಮರ... ಸ್ನೇಹವೇ ಗುಡಿಯು... ಪ್ರೀತಿಯೇ ದೇವರು.... ಎಂಬ ಕವಿತೆಯ ನೆನಪಾಗದೇ ಇರದು. ಸ್ನೇಹವೆಂಬ ಗುಡಿಯಲ್ಲಿ ಪ್ರೀತಿಯೆಂಬ ದೇವರನ್ನಿಟ್ಟು ಪೂಜೆ ಮಾಡಿದಲ್ಲಿ, ಜೀವನ ಅತ್ಯಂತ ಸುಖಕರ... ನಾವೆಲ್ಲರೂ ಪವಿತ್ರ ಗುಡಿಗಳನ್ನು ಕಟ್ಟುತ್ತಲೇ ಇದ್ದಾಗ ಮಾತ್ರವೇ ಸ್ನೇಹವೆಂಬ ಗುಡಿಯಲ್ಲಿ ಪ್ರೀತಿಯೆಂಬ ದೇವರ ಪೂಜೆ, ಶಾಶ್ವತವಾಗಿ ಅತ್ಯಂತ ವೈಭವಯುತವಾಗಿ ನಡೆಯುತ್ತಲೇ ಇರುತ್ತದೆ.

ಸ್ನೇಹ ಎನ್ನುವ ಪವಿತ್ರ ಬಂಧ ಕಾಲ, ದೇಶ, ಜಾತಿ, ಮತ, ಧರ್ಮ, ಲಿಂಗ ಎಲ್ಲವನ್ನೂ ಮೀರಿದ್ದು ಮತ್ತು ಬಂಧ - ಸಂಬಂಧ ಗಟ್ಟಿಯಾಗಿ ಉಳಿಯುವುದು, ಎರಡು ಹೃದಯಗಳು ಪ್ರತಿಫಲಾಪೇಕ್ಷೆಯಿಲ್ಲದೆ, ಪ್ರೀತಿ, ನಂಬಿಕೆ, ವಿಶ್ವಾಸ ವ್ಯಕ್ತಪಡಿಸಿದಾಗ ಮಾತ್ರ. ಸ್ನೇಹ ಎನ್ನುವ ಭಾವನೆಯೊಂದು ಇಲ್ಲದಿದ್ದಿದ್ದರೆ, ಸಂಬಂಧ ಎನ್ನುವ ಪದ ಬರೀ ಒಡಹುಟ್ಟಿದವರ ಅಥವಾ ರಕ್ತ ಸಂಬಂಧಿಗಳಿಗೆ ಮಾತ್ರ ಸೀಮಿತವಾಗಿ ಬಿಡುತ್ತಿತ್ತು. ಸ್ನೇಹ ಹೊಸ ಹೊಸ ಸಂಬಂಧಗಳನ್ನು ಬೆಳೆಸುವ, ಮನಸ್ಸುಗಳನ್ನು ಬೆಸೆಯುವ ಮತ್ತು ಬೆಸೆದ ಮನಸ್ಸುಗಳ ವಿಚಾರ ವಿನಿಮಯ, ಪರಸ್ಪರ ಗೌರವ ಉಳಿಸುವ ಸೇತುವೆ. ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲೂ ಸ್ನೇಹದ ಭಾವ ಏರ್ಪಟ್ಟಾಗ ಮಾತ್ರವೇ ನಮ್ಮ ಜೀವನ ನೆಮ್ಮದಿ, ತೃಪ್ತಿ, ಸಂತೋಷ ಕಾಣಬಹುದು.

ಒಳ್ಳೆಯದೇ ಆಗಲಿ, ಕೆಟ್ಟದ್ದೇ ಆಗಲಿ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು, ನಮ್ಮನ್ನು ನಾವಿರುವಂತೇ ಒಪ್ಪಿಕೊಳ್ಳಲು ನಮಗೆ ಸ್ನೇಹಿತರ ಅವಶ್ಯಕತೆ ನಮ್ಮ ಬದುಕಿನುದ್ದಕ್ಕೂ ಇದೆ. ನಾನು ಕಾಲೇಜಿನಲ್ಲಿ ಓದುವಾಗ ನನಗೊಬ್ಬಳು ಸ್ನೇಹಿತೆಯಿದ್ದಳು. ಇಬ್ಬರ ಐಚ್ಛಿಕ ವಿಷಯಗಳು ಬೇರೆಯಾಗಿದ್ದರೂ.. ಸಂಗೀತ ನಮ್ಮನ್ನು ಬೆಸೆದಿತ್ತು. ಇಬ್ಬರೂ ಒಟ್ಟಿಗೇ, ಕಲಿಯುತ್ತಿದ್ದೆವು. ಆದರೆ ಆಮೇಲೆ ಇಬ್ಬರಿಗೂ ಮದುವೆಗಳಾಗಿ ಬೇರೆ ಯಾಗಿ, ಅವಳು ಗೋವಾ ಮತ್ತು ನಾನು ಕೊಲ್ಕತ್ತಾ ಸೇರಿದ್ದೆವು. ೨೫ ವರ್ಷಗಳ ನಂತರ, ಈಗ ಕಳಚಿಕೊಂಡಿದ್ದ ಕೊಂಡಿ ಮತ್ತೆ ಬೆಸೆದುಕೊಂಡಿದೆ. ನನಗಾಗಿ ಮಿಡಿಯುವ ಒಂದು ಸಹೃದಯವಿದೆಯೆಂಬ ನೆಮ್ಮದಿ ನನಗೂ... ಅವಳ ಅಂತರಂಗದ ಖುಷಿ ಹಾಗೂ ವ್ಯಥೆಗಳನ್ನು ಕೇಳಲು ನಾನಿದ್ದೇನೆಂಬ ತೃಪ್ತಿ ಅವಳಿಗೂ.... ನಾವಿಬ್ಬರೂ ದಿನದಿನವೂ ಮಾತಾಡದಿದ್ದರೂ, ನಮಗೆ ಬೇಕಾದಾಗ ಒಬ್ಬರಿಗೊಬ್ಬರು ಇದ್ದೇವೆಂಬ ಭಾವವೇ ಮುದಕೊಡುತ್ತದೆ. ಇಷ್ಟು ವರ್ಷಗಳ ನಂತರ, ಹಳೆಯ ದಿನಗಳ ನೆನಪುಗಳನ್ನು ಮೆಲುಕು ಹಾಕುವುದು ನಮ್ಮಿಬ್ಬರಿಗೂ ಅತ್ಯಂತ ಪ್ರಿಯವಾದ ಕೆಲಸ........ ಮನಸ್ಸು ಕುಗ್ಗಿದಾಗೊಮ್ಮೆ ದೂರವಾಣಿಯಲ್ಲಿ ಕೆಲವು ಮಾತುಗಳನ್ನು ಹಂಚಿಕೊಂಡಾಗ, ಮನಸ್ಸು ನಿರಾಳ. ಇದು ನನ್ನ ಅತ್ಯಂತ ಹಳೆಯ ಹಾಗೂ ಅತ್ಮೀಯ ಸ್ನೇಹ... ಹೀಗೇ ಇನ್ನೊಂದಿಬ್ಬರು ಹಳೆಯ ಗೆಳೆಯ / ಗೆಳತಿಯರಿದ್ದಾರೆ.. ಅವರೂ ಒಮ್ಮೊಮ್ಮೆ ಕರೆ ಮಾಡುವುದುಂಟು, ಆದರೆ ಇಷ್ಟು ಆಪ್ತತೆ ಯಾರಲ್ಲಿಯೂ ಮತ್ತೆ ಬೆಳೆಯಲಿಲ್ಲ.... ಆದರೂ ಶಾಲಾ / ಕಾಲೇಜುಗಳ ಸ್ನೇಹಿತರು ಕರೆ ಮಾಡಿ ಮಾತಾಡಿದಾಗ ಆಗುವ ರೋಮಾಂಚನವೇ ಒಂದು ವಿಶೇಷ ರೀತಿಯದ್ದು..... ಕೊಲ್ಕತ್ತಾದಲ್ಲಿ ಕಛೇರಿಯ ಸ್ನೇಹಿತೆಯರು... ಇಬ್ಬರು ಈಗಲೂ ಖರ್ಚು ಮಾಡಿಕೊಂಡು, ನನಗಾಗಿ ಸಮಯ ಮೀಸಲಿಟ್ಟು ಕರೆ ಮಾಡಿ ಮಾತನಾಡಿದಾಗ, ಮನಸ್ಸೆಲ್ಲಾ ಒದ್ದೆ ಒದ್ದೆ... ಸ್ನೇಹ ಎನ್ನುವ ಒಂದು ಪುಟ್ಟ ಅನುಭೂತಿ, ಹೇಗೆ ನಮ್ಮ ಇಡೀ ವ್ಯಕ್ತಿತ್ವನ್ನೇ ಹಿಡಿದು ಕರಗಿಸಿಬಿಡುತ್ತದೆ ಅಲ್ವಾ?.....

ಸ್ನೇಹ ಅತ್ಯಂತ ಪುರಾತನ ಅಸ್ಥಿತ್ವದ್ದು... ಪುರಾಣಗಳಲ್ಲೂ, ಭಾಗವತದಲ್ಲೂ, ಮಹಾಭಾರತದಲ್ಲೂ ಕೂಡ ನಿಕಟ ಹಾಗೂ ಗಾಢ ಸ್ನೇಹದ ಉದಾಹರಣೆಗಳಿವೆ..... ಶ್ರೀ ಕೃಷ್ಣ - ಸುಧಾಮರ ಸ್ನೇಹ ಹಾಗೂ ಕರ್ಣ - ದುರ್ಯೋಧನರ ಸ್ನೇಹ ಯಾವಾಗಲೂ ಹಿಂದೂ, ಇಂದೂ ಮತ್ತೂ ಮುಂದೂ ಗಟ್ಟಿಯಾಗಿ ಉಳಿಯುವಂತಹುದು..... ಸ್ನೇಹ ಬೆಳೆಯಲು ಕಾರಣವೇನೂ ಬೇಕಾಗಿಲ್ಲ. ನಾವು ವ್ಯಕ್ತಿಯನ್ನು ಪೂರ್ಣವಾಗಿ ಇಷ್ಟಪಟ್ಟೇ ಸ್ನೇಹ ಬೆಳೆಸಬೇಕೆಂದೇನೂ ಇಲ್ಲ... ಕೆಲವೊಮ್ಮೆ ಕೆಲವು ಅಪರೂಪದ ಅಭ್ಯಾಸಗಳೂ, ಗುಣಗಳೂ ಕೂಡ, ನಮ್ಮ ಸ್ವಭಾವಕ್ಕೆ ಹೊಂದಿಕೆಯಾಗದಂಥಹ ವ್ಯಕ್ತಿಗೂ ಸ್ನೇಹ ಹಸ್ತ ಚಾಚುವಂತೆ ಮಾಡುತ್ತದೆ. ವಿಲಕ್ಷಣ ಪರಿಸ್ಥಿತಿಯಲ್ಲಿ, ಅಕಸ್ಮಾತ್ತಾಗಿ ಕೂಡ ಸ್ನೇಹದ ಹೂವು ಅರಳುತ್ತದೆ.... ಆದರೆ ನಾವಾಗೇ ಇಚ್ಛೆಪಟ್ಟು ಮಾಡಿಕೊಳ್ಳುವ ಸ್ನೇಹದ ಕೊಂಡಿ ಮಾತ್ರ ಭದ್ರವಾಗಿ ಬೆಸೆದಿರುತ್ತದೆ... ಏಕೆಂದರೆ ಅಲ್ಲಿ ನಾವು ನಮ್ಮ ಸ್ನೇಹದಿಂದ ಏನೂ ನಿರೀಕ್ಷಣೆ ಇಟ್ಟುಕೊಂಡಿರುವುದಿಲ್ಲ... ಅದು ಬರಿಯ ಭಾವನಾತ್ಮಕವಾದ, ಮುದಕೊಡುವ ಸ್ನೇಹವಾಗಿರುತ್ತದೆ...

ಇದೇ ೭ನೇ ತಾರಿಖಿನ ವಿಜಯ ಕರ್ನಾಟಕದಸೂರ್ಯ ಶಿಕಾರಿಅಂಕಣದಲ್ಲಿ ಶ್ರೀ ರವಿ ಬೆಳಗೆರೆಯವರು... ನಮ್ಮ ಗೆಳೆಯರು ನಮ್ಮ ಬದುಕನ್ನು ರೂಪಿಸುತ್ತಾರೆ, ಅಭ್ಯಾಸಗಳನ್ನು ರೂಢಿಸುತ್ತಾರೆ, ಚಟಗಳನ್ನು ಕಲಿಸುತ್ತಾರೆ, ಚಿಂತನೆಯನ್ನೂ ಕಟ್ಟಿಕೊಡುತ್ತಾರೆ... ಎಂದಿದ್ದಾರೆ. ಎಷ್ಟು ಸತ್ಯವಾದ ಮಾತುಗಳು. ಒಳ್ಳೆಯ ಸ್ನೇಹಿತರು ನಮಗೇ ಅರಿವಿಲ್ಲದಂತೆ ನಮ್ಮಲ್ಲಿರುವ ದೋಷಗಳನ್ನು ಸರಿಪಡಿಸಿರುತ್ತಾರೆ..... ಅತ್ಯಂತ ಆಪ್ತ ಸಲಹೆಗಳನ್ನು ಕೊಟ್ಟಿರುತ್ತಾರೆ.... ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು, ನಾವೇ ಆಗಿರುವಂತೆ ಸ್ವೀಕರಿಸಿ, ವರ್ಷಾನುಗಟ್ಟಲೆ ಸಹಿಸಿಕೊಂಡಿರುತ್ತಾರೆ.......

ಹಿಂದೆಲ್ಲಾ ನಮಗೆ ಹೊಸ ಹೊಸ ಸ್ನೇಹಿತರನ್ನು ಹುಡುಕುವುದೇ ಒಂದು ರೋಮಾಂಚನದ ಅನುಭವವಾಗಿತ್ತು. ಈಗಲೂ ಇದೆ ಆದರೆ ಹುಡುಕಾಟದ ಮಾಧ್ಯಮಗಳು ಮಾತ್ರ ಅನೇಕ ಹಾಗೂ ಸರಳ ಮತ್ತು ಸುಲಭದವಾಗಿವೆ. ಅಂತರ್ಜಾಲದಲ್ಲಿ ನಮ್ಮ ಕಳೆದುಹೋದ ಶಿಶುವಿಹಾರದ ಸ್ನೇಹಿತರನ್ನೂ ಹುಡುಕಬಹುದು... :-) ಹಾಗೇ ಹೊಸ ಹೊಸ ಸ್ನೇಹಿತರ ಸಂಬಂಧಗಳನ್ನು ಬೆಸೆಯುವುದನ್ನೂ ಮಾಡಬಹುದು. ಅಂತರ್ಜಾಲದಂತಹ ವಿಸ್ಮಯ ಲೋಕದಲ್ಲಿ ಎಲ್ಲವೂ ಒಳ್ಳೆಯದೇ ಇದೆಯೆಂದೋ, ಎಲ್ಲರೂ ಒಳ್ಳೆಯವರೇ ಇದ್ದಾರೆಂದೋ ಹೇಳಲು ಬಾರದು. ಇಲ್ಲೂ ಇದ್ದಾರೆ ಕೀಳು ಅಭಿರುಚಿಯ ವ್ಯಕ್ತಿಗಳು... ಆದರೆ ಇಲ್ಲಿ ನಾನು ನನ್ನ ಸ್ವಂತ ಅಭಿಪ್ರಾಯ ಹಾಗೂ ಅನುಭವಕ್ಕೆ ಮಾತ್ರ ಕಟ್ಟುಪಾಡು ಮಾಡಿಕೊಂಡಿರುವುದರಿಂದ.... ನನ್ನ ಅನುಭವ ಇದುವರೆಗೂ ಸನ್ಮಾನಯುತವಾಗೇ ಇದೆ. ನನ್ನ ಅಂತರ್ಜಾಲದ ಹಿರಿಯ, ಕಿರಿಯ ಮಿತ್ರರೆಲ್ಲರೂ ಸಹೃದಯವಂತರೂ, ಒಳ್ಳೆಯ ಸಂಸ್ಕಾರವಂತರೂ, ಸಜ್ಜನರೂ ಆಗಿದ್ದಾರೆ.... ಸ್ನೇಹ ಬೆಳೆಸುವಾಗ ಹಿಂಜರಿಕೆಯಿಂದಲೇ ಆರಂಭವಾಗಿದ್ದರೂ ಕೂಡ.. ಈಗ ನಾ ಅವರನ್ನು ಅರಿವ ಪ್ರಯತ್ನದ ಮೂಲಕ, ಅವರು ನನಗೆ ಆಪ್ತ ಮಿತ್ರರುಗಳಾಗಿದ್ದಾರೆ... ನನ್ನ ಸುಖ - ದು:ಖವನ್ನು ಹಂಚಿಕೊಳ್ಳುವ , ನನಗೆ ಮಾರ್ಗದರ್ಶನ ನೀಡುವ, ನನ್ನಣ್ಣ ನನಗಿದ್ದಾರೆ..... (ಅವರೂ ನಾನೂ ಒಂದೇ ಕಾಲೇಜ್ ನಲ್ಲಿ ಓದಿದ್ದರೂ ಕೂಡ.. ಅತ್ಯಾಶ್ಚರ್ಯಕರ ರೀತಿಯಲ್ಲಿ ನಾವು ಅಂತರ್ಜಾಲದ ಮುಖಾಂತರ ಒಬ್ಬರಿಗೊಬ್ಬರು ಪರಿಚಿತರಾದೆವು) .... ಇದಲ್ಲವೇ ಜೀವನ...!!! ನಾನು ಬೇಸರ ಪಟ್ಟಾಗ, ಖೇದ ಗೊಂಡಾಗ, ದು: ಪಟ್ಟಾಗ, ನನ್ನ ನೋವು ಮರೆಸಲು ಪ್ರಯತ್ನಿಸುವ, ಮನ ಅರಳಿಸುವ ಅತ್ಯಂತ ಆತ್ಮೀಯ ತಮ್ಮನಿದ್ದಾರೆ... ಏನೂ ಬರೆಯಲು ತೋಚದೇ ಹತಾಷೆಗೊಂಡಾಗ, ಒಳ್ಳೆಯನುಡಿಮುತ್ತುಗಳನ್ನೂ, ಉತ್ಕಟ ಸಹೋದರಿ ಪ್ರೀತಿಯ ಮೆರೆಸುವ ಕವನವನ್ನೂ ಮಿಂಚಂಚೆ ಮೂಲಕ ಕಳುಹಿಸಿ, ನನ್ನನ್ನು ಬರೆಯುವಂತೆ ಪ್ರೋತ್ಸಾಹಿಸುವ, ನನ್ನ ಆಪ್ತ ಸಹೋದರ - ಸ್ನೇಹಿತ ಇದ್ದಾರೆ.... ತಮ್ಮ, ತಂಗಿಯರೇ ಇಲ್ಲದ ನನಗೆ ನಿಜವಾದ ಪುಟ್ಟ ತಮ್ಮನ ಅಕ್ಕರೆ, ಆಸೆ ತೋರಿಸಿ, ಆಗಾಗ ಕಾಲೆಳೆದು, ಹಾಸ್ಯ ಮಾಡಿ ನಗಿಸುವ, ಮೊಂಡು ವಾದ ಹೂಡುವ, ಹುಡುಗಾಟದ, ತರ್ಲೇ ತಮ್ಮನೂ ಇದ್ದಾನೆ.... ಎಲ್ಲಾ ಸ್ನೇಹ ತಂತುಗಳೂ ನನಗೆ ಅಂತರ್ಜಾಲವೆಂಬ ಮಾಯಾಲೋಕದಿಂದಲೇ ದೊರಕಿದ್ದು.... ಮತ್ತೂ... ಯಾವ ಸಂಬಂಧದ ರೂಪವನ್ನೂ ಕೊಡದಿದ್ದರೂ, ಆತ್ಮೀಯತೆ ತೋರುವ... ಓದಲು ಪುಸ್ತಕಗಳನ್ನು ಕೊಡಲೊಪ್ಪುವ, ಕಿರಿಯ ಸ್ನೇಹಿತ.... ನಿಮ್ಮ ಶೈಲಿ ಚೆನ್ನಾಗಿದೆ ಬರವಣಿಗೆ ಮುಂದುವರೆಸಿ, ಬಿಡಬೇಡಿ, ಏನಾದರೂ ಸಲಹೆ ಬೇಕಿದ್ದರೆ, ಧಾರಾಳವಾಗಿ ಕೇಳಿ ಎಂದು ಪ್ರೋತ್ಸಾಹಿಸುವ ಹಿರಿಯ ಸ್ನೇಹ ಜೀವಿಯೂ ಇದ್ದಾರೆ....

ಮುಂದುವರೆಯುವುದು.....

Sunday, February 21, 2010

ವ್ಯಕ್ತಿ - ವಿಶೇಷಗಳು :

ಶ್ರೀ ಮುತ್ತುಸ್ವಾಮಿ ದೀಕ್ಷಿತರು : (ಕ್ರಿ ಶ ೧೭೭೫ - ೧೮೩೫)

ಶ್ರೀ ದೀಕ್ಷಿತರು ೧೬ನೇ ವಯಸ್ಸಿಗೇ ವೇದಾಧ್ಯಯನ, ಕಾವ್ಯಾಲಂಕಾರ, ಜ್ಯೋತಿ:ಶಾಸ್ತ್ರ, ವೈದ್ಯ ಮತ್ತು ಮಂತ್ರ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಅಲಂಕಾರ ಹಾಗೂ ಛಂದಸ್ಸ್ ಶಾಸ್ತ್ರಗಳಲ್ಲಿ ಪಾರಂಗತರು. ಶಬ್ದಾಲಂಕಾರ ಹಾಗೂ ತಾಳಾಲಂಕಾರಗಳನ್ನು ಸುಂದರವಾಗಿ ಕೃತಿಗಳಲ್ಲಿ ಅಳವಡಿಸಿದ್ದಾರೆ. ದ್ವಾದಶ ಮುದ್ರೆಗಳನ್ನು , ಕ್ಷೇತ್ರ ಮುದ್ರೆಗಳನ್ನೂ, ತಮ್ಮ ಕೃತಿಗಳಲ್ಲಿ ಅಳವಡಿಸಿದ್ದಾರೆ.

ಸುಮಾರು ೫೦ ಪಾಶ್ಚಾತ್ಯ ಕೃತಿಗಳಿಗೆ ಸಂಸ್ಕೃತ ಪದಪುಂಜ ಜೋಡಿಸಿ, ವೈಭವೀಕರಿಸಿದ್ದಾರೆ. ಶ್ರೀ ಭಾಸ್ಕರ ರಾಯರ ಲಲಿತಾ ಸಹಸ್ರನಾಮ ವ್ಯಾಖ್ಯಾನ ಮತ್ತು ಶ್ರೀ ವಿದ್ಯಾಪರ ತಂತ್ರ ಶಾಸ್ತ್ರ ಪ್ರಚುರ ಪಡಿಸಲು ಮತ್ತು ಬ್ರಹ್ಮಾಂಡ ಪುರಾಣ ಹಾಗೂ ಸೌಂದರ್ಯ ಲಹರಿಯ ವಿಶೇಷತೆಯನ್ನು ಪ್ರಚುರ ಪಡಿಸಲು, ಶ್ರೀ ಭಾಸ್ಕರ ರಾಯರೇ, ಮುತ್ತುಸ್ವಾಮಿ ದೀಕ್ಷಿತರ ಅವತಾರವೆತ್ತಿದ್ದಾರೆನ್ನುತ್ತಾರೆ, ಸಂಗೀತ ಪ್ರಪಂಚದಲ್ಲಿ.

ಇವರು ನಿಷ್ಣಾತ ವೀಣಾ ವೈಣಿಕರಾಗಿದ್ದರು. ಪಂಚದಶ ಗಮಕಗಳನ್ನು ಪ್ರಯೋಗ ಮಾಡಿ ತೋರಿಸಿದ್ದರು. ದೀಕ್ಷಿತರು ಷಣ್ಮುಖನ ಪರಮ ಭಕ್ತರಾಗಿದ್ದರು ಮತ್ತು ಸುಬ್ರಹ್ಮಣ್ಯ ಸ್ವಾಮಿಯು ಇವರಿಗೆ ಸಾಕ್ಷಾತ್ಕಾರವಾಗಿದ್ದನು.

ಶ್ರೀ ದೀಕ್ಷಿತರು ಕೃತಿಗಳ ಅನೇಕ ಗುಚ್ಛಗಳನ್ನು ರಚಿಸಿದ್ದಾರೆ -

೧) ಷೋಡಶ ಗಣಪತಿ ಕೃತಿಗುಚ್ಛ
೨) ತಿರುವಾರೂರಿನ ದೇವಾಲಯದ ಪಂಚ ಲಿಂಗಗಲ ಕುರಿತು ಕೃತಿಗಳು
೩) ಪಂಚತತ್ವಗಳ ಆಧಾರದ ಕೃತಿಗಳು
೪) ಅಭಯಾಂಬಾ ಕೃತಿಗಳು
೫) ಸುಬ್ರಹ್ಮಣ್ಯ ಸ್ವಾಮಿ ಕೃತಿಗಳು
೬) ತಿರುವಾರೂರಿನ ತ್ಯಾಗರಾಜ ಸ್ವಾಮಿ ಕುರಿತು ಕೃತಿಗಳು
೭) ನೀಲೋತ್ಪಲಾಂಬಾ ಕೃತಿಗಳು
೮) ಕಮಲಾಂಬಾ ನವಾವರಣ ಕೃತಿಗಳು

ಹೀಗೆ ಅವರ ರಚನೆಗಳಲ್ಲಿ ವೈವಿಧ್ಯಮಯ ಕೃತಿಗಳನ್ನು ನಾವು ಕಾಣಬಹುದು.


ಶ್ರೀ ತ್ಯಾಗರಾಜರು (ಕ್ರಿ ಶ ೧೭೬೭ - ೧೮೪೭)

ಶ್ರೀ ತ್ಯಾಗರಾಜರು ತಮ್ಮ ೧೮ನೇ ವಯಸ್ಸಿನಲ್ಲಿಯೇ ರಾಮಕೃಷ್ಣಾನಂದ ಯತೀಂದ್ರರಿಂದ ಶ್ರೀ ರಾಮ ಮಂತ್ರ ದೀಕ್ಷೆ ಪಡೆದು, ಇದನ್ನು ಒಂದು ವ್ರತದಂತೆ, ಒಂದು ಸಲಕ್ಕೆ ೧,೨೫,೦೦೦ ರಾಮನಾಮ ಜಪದಂತೆ ವರ್ಷಾನುಗಟ್ಟಲೆ ಮಾಡಿ, ತೊಂಬತ್ತಾರು ಕೋಟಿ ರಾಮಜಪ ಮಾಡಿದ್ದರು. ತಮ್ಮ ತಂದೆಯವರು ಮಾಡುತ್ತಿದ್ದ ರಾಮಾಯಣ ಪಾರಾಯಣವನ್ನು ಕೇಳಿ ಕೇಳಿ ಅವರು ಶ್ರೀ ರಾಮನ ಪರಮ ಭಕ್ತರಾಗಿದ್ದರು. ತಂದೆ ರಾಮ ಬ್ರಹ್ಮರು ಕಾಲವಾದ ನಂತರ ತಮ್ಮ ಪಾಲಿಗೆ ಬಂದ ತಂದೆಯ ಪೂಜೆಯ ಕೋಣೆ ಮತ್ತು ರಾಮಪಂಚಾಯತನ ವಿಗ್ರಹಗಳನ್ನು ಸಂತೋಷದಿಂದ ಸ್ವೀಕರಿಸಿದ್ದರು. ತ್ಯಾಗರಾಜರು ಗೃಹಸ್ಥರಾಗಿದ್ದೂ ವಿರಕ್ತಿಯಿಂದಿದ್ದರು. ರಾಮತಾರಕ ಮಂತ್ರದ ಸಿದ್ಧಿಯಾಗಿ ಅವರಿಗೆ ಶ್ರೀರಾಮನು ಲಕ್ಷ್ಮಣನೊಂದಿಗೆ ಸಾಕ್ಷಾತ್ಕರಿಸಿದ್ದನು. ಆನಂದ ತುಂಬಿ ತ್ಯಾಗರಾಜರು "ಏಲ ನೀ ದಯ ರಾದು" ಎಂಬ ಕೀರ್ತನೆ ರಚಿಸಿ ಹಾಡಿದ್ದರು. ತ್ಯಾಗರಾಜರು ಮಹಾರಾಜರು ಕೊಟ್ಟ ಸಂಪತ್ತನ್ನು ನಿರಾಕರಿಸಿದರೆಂಬ ಕಾರಣಕ್ಕೆ ಕೋಪಗೊಂಡು ಅವರ ಅಣ್ಣ, ರಾಮನ ಪೂಜೆಯ ಹುಚ್ಚು ತಮ್ಮನಿಗೆ ಹಿಡಿದಿರುವುದೇ ವಿರಕ್ತಿಗೆ ಕಾರಣವೆಂದು ಅವರು ಪೂಜಿಸುತ್ತಿದ್ದ ರಾಮಪಂಚಾಯತನ ವಿಗ್ರಹಗಳನ್ನು ಎತ್ತಿಕೊಂಡು ಹೋಗಿ ಕಾವೇರಿ ನದಿಯಲ್ಲಿ ಬಿಸಾಡಿಬಿಟ್ಟರು. ಕಾವೇರಿ ನದಿಯನ್ನೆಲ್ಲಾ ಶೋಧಿಸಿ, ಅದರಲ್ಲಿ ಈಜಾಡಿ ತಮ್ಮ ಸ್ವಾಮಿಯನ್ನು ಪಡೆದುಕೊಂಡಿದ್ದರು ತ್ಯಾಗರಾಜರು.

ಒಮ್ಮೆ ಅವರು ತಿರುಪತಿಗೆ ಹೋದಾಗ ದರ್ಶನದ ವೇಳೆ ಮುಗಿದಿದ್ದು ದೇವರ ಮುಮ್ದೆ ತೆರೆ ಹಾಕಲಾಗಿತ್ತು. ಇಷ್ಟು ದೂರ ಬಂದು ದೇವರನ್ನು ಕಾಣಲಗದಲ್ಲಾ ಎಂದು ಮರುಗಿ ತ್ಯಾಗರಾಜರು ಅಲ್ಲೇ ನಿಂತು "ತೆರೆ ತೆಗೆಯಬಾರದೇ, ತಿರುಪತಿ ವೆಂಕಟರಮಣ" (ತೆರ ತೀಯಗರಾದಾ) ಎಂದು ಹಾಡಿದರು. ಒಡನೆಯೇ ಅರ್ಚಕರೂ ಎಲ್ಲರೂ ನೋಡುತ್ತಿದ್ದಂತೆಯೇ ತೆರೆ ತನ್ನಷ್ಟಕ್ಕೆ ತಾನೇ ಪಕ್ಕಕ್ಕೆ ಸರಿದುಕೊಂಡು ಬಿಟ್ಟಿತು. ದೇವರ ದರ್ಶನ ಮಾಡಿದ ತ್ಯಾಗರಾಜರು ’ವೆಂಕಟೇಶಾ ನಿನ್ನನ್ನು ನೋಡಲು ಹತ್ತುಸಾವಿರ ಕಣ್ಣುಗಳು ಬೇಕು" ಎಂದು ಹಾಡಿ ಕೃತಜ್ಞತೆ ಸೂಚಿಸಿದ್ದರಂತೆ.

ಶ್ರೀ ತ್ಯಾಗರಾಜರೂ ಸಹ ಅತ್ಯಂತ ಪ್ರಸಿದ್ಧಿ ಪಡೆದಿರುವ ’ಪಂಚರತ್ನ ಕೃತಿಗಳು’ ಅಲ್ಲದೇ -

೧) ಕೋವೂರಿ ಪಂಚರತ್ನಗಳು
೨) ಶ್ರೀರಂಗಂ ಪಂಚರತ್ನಗಳು
೩) ತಿರುವಟ್ಟಿಯೂರ್ ಪಂಚರತ್ನಗಳು
೪) ಲಾಲ್ ಗುಡಿ ಪಂಚರತ್ನಗಳು
೫) ನಾರದ ಪಂಚರತ್ನಗಳು
೬) ಕಾಂಚಿಪುರಂ ಕೃತಿಗಳು

ಹೀಗೇ ಕೃತಿಗಳ ಗುಚ್ಛಗಳನ್ನೂ, ಅಸಂಖ್ಯಾತ ಕೀರ್ತನೆಗಳನ್ನೂ ರಚಿಸಿದ್ದಾರೆ.


ಶ್ರೀ ಬಾಲಮುರಳೀಕೃಷ್ಣ : (ಜನನ ೦೬.೦೭.೧೯೩೦)


ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಶ್ರೀ ಬಾರಮುರಳೀ ಕೃಷ್ಣರು ತಮ್ಮದೇ ಆದ ಹೊಸ ೭೨ ರಾಗಗಳನ್ನು ಕೊಡುಗೆಯಾಗಿಸಿದ್ದಾರೆ. ಇವರು ಅನೇಕ ಪ್ರಯೋಗಗಳನ್ನು ಮಾಡಿ, ಕ್ರಮವಾಗಿ ೪, ೩, ೨ ಸ್ವರಗಳನ್ನಷ್ಟೇ ಉಪಯೋಗಿಸಿ ಹೊಸ ರಾಗಗಳನ್ನು ಸ್ವತ: ಕಂಡುಹಿಡಿದು, ಕೃತಿಗಳನ್ನೂ ಕೂಡ ರಚಿಸಿದ್ದಾರೆ. ಇವರ ಈ ರಾಗಗಳ ಗುಚ್ಛದ ಒಂದು ರಾಗವಾದ "ಮಹತಿ"ಯನ್ನು ಆಧರಿಸಿ ತಮಿಳು ಸಿನೆಮಾ ಕ್ಷೇತ್ರದ ಪ್ರಸಿದ್ಧ ಹಾಡು "ಅತಿಶಯ ರಾಗಂ... ಆನಂದ ರಾಗಂ.... ", "ಅಪೂರ್ವ ರಾಗಂಗಳ್" ಚಿತ್ರದಲ್ಲಿ ಅಳವಡಿಸಲಾಗಿದೆ.

ಇವರು ಒಮ್ಮೆ ಪ್ಯಾರಿಸ್ ನಲ್ಲಿ ಸಂಗೀತ ಕಛೇರಿ ನಡೆಸುತ್ತಿದ್ದಾಗ, ಒಬ್ಬ ಫ್ರೆಂಚ್ ಪ್ರಜೆ - ಪಿಟೀಲು ತಯಾರಕ ಎದ್ದು ನಿಂತು ಇವರನ್ನು ಕೇಳಿದನಂತೆ... when one doctorate cannot be done in one's life time, how can Dr Balamurali perfect so many......... ಎಂದು.... ಇವರ ಪಾಂಡಿತ್ಯ ಪರೀಕ್ಷಿಸುವ ಸಲುವಾಗಿ, ಅವನು ಇವರನ್ನು ಒಂದು ಹಾಡು ಫ್ರೆಂಚ್ ಭಾಷೆಯಲ್ಲಿ ಹಾಡಲು ಕೇಳಿದಾಗ, ಇವರು ಸುಲಲಿತವಾಗಿ ಹಾಡಿದ್ದರು.... ಇವರಿಗೆ ಅನೇಕ ದೇಶ ವಿದೇಶ ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಲಾಗಿದೆ. ಬಾಲಮುರಳಿಯವರ ಅಭಿಪ್ರಾಯದಲ್ಲಿ ನಮ್ಮ ಕರ್ನಾಟಕ ಶಾಸ್ತ್ರೀಯ ಸಂಗೀತದ ೭೨ ಮೇಳಕರ್ತ ರಾಗಗಳೇ ಪ್ರಪಂಚದ ಎಲ್ಲಾ ವಿಧದ ಸಂಗಿತಕ್ಕೂ ಆಧಾರ. ಇವರ ಸ್ವಂತ ರಚನೆ, ಅವರದೇ ರಾಗ "ಸರ್ವಶ್ರೀ"ಯಲ್ಲಿ... ಉಮಾಸುತಂ ನಮಾಮಿ, ಮಮ ಮಾನಸ್ಥಿತಂ.... ಈ ರಾಗಕ್ಕೆ ಇವರು ಕೇವಲ ಮೂರೇ ಮೂರು ಸ್ವರಗಳಾದ ’ಸ’ ’ಮ’ ’ಪ’ ಗಳನ್ನು ಮಾತ್ರವೇ ಉಪಯೋಗಿಸಿದ್ದಾರೆ...

ಶ್ರೀ ಬಾಲಮುರಳಿಯವರಿಗೆ ೧೮ನೇ ವಯಸ್ಸಿಗೇ ಮದುವೆಯಾಗಿ, ೨೦ನೇ ವಯಸ್ಸಿಗೇ ಅವರು ತಂದೆಯಾಗಿದ್ದರು. ೩ ಹೆಣ್ಣು ಮತ್ತು ೩ ಗಂಡು ಮಕ್ಕಳು. ಈಗವರಿಗೆ ಮರಿಮಕ್ಕಳೂ ಇದ್ದಾರೆ.....




ಆಧಾರ : ಶ್ರೀ ದೀಕ್ಷಿತರು ಮತ್ತು ಶ್ರೀ ತ್ಯಾಗರಾಜರು - ಲಭ್ಯವಿರುವ ಹಲವಾರು ಪುಸ್ತಕಗಳು
ಶ್ರೀ ಬಾಲಮುರಳೀಕೃಷ್ಣ - ಜಯಾ ಟಿ ವಿ ಯ "ತಿರುಂಬಿಪಾಕ್ಕಿರೇನ್" ಕಾರ್ಯಕ್ರಮದಲ್ಲಿ, ಸ್ವತ: ಬಾಲಮುರಳಿಯವರೇ
ಪ್ರಸ್ತುತ ಪಡಿಸಿದ ವಿವರಗಳು.

Monday, February 8, 2010

ಪುಸ್ತಕ ಪರಿಚಯ - ೪

ತಾವರೆಯ ಕೊಳ....

ಸೂಕ್ಷ್ಮ ಸ್ವಭಾವದವಳಾದ ಶಾಂತಾಳಿಗೆ ಮಕ್ಕಳಿಲ್ಲ ಮತ್ತು ಮೈದುನ ರಮೇಶನ ಮೇಲೆ ಅತಿಯಾದ ಪ್ರೀತಿ, ವಾತ್ಸಲ್ಯ. MBBS ಓದುತ್ತಿದ ರಮೇಶ ಮತ್ತು ಅವನ ಪರಿವಾರದವರು ಮೆನಿಂಜೈಟಿಸ್ ಬಂದು ಆಸ್ಪತ್ರೆ ಸೇರಿದ ಶಾಂತಳನ್ನು ಕಳೆದುಕೊಳ್ಳುತ್ತಾರೆ. ಸಾವಿನ ಬಗ್ಗೆ ಬರೆದ ಎರಡು ವಾಕ್ಯ...."ಅಪಾರ ಬಂಧು ಬಳಗವನ್ನೂ, ತನ್ನ ಪ್ರೀತಿ ಪಾತ್ರರನ್ನೂ, ತನಗಿಂತಲೂ ವಯಸ್ಸಾದವರನ್ನೂ ತನಗಾಗಿ ಕಂಬನಿಗರೆಯಲು ಬಿಟ್ಟು ಶಾಂತ ಹೊರಟು ಹೋದಳು.." ನನ್ನನ್ನು ತಟ್ಟಿತು. ತ್ರಿವೇಣಿಯವರು ಬದುಕು ಮತ್ತು ಸಾವನ್ನು - ವಿಶ್ಲೇಶಿಸುತ್ತಾ, ಸಾವಿಗೆ ವಯಸ್ಸು, ಬಳಗ ಯಾವುದೂ ಬೇಡ, ಬರೀ ಜೀವ ಮಾತ್ರ ಸಾಕು ಮತ್ತು ಬದುಕು ಎನ್ನುವುದು ಎಷ್ಟೊಂದು ಅಶಾಶ್ವತವೆಂದಿದ್ದಾರೆ...

ಶಾಂತ ಸತ್ತ ತಕ್ಷಣ "ಮುತ್ತೈದೆ ಸಾವು ಪುಣ್ಯ ಮಾಡಿದ್ದಳು" ಎಂದು ಮುತ್ತೈದೆಯಲ್ಲದ ಹೆಂಗಸೊಬ್ಬಳು ನುಡಿದಾಗ ಲೇಖಕಿ ಶಾಂತಳ ಗಂಡ ರಾಮಣ್ಣನ ಮೂಲಕ "ಜೀವನದಲ್ಲಿ ಏನನ್ನೂ ಕಾಣದೆ ಕಣ್ಣು ಮುಚ್ಚುವ ಮುತ್ತೈದೆ ಸಾವೆಂತದು"? ಎಂದು ಅರ್ಥಪೂರ್ಣವಾಗಿ ಹೇಳುತ್ತಾರೆ....

ಶಾಂತಳ ಸಾವಿನಿಂದ ಕುಗ್ಗಿ ಹೋಗಿದ್ದ ರಮೇಶನನ್ನು ಮುಂಬಯಿಗೆ ಹವಾಬದಲಾವಣೆಗಾಗಿ ಕಳುಹಿಸುತ್ತಾರೆ. ಅಲ್ಲಿ ರಾಮಣ್ಣನ ಗೆಳೆಯ ಶೇಷಾದ್ರಿಯ ಹೆಂಡತಿ, ಮಗುವಿನ ತಾಯಿ, ರತ್ನಳಲ್ಲಿ ಅನುರಕ್ತನಾಗುತ್ತಾನೆ ರಮೇಶ. ಅವಳು ಸ್ನೇಹಿತನ ಮಡದಿ, ತನಗೆ ದಕ್ಕುವವಳಲ್ಲವೆಂದು ಗೊತ್ತಿದ್ದೂ ಉತ್ಕಟವಾಗಿ ಪ್ರೇಮಿಸುತ್ತಾನೆ. ಅವನು ತನ್ನನ್ನು ಬಿಟ್ಟು ವ್ಯಾಸಂಗ ಮುಗಿಸಿ ವೈದ್ಯನಾಗಬೇಕೆಂದು ರತ್ನ ಹೇಳುತ್ತಾಳೆ. ಈ ಪ್ರೇಮ, ಈ ಹಗರಣ ಮುಂದೊಂದು ದಿನ ನಿಮ್ಮ ಪಾಲಿಗೆ ಅರ್ಥವಿಲ್ಲದಿದ್ದಾಗಿ ತೋರುತ್ತದೆಂದು ತಿಳಿ ಹೇಳುತ್ತಾಳೆ. ರತ್ನಳ ಮಗು ಆರೋಗ್ಯ ತಪ್ಪಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ರಮೇಶನೊಳಗಿನ ವೈದ್ಯನಾಗುವ ಬಯಕೆ ಮತ್ತೆ ಚಿಗುರೊಡೆಯುತ್ತದೆ. ಕೊನೆಗೂ ರತ್ನಳನ್ನು ಬಿಟ್ಟು ವಾಪಸ್ಸು ಊರಿಗೆ ಹೊರಡುವ ತಯಾರಿ ನಡೆಸುತ್ತಾನೆ ರಮೇಶ. ಇಲ್ಲಿಯತನಕ ಅತ್ಯಂತ ಸಂಯಮ ತೋರಿದ್ದ ರತ್ನ ಅಸಹಾಯಕಳಾಗಿ ದುರ್ಬಲಳಾಗಿ ರಮೇಶನ ಮುಂದೆ ನಿಂತಿರುತ್ತಾಳೆ. ನಾವು ಯಾರೊಡನೆಯೂ ತುಂಬಾ ಸ್ನೇಹ, ವಿಶ್ವಾಸ ಇಟ್ಟುಕೋಬಾರದು.... ಬಾಂಧವ್ಯವೂ ಬೇಡ, ವಿರಹವೂ ಬೇಡ... ಎಂಬಂತಹ ಮಾತುಗಳನ್ನಾಡುತ್ತಾಳೆ....

ಮದುವೆಗೆ ಮುಂಚೆ ಪ್ರತಿಯೊಬ್ಬ ಹುಡುಗ ಹುಡುಗಿಯೂ ತನ್ನ ಭಾವಿಪತ್ನಿಯ ಬಗ್ಗೆ, ಜೀವನದ ಬಗ್ಗೆ, ನಾನಾ ರೀತಿಯ ಕನಸುಗಳನ್ನು ಕಟ್ಟಿರುತ್ತಾರೆ. ನೆಲೆಯಿಲ್ಲದ ಹಾರಾಡುವ ಚಂಚಲ ಚಿಟ್ಟೆಯಾಗಿರುತ್ತದೆ ಆಗ ಮನಸ್ಸು. ಮದುವೆಯಾದ ಮೇಲೆ ಮನಸ್ಸಿಗೆ ನೆಲೆ ಸಿಕ್ಕುತ್ತದೆ. ಆಗ ನಮಗೆ ಹಿಂದಿನ ಅನುಭವವೆಲ್ಲಾ ಕೇವಲ ಹುಚ್ಚಾಟ ಎನಿಸುತ್ತದೆ.... ಲೇಖಕಿ ಜೀವನದಲ್ಲಿ ಮನಸ್ಸಿಗೆ ನೆಲೆಸಿಗುವುದೆಂದರೆ ಅದು "ಮದುವೆ"ಯಿಂದ ಮಾತ್ರವೇ ಎನ್ನುತ್ತಾರೆ.... ಪ್ರೇಮ ಸ್ಥಿರವಲ್ಲ, ಪ್ರೇಮ ಚಿರವಲ್ಲ, ಹೂವಿನಿಂದ ಹೂವಿಗೆ ಹಾರುವ ಭ್ರಮರಕ್ಕೂ, ಪ್ರೇಮಕ್ಕೂ ವ್ಯತ್ಯಾಸವಿಲ್ಲ. ಕ್ಷಣಿಕ ಕಾಲ ಮಾತ್ರ ಮನಸ್ಸನ್ನು ಮುತ್ತಿ ಭ್ರಾಂತಿಗೀಡುಮಾಡುವ ಒಂದು ದೌರ್ಬಲ್ಯಕ್ಕೆ ಪ್ರೇಮ ಎನ್ನುತ್ತಾರೆ ಲೇಖಕಿ.

ಈ ಕಥೆಗೆ ಸಂಬಂಧ ಪಟ್ಟಂತೆ ತ್ರಿವೇಣಿಯವರು ಹಾಗೆ ಹೇಳಿರಬಹುದೆಂದು ಕೊಂಡರೂ ಕೂಡ, ನನ್ನ ಮನಸ್ಸು ಪ್ರೇಮ ಒಂದು ದೌರ್ಬಲ್ಯವೆಂದು ಒಪ್ಪಿಕೊಳ್ಳುವುದಿಲ್ಲ. ಪ್ರೇಮ ಖಂಡಿತಾ ಚಿರವಾಗಿರತ್ತೆ. ಪ್ರೇಮಿಸಿ ಮದುವೆಯಾದವರು ನಂತರ ಬದುಕಿನಲ್ಲಿ ಏನೇ ಹೊಂದಾಣಿಕೆ ಮಾಡಿಕೊಳ್ಳುತ್ತಾರೆಂದು ಕೊಂಡರೂ, ಇಬ್ಬರ ನಡುವೆ ಸ್ವಲ್ಪವಾದರು ಆ ಪ್ರೇಮ ಎನ್ನುವುದಿಲ್ಲದಿದ್ದರೆ, ಜೊತೆಗೆ ಬಾಳುವುದು ಕಠಿಣ ಕೆಲಸವಾಗಿ ಬಿಡುತ್ತದೆ. ಹೊಂದಾಣಿಕೆ ಬದುಕಿನೊಂದಿಗಾಗುತ್ತದೆಯೇ ಹೊರತು ಪ್ರೇಮದೊಂದಿಗಲ್ಲವೆಂದು ನನ್ನ ಅಭಿಪ್ರಾಯ.....

Monday, February 1, 2010

ಪುಸ್ತಕಗಳ ಬಿಡುಗಡೆ ಸಮಾರಂಭ....

ನಿನ್ನೆ ೩೧ನೇ ಜನವರಿಯಂದು ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು. ಅದರಲ್ಲಿ ಮೂರು ಪುಸ್ತಕಗಳು ’ಪ್ರತಿದಿನ ಪರಿಸರ ದಿನ’, ’ಇರುವುದೊಂದೇ ಭೂಮಿ’ ಮತ್ತು ’ಸುರಿಹೊಂಡ ಭರತ ಖಂಡ’ ಅಂಕಿತ ಪ್ರಕಾಶನದಿಂದ ಮರು ಮುದ್ರಣಗೊಂಡವು. ಹೊಸದಾದ ಮೂರು ಪುಸ್ತಕಗಳು "ಅಭಿವೃದ್ಧಿಯ ಅಂಧಯುಗ", "ಟಿಪ್ಪು ಖಡ್ಗದ ನ್ಯಾನೋ ಕಾರ್ಬನ್" ಮತ್ತು "ಕೊಪೇನ್ ಹೇಗನ್ ಋತು ಸಂಹಾರ" ಭೂಮಿ ಬುಕ್ಸ್ ಪ್ರಕಾಶನದ ಮೊಟ್ಟ ಮೊದಲ ಪುಸ್ತಕಗಳು.. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಪ್ರೊ.ಬಿ ಕೆ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ, ಕೆ ವಿ ಅಕ್ಷರ ಮತ್ತು ಶ್ರೀಮತಿ ನೇಮಿಚಂದ್ರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನಡೆಯಿತು ಪುಸ್ತಕಗಳ ಲೋಕಾರ್ಪಣಾ ಸಮಾರಂಭ. ಎಂದಿನಂತೆ ಅಂಕಿತದವರು ಉಪಹಾರವನ್ನೂ ಏರ್ಪಡಿಸಿ ಬಿಟ್ಟಿದ್ದರು. ಈ ಸಮಾರಂಭದಲ್ಲಿ ನನ್ನನ್ನು ಆಕರ್ಷಿಸಿದ ವಿಚಾರಗಳೆಂದರೆ ಭೂಮಿ ಬುಕ್ಸ್ ಪ್ರಕಾಶನದವರ ಪ್ರತಿ ಪುಸ್ತಕಕ್ಕೆ ಬದಲು ಒಂದು ಗಿಡ ನೆಡುವ ಸಂಕಲ್ಪ ಮತ್ತು ಅತಿಥಿಗಳಿಗೆ ಪ್ರೀತಿಯಿಂದ ಕೊಟ್ಟ ಸಸಿಗಳು. ಹಸಿರು ಸಸಿಗಳು ಒಬ್ಬರಿಂದೊಬ್ಬರಿಗೆ ವಿನಿಮಯವಾಗುವ ವಿಷಯವೇ ನನ್ನನ್ನು ಬಹಳ ಸಂತೋಷ ಪಡಿಸಿತ್ತು. ಎರಡು ವರ್ಷಗಳ ಹಿಂದೆ ನಮ್ಮ ಚಿಕ್ಕಮ್ಮನ ಮನೆಯಲ್ಲಿ ನರಸಿಂಹ ಹೋಮ ಮಾಡಿದಾಗ, ನಾವು ಉಡುಗೊರೆಯಾಗಿ ಪುಟ್ಟ ಪುಟ್ಟ ಸಸಿಗಳನ್ನು ಕೊಟ್ಟಾಗ, ಅಲ್ಲಿ ನೆರೆದಿದ್ದ ಎಲ್ಲಾ ಸಾರ್ವಜನಿಕರೂ (ಎಲ್ಲರೂ ನಮ್ಮ ಬಳಗವೆಂಬ ವರ್ಗಕ್ಕೆ ಸೇರಿದವರೇ...!! :-) ನಮ್ಮನ್ನೇ ವಿಚಿತ್ರವಾಗಿ ನೋಡಿದ್ದರು. ಆದರೆ ಪುಸ್ತಕ ಬಿಡುಗಡೆಯಂತಹ ಸಾರ್ವಜನಿಕ ಸಮಾರಂಭಗಳಲ್ಲಿ ಈ ಆಚರಣೆ ನೋಡಿ ನನಗೆ ನಿಜಕ್ಕೂ ಸಂತೋಷವಾಯಿತು.

ಎಲ್ಲಾ ಅತಿಥಿಗಳ ಮಾತುಗಳ ನಂತರ ಶ್ರೀ ನಾಗೇಶ ಹೆಗಡೆಯವರು ತಮ್ಮ ಚಿಕ್ಕ ಚೊಕ್ಕವಾದ ಮಾತುಗಳನ್ನು ಆಡಿದರು. ಅವರು ಅಲ್ಲಿ ನೆರೆದಿದ್ದವರಿಗೆಲ್ಲಾ "ನಿಮ್ಮ ನಿಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಘಟನೆಗಳು ನಡೆದಾಗಲೆಲ್ಲಾ (ಅಂದರೆ ನಮ್ಮ ಜನ್ಮ ದಿನಗಳಂದು, ಮದುವೆಯ ವಾರ್ಷಿಕೋತ್ಸವ, ಮಕ್ಕಳ ಹುಟ್ಟು ಹಬ್ಬ, ಅನ್ನಪ್ರಾಶನ ಹೀಗೆ.......) ನೀವು ನೆನಪಾಗಿ ಒಂದೊಂದು ಗಿಡ ನೆಟ್ಟರೆ, ಬೆಂಗಳೂರು ಮತ್ತೆ ಹಸಿರು ವನವಾಗುತ್ತದೆ ಎಂದು ಕರೆ ಕೊಡುವುದರ ಮೂಲಕ ತಮ್ಮ ಪರಿಸರ ಮತ್ತು ಹಸಿರು ಕಾಳಜಿಯನ್ನು ವ್ಯಕ್ತಪಡಿಸಿದರು. ನನಗೆ ಅವರ ಈ ವಿಧಾನ ಅತ್ಯಂತ ಪ್ರಭಾವಕಾರಿ ಅನ್ನಿಸಿತು. ಸರಕಾರ ತಿಪ್ಪಗೊಂಡನಹಳ್ಳಿಯ ಸಮೀಪ ’ಸ್ಫೂರ್ತಿ ವನ’ಕ್ಕೆ ಜಾಗ ಕೊಟ್ಟಿದೆಯೆಂದೂ ಮತ್ತು ಭೂಮಿ ಪ್ರಕಾಶನ ಹೊರ ತರುವ ಪ್ರತಿಯೊಂದು ಪುಸ್ತಕಕ್ಕೆ ಬದಲಾಗಿ ಅಥವಾ ನೆನಪಾಗಿ ಈ ಸ್ಫೂರ್ತಿವನದಲ್ಲಿ ಒಂದೊಂದು ಗಿಡ ನೆಡಲಾಗುತ್ತದೆಂದು ಭರವಸೆಯಿತ್ತರು. ಇದರ ಶುರುವಾತು ಶ್ರೀಮತಿ ನೇಮಿಚಂದ್ರರವರು, ತಾವೇ ನೆಟ್ಟ ನೇರಳೆ ಸಸಿಯನ್ನು ಶ್ರೀ ನಾಗೇಶ ಹೆಗಡೆಯವರಿಗೆ ಕಾಣಿಕೆಯಾಗಿ ನೀಡುವ ಮೂಲಕ ಮಾಡಿದರು.

ಸಮಾರಂಭದ ಚಿತ್ರ ’ಅವಧಿ’ಯಲ್ಲಿದೆ. ಶ್ರೀ ನಾಗೇಶ ಹೆಗಡೆಯವರ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ ನನ್ನನ್ನು ತುಂಬಾ ಆಕರ್ಷಿಸಿತು.....

ಕೊನೆಯದಾಗಿ ಹೇಳಲೇಬೇಕಾದ ಒಂದು ಮಾತು.... ಸಮಾರಂಭದಲ್ಲಿ ನಾನು ಭೇಟಿಯಾದ ನಮ್ಮ ಸಂಪದ ಮಿತ್ರರು... ಹರಿ, ಶ್ರೀಹರ್ಷ, ವಿನಯ್..... ಮತ್ತು ಬ್ಲಾಗ್ ಲೋಕದ ಗೆಳೆಯರು ಕ್ಷಣ ಚಿಂತನೆ ಖ್ಯಾತಿಯ ಚಂದ್ರಶೇಖರ್, ಛಾಯಾ ಕನ್ನಡಿ ಖ್ಯಾತಿಯ ಶಿವು ಮತ್ತು ಮಲ್ಲಿ ಕಣ್ಣಲ್ಲಿ (ಕ್ಯಾಮೆರಾ) ಖ್ಯಾತಿಯ ಡಿ ಜಿ ಮಲ್ಲಿಕಾರ್ಜುನ್.... ನನಗೆ ನಿಜಕ್ಕೂ ಕಾರ್ಯಕ್ರಮಕ್ಕೆ ಹೋಗಿದ್ದು ಸಂತಸ ತಂದಿತ್ತು........




Friday, January 29, 2010

ಮೆಗಾ ಮದುವೆ....

ಮದುವೆಗಳಲಿ ಆಕರ್ಷಣೆಯೇ.... "ಮಂಟಪಗಳು"
ವೇದಿಕೆ ಮೇಲೆ ಬಣ್ಣ ಬಣ್ಣದ ಚೌಕಟ್ಟುಗಳು
ಸ್ಯಾಟಿನ ಹೊದಿಕೆಯಲಿ ಸಿಂಗಾರಗೊಂಡ ಪುಷ್ಪಗಳು
ನಡುವೆ ಮದುಮಕ್ಕಳಿಗೆರಡು ರಾಜಾ ಸೀಟುಗಳು......

ಪೈಪೋಟಿಯ ವೈಭವಗಳೂ...
ಲಕ್ಷ, ಕೋಟಿ ರೂಪಾಯಿಗಳೂ...
ಮಿಂಚಿದ ಬಾಗಿದ ಬಳುಕಿದ ದೌಲತ್ತುಗಳೂ...
ನಡುವೆ ಎಲ್ಲೋ ಮುಚ್ಚಿಹೋಯ್ತು ನವಿರಾದ ಸಂಬಂಧಗಳೂ...

ಅಂದು ಮದುವೆಗಳು ನಿಶ್ಚಿತಗೊಳ್ಳುತ್ತಿದ್ದವು ಸ್ವರ್ಗದಲ್ಲೆಂದು..
ಇಂದು ಐಷಾರಾಮಿ ಮದುವೆಗಳಲಿ ಸ್ವರ್ಗವೇ ಧರೆಗಿಳಿದಿದೆಯೆಂದು...

ಜಗತ್ತೇ ದಂಗು ಬಡಿಯುವ ವೈಭಗದ ಗುಂಗು
ಮೆಗಾ ಮದುವೆಗಳ ಮಾಯಾ ಲೋಕದ ಡೋಂಗು...

ಚಿನ್ನ ಬೆಳ್ಳಿಗಳ, ವಜ್ರ ವೈಢೂರ್ಯಗಳ ಅತೀ ಆರ್ಭಟ
ಆಮಂತ್ರಣ ಪತ್ರಿಕೆಯಿಂದಲೇ ಆರಂಭವಾಗುವ ಅಂತಸ್ಥಿನ ಆಟ....

ಹಾಹಾಕಾರ ಮಾಡುತ್ತಾ ತುತ್ತು ಅನ್ನಕ್ಕೂ ಗೋಳಿಡುವ ಬಡವ
ಕೋಟಿಗಟ್ಟಲೇ ದೋಚುತ್ತಾ ಮಹಾರಾಜರ ವೈಭವ ಮೆರೆಸುವ ಧನ ದಾನವ...

ಕಡಿಮೆ ಖರ್ಚಿನ ಸರಳ ವಿವಾಹಗಳು
ಬೆಸೆಯುವುದು ಗಟ್ಟಿಯಾದ ಸಂಬಂಧಗಳು...

ಎರಡು ಸಂಸಾರಗಳು ಒಟ್ಟಾದಾಗ
ವಧುವರರ ಅಂತರಂಗಗಳು ಒಂದಾದಾಗ
ಬೇಕೇ.... ಈ...... ಭೋಗ..... ವೈಭೋಗ.......

Saturday, January 2, 2010

ಚಂದದ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಶ್ರೀವತ್ಸ ಜೋಶಿಯವರ ಖಾಸಗಿ ಅಂಚೆ ನನ್ನ ಅಂಚೆ ಪೆಟ್ಟಿಗೆ ತಲುಪಿದಾಗ, ತುಂಬಾ ಖುಷಿಯಾಗಿತ್ತು. ತಮ್ಮೆಲ್ಲಾ ಅಭಿಮಾನಿಗಳಿಗೂ ಅವರು ಖಾಸಗಿಯಾಗಿ ಹೀಗೆ ಅಂಚೆ ಕಳುಹಿಸಿದ್ದರೆಂದು ತಿಳಿದು ಹರ್ಷವಾಯಿತು. ಅವರ ಲೇಖನಗಳನ್ನು ಒಂದೂ ಬಿಡದೆ ಓದುವ ಅಭಿಮಾನಿ ನಾನು. ಭಾನುವಾರದ ವಿಜಯ ಕರ್ನಾಟಕದ ಆಕರ್ಷಣೆಯೇ ನನ್ನ ಪಾಲಿಗೆ ಅವರ ಲೇಖನ. ಅವರ ಎರಡು ಪುಸ್ತಕಗಳ ಬಿಡುಗಡೆ ಇಲ್ಲೇ ಇಂಡಿಯನ್ ಇನ್ಸ್ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಎಂದು ನೋಡಿ, ನಿಜವಾಗಿ ನಾನು ಈ ದಿನಕ್ಕಾಗಿ ಎದುರು ನೋಡುತ್ತಿದ್ದೆ. ಸಧ್ಯಕ್ಕೆ ಬೇರಾವುದೇ ಅಡಚಣೆಯಾಗದೆ, ನಾನು ೧೦.೩೦ಕ್ಕೆ ಅಲ್ಲಿ ತಲುಪಿದಾಗ, ಆಗತಾನೆ ಕಾರ್ಯಕ್ರಮ ಶುರುವಾಗಿತ್ತು. ಈ ದಿನದ ಕಾರ್ಯಕ್ರಮದಲ್ಲಿ ನಾನು ಶ್ರೀಯುತರಾದ ಮಾಸ್ಟರ್ ಹಿರಣ್ಣಯ್ಯ, ಜಯಂತ್ ಕಾಯ್ಕಿಣಿ ಹಾಗೂ ಮುಖ್ಯವಾಗಿ ಶ್ರೀವತ್ಸ ಜೋಶಿಯವರ ಮಾತುಗಳನ್ನು ಕೇಳಲು ಉತ್ಸುಕಳಾಗಿದ್ದೆ. ಶ್ರೀವತ್ಸ ಜೋಶಿಯವರನ್ನು ನಾನು ಇದೇ ಮೊದಲ ಬಾರಿಗೆ ಭೇಟಿ ಮಾಡುವ ಅವಕಾಶವನ್ನು ತಪ್ಪಿಸಿಕೊಳ್ಳುವ ಇಷ್ಟ ನನಗೆ ಇರಲಿಲ್ಲ..... ಅಂತೂ ಅಲ್ಲಿ ತಲುಪಿ ಜಾಗ ಹುಡುಕಿ ಕುಳಿತಾಗ ನನಗೊಂತರ ಉದ್ವೇಗವಾಗಿತ್ತು....

ಕಾರ್ಯಕ್ರಮ ಪುಸ್ತಕ ಬಿಡುಗಡೆಯಿಂದ ಮೊದಲುಗೊಂಡು, ಅತ್ಯಂತ ಆತ್ಮೀಯವಾಗಿ ಜೋಶಿ ದಂಪತಿಗಳಿಗೆ ಸನ್ಮಾನ ಮೂಲಕ ಮುಂದುವರೆಯಿತು. ಅತಿಥಿಗಳೆಲ್ಲರೂ ಸೇರಿ ದಂಪತಿಗಳನ್ನು ಸನ್ಮಾನಿಸಿದ ರೀತಿ ನಿಜವಾಗಿ ಕಾರ್ಯಕ್ರಮಕ್ಕೆ ಒಂಥರಾ ನಮ್ಮ ಮನೆಯ ಯಾವುದೋ ಒಂದು ಕಾರ್ಯಕ್ರಮ ಎಂಬ ಭಾವನೆ ಬರುವಂತೆ ಮಾಡಿತು....

ಮೊದಲನೆಯದಾಗಿ ಶ್ರೀ ಜಯಂತ ಕಾಯ್ಕಿಣಿಯವರು ಮಾತನಾಡಿ ಎಂದಿನಂತೆ ತಮ್ಮ ಹಾಸ್ಯ ಮಿಶ್ರಿತ ಧಾಟಿಯಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟರು. ಮದುವೆಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೂ ಅಂತರ ಕಡಿಮೆಯಾಗುತ್ತಿದೆ ಎಂದು ನಗಿಸಿದರು... ಶ್ರೀವತ್ಸ ಜೋಶಿಯವರನ್ನು ಪರಿಚಯಿಸುತ್ತಾ "ಇವರನ್ನು ನೋಡಿದರೇ ಸಾಕು ಇವರದು ಸುಭಿಕ್ಷ ಮತ್ತು ಸೌಹಾರ್ದದ ವ್ಯಕ್ತಿತ್ವವೆನ್ನಿಸುತ್ತದೆ" ಎಂದರು. ಸ್ಪಂದನವಿಲ್ಲದ ಅಂಕಣ ಬರಹಗಳು ’ರದ್ದಿ’ಯಾಗುತ್ತದೆಂದೂ, ಜೋಶಿಯವರ ಅಂಕಣಗಳಿಗೆ ಪ್ರಪಂಚದ ಎಲ್ಲೆಡೆ ಅಭಿಮಾನಿಗಳಿದ್ದಾರೆಂದೂ ಹೇಳಿದರು. ಅಂಕಣ ಬರಹಗಳು ಅಹಂಕಾರವಿಲ್ಲದ, ನಿಸ್ವಾರ್ಥ ಆಂತರಿಕ ಮತ್ತು ಅತ್ಯಂತ ಪ್ರಾಮಾಣಿಕ ಬರಹಗಳಾಗಬೇಕು ಮತ್ತು ಜೋಶಿಯವರ ಬರಹಗಳು ಪೂರ್ವಗ್ರಹ ಮುಕ್ತವಾಗಿ, ಅತ್ಯಂತ ಪ್ರಭಾವಿತವಾಗಿರುತ್ತವೆಂದು ಹೇಳಿದರು. ಹೊರನಾಡಿನಲ್ಲಿರುವ ಕನ್ನಡಿಗರಾದ ಜೋಶಿಯವರು, ತಾನೇನೋ ಕಳೆದುಕೊಂಡಿದ್ದೇನೆಂಬ ಭಾವನೆ ಮೀರಿ, ಅತ್ಯಂತ ಸ್ವಾಭಾವಿಕವಾಗಿ ಬರೆಯುತ್ತಾರೆ ಮತ್ತು ಇವರ ಬರಹಗಳು ಡಿಟಿಪಿ ತಂತ್ರದ ಮೆರವಣಿಗೆಯಿಲ್ಲದ, ಅಂದರೆ ತಾಂತ್ರಿಕ ಸಹಾಯದಿಂದ ಸಾಲಂಕೃತಗೊಂಡ ಬರಹದಂತಿರದೆ, ಆತ್ಮೀಯವಾಗಿರುತ್ತದೆಂದರು. ಮಾಹಿತಿ ಎನ್ನುವುದನ್ನು ನಾವು ಹೀರಿಕೊಂಡು, ಅದು ನಮಗೆ ರಕ್ತಗತವಾಗಿ, ನಮ್ಮಿಂದ ನಮ್ಮತನದೊಂದಿಗೆ "ಬರಹ"ವಾಗಿ ಬಂದಾಗ, ಅದು ಪ್ರಾಮಾಣಿಕ ಬರಹವಾಗುತ್ತದೆ ಮತ್ತು ಜೋಶಿಯವರ ಬರಹಗಳು ನಮ್ಮನ್ನು, ಈ ಕಾರಣಕ್ಕೇ ಸೆಳೆಯುತ್ತವೆ ಎಂದರು. ಅಂಕಣಕಾರರಿಗೆ ಪ್ರತಿವಾರವೂ ಯಾವುದಾದರೊಂದು ವಿಷಯವನ್ನು, ಅಂಕಣಕ್ಕಾಗಿ ಹುಡುಕುವ ಆತಂಕವಿರುತ್ತದೆ, ಶ್ರೀ ಜೋಶಿಯವರು ಅಂಕಣ ಬರಹದ ಚೌಕಟ್ಟನ್ನು ಬಳಸಿ, ಇನ್ನೂ ಹೆಚ್ಚು ಸಾಹಿತ್ಯ ಕೃಷಿ ಮಾಡಲಿ ಮತ್ತು ನಾವು ಅವರ ಕಥೆ, ಪುಸ್ತಕಗಳನ್ನು ಓದುವಂತಾಗಲೆಂದು ಹಾರೈಸಿದರು.

ಕಾರ್ಯಕ್ರಮ ಮುಂದುವರೆದು, ಶ್ರೀ ಮಾಸ್ಟರ್ ಹಿರಣ್ಣಯ್ಯನವರ ಮಾತುಗಳು ಎಂದಿನಂತೆ ಅವರ ಪಂಚ್ ಡೈಲಾಗ್ ಗಳ ಸಮೇತ ಅತ್ಯಂತ ಆಕರ್ಷಕವಾಗಿಯೂ, ಅಷ್ಟೇ ಕಾಳಜಿಯುಕ್ತವೂ ಆಗಿತ್ತು. ಅಮೆರಿಕ ಮತ್ತು ಭಾರತ ನಡುವಿನ ಕೆಲವು ಸಾಂಸ್ಕೃತಿಕ ಅಂತರಗಳನ್ನು ಹೇಳುತ್ತಾ ಕಾಳಜಿ ವ್ಯಕ್ತಪಡಿಸಿದರು. ಅಲ್ಲಿಯ ಜನರು ತಮ್ಮ ದೇಣಿಗೆಗಳನ್ನು ಪುಸ್ತಕ ಭಂಡಾರಗಳಿಗೆ ಕೊಡುವುದನ್ನು, ನಾವಿನ್ನೂ ಕಲಿಯಬೇಕೆಂದರು..

ಕನ್ನಡದ ಏಳಿಗೆ, ಉದ್ಧಾರ ನಮ್ಮೆಲ್ಲರ ಭಾವನೆಗಳ ಸಮ್ಮಿಲನದಿಂದ ಆಗಬೇಕು, ಭಾವನಾ ಪ್ರಪಂಚ ಒಂದಾದರೆ, ಜ್ಞಾನದ ಪ್ರಭೆಗಳೆಷ್ಟಾದರೂ, ಎಲ್ಲೆಲ್ಲಿಂದ ಬಂದರೂ, ಎಲ್ಲಾ ಒಟ್ಟುಗೂಡಿ ಒಂದೇ ಒಂದು ಭಾಷೆಯಾಗಿ ಹೊರ ಹಾಕುವ ಮಾಧ್ಯಮವಾದರೆ, ಮಾರ್ಪಟ್ಟರೆ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯವೆಂದು ಹೇಳಿದರು. ನಮ್ಮತನ ಕಾಪಾಡಿಕೊಂಡು ನಾವು ಎಲ್ಲಿ ಬೇಕಾದರೂ ಬದುಕಲು ಕಲಿಯಬೇಕು ಆದರೆ ನಮ್ಮತನ ನಮ್ಮ ಭಾಷೆ, ನಮ್ಮ ಸಂಸ್ಕೃತಿ ಬಿಟ್ಟರೆ, ನಾವು ಎಲ್ಲಿಯೂ ಸಲ್ಲಲಾರೆವೆಂದರು..

ಶ್ರೀವತ್ಸ ಜೋಶಿಯವರು "ನಾನು ಅಂಕಣವನ್ನಾದರೂ ಬರೆದೇನು... ಭಾಷಣ ಕೊರೆಯಲಾರೆನು".. ಎನ್ನುತ್ತಲೇ ತಮ್ಮ ಹಿತ ಮಿತವಾದ ಮಾತುಗಳನ್ನು ಶುರು ಮಾಡಿದರು. ದಟ್ಸ್ ಕನ್ನಡ ಡಾಟ್ ಕಾಮ್ ನ ಶ್ರೀ ಶ್ಯಾಮ್ ಸುಂದರ್ ಮತ್ತು ಶ್ರೀ ವಿಶ್ವೇಶ್ವರ ಭಟ್ಟರು ಎಂಬ ಎರಡು ಮಹಾನ್ ಶಕ್ತಿಗಳು ನನ್ನ ಬರಹಗಳ ಹಿಂದಿದೆ ಎಂದು ಸ್ಮರಿಸಿದರು. ಓದುಗರ ಪ್ರತಿಕ್ರಿಯೆ, ಪ್ರೋತ್ಸಾಹವೇ ತಮ್ಮ ಬರಹಗಳಿಗೆ ಸ್ಫೂರ್ತಿಯೆಂದರು. ಆಂಗ್ಲ ಪದ LISTEN ಬಿಡಿಸಿ ಜೋಡಿಸಿದರೆ SILENT ಆಗುತ್ತದೆಂದೂ ತಾವು ಯಾವಾಗಲೂ ಸೈಲೆಂಟ್ ಆಗಿ ಹೆಚ್ಚು ಕೇಳಿಸಿಕೊಂಡರೆ, ಮುಂದೆ ವಿಷಯಗಳು ಬರಹಗಳ ಮೂಲಕ ಹೊರ ಹೊಮ್ಮುತ್ತದೆಂದು ತಿಳಿದಿರುವವನೆಂದರು. ತಮ್ಮ ಬರಹಗಳ ಮೂಲಕ, ಜೀವನ ಪ್ರೀತಿ ಬಿಂಬಿಸುವುದೇ ತಮ್ಮ ಉದ್ದೇಶವೆಂಬಂತಹ ಮಾತುಗಳನ್ನಾಡಿ, ತಮ್ಮ ಚಿಕ್ಕ ಚೊಕ್ಕ ಭಾಷಣ ಮುಗಿಸಿದರು.

ಕೊನೆಯದಾಗಿ ಮಾತನಾಡಿದವರು ಶ್ರೀ ವಿಶ್ವೇಶ್ವರ ಭಟ್ಟರು. ಶ್ರೀವತ್ಸ ಜೋಶಿಯವರು ತಮ್ಮ ಅಂಕಣ ಬರಹವನ್ನೆಂದೂ ತಪ್ಪಿಸಿಲ್ಲವೆಂದೂ, ಅಮೆರಿಕದಲ್ಲಿದ್ದೇ ಕನ್ನಡ ಬೆಳೆಸಿದವರು ಎಂದರು. ಜೋಶಿಯವರು ಅಮೆರಿಕದಲ್ಲಿ ನಡೆದ ಯಾವುದೋ ಒಂದು ಘಟನೆಯನ್ನು ಕರ್ನಾಟಕದಲ್ಲಿ ನಡೆದ ಒಂದು ಘಟನೆಗೆ ಹೋಲಿಸಿ ಬರೆಯುವ ವಿಶೇಷ ಪ್ರಯತ್ನ ಶ್ಲಾಘನೀಯವೆಂದರು. ವಿಜಯ ಕರ್ನಾಟಕದ breaking newsಗೆ ಪನ್ ಮಾಡುವ, ಕನ್ನಡದ ಎಲ್ಲಾ ಪತ್ರಿಕೆಗಳನ್ನೂ ಓದುವ, ಅಮೆರಿಕದಲ್ಲಿರುವ ಏಕೈಕ ಕನ್ನಡಿಗ ಶ್ರೀವತ್ಸ ಜೋಶಿಯವರೆಂದರು. ಶ್ರೀ ಜೋಶಿಯವರ ಬರಹಗಳಲ್ಲಿ ವೈಯೆನ್ಕೆಯವರ ಪ್ರಭಾವ ಗಾಢವಾಗಿದೆ ಮತ್ತು ಹೊಸ ಹೊಸ ಶೈಲಿಯ, ವಿವಿಧ ಅರ್ಥ ಬರುವ ಆಕರ್ಷಕ ತಲೆ ಬರಹಗಳಿಂದ ತಮ್ಮ ಲೇಖನ ಓದುವಂತೆ ನಮ್ಮನ್ನು ಪ್ರಚೋದಿಸುತ್ತಾರೆಂದರು. ಒಂದು ಸಣ್ಣ ವಿಚಾರ ಅಥವಾ ಎಳೆಯಿಂದ ಆರಂಭವಾದ ಅಂಕಣ ಕೊನೆಗೆ ಮುಗಿಯುವಾಗ ಒಂದು ವಿಶೇಷ ಅನುಭೂತಿ ಕಟ್ಟಿ ಕೊಡುತ್ತದೆಂದರು.

ಬರೆದು ಬರೆದೂ ಸಾಕಾಗಿದೆ ಎಂಬ ಭಾವ ಯಾವ ರೀತಿಯಲ್ಲೂ ಬಿಂಬಿಸದೇ ಬರೆಯುವ ತಾಳ್ಮೆ/ಜಾಣ್ಮೆ ಅಂಕಣಕಾರರಿಗಿರಬೇಕು, ಕನ್ನಡದಲ್ಲಿ ಅಂಕಣಕಾರರನ್ನು ಹುಟ್ಟು ಹಾಕುವುದು ಅತ್ಯಂತ ಪ್ರಯಾಸದ ಕೆಲಸ, ಸಮಯದ ವಿರುದ್ಧ ಹೋರಾಡುತ್ತಿರುವ ನಮ್ಮೆಲ್ಲರ ಮಧ್ಯದಲ್ಲಿ, ತಪ್ಪದೇ, ಪ್ರಾಮಾಣಿಕವಾಗಿ ಬರೆಯುವ ಶ್ರೀವತ್ಸ ಜೋಶಿಯವರು ಅಭಿನಂದನಾರ್ಹರು ಎಂದು ಮಾತು ಮುಗಿಸಿದರು.

ಈ ದಿನದ ಪುಸ್ತಕ ಬಿಡುಗಡೆ ಸಮಾರಂಭ, ನಾನು ಹಿಂದೆ ನೋಡಿದ ಅನೇಕ ಸಮಾರಂಭಗಳಿಗಿಂತ ಭಿನ್ನವಾಗಿತ್ತು. ಇಲ್ಲೊಂದು ಆತ್ಮೀಯತೆಯಿತ್ತು, ಆದರವಿತ್ತು, ಚೊಕ್ಕವಾಗಿತ್ತು. ಪುಸ್ತಕ ಕೊಂಡು, ಶ್ರೀವತ್ಸ ಜೋಶಿಯವರ ಹಸ್ತಾಕ್ಷರ ಹಾಕಿಸಿಕೊಂಡು, ಮನೆಗೆ ಬರುವಾಗ ಮನಸ್ಸೆಲ್ಲಾ ಪ್ರಫುಲ್ಲವಾಗಿತ್ತು. ಶ್ರೀ ಜೋಶಿಯವರನ್ನು ಭೇಟಿಯಾಗುವ ನನ್ನ ಆಸೆ ಇಷ್ಟು ಸುಲಭವಾಗಿ ಮತ್ತು ಇಷ್ಟು ಬೇಗ ನೆರವೇರುತ್ತದೆಂದು ನಾನು ಅಂದುಕೊಂಡಿರಲಿಲ್ಲ. ತಮ್ಮನ್ನು ಮಾತನಾಡಿಸಲು ಕಾದು ನಿಂತಿದ್ದ ಎಲ್ಲರ ಜೊತೆ ಹಸನ್ಮುಖರಾಗಿ ಮಾತನಾಡಿದ ಜೋಶಿಯವರು, ಜಯಂತ ಕಾಯ್ಕಿಣಿಯವರು ಹೇಳಿದಂತೆ ತುಂಬು ವ್ಯಕ್ತಿತ್ವವನ್ನು ಬಿಂಬಿಸಿದರು. ಶನಿವಾರದ ಬೆಳಗಿನ ಕಾರ್ಯಕ್ರಮ ನಿಜಕ್ಕೂ ಮುದಕೊಟ್ಟಿತು.