Tuesday, September 29, 2009

ಕೆಲಸದವರಿಗೊಂದು ಧನ್ಯವಾದಾರ್ಪಣೆ.........

೧೯೮೩ರಲ್ಲಿ ನನ್ನವರ ಉದ್ಯೋಗ ನಿಮಿತ್ತ ನಾವು ಕೊಲ್ಕತ್ತಾದಲ್ಲಿ ನೆಲೆಸ ಬೇಕಾಯ್ತು. ಊರು, ಭಾಷೆ ಎರಡೂ ಹೊಸದು. ನಮ್ಮ ಜೊತೆಗೇ ಕಾಲೇಜ್ ನಲ್ಲಿ ಓದಿದ್ದ ನಮ್ಮ ಸ್ನೇಹಿತರು ಅದೇ ಕಛೇರಿಯಲ್ಲೇ ಇದ್ದಿದ್ದರಿಂದ, ನನ್ನವರು ಧೈರ್ಯವಾಗಿ, ನಮ್ಮ ಭಾವನ ಜೊತೆ ಹೋಗಿ, ಕೆಲಸ ಶುರು ಮಾಡಿ, ೬ ತಿಂಗಳ ನಂತರ ಒಂದು ಮನೆ ಮಾಡಿದರು. ನಾನು ಹೋಗಿ ನೆಲೆಸಿದೆನಾದರೂ ಬಂಗಾಲಿ ಭಾಷೆ ಸ್ವಲ್ಪ ಕೂಡ ತಿಳಿಯದೆ, ಕಕ್ಕಾಬಿಕ್ಕಿಯಾಗುವಂತೆ ಮಾಡಿತ್ತು. ಬೆಂಗಾಲಿ ಜನಗಳು ಒಳ್ಳೆಯವರಾದರೂ, ಭಾಷೆಯ ತೊಡಕಿನಿಂದ ನನಗ್ಯಾರೂ ಸ್ನೇಹಿತರಿರಲಿಲ್ಲ. ಅಲ್ಲಿ ಬ್ಯಾಂಕ್ ಉದ್ಯೋಗಿಗಳು, ಕರ್ನಾಟಕದಿಂದ ಬಂದವರು, ಮೈಸೂರು ಅಸೋಸಿಯೇಷನ್ ಮೂಲಕ ಪರಿಚಿತರಾಗಿ, ಬರಿಯ ಕನ್ನಡದವರ ಕೂಟವೇ ಇತ್ತು. ಹೊರಗೆ ಸಾಮಾನು ತರಲು ಅಂಗಡಿಗಳಿಗೆ ಹೋದಾಗ ಕೂಡ , ಅಲ್ಲಿ ಇಟ್ಟಿರುವ ಪದಾರ್ಥಗಳನ್ನು ತೋರಿಸಿ, ಮೂಕವಾಗಿ ಅಭಿನಯಿಸಿ, ಸಂಭಾಷಣೆ ನಡೆಸಿ, ಕೊಂಡು ತರುತ್ತಿದ್ದೆವು. ಕೆಲವೊಮ್ಮೆ, ನಮಗೆ ಬೇಕಾದ ಪದಾರ್ಥಗಳು ಹೊರಗೆ ಇಟ್ಟಿರದಿದ್ದರೆ, ಫಜೀತಿಯಾಗಿ ಬಿಡುತ್ತಿತ್ತು.. ಅಂಗಡಿಯವನಿಗೆ ಹಿಂದಿ ಬರೋಲ್ಲ, ನಮಗೆ ಬೆಂಗಾಲಿ ತಿಳಿಯೋಲ್ಲ... ಹೀಗೇ ಅನೇಕ ಸಲ ನಗೆಪಾಟಲಿಗೆ ಗುರಿಯಾಗಿ, ಹೇಗೋ ಅಂತೂ ಸಂಸಾರ ನಡೆಸುತ್ತಿದ್ದೆವು. ಇದರಲ್ಲಿ ಕೆಲಸದವರು ಬೇರೆ ಬೇಡವೆಂದು {(ಸಂಬಳ ಕೊಡಲು ದುಡ್ಡೂ ಇರಲಿಲ್ಲ ಅನ್ನಿ :-)} ಎಲ್ಲಾ ಕೆಲಸ ನಾನೇ ಮಾಡಿಕೊಳ್ಳುತ್ತಿದ್ದೆ. ೬ ತಿಂಗಳ ನಂತರ ನಮ್ಮ ಪರಿಚಯದವರ ಮೂಲಕ ನಮಗೆ ಲೇಕ್ ಮಾರ್ಕೆಟ್ ಎಂಬ ಬಡಾವಣೆಯಲ್ಲಿ ಒಂದು ಮನೆ ಸಿಕ್ಕಿತ್ತು. ಅಷ್ಟು ಹೊತ್ತಿಗೆ ನಾನು ನನ್ನ ಮಗುವಿನ ತಾಯಿಯಾಗುವವಳಿದ್ದೆ..... ಹೊಸ ಮನೆಯಲ್ಲಿ ನನ್ನ ಜೊತೆಗೆಂದು ’ದುಕುನಿ’ ಎಂಬ ಹೆಸರಿನ, ಬಿಹಾರಿ ಹುಡುಗಿ ಕೆಲಸಕ್ಕೆ ಬಂದಳು.... ಅವಳಿಗೆ ಹಿಂದಿ ಅರ್ಥ ಆಗುತ್ತಿದ್ದಿದ್ದರಿಂದ ನನಗೆ ಸ್ವಲ್ಪ ನೆಮ್ಮದಿಯಾಗಿತ್ತು..... ದುಕುನಿ ದಿನವೂ ಮಧ್ಯಾನ್ಹ ೧೧.೩೦ಗೆ ಬಂದು ಕೆಲಸವೆಲ್ಲಾ ಮಾಡಿ ೧ ಘಂಟೆಯವರೆಗೆ ನನ್ನ ಜೊತೆ ಇದ್ದು ಹೋಗುತ್ತಿದ್ದಳು. ೧.೩೦ಗೆ ನನ್ನವರು ಬಂದು ಊಟ ಮಾಡಿ ಹೋಗುತ್ತಿದ್ದರು. ಮಧ್ಯಾನ್ಹ ಮತ್ತೆ ದುಕುನಿ ೩.೩೦ಗೆ ಬಂದು ೫ ಘಂಟೆಯವರೆಗೆ ಇರುತ್ತಿದ್ದಳು. ನನ್ನವರು ಸಾಯಂಕಾಲ ೬ ಘಂಟೆಯ ನಂತರ ಬರುತ್ತಿದ್ದರು. ನಾನು ಆಸ್ಪತ್ರೆಗೆ ಹೋಗಬೇಕಾದ ಸಮಯದಲ್ಲಿ, ಆ ಹುಡುಗಿ ನನಗೆ ತುಂಬಾ ಸಹಾಯ ಮಾಡಿದ್ದಳು. ನನಗೆ ತಾಯಿಯಂತೆ ಪ್ರೀತಿ ತೋರಿದ ಜಯಾಮಾಮಿಯನ್ನು ಕರೆದುಕೊಂಡು ಬಂದಿದ್ದಳು ಮತ್ತು ಟ್ಯಾಕ್ಸಿಯನ್ನೂ ತಂದು ಕೊಟ್ಟಿದ್ದಳು. ಮುಂದೆ ಅವಳಿಗೆ ಮದುವೆಯಾದಾಗ ನಾವು ಸ್ವಲ್ಪ ದುಡ್ಡು ಕೊಟ್ಟೆವಾದರೂ... ಮನ:ಪೂರ್ವಕವಾಗಿ ಒಂದು ಧನ್ಯವಾದವನ್ನು ಮಾತ್ರ ಹೇಳಲೇಯಿಲ್ಲ.......

ಆಸ್ಪತ್ರೆಯಿಂದ ಮನೆಗೆ ಮಗನನ್ನು ಕರೆದುಕೊಂಡು ಬಂದಾಗ, ನನ್ನ ಸಹಾಯಕ್ಕೆ ಮನೆಯವರ್ಯಾರೂ ಇಲ್ಲದಿದ್ದಿದ್ದರಿಂದ, ಜಯಾಮಾಮಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ’ಪುಷ್ಪಾ’ ಎಂಬಾಕೆಯನ್ನು ನಮ್ಮನೆಗೂ ಕಳುಹಿಸಿದರು. ಆಕೆ ಬಂದು ಮಗುವಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ, ಸ್ನಾನ ಮಾಡಿಸಿ ಹೋಗುತ್ತಿದ್ದರು. ಅವರ ಮಗಳು ’ರೀಟಾ’ ಎಂಬ ಹುಡುಗಿ ಬಂದು ನನ್ನ ಜೊತೆ ಕುಳಿತಿರುತ್ತಿದ್ದಳು. ಮಗು ಅತ್ತಾಗ ಎತ್ತಿಕೊಳ್ಳುವುದು, ಬಟ್ಟೆ ಬದಲಿಸುವುದು ಮತ್ತು ಇತರ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದಳು. ಹೀಗೆ ನಮ್ಮ ಮನೆಗೆ ಬಂದ ಪುಷ್ಪಾಜೀ (ನಾವು ಆಕೆಯನ್ನು ಹಾಗೆಂದೇ ಕರೆಯುತ್ತಿದ್ದೆವು) ನನ್ನ ಮಗನಿಗೆ ನಿಜವಾಗಲೂ ತುಂಬಾ ಪ್ರೀತಿ, ಆದರ ತೋರಿಸಿದರು. ನಾವು ದುಡ್ಡು ಕೊಟ್ಟಿದ್ದು ಏನೂ ಲೆಕ್ಖ ಇಲ್ಲ ಆದರೆ ಆ ಪ್ರೀತಿಗೆ ಬೆಲೆ ಕಟ್ಟುವುದಾಗಲೇ ಇಲ್ಲ. ಮಗು ೩ ತಿಂಗಳಿನವನಾದಾಗ ಅವನನ್ನು ಬೇಬಿ ಕೇರ್ ನಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದೆ. ಕೆಲಸದ ಒತ್ತಡ ತುಂಬಾ ಇರುತ್ತಿದ್ದರಿಂದ ನನಗೆ ಸಮಯಕ್ಕೆ ಸರಿಯಾಗಿ ೫.೩೦ಕ್ಕೆ ಬಂದು ಮಗುವನ್ನು ಮನೆಗೆ ಕರೆತರಲಾಗುತ್ತಿರಲಿಲ್ಲ. ಆದ್ದರಿಂದ ಆ ಜವಾಬ್ದಾರಿಯನ್ನೂ ಪುಷ್ಪಾಜಿ, ಖುಶಿಯಿಂದಲೇ ತೆಗೆದುಕೊಂಡರು. ನಾನು ಕಛೇರಿಯಿಂದ ಬರುವವರೆಗೆ ಪುಷ್ಪಾಜಿಯ ಎರಡನೆಯ ಮಗಳಾದ ’ಗೀತಾ’ ಬಂದು ಮನೆಯಲ್ಲಿ ಮಗುವಿನ ಜೊತೆ ಇರುತ್ತಿದ್ದಳು. ಹೀಗೆ ನಮ್ಮ ಮನೆಗೆ ಗೀತಾಳ ಆಗಮನವಾಯಿತು. ಕೆಲವು ವರ್ಷಗಳ ನಂತರ ಪುಷ್ಪಾಜಿಯ ತಂಗಿ ಚಿಕ್ಕ ಹುಡುಗಿ ’ಚಂಚಲಾ’ ಕೂಡ ಬಂದು ಅಕ್ಕನ ಮನೆಯಲ್ಲಿರತೊಡಗಿದಳು. ಈಗ ನನ್ನ ಮಗನಿಗೆ ಗೀತಾ ಮತ್ತು ಚಂಚಲಾ (ಚಂಚೂ...) ಇಬ್ಬರೂ ಕೇರ್ ಟೇಕರ್ಸ್ + ಆಟ ಆಡುವ ಸ್ನೇಹಿತೆಯರು + ಹಸಿವಾದಾಗ ರೊಟ್ಟಿ, ಬ್ರೆಡ್ ಟೋಸ್ಟ್ ಮಾಡಿಕೊಡುವ ಅಡಿಗೆಯವರೂ ಎಲ್ಲವೂ ಆದರು. ಅವನ ಇತರ ಚಟುವಟಿಕೆಗಳಿಗೆಲ್ಲಾ ಗೀತಾ+ಚಂಚೂ ಜೊತೆಗಾರರಾದರು. ಅವನನ್ನು ಚಿತ್ರಶಾಲೆಗೆ, ಈಜು ಕಲಿಯಲು, ಕರಾಟೆ ಕಲಿಯಲು... ಎಲ್ಲಾ ಕಡೆ ಕರೆದುಕೊಂಡು ಹೋಗುವುದೂ ಅವರಿಬ್ಬರದೇ ಕೆಲಸವಾಗಿ ಬಿಟ್ಟಿತು. ನಿಜವಾಗಿ ಈ ಹುಡುಗಿಯರ ಸಹಾಯವಿಲ್ಲದಿದ್ದರೆ ನಾನು ಹೇಗೆ ನಿಭಾಯಿಸುತ್ತಿದ್ದೆನೆಂದು ಈಗ ಯೋಚಿಸಿದರೇ ಭಯವಾಗುತ್ತದೆ. ಪುಷ್ಪಾ ಶಾಲೆಗೆ ಕರೆದುಕೊಂಡು ಹೋಗಿ ಬಿಡುವುದು, ಕರೆದು ಕೊಂಡು ಬರುವುದು ಮಾಡುತ್ತಿದ್ದರು, ಆದರೆ ಮನೆಗೆ ಬಂದ ತಕ್ಷಣ ಗೀತಾ....... ಚಂಚೂ........ ಎಂದೇ ಅರಚುತ್ತಾ ಬರುತ್ತಿದ್ದ ನನ್ನ ಮಗ.

ಮಧ್ಯದಲ್ಲಿ ಗೀತಾ ಯಾರನ್ನೋ ಪ್ರೀತಿಸಿ ಮದುವೆ ಮಾಡಿಕೊಂಡು ಹೋಗಿದ್ದರಿಂದ, ಚಂಚೂ ನನ್ನ ಮಗನಿಗೆ ದೊಡ್ಡ ಅಕ್ಕನ ತರಹ ಆತ್ಮ ಸಖಿಯಾಗಿ ಬಿಟ್ಟಳು. ಇಷ್ಟು ಹೊತ್ತಿಗಾಗಲೇ ನನ್ನ ಮಗ ೫ನೇ ಕ್ಲಾಸ್ ವರೆಗೂ ಬಂದಾಗಿತ್ತು. ಆ ಹುಡುಗಿ ತೋರಿದ ಪ್ರೀತಿಗೆ ನಾನು ಚಿರಋಣಿ..... ನಮಗೆ ಯಾವ ರೀತಿಯಿಂದಲೂ ಸಂಬಂಧಿಕಳಲ್ಲದಿದ್ದರೂ, ಅವಳು ತೋರಿದ ಅಂತ:ಕರಣ ಬೇರೆಲ್ಲಾ ಸಂಬಂಧಗಳನ್ನೂ ಮೀರಿ ಇವತ್ತಿಗೂ ಉನ್ನತವಾಗಿ ನಿಂತಿದೆ.

ನಾವು ಕೊಲ್ಕತ್ತಾದಲ್ಲಿ ಮನೆ ಕೊಂಡು, ಹೊಸ ಮನೆಗೆ ವಾಸಕ್ಕೆ ಹೋದಾಗ ಚಂಚಲಾ ನಮ್ಮ ಜೊತೆ ಬರಲಾಗಲಿಲ್ಲ. ಆದರೂ ನಾವು ಲೇಕ್ ಮಾರ್ಕೆಟ್ ನಲ್ಲೇ ತರಕಾರಿ, ದಿನಸಿ, ಸಮಸ್ತವನ್ನೂ ಕೊಳ್ಳುತ್ತಿದ್ದರಿಂದ, ಅವಳ ಭೇಟಿ ಆಗುತ್ತಲೇ ಇತ್ತು. ಮನೆ ತುಂಬಾ ದೂರವಾಗಿದ್ದರಿಂದ, ನನ್ನ ಮಗನನ್ನು ಮನೆಯ ಹತ್ತಿರದಲ್ಲೇ ಶಾಲೆಗೆ ಸೇರಿಸಿದೆವು. ಆಗ ನಮಗೆ ಮನೆಕೆಲಸಕ್ಕೆ ಸಹಾಯಕ್ಕೆಂದು ’ಲಕ್ಷ್ಮೀ’ - ’ಲೊಕ್ಕೀ’ ಎಂಬಾಕೆ ಬಂದರು. ವಯಸ್ಸಿಗೆ ಬಂದಿದ್ದ ಮಗಳನ್ನು ಕಳೆದುಕೊಂಡ ದು:ಖದಲ್ಲಿ ಮುಳುಗಿದ್ದ ನಮ್ಮ ಲೊಕ್ಕೀಗೆ ನನ್ನ ಮಗನ ಸಾಂಗತ್ಯ ಅತ್ಯಂತ ಸಮಾಧಾನ ಕೊಟ್ಟಿತ್ತು. ಬೆಂಗಾಲಿಗಳ ಧಾಟಿಯಲ್ಲಿ ಅವನನ್ನು ’ಮನ್ನಾ’(ಮುನ್ನಾ) ಎಂದು ಕರೆಯುತ್ತಿದ್ದ ಈಕೆ ಕೂಡ ಒಳ್ಳೆಯ ನಡತೆ, ಸಂಸ್ಕಾರವಿದ್ದ ಹೆಂಗಸು. ಆಕೆಯ ಗಂಡ ರಿಕ್ಷಾ ಎಳೆಯುತ್ತಿದ್ದ. ಹೆಂಡತಿ ೨.೩೦ ಕಿಲೋಮೀಟರ್ ನಡೆದು ಕೆಲಸಕ್ಕೆ ಬರುತ್ತಾಳೆಂದು, ಬೆಳಿಗ್ಗೆ ೬ ಘಂಟೆಗೇ ಅವಳನ್ನು, ರಿಕ್ಷಾದಲ್ಲಿ ಕೂರಿಸಿಕೊಂಡು ಬಂದು ನಮ್ಮ ಮನೆಯ ಹತ್ತಿರ ಬಿಟ್ಟು ಹೋಗುತ್ತಿದ್ದ. ಹೀಗೆ ಲೊಕ್ಕಿಯ ಸಹಾಯ ನಮಗೆ ೩ ವರ್ಷಗಳು ಸಿಕ್ಕಿತ್ತು. ನನ್ನ ಮಗನನ್ನು ಬೆಂಗಳೂರಿನಲ್ಲಿ ೯ನೇ ಇಯತ್ತೆಗೆ ಶಾಲೆಗೆ ಸೇರಿಸಿ, ಮನೆ ಮಾರಿಬಿಟ್ಟು ಖಾಲಿ ಮಾಡಿದಾಗ, ಲೊಕ್ಕಿಯ ಗೋಳು ನೋಡಲಾಗಿರಲಿಲ್ಲ..... ನನಗೂ ಅವಳನ್ನು ಬಿಟ್ಟು ಬರುವುದು ಅತ್ಯಂತ ದು:ಖದ ವಿಚಾರವಾಗಿತ್ತು.

ನಾವು ವಾಪಸ್ಸು ಲೇಕ್ ಮಾರ್ಕೆಟ್ ಬಡಾವಣೆಗೇ ಬಂದಿದ್ದರಿಂದ, ಚಂಚಲಾ ನಮ್ಮನೆಗೆ ಮತ್ತೆ ಬಂದಳು..... ಅಲ್ಲಿಂದ ನಾನು ೨೦೦೦ನೇ ಇಸವಿಯಲ್ಲಿ ಕೊಲ್ಕತ್ತಾ ಬಿಡುವವರೆಗೂ ಮತ್ತು ಆಮೇಲೂ ಸ್ವಲ್ಪ ದಿನ ನನ್ನವರಿರುವವರೆಗೂ ನಮ್ಮ ಜೊತೆ ಚಂಚಲಾ ಇದ್ದಳು. ಅವಳು ಮುಂಚಿನಿಂದಲೂ ಬಹಳ ಕಷ್ಟ ಜೀವಿ. ಈಗವಳು ಮದುವೆಯಾಗಿ, ಮಗಳ ತಾಯಾಗಿ, ಮನೆಯಲ್ಲೇ ಅಡುಗೆ ಮಾಡಿ ಊಟ ಕ್ಯಾರಿಯರ್ ನಲ್ಲಿ ಕಳಿಸುವ ಕೆಲಸ ಮಾಡಿಕೊಂಡು, ಬಿಡುವಿನ ವೇಳೆಯಲ್ಲಿ ಸೀರೆಗಳಿಗೆ ಚಿತ್ತಾರ ಬಿಡಿಸುವ ಕೆಲಸ ಕೂಡ ಮಾಡುತ್ತಾಳೆ. ಯಾವಾಗಲಾದರೊಮ್ಮೆ ದೂರವಾಣಿಯ ಮೂಲಕ ನಾವು ಅವಳ ಜೊತೆ ಈಗಲೂ ಮಾತನಾಡುತ್ತೇವೆ.....

ಕೊಲ್ಕತ್ತಾ ಬಿಟ್ಟ ನಂತರ ನಾನು ಅಲ್ಲಿಗೆ ಹೋಗಿಯೇ ಇರಲಿಲ್ಲ.... ಈಗ ೨೦೦೮ರ ಜನವರಿಯಲ್ಲಿ ಶಿಲ್ಲಾಂಗ್ ಮತ್ತು ಕಾಮಾಕ್ಯ ದೇವಸ್ಥಾನ ನೋಡಲು ಹೋದಾಗ, ನಾವು ಪುಷ್ಪಾಜಿಯನ್ನೂ ಭೇಟಿ ಮಾಡಿದೆವು. ಈಗ ಮಗನೂ ಕೆಲಸ ಮಾಡುತ್ತಿರುವುದರಿಂದ, ಪುಷ್ಪಾಜಿ ಮನೆ ಕೆಲಸಗಳಿಗೆ ಹೋಗುತ್ತಿಲ್ಲವೆಂದೂ, ಮನೆಯಲ್ಲೇ ಇದ್ದೇನೆಂದೂ ಹೇಳಿದರು. ತುಂಬಾ ಕಷ್ಟಪಟ್ಟ ದೇಹವಾದ್ದರಿಂದ, ಈಗ ಶಕ್ತಿಯೂ ಕಮ್ಮಿಯಾಗಿದೆ. ಆದರೆ ನನ್ನ ಮಗನ ಮೇಲಿರುವ ಅವರ ಪ್ರೀತಿ ಮಾತ್ರ ಎಳ್ಳಷ್ಟೂ ಕಮ್ಮಿಯಾಗಿಲ್ಲ... ೬ ಅಡಿಗಿಂತ ಎತ್ತರ ಬೆಳೆದಿರುವ ಹುಡುಗ, ಇಂಜಿನಿಯರಿಂಗ್ ಓದುತ್ತಿದ್ದಾನೆಂದು ಕೇಳಿ ಆಕೆಗಾದ ಸಂತೋಷ ಅಷ್ಟಿಷ್ಟಲ್ಲ.... ಮರೆಯದೆ ತನ್ನನ್ನು ನೋಡಲು ಬಂದ ನಮ್ಮೆಲ್ಲರನ್ನೂ ಕಂಡು ಆಕೆ ಕಣ್ಣೀರಿಟ್ಟಳು. ನಮಗಾಗಿ ದುಡಿದ ಆ ಸಂಸಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಿದೆವು......

ಈಗ ಬೆಂಗಳೂರಿನಲ್ಲಿ ೨೦೦೧ನೇ ಫೆಬ್ರವರಿಯಿಂದ, ಈಗಲೂ ಇನ್ನೂ ನಮ್ಮ ಜೊತೆಯೇ ಇರುವವರ ಹೆಸರು ’ರಾಣಿ’. ಚಿಕ್ಕ ಚಿಕ್ಕ ಮಕ್ಕಳನ್ನು ಹೊಂದಿದ್ದ ರಾಣಿಯಮ್ಮ, ಮಗಳ ಮದುವೆ ಮಾಡಿ, ಈಗ ಅಜ್ಜಿ ಕೂಡ ಆಗಿದ್ದಾರೆ (ಆದರೆ ವಯಸ್ಸೇನೂ ಹೆಚ್ಚಿಲ್ಲ). ನಮ್ಮ ಕಷ್ಟ ಸುಖಗಳಲ್ಲಿ ಒಂದಾಗಿ... ನಮ್ಮ ಎಲ್ಲಾ ತರಹದ ಬೇಡಿಕೆಗಳಿಗೂ ಯಾವಾಗಲೂ ಇಲ್ಲವೆನ್ನದೇ, ಕಷ್ಟ ಪಡುವ ಮತ್ತೊಂದು ಜೀವ ನಮ್ಮಜೊತೆಗಿದೆ. ಇವರೆಲ್ಲರ ಸಹಾಯ ನನ್ನ ಜೀವನದಲ್ಲಿ ಸಿಗದೇ ಹೋಗಿದ್ದರೆ.... ಅಬ್ಬಾ ಊಹಿಸಿಕೊಳ್ಳುವುದೂ ಸಾಧ್ಯವಿಲ್ಲವೆನ್ನಿಸುತ್ತದೆ. ಹೊರಗೆ ದುಡಿಯುವ ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಸಹಾಯವಿಲ್ಲದಿದ್ದರೆ ಕಾರ್ಯ ನಿರ್ವಹಣೆ ಅಸಾಧ್ಯವಾಗಿಬಿಡುತ್ತದೆ.

ಈ ಬ್ಲಾಗ್ ಬರಹವನ್ನು ನನಗೆ ಸಹಾಯ ಮಾಡಿದ, ಮಾಡುತ್ತಿರುವ ಈ ಎಲ್ಲರಿಗೂ ಅರ್ಪಿಸಿ, ನನ್ನ ಹೃದಯ ಹಗುರ ಮಾಡಿಕೊಳ್ಳುತ್ತಿದ್ದೇನೆ. ಇವರೆಲ್ಲರಿಗೂ ನಾನು ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ.......

Saturday, September 19, 2009

ನವದುರ್ಗಾ....... ಪೂಜೆ.....



ಶರನ್ನವರಾತ್ರಿ, ದಸರಾ, ದುರ್ಗಾಪೂಜೆ ಎಂದೆಲ್ಲಾ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಒಂಭತ್ತು ದಿನಗಳ ಹಬ್ಬ, ದೇವಿಯ ಆರಾಧನೆಗೆಂದೇ ಮೀಸಲಾಗಿದೆ........ ದೇವಿಯನ್ನು ನವ ರೂಪದಲ್ಲಿ ಒಂದೊಂದು ದಿನ ಒಂದೊಂದು ವಿಧದಲ್ಲಿ, ಪೂಜಿಸಲ್ಪಡುವುದೇ ಈ ಹಬ್ಬದ ವೈಶಿಷ್ಟ್ಯ... ದೇವಿ ಪಾರ್ವತಿ ಅಥವಾ ದುರ್ಗಾ ಅತ್ಯಂತ ಲೋಕಪ್ರಿಯಳು ಮತ್ತು ಶಕ್ತಿದೇವತೆ ಕೂಡ. ದೇವಿಯ ಶಕ್ತಿಯನ್ನೂ, ಸೌಂದರ್ಯವನ್ನೂ ವರ್ಣಿಸಲು, ಅವಳಿಗಾಗಿಯೇ ರಚಿಸಲ್ಪಟ್ಟಿರುವುದು "ದೇವಿ ಭಾಗವತಮ್". ಇದಲ್ಲದೆ ದೇವಿಯನ್ನು ವರ್ಣಿಸುವ ಅನೇಕ ಸಣ್ಣ ಸಣ್ಣ ಕೃತಿಗಳು... ’ದೇವಿ ಮಹಾತ್ಮೆ’, ’ದುರ್ಗಾ ಸಪ್ತಶತೀ’ಮತ್ತು ಇನ್ನೂ ಹಲವು... ದೇವಿ ಮಹಾತ್ಮೆ ಎಂಬುದು ನಮ್ಮ ಪುರಾಣಗಳಲ್ಲಿ ಪ್ರಸಿದ್ಧವಾದ ’ಮಾರ್ಕಾಂಡೇಯ ಪುರಾಣ’ದ ಭಾಗವಾಗಿದೆ. ಇದು ಎಷ್ಟೊಂದು ಜನಪ್ರಿಯ ಹಾಗೂ ಪೂಜನೀಯವೆನಿಸಿದೆಯೆಂದರೆ, ಇದರ ಒಂದೊಂದು ಶ್ಲೋಕವೂ ’ಮಂತ್ರ’ವೆಂದೂ, ಇದರ ಪಾರಾಯಣೆ, ಜಪ ಮಾಡುವುದರಿಂದ, ನಮ್ಮ ಅಭೀಷ್ಟಗಳೆಲ್ಲಾ ನೆರವೇರುವುದೆಂದೂ ನಂಬಿಕೆಯಿದೆ.

ದುರ್ಗಾ ಎಂದರೆ ಹತ್ತಿರ ಸುಳಿಯಲೂ, ಅರ್ಥ ಮಾಡಿಕೊಳ್ಳಲೂ ಕಷ್ಟಸಾಧ್ಯಳು ಎಂದು ಅರ್ಥ. ಎಲ್ಲಾ ದೇವತೆಗಳ ಶಕ್ತಿಯನ್ನೂ ಪಡೆದ ನಾರೀರೂಪಳಾದ ದೇವಿ, ಲೋಕಮಾತೆ, ಭಕ್ತರ ಪರಮ ಭಕ್ತಿಗೆ ಕರಗುವವಳು, ಆರಾಧನೆಗೆ ಒಲಿಯುವವಳು, ಮಾತೃಸ್ವರೂಪಳು ಎಂದೇ ಅರ್ಥ. ದೇವಿಯೇ ಪರಮ ಶಕ್ತಿ, ಜಗತ್ತಿನ ಸೃಷ್ಟಿ ಮತ್ತು ಸ್ಥಿತಿಗೆ ಕಾರಣಳು, ಜ್ಞಾನದ ಸಂಕೇತಳು, ಮೋಹಕಳೂ, ಸೌಂದರ್ಯಸ್ವರೂಪಳು, ರೌದ್ರಳೂ, ಕೋಮಲೆಯೂ, ಭೀಕರಳೂ, ಮೃದು ಮನದವಳೂ ಎಂದು, ಒಟ್ಟಾರೆ ಸಕಲವೂ ಅವಳೇ ಎಂದು ಬಿಂಬಿಸುವ ಅನೇಕ ದೃಷ್ಟಾಂತಗಳನ್ನು ನಾವು ಪುರಾಣಗಳಲ್ಲಿ ಓದಬಹುದು.

ಜಗನ್ಮಾತೆಯೇ ಸಕಲ ಐಶ್ವರ್ಯ ಕೊಡುವವಳೂ, ಸುಖ ಸಮಾಧಾನಗಳನ್ನು ಕೊಡುವವಳೂ ಎಂದು ವರ್ಣಿಸುತ್ತಾ, ವಿಶೇಷವಾಗಿ ಈ ಒಂಭತ್ತು ದಿನಗಳಲ್ಲಿ, ನಾವು ದೇವಿಯನ್ನು ಆರಾಧಿಸುತ್ತೇವೆ.
ಮೊದಲನೆಯ ದಿನ ಶೈಲಪುತ್ರಿಯ ರೂಪದಲ್ಲಿ....

" ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ |"

ಪರ್ವತ ರಾಜ ಹಿಮವಂತನಲ್ಲಿ ಪುತ್ರಿಯಾಗಿ ಅವತರಿಸಿ ಶೈಲಪುತ್ರೀ ಎಂದು ಕರೆಯಲ್ಪಡುತ್ತಾಳೆ. ವೃಷಭವಾಹನೆಯಾದ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಇವೆ. ಇವಳನ್ನು ಪಾರ್ವತೀ, ಹೈಮವತೀ ಎಂದೂ ಕರೆಯುತ್ತಾರೆ. ಈ ಮೊದಲನೆಯ ದಿನದ ಉಪಾಸನೆಯಲ್ಲಿ ಯೋಗಿಗಳು ತಮ್ಮ ಮನವನ್ನು ’ಮೂಲಾಧಾರ’ ಚಕ್ರದಲ್ಲಿ ನೆಲೆಗೊಳಿಸುತ್ತಾರೆ. ಇಲ್ಲಿಂದಲೇ ಅವರ ಯೋಗ ಸಾಧನೆಯು ಪ್ರಾರಂಭವಾಗುತ್ತದೆ..

ಶೈಲಪುತ್ರಿಯನ್ನು ನಾವು.... ಶ್ಯಾಮಾಶಾಸ್ತ್ರಿಗಳ ಕಲ್ಯಾಣಿ ರಾಗದ ರಚನೆ ಹಿಮಾದ್ರಿ ಸುತೆ ಪಾಹಿಮಾಂ.. ಮತ್ತು ಸರೋಜದಳನೇತ್ರಿ ಹಿಮಗಿರಿ ಪುತ್ರೀ......ಎಂದೂ ಆರಾಧಿಸಬಹುದು. ಶ್ರೀ ಸ್ವಾತಿ ತಿರುನಾಳ್ ಮಹರಾಜರು ಸಹ ದೇವಿಯನ್ನು ಒಂಭತ್ತು ಅತ್ಯಮೂಲ್ಯ ಕೃತಿಗಳಿಂದ ವರ್ಣಿಸಿ ಹಾಡಿದ್ದಾರೆ. ಈ ಕೃತಿ ಗುಚ್ಛವನ್ನು ನವರಾತ್ರಿ ಕೃತಿಗಳು ಎಂದು ಕರೆಯಲ್ಪಡುತ್ತದೆ. ಮೊದಲನೆಯ ದಿನದ ಕೃತಿ, ಶಂಕರಾಭರಣ ರಾಗದಲ್ಲಿ ದೇವಿ ಜಗಜ್ಜನನೀ....

ಎರಡನೆಯ ದಿನ ಬ್ರಹ್ಮಚಾರಿಣೀ ರೂಪದಲ್ಲಿ........

"ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ |
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ |"

ಇಲ್ಲಿ ’ಬ್ರಹ್ಮ’ ಶಬ್ದದ ಅರ್ಥ ತಪಸ್ಸು ಎಂದು. ಬ್ರಹ್ಮ ಚಾರಿಣಿ ಅರ್ಥಾತ್ ತಪಸ್ಸನ್ನು ಆಚರಿಸುವವಳು. ದೇವಿಯ ಸ್ವರೂಪವು ಪೂರ್ಣ ಜ್ಯೋತಿರ್ಮಯ ಹಾಗೂ ಅತ್ಯಂತ ಭವ್ಯವಾಗಿದೆ. ಇವಳ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲು ಇರುತ್ತದೆ. ಇವಳನ್ನು ’ಅಪರ್ಣಾ’ ’ಉಮಾ’ ಎಂದೂ ಕರೆಯುತ್ತಾರೆ. ಇವಳ ಆರಾಧನೆಯಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಸಿದ್ಧಿಸುತ್ತದೆ. ಈ ಎರಡನೆಯ ದಿನ ಸಾಧಕರು ಮನಸ್ಸನ್ನು ’ಸ್ವಾಧಿಷ್ಠಾನ’ ಚಕ್ರದಲ್ಲಿ ನೆಲೆಗೊಳಿಸುತ್ತಾರೆ.

ಬ್ರಹ್ಮಚಾರಿಣಿ, ಅಪರ್ಣಾ, ಉಮಾಳನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಪಾಹಿಮಾಂ ಶ್ರೀ ವಾಗೀಶ್ವರಿ ಎಂದು ಕಲ್ಯಾಣಿ ರಾಗದಲ್ಲಿ ಸ್ತುತಿಸುತ್ತಾರೆ.

ಮೂರನೆಯ ದಿನ ಚಂದ್ರಘಂಟಾ ರೂಪದಲ್ಲಿ ........

"ಪಿಂಡಜಪ್ರವರಾರೂಢಾ ಚಂಡಕೊಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ" |

ಮೂರನೆಯ ದಿನವಾದ ಇಂದು ಪರಮ ಶಾಂತಿದಾಯಕ ಮತ್ತು ಶ್ರೇಯಸ್ಕರವಾದ ದೇವಿ ಚಂದ್ರಘಂಟಾ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ದೇವಿಯ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರನಿದ್ದಾನಾದ್ದರಿಂದ ಇವಳನ್ನು ಚಂದ್ರಘಂಟಾದೇವಿಯೆಂದು ಹೇಳಲಾಗುತ್ತದೆ. ಶರೀರವು ಚಿನ್ನದಂತೆ ಹೊಳೆಯುತ್ತಿದ್ದು, ಹತ್ತು ಕೈಗಳಲ್ಲಿ ಖಡ್ಗ ಹಾಗೂ ವಿವಿಧ ಆಯುಧಗಳಿವೆ. ಘಂಟೆಯಂತೆ ಭಯಾನಕ ಚಂಡಿ ಧ್ವನಿ ಹೊಂದಿದವಳು. ಈ ದಿನ ಸಾಧಕನ ಮನಸ್ಸು ’ಮಣಿಪೂರ’ ಚಕ್ರ ಪ್ರವೇಶ ಮಾಡುತ್ತದೆ.

ಚಂದ್ರಘಂಟಾದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು, ಮೂರನೆಯ ದಿನ ದೇವಿ ಪಾವನೆ... ಎಂದು ಸಾವೇರಿ ರಾಗದಲ್ಲಿ ಸ್ತುತಿಸುತ್ತಾರೆ.

ನಾಲ್ಕನೆಯ ದಿನ ಕೂಷ್ಮಾಂಡಾ ರೂಪದಲ್ಲಿ ........

"ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ " |

ದೇವಿ ತನ್ನ ಮಂದ, ಮಧುರ ನಗುವಿನಿಂದ ಅಂಡ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಕಾರಣ ಇವಳನ್ನು ಕೂಷ್ಮಾಂಡಾದೇವಿ ಎಂದು ಕರೆಯುತ್ತಾರೆ. ದೇವಿಯು ತನ್ನ ’ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ರಚಿಸಿದ್ದಳು, ಅದಕ್ಕಿಂತ ಮೊದಲು ಬ್ರಹ್ಮಾಂಡದ ಅಸ್ತಿತ್ವವೇ ಇರಲಿಲ್ಲ. ಇವಳಿಗೆ ಎಂಟು ಭುಜಗಳಿದ್ದು, ಅಷ್ಟಭುಜಾದೇವಿ ಎಂದು ಖ್ಯಾತಳು. ಸಿಂಹವಾಹಿನಿಯಾಗಿ, ಏಳು ಕೈಗಳಲ್ಲಿ ಕ್ರಮಶ: ಕಮಂಡಲ, ಧನುಷ, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆ ಹಿಡಿದಿದ್ದಾಳೆ. ಈ ದಿನ ಸಾಧಕನ ಮನಸ್ಸು ’ಅನಾಹತ’ ಚಕ್ರದಲ್ಲಿ ನೆಲೆಸುತ್ತದೆ.

ಕೂಷ್ಮಾಂಡಾದೇವಿಯನ್ನು, ಶ್ರೀ ಸ್ವಾತಿ ತಿರುನಾಳ್ ಮಹಾರಾಜರು, ನಾಲ್ಕನೆಯ ದಿನ ಭಾರತೀ ಮಾಮವ ಎಂದು ತೋಡಿ ರಾಗದಲ್ಲಿ ಸ್ತುತಿಸುತ್ತಾರೆ.

ಐದನೆಯ ದಿನ ಸ್ಕಂದಮಾತಾ ರೂಪದಲ್ಲಿ.......

"ಸಿಂಹಾಸನಗತಾ ನಿತ್ಯಂ ಪದ್ಮಾಶಿತಕರದ್ವಯಮ್ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಶಯಸ್ವಿನೀ "|

ಸ್ಕಂದ, ಕುಮಾರ ಕಾರ್ತಿಕೇಯನ ತಾಯಿಯಾದ್ದರಿಂದ ದೇವಿಯನ್ನು ಸ್ಕಂದ ಮಾತಾ ಎಂದು ಕರೆಯುತ್ತಾರೆ. ಈ ದಿನ ಸಾಧಕನ ಮನಸ್ಸು ’ವಿಶುದ್ಧ’ ಚಕ್ರದಲ್ಲಿ ನೆಲೆಸುತ್ತದೆ. ದೇವಿಯ ತೊಡೆಯಲ್ಲಿ ಭಗವಾನ್ ಸ್ಕಂದನು ಬಾಲರೂಪದಲ್ಲಿ ಕುಳಿತಿರುತ್ತಾನೆ. ದೇವಿಯ ಎರಡು ಕೈಗಳಲ್ಲಿ ಕಮಲದ ಹೂವಿದ್ದು, ಶರೀರವು ಬಿಳಿಯ ಬಣ್ಣದ್ದಾಗಿದ್ದು, ಕಮಲದ ಮೇಲೇ ಆಸೀನಳಾಗಿರುತ್ತಾಳೆ.

ಸ್ಕಂದಮಾತಾ ರೂಪದ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಐದನೆಯ ದಿನ ಜನನೀ ಮಾಮವ ಎಂದು ಭೈರವಿ ರಾಗದಲ್ಲಿ ಸ್ತುತಿಸುತ್ತಾರೆ.

ಆರನೆಯ ದಿನ ಕಾತ್ಯಾಯಿನಿ ರೂಪದಲ್ಲಿ.......

"ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ |
ಕಾತ್ಯಾಯಿನೀ ಶುಭಂ ದದ್ಯಾದ್ದೇವೀ ದಾನವಘಾತಿನೀ "|

ದಾನವ ಮಹಿಷಾಸುರನ ಅತ್ಯಾಚಾರವು ಮಿತಿಮೀರಿದಾಗ, ಬ್ರಹ್ಮಾ - ವಿಷ್ಣು - ಮಹೇಶ್ವರರು ಮತ್ತು ಎಲ್ಲಾ ದೇವತೆಗಳೂ ತಮ್ಮ ತಮ್ಮ ತೇಜದ ಅಂಶವನ್ನಿತ್ತು ಓರ್ವ ದೇವಿಯನ್ನು ಉತ್ಪನ್ನ ಮಾಡಿದರು. ಮಹರ್ಷಿ ಕಾತ್ಯಾಯನರು ಮೊಟ್ಟ ಮೊದಲು ಇವಳ ಪೂಜೆ ಮಾಡಿದ ಕಾರಣದಿಂದ, ಇವಳು ಕಾತ್ಯಾಯನೀ ಎಂದು ಕರೆಯಲ್ಪಟ್ಟಳು. ಭವ್ಯ ಹಾಗೂ ದಿವ್ಯ ಸ್ವರೂಪಳಾದ ಇವಳು ಬಂಗಾರದ ಬಣ್ಣದವಳೂ, ನಾಲ್ಕು ಭುಜದವಳೂ ಆಗಿದ್ದಾಳೆ. ಒಂದು ಕೈಯಲ್ಲಿ ಕಮಲ, ಇನ್ನೊಂದರಲ್ಲಿ ಖಡ್ಗ ಹಿಡಿದಿದ್ದಾಳೆ. ಈ ಆರನೆಯ ದಿನ ಸಾಧಕನು ಮನಸ್ಸನ್ನು ’ಆಜ್ಞಾ’ ಚಕ್ರದಲ್ಲಿ ನೆಲೆಸುತ್ತಾನೆ. ಇವಳು ಏತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಮ್ | ಪಾತು ನ: ಸರ್ವಭೀತಿಭ್ಯ: ಕಾತ್ಯಾಯನಿ ನಮೋಸ್ತುತೇ... ಎಂದು ಕೂಡ ಸ್ತುತಿಸಲ್ಪಡುತ್ತಾಳೆ.

ಕಾತ್ಯಾಯನೀ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಆರನೆಯ ದಿನ ಸರೋರುಹಾಸನ ಜಾಯೇ...ಎಂದು ಪಂತುವರಾಳಿ ರಾಗದಲ್ಲಿ ಸ್ತುತಿಸುತ್ತಾರೆ.

ಏಳನೆಯ ದಿನ ಕಾಲರಾತ್ರಿ ರೂಪದಲ್ಲಿ.......

"ಏಕವೇಣೀ ಜಪಾಕರ್ಣಪೂರಾ ನಗ್ನಾ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ರೈಲಾಬ್ಯಕ್ರಶರೀರಿಣೀ ||
ವಾಮಪಾದೋಲ್ಲಸಲ್ಲೋಹಲ್ತಾಕಂಟಕಭೂಷಣಾ |
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ" ||

ಜಗನ್ಮಾತೆ ದುರ್ಗೆಯ ಏಳನೇ ಶಕ್ತಿಯನ್ನು ಕಾಲರಾತ್ರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇವಳ ಶರೀರವು ದಟ್ಟ ಕಪ್ಪು, ಬಿಚ್ಚಿ ಹರಡಿದ ತಲೆ ಕೂದಲು, ಕತ್ತಲಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ, ಮೂರು ಕಣ್ಣುಗಳಿವೆ. ಇವಳ ಉಚ್ಛಾಸ-ನಿ:ಚ್ಛಾಸದಿಂದ ಅಗ್ನಿಯ ಭಯಂಕರ ಜ್ವಾಲೆಗಳು ಹೊರಡುತ್ತವೆ ಮತ್ತು ಇವಳ ವಾಹನ ಕತ್ತೆಯಾಗಿದೆ. ಎಡಗಡೆಯ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಹಾಗೂ ಕೆಳಗಿನ ಕೈಯಲ್ಲಿ ಖಡ್ಗವಿದೆ. ಇವಳು ನೋಡಲು ಭಯಂಕರವಾದರೂ, ಯಾವಾಗಲೂ ಶುಭ ಫಲವನ್ನೇ ಕೊಡುವವಳಾದ್ದರಿಂದ ಶುಭಂಕರೀ ಎಂದೂ ಕರೆಯಲ್ಪಡುತ್ತಾಳೆ. ಈ ದಿನ ಸಾಧಕನ ಮನಸ್ಸು ’ಸಹಸ್ರಾರ’ ಚಕ್ರದಲ್ಲಿ ಲೀನವಾಗುತ್ತದೆ. ಇವಳನ್ನು ಕಾಲರಾತ್ರಿರ್ಮಹಾರಾತ್ರಿರ್ಮೋಹರಾತ್ರಿಶ್ಚ ದಾರುಣಾ | ತ್ವಂ ಶ್ರೀಸ್ತ್ವಮೀಶ್ವರೀ ತ್ವಂ ಹ್ರೀಸ್ತ್ವಂ ಬುದ್ದಿರ್ಬೋಧಲಕ್ಷಣಾ || ಎಂದೂ ಸ್ತುತಿಸಬಹುದು.

ಜಗನ್ಮಾತೆಯನ್ನು ಏಳನೆಯ ದಿನ ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಜನನೀ ಪಾಹಿ ಸದಾ... ಎಂದು ಶುದ್ಧಸಾವೇರಿ ರಾಗದಲ್ಲಿ ಸ್ತುತಿಸುತ್ತಾರೆ.

ಎಂಟನೆಯ ದಿನ ಮಹಾಗೌರೀ ರೂಪದಲ್ಲಿ......

"ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿ: |
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ" ||

ದೇವಿಯು ಎಂಟನೆಯ ದಿನ ಮಹಾಗೌರಿಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಇವಳ ವಯಸ್ಸು ಕೇವಲ ೮ ವರ್ಷಗಳೆಂದೂ, ಶಂಖ-ಚಂದ್ರ-ಕುಂದ ಪುಷ್ಪದಷ್ಟು ಬೆಳ್ಳಗಿರುವಳೆಂದೂ ಹೇಳಲಾಗಿದೆ. ಇವಳು "ಅಷ್ಟವರ್ಷಾ ಭವೇದ್ ಗೌರೀ - ಎಂದರೆ ಎಲ್ಲ ವಸ್ತ್ರ ಹಾಗೂ ಆಭರಣಗಳು ಬೆಳ್ಳಗಿವೆ. ಇವಳು ಅತ್ಯಂತ ಶಾಂತ ಮುದ್ರೆಯವಳು. ಇವಳು ಶಿವನನ್ನು ವರಿಸುವುದಕ್ಕಾಗಿ ಕಠೋರ ತಪಸ್ಸು ಮಾಡಿದ ಕಾರಣ ಶರೀರವು ಪೂರ್ಣವಾಗಿ ಕಪ್ಪಾಗಿತ್ತು ಮತ್ತು ಸಂತುಷ್ಟನಾದ ಶಿವನು ಪವಿತ್ರ ಗಂಗೆಯ ಜಲದಿಂದ ತೊಳೆದಾಗ, ವಿದ್ಯುತ್ತಿನಂತೆ ಅತ್ಯಂತ ಪ್ರಕಾಶಮಾನವಾಗಿ ಬೆಳ್ಳಗಾಯಿತು ಮತ್ತು ಆಗಿನಿಂದ ಇವಳು ಗೌರಿ ಎಂದು ಕರೆಯಲ್ಪಟ್ಟಳು. ದೇವಿಯನ್ನು ನಾವು ಸರ್ವಮಂಗಳಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ...|| ಎಂದೂ ಸ್ತುತಿಸುತ್ತೇವೆ.

ಎಂಟನೆಯ ದಿನವಾದ ಈ ದಿನ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಪಾಹಿ ಜನನೀ...ಎಂದು ನಾಟಕುರಂಜಿ ರಾಗದಲ್ಲಿ ಸ್ತುತಿಸುತ್ತಾರೆ.

ಒಂಭತ್ತನೆಯ ದಿನ ಸಿದ್ಧಿದಾತ್ರಿ ರೂಪದಲ್ಲಿ.......

"ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ" ||

ಜಗನ್ಮಾತೆ ದುರ್ಗಾದೇವಿಯ ಒಂಭತ್ತನೇ ಶಕ್ತಿಯ ಹೆಸರು ಸಿದ್ಧಿದಾತ್ರಿ. ಇವಳು ಎಲ್ಲಾ ಪ್ರಕಾರದ ಸಿದ್ಧಿಗಳನ್ನೂ ಅನುಗ್ರಹಿಸುವವಳು. ಬ್ರಹ್ಮವೈವರ್ತಪುರಾಣದ ಶ್ರೀ ಕೃಷ್ಣಜನ್ಮಖಂಡದಲ್ಲಿ ಬರುವ ೧೮ ಸಿದ್ಧಿಗಳಾದ : ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಮಹಿಮಾ, ಈಶಿತ್ವ-ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರ ಶ್ರವಣ, ಪರಕಾಯ ಪ್ರವೇಶನ, ವಾಕ್ ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರಕರಣಸಾಮರ್ಥ್ಯ, ಅಮರತ್ವ, ಸರ್ವನ್ಯಾಯಕತ್ವ, ಭಾವನಾ, ಸಿದ್ಧಿ... ಎಲ್ಲವನ್ನೂ ಕೊಡುವವಳು. ಇವಳ ಕೈಗಳಲ್ಲಿ ಚಕ್ರ, ಗದೆ, ಶಂಖ ಮತ್ತು ಕಮಲ ಪುಷ್ಪಗಳಿವೆ. ನಾಲ್ಕು ಭುಜಗಳನ್ನು ಹೊಂದಿದವಳಾಗಿದ್ದಾಳೆ. ಇವಳನ್ನು ಆರಾಧಿಸುವುದರಿಂದ ಸಾಧಕರಿಗೆ ಎಲ್ಲಾ ಸಿದ್ಧಿಗಳೂ ಲಭಿಸುತ್ತವೆ.

ಒಂಭತ್ತನೇ ದಿನದ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಪಾಹಿ ಪರ್ವತ ನಂದಿನಿ... ಎಂದು ಆರಭಿ ರಾಗದಲ್ಲಿ ಸ್ತುತಿಸುತ್ತಾರೆ.

ನವದುರ್ಗೆಯರಲ್ಲಿ ಸಿದ್ಧಿದಾತ್ರೀ ಕೊನೆಯವಳಾಗಿದ್ದಾಳೆ. ಎಂಟು ದಿನಗಳು ಬೇರೆ ಬೇರೆ ರೂಪದಲ್ಲಿ ದೇವಿಯನ್ನು ಆರಾಧಿಸಿದ ಭಕ್ತರು ಒಂಭತ್ತನೆಯ ದಿನ ಸಿದ್ಧಿದಾತ್ರಿಯನ್ನು ಭಕ್ತಿಯಿಂದ ಆರಾಧಿಸಿ, ಮೋಕ್ಷವನ್ನು ಪಡೆಯುತ್ತಾರೆ.

ವಿವರಣೆ ಆಧಾರ : "ನವದುರ್ಗಾ", ಗೀತಾ ಪ್ರೆಸ್, ಗೋರಖಪುರ
ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು.

Saturday, September 12, 2009

ಕೊಲ್ಕತ್ತಾದಲ್ಲಿ ದುರ್ಗಾ ಪೂಜೆ



ಕೊಲ್ಕತ್ತಾದ ದುರ್ಗಾಪೂಜೆ ೧೬೦೬ರಲ್ಲಿ "ನದಿಯಾ" ಎಂಬ ಜಾಗದಲ್ಲಿ ಪ್ರಪ್ರಥಮವಾಗಿ, ಮಹಾರಾಜ ಶ್ರೀ ಕೃಷ್ಣಚಂದ್ರರಿಂದ ನಡೆಯಿತು. ೧೮೨೯ರಲ್ಲಿ ಲಾರ್ಡ್ ಬೆಂಟಿಕ್ ಕೂಡ ಪೂಜೆಯಲ್ಲಿ ಪಾಲ್ಗೊಂಡಿದ್ದನಂತೆ. ೧೯೬೦ರ ದಶಕದಲ್ಲಿ ದುರ್ಗಾ ಪ್ರತಿಮೆಗಳು ಹೊರದೇಶಕ್ಕೆ ಕೂಡ ಪೂಜೆಗೆಂದು ರವಾನಿಸಲ್ಪಟ್ಟವು. ೧೯೮೦ರ ದಶಕದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ತುಂಬಾ ಚೆನ್ನಾಗಿ ಅಲಂಕಾರ ಮಾಡಿರುವ ಪ್ಯಾಂಡಲ್ ಗೆ ಪ್ರಶಸ್ತಿ ಕೊಡಲು ಪ್ರಾರಂಭಿಸಿದರು. ಆದ್ದರಿಂದ ಇಲ್ಲೀಗ ದೊಡ್ಡ ಪೈಪೋಟಿಯೇ ನಡೆಯುತ್ತೆ.
ದುರ್ಗಾಪೂಜೆ ಪಶ್ಚಿಮ ಬಂಗಾಳದ ಅತಿ ದೊಡ್ಡ ಹಾಗೂ ಮುಖ್ಯ ಹಬ್ಬ. ಮಹಾಲಯ ಅಮಾವಾಸ್ಯೆಯಂದು ನದೀ ಸ್ನಾನ ಮಾಡಿ ತರ್ಪಣ ಬಿಡುವುದರಿಂದಲೇ ಹಬ್ಬಕ್ಕೆ ಚಲಾವಣೆ ಬರತ್ತೆ. ಎಲ್ಲಿ ನೋಡಿದರೂ ಸಂಭ್ರಮ, ಸಡಗರ, ಸಂತೋಷ, ರಾಜ್ಯಕ್ಕೆ ರಾಜ್ಯವೇ ಗಿಜಿಗುಡುತ್ತಾ, ಮಿಂಚುತ್ತದೆ.
ಪುರಾಣದ ಕಥೆಯ ದಿಕ್ಕು ದುರ್ಗೆ ಮಹಿಷಾಸುರನ ವಧೆಗೆ ಬೊಟ್ಟು ಮಾಡುತ್ತದೆ. ಎಲ್ಲಾ ದೇವತೆಗಳೂ ಒಟ್ಟಿಗೆ ಸೇರಿ ತಮ್ಮ ತಮ್ಮ ಶಕ್ತಿಯ ಅಂಶವನ್ನು ಸೇರಿಸಿ, ಸುಂದರಳೂ, ಶಕ್ತಿವಂತಳೂ ಆದ ದುರ್ಗೆಯನ್ನು ಸೃಷ್ಟಿಸಿ, ಅವಳ ೧೦ ಕೈಗಳಿಗೂ ತಮ್ಮ ಅತ್ಯಂತ ಶಕ್ತಿಯುತವಾದ ವಿವಿಧ ಆಯುಧಗಳನ್ನು ಕೊಟ್ಟು ಸಿಂಹದ ಮೇಲೆ ಕುಳಿತ ದೇವಿಯನ್ನು ಮಹಿಷಾಸುರನ ವಧೆಗೆ ಕಳುಹಿಸಿದರು. ಪ್ರತಿ ವರ್ಷ ಬೆಂಗಾಲಿಯ ಅಶ್ವಿನ್ ಮಾಸದ (ಸೆಪ್ಟೆಂಬರ್ - ಅಕ್ಟೋಬರ್)ಲ್ಲಿ ದೇವಿಯನ್ನು ಬರಮಾಡಿಕೊಂಡು ಪೂಜಿಸಲಾಗುತ್ತದೆ. ದೇವಿ ತನ್ನ ನಾಲ್ಕು ಮಕ್ಕಳಾದ ಕಾರ್ತೀಕ, ಗಣೇಶ, ಸರಸ್ವತಿ ಮತ್ತು ಲಕ್ಷ್ಮಿಯೊಂದಿಗೆ (ಅಂದರೆ ಕಾರ್ತೀಕ ನಮ್ಮನ್ನು ಕಾಪಾಡುವವನಾಗಿ- ಗಣೇಶ ಪೂಜೆ ಪ್ರಾರಂಭಿಸುವವನಾಗಿ - ಸರಸ್ವತಿ ಜ್ಞಾನ ಮತ್ತು ವಿದ್ಯೆಗಾಗಿ - ಲಕ್ಷ್ಮಿ ಅನುಗ್ರಹಿಸುವವಳಾಗಿ) ಬಂದು , ತೃಪ್ತಿ ಹೊಂದಿ, ಹರಸುತ್ತಾಳೆ. ಬೇಡಿದ್ದನ್ನೆಲ್ಲಾ ಕರುಣಿಸುತ್ತಾಳೆಂಬ ನಂಬಿಕೆ.

ಈ ದುರ್ಗಾ ಪೂಜೆಯ ಸಿದ್ಧತೆ ವರ್ಷ ಪೂರ್ತಿ ನಡೆಯುತ್ತಲೇ ಇರತ್ತೆ. ವಿಶೇಷವಾಗಿ ೧ - ೨ ತಿಂಗಳ ಮೊದಲು ಭರದಿಂದ ಉತ್ಸಾಹ ತುಂಬಿಕೊಳ್ಳುತ್ತದೆ. ಎಲ್ಲಾ ಸರಕಾರಿ ಹಾಗೂ ಖಾಸಗೀ ಸಂಸ್ಥೆಗಳೂ ಪೂಜೆ ಖರ್ಚಿಗೆಂದು "ಹಬ್ಬದ ಬೋನಸ್" ಕೊಡುತ್ತಾರೆ. ರಿಯಾಯಿತಿ ದರದ ಮಾರಾಟ, ಹೊಸ ಹೊಸ ವಸ್ತುಗಳ ವಿಶೇಷ ಮಾರಾಟಗಳೆಲ್ಲಾ ಶುರುವಾಗುತ್ತವೆ. ಹೊಸ ಹಾಡುಗಳ ಸಿಡಿಗಳೂ, ಪತ್ರಿಕೆಗಳವರ ವಿಶೇಷ ಕೊಡುಗೆಗಳೂ ಎಲ್ಲಾ ಸೇರಿ, ದುರ್ಗಾಪೂಜೆಯ ಒಂದು ತಿಂಗಳ ಮೊದಲೇ ಹಬ್ಬದ ವಾತಾವರಣ ಸೃಷ್ಟಿಸಿಬಿಡುತ್ತದೆ. ಮಹಾಲಯದ ದಿನ ಬೆಳಗಿನ ಜಾವ ೫ ಘಂಟೆಯಿಂದಲೇ ರೇಡಿಯೋ ಹಾಗೂ ದೂರ ದರ್ಶನಗಳಲ್ಲಿ ವಿಶೇಷ ಸಂಚಿಕೆಗಳು ಪ್ರಸಾರವಾಗುತ್ತವೆ.

ತಿಂಗಳುಗಳ ಮೊದಲೇ ಮನೆಗಳಲ್ಲೂ ದುರ್ಗಾಪೂಜೆಯ ತಯಾರಿ ಶುರುವಾಗಿರುತ್ತದೆ. ಶ್ರೀಮಂತರು ಬಡವರೆನ್ನದೆ ಪ್ರತಿಯೊಬ್ಬರ ಮನೆಗಳೂ ತೊಳೆದು ಬಳೆದು ಚೊಕ್ಕಟವಾಗಿ ಸಿಂಗರಿಸಲ್ಪಡುತ್ತದೆ. ಮನೆಯ ಪ್ರತಿಯೊಬ್ಬ ಸದಸ್ಯರೂ ೫ - ೬ ಜೊತೆ ಹೊಸ ಬಟ್ಟೆಗಳನ್ನೂ, ಆಭರಣಗಳನ್ನೂ ಕೊಳ್ಳುತ್ತಾರೆ. ತರಹೇವಾರಿ ಜಂಭದ ಚೀಲಗಳು, ಚಪ್ಪಲಿಗಳೂ ಹೊಸತು ಬರುತ್ತವೆ. ಒಟ್ಟಿನಲ್ಲಿ ಇಡೀ ವಾತಾವರಣ ಹಾಗೂ ಜನಜೀವನ ಉತ್ಸಾಹದಿಂದ ಪುಟಿಯುತ್ತಾ ಸಂಭ್ರಮಪಡುತ್ತಿರುತ್ತದೆ.

ಹಬ್ಬ ಮಹಾಲಯ ಅಮಾವಾಸ್ಯೆಯಂದೇ ಶುರುವಾಗುತ್ತದೆ. ನಗರದ ಘಟ್ಟಗಳಲ್ಲಿ ನದಿಯಲ್ಲಿ ಸ್ನಾನ ಮಾಡಿ ತಮ್ಮ ಹಿರಿಯರಿಗೆ ತರ್ಪಣ ಬಿಡುತ್ತಾರೆ. ರೇಡಿಯೋಗಳಲ್ಲಿ ದೇವಿಯನ್ನು ಬರಮಾಡಿಕೊಳ್ಳುವ ಭಕ್ತಿಗೀತೆಗಳನ್ನು ಬೆಳಗಿನ ಜಾವದಲ್ಲೇ ಪ್ರಸಾರ ಮಾಡುತ್ತಾರೆ. ಇದಕ್ಕೆ ಪುಷ್ಟಿಕೊಡುವಂತೆ ದೊಡ್ಡ ದೊಡ್ಡ ಡ್ರಮ್ಮುಗಳನ್ನು ಹೊಡೆಯಲು ಶುರು ಮಾಡುತ್ತಾರೆ.

ದೇವತೆಗಳ ವಿಗ್ರಹಗಳನ್ನು "ಕುಮಾರತುಲಿ" ಎಂಬ ಜಾಗದಲ್ಲಿ, ಉತ್ತರ ಕೊಲ್ಕತ್ತಾದಲ್ಲಿ ತಯಾರಿಸುತ್ತಾರೆ. ಒಂದು ತಂಡದ ಕಲಾವಿದರು ಪ್ರತಿಮೆಗಳನ್ನು ತಿಂಗಳುಗಟ್ಟಲೆ ಮಾಡಿ ರೂಪ ಕೊಟ್ಟರೆ, ಇನ್ನೊಂದು ತಂಡ ಮಂಟಪ ಕಟ್ಟಿ ಅಲಂಕರಿಸುವ ಕೆಲಸ ಮಾಡುತ್ತದೆ. ಬೊಂಬು, ಕಾಗದ, ಮರ, ಬಟ್ಟೆಗಳಿಂದ ಈ ಪ್ಯಾಂಡಾಲ್ ಗಳನ್ನು ಮಾಡುತ್ತಾರೆ. ಕೆಲವು ಸಲ ಪ್ರಪಂಚದ ಅತ್ಯಂತ ಪ್ರಸಿದ್ಧವಾದ ಕಟ್ಟಡಗಳಂತೆ ಕೂಡ ನಕಲು ಮಾಡುತ್ತಾರೆ. ಈ ಪ್ಯಾಂಡಾಲ್ ಗಳನ್ನು ನಿರ್ಮಿಸಲು ಒಬ್ಬರಿಂದೊಬ್ಬರಿಗೆ ಪೈಪೋಟಿ ಕೂಡ ನಡೆಯುತ್ತದೆ. ಅತ್ಯಂತ ಸುಂದರವಾದ ಮಂಟಪಕ್ಕೆ ಪ್ರಶಸ್ತಿ ಕೂಡ ಕೊಡುತ್ತಾರೆ. ತುಂಬಾ ಸುಂದರವಾಗಿ ಕಟ್ಟಾಲ್ಪಟ್ಟ ಈ ಪ್ಯಾಂಡಾಲ್ಗಳು ಬರೀ ಕೆಲವು ದಿನಗಳ ಸಂಭ್ರಮ ಎಂದು ನೋಡುವವರಿಗೆ ಒಮ್ಮೊಮ್ಮೆ ಬೇಸರ ಕೂಡ ಆಗತ್ತೆ.

ಮಹಾಷಷ್ಠಿಯ ದಿನ "ದುರ್ಗಾಪೂಜೆ"ಯ ಶುಭಾರಂಭವಾಗುತ್ತದೆ. ಮಹಾಸಪ್ತಮಿ, ಮಹಾನವಮಿ, ಮಹಾಷ್ಠಮಿ ದಿನಗಳು ವಿಶೇಷವಾಗಿ, ಸಾವಧಾನದಿಂದ ಪೂಜೆಗಳನ್ನು ಮಾಡುತ್ತಾರೆ. ಪ್ಯಾಂಡಾಲ್ ಗಳು ವಿದ್ಯುತ್ತಲಂಕರಣದಿಂದ, ಜಗಜಗಿಸುತ್ತಿರುತ್ತವೆ. ಲಕ್ಷಾಂತರ ಜನರು ಸರತಿಸಾಲಿನಲ್ಲಿ, ನಿಂತು, ದರ್ಶನ ಪಡೆಯುತ್ತಾರೆ. ಈ ದಿನಗಳಲ್ಲಿ ಕೊಲ್ಕತ್ತಾ ನಗರಕ್ಕೆ ಬೇರೆ ಬೇರೆ ಕಡೆಗಳಿಂದ ವಿಶೇಷ ಬಸ್ಸು, ರೈಲುಗಳ ವ್ಯವಸ್ಥೆ ಕೂಡ ಮಾಡಿರುತ್ತಾರೆ. ಸುತ್ತಮುತ್ತಲ ಹಳ್ಳಿಯವರಿಗೆಲ್ಲಾ ನಗರ ಸುತ್ತುವ ಅವಕಾಶ ಈ ದಿನಗಳಲ್ಲಿ. ಇಡೀ ರಾತ್ರಿ - ಹಗಲು ಮನೆಯವರೆಲ್ಲರೂ, ಮೂರು ಹೊತ್ತೂ ಹೊರಗಡೆಯೇ ತಿನ್ನುತ್ತಾರೆ. ಸಂಬಂಧಿಕರ ಮನೆ, ಗೆಳೆಯರ ಮನೆಗಳೆಂದು ಸುತ್ತುತ್ತಾರೆ. ಬರಿಯ ಸಿಹಿ ಖಾದ್ಯಗಳು - ’ಸಂದೇಶ್ ’ ಹಾಗೂ ಪೂಜೆಯ ವಿಶೇಷ ಖಾದ್ಯಗಳನ್ನು ಎಲ್ಲರಿಗೂ ಹಂಚುತ್ತಾ, ತಾವೂ ತಿನ್ನುತ್ತಾ, ಸಂತೋಷ ಪಡುತ್ತಾರೆ. ಎಲ್ಲಾ ಪ್ಯಾಂಡಾಲ್ ಗಳನ್ನೂಕ್ ಸಂದರ್ಶಿಸುತ್ತಾ, ದೇವಿಯ ಅನುಗ್ರಹ ಪಡೆಯುತ್ತಾರೆ. ಎಲ್ಲಾ ಶಾಲೆ / ಕಾಲೇಜುಗಳಿಗೂ ರಜಾ ಕೊಟ್ಟಿರುತ್ತಾರೆ.

ಮೂರು ದಿನಗಳ ಸಂಭ್ರಮದ ನಂತರ ವಿಜಯ ದಶಮಿಯಂದು, ಭಾವುಕರಾಗಿ, ಅಶ್ರುತರ್ಪಣ ಬಿಡುತ್ತಾ ದೇವಿಯನ್ನು ಕಳುಹಿಸಿಕೊಡುತ್ತಾರೆ. ಪ್ರತಿಮೆಗಳನ್ನು ಮೆರವಣಿಗೆಯಲ್ಲಿ "ಹೂಗ್ಲಿ" ನದಿಯಲ್ಲಿ ಮುಳುಗಿಸುತ್ತಾರೆ. ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ "ಶುಭಬಿಜಯ" ಎಂದು ಹಾರೈಸುತ್ತಾರೆ.

ಒಟ್ಟಿನಲ್ಲಿ ಈ ಸಾರ್ವಜನಿಕ ಹಬ್ಬಕ್ಕಾಗಿ ಇಡೀ ನಗರವನ್ನು ಮಾಯಾಲೋಕವೋ ಎಂಬಂತೆ ಅಲಂಕರಿಸುವ ವಿಧಾನ ನೋಡುವುದೇ ನಮ್ಮ ಕಣ್ಣುಗಳಿಗೊಂದು ಹಬ್ಬ........



ಚಿತ್ರ ಕೃಪೆ - ಕಲ್ಕತ್ತಾವೆಬ್.ಕಾಂ