Monday, February 8, 2010
ಪುಸ್ತಕ ಪರಿಚಯ - ೪
ಸೂಕ್ಷ್ಮ ಸ್ವಭಾವದವಳಾದ ಶಾಂತಾಳಿಗೆ ಮಕ್ಕಳಿಲ್ಲ ಮತ್ತು ಮೈದುನ ರಮೇಶನ ಮೇಲೆ ಅತಿಯಾದ ಪ್ರೀತಿ, ವಾತ್ಸಲ್ಯ. MBBS ಓದುತ್ತಿದ ರಮೇಶ ಮತ್ತು ಅವನ ಪರಿವಾರದವರು ಮೆನಿಂಜೈಟಿಸ್ ಬಂದು ಆಸ್ಪತ್ರೆ ಸೇರಿದ ಶಾಂತಳನ್ನು ಕಳೆದುಕೊಳ್ಳುತ್ತಾರೆ. ಸಾವಿನ ಬಗ್ಗೆ ಬರೆದ ಎರಡು ವಾಕ್ಯ...."ಅಪಾರ ಬಂಧು ಬಳಗವನ್ನೂ, ತನ್ನ ಪ್ರೀತಿ ಪಾತ್ರರನ್ನೂ, ತನಗಿಂತಲೂ ವಯಸ್ಸಾದವರನ್ನೂ ತನಗಾಗಿ ಕಂಬನಿಗರೆಯಲು ಬಿಟ್ಟು ಶಾಂತ ಹೊರಟು ಹೋದಳು.." ನನ್ನನ್ನು ತಟ್ಟಿತು. ತ್ರಿವೇಣಿಯವರು ಬದುಕು ಮತ್ತು ಸಾವನ್ನು - ವಿಶ್ಲೇಶಿಸುತ್ತಾ, ಸಾವಿಗೆ ವಯಸ್ಸು, ಬಳಗ ಯಾವುದೂ ಬೇಡ, ಬರೀ ಜೀವ ಮಾತ್ರ ಸಾಕು ಮತ್ತು ಬದುಕು ಎನ್ನುವುದು ಎಷ್ಟೊಂದು ಅಶಾಶ್ವತವೆಂದಿದ್ದಾರೆ...
ಶಾಂತ ಸತ್ತ ತಕ್ಷಣ "ಮುತ್ತೈದೆ ಸಾವು ಪುಣ್ಯ ಮಾಡಿದ್ದಳು" ಎಂದು ಮುತ್ತೈದೆಯಲ್ಲದ ಹೆಂಗಸೊಬ್ಬಳು ನುಡಿದಾಗ ಲೇಖಕಿ ಶಾಂತಳ ಗಂಡ ರಾಮಣ್ಣನ ಮೂಲಕ "ಜೀವನದಲ್ಲಿ ಏನನ್ನೂ ಕಾಣದೆ ಕಣ್ಣು ಮುಚ್ಚುವ ಮುತ್ತೈದೆ ಸಾವೆಂತದು"? ಎಂದು ಅರ್ಥಪೂರ್ಣವಾಗಿ ಹೇಳುತ್ತಾರೆ....
ಶಾಂತಳ ಸಾವಿನಿಂದ ಕುಗ್ಗಿ ಹೋಗಿದ್ದ ರಮೇಶನನ್ನು ಮುಂಬಯಿಗೆ ಹವಾಬದಲಾವಣೆಗಾಗಿ ಕಳುಹಿಸುತ್ತಾರೆ. ಅಲ್ಲಿ ರಾಮಣ್ಣನ ಗೆಳೆಯ ಶೇಷಾದ್ರಿಯ ಹೆಂಡತಿ, ಮಗುವಿನ ತಾಯಿ, ರತ್ನಳಲ್ಲಿ ಅನುರಕ್ತನಾಗುತ್ತಾನೆ ರಮೇಶ. ಅವಳು ಸ್ನೇಹಿತನ ಮಡದಿ, ತನಗೆ ದಕ್ಕುವವಳಲ್ಲವೆಂದು ಗೊತ್ತಿದ್ದೂ ಉತ್ಕಟವಾಗಿ ಪ್ರೇಮಿಸುತ್ತಾನೆ. ಅವನು ತನ್ನನ್ನು ಬಿಟ್ಟು ವ್ಯಾಸಂಗ ಮುಗಿಸಿ ವೈದ್ಯನಾಗಬೇಕೆಂದು ರತ್ನ ಹೇಳುತ್ತಾಳೆ. ಈ ಪ್ರೇಮ, ಈ ಹಗರಣ ಮುಂದೊಂದು ದಿನ ನಿಮ್ಮ ಪಾಲಿಗೆ ಅರ್ಥವಿಲ್ಲದಿದ್ದಾಗಿ ತೋರುತ್ತದೆಂದು ತಿಳಿ ಹೇಳುತ್ತಾಳೆ. ರತ್ನಳ ಮಗು ಆರೋಗ್ಯ ತಪ್ಪಿ ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ರಮೇಶನೊಳಗಿನ ವೈದ್ಯನಾಗುವ ಬಯಕೆ ಮತ್ತೆ ಚಿಗುರೊಡೆಯುತ್ತದೆ. ಕೊನೆಗೂ ರತ್ನಳನ್ನು ಬಿಟ್ಟು ವಾಪಸ್ಸು ಊರಿಗೆ ಹೊರಡುವ ತಯಾರಿ ನಡೆಸುತ್ತಾನೆ ರಮೇಶ. ಇಲ್ಲಿಯತನಕ ಅತ್ಯಂತ ಸಂಯಮ ತೋರಿದ್ದ ರತ್ನ ಅಸಹಾಯಕಳಾಗಿ ದುರ್ಬಲಳಾಗಿ ರಮೇಶನ ಮುಂದೆ ನಿಂತಿರುತ್ತಾಳೆ. ನಾವು ಯಾರೊಡನೆಯೂ ತುಂಬಾ ಸ್ನೇಹ, ವಿಶ್ವಾಸ ಇಟ್ಟುಕೋಬಾರದು.... ಬಾಂಧವ್ಯವೂ ಬೇಡ, ವಿರಹವೂ ಬೇಡ... ಎಂಬಂತಹ ಮಾತುಗಳನ್ನಾಡುತ್ತಾಳೆ....
ಮದುವೆಗೆ ಮುಂಚೆ ಪ್ರತಿಯೊಬ್ಬ ಹುಡುಗ ಹುಡುಗಿಯೂ ತನ್ನ ಭಾವಿಪತ್ನಿಯ ಬಗ್ಗೆ, ಜೀವನದ ಬಗ್ಗೆ, ನಾನಾ ರೀತಿಯ ಕನಸುಗಳನ್ನು ಕಟ್ಟಿರುತ್ತಾರೆ. ನೆಲೆಯಿಲ್ಲದ ಹಾರಾಡುವ ಚಂಚಲ ಚಿಟ್ಟೆಯಾಗಿರುತ್ತದೆ ಆಗ ಮನಸ್ಸು. ಮದುವೆಯಾದ ಮೇಲೆ ಮನಸ್ಸಿಗೆ ನೆಲೆ ಸಿಕ್ಕುತ್ತದೆ. ಆಗ ನಮಗೆ ಹಿಂದಿನ ಅನುಭವವೆಲ್ಲಾ ಕೇವಲ ಹುಚ್ಚಾಟ ಎನಿಸುತ್ತದೆ.... ಲೇಖಕಿ ಜೀವನದಲ್ಲಿ ಮನಸ್ಸಿಗೆ ನೆಲೆಸಿಗುವುದೆಂದರೆ ಅದು "ಮದುವೆ"ಯಿಂದ ಮಾತ್ರವೇ ಎನ್ನುತ್ತಾರೆ.... ಪ್ರೇಮ ಸ್ಥಿರವಲ್ಲ, ಪ್ರೇಮ ಚಿರವಲ್ಲ, ಹೂವಿನಿಂದ ಹೂವಿಗೆ ಹಾರುವ ಭ್ರಮರಕ್ಕೂ, ಪ್ರೇಮಕ್ಕೂ ವ್ಯತ್ಯಾಸವಿಲ್ಲ. ಕ್ಷಣಿಕ ಕಾಲ ಮಾತ್ರ ಮನಸ್ಸನ್ನು ಮುತ್ತಿ ಭ್ರಾಂತಿಗೀಡುಮಾಡುವ ಒಂದು ದೌರ್ಬಲ್ಯಕ್ಕೆ ಪ್ರೇಮ ಎನ್ನುತ್ತಾರೆ ಲೇಖಕಿ.
ಈ ಕಥೆಗೆ ಸಂಬಂಧ ಪಟ್ಟಂತೆ ತ್ರಿವೇಣಿಯವರು ಹಾಗೆ ಹೇಳಿರಬಹುದೆಂದು ಕೊಂಡರೂ ಕೂಡ, ನನ್ನ ಮನಸ್ಸು ಪ್ರೇಮ ಒಂದು ದೌರ್ಬಲ್ಯವೆಂದು ಒಪ್ಪಿಕೊಳ್ಳುವುದಿಲ್ಲ. ಪ್ರೇಮ ಖಂಡಿತಾ ಚಿರವಾಗಿರತ್ತೆ. ಪ್ರೇಮಿಸಿ ಮದುವೆಯಾದವರು ನಂತರ ಬದುಕಿನಲ್ಲಿ ಏನೇ ಹೊಂದಾಣಿಕೆ ಮಾಡಿಕೊಳ್ಳುತ್ತಾರೆಂದು ಕೊಂಡರೂ, ಇಬ್ಬರ ನಡುವೆ ಸ್ವಲ್ಪವಾದರು ಆ ಪ್ರೇಮ ಎನ್ನುವುದಿಲ್ಲದಿದ್ದರೆ, ಜೊತೆಗೆ ಬಾಳುವುದು ಕಠಿಣ ಕೆಲಸವಾಗಿ ಬಿಡುತ್ತದೆ. ಹೊಂದಾಣಿಕೆ ಬದುಕಿನೊಂದಿಗಾಗುತ್ತದೆಯೇ ಹೊರತು ಪ್ರೇಮದೊಂದಿಗಲ್ಲವೆಂದು ನನ್ನ ಅಭಿಪ್ರಾಯ.....
Monday, February 1, 2010
ಪುಸ್ತಕಗಳ ಬಿಡುಗಡೆ ಸಮಾರಂಭ....
ನಿನ್ನೆ ೩೧ನೇ ಜನವರಿಯಂದು ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು. ಅದರಲ್ಲಿ ಮೂರು ಪುಸ್ತಕಗಳು ’ಪ್ರತಿದಿನ ಪರಿಸರ ದಿನ’, ’ಇರುವುದೊಂದೇ ಭೂಮಿ’ ಮತ್ತು ’ಸುರಿಹೊಂಡ ಭರತ ಖಂಡ’ ಅಂಕಿತ ಪ್ರಕಾಶನದಿಂದ ಮರು ಮುದ್ರಣಗೊಂಡವು. ಹೊಸದಾದ ಮೂರು ಪುಸ್ತಕಗಳು "ಅಭಿವೃದ್ಧಿಯ ಅಂಧಯುಗ", "ಟಿಪ್ಪು ಖಡ್ಗದ ನ್ಯಾನೋ ಕಾರ್ಬನ್" ಮತ್ತು "ಕೊಪೇನ್ ಹೇಗನ್ ಋತು ಸಂಹಾರ" ಭೂಮಿ ಬುಕ್ಸ್ ಪ್ರಕಾಶನದ ಮೊಟ್ಟ ಮೊದಲ ಪುಸ್ತಕಗಳು.. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಪ್ರೊ.ಬಿ ಕೆ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ, ಕೆ ವಿ ಅಕ್ಷರ ಮತ್ತು ಶ್ರೀಮತಿ ನೇಮಿಚಂದ್ರ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನಡೆಯಿತು ಪುಸ್ತಕಗಳ ಲೋಕಾರ್ಪಣಾ ಸಮಾರಂಭ. ಎಂದಿನಂತೆ ಅಂಕಿತದವರು ಉಪಹಾರವನ್ನೂ ಏರ್ಪಡಿಸಿ ಬಿಟ್ಟಿದ್ದರು. ಈ ಸಮಾರಂಭದಲ್ಲಿ ನನ್ನನ್ನು ಆಕರ್ಷಿಸಿದ ವಿಚಾರಗಳೆಂದರೆ ಭೂಮಿ ಬುಕ್ಸ್ ಪ್ರಕಾಶನದವರ ಪ್ರತಿ ಪುಸ್ತಕಕ್ಕೆ ಬದಲು ಒಂದು ಗಿಡ ನೆಡುವ ಸಂಕಲ್ಪ ಮತ್ತು ಅತಿಥಿಗಳಿಗೆ ಪ್ರೀತಿಯಿಂದ ಕೊಟ್ಟ ಸಸಿಗಳು. ಹಸಿರು ಸಸಿಗಳು ಒಬ್ಬರಿಂದೊಬ್ಬರಿಗೆ ವಿನಿಮಯವಾಗುವ ವಿಷಯವೇ ನನ್ನನ್ನು ಬಹಳ ಸಂತೋಷ ಪಡಿಸಿತ್ತು. ಎರಡು ವರ್ಷಗಳ ಹಿಂದೆ ನಮ್ಮ ಚಿಕ್ಕಮ್ಮನ ಮನೆಯಲ್ಲಿ ನರಸಿಂಹ ಹೋಮ ಮಾಡಿದಾಗ, ನಾವು ಉಡುಗೊರೆಯಾಗಿ ಪುಟ್ಟ ಪುಟ್ಟ ಸಸಿಗಳನ್ನು ಕೊಟ್ಟಾಗ, ಅಲ್ಲಿ ನೆರೆದಿದ್ದ ಎಲ್ಲಾ ಸಾರ್ವಜನಿಕರೂ (ಎಲ್ಲರೂ ನಮ್ಮ ಬಳಗವೆಂಬ ವರ್ಗಕ್ಕೆ ಸೇರಿದವರೇ...!! :-) ನಮ್ಮನ್ನೇ ವಿಚಿತ್ರವಾಗಿ ನೋಡಿದ್ದರು. ಆದರೆ ಪುಸ್ತಕ ಬಿಡುಗಡೆಯಂತಹ ಸಾರ್ವಜನಿಕ ಸಮಾರಂಭಗಳಲ್ಲಿ ಈ ಆಚರಣೆ ನೋಡಿ ನನಗೆ ನಿಜಕ್ಕೂ ಸಂತೋಷವಾಯಿತು.
ಎಲ್ಲಾ ಅತಿಥಿಗಳ ಮಾತುಗಳ ನಂತರ ಶ್ರೀ ನಾಗೇಶ ಹೆಗಡೆಯವರು ತಮ್ಮ ಚಿಕ್ಕ ಚೊಕ್ಕವಾದ ಮಾತುಗಳನ್ನು ಆಡಿದರು. ಅವರು ಅಲ್ಲಿ ನೆರೆದಿದ್ದವರಿಗೆಲ್ಲಾ "ನಿಮ್ಮ ನಿಮ್ಮ ಜೀವನದಲ್ಲಿ ಅತ್ಯಂತ ಪ್ರಮುಖ ಘಟನೆಗಳು ನಡೆದಾಗಲೆಲ್ಲಾ (ಅಂದರೆ ನಮ್ಮ ಜನ್ಮ ದಿನಗಳಂದು, ಮದುವೆಯ ವಾರ್ಷಿಕೋತ್ಸವ, ಮಕ್ಕಳ ಹುಟ್ಟು ಹಬ್ಬ, ಅನ್ನಪ್ರಾಶನ ಹೀಗೆ.......) ನೀವು ನೆನಪಾಗಿ ಒಂದೊಂದು ಗಿಡ ನೆಟ್ಟರೆ, ಬೆಂಗಳೂರು ಮತ್ತೆ ಹಸಿರು ವನವಾಗುತ್ತದೆ ಎಂದು ಕರೆ ಕೊಡುವುದರ ಮೂಲಕ ತಮ್ಮ ಪರಿಸರ ಮತ್ತು ಹಸಿರು ಕಾಳಜಿಯನ್ನು ವ್ಯಕ್ತಪಡಿಸಿದರು. ನನಗೆ ಅವರ ಈ ವಿಧಾನ ಅತ್ಯಂತ ಪ್ರಭಾವಕಾರಿ ಅನ್ನಿಸಿತು. ಸರಕಾರ ತಿಪ್ಪಗೊಂಡನಹಳ್ಳಿಯ ಸಮೀಪ ’ಸ್ಫೂರ್ತಿ ವನ’ಕ್ಕೆ ಜಾಗ ಕೊಟ್ಟಿದೆಯೆಂದೂ ಮತ್ತು ಭೂಮಿ ಪ್ರಕಾಶನ ಹೊರ ತರುವ ಪ್ರತಿಯೊಂದು ಪುಸ್ತಕಕ್ಕೆ ಬದಲಾಗಿ ಅಥವಾ ನೆನಪಾಗಿ ಈ ಸ್ಫೂರ್ತಿವನದಲ್ಲಿ ಒಂದೊಂದು ಗಿಡ ನೆಡಲಾಗುತ್ತದೆಂದು ಭರವಸೆಯಿತ್ತರು. ಇದರ ಶುರುವಾತು ಶ್ರೀಮತಿ ನೇಮಿಚಂದ್ರರವರು, ತಾವೇ ನೆಟ್ಟ ನೇರಳೆ ಸಸಿಯನ್ನು ಶ್ರೀ ನಾಗೇಶ ಹೆಗಡೆಯವರಿಗೆ ಕಾಣಿಕೆಯಾಗಿ ನೀಡುವ ಮೂಲಕ ಮಾಡಿದರು.
ಸಮಾರಂಭದ ಚಿತ್ರ ’ಅವಧಿ’ಯಲ್ಲಿದೆ. ಶ್ರೀ ನಾಗೇಶ ಹೆಗಡೆಯವರ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವ ನನ್ನನ್ನು ತುಂಬಾ ಆಕರ್ಷಿಸಿತು.....
ಕೊನೆಯದಾಗಿ ಹೇಳಲೇಬೇಕಾದ ಒಂದು ಮಾತು.... ಸಮಾರಂಭದಲ್ಲಿ ನಾನು ಭೇಟಿಯಾದ ನಮ್ಮ ಸಂಪದ ಮಿತ್ರರು... ಹರಿ, ಶ್ರೀಹರ್ಷ, ವಿನಯ್..... ಮತ್ತು ಬ್ಲಾಗ್ ಲೋಕದ ಗೆಳೆಯರು ಕ್ಷಣ ಚಿಂತನೆ ಖ್ಯಾತಿಯ ಚಂದ್ರಶೇಖರ್, ಛಾಯಾ ಕನ್ನಡಿ ಖ್ಯಾತಿಯ ಶಿವು ಮತ್ತು ಮಲ್ಲಿ ಕಣ್ಣಲ್ಲಿ (ಕ್ಯಾಮೆರಾ) ಖ್ಯಾತಿಯ ಡಿ ಜಿ ಮಲ್ಲಿಕಾರ್ಜುನ್.... ನನಗೆ ನಿಜಕ್ಕೂ ಕಾರ್ಯಕ್ರಮಕ್ಕೆ ಹೋಗಿದ್ದು ಸಂತಸ ತಂದಿತ್ತು........
Friday, January 29, 2010
ಮೆಗಾ ಮದುವೆ....
ವೇದಿಕೆ ಮೇಲೆ ಬಣ್ಣ ಬಣ್ಣದ ಚೌಕಟ್ಟುಗಳು
ಸ್ಯಾಟಿನ ಹೊದಿಕೆಯಲಿ ಸಿಂಗಾರಗೊಂಡ ಪುಷ್ಪಗಳು
ನಡುವೆ ಮದುಮಕ್ಕಳಿಗೆರಡು ರಾಜಾ ಸೀಟುಗಳು......
ಪೈಪೋಟಿಯ ವೈಭವಗಳೂ...
ಲಕ್ಷ, ಕೋಟಿ ರೂಪಾಯಿಗಳೂ...
ಮಿಂಚಿದ ಬಾಗಿದ ಬಳುಕಿದ ದೌಲತ್ತುಗಳೂ...
ನಡುವೆ ಎಲ್ಲೋ ಮುಚ್ಚಿಹೋಯ್ತು ನವಿರಾದ ಸಂಬಂಧಗಳೂ...
ಅಂದು ಮದುವೆಗಳು ನಿಶ್ಚಿತಗೊಳ್ಳುತ್ತಿದ್ದವು ಸ್ವರ್ಗದಲ್ಲೆಂದು..
ಇಂದು ಐಷಾರಾಮಿ ಮದುವೆಗಳಲಿ ಸ್ವರ್ಗವೇ ಧರೆಗಿಳಿದಿದೆಯೆಂದು...
ಜಗತ್ತೇ ದಂಗು ಬಡಿಯುವ ವೈಭಗದ ಗುಂಗು
ಮೆಗಾ ಮದುವೆಗಳ ಮಾಯಾ ಲೋಕದ ಡೋಂಗು...
ಚಿನ್ನ ಬೆಳ್ಳಿಗಳ, ವಜ್ರ ವೈಢೂರ್ಯಗಳ ಅತೀ ಆರ್ಭಟ
ಆಮಂತ್ರಣ ಪತ್ರಿಕೆಯಿಂದಲೇ ಆರಂಭವಾಗುವ ಅಂತಸ್ಥಿನ ಆಟ....
ಹಾಹಾಕಾರ ಮಾಡುತ್ತಾ ತುತ್ತು ಅನ್ನಕ್ಕೂ ಗೋಳಿಡುವ ಬಡವ
ಕೋಟಿಗಟ್ಟಲೇ ದೋಚುತ್ತಾ ಮಹಾರಾಜರ ವೈಭವ ಮೆರೆಸುವ ಧನ ದಾನವ...
ಕಡಿಮೆ ಖರ್ಚಿನ ಸರಳ ವಿವಾಹಗಳು
ಬೆಸೆಯುವುದು ಗಟ್ಟಿಯಾದ ಸಂಬಂಧಗಳು...
ಎರಡು ಸಂಸಾರಗಳು ಒಟ್ಟಾದಾಗ
ವಧುವರರ ಅಂತರಂಗಗಳು ಒಂದಾದಾಗ
ಬೇಕೇ.... ಈ...... ಭೋಗ..... ವೈಭೋಗ.......
Saturday, January 2, 2010
ಚಂದದ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಕಾರ್ಯಕ್ರಮ ಪುಸ್ತಕ ಬಿಡುಗಡೆಯಿಂದ ಮೊದಲುಗೊಂಡು, ಅತ್ಯಂತ ಆತ್ಮೀಯವಾಗಿ ಜೋಶಿ ದಂಪತಿಗಳಿಗೆ ಸನ್ಮಾನ ಮೂಲಕ ಮುಂದುವರೆಯಿತು. ಅತಿಥಿಗಳೆಲ್ಲರೂ ಸೇರಿ ದಂಪತಿಗಳನ್ನು ಸನ್ಮಾನಿಸಿದ ರೀತಿ ನಿಜವಾಗಿ ಕಾರ್ಯಕ್ರಮಕ್ಕೆ ಒಂಥರಾ ನಮ್ಮ ಮನೆಯ ಯಾವುದೋ ಒಂದು ಕಾರ್ಯಕ್ರಮ ಎಂಬ ಭಾವನೆ ಬರುವಂತೆ ಮಾಡಿತು....
ಮೊದಲನೆಯದಾಗಿ ಶ್ರೀ ಜಯಂತ ಕಾಯ್ಕಿಣಿಯವರು ಮಾತನಾಡಿ ಎಂದಿನಂತೆ ತಮ್ಮ ಹಾಸ್ಯ ಮಿಶ್ರಿತ ಧಾಟಿಯಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟರು. ಮದುವೆಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೂ ಅಂತರ ಕಡಿಮೆಯಾಗುತ್ತಿದೆ ಎಂದು ನಗಿಸಿದರು... ಶ್ರೀವತ್ಸ ಜೋಶಿಯವರನ್ನು ಪರಿಚಯಿಸುತ್ತಾ "ಇವರನ್ನು ನೋಡಿದರೇ ಸಾಕು ಇವರದು ಸುಭಿಕ್ಷ ಮತ್ತು ಸೌಹಾರ್ದದ ವ್ಯಕ್ತಿತ್ವವೆನ್ನಿಸುತ್ತದೆ" ಎಂದರು. ಸ್ಪಂದನವಿಲ್ಲದ ಅಂಕಣ ಬರಹಗಳು ’ರದ್ದಿ’ಯಾಗುತ್ತದೆಂದೂ, ಜೋಶಿಯವರ ಅಂಕಣಗಳಿಗೆ ಪ್ರಪಂಚದ ಎಲ್ಲೆಡೆ ಅಭಿಮಾನಿಗಳಿದ್ದಾರೆಂದೂ ಹೇಳಿದರು. ಅಂಕಣ ಬರಹಗಳು ಅಹಂಕಾರವಿಲ್ಲದ, ನಿಸ್ವಾರ್ಥ ಆಂತರಿಕ ಮತ್ತು ಅತ್ಯಂತ ಪ್ರಾಮಾಣಿಕ ಬರಹಗಳಾಗಬೇಕು ಮತ್ತು ಜೋಶಿಯವರ ಬರಹಗಳು ಪೂರ್ವಗ್ರಹ ಮುಕ್ತವಾಗಿ, ಅತ್ಯಂತ ಪ್ರಭಾವಿತವಾಗಿರುತ್ತವೆಂದು ಹೇಳಿದರು. ಹೊರನಾಡಿನಲ್ಲಿರುವ ಕನ್ನಡಿಗರಾದ ಜೋಶಿಯವರು, ತಾನೇನೋ ಕಳೆದುಕೊಂಡಿದ್ದೇನೆಂಬ ಭಾವನೆ ಮೀರಿ, ಅತ್ಯಂತ ಸ್ವಾಭಾವಿಕವಾಗಿ ಬರೆಯುತ್ತಾರೆ ಮತ್ತು ಇವರ ಬರಹಗಳು ಡಿಟಿಪಿ ತಂತ್ರದ ಮೆರವಣಿಗೆಯಿಲ್ಲದ, ಅಂದರೆ ತಾಂತ್ರಿಕ ಸಹಾಯದಿಂದ ಸಾಲಂಕೃತಗೊಂಡ ಬರಹದಂತಿರದೆ, ಆತ್ಮೀಯವಾಗಿರುತ್ತದೆಂದರು. ಮಾಹಿತಿ ಎನ್ನುವುದನ್ನು ನಾವು ಹೀರಿಕೊಂಡು, ಅದು ನಮಗೆ ರಕ್ತಗತವಾಗಿ, ನಮ್ಮಿಂದ ನಮ್ಮತನದೊಂದಿಗೆ "ಬರಹ"ವಾಗಿ ಬಂದಾಗ, ಅದು ಪ್ರಾಮಾಣಿಕ ಬರಹವಾಗುತ್ತದೆ ಮತ್ತು ಜೋಶಿಯವರ ಬರಹಗಳು ನಮ್ಮನ್ನು, ಈ ಕಾರಣಕ್ಕೇ ಸೆಳೆಯುತ್ತವೆ ಎಂದರು. ಅಂಕಣಕಾರರಿಗೆ ಪ್ರತಿವಾರವೂ ಯಾವುದಾದರೊಂದು ವಿಷಯವನ್ನು, ಅಂಕಣಕ್ಕಾಗಿ ಹುಡುಕುವ ಆತಂಕವಿರುತ್ತದೆ, ಶ್ರೀ ಜೋಶಿಯವರು ಅಂಕಣ ಬರಹದ ಚೌಕಟ್ಟನ್ನು ಬಳಸಿ, ಇನ್ನೂ ಹೆಚ್ಚು ಸಾಹಿತ್ಯ ಕೃಷಿ ಮಾಡಲಿ ಮತ್ತು ನಾವು ಅವರ ಕಥೆ, ಪುಸ್ತಕಗಳನ್ನು ಓದುವಂತಾಗಲೆಂದು ಹಾರೈಸಿದರು.
ಕಾರ್ಯಕ್ರಮ ಮುಂದುವರೆದು, ಶ್ರೀ ಮಾಸ್ಟರ್ ಹಿರಣ್ಣಯ್ಯನವರ ಮಾತುಗಳು ಎಂದಿನಂತೆ ಅವರ ಪಂಚ್ ಡೈಲಾಗ್ ಗಳ ಸಮೇತ ಅತ್ಯಂತ ಆಕರ್ಷಕವಾಗಿಯೂ, ಅಷ್ಟೇ ಕಾಳಜಿಯುಕ್ತವೂ ಆಗಿತ್ತು. ಅಮೆರಿಕ ಮತ್ತು ಭಾರತ ನಡುವಿನ ಕೆಲವು ಸಾಂಸ್ಕೃತಿಕ ಅಂತರಗಳನ್ನು ಹೇಳುತ್ತಾ ಕಾಳಜಿ ವ್ಯಕ್ತಪಡಿಸಿದರು. ಅಲ್ಲಿಯ ಜನರು ತಮ್ಮ ದೇಣಿಗೆಗಳನ್ನು ಪುಸ್ತಕ ಭಂಡಾರಗಳಿಗೆ ಕೊಡುವುದನ್ನು, ನಾವಿನ್ನೂ ಕಲಿಯಬೇಕೆಂದರು..
ಕನ್ನಡದ ಏಳಿಗೆ, ಉದ್ಧಾರ ನಮ್ಮೆಲ್ಲರ ಭಾವನೆಗಳ ಸಮ್ಮಿಲನದಿಂದ ಆಗಬೇಕು, ಭಾವನಾ ಪ್ರಪಂಚ ಒಂದಾದರೆ, ಜ್ಞಾನದ ಪ್ರಭೆಗಳೆಷ್ಟಾದರೂ, ಎಲ್ಲೆಲ್ಲಿಂದ ಬಂದರೂ, ಎಲ್ಲಾ ಒಟ್ಟುಗೂಡಿ ಒಂದೇ ಒಂದು ಭಾಷೆಯಾಗಿ ಹೊರ ಹಾಕುವ ಮಾಧ್ಯಮವಾದರೆ, ಮಾರ್ಪಟ್ಟರೆ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯವೆಂದು ಹೇಳಿದರು. ನಮ್ಮತನ ಕಾಪಾಡಿಕೊಂಡು ನಾವು ಎಲ್ಲಿ ಬೇಕಾದರೂ ಬದುಕಲು ಕಲಿಯಬೇಕು ಆದರೆ ನಮ್ಮತನ ನಮ್ಮ ಭಾಷೆ, ನಮ್ಮ ಸಂಸ್ಕೃತಿ ಬಿಟ್ಟರೆ, ನಾವು ಎಲ್ಲಿಯೂ ಸಲ್ಲಲಾರೆವೆಂದರು..
ಶ್ರೀವತ್ಸ ಜೋಶಿಯವರು "ನಾನು ಅಂಕಣವನ್ನಾದರೂ ಬರೆದೇನು... ಭಾಷಣ ಕೊರೆಯಲಾರೆನು".. ಎನ್ನುತ್ತಲೇ ತಮ್ಮ ಹಿತ ಮಿತವಾದ ಮಾತುಗಳನ್ನು ಶುರು ಮಾಡಿದರು. ದಟ್ಸ್ ಕನ್ನಡ ಡಾಟ್ ಕಾಮ್ ನ ಶ್ರೀ ಶ್ಯಾಮ್ ಸುಂದರ್ ಮತ್ತು ಶ್ರೀ ವಿಶ್ವೇಶ್ವರ ಭಟ್ಟರು ಎಂಬ ಎರಡು ಮಹಾನ್ ಶಕ್ತಿಗಳು ನನ್ನ ಬರಹಗಳ ಹಿಂದಿದೆ ಎಂದು ಸ್ಮರಿಸಿದರು. ಓದುಗರ ಪ್ರತಿಕ್ರಿಯೆ, ಪ್ರೋತ್ಸಾಹವೇ ತಮ್ಮ ಬರಹಗಳಿಗೆ ಸ್ಫೂರ್ತಿಯೆಂದರು. ಆಂಗ್ಲ ಪದ LISTEN ಬಿಡಿಸಿ ಜೋಡಿಸಿದರೆ SILENT ಆಗುತ್ತದೆಂದೂ ತಾವು ಯಾವಾಗಲೂ ಸೈಲೆಂಟ್ ಆಗಿ ಹೆಚ್ಚು ಕೇಳಿಸಿಕೊಂಡರೆ, ಮುಂದೆ ವಿಷಯಗಳು ಬರಹಗಳ ಮೂಲಕ ಹೊರ ಹೊಮ್ಮುತ್ತದೆಂದು ತಿಳಿದಿರುವವನೆಂದರು. ತಮ್ಮ ಬರಹಗಳ ಮೂಲಕ, ಜೀವನ ಪ್ರೀತಿ ಬಿಂಬಿಸುವುದೇ ತಮ್ಮ ಉದ್ದೇಶವೆಂಬಂತಹ ಮಾತುಗಳನ್ನಾಡಿ, ತಮ್ಮ ಚಿಕ್ಕ ಚೊಕ್ಕ ಭಾಷಣ ಮುಗಿಸಿದರು.
ಕೊನೆಯದಾಗಿ ಮಾತನಾಡಿದವರು ಶ್ರೀ ವಿಶ್ವೇಶ್ವರ ಭಟ್ಟರು. ಶ್ರೀವತ್ಸ ಜೋಶಿಯವರು ತಮ್ಮ ಅಂಕಣ ಬರಹವನ್ನೆಂದೂ ತಪ್ಪಿಸಿಲ್ಲವೆಂದೂ, ಅಮೆರಿಕದಲ್ಲಿದ್ದೇ ಕನ್ನಡ ಬೆಳೆಸಿದವರು ಎಂದರು. ಜೋಶಿಯವರು ಅಮೆರಿಕದಲ್ಲಿ ನಡೆದ ಯಾವುದೋ ಒಂದು ಘಟನೆಯನ್ನು ಕರ್ನಾಟಕದಲ್ಲಿ ನಡೆದ ಒಂದು ಘಟನೆಗೆ ಹೋಲಿಸಿ ಬರೆಯುವ ವಿಶೇಷ ಪ್ರಯತ್ನ ಶ್ಲಾಘನೀಯವೆಂದರು. ವಿಜಯ ಕರ್ನಾಟಕದ breaking newsಗೆ ಪನ್ ಮಾಡುವ, ಕನ್ನಡದ ಎಲ್ಲಾ ಪತ್ರಿಕೆಗಳನ್ನೂ ಓದುವ, ಅಮೆರಿಕದಲ್ಲಿರುವ ಏಕೈಕ ಕನ್ನಡಿಗ ಶ್ರೀವತ್ಸ ಜೋಶಿಯವರೆಂದರು. ಶ್ರೀ ಜೋಶಿಯವರ ಬರಹಗಳಲ್ಲಿ ವೈಯೆನ್ಕೆಯವರ ಪ್ರಭಾವ ಗಾಢವಾಗಿದೆ ಮತ್ತು ಹೊಸ ಹೊಸ ಶೈಲಿಯ, ವಿವಿಧ ಅರ್ಥ ಬರುವ ಆಕರ್ಷಕ ತಲೆ ಬರಹಗಳಿಂದ ತಮ್ಮ ಲೇಖನ ಓದುವಂತೆ ನಮ್ಮನ್ನು ಪ್ರಚೋದಿಸುತ್ತಾರೆಂದರು. ಒಂದು ಸಣ್ಣ ವಿಚಾರ ಅಥವಾ ಎಳೆಯಿಂದ ಆರಂಭವಾದ ಅಂಕಣ ಕೊನೆಗೆ ಮುಗಿಯುವಾಗ ಒಂದು ವಿಶೇಷ ಅನುಭೂತಿ ಕಟ್ಟಿ ಕೊಡುತ್ತದೆಂದರು.
ಬರೆದು ಬರೆದೂ ಸಾಕಾಗಿದೆ ಎಂಬ ಭಾವ ಯಾವ ರೀತಿಯಲ್ಲೂ ಬಿಂಬಿಸದೇ ಬರೆಯುವ ತಾಳ್ಮೆ/ಜಾಣ್ಮೆ ಅಂಕಣಕಾರರಿಗಿರಬೇಕು, ಕನ್ನಡದಲ್ಲಿ ಅಂಕಣಕಾರರನ್ನು ಹುಟ್ಟು ಹಾಕುವುದು ಅತ್ಯಂತ ಪ್ರಯಾಸದ ಕೆಲಸ, ಸಮಯದ ವಿರುದ್ಧ ಹೋರಾಡುತ್ತಿರುವ ನಮ್ಮೆಲ್ಲರ ಮಧ್ಯದಲ್ಲಿ, ತಪ್ಪದೇ, ಪ್ರಾಮಾಣಿಕವಾಗಿ ಬರೆಯುವ ಶ್ರೀವತ್ಸ ಜೋಶಿಯವರು ಅಭಿನಂದನಾರ್ಹರು ಎಂದು ಮಾತು ಮುಗಿಸಿದರು.
ಈ ದಿನದ ಪುಸ್ತಕ ಬಿಡುಗಡೆ ಸಮಾರಂಭ, ನಾನು ಹಿಂದೆ ನೋಡಿದ ಅನೇಕ ಸಮಾರಂಭಗಳಿಗಿಂತ ಭಿನ್ನವಾಗಿತ್ತು. ಇಲ್ಲೊಂದು ಆತ್ಮೀಯತೆಯಿತ್ತು, ಆದರವಿತ್ತು, ಚೊಕ್ಕವಾಗಿತ್ತು. ಪುಸ್ತಕ ಕೊಂಡು, ಶ್ರೀವತ್ಸ ಜೋಶಿಯವರ ಹಸ್ತಾಕ್ಷರ ಹಾಕಿಸಿಕೊಂಡು, ಮನೆಗೆ ಬರುವಾಗ ಮನಸ್ಸೆಲ್ಲಾ ಪ್ರಫುಲ್ಲವಾಗಿತ್ತು. ಶ್ರೀ ಜೋಶಿಯವರನ್ನು ಭೇಟಿಯಾಗುವ ನನ್ನ ಆಸೆ ಇಷ್ಟು ಸುಲಭವಾಗಿ ಮತ್ತು ಇಷ್ಟು ಬೇಗ ನೆರವೇರುತ್ತದೆಂದು ನಾನು ಅಂದುಕೊಂಡಿರಲಿಲ್ಲ. ತಮ್ಮನ್ನು ಮಾತನಾಡಿಸಲು ಕಾದು ನಿಂತಿದ್ದ ಎಲ್ಲರ ಜೊತೆ ಹಸನ್ಮುಖರಾಗಿ ಮಾತನಾಡಿದ ಜೋಶಿಯವರು, ಜಯಂತ ಕಾಯ್ಕಿಣಿಯವರು ಹೇಳಿದಂತೆ ತುಂಬು ವ್ಯಕ್ತಿತ್ವವನ್ನು ಬಿಂಬಿಸಿದರು. ಶನಿವಾರದ ಬೆಳಗಿನ ಕಾರ್ಯಕ್ರಮ ನಿಜಕ್ಕೂ ಮುದಕೊಟ್ಟಿತು.
Thursday, December 17, 2009
ಪುಸ್ತಕ ಪರಿಚಯ...........೩
ಹೆಂಡತಿಯ ಹೆಸರು ಕಥೆಯ ಆರಂಭದ ಸಾಲುಗಳು "ಹತ್ತು ಬಿಳಿಯ ಹಾಳೆಗಳು ಬರಿದಾದ ಒಡಲಿನಿಂದಾಗಿ ಹಸಿವಿನಿಂದ ಕಂಗೆಟ್ಟು ನನ್ನ ಕಡೆಯೇ ನೋಡುತ್ತಿದ್ದವು. ನಾನು ಪೆನ್ನಿನ ತುಂಬಾ ಶಾಯಿ ತುಂಬಿ ಬರಿದಾದ ಒಡಲನ್ನು ತುಂಬಲು ಕುಳಿತೆ"...... ನನ್ನನ್ನು ಸೆಳೆದವು. ಏನಾದರೂ ಬರೆಯಬೇಕೆಂಬ ಹಂಬಲದ ಮನಸ್ಸಿನವರ ನಿಜ ಸ್ಥಿತಿ ಯಾವಾಗಲೂ ಇದೇ ಆಗಿರುತ್ತದಲ್ಲವೇ..... ಆದರೆ ಈ ಕಥೆಯಲ್ಲಿ ನಾಯಕ ಪ್ರೇಮ ಪತ್ರ ಬರೆಯುವ ಹುನ್ನಾರದಲ್ಲಿರುತ್ತಾನೆ...... ಆದರೆ ಅವಳನ್ನು (ಹೆಂಡತಿಯನ್ನು) ಏನೆಂದು ಸಂಬೋಧಿಸಬೇಕೆಂದು ತಿಳಿಯದೇ... ಬಿಳಿಯ ಹಾಳೆಗಳು ಹಸಿವಿನಿಂದ, ತಮ್ಮೊಡಲ ಹಸಿವು ಇಂಗಿಸೆಂಬಂತೆ ತನ್ನನ್ನೇ ನೋಡುತ್ತಿದ್ದವು ಎನ್ನುತ್ತಾನೆ... ಇದೊಂದು ಅತ್ಯಂತ ಉತ್ತಮ ಉಪಮೆ ಎನ್ನಿಸಿತು ನನಗೆ. ಮದುವೆಯಾಗಿ ಹೆಂಡತಿಯನ್ನು ಬಿಟ್ಟು ಬಂದಿರುವ ಇವನೂ, ಬಿಳಿ ಹಾಳೆಗಳಂತೆ ಪ್ರೇಮಕ್ಕಾಗಿ ಹಸಿದಿದ್ದಾನೆ... ಪ್ರೇಮ ಪತ್ರ ಬರೆಯಲು ಕುಳಿತಿದ್ದಾನೆ... ತಮಾಷೆಯೆಂದರೆ ಅವನಿಗೆ ಹೆಂಡತಿಯ ಹೆಸರೇ ನೆನಪಿಲ್ಲದಿರುವುದು... ಕೊನೆಗೆ ಸ್ನೇಹಿತನ ಸಹಾಯದಿಂದ ತನ್ನನ್ನು ಪ್ರೀತಿಸುವ ನಾಟಕವಾಡಿ, ಬೇರೊಬ್ಬರನ್ನು ಮದುವೆಯಾಗಿ ಹೋದವಳ ಹೆಸರೇ ಹೆಂಡತಿಯದೆಂದೂ ತಿಳಿಯುತ್ತಾನೆ. ಮನೆಗೆ ಬಂದ ಸೊಸೆಗೆ ಹೊಸ ಹೆಸರಿಡಬೇಕೆಂಬ ಸಂಪ್ರದಾಯದಂತೆ, ತನ್ನ ತಾಯಿಯ ಸಲಹೆಯಂತೆ, ತಾನು ಈಶ್ವರಮೂರ್ತಿಯಾದ್ದರಿಂದ ಹೆಂಡತಿಯನ್ನು "ಗಂಗಾ" ಎಂದು ಕರೆಯುತ್ತಾನೆ. ಈ ಕಥೆಯಲ್ಲಿ ಮನಸ್ಸಿಗೆ ನೋವುಂಟು ಮಾಡಿದ ವಿಷಯಗಳನ್ನು ಮರೆಯಬೇಕು, ಬೇರು ಸಹಿತ ನೆನಪುಗಳನ್ನು ತೆಗೆದುಹಾಕಬೇಕೆಂಬ ಒಂದು ತತ್ವ ಕೂಡ ಹೇಳುತ್ತಾರೆ ಲೇಖಕಿ.
೨) ನಾ ಮೆಚ್ಚಿದ ಹುಡುಗಿ :
ಯಾರು ಹಿತವರು ನಿನಗೆ ಈ ಮೂವರೊಳಗೆ... ಕುಮುದಿನಿ.... ಸೌದಾಮಿನಿ.... ವಿಲಾಸಿನಿ.... ನಾಯಕ ತನಗೆ ಬೇಕಾದ ಹುಡುಗಿಯನ್ನು ಕೊನೆಗೂ ಆರಿಸಿಕೊಳ್ಳುತ್ತಾನೆ. ಒಂದು ಕನಸಿನ ನಂತರ.... ಸಂಗೀತದ ರಾಗಗಳಿಗೆ ಮೂವರು ಹುಡುಗಿಯರನ್ನೂ ಹೋಲಿಸಿ, ಅವರ ಸೌಂದರ್ಯ ವರ್ಣನೆ ಮಾಡಿರುವ ರೀತಿ ಚೆನ್ನಾಗಿದೆ.
೩) ಚಿನ್ನದ ಸರ :
ಶ್ರೀಮಂತಳಾದ ಕನಕ, ಬಡವಳಾದ ಕಾವೇರಿ ಇಬ್ಬರೂ ಶಾಂತಳಿಗೆ ಸ್ನೇಹಿತೆಯರೇ ಆದರೂ, ಪಾಪುವಿನ ಸರ ಕಾಣದಾದಾಗ, ಶಾಂತ ಕಾವೇರಿಯನ್ನೇ ಅನುಮಾನಿಸುತ್ತಾಳೆ. ಕಣ್ಣೆದುರೇ ಕನಕ ಆ ಸರವನ್ನು ಮಾರಲು ಹೊರಟರೂ ಶಾಂತಾ ಕೊಂಡುಕೊಳ್ಳುವುದೇ ಇಲ್ಲ. ಇಲ್ಲಿ ಸ್ನೇಹ ಹೇಗೆ ಅನುಮಾನದಿಂದಾಗಿಯೂ, ಬಡತನದಿಂದಾಗಿಯೂ ಸೋಲುವ ಸ್ಥಿತಿಗೆ ಹೋಯಿತೆಂಬುದು ಚೆನ್ನಾಗಿ ಚಿತ್ರಣವಾಗಿದೆ.
೪) ಅವನ ಆಯ್ಕೆ :
ಕುಂಟ ಪಾರಿವಾಳವನ್ನು ಸಾಕಲು ಆಯ್ಕೆ ಮಾಡಿಕೊಂಡು ಹುಡುಗ ಯಾವಾಗಲೂ ಅದನ್ನು ರಕ್ಷಿಸುವ ಮಾತಾಡಿ, ಅಂತ:ಕರಣ ಪ್ರದರ್ಶಿಸುತ್ತಾನೆ. ಕುಂಟಿಯೇ ತನ್ನ ಪಾಲಿಗೆ ರಾಣಿ ಎಂದು, ಆ ಪಾರಿವಾಳವನ್ನು "ರಾಣಿ" ಎಂದು ಕರೆಯುತ್ತಾನೆ.
೫) ಬೆಡ್ ನಂಬರ್ ಏಳು :
ಕ್ಷಯದಾಸ್ಪತ್ರೆಯಲ್ಲಿ ಬೆಡ್ ನಂಬರ್ ೬ - ೭ರ ನಡುವೆ ನಡೆಯುವ ಮಾತುಕತೆ.... ೬ನೇ ನಂಬರಿನ ಬೆಡ್ ಬರೀ ರೋಗಿಗಳ ಸಹವಾಸ ಸಾಕಾಗಿದೆ, ಸುಂದರಿಯೊಬ್ಬಳ ಜೊತೆ ಸಿಕ್ಕರೆ ಎಂದು ಕನಸು ಕಾಣುತ್ತಾ, ರೋಗಿಗಳಿಗಾಗಿ ಮಿಡಿಯುವ ಹೃದಯದ ೭ನೇ ನಂಬರ್ ಬೆಡ್ಡನ್ನು ಟೀಕಿಸುತ್ತಾ, ೭ನೇ ಬೆಡ್ ಗೆ ಬರುವ ವಿಶ್ವನಾಥನ ಹೆಂಡತಿ ಉಮಾಳ ಸೌಂದರ್ಯ ಆಸ್ವಾದಿಸುತ್ತೆ. ತನ್ನ ಜೀವ ಪಣಕ್ಕಿಟ್ಟು, ಕೆಲಸ ಹಿಡಿದು, ಸಂಸಾರ ತೂಗಿಸಿ, ಗಂಡನನ್ನು ರಕ್ಷಿಸುವ ಉಮಾಳೇ ಮುಂದೆ ರೋಗಿಯಾದಾಗ, ಗಂಡನಿಂದ ನಿರ್ಲಕ್ಷಿಸಲ್ಪಟ್ಟು, ತ್ಯಜಿಸಲ್ಪಡುತ್ತಾಳೆ. ಅವಳ ಮೂಕ ರೋದನಕ್ಕೆ ಈ ಬೆಡ್ಗಳೂ ರೋದಿಸುತ್ತಾ ಜೊತೆಗೂಡುತ್ತವೆ. ಮನ ಮಿಡಿಯುವ ಕಥೆ.
೬) ಚಂಪಿ :
ಲಲಿತಳಿಗೆ ಮೂರನೆಯ ಮಗಳಾಗಿ ಮುದ್ದಾದ ಚಂಪಿ ಹುಟ್ಟುವಾಗಲೇ ಬಲಗೈ ಇಲ್ಲದೆ, ಒಂದೇ ಕೈಯಿನ ಕೂಸಾಗಿತ್ತು. ದೊಡ್ಡವರು ಮಗುವನ್ನು ಬಂದವರಿಗೆ ತೋರಿಸದೆ ಮುಚ್ಚಿಡುವುದನ್ನು ಕಂಡು ಚಂಪಿಯ ಅಕ್ಕ ರಾಜಿ ಅವಳನ್ನು ತೆಂಗಿನ ಗರಿಗಳ ಮರೆಯಲ್ಲಿ ಮುಚ್ಚಿಟ್ಟು, ಸಮಾಜದಲ್ಲಿದ್ದ ಅಕ್ಕನನ್ನು ಕರೆತರಲು ಹೋಗುತ್ತಾಳೆ. ಮನೆಗೆ ಬಂದ ಮೇಲೆ ಎಲ್ಲರೂ ರಾಜಿಯ ಮೇಲೆ ಕೋಪಿಸಿಕೊಂಡರೂ, ಚಂಪಿ ಮಾತ್ರ ಇದ್ದ ತನ್ನ ಎಡಗೈ ಚಾಚಿ ಮುದ್ದಾಗಿ ರಾಜಿ ಎಂದು ಕರೆಯುತ್ತಾಳೆ. ಏನೂ ಕಪಟವರಿಯದ ಪುಟ್ಟ ತಂಗಿಯ ಪ್ರೀತಿ ಸುಂದರವಾಗಿ ಹೇಳಲ್ಪಟ್ಟಿದೆ.
೭) ಹಸಿರು ಪೀತಾಂಬರ :
ಗರ್ಭಿಣಿ ಹೆಂಡತಿ ಆಸೆ ಪಟ್ಟಿದ್ದ ಹಸಿರು ಪೀತಾಂಬರವನ್ನು ಶಿವು ಕಷ್ಟಪಟ್ಟು ತಂದಾಗ, ಕೌಸಲ್ಯ ಆಗಲೇ ಮುಂದೆ ಹುಟ್ಟಲಿರುವ ಮಗುವಿಗೆ ತಾಯಾಗಿ ಹೋಗಿದ್ದಳು. ಇದು ಹೆಣ್ತನದಿಂದ ತಾಯ್ತನಕ್ಕೇರುವ ಸ್ತ್ರೀಯ ಒಂದು ರೂಪ ತೋರಿಸುವ ಕತೆ. ಚೆನ್ನಾಗಿದೆ.
೮) ಎರಡು ಜೀವ :
ಗಾಡಿ ಎಳೆಯುವ ಕುದುರೆಯ ಭಾವನೆಗಳನ್ನು ನವಿರಾಗಿ ಚಿತ್ರಿಸಿದ್ದಾರೆ ಲೇಖಕಿ. ದುಷ್ಟ ಮಾನವನಿಗಾಗಿ ಕಷ್ಟಪಟ್ಟು ದುಡಿಯುವ ತನ್ನ ಪರಿಸ್ಥಿತಿಯನ್ನು ಮಾನಸಿಕವಾಗಿ ಮೆಟ್ಟಲು ಪ್ರತ್ನಿಸುತ್ತೆ ಲತೀಫ್.. ಹೆಂಡತಿ ಸತ್ತ ಆರೇ ತಿಂಗಳಿಗೆ ಮರು ಮದುವೆಯಾಗಿ ಬಂದ ಚಂದ್ರುವನ್ನು ಕಂಡು ಹೀನ ಮಾನವ ಎಂದು ಕೆರಳಿದ ಲತೀಫ್, ಭಾವನೆಗಳ ತೀವ್ರತೆಗೆ ಸಿಕ್ಕಿ, ಮನಸ್ಸಿನ ಬಿರುಗಾಳಿ ಸಹಿಸಲಾಗದೆ, ಮಾನವ ಕುಲವನ್ನೇ ದ್ವೇಷಿಸುತ್ತಾ ದೊಡ್ಡ ಮರಕ್ಕೆ ಅಪ್ಪಳಿಸಿಬಿಡತ್ತೆ. ಗಾಡಿಯಲ್ಲಿದ್ದವರೆಲ್ಲಾ ಪ್ರಾಣಾಪಾಯದಿಂದ ಪಾರಾದರೂ, ಮುಂಗಾಲು ಮುರಿದು ಬಿದ್ದಿದ್ದ ಲತೀಫ್ ನನ್ನು ನಿಷ್ಪ್ರಯೋಜಕನೆಂದು, ಗುಂಡಿಟ್ಟು ಕೊಲ್ಲುತ್ತಾರೆ ಮತ್ತು ಸುತ್ತಲಿದ್ದ ದುಷ್ಟ ಮನುಜರು ರೋಮಾಂಚಕಾರಿ ದೃಶ್ಯವೆಂಬಂತೆ ನೋಡುತ್ತಾ ನಿಲ್ಲುತ್ತಾರೆ. ಮನುಷ್ಯ ಎಷ್ಟು ಸ್ವಾರ್ಥಿ ಮತ್ತು ಕ್ರೂರಿ ಎಂಬುದು ಇಲ್ಲಿ ತೋರಿಸಲ್ಪಟ್ಟಿದೆ. ಒಳ್ಳೆಯ ಕಥೆ.
೯) ತಾಯಿ :
ಎಷ್ಟೇ ಐಶ್ವರ್ಯ, ಸುಖ ಸಂಪತ್ತುಗಳಿದ್ದರೂ ತಾಯಿ ಕೊನೆಗೆ ಒಲಿಯುವುದು ಶುದ್ಧ ಪ್ರೀತಿಗಾಗಿ ಎಂದು ತಾಯ ಮಮತೆ ಬಿಂಬಿಸುವ ಕಥೆ. ಬಡತನದಲ್ಲಿ ಸಣ್ಣ ವಠಾರದ ಮನೆಯಲ್ಲಿ ಬದುಕಿನೊಡನೆ ಹೋರಾಡಲು ಹೊರಟ ಮಗ ಕೇಶವನ ಜೊತೆ ಹೊರಟು ಬಿಡುತ್ತಾಳೆ ಜಾನಮ್ಮ. ಶುದ್ಧ ಮನಸ್ಸಿನ ತಾಯಿ, ಮಗನ ಮೇಲಿನ ಪ್ರೀತಿಗಾಗಿ ಕಷ್ಟ ಪಡಲೂ ತಯಾರಾಗಿ ಬಿಡುವ ಭಾವುಕ ಸನ್ನಿವೇಶ.
ಇನ್ನುಳಿದ ಕಥೆಗಳಲ್ಲಿ ಹೆಣ್ಣಿನ ಸೌಂದರ್ಯ ಕಂಡು ಮೋಹಿತನಾಗಿ ೧೫ ವರ್ಷದ ಕಠಿಣ ಬ್ರಹ್ಮಚರ್ಯದ ತಪಸ್ಸನ್ನು ಗಾಳಿಗೆ ತೂರಿ ಬಿಡುವ ಸಂನ್ಯಾಸಿ, ಬಾಯಿಗೆ ಬಂದ ಸುಳ್ಳು ಕಥೆ ಹೇಳಿ ಭಿಕ್ಷೆ ಬೇಡುವ ಹುಡುಗ, ಪ್ರೀತಿಸಿದ ಹುಡುಗಿ ಆಕಸ್ಮಿಕ ಬೆಂಕಿ ಅಪಘಾತದಲ್ಲಿ ಮರಣ ಹೊಂದಿದಾಗ, ಕಿಡಿಗೇಡಿಗಳು ಅವಳ ಚಾರಿತ್ರ್ಯ ವಧೆ ಮಾಡುವುದು, ೩೦ ವರ್ಷ ತನಗಿಂತ ಹಿರಿಯನಾದ, ತನ್ನನ್ನು ಎತ್ತಾಡಿಸಿ ಸಾಕಿದ ಸೋದರ ಮಾವನನ್ನೇ ಪ್ರೀತಿಸುವ ತಾರಾ.... ಹೊಟ್ಟೆಯಲ್ಲಿ ಪುಂಡಾಟ ನಡೆಸುತ್ತಿದ್ದ ಪೋರ ಇದ್ದಕ್ಕಿದ್ದಂತೆ ತಟಸ್ಥನಾದಾಗ ಮಗು ಹೊರಗೆ ಬರುವ ಮೊದಲೇ ಇಹಲೋಕ ತ್ಯಜಿಸಿದೆ ಎಂದರಿಯುವ ತಾಯಿ, ಕೊನೆಗೆ ಒಂದು ಜೀವಂತ ಶಿಶುವಿಗೆ ಜನ್ಮ ಕೊಡಲಾಗದ ಹೆಣ್ಣೂ ಒಂದು ಹೆಣ್ಣಾ ಎಂದು ಮತ್ತೊಮ್ಮೆ ಇನ್ನೊಬ್ಬ ಅತಿಥಿಯನ್ನು ಎದುರುಗೊಳ್ಳಲು "ಪ್ರಸವ ವೈರಾಗ್ಯ" ಮರೆಯುವ ತಾಯಿ....
ಹೀಗೆ ಪ್ರತಿಯೊಂದು ಕಥೆಯೂ ವಿಭಿನ್ನವಾಗಿವೆ. ಒಟ್ಟಿಗೆ ಒಂದರ ನಂತರ ಒಂದರಂತೆ ಇಡೀ ಪುಸ್ತಕ ಓದಿದರೂ, ಎಲ್ಲ ರೀತಿಯಲ್ಲೂ ಭಿನ್ನವಾಗಿಯೇ ಕಾಣುವುವು ಕಥೆಗಳು. ಇದು ಲೇಖಕಿ ದಿ.ತ್ರಿವೇಣಿಯವರ ಅಪರೂಪದ ಶೈಲಿ... ಎಲ್ಲ ಕಥೆಗಳಿಗಿಂತಲೂ ನನ್ನನ್ನು ಹಿಡಿದಿಟ್ಟು, ಮರೆಯಲಾಗದಂತೆ ಮನಸ್ಸಿನಲ್ಲಿ ಅಚ್ಚೊತ್ತಿದ್ದು "ಎರಡು ಜೀವ". ಮಾತು ಬಾರದ ಮೂಕ ಪ್ರಾಣಿಗಳೇ ಮನುಷ್ಯರಿಗಿಂತ ಹೆಚ್ಚು ಭಾವ ಜೀವಿಗಳು ಎಂಬುನ್ನು ಸಾಬೀತು ಪಡಿಸಿದೆ........
Wednesday, December 2, 2009
ಪುಸ್ತಕ ಪರಿಚಯ............೨
ಇದನ್ನೊಂದು ಕಥೆ ಎನ್ನುವುದಕ್ಕಿಂತ ನಮ್ಮ ನಡುವೆ ನಡೆದಿರಬಹುದಾದ ಒಂದ ಸತ್ಯ ಘಟನೆ ಎನ್ನಬಹುದೇನೋ..... ಯಾವುದೇ ಕಾರಣಕ್ಕೇ ಆಗಲಿ ಯಾರಿಗಾದರೂ ಮನೋವಿಕಲ್ಪವಾಗಿದ್ದರೆ, ಅವರು ಸುಧಾರಿಸಿದ ನಂತರವೂ ನಮ್ಮ ಸಮಾಜ (ಅಥವಾ ನಾವು) ನೆಮ್ಮದಿಯ ಜೀವನ ಸಾಗಿಸಲು ಬಿಡೋಲ್ಲ. ಈ ಕಥೆ ಎಲ್ಲಾ ಕಾಲಕ್ಕೂ ಸಲ್ಲುವಂತಹುದು.
ತ್ರಿವೇಣಿಯವರು ಮನೋವಿಕಲ್ಪಕ್ಕೆ ಸಂಬಂಧ ಪಟ್ಟ ಕಥೆಗಳನ್ನು ಅತ್ಯಂತ ಶ್ಲಾಘನೀಯ ರೀತಿಯಲ್ಲಿ ಬರೆದಿದ್ದಾರೆ. ಎಲ್ಲೂ ಅತಿ ಎನ್ನಿಸಿಕೊಳ್ಳದೆ ಸಾಗುವ ಕಥೆ ನಮ್ಮನ್ನು ಸುಳಿಯೊಳಗೆ ಪೂರ್ಣವಾಗಿ ಸೆಳೆದುಕೊಂಡು ಬಿಡತ್ತೆ. ಪುಸ್ತಕ ಓದಿಯಾದ ಮೇಲೂ ಎಷ್ಟೋ ಹೊತ್ತು ನಾವು ಆ ಕಥೆಯಲ್ಲೇ ಜೀವಿಸುತ್ತಿರುತ್ತೇವೆ. ಕೆಲವೊಮ್ಮೆ "ಶರಪಂಜರ" ದಂತಹ ಕಾದಂಬರಿಗಳು ಮರೆಯಲು ಅಸಾಧ್ಯವೇ ಆಗಿಬಿಡುತ್ತದೆ. ಈ ಕಥೆ ಅದರಲ್ಲೂ ನಮಗೆ ದಿವಂಗತ ಕಲ್ಪನಾರ ಅದ್ಭುತ ನಟನೆಯಿಂದಾಗಿ, ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದೆ. ಈ ಪುಸ್ತಕಕ್ಕೆ ಮತ್ತು ಕಲ್ಪನಾರ ಅಭಿನಯಕ್ಕೆ, ಎರಡಕ್ಕೂ ಅವೇ ಸಾಟಿ - ಬೇರೆ ಹೋಲಿಕೆಯೇ ಇಲ್ಲ....
ನನಗೆ ಈ ಕಥೆ ಹಾಗೂ ಚಿತ್ರದ ಜೊತೆ ಇನ್ನೊಂದು ಹಿಂದಿ ಸಿನೆಮಾ ಕೂಡ ನೆನಪಾಗುತ್ತಿದೆ. "ಬಸೇರಾ" ಅಂತ... ರಾಖಿ ಹಾಗೂ ರೇಖಾ ಇಬ್ಬರೂ ನಟಿಸಿದ್ದರು. ತಂಗಿ ರೇಖಾಳ ಮದುವೆಯಾದ ತಕ್ಷಣವೇ ಅವಳ ಪತಿಯ ಮರಣವಾದದ್ದು ಕೇಳಿ, ಅಕ್ಕ ರಾಖಿಯ ಬುದ್ಧಿ ಸ್ಥಿಮಿತ ತಪ್ಪಿ ಹೋಗುತ್ತದೆ. ಸುಮಾರು ೧೨ ವರ್ಷಗಳ ನಂತರ ಅವಳು ಆಸ್ಪತ್ರೆಯಿಂದ ಮನೆಗೆ ಬರುವಷ್ಟರಲ್ಲಿ, ರೇಖಾಳ ಮದುವೆ ತನ್ನ ಪತಿಯ ಜೊತೆಗೇ ಆಗಿ, ಒಂದು ಮಗುವೂ ಇರುತ್ತದೆ. ಅದು ಅವಳಿಗೆ ಗೊತ್ತಾದಾಗ, ಪತಿಗೆ ಇನ್ನು ತನ್ನ ಅವಶ್ಯಕತೆಯಿಲ್ಲವೆಂದು ಅರಿತುಕೊಂಡು, ಮತ್ತೊಮ್ಮೆ ಹುಚ್ಚಿಯಾಗಿ ಬಿಡುತ್ತಾಳೆ (ಹುಚ್ಚಿಯಂತೆ ನಟಿಸುತ್ತಾಳೆ). ಆಸ್ಪತ್ರೆಗೆ ವಾಪಸ್ಸು ಹೋಗಿ ಬಿಡುತ್ತಾಳೆ. ತನ್ನ ಮಗನಿಗೆ ನಿಷ್ಕರ್ಷೆಯಾಗಿದ್ದ ಹುಡುಗಿಗೆ ಮಾತ್ರ ಈ ಸತ್ಯ ತಿಳಿಯುತ್ತದೆ ಅಥವಾ ನಿಜ ಏನೆಂದು ತಿಳಿದುಕೊಳ್ಳುವ ಅವಶ್ಯಕತೆಯಾಗಲೀ ಅಥವಾ ತಾಳ್ಮೆಯಾಗಲೀ ಕುಟುಂಬದ ಬೇರೆಯವರಿಗೆ ಇರುವುದಿಲ್ಲ.... ಮುಂದೆಂದೂ ರಾಖಿ ತನ್ನ ಕುಟುಂಬದವರನ್ನು ಭೇಟಿ ಮಾಡುವುದೇ ಇಲ್ಲ. ಆಸ್ಪತ್ರೆಯಲ್ಲೇ ರೋಗಿಗಳ ಸೇವೆ ಮಾಡುತ್ತಾ ಇದ್ದು ಬಿಡುತ್ತಾಳೆ. ಇದರಲ್ಲಿ ಎಲ್ಲರ ಅಭಿನಯವೂ ತುಂಬಾ ಚೆನ್ನಾಗಿತ್ತು. ಅದರಲ್ಲೂ ರಾಖಿಯನ್ನು ಮರೆಯುವುದಸಾಧ್ಯವೇ ಆಗಿ ಬಿಡುತ್ತೆ... ಒಂದು ಹಾಡು... ’ಜಹಾ ಭಿ ಸವೇರಾ ಹೈ... ವಹೀ ತೋ ಬಸೇರಾ ಹೈ...’ ಮನದಲ್ಲಿ ಅನುರಣಿಸುತ್ತಲೇ ಇರತ್ತೆ.... ಭಾವನೆಗಳ ತೀವ್ರವನ್ನು ತುಂಬಾ ಸುಂದರವಾಗಿ ಚಿತ್ರಿಸಲ್ಪಟ್ಟಿದೆ. ಎಲ್ಲವನ್ನೂ ಕಳೆದುಕೊಂಡು, ನೋವಿನಲ್ಲಿ ತುಡಿಯುವ ಪಾತ್ರಗಳು ನಮ್ಮ ಮನದಾಳದಲ್ಲಿ ಬೇರು ಬಿಡುತ್ತವೆ.
Monday, November 23, 2009
"ದಿವ್ಯ" ನಿರ್ಲಕ್ಷ್ಯ
ನಾವು ನಮ್ಮ ಬದುಕಿನಲ್ಲಿ ಅನೇಕ ವಿಷಯಗಳನ್ನೂ, ಅನೇಕ ಜನರನ್ನೂ ನಿರ್ಲಕ್ಷಿಸಿರುತ್ತೇವೆ, ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿಯೂ ಮತ್ತು ಕೆಲವೊಮ್ಮೆ ಅರಿವಿಲ್ಲದೆಯೂ..... ಘಟನೆಗಳನ್ನು ಕಹಿಯಾಗಿದ್ದರೆ ಮರೆಯಬಹುದು... ಆದರೆ ಪ್ರಾಮುಖ್ಯವಲ್ಲದವನ್ನು ನಿರ್ಲಕ್ಷಿಸ ಬೇಕಾಗುತ್ತದೆ. ಕೆಲವೊಮ್ಮೆ ನಾವು ಇದು ಸಾಧಾರಣ ಗುಣ ಮಟ್ಟದ್ದು, ಇದಕ್ಕೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿಲ್ಲವೆಂದು ನಿರ್ಲಕ್ಷಿಸಿದ್ದ ಕೆಲವು ವಿಷಯಗಳು, ಮುಂದೊಂದು ದಿನ ನಮ್ಮ ನಿರೀಕ್ಷೆಗೆ ಮೀರಿ, ಹಠಾತ್ತಾಗಿ ಫೀನಿಕ್ಸಿನಂತೆ ಮೇಲೆದ್ದು ಬಿಡತ್ತೆ ಪ್ರಾಮುಖ್ಯತೆ ಪಡೆದು... ವಿಷಯ ಅದೇ ಆಗಿದ್ದರೂ ಸಮಯ ಬದಲಾದಾಗ ಅದರ ಪ್ರಾಮುಖ್ಯತೆಯೂ ಬದಲಾಗಿ ಬಿಟ್ಟಿರುತ್ತದೆ. ಅದು ನಮ್ಮನ್ನು ಮೂರ್ಖರನ್ನಾಗಿಸಿ, ಮೆರೆಯುತ್ತದೆ... ಇದೆಲ್ಲಾ ಘಟನೆಗಳೋ / ವಿಷಯಗಳೋ ಆದವು...
ಆದರೆ ನಾನೀಗ ಹೇಳುತ್ತಿರುವುದು ಮನುಷ್ಯರ ಬಗ್ಗೆ, ಸಂಬಂಧಗಳ ಬಗ್ಗೆ.. ಈ ಸಂಬಂಧಗಳ ಕಬಂಧ ಬಾಹುವಿನಲ್ಲಿ ಸಿಲುಕಿ ಪ್ರಮುಖವಾದ ವಿಷಯವೊಂದು ನರಳಿದ ಬಗ್ಗೆ.... ತಪ್ಪು ತಿಳುವಳಿಕೆ, ಅಹಂ ಅಥವಾ ಸ್ವಪ್ರತಿಷ್ಠೆಗೆ ಸಿಲುಕಿ ನರಳಿದ ನವಿರಾದ ಸಂಬಂಧದ ಬಗೆಗೆ...
"ನಿರ್ಲಕ್ಷ್ಯ" ಎನ್ನುವುದು ವ್ಯಕ್ತಿ ತಾನೇ ಅನುಭವಿಸಿದಾಗ ಮಾತ್ರ ಅರ್ಥ ಮಾಡಿಕೊಳ್ಳಲಿಕ್ಕಾಗುವಂತಹ ಸೂಕ್ಷ್ಮ ವಿಚಾರ. ಅದೂ ತನ್ನವರೆಂದು ಕೊಂಡು, ತುಂಬಾ ಬೇಕಾದವರೆಂದು ಕೊಂಡಿದ್ದ ಒಬ್ಬ ವ್ಯಕ್ತಿಯಿಂದ, ನಾವು ದಿವ್ಯವಾಗಿ ನಿರ್ಲಕ್ಷಿಸಲ್ಪಟ್ಟಾಗ, ಆಗುವ ನೋವು, ತುಡಿತ ಅನುಭವಿಸಿದ ಮನಸ್ಸಿಗಲ್ಲದೆ ಬೇರೆಯವರಿಗೆ ತಿಳಿಯುವುದು ಸ್ವಲ್ಪ ಕಷ್ಟವೇ...
ಈ ಘಟನೆಯ ಮುಖ್ಯ ಪಾತ್ರಧಾರಿ ಒಮ್ಮೆ ನನಗೆ ತುಂಬಾ ಹತ್ತಿರದ ವ್ಯಕ್ತಿಯಾಗಿದ್ದರು.... ನನಗೆ ಸಂಬಂಧದಲ್ಲೂ ಅತೀ ಹತ್ತಿರದವರೇ.... ಕಾರಣಾಂತರಗಳಿಂದ ನನ್ನಿಂದ ದೂರವಾಗಿ ಮಾತು-ಕತೆ ಕೂಡ ನಿಂತು ಹೋದಾಗಲೂ ನನಗಿಷ್ಟೊಂದು ನೋವು ಆಗಿರಲಿಲ್ಲವೇನೋ... ಈಗ ತನ್ನ ಒಬ್ಬನೇ ಮಗನಿಗೆ ಮದುವೆ ಗೊತ್ತಾದ ಸಂಭ್ರಮದಲ್ಲಿ ಕೂಡ... ಅವರಿಗೆ ನನ್ನ ನೆನಪೂ ಬಾರದಿದ್ದಾಗ... ನಾನು ನಿರ್ಲಕ್ಷಿಸಲ್ಪಟ್ಟಿದ್ದೇನೆಂಬ ವಾಸ್ತವ ನನಗರ್ಥವಾಯಿತು.... ಊರಿಗೆಲ್ಲಾ ತಾನೇ ದೂರವಾಣಿ ಮೂಲಕ ಮದುವೆ ಸಮಾಚಾರ ಹೇಳುವಾಗ, ತನ್ನ ಸಂತೋಷ ಹಂಚಿಕೊಂಡಾಗ ಕೂಡ, ನನ್ನ ನೆನಪೂ ಆ ವ್ಯಕ್ತಿಗೆ ಆಗಿಲ್ಲವೆಂದರೆ ನನ್ನ ಈ ಹುಚ್ಚು ಮನಸ್ಸೇಕೋ ಒಪ್ಪುತ್ತಲೇ ಇಲ್ಲ.... ಯಾರಿಗೋ ದೂರದವರಿಗೆ ಹೇಳಿದಂತೆ ಹೇಳಿದ್ದರೂ ಪರವಾಗಿರಲಿಲ್ಲ... ಒಂದೇ ಒಂದು ಕರೆ ನನ್ನನ್ನು ಈ ದಿನ ಈ ತರಹದ ನೋವಿನಿಂದ ಪಾರುಮಾಡಿರುತ್ತಿತ್ತು. ಈಗ ನನಗಾಗುತ್ತಿರುವ ನೋವು ಹೆಪ್ಪುಗಟ್ಟಿ ಈ ಸಾಧಾರಣ ಶಬ್ದ ನಿರ್ಲಕ್ಷ್ಯಕ್ಕೆ ದಿವ್ಯ, ಭವ್ಯ, ಮಹತ್ತರ ಎಂಬೆಲ್ಲಾ ಗುಣವಾಚಕ ಬಾಲಗಳನ್ನು ಅಂಟಿಸುವಂತೆ ಮಾಡಿದೆ... ನಿರ್ಲಕ್ಷ್ಯ ಎಂಬ ಶಬ್ದ ಸಾಧಾರಣವಾಗಿದ್ದರೂ, ಇದನ್ನು ಅನುಭವಿಸಿದಾಗ ಆಗುವ ನೋವಿಗೆ ಆಳ, ಅಳತೆ ಎಂಬ ಯಾವ ಮಾಪನಗಳೂ ಉಪಯೋಗವಾಗೊಲ್ಲ....
ಏನಾಗುತ್ತಿದೆ ನಮ್ಮ ಸಂಬಂಧಗಳ ಬೆಸುಗೆಗೆ..... ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ.... ಎಲ್ಲಾ ಶಿಷ್ಟಾಚಾರಗಳನ್ನೂ ಮರೆತೇಬಿಟ್ಟಿದ್ದೇವಾ..... ಪ್ರೀತಿ-ವಿಶ್ವಾಸ-ನಂಬಿಕೆ ಎಂಬೆಲ್ಲಾ ಶಬ್ದಗಳೂ ಎಲ್ಲಿ ಹೋದವು.... ಎಂದು ಒಂಟಿಯಾಗಿ ಕುಳಿತು ನನ್ನ ಮನಸ್ಸು ...... ನಾನು ನಿರ್ಲಕ್ಷಿಸಲ್ಪಟ್ಟಿದ್ದೇನೆಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾರದೇ ಮೂಕವಾಗಿ ರೋದಿಸುತ್ತಿದೆ......


