Friday, December 16, 2011

ಮಾತು... ಮಾತು... ಮಾತು...

ಮಾನವನಿಗೆ ಮಾತು ಭಗವಂತನ ಅನುಗ್ರಹದಿಂದ ಬಂದಿದೆ. ಭೂಮಿಯ ಸಂಬಂಧದಿಂದಲೇ ಈ ಮಾತನಾಡುವ ಶಕ್ತಿ ಬಂದಿರಬೇಕೆಂದು ಕೂಡ ತಿಳಿಯಬಹುದು ಏಕೆಂದರೆ ಭೂಮಿಯಲ್ಲಿ ಅನೇಕ ವಿವಿಧ ಜಾತಿಯ ಪಶು, ಪಕ್ಷಿ, ಗಿಡ, ಮರ ಎಲ್ಲವೂ ಇರುವುದರಿಂದ ಅವುಗಳನ್ನು ಗುರುತಿಸಲು ಮಾನವನಿಗೆ ಒಂದೊಂದು ಹೆಸರು, ಒಂದು ಅಭಿವ್ಯಕ್ತಿ ಮಾಧ್ಯಮ ಬೇಕಾಗಿರುವುದರಿಂದ, ಅದು ನಮಗೆ ಭೂತಾಯಿಯ ಕೃಪೆಯಿಂದಲೇ ಲಭಿಸಿರುವುದರಿಂದ, ನಾವು ಮಾನವನಿಗೆ ಮಾತು ಕಲಿಸಿದವಳು "ಭೂಮಾತೆ" ಎಂದು ಹೇಳಬಹುದು ಅನ್ನಿಸುತ್ತದೆ.

"ಮಾತು" ಎಂದರೆ ನಮ್ಮ ಮನಸ್ಸಿನಲ್ಲಿ ಬರುವ ಭಾವನೆಗಳನ್ನು ಅಭಿವ್ಯಕ್ತ ಪಡಿಸುವುದು. ನಮ್ಮ ಭಾವನೆಗಳಿಗೆ ಒಂದು ರೂಪ, ಆಕಾರ, ಅರ್ಥ ಕೊಟ್ಟು ಇನ್ನೊಬ್ಬರಿಗೆ ತಲುಪಿಸುವುದು ಎಂದು ಕೂಡ ಹೇಳಬಹುದು. ಆದ್ದರಿಂದಲೇ ಮಾತು ಒಂದು ಅತ್ಯಂತ ಪ್ರಮುಖ ಹಾಗೂ ಮುಖ್ಯ ಮಾಧ್ಯಮವಾಗುತ್ತದೆ. ಆದರೆ ನಾವು ಎಷ್ಟು ಮಾತು ಆಡಬೇಕು ಎನ್ನುವುದನ್ನು ಮಾತ್ರ ನಾವೇ ನಿರ್ಧರಿಸಬೇಕು. ನಾವು ಪ್ರಪಂಚದ ಮಹಾಪುರುಷರ ಕಥೆಗಳನ್ನು ಅವಲೋಕಿಸುತ್ತಾ ಹೋದಾಗ ನಮಗೆ ಒಂದು ಮಹತ್ವದ ವಿಷಯ ತಿಳಿಯುವುದೇನೆಂದರೆ.. ಸಾಧಕರು ಎಂದಿಗೂ ಹೆಚ್ಚು ಮಾತನಾಡುವುದಿಲ್ಲ. ಅವಶ್ಯಕತೆ ಇದ್ದಾಗ ಮಾತ್ರ, ಎಷ್ಟು ಬೇಕೋ ಅಷ್ಟೇ ಮಾತುಗಳನ್ನೇ ಆಡುತ್ತಾರೆ. ತುಂಬಾ ಚೊಕ್ಕವಾದ ಉದಾಹರಣೆಯನ್ನು ರಾಮಾಯಣದಿಂದ ಕೊಡಬಹುದು. ಶ್ರೀರಾಮಚಂದ್ರ ಎಂದಿಗೂ ಅವಶ್ಯಕತೆಗಿಂತ ಹೆಚ್ಚು ಮಾತನಾಡಲೇ ಇಲ್ಲ. ಮಹಾಪುರುಷರು ಯಾವಾಗಲೂ ಮಿತಭಾಷಿಗಳು, ಪ್ರಿಯಂವದರೂ ಆಗಿರುತ್ತಾರೆ.

ಮಾತು ಮಾನವನ ಜೀವನದ ಅತ್ಯಂತ ಮುಖ್ಯವಾದ ಒಂದು ಕಾರ್ಯ. ದೈನಂದಿನ ಜೀವನದಲ್ಲಿ ವ್ಯಕ್ತಿಗಳ ನಡುವೆ ಪರಸ್ಪರ ವಿಚಾರಗಳನ್ನು, ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವಲ್ಲಿ ಮಾತು ಅತ್ಯಂತ ಮುಖ್ಯವಾದ ಸಂಪರ್ಕ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರತಿದಿನ ಮುಂಜಾನೆ ಆರಂಭದಿಂದಲೇ (ಕಣ್ಣು ಬಿಟ್ಟಾಗಿನಿಂದಲೇ) ನಾವು ಮಾತನಾಡಲು ಆರಂಭಿಸಿರುತ್ತೇವೆ. ಎಷ್ಟು ಮಾತಾಡುತ್ತೇವೆ, ಯಾರೆಲ್ಲರ ಜೊತೆ ಮಾತಾಡುತ್ತೇವೆ, ಯಾವ ವಿಷಯಗಳನ್ನು ಮಾತಾಡುತ್ತೇವೆ, ದಿನದ ೨೪ ಘಂಟೆಗಳಲ್ಲಿ ಮಾತಿಗಾಗಿ ನಾವು ಅದೆಷ್ಟು ಸಮಯ ಮೀಸಲಿಟ್ಟಿರುತ್ತೇವೆ ಎಂದೆಲ್ಲಾ ಒಂದು ದಿನವಾದರೂ, ಯೋಚಿಸುವುದೇ ಇಲ್ಲ. ಆದರೆ ನಮ್ಮ ದಿನ ನಿತ್ಯದ ಬದುಕಿನಲ್ಲಿ ಪರಸ್ಪರ ಒಂದಿಷ್ಟು ಭಾವಗಳಲ್ಲಿ ಏರಿಳಿತವಾದಾಗ ಮಾತ್ರ ಮಾತು ಸ್ವಲ್ಪ ಹಿಂದಡಿಯಿಟ್ಟು, ಮೌನ ಒಂದು ಹೆಜ್ಜೆ ಮುಂದೆ ಬಂದಿರುತ್ತದೆ. ಭಾವನೆಗಳ ಮಹಾಪೂರ ಒಮ್ಮೆಲೇ ಹರಿಯಲಾರಂಭಿಸಿದಾಗ, ಒಡಲಾಳದ ಮಾತುಗಳೆಲ್ಲಾ ಬೇಲಿ ಹಾರಿ ನಾಮುಂದು ತಾಮುಂದು ಎಂದು ಪೈಪೋಟಿಯಲ್ಲಿ ಬರಲು ತಯಾರಾಗಿ ನಿಂತು ಬಿಡುತ್ತವೆ. ಅದೇ ಸಮಯದಲ್ಲಿ ನಮ್ಮ ಒಳ ಅಂತರಂಗದ ಮನಸ್ಸು "ಮಾತು ಸಾಕು" ಎಂಬ ಸಂದೇಶವನ್ನು ತೀವ್ರವಾಗಿ ಕಳುಹಿಸ ಬೇಕು. ಅಂತರಂಗವೆಂಬ ಈ ಹೈ ಕಮ್ಯಾಂಡ್ ನ ನಿರ್ದೇಶನವನ್ನು ಮೀರುವ ಧೈರ್ಯ ನಮ್ಮ ಹೊರ ಮನಸ್ಸಿಗೆ ಇರದ ಕಾರಣ, ಹೊರಗೆ ಜಿಗಿಯಲು ಅಣಿಯಾಗಿ ಕುಳಿತಿದ್ದ ಎಲ್ಲಾ ಮಾತುಗಳೂ ಸಪ್ಪೆ ಮುಖದಿಂದ ವಾಪಸ್ಸು ಒಳಗೆ ಹೋಗಲೇ ಬೇಕಾಗುತ್ತದೆ. ಅಂತಹುದೇ ಒಂದು ಅದ್ಭುತ ಕ್ಷಣದಿಂದಲೇ ನನ್ನ ಮನಸ್ಸು "ಮಾತು" ಎಂಬ ಮಹಾ ಶಬ್ದದ ಸುತ್ತಲೂ ಸುತ್ತಾಡುತ್ತಾ ಅವಲೋಕನ ಆರಂಭಿಸಿದ್ದು. ನಿರಂತರವಾಗಿ ಯಾವುದಾದರೂ ಒಂದು ವಿಷಯದ ಬಗ್ಗೆ ನಿಲ್ದಾಣಗಳೇ ಇಲ್ಲದ ಬಸ್ಸಿನಂತೆ ಸದಾ ಬಡಬಡಿಸುತ್ತಿದ್ದ ಬಾಯಿ ಎಂದಾದರೂ ವಿಶ್ರಾಂತಿ ಬಯಸಬಹುದೇ ಎಂಬ ಚಿಂತನೆಗೆ ತೊಡಗಿಕೊಂಡಿತು. :-)


ನನ್ನ ಪರಿಧಿಯ ಸುತ್ತಲೂ ಒಂದೇ ಒಂದು ಸಾಸಿವೆ ಕಾಳಿಗೂ ಜಾಗವಿಲ್ಲದಂತೆ ಹಬ್ಬಿ, ಬೆಳೆದು, ನಳನಳಿಸುತ್ತಿದ್ದ ಮಾತಿನ ಗಿಡಗಳ ಗುಂಪಿನಲ್ಲಿ, ನನಗೆ ಒಂದೇ ಒಂದು ಹೆಜ್ಜೆ ಹಿಂದುಗಡೆಯೇ, ಶಬ್ದವೇ ಇಲ್ಲದಂತೆ, ಘನ ಗಂಭೀರವಾಗಿ "ಮೌನ"ವೂ ವಾಸಿಸುತ್ತಿದೆ ಎಂಬುದು ನನಗೆ ತಿಳಿದೇ ಇರಲಿಲ್ಲ. ಅಂತರಂಗದ ನಿರ್ದೇಶನವನ್ನು ಪಾಲಿಸಲು ಆರಂಭಿಸಿದ ದಿನದಿಂದ ನನಗೆ ಮೌನದ ಮುಖ ಈಗ ಸ್ಪಷ್ಟವಾಗಿ ಕಾಣತೊಡಗಿದೆ. ನನ್ನ ಸುತ್ತು ಮುತ್ತಲಿನ, ಪ್ರಕೃತಿ ಮಾತೆಯ ಅನೇಕ ಅದ್ಧೂರಿಗಳನ್ನೂ, ವೈಚಿತ್ರ್ಯಗಳನ್ನೂ, ಕಣ್ಣಿಗೆ ತುಂಬಿಕೊಳ್ಳುವ ಆಚರಣೆ ಜಾರಿಗೆ ಬಂದಿದೆ. ನಾನೇಕೆ ಮೌನವಾಗಿರಬೇಕು ಎಂದುಕೊಂಡಾಗ ನನಗೆ ಪ್ರಕೃತಿಯೇ ಸ್ಫೂರ್ತಿಯಾಗಿದ್ದಾಳೆ. ಮಾನವನ ಎಲ್ಲಾ ಅತ್ಯಾಚಾರಗಳನ್ನೂ ಸಹಿಸಿಕೊಂಡು, ಅದೇ ಸ್ನಿಗ್ದ ಮುಗುಳುನಗೆ ಬೀರುತ್ತಾ, ಮೌನವಾಗಿ ಹಸಿರು ಹಸಿರಾಗಿ ನಳನಳಿಸುತ್ತಿರುವ ತಾಯಿ ನನಗೆ ಚೇತೋಹಾರಿಕೆಯನ್ನು ಕೊಟ್ಟಿದ್ದಾಳೆ. ಅಷ್ಟಕ್ಕೂ ನಾವು ಅನವಶ್ಯಕವಾಗಿ ಏಕೆ ಮಾತಾಡಬೇಕು ಎಂಬುದನ್ನು ಮನಸ್ಸು ಈಗ ಯೋಚಿಸ ತೊಡಗಿದೆ. ಪ್ರಕೃತಿ ಮಾತೆ, ಸೂರ್ಯ, ಚಂದ್ರ ಎಲ್ಲರೂ ಸದ್ದಿಲ್ಲದೆ ತಮ್ಮ ತಮ್ಮ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರಲ್ಲವೇ? ಹೊರಗಿನ ಪ್ರಪಂಚಕ್ಕಿಂತ ನಾನು ನಮ್ಮೊಳಗೇ ನೋಡಿಕೊಂಡಾಗ, ನಮ್ಮ ದೇಹದ ಒಳಗೆ ಆಗುವ ಎಲ್ಲಾ ವ್ಯಾಪಾರವೂ ನಮ್ಮ ಅರಿವಿಗೇ ಬರದೇ ದಿನದ ೨೪ ಘಂಟೆಗಳೂ ಅನವರತ ನಡೆಯುತ್ತಿಲ್ಲವೇ..? ಅವರೇನಾದರೂ ತಮ್ಮ ಕೆಲಸವನ್ನು ಸುಮ್ಮನೆ ಅನವಶ್ಯಕವಾಗಿ ಮಾತಾಡುತ್ತಾ ಜಗತ್ತಿಗೆಲ್ಲಾ ಸಾರುತ್ತಿದ್ದಾರೆಯೇ? ಇದಕ್ಕಿಂತ ಒಳ್ಳೆಯ ಉದಾಹರಣೆ ನಮಗೆ ಬೇರೆಲ್ಲೂ ಸಿಕ್ಕಲಾರದು. ಪ್ರಕೃತಿಯ ಕೆಲಸದ ಮುಂದೆ ನಾವೆಂತಹ ಹುಲು ಮಾನವರು, ಯಾವುದಕ್ಕೂ ಸಮರಲ್ಲ ಎನ್ನುವುದನ್ನು ಡಿವಿಜಿಯವರು ತಮ್ಮ "ಕಗ್ಗ"ದಲ್ಲಿ ಹೀಗೆಂದಿದ್ದಾರೆ :


ಇಳೆಯಿಂದ ಮೊಳಕೆಯೊಡೆವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ

ಬೆಳಕೀವ ಸೂರ್ಯ ಚಂದ್ರರದೊಂದು ಸದ್ದಿಲ್ಲ

ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ||


ಹೀಗೆ ನಮಗೆ ಅತ್ಯಂತ ಅವಶ್ಯಕತೆ ಇರುವುದನ್ನು ಸದ್ದಿಲ್ಲದೆ ಕೊಡುತ್ತಾ, ಅದ್ಭುತವಾದ ಕಾರ್ಯಗಳನ್ನು ಮಾಡುತ್ತಿರುವವರು ಮಾತೇ ಆಡದೆ ಮೌನವಾಗಿಯೇ ಇಲ್ಲವೇ? ಮತ್ತೆ ನಾವೇಕೆ ಇಷ್ಟೊಂದು ಮಾತಾಡುತ್ತೇವೆ?
ನಾನೀಗ ಹೇಳ ಹೊರಟಿರುವುದು ಮಾತನ್ನೇ ಆಡಬಾರದೆಂದು ಅಲ್ಲ. ಅವಶ್ಯಕವಿದ್ದಷ್ಟು ಮಾತ್ರ ಮಾತು ಆಡಬೇಕು ಎಂಬ ಅಂಶವನ್ನು ಒತ್ತು ಕೊಟ್ಟು ಮನವರಿಕೆ ಮಾಡಿಸುವ/ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.

"ಮಾತು" ನಮ್ಮ ಜೀವನದ ಅತಿ ಮುಖ್ಯವಾದ ಒಂದು ಆಯಾಮ. ನಾವು ಯಾವ ವಿಷಯವನ್ನೇ ಮಾತಾಡಲಿ ಆ ಮಾತಿನಲ್ಲಿ ಸತ್ವ, ಅರ್ಥ, ತೂಕ ಎಲ್ಲವೂ ಇರಬೇಕು. ಆರಿಸಿಕೊಳ್ಳುವ ಪ್ರತಿಯೊಂದು ಪದವೂ ಇನ್ನೊಬ್ಬರ ಮನಸ್ಸಿಗೆ ನೋವಾಗದ ಹಾಗೆ ಇರಬೇಕು. ಶಬ್ದ ಭಂಡಾರದ ಒಡೆಯ ಭಗವಂತ, ನಾವು ಅದನ್ನು ಎರವಲು ಪಡೆದು ಉಪಯೋಗಿಸುತ್ತಿದ್ದೇವೆಂಬ ಒಂದೇ ಒಂದು ಚಿಕ್ಕ ಅಂಶ ನಮ್ಮ ಮಸ್ತಿಶ್ಕದಲ್ಲಿ ಕುಳಿತರೆ ಸಾಕು, ನಮ್ಮ ನಾಲಿಗೆಗೆ ತಾನಾಗೇ ನಿಯಂತ್ರಣ ಬರುತ್ತದೆ. ನಮ್ಮ ಹಿಂದಿನವರೂ ಕೂಡ ಈ ಬೋಧನೆಯನ್ನು ನೂರಾರು ತರದಲ್ಲಿ ನಮಗೆ ತಿಳಿಸಿ ಹೇಳಿದ್ದಾರೆ. ಆದರೆ ನಾವು ಮಾತು ಶುರು ಮಾಡಿಬಿಟ್ಟೆವೆಂದರೆ ಸಾಕು ಅದು ಲಂಗು ಲಗಾಮು ಇಲ್ಲದೆ ಓಡುತ್ತಲೇ ಇರುತ್ತದೆ. "ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು" ಎನ್ನುವುದು ಒಂದು ನಾಣ್ಣುಡಿ. ಅದರ ಅರ್ಥವನ್ನು ನಾವು ಮಾಡಿಕೊಂಡರೆ, ಮಾತು ನಮ್ಮ ನಾಲಿಗೆಯನ್ನು ಸ್ಪ್ರಿಂಗ್ ಬೋರ್ಡ್ ಮಾಡಿಕೊಂಡು ಹೊರಗೆ ಧುಮುಕುವ ಮೊದಲು ಈ ಮಾತು ಆಡುವ ಅವಶ್ಯಕತೆ ಇದೆಯೇ ಎಂದೊಮ್ಮೆ ಆಲೋಚಿಸಿದರೆ ಮೇಲೆ ಹೇಳಿದ ನಾಣ್ಣುಡಿಯಂತೆ, ಹತ್ತು ಮಾತುಗಳ ಬದಲು ಒಂದೇ ಒಂದು ಮುತ್ತಿನಂತಹ ಮಾತು ಹೊರಬರಬಹುದು. ಅಲ್ಲಿಗೆ ನಾವು ೯ ಅನವಶ್ಯಕ ಮಾತುಗಳನ್ನು ಉಳಿಸಿದಂತಾಗುತ್ತದೆ.


ಸತ್ವಯುತವಾಗಿ, ಪ್ರಿಯವಾಗಿ ಮಾತನಾಡುವುದೂ ಕೂಡ ಒಂದು ಕಲೆ. ಪ್ರಿಯಂವದರಾಗುವುದು ಅಷ್ಟೇನೂ ಕಠಿಣವಲ್ಲದ ಕಾರ್ಯ. ಮನಸ್ಸೆಂಬ ಒಂದು ಬೃಹತ್ ಕಾರ್ಯಾಗಾರದಲ್ಲಿ ಸಾಕಷ್ಟು ಕೋಶಗಳಿವೆ. ಈ ಕೋಶಗಳಲ್ಲಿ ನಾವೇ ಜನ್ಮದಾರಾಭ್ಯ ತುಂಬಿಸಿಕೊಳ್ಳುತ್ತಾ ಬಂದಿರುವ ವೈವಿಧ್ಯ, ಅಸಂಖ್ಯಾತ ಕಡತಗಳಿವೆ. ಸಂದರ್ಭೋಚಿತವಾಗಿ, ಸನ್ನಿವೇಶದ ಕಳೆಕಟ್ಟುವಂತೆ ಮಧುರವಾದ ಮಾತುಗಳಾಡುವುದೂ ಕೂಡ ತುಂಬಾ ಮುಖ್ಯ.

ನಾವು ಆಡುವ ಮಾತುಗಳು ಹೆಚ್ಚು ಪರಿಣಾಮಕಾರಿಯಾಗುವುದು ನಮ್ಮ ಧ್ವನಿಯ ಏರಿಳಿತಗಳಿಂದ. ಆಡುವ ಮಾತುಗಳು ಬರೀ ಆಡಂಬರವಾಗಿರದೆ, ಅರ್ಥಪೂರ್ಣವಾಗಿರಬೇಕು. ನಮ್ಮ ಮಾತಿನ ಮೇಲಿನ ನಿಯಂತ್ರಣ ನಮ್ಮ ಮನಸ್ಸಿನ ಭಾವನೆಗಳೊಂದಿಗೆ ಜೋಡಿಸಲ್ಪಟ್ಟಿದೆ. ಮನಸ್ಸು ಪರಿಶುದ್ಧವಾಗಿ, ಭಾವ ಸಂಯಮತೆ ಇದ್ದಾಗ, ಮಾತುಗಳೂ ಕೂಡ ಮಧುರವಾಗಿ, ಧ್ವನಿಯ ಏರಿಳಿತಗಳು ಸುಗಮವಾಗಿ ಸಂಗೀತದಂತೆ ಕೇಳಿಸುತ್ತದೆ. ಆದರೆ ನಮ್ಮ ಭಾವ ಮಲಿನವಾಗಿದ್ದಾಗ, ಅಂದರೆ ಕೋಪ, ಉದ್ರೇಕದಿಂದ ಆವರಿಸಿಕೊಂಡಿದ್ದಾಗ, ಮಾತುಗಳೂ ಕೂಡ ಅರ್ಥಪೂರ್ಣವಾಗಿರದೆ, ಧ್ವನಿಯ ಏರಿಳಿತವೂ ಕೂಡ ಕರ್ಕಶವಾಗಿರುತ್ತದೆ.

ನಮ್ಮ ಪೂರ್ವಿಕರು ಮಾತನ್ನಾಡುವ ಕಲೆಯನ್ನು ರೂಡಿಸಿಕೊಳ್ಳಬೇಕೆಂದೂ, ಮಾತು ಅದೆಷ್ಟು ಪ್ರಮುಖವಾದದ್ದು ಎಂಬುದನ್ನೂ ನೀತಿಶತಕಗಳ ಮೂಲಕವೂ, ಶರಣರ ವಚನಗಳ ಮೂಲಕವೂ ತಿಳಿಸಿರುತ್ತಾರೆ. ಭತ್ರೃಹರಿಯ ಶತಕ "ಕೇಯೂರಾ ವಿಭೂಷಯಂತಿ ಪುರುಷಂ ಹಾರಾ ಚಂದ್ರೋಜ್ವಲಾ:" .. ಎಂಬುದರಲ್ಲಿ ಮೈ ತುಂಬಾ ತೊಟ್ಟ ಆಭರಣಗಳೂ, ಸ್ನಾನವೂ, ಸುಗಂಧ ದ್ರವ್ಯ ಲೇಪನವೂ ಯಾವುದೂ ನೀನಾಡುವ ನಲ್ನುಡಿಯ ನಾಲಿಗೆಗೆ ಸಮವಲ್ಲ, ಮಾತಿನೊಡವೆಯ ಮುಂದೆ ಬೇರೆಲ್ಲಾ ಒಡವೆಗಳೂ ಕುಂದುವುವು ಎಂದಿದ್ದಾರೆ. ಚಾಣಕ್ಯ ಪಂಡಿತನ ಚಾಣಕ್ಯ ನೀತಿದರ್ಪಣದಲ್ಲಿ "ಪ್ರಿಯ ವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವ: | ತಸ್ಮಾತ್ ತದೇವ ವಕ್ರವ್ಯಂ ವಚನೇ ಕಾ ದರಿದ್ರತಾ?" ಅಂದರೆ ಒಳ್ಳೆಯ ಮಾತುಗಳನ್ನು ಕೇಳಿದಾಗ ಎಲ್ಲರೂ ಸಂತಸಪಡುವರಾದ್ದರಿಂದ ಒಳ್ಳೆಯದನ್ನೇ ಮಾತನಾಡು ಎಂದಿದ್ದಾರೆ. ಯಾರು ಮಾತು, ಮನಸ್ಸು, ದೇಹದಲ್ಲಿ ಶುದ್ಧರಾಗಿರುತ್ತಾರೋ ಅವರು ಸಜ್ಜನರು ಅವರ ಸಂಗವ ಮಾಡಬೇಕು ಎಂದು ಸರ್ವಜ್ಞ ಹೇಳಿದ್ದಾರೆ. ನಮ್ಮ ದಾಸ ಪರಂಪರೆಯಲ್ಲೂ ಹೀಗೆ ಅನೇಕ ಉದಾಹರಣೆಗಳಿವೆ. "ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ..." ಎಂಬ ಪುರಂದರ ದಾಸರ ಪದದಲ್ಲಿ ಅನವಶ್ಯಕ ಮಾತುಗಳನ್ನು ಆಡದೆ ಹರಿಯ ಸ್ಮರಣೆ ಮಾಡುತ್ತಾ ಸದ್ಗತಿ ಪಡೆಯಬೇಕೆಂದು ಹೇಳುತ್ತಾ ಮಾತಿನ ಮಹತ್ವವನ್ನು ಸಾರಿದ್ದಾರೆ.

{ಭರ್ತೃಹರಿ ಶತಕ ಮತ್ತು ಚಾಣಕ್ಯ ನೀತಿದರ್ಪಣ ವಿವರಣೆ - ಶ್ರೀ ಹಂಸಾನಂದಿ ಅವರ "ಹಂಸನಾದ" ಪುಸ್ತಕದ ಸಹಾಯದಿಂದ. ಅವರಿಗೆ ಧನ್ಯವಾದಗಳು ತಿಳಿಸುತ್ತಾ... :-) }