Monday, March 29, 2010

ಪುಸ್ತಕ ಪರಿಚಯ - ೫

ಮುಕ್ತಿ :

ಕಾದಂಬರಿ ಆರಂಭವೇ... "ನಾನು ಏನೂ ಮಾಡ್ತಿಲ್ಲ, ಮುದುಕಿಯಾಗ್ತಿದೀನಿ..." ಎಂದುಲಿಯುವ ಅಮೃತಾಳ ಮಾತು ಒಮ್ಮೆಲೇ ನನ್ನನ್ನು ದಿಗ್ಭ್ರಮೆಗೊಳಿಸಿತು... ತ್ರಿವೇಣಿಯವರೇನಾದರೂ ನನ್ನ ಮನಸ್ಸಿನ ತಾಕಲಾಟಗಳನ್ನೋದಿ ಬರೆದರಾ ಎಂಬಂತೆ......

ಕಪ್ಪಗಿದ್ದವರಿಗೆ ಚೇಳು ಕಡಿದರೆ ವಿಷವೇರುವುದಿಲ್ಲವೆಂಬ ರತ್ನಳ ಮಾತು ನಮ್ಮ ಸಮಾಜ, ಕಪ್ಪಗಿರುವವರನ್ನೂ, ಕುರೂಪಿಗಳನ್ನೂ ನಡೆಸಿಕೊಳ್ಳುವ ರೀತಿಯನ್ನು ಲೇಖಕಿ ಎಷ್ಟು ಚೆನ್ನಾಗಿ ಬಿಚ್ಚಿಟ್ಟಿದ್ದಾರೆ. ಬದುಕಿನಿಂದ ಏನನ್ನೂ ಬಯಸಬಾರದು. ಬದುಕು ಏನು ಕೊಟ್ಟರೂ ಸ್ವೀಕರಿಸುತ್ತೇನೆ... ಆಸೆಯೇ ಇಲ್ಲದಿದ್ದರೆ ನಿರಾಸೆ ಎಲ್ಲಿಂದ ಬರುವುದು?..... ಎಂಥಹ ಮುತ್ತಿನಂತಹ ಮಾತುಗಳನ್ನೂ ಹೇಳಿದ್ದಾರೆ ಕಥೆಯ ಪಾತ್ರದ ಮೂಲಕ.

ಎಷ್ಟೇ ಹಸಿವಾದರೂ ಉಪವಾಸವಾದರೂ ಸಾಯುತ್ತೇನೆ, ಆದರೆ ಕದ್ದು ಮಾತ್ರ ತಿನ್ನುವುದಿಲ್ಲ ಎಂದು ನಾಯಕಿ ಅಮೃತಾಳ ಹತ್ತಿರ ಹೇಳಿಸುವಾಗ ಲೇಖಕಿ, ನಮಗೆ ಅಮೃತಾಳ ದಿಟ್ಟತನ, ನೇರನುಡಿ, ಸ್ವಚ್ಛ ಮನಸ್ಸನ್ನು ಬಿಂಬಿಸುತ್ತಾರೆ.

ಮುವ್ವತ್ತು ದಾಟಿದರೂ ಮದುವೆಯಾಗದ ಅಮೃತಾ ತಮ್ಮನ ಸಂಸಾರದ ಜೊತೆ ಮುಂಬೈಗೆ ಬಂದು ನೌಕರಿ ಹುಡುಕಿಕೊಂಡು ಅಲ್ಲಿ ಕೇಶವನನ್ನು ಪ್ರೀತಿಸುತ್ತಾಳೆ. ಎಲ್ಲವೂ ಸರಾಗವಾಗಿ ಸಾಗುತ್ತಿರುವಾಗ, ಹಟಾತ್ತಾಗಿ ಕೇಶವ ತನಗೆ ಮದುವೆಯಾಗಿದೆಯೆಂದು ಹೇಳುವುದರ ಮುಖಾಂತರ ಕಥೆಗೊಂದು ತಿರುವು ಬರತ್ತೆ. ಮೋಸದಿಂದ ಕ್ಷಯ ರೋಗಿಯನ್ನು ಮದುವೆ ಮಾಡಿಬಿಟ್ಟು, ತಂದೆ - ಮಗಳಿಬ್ಬರೂ ಕೇಶವನ ಮನಸ್ಸಿಗೆ ಘಾಸಿ ಮಾಡಿರುತ್ತಾರೆ. ಆದರೆ ಕೇಶವನನ್ನು ಪ್ರೀತಿಸಿದ ಅಮೃತಾ ಹೆಂಡತಿ ಬದುಕಿರುವಾಗ, ತಾನು ಕೇಶವನನ್ನು ಮದುವೆಯಾಗುವುದಿಲ್ಲವೆಂದು ಬಿಡುತ್ತಾಳೆ. ಕೊನೆಯಲ್ಲಿ ಅಮೃತಾ ಬಯಸಿದಂತೆಯೇ, ಒಂಟಿಯಾಗಿ (ವಿಧುರನಾಗಿ)ಕೇಶವ ಅವಳ ಬಳಿ ತಿರುಗಿ ಬರುವುದರೊಂದಿಗೆ ಕಥೆ ಸುಖಾಂತ್ಯವಾಗುತ್ತದೆ.

ಕಥೆಯಲ್ಲಿ ಕೇಶವನಿಗೆ ಮೊದಲು ಮದುವೆಯಾಗಿತ್ತೆಂಬ ತಿರುವು ಅವಶ್ಯಕವಿತ್ತೋ ಇಲ್ಲವೋ... ಆದರೆ ಇದೇ ತಿರುವಿನಿಂದ ಅಮೃತ ಮದುವೆಗೆ ನಿರಾಕರಿಸುವುದರ ಮುಖಾಂತರ, ಮತ್ತೊಮ್ಮೆ ಲೇಖಕಿ, ನಾಯಕಿಯ ವ್ಯಕ್ತಿತ್ವವನ್ನು ಗಟ್ಟಿಯಾದ ಮತ್ತು ತುಂಬಾ ಸ್ವಾರ್ಥರಹಿತವೆಂಬಂತೆ ಚಿತ್ರಿಸಿದ್ದಾರೆ.


ಬೆಳ್ಳಿಮೋಡ :

ತ್ರಿವೇಣಿಯವರ ಪುಸ್ತಕಗಳೆಲ್ಲವು ಶ್ರೇಷ್ಠವಾದವುಗಳೇ ಆದರೂ, ಅದರಲ್ಲಿ ಚಲನಚಿತ್ರವಾಗಿ, ನಮ್ಮ ನೆನಪಿನಂಗಳದಲ್ಲಿ ಆಳವಾಗಿ ಬೇರೂರಿರುವ ಕೆಲವು ಕಥೆಗಳಲ್ಲಿ ಬೆಳ್ಳಿಮೋಡವೂ ಒಂದು.

ಇದರ ಕಥಾನಾಯಕಿ ಇಂದಿರಾ ಸಾಮಾನ್ಯ ರೂಪದವಳಾದರೂ, ಉನ್ನತ ವ್ಯಕ್ತಿತ್ವ ಹೊಂದಿದವಳು. ಅಕಸ್ಮಾತ್ತಾಗಿ ತುಂಬಾ ವರ್ಷಗಳ ನಂತರ ಹುಟ್ಟಿದ ತಮ್ಮನಿಗಾಗಿ ತನ್ನ ಜೀವನ ಮುಡಿಪಾಗಿಡ ಬಯಸುವ ಹೆಣ್ಣು. ತಾನು ಮನಸಾರ ಪ್ರೀತಿಸಿದ ಯುವಕನ ದುರ್ಬಲ ವ್ಯಕ್ತಿತ್ವ ಕಂಡು ಮದುವೆಯನ್ನು ನಿಲ್ಲಿಸಲು ತಾನೇ ತಂದೆಯ ಹತ್ತಿರ ಮಾತನಾಡುವ ದಾಷ್ಟೀಕದ ಹೆಣ್ಣು....

ಕಾಲು ಮುರಿದುಕೊಂಡು ಕುಳಿತ ನಾಯಕನ ಸೇವೆ ನಿರ್ವಂಚನೆಯಿಂದ ಮಾಡಿದಾಗ, ನಾಯಕ ಅವಳ ವ್ಯಕ್ತಿತ್ವಕ್ಕೆ ಮನಸೋತರೂ, ಅವನನ್ನು ವರಿಸಲು ಒಲ್ಲೆನೆಂದು ತನ್ನ ಧೃಡ ನಿರ್ಧಾರ, ಆತ್ಮ ಗೌರವ ಮೆರೆಸುವ ಹೆಣ್ಣು... ಸ್ವಾರ್ಥ ಮೆರೆದ ನಾಯಕ ಜೀವನದಲ್ಲಿ ಇಂದಿರಳಂತಹ ಅಪರಂಜಿಯನ್ನು ಕಳೆದುಕೊಂಡು ಬಿಡುತ್ತಾನೆ....

ಎರಡು ಕಥೆಗಳನ್ನೂ ಹೋಲಿಸಿದಾಗ ತ್ರಿವೇಣಿಯವರು ತಮ್ಮ ಕಾಲದಲ್ಲಿಯೇ ಹೆಣ್ಣು ದಿಟ್ಟೆ, ಬದುಕನ್ನು ಎದುರಿಸಬಲ್ಲ ಚಾಣಾಕ್ಷೆ, ಸ್ವತಂತ್ರ್ಯವಾಗಿ ವಿಚಾರ ಮಾಡಬಲ್ಲವಳು, ಸಮರ್ಪಕ ನಿರ್ಧಾರಗಳನ್ನು ತೆಗೆದು ಕೊಳ್ಳಬಲ್ಲವಳು ಎಂಬುದನ್ನು ಕಥಾ ಪಾತ್ರಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ತ್ರಿವೇಣಿಯವರ ಕಾಲ ಘಟ್ಟದಲ್ಲಿ ಈ ಪ್ರಯತ್ನ ಅತ್ಯಂತ ಶ್ಲಾಘನೀಯ........

Tuesday, March 9, 2010

ಸಂಬಂಧಗಳ ಸುಳಿಯಲ್ಲಿ...

ನಾವು ಕೊಲ್ಕತ್ತಾದಲ್ಲಿದ್ದಾಗ ಪ್ರತೀ ವರ್ಷ ಊರಿಗೆ ಬರುತ್ತಿದ್ದೆವು.... ೩೬ ಘಂಟೆಗಳು ರೈಲಿನಲ್ಲಿ ಪಯಣಿಸಿ ಬರುವಾಗ ಪ್ರತೀ ಬಾರಿಯೂ ಹೊಸ ಹೊಸ ಪರಿಚಯಗಳಾಗುತ್ತಿತ್ತು. ಹಾಗೇ ಒಂದು ಸಲ ನಾವು ವಾಪಸ್ಸು ಹೋಗುವಾಗ, ಮದ್ರಾಸಿನಲ್ಲಿ ಕೋರಮಂಡಲ್ ಎಕ್ಸ್ ಪ್ರೆಸ್ಸ್ ಹತ್ತಿ ಕೆಲವು ಘಂಟೆಗಳೊಳಗೆ ನಾನು ರೈಲು ಹತ್ತುವ ಮೊದಲು ನನ್ನ ಕೈಯಲ್ಲಿಟ್ಟುಕೊಂಡಿದ್ದ, ೨೫೦ ರೂಗಳನ್ನು ಕಳೆದುಕೊಂಡು ಬಿಟ್ಟಿದ್ದೆ. ನಾನು ಕುಳಿತಿದ್ದ ಆಸನದ ಕೆಳಗೆ, ಸಾಮಾನುಗಳನ್ನು ಸರಿಸಿ, ಆತಂಕದಿಂದ ಹುಡುಕುತ್ತಿದ್ದಾಗ, ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ಒಂದು ಸಂಸಾರ (ತಮಿಳು ಮಾತನಾಡುತ್ತಿದ್ದರು - ಗಂಡ, ಹೆಂಡತಿ ಮತ್ತು ಎರಡು ಗಂಡು ಹುಡುಗರು), ಕರಿದ ಚಕ್ಕುಲಿಯಂತದೇನೋ ತಿನ್ನುತ್ತಾ, ನನ್ನನ್ನೇ ನೋಡುತ್ತಿದ್ದರು. ಕೊನೆಗೆ ಕಣ್ಣಲ್ಲಿ ನೀರು ತುಂಬಿ, ನಾನು ನಿರಾಸೆಯಿಂದ ಎದ್ದಾಗ, ಆ ಮಹಿಳೆ (ಮಾಮಿ) ನನ್ನನ್ನು "ಎನ್ನಮ್ಮಾ ತೇಡರೆ"? ಎಂದು ಕೇಳಿದರು.... ಸರಿ ನನ್ನ ಗಂಗಾ-ಕಾವೇರಿ ಪ್ರವಾಹ ಹರಿಯಲು ಯಾರಾದರೊಬ್ಬರ ಸಾಂತ್ವನ ನುಡಿ ಬೇಕಾಗಿತ್ತು.... ನಾನು ಕಥೆಯೆಲ್ಲಾ ಹೇಳಿದೆ. ಅವರು ನನ್ನನ್ನು ಮಾತನಾಡಿಸುತ್ತಾ, ನನ್ನ ದು:ಖ ಮರೆಸುವ ಪ್ರಯತ್ನ ಮಾಡುತ್ತಿದ್ದರು. ಮಾತಿನ ಮಧ್ಯದಲ್ಲಿ ನಾನು ಸೀಮೆ ಎಣ್ಣೆ ಸ್ಟೋವಿನಲ್ಲಿ ಅಡುಗೆ, ತಿಂಡಿ ಎಲ್ಲಾ ಮಾಡಿ, ಕೆಲಸಕ್ಕೆ ಹೋಗುತ್ತೇನೆಂಬ ವಿಷಯ ಕೇಳಿ, ಅವರು ತುಂಬಾ ಮರುಗಿದರು. ಆ ಮಾಮಿ ರಿಸರ್ವ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಮನೆ ವಿಳಾಸ ಕೊಟ್ಟು ಕರೆದರು. ಊರಿಗೆ ಹಿಂತಿರುಗಿ ನಾನು ಅವರ ಕರೆ ಮರೆತೇ ಬಿಟ್ಟಿದ್ದೆ. ಒಂದು ದಿನ ಲೇಕ್ ಮಾರ್ಕೆಟ್ ನಲ್ಲಿ ಮಾಮಿಯ ಪತಿಯ ಭೇಟಿಯಾಯಿತು ಮತ್ತು ಅವರು ನಮ್ಮನ್ನು ಬಲವಂತದಿಂದ ಮನೆಗೆ ಕರೆದೊಯ್ದರು. ಮಾಮಿ ತನ್ನ ಹತ್ತಿರ ಇದ್ದ ಒಂದು ಗ್ಯಾಸ್ ಸಿಲಿಂಡರ್ ಕೂಡ ಕೊಟ್ಟರು. ಕೆಲಸಕ್ಕೆ ಹೋಗುವ ಹುಡುಗಿ, ಎಷ್ಟು ಕಷ್ಟ ಪಡುತ್ತೀ ಎಂದು ಅಕ್ಕರೆ ತೋರಿದರು.... ಅಲ್ಲಿಂದ ಸುಮಾರು ೫ ವರ್ಷಗಳ ಕಾಲ ನಾನು ಬೇರೆ ಹೊಸ ಗ್ಯಾಸ್ ಸಂಪರ್ಕ ತೆಗೆದುಕೊಳ್ಳದೆಲೇ (ರೇಷನ್ ಕಾರ್ಡ್ ಇಲ್ಲದೆ ಹೊಸ ಸಂಪರ್ಕ ಕೊಡುತ್ತಿರಲಿಲ್ಲ ಮತ್ತು ನಮಗೆ ಕೊಲ್ಕತ್ತದ ರೇಷನ್ ಕಾರ್ಡ್ ಇರಲಿಲ್ಲ) ಅವರ ಆ ಒಂದು ಸಿಲಿಂಡರ್ ನ್ನೇ ಇಟ್ಟುಕೊಂಡು, ಗ್ಯಾಸ್ ತರಿಸಿಕೊಂಡು ಉಪಯೋಗಿಸುತ್ತಿದ್ದೆ. ಹೀಗೆ ರೈಲಿನಲ್ಲಿ ಬರಿಯ ಕೆಲವು ಘಂಟೆಗಳಲ್ಲಿ ಆದ ಪರಿಚಯ, ಸ್ನೇಹ ಮುಂದೆ ಒಂದು ಆಪ್ತ ಸಂಬಂಧಕ್ಕೇ ತಳಪಾಯ ಹಾಕಿತ್ತು. ಅವರು ನನ್ನ ಮಗ ಹುಟ್ಟಿದಾಗ ಕೂಡ ನನಗೆ ತುಂಬಾ ಸಹಾಯ ಮಾಡಿದ್ದರು. ಇದನ್ನು ಮೊದಲು ಬರಿಯ ಸ್ನೇಹವೆಂದೇ ಅಂದುಕೊಂಡಿದ್ದರೂ ಕೂಡ ಆತ್ಮೀಯತೆ ಬೆಳೆದಂತೆ ಸ್ನೇಹ ಯಾವುದೋ ಒಂದು ಅವಿನಾಭಾವ ಸಂಬಂಧ ಕಲ್ಪಿಸಿಬಿಟ್ಟಿತ್ತು. ಈ ಆತ್ಮೀಯ ಬಂಧವು ಸ್ನೇಹವೇ ಆದರೂ, ಇದನ್ನು ಸಂಬಂಧದ ಚೌಕಟ್ಟಿಲ್ಲದೆ ನೋಡಲು ನನಗೆ ಸಾಧ್ಯವಾಗಲಿಲ್ಲ.... ಅವರು ನನಗೆ ತಾಯಿಯಂತೆಯೂ, ಹಿರಿಯಕ್ಕನಂತೆಯೂ ಪ್ರೀತಿ ತೋರಿದರು.... ಇಲ್ಲಿ ವಯಸ್ಸಿನ ಅಂತರವಿಲ್ಲದೆ ಶುದ್ಧ ಸ್ನೇಹವಿತ್ತು ಮತ್ತು ಆ ಸ್ನೇಹದ ಚೌಕಟ್ಟಿಗೆ ಪ್ರೀತಿಯ ಬಂಧನವಿತ್ತು, ಗೌರವವಿತ್ತು.....

ಮತ್ತೊಂದು ಪ್ರಸಂಗ ಮತ್ತು ನನ್ನ ಮತ್ತಿಬ್ಬರು ಬಸ್ ಸ್ನೇಹಿತರ ವಿಚಾರ ಹೇಳದಿದ್ದರೆ ಹೇಗೆ... ನಾನಾಗ ಗರ್ಭಿಣಿಯಾಗಿದ್ದೆ. ನನ್ನ ಕಛೇರಿ ನಮ್ಮ ಮನೆಯಿಂದ ಸುಮಾರು ೫ ಕಿ.ಮೀ ದೂರ ಇತ್ತು. ಮನೆಯಿಂದ ೫ ನಿಮಿಷದ ನಡಿಗೆ ಬಸ್ ನಿಲ್ದಾಣಕ್ಕೆ. ನಾನು ಪಾರ್ಕ್ ಸ್ಟ್ರೀಟ್ ಎಂಬ ಸ್ಥಳಕ್ಕೆ ಹೋಗ ಬೇಕಾಗಿತ್ತು, ದಿನವೂ.. ಮನೆ ಹತ್ತಿರದಿಂದ (ಲೇಕ್ ರೋಡ್ ಸ್ಟಾಪ್) ಒಂದು ಮಿನಿ ಬಸ್ ನೇರವಾಗಿ ನನ್ನನ್ನು ನನ್ನ ಕಛೇರಿಯ ಮುಂದೆ ಇಳಿಸುತ್ತಿತ್ತು.... ಎಷ್ಟೇ ಬೇಗ ಎದ್ದು ಒದ್ದಾಡಿದರೂ ನನಗೆ ೧೦ ನಿಮಿಷ ಮುಂಚೆ ಮನೆ ಬಿಡುವುದಾಗುತ್ತಿರಲಿಲ್ಲ ಮತ್ತು ದಿನವೂ ನಾನು ಬಸ್ ಸ್ಟಾಪ್ ತಲುಪುವ ವೇಳೆಗೆ, ಬಸ್ ತುಂಬಿರುತ್ತಿತ್ತು.... ನಾನು ನಿಂತೇ ೫ ಕಿ.ಮೀ ಪಯಣಿಸಬೇಕಾಗಿತ್ತು.... ಕೆಲವು ದಿನಗಳು ಇದನ್ನು ಗಮನಿಸುತ್ತಿದ್ದ ಒಬ್ಬರು ತಮಿಳು, ಮಧ್ಯವಯಸ್ಕರು, ನನ್ನನ್ನು ಕರೆದು ತಾವು ಕುಳಿತಿದ್ದ ಸೀಟು ಬಿಟ್ಟುಕೊಟ್ಟರು. ನಾನು ಸಂಕೋಚದಿಂದಲೇ ಕುಳಿತೆ.... ಅದೇ ಶುರು ನೋಡಿ... ಅಲ್ಲಿಂದ ಒಂದು ಶುಭ್ರ, ಸಪ್ರೇಮ ಸ್ನೇಹ ಆ ’ಮಾಮ’ನಿಗೂ ನನಗೂ ಏರ್ಪಟ್ಟಿತು. ಕೊಂಚ ಬೇಗ ಬರೋಕೇನಮ್ಮಾ ಎಂದು ದಿನವೂ ಅಕ್ಕರೆಯಿಂದ ರೇಗುವರು.... ಒಂದು ಸೀಟು ನನಗಾಗಿ ಕಾದಿರಿಸಿರುತ್ತಿದ್ದರು. ಇಲ್ಲದಿದ್ದರೆ ಆ ದಿನ ಅವರ ಪ್ರಯಾಣ ನಿಂತೇ ಆಗುತ್ತಿತ್ತು... ಕೆಲವು ದಿನಗಳ ನಂತರ ಇವರ ಜೊತೆ ಇನ್ನೊಬ್ಬರು ’ಮಾಮ’ ಕೂಡ ಸೇರಿದರು. ಇಬ್ಬರೂ ಸೇರಿ ಮೂವರು ಕುಳಿತುಕೊಳ್ಳುವ ಒಂದು ಸೀಟಿನಲ್ಲಿ ಜಾಗ ಹಿಡಿದು ಕುಳಿತಿರುತ್ತಿದ್ದರು.... ನಾನು ಮಹಾರಾಣಿಯಂತೆ ಬಸ್ ಹೊರಟ ನಂತರ ಬಂದು ಹತ್ತಿ ಕಾಯ್ದಿಟ್ಟ ಜಾಗದಲ್ಲಿ ಕುಳಿತು, ಅವರೊಡನೆ ಹರಟುತ್ತಾ ಪಯಣಿಸುತ್ತಿದ್ದೆ.... ಕೊನೆ ಕೊನೆಗೆ ನನಗಾಗಿ ಅವರು ಮೊದಲ ಬಸ್ ಬಿಟ್ಟು, ಎರಡನೆ ಬಸ್ಸಿಗಾಗಿ ಕಾಯುತ್ತಾ ನಿಲ್ಲುತ್ತಿದ್ದರು..... ಇದೂ ನಿಷ್ಕಲ್ಮಶವಾದ ಸ್ನೇಹವೇ... ಆದರೆ ಸ್ನೇಹದಲ್ಲಿ ಎಲ್ಲೂ ಬರೆಯದ, ಮೇಲ್ಮುಖಕ್ಕೆ ಕಾಣಿಸದ, ಒಂದು ಅಜ್ಞಾತವಾದ ಸಂಬಂಧವಿತ್ತು. ಅವರು ನನ್ನನ್ನು ತಮ್ಮ ತಂಗಿಯಾಗಿ, ಮಗಳಾಗಿ ಪ್ರೀತಿಸಿದರು, ಅಕ್ಕರೆ ತೋರಿದರು... ಯಾವುದೇ ರಕ್ತ ಸಂಬಂಧವಲ್ಲವೆಂದರೂ ಅಲ್ಲೊಂದು ಸ್ನೇಹ ಸಂಬಂಧವಿತ್ತು.... ಈಗ ಅವರು ಎಲ್ಲಿದ್ದಾರೋ, ಏನೋ ನನಗೆ ಗೊತ್ತಿಲ್ಲ... ಆದರೆ ಅವರು ತೋರಿದ ಆ ಅಕ್ಕರೆ, ಆ ನಿಷ್ಕಲ್ಮಶವಾದ ಸ್ನೇಹ ನಾನೆಂದೂ ಮರೆಯಲಾಗುವುದೇ ಇಲ್ಲ.....

ಇದೆಲ್ಲಾ ಸಂಸಾರದ, ಬಳಗದವರಲ್ಲದವರ ಜೊತೆಗಿನ ಸ್ನೇಹ ಸಂಬಂಧಗಳಾದವು... ಆದರೆ ನಮ್ಮದೇ ಬಂಧು ಬಳಗಗಳಲ್ಲಿ... ಪುಟ್ಟ ಸಂಸಾರದಲ್ಲೇ ಸ್ನೇಹವಿದೆಯಲ್ಲವೇ..? ಎಲ್ಲಕಿಂತ ಮೊದಲು ತಾಯಿ-ಮಗುವಿನದು... ಗರ್ಭದಲ್ಲೇ ಹೇಗೆ ತಾಯಿ ತನ್ನ ಮಗುವಿನ ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆಸಿಕೊಳ್ಳುತ್ತಾಳೋ... ಹಾಗೇ ಅದರ ಜೊತೆಗೆ ಸ್ನೇಹ ಸಂಬಂಧವೂ ಬೆಳೆದುಬಿಟ್ಟಿರುತ್ತೆ.... ಮಗು ಹುಟ್ಟಿದಾಗಿನಿಂದಲೂ ತಾಯಿಯ ಸ್ಪರ್ಶವನ್ನು ಗುರುತಿಸುವಂತೆಯೇ, ತಾಯಿಯ ಮುಗುಳುನಗುವನ್ನೂ ಗುರುತಿಸುತ್ತದೆ. ನಗುವೇ ಸ್ನೇಹದ ಹಾಡು....ಅಲ್ಲವೇ? ಮಗು ಬೆಳೆಯುತ್ತಾ ಬಂದಂತೆ ಜೊತೆಗೇ ಬೆಳೆಯುವ ಪ್ರೀತಿಯೂ, ಬಂಧನವೂ ಸ್ನೇಹವೇ ಆಗಿರುತ್ತದೆ. ಇಲ್ಲಿ ತಾಯಿ ತನ್ನ ಮಗುವನ್ನು ತಾನು ಪೂಜಿಸುವ, ಆರಾಧಿಸುವ ಭಗವಂತನಂತೆ ಕಾಣುತ್ತಾಳೆ... ಮಕ್ಕಳು ದೊಡ್ಡವರಾದಂತೆಲ್ಲಾ ತಾಯಿಯಲ್ಲಿ ತನ್ನ ಅತ್ಯಂತ ಆಪ್ತ, ನಿಕಟ ಸ್ನೇಹಿತರನ್ನೇ ಕಾಣುತ್ತಾರೆ..... ತನ್ನ ಸ್ನೇಹಿತರ ಜೊತೆಗಿನ ಆಟ, ಶಾಲೆಯಲ್ಲಿನ ಪಾಠ, ತನ್ನ ಬೇಕು ಬೇಡವುಗಳೆಲ್ಲಕ್ಕೂ ತಾಯಿಯನ್ನೇ ಆಶ್ರಯಿಸುತ್ತಾ...ಅತ್ಯಂತ ನಿಕಟವಾದ ಸ್ನೇಹ ಬಂಧನ ಬೆಳೆಸಿಕೊಂಡು ಬಿಟ್ಟಿರುತ್ತೆ.... ಮಕ್ಕಳ ಬಾಲ ಲೀಲೆಗಳಲ್ಲಿ ತಾಯಿ ತನ್ನ ಬಾಲ್ಯವನ್ನೂ, ತಾರುಣ್ಯದಲ್ಲಿ ತನ್ನ ಭಾವನೆಗಳ ಏರುಪೇರಿನ ನೆರಳುಗಳನ್ನೂ ಕಾಣುತ್ತಾಳೆ.... ಎಲ್ಲಿ ಈ ಸಸ್ನೇಹ ಸಂಬಂಧವಿರುತ್ತದೋ ಅಲ್ಲಿ, ತಾಯಿ ಮಕ್ಕಳ ಸಂಬಂಧ ಗಟ್ಟಿಯಾದ ಅಡಿಪಾಯದ ಮೇಲೆ ಸುಭದ್ರವಾದ ಕಟ್ಟಡವಾಗಿರುತ್ತದೆ....ಹಾಗೇ ತಂದೆ-ಮಕ್ಕಳ ನಡುವೆ ಕೂಡ ಆರೋಗ್ಯಕರ, ನಿಕಟ ಸ್ನೇಹವಿಲ್ಲದಿದ್ದರೆ, ಸಂಬಂಧ ಗಟ್ಟಿಯಾಗುವುದಿಲ್ಲ.....

ಹೀಗೇ ಈ ಸ್ನೇಹ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ಒಳ್ಳೆಯ ಸ್ನೇಹಿತರಾಗುವುದರ ಮೂಲಕ, ಅತ್ಯಂತ ಆತ್ಮೀಯವಾಗುತ್ತದೆ. ಅಣ್ಣ-ತಮ್ಮ, ಅಕ್ಕ-ತಂಗಿಯರ ಮಧ್ಯೆ ಪ್ರೀತಿಯಿಲ್ಲದಿರುವುದಿಲ್ಲ, ಆದರೆ ಎಲ್ಲಿ ಸ್ನೇಹವಿರುತ್ತದೋ ಅಲ್ಲಿ, ಸಂಬಂಧ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ಅಕ್ಕ ತನ್ನ ತಮ್ಮ, ತಂಗಿಯರ ವ್ಯಕ್ತಿತ್ವ ವಿಕಾಸಕ್ಕೂ, ಬೆಳವಣಿಗೆಗೂ ಯಾವಾಗಲೂ ಆಪ್ತ ಸೂಚನೆ, ಸಲಹೆಗಳನ್ನು ಕೊಟ್ಟು, ಸ್ನೇಹಿತೆಯಂತಿರಬಹುದು. ಇಲ್ಲಿ ಸಂಬಂಧಕ್ಕಿಂತ ಸ್ನೇಹ ಹೆಚ್ಚು ಮುಖ್ಯವಾಗುತ್ತದೆ..... ಈ ಥರಹದ ಸ್ನೇಹ ಸಂಬಂಧಗಳಲ್ಲಿ, ಅಣ್ಣ-ತಂಗಿಯರ ಸ್ನೇಹ ಮಾತ್ರ ಅತ್ಯಂತ ಅಪೂರ್ವವಾದದ್ದು... ಏಕೆಂದರೆ ತಂಗಿ ತನ್ನ ಅಣ್ಣನಲ್ಲಿ ಬರಿಯ ಅಣ್ಣ ಮಾತ್ರವಲ್ಲ, ತಂದೆ, ಮಾರ್ಗದರ್ಶಕ, ಅಧ್ಯಾಪಕ, ಆತ್ಮೀಯ ಮತ್ತು ತನ್ನ ಸಂದೇಹಗಳನ್ನು ನಿವಾರಿಸುವ ಒಬ್ಬ ಆರೋಗ್ಯಕರ ವ್ಯಕ್ತಿತ್ವವುಳ್ಳ, ಆದರ್ಶ ಭಾವನೆಗಳುಳ್ಳ ವ್ಯಕ್ತಿಯೆಂದು ನಂಬಿರುತ್ತಾಳೆ.... ಅಕ್ಕ ತಮ್ಮನ ಪ್ರೀತಿಯಲ್ಲಿ, ಸಂಬಂಧದಲ್ಲಿ ಒಂಥರಾ ತಾಯಿ-ಮಗುವಿನ ಛಾಯೆ ಮೇಲ್ನೋಟಕ್ಕೇ ಕಂಡ ಬರುತ್ತದೆ, ಆದರೆ ಅಣ್ಣ-ತಂಗಿಯರ ಸಂಬಂಧದಲ್ಲಿ ಅದು ಬೇರೆಯೇ ಇರುತ್ತದೆ. ಅಣ್ಣ-ತಂಗಿಯರ ಸಂಬಂಧ ಮಾತ್ರ ಅತ್ಯಂತ ಸೂಕ್ಷ್ಮವಾದ, ಮಧುರವಾದ, ಅನುರಾಗದಿಂದ ಕೂಡಿದ, ಎಲ್ಲಾ ಸಂಬಂಧಗಳಿಗೂ ಮೀರಿದ ಸ್ನೇಹದ ಸಂಬಂಧ....

ಕೊನೆಯದಾಗಿ ಸಂಬಂಧಗಳಲ್ಲಿಯ ಸ್ನೇಹದ ಮಾತು ಎಂದರೆ ಗಂಡ-ಹೆಂಡತಿಯರ ನಡುವಿನದು.... ಹಿರಿಯರೊಪ್ಪಿ ನಿಶ್ಚಯಿಸಿದ ಮದುವೆಯೋ, ಪ್ರೇಮ ವಿವಾಹವೋ.. ಮದುವೆಯ ವಿಧಾನ ಅಥವಾ ರೀತಿ ಇಲ್ಲಿ ಮುಖ್ಯವಾಗುವುದಿಲ್ಲ. ಮದುವೆಯ ನಂತರದ ಗಂಡ-ಹೆಂಡತಿಯರ ಸಂಬಂಧ ಬೆಸೆಯುವ ಸ್ನೇಹ ಮುಖ್ಯವಾಗುತ್ತದೆ. ಎಲ್ಲದಕ್ಕಿಂತ ಮೊದಲು ಇಬ್ಬರ ನಡುವೆ ಸ್ನೇಹ ತಂತು ಬೆಸೆಯಲೇಬೇಕು. ಒಬ್ಬರಲ್ಲಿ ಒಬ್ಬರು ತಮ್ಮ ಆತ್ಮೀಯ ಸ್ನೇಹಿತರನ್ನು ಕಂಡಾಗಷ್ಟೇ... ಸಂಬಂಧ ಹೆಚ್ಚು ಅರ್ಥಪೂರ್ಣವಾಗುವುದು. ಯಾವುದೇ ವಿಷಯಗಳ ಬಗ್ಗೆಯೂ ಕಟ್ಟುಪಾಡಿಲ್ಲದೇ ಚರ್ಚಿಸಬಹುದಾದರೆ ಅದು ಅಣ್ಣ-ತಂಗಿಯರ ಮಧ್ಯೆ ಮತ್ತು ಗಂಡ-ಹೆಂಡತಿಯರ ಮಧ್ಯೆ ಮಾತ್ರ.... ಹೆಣ್ಣು ತನ್ನ ಎಲ್ಲಾ ಬೇಕು ಬೇಡಗಳ ನಿಗಾ ವಹಿಸುವ, ತನ್ನ ಭಾವನೆಗಳನ್ನು ಗೌರವಿಸುವಂತಹ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಬಯಸುತ್ತಾಳೆ. ತನ್ನ ಸಂಗಾತಿ ಸಂದರ್ಭಗಳಿಗೆ ತಕ್ಕಂತೆ ತನ್ನನ್ನು, ಅಣ್ಣನಂತೆ ಅರ್ಥ ಮಾಡಿಕೊಂಡು - ತಂದೆಯಂತೆ ಸಂತೈಸಿ, ಗೆಳೆಯನಂತೆ ಚರ್ಚಿಸಬೇಕೆಂದು, ಬಯಸುತ್ತಾಳೆ... ಹೆಣ್ಣು ಮಾತ್ರ ತನ್ನ ಗಂಡನಿಗೆ, ಅಕ್ಕನಾಗಿ, ತಾಯಿಯಾಗಿ, ಗೆಳತಿಯಾಗಿ ವಿಧವಿಧ ಪಾತ್ರಗಳನ್ನು ನಿಭಾಯಿಸಬೇಕಾಗಿಲ್ಲ... ಗಂಡು ಕೂಡ ಹಾಗೇ ಮಾಡಿದಾಗಷ್ಟೇ ಸಂಬಂಧ ಕೊನೆತನಕ ಉಳಿಯುವುದು. ಸಂಬಂಧ ಉಳಿಯಬೇಕೆಂದರೆ ಎಲ್ಲಕ್ಕಿಂತ ಮೊದಲು ಇಬ್ಬರಲ್ಲೂ ಸ್ವಾರ್ಥ ರಹಿತ, ಯಾವುದೇ ನಿರೀಕ್ಷಣೆಯಿಲ್ಲದ ಪವಿತ್ರ ಸ್ನೇಹ ಏರ್ಪಡಬೇಕು ಮತ್ತು ಈ ಸ್ನೇಹದ ಭದ್ರ ಕೋಟೆಯ ಒಳಗೆ, ಹೊಸ ಜೀವನದ ಸುಂದರ ಅರಮನೆ ಕಟ್ಟಬೇಕು. ಆ ಅರಮನೆಯ ತೋಟದಲ್ಲಿ ಪ್ರೇಮದ ಹೂಗಳು ಅರಳಬೇಕು....

ಕೆಲವು ದಿನಗಳ ಹಿಂದೆ ನಾನು " ಸಿಂಪಥಿ ಮತ್ತು ಎಂಫಥಿ "ಯ ಮಧ್ಯದ ತೆಳುವಾದ ಗೆರೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೆ ... ನಿಘಂಟಿನ ಅರ್ಥಗಳನ್ನು ಬಿಟ್ಟು, ಇನ್ನೂ ಸ್ವಲ್ಪ ಆಳವಾಗಿ ಯೋಚಿಸಿದಾಗ, ನನಗೆ ನಿಜಕ್ಕೂ ಅಚ್ಚರಿಯಾಗಿತ್ತು. ಅಬ್ಬಾ..!! ನನ್ನ ಜೀವನದಲ್ಲೇ ಇದರ ಅನುಭೂತಿ ಎಷ್ಟು ಚೆನ್ನಾಗಿ ಆಗಿದೆಯೆಂದು.... ಮಧುರ ಸ್ನೇಹದ ಸಂಬಂಧಗಳೇರ್ಪಟ್ಟಾಗಲೇ ನಮಗೆ ಎಂಫಥಿಯ ನಿಜವಾದ ಅರ್ಥದ ಅನುಭವವಾಗುವುದು... ಸಿಂಪಥಿ ಮತ್ತು ಎಂಫಥಿಯ ಜೊತೆ ಇನ್ನೊಂದು ಶಬ್ದವನ್ನೂ ಜೋಡಿಸಬಹುದು ಅದು... "ಕಂಪ್ಯಾಶನ್".......ಮೂಲ ಅರ್ಥ ನೋಡಿದರೆ ಒಂದೇ ಅನ್ನಿಸುವುದಾದರೂ. ಇದನ್ನು ನಾವು ಮಾನವೀಯತೆಯ ಜೊತೆ ಹೆಚ್ಚು ಜೋಡಿಸಬಹುದು... ಆಂಗ್ಲದ ಒಂದು ಮಾತು... "Give compassion and you will receive understanding....Give unconditional love and you will become infinite".... ಅದರರ್ಥವನ್ನು ವಿಶ್ಲೇಷಿಸಿದಾಗ ಮಾನವೀಯತೆಯ ಮತ್ತು ಸ್ನೇಹದ ಹಸ್ತವನ್ನು ನಾವು ಮತ್ತೊಬ್ಬರೆಡೆ ಚಾಚಿದಾಗ, ನಮಗೆ ಬದುಕಿನ ನಿಜವಾದ ಅರ್ಥ ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ... ಹಾಗೂ ಯಾವುದೇ ನಿರೀಕ್ಷಣೆಯಿಲ್ಲದ, ಕಟ್ಟುಪಾಡುಗಳಿಲ್ಲದ, ಮುಕ್ತವಾದ ಪ್ರೀತಿಯನ್ನು ಸ್ನೇಹದೊಂದಿಗೆ ಬೆರೆಸಿ ಎಲ್ಲರಿಗೂ ಹಂಚಿದರೆ, ನಾವು ಈ ಬ್ರಹ್ಮಾಂಡದಲ್ಲಿರುವ ಪ್ರಚಂಡ ಶಕ್ತಿಯೊಂದಿಗೆ ವಿಲೀನಗೊಳ್ಳುತ್ತೇವೆ.... ಅಂದರೆ ಪ್ರೀತಿಯಂತೆ ನಾವು ಸ್ನೇಹವನ್ನೂ ಪವಿತ್ರ (divine) ಎನ್ನಬಹುದು... ಇಷ್ಟೆಲ್ಲ ಸ್ನೇಹದ ವಿಚಾರ ನಾನು ಬರಿಯ ಮನುಷ್ಯ ಸಂಬಂಧಗಳಿಗೆ ಹೇಳಿದೆ... ಆದರೆ ಇಲ್ಲಿ ನನ್ನ ಮಾತುಗಳನ್ನು ಮುಗಿಸುವ ಮುನ್ನ...

"ನಮ್ಮ ನಿಮ್ಮಗಳ ನಡುವಿನದಲ್ಲದ, ನಾವು ನಂಬುವ ಭಗವಂತನ ಜೊತೆಗಿನ ನಮ್ಮ ಅಂತರಂಗದ ಸಂಬಂಧವನ್ನೂ ನಾವು ಸ್ನೇಹವೆಂದೇ ಕರೆಯುತ್ತೇವಲ್ಲವೇ....
ನಮ್ಮ ಆರಾಧ್ಯ ದೈವವೇ ನಮ್ಮ ಅಂತರಂಗದ ಹಾಗೂ ಅತ್ಯಂತ ನಿಕಟ ಸ್ನೇಹಿತನಲ್ಲವೇ....
ನಾವು ನಮ್ಮ ದೈವದ ಜೊತೆಗೆ ತೋರುವ ನಮ್ಮ ಪ್ರೀತಿ, ಭಕ್ತಿ, ಅನುಬಂಧ ಎಲ್ಲವೂ ಸ್ನೇಹ ಮಯವೇ ಅಲ್ಲವೇ...
ನಾವು ಮೆಚ್ಚಿ ಆರಾಧಿಸುವ ಭಗವಂತನಿಂದ ನಾವು unconditional ಪ್ರೀತಿ/ಸ್ನೇಹ ಪಡೆದುಕೊಳ್ಳುತ್ತಿರುವಾಗ, ನಾವೂ ಸ್ನೇಹಕ್ಕೆ ಪುಟ್ಟ ಸಂಬಂಧದ ಎಳೆ ಬೆರೆಸಿ, ಸ್ನೇಹವನ್ನು ವಿಶ್ವವ್ಯಾಪಿಯಾಗಿಸಬೇಕೆಂಬುದೇ ನನ್ನ ಅಭಿಪ್ರಾಯ....."

ರಕ್ತ ಸಂಬಂಧಗಳಲ್ಲೇ ನಾವು ಸ್ನೇಹವನ್ನು ಅನುಮೋದಿಸುವಾಗ.... ಸ್ನೇಹಿತರ ಜೊತೆಗೆ ಸಂಬಂಧ ಗುರುತಿಸಿಕೊಳ್ಳುವುದರಲ್ಲಿ ನನಗೆ ಯಾವ ತಪ್ಪೂ ಕಾಣುವುದಿಲ್ಲ. ಸ್ನೇಹಿತರ ಜೊತೆಗೂ ನಾವು ಭಾವನಾತ್ಮಕವಾಗಿ ಸಂಬಂಧ ಕಲ್ಪಿಸಿಕೊಂಡಾಗಲೇ ಆತ್ಮೀಯತೆ ಹೆಚ್ಚುವುದು ಮತ್ತು ಮುಕ್ತವಾಗಿ ಚರ್ಚಿಸಲು ಅವಕಾಶವಾಗುವುದು...... ರಕ್ತ ಸಂಬಂಧಗಳಲ್ಲಿರುವ ನಿರೀಕ್ಷಣೆ ಸ್ನೇಹದಲ್ಲಿ ಇರುವುದಿಲ್ಲವೆಂಬುದೊಂದು ಮುಖ್ಯ ಕಾರಣವಾದರೆ, "ಸ್ನೇಹ"ದ ಕಡಲು "ರಕ್ತ ಸಂಬಂಧ"ದ ಕಡಲಿಗಿಂತ ಅತ್ಯಂತ ವಿಶಾಲವಾದುದು ಮತ್ತು ಕಡಲಿಗಿಳಿಯುವ ಪ್ರತೀ ದೋಣಿಗೂ, ತೇಲಲು ಬೇಕಾದಷ್ಟು ವಿಸ್ತಾರ ಇರುವುದು....

ನನ್ನ ಮಿತ್ರರೊಬ್ಬರ ಸಂದೇಶ...."ಆಕಾಶಕ್ಕಿಂತ ಅಗಲವಾದುದು ಆಸೆ....
ನೀರಿಗಿಂತ ತೆಳುವಾದುದು ಉಸಿರು....
ಹೂವಿಗಿಂತ ಮೃದುವಾದುದು ಮನಸು...
ವಜ್ರಕ್ಕಿಂತ ಅಮೂಲ್ಯವಾದುದು ಪ್ರೀತಿ....
ಪ್ರೀತಿಗಿಂತ ಪವಿತ್ರವಾದುದು ಸ್ನೇಹ".....

ಪ್ರತಿಯೊಬ್ಬರ ಜೀವನದಲ್ಲೂ "ಸ್ನೇಹ" ಎಷ್ಟು ಅವಶ್ಯಕ ಮತ್ತು ಸ್ನೇಹವೇ ಉಸಿರು ಎಂಬುದನ್ನು ಸರಳವಾಗಿ ಮೇಲಿನ ಕೆಲವು ಸಾಲುಗಳು ಅರ್ಥ ಬಿಡಿಸಿಟ್ಟಿವೆ.... ಇದನ್ನು ಕಳುಹಿಸಿದ ನನ್ನ ಸ್ನೇಹಿತರಿಗೆ, ಸಸ್ನೇಹ ವಂದನೆಗಳನ್ನು ಸಲ್ಲಿಸುತ್ತಾ...

ಹೀಗೆ ನಾವು ನಮ್ಮ ಬದುಕಿನ ಎಲ್ಲಾ ಕೊಂಡಿಗಳನ್ನೂ ಸ್ನೇಹಕ್ಕೇ ಜೋಡಿಸಿದರೆ, ಎಲ್ಲವೂ ಮತ್ತು ಎಲ್ಲರೂ ’ಸಂಬಂಧಗಳೇ’.... ಸಂಬಂಧಗಳಿಲ್ಲದ ಪ್ರೀತಿ ಸ್ನೇಹವಲ್ಲ, ಸ್ನೇಹವಿಲ್ಲದ ಬದುಕು ಬದುಕಲ್ಲ"... ನಾ ಮೇಲೆ ಹೇಳಿದ ಎಲ್ಲಾ ಸಂಬಂಧಗಳಲ್ಲೂ ಸ್ನೇಹವಿದ್ದೇ ಇರುವುದರಿಂದಲೇ ನಮಗೆ ನಿಷ್ಕಲ್ಮಶವಾದ ಪ್ರೀತಿಯ ಸಂಬಂಧಗಳು ಸಿಗುತ್ತವೆ.

Tuesday, March 2, 2010

ಸಂಬಂಧಗಳ ಸುಳಿಯಲ್ಲಿ..............

ದಿನ ಸಂಬಂಧಗಳಲ್ಲೇ ಅತ್ಯಂತ ಮಧುರವಾದ, ನವಿರಾದ, ಪವಿತ್ರವಾದ, ಜೀವಜಲವಾದ, ಸ್ನೇಹದ ಬಗ್ಗೆ ಬರೆಯುತ್ತಿದ್ದೇನೆ. ಸ್ನೇಹ ಸಿಹಿಗಾಳಿ, ಸುಗಂಧವಿದ್ದಂತೆ... ಪಸರಿಸಿದೆಡೆಯೆಲ್ಲಾ ಘಮ ಘಮ.... ಎಲ್ಲರ ಮನಸ್ಸನ್ನೂ ಸ್ನೇಹದ ಸಿಂಚನದಿಂದ ತಂಪೆರೆಯುತ್ತದೆ. ಉದ್ರಿಕ್ತ ವಾತಾವರಣವನ್ನು ತಂಪಾಗಿಸುತ್ತದೆ..... ನೆಮ್ಮದಿ ಕೊಡುತ್ತದೆ. ..... ಸಂತಸ ತರುತ್ತದೆ.....

ಸ್ನೇಹಿತರ ಜೊತೆಗಿನ ಸಂಬಂಧಗಳು ನಮ್ಮ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರಬಲ್ಲದು. ಚಿಕ್ಕ ಚಿಕ್ಕ ಮಕ್ಕಳಿರುವಾಗಿನಿಂದಲೇ ನಮ್ಮದೇ ವಯಸ್ಸಿನ ಪುಟಾಣಿಗಳೊಡನೆ ನಮ್ಮ ಸ್ನೇಹದ ಪ್ರಪಂಚ ಸೃಷ್ಟಿಯಾಗಿಬಿಟ್ಟಿರುತ್ತದೆ. ನಮ್ಮ ನೆರೆ-ಹೊರೆಯಲ್ಲಿರುವ ಚಿಕ್ಕ-ದೊಡ್ಡ ಮಕ್ಕಳೆಲ್ಲರೂ ವಯಸ್ಸಿನ ಅಂತರವಿಲ್ಲದೇ ಸ್ನೇಹಿತರಾಗಿ ಬಿಟ್ಟಿರುತ್ತಾರೆ. ಆದರೆ ಸ್ನೇಹ ಲೋಕದಲ್ಲಿ ಒಳಬರುವ ಹಾಗೂ ಹೊರಹೋಗುವ ಸ್ನೇಹಿತರ ಲೆಕ್ಕವಿಡುವುದು ಸ್ವಲ್ಪ ಕಷ್ಟದ ಕೆಲಸವಾಗಿ ಬಿಟ್ಟಿರುತ್ತದೆ. ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲ್ಲಿ ಪಯಣಿಸುತ್ತಾ..... ಪ್ರೀತಿಯೆಂಬ ದೇವರಿರುವ ಗುಡಿಯನ್ನು ಸೇರುವುದನ್ನೇ ಬಾಳಿನ ಗುರಿಯಾಗಿಸಿಕೊಂಡಾಗಲೇ ನಮ್ಮ ಜೀವನದ ಪ್ರತಿಯೊಂದು ಕ್ಷಣವೂ ಅತ್ಯಂತ ಆಪ್ತವಾಗಿ... ಅಕ್ಕರೆಯಿಂದ ಕೂಡಿದ ಬದುಕಾಗಿ ಮಾರ್ಪಾಡುಗುವುದು....

ಎಷ್ಟೋ ಸಲ ನಮ್ಮ ಬಾಲ್ಯ ಸ್ನೇಹಿತರು ನಮಗೆ ಸ್ಕೂಲು, ಕಾಲೇಜುವರೆಗೂ ಜೊತೆಯಲ್ಲೇ ಇರುವ ಅದೃಷ್ಟ ಕೂಡ ಇರುತ್ತದೆ. ಮುಂದೆ ಓದು ಮುಗಿಸಿ, ಕೆಲಸ ಮಾಡುವಾಗ ಕೂಡ ಸಂಬಂಧ ಮುಂದುವರೆಯುತ್ತಲೇ ಇರುತ್ತದೆ. ಸ್ನೇಹ ಸಂಬಂಧ ಮಾತ್ರ ಅತ್ಯಂತ ಸುಖಕರವಾದದ್ದು. ಇಲ್ಲಿ ಲಿಂಗ ಭೇದವಿಲ್ಲದ, ನಿರ್ಮಲವಾದ, ನಿಷ್ಕಲ್ಮಶವಾದ ಸ್ವಚ್ಛ ಪ್ರೀತಿ, ಅದಮ್ಯ ವಿಶ್ವಾಸ, ನಂಬಿಕೆಗೆ ಮಾತ್ರ ಪ್ರಾಧಾನ್ಯತೆ ಇರುತ್ತದೆ.

ಸ್ನೇಹ ನಮಗೆ ಜೀವನದ ಎಲ್ಲಾ ಮಜಲುಗಳಲ್ಲೂ, ಎಲ್ಲಾ ವಯೋಗುಣದಲ್ಲೂ ಅತ್ಯಂತ ಅವಶ್ಯಕವಾದದ್ದು. ನಮ್ಮನ್ನು ಅರಿತು, ಅರ್ಥ ಮಾಡಿಕೊಂಡು, ನಮ್ಮ ತಪ್ಪನ್ನು ತೋರಿಸಿ, ನಾವು ದು:ಖಿಗಳಾಗಿದ್ದಾಗ ನಮ್ಮನ್ನು ಸಮಾಧಾನಿಸಿ, ನಾವು ಸೋತಾಗ ನಮ್ಮನ್ನು ಹುರಿದುಂಬಿಸಿ, ನಾವು ಎಡವಿದಾಗ, ಕೈ ಹಿಡಿದು ದಾರಿ ತೋರಿಸಿ, ಆತ್ಮ ವಿಶ್ವಾಸ ಹೆಚ್ಚಿಸಿ, ಸಕಾರಾತ್ಮಕ ಚಿಂತನೆಯಲ್ಲಿ ನಮ್ಮನ್ನು ಯಾವಾಗಲೂ ಹಿಡಿದಿಡುವ, ವ್ಯಕ್ತಿಯೇ ಸ್ನೇಹಿತ ಅಥವಾ ಸ್ನೇಹಿತೆ. ಇಲ್ಲಿ ನಮಗೆ "ಸ್ನೇಹ ಅತಿ ಮಧುರ.. ಸ್ನೇಹ ಅದು ಅಮರ... ಸ್ನೇಹವೇ ಗುಡಿಯು... ಪ್ರೀತಿಯೇ ದೇವರು.... ಎಂಬ ಕವಿತೆಯ ನೆನಪಾಗದೇ ಇರದು. ಸ್ನೇಹವೆಂಬ ಗುಡಿಯಲ್ಲಿ ಪ್ರೀತಿಯೆಂಬ ದೇವರನ್ನಿಟ್ಟು ಪೂಜೆ ಮಾಡಿದಲ್ಲಿ, ಜೀವನ ಅತ್ಯಂತ ಸುಖಕರ... ನಾವೆಲ್ಲರೂ ಪವಿತ್ರ ಗುಡಿಗಳನ್ನು ಕಟ್ಟುತ್ತಲೇ ಇದ್ದಾಗ ಮಾತ್ರವೇ ಸ್ನೇಹವೆಂಬ ಗುಡಿಯಲ್ಲಿ ಪ್ರೀತಿಯೆಂಬ ದೇವರ ಪೂಜೆ, ಶಾಶ್ವತವಾಗಿ ಅತ್ಯಂತ ವೈಭವಯುತವಾಗಿ ನಡೆಯುತ್ತಲೇ ಇರುತ್ತದೆ.

ಸ್ನೇಹ ಎನ್ನುವ ಪವಿತ್ರ ಬಂಧ ಕಾಲ, ದೇಶ, ಜಾತಿ, ಮತ, ಧರ್ಮ, ಲಿಂಗ ಎಲ್ಲವನ್ನೂ ಮೀರಿದ್ದು ಮತ್ತು ಬಂಧ - ಸಂಬಂಧ ಗಟ್ಟಿಯಾಗಿ ಉಳಿಯುವುದು, ಎರಡು ಹೃದಯಗಳು ಪ್ರತಿಫಲಾಪೇಕ್ಷೆಯಿಲ್ಲದೆ, ಪ್ರೀತಿ, ನಂಬಿಕೆ, ವಿಶ್ವಾಸ ವ್ಯಕ್ತಪಡಿಸಿದಾಗ ಮಾತ್ರ. ಸ್ನೇಹ ಎನ್ನುವ ಭಾವನೆಯೊಂದು ಇಲ್ಲದಿದ್ದಿದ್ದರೆ, ಸಂಬಂಧ ಎನ್ನುವ ಪದ ಬರೀ ಒಡಹುಟ್ಟಿದವರ ಅಥವಾ ರಕ್ತ ಸಂಬಂಧಿಗಳಿಗೆ ಮಾತ್ರ ಸೀಮಿತವಾಗಿ ಬಿಡುತ್ತಿತ್ತು. ಸ್ನೇಹ ಹೊಸ ಹೊಸ ಸಂಬಂಧಗಳನ್ನು ಬೆಳೆಸುವ, ಮನಸ್ಸುಗಳನ್ನು ಬೆಸೆಯುವ ಮತ್ತು ಬೆಸೆದ ಮನಸ್ಸುಗಳ ವಿಚಾರ ವಿನಿಮಯ, ಪರಸ್ಪರ ಗೌರವ ಉಳಿಸುವ ಸೇತುವೆ. ಪ್ರತಿಯೊಬ್ಬ ಮನುಷ್ಯನ ಮನಸ್ಸಿನಲ್ಲೂ ಸ್ನೇಹದ ಭಾವ ಏರ್ಪಟ್ಟಾಗ ಮಾತ್ರವೇ ನಮ್ಮ ಜೀವನ ನೆಮ್ಮದಿ, ತೃಪ್ತಿ, ಸಂತೋಷ ಕಾಣಬಹುದು.

ಒಳ್ಳೆಯದೇ ಆಗಲಿ, ಕೆಟ್ಟದ್ದೇ ಆಗಲಿ ನಮ್ಮ ಭಾವನೆಗಳನ್ನು ಹಂಚಿಕೊಳ್ಳಲು, ನಮ್ಮನ್ನು ನಾವಿರುವಂತೇ ಒಪ್ಪಿಕೊಳ್ಳಲು ನಮಗೆ ಸ್ನೇಹಿತರ ಅವಶ್ಯಕತೆ ನಮ್ಮ ಬದುಕಿನುದ್ದಕ್ಕೂ ಇದೆ. ನಾನು ಕಾಲೇಜಿನಲ್ಲಿ ಓದುವಾಗ ನನಗೊಬ್ಬಳು ಸ್ನೇಹಿತೆಯಿದ್ದಳು. ಇಬ್ಬರ ಐಚ್ಛಿಕ ವಿಷಯಗಳು ಬೇರೆಯಾಗಿದ್ದರೂ.. ಸಂಗೀತ ನಮ್ಮನ್ನು ಬೆಸೆದಿತ್ತು. ಇಬ್ಬರೂ ಒಟ್ಟಿಗೇ, ಕಲಿಯುತ್ತಿದ್ದೆವು. ಆದರೆ ಆಮೇಲೆ ಇಬ್ಬರಿಗೂ ಮದುವೆಗಳಾಗಿ ಬೇರೆ ಯಾಗಿ, ಅವಳು ಗೋವಾ ಮತ್ತು ನಾನು ಕೊಲ್ಕತ್ತಾ ಸೇರಿದ್ದೆವು. ೨೫ ವರ್ಷಗಳ ನಂತರ, ಈಗ ಕಳಚಿಕೊಂಡಿದ್ದ ಕೊಂಡಿ ಮತ್ತೆ ಬೆಸೆದುಕೊಂಡಿದೆ. ನನಗಾಗಿ ಮಿಡಿಯುವ ಒಂದು ಸಹೃದಯವಿದೆಯೆಂಬ ನೆಮ್ಮದಿ ನನಗೂ... ಅವಳ ಅಂತರಂಗದ ಖುಷಿ ಹಾಗೂ ವ್ಯಥೆಗಳನ್ನು ಕೇಳಲು ನಾನಿದ್ದೇನೆಂಬ ತೃಪ್ತಿ ಅವಳಿಗೂ.... ನಾವಿಬ್ಬರೂ ದಿನದಿನವೂ ಮಾತಾಡದಿದ್ದರೂ, ನಮಗೆ ಬೇಕಾದಾಗ ಒಬ್ಬರಿಗೊಬ್ಬರು ಇದ್ದೇವೆಂಬ ಭಾವವೇ ಮುದಕೊಡುತ್ತದೆ. ಇಷ್ಟು ವರ್ಷಗಳ ನಂತರ, ಹಳೆಯ ದಿನಗಳ ನೆನಪುಗಳನ್ನು ಮೆಲುಕು ಹಾಕುವುದು ನಮ್ಮಿಬ್ಬರಿಗೂ ಅತ್ಯಂತ ಪ್ರಿಯವಾದ ಕೆಲಸ........ ಮನಸ್ಸು ಕುಗ್ಗಿದಾಗೊಮ್ಮೆ ದೂರವಾಣಿಯಲ್ಲಿ ಕೆಲವು ಮಾತುಗಳನ್ನು ಹಂಚಿಕೊಂಡಾಗ, ಮನಸ್ಸು ನಿರಾಳ. ಇದು ನನ್ನ ಅತ್ಯಂತ ಹಳೆಯ ಹಾಗೂ ಅತ್ಮೀಯ ಸ್ನೇಹ... ಹೀಗೇ ಇನ್ನೊಂದಿಬ್ಬರು ಹಳೆಯ ಗೆಳೆಯ / ಗೆಳತಿಯರಿದ್ದಾರೆ.. ಅವರೂ ಒಮ್ಮೊಮ್ಮೆ ಕರೆ ಮಾಡುವುದುಂಟು, ಆದರೆ ಇಷ್ಟು ಆಪ್ತತೆ ಯಾರಲ್ಲಿಯೂ ಮತ್ತೆ ಬೆಳೆಯಲಿಲ್ಲ.... ಆದರೂ ಶಾಲಾ / ಕಾಲೇಜುಗಳ ಸ್ನೇಹಿತರು ಕರೆ ಮಾಡಿ ಮಾತಾಡಿದಾಗ ಆಗುವ ರೋಮಾಂಚನವೇ ಒಂದು ವಿಶೇಷ ರೀತಿಯದ್ದು..... ಕೊಲ್ಕತ್ತಾದಲ್ಲಿ ಕಛೇರಿಯ ಸ್ನೇಹಿತೆಯರು... ಇಬ್ಬರು ಈಗಲೂ ಖರ್ಚು ಮಾಡಿಕೊಂಡು, ನನಗಾಗಿ ಸಮಯ ಮೀಸಲಿಟ್ಟು ಕರೆ ಮಾಡಿ ಮಾತನಾಡಿದಾಗ, ಮನಸ್ಸೆಲ್ಲಾ ಒದ್ದೆ ಒದ್ದೆ... ಸ್ನೇಹ ಎನ್ನುವ ಒಂದು ಪುಟ್ಟ ಅನುಭೂತಿ, ಹೇಗೆ ನಮ್ಮ ಇಡೀ ವ್ಯಕ್ತಿತ್ವನ್ನೇ ಹಿಡಿದು ಕರಗಿಸಿಬಿಡುತ್ತದೆ ಅಲ್ವಾ?.....

ಸ್ನೇಹ ಅತ್ಯಂತ ಪುರಾತನ ಅಸ್ಥಿತ್ವದ್ದು... ಪುರಾಣಗಳಲ್ಲೂ, ಭಾಗವತದಲ್ಲೂ, ಮಹಾಭಾರತದಲ್ಲೂ ಕೂಡ ನಿಕಟ ಹಾಗೂ ಗಾಢ ಸ್ನೇಹದ ಉದಾಹರಣೆಗಳಿವೆ..... ಶ್ರೀ ಕೃಷ್ಣ - ಸುಧಾಮರ ಸ್ನೇಹ ಹಾಗೂ ಕರ್ಣ - ದುರ್ಯೋಧನರ ಸ್ನೇಹ ಯಾವಾಗಲೂ ಹಿಂದೂ, ಇಂದೂ ಮತ್ತೂ ಮುಂದೂ ಗಟ್ಟಿಯಾಗಿ ಉಳಿಯುವಂತಹುದು..... ಸ್ನೇಹ ಬೆಳೆಯಲು ಕಾರಣವೇನೂ ಬೇಕಾಗಿಲ್ಲ. ನಾವು ವ್ಯಕ್ತಿಯನ್ನು ಪೂರ್ಣವಾಗಿ ಇಷ್ಟಪಟ್ಟೇ ಸ್ನೇಹ ಬೆಳೆಸಬೇಕೆಂದೇನೂ ಇಲ್ಲ... ಕೆಲವೊಮ್ಮೆ ಕೆಲವು ಅಪರೂಪದ ಅಭ್ಯಾಸಗಳೂ, ಗುಣಗಳೂ ಕೂಡ, ನಮ್ಮ ಸ್ವಭಾವಕ್ಕೆ ಹೊಂದಿಕೆಯಾಗದಂಥಹ ವ್ಯಕ್ತಿಗೂ ಸ್ನೇಹ ಹಸ್ತ ಚಾಚುವಂತೆ ಮಾಡುತ್ತದೆ. ವಿಲಕ್ಷಣ ಪರಿಸ್ಥಿತಿಯಲ್ಲಿ, ಅಕಸ್ಮಾತ್ತಾಗಿ ಕೂಡ ಸ್ನೇಹದ ಹೂವು ಅರಳುತ್ತದೆ.... ಆದರೆ ನಾವಾಗೇ ಇಚ್ಛೆಪಟ್ಟು ಮಾಡಿಕೊಳ್ಳುವ ಸ್ನೇಹದ ಕೊಂಡಿ ಮಾತ್ರ ಭದ್ರವಾಗಿ ಬೆಸೆದಿರುತ್ತದೆ... ಏಕೆಂದರೆ ಅಲ್ಲಿ ನಾವು ನಮ್ಮ ಸ್ನೇಹದಿಂದ ಏನೂ ನಿರೀಕ್ಷಣೆ ಇಟ್ಟುಕೊಂಡಿರುವುದಿಲ್ಲ... ಅದು ಬರಿಯ ಭಾವನಾತ್ಮಕವಾದ, ಮುದಕೊಡುವ ಸ್ನೇಹವಾಗಿರುತ್ತದೆ...

ಇದೇ ೭ನೇ ತಾರಿಖಿನ ವಿಜಯ ಕರ್ನಾಟಕದಸೂರ್ಯ ಶಿಕಾರಿಅಂಕಣದಲ್ಲಿ ಶ್ರೀ ರವಿ ಬೆಳಗೆರೆಯವರು... ನಮ್ಮ ಗೆಳೆಯರು ನಮ್ಮ ಬದುಕನ್ನು ರೂಪಿಸುತ್ತಾರೆ, ಅಭ್ಯಾಸಗಳನ್ನು ರೂಢಿಸುತ್ತಾರೆ, ಚಟಗಳನ್ನು ಕಲಿಸುತ್ತಾರೆ, ಚಿಂತನೆಯನ್ನೂ ಕಟ್ಟಿಕೊಡುತ್ತಾರೆ... ಎಂದಿದ್ದಾರೆ. ಎಷ್ಟು ಸತ್ಯವಾದ ಮಾತುಗಳು. ಒಳ್ಳೆಯ ಸ್ನೇಹಿತರು ನಮಗೇ ಅರಿವಿಲ್ಲದಂತೆ ನಮ್ಮಲ್ಲಿರುವ ದೋಷಗಳನ್ನು ಸರಿಪಡಿಸಿರುತ್ತಾರೆ..... ಅತ್ಯಂತ ಆಪ್ತ ಸಲಹೆಗಳನ್ನು ಕೊಟ್ಟಿರುತ್ತಾರೆ.... ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು, ನಾವೇ ಆಗಿರುವಂತೆ ಸ್ವೀಕರಿಸಿ, ವರ್ಷಾನುಗಟ್ಟಲೆ ಸಹಿಸಿಕೊಂಡಿರುತ್ತಾರೆ.......

ಹಿಂದೆಲ್ಲಾ ನಮಗೆ ಹೊಸ ಹೊಸ ಸ್ನೇಹಿತರನ್ನು ಹುಡುಕುವುದೇ ಒಂದು ರೋಮಾಂಚನದ ಅನುಭವವಾಗಿತ್ತು. ಈಗಲೂ ಇದೆ ಆದರೆ ಹುಡುಕಾಟದ ಮಾಧ್ಯಮಗಳು ಮಾತ್ರ ಅನೇಕ ಹಾಗೂ ಸರಳ ಮತ್ತು ಸುಲಭದವಾಗಿವೆ. ಅಂತರ್ಜಾಲದಲ್ಲಿ ನಮ್ಮ ಕಳೆದುಹೋದ ಶಿಶುವಿಹಾರದ ಸ್ನೇಹಿತರನ್ನೂ ಹುಡುಕಬಹುದು... :-) ಹಾಗೇ ಹೊಸ ಹೊಸ ಸ್ನೇಹಿತರ ಸಂಬಂಧಗಳನ್ನು ಬೆಸೆಯುವುದನ್ನೂ ಮಾಡಬಹುದು. ಅಂತರ್ಜಾಲದಂತಹ ವಿಸ್ಮಯ ಲೋಕದಲ್ಲಿ ಎಲ್ಲವೂ ಒಳ್ಳೆಯದೇ ಇದೆಯೆಂದೋ, ಎಲ್ಲರೂ ಒಳ್ಳೆಯವರೇ ಇದ್ದಾರೆಂದೋ ಹೇಳಲು ಬಾರದು. ಇಲ್ಲೂ ಇದ್ದಾರೆ ಕೀಳು ಅಭಿರುಚಿಯ ವ್ಯಕ್ತಿಗಳು... ಆದರೆ ಇಲ್ಲಿ ನಾನು ನನ್ನ ಸ್ವಂತ ಅಭಿಪ್ರಾಯ ಹಾಗೂ ಅನುಭವಕ್ಕೆ ಮಾತ್ರ ಕಟ್ಟುಪಾಡು ಮಾಡಿಕೊಂಡಿರುವುದರಿಂದ.... ನನ್ನ ಅನುಭವ ಇದುವರೆಗೂ ಸನ್ಮಾನಯುತವಾಗೇ ಇದೆ. ನನ್ನ ಅಂತರ್ಜಾಲದ ಹಿರಿಯ, ಕಿರಿಯ ಮಿತ್ರರೆಲ್ಲರೂ ಸಹೃದಯವಂತರೂ, ಒಳ್ಳೆಯ ಸಂಸ್ಕಾರವಂತರೂ, ಸಜ್ಜನರೂ ಆಗಿದ್ದಾರೆ.... ಸ್ನೇಹ ಬೆಳೆಸುವಾಗ ಹಿಂಜರಿಕೆಯಿಂದಲೇ ಆರಂಭವಾಗಿದ್ದರೂ ಕೂಡ.. ಈಗ ನಾ ಅವರನ್ನು ಅರಿವ ಪ್ರಯತ್ನದ ಮೂಲಕ, ಅವರು ನನಗೆ ಆಪ್ತ ಮಿತ್ರರುಗಳಾಗಿದ್ದಾರೆ... ನನ್ನ ಸುಖ - ದು:ಖವನ್ನು ಹಂಚಿಕೊಳ್ಳುವ , ನನಗೆ ಮಾರ್ಗದರ್ಶನ ನೀಡುವ, ನನ್ನಣ್ಣ ನನಗಿದ್ದಾರೆ..... (ಅವರೂ ನಾನೂ ಒಂದೇ ಕಾಲೇಜ್ ನಲ್ಲಿ ಓದಿದ್ದರೂ ಕೂಡ.. ಅತ್ಯಾಶ್ಚರ್ಯಕರ ರೀತಿಯಲ್ಲಿ ನಾವು ಅಂತರ್ಜಾಲದ ಮುಖಾಂತರ ಒಬ್ಬರಿಗೊಬ್ಬರು ಪರಿಚಿತರಾದೆವು) .... ಇದಲ್ಲವೇ ಜೀವನ...!!! ನಾನು ಬೇಸರ ಪಟ್ಟಾಗ, ಖೇದ ಗೊಂಡಾಗ, ದು: ಪಟ್ಟಾಗ, ನನ್ನ ನೋವು ಮರೆಸಲು ಪ್ರಯತ್ನಿಸುವ, ಮನ ಅರಳಿಸುವ ಅತ್ಯಂತ ಆತ್ಮೀಯ ತಮ್ಮನಿದ್ದಾರೆ... ಏನೂ ಬರೆಯಲು ತೋಚದೇ ಹತಾಷೆಗೊಂಡಾಗ, ಒಳ್ಳೆಯನುಡಿಮುತ್ತುಗಳನ್ನೂ, ಉತ್ಕಟ ಸಹೋದರಿ ಪ್ರೀತಿಯ ಮೆರೆಸುವ ಕವನವನ್ನೂ ಮಿಂಚಂಚೆ ಮೂಲಕ ಕಳುಹಿಸಿ, ನನ್ನನ್ನು ಬರೆಯುವಂತೆ ಪ್ರೋತ್ಸಾಹಿಸುವ, ನನ್ನ ಆಪ್ತ ಸಹೋದರ - ಸ್ನೇಹಿತ ಇದ್ದಾರೆ.... ತಮ್ಮ, ತಂಗಿಯರೇ ಇಲ್ಲದ ನನಗೆ ನಿಜವಾದ ಪುಟ್ಟ ತಮ್ಮನ ಅಕ್ಕರೆ, ಆಸೆ ತೋರಿಸಿ, ಆಗಾಗ ಕಾಲೆಳೆದು, ಹಾಸ್ಯ ಮಾಡಿ ನಗಿಸುವ, ಮೊಂಡು ವಾದ ಹೂಡುವ, ಹುಡುಗಾಟದ, ತರ್ಲೇ ತಮ್ಮನೂ ಇದ್ದಾನೆ.... ಎಲ್ಲಾ ಸ್ನೇಹ ತಂತುಗಳೂ ನನಗೆ ಅಂತರ್ಜಾಲವೆಂಬ ಮಾಯಾಲೋಕದಿಂದಲೇ ದೊರಕಿದ್ದು.... ಮತ್ತೂ... ಯಾವ ಸಂಬಂಧದ ರೂಪವನ್ನೂ ಕೊಡದಿದ್ದರೂ, ಆತ್ಮೀಯತೆ ತೋರುವ... ಓದಲು ಪುಸ್ತಕಗಳನ್ನು ಕೊಡಲೊಪ್ಪುವ, ಕಿರಿಯ ಸ್ನೇಹಿತ.... ನಿಮ್ಮ ಶೈಲಿ ಚೆನ್ನಾಗಿದೆ ಬರವಣಿಗೆ ಮುಂದುವರೆಸಿ, ಬಿಡಬೇಡಿ, ಏನಾದರೂ ಸಲಹೆ ಬೇಕಿದ್ದರೆ, ಧಾರಾಳವಾಗಿ ಕೇಳಿ ಎಂದು ಪ್ರೋತ್ಸಾಹಿಸುವ ಹಿರಿಯ ಸ್ನೇಹ ಜೀವಿಯೂ ಇದ್ದಾರೆ....

ಮುಂದುವರೆಯುವುದು.....