Saturday, September 12, 2009

ಕೊಲ್ಕತ್ತಾದಲ್ಲಿ ದುರ್ಗಾ ಪೂಜೆ



ಕೊಲ್ಕತ್ತಾದ ದುರ್ಗಾಪೂಜೆ ೧೬೦೬ರಲ್ಲಿ "ನದಿಯಾ" ಎಂಬ ಜಾಗದಲ್ಲಿ ಪ್ರಪ್ರಥಮವಾಗಿ, ಮಹಾರಾಜ ಶ್ರೀ ಕೃಷ್ಣಚಂದ್ರರಿಂದ ನಡೆಯಿತು. ೧೮೨೯ರಲ್ಲಿ ಲಾರ್ಡ್ ಬೆಂಟಿಕ್ ಕೂಡ ಪೂಜೆಯಲ್ಲಿ ಪಾಲ್ಗೊಂಡಿದ್ದನಂತೆ. ೧೯೬೦ರ ದಶಕದಲ್ಲಿ ದುರ್ಗಾ ಪ್ರತಿಮೆಗಳು ಹೊರದೇಶಕ್ಕೆ ಕೂಡ ಪೂಜೆಗೆಂದು ರವಾನಿಸಲ್ಪಟ್ಟವು. ೧೯೮೦ರ ದಶಕದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ತುಂಬಾ ಚೆನ್ನಾಗಿ ಅಲಂಕಾರ ಮಾಡಿರುವ ಪ್ಯಾಂಡಲ್ ಗೆ ಪ್ರಶಸ್ತಿ ಕೊಡಲು ಪ್ರಾರಂಭಿಸಿದರು. ಆದ್ದರಿಂದ ಇಲ್ಲೀಗ ದೊಡ್ಡ ಪೈಪೋಟಿಯೇ ನಡೆಯುತ್ತೆ.
ದುರ್ಗಾಪೂಜೆ ಪಶ್ಚಿಮ ಬಂಗಾಳದ ಅತಿ ದೊಡ್ಡ ಹಾಗೂ ಮುಖ್ಯ ಹಬ್ಬ. ಮಹಾಲಯ ಅಮಾವಾಸ್ಯೆಯಂದು ನದೀ ಸ್ನಾನ ಮಾಡಿ ತರ್ಪಣ ಬಿಡುವುದರಿಂದಲೇ ಹಬ್ಬಕ್ಕೆ ಚಲಾವಣೆ ಬರತ್ತೆ. ಎಲ್ಲಿ ನೋಡಿದರೂ ಸಂಭ್ರಮ, ಸಡಗರ, ಸಂತೋಷ, ರಾಜ್ಯಕ್ಕೆ ರಾಜ್ಯವೇ ಗಿಜಿಗುಡುತ್ತಾ, ಮಿಂಚುತ್ತದೆ.
ಪುರಾಣದ ಕಥೆಯ ದಿಕ್ಕು ದುರ್ಗೆ ಮಹಿಷಾಸುರನ ವಧೆಗೆ ಬೊಟ್ಟು ಮಾಡುತ್ತದೆ. ಎಲ್ಲಾ ದೇವತೆಗಳೂ ಒಟ್ಟಿಗೆ ಸೇರಿ ತಮ್ಮ ತಮ್ಮ ಶಕ್ತಿಯ ಅಂಶವನ್ನು ಸೇರಿಸಿ, ಸುಂದರಳೂ, ಶಕ್ತಿವಂತಳೂ ಆದ ದುರ್ಗೆಯನ್ನು ಸೃಷ್ಟಿಸಿ, ಅವಳ ೧೦ ಕೈಗಳಿಗೂ ತಮ್ಮ ಅತ್ಯಂತ ಶಕ್ತಿಯುತವಾದ ವಿವಿಧ ಆಯುಧಗಳನ್ನು ಕೊಟ್ಟು ಸಿಂಹದ ಮೇಲೆ ಕುಳಿತ ದೇವಿಯನ್ನು ಮಹಿಷಾಸುರನ ವಧೆಗೆ ಕಳುಹಿಸಿದರು. ಪ್ರತಿ ವರ್ಷ ಬೆಂಗಾಲಿಯ ಅಶ್ವಿನ್ ಮಾಸದ (ಸೆಪ್ಟೆಂಬರ್ - ಅಕ್ಟೋಬರ್)ಲ್ಲಿ ದೇವಿಯನ್ನು ಬರಮಾಡಿಕೊಂಡು ಪೂಜಿಸಲಾಗುತ್ತದೆ. ದೇವಿ ತನ್ನ ನಾಲ್ಕು ಮಕ್ಕಳಾದ ಕಾರ್ತೀಕ, ಗಣೇಶ, ಸರಸ್ವತಿ ಮತ್ತು ಲಕ್ಷ್ಮಿಯೊಂದಿಗೆ (ಅಂದರೆ ಕಾರ್ತೀಕ ನಮ್ಮನ್ನು ಕಾಪಾಡುವವನಾಗಿ- ಗಣೇಶ ಪೂಜೆ ಪ್ರಾರಂಭಿಸುವವನಾಗಿ - ಸರಸ್ವತಿ ಜ್ಞಾನ ಮತ್ತು ವಿದ್ಯೆಗಾಗಿ - ಲಕ್ಷ್ಮಿ ಅನುಗ್ರಹಿಸುವವಳಾಗಿ) ಬಂದು , ತೃಪ್ತಿ ಹೊಂದಿ, ಹರಸುತ್ತಾಳೆ. ಬೇಡಿದ್ದನ್ನೆಲ್ಲಾ ಕರುಣಿಸುತ್ತಾಳೆಂಬ ನಂಬಿಕೆ.

ಈ ದುರ್ಗಾ ಪೂಜೆಯ ಸಿದ್ಧತೆ ವರ್ಷ ಪೂರ್ತಿ ನಡೆಯುತ್ತಲೇ ಇರತ್ತೆ. ವಿಶೇಷವಾಗಿ ೧ - ೨ ತಿಂಗಳ ಮೊದಲು ಭರದಿಂದ ಉತ್ಸಾಹ ತುಂಬಿಕೊಳ್ಳುತ್ತದೆ. ಎಲ್ಲಾ ಸರಕಾರಿ ಹಾಗೂ ಖಾಸಗೀ ಸಂಸ್ಥೆಗಳೂ ಪೂಜೆ ಖರ್ಚಿಗೆಂದು "ಹಬ್ಬದ ಬೋನಸ್" ಕೊಡುತ್ತಾರೆ. ರಿಯಾಯಿತಿ ದರದ ಮಾರಾಟ, ಹೊಸ ಹೊಸ ವಸ್ತುಗಳ ವಿಶೇಷ ಮಾರಾಟಗಳೆಲ್ಲಾ ಶುರುವಾಗುತ್ತವೆ. ಹೊಸ ಹಾಡುಗಳ ಸಿಡಿಗಳೂ, ಪತ್ರಿಕೆಗಳವರ ವಿಶೇಷ ಕೊಡುಗೆಗಳೂ ಎಲ್ಲಾ ಸೇರಿ, ದುರ್ಗಾಪೂಜೆಯ ಒಂದು ತಿಂಗಳ ಮೊದಲೇ ಹಬ್ಬದ ವಾತಾವರಣ ಸೃಷ್ಟಿಸಿಬಿಡುತ್ತದೆ. ಮಹಾಲಯದ ದಿನ ಬೆಳಗಿನ ಜಾವ ೫ ಘಂಟೆಯಿಂದಲೇ ರೇಡಿಯೋ ಹಾಗೂ ದೂರ ದರ್ಶನಗಳಲ್ಲಿ ವಿಶೇಷ ಸಂಚಿಕೆಗಳು ಪ್ರಸಾರವಾಗುತ್ತವೆ.

ತಿಂಗಳುಗಳ ಮೊದಲೇ ಮನೆಗಳಲ್ಲೂ ದುರ್ಗಾಪೂಜೆಯ ತಯಾರಿ ಶುರುವಾಗಿರುತ್ತದೆ. ಶ್ರೀಮಂತರು ಬಡವರೆನ್ನದೆ ಪ್ರತಿಯೊಬ್ಬರ ಮನೆಗಳೂ ತೊಳೆದು ಬಳೆದು ಚೊಕ್ಕಟವಾಗಿ ಸಿಂಗರಿಸಲ್ಪಡುತ್ತದೆ. ಮನೆಯ ಪ್ರತಿಯೊಬ್ಬ ಸದಸ್ಯರೂ ೫ - ೬ ಜೊತೆ ಹೊಸ ಬಟ್ಟೆಗಳನ್ನೂ, ಆಭರಣಗಳನ್ನೂ ಕೊಳ್ಳುತ್ತಾರೆ. ತರಹೇವಾರಿ ಜಂಭದ ಚೀಲಗಳು, ಚಪ್ಪಲಿಗಳೂ ಹೊಸತು ಬರುತ್ತವೆ. ಒಟ್ಟಿನಲ್ಲಿ ಇಡೀ ವಾತಾವರಣ ಹಾಗೂ ಜನಜೀವನ ಉತ್ಸಾಹದಿಂದ ಪುಟಿಯುತ್ತಾ ಸಂಭ್ರಮಪಡುತ್ತಿರುತ್ತದೆ.

ಹಬ್ಬ ಮಹಾಲಯ ಅಮಾವಾಸ್ಯೆಯಂದೇ ಶುರುವಾಗುತ್ತದೆ. ನಗರದ ಘಟ್ಟಗಳಲ್ಲಿ ನದಿಯಲ್ಲಿ ಸ್ನಾನ ಮಾಡಿ ತಮ್ಮ ಹಿರಿಯರಿಗೆ ತರ್ಪಣ ಬಿಡುತ್ತಾರೆ. ರೇಡಿಯೋಗಳಲ್ಲಿ ದೇವಿಯನ್ನು ಬರಮಾಡಿಕೊಳ್ಳುವ ಭಕ್ತಿಗೀತೆಗಳನ್ನು ಬೆಳಗಿನ ಜಾವದಲ್ಲೇ ಪ್ರಸಾರ ಮಾಡುತ್ತಾರೆ. ಇದಕ್ಕೆ ಪುಷ್ಟಿಕೊಡುವಂತೆ ದೊಡ್ಡ ದೊಡ್ಡ ಡ್ರಮ್ಮುಗಳನ್ನು ಹೊಡೆಯಲು ಶುರು ಮಾಡುತ್ತಾರೆ.

ದೇವತೆಗಳ ವಿಗ್ರಹಗಳನ್ನು "ಕುಮಾರತುಲಿ" ಎಂಬ ಜಾಗದಲ್ಲಿ, ಉತ್ತರ ಕೊಲ್ಕತ್ತಾದಲ್ಲಿ ತಯಾರಿಸುತ್ತಾರೆ. ಒಂದು ತಂಡದ ಕಲಾವಿದರು ಪ್ರತಿಮೆಗಳನ್ನು ತಿಂಗಳುಗಟ್ಟಲೆ ಮಾಡಿ ರೂಪ ಕೊಟ್ಟರೆ, ಇನ್ನೊಂದು ತಂಡ ಮಂಟಪ ಕಟ್ಟಿ ಅಲಂಕರಿಸುವ ಕೆಲಸ ಮಾಡುತ್ತದೆ. ಬೊಂಬು, ಕಾಗದ, ಮರ, ಬಟ್ಟೆಗಳಿಂದ ಈ ಪ್ಯಾಂಡಾಲ್ ಗಳನ್ನು ಮಾಡುತ್ತಾರೆ. ಕೆಲವು ಸಲ ಪ್ರಪಂಚದ ಅತ್ಯಂತ ಪ್ರಸಿದ್ಧವಾದ ಕಟ್ಟಡಗಳಂತೆ ಕೂಡ ನಕಲು ಮಾಡುತ್ತಾರೆ. ಈ ಪ್ಯಾಂಡಾಲ್ ಗಳನ್ನು ನಿರ್ಮಿಸಲು ಒಬ್ಬರಿಂದೊಬ್ಬರಿಗೆ ಪೈಪೋಟಿ ಕೂಡ ನಡೆಯುತ್ತದೆ. ಅತ್ಯಂತ ಸುಂದರವಾದ ಮಂಟಪಕ್ಕೆ ಪ್ರಶಸ್ತಿ ಕೂಡ ಕೊಡುತ್ತಾರೆ. ತುಂಬಾ ಸುಂದರವಾಗಿ ಕಟ್ಟಾಲ್ಪಟ್ಟ ಈ ಪ್ಯಾಂಡಾಲ್ಗಳು ಬರೀ ಕೆಲವು ದಿನಗಳ ಸಂಭ್ರಮ ಎಂದು ನೋಡುವವರಿಗೆ ಒಮ್ಮೊಮ್ಮೆ ಬೇಸರ ಕೂಡ ಆಗತ್ತೆ.

ಮಹಾಷಷ್ಠಿಯ ದಿನ "ದುರ್ಗಾಪೂಜೆ"ಯ ಶುಭಾರಂಭವಾಗುತ್ತದೆ. ಮಹಾಸಪ್ತಮಿ, ಮಹಾನವಮಿ, ಮಹಾಷ್ಠಮಿ ದಿನಗಳು ವಿಶೇಷವಾಗಿ, ಸಾವಧಾನದಿಂದ ಪೂಜೆಗಳನ್ನು ಮಾಡುತ್ತಾರೆ. ಪ್ಯಾಂಡಾಲ್ ಗಳು ವಿದ್ಯುತ್ತಲಂಕರಣದಿಂದ, ಜಗಜಗಿಸುತ್ತಿರುತ್ತವೆ. ಲಕ್ಷಾಂತರ ಜನರು ಸರತಿಸಾಲಿನಲ್ಲಿ, ನಿಂತು, ದರ್ಶನ ಪಡೆಯುತ್ತಾರೆ. ಈ ದಿನಗಳಲ್ಲಿ ಕೊಲ್ಕತ್ತಾ ನಗರಕ್ಕೆ ಬೇರೆ ಬೇರೆ ಕಡೆಗಳಿಂದ ವಿಶೇಷ ಬಸ್ಸು, ರೈಲುಗಳ ವ್ಯವಸ್ಥೆ ಕೂಡ ಮಾಡಿರುತ್ತಾರೆ. ಸುತ್ತಮುತ್ತಲ ಹಳ್ಳಿಯವರಿಗೆಲ್ಲಾ ನಗರ ಸುತ್ತುವ ಅವಕಾಶ ಈ ದಿನಗಳಲ್ಲಿ. ಇಡೀ ರಾತ್ರಿ - ಹಗಲು ಮನೆಯವರೆಲ್ಲರೂ, ಮೂರು ಹೊತ್ತೂ ಹೊರಗಡೆಯೇ ತಿನ್ನುತ್ತಾರೆ. ಸಂಬಂಧಿಕರ ಮನೆ, ಗೆಳೆಯರ ಮನೆಗಳೆಂದು ಸುತ್ತುತ್ತಾರೆ. ಬರಿಯ ಸಿಹಿ ಖಾದ್ಯಗಳು - ’ಸಂದೇಶ್ ’ ಹಾಗೂ ಪೂಜೆಯ ವಿಶೇಷ ಖಾದ್ಯಗಳನ್ನು ಎಲ್ಲರಿಗೂ ಹಂಚುತ್ತಾ, ತಾವೂ ತಿನ್ನುತ್ತಾ, ಸಂತೋಷ ಪಡುತ್ತಾರೆ. ಎಲ್ಲಾ ಪ್ಯಾಂಡಾಲ್ ಗಳನ್ನೂಕ್ ಸಂದರ್ಶಿಸುತ್ತಾ, ದೇವಿಯ ಅನುಗ್ರಹ ಪಡೆಯುತ್ತಾರೆ. ಎಲ್ಲಾ ಶಾಲೆ / ಕಾಲೇಜುಗಳಿಗೂ ರಜಾ ಕೊಟ್ಟಿರುತ್ತಾರೆ.

ಮೂರು ದಿನಗಳ ಸಂಭ್ರಮದ ನಂತರ ವಿಜಯ ದಶಮಿಯಂದು, ಭಾವುಕರಾಗಿ, ಅಶ್ರುತರ್ಪಣ ಬಿಡುತ್ತಾ ದೇವಿಯನ್ನು ಕಳುಹಿಸಿಕೊಡುತ್ತಾರೆ. ಪ್ರತಿಮೆಗಳನ್ನು ಮೆರವಣಿಗೆಯಲ್ಲಿ "ಹೂಗ್ಲಿ" ನದಿಯಲ್ಲಿ ಮುಳುಗಿಸುತ್ತಾರೆ. ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾ "ಶುಭಬಿಜಯ" ಎಂದು ಹಾರೈಸುತ್ತಾರೆ.

ಒಟ್ಟಿನಲ್ಲಿ ಈ ಸಾರ್ವಜನಿಕ ಹಬ್ಬಕ್ಕಾಗಿ ಇಡೀ ನಗರವನ್ನು ಮಾಯಾಲೋಕವೋ ಎಂಬಂತೆ ಅಲಂಕರಿಸುವ ವಿಧಾನ ನೋಡುವುದೇ ನಮ್ಮ ಕಣ್ಣುಗಳಿಗೊಂದು ಹಬ್ಬ........



ಚಿತ್ರ ಕೃಪೆ - ಕಲ್ಕತ್ತಾವೆಬ್.ಕಾಂ

7 comments:

  1. ಒಂದು ಪ್ರದೇಶದಲ್ಲಿ ಯಾವ ರೀತಿ ವಿಶೇಷವಾಗಿ ನವರಾತ್ರಿಯನ್ನು ಆಚರಿಸುತ್ತಾರೆಂದು ಸಚಿತ್ರವಾಗಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಕೊಲ್ಕೊತ್ತಾದ ಸಂಸ್ಕೃತಿ, ಆಚಾರಗಳ ಕುರಿತು ನಿಮ್ಮೀ ಲೇಖನ ಕಿರು ಬೆಳಕನ್ನು ಚೆಲ್ಲುತ್ತಿದೆ.

    ReplyDelete
  2. ಕಲ್ಕತ್ತದಲ್ಲಿ ನನಗೆ ಆನೇಕ ಛಾಯಾಗ್ರಾಹಕ ಗೆಳೆಯರಿದ್ದಾರೆ. ಅವರು ದುರ್ಗಾಪೂಜೆಯ ಸಂಬ್ರಮದ ಫೋಟೋಗಳನ್ನು ನನಗೆ ಕಳಿಸುತ್ತಿದ್ದರು. ಮತ್ತು ಇದೇ ವಿಚಾರವಾಗಿ ಸ್ಪರ್ಧೆಯಲ್ಲೂ ಭಾಗವಹಿಸುತ್ತಿದ್ದರು. ಈಗ ಅದರ ಪೂರ್ಣ ಇತಿಹಾಸ, ಮಾಹಿತಿ, ಮತ್ತು ವಿವರಣೆಯನ್ನು ನೋಡಿ ನನಗೆ ತುಂಬಾ ಖುಷಿಯಾಯಿತು...

    ಒಂದು ಅರ್ಥಪೂರ್ಣ ಲೇಖನ...
    ಧನ್ಯವಾದಗಳು.

    ReplyDelete
  3. ತೇಜಸ್ವಿನಿ ಹಾಗೂ ಶಿವುರವರಿಗಿಬ್ಬರಿಗೂ ಧನ್ಯವಾದಗಳು... ಕೊಲ್ಕತ್ತಾದಲ್ಲೇ ೧೮ ವರ್ಷ ಇದ್ದ ನಮಗೆ, ಇಲ್ಲಿ ಬಂದು ೧೦ ವರ್ಷಗಳ ಮೇಲಾದರೂ ಈ ದಸರಾ ಸಮಯದಲ್ಲಿ, ಏನನ್ನೋ ಕಳೆದುಕೊಂಡ ಭಾವನೆ ಬರುತ್ತದೆ. ಏನಾದರೂ ಅಲ್ಲಿಯ ಸಂಭ್ರಮವೇ ಬೇರೆ... ಎಲ್ಲವೂ ಸಂಪ್ರದಾಯದ ಕಟ್ಟಿನಲ್ಲೇ, ಶ್ರದ್ಧೆಯಿಂದ ಆಚರಿಸಲ್ಪಡುತ್ತದೆ. ತುಂಬಾ ಚೆನ್ನಾಗಿರುತ್ತದೆ.

    ಶ್ಯಾಮಲ

    ReplyDelete
  4. ಶ್ಯಾಮಲ ಮೇಡಂ, ಕಲ್ಕತ್ತೆಯಲ್ಲಿ ದುರ್ಗಾ ಪೂಜೆಯನ್ನು ಸಚಿತ್ರ-ಸವಿವರವಾಗಿ ಹಾಗೂ ಸರಳವಾಗಿ ತಿಳಿಸಿದ್ದೀರಿ. ಧನ್ಯವಾದಗಳು.

    ಚಂದ್ರಶೇಖರ ಬಿ.ಎಚ್.

    ReplyDelete
  5. ನಮಸ್ಕಾರ ಚಂದ್ರಶೇಖರ್ ರಿಗೆ...
    ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು... ಈ ಮೇಡಮ್ ಎಲ್ಲಾ ಬೇಡಾ..ಶ್ಯಾಮಲ ಎಂದರೆ ಸಾಕು... ಹೀಗೇ ಬರುತ್ತಿರಿ.....
    ಶ್ಯಾಮಲ

    ReplyDelete
  6. ಧನ್ಯವಾದಗಳು ಶ್ಯಾಮಲಾ ಅವರಿಗೆ ಬ್ಲಾಗ್ ಪರಿಚಯಿಸಿದ್ದಕ್ಕೆ..
    ನವರಾತ್ರಿಯ ಕಡೆಯ ದಿನ ವಿಜಯದಶಮಿಯ೦ದೇ ಉತ್ತಮೆ ಲೇಖನ ಓದಲು ಅನುವು ಮಾಡಿಕೊಟ್ಟದ್ದಕ್ಕೆ ಡಬಲ್ ವ೦ದನೆಗಳು.

    ಅನ೦ತ್

    ReplyDelete
  7. ನನ್ನ ಬ್ಲಾಗ್ ಲೋಕಕ್ಕೆ ನಿಮಗೆ ಸ್ವಾಗತ ಅನಂತ್.... ಹೀಗೇ ಬರುತ್ತಿರಿ... ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ಶ್ಯಾಮಲ

    ReplyDelete