೧೯೮೩ರಲ್ಲಿ ನನ್ನವರ ಉದ್ಯೋಗ ನಿಮಿತ್ತ ನಾವು ಕೊಲ್ಕತ್ತಾದಲ್ಲಿ ನೆಲೆಸ ಬೇಕಾಯ್ತು. ಊರು, ಭಾಷೆ ಎರಡೂ ಹೊಸದು. ನಮ್ಮ ಜೊತೆಗೇ ಕಾಲೇಜ್ ನಲ್ಲಿ ಓದಿದ್ದ ನಮ್ಮ ಸ್ನೇಹಿತರು ಅದೇ ಕಛೇರಿಯಲ್ಲೇ ಇದ್ದಿದ್ದರಿಂದ, ನನ್ನವರು ಧೈರ್ಯವಾಗಿ, ನಮ್ಮ ಭಾವನ ಜೊತೆ ಹೋಗಿ, ಕೆಲಸ ಶುರು ಮಾಡಿ, ೬ ತಿಂಗಳ ನಂತರ ಒಂದು ಮನೆ ಮಾಡಿದರು. ನಾನು ಹೋಗಿ ನೆಲೆಸಿದೆನಾದರೂ ಬಂಗಾಲಿ ಭಾಷೆ ಸ್ವಲ್ಪ ಕೂಡ ತಿಳಿಯದೆ, ಕಕ್ಕಾಬಿಕ್ಕಿಯಾಗುವಂತೆ ಮಾಡಿತ್ತು. ಬೆಂಗಾಲಿ ಜನಗಳು ಒಳ್ಳೆಯವರಾದರೂ, ಭಾಷೆಯ ತೊಡಕಿನಿಂದ ನನಗ್ಯಾರೂ ಸ್ನೇಹಿತರಿರಲಿಲ್ಲ. ಅಲ್ಲಿ ಬ್ಯಾಂಕ್ ಉದ್ಯೋಗಿಗಳು, ಕರ್ನಾಟಕದಿಂದ ಬಂದವರು, ಮೈಸೂರು ಅಸೋಸಿಯೇಷನ್ ಮೂಲಕ ಪರಿಚಿತರಾಗಿ, ಬರಿಯ ಕನ್ನಡದವರ ಕೂಟವೇ ಇತ್ತು. ಹೊರಗೆ ಸಾಮಾನು ತರಲು ಅಂಗಡಿಗಳಿಗೆ ಹೋದಾಗ ಕೂಡ , ಅಲ್ಲಿ ಇಟ್ಟಿರುವ ಪದಾರ್ಥಗಳನ್ನು ತೋರಿಸಿ, ಮೂಕವಾಗಿ ಅಭಿನಯಿಸಿ, ಸಂಭಾಷಣೆ ನಡೆಸಿ, ಕೊಂಡು ತರುತ್ತಿದ್ದೆವು. ಕೆಲವೊಮ್ಮೆ, ನಮಗೆ ಬೇಕಾದ ಪದಾರ್ಥಗಳು ಹೊರಗೆ ಇಟ್ಟಿರದಿದ್ದರೆ, ಫಜೀತಿಯಾಗಿ ಬಿಡುತ್ತಿತ್ತು.. ಅಂಗಡಿಯವನಿಗೆ ಹಿಂದಿ ಬರೋಲ್ಲ, ನಮಗೆ ಬೆಂಗಾಲಿ ತಿಳಿಯೋಲ್ಲ... ಹೀಗೇ ಅನೇಕ ಸಲ ನಗೆಪಾಟಲಿಗೆ ಗುರಿಯಾಗಿ, ಹೇಗೋ ಅಂತೂ ಸಂಸಾರ ನಡೆಸುತ್ತಿದ್ದೆವು. ಇದರಲ್ಲಿ ಕೆಲಸದವರು ಬೇರೆ ಬೇಡವೆಂದು {(ಸಂಬಳ ಕೊಡಲು ದುಡ್ಡೂ ಇರಲಿಲ್ಲ ಅನ್ನಿ :-)} ಎಲ್ಲಾ ಕೆಲಸ ನಾನೇ ಮಾಡಿಕೊಳ್ಳುತ್ತಿದ್ದೆ. ೬ ತಿಂಗಳ ನಂತರ ನಮ್ಮ ಪರಿಚಯದವರ ಮೂಲಕ ನಮಗೆ ಲೇಕ್ ಮಾರ್ಕೆಟ್ ಎಂಬ ಬಡಾವಣೆಯಲ್ಲಿ ಒಂದು ಮನೆ ಸಿಕ್ಕಿತ್ತು. ಅಷ್ಟು ಹೊತ್ತಿಗೆ ನಾನು ನನ್ನ ಮಗುವಿನ ತಾಯಿಯಾಗುವವಳಿದ್ದೆ..... ಹೊಸ ಮನೆಯಲ್ಲಿ ನನ್ನ ಜೊತೆಗೆಂದು ’ದುಕುನಿ’ ಎಂಬ ಹೆಸರಿನ, ಬಿಹಾರಿ ಹುಡುಗಿ ಕೆಲಸಕ್ಕೆ ಬಂದಳು.... ಅವಳಿಗೆ ಹಿಂದಿ ಅರ್ಥ ಆಗುತ್ತಿದ್ದಿದ್ದರಿಂದ ನನಗೆ ಸ್ವಲ್ಪ ನೆಮ್ಮದಿಯಾಗಿತ್ತು..... ದುಕುನಿ ದಿನವೂ ಮಧ್ಯಾನ್ಹ ೧೧.೩೦ಗೆ ಬಂದು ಕೆಲಸವೆಲ್ಲಾ ಮಾಡಿ ೧ ಘಂಟೆಯವರೆಗೆ ನನ್ನ ಜೊತೆ ಇದ್ದು ಹೋಗುತ್ತಿದ್ದಳು. ೧.೩೦ಗೆ ನನ್ನವರು ಬಂದು ಊಟ ಮಾಡಿ ಹೋಗುತ್ತಿದ್ದರು. ಮಧ್ಯಾನ್ಹ ಮತ್ತೆ ದುಕುನಿ ೩.೩೦ಗೆ ಬಂದು ೫ ಘಂಟೆಯವರೆಗೆ ಇರುತ್ತಿದ್ದಳು. ನನ್ನವರು ಸಾಯಂಕಾಲ ೬ ಘಂಟೆಯ ನಂತರ ಬರುತ್ತಿದ್ದರು. ನಾನು ಆಸ್ಪತ್ರೆಗೆ ಹೋಗಬೇಕಾದ ಸಮಯದಲ್ಲಿ, ಆ ಹುಡುಗಿ ನನಗೆ ತುಂಬಾ ಸಹಾಯ ಮಾಡಿದ್ದಳು. ನನಗೆ ತಾಯಿಯಂತೆ ಪ್ರೀತಿ ತೋರಿದ ಜಯಾಮಾಮಿಯನ್ನು ಕರೆದುಕೊಂಡು ಬಂದಿದ್ದಳು ಮತ್ತು ಟ್ಯಾಕ್ಸಿಯನ್ನೂ ತಂದು ಕೊಟ್ಟಿದ್ದಳು. ಮುಂದೆ ಅವಳಿಗೆ ಮದುವೆಯಾದಾಗ ನಾವು ಸ್ವಲ್ಪ ದುಡ್ಡು ಕೊಟ್ಟೆವಾದರೂ... ಮನ:ಪೂರ್ವಕವಾಗಿ ಒಂದು ಧನ್ಯವಾದವನ್ನು ಮಾತ್ರ ಹೇಳಲೇಯಿಲ್ಲ.......
ಆಸ್ಪತ್ರೆಯಿಂದ ಮನೆಗೆ ಮಗನನ್ನು ಕರೆದುಕೊಂಡು ಬಂದಾಗ, ನನ್ನ ಸಹಾಯಕ್ಕೆ ಮನೆಯವರ್ಯಾರೂ ಇಲ್ಲದಿದ್ದಿದ್ದರಿಂದ, ಜಯಾಮಾಮಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ’ಪುಷ್ಪಾ’ ಎಂಬಾಕೆಯನ್ನು ನಮ್ಮನೆಗೂ ಕಳುಹಿಸಿದರು. ಆಕೆ ಬಂದು ಮಗುವಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ, ಸ್ನಾನ ಮಾಡಿಸಿ ಹೋಗುತ್ತಿದ್ದರು. ಅವರ ಮಗಳು ’ರೀಟಾ’ ಎಂಬ ಹುಡುಗಿ ಬಂದು ನನ್ನ ಜೊತೆ ಕುಳಿತಿರುತ್ತಿದ್ದಳು. ಮಗು ಅತ್ತಾಗ ಎತ್ತಿಕೊಳ್ಳುವುದು, ಬಟ್ಟೆ ಬದಲಿಸುವುದು ಮತ್ತು ಇತರ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದಳು. ಹೀಗೆ ನಮ್ಮ ಮನೆಗೆ ಬಂದ ಪುಷ್ಪಾಜೀ (ನಾವು ಆಕೆಯನ್ನು ಹಾಗೆಂದೇ ಕರೆಯುತ್ತಿದ್ದೆವು) ನನ್ನ ಮಗನಿಗೆ ನಿಜವಾಗಲೂ ತುಂಬಾ ಪ್ರೀತಿ, ಆದರ ತೋರಿಸಿದರು. ನಾವು ದುಡ್ಡು ಕೊಟ್ಟಿದ್ದು ಏನೂ ಲೆಕ್ಖ ಇಲ್ಲ ಆದರೆ ಆ ಪ್ರೀತಿಗೆ ಬೆಲೆ ಕಟ್ಟುವುದಾಗಲೇ ಇಲ್ಲ. ಮಗು ೩ ತಿಂಗಳಿನವನಾದಾಗ ಅವನನ್ನು ಬೇಬಿ ಕೇರ್ ನಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದೆ. ಕೆಲಸದ ಒತ್ತಡ ತುಂಬಾ ಇರುತ್ತಿದ್ದರಿಂದ ನನಗೆ ಸಮಯಕ್ಕೆ ಸರಿಯಾಗಿ ೫.೩೦ಕ್ಕೆ ಬಂದು ಮಗುವನ್ನು ಮನೆಗೆ ಕರೆತರಲಾಗುತ್ತಿರಲಿಲ್ಲ. ಆದ್ದರಿಂದ ಆ ಜವಾಬ್ದಾರಿಯನ್ನೂ ಪುಷ್ಪಾಜಿ, ಖುಶಿಯಿಂದಲೇ ತೆಗೆದುಕೊಂಡರು. ನಾನು ಕಛೇರಿಯಿಂದ ಬರುವವರೆಗೆ ಪುಷ್ಪಾಜಿಯ ಎರಡನೆಯ ಮಗಳಾದ ’ಗೀತಾ’ ಬಂದು ಮನೆಯಲ್ಲಿ ಮಗುವಿನ ಜೊತೆ ಇರುತ್ತಿದ್ದಳು. ಹೀಗೆ ನಮ್ಮ ಮನೆಗೆ ಗೀತಾಳ ಆಗಮನವಾಯಿತು. ಕೆಲವು ವರ್ಷಗಳ ನಂತರ ಪುಷ್ಪಾಜಿಯ ತಂಗಿ ಚಿಕ್ಕ ಹುಡುಗಿ ’ಚಂಚಲಾ’ ಕೂಡ ಬಂದು ಅಕ್ಕನ ಮನೆಯಲ್ಲಿರತೊಡಗಿದಳು. ಈಗ ನನ್ನ ಮಗನಿಗೆ ಗೀತಾ ಮತ್ತು ಚಂಚಲಾ (ಚಂಚೂ...) ಇಬ್ಬರೂ ಕೇರ್ ಟೇಕರ್ಸ್ + ಆಟ ಆಡುವ ಸ್ನೇಹಿತೆಯರು + ಹಸಿವಾದಾಗ ರೊಟ್ಟಿ, ಬ್ರೆಡ್ ಟೋಸ್ಟ್ ಮಾಡಿಕೊಡುವ ಅಡಿಗೆಯವರೂ ಎಲ್ಲವೂ ಆದರು. ಅವನ ಇತರ ಚಟುವಟಿಕೆಗಳಿಗೆಲ್ಲಾ ಗೀತಾ+ಚಂಚೂ ಜೊತೆಗಾರರಾದರು. ಅವನನ್ನು ಚಿತ್ರಶಾಲೆಗೆ, ಈಜು ಕಲಿಯಲು, ಕರಾಟೆ ಕಲಿಯಲು... ಎಲ್ಲಾ ಕಡೆ ಕರೆದುಕೊಂಡು ಹೋಗುವುದೂ ಅವರಿಬ್ಬರದೇ ಕೆಲಸವಾಗಿ ಬಿಟ್ಟಿತು. ನಿಜವಾಗಿ ಈ ಹುಡುಗಿಯರ ಸಹಾಯವಿಲ್ಲದಿದ್ದರೆ ನಾನು ಹೇಗೆ ನಿಭಾಯಿಸುತ್ತಿದ್ದೆನೆಂದು ಈಗ ಯೋಚಿಸಿದರೇ ಭಯವಾಗುತ್ತದೆ. ಪುಷ್ಪಾ ಶಾಲೆಗೆ ಕರೆದುಕೊಂಡು ಹೋಗಿ ಬಿಡುವುದು, ಕರೆದು ಕೊಂಡು ಬರುವುದು ಮಾಡುತ್ತಿದ್ದರು, ಆದರೆ ಮನೆಗೆ ಬಂದ ತಕ್ಷಣ ಗೀತಾ....... ಚಂಚೂ........ ಎಂದೇ ಅರಚುತ್ತಾ ಬರುತ್ತಿದ್ದ ನನ್ನ ಮಗ.
ಮಧ್ಯದಲ್ಲಿ ಗೀತಾ ಯಾರನ್ನೋ ಪ್ರೀತಿಸಿ ಮದುವೆ ಮಾಡಿಕೊಂಡು ಹೋಗಿದ್ದರಿಂದ, ಚಂಚೂ ನನ್ನ ಮಗನಿಗೆ ದೊಡ್ಡ ಅಕ್ಕನ ತರಹ ಆತ್ಮ ಸಖಿಯಾಗಿ ಬಿಟ್ಟಳು. ಇಷ್ಟು ಹೊತ್ತಿಗಾಗಲೇ ನನ್ನ ಮಗ ೫ನೇ ಕ್ಲಾಸ್ ವರೆಗೂ ಬಂದಾಗಿತ್ತು. ಆ ಹುಡುಗಿ ತೋರಿದ ಪ್ರೀತಿಗೆ ನಾನು ಚಿರಋಣಿ..... ನಮಗೆ ಯಾವ ರೀತಿಯಿಂದಲೂ ಸಂಬಂಧಿಕಳಲ್ಲದಿದ್ದರೂ, ಅವಳು ತೋರಿದ ಅಂತ:ಕರಣ ಬೇರೆಲ್ಲಾ ಸಂಬಂಧಗಳನ್ನೂ ಮೀರಿ ಇವತ್ತಿಗೂ ಉನ್ನತವಾಗಿ ನಿಂತಿದೆ.
ನಾವು ಕೊಲ್ಕತ್ತಾದಲ್ಲಿ ಮನೆ ಕೊಂಡು, ಹೊಸ ಮನೆಗೆ ವಾಸಕ್ಕೆ ಹೋದಾಗ ಚಂಚಲಾ ನಮ್ಮ ಜೊತೆ ಬರಲಾಗಲಿಲ್ಲ. ಆದರೂ ನಾವು ಲೇಕ್ ಮಾರ್ಕೆಟ್ ನಲ್ಲೇ ತರಕಾರಿ, ದಿನಸಿ, ಸಮಸ್ತವನ್ನೂ ಕೊಳ್ಳುತ್ತಿದ್ದರಿಂದ, ಅವಳ ಭೇಟಿ ಆಗುತ್ತಲೇ ಇತ್ತು. ಮನೆ ತುಂಬಾ ದೂರವಾಗಿದ್ದರಿಂದ, ನನ್ನ ಮಗನನ್ನು ಮನೆಯ ಹತ್ತಿರದಲ್ಲೇ ಶಾಲೆಗೆ ಸೇರಿಸಿದೆವು. ಆಗ ನಮಗೆ ಮನೆಕೆಲಸಕ್ಕೆ ಸಹಾಯಕ್ಕೆಂದು ’ಲಕ್ಷ್ಮೀ’ - ’ಲೊಕ್ಕೀ’ ಎಂಬಾಕೆ ಬಂದರು. ವಯಸ್ಸಿಗೆ ಬಂದಿದ್ದ ಮಗಳನ್ನು ಕಳೆದುಕೊಂಡ ದು:ಖದಲ್ಲಿ ಮುಳುಗಿದ್ದ ನಮ್ಮ ಲೊಕ್ಕೀಗೆ ನನ್ನ ಮಗನ ಸಾಂಗತ್ಯ ಅತ್ಯಂತ ಸಮಾಧಾನ ಕೊಟ್ಟಿತ್ತು. ಬೆಂಗಾಲಿಗಳ ಧಾಟಿಯಲ್ಲಿ ಅವನನ್ನು ’ಮನ್ನಾ’(ಮುನ್ನಾ) ಎಂದು ಕರೆಯುತ್ತಿದ್ದ ಈಕೆ ಕೂಡ ಒಳ್ಳೆಯ ನಡತೆ, ಸಂಸ್ಕಾರವಿದ್ದ ಹೆಂಗಸು. ಆಕೆಯ ಗಂಡ ರಿಕ್ಷಾ ಎಳೆಯುತ್ತಿದ್ದ. ಹೆಂಡತಿ ೨.೩೦ ಕಿಲೋಮೀಟರ್ ನಡೆದು ಕೆಲಸಕ್ಕೆ ಬರುತ್ತಾಳೆಂದು, ಬೆಳಿಗ್ಗೆ ೬ ಘಂಟೆಗೇ ಅವಳನ್ನು, ರಿಕ್ಷಾದಲ್ಲಿ ಕೂರಿಸಿಕೊಂಡು ಬಂದು ನಮ್ಮ ಮನೆಯ ಹತ್ತಿರ ಬಿಟ್ಟು ಹೋಗುತ್ತಿದ್ದ. ಹೀಗೆ ಲೊಕ್ಕಿಯ ಸಹಾಯ ನಮಗೆ ೩ ವರ್ಷಗಳು ಸಿಕ್ಕಿತ್ತು. ನನ್ನ ಮಗನನ್ನು ಬೆಂಗಳೂರಿನಲ್ಲಿ ೯ನೇ ಇಯತ್ತೆಗೆ ಶಾಲೆಗೆ ಸೇರಿಸಿ, ಮನೆ ಮಾರಿಬಿಟ್ಟು ಖಾಲಿ ಮಾಡಿದಾಗ, ಲೊಕ್ಕಿಯ ಗೋಳು ನೋಡಲಾಗಿರಲಿಲ್ಲ..... ನನಗೂ ಅವಳನ್ನು ಬಿಟ್ಟು ಬರುವುದು ಅತ್ಯಂತ ದು:ಖದ ವಿಚಾರವಾಗಿತ್ತು.
ನಾವು ವಾಪಸ್ಸು ಲೇಕ್ ಮಾರ್ಕೆಟ್ ಬಡಾವಣೆಗೇ ಬಂದಿದ್ದರಿಂದ, ಚಂಚಲಾ ನಮ್ಮನೆಗೆ ಮತ್ತೆ ಬಂದಳು..... ಅಲ್ಲಿಂದ ನಾನು ೨೦೦೦ನೇ ಇಸವಿಯಲ್ಲಿ ಕೊಲ್ಕತ್ತಾ ಬಿಡುವವರೆಗೂ ಮತ್ತು ಆಮೇಲೂ ಸ್ವಲ್ಪ ದಿನ ನನ್ನವರಿರುವವರೆಗೂ ನಮ್ಮ ಜೊತೆ ಚಂಚಲಾ ಇದ್ದಳು. ಅವಳು ಮುಂಚಿನಿಂದಲೂ ಬಹಳ ಕಷ್ಟ ಜೀವಿ. ಈಗವಳು ಮದುವೆಯಾಗಿ, ಮಗಳ ತಾಯಾಗಿ, ಮನೆಯಲ್ಲೇ ಅಡುಗೆ ಮಾಡಿ ಊಟ ಕ್ಯಾರಿಯರ್ ನಲ್ಲಿ ಕಳಿಸುವ ಕೆಲಸ ಮಾಡಿಕೊಂಡು, ಬಿಡುವಿನ ವೇಳೆಯಲ್ಲಿ ಸೀರೆಗಳಿಗೆ ಚಿತ್ತಾರ ಬಿಡಿಸುವ ಕೆಲಸ ಕೂಡ ಮಾಡುತ್ತಾಳೆ. ಯಾವಾಗಲಾದರೊಮ್ಮೆ ದೂರವಾಣಿಯ ಮೂಲಕ ನಾವು ಅವಳ ಜೊತೆ ಈಗಲೂ ಮಾತನಾಡುತ್ತೇವೆ.....
ಕೊಲ್ಕತ್ತಾ ಬಿಟ್ಟ ನಂತರ ನಾನು ಅಲ್ಲಿಗೆ ಹೋಗಿಯೇ ಇರಲಿಲ್ಲ.... ಈಗ ೨೦೦೮ರ ಜನವರಿಯಲ್ಲಿ ಶಿಲ್ಲಾಂಗ್ ಮತ್ತು ಕಾಮಾಕ್ಯ ದೇವಸ್ಥಾನ ನೋಡಲು ಹೋದಾಗ, ನಾವು ಪುಷ್ಪಾಜಿಯನ್ನೂ ಭೇಟಿ ಮಾಡಿದೆವು. ಈಗ ಮಗನೂ ಕೆಲಸ ಮಾಡುತ್ತಿರುವುದರಿಂದ, ಪುಷ್ಪಾಜಿ ಮನೆ ಕೆಲಸಗಳಿಗೆ ಹೋಗುತ್ತಿಲ್ಲವೆಂದೂ, ಮನೆಯಲ್ಲೇ ಇದ್ದೇನೆಂದೂ ಹೇಳಿದರು. ತುಂಬಾ ಕಷ್ಟಪಟ್ಟ ದೇಹವಾದ್ದರಿಂದ, ಈಗ ಶಕ್ತಿಯೂ ಕಮ್ಮಿಯಾಗಿದೆ. ಆದರೆ ನನ್ನ ಮಗನ ಮೇಲಿರುವ ಅವರ ಪ್ರೀತಿ ಮಾತ್ರ ಎಳ್ಳಷ್ಟೂ ಕಮ್ಮಿಯಾಗಿಲ್ಲ... ೬ ಅಡಿಗಿಂತ ಎತ್ತರ ಬೆಳೆದಿರುವ ಹುಡುಗ, ಇಂಜಿನಿಯರಿಂಗ್ ಓದುತ್ತಿದ್ದಾನೆಂದು ಕೇಳಿ ಆಕೆಗಾದ ಸಂತೋಷ ಅಷ್ಟಿಷ್ಟಲ್ಲ.... ಮರೆಯದೆ ತನ್ನನ್ನು ನೋಡಲು ಬಂದ ನಮ್ಮೆಲ್ಲರನ್ನೂ ಕಂಡು ಆಕೆ ಕಣ್ಣೀರಿಟ್ಟಳು. ನಮಗಾಗಿ ದುಡಿದ ಆ ಸಂಸಾರಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಿದೆವು......
ಈಗ ಬೆಂಗಳೂರಿನಲ್ಲಿ ೨೦೦೧ನೇ ಫೆಬ್ರವರಿಯಿಂದ, ಈಗಲೂ ಇನ್ನೂ ನಮ್ಮ ಜೊತೆಯೇ ಇರುವವರ ಹೆಸರು ’ರಾಣಿ’. ಚಿಕ್ಕ ಚಿಕ್ಕ ಮಕ್ಕಳನ್ನು ಹೊಂದಿದ್ದ ರಾಣಿಯಮ್ಮ, ಮಗಳ ಮದುವೆ ಮಾಡಿ, ಈಗ ಅಜ್ಜಿ ಕೂಡ ಆಗಿದ್ದಾರೆ (ಆದರೆ ವಯಸ್ಸೇನೂ ಹೆಚ್ಚಿಲ್ಲ). ನಮ್ಮ ಕಷ್ಟ ಸುಖಗಳಲ್ಲಿ ಒಂದಾಗಿ... ನಮ್ಮ ಎಲ್ಲಾ ತರಹದ ಬೇಡಿಕೆಗಳಿಗೂ ಯಾವಾಗಲೂ ಇಲ್ಲವೆನ್ನದೇ, ಕಷ್ಟ ಪಡುವ ಮತ್ತೊಂದು ಜೀವ ನಮ್ಮಜೊತೆಗಿದೆ. ಇವರೆಲ್ಲರ ಸಹಾಯ ನನ್ನ ಜೀವನದಲ್ಲಿ ಸಿಗದೇ ಹೋಗಿದ್ದರೆ.... ಅಬ್ಬಾ ಊಹಿಸಿಕೊಳ್ಳುವುದೂ ಸಾಧ್ಯವಿಲ್ಲವೆನ್ನಿಸುತ್ತದೆ. ಹೊರಗೆ ದುಡಿಯುವ ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಸಹಾಯವಿಲ್ಲದಿದ್ದರೆ ಕಾರ್ಯ ನಿರ್ವಹಣೆ ಅಸಾಧ್ಯವಾಗಿಬಿಡುತ್ತದೆ.
ಈ ಬ್ಲಾಗ್ ಬರಹವನ್ನು ನನಗೆ ಸಹಾಯ ಮಾಡಿದ, ಮಾಡುತ್ತಿರುವ ಈ ಎಲ್ಲರಿಗೂ ಅರ್ಪಿಸಿ, ನನ್ನ ಹೃದಯ ಹಗುರ ಮಾಡಿಕೊಳ್ಳುತ್ತಿದ್ದೇನೆ. ಇವರೆಲ್ಲರಿಗೂ ನಾನು ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ.......
ತುಂಬಾ ಚೆನ್ನಾಗಿ ಬರೆದಿದ್ದೀರ.
ReplyDeleteಕೆಲವು ಸರತಿ ನಮಗೆ ಸಹಾಯ ಮಾಡಿದ ಎಷ್ಟ ಜನಗಳ ಬಗ್ಗೆ ನಾವು ಕೃತಜ್ಞ್ಯತೆ ಹೇಳುವದನ್ನು ಮರೆತಿರುತ್ತೇವೆ. ಅದರ ಅರಿವು ನಮಗೆ ಅನಂತರ ಮೂಡುತ್ತದೆ..... ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ನಾವು ಒಂದು ಸಾರಿಯಾದರು ದೇವರಲ್ಲಿ ಪ್ರಾರ್ಥಿಸಬೇಕು ....ಇದೆ ನಾವು ಅವರಿಗೆ ಕೊಡುವ ಅತ್ಯುನ್ನತವಾದ ಬಹುಮಾನ.
ಶ್ಯಾಮಲಾ, ನಿಮ್ಮ ಮತ್ತು ಮನೆಗೆಲಸದವರ ನಡುವಿನ ಭಾವನಾತ್ಮಕತೆಯನ್ನು ತಿಳಿಸುತ್ತಾ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದೀರಿ. ಇಂತಹ ಜನರು ಸಿಗುವುದು ಅಪರೂಪ. ಅದರಲ್ಲಿಯೂ ಹೊರ ಊರುಗಳಲ್ಲಿ, ಪರಭಾಷೆಯ ನಾಡಿನಲ್ಲಿ ಇಂತಹ ನಂಬಿಕಸ್ಥ, ಸಹಾಯಕರು ಸಿಗುವುದು ಮತ್ತಷ್ಟು ಅಪರೂಪ. ಅವರ ಮತ್ತು ನಿಮ್ಮ ಮನೆಯ ನಡುವಿನ ಭಾವುಕತೆಗೆ ಧನ್ಯವಾದಗಳು.
ReplyDeleteಚಂದ್ರು
ಶ್ಯಾಮಲಾರವರೆ...
ReplyDeleteಆಪತ್ತಿಗಾದವನೇ... ಬಂಧು...
ನೀವು ಹೇಳಿದ ಹಾಗೆ...
ಕೆಲಸ ಮಾಡಿದ್ದಕ್ಕೆ ನಾವು ಹಣ ಕೊಡ ಬಹುದು...
ಆದರೆ ಅವರು ತೋರಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ...?
ತುಂಬಾ ಆಪ್ತವಾಗಿ ಬರೆದಿದ್ದೀರಿ...
ನಮಗೂ ಪ್ರೀತಿ ತೋರಿ ಸಹಾಯ ಮಾಡಿ,
ಕೆಲಸ ಮಾಡಿಕೊಟ್ಟವರ ನೆನಪಾಗುವಂತೆ ಬರೆದಿದ್ದೀರಿ...
ಸುಂದರ ಬರಹ...
ಅಭಿನಂದನೆಗಳು...
ಹೌದು ಗೋಪಾಲ್...
ReplyDeleteಎಷ್ಟೋ ಸಲ ನಮಗೆ ಧನ್ಯವಾದ ಹೇಳುವ ಅವಕಾಶ ಕೂಡ ಸಿಗುವುದಿಲ್ಲ, ಅದರಲ್ಲೂ ಮನೆ ಕೆಲಸದ ಸಹಾಯಕ್ಕೆಂದು ಬರುವವರನ್ನು, ನಾವು ಖಂಡಿತಾ ಮರೆಯದೇ ಆದರಿಸಬೇಕು. ಇದು ನನಗೆ ಬದುಕು ಕಲಿಸಿದ ಪಾಠ. ಧನ್ಯವಾದಗಳು ಲೇಖನ ಮೆಚ್ಚಿದ್ದಕ್ಕೆ...
ಶ್ಯಾಮಲ
ಸರಿಯಾಗಿ ಹೇಳಿದಿರಿ ಚಂದ್ರು...
ReplyDeleteಚಿಕ್ಕ ವಯಸ್ಸಿನಲ್ಲಿ ನಮ್ಮ ರಾಜ್ಯ ಬಿಟ್ಟು ಹೊರಗಡೆ ಹೋದಾಗ, ಸಹಾಯಕ್ಕಾಗಿ ಬರುವ ಇಂಥಹ ಸಹೃದಯರು ಸಿಕ್ಕರೆ, ಬದುಕು ಎಷ್ಟೋ ನಿರಾಳವಾಗಿರುತ್ತದೆ. ನಾ ಮೊದಲೇ ಹೇಳಿದಂತೆ ಬೆಂಗಾಲಿ ಜನರು ತುಂಬಾ ಸ್ನೇಹಪರರು, ಅಂತ:ಕರಣವುಳ್ಳವರು. ಈ ವಿಷಯದಲ್ಲಿ ನಾನು ಖಂಡಿತಾ ಅದೃಷ್ಟವಂತೆಯೇ ಸರಿ...... ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಶ್ಯಾಮಲ
ನಿಜ ಪ್ರಕಾಶ್ ರವರೇ....
ReplyDeleteಆಪತ್ತಿಗಾದವನೇ ಬಂಧು... ಎಲ್ಲ ಬಂಧುಗಳು ಇದ್ದೂ, ಯಾರೂ ಇಲ್ಲದೆ ಅನಾಥರಂತೆ ಕೊಲ್ಕತ್ತಾದಲ್ಲಿದ್ದ ನಮಗೆ, ಇವರುಗಳೇ ಬಂಧುಗಳಾದರು. ನಾ ಮೊದಲೇ ಹೇಳಿದಂತೆ ಬೆಂಗಾಲಿಗಳು ಬಹಳ ಸ್ನೇಹಪರರು ಮತ್ತು ಅಂತ:ಕರಣವುಳ್ಳವರು. ಇಷ್ಟು ವರ್ಷಗಳ ನಂತರವಾದರೂ ನನಗೆ ಸಹಾಯ ಮಾಡಿದ ಇವರುಗಳಿಗೆಲ್ಲಾ ಕೃತಜ್ಞತೆ ತೋರಿಸುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ನಿಜಕ್ಕೂ ಸಂತೋಷವಾಗಿದೆ... ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು.
ನಿಮ್ಮೆಲ್ಲರ ಮೆಚ್ಚಿಗೆ ಮತ್ತು ಪ್ರೋತ್ಸಾಹವೇ ನನಗೆ ಬರೆಯಲು ಸ್ಫೂರ್ತಿ.
ಶ್ಯಾಮಲ
ಮೇಡಂ ಬಹಳ ಆತ್ಮೀಯ ಬರಹ. ಮನೆಗೆಲಸ ಮಾಡುವವರ ಮೇಲೆ ನಿಮಗಿದ್ದ ಕಳಕಳಿ ಮೆಚ್ಚತಕ್ಕದ್ದು. ನಿಮ್ಮ ಪುಷ್ಪಾಜಿ ಇನ್ನೂ
ReplyDeleteನೂರ್ಕಾಲ ಬಾಳಲಿ....ನೆನಪು ಸಾಯುವುದಿಲ್ಲ ಅದರಲ್ಲೂ ಸಹಾಯಮಾಡಿದ ವ್ಯಕ್ತಿಗಳಂತೂ ಸದಾ ಚಿರಸ್ಥಾಯಿಗಳು....
ನಮಸ್ತೆ ಉಮೇಶ್...
ReplyDeleteಧನ್ಯವಾದಗಳು ಬರಹ ಮೆಚ್ಚಿದ್ದಕ್ಕೆ... ನಿಜ ನೆನಪು..ನಾವು ಸತ್ತರೂ ಅದು ಸಾಯುವುದಿಲ್ಲ..ಈ ತರಹದ ವ್ಯಕ್ತಿಗಳನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಿದರೆ...ನಾವು ಇಲ್ಲದಾಗಲೂ ಒಳ್ಳೆಯತನದ ನೆನಪು ಹಸಿರಾಗಿರುತ್ತದೆ.
ಮತ್ತೊಂದು ಮಾತು.. ’ಮೇಡಂ’ ಎಲ್ಲಾ ಬೇಡ..ಮುಜುಗರವಾಗತ್ತೆ... ಶ್ಯಾಮಲ ಎನ್ನಿ ಸಾಕು...
ಶ್ಯಾಮಲ
ಶ್ಯಾಮಲಾ ಮೇಡಮ್,
ReplyDeleteಕಲ್ಕತ್ತದ ದಿನಗಳನ್ನು ಓದುತ್ತಿದ್ದರೇ ಒಂಥರ ಖುಶಿ, ಬೇಸರ, ದಿಗಿಲು ಎಲ್ಲಾ ಒಟ್ಟಿಗೆ ಆಗುತ್ತಿತ್ತು. ಅಲ್ಲಿನ ಪರಿಸ್ಥಿತಿಯನ್ನು ನೀವು ನಿಭಾಯಿಸಿದ ರೀತಿ ಅದಕ್ಕಾಗಿ ಸಹಾಯ ಮಾಡಿದ ಗೆಳೆಯರು, ಕೆಲಸದವರು ಇತ್ಯಾದಿಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಸಂಭಂದಿಗಳಿಗಿಂತ ದೂರದ ಯಾರೋ ದೇವರು ಕಳಿಸಿದ ಗೆಳೆಯರಂತೆ ಸಹಾಯ ಮಾಡುತ್ತಾರಲ್ಲ. ಅವರನ್ನು ಖಂಡಿತ ಮರೆಯಲು ಸಾಧ್ಯವಿಲ್ಲ. ಅವರನ್ನು ಉಲ್ಲೇಖಿಸಿ ಬರೆದಿರುವ ಲೇಖನ ನಿಜಕ್ಕೂ ಮನಸ್ಸನ್ನು ಹಗುರಗೊಳಿಸಿ, ಧನ್ಯತಾ ಭಾವವನ್ನು ಮೂಡಿಸಿತ್ತದೆ.
ಮತ್ತೆ ಲೇಖನ ಓದುತ್ತಾ ಆಪ್ತವೆನಿಸುತ್ತದೆ.
ದನ್ಯವಾದಗಳು.
ಶಿವು ಸಾರ್...
ReplyDeleteಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..... ಕೊಲ್ಕತ್ತದಲ್ಲಿ ದಿಗಿಲು ಏನೂ ಇಲ್ಲ ಸಾರ್...ಆ ಊರು ಒಂಥರಾ ಎಲ್ಲರನ್ನೂ ತನ್ನೊಳಗೆ ಸೆಳೆದುಕೊಂಡು ಸ್ವಂತವಾಗಿಸಿಕೊಂಡು ಬಿಡತ್ತೆ...ಬಿಟ್ಟು ಬರುವಾಗ ನಿಜಕ್ಕೂ ತುಂಬಾ ನೋವಾಗತ್ತೆ. ಅಲ್ಲಿಯ ವಾತಾವರಣದಲ್ಲೇ ಏನೋ ಒಂಥರಾ ಆಪ್ತತೆ, ಪ್ರೀತಿ, ಮಣ್ಣಿನ ವಾಸನೆ,ಸಹಜತೆ,ಸಂಸ್ಕೃತಿ ಇದೆ. ಇದು ಬೇರಾವ ಮೆಟ್ರೋ ಸಿಟಿಯಲ್ಲೂ ಖಂಡಿತಾ ಇಲ್ಲ......
ಶ್ಯಾಮಲ
ಶ್ಯಾಮಲಾ ಮೇಡಮ್,
ReplyDeleteಛಾಯಾಕನ್ನಡಿ ಬ್ಲಾಗಿನಲ್ಲಿ ಕುಲುಮೆ ಎನ್ನುವ ಸಣ್ಣಕತೆಯನ್ನು ಬರೆದಿದ್ದೇನೆ. ಬಿಡುವು ಮಾಡಿಕೊಂಡು ಓದಿ ನಿಮ್ಮ ಅಭಿಪ್ರಾಯ ತಿಳಿಸಿ.
ಶ್ಯಾಮಲಾ ಅವರೆ...
ReplyDeleteಕೆಲಸದವರ ಬಗ್ಗೆ ನನಗೂ ಸದಾ ಧನ್ಯತಾ ಭಾವ. ನಿಮ್ಮ ಈ ಲೇಖನದಿಂದ ಮತ್ತೆ ಮನದಲ್ಲಿಯೇ ಅವರೆಲ್ಲರಿಗೆ ಧನ್ಯವಾದ ಅರ್ಪಿಸುವಂತಾಯಿತು.
ತುಂಬ ಸುಂದರವಾಗಿ ನಿರೂಪಿಸಿದ್ದೀರಿ. ಧನ್ಯವಾದ.