ನನ್ನ ಅಂತರಂಗದ ಮಾತುಗಳು ನಿಮ್ಮೊಂದಿಗೆ.......
Saturday, September 19, 2009
ನವದುರ್ಗಾ....... ಪೂಜೆ.....
ಶರನ್ನವರಾತ್ರಿ, ದಸರಾ, ದುರ್ಗಾಪೂಜೆ ಎಂದೆಲ್ಲಾ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಒಂಭತ್ತು ದಿನಗಳ ಹಬ್ಬ, ದೇವಿಯ ಆರಾಧನೆಗೆಂದೇ ಮೀಸಲಾಗಿದೆ........ ದೇವಿಯನ್ನು ನವ ರೂಪದಲ್ಲಿ ಒಂದೊಂದು ದಿನ ಒಂದೊಂದು ವಿಧದಲ್ಲಿ, ಪೂಜಿಸಲ್ಪಡುವುದೇ ಈ ಹಬ್ಬದ ವೈಶಿಷ್ಟ್ಯ... ದೇವಿ ಪಾರ್ವತಿ ಅಥವಾ ದುರ್ಗಾ ಅತ್ಯಂತ ಲೋಕಪ್ರಿಯಳು ಮತ್ತು ಶಕ್ತಿದೇವತೆ ಕೂಡ. ದೇವಿಯ ಶಕ್ತಿಯನ್ನೂ, ಸೌಂದರ್ಯವನ್ನೂ ವರ್ಣಿಸಲು, ಅವಳಿಗಾಗಿಯೇ ರಚಿಸಲ್ಪಟ್ಟಿರುವುದು "ದೇವಿ ಭಾಗವತಮ್". ಇದಲ್ಲದೆ ದೇವಿಯನ್ನು ವರ್ಣಿಸುವ ಅನೇಕ ಸಣ್ಣ ಸಣ್ಣ ಕೃತಿಗಳು... ’ದೇವಿ ಮಹಾತ್ಮೆ’, ’ದುರ್ಗಾ ಸಪ್ತಶತೀ’ಮತ್ತು ಇನ್ನೂ ಹಲವು... ದೇವಿ ಮಹಾತ್ಮೆ ಎಂಬುದು ನಮ್ಮ ಪುರಾಣಗಳಲ್ಲಿ ಪ್ರಸಿದ್ಧವಾದ ’ಮಾರ್ಕಾಂಡೇಯ ಪುರಾಣ’ದ ಭಾಗವಾಗಿದೆ. ಇದು ಎಷ್ಟೊಂದು ಜನಪ್ರಿಯ ಹಾಗೂ ಪೂಜನೀಯವೆನಿಸಿದೆಯೆಂದರೆ, ಇದರ ಒಂದೊಂದು ಶ್ಲೋಕವೂ ’ಮಂತ್ರ’ವೆಂದೂ, ಇದರ ಪಾರಾಯಣೆ, ಜಪ ಮಾಡುವುದರಿಂದ, ನಮ್ಮ ಅಭೀಷ್ಟಗಳೆಲ್ಲಾ ನೆರವೇರುವುದೆಂದೂ ನಂಬಿಕೆಯಿದೆ.
ದುರ್ಗಾ ಎಂದರೆ ಹತ್ತಿರ ಸುಳಿಯಲೂ, ಅರ್ಥ ಮಾಡಿಕೊಳ್ಳಲೂ ಕಷ್ಟಸಾಧ್ಯಳು ಎಂದು ಅರ್ಥ. ಎಲ್ಲಾ ದೇವತೆಗಳ ಶಕ್ತಿಯನ್ನೂ ಪಡೆದ ನಾರೀರೂಪಳಾದ ದೇವಿ, ಲೋಕಮಾತೆ, ಭಕ್ತರ ಪರಮ ಭಕ್ತಿಗೆ ಕರಗುವವಳು, ಆರಾಧನೆಗೆ ಒಲಿಯುವವಳು, ಮಾತೃಸ್ವರೂಪಳು ಎಂದೇ ಅರ್ಥ. ದೇವಿಯೇ ಪರಮ ಶಕ್ತಿ, ಜಗತ್ತಿನ ಸೃಷ್ಟಿ ಮತ್ತು ಸ್ಥಿತಿಗೆ ಕಾರಣಳು, ಜ್ಞಾನದ ಸಂಕೇತಳು, ಮೋಹಕಳೂ, ಸೌಂದರ್ಯಸ್ವರೂಪಳು, ರೌದ್ರಳೂ, ಕೋಮಲೆಯೂ, ಭೀಕರಳೂ, ಮೃದು ಮನದವಳೂ ಎಂದು, ಒಟ್ಟಾರೆ ಸಕಲವೂ ಅವಳೇ ಎಂದು ಬಿಂಬಿಸುವ ಅನೇಕ ದೃಷ್ಟಾಂತಗಳನ್ನು ನಾವು ಪುರಾಣಗಳಲ್ಲಿ ಓದಬಹುದು.
ಜಗನ್ಮಾತೆಯೇ ಸಕಲ ಐಶ್ವರ್ಯ ಕೊಡುವವಳೂ, ಸುಖ ಸಮಾಧಾನಗಳನ್ನು ಕೊಡುವವಳೂ ಎಂದು ವರ್ಣಿಸುತ್ತಾ, ವಿಶೇಷವಾಗಿ ಈ ಒಂಭತ್ತು ದಿನಗಳಲ್ಲಿ, ನಾವು ದೇವಿಯನ್ನು ಆರಾಧಿಸುತ್ತೇವೆ.
ಮೊದಲನೆಯ ದಿನ ಶೈಲಪುತ್ರಿಯ ರೂಪದಲ್ಲಿ....
" ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್ |
ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ |"
ಪರ್ವತ ರಾಜ ಹಿಮವಂತನಲ್ಲಿ ಪುತ್ರಿಯಾಗಿ ಅವತರಿಸಿ ಶೈಲಪುತ್ರೀ ಎಂದು ಕರೆಯಲ್ಪಡುತ್ತಾಳೆ. ವೃಷಭವಾಹನೆಯಾದ ಇವಳ ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲಪುಷ್ಪ ಇವೆ. ಇವಳನ್ನು ಪಾರ್ವತೀ, ಹೈಮವತೀ ಎಂದೂ ಕರೆಯುತ್ತಾರೆ. ಈ ಮೊದಲನೆಯ ದಿನದ ಉಪಾಸನೆಯಲ್ಲಿ ಯೋಗಿಗಳು ತಮ್ಮ ಮನವನ್ನು ’ಮೂಲಾಧಾರ’ ಚಕ್ರದಲ್ಲಿ ನೆಲೆಗೊಳಿಸುತ್ತಾರೆ. ಇಲ್ಲಿಂದಲೇ ಅವರ ಯೋಗ ಸಾಧನೆಯು ಪ್ರಾರಂಭವಾಗುತ್ತದೆ..
ಶೈಲಪುತ್ರಿಯನ್ನು ನಾವು.... ಶ್ಯಾಮಾಶಾಸ್ತ್ರಿಗಳ ಕಲ್ಯಾಣಿ ರಾಗದ ರಚನೆ ಹಿಮಾದ್ರಿ ಸುತೆ ಪಾಹಿಮಾಂ.. ಮತ್ತು ಸರೋಜದಳನೇತ್ರಿ ಹಿಮಗಿರಿ ಪುತ್ರೀ......ಎಂದೂ ಆರಾಧಿಸಬಹುದು. ಶ್ರೀ ಸ್ವಾತಿ ತಿರುನಾಳ್ ಮಹರಾಜರು ಸಹ ದೇವಿಯನ್ನು ಒಂಭತ್ತು ಅತ್ಯಮೂಲ್ಯ ಕೃತಿಗಳಿಂದ ವರ್ಣಿಸಿ ಹಾಡಿದ್ದಾರೆ. ಈ ಕೃತಿ ಗುಚ್ಛವನ್ನು ನವರಾತ್ರಿ ಕೃತಿಗಳು ಎಂದು ಕರೆಯಲ್ಪಡುತ್ತದೆ. ಮೊದಲನೆಯ ದಿನದ ಕೃತಿ, ಶಂಕರಾಭರಣ ರಾಗದಲ್ಲಿ ದೇವಿ ಜಗಜ್ಜನನೀ....
ಎರಡನೆಯ ದಿನ ಬ್ರಹ್ಮಚಾರಿಣೀ ರೂಪದಲ್ಲಿ........
"ದಧಾನ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ |
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ |"
ಇಲ್ಲಿ ’ಬ್ರಹ್ಮ’ ಶಬ್ದದ ಅರ್ಥ ತಪಸ್ಸು ಎಂದು. ಬ್ರಹ್ಮ ಚಾರಿಣಿ ಅರ್ಥಾತ್ ತಪಸ್ಸನ್ನು ಆಚರಿಸುವವಳು. ದೇವಿಯ ಸ್ವರೂಪವು ಪೂರ್ಣ ಜ್ಯೋತಿರ್ಮಯ ಹಾಗೂ ಅತ್ಯಂತ ಭವ್ಯವಾಗಿದೆ. ಇವಳ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲು ಇರುತ್ತದೆ. ಇವಳನ್ನು ’ಅಪರ್ಣಾ’ ’ಉಮಾ’ ಎಂದೂ ಕರೆಯುತ್ತಾರೆ. ಇವಳ ಆರಾಧನೆಯಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಸಿದ್ಧಿಸುತ್ತದೆ. ಈ ಎರಡನೆಯ ದಿನ ಸಾಧಕರು ಮನಸ್ಸನ್ನು ’ಸ್ವಾಧಿಷ್ಠಾನ’ ಚಕ್ರದಲ್ಲಿ ನೆಲೆಗೊಳಿಸುತ್ತಾರೆ.
ಬ್ರಹ್ಮಚಾರಿಣಿ, ಅಪರ್ಣಾ, ಉಮಾಳನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಪಾಹಿಮಾಂ ಶ್ರೀ ವಾಗೀಶ್ವರಿ ಎಂದು ಕಲ್ಯಾಣಿ ರಾಗದಲ್ಲಿ ಸ್ತುತಿಸುತ್ತಾರೆ.
ಮೂರನೆಯ ದಿನ ಚಂದ್ರಘಂಟಾ ರೂಪದಲ್ಲಿ ........
"ಪಿಂಡಜಪ್ರವರಾರೂಢಾ ಚಂಡಕೊಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ" |
ಮೂರನೆಯ ದಿನವಾದ ಇಂದು ಪರಮ ಶಾಂತಿದಾಯಕ ಮತ್ತು ಶ್ರೇಯಸ್ಕರವಾದ ದೇವಿ ಚಂದ್ರಘಂಟಾ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ದೇವಿಯ ಮಸ್ತಕದಲ್ಲಿ ಗಂಟೆಯ ಆಕಾರದ ಅರ್ಧಚಂದ್ರನಿದ್ದಾನಾದ್ದರಿಂದ ಇವಳನ್ನು ಚಂದ್ರಘಂಟಾದೇವಿಯೆಂದು ಹೇಳಲಾಗುತ್ತದೆ. ಶರೀರವು ಚಿನ್ನದಂತೆ ಹೊಳೆಯುತ್ತಿದ್ದು, ಹತ್ತು ಕೈಗಳಲ್ಲಿ ಖಡ್ಗ ಹಾಗೂ ವಿವಿಧ ಆಯುಧಗಳಿವೆ. ಘಂಟೆಯಂತೆ ಭಯಾನಕ ಚಂಡಿ ಧ್ವನಿ ಹೊಂದಿದವಳು. ಈ ದಿನ ಸಾಧಕನ ಮನಸ್ಸು ’ಮಣಿಪೂರ’ ಚಕ್ರ ಪ್ರವೇಶ ಮಾಡುತ್ತದೆ.
ಚಂದ್ರಘಂಟಾದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು, ಮೂರನೆಯ ದಿನ ದೇವಿ ಪಾವನೆ... ಎಂದು ಸಾವೇರಿ ರಾಗದಲ್ಲಿ ಸ್ತುತಿಸುತ್ತಾರೆ.
ನಾಲ್ಕನೆಯ ದಿನ ಕೂಷ್ಮಾಂಡಾ ರೂಪದಲ್ಲಿ ........
"ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ " |
ದೇವಿ ತನ್ನ ಮಂದ, ಮಧುರ ನಗುವಿನಿಂದ ಅಂಡ ಅರ್ಥಾತ್ ಬ್ರಹ್ಮಾಂಡವನ್ನು ಉತ್ಪನ್ನವಾಗಿಸುವ ಕಾರಣ ಇವಳನ್ನು ಕೂಷ್ಮಾಂಡಾದೇವಿ ಎಂದು ಕರೆಯುತ್ತಾರೆ. ದೇವಿಯು ತನ್ನ ’ಈಶತ್’ ಹಾಸ್ಯದಿಂದ ಬ್ರಹ್ಮಾಂಡವನ್ನು ರಚಿಸಿದ್ದಳು, ಅದಕ್ಕಿಂತ ಮೊದಲು ಬ್ರಹ್ಮಾಂಡದ ಅಸ್ತಿತ್ವವೇ ಇರಲಿಲ್ಲ. ಇವಳಿಗೆ ಎಂಟು ಭುಜಗಳಿದ್ದು, ಅಷ್ಟಭುಜಾದೇವಿ ಎಂದು ಖ್ಯಾತಳು. ಸಿಂಹವಾಹಿನಿಯಾಗಿ, ಏಳು ಕೈಗಳಲ್ಲಿ ಕ್ರಮಶ: ಕಮಂಡಲ, ಧನುಷ, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆ ಹಿಡಿದಿದ್ದಾಳೆ. ಈ ದಿನ ಸಾಧಕನ ಮನಸ್ಸು ’ಅನಾಹತ’ ಚಕ್ರದಲ್ಲಿ ನೆಲೆಸುತ್ತದೆ.
ಕೂಷ್ಮಾಂಡಾದೇವಿಯನ್ನು, ಶ್ರೀ ಸ್ವಾತಿ ತಿರುನಾಳ್ ಮಹಾರಾಜರು, ನಾಲ್ಕನೆಯ ದಿನ ಭಾರತೀ ಮಾಮವ ಎಂದು ತೋಡಿ ರಾಗದಲ್ಲಿ ಸ್ತುತಿಸುತ್ತಾರೆ.
ಐದನೆಯ ದಿನ ಸ್ಕಂದಮಾತಾ ರೂಪದಲ್ಲಿ.......
"ಸಿಂಹಾಸನಗತಾ ನಿತ್ಯಂ ಪದ್ಮಾಶಿತಕರದ್ವಯಮ್ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಶಯಸ್ವಿನೀ "|
ಸ್ಕಂದ, ಕುಮಾರ ಕಾರ್ತಿಕೇಯನ ತಾಯಿಯಾದ್ದರಿಂದ ದೇವಿಯನ್ನು ಸ್ಕಂದ ಮಾತಾ ಎಂದು ಕರೆಯುತ್ತಾರೆ. ಈ ದಿನ ಸಾಧಕನ ಮನಸ್ಸು ’ವಿಶುದ್ಧ’ ಚಕ್ರದಲ್ಲಿ ನೆಲೆಸುತ್ತದೆ. ದೇವಿಯ ತೊಡೆಯಲ್ಲಿ ಭಗವಾನ್ ಸ್ಕಂದನು ಬಾಲರೂಪದಲ್ಲಿ ಕುಳಿತಿರುತ್ತಾನೆ. ದೇವಿಯ ಎರಡು ಕೈಗಳಲ್ಲಿ ಕಮಲದ ಹೂವಿದ್ದು, ಶರೀರವು ಬಿಳಿಯ ಬಣ್ಣದ್ದಾಗಿದ್ದು, ಕಮಲದ ಮೇಲೇ ಆಸೀನಳಾಗಿರುತ್ತಾಳೆ.
ಸ್ಕಂದಮಾತಾ ರೂಪದ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಐದನೆಯ ದಿನ ಜನನೀ ಮಾಮವ ಎಂದು ಭೈರವಿ ರಾಗದಲ್ಲಿ ಸ್ತುತಿಸುತ್ತಾರೆ.
ಆರನೆಯ ದಿನ ಕಾತ್ಯಾಯಿನಿ ರೂಪದಲ್ಲಿ.......
"ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ |
ಕಾತ್ಯಾಯಿನೀ ಶುಭಂ ದದ್ಯಾದ್ದೇವೀ ದಾನವಘಾತಿನೀ "|
ದಾನವ ಮಹಿಷಾಸುರನ ಅತ್ಯಾಚಾರವು ಮಿತಿಮೀರಿದಾಗ, ಬ್ರಹ್ಮಾ - ವಿಷ್ಣು - ಮಹೇಶ್ವರರು ಮತ್ತು ಎಲ್ಲಾ ದೇವತೆಗಳೂ ತಮ್ಮ ತಮ್ಮ ತೇಜದ ಅಂಶವನ್ನಿತ್ತು ಓರ್ವ ದೇವಿಯನ್ನು ಉತ್ಪನ್ನ ಮಾಡಿದರು. ಮಹರ್ಷಿ ಕಾತ್ಯಾಯನರು ಮೊಟ್ಟ ಮೊದಲು ಇವಳ ಪೂಜೆ ಮಾಡಿದ ಕಾರಣದಿಂದ, ಇವಳು ಕಾತ್ಯಾಯನೀ ಎಂದು ಕರೆಯಲ್ಪಟ್ಟಳು. ಭವ್ಯ ಹಾಗೂ ದಿವ್ಯ ಸ್ವರೂಪಳಾದ ಇವಳು ಬಂಗಾರದ ಬಣ್ಣದವಳೂ, ನಾಲ್ಕು ಭುಜದವಳೂ ಆಗಿದ್ದಾಳೆ. ಒಂದು ಕೈಯಲ್ಲಿ ಕಮಲ, ಇನ್ನೊಂದರಲ್ಲಿ ಖಡ್ಗ ಹಿಡಿದಿದ್ದಾಳೆ. ಈ ಆರನೆಯ ದಿನ ಸಾಧಕನು ಮನಸ್ಸನ್ನು ’ಆಜ್ಞಾ’ ಚಕ್ರದಲ್ಲಿ ನೆಲೆಸುತ್ತಾನೆ. ಇವಳು ಏತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಮ್ | ಪಾತು ನ: ಸರ್ವಭೀತಿಭ್ಯ: ಕಾತ್ಯಾಯನಿ ನಮೋಸ್ತುತೇ... ಎಂದು ಕೂಡ ಸ್ತುತಿಸಲ್ಪಡುತ್ತಾಳೆ.
ಕಾತ್ಯಾಯನೀ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಆರನೆಯ ದಿನ ಸರೋರುಹಾಸನ ಜಾಯೇ...ಎಂದು ಪಂತುವರಾಳಿ ರಾಗದಲ್ಲಿ ಸ್ತುತಿಸುತ್ತಾರೆ.
ಏಳನೆಯ ದಿನ ಕಾಲರಾತ್ರಿ ರೂಪದಲ್ಲಿ.......
"ಏಕವೇಣೀ ಜಪಾಕರ್ಣಪೂರಾ ನಗ್ನಾ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ರೈಲಾಬ್ಯಕ್ರಶರೀರಿಣೀ ||
ವಾಮಪಾದೋಲ್ಲಸಲ್ಲೋಹಲ್ತಾಕಂಟಕಭೂಷಣಾ |
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ" ||
ಜಗನ್ಮಾತೆ ದುರ್ಗೆಯ ಏಳನೇ ಶಕ್ತಿಯನ್ನು ಕಾಲರಾತ್ರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇವಳ ಶರೀರವು ದಟ್ಟ ಕಪ್ಪು, ಬಿಚ್ಚಿ ಹರಡಿದ ತಲೆ ಕೂದಲು, ಕತ್ತಲಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ, ಮೂರು ಕಣ್ಣುಗಳಿವೆ. ಇವಳ ಉಚ್ಛಾಸ-ನಿ:ಚ್ಛಾಸದಿಂದ ಅಗ್ನಿಯ ಭಯಂಕರ ಜ್ವಾಲೆಗಳು ಹೊರಡುತ್ತವೆ ಮತ್ತು ಇವಳ ವಾಹನ ಕತ್ತೆಯಾಗಿದೆ. ಎಡಗಡೆಯ ಮೇಲಿನ ಕೈಯಲ್ಲಿ ಕಬ್ಬಿಣದ ಮುಳ್ಳು ಹಾಗೂ ಕೆಳಗಿನ ಕೈಯಲ್ಲಿ ಖಡ್ಗವಿದೆ. ಇವಳು ನೋಡಲು ಭಯಂಕರವಾದರೂ, ಯಾವಾಗಲೂ ಶುಭ ಫಲವನ್ನೇ ಕೊಡುವವಳಾದ್ದರಿಂದ ಶುಭಂಕರೀ ಎಂದೂ ಕರೆಯಲ್ಪಡುತ್ತಾಳೆ. ಈ ದಿನ ಸಾಧಕನ ಮನಸ್ಸು ’ಸಹಸ್ರಾರ’ ಚಕ್ರದಲ್ಲಿ ಲೀನವಾಗುತ್ತದೆ. ಇವಳನ್ನು ಕಾಲರಾತ್ರಿರ್ಮಹಾರಾತ್ರಿರ್ಮೋಹರಾತ್ರಿಶ್ಚ ದಾರುಣಾ | ತ್ವಂ ಶ್ರೀಸ್ತ್ವಮೀಶ್ವರೀ ತ್ವಂ ಹ್ರೀಸ್ತ್ವಂ ಬುದ್ದಿರ್ಬೋಧಲಕ್ಷಣಾ || ಎಂದೂ ಸ್ತುತಿಸಬಹುದು.
ಜಗನ್ಮಾತೆಯನ್ನು ಏಳನೆಯ ದಿನ ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಜನನೀ ಪಾಹಿ ಸದಾ... ಎಂದು ಶುದ್ಧಸಾವೇರಿ ರಾಗದಲ್ಲಿ ಸ್ತುತಿಸುತ್ತಾರೆ.
ಎಂಟನೆಯ ದಿನ ಮಹಾಗೌರೀ ರೂಪದಲ್ಲಿ......
"ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿ: |
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ" ||
ದೇವಿಯು ಎಂಟನೆಯ ದಿನ ಮಹಾಗೌರಿಯ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಇವಳ ವಯಸ್ಸು ಕೇವಲ ೮ ವರ್ಷಗಳೆಂದೂ, ಶಂಖ-ಚಂದ್ರ-ಕುಂದ ಪುಷ್ಪದಷ್ಟು ಬೆಳ್ಳಗಿರುವಳೆಂದೂ ಹೇಳಲಾಗಿದೆ. ಇವಳು "ಅಷ್ಟವರ್ಷಾ ಭವೇದ್ ಗೌರೀ - ಎಂದರೆ ಎಲ್ಲ ವಸ್ತ್ರ ಹಾಗೂ ಆಭರಣಗಳು ಬೆಳ್ಳಗಿವೆ. ಇವಳು ಅತ್ಯಂತ ಶಾಂತ ಮುದ್ರೆಯವಳು. ಇವಳು ಶಿವನನ್ನು ವರಿಸುವುದಕ್ಕಾಗಿ ಕಠೋರ ತಪಸ್ಸು ಮಾಡಿದ ಕಾರಣ ಶರೀರವು ಪೂರ್ಣವಾಗಿ ಕಪ್ಪಾಗಿತ್ತು ಮತ್ತು ಸಂತುಷ್ಟನಾದ ಶಿವನು ಪವಿತ್ರ ಗಂಗೆಯ ಜಲದಿಂದ ತೊಳೆದಾಗ, ವಿದ್ಯುತ್ತಿನಂತೆ ಅತ್ಯಂತ ಪ್ರಕಾಶಮಾನವಾಗಿ ಬೆಳ್ಳಗಾಯಿತು ಮತ್ತು ಆಗಿನಿಂದ ಇವಳು ಗೌರಿ ಎಂದು ಕರೆಯಲ್ಪಟ್ಟಳು. ದೇವಿಯನ್ನು ನಾವು ಸರ್ವಮಂಗಳಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ | ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ...|| ಎಂದೂ ಸ್ತುತಿಸುತ್ತೇವೆ.
ಎಂಟನೆಯ ದಿನವಾದ ಈ ದಿನ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಪಾಹಿ ಜನನೀ...ಎಂದು ನಾಟಕುರಂಜಿ ರಾಗದಲ್ಲಿ ಸ್ತುತಿಸುತ್ತಾರೆ.
ಒಂಭತ್ತನೆಯ ದಿನ ಸಿದ್ಧಿದಾತ್ರಿ ರೂಪದಲ್ಲಿ.......
"ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ" ||
ಜಗನ್ಮಾತೆ ದುರ್ಗಾದೇವಿಯ ಒಂಭತ್ತನೇ ಶಕ್ತಿಯ ಹೆಸರು ಸಿದ್ಧಿದಾತ್ರಿ. ಇವಳು ಎಲ್ಲಾ ಪ್ರಕಾರದ ಸಿದ್ಧಿಗಳನ್ನೂ ಅನುಗ್ರಹಿಸುವವಳು. ಬ್ರಹ್ಮವೈವರ್ತಪುರಾಣದ ಶ್ರೀ ಕೃಷ್ಣಜನ್ಮಖಂಡದಲ್ಲಿ ಬರುವ ೧೮ ಸಿದ್ಧಿಗಳಾದ : ಅಣಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಮಹಿಮಾ, ಈಶಿತ್ವ-ವಶಿತ್ವ, ಸರ್ವಕಾಮಾವಸಾಯಿತಾ, ಸರ್ವಜ್ಞತ್ವ, ದೂರ ಶ್ರವಣ, ಪರಕಾಯ ಪ್ರವೇಶನ, ವಾಕ್ ಸಿದ್ಧಿ, ಕಲ್ಪವೃಕ್ಷತ್ವ, ಸೃಷ್ಟಿ, ಸಂಹಾರಕರಣಸಾಮರ್ಥ್ಯ, ಅಮರತ್ವ, ಸರ್ವನ್ಯಾಯಕತ್ವ, ಭಾವನಾ, ಸಿದ್ಧಿ... ಎಲ್ಲವನ್ನೂ ಕೊಡುವವಳು. ಇವಳ ಕೈಗಳಲ್ಲಿ ಚಕ್ರ, ಗದೆ, ಶಂಖ ಮತ್ತು ಕಮಲ ಪುಷ್ಪಗಳಿವೆ. ನಾಲ್ಕು ಭುಜಗಳನ್ನು ಹೊಂದಿದವಳಾಗಿದ್ದಾಳೆ. ಇವಳನ್ನು ಆರಾಧಿಸುವುದರಿಂದ ಸಾಧಕರಿಗೆ ಎಲ್ಲಾ ಸಿದ್ಧಿಗಳೂ ಲಭಿಸುತ್ತವೆ.
ಒಂಭತ್ತನೇ ದಿನದ ದೇವಿಯನ್ನು ಶ್ರೀ ಸ್ವಾತಿ ತಿರುನಾಳ್ ಮಹಾರಾಜರು ಪಾಹಿ ಪರ್ವತ ನಂದಿನಿ... ಎಂದು ಆರಭಿ ರಾಗದಲ್ಲಿ ಸ್ತುತಿಸುತ್ತಾರೆ.
ನವದುರ್ಗೆಯರಲ್ಲಿ ಸಿದ್ಧಿದಾತ್ರೀ ಕೊನೆಯವಳಾಗಿದ್ದಾಳೆ. ಎಂಟು ದಿನಗಳು ಬೇರೆ ಬೇರೆ ರೂಪದಲ್ಲಿ ದೇವಿಯನ್ನು ಆರಾಧಿಸಿದ ಭಕ್ತರು ಒಂಭತ್ತನೆಯ ದಿನ ಸಿದ್ಧಿದಾತ್ರಿಯನ್ನು ಭಕ್ತಿಯಿಂದ ಆರಾಧಿಸಿ, ಮೋಕ್ಷವನ್ನು ಪಡೆಯುತ್ತಾರೆ.
ವಿವರಣೆ ಆಧಾರ : "ನವದುರ್ಗಾ", ಗೀತಾ ಪ್ರೆಸ್, ಗೋರಖಪುರ
ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು.
Subscribe to:
Post Comments (Atom)
ಶ್ಯಾಮಲ,
ReplyDeleteದಸರಾ ಹಬ್ಬದ ನಲ್ವಾರೈಕೆಗಳು..
ಮಾಹಿತಿ ಚೆನ್ನಾಗಿದೆ..
ಬರಹ ಹಿಡಿಸಿತು..
ಅನಿಲ್
ಅನಿಲ್...
ReplyDeleteನಿಮಗೂ ಹಬ್ಬದ ಶುಭ ಹಾರೈಕೆಗಳು. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಶ್ಯಾಮಲ
ಶ್ಯಾಮಲಾ ಅವರೆ,
ReplyDelete`ನವರಾತ್ರಿ ಹಬ್ಬದ ಶುಭಾಶಯಗಳು, ನಿಮಗೂ ಹಾಗೂ ಕುಟುಂಬ ಸದಸ್ಯರೆಲ್ಲರಿಗೂ,
ನವದುರ್ಗಾ ಪೂಜೆ ಮತ್ತು ಅದರ ಬಗೆಗಿನ ಮಾಹಿತಿ ಬಹಳ ಉಪಯುಕ್ತವಾಗಿವೆ. ನವರಾತ್ರಿಗಳ ಪ್ರತಿಯೊಂದು ದಿನಕ್ಕೂ ಒಬ್ಬೊಬ್ಬ ಆರಾಧ್ಯದೇವಿಯ ಬಗೆಗೆ ತಿಳಿಸಿದ್ದೀರಿ.
ಧನ್ಯವಾದಗಳು.
ಚಂದ್ರು
ಶ್ಯಾಮಲಾ ಮೇಡಮ್,
ReplyDeleteನವದುರ್ಗ ಪೂಜೆಯ ವಿಚಾರವಾಗಿ ಚೆಂದದ ಮಾಹಿತಿಯನ್ನು ಕಲೆಹಾಕಿದ್ದೀರಿ. ಮತ್ತು ಪ್ರತಿದಿನ ಒಂದೊಂದು ರಾಗದಲ್ಲಿ ಪೂಜಿಸುವ ವಿಚಾರವನ್ನು ಚೆನ್ನಾಗಿ ಬರೆದಿದ್ದೀರಿ...
ನಿಮಗೆ ನವರಾತ್ರಿ ಹಬ್ಬದ ಶುಭಾಶಯಗಳು.
ನನ್ನ ಬ್ಲಾಗ್ ಲಿಂಕು ಹಾಕಿದ್ದಕ್ಕೆ ಧನ್ಯವಾದಗಳು
ReplyDeleteನಮಸ್ಕಾರ ಚಂದ್ರು ಮತ್ತು ಶಿವೂರಿಗೆ..
ReplyDeleteನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ನವರಾತ್ರಿಯ ಹಾರ್ದಿಕ ಶುಭಾಶಯಗಳು.
ನಮಸ್ಕಾರ ರಂಜಿತ್ (ನೀಲಿಹೂವು)
ReplyDeleteನನ್ನ ಬ್ಲಾಗ್ ಗೆ ನಿಮಗೆ ಸ್ವಾಗತ. ನಿಮ್ಮ ಬರಹಗಳೆಲ್ಲಾ ನಾ ಓದಿದೆ, ತುಂಬಾ ಚೆನ್ನಾಗಿವೆ...... ಹೀಗೇ ಬರುತ್ತಿರಿ.......
ಶ್ಯಾಮಲ
ನವರಾತ್ರಿಯ ಹಬ್ಬದ ಹಾರ್ದಿಕ ಶುಭಾಶಯಗಳು.
ReplyDeleteಶ್ಯಾಮಲಾ ಅವರೆ...
ReplyDeleteಶರನ್ನವರಾತ್ರಿಯ ಪೂಜೆಯ ಬಗ್ಗೆ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ....
ನವರಾತ್ರಿಯ ಹಾಗೂ...
ವಿಜಯಾ ದಶಮಿಯ ಹಾರ್ದಿಕ ಶುಭಾಶಯಗಳು....
ನಮಸ್ತೆ ಪ್ರಕಾಶ್ ರಿಗೆ....
ReplyDeleteಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಶ್ಯಾಮಲ
ನವರಾತ್ರಿ ಹಬ್ಬದ ಶುಭಾಶಯಗಳು
ReplyDeleteಮಾಹಿತಿಯುಕ್ತ ಲೇಖನ ...ಬರಹ ಹಿಡಿಸಿತು..
ಶ್ಯಾಮಲಾ ರವರೆ.
ReplyDeleteತುಂಬ ಉಪಯುಕ್ತ ಮಾಹಿತಿ. ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು,,, ಚೆನ್ನಾಗಿ ವಿವರಿಸಿದ್ದಿರ ಕೂಡ....
ನಿಮಗೂ ಹಾಗು ನಿಮ್ಮ ಕುಟುಂಬಕ್ಕೂ ದಸರಾ ಹಬ್ಬದ ಶುಭಾಶಯಗಳು ....
ಮನಸು ಮೇಡಮ್...
ReplyDeleteನನ್ನ ಅಂತರಂಗದ ಮಾತುಗಳನ್ನೋದಲು ಮೊದಲ ಸಲ ನನ್ನ ಬ್ಲಾಗ್ ಗೆ ಬಂದಿದ್ದಕ್ಕೆ ಸ್ವಾಗತ.....ಹೀಗೇ ಬರುತ್ತಿರಿ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಶ್ಯಾಮಲ
ನಮಸ್ತೆ ಗುರು ಸಾರ್..
ReplyDeleteನನ್ನ ಬ್ಲಾಗ್ ಗೆ ಸ್ವಾಗತ ನಿಮಗೆ........ ಹೀಗೇ ಬರುತ್ತಿರಿ...ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.
ಶ್ಯಾಮಲ
`ನವರಾತ್ರಿ ಹಬ್ಬದ ಶುಭಾಶಯಗಳು,
ReplyDelete`ನವರಾತ್ರಿ ಹಬ್ಬದ ಶುಭಾಶಯಗಳು,
ReplyDelete